This page has been fully proofread once and needs a second look.

ನೀನು ಮುಟ್ಟೆ ಮೈ ಜುಮ್ಮು ತಟ್ಟಿತೋ ಅಗಲ ಹೂವ ತೆರೆದು
ನೀಚಗಿರಿಯ ಕಡವಾಲ ಇಹವು ಹೋಗಲ್ಲಿ ಸುಂದು ಮರೆದು ॥
ಅಲ್ಲಿ ನಲ್ಲ-ಬೆಲೆವೆಣ್ಣ - ಕೂಟ ಹೊಸಗಂಪನುಗುಳುತಿಹವು
ನಾಗರಿಕರ ತಾರುಣ್ಯಮದವ ಕಲ್ಮಾಡ ಹೊಗಳುತಿಹವು ॥ ೨೫
 
ಅಲ್ಲಿ ತಂಗಿ ಮುಂಬರಿಯೊ ಕಾಡ-ಹೊಳೆ-ದಂಡೆ-ತೋಟದಲ್ಲಿ
ಬಳ್ಳಿ ಬಳ್ಳಿ ಹೂಜಲ್ಲಿಯಲ್ಲಿ ಮುಂಬನಿಯು ತುಳುಕಿ ಚೆಲ್ಲಿ ॥
ಗಲ್ಲ ಬೆಮರೆ, ಕಿವಿಕಮಲ ಕಮರೆ, ಪಾಮರರ ಅಮರಿಯರಿಗೆ
ನಿನ್ನ ನೆರಳ ಕ್ಷಣವಿತ್ತು, ರಮಿಸು ಹೂದೋಟಗಿತ್ತಿಯರಿಗೆ ॥ ೨೬
 
ಉತ್ತರಕ್ಕೆ ಹೊರಟವಗೆ ಉಜ್ಜಯಿನಿ ಅಡ್ಡವಾದರೇನು ?
ಅಲ್ಲಿ ಮೇಲುಮಾಳಿಗೆಯ ಭೋಗ ಕಳಕೊಳ್ಳಬೇಡ ನೀನು ॥
ಆs ಊರ ಹೆಂಗಸರ ಕಣ್ಣಬಳಿ ಮಿಂಚೆ ಮಿಣುಕು ಎನ್ನು
ಅವರ ಕಣ್ಣ-ಕುಡಿ-ಲಲ್ಲೆಯೊಲ್ಲೆಯಾ ? ವ್ಯರ್ಥ ಇದ್ದು ಕಣ್ಣು ॥ ೨೭
 
ನಿನ್ನ ಕಂಡು ನಿರ್ವಿಂಧ್ಯೆ ಮುಂದೆ, ತೆರೆ ತೆರೆದು, ಅಂಚೆ ಉಲಿಸಿ
ಗೆಜ್ಜೆ ಪಟ್ಟಿ ಗಿಲುಕೆನಿಸಿ, ಎಡವಿ, ಸುಳಿನಾಭಿ ತೋರಿ ನಲಿಸಿ
ಹಾದಿಯಲ್ಲಿ ಬರೆ, ಆಗು ಸಮರಸಿಯು ಕೇಳಬೇಡ ಬದಲು
ಹೆಣ್ಣಿನೊಲವಿನಲಿ ಮಳ್ಳ ಮುರಕವೇ ಮಾತಿಗಿಂತ ಮೊದಲು ॥ ೨೮
 
ಹೆಳಲು ಇಳಿದು ಒಕ್ಕಾಲು ಉಳಿದು, ನಡೆದಿಹಳು ತೆಳ್ಳಗಾಗಿ
ದಡದ ಮರದ ಒಣ ಎಲೆಗಳುದುರಿ ತನ್ನುದರ ಬೆಳ್ಳಗಾಗಿ ॥
ನೀನು ಸೊಬಗ, ನಿನ್ನಿಂದ ಅಗಲಿ ತಾ ಸೊರಗಿ ಸಣ್ಣಗಹಳು
ದೈವದಿಂದ ನಿನ್ನನ್ನು ಸೇರಿ ಮೈದುಂಬಿಕೊಳ್ಳಬಹಳು ॥ ೨೯
 
ಬಂದವಂತಿನಾಡಿನಲಿ ಉದಯನನ ಕಥೆಯ ಬಲ್ಲರೆಲ್ಲಿ
ಅಲ್ಲಿ ಸಿರಿಯು ಹರಹಿರುವ ಪೂರ್ವಪುರವಿಹುದು ನಿಲ್ಲು ಅಲ್ಲಿ ॥
ಪುಣ್ಯವಂತರೋ, ಪುಣ್ಯತೀರಲಿರೆ ಸ್ವಲ್ಪೆ ಉಳಿಯಲಾಗ
ಸ್ವರ್ಗದೊಂದು ತುಣುಕನ್ನೆ ತಂದರೋ ಇಳೆಗೆ ಇಳಿಯುವಾಗ ॥ ೩೦