This page has not been fully proofread.

ಸಂಗ್ರಹರಾಮಾಯಣ
 
* ಪರಮಧಾರ್ಮಿಕನಾದ ರಾಮನೆ, ನಿರಪರಾಧಿಯೂ, ನಿರುಪದ್ರವಿಯೂ
ಆದ ನನ್ನನ್ನು ನೀನು ಹೀಗೆ ದಮಿಸಿವುದು ಸರಿಯೆ ! ನನ್ನ ಯಾವ ಅಪರಾಧಕ್ಕೆ
ಈ ಶಿಕ್ಷೆ? "
 
೧೯೭
 
ಮುಗುಳು ನಗುವನ್ನು ಬೀರುತ್ತಲೆ ರಾಮಚಂದ್ರನು ಉತ್ತರಿಸಿದನು :
 
* ಹಿಂಸ್ರ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಶಾಸ್ತ್ರದಲ್ಲಿ ಮೂರು ಬಗೆಗಳನ್ನು
ಬರೆದಿದ್ದಾರೆ. ಬಲೆಯೆಸೆವುದು, ಅಡಗಿ ಕೊಲ್ಲುವುದು ಇಲ್ಲವೆ ಪಾಠದಿಂದ
ಬಂಧಿಸುವುದು. ನೀನು ಕಾಡು ಮಿಗಗಳ ಜಾತಿಗೆ ಸೇರಿದವನು ಎಂಬುದನ್ನು
ಮರೆಯಬೇಡ. ಅದರಿಂದಲೆ ಅಡಗಿ ಕುಳಿತು ನಿನಗೆ ಬಾಣವೆಸೆದೆ. ನೀನು
ಮಾಡಿದ ತಪ್ಪ ಕೂಡ ಕಮ್ಮಿಯದಲ್ಲ. ತಮ್ಮನನ್ನು ತೊರೆದೆ, ಸೊಸೆಗೆ
ಸಮಾನಳಾದ ತಮ್ಮನ ಮಡದಿಯನ್ನು ಭೋಗಿಸಿದೆ. ದುಷ್ಟರನ್ನು ದಮನ
ಮಾಡುವುದು ನನ್ನ ಕರ್ತವ್ಯ. ಆ ನನ್ನ ಕರ್ತವ್ಯವನ್ನು ಪೂರಯಿಸಿದ್ದೇನೆ.
ನಿನಗೆ ಬದುಕೇ ಪ್ರಿಯವಾದರೆ ಇನ್ನಾದರೂ ನಿನ್ನನ್ನು ಬದುಕಿಸಬಲ್ಲೆ."
 
ರಾಮನ ವಾಣಿ ಅಮೃತದಂತೆ ವಾಲಿಯಲ್ಲಿ ಚೈತನ್ಯವನ್ನು ಹುಟ್ಟಿಸಿತು.
ಭಕ್ತಿ ಭರದಿಂದ ಕಣ್ಣು ತೇವಗೊಂಡಿತು :
 
"ರಾಮಚಂದ್ರ, ವೇದನೆಯಿಂದ ಚುಚ್ಚು ಮಾತುಗಳನ್ನಾಡಿದ್ದರೆ ಕ್ಷಮಿಸು.
ಸಾಯುವ ಕ್ಷಣದಲ್ಲಿ ಯಾರ ಸ್ಮರಣೆಯನ್ನು ಮಾಡುವುದಕ್ಕಾಗಿ ಜೀವನವಿಡೀ
ತಪಸ್ಸನ್ನಾಚರಿಸುವರೋ ಅಂಥ ನಿನ್ನನ್ನು ಕಣ್ಣೆದುರು ಕಾಣುತ್ತ ಜೀವ ಬಿಡುವ
ನಾನೇ ಭಾಗ್ಯಶಾಲಿ."
 
ಇಷ್ಟು ನುಡಿದು ವಾಲಿ ಮೂರ್ಚೆಗೊಂಡನು. ಮರಣ ಪರಿಹಾರಕವಾದ,
ಇಂದ್ರದತ್ತವಾದ ಬಂಗಾರದ ಮಾಲೆಯನ್ನು ಹೊತ್ತ ವಾಲಿ ಮೂರ್ಜಿತನಾದ
ವಾರ್ತೆಯನ್ನು ಕೇಳಿದ ತಾರೆ ಕಣ್ಣಿರ್ಗರೆಯುತ್ತ ಗುಹೆಯಿಂದ ಧಾವಿಸಿ ಬಂದಳು.
ಆಗ ವಾಲಿಯ ಸೇವಕರು ಸಿಟ್ಟಿನಿಂದ ಸುಗ್ರೀವನನ್ನೇ ಹಿಡಿದು ಸದೆಬಡಿಯಬೇಕು
ಎಂದು ಹಾರಾಡುತ್ತಿದ್ದರು. ಅವರನ್ನು ಸಂತೈಸುವ ಕೆಲಸವನ್ನೂ ತಾರೆಯೇ
 
ಮಾಡಬೇಕಾಯಿತು :
 
"ರಾಜ್ಯ ಕಾಮನೆಯಿಂದ ಒಬ್ಬ ಸೋದರ ಇನ್ನೊಬ್ಬನನ್ನು ಕೊಂದಿದ್ದಾನೆ.
ಸರಿ, ಇನ್ನು ಸುಗ್ರೀವ ನಿಮ್ಮ ರಾಜನಾದ. ಅವನಿಗೆ ದ್ರೋಹ ಮಾಡಬೇಡಿ.
ನಾನಂತೂ ನನ್ನ ಪತಿಯೊಡನೆ ಜತೆ ಸಾಗುವವಳು."