This page has not been fully proofread.

ಶ್ರೀನಾರಾಯಣಪಂಡಿತಾಚಾರ್ಯರ
 
ಸ೦ಗ್ರಹ ರಾಮಾಯಣ
 
ಬಾಲಕಾಂಡ
 
ಬೆಳೆದುಬಂದ ಸೂರ್ಯವಂಶ
 
ಬಹುಕಾಲದ ಹಿಂದಿನ ಮಾತು. ಭಗವಂತನು ತನ್ನ ಸೃಷ್ಟಿಲೀಲೆಯಲ್ಲಿ
ತೊಡಗುವ ಮೊದಲಿನ ಮಾತು. ಆಗ ಎಲ್ಲಿ ನೋಡಿದರಲ್ಲಿ ಕಪ್ಪು ನೀರಿನ
ಕಡಲೇ ಕಾಣಿಸುತ್ತಿತ್ತು. ಕಾಣುವುದೇನು ಬಂತು ? ಮಾನವ ಪ್ರಾಣಿಯೇ
ಇಲ್ಲದ ಆ ಕಾಲದಲ್ಲಿ ಕಾಣುವ ಕಣ್ಣಾದರೂ ಎಲ್ಲಿಂದ ಬರಬೇಕು ? ರಮೆಯರಸ
ನೊಬ್ಬನಲ್ಲದೆ ಇನ್ನಾವನೂ ಈ ಪ್ರಳಯಜಲಧಿಯ ಸೆಳೆತದಿಂದ ತಪ್ಪಿಸಿ
ಕೊಳ್ಳಲಾರ.
 
ಸೃಷ್ಟಿಯ ಆದಿಯಲ್ಲಿ ಕಡಲಿನಲ್ಲಿ ಕ್ರೀಡಿಸುತ್ತಿದ್ದ ಶ್ರೀಹರಿ ನಾಲ್ಕು
ಮೋರೆಯ
ಮಗನೊಬ್ಬನನ್ನು ಸೃಜಿಸಿದನು. ಈ ಸೃಷ್ಟಿಚತುರನಾದ ಚತುರಾನನ
ನಿಂದಲೇ ಸೃಷ್ಟಿ ಕಾರ್ಯ ಮೊದಲಾಯಿತು. ಈ ಚತುರ್ಮುಖನಿಂದ ಪಂಚ
ಮುಖನಾದ ರುದ್ರ ಜನಿಸಿದನು; ಸಪ್ತರ್ಷಿಗಳು ಜನಿಸಿದರು. ಸಪ್ತರ್ಷಿಗಳಲ್ಲಿ
ಒಬ್ಬನಾದ ಮರೀಚಿಯ ಮಗನೇ ಕಶ್ಯಪ ಪ್ರಜಾಪತಿ, ಆದುದರಿಂದಲೇ ಅವನನ್ನು
ಮಾರೀಚ' ಎನ್ನುವರು. ಮಾರೀಚನಿಂದ ಅದಿತಿಯಲ್ಲಿ ಮಂತ್ರಪೂತವಾದ
ಅರಣಿಯಲ್ಲಿ ಅಗ್ನಿ ಮೂಡಿ ಬರುವಂತೆ ಆದಿತ್ಯನ ಉದಯವಾಯಿತು. ಈ
ಸೂರ್ಯದೇವನ ಮಗ ಶ್ರಾದ್ಧ ದೇವ, ಇವನನ್ನು 'ವೈವಸ್ವತ ಮನು' ಎಂದೂ
ಕರೆಯುವರು. ಇವನಿಂದ ಇಕ್ಷಾಕುವೇ ಮೊದಲಾದ ಸೂರ್ಯವಂಶದ ರಾಜ
ಪರಂಪರೆ ಬೆಳೆದು ಬಂದಿತು,