This page has not been fully proofread.

ಮಿಂಚಿನಬಳ್ಳಿ
 
ಮೂವರಿಗೂ ನಮಸ್ಕರಿಸಿದನು. ಲಕ್ಷ್ಮಣನೂ ತಾಯಂದಿರಿಗೆ ವಂದಿಸಿದನು.
ಸೀತೆಯೂ ಅತ್ತೆಂದಿರ ಆಶೀರ್ವಾದವನ್ನು ಪಡೆದುಕೊಂಡಳು.
 
ಆ ರಾತ್ರಿ ಹಾಗೆಯೇ ಕಳೆಯಿತು. ಮರುದಿನ ಮುಂಜಾವದಲ್ಲಿ ಎಲ್ಲರೂ
ಒಂದೆಡೆ ಸೇರಿದರು. ಭರತನು ಏನೆಂದು ಬೇಡಿಕೊಳ್ಳುವನೊ ? ಅದಕ್ಕೆ
ರಾಮಚಂದ್ರ ಏನನ್ನುವನೋ ? ಎಂದು ಎಲ್ಲರಿಗೂ ಕುತೂಹಲ ಎಲ್ಲರೂ
ಕಿವಿ ನಿಮಿರಿಸಿಕೊಂಡು ಕುಳಿತಿದ್ದರು.
 
ಭರತನು ರಾಮನ ಬಳಿ ವಿಜ್ಞಾಪಿಸಿಕೊಂಡನು :
 
"ರಾಮಚಂದ್ರ, ನಮ್ಮ ಮೇಲೆ ಅನುಗ್ರಹ ಮಾಡಿ ನಿನ್ನದೇ ಆದ
ಅಯೋಧ್ಯೆಯನ್ನು ನೀನು ಪ್ರವೇಶಿಸಬೇಕು. ಈ ಕಾಡಿನ ಬಾಳು ಇನ್ನು
ಸಾಕು. ಭೂಮಿತಾಯಿ ಅನಾಥೆಯಾಗಿದ್ದಾಳೆ. ನಾಡಿನ ಈ ವೈಧವ್ಯವನ್ನು
ತೊಲಗಿಸು. ನಮ್ಮನ್ನು ಈ ಸಂಕಟದಿಂದ ಪಾರುಗಾಣಿಸು."
 
ರಾಮನು ಚುಟುಕಾಗಿ ಉತ್ತರಿಸಿದನು :
 
"ನಾವು ತಂದೆಯ ಮಾತಿನಂತೆ ನಡೆಯುವವರು. ಸಜ್ಜನರ ಹಿತಕ್ಕಾಗಿ
ನಾನಿಲ್ಲೇ ಇರಬಯಸುತ್ತೇನೆ. ರಾಜ್ಯವನ್ನು ಹಿಡಿದು ನಡೆಸುವ ಭಾರ ನಿನ್ನದು."
 
ಭರತನು ಗದ್ಗದಿತನಾಗಿ ಮತ್ತೆ ಮತ್ತೆ ಬಿನ್ನವಿಸಿಕೊಂಡನು :
 
"ಎಲ್ಲ ಅನರ್ಥಗಳಿಗೂ ನನ್ನ ತಾಯಿಯೇ ಕಾರಣ. ನಿನ್ನನ್ನು ಕಾಡಿ
ಗೋಡಿಸಿದಳು. ಗಂಡನನ್ನು ಕೊಂದಳು. ನನ್ನ ಮನಸಿನ ಬಯಕೆಯನ್ನು
ಮಣ್ಣು ಗೂಡಿಸಿದಳು. ಜಗತ್ತನ್ನೇ ದುಃಖದ ಕಡಲಲ್ಲಿ ತೇಲಿಸಿದಳು. ಅವಳ
ನೆನಪು ಬಂದಾಗ ಮೈಯೆಲ್ಲ ಉರಿದೇಳುತ್ತದೆ. ತಾಯಿಯಾದರೇನು ? ಇಂಥ
ಕುಲಕಲಂಕಿನಿಯ ತಲೆ ಸವರಿಬಿಡಬೇಕು ಎನ್ನುವಷ್ಟು ಸಿಟ್ಟು ಮೂಡುತ್ತದೆ.
ಆದರೆ ನಿನ್ನ ನೆನಪು ಬಂದಾಗ ಮತ್ತೆ ಮನಸ್ಸು ಶಾಂತವಾಗುತ್ತದೆ. ಸ್ತ್ರೀ
ಘಾತಕನಾದ ಭರತನನ್ನು ನೀನು ಕ್ಷಮಿಸಲಾರೆ ಎಂಬ ಭಯದಿಂದ ಸುಮ್ಮನಿರ
ಬೇಕಾಗಿದೆ. ಏನಿದ್ದರೂ ನಾನು ನಿನ್ನ ಭಕ್ತ-ಕಿಂಕರ, ನನ್ನನ್ನು ಮನ್ನಿಸಿಬಿಡು.
 
ಮಹಾರಾಜನ ವರದಂತೆ ನನಗೆ ಬಂದಿರುವ ರಾಜ್ಯವನ್ನು ನಾನು ನಿನಗೆ
ಅರ್ಪಿಸಿದ್ದೇನೆ. ನನ್ನ ಮೇಲಣ ಪ್ರೀತಿಯಿಂದಲಾದರೂ ನೀನು ಅದನ್ನು ಸ್ವೀಕರಿಸ
ಬೇಕು, ರಾಮಚಂದ್ರ, ನೀನು ಊರಿಗೆ ಮರಳದಿರುವುದೇ ದಿಟವಾದರೆ ನಾನೂ