This page has been fully proofread once and needs a second look.

ನೀರೆ ಕಾದವಗೆ ಶರಣು ಅಲ್ಲವೇ ? ಇನಿಯಳೆಡೆಗೆ ಓತು
ಒಯ್ಯೋ, ಧನಪತಿಯ ಮುನಿಸಿಗೀಡಾಗಿ ಅಗಲಿದವನ ಮಾತು ॥
ಯಕ್ಷರಾಜನಾ ರಾಜಧಾನಿ ಅಲಕೆಗೆಯೆ ಹೋಗು ನೀನು
ಅಲ್ಲಿ ಶಿವನ ಮುಡಿಚಂದ್ರ ತೊಳೆವ ಮಹಮನೆಯ ಮಾಟವೇನು? ॥ ೭
 
ಗಾಳಿ ಬಟ್ಟೆಯಲಿ ಬರವ ಕಂಡು ಕುರುಳೋಳಿ ಓರೆಮಾಡಿ
ದೂರ ಹೋದವರ ಹೆಣ್ಣು ನೋಡುವವು ನಿನ್ನನಾಸೆಗೂಡಿ ॥
ನೀನೆ ಬರಲು ಅವನಾವನಿರುವನೋ ನಲ್ಲೆ ಬಿಟ್ಟುಗೊಟ್ಟು,
ಬೇರೆಯವರ ಆಳಾಗಿ ಇರುವ ನಮ್ಮಂಥ ಜನರ ಬಿಟ್ಟು ॥ ೮
 
ಗಾಳಿ ಬೀಸುವದು ನಿನ್ನ ನೂಕಿಸುತ ಮಂದ ಮಂದವಾಗಿ
ಚೂಚು ಚಾಚಿ ಚಾದಗೆಯು, ಎಡಕೆ ಕೂಗುವದು ಚೆಂದವಾಗಿ ॥
ಬೆದೆಯ ನೆನೆದು ಬೆಳ್ಳಕ್ಕಿ ಬರುವವೋ ಸಾಲು ಸಾಲುಗೊಂಡು
ಬೆನ್ನಗಟ್ಟುವವು ಕಣ್ಗೆ ಸೊಬಗ ನೀ ತಂದೆ ಎಂದುಕೊಂಡು ॥ ೯
 
ಎಷ್ಟು ದಿವಸ ಇನ್ನುಳಿದುವೆಂದು ದಿನದಿನವು ಲೆಕ್ಕವಾಗಿ
ಜೀವ ಹಿಡಿದುಕೊಂಡಿರುವ ನಿನ್ನ ಅತ್ತಿಗೆಯ ನೋಡು ಹೋಗಿ ॥
ನಾರಿ ಹೃದಯದಲಿ ನಾರಿನೆಳೆಯುವೊಲು ಇಹುದು ಆಸೆಯೊಂದು
ಅಗಲಿದಾಗಲೇ ಕಳಚಿ ಬೀಳುವೆದೆ-ಹೂವ ಬಿಗಿದುಕೊಂಡು ॥ ೧೦
 
ಮೊದಲ ಮೊಳಗಿಗೇ ಬಂಜುಗೆಟ್ಟಿತೋ ಭೂಮಿ ಅಣಬೆತಾಳಿ,
ಕಿವಿಗೆ ಸವಿಯೆನಿಪ ಮೊಳಗ ಕೇಳಿ ಮಾನಸಕೆ ಬಂತು ದಾಳಿ ॥
ತುಂಡು ತಾವರೆಯ ಬುತ್ತಿ ಕಟ್ಟಿ ಕೈಲಾಸಕಾಗಿ ಸಾಗಿ
ಬಾನ ಬಯಲಿನಲಿ ಕೊನೆಗು ಬರುವವರಸಂಚೆ ಜೋಡಿಯಾಗಿ ॥ ೧೧
 
'ಹೋಗಿ ಬರಲೊ' ಎಂದಪ್ಪಿ ಕೇಳು ಈ ಮುದ್ದು ಗೆಳೆಯನನ್ನು
ರಾಮಪಾದಗಳು ಮುದ್ದಿ ಮುದ್ರಿಸಿದವಿದರ ಮಗ್ಗುಲನ್ನು ॥
ಕಾಲ ಕಾಲಕೂ ನಿನ್ನ ಕಂಡು ಇದು ಮೈಯನರಳಿಸುವದು
ಅಗಲಿ ಬಲು ದಿನಕೆ ಬಂದೆ ಎಂದು ಬಿಸಿ ನೀರನುರುಳಿಸುವದು ॥ ೧೨