This page has been fully proofread once and needs a second look.

ಇಂತು ಆಲೋಚಿಸಿದ ಆ ವಾಸುದೇವನಿಗೆ
ಹಗಲಿರುಳು ಶ್ರೀ ಹರಿಯ ಧ್ಯಾನವೇ ಗ್ರಾಸ
ಆಸಕ್ತಿ ತೊರೆದನು ಭೋಗ್ಯವಸ್ತುಗಳಲ್ಲಿ
ತ್ಯಜಿಸಿದನು ದುರ್ವಿಷಯ ಭೋಗಲಾಲಸೆಯ
ಚೇತನಾ ಚೇತನದಿ ನೆಲೆಸಿರುವ ಶ್ರೀ ಹರಿಯ
ಬೇಡಿದನು ಸನ್ಯಾಸಕನುಮತಿಯ ಅಡಿಗಡಿಗೆ ॥ ೪ ॥
 
"ಜಡವಸ್ತುಗಳಿಗೆಲ್ಲ ಏಕೆ ನಮಿಸುವೆ ನೀನು ?"
ತಂದೆಯೇ ಮೊದಲಾದ ಬಂಧುಗಳು ಪ್ರಶ್ನಿಸಲು
ಉತ್ತರವ ನೀಡಿದನು ವಾಸುದೇವನು ಆಗ
"ಎಲ್ಲ ವಸ್ತುಗಳಲ್ಲೂ ಇರುವ ನನ್ನಯ ಸ್ವಾಮಿ
ಅದಕೆಂದೆ ಇವಕೆಲ್ಲ ನನ್ನ ಈ ನಮನ"
ಲೋಕಶಿಕ್ಷಕ ಗುರುವು ಅರಸಿ ಹೊರಟನು ಗುರುವ ॥ ೫ ॥
 
ಅಚ್ಯುತ ಪ್ರೇಕ್ಷರ ಪೂರ್ವೋತ್ತರ
 
ಅಂದಿನಾ ದಿನದಲ್ಲಿ ಈ ಲೋಕದಲ್ಲಿ
ಖ್ಯಾತರಾಗಿದ್ದರು ಅಚ್ಯುತ ಪ್ರೇಕ್ಷರು
ಯಾವ ಭೂಷಣವಿಲ್ಲ ಈ ಭೂಸುರ ಶ್ರೇಷ್ಠರಿಗೆ
ವಿರಕ್ತಿ ಎಂಬೊಂದು ಆಭರಣ ಮಾತ್ರ
ತಮ್ಮೆಲ್ಲ ಸೌಶೀಲ್ಯ, ಸದ್ಗುಣಗಳಿಂದ
ಅನ್ವರ್ಥವಾಗಿತ್ತು ಅವರಿಗಾ ಹೆಸರು ॥ ೬ ॥
 
ಪೂರ್ವ ಜನ್ಮದಲಿವರು ಪ್ರಖ್ಯಾತ ಯತಿವರರು
ಪಾಂಡವಾಲಯದಲ್ಲಿ ದ್ರೌಪದಿಯ ಹಸ್ತದಲಿ
ಪರಿಶುದ್ಧ ಭೋಜನವ ಭುಂಜಿಸಿದ ಸಿದ್ಧರು
ಮಧುಕರ ವೃತ್ತಿಯೇ ಬಾಳಿನ ಶೈಲಿ
ಇಂಥ ಮಹಿಮರ ಬಾಳ್ವೆ ಎಲ್ಲರಿಗೂ ಆದರ್ಶ
ನಾಡ ಜನರೆಲ್ಲರಿಗೂ ದಾರಿ ತೋರುವ ದೀಪ ॥ ೭ ॥