This page has been fully proofread once and needs a second look.

"ವಿಬುಧಗಣವೆಂಬುವ ಚಂದ್ರ ಕಳೆಗುಂದಿಹನು
ದುರ್ವಾದಿಗಣವೆಂಬ ತಾರೆಗಳ ಮಂಡಲವು
ಅಳಿದುಳಿದ ಕಾಂತಿಯಲಿ ನಿಸ್ತೇಜವಾಗಿಹುದು
ಈ ಚಂದ್ರ ತಾರೆಗಳ ತೇಜೋವಿಹೀನತೆಗೆ
ಕಾರಣವು ತಾನಾಗಿ ವಿಶ್ವವನು ವ್ಯಾಪಿಸಿದ
ಅಂಧಕಾರವು ಈಗ ಕೊನೆಗೊಳ್ಳುತಿಹುದು ॥ ೪೮ ॥
 
ತನ್ನ ವಾಕ್ಕಿರಣಗಳ ನೆರವನ್ನು ಪಡೆಯುತ್ತ
ಬ್ರಹ್ಮಾದಿ ದೇವತೆಗಳಭಿಲಾಷೆ ಪೂರೈಸಿ
ಸಪ್ತವಿದ್ಯೆಗಳೆಂಬ ಅಶ್ವಗಳ ನೆರವಿಂದ
ಸಕಲ ಜಗಕೆಲ್ಲಕೂ ಬೆಳಕನ್ನು ನೀಡುತ್ತ
ಕ್ರೀಡಾದಿ ಗುಣಭರಿತ ಆನಂದ ತೀರ್ಥರು
ರವಿಯ ತೆರದಲಿ ಹೊಳೆದು ಬೆಳಗುವುದ ಕಾಣಿರೇ ? ॥ ೪೯ ॥
 
ಬ್ರಹ್ಮವೆಂಬುವ ಹೆಸರು ಶ್ರೀ ಹರಿಯೂ ಹೊತ್ತಿಹನು
ಸರ್ವರಿಗೆ ಆಧಾರ, ರಮ್ಯ ಸ್ವರೂಪನವ
ನೈದಿಲೆಯ ಹೂವಂತೆ ನೀಲವರ್ಣದ ಇವನು
ವೇದದಲಿ ವರ್ಣಿತನು ಗುಣಪೂರ್ಣನೆಂದು
ಇಂತಹ ಹರಿಪದದ ಆಶ್ರಿತನು ಮಧ್ವರವಿ
ಆತನನು ಮರೆಯಿಸಲು ಯಾರಿಗಾಹುದು ಸಾಧ್ಯ ? ॥ ೫೦ ॥
 
"ಓಡಿರಿ, ಓಡಿರಿ, ಓ ಮಾಯಾವಾದಿಗಳೇ
ಅಲ್ಲವೆಂದೆನ್ನದಿರಿ ವೇದ ವಚನಗಳನ್ನು
ಮಧ್ವ ಮುನಿಯೆಂಬುವ ನರಹರಿಯು ಈಗ
ಜಾಜ್ವಲ್ಯ ಕಾಂತಿಯಲಿ ಪ್ರಜ್ವಲಿಸುತಿಹನು
ಸಿಂಹಗರ್ಜನೆಯಿಂದ ಅವಿವೇಕಿಗಳನಾತ
ಸೀಳುವನು ಹರಿತನುಡಿ ಎಂಬ ನಖದಿಂದ ॥ ೫೧ ॥