ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ ರಚನೆ : ಇ. ಡಿ. ನರಹರಿ ಆಕಾಂಕ್ಷಾ ಪ್ರಕಾಶನ 5112, ವೇದಾವತಿ ಬ್ಲಾಕ್, ನಂದಿ ಎನ್‌ವ್ ಬನಶಂಕರಿ ಮೂರನೆಯ ಹಂತ, ಬೆಂಗಳೂರು - 560 085 ದೂರವಾಣಿ : 6996194 Sri Sumadhwa Vijaya Kannada Kavya: a lyrical rendering in Kunnada of the original Sanskrit Biographical epic relating to the life and works of Saint Madhwacharya (1238-1318 A.D.) written by Sri Narayana Panditacharya (1295-1370 A.D.) All rights reserved by Author First Edition: May 2002 Copics : 1000 The author gratefully acknowledges the liberal financial assistance of Rs. 20,000/- provided by the authorities of Tirumala - Tirupathi Devasthanams, Firupati: (A.P.) under their Scheme "Aid to authors of Religious books". Price: Printed at Akshaya Mudrana Gandhi Bazaar. Bangalore-560 004 Published by E.D. Narahari, Akanksha Prakashana, 5112. Nandi Enclave, Il Cross, V Block, BSK III Stage. . Bangalore-560 085. Ph.: 6996194, 3328112, 6693014 e-mail: ednarahari@rediffmail.com $ SRI DIGVIJAYARAMO VIJAYATE SRIMAJJAGADGURU MADHWACHARYA MOOLAMAHASAMSTHANA MATI UTTARADI HALBHALI PLOT 2nd C. Palysna kagar 94+nd R **** 4047 149 2 'ಭುತವಾದ್ಧತಮುಧ್ವಳತ ". 4... pad 01/ S 7. HANGAR, 4 62072 62671 ನರದ ವತಿ ಕುಮುವ ಮೇ " ಕಮಣ ಹಡಿwಮಕ, ಇಸುಮಳ ಮಗ್ರಂಥವನ್ನ ಕಚಿವೆ ನಮ್ಮೆಲ್ಲರಿಗೂ ಭೀಮರ್ಮರ ಚಂತ್ರವನ್ನು ತಿಳಿಸುವದಕ್ಕೆ ತರಮೇಶ ೧೯ ಮತಿಳ, ದೇವತೆಗಳ ಆಮುತ ದಿದ ಮುಗಿಸಲು ಸಾಧ್ಯವಿಲ್ಲದ್ದ, ಆರ್ದಕ ಆ ನಕ್ ಆತನ ಪರ ಸು ದಿವರ ಗಣದ ನನ್ನಡ ದ ಮ ವಾತವರ ನಮ್ಮ ಕತ್ರಿ ಪದ ಮನ ಇ& ನಕತhಆವರು ಮಾ ಈಗಿಗಳೇ ವಾಮತಿ = duದ ಗ್ರರಗಳಿಗೆ ಅನುವಾದ.ವಾಸ, ಇದು ೨ ಶ ಸ್ಪದ ರ್೧ ಮರ್ಮರ ಚೇತರನ್ನು ತಿಳಿವುದ ವಿಶ್ವ ಕನ್ನಡಿಗ 7 ಚಮ ಎದು ದತ ನಮ್ಮ 20 ನಕ್ಷನರಿ * * ೨ . ೨) ಆನ೦೧ ಗಳನ್ನು ಪಟ್ಟಿ ಮಾತ್ರ ಸೀಜ ಸತ್ಯ ಎಸೈ, ವರ್ಷ - ೨೮ ಮ ವಶ್ಚಿನ ೨ ಗಳ ಸವವು ಜಾರ್ಗತವ 3. . 15 AT ಅಭಿನಂದನೆ ಶ್ರೀಯುತ ಇ. ಡಿ. ನರಹರಿಯವರು ನನಗೆ ಪರಿಚಯವಾಗಿ ಹತ್ತು ವರುಷಗಳಾದವು. ಹತ್ತು ವರುಷಗಳ ಅವರ ಒಡನಾಟದಲ್ಲಿ ಅವರ ಬಗ್ಗೆ ನನಗೆ ತಿಳಿದದ್ದು ಸ್ವಲ್ಪವೇ. ಇವರೊಬ್ಬ ಗುಪ್ತಗಾಮಿಯಾದ ಸರಸ್ವತೀ ನದಿಯಂತೆ . ಮೇಲ್ನೋಟಕ್ಕೆ ನಾಸ್ತಿಕರಂತೆ ಕಾಣುವ ಇವರು ಒಳ ಹೃದಯದಲ್ಲಿ ಪರಮ ಆಸ್ತಿಕರು. ಶ್ರೀಮತಿ ಸರಸ್ವತೀ ಬಾಯಿಯವರ ಪತಿಯಾದ ಇವರು ಸರಸ್ವತಿಯನ್ನು ಒಲಿಸಿಕೊಂಡಿದ್ದಾರೆ. ಅತಿ ಶ್ರೀಮಂತಿಕೆ, ಸಜ್ಜನಿಕೆಯಿಂದ ಕೂಡಿರುವ ನರಹರಿಯವರು ಅವರ ಹೆಸರಿಗೆ ತಕ್ಕಂತೆ ತಮಗೆ ಹಿಡಿಸದ ವಿಷಯಗಳಲ್ಲಿ ಸಿಂಹನಂತೆ ಕೆರಳುವುದನ್ನು ನಾನು ಕಂಡಿದ್ದೇನೆ. ಹಾಗೆಯೆ ನರರೂಪನಾದ ಅರ್ಜುನನಂತೆ ವಾಗ್ದಾಣಗಳನ್ನು ಸುರಿಸಿದ್ದನ್ನೂ ಕಂಡಿದ್ದೇನೆ. ಆದರೆ ಇದೆಲ್ಲವನ್ನೂ ಮೀರಿ ಅವರ ಹೃದಯಾಂತರಾಳದಲ್ಲಿ ಹುದುಗಿರುವ ಮಾಧ್ವದೀಕ್ಷೆಯನ್ನೂ ನೋಡಿರುತ್ತೇನೆ. ಇವರು ಲೌಕಿಕದಲ್ಲಿದ್ದು ಜಿಯಲಾಜಿಕಲ್ ಡಿಪಾರ್ಟಮೆಂಟಿನಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸಮಾಡಿ ನಿವೃತ್ತರಾಗಿ ಯಲಹಂಕ ಉಪನಗರದಲ್ಲಿ ಸ್ವಂತ ಮನೆ ಮಾಡಿಕೊಂಡು ಹರಿವಾಯುಗುರುಗಳ ಸೇವಾ ಮಾಡುತ್ತಾ ಉಳಿದಿರುವ ತಮ್ಮ ಅಮೂಲ್ಯವಾದ ಆಯುಷ್ಯವನ್ನು ಸಾರ್ಥಕಗೊಳಿಸಿಕೊಳ್ಳುತ್ತಿದ್ದರು. ಇವರಲ್ಲಡಗಿರುವ ಮಾಧ್ವದೀಕ್ಷೆ ಇವರಿಂದ ಹರಿವಾಯು ಸ್ತುತಿಯ ಕನ್ನಡ ಹಾಗೂ ಆಂಗ್ಲ ಭಾಷೆಗಳ ರಚನೆಯನ್ನು ಅತ್ಯಂತ ರಮಣೀಯವಾಗಿ ಮಾಡಿಸಿದೆ. ಈ ಕೃತಿಯನ್ನು ಸಂಗೀತಕ್ಕೂ ಅಳವಡಿಸಿ ಪ್ರಸಿದ್ಧ ಸಂಗೀತಗಾರರಿಂದ ಹಾಡಿಸಿ ಕೇಳಿಸಿದ್ದಾರೆ. ಈಗ ಶ್ರೀಮನ್ನಾರಾಯಣ ಪಂಡಿತಾಚಾರ್ಯರಿಂದ ರಚಿತವಾದ ಸಕಲ ಸಜ್ಜನರಿಗೂ ಪರಮ ಮಂಗಳದಾಯಕವಾದ 'ಶ್ರೀಸುಮಧ್ವವಿಜಯದ'' ಕನ್ನಡ ಪದ್ಯಾನುವಾದವನ್ನು ಸರಳವೂ ಸುಲಭವೂ ಆದ ಕನ್ನಡದಲ್ಲಿ ಪೂರ್ಣಗೊಳಿಸಿದ್ದಾರೆ. ಛಲಬಿಡದ ತ್ರಿವಿಕ್ರಮನಂತೆ 3-4 ವರ್ಷಗಳ ಸತತ ಪರಿಶ್ರಮದ ಪ್ರಯತ್ನದಿಂದ ಈ ಕೃತಿಯನ್ನು ಧೃತಿಗೆಡದೆ (ಶ್ರೀಮತಿ ಸರಸ್ವತಿಯವರು ಈ ಸಂದರ್ಭದಲ್ಲಿ ಇವರನ್ನಗಲಿದರೂ) ಮಾಡಿ ಮುಗಿಸಿದ್ದಾರೆ. ಈ ಕೃತಿಯನ್ನು ನಾನು ಆಮೂಲವಾಗಿ ನೋಡಿ ಆನಂದಿಸಿದ್ದೇನೆ. ಬಹಳ ಸ್ಪುಟವಾಗಿ ಮೂಲಗ್ರಂಥಕರ್ತರ ಅಭಿಪ್ರಾಯಕ್ಕೆ ಚ್ಯುತಿ ಬರದಂತೆ ಅನುವಾದ ಮಾಡಿದ್ದಾರೆ. ಸಂಸ್ಕೃತವನ್ನು ಓದಲಿಕ್ಕೆ ಬಾರದಿದ್ದವರೂ ಕೂಡಾ 'ಶ್ರೀ ಸುಮಧ್ವವಿಜಯ'ದ ಸುಧಾರಸವನ್ನು ಇವರ ಈ ಅನುವಾದದಿಂದ ಆಸ್ವಾದಿಸಬಹುದು. ಇಂಥಹ ಶ್ರೀ ಇ. ಡಿ. ನರಹರಿಯವರಿಗೆ ಶ್ರೀ ನರಹರಿಯು ಇನ್ನೂ ಹೆಚ್ಚು ಆಯುಸ್ಸನ್ನು ಕೊಟ್ಟು ಇವರಿಂದ ಇದೇ ರೀತಿ ಸೇವೆಪಡೆಯಲಿ. ಯಲಹಂಕ ಉಪನಗರ ಬೆಂಗಳೂರು - 560 064 ಇತಿ ಅಭಿನಂದನೆಗಳು, ಬಿ. ಶ್ರೀಪತಿ ಆಚಾರ್ ಮುನ್ನುಡಿ 'ಶಾಸ್ತ್ರಾಭ್ಯಾಸ'- ಇದು ಪಿಂಡಾಂಡದ ಸಹಜ ಕ್ರಿಯೆ. ಚೈತನ್ಯ ಶೀಲತೆಯಿಂದಾಗಿ ದೇಹದ ರಕ್ತವು ಪ್ರತಿಕ್ಷಣವೂ ಶುದ್ಧವಾಗುವದು. ಈ ಪಿಂಡಾಂಡದಂತೆಯೇ ಬ್ರಹ್ಮಾಂಡದ ಕಥೆ, ಪಿಂಡದೊಳಗೆ ನಿರ್ವಹಿಸುವ ವ್ಯಕ್ತಿಯೇ ಬ್ರಹ್ಮಾಂಡದಲ್ಲಿಯೂ ಆ ಕಾರ್ಯ ನಿರ್ವಹಿಸುವವನು. ಆತ ವ್ಯಕ್ತಿಯಲ್ಲ, ಅಸಾಮಾನ್ಯ ಶಕ್ತಿ, ಜಗದ ಮೂಲವೆನಿಸಿದ ಪ್ರಾಣತತ್ವ, ಮುಖ್ಯಪ್ರಾಣ; ಅದು ಸಾವಿಲ್ಲದ ಬಲದ ಸೆಲೆ, ಯುಗದಿಂದ ಯುಗಕ್ಕೆ ತತ್ವವಾಹಕ, ಈ ಮುಖ್ಯಪ್ರಾಣನ ಸಿದ್ಧಾಂತವೇ ಮಧ್ವಸಿದ್ಧಾಂತ, ಇದು ವಿಶ್ವದ ಸರ್ವಕಾಲಿಕ ಸತ್ಯ. ಇಂದಿನ ವಾಸ್ತವಿಕವಾದ ವಿಷಮತೆ ಹಾಗೂ ವೈವಿಧ್ಯತೆಗಳಿಂದ ಕೂಡಿದ ಈ ಸಂಸಾರದ ವ್ಯವಸ್ಥೆಗೆ ಮಧ್ವ ಮತವನ್ನು ಬಿಟ್ಟರೆ ಇನ್ಯಾವ ಮತವೂ ಸಮರ್ಪಕವಾಗಿ ಉತ್ತರಿಸಲಾರದು. ನಮ್ಮೆಲ್ಲರ ಜೀವನದ ಅನುಭವಗಳು ಭೇದ, ತಾರತಮ್ಯ, ವೈಷಮ್ಯಗಳನ್ನು ಮಧ್ವಮತದಲ್ಲಿ ಕೂಡಿಸಲಸಾಧ್ಯ,ಕೂಡಿಸಲು ಸಾಧ್ಯ ಸಾತ್ವಿಕ, ರಾಜಸ, ತಾಮಸಗಳೆಂಬ ತ್ರಿವಿಧಸ್ವರೂಪ ಯೋಗ್ಯತೆಯನ್ನು ಇವರಾರೂ ಒಪ್ಪದೇ ತಮ್ಮ ದೇವರು ಕರುಣಾಶಾಲಿ, ಎಲ್ಲರನ್ನೂ ಮೋಕ್ಷಕ್ಕೆ ಒಯ್ಯುವವನೆಂದಾಗ, ಆ ದೇವರು ಎಲ್ಲರಿಗೂ ಒಂದೇ ರೀತಿಯಲ್ಲಿ ಸುಖ ಸಂಪತ್ತನ್ನು, ಜ್ಞಾನ ಹಾಗೂ ಯೋಗ್ಯತೆಯನ್ನು, ಆಯುರಾರೋಗ್ಯವನ್ನು ನೀಡಲಿಲ್ಲವೇಕೆ ? ಈ ಮಾತಿಗೆ ಯಾರೂ ಉತ್ತರಿಸಲಾರರು. ಪ್ರತಿಯೊಂದು ಚೇತನಕ್ಕೆ ತನ್ನದೇ ಆದ ಅನಾದಿ ಯೋಗ್ಯತೆಯು ಇದೆ. ಅನಾದಿಯಾದ ಕರ್ಮವಿದೆ. ಅದಕ್ಕೆ ತಕ್ಕಂತೆ ಅವರವರ ಗುಣಧರ್ಮಗಳಿವೆ. ಪರಿವರ್ತನೆಯ ಪ್ರವಾಹದಲ್ಲಿ ಸಾತ್ವಿಕ ಜನತೆಗೊಂದು ನಿಶ್ಚಿತವಾದ ದಾರಿಯನ್ನು ಧೈಯ ಧೋರಣೆಗಳನ್ನು ನೀಡಿದವರೇ ಆಚಾರ್ಯ ಮಧ್ವರು. ಅವರು ಬದುಕನ್ನು ಹಾಗೂ ಭಗವಂತನನ್ನು ಭಾವನಾಪ್ರಧಾನವಾಗಿ ಕಾಣುವ ಜಗತ್ತಿಗೆ ಬೌದ್ಧಿಕವಾಗಿ ಕಾಣಲು ತಿಳಿಸುವುದೇ ಅವರು ಪ್ರತಿಪಾದಿಸಿದ ದ್ವೈತಮತವೆಂದೆನಿಸುವುದು. ಜೀವನವೇ ಒಂದೇ ಯಜ್ಞ ಈ ಸನಾತನ ದ್ವೈತಸಿದ್ಧಾಂತವೆಂದರೆ ವಿಶ್ವದ ಯಥಾರ್ಥತೆ ವಾಸ್ತವತೆಯೊಂದಿಗೆ ತಾದಾತ್ಮ್ಯ ಸಾಮಂಜಸ್ಯ ಸ್ಥಾಪಿಸುವುದು. ಭಗವಂತನ ಪ್ರೀತಿಯನ್ನು ಪಡೆಯಲು ಜಾತಿಯು ಕಾರಣವಲ್ಲ, ವಿಧಿಯೂ ಅಲ್ಪ ಮುಖ್ಯವಾಗಿ ನಮ್ಮ ಭಕ್ತಿ ಸದ್ಗುಣಗಳೇ ಮೂಲಾಧಾರ ಎಂದು ಸಾರಿದವರು ಮಧ್ವರು. ಅಚಾರ್ಯ ಮಧ್ವರ ಜೀವನವನ್ನು ಯಥಾವತ್ತಾಗಿ ನಿರೂಪಿಸುವುದೇ 'ಸುಮಧ್ವ ವಿಜಯ' ಮಹಾಕಾವ್ಯ. ಅಂಥ ಕಾವ್ಯರಚನೆ ಮಾಡಿದವರು ಶ್ರೀಮತ್ಕವಿಕುಲತಿಲಕ ತ್ರಿವಿಕ್ರಮ ಪಂಡಿತಾಚಾರ್ಯರ ಮಗನೆಂದೆನಿಸಿಕೊಂಡ ಶ್ರೀಮನ್ನಾರಾಯಣ ಪಂಡಿತಾಚಾರ್ಯರು, ಹದಿನಾರು ಸರ್ಗಗಳಿಂದ ಕೂಡಿದ ಈ ಸಂಸ್ಕೃತ ಮಹಾಕಾವ್ಯವನ್ನು ಈಗಾಗಲೇ ನಮ್ಮ ನಾಡಿನಲ್ಲಿ ಅನೇಕ ಪಂಡಿತರು ಕನ್ನಡ ಪದ್ಯರೂಪದಲ್ಲಿ ಅನುವಾದ ಮಾಡಿರುವುದುಂಟು. ಮಧ್ವರ ಬಾಳಿನ ಬೆಳಕಾಗಿರುವ ಈ ಕಾವ್ಯವನ್ನು ಇಂದು ಪುನಃ ಭಾರತ ಸರಕಾರದ ಭೂವಿಜ್ಞಾನ ಶಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸನ್ಮಾನ್ಯರಾದ ಶ್ರೀಯುತ ಇ. ಡಿ. ನರಹರಿಯವರು ಬಹು ಶ್ರದ್ಧೆಯಿಂದ ಸಂಪೂರ್ಣವಾಗಿ ಕನ್ನಡದಲ್ಲಿ ಯಥಾವತ್ತಾಗಿ ಅನುವಾದ ಮಾಡಿದ್ದಾರೆ. ಸಂಸ್ಕೃತ ಮೂಲ ಶ್ಲೋಕಗಳಿಗೆ ಚ್ಯುತಿಯಾಗದಂತೆ ನಿರರ್ಗಳವಾಗಿ ಅವರ ಲೇಖನಿಯು ಇಲ್ಲಿ ಕೆಲಸ ಮಾಡಿದೆ. ಶ್ರೀಯುತರು ತಮ್ಮ ನಿವೃತ್ತ ಜೀವನದಲ್ಲಿ ಆಚಾರ್ಯ ಮಧ್ವರ ಸೇವೆಯನ್ನು ಮನಮುಟ್ಟುವಂತೆ ಮಾಡಿರುವುದು ಬಹು ಸಮಾಧಾನದ ವಿಷಯ. ಅವರಿಂದ ರಚಿತವಾದ "ಶ್ರೀ ಸುಮಧ್ವ ವಿಜಯ' ಕನ್ನಡ ಕಾವ್ಯಾನುವಾದ ಗ್ರಂಥವು ಸುದೀರ್ಘವಾದ ಕಾವ್ಯವಾಗಿದೆ. ಕನ್ನಡ ಸಾರಸ್ವತ ಲೋಕವು