This page has not been fully proofread.

೩೫
 
ತಂಗಾಳಿ ಬೀಸಿ ತುಂತುರಿಸಿ ನೀನು ಎಚ್ಚರಿಸಿದಾಗ ಬಾಲೆ
ಮಳೆಯಾಗಿ ಮಿಂದ ಹೊಸ ಮೊಲ್ಲೆ ಮೂಸಿ ಮನ ವಾಸಿಯಾದ ಮೇಲೆ
ಮಿಂಚಿನವನೆ ಹಿಗ್ಗಣ್ಣಿನವಳಿಗಾ ಬೆಳಕುಕಂಡಿಯಿಂದಾ
ಮಾತನಾಡು ಗಂಭೀರವಾಗಿ ನಸು ಗುಡುಗು ಬೆಡಗಿನಿಂದಾ ।
 
೩೬
 
ಕೇಳು ಮಂಗಲೇ, ಬಂದೆ ನಾಥ-ಸ್ನೇಹಿತನು ಜಲದ ನಾನು
ಅವನ ಕುಶಲವನು ಎದೆಯೊಳಿರಿಸಿಕೊಂಡಿಹೆನು, ಕೆಲಸವೇನು ? ।
ದೂರ ಹೋದ ದಾರಿಗರ ತರುವೆನವರವರ ಮಂದಿರಕ್ಕೆ
ತಮ್ಮ ನಲ್ಲೆಯರ ಹೆಳಲ ಬಾಚಿ, ಹಳೆ ಹಿಣಿಲ ಬಿಡಿಸಲಿಕ್ಕೆ
 
೩೭
 
ಹೀಗೆ ಹೇಳುತಲೆ, ಸೀತೆ ಹನುಮನನು ಕಾಣುವಂತೆ ಕಂಡು
 
ನಿನ್ನ ಮಾತು ಎದೆಯುಬ್ಬಿ ಕೇಳುವಳೋ, ಅಪ್ಪ, ಇದಿರುಗೊಂಡು ।
ಪ್ರಿಯರ ಕುಶಲ ಸ್ನೇಹಿತರೆ ಹೇಳಿದರೆ ಕೇಳಬೇಕೆ ನ್ಯೂನ?
ಕಾಂತೆಯರಿಗೆ ಏಕಾಂತದಂತೆ ಕೂಟಕ್ಕು ಕಿಂಚಿದೂನ ! ।
 
೩೮
 
ಹೇಳು ನಿನ್ನ ಧರ್ಮಕ್ಕೆ, ನನ್ನ ಭಾಗ್ಯಕ್ಕೆ, ರಾಜಾ, ಬಾಳು
ರಾಮಗಿರಿಗಳಲ್ಲಿರುವ ನಿನ್ನ ಸಂಗಾತಿಯೆಂದು ಹೇಳು ॥
ಒಳ್ಳಿತೇನೆ ಅಬಲೇ ಎಂದು ನನಗಾಗಿ ಕೇಳು ಕೂರ್ತು
ಕಷ್ಟ ಸುಲಭವಿರುವಂಥ ಪ್ರಾಣಿಗಳಿಗಿದೇ ಮೊದಲ ಮಾತು ।
 
೩೯
 
ನಿನ್ನ ಹಾಗೆ ಮೈ ಸೊರಗಿ, ಕಾದು, ಕಣ್ಣುರಿಸಿ, ಕಂಠ ಬಿಗಿದು
ಉಸಿರಿಗೆಟ್ಟು ನಿಟ್ಟುಸುರು ಯೋಗದಲ್ಲಿ ದೇಶದೆಲ್ಲೆ ಜಿಗಿದು ।
ವೈರಿ ವಿಧಿಯು ಕಟ್ಟಿರಲು ದಾರಿ, ತೆರೆದಿದ್ದೆ ಹಾದಿ ಜಾಣಿ
ಭಾವದಿಂದ ಒಡಗೂಡ ಬಯಸಿದೆನೆ ನನ್ನ ಭಾವರಾಣಿ ॥
 
೪೦ ಕನ್ನಡ ಮೇಘದೂತ – ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