This page has been fully proofread once and needs a second look.

ಮಾಲ್ಯವಂತ, ಸುಮಾಲ, ಮಾಲಿ ಎಂದು ಮೂವರು ಮಕ್ಕಳು. ಅವರು ಮೂವರೂ ಬ್ರಹ್ಮವರದಿಂದ ಅವಧ್ಯರಾಗಿದ್ದರು. ಬ್ರಾಹ್ಮಣ ಹಿಂಸೆ ಅವರ ಕುಲವ್ರತ. ಲಂಕೆ ಅವರ ರಾಜಧಾನಿ. ಈ ಮೂವರಿಂದ ಮೂರು ಲೋಕವೂ ಬೆದರಿತು. ದೇವತೆಗಳು ಶಂಕರನನ್ನು ಶರಣು ಹೋದರು.
 
ಬಂದ ದೇವತೆಗಳನ್ನು ಶಂಕರನು ಸಂತೈಸಿದನು.
 
" ಬ್ರಹ್ಮನ ವರವನ್ನು ಮಾಮೀರಿ ನಾನು ಅವರನ್ನು ಕೊಲ್ಲಲಾರೆ. ಈಗ ನಮಗೆ ಉಳಿದಿರುವುದು ಒಂದೇ ದಾರಿ. ಶ್ರೀ ಹರಿಗೆ ಶರಣಾಗುವುದು. ಬನ್ನಿ, ಅವನು ನಮಗೆ ಒಳಿತನ್ನುಂಟುಮಾಡುವನು."
 
ಕ್ಷೀರಸಾಗರದ ತಡಿಯಲ್ಲಿ ದೇವತೆಗಳು ಶ್ರೀಹರಿಯನ್ನು ಬಿನ್ನವಿಸಿಕೊಂಡರು:
"ಜಗನ್ನಾಥ ! ಸುಕೇಶನ ಮಕ್ಕಳಿಂದ ನಮ್ಮನ್ನು ಪಾರುಗಾಣಿಸು. ಜಗತ್ತನ್ನು ಪ್ರಳಯದ ಬಾಗಿಲಿಂದ ತಪ್ಪಿಸು. "
 
ದೈತ್ಯರನ್ನು ಸಂಹರಿಸಲು ಭಗವಂತನು ಗರುಡನನ್ನೇರಿ ಬಂದನು. ರಕ್ಕಸರೆಲ್ಲ ಯುದ್ಧಕ್ಕೆ ಅಣಿಯಾಗಿ ಬಂದೆರಗಿದರು. ಬೆಂಕಿಯಲ್ಲಿ ಬಿದ್ದ ಪತಂಗಗಳಂತೆ ಅವರ ಪಾಡಾಯಿತು. ಅಂದು, ಮಾಲಿ ತೋರಿದ ಕೆಚ್ಚು, ದೇವತೆಗಳೂ ಅಚ್ಚರಿಪಡುವಂಥದು. ಆದರೆ ಶ್ರೀಹರಿಯ ಮುಂದೆ ಯಾರ ಕೆಚ್ಚುಏನು ನಡೆದೀತು ? ಮಾಲಿ ಮಡಿದುರುಳಿದನು . ಸುಮಾಲಿ ಮತ್ತು ಮಾಲ್ಯವಂತ ತಲೆತಪ್ಪಿಸಿ ಕೊಂಡರು. ದೇವತೆಗಳು ನೆಮ್ಮದಿಯ ನಿಟ್ಟುಸಿರುಗರೆದರು.
 
ಯುದ್ಧದಲ್ಲಿ ಓಡಿಹೋದ ಸುಮಾಲಗೆ ಮನಸ್ಸಿನಲ್ಲಿ ಕಿಚ್ಚು ತಾಂಡವವಾಡುತ್ತಿತ್ತು. ದೇವತೆಗಳನ್ನು ಹೇಗಾದರೂ ಸದೆಬಡಿಯ -ಬೇಕೆಂದು ಪಣತೊಟ್ಟನು. ಅದಕ್ಕೆಂದೇ ತನ್ನ ಮಗಳು ಕೈಕಸಿಯನ್ನು ಪಾತಾಳದಿಂದ ಕರೆದುಕೊಂಡು ಬಂದು ವಿಶ್ರವಸನ ಬಳಿ ಬಿಟ್ಟನು. ಕೈಕಸಿಯ ಯೌವನ-ಲಾವಣ್ಯ ತಾಪಸನ ಮನಸ್ಸಿಗೆ ನಾಟಿತು. ವಿಶ್ರವಸ-ಕೈಕಸಿಯರು ಜತೆಯಾದರು. ಮೊದಲು ಹತ್ತು ತಲೆಯ ಮಗನೊಬ್ಬ ಹುಟ್ಟಿದ. ಅನಂತರ ಕುಂಭಕರ್ಣ. ಮೂರನೆಯವಳು ಶೂರ್ಪಣಖೆ, ಕೊನೆಯವನೆ ಪುಣ್ಯಾತ್ಮನಾದ ವಿಭೀಷಣ.
 
ತನ್ನ ಸವತಿಯ ಮಗ ಕುಬೇರನ ಸಿರಿಯನ್ನು ಕಂಡು ಕೈಕಸಿಗೆ ಕಿಚ್ಚಾ -
ಯಿತು. ಅವಳು ತನ್ನ ಮಕ್ಕಳನ್ನು ತಪಸ್ಸಿಗೆ ಪ್ರಚೋದಿಸಿದಳು. ಮೂವರೂ ಸೋದರರು ಸಾವಿರ-ಸಾವಿರ ವರ್ಷಕಾಲ ತಪಸ್ಸನ್ನಾಚರಿ- ಸಿದರು.