ಅವರ ಈ ಕೃತಿಯನ್ನು ಮೆಚ್ಚುವುದರಲ್ಲಿ ಸಂದೇಹವಿಲ್ಲ. ಮಾಧ್ವಮತಾನುಯಾಯಿಗಳು ಅವಶ್ಯವಾಗಿ ಸಂಗ್ರಹಿಸಬೇಕಾದ ಗ್ರಂಥವು ಇದಾಗಿದೆ ಎಂದು ಹೇಳಲು ಸಂತೋಷವೆನಿಸುತ್ತದೆ. ಮಧ್ವಾಂತರ್ಗತ ಶ್ರೀಮನ್ನಾರಾಯಣನು ನರಹರಿಯವರಿಗೆ ಆಯುರಾರೋಗ್ಯ ಭಾಗ್ಯವನ್ನಿತ್ತು ಇನ್ನೂ ಅನೇಕ ಮಾಧ್ವ ಗ್ರಂಥಗಳು ಅವರಿಂದ ಅನುವಾದಿತವಾಗಿ ಹೊರಬರುವಂತಾಗಲೆಂದು ಹಾರೈಸುತ್ತೇನೆ. ಚಿತ್ರಭಾನು ಸಂವತ್ಸರ ಚೈತ್ರ ಶುದ್ಧ ಮಂದವಾಸರೆ (ಶನಿವಾರ) 13-4-2002 ಆದ್ಯ ರಾಮಾಚಾರ್ಯ ಬೆಂಗಳೂರು. ಪ್ರಸ್ತಾವನೆ ಇಂದಿಗೆ ಸುಮಾರು ಏಳುನೂರ ಐವತ್ತು ವರ್ಷಗಳಿಗೂ ಹಿಂದೆ, ಭಾರತದ ಆಧ್ಯಾತ್ಮಿಕ ಆಕಾಶದಲ್ಲಿ ಕವಿದಿದ್ದ ಅಜ್ಞಾನ ತಿಮಿರದ ಮಬ್ಬುಗತ್ತಲಿನಲ್ಲಿ ಮಿಂಚಿನ ಬಳ್ಳಿಯಂತೆ ಮಿಂಚಿದ ಮಹಾ ಚೇತನ ಶ್ರೀಮನ್ಮಧ್ವಾಚಾರ್ಯರು. ಅಪೌರುಷೇಯವಾದ ವೇದಗಳ ಜ್ಞಾನ ಭಂಡಾರ ಕುರುಡರಿಗೆ ದೊರೆತ ರತ್ನರಾಶಿಯ ಹಾಗೆ ನಿಸ್ಸತ್ವವಾಗಿ ನಿಶ್ಚೇಷ್ಟಿತಗೊಂಡಿದ್ದ ಅಂದಿನ ಕಾಲದಲ್ಲಿ ವೇದಗಳ ಸುಸ್ಪಷ್ಟ ಅರ್ಥವಿವರಣೆಗಳನ್ನು ಸಮರ್ಥವಾಗಿ ನೀಡಲಾರದ, ಆದರೂ ತಮ್ಮನ್ನು ತಾವೇ ಸನಾತನ ಧರ್ಮ ಪರಿಪಾಲನೆಯ ಅಧ್ವರ್ಯಗಳೆಂದು ಹೇಳಿಕೊಳ್ಳುತ್ತಿದ್ದ ಅನೇಕ "ಛದ್ಮ ದಾರ್ಶನಿಕರು" ವೇದಾರ್ಥವನ್ನು ಪಲ್ಲಟಗೊಳಿಸಿ ಆಭಾಸ ಉಕ್ತಿಗಳ ಸರಮಾಲೆಯನ್ನೇ ಪೋಣಿಸಿ, ಅನೇಕ ಅಮಾಯಕ ಮಂದಿಯನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿದ್ದರು. ಬ್ರಹ್ಮಸೂತ್ರಗಳಂತಹ ಪವಿತ್ರ ಗ್ರಂಥಗಳಿಗೆ ತಮ್ಮ ಮನಬಂದಂತೆ ಭಾಷ್ಯಗಳನ್ನು ರಚಿಸಿ ಈ ದಾರ್ಶನಿಕರು ವೈದಿಕ ಧರ್ಮವನ್ನು ಕಲುಷಿತಗೊಳಿಸುತ್ತಿದ್ದರು. ಭಗವಂತನ ಸರ್ವೋತ್ತಮತ್ವವನ್ನು ಪ್ರಶ್ನಿಸಿ ''ಅಹಂ ಬ್ರಹ್ಮಾಸ್ಮಿ'' ಮೊದಲಾದ ಉಪನಿಷ್ವಾದ್ಯಕ್ಯಗಳ ಉಪನಿಷದ್ವಾಕ್ಯಗಳ ಅರ್ಥವನ್ನೇ ಪಲ್ಲಟಗೊಳಿಸಿ ಸಮಾಜದಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದರು. ಕೆಲವರಂತೂ, ಪವಿತ್ರ ವೇದೋಪನಿಷತ್ತುಗಳ ಪ್ರಾಮಾಣ್ಯವನ್ನೇ ಧಿಕ್ಕರಿಸಿ ಕೇವಲ ಐಹಿಕ ಬದುಕನ್ನೇ ಗುರಿಯಾಗಿಟ್ಟುಕೊಂಡು, ವೈದಿಕ ಧರ್ಮವಾಹಿನಿಯ ಮುಖ್ಯ ಪ್ರವಹನದಿಂದ ಸಿಡಿದೆದ್ದು ಹೊಸ ಹೊಸ ಮತಗಳನ್ನೇ ಸ್ಥಾಪಿಸಲು ಅನುವಾದರು. ಹೀಗೆ, ಅಂದಿನ ಧಾರ್ಮಿಕ ಕ್ಷೇತ್ರದಲ್ಲಿ ಉಂಟಾದ ವೈಪರೀತ್ಯಗಳನ್ನು ತಡೆಗಟ್ಟಿ, ಬ್ರಹ್ಮ ಸೂತ್ರಗಳು, ಉಪನಿಷತ್ತುಗಳು, ಭಗವದ್ಗೀತೆ ಮುಂತಾದ ಪವಿತ್ರ ಗ್ರಂಥಗಳ ಪಾವಿತ್ರ್ಯತೆಯನ್ನು ಸಂರಕ್ಷಿಸಿ, ಬ್ರಹ್ಮ ಜ್ಞಾನವನ್ನು ಸೂಕ್ತ ನೆಲೆಗಟ್ಟಿನಲ್ಲಿ ನಿಲ್ಲಿಸಲು, ಇಳೆಯೊಳಗೆ ಇಳಿದು ಬಂದರು ಶ್ರೀಮನ್ಮಧ್ವಾಚಾರ್ಯರು (ಕ್ರಿ.ಶ. 1238 - 1318). ಧರ್ಮ ಸಂಸ್ಥಾಪನೆಯ ಸಲುವಾಗಿ, ಇತರ ಯುಗಗಳಲ್ಲಿ ಮಾತ್ರ ಭಗವಂತನು ಸಾಕ್ಷಾತ್ತಾಗಿ ಅವತರಿಸುವನು. ಹಾಗಾಗಿ, ಆತನ ಆಣತಿಯಂತೆ ಕಲಿಯುಗದಲ್ಲಿ ಸಾಕ್ಷಾತ್ ವಾಯುದೇವರೇ ಶ್ರೀಮನ್ಮಧ್ವಾಚಾರ್ಯರಾಗಿ ಅವತರಿಸಬೇಕಾಯಿತು. ತ್ರೇತೆಯಲ್ಲಿ ಹನುಮನಾಗಿಯೂ, ದ್ವಾಪರದಲ್ಲಿ ಭೀಮಸೇನನಾಗಿಯೂ ಹಾಗೂ ಕಲಿಯುಗದಲ್ಲಿ ಶ್ರೀಮದಾಚಾರ್ಯರಾಗಿಯೂ ಅವತರಿಸಿದ ಈ ಮಹಿಮರು ಜ್ಞಾನ ಬಲದೈಸಿರಿಗಳ ಅದ್ಭುತ ಸಂಗಮ. ಚೇತನಾಚೇತನದ ಜಗಕೆಲ್ಲ ಒಡೆಯ ಈ ಜೀವೋತ್ತಮ. ಭಗವಂತನಲ್ಲಿ ಅನನ್ಯ ಭಕ್ತಿಯನ್ನು ಪ್ರತಿಪಾದಿಸಿದ ಶ್ರೀ ಮಧ್ವರು ಭಕ್ತಿಪಂಥದ ಮಹಾಪೂರದ ರೂವಾರಿ. ಈ ಮಹಾಮಹಿಮರ ಪರಂಪರೆಯಲ್ಲಿ ಬೆಳಗಿದ ತಾರೆಗಳೂ ಅನೇಕಾನೇಕ (vii) ಜಯತೀರ್ಥರು, ಶ್ರೀಪಾದರಾಜರು, ವ್ಯಾಸರಾಯರು, ವಾದಿರಾಜರು, ರಾಘವೇಂದ್ರಸ್ವಾಮಿಗಳಂತಹ ಯತಿವರೇಣ್ಯರೇ ಅಲ್ಲದೆ, ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರಂತಹ ದಾಸಶ್ರೇಷ್ಠರೂ ಸಹ ಮಧ್ವಮತದ ಉತ್ತಮೋತ್ತಮ ಪ್ರತಿಪಾದಕರು. ಶ್ರೀ ಸುಮಧ್ವವಿಜಯ ಮಾಧ್ವಸಾಹಿತ್ಯದ ಮಾಂಗಲ್ಯ ಕಾವ್ಯ. ಶ್ರೀಮದಾಚಾರ್ಯರ ಐಹಿಕ ಬದುಕಿನ ಹಲವಾರು ಸ್ವಾರಸ್ಯಕರ ಘಟನೆಗಳನ್ನೂ ಹಾಗೂ ಅವರ ಆಧ್ಯಾತ್ಮಿಕ ಹಿರಿಮೆಯನ್ನೂ ಚಾರಿತ್ರಿಕ ನೆಲೆಗಟ್ಟಿನಲ್ಲಿ ವಿವರಿಸುವ ಒಂದು ಪ್ರಾಮಾಣಿಕ ಕಾವ್ಯ. ಸಂಸ್ಕೃತ ಸಾಹಿತ್ಯದಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದಿರುವ ಈ ಮಹಾಕಾವ್ಯ ಅಶ್ವಘೋಷನ ಬುದ್ಧ ಚರಿತೆಗಿಂತಲೂ ಹೆಚ್ಚು ಮಹತ್ವವನ್ನು ಪಡೆದಿರುವುದಾದರೂ, ಸಂಸ್ಕೃತ ಸಾಹಿತ್ಯ ವಿಮರ್ಶನ ಕ್ಷೇತ್ರದಲ್ಲಿ ಅದಕ್ಕೆ ಲಭಿಸಬೇಕಾದ ಸ್ಥಾನ ಲಭಿಸದಿರುವುದು ಒಂದು ದುರಂತ ಎಂದು