This page has been fully proofread once and needs a second look.

ಕಾಡ ಹುಡುಗಿಯರ ಆಟ ನಡೆದ ಎಲೆಮಾಡಗಳಲಿ ತಂಗಿ
ನೀರ ಸುರಿಸಿ ತುಸು ಮುಂದುವರಿಸು ಆ ದಾರಿ ದಾಟಿ ಹಿಂಗಿ ॥
ವಿಂಧ್ಯದಡಿಗೆ ಕಡುಬಂಡೆಯೊಡೆದು ಹರಿದಿರುವ ರೇವೆ ನೋಡು
ಚಿತ್ರ ಚಿತ್ರ ಸಿಂಗಾರವಾದ ಮದ್ದಾನೆ ಹಣೆಗೆ ಜೋಡು॥ ೧೯
 
ಅಲ್ಲಿ ಕಾಡು ಮದ್ದಾನೆಮಿಂದ ಬಹು ಗಂಧ ನೀರ ಕುಡಿದು
ಮುಂದೆ ಹೋಗು, ನೇರಿಳೆಯ ತಡೆವಡೆದು ನಿನ್ನ ದಾರಿ ಹಿಡಿದು ॥
ತುಂಬು ಮೋಡವೆ, ಗಾಳಿ ಈಡೆ ? ನಿನಗಾರು ತೂಗಬಹುದು ?
ಬರಿದು ಆಗಿ ಹಗುರಾದ : ತುಂಬಿದವ ಮಾನವಂತನಹುದು ॥ ೨೦
 
ಹಸಿರು ಹಳದಿ ಕಪ್ಪಾದ ಮುಗುಳ ಕಡವಾಲಗಳನು ನೋಡಿ
ನೀರ ನೆರೆಯ ಕಲ್ಬಾಳೆ ತಲೆಯನೆತ್ತಿದವು ಹೂವು ಮೂಡಿ ॥
ಮೆಯ್ದು ಜಿಗಿದು ಅಡವಿಯಲಿ, ನೆಲದ ಕಡುಗಂಪ ಮೂಸಿ ಹಿಳಿದು
ಸಾರಂಗ ಜಾತಿ ಸುತ್ತಾಡತಾವ ಇಳಿಮಳೆಯ ಹಾದಿ ತುಳಿದು ॥ ೨೧
 
ಎಷ್ಟು ಬೇಗ ನೀ ಹೋಗಬೇಕು ನನಗಾಗಿ ಎನಿಸಿ ಏನು ?
ಬೆಟ್ಟ ಬೆಟ್ಟ ಬಿಟ್ಟಿರುವ ಮಲ್ಲಿಗೆಯ ಜೊತೆಗೆ ಉಳಿವೆ ನೀನು ॥
ಇಷ್ಟು ತಿಳಿಯೆನೇ ? ಕಣ್ಣು-ತುಂಬಿ ಕುಡಿಗಣ್ಣ ಚಾಚಿ ಕೇಕಿ
ಕೇಕೆ ಹಾಕುತಲೆ ಹೇಗೊ ಹೊರಡುವೀ ಹಿಂದುಮೆಟ್ಟ ನೂಕಿ ॥ ೨೨
 
ಮುಳ್ಳುಮೊನೆಯ ಕೇದಿಗೆಯ ಹಳದಿ ನೆರಳುಳ್ಳ ತೋಟವಳ್ಳಿ
ಊರ ತಿರಿವ ಕಾಕಗಳ ಬಸದಿಗಳ ಹಾದಿಗಿಡದ ಹಳ್ಳಿ ।
ಮಳೆಯ ಮಾಸದಲಿ ಜಂಬು-ನೇರಿಳೆಯೆ ತುಂಬಿ ಬನಗಳಲ್ಲಿ
ಕೆಲವೆ ದಿವಸ ಆ ಹಂಸಗಳಿಗೆ ನೆಲೆ ಆ ದಶಾರ್ಣದಲ್ಲಿ ॥ ೨೩
 
ದಿಕ್ಕು ದಿಕ್ಕಿನಲ್ಲಿ ವಿದಿಶೆಯೆಂದು ಹೆಸರಾದ ರಾಜಧಾನಿ
ಅಲ್ಲಿ ಹೋಗಿ ಬಯಬಯಸಿದಂಥ ಹಣ್ತಿನ್ನು ಕಾಮುಕಾ, ನೀ ॥
ಹುಬ್ಬು ಮುರಿದ ಬೆಡಗುಳ್ಳ ಮುಖಕೆ ಸರಿ ನೇತ್ರವತಿಯ ನೀರು
ಅವಳ ಬಳಿಗೆ ಗುಡುಗುಡಿಸಿ ಸೊಬಗ, ನೀನವಳ ಸವಿಯ ಹೀರು ॥ ೨೪