This page has not been fully proofread.

ಮಿಂಚಿನಬಳ್ಳಿ
 
ರಾಮನ ಆಜ್ಞೆಯನ್ನು ಮೀರುವುದು ಯಾರಿಗೆ ಸಾಧ್ಯ? ವಿಭೀಷಣ
ಲಂಕೆಗೆ ಮರಳಿದನು; ಜತೆಗೆ ಅಂತರಂಗದಲ್ಲಿ ರಾಮಚಂದ್ರನನ್ನೂ ಹೊತ್ತು
ತಂದನು.
 
580
 
ಎಲ್ಲ ಭಗವದ್ಭಕ್ತರೂ ಮಹಾಯಾನಕ್ಕೆ ಸಿದ್ಧರಾಗಿ ರಾಮಚಂದ್ರನನ್ನು
ಸುತ್ತುವರಿದರು. ಭಗವಂತನ ಸನ್ನಿಧಾನದಿಂದ ಭಕ್ತರು ನಿರ್ಲಿಪ್ತರಾದರು.
 
ಮಹಾಪ್ರಸ್ಥಾನ
 
ಪವನತನಯ ಹನುಮಂತನು ಸಭೆಯಲ್ಲಿ ತೆಪ್ಪಗೆ ಕುಳಿತಿದ್ದುದು ರಾಮ-
ಚಂದ್ರನ ಕಣ್ಣಿಗೆ ಬಿತ್ತು. ಅವನು ತತ್ ಕ್ಷಣ ಹನುಮಂತನ ಬಳಿಸಾರಿ ಅವನನ್ನು
ಬಿಗಿದಪ್ಪಿ ಸಂತೈಸಿದನು:
 
ಚಿರಜೀವಿಯಾದ ಹನುಮಂತನೆ, ನೀನು ನನಗೆ ಪರಮಪ್ರಿಯನು, ನಿನ್ನ
ಯಶಸ್ಸನ್ನು ದೇವ ಗಂಧರ್ವರು ಹಾಡಿ ಕೊಂಡಾಡುತ್ತಾರೆ. ನನ್ನ ಲೀಲಾವಿಗ್ರಹ
ನಿನ್ನ ಕಣ್ಣಿನಿಂದ ಎಂದೂ ಮರೆಯಾಗುವುದಿಲ್ಲ. ನೀನು ಬಯಸಿದ್ದು ನಿನಗೆ
ದೊರಕುವುದು."
 
ಹನುಮಂತನು ಕೈ ಮುಗಿದು ಗಂಭೀರವಾಣಿಯಿಂದ ವಿನಂತಿಸಿಕೊಂಡನು.
"ರಾಮಚಂದ್ರ, ನಿನ್ನ ಮೇಲಣ ನನ್ನ ಭಕ್ತಿ ಅನವರತವೂ ಬೆಳೆಯುತ್ತಿರಲಿ,
ಅದೊಂದೇ ನನಗೆ ಸಂತಸದ ವಿಷಯ. ನಾನು ಬಯಸುವುದು ಅದೊಂದನ್ನೆ
ಮಾತು-ಮೈಮನಗಳಿಂದ ನಿನಗೆ ಎಂದೆಂದೂ ನನ್ನ ಪ್ರಣಾಮಗಳು."
 
ರಾಮಚಂದ್ರನು 'ತಥಾಸ್ತು' ಎಂದು ಹನುಮಂತನನ್ನು ಹರಸಿದನು.
ಮೂಡಣಬಾನಿನಲ್ಲಿ ಭಾನುದೇವನ ಹೊಂಬೆಳಕು ಹರಿಯಿತು. ರಾಮ-
ಚಂದ್ರನು ಸಮಸ್ತ ಪೌರಜಾನಪದರೊಡನೆ ಅಯೋಧ್ಯೆಯನ್ನು ಬಿಟ್ಟು ತೆರಳಿದನು.
ಭಗವನ್ಮಾಯೆಯನ್ನು ತೊಡೆದುಹಾಕಲು ಅಸಮರ್ಥರಾದ ಕೆಲ ಭವಿಗಳು ಮಾತ್ರ
ಭೂಮಿಯಲ್ಲಿ ಉಳಿದುಕೊಂಡರು.
 
ಪರಮಸುಂದರನಾದ ರಾಮಚಂದ್ರ ಮುಂದಿನಿಂದ ನಡೆದನು. ಸೀತಾ-
ಮಾತೆ ಶ್ರೀ- ಎಂಬ ಎರಡು ರೂಪಗಳಿಂದ ಪಕ್ಕದಲ್ಲಿ ಚಾಮರ ಬೀಸುತ್ತ
ನಡೆವುದನ್ನು ಜನರು ಕಣ್ಣಾರೆ ಕಂಡರು ! ಚಂದ್ರಮಂಡಲವನ್ನು ನಾಚಿಸುವ
ಬೆಳ್ಕೊಡೆಯನ್ನು ಹನುಮಂತನು ಹಿಡಿದನು. ಶಂಖ-ಚಕ್ರಾತ್ಮಕರಾದ ಶತ್ರುಘ್ನ
ಭರತರು ಎಡಬಲಗಳಲ್ಲಿ ಶಂಖ-ಚಕ್ರಧಾರಿಗಳಾಗಿ ಸಾಗಿದರು.