This page has been fully proofread once and needs a second look.

ಮನವ ನಿಗ್ರಹಿಸಿದ ಸನ್ಯಾಸಿಯೊಬ್ಬರು
ದೀಪಗಳು ಬೆಳಗುತಿಹ ಅರುಣಕಾಲದೊಳೆದ್ದು
ಮಧ್ವಮುನಿಗಳ ಬಳಿಯ ಶ್ರೇಷ್ಠತಮ ಶಂಖದಲಿ
ಅರ್ಘ್ಯ ಪಾದ್ಯಾದಿಗಳ ದೇವರಿಗೆ ಅರ್ಪಿಸಿ
ಶಾಲಗ್ರಾಮಗಳಿಂದ ನಿಬಿಡವಾಗಿಹ ಹರಿಯ
ಪ್ರತಿಮೆಗಳ ಮಧ್ಯದಿಂ ಪುಷ್ಪಗಳ ತೆರೆದು ಆದರದಿ ಇರಿಸಿದರು ॥ ೧೨ ॥
 
ಪ್ರತಿನಿತ್ಯ ಅಮೃತವೇ ದೇವತೆಗಳಿಗಶನವು
ಇಂಥ ದೇವತೆಗಳು ಮಧ್ವರನು ಸೇವಿಪರು
ನಿರ್ಮಾಲ್ಯ ಪುಷ್ಪದಲಿ ಸುರಿದ ಅಮೃತವನ್ನು
ಘೃತವೆಂದೇ ತಿಳಿದರು ಆ ಮಧ್ವಶಿಷ್ಯರು
ಮಧ್ವಮಾಹಾತ್ಮ್ಯವನು ಬಲ್ಲ ಸ್ವೋತ್ತಮರಿಂದ
ಭ್ರಮೆ ನಿವಾರಿಸಿಕೊಂಡು ಅಮೃತ ವನರಿತರು ॥ ೧೩ ॥
 
ಗಾಯತ್ರಿ ಮುಂತಾದ ಮಂತ್ರದಿಂದಲಿ ಕೂಡಿ
ಮೂರು ಉದಯಗಳನ್ನು ಹೊಂದಿಹನು ಸೂರ್ಯ
ಮೂರು ವಿಧ ಶಕ್ತಿಗಳ ಹೊಂದಿರುವ ಆತ
ಮಂಡಲದ ಮಧ್ಯದಲಿ ವಿಷ್ಣುವನು ಧರಿಸಿಹನು
ಉಷ್ಣಕಿರಣ ಎಂಬ ಹೆಸರನ್ನು ಹೊತ್ತಿರುವ
ಸೂರ್ಯ ಸಾಮ್ರಾಟನು ಆಗ ಉದಿಸಿದನು ॥ ೧೪ ॥
 
ಕತ್ತಲೆಯು ಅತಿ ತೀಕ್ಷ್ಣ, ಅತ್ಯಂತ ಸ್ಥಿರವಹುದು
ಪ್ರಾಣಿಗಳ ಮಾರ್ಗಕ್ಕೆ ಅಡ್ಡಿಯನು ಮಾಡುವುದು
ಭುವನ ಮಂದಿರದಲ್ಲಿ ವ್ಯಾಪ್ತವಾಗಿಹುದು ಅದು
ಅಂಜನವ ಹೋಲುವ ಕತ್ತಲೆಂಬುವ ಆನೆ
ಸಿಂಹಗಳ ನಖದಿಂದ ತತ್ತರಿಸಿ ಬಿದ್ದಂತೆ
ಸೂರ್ಯ ಕಿರಣಗಳಿಂದ ಕತ್ತಲೆಯು ಬಿತ್ತು ॥ ೧೫ ॥