This page has been fully proofread once and needs a second look.

ಶ್ರೀ ವ್ಯಾಸ-ಮಧ್ವ ಸಮಾಗಮ
 
ಇಂತೆಂದು ಚಿಂತಿಸುತ ಆನಂದ ತೀರ್ಥರು
ಮೈಮನಗಳಲ್ಲೆಲ್ಲ ಶ್ರೀ ಹರಿಯ ಧ್ಯಾನಿಸುತ
ಬಾಹ್ಯಗತಿಯನು ಅವರು ತ್ವರಿತದಲಿ ಕ್ರಮಿಸುತ್ತ
ವೇದಗಳ ಜನಕ ಶ್ರೀ ವ್ಯಾಸಮುನಿಗಳನು
ಹಿಂದೆ ಕಣ್ಣಲ್ಲಿ ಕಂಡು ಮುದಗೊಂಡಿದ್ದು
ಈಗವರ ನಿಜ ದೇಹ ಸಾಮೀಪ್ಯ ಪೊಂದಿದರು ॥ ೪೮ ॥
 
ಗುರುಭಕ್ತಿ ಭಾವವದು ತುಂಬ ಗುರುತಮವಹುದು
ಇಂಥ ಗುರುಭಕ್ತಿಯ ಅತಿಶಯದ ಭಾರದಲಿ
ದೇಹವನು ಬಾಗಿಸಿದ ಆನಂದ ತೀರ್ಥರು
ಭಕುತಿಯಿಂದಲಿ ತಮ್ಮ ಎರಡು ಕೈಜೋಡಿಸುತ
ಕಣ್ಣರೆಪ್ಪೆಗಳನ್ನು ಅರೆತೆರೆದು ನೋಡುತ್ತ
ಪೂಜ್ಯ ಗುರುವರ್ಯರಿಗೆ ಸ್ತೋತ್ರವನು ಸಲಿಸಿದರು ॥ ೪೯ ॥
 
ಆನಂದ ತೀರ್ಥರಿಗೆ ವಿನಯವೇ ಆಭರಣವು
ಭವ್ಯ ಭೂಷಣವಹುದು ಆ ದಿವ್ಯ ಕಾಯಕ್ಕೆ
ಸಾಷ್ಟಾಂಗ ಕರ್ಮಗಳ ವಿಹಿತದಲಿ ಮಾಡುತ್ತ
ಪೂಜ್ಯರೆನಿಸಿದ ನಮ್ಮ ಆನಂದ ತೀರ್ಥರು
ವ್ಯಾಸಮುನಿಗಳ ಪಾದ ಪಂಕಜಗಳಲ್ಲಿ
ನಮಿಸಿದರು ಅತ್ಯಂತ ಭಕ್ತಿಪರವಶರಾಗಿ ॥ ೫೦ ॥
 
ಪರಾಶರಾತ್ಮಜರು, ವ್ಯಾಸ ಭಗವಾನರು
ಇಳೆಯೊಳಗೆ ಇಳಿದಿರುವ ಶ್ರೀ ಹರಿಯೇ ಅವರು
ತಮ್ಮ ಪಾದಕೆ ಎರಗಿ ಸಾಷ್ಟಾಂಗ ನಮಿಸಿದ
ಆನಂದ ತೀರ್ಥರನು ಪ್ರೇಮದಿಂದಲಿ ಕಂಡು
ತಮ್ಮೆರಡು ಕೈಗಳನು ಪ್ರೀತಿಯಲಿ ಚಾಚಿ
ಹಿಡಿದೆತ್ತಿ ನಿಲಿಸಿದರು ಪರಮ ವಾತ್ಸಲ್ಯದಲಿ ॥ ೫೧ ॥