This page has been fully proofread once and needs a second look.

ಮೂರು ಜಾವ ಉದ್ದಿದ್ದ ಇರುಳು ಕ್ಷಣದಂತೆ ಕಳೆಯಬಹುದೇ
ಇಡಿಯ ಹಗಲು ಯಾವಾಗಲೂನು ದಿಗಿಲಾಗದಂತೆ ಇಹುದೇ ॥
ಇಂತು ಚಿತ್ತ ಕೈಗೂಡದಾಗ ಬಯಲಾಸೆಯಿಂದ ನೊಂದು
ನಿನ್ನ ವಿರಹ ವ್ಯಥೆಯಿಂದ ಬೆಂದು,ಬದುಕಿಹೆನು ಹೇಗೊ ಇಂದು ॥ ೪೫
 
ಆದರೂನು ಹಿಡಿದಿರುವೆ ಜೀವ, ಏನೇನೊ ಲೆಕ್ಕ ಹಾಕಿ
ಸುಭಗೆ ಅಂಜಿ ನೀ ಸಾಯಬೇಡ, ಕಳೆ ಕಾಲ ಹೇಗೊ ನೂಕಿ ॥
ಯಾರು ಬರಿಯ ಸುಖ, ಬರಿಯ ದು:ಖ ಪಟ್ಟವರು ಲೋಕದಲ್ಲಿ ?
ದೆಸೆಯು ಕೆಳಗೆ ಮೇಲಾಗಿ ತಿರುಗುವದು ಏಕಚಕ್ರದಲ್ಲಿ ॥ ೪೬
 
ಹಾವು ಹಾಸಿಗೆಯ ಹರಿಯು, ತೊರೆವ ದಿನ, ಶಾಪ ಮುಗಿಯಲಹುದು
ನಾಲ್ಕು ತಿಂಗಳನು ಕಣ್ಣು ಮುಚ್ಚಿ ನೀನಿನ್ನು ಕಳೆಯಬಹುದು ॥
ಬಳಿಕ ಬರುವೆ, ಇನ್ನುಳಿದ ಬಯಕೆಗಳು ಇರಲಿ ಏಕೆ ಚಿಂತೆ ?
ಬೆಳೆವ ತಿಂಗಳಲ್ಲಿ ಇರುಳು ಇರುಳುಗಳ ಅದಕೆ ಕಳೆವೆವೆಂತೆ ॥ ೪೭
 
ಒಮ್ಮೆ ನಿನಗೆ ದಿನದಂತೆ ಕೊರಳ ತಳಕಿರಿಸಿ ನಿದ್ದೆಯಂತೆ
ತೋಳದಿಂಬಿನಲಿ ಹೊರಳಿ, ನೀನಳುತ ಏಕೊ ಎದ್ದೆಯಂತೆ ॥
ಕೇಳಕೇಳುತಿರೆ ಏನು ಎಂದು ಒಳನಕ್ಕು ಅಂದೆಯಂತೆ :-
"ಕಂಡೆ ಕನಸಿನಲಿ, ಕಳ್ಳ, ನೀನು ಯಾವಳನೊ ಕೂಡಿದಂತೆ" ॥ ೪೮
 
ಕುಶಲನಿರುವೆ ನಾನಿಲ್ಲಿ ನಿನ್ನನೇ ನೆನೆದು ಧೈರ್ಯತಾಳಿ
ನೀನು ಕೂಡ ಎದೆಗೆಡಿಸಿಕೊಳ್ಳದಿರು ಏನೊ ಸುದ್ದಿ ಕೇಳಿ ॥
ಅಗಲಿದಾಗ ತಿನ್ನುವದು ಸ್ನೇಹವೆನ್ನುವರು ಜೀವವನ್ನು
ಕೂಡಿದೊಡನೆ ಅದೆ ಸೂರೆ ಮಾಡುವದು ಪ್ರೇಮಭಾವವನ್ನು ॥ ೪೯