This page has not been fully proofread.

೫೫
 
ಅಲ್ಲೆ ಕಲ್ಲಿನಲ್ಲಿ ಶಿವನ ಪಾದ ಮೂಡಿಹವು ಸಿದ್ಧರದನು
ಪೂಜಿಸುವರು ಎಂದೆಂದು, ಹೋಗು ಬಲವಂದು, ಅದುವೆ ಹದನು
ಕರಣವಳಿಯೆ, ಉರು ಪಾಪ ತೊಳೆಯೆ, ದಾಟುವರು ಸಾವಿನೆ
ನಂಬಿದವರು ಗಳಿಸುವರು ಸ್ಥಿರದ ಗಣಪದವಿಯನ್ನು ಇಲ್ಲಿ
 
೫೬
 
ತೂತು ಬಿದಿರು ಕೊಳಲಾಗಿ ಊದುತಿರೆ, ಗಾಳಿ ತೂರಿ ನೂಗಿ
 
ಶಿವನ ತ್ರಿಪುರ ಜಯಗೀತ ಹಾಡೆ ಕಿನ್ನರರು ದನಿಯ ತೂಗಿ
ನಿನ್ನ ಗುಡುಗು ಮದ್ದಳೆ ಮೃದಂಗದೊಲು ತುಂಬೆ ದರಿಯ ಜಾಡು
ಕೂಡಿದಂತೆ ಸರಿ, ಶಿವನ ನಾಟ್ಯಸಂಗೀತ ದೀಡು ಜೋಡು
 
೫೭
 
ಮಂಜು ಬೆಟ್ಟವನು ಮೀಟು, ಹಂಸದ್ವಾರವನು ದಾಟು ಓಡು
ಕ್ರೌಂಚ-ರಂಧ್ರದಲ್ಲಿ ವೀರ ಭಾರ್ಗವನಪೂರ್ವಶೌರ್ಯ ನೋಡು ।
ಉತ್ತರಕ್ಕೆ ಹರಿ ಹಾಗೆ, ತೋರುತಿರೆ ನಿನ್ನ ರೂಪ ಭೇದ
ಬಲಿಯ ಮೆಟ್ಟಲೆಂದೆತ್ತಿದಂಥ ವಿಷ್ಣುವಿನ ಶ್ಯಾಮ ಪಾದ
 
೫೮
 
ಹಿಂದೆ ಸಂದ ರಾವಣನು ಬಿಡಿಸಿದನು ಇದರ ಸಂದುಜೋಡು
ದೇವತೆಯರ ಕನ್ನಡಿಯೆ ಆದ ಕೈಲಾಸವದುವೆ ನೋಡು ।
ಬಾನ ಮುಟ್ಟಿ ಕೆಲ ಶಿಖರವೆತ್ತಿ ಬೆಳಕೊತ್ತಿ ಒಟ್ಟಿದಂತೆ
ದಿನವು ಕೂಡಿ ಹಲರಾಶಿಯಾದ ಶಿವನಟ್ಟಹಾಸದಂತೆ ।
 
೫೯
 
ಎಣ್ಣೆಗಲಸು ಕಾಡಿಗೆಯ ಬಣ್ಣದವ ನೀನು ನಗದ ತುದಿಗೆ
ಕೋರೆ ಹಲ್ಲಗೆರೆಯಂತೆ ಕೊರೆದ ಕೈಲಾಸ ಕೀಳು ಬದಿಗೆ ।
ಚಿತ್ತ-ಚಿತ್ರಪಟದಲ್ಲೆ ಬಲ್ಲೆ ನೀನಲ್ಲಿ ಹೇಗೆ ಕಾಂಬೆ
ಹೆಗಲಿನತ್ತ ಬಲಭದ್ರ ಹೊತ್ತ ಕಂಬಳಿಯೊ ಏನೋ ಎಂಬೆ ।
 
೬೦
 
ತೋಳ ಹಾವ ಬಿಚ್ಚಿಟ್ಟು ಸತಿಗೆ ಕೈಗೊಟ್ಟು, ಕಾಲನಡಿಗೆ
ಲೀಲೆಯೆನಲು ಶಿವ, ಬೆಟ್ಟವೊತ್ತಬಹುದಾಗ ಗೌರಿಯಡಿಗೆ ।
ಮೇಘ, ಮೈಯನೊಟ್ಟಯಿಸಿಕೊಂಡು ಘನದಟ್ಟ ಒಟ್ಟಿಲಾಗಿ
ಶಿವನ ಸತಿಯ ಪದತಲಕೆ ಎರಗು ಮಣಿತಟಕೆ ಮೆಟ್ಟಿಲಾಗಿ
 
೨೪ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