This page does not need to be proofread.

೧೩
 
ಹಾದಿ ಹೇಳುವೆನು ಕೇಳು ನಿನಗೆ ಅನುಕೂಲ ಪಯಣಕಾಗಿ
ಬಳಿಕ ನನ್ನ ಸಂದೇಶ ಕಿವಿಗೆ ಪರಿಣಮಿಸಲಮೃತವಾಗಿ
ತೊಳಲಿ ಬಳಲಿ ಗಿರಿ ಶಿಖರಗಳಲ್ಲಿ ಕಾಲಿಟ್ಟು ಸಾಗುವಾಗ
ಣಿವ ತವಿಸು, ನೀರಿನಿಸೆ ಸವಿಸಿ ಆ ಹಳ್ಳ-ಕೊಳ್ಳದಾಗ
 

 
ಗಿರಿಯ ಶೃಂಗವೇ ಹರಿದು ಹೋಗುವದೋ ಏನೋ ಎಂಬುದಾಗಿ
ಗಾಳಿ ಬೀಸುತಿರೆ ಸಿದ್ಧ-ಮುಗ್ಧೆಯರು ನೋಡೆ ಚಕಿತರಾಗಿ
ಹಾರು ಬಡಗಣಕೆ ನೀರ-ನಿಚುಲನೆಡೆಯಿಂದ ಮೇಲೆ ಅತ್ತ
ಹಾದಿಯಲ್ಲಿ ದಿಬ್‌ನಾಗ ಬೀಸಿದಾ ಕರವ ತಪ್ಪಿಸುತ್ತ
 

 
ಏಳು ರತುನಗಳ ಮೇಳಗೂಡಿ ಕಂಗೊಳಿಸುವಂತೆ ಮುಂದು
ಹುತ್ತದಿಂದ ಎದ್ದಿರುವದಲ್ಲಿ ಅಗೋಗೊ ಇಂದ್ರಧನುವದೊಂದು
ನಿನ್ನ ಕಪ್ಪು ಮೈಗದರ ಒಪ್ಪ ಬರಲೇನು ಕಾಂತಿ ಬಂತು
ಗೋಪವೇಷದಾ ವಿಷ್ಣು, ಗರಿಯ ಧರಿಸಿರಲು ಕಾಣುವಂತು
 

 
ಕುಡಿದು ಬಿಡುವರೋ ಕಣ್ಣ ಕುಡಿಗಳಲ್ಲಿ ಬೆಳೆಗೆ ಬಂಧು ಎಂದು
ಹುಬ್ಬ ಹಾರಿಸುವ ಬಿಂಕವಿಲ್ಲದಾ ಹಳ್ಳಿ ಹೆಂಗಳಂದು
ಅದೇ ಹರಗಿ ನೆಲಗಂಪ ಹರಹುವಾ ಹೊಲದ ಮಾಳವೇರಿ
ನೀರ ತಳಿಸಿ ಹಗುರಾಗಿ, ಉತ್ತರಕೆ ಮತ್ತೆ ಹೋಗು ಸಾರಿ
 

 
ಮಾವುಮಲೆಯ ಕಡು ಕಾಡಬೇಗೆ ತವಿಸಿದ್ದೆ ಮಳೆಯ ಸುರಿಸಿ
ತಣಿಸದಿರುವದೇ ದಾರಿದಣಿವಿಕೆಯ, ಅದುವು ಕೆಳೆಯ ಸ್ಮರಿಸಿ
ಎಂಥ ಕಿರುಕುಳನು ಮೊದಲು ಮಾಡಿದುಪಕಾರ ಮರೆಯಬಹುದೇ
ಎಂದಮೇಲೆ ಅವನಂಥ ದೊಡ್ಡವನು ವಿಮುಖನಾಗಲಹುದೇ
 

 
ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ
ಆಷಾಢ ಮಾವು ಸುರಿದಾವು ಗೊಂಚಲಲಿ ಬೆಟ್ಟದೆದೆಯ ಮೇಲೆ
ಅಮರ ಮಿಥುನಗಳ ಪ್ರಣಯ-ದೃಷ್ಟಿ ಅರಳರಳುವಂತೆ ಆಗೆ
ಮಲೆಯ ತುದಿಯು ಕಪ್ಪಾಗೆ ತೋರುವದು ನೆಲದ ಮೊಲೆಯ ಹಾಗೆ
ಕನ್ನಡ ಮೇಘದೂತ – ಭಾವಾನುವಾದ ಖಂಡಕಾವ್ಯ : ಲೇ : ದ ರಾ. ಬೇಂದ್ರೆ (ಅಂಬಿಕಾತನಯದತ್ತ)