This page has been fully proofread once and needs a second look.

ಈ ರಾಜರ್ಷಿಗಳ ಮಣಿಮಾಲಿಕೆಯಲ್ಲಿಯೆ ನಾಯಕ- ಮಣಿಯಂತೆ ದಶರಥ ಮಹಾರಾಜನು ಬೆಳಗಿ ಬಂದನು.
ಅವನು ಸಪ್ತದ್ವೀಪಗಳಿಂದ ಕೂಡಿದ ಭೂಮಂಡಲದ ಚಕ್ರವರ್ತಿಯಾಗಿದ್ದನು. ಅಯೋಧ್ಯೆ ಅವನ ರಾಜಧಾನಿ
ಯಾಗಿತ್ತು. ದಾನವೀರನೂ ಯುದ್ಧವೀರನೂ ಆದ ಮಹಾರಾಜನ ಬಳಿ ಆರ್ಥಿಗಳು ವಿಫಲರಾಗಿ ಹಿಂತೆರಳಿದುದೂ ಇಲ್ಲ; ಯುದ್ಧಕ್ಕೆಂದು ಬಂದು ಎದುರಿಸಿ
ತಲೆಯೆತ್ತಿ ನಿಂತವರೂ ಇಲ್ಲ. ರಾಜನಿಗೆ ಮಕ್ಕಳಿಲ್ಲ ಎಂಬುದೊಂದಲ್ಲದೆ ಇನ್ನಾವ ದೂರೂ ಆ ರಾಜ್ಯದಲ್ಲಿ ಕೇಳಬರುತ್ತಿರಲಿಲ್ಲ. ಚಂದ್ರಮನಲ್ಲಿ ಕಲಂಕವೊಂದನ್ನ-
ಲ್ಲದೆ ಇನ್ನಾವ ದೂಷಣವನ್ನು ಹೇಳಲು ಸಾಧ್ಯ ?
 
ಆತನಿಗೆ ಕೌಸಲ್ಯ-ಸುಮಿತ್ರೆ-ಕೈಕೇಯಿ ಎಂಬ ಮೂವರು ಮಡದಿಯರಿದ್ದರು. ಈ ಮೂವರು ಮಡದಿಯರಲ್ಲೂ ಕಾಲತಂತುವಾದ ಮಗನನ್ನು ಪಡೆಯದೆ ಚಿಂತಾತುರ- ನಾದ ರಾಜನು, ಅಶ್ವಮೇಧದಿಂದ ಭಗವಂತನನ್ನು ಒಲಿಸಿಕೊಳ್ಳುವುದಾಗಿ ಯೋಚಿಸಿದನು. ಭಕ್ತವತ್ಸಲನಾದ ಭಗವಂತನು ಪ್ರಸನ್ನನಾದನೆಂದರೆ ಅಲಭ್ಯವಾದು- ದಾದರೂ ಏನಿದೆ? ಎಂತಲೇ ಮಹಾರಾಜನು ಯಾಗದ ಮಂತ್ರ-ತಂತ್ರಗಳನ್ನು ಬಲ್ಲ ಬ್ರಾಹ್ಮಣರನ್ನೂ ಬ್ರಹ್ಮರ್ಷಿ- ಗಳೂ ಕುಲಗುರುಗಳೂ ಆದ ವಸಿಷ್ಠರನ್ನೂ ಕರೆತರುವಂತೆ ಸುಮಂತ್ರನಿಗೆ ಆಜ್ಞಾಪಿಸಿದನು. ಕ್ಷಾತ್ರತೇಜಸ್ಸು ಬ್ರಹ್ಮತೇಜಸ್ಸಿನೊಡನೆ ಬೆರೆತಾಗ ಗಾಳಿಯಿಂದ ಭುಗಿಲೆದ್ದ ಬೆಂಕಿಯಂತೆ ಪ್ರಜ್ವಲಿಸುವದಲ್ಲವೇ ?
 
ಪುತ್ರಕಾಮೇಷ್ಟಿ ನಡೆಯಿತು
 
ಸುಯಜ್ಞ, ವಾಮದೇವ, ಜಾಬಾಲಿ, ಕಶ್ಯಪ, ವಸಿಷ್ಠ ಈ ಐದು ಮಹರ್ಷಿಗಳು ಪಂಚಾಗ್ನಿಯಂತೆ ರಾಜಸಭೆಯಲ್ಲಿ ಕಂಗೊಳಿಸಿದರು. ಈ ಎಲ್ಲ ಮಹರ್ಷಿಗಳ ಒಪ್ಪಿಗೆಯನ್ನು ಪಡೆದು ಮಹಾರಾಜನು ಅಶ್ವಮೇಧಕ್ಕೆ ಅಣಿಗೊಳಿಸಿದನು. ಆಗ ಒಮ್ಮೆ ಏಕಾಂತದಲ್ಲಿ ಸುಮಂತ್ರನು ರಾಜನೊಡನೆ ಹೀಗೆಂದನು.
 
"ಓ ಮಹಾರಾಜ, ಸನತ್ಕುಮಾರನು ಋಷಿಗಳಿಗೆ ಹಿಂದೊಮ್ಮೆ ಹೇಳಿದ ಕಥೆಯೊಂದನ್ನರುಹುವೆ, ಆಲಿಸು. 'ಮಹಾತಪಸ್ವಿಯಾದ ವಿಭಾಂಡಕ ಮಹರ್ಷಿಗೆ ಋಷ್ಯಶೃಂಗನೆಂಬ ಮಗನು ಜನಿಸುವನು. ಮುಂದೊಮ್ಮೆ ಅಂಗದೇಶದ ರಾಜನಾದ ಲೋಮಪಾದನ ರಾಜ್ಯದಲ್ಲಿ ಮಳೆ ಬರದೆ ಬರಗಾಲವುಂಟಾಗುವುದು: