This page has been fully proofread once and needs a second look.

ಮಧ್ಯಗೇಹರ ಮಧ್ವದರ್ಶನ
 
ನಂದನನ ದೇಹವದು ಭವ್ಯ ಪಾತ್ರೆಯು ಅಹುದು
ತುಂಬಿಹುದು ಪಾತ್ರೆಯಲಿ ತೇಜವೆಂಬುವ ಸುಧೆಯು
ಮಧ್ಯಗೇಹರು ತಮ್ಮ ನಯನಗಳ ಬೊಗಸೆಯಲಿ
ಆ ಸುಧೆಯ ಕುಡಿಕುಡಿದು ತೃಷೆಯ ತಣಿಸಿದರು
ಮಗನ ನುಡಿಯೆಂಬ ಗಡಿಗೆಯಲಿ ತುಂಬಿದ್ದ
ಜ್ಞಾನವೆಂಬಮೃತವ ಕರ್ಣದಲಿ ಕುಡಿದರು ॥ ೨೪ ॥
 
ಅಚ್ಯುತಪ್ರೇಕ್ಷರೂ ಆನಂದ ತೀರ್ಥರೂ
ಸರಸ ಸಂಭಾಷಣೆಯಲ್ಲಿ ತೊಡಗಿದ್ದರೊಮ್ಮೆ
ಪರಿಹಾಸ ದನಿಯಲ್ಲಿ ಗುರುಗಳಿಂತೆಂದರು
"ನಾನೊಂದು ಸಲಹೆಯನು ನೀಡುವೆನು ನಿಮಗೆ
ಬಲ್ಲೆನೆಂಬಿರಿ ನೀವು ಬ್ರಹ್ಮ ಸೂತ್ರಕೆ ಅರ್ಥ
ಉತ್ಕೃಷ್ಟ ಭಾಷ್ಯವನು ರಚಿಸಿ ಬರೆಯಿರಿ ನೀವೇ''
॥ ೨೫ ॥
 
 
ಭಾಷ್ಯ ರಚಿಸಲು ಪ್ರಾರ್ಥನೆ
 
ಹಂಸ ಬೇರ್ಪಡಿಸುವುದು ಹಾಲಿನಲ್ಲಿನ ನೀರ
ಅಂತೆಯೇ ಆ ದಿನದಿ ಆನಂದ ತೀರ್ಥರು
ಗುರುವಾಣಿಯಲ್ಲಿನ ಆಕ್ಷೇಪ ತೊರೆದು
ಆದೇಶದಲ್ಲಿನ ಸತ್ವವನು ಸ್ವೀಕರಿಸಿ
ಆ ಕ್ಷಣವೆ ತಳೆದರು ಭಾಷ್ಯ ರಚನೆಯ ದೀಕ್ಷೆ
ಸಂತರಿಗೆ ಸಂತೋಷ ಸದ್ಗುಣದ ಅಂಶದಲಿ ॥ ೨೬ ॥
 
ವೈರಾಗ್ಯ, ವೈಯಾತ್ಯ, ಸದ್ವಾಕ್ಯವೆಲ್ಲವೂ
ಪರಮಹಂಸರಿಗೆಲ್ಲ ಆದರ್ಶವಾಗಿಹವು
ಇಂಥ ಸದ್ಗುಣ ಖನಿಯು ಲಿಕುಚ ವಂಶೋದ್ಭವರು
ಆಶ್ರಮವ ಅಚ್ಯುತ ಪ್ರೇಕ್ಷರಿಂ ಪಡೆದವರು
ಆನಂದ ತೀರ್ಥರಿಗೂ ಜ್ಯೇಷ್ಠರೀ ಯತಿಗಳು
ಇಂತು ಅರುಹಿದರವರು ಪರಮ ಭಕ್ತಿಯಲಿ ॥ ೨೭ ॥