This page has been fully proofread once and needs a second look.

ಸಂಗ್ರಹರಾಮಾಯಣ
 
೧೩
 
"ಸಾಧು ಸಾಧು' ಎಂದು ಕೊಂಡಾಡಿದರು. ಆಕಾಶದಲ್ಲಿ ನೆರೆದ ಸಾಧು ಜೀವಿ
ಗಳೆಲ್ಲ ಹನುಮಂತನನ್ನು ಹೊಗಳುವವರೆ :
 

 
"ದೇವಕಾರ್ಯಕ್ಕಾಗಿ ಮಾಹೇಂದ್ರದಿಂದ ತ್ರಿಕೂಟಕ್ಕೆ ಹಾರುತ್ತಿರುವ ಹನು
ಮಂತನಿಗೆ ಜಯವಾಗಲಿ, ಮೂವತ್ತು ಯೋಜನ ವಿಸ್ತಾರವಾದ ನೆರಳನ್ನು
ಸಾಗರದಲ್ಲಿ ಚೆಲ್ಲಿ ಚಿಮ್ಮುತ್ತಿರುವ ಮಾರುತಿಗೆ ಜಯವಾಗಲಿ, ರಾಮಚಂದ್ರನ
ಕರುಣಲತೆಯ ಮೊದಲ ಮೊಗ್ಗೆಯಾದ ಪವಮಾನ ತನಯನಿಗೆ ಜಯವಾಗಲಿ."
 

 
ರಾವಣನ ರಾಜಧಾನಿಯಲ್ಲಿ
 

 
ಸಮುದ್ರ ರಾಜನಿಗೆ ರಾಮಭಕ್ತನ ಮೇಲೆ ಅಪಾರ ಗೌರವ. ಅವನು

ತನ್ನಲ್ಲಿ ಹುದುಗಿರುವ ಹಿಮಮಂತನ ಮಗನಾದ ಮೈನಾಕನನ್ನು ಮೇಲೆದ್ದು
ಬಂದು ಹನುಮಂತನಿಗೆ ಉಪಚರಿಸುವಂತೆ ಕೇಳಿಕೊಂಡನು.
 

 
ಮೈನಾಕ ನೀರಿನ ಮೇಲೆ ಕಾಣಿಸಿಕೊಂಡನು. ಹನುಮಂತನು ಇದನ್ನು
ಗಮನಿಸದೆ ಒಂದೇಸಮನೆ ಮುಂದುವರಿಯುತ್ತಿದ್ದ. ಆಗ ಮೈನಾಕನು-"ಮಹಾ
ವೀರನೆ ! ಇಲ್ಲಿ ವಿಶ್ರಮಿಸಿ ನಾನು ಅರ್ಪಿಸಿದ ಸ್ವಾದು ಫಲಗಳನ್ನು ಸೇವಿಸಿ
ಆಯಾಸವನ್ನು ಪರಿಹರಿಸಿಕೊಳ್ಳಬೇಕು. ನಾವಿಬ್ಬರೂ ಒಂದು ದೃಷ್ಟಿಯಿಂದ
ಬಂಧುಗಳೇ ಆಗಿದ್ದೇವೆ." ಎಂದು ಪ್ರಾರ್ಥಿಸಿಕೊಂಡನು. ಆಗ ಹನುಮಂತನು:
"ನನ್ನ ಮಾತಿರಲಿ. ಶಿವನ ಭಾವ-ಮೈದುನನಾದ ನೀನು ಇಲ್ಲಿ ಹುದುಗಿರಲು
ಕಾರಣವೇನು ?" ಎಂದು ಕೇಳಿದನು. ಮೈನಾಕ ತನ್ನ ಕತೆಯ ಗೋಳನ್ನರುಹಿ-
ಕೊಂಡನು:
 

 
" ಹಿಂದೆ ಪರ್ವತಗಳೆಲ್ಲ ಹಕ್ಕಿಯಂತೆ ಹಾರಬಲ್ಲವುಗಳಾಗಿದ್ದವು. ಅವುಗಳ
ಹಾರಾಟದಿಂದ ಲೋಕವೆಲ್ಲ ತ್ರಸ್ತವಾಯಿತು. ಇದರಿಂದ ಕೋಪಗೊಂಡ
ದೇವೇಂದ್ರನು ಎಲ್ಲ ಪರ್ವತಗಳ ರೆಕ್ಕೆಗಳನ್ನೂ ವಜ್ರಾಯುಧದಿಂದ ಕತ್ತರಿಸಿ
ಬಿಟ್ಟನು. ಆಗ ನಾನು ನಿನ್ನ ತಂದೆಯಾದ ಪವಮಾನನನ್ನು ಮೊರೆಹೊಕ್ಕೆ.
ಅವನು ನನ್ನನ್ನು ಇಲ್ಲಿ ಹುದುಗಿಸಿ ರಕ್ಷಿಸಿದ ಪ್ರಾಣದಾತನು. ಎಲ್ಲರ ರಕ್ಷಕನಾದ
ಪ್ರಾಣದೇವನಿಂದ ನನ್ನ ರೆಕ್ಕೆಗಳು ಉಳಿದುಕೊಂಡವು. ಎಂತಲೇ ನೀನು ನನ್ನ
 
ಬಂಧು ,ನನ್ನ ಹೆಮ್ಮೆಯ ಅತಿಥಿ. ಅಲ್ಲದೆ ಸಮುದ್ರರಾಜ ಕೂಡ ನಿನಗೆ ಸತ್ಕರಿಸು
ವಂತೆ ನನ್ನಲ್ಲಿ ವಿನಂತಿಸಿಕೊಂಡಿದ್ದಾನೆ. ನಮ್ಮ ಅಲ್ಪ ಆತಿಥ್ಯವನ್ನು ಕೃಪೆಯಿಟ್ಟು
ಸ್ವೀಕರಿಸಿ ಅನುಗ್ರಹಿಸಬೇಕು."