ಅನೇಕ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಶ್ರೀ ಸುಮಧ್ವ ವಿಜಯ' ದ ಕರ್ತೃ ಶ್ರೀಮನ್ನಾರಾಯಣ ಪಂಡಿತರು (ಕ್ರಿ. ಶ. 1295 - 1370) ಅಸಾಮಾನ್ಯ ಪಂಡಿತ ಪರಂಪರೆಯಲ್ಲಿ ಬೆಳಗಿದ ಪ್ರಭೃತಿಗಳು. ಲಿಕುಚ ವಂಶೋದ್ಭವರಾದ ಇವರ ತಂದೆಯ ತಂದೆ ಸುಬ್ರಹ್ಮಣ್ಯ ಪಂಡಿತರು ಅಂದಿನ ಕಾಲದ ಪ್ರಕಾಂಡ ಪಂಡಿತರು; ಧಾರ್ಮಿಕ ಸಮಾಜದ ನೇತಾರರು. ಇವರ ಮಗ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು. ಇವರು ಶ್ರೀಮಧ್ವಾಚಾರ್ಯರ ಸಮಕಾಲೀನರಲ್ಲದೆ ಒಂದು ಅರ್ಥದಲ್ಲಿ ಅವರ ಬೌದ್ಧಿಕ ಪ್ರತಿಸ್ಪರ್ಧಿಗಳು, ಅದ್ವೈತ ತತ್ವದ ಅದ್ವಿತೀಯ ಪ್ರತಿಪಾದಕರೆನಿಸಿದ್ದ ಇವರು ಶ್ರೀ ಮಧ್ವಾಚಾರ್ಯರೊಡನೆ ಹದಿನೈದು ದಿನಗಳ ಕಾಲ ವಾಕ್ಯಾರ್ಥದಲ್ಲಿ ಸೆಣಸಿ ಕೊನೆಗೆ ಅವರಿಗೆ ಶರಣಾದ ಧೀಮಂತ ಚಿಂತಕರು. ಇವರ ತಮ್ಮ ಶಂಕರ ಪಂಡಿತರು ಹಾಗೂಸೋದರಿ ಕಲ್ಯಾಣಿದೇವಿ ಸಹ ಶ್ರೀಮದಾಚಾರ್ಯರ ಪ್ರಮುಖ ಶಿಷ್ಯರು. ''ಸುಮಧ್ವ ವಿಜಯ'ದ ಕರ್ತೃ ಶ್ರೀಮನ್ನಾರಾಯಣ ಪಂಡಿತರು, ಶ್ರೀ ತ್ರಿವಿಕ್ರಮರ ಪುತ್ರರು. ಇವರ ಪುತ್ರ ವಾಮನ ಪಂಡಿತರೂ ಸಹ ಖ್ಯಾತ ವಿದ್ವಾಂಸರಾಗಿದ್ದು ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಹದಿನಾರು ಸರ್ಗಗಳಲ್ಲಿ ರಚಿತವಾಗಿರುವ ನಾರಾಯಣ ಪಂಡಿತಾಚಾರ್ಯರ ಸುಮಧ್ವ ವಿಜಯ ಮಹಾಕಾವ್ಯವು ಶಾಸ್ತ್ರಾನುಭೂತಿ ಮತ್ತು ಕಾವ್ಯ ಪ್ರತಿಭೆಗಳ ಸುಂದರ ಸಂಗಮ. 'ಸುಮಧ್ವವಿಜಯ''ವನ್ನೊಳಗೊಂಡು ಸುಮಾರು 25 ಕೃತಿಗಳನ್ನು ಇವರು ರಚಿಸಿದ್ದಾರೆ. ಶ್ಲೇಷ, ಉಪಮಾ ಮೊದಲಾದ ಅಲಂಕಾರಗಳನ್ನು ತುಂಬಾ ಸಮರ್ಥವಾಗಿ ಬಳಸುವ ಇವರ ಕಾವ್ಯಗಳ ರಚನಾ ವೈಖರಿ ಅದ್ಭುತವಾದದ್ದು. ಮಾಧ್ವ ಪರಂಪರೆಯ ಅನೇಕ ಯತಿಶ್ರೇಷ್ಠರು ಮತ್ತು ಪಂಡಿತ (viii) ದಿಗ್ಗಜಗಳೂ ಈ ಕೃತಿಯ ಹೆಗ್ಗಳಿಕೆಯನ್ನು ಹಾಡಿ ಹೊಗಳಿದ್ದಾರೆ. "ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ" ಮಾಧ್ವಕೃತಿಗಳ ಅನುವಾದ ಕಾವ್ಯದಲ್ಲಿ ನನ್ನ ಎರಡನೆಯ ಪ್ರಯತ್ನ. ಈಗಾಗಲೇ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಶ್ರೀ ಹರಿವಾಯುಸ್ತುತಿಯನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹೊರತಂದಿದ್ದೇನೆ . ಆದರೆ ಕಾರಣಾಂತರಗಳಿಂದ ಈ ಪ್ರಯತ್ನಕ್ಕೆ ನಿರೀಕ್ಷಿಸಿದಷ್ಟು ಪ್ರೋತ್ಸಾಹ ದೊರೆಯಲಿಲ್ಲ. ಸಹಜವಾಗಿ ಇದರಿಂದ ಸಾಕಷ್ಟು ನಿರಾಸೆಯಾಯಿತಾದರೂ, ಮಾಧ್ವಕೃತಿರತ್ನವಾದ 'ಸುಮಧ್ವವಿಜಯ'' ವನ್ನು ಕನ್ನಡದಲ್ಲಿ ಪದ್ಯಾನುವಾದ ಮಾಡಬೇಕೆಂಬ ಅದಮ್ಯ ಆಕಾಂಕ್ಷೆ ನನ್ನಲ್ಲಿ ಬೇರೂರಿತ್ತು. ಆದರೆ ಇಂತಹ ಪ್ರಯತ್ನಗಳಿಗೆ ಸಂಸ್ಕೃತ ಭಾಷಾಜ್ಞಾನ ಅತ್ಯಂತ ಅವಶ್ಯಕ. ಸಂಸ್ಕೃತ ಭಾಷೆಯ ಮಹಾದ್ವಾರದ ಹೊಸ್ತಲನ್ನೂ ಮುಟ್ಟಲಾಗದುದು ನನ್ನ ಕೊರತೆ. ಖ್ಯಾತ ಪಂಡಿತರಾದ ಡಾ ವ್ಯಾಸನಕೆರೆ ಪ್ರಭಂಜನಾಚಾರ್ಯರ ಸುಮಧ್ವವಿಜಯದ ಕನ್ನಡ ಗದ್ಯಾನುವಾದ (ಆನಂದ ತೀರ್ಥ ಪ್ರತಿಷ್ಠಾನ ಬೆಂಗಳೂರು 1994) ನನ್ನ ಈ ಕೊರತೆಯನ್ನು ನೀಗಿಸಿತು. ಅವರ ಸುಂದರ ಗದ್ಯಶೈಲಿ ಹಾಗೂ ಮೂಲಕೃತಿಗೆ ಎಳ್ಳಷ್ಟೂ ಚ್ಯುತಿ ಬರದಂತೆ ನಿರೂಪಿಸಿರುವ ಅವರ ಅನುವಾದ ನನ್ನ ನೆರವಿಗೆ ಬಂದಿತು. ಅವರ ಸುಂದರ ಗದ್ಯಾನುವಾದವನ್ನು ಪದ್ಯರೂಪದಲ್ಲಿ ಪರಿವರ್ತಿಸಿದ್ದೇನೆ. ಪದ್ಯಗಳಉಪಶೀರ್ಷಿಕೆಗಳನ್ನು ಅವರ ಗ್ರಂಥದಿಂದ ಅನಾಮತ್ತಾಗಿ ಎತ್ತಿದ್ದೇನೆ. ಇದಕ್ಕಾಗಿ ಪ್ರೊ.ಪ್ರಭಂಜನಾಚಾರ್ಯರಿಗೆ ನಾನು ಕೃತಜ್ಞನಾಗಿದ್ದೇನೆ ನನ್ನ ಈ ಪದ್ಯಾನುವಾದ ಎಷ್ಟರ ಮಟ್ಟಿಗೆ ಸಫಲಗೊಂಡಿರುವುದೋ ನಾ ಕಾಣೆ. ಇದನ್ನು ಸಹೃದಯ ಜನಗಳೇ ನಿರ್ಧರಿಸಬೇಕು. ಈ ಕೃತಿಯ ರಚನೆಯನ್ನು ಸುಮಾರು ಮೂರು ವರ್ಷಗಳ ಹಿ೦ದೆಯೇ ಪ್ರಾರಂಭಿಸಿದೆನಾದರೂ ಅದರ ಓಟ ಸಾವಕಾಶವಾಗಿಯೇ ಜರುಗಿತು. ಶ್ರೀ ಹರಿಯ ಅನುಗ್ರಹದಿಂದ, ಅನುವಾದ ಕಾರ್ಯವೇನೋ ಸುಲಭವಾಗಿಯೇ ಸಾಗಿತು. ದಿನವೊಂದಕ್ಕೆ ಏಳೆಂಟು ಶ್ಲೋಕಗಳ ಅನುವಾದವನ್ನು ಮಾಡುವುದು ಸಾಧ್ಯವಾಗಿತ್ತು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಈ ಕಾರ್ಯ ಅನಿವಾರ್ಯವಾಗಿ ಕುಂಠಿತವಾಯಿತು. ಈ ಮಧ್ಯೆ ನನ್ನ ಎಲ್ಲ ಚಟುವಟಿಕೆಗಳಿಗೂ ಸಂಪೂರ್ಣ ಸಹಕಾರವಿತ್ತು ನನಗೆ ನೈತಿಕ ಸ್ಥೈರ್ಯವನ್ನು ನೀಡುತ್ತಿದ್ದ ನನ್ನ ಸಹಧರ್ಮಿಣಿ ಸೌ. ಸರಸ್ವತಿ, ಕ್ಯಾನ್ಸರ್‌ ಪೀಡಿತಳಾಗಿ ಕೊನೆಗೆ ನನ್ನನ್ನು ಅಗಲಿಹೋದಳು. ಇದರಿಂದಾಗಿ ನಾನು ನನ್ನ ಮಾನಸಿಕ ಸ್ಥೈರ್ಯವನ್ನು ಮತ್ತೆ ಪಡೆಯಲು ಕೆಲವು ತಿಂಗಳುಗಳೇ ಬೇಕಾದುವು. ಈ ನನ್ನ ಪ್ರಯತ್ನಕ್ಕೆ ಅನೇಕ ಸಹೃದಯ ಮಿತ್ರರ ಪ್ರೋತ್ಸಾಹ ಹಾಗೂ ಸದಾಶಯಗಳು ಲಭಿಸಿವೆ. ನನ್ನ ಸನ್ಮಾನ್ಯ ಮಿತ್ರರೂ, ಖ್ಯಾತ ಪಂಡಿತೋತ್ತಮರಾಗಿದ್ದ ಬಿದರಹಳ್ಳಿ ಶ್ರೀನಿವಾಸ ತೀರ್ಥರ ವಂಶಸ್ಥರೂ ಆದ ಶ್ರೀ ಬಿದರಹಳ್ಳಿ ಶ್ರೀಪತಿ I ಆಚಾರ್ಯರು ಹಸ್ತಪ್ರತಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿರುವರಲ್ಲದೆ ಮುದ್ರಿತ ಪ್ರೂಫ್ ಗಳನ್ನೂ ತಿದ್ದಿ ಉಪಕರಿಸಿದ್ದಾರೆ. ಅಲ್ಲದೆ ಒಂದು ಪುಟ್ಟ ಲೇಖನದಲ್ಲಿ ನನ್ನ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇವರಿಗೆ ನಾನು ಸದಾ ಆಭಾರಿ, ಕರ್ನಾಟಕ ವಿದ್ಯುತ್ ನಿಗಮದಲ್ಲಿ ಎಕ್ಸಿಕ್ಯುಟಿವ್ ಇಂಜನಿಯರ್ ಆಗಿರುವ ಹಾಗೂ ಮಾಧ್ವ ಶಾಸ್ತ್ರಗ್ರಂಥಗಳಲ್ಲಿ ಉತ್ತಮ ಪಾಂಡಿತ್ಯ ಸಂಪಾದಿಸಿರುವ ಗೆಳೆಯ ಶ್ರೀ ರೊಟ್ಟಿ ವೆಂಕಟೇಶ ಮೂರ್ತಿಯವರು ಸಹ ಹಸ್ತಪ್ರತಿಯನ್ನು ಪರಿಶೀಲಿಸಿ ಮೂಲ ಕೃತಿಗೆ ಸ್ವಲ್ಪವೂ ಚ್ಯುತಿ ಬಾರದಂತೆ ನೋಡಿಕೊಂಡಿದ್ದಾರೆ. ನನ್ನ ಆತ್ಮೀಯ ಗೆಳೆಯರಾದ ಶ್ರೀ ಆದ್ಯ ಕೃಷ್ಣಮೂರ್ತಿಯವರಂತೂ, ನನ್ನನ್ನು ಹೆಜ್ಜೆ ಹೆಜ್ಜೆಗೂ ಪ್ರೋತ್ಸಾಹಿಸಿ, ನನ್ನಲ್ಲಿ ಆತ್ಮ ವಿಶ್ವಾಸವನ್ನು ತುಂಬುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಅವರ ಹಿರಿಯ ಸೋದರರಾದ ಖ್ಯಾತ ವಿದ್ವಾಂಸ ಶ್ರೀ ಆದ್ಯ ರಾಮಾಚಾರ್ಯರಿಗೆ ನನ್ನನ್ನು ಪರಿಚಯಿಸಿ ಮಹೋಪಕಾರ ಮಾಡಿದ್ದಾರೆ ಮತ್ತು ಅವರಿಂದ ಒಂದು ಮುನ್ನುಡಿಯನ್ನು ಬರೆಯಿಸಿಕೊಡುವ ಉಪಕಾರವನ್ನೂ ಮಾಡಿದ್ದಾರೆ. ಈ ಇಬ್ಬರು ಸೋದರರಿಗೂ ನನ್ನ ಕೃತಜ್ಞತೆಗಳು. ತಿರುಪತಿಯ ಟಿ. ಟಿ. ಡಿ. ಸಂಸ್ಥೆಯವರು ತಮ್ಮ"ಧಾರ್ಮಿಕ ಪುಸ್ತಕಗಳಿಗಾಗಿ ಧನಸಹಾಯ'' ಎಂಬ ಯೋಜನೆಯಡಿಯಲ್ಲಿ ಈ ಪುಸ್ತಕದ ಪ್ರಕಟನೆಗಾಗಿ ಇಪ್ಪತ್ತು ಸಾವಿರ ರೂಪಾಯಿಗಳ ನೆರವನ್ನು ನೀಡಿದ್ದಾರೆ. ಇದಕ್ಕಾಗಿ ಆ ಸಂಸ್ಥೆಯ ಎಕ್ಸಿಕ್ಯೂಟಿವ್ ಅಧಿಕಾರಿಗಳಿಗೂ ಹಾಗೂ ಪ್ರಕಟನ ವಿಭಾಗದ ಸಂಪಾದಕರಾಗಿರುವ ಶ್ರೀ ಎನ್. ಎಸ್.ರಾಮಮೂರ್ತಿ ಎಂ. ಎ. ಇವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನನ್ನ ಎಲ್ಲ ಬೇಡಿಕೆಗಳನ್ನೂ ಸಾವಧಾನವಾಗಿ ಪರಿಶೀಲಿಸಿ ಡಿ. ಟಿ. ಪಿ. ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಶ್ರೀಮತಿ ಸವಿತ ಶ್ರೀನಿವಾಸ್ ಹಾಗೂ ಮುದ್ರಣ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿರುವ ಅಕ್ಷಯ ಮುದ್ರಣದ ಶ್ರೀ ಕೆ. ಶ್ರೀನಿವಾಸ್ ಹಾಗೂ ಅವರ ಸಿಬ್ಬಂದಿಯವರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. -ಇ.ಡಿ.ನರಹರಿ 5112, ವೇದಾವತಿ ಬ್ಲಾಕ್ ನಂದಿ ಎನ್‌ಕ್ಲೇವ್, ಎರಡನೆಯ ಕ್ರಾಸ್ ಐದನೆಯ ಬ್ಲಾಕ್, ಬನಶಂಕರಿ ಮೂರನೆಯ ಹಂತ ಬೆಂಗಳೂರು - 560 085 ದೂರವಾಣಿ - 6996194 i ii ಅಭಿನಂದನೆ 111 iv 1. 2. ಅನುಗ್ರಹ ಸಂದೇಶ ಮುನ್ನುಡಿ ಪ್ರಸ್ತಾವನೆ ಮೊದಲನೆಯ ಸರ್ಗ ಮಂಗಲಾಚರಣೆ ಶ್ರೀ ಕೃಷ್ಣ ವಂದನೆ ಮಧ್ವ ಕೀರ್ತಿಯ ಮಹಿಮೆ ವಿಷಯಾನುಕ್ರಮಣಿಕ ತ್ರಿವಿಕ್ರಮ ಪಂಡಿತ ವಂದನೆ ವಿಷಯ ಪ್ರಯೋಜನಾದಿ ಕಥನ ಸ್ವಾಹಂಕಾರ ಖಂಡನ (1-55) ಶ್ರೀ ಹನುಮದವತಾರ ಲೀಲಾ ವರ್ಣನ ಶ್ರೀ ಭೀಮಾವತಾರ ಲೀಲಾ ವರ್ಣನ ಮಧ್ಯಾವತಾರ ನಿಮಿತ್ತ ವರ್ಣನ ವಾಸಸ್ಥಳ ವಿವಾಹ ಎರಡನೆಯ ಸರ್ಗ (1-59) ಶ್ರೀ ನಾರಾಯಣನಲ್ಲಿ ಬ್ರಹ್ಮಾದಿದೇವತೆಗಳ ಪ್ರಾರ್ಥನೆ ಅವತರಿಸಲು ಶ್ರೀ ವಾಯುದೇವರಿಗೆ ಶ್ರೀ ನಾರಾಯಣನ ಆದೇಶ ಶ್ರೀ ವಾಯುದೇವರಿಂದ ಭಗವದಾಜ್ಞಾ ಸ್ವೀಕಾರ ಆ ಕಾಲದ ಭೂಲೋಕದ ಸಜ್ಜನರ ಪರಿಸ್ಥಿತಿ ಶ್ರೀ ಅನಂತಾಸನನಿಂದ ಮಧ್ವಾವತಾರದ ಮುನ್ಸೂಚನೆ ಮಧ್ಯಗೇಹ ಭಟ್ಟರ ಪೂರ್ವೋತ್ತರ ಅವರ ಮೂಲಸ್ಥಳ ದಾಂಪತ್ಯ "ಭಟ' ಶಬ್ದಾರ್ಥ (XI) ಪುಟ ಸಂಖ್ಯೆ (1) (IV) (ii) 3-15 3 5 10 21-35 21 21 22 22 22 2.3 23 2.3 24 24 24 3. ರಜತ ಪೀಠ ಪುರದಲ್ಲಿ ನಿತ್ಯ ಪ್ರವಚನ ಸೇವೆ ಮಧ್ಯಗೇಹರ ಜಿಜ್ಞಾಸೆ ಸತ್ಪುತ್ರನನ್ನು ಹೊಂದಲು ಪದ್ಯಾಲೋಚನೆ ಉಡುಪಿಯಲ್ಲಿ ಹನ್ನೆರಡು ವರ್ಷಗಳ ಸೇವೆ ಮಧ್ಯಗೇಹರ ಪತ್ನಿಗೆ ಗರ್ಭಾಂಕುರ ಶ್ರೀ ಮಧ್ವಾವತಾರ ಜಾತಕರ್ಮಾದಿ ನಾಮಕರಣ ಪೂರ್ವಾಲಯರು ಮಾಡಿದ ಅಪೂರ್ವ ಸೇವೆ ಭೂತನಿಗ್ರಹ ಪ್ರಸಂಗ ಹುರುಳಿ ತಿಂದ ಪ್ರಸಂಗ ವಾಣೀಪತಿಯ ತೊದಲ್ನುಡಿ ಜಗಚ್ಚೇಷ್ಟಕನು ಅಂಬೆಗಾಲಿಟ್ಟಿದ್ದು ಎತ್ತಿನ ಬಾಲ ಹಿಡಿದು ಕಾಡಿಗೆ ತೆರಳಿದ ಪ್ರಸಂಗ ತಂದೆಯ ಸಾಲವನ್ನು ತೀರಿಸಿದ್ದು