This page has been fully proofread once and needs a second look.

"ಮಹಿಮರಾ ಉದರವು ಮತ್ತೊಂದು ಅದ್ಭುತವು
ಶೋಭಿಸುತ್ತಿಹುದಲ್ಲಿ ಶ್ರೇಷ್ಠತಮ ನಾಭಿಯು
ಅತಿ ನಿಮ್ನವೂ ಅಹುದು, ಅತಿ ತೆಳುವೂ ಅಹುದು
ಮೂರು ವಲಿಭಗಳುಂಟು ಅದರ ಮೇಲ್ಭಾಗದಲಿ
ಕಮಲನಾಭರು ನಮ್ಮ ವ್ಯಾಸಮುನಿವರ್ಯರು
ಬ್ರಹ್ಮಾಂಡ ಮಂಡಲವ ಉದರದಲಿ ಧರಿಸಿಹರು" ॥ ೩೨ ॥
 
"ಶ್ರೇಷ್ಠ ಮುನಿವಂಶದಲಿ ಜನಿಸಿಹರು ಇವರು
ಸಜ್ಜನರಿಗೆಂದೆಂದೂ ಅಭ್ಯುದಯ ಕರುಣಿಸುವರು
ವೇದಸ್ವರೂಪವೂ, ಪರಿಶುದ್ಧ, ನಿರ್ಮಲವೂ
ಆಗಿರುವ ಎರಡು ವಿಧಿ ಬ್ರಹ್ಮಸೂತ್ರಗಳನ್ನು
ಹೃದಯದಲಿ ಧರಿಸಿಹರು ಈ ವ್ಯಾಸಮುನಿಗಳು
ಇವರ ಈ ಹೃದಯವು ಪರಮ ಪರಿಶುದ್ಧವು" ॥ ೩೩ ॥
 
"ಶ್ರೀ ಹರಿಗೆ ಸಮನಿಲ್ಲ, ಆತ ಸರ್ವೋತ್ತಮನೆಂದು
ಸಭೆಗಳಲ್ಲಿ ಸಾಧಿಸುತ ಡಿಂಡಿಮವ ಬಾರಿಸಿದ
ವ್ಯಾಸಮುನಿಗಳ ಕಂಡು ಆ ಬ್ರಹ್ಮದೇವರು
ದಿಗ್ವಿಜಯ ಸಾಧನೆಯ ಸಂಕೇತವಾಗಿ
ಕೋಟಿ ಸೂರ್ಯರ ಪ್ರಭೆಯ ಪ್ರಖರ ಕಾಂತಿಯ ಪಡೆದ
ಕೌಸ್ತುಭ ವೆಂಬೊಂದು ಅಡ್ಡಿಕೆಯ ನೀಡಿಹರು" ॥ ೩೪ ॥
 
"ವೇದವ್ಯಾಸರ ಹಸ್ತ ಲೋಕದೊಳು ಅನುಪಮ
ರಂಜಿಸುತ್ತಿಹವು ಅವು ಅರುಣರಾಗದೊಳು
ಶಂಖ ಚಕ್ರಾಂಕಿತದಿ ಶೋಭಿಸುತ್ತಿಹವು
ಅತ್ಯಂತ ಮೋಹಕವು, ತುಂಬ ಕೋಮಲವು
ದುಂಡುದು೦ಡಾಗಿರುವ ಪುಷ್ಟ ಹಸ್ತಗಳು
ಕಾಣಲಾರೆವು ಇವಕೆ ಮತ್ತೊಂದು ಹೋಲಿಕೆಯ" ॥ ೩೫ ॥