This page has been fully proofread once and needs a second look.

ಸಂಶಯಕ್ಕೆಡೆಯಿಲ್ಲ ಅರ್ಥವಿವರಣೆಯಲ್ಲಿ
ಶಬ್ದ ಧಾರೆಯ ಸ್ರೋತ ಪುಂಖಾನು ಪುಂಖ
ಎಡೆಬಿಡದೆ ಆಚಾರ್ಯ, ಆನಂದ ತೀರ್ಥರು
ಹಲವು ಅರ್ಥಗಳ ಕ್ಷಣದಲ್ಲಿ ಬಿಡಿಸಿದರು
ಸಂಶ್ಲಿಷ್ಟ ಅರ್ಥಗಳ ಗ್ರಹಿಸಲಾರದ ದ್ವಿಜರು
ವ್ಯಾಕುಲವ ತಳೆದರು ಮನದಾಳದಲ್ಲಿ ॥ ೮ ॥
 
ಅಂತಿಂಥ ಸಾಮಾನ್ಯ ಪಂಡಿತರು ಅವರಲ್ಲ
ಸಾಂಗ ವೇದದ ಚತುರ, ಇತಿಹಾಸ ನಿಪುಣರು
ಧೈರ್ಯ ಸಾಹಸದಲ್ಲಿ ಹಿಮ್ಮೆಟ್ಟರವರು
ಅವರ ಸಂಖ್ಯೆಯು ಕೂಡ ಸಾಕಷ್ಟು ಅಧಿಕ
ಪ್ರಲಯ ಕಾಲದ ಜಲವ ತುಂಬಿಟ್ಟು ಕೊಳ್ಳಲು
ಬಾವಿ ಸಾವಿರವೆಲ್ಲ ಸಾಕಾಗಬಹುದೆ ? ॥ ೯ ॥
 
"ನಿಮ್ಮ ಪ್ರತಿಭೆಗೆ ನಾವು ಮಣಿಯುವೆವು ಸ್ವಾಮಿ
ದೇವವೃಂದಗಳಲ್ಲೂ ಕಾಣಬರದೀ ಪ್ರತಿಭೆ
ಚಪಲ ಮಾನವರಲ್ಲಿ ಇದು ಹೇಗೆ ಸಾಧ್ಯ ?
ಸಕಲವನೂ ಬಲ್ಲವರೇ ! ಸೌಮ್ಯ ಸ್ವರೂಪರೇ !
ಕ್ಷಮಿಸಿರೆಮ್ಮನು ನೀವು ಆನಂದ ತೀರ್ಥರೇ !"
ಎಂದೆನುತ ನಮಿಸಿದರು ಆಚಾರ್ಯವರ್ಯರಿಗೆ ॥ ೧೦ ॥
 
ಕೇರಳದ ಪಂಡಿತರ ಪರಾಜಯ
 
ಮತ್ತೊಮ್ಮೆ ಸಭೆಯಲ್ಲಿ ಪಾಲ್ಗೊಳ್ಳಲೆಂದು
ಕೇರಳ ಸುಮಂಡಲದಿ ಜನ್ಮವನು ತಾಳಿದ್ದ
ವೇದಾದಿ ಶಾಸ್ತ್ರದಲಿ ಪರಿಣತಿಯ ಪಡೆದಿದ್ದ
ವಿದ್ಯೆ ನೀಡುವ ಧನಕೆ ಆಶೆಯನು ಹೊಂದಿದ್ದ
ಈ ಪರಿಯ ಜನರಿಂದ ತುಂಬಿ ತುಳುಕುತಲಿದ್ದ
ದೇವಮಂದಿರವೊಂದ ಹೊಕ್ಕರಾಚಾರ್ಯರು ॥ ೧೧ ॥