This page has been fully proofread once and needs a second look.

ಮುಂದುವರಿದ ಪ್ರಯಾಣ
 

 
ಮಧ್ವಶಿಷ್ಯರು ಇಂತು ಪಯಣಕ್ಕೆ ಅಣಿಯಾಗಿ

ಎಲ್ಲರೂ ತಲೆಯಲ್ಲಿ ಹೊರೆಯನ್ನು ಹೊತ್ತು

ಪಯಣಕ್ಕೆ ಹೊರಡಲು ಸಿದ್ಧರಾಗಿರುವಾಗ

ಮಂದಿರದ ಘಂಟೆಯ ಘನನಾದದಿಂದ

ಪ್ರೇರಿತರು ತಾವಾಗಿ ಆನಂದ ತೀರ್ಥರು

ಶಿಷ್ಯವೃಂದವ ಕೂಡಿ ತಾವು ಹೊರ ಹೊರಟರು
 
॥ ೧೬ ॥
 
ವಾರಣ ನಿವಾರಣ ಆಚಾರ್ಯ ಮಧ್ವರು

ವರಣೀಯರವರು, ವ್ರತರಾಜರವರು

ಶಿಷ್ಯನೊಬ್ಬನು ಆಗ ಬೆಳ್ಳೂಗೊಡೆಯ ತಂದು

ಆಚಾರ್ಯ ಶಿರದಲ್ಲಿ ಭಕ್ತಿಯಲಿ ಇರಿಸಿದನು

ಪ್ರಜ್ವಲಿಸಿ ಬೆಳಗುವ ಉದಯ ರವಿಯೊಡನೆ

ಕಂಗೊಳಿಪ ಚಂದ್ರಮನ ಕಾಂತಿಯಂತಾಯ್ತು
 
॥ ೧೭ ॥
 
ಮೂರು ಭುವನಗಳನ್ನು ಧರಿಸಿಹ ಮುಕುಂದ

ಆತನನು ಹೃದಯದಲಿ ಧರಿಸಿಹರು ಮಧ್ವರು

ಇಂತಹ ಮಹಿಮರನು ಶಿಷ್ಯನೊಬ್ಬನು ಅಂದು

ಭುಜದಲ್ಲಿ ಧರಿಸಿದನು ಆನಂದದಿಂದ

ಇದರಲ್ಲಿ ಅಚ್ಚರಿಯು ಕಿಂಚಿತ್ತು ಇಲ್ಲ

ಆ ಶಿಷ್ಯನನೆ ಧರಿಸಿಹರು ಪ್ರಾಣಪತಿ ಮಧ್ವರು
 
॥ ೧೮ ॥
 
ಕಾಮ್ಯ ಭಾವನೆಗಳನೆಲ್ಲವನೂ ವರ್ಜಿಸಿಹ

ಶೃತಿವಾಕ್ಯವೆಲ್ಲವನೂ ತಪ್ಪದೆಯೆ ಪಾಲಿಸುವ

ಮುನಿವರೇಣ್ಯರ ಮತ್ತು ಸದೃದ್ಗೃಹಸ್ಥರ ಜೊತೆಗೆ

ಸಾವಿರದ ಸಂಖ್ಯೆಯಲ್ಲಿ ಬ್ರಹ್ಮಚಾರಿಗಳೆಲ್ಲ

ವರ್ಣಧರ್ಮಗಳೇ ಬಂದು ಮೂರ್ತಿವೆತ್ತಂತಾಗಿ

ಮುನ್ನಡೆದ ಮಧ್ವರನು ಹಿಂಬಾಲಿಸಿದರು
 
ಹದಿಮೂರನೆಯ ಸರ್ಗ /217
 
16
 
17
 
18
 
19
 
॥ ೧೯ ॥