This page has been fully proofread once and needs a second look.

ಶ್ರೀಮತ್ಕವಿಕುಲತಿಲಕ ತ್ರಿವಿಕ್ರಮ ಪಂಡಿತಾಚಾರ್ಯರ ಮಗನೆಂದೆನಿಸಿಕೊಂಡ

ಶ್ರೀಮನ್ನಾರಾಯಣ ಪಂಡಿತಾಚಾರ್ಯರು, ಹದಿನಾರು ಸರ್ಗಗಳಿಂದ ಕೂಡಿದ ಈ

ಸಂಸ್ಕೃತ ಮಹಾಕಾವ್ಯವನ್ನು ಈಗಾಗಲೇ ನಮ್ಮ ನಾಡಿನಲ್ಲಿ ಅನೇಕ ಪಂಡಿತರು ಕನ್ನಡ

ಪದ್ಯರೂಪದಲ್ಲಿ ಅನುವಾದ ಮಾಡಿರುವುದುಂಟು. ಮಧ್ವರ ಬಾಳಿನ ಬೆಳಕಾಗಿರುವ ಈ

ಕಾವ್ಯವನ್ನು ಇಂದು ಪುನಃ ಭಾರತ ಸರಕಾರದ ಭೂವಿಜ್ಞಾನ ಶಾಖೆಯಲ್ಲಿ ಸೇವೆ ಸಲ್ಲಿಸಿ

ನಿವೃತ್ತರಾಗಿರುವ ಸನ್ಮಾನ್ಯರಾದ ಶ್ರೀಯುತ ಇ. ಡಿ. ನರಹರಿಯವರು ಬಹು ಶ್ರದ್ಧೆಯಿಂದ

ಸಂಪೂರ್ಣವಾಗಿ ಕನ್ನಡದಲ್ಲಿ ಯಥಾವತ್ತಾಗಿ ಅನುವಾದ ಮಾಡಿದ್ದಾರೆ. ಸಂಸ್ಕೃತ ಮೂಲ

ಶ್ಲೋಕಗಳಿಗೆ ಚ್ಯುತಿಯಾಗದಂತೆ ನಿರರ್ಗಳವಾಗಿ ಅವರ ಲೇಖನಿಯು ಇಲ್ಲಿ ಕೆಲಸ

ಮಾಡಿದೆ. ಶ್ರೀಯುತರು ತಮ್ಮ ನಿವೃತ್ತ ಜೀವನದಲ್ಲಿ ಆಚಾರ್ಯ ಮಧ್ವರ ಸೇವೆಯನ್ನು

ಮನಮುಟ್ಟುವಂತೆ ಮಾಡಿರುವುದು ಬಹು ಸಮಾಧಾನದ ವಿಷಯ. ಅವರಿಂದ ರಚಿತವಾದ

"ಶ್ರೀ ಸುಮಧ್ವ ವಿಜಯ' ಕನ್ನಡ ಕಾವ್ಯಾನುವಾದ ಗ್ರಂಥವು ಸುದೀರ್ಘವಾದ

ಕಾವ್ಯವಾಗಿದೆ. ಕನ್ನಡ ಸಾರಸ್ವತ ಲೋಕವು ಅವರ ಈ ಕೃತಿಯನ್ನು ಮೆಚ್ಚುವುದರಲ್ಲಿ

ಸಂದೇಹವಿಲ್ಲ. ಮಾಧ್ವಮತಾನುಯಾಯಿಗಳು ಅವಶ್ಯವಾಗಿ ಸಂಗ್ರಹಿಸಬೇಕಾದ ಗ್ರಂಥವು

ಇದಾಗಿದೆ ಎಂದು ಹೇಳಲು ಸಂತೋಷವೆನಿಸುತ್ತದೆ.
 

 
ಮಧ್ವಾಂತರ್ಗತ ಶ್ರೀಮನ್ನಾರಾಯಣನು ನರಹರಿಯವರಿಗೆ

ಆಯುರಾರೋಗ್ಯ ಭಾಗ್ಯವನ್ನಿತ್ತು ಇನ್ನೂ ಅನೇಕ ಮಾಧ್ವ ಗ್ರಂಥಗಳು ಅವರಿಂದ

ಅನುವಾದಿತವಾಗಿ ಹೊರಬರುವಂತಾಗಲೆಂದು ಹಾರೈಸುತ್ತೇನೆ.
 

 
ಚಿತ್ರಭಾನು ಸಂವತ್ಸರ
 

ಚೈತ್ರ ಶುದ್ಧ ಮಂದವಾಸರೆ (ಶನಿವಾರ)
 

13-4-2002
 

 
ಆದ್ಯ ರಾಮಾಚಾರ್ಯ
 

ಬೆಂಗಳೂರು.