This page has been fully proofread once and needs a second look.

ಗಂಗಾ ಪ್ರವಾಹವನು ಹೋಲುವಾ ರೀತಿಯಲಿ
ಮಾಯಾವಾದಿಗಳೆಂಬ ಕ್ಷುದ್ರಪರ್ವತ ತ್ಯಜಿಸಿ
ಪರಮ ಸ್ನೇಹಿಗಳಾದ ಸಜ್ಜನರ ಮನವೊಲಿಸಿ
ಮುನ್ನಡೆದ ಆ ನಮ್ಮ ಆನಂದ ತೀರ್ಥರನು
ಉತ್ತುಂಗ ಪರ್ವತದ ಶಿಖರದಲಿ ಪ್ರವಹಿಸುವ
ನದಿಗಳೋಪಾದಿಯಲಿ ಸುಜನರನುಸರಿಸಿದರು ॥ ೪ ॥
 
ಫಲಪುಷ್ಪ ತುಂಬಿರುವ ಉತ್ತುಂಗ ವೃಕ್ಷಗಳ
ಬಾಗಿಸುತ ಹರಿಯುವುದು ಗಂಗಾ ಪ್ರವಾಹ
ಬಾಗದ ವೃಕ್ಷಗಳ ಮುರಿಯುತ್ತ ಹರಿವುದದು
ಅಂತೆಯೇ ಈ ನಮ್ಮ ಆನಂದ ತೀರ್ಥರು
ಸುಮನಫಲ ಶೋಭಿತರಾದ ಸುಜನರನು ಹರಸುತ್ತ
ದೃಢಮನದ ಜನರನ್ನು ಮುರಿಯುತ್ತ ನಡೆದರು ॥ ೫ ॥
 
ಪಯಣದ ಸಂಭ್ರಮವು ಅಚ್ಚರಿಯ ಹುಟ್ಟಿಸಿತು
ವಿವಿಧ ದೇಶದ ಜನರ ವಿಧವಿಧದ ಸತ್ಕಾರ !
ಎಲ್ಲೆಡೆಯೂ ಪಸರಿಸಿತು ಮಧ್ವರಾ ಕೀರ್ತಿ
ಸಂಸಾರ ಕ್ಲೇಶದಲಿ ಮನನೊಂದ ಜನರೆಲ್ಲ
ಅವರೆಡೆಗೆ ಬಂದರು ಪರಿಹಾರ ತಿಳಿಯಲು
ಕಿಕ್ಕಿರಿದು ನೆರೆದಿತ್ತು ಅಭಿಮಾನಿ ಸಮುದಾಯ ॥ ೬ ॥
 
ಹರಿಪಾದ ಸಂಬಂಧ ಪಡೆದ ಮಹಿಮರು ಇವರು
ಲೋಕದೊಳು ಪಾವನರು, ಜೀವಸರ್ವೋತ್ತಮರು
ಮನುಜರಿಗೆ ಸುಲಭದಲಿ ಗೋಚರಿಸದೆ ಇರುವ
ದೇವತೆಗಳಿಂದಲೂ, ದೇವಾನುಚರರಾದ ಗಂಧರ್ವರಿಂದಲೂ
ಮುನಿಗಣೋತ್ತಮರಿಂದ ಪೂಜಿತರು ಇವರು
ಇಂಥ ಮಹಿಮರ ಮಹಿಮೆ ಎಂತು ಬಣ್ಣಿಪುದು ? ॥ ೭ ॥