This page has not been fully proofread.

ಮಿಂಚಿನಬಳ್ಳಿ
 
ಬಿಡು. ಏಕೆಂದರೆ ರಾಮಚಂದ್ರನ ಬಾಣ ಬತ್ತಳಿಕೆಯಿಂದ ಹೊರಬರುವ
ವರೆಗೆ ಮಾತ್ರವೇ ನೀನು ಬದುಕಿರುವುದು ಸಾಧ್ಯ."
 
ಕಾಡುಕಪಿಯೊಂದು ಬಂದು ಹೀಗೆ ಒದರುವುದೆಂದರೇನು ? ರಾವಣನಿಗೆ
ಕೋಪ ತಡೆಯಲಾಗಲಿಲ್ಲ. ಅವನು 'ಈ ಕಪಿಯನ್ನು ಹಿಡಿದು ನಿಗ್ರಹಿಸಿಬಿಡಿ'
ಎಂದು ಆಜ್ಞಾಪಿಸಿದನು. ಕೂಡಲೆ ಅನೇಕ ರಾಕ್ಷಸರು ಅಂಗದನ ಮೇಲೇರಿ,
ಅಂಗದನು ಅವರನ್ನೆಲ್ಲ ಕೈಯಲ್ಲಿ ಅದುಮಿ ಹಿಡಿದುಕೊಂಡೇ
ಆಕಾಶಕ್ಕೆ ಹಾರಿ ಕೈಬಿಟ್ಟನು. ಕೆಳಗೆ ಬಿದ್ದ ರಕ್ಕಸರು ವಿಲಿವಿಲಿ ಒದ್ದಾ ಡಿದರು.
ಕೆಲವು ಮಹಡಿಗಳನ್ನೂ ಅಂಗದನು ಪುಡಿಮಾಡಿಬಿಟ್ಟನು.
 
ಬಂದರು.
 
೧೭೮
 
ಅಂಗದನ ಕೃತ್ಯವನ್ನು ಕಂಡು ರಾವಣನು ಸಿಟ್ಟಿನಿಂದ ಕೆಂಡವಾದನು.
ಆದರೆ ರಾಮಚಂದ್ರನು ತೃಪ್ತಿಯ ಮಂದಹಾಸವನ್ನು ಬೀರಿದನು. ಸಂಧಾನದ
ಎಲ್ಲ ಬಾಗಿಲುಗಳೂ ಮುಚ್ಚಿದಂತಾದ ಮೇಲೆ ಕಪಿಸೇನೆ ಶತ್ರು ರಾಜ್ಯದ ಎಲ್ಲ
ಬಾಗಿಲಿನಲ್ಲಿ ಮುತ್ತಿಗೆ ಹಾಕಿತು. ಬೆಟ್ಟಗುಡ್ಡಗಳನ್ನ ಹೊತ್ತು ತರುತ್ತಿರುವ
ಕಪಿಗಳ ಆಕ್ರಮಣೆಗೆ ಸಿಕ್ಕಿದ ಲಂಕೆ, ಪ್ರವಾಹಕ್ಕೆ ಸಿಕ್ಕಿದ ದೋಣಿಯಂತೆ ಅಸ-
ಹಾಯವಾಗಿ ಕಾಣಿಸಿತು. ಕೂಡಲೆ ರಾವಣನು ಪೂರ್ವದಿಕ್ಕಿಗೆ ಪ್ರಹಸ್ತನನ್ನೂ,
ಪಶ್ಚಿಮಕ್ಕೆ ಇಂದ್ರಜಿತನನ್ನೂ, ದಕ್ಷಿಣದ ಕಡೆಗೆ ವಜ್ರದಂಷ್ಟನನ್ನೂ ಕಳುಹಿಸಿ
ಉತ್ತರ ದಿಕ್ಕಿಗೆ ತಾನೇ ಹೊರಟನು. ಅದಕ್ಕೆ ಸರಿಯಾಗಿ ರಾಮಸೇನೆಯಲ್ಲೂ
ವ್ಯವಸ್ಥೆಗೊಳಿಸಲಾಯಿತು. ಪೂರ್ವ ಧಿಕ್ಕಿಗೆ ನೀಲ ತೆರಳಿದನು. ದಕ್ಷಿಣಕ್ಕೆ ಅಂಗದ
ನಡೆದನು. ಹನುಮಂತ ಪಶ್ಚಿಮಕ್ಕೆ ತೆರಳಿದನು. ಸ್ವಯಂ ರಾಮಚಂದ್ರನೇ
ಉತ್ತರದಲ್ಲಿ ಸೇನಾರಕ್ಷಕನಾಗಿ ನಿಂತನು. ಮೈಂದ-ವಿವಿದರು ನೀಲನನ್ನು
ಅನುಸರಿಸಿದರು. ಗಜ ಮೊದಲಾದವರು ಅಂಗದನ ಜತೆಯಾದರು. ಪ್ರಮಾಥಿ
ಎಂಬವನು ಹನುಮಂತನ ಅಂಗರಕ್ಷಕನಾಗಿ ಪಶ್ಚಿಮಕ್ಕೆ ನಡೆದನು. ಉಳಿದವರೆಲ್ಲ
ಸುಗ್ರೀವನ ಜತೆಗೆ ಒತ್ತಟ್ಟಿಗೆ ನಿಂತರು.
 
ಕಪಿಸೇನೆ ಸಿಕ್ಕಿದಲ್ಲೆಲ್ಲ ರಾಕ್ಷಸರನ್ನು ಸದೆಬಡಿಯ ತೊಡಗಿತು. ಪ್ರಾಕಾರ
ಗಳಲ್ಲಿ, ಪ್ರಾಸಾದಗಳಲ್ಲಿ, ನೆಲದಲ್ಲಿ ಮುಗಿಲಲ್ಲಿ ಎಲ್ಲಿನೋಡಿದರಲ್ಲಿ ಕಪಿಗಳದೇ
ಸಾಮ್ರಾಜ್ಯ. ಇದನ್ನು ಕಂಡು ರಾಕ್ಷಸರು ಕಂಗೆಟ್ಟು ಹೋದರು.
 
ರಾಮಚಂದ್ರನ ಒಂದು ಬದಿಯಲ್ಲಿ ಸುಗ್ರೀವನಿದ್ದನು. ಇನ್ನೊಂದೆಡೆ
ಗದಾಧಾರಿಯಾದ ವಿಭೀಷಣನಿದ್ದನು.