This page has been fully proofread once and needs a second look.

೩೫
 
ತಂಗಾಳಿ ಬೀಸಿ ತುಂತುರಿಸಿ ನೀನು ಎಚ್ಚರಿಸಿದಾಗ ಬಾಲೆ

ಮಳೆಯಾಗಿ ಮಿಂದ ಹೊಸ ಮೊಲ್ಲೆ ಮೂಸಿ ಮನ ವಾಸಿಯಾದ ಮೇಲೆ

ಮಿಂಚಿನವನೆ ಹಿಗ್ಗಣ್ಣಿನವಳಿಗಾ ಬೆಳಕುಕಂಡಿಯಿಂದಾ

ಮಾತನಾಡು ಗಂಭೀರವಾಗಿ ನಸು ಗುಡುಗು ಬೆಡಗಿನಿಂದಾ
 

 

 
ಕೇಳು ಮಂಗಲೇ, ಬಂದೆ ನಾಥ-ಸ್ನೇಹಿತನು ಜಲದ ನಾನು

ಅವನ ಕುಶಲವನು ಎದೆಯೊಳಿರಿಸಿಕೊಂಡಿಹೆನು, ಕೆಲಸವೇನು ?

ದೂರ ಹೋದ ದಾರಿಗರ ತರುವೆನವರವರ ಮಂದಿರಕ್ಕೆ

ತಮ್ಮ ನಲ್ಲೆಯರ ಹೆಳಲ ಬಾಚಿ, ಹಳೆ ಹಿಣಿಲ ಬಿಡಿಸಲಿಕ್ಕೆ
 

 

 
ಹೀಗೆ ಹೇಳುತಲೆ, ಸೀತೆ ಹನುಮನನು ಕಾಣುವಂತೆ ಕಂಡು
 

ನಿನ್ನ ಮಾತು ಎದೆಯುಬ್ಬಿ ಕೇಳುವಳೋಳೊ, ಅಪ್ಪ, ಇದಿರುಗೊಂಡು

ಪ್ರಿಯರ ಕುಶಲ ಸ್ನೇಹಿತರೆ ಹೇಳಿದರೆ ಕೇಳಬೇಕೆ ನ್ಯೂನ?

ಕಾಂತೆಯರಿಗೆ ಏಕಾಂತದಂತೆ ಕೂಟಕ್ಕು ಕಿಂಚಿದೂನ !
 

 

 
ಹೇಳು ನಿನ್ನ ಧರ್ಮಕ್ಕೆ, ನನ್ನ ಭಾಗ್ಯಕ್ಕೆ, ರಾಜಾ, ಬಾಳು

ರಾಮಗಿರಿಗಳಲ್ಲಿರುವ ನಿನ್ನ ಸಂಗಾತಿಯೆಂದು ಹೇಳು ॥

ಒಳ್ಳಿತೇನೆ ಅಬಲೇ ಎಂದು ನನಗಾಗಿ ಕೇಳು ಕೂರ್ತು

ಕಷ್ಟ ಸುಲಭವಿರುವಂಥ ಪ್ರಾಣಿಗಳಿಗಿದೇ ಮೊದಲ ಮಾತು
 

 

 
ನಿನ್ನ ಹಾಗೆ ಮೈ ಸೊರಗಿ, ಕಾದು, ಕಣ್ಣುರಿಸಿ, ಕಂಠ ಬಿಗಿದು

ಉಸಿರಿಗೆಟ್ಟು ನಿಟ್ಟುಸುರು ಯೋಗದಲ್ಲಿ ದೇಶದೆಲ್ಲೆ ಜಿಗಿದು

ವೈರಿ ವಿಧಿಯು ಕಟ್ಟಿರಲು ದಾರಿ, ತೆರೆದಿದ್ದೆ ಹಾದಿ ಜಾಣಿ

ಭಾವದಿಂದ ಒಡಗೂಡ ಬಯಸಿದೆನೆ ನನ್ನ ಭಾವರಾಣಿ ॥
 
೪೦ ಕನ್ನಡ ಮೇಘದೂತ – ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ
 
೩೯