This page has not been fully proofread.

ಪ್ರಸ್ತಾವನೆ
 
ವಿವೇಕಚೂಡಾಮಣಿಯು ಜನಾದರಣೀಯವಾದ ಗ್ರಂಥರತ್ನ, ಅನೇಕ
ಪ್ರಕರಣಗ್ರಂಥಗಳ ಮಧ್ಯದಲ್ಲಿ ಇದು ಇಷ್ಟು ಜನಪ್ರಿಯವಾಗಲು ಅನೇಕ
ಕಾರಣಗಳಿವೆ: ಮೊದಲನೆಯದಾಗಿ ಇದು ಶ್ರೀಮಚ್ಛಂಕರಭಗವತ್ಪಾದರ
ಕೃತಿಯೆಂದು ಸುಪ್ರಸಿದ್ಧವಾಗಿದೆ; ಎರಡನೆಯದಾಗಿ ಗ್ರಂಥಕರ್ತರು ತಮ್ಮ
ಆತ್ಮಾನುಭವದ ನಿಲವಿನಿಂದ ಉಪದೇಶಿಸುತ್ತಿರುವುದರಿಂದ ಓದುಗರಿಗೆ
ಅದರಲ್ಲಿಯೂ ಮುಮುಕ್ಷುಗಳಿಗೆ ಹೃದಯಸ್ಪರ್ಶಿಯಾಗಿದೆ; ಮೂರನೆಯ
ದಾಗಿ ಕೃತಿಯ ಶೈಲಿಯು ಅತ್ಯಂತ ರಮಣೀಯವಾಗಿ ಕಾವ್ಯಗುಣಗಳಿಂದ
ಕೂಡಿದ್ದಾಗಿದೆ.
 
ಗ್ರಂಥವನ್ನು ಓದುವಾಗ ಆತ್ಮಾನಾತ್ಮವಿವೇಕ, ಪಂಚಕೋಶವಿವೇಕ,
ಬ್ರಹ್ಮಾತ್ಮಕತ್ವಜ್ಞಾನ-ಇವೇ ಮೊದಲಾದ ಭಾವನೆಗಳು ಪುನಃ ಪುನಃ
ಬರುವ ಹಾಗೆ ತೋರುತ್ತದೆ. ಇದು ಸಹಜವೇ ಆಗಿದೆ; ಏಕೆಂದರೆ ಈ
ಮೂಲಭಾವನೆಗಳನ್ನು ಮುಮುಕ್ಷುವಿನ ಮನಸ್ಸಿನ ಮೇಲೆ ಅಷ್ಟೊತ್ತುವುದೇ
ಈ ಗ್ರಂಥದ ಮುಖ್ಯೋದ್ದೇಶವಾಗಿದೆ. 'ಚಿತ್ರದ ಸಮಸ್ತ ದೋಷಗಳನ್ನು
ಕಳೆದುಕೊಂಡು, ಭವಸುಖದಲ್ಲಿ ವಿರಕ್ತರಾಗಿ, ಪ್ರಶಾಂತಚಿತ್ತರೂ ಶ್ರುತಿರಸಿ
ಕರೂ ಮುಮುಕ್ಷುಗಳೂ ಆದ ಯತಿಗಳು ಈ ಹಿತವಾದ ಉಪದೇಶವನ್ನು
ಆದರಿಸಲಿ' (೫೭೮) ಎಂದು ಆಚಾರ್ಯರೇ ಹೇಳಿರುತ್ತಾರೆ. ಮತ್ತೊಂದು
ಕಡೆಯಲ್ಲಿ (೫೭೪), 'ಕಲಿದೋಷಗಳಿಲ್ಲದ, ಕಾಮನಿರ್ಮುಕ್ತವಾದ ಬುದ್ಧಿ
ಯುಳ್ಳ ಮುಮುಕ್ಷುವಾದ ನಿನ್ನನ್ನು ನನ್ನ ಮಗನಂತೆ ಭಾವಿಸಿಕೊಂಡು ಶ್ರುತಿ
ಶಿರಸ್ಸೆನಿಸಿದ ಉಪನಿಷತ್ತುಗಳ ಸಿದ್ಧಾಂತವಾದ ಈ ಅತ್ಯಂತರಹಸ್ಯವನ್ನು
(ಎಂದರೆ ನಿತ್ಯಾನಿತ್ಯ ವಿವೇಕವನ್ನು ನಿನಗೆ ಪುನಃ ಪುನಃ ಪ್ರಕಾಶಪಡಿಸಿದ್ದೇನೆ'
ಎಂದು ಹೇಳಿದ್ದಾರೆ. ಆದುದರಿಂದ ಮುಮುಕ್ಷುಗಳ ಬೋಧನೆಗಾಗಿ
ಅನುಗ್ರಹಿಸಲ್ಪಟ್ಟ ಈ ಕೃತಿಯಲ್ಲಿ ಪುನರುಕ್ತಿಯು ಭೂಷಣವೇ ಆಗಿದೆ.
 

 
ಈ ಗ್ರಂಥದ ಪಾಠವನ್ನು ಪರಿಷ್ಕರಿಸುವಾಗ ಮತ್ತು ಶ್ಲೋಕಗಳ ಅರ್ಥ
ವನ್ನು ವಿವರಿಸುವಾಗ ಮುನಿಮಂಡಲದ ಕೇಶವಾಚಾರ್ಯ ಸ್ವಾಮಿಗಳ ಮತ್ತು
ಶೃಂಗಗಿರಿ. ಜಗದ್ಗುರು ಶ್ರೀಚಂದ್ರಶೇಖರಭಾರತೀ ಸ್ವಾಮಿಗಳ ಸಂಸ್ಕೃತ.
ವ್ಯಾಖ್ಯಾನಗಳು ಉಪಯೋಗಕರವಾಗಿದ್ದು ವು.
 
ಸ್ವಾಮೀ ಆದಿದೇವಾನಂದ
 
ಶ್ರೀರಾಮಕೃಷ್ಣಾಶ್ರಮ
 
ಮಂಗಳೂರು