This page has not been fully proofread.

ಸಂಗ್ರಹರಾಮಾಯಣ
 
2X
 
ಚಿತ್ರಕೂಟದಲ್ಲಿ ಪರ್ಣಕುಟೀರ
 
ಪ್ರಾತಃಕಾಲ ರಾಮನ ಆಜ್ಞೆಯಂತೆ ಗುಹನು ನದಿಯನ್ನು ದಾಟಲು
ಸುದೃಢವಾದ ದೋಣಿಯೊಂದನ್ನು ತರಿಸಿದನು. ಸುಮಂತ್ರನನ್ನು ಬೀಳ್ಕೊಡುತ್ತ
ರಾಮನು ನುಡಿದನು:
 
"ಸುಮಂತ್ರ, ಇನ್ನು ಅಯೋಧ್ಯೆಗೆ ಹಿಂದಿರುಗು, ದುಃಖಿತನಾದ ನನ್ನ
ತಂದೆಯನ್ನು ಸಂತೈಸು. ಕೈಕೇಯಿಯನ್ನು ಯಾರೂ ಅವಮಾನಗೊಳಿಸಬೇಡಿ.
ಭರತನು ಯುವರಾಜನಾಗಲಿ, ಮಹಾರಾಜನ ಆಜ್ಞೆಯಂತೆ ನೀವೆಲ್ಲ ಇದ್ದರೆ
ಅದೇ ನನಗೆ ಸಂತೋಷ. ನನ್ನ ತಾಯಿ ತಂದೆ, ವಸಿಷ್ಠಾದಿಗಳು ಯಾರೂ
 
ನನಗಾಗಿ ದುಃಖ ಪಡಬಾರದು ಎಂದು ಹೇಳು."
 
ಲಕ್ಷ್ಮಣನು ಮಧ್ಯದಲ್ಲಿ ಸಿಟ್ಟನ್ನು ಅದುಮಿಕೊಂಡು ಹೇಳಿದನು:
*ಮಹಾರಾಜನು ಕೈಕೇಯಿಯಿಂದ ಕೃತಕೃತ್ಯನಾಗಿದ್ದಾನೆ. ಕಾಡಿಗೆ
ಹೋದ ಮಗನ ನೆನ ಅವನ ಬಳಿ ಸುಳಿಯಲಾರದು."
 
ರಾಮನು ತನ್ನ ಮಾತನ್ನು ಮುಂದುವರಿಸಿದನು:
 
"ಸೂತ, ಲಕ್ಷ್ಮಣನು ಸಿಟ್ಟಿನಿಂದ ಕುರುಡಾಗಿ ಮಾತನಾಡುತ್ತಿದ್ದಾನೆ.
ಇದನ್ನು ತಂದೆಗೆ ಅರುಹಬೇಡ, ಮೊದಲೇ ದುಃಖಿತನಾದ ಅವನಿಗೆ ಮಗನಿಂದ
ಈ ಉಪಚಾರವೆಂದರೆ ಜೀವವೇ ಭಾರವಾದೀತು. ಇನ್ನು ಹೊರಡು ಸುಮಂತ್ರ."
 
ಸುಮಂತನು ಕಣ್ಣೀರು ಸುರಿಸುತ್ತ ಸುಮ್ಮನೆ ನಿಂತಿದ್ದು ಕೊನೆಗೆ ಹೇಳಿದ:
"ವೀರನಿಲ್ಲದ ಸೇನೆಯಂತೆ- ಪತಿಹೀನಳಾದ ಯುವತಿಯಂತೆ, ನೀನಿಲ್ಲದ
ಈ ತೇರನ್ನು ಹೇಗೆ ನಡೆಸಲಿ ರಾಮಚಂದ್ರ ? ಊರಿಗೆ ಮರಳಿದವನು ನಿನ್ನ
ತಂದೆ-ತಾಯಂದಿರಿಗೆ, ಪೌರರಿಗೆ ಏನೆಂದು ಹೇಳಲಿ ? ಯಾವ ಮೋರೆಯನ್ನು
ತೋರಲಿ ? ನನ್ನನ್ನು ಹೋಗೆನಬೇಡ, ನಿನ್ನ ಸೇವೆ ಮಾಡುತ್ತ ನಾನೂ ಇಲ್ಲೆ
ಇದ್ದು ಬಿಡುತ್ತೇನೆ."
 
"ಹಾಗಲ್ಲ ಸುಮಂತ, ನೀನು ಮರಳಲೇಬೇಕು. ನೀನು ಮರಳಿದರೆ
ತಾಯಿ ಕೈಕೇಯಿಗೆ ನಾನು ಕಾಡಿಗೆ ಹೋದೆ ಎಂಬ ವಿಷಯದಲ್ಲಿ ನಂಬಿಕೆ
ಮೂಡುವುದು. ಅದೇ ನೀನು ನನಗೆ ಮಾಡುವ ಸೇವೆ. ಹೋಗಿ ಬಾ
ಸುಮಂತ್ರ."