This page has not been fully proofread.

ಸಂಗ್ರಹರಾಮಾಯಣ
 
ಜಾಂಬವಂತನೂ ನುಡಿದನು. ಮತ್ತೆ ಕಪಿಗಳ ಮುಂದೆ ಅದೇ ಪ್ರಶ್ನೆ! ಮುಂದೇನು
ಮಾಡುವುದು ?
 
ಬೇಸರಗೊಂಡ ಅಂಗದನಂತೂ ಮತ್ತೆ ಉಪವಾಸದೆಡೆಗೆ ವಾಲತೊಡ
 
೧೩೫
 
ಗಿದನು:
 
"ಈ ಕಷ್ಟದಲ್ಲಿ ಯಾರು ನಮಗೆ ಆಸರೆ ? ಕಡಲನ್ನು ದಾಟುವ ಸಾಹಸಿ
ಯಾರು ? ರಾಮನ ಕಾರ್ಯವನ್ನು ಸಾಧಿಸುವ ಪುಣ್ಯಾತ್ಮ ಯಾರೂ ಇಲ್ಲವೆ ?
ಹಾಗಿದ್ದರೆ ನಮಗೆ ಉಪವಾಸವೊಂದೇ ಶರಣು."
 
ಆಗ ಜಾಂಬವಂತನ ಎಚ್ಚರದ ನುಡಿ ಸಿದ್ಧವಾಗಿತ್ತು:
 
"ನಿರಾಶನಾಗಬೇಡ ಅಂಗದ, ನಮ್ಮಲ್ಲಿ ಒಬ್ಬ ಮಹಾವೀರ ಈ ಕಾರ್ಯ
ವನ್ನು ಮಾಡಬಲ್ಲ." ಎಂದವನೇ ಹನುಮಂತನೆಡೆಗೆ ತಿರುಗಿ ನುಡಿದನು:
"ಮಹಾವೀರನೆ, ಏಕೆ ಮೌನವಾಗಿರುವೆ ? ಕಪಿಕುಲವೆಲ್ಲ ಭಯದಿಂದ ತತ್ತರಿ-
ಸಿದರೂ ನಿನಗೆ ಕರುಣೆ ತೋರದೆ ? ಪ್ರಾಣದೇವನ ಮಗನಲ್ಲವೆ ನೀನು ?
ಬಲದೇವತೆಯಲ್ಲವೇ ನೀನು ? ವೇಗದಲ್ಲಿ ಗರುಡ ಕೂಡ ನಿನಗೆ ಎಣೆಯಲ್ಲ.
ಉಳದವರ ಪಾಡೇನು ! ಎದ್ದೇಳು ಮಾರುತಿಯೇ ! ನಿನ್ನ ಬಂಧುಗಳನ್ನು ಉಳಿಸಿ
ಕಾಪಾಡುವ ಭಾರ ನಿನ್ನ ಮೇಲಿದೆ. ನಿನ್ನ ಪರಾಕ್ರಮವನ್ನು ನೀನು ಜಗತ್ತಿಗೆ
ತೋರಿಸಿ ಕೊಡಬೇಕು."
 
ಕಪಿಗಳಿಗೆಲ್ಲ ಉತ್ಸಾಹ ತುಂಬುವಂತೆ ಹನುಮಂತ ನಗುತ್ತಲೆ ನುಡಿದನು:
"ನೂರು ಯೋಜನ ದಾಟಿ ಬರುವದು ನನಗೊಂದು ಲೆಕ್ಕವೇ ಅಲ್ಲ.
ಸೂರ್ಯನ ಬಳಿ ಓದುತ್ತಿದ್ದಾಗ ಮೇರುವಿಗೆ ನೂರಾರು ಬಾರಿ ಸುತ್ತು ಬಂದವನು
ನಾನು. ರಾಮಚಂದ್ರನ ಅನುಗ್ರಹದಿಂದ ನನಗೆ ಈ ಕಡಲು ಒಂದು ಹೆಜ್ಜೆ
ದೂರವೂ ಅಲ್ಲ. ನೀವು ಇಲ್ಲಿ ನಿರೀಕ್ಷಿಸುತ್ತಿರಿ. ನಾನು ರಾಮಕಾರ್ಯವನ್ನು
ಪೂರೈಸಿಕೊಂಡು ಬರುವೆನು.?
 
ಕಪಿಗಳ ಜಯಕಾರ ಮುಗಿಲನ್ನು ಮುತ್ತಿತು. ಉದಯಾದ್ರಿಯನ್ನೇರಿದ
ಉದಯಭಾನುವಿನಂತೆ ಮಹೇಂದ್ರ ಪರ್ವತವನ್ನೇರಿ ನಿಂತ ಹನುಮಂತನ
ಶೋಭೆ ಅವರ್ಣನೀಯವಾಗಿತ್ತು. ಹಾರುವ ಮುನ್ನ ಹನುಮಂತನು ಮನದಲ್ಲಿ
ರಾಮಚಂದ್ರನ ಚರಣಗಳಿಗೆ ವಂದಿಸಿದನು.