ಮೂರನೆಯ ಸರ್ಗ (1-45) ಮೂರು ವರ್ಷದ ಮಗುವಾಗಿ ಲೋಕನಿಯಾಮಕನ ಸಾಹಸ ವಿಮಾನಗಿರಿಯಲ್ಲಿ ವಾಸುದೇವ ಭಾರತೀಪತಿಯ ಅಕ್ಷರಾಭ್ಯಾಸ ಶಿವಾದಿವಂದ್ಯನಿಂದ ಶಿವಭಟ್ಟನ ಪರಾಭವ ಲೋಕಗುರುವಿನಿಂದ ಲಿಕುಚ ಶಬ್ದಾರ್ಥ ಪದೇಶ ಭಾವೀ ಬ್ರಹ್ಮನಿಗೆ ಬ್ರಹ್ಮಶ ಕಾಲುಕಚ್ಚಿ ಕಾಲವಶನಾದ ಮಣಿಮಂತ ಜಗದ್ಗುರುವಿನ ಗುರುಕುಲವಾಸ ಲೋಕಗುರುವಿನಿಂದ ಗುರುಪುತ್ರನ ಉದ್ಘಾರ ಗುರುವಿಗೆ ಜ್ಞಾನದಕ್ಷಿಣೆ - ಗುರುಕುಲವಾಸ ಸಮಾಪ್ತಿ ಶಿಷ್ಯನಿಂದ ಗುರುವಿಗೆ ಜ್ಞಾನದಾನ 4. ನಾಲ್ಕನೆಯ ಸರ್ಗ ಸನ್ಯಾಸ ನಿಶ್ಚಯ ಅಚ್ಯುತ ಪ್ರೇಕ್ಷರ ಪೂರ್ವೋತ್ತರ (1-54) (XI) 24 25 25 25 26 27 28 28 28 29 30 32 32 32 39-53 39 4.3 43 46 46 48 49 52 54 54 57-70 57 58 5. ಗುರುವಾಗುವ ಶಿಷ್ಯನ ನಿರೀಕ್ಷೆಯಲ್ಲಿ ಅಚ್ಯುತ ಪ್ರೇಕ್ಷರು ಮಗನನ್ನು ಮನೆಗೆ ಮರಳಿಸುವ ವಿಫಲ ಪ್ರಯತ್ನ ಮಗನ ಮಾತಿಗೆ ತಲೆಬಾಗಿದ ತಂದೆ ಭಾವೀ ವಿಷ್ಣು ತೀರ್ಥರ ಅವತಾರ ಮಗನ ಸನ್ಯಾಸಕ್ಕೆ ಮಾತೆಯ ಮೌನ ಸಮ್ಮತಿ ಸನ್ಯಾಸ ಸ್ವೀಕಾರ ಶ್ರೀ ಪೂರ್ಣಪ್ರಜ್ಞರ ಅಜ್ಞ ವಿಡಂಬನೆ ಮಧ್ವ ಸರೋವರ ಪ್ರಸಂಗ ಶ್ರೀ ಪೂರ್ಣಪ್ರಜ್ಞ ವಿಜಯ ಇಷ್ಟಸಿದ್ಧಿಯು ಅನಿಷ್ಟ ಸಿದ್ಧಿಯಾಯಿತು ಶ್ರೀ ಪೂರ್ಣಪ್ರಜ್ಞರ ಪಾಠ ಪ್ರವಚನ ವೈಖರಿ ಶ್ರೀ ಪೂರ್ಣಪ್ರಜ್ಞರ ಶಾಸ್ತ್ರ ಪಾಂಡಿತ್ಯ ಪೂರ್ಣಪ್ರಜ್ಞರು ಸರ್ವಜ್ಞರು ಶ್ರೀ ಮಧ್ವಕೀರ್ತಿಯ ವೈಭವ ಐದನೆಯ ಸರ್ಗ (1-52) ವೇದಾಂತ ಸಾಮ್ರಾಜ್ಯಾಭಿಷೇಕ ಶ್ರೀ ಪೂರ್ಣಪ್ರಜ್ಞರು ಆನಂದತೀರ್ಥರಾದರು ಆನಂದ ತೀರ್ಥರೇ ಅನುಮಾನ ತೀರ್ಥರು ವಾವಿಸಿಂಹ ಗ್ರಾಮಸಿಂಹನಾದನು ಶಂಕರ ಭಾಷ್ಯದ ಖಂಡನೆ ಬ್ರಹ್ಮಸೂತ್ರದ ಪ್ರವಚನ ಮಧ್ಯಗೇಹರ ಮಧ್ವದರ್ಶನ ಭಾಷ್ಯ ರಚಿಸಲು ಪ್ರಾರ್ಥನೆ ದಕ್ಷಿಣ ದಿಗ್ವಿಜಯದ ಆರಂಭ ವಿಷ್ಣುಮಂಗಲದಲ್ಲಿ ತೋರಿದ ಅಪೂರ್ವ ಮಹಿಮೆ ಪಯಸ್ವಿನೀ ತೀರದಲ್ಲಿ ದುರ್ಗಾದೇವಿಯ ಸ್ಮರಣೆ ತಿರುವನಂತಪುರದಲ್ಲಿ ಕುದಿಪುಸ್ತೂರನ ದುಷ್ಟತನ ಕನ್ಯಾಕುಮಾರಿ, ರಾಮೇಶ್ವರ ಸಂದರ್ಶನ (xi). 60 60 61 6.3 6.3 64 65 67 67 68 68 69 70 70 73-86 7.3 7.3 7.3 75 77 78 79 79 80 BT 81 82 82 8.3 6. 7. ರಾಮೇಶ್ವರದಲ್ಲಿ ಚಾತುರ್ಮಾಸ್ಯ ಶ್ರೀರಂಗಾದಿಗಳಲ್ಲಿ ಭಗವದ್ದರ್ಶನ ಮರಳಿ ಪಯಸ್ವಿನೀ ತೀರಕ್ಕೆ ಆರನೆಯ ಸರ್ಗ (1-57) ಸಭೆಯೊಂದರಲ್ಲಿ ಐತರೇಯ ಕಥನ ದಶಪ್ರಮತಿಗಳಿಂದ ವಿಷ್ಣುಸಹಸ್ರನಾಮದ ಶತಾರ್ಥ ಕಥನ ಕೇರಳದ ಪಂಡಿತರ ಪರಾಜಯ ಅಪಾಲಾ ಶಬ್ದದ ಅಪೂರ್ವಾರ್ಥ ಶ್ರೀ ಪೂರ್ಣ ಪ್ರಜ್ಞರು ಸರ್ವಜ್ಞರು ದಕ್ಷಿಣ ದಿಗ್ವಿಜಯ ಪರಿಸಮಾಪ್ತಿ ಬ್ರಹ್ಮಸೂತ್ರ ಭಾಷ್ಯ ರಚನೆಯ ಸಂಕಲ್ಪ ಗೀತಾಭಾಷ್ಯ ರಚನೆ ಪ್ರಥಮ ಬದರೀಯಾತ್ರೆ ವೇದವ್ಯಾಸಾನುಗ್ರಹ ಅಲಕನಂದಾ ಸ್ನಾನದ ವೈಖರಿ ಕಾಷ್ಠ ಮೌನ ಪ್ರತ ವೇದದಾರರಿ೦ದ ಉತ್ತರ ಬದರಿಗೆ ಆಹ್ವಾನ ಶ್ರೀ ಮಸಂದೇಶ ಬದರಿಗೆ ತೆರಳುವ ಸೂಚನೆ ಶಿಷ್ಯರ ಆಕ ಸತ್ಯತೀರ್ಥರ ಗುರುಭಕ್ತಿ ಶ್ರೀ ಮಧ್ವಾಚಾರ್ಯರ ಅಪೂರ್ವ ಮಹಿಮೆ ಮಹಾಮಹಿಮರ ಹಿಮಾಲಯ ಸಂಚಾರ ಏಳನೆಯ ಸರ್ಗ (1-59) ಉತ್ತರ ಬದರಿಯಲ್ಲಿ ಶ್ರೀ ಮಧ್ವಾಚಾರ್ಯರು ಶ್ರೀ ವ್ಯಾಸಾಶ್ರಮ ವರ್ಣನ ಶ್ರೀ ಮಧ್ವರ ವ್ಯಾಸಾಶ್ರಮ ಪ್ರವೇಶ, ಶ್ರೀ ಮಧ್ವವರ್ಣನ ಬದರೀ ವೃಕ್ಷವರ್ಣನ ಮುನಿವರ್ಣನ (XIV) 84 84 85 89-103 89 89 91 93 94 94 95 97 97 98 99 100 100 100 101 101 101 102 102 107-121 107 107 108 109 110 8. 9. ಶ್ರೀ ವೇದವ್ಯಾಸ ವರ್ಣನ ಶ್ರೀ ವ್ಯಾಸ ಮಧ್ವ ಸಮಾಗಮ ಎಂಟನೆಯ ಸರ್ಗ (1-54) ಶ್ರೀ ವೇದವ್ಯಾಸರ ಬಳಿ ಶ್ರೀ ಮಧ್ವಾಚಾರ್ಯರ ಶಿಷ್ಯವೃತ್ತಿ ಶ್ರೀ ವೇದವ್ಯಾಸರೊಂದಿಗೆ ನಾರಾಯಣಾಶ್ರಮಕ್ಕೆ ಪ್ರಯಾಣ ಶ್ರೀ ನಾರಾಯಣ ವರ್ಣನ ಮತ್ಸಾದಿ ಭಗವದ್ರೂಪ ವರ್ಣನ ನಾರಾಯಣ ದರ್ಶನ - ಭಾಷ್ಯ ರಚನೆಗೆ ಆಜ್ಞಾ ಸ್ವೀಕಾರ ಒಂಭತ್ತನೆಯ ಸರ್ಗ (1-55) ನಾರಾಯಣಾಶ್ರಮದಿಂದ ವ್ಯಾಸಾಶ್ರಮಕ್ಕೆ ಆಗಮನ ವ್ಯಾಸಾಶ್ರಮದಿಂದ ವಿಶಾಲ ಬದರಿಗೆ ಪ್ರಯಾಣ ಬ್ರಹ್ಮ ಸೂತ್ರ ಭಾಷ್ಯ ರಚನೆ: ಭಾಷ್ಯ ವರ್ಣನೆ ಶ್ರೀ ಸತ್ಯತೀರ್ಥರಿಂದ ಭಾಷ್ಯ ಲೇಖನ ವಿದ್ವತ್ಸಭೆಗೆ ಆಗಮನ ಶೋಭನ ಭಟ್ಟರು ಮಧ್ವ ಶಿಷ್ಯರಾದರು ಶೋಭನ ಭಟ್ಟರಿಂದ ಮಧ್ವಮತ ಪ್ರಸಾರ ರಜತ ಪೀಠಕ್ಕೆ ಪುನರಾಗಮನ ಅಚ್ಯುತಪ್ರೇಕ್ಷರಿಗೆ ಆದ ಆನಂದ ಉಡುಪಿಯಲ್ಲಿ ಶ್ರೀ ಕೃಷ್ಣ ಪ್ರತಿಷ್ಠೆ ಜರಾಘಟಿತನ ಪರಾಭವ ಗುರುಪುತ್ರನಿಂದ ಅಪೂರ್ವ ಯಜ್ಞ ದ್ವಿತೀಯ ಬದರೀ ಯಾತ್ರೆ; ರಜತ ಪೀಠಕ್ಕೆ ಮರಳಿದುದು 10. ಹತ್ತನೆಯ ಸರ್ಗ (1-56) ದ್ವಿತೀಯ ಬದರಿಯಾತ್ರೆಯಲ್ಲಿ ನಡೆದ ಮಹಿಮೆಗಳು ಅಗೆಯಲು ಹೇಳಿ ಅಗೆಯತೊಡಗಿದ ಈಶ್ವರದೇವ ಶಿಷ್ಯರನ್ನು ಗಂಗಾನದಿ ದಾಟಿಸಿದ್ದು, ತುರುಷ್ಕ ರಾಜನ ವಿಸ್ಮಯ ಅನೇಕ ತೆರನಾದ ಚೋರರನ್ನು ಜಯಿಸಿದ್ದು ಶ್ರೀ ಸತ್ಯತೀರ್ಥರ ರಕ್ಷಣೆ (XV) 119 125-138 125 126 127 128 135 141-154 141 141 14.3 144 145 146 148 148 151 152 152 154 157-171 157 158 159 162 162 ನಾರಾಯಣಾಶ್ರಮದಲ್ಲಿ ವ್ಯಾಸಮುಷ್ಟಿಗಳನ್ನು ಸ್ವೀಕರಿಸಿದ್ದು ಭಾರತ ತಾತ್ಪರ್ಯ ನಿರ್ಣಯವನ್ನು ರಚಿಸಲು ವೇದವ್ಯಾಸರ ಆದೇಶ ಮರಳಿ ಗಂಗೆಯನ್ನು ದಾಟಿದ ಮಹಿಮೆ ಹಸ್ತಿನಾಪುರದಲ್ಲಿ ಚಾತುರ್ಮಾಸ್ಯ ಗಂಗೆಯಿಂದಲೂ ಪೂಜಿತರು ದೇಹಬಲದಲ್ಲೂ ಶಿಷ್ಯರನ್ನು ಮೀರಿಸಿದ ಗುರು ಅಮರಾವತಿಯ ಪರಾಭವ ಶ್ರೀ ಮಧ್ವ ವಿಜಯ ಕುರುಕ್ಷೇತ್ರದಲ್ಲಿ ತೋರಿದ ವಿಶೇಷ ಮಹಿಮೆ ವೋಮಕೇಶನಿಂದ ನಡೆದ ಪೂಜೆ ಇಷುಪಾತದಲ್ಲಿ ತೋರಿದ ಮಹಿಮೆ ಗೋವಾದಲ್ಲಿ... ಪಶುಪೆಯಲ್ಲಿ ಸಂಗೀತ ಪ್ರೌಢಿಮೆ ಶ್ರೀ ಮಧ್ವ ವರ್ಣನ ಸರ್ಗೋಪಸಂಹಾರ 11. ಹನ್ನೊಂದನೆಯ ಸರ್ಗ (1-79) ಶೇಷ ಸನಕಾದಿಗಳಿಂದ ಶ್ರೀ ಮಧ್ವ ಭಾಷ್ಯ ಶ್ರವಣ ಶ್ರೀ ಶೇಷದೇವರಿಂದ ಶ್ರೀ ಮಧ್ವಭಾಷ್ಯದ ಫಲಶೃತಿ ವೈಕುಂಠ ವರ್ಣನೆ ಶ್ರೀ ರಮಾದೇವಿಯು ಭಗವಂತನನ್ನು ಸೇವಿಸುವ ಪರಿ ಶ್ರೀ ಹರಿಯ ಅನಂತ ಗುಣಪೂರ್ಣತ್ವ ಮುಕ್ತ ವರ್ಣನೆ ಮುಕ್ತ ಭೋಗ ವರ್ಣನೆ ಮುಕ್ತ ಲೋಕಗತ ಭಗವದ್ರೂಪ ವರ್ಣನೆ ವೈಕುಂಠದ ಹಿರಿಮೆ ಮುಕ್ತಿಗೆ ಸಾಧನ 12. ಹನ್ನೆರಡನೆಯ ಸರ್ಗ (1-54) ಮಾಯಾವಾದಿಗಳಿಗಾದ ವಿಷಾದ ಅವರು ನಡೆಸಿದ ಸಭೆಯ ಪೂರ್ವಾಪರ (XVI) 163 163 163 165 165 166 167 168 169 169 169 170 170 170 171 175-194 175 176 177 179 179 180 184 191 194 194 197-210 197 192 ಶ್ರೀ ಮಧ್ವಾಚಾರ್ಯರ ಅಪೂರ್ವ ವೇದಪಾಠ ಇಂದ್ರಪುರಿಯ ಪರಾಭವ ಪದ್ಮತೀರ್ಥಾದಿಗಳಿಂದ ಮಧ್ವಗ್ರಂಥಗಳ ಅಪಹರಣ ಪದ್ಮತೀರ್ಥಾದಿಗಳ ಪರಾಭವ ಶ್ರೀ ಮಧ್ವಶಿಷ್ಯರು ಹಾಡಿದ ಶ್ರೀ ಮಧ್ವ ಮಹಾತ್ಮ ಪ್ರಾ"ವಾಟದಲ್ಲಿ ಚಾತುರ್ಮಾಸ್ಯ 13. ಹದಿಮೂರನೆಯ ಸರ್ಗ (1-69) ಸಹ್ಯ ಪರ್ವತದಲ್ಲಿ ಆಚಾರ್ಯರು ನೃತ್ಯನ ಮೂಲಕ ಜಯಸಿಂಹ ರಾಜನ ಪ್ರಾರ್ಥನೆ ಜಯಸಿಂಹ ರಾಜನ ಪಟ್ಟಣಕ್ಕೆ ಶ್ರೀ ಮಧ್ವಾಚಾರ್ಯರ ಪ್ರಯಾಣ ಮದನೇಶ್ವರ ದೇವಾಲಯದಲ್ಲಿ ಮುಂದುವರಿದ ಪ್ರಯಾಣ ಜಯಸಿಂಹ ರಾಜನಿಂದ ಸ್ವಾಗತ ಶ್ರೀ ಆಚಾರ್ಯರ ಅಪೂರ್ವ ಆಕೃತಿಯ ವರ್ಣನೆ ಸಭೆಯಲ್ಲಿ ಶ್ರೀ ಮಧ್ವಾಚಾರ್ಯರು ಭಾಗವತ ಪ್ರವಚನ ತ್ರಿವಿಕ್ರಮ ಪಂಡಿತರ ಪೂರ್ವೋತ್ತರ ತ್ರಿವಿಕ್ರಮ ಪಂಡಿತರಿಂದ ಮಧ್ವಗ್ರಂಥಗಳ ಅಧ್ಯಯನ ಶ್ರೀ ಮಧ್ವಾಚಾರ್ಯರ ಬಳಿಗೆ ತ್ರಿವಿಕ್ರಮ ಪಂಡಿತರ ಆಗಮನ 15. ಹದಿನೈದನೆಯ ಸರ್ಗ (1-141) ಅಮರಾಲಯದಲ್ಲಿ ಅಪೂರ್ವ ಭಾಷ್ಯಪನ್ಯಾಸ ತ್ರಿವಿಕ್ರಮ ಪಂಡಿತರಿಂದ ಉಪನ್ಯಾಸ ಶ್ರವಣ ಶ್ರೀಮದಾಚಾರ್ಯರ ಉಪನ್ಯಾಸ ವೈಭವ ಶ್ರೀಮದಾಚಾರ್ಯರ ಉಪದೇಶ ಸಾರ ಶ್ರೀ ತ್ರಿವಿಕ್ರಮ ಪಂಡಿತರ ವಾದಕಥ 204 206 207 208 208 210 14. ಹದಿನಾಲ್ಕನೆಯ ಸರ್ಗ (1-55) 233-246 ಶ್ರೀ ಮಧ್ವಾಚಾರ್ಯರ ಅಪ್ಪಣೆಯಂತೆ ಶಂಕರ ಪಂಡಿತರಿಂದ ಗ್ರಂಥ ಸ್ವೀಕಾರ 233 ಸಭೆಗೆ ತ್ರಿವಿಕ್ರಮ ಪಂಡಿತರ ಆಗಮನ 233 ಶ್ರೀ ಮಧ್ವಾಚಾರ್ಯರ ಆಕ ವರ್ಣನೆ 234 (xvii) 213-230 213 213 213 215 217 218 219 222 223 223 229 230 249-273 249 249 249 250 259 ವಿಕ್ರಮರು ಮಧ್ವಶಿಷ್ಯರಾದದ್ದು ಕ್ರಮ ಪಂಡಿತಕೃತ ಮಧ್ಯಗ್ರಂಥ ವರ್ಣನ ಅನುವ್ಯಾಖ್ಯಾನ ಗ್ರಂಥ ರಚನೆ ನ್ಯಾಯವಿವರಣ ರಚನೆ ಶ್ರೀ ವಿಷ್ಣುತೀರ್ಥರ ಮಹಿಮಾ ವರ್ಣನೆ ಶ್ರೀ ಪದ್ಮನಾಭ ತೀರ್ಥರ ಮಹಿಮೆ ಗೃಹಸ್ಥ ಶಿಷ್ಯರು ಆರ್ಯರು ಮಾಡಿದ ಅನುಗ್ರಹ ಏಕವಾಟದಲ್ಲಿ ಚಾತುರ್ಮಾಸ್ಯ ಶ್ರೀ ಮಧ್ವಶಿಷ್ಯರ ವ ಮಹಿಮ 16. ಹದಿನಾರನೆಯ ಸರ್ಗ (1-58) ಮತ್ತೊಬ್ಬ ಮಧ್ವಶಿಷ್ಯರಿಂದ ಮಹಿಮಾ ವರ್ಣನೆ ಗೋಮತೀ ತೀರದಲ್ಲಿ ವೇದ ಪ್ರಾಮಾಣ್ಯ ಸ್ಥಾಪನೆ ಪಾದದ ಬೆರಳಿನಿಂದ ಪ್ರಕಾಶ ಬಂಡೆಯನ್ನು ಎತ್ತಿರಿಸಿದ ಪ್ರಸಂಗ ಸೂರ್ಯಗ್ರಹಣ ಕಾಲದಲ್ಲಿ ನಡೆದ ಸಮುದ್ರಸ್ನಾನದ ಪ್ರಸಂಗ ಸಮುದ್ರ ತಟಾಕದಂತಾಯಿತು. ಗಂಡವಾಟ ಪರಾಜಯ ವಟುವಿನ ಮೇಲೆ ಕುಳಿತು ಪ್ರದಕ್ಷಿಣೆ ಮಾಡಿದ್ದು ಪೂರ್ವವಾಟ ಪರಾಜಯ ಶಿವಾಗಿ ಮೊದಲಾದವರ ಪರಾಭವ ಪಾರಂತೀ ದೇವಾಲಯದಲ್ಲಿ ತೋರಿದ ಮಹಿಮೆ ಸರಿದಂತರದಲ್ಲಿ ತರಿಸಿದ ಮಳೆ ಗ್ರಾಮಾಧಿಪತಿಯ ಶರಣಾಗತಿ 'ಕೃಷ್ಣಾಮೃತ ಮಹಾರ್ಣವ' ಗ್ರಂಥ ರಚನೆ ಉಜಿರೆಯಲ್ಲಿ ನಡೆದ ವಿಜಯ ಆಚಾರ್ಯರ ಇನ್ನೂ ಕೆಲವಯ ಮಹಿಮೆಗಳು ದೇವತೆಗಳಿಂದಲೂ ಸುಮಧ್ವ ವಿಜಯದ ಗಾನ ರಜತಪೀಠಕ್ಕೆ ದೇವತೆಗಳ ಆಗಮನ ದೇವತೆಗಳಿಂದ ಪುಷ್ಪವೃಷ್ಟಿ (ಗ್ರಂಥೋಪಸಂಹಾರ) 17. ಅನುವಾದಕನ ನುಡಿ (xviii) 260 261 263 264 264 269 271 272 272 273 277-291 277 277 278 278 279 282 28.3 284 284 285 286 286 286 287 287 288 289 290 291 292 ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ ಮೊದಲನೆಯ ಸರ್ಗ ಶ್ರೀ ಗುರುಭ್ಯೋ ನಮಃ ಮೊದಲನೆಯ ಸರ್ಗ ಮಂಗಲಾಚರಣೆ (ನಾರಾಯಣ ವಂದನೆ) ನಮಿಸಿ ಬಾಗುವೆ ನಿನಗೆ, ಶ್ರೀ ನಾರಾಯಣ! ವರಮುಖ್ಯ ಪ್ರಾಣನ ಒಡೆಯನಾಗಿಹೆ ನೀನು ಉದಯರವಿಯಂದದ ಚೆಲುವ ಕಾಂತಿಯ ಹೊತ್ತ ಚೇತನಾಚೇತನದ ಕಾರಣನು ನೀನು ಕಲ್ಯಾಣಗುಣಗಳ ಪ್ರಮುಖ ನೆಲೆ ನೀನು ನಮಿಪೆ ಲಕ್ಷ್ಮೀರಮಣ, ನಮಿಪೆ, ನರಹರಿಯೆ! ಶ್ರೀ ಕೃಷ್ಣವಂದನೆ ನಿತ್ಯ ಸತ್ಯದ ನಿಧಿಯು ವೇದಗಳ ರಾಶಿ ! ಭಾರತೀಯರ ಭಾಗ್ಯ ಗೋವುಗಳ ಸಂಪತ್ತು ಭಯರಹಿತವಾಗಿಹುದು ನಿನ್ನ ರಕ್ಷಣೆಯಿಂದ ದೋಷವರ್ಜಿತವಾಗಿ, ಪರಿಶುದ್ಧ ರೂಪದೊಳು ಶೋಭಿಸುತ್ತಿಹುದಿಂದು ನಿನ್ನ ಕೃಪೆಯಿಂದ ಉದ್ದಂಡ ನಮನವು ಕೃಷ್ಣಭಗವಾನನೇ ! 2 ಮಧ್ವಕೀರ್ತಿಯ ಮಹಿಮೆ ಜಾಜ್ವಲ್ಯ ಪ್ರಭೆಯಿಂದ ಬೆಳಗಿಹುದು ನೋಡಿ ಮೂರ್ಲೋಕದಾಚೆಯೊಳು ಗುರುಮಧ್ವರಾ ಕೀರ್ತಿ ಅಂತರಂಗದಿ ಇರುವ ಅಜ್ಞಾನ ತಿಮಿರವನು ಬಡಿದೋಡಿಸುವೀ ಪ್ರಭೆಯು ರವಿಗಿಂತ ಮಿಗಿಲು ಕರುಣಿಸಲಿ ಎಮಗಿಂದು ಗುರು ಮಧ್ವ ಜ್ಯೋತಿಯು ಪರಿಶುದ್ಧ ಅರಿವಿನ ಒಳಗಣ್ಣ ನೋಟವನು ॥ ೩ ॥ ತ್ರಿವಿಕ್ರಮ ಪಂಡಿತ ವಂದನೆ ಎನ್ನ ಪಿತ ತ್ರಿವಿಕ್ರಮ ಪಂಡಿತರಾ ಮುಖದಿಂದ ಹೊರಹೊಮ್ಮಿದಾ ಕಾವ್ಯ "ತತ್ವ ಪ್ರದೀಪ" ನೀಡುವುದು ಸಜ್ಜನರಿಗಾನಂದವನ್ನು ಆ ನನ್ನ ಜನಕ, ಆ ನನ್ನ ಗುರುವನ್ನು ಮನಸಾರೆ ವಂದಿಸುವೆ ಭಯಭಕ್ತಿಯಿಂದ ಕರುಣಿಸಲಿ ಗುರುವರ್ಯ ಮಂಗಳವನೆಮಗೆಮಂಗಳವೆನಮಗೆ ॥ ೪ ॥ ವಿಷಯ ಪ್ರಯೋಜನಾದಿ ಕಥನ ಗುರುಭಕ್ತಿಯಿಂದಲೇ ಹರಿಭಕ್ತಿ ದೊರೆಯುವುದು. ಹರಿಭಕ್ತಿ ನೀಡುವುದು ಮುಕುತಿಯ ಮುದವ. ಸಕಲ ಜಗಕೆಲ್ಲ ವಾಯುದೇವರೇ ಗುರುವು ಅವರ ಮಹಿಮೆಯ ಅರಿವು ನಮಗಾಗಬೇಕು ಅದಕಾಗಿ ಬಣ್ಣಿಸುವೆ ಅವರ ಲೀಲೆಗಳನ್ನು ವಾಯುದೇವರ ದಿವ್ಯ ಅವತಾರವನ್ನು ॥ ೫ ॥ ಸ್ವಾಹಂಕಾರ ಖಂಡನ ವೇದಮಂತ್ರಗಳಿಂದ ಸ್ತುತ್ಯವಾಗಿರುವುದು. ರುದ್ರೇಂದ್ರ ದೇವಗಣ ಪೊಗಳುವಂತಹುದು. ವಾಯುದೇವರ ಮಹಿಮೆ ಬಣ್ಣನೆಗೆ ನಿಲುಕದು. ಅಂತಹ ಸಾಹಸಕೆ ಹೊರಟಿಹೆನು ನಾನು. ನಾನೊಬ್ಬ ಮಂದಮತಿ, ಭಾಷೆಯಲಿ ಬಡವ ಸದ್ಭಕ್ತರೆಲ್ಲರೂ ಕ್ಷಮೆ ತೋರಿ ಹರಸಿ. ॥ ೬ ॥ ಜಗದೆಲ್ಲ ಕ್ರಿಯೆಗಳಿಗೂ ಪ್ರಾಣದೇವರೆ ಮೂಲ ಎಲ್ಲವೂ ಜರಗುವುವು ಅವರ ಮುಖದಿಂದ ಅಂತಹ ಕ್ರಿಯೆಗಳಲಿ ಯಾವುದದ್ಭುತವೆಂಬ ಪರಿಯಿಲ್ಲ ಆದರೂ ಬಣ್ಣಿಸುವೆ ಅವರ ಚರಿತೆಯನು ಪುಣ್ಯಶ್ಲೋಕರ ಕಥನದಿಂದಾಗುವುದು ಮನಶುದ್ದಿ. ಬಾಳ ಸಾರ್ಥಕ್ಯಕ್ಕೆ ಇದುವೆ ಸಿದ್ಧಿ. ॥ ೭ ॥ ರಚಿಸಲಿರುವೆನು ನಾನು ವಾಯುದೇವರ ಚರಿತೆ ಎಣೆ ಇರದ ರತ್ನಗಳ ಮಾಲೆಯಂತಹ ಚರಿತೆ ಸೂಕ್ಷ್ಮವಲ್ಲವು ಎನ್ನ ಜ್ಞಾನದೃಷ್ಟಿ ಕಥನ ಕ್ಯಾರವು ಸ್ವಲ್ಪ ಕುಂಟಾಗಬಹುದು ಆದರೂ ಎನಗುಂಟು ಅಮಿತ ಉತ್ಸಾಹ ಸಜ್ಜನರು ಮನ್ನಿಸಲಿ ಎನ್ನ ತಪ್ಪುಗಳ ॥ ೮ ॥ ಶ್ರೀ ಹನುಮದವತಾರ ಲೀಲಾ ವರ್ಣನ ಕೇಸರಿ ಎಂಬೊಂದು ವಾನರನ ಪತ್ನಿ ಅಂಜನಾದೇವಿಯಲ್ಲಿ ಜನಿಸಿದನು ಹನುಮ ಶ್ರೀಕಾಂತನಾಣತಿಯ, ದೇವತಾ ಬಿನ್ನಹವ ಮನ್ನಿಸವತರಿಸಿದನು ಶ್ರೀ ಪ್ರಾಣದೇವ ಚೇತನಾ ಜಗದೊಡೆಯ, ಇಂದ್ರಿಯಗಳಭಿಮಾನಿ ದೇವತಾ ಶ್ರೇಷ್ಠ, ಸಜ್ಜನರ ಗಣಕೆಲ್ಲ ಗುರುವರ್ಯ ॥ ೯ ॥ ಜಗದಲ್ಲಿ ಸದ್ಗುಣಗಳನೇಕವುಂಟು ಪ್ರತಿಯೊಂದು ಸದ್ಗುಣವು ವಿಶ್ವದಲ್ಲಿ ಮಾನ್ಯ ಈ ಎಲ್ಲ ಗುಣಗಳಿಗೆ ಹನುಮ ಆದರ್ಶ ಸಕಲ ಸದ್ಗುಣಭರಿತ ಜೀವೋತ್ತಮ! ಜ್ಞಾನ ವಿಜ್ಞಾನಗಳ ಅಪ್ರತಿಮ ಸಂಗಮ ಹನುಮಂತ ನಾಮವಿದು ಅನ್ವರ್ಥವಹುದು ॥ ೧೦ ॥ ಬಾಲಕನು ಹಾರಿದನು ಸೂರ್ಯಮಂಡಲದತ್ತ ತನ್ನ ತೋಳ್ಬಲದಿಂದ ರಾಹುವನೆ ಬಡಿದ ಸುರಪತಿಯ ಆಯುಧಕೂ ಮಣಿಯದಾ ಕಾಯ! ಇಂತಹ ಅದ್ಭುತದ ಕಾರ್ಯಗಳ ನೋಡಿ ದೇವಸಭೆ ಬೆರಗಾಗಿ ಸ್ತುತಿಸಿತ್ತು ಹನುಮನನು ಸುಗ್ರೀವ ಸಖ ಕಂಡ ಲಕ್ಷ್ಮೀಶನನ್ನು ॥ ೧೧ ॥ ಹನುಮನೆರಗಿದನಾಗ ರಾಮನಾ ಪಾದಕ್ಕೆ ತುಂಬು ಭಕ್ತಿಯ ಭಕ್ತ ಆ ರಾಮನ ದೂತ ಭಕ್ತಿ ಭಾವದ ಮುಗ್ಧ ಸಾಕಾರ ಮೂರುತಿಯು ತನ್ನ ಚರಣಾರವಿಂದಗಳಿಗೆರಗಿದುದ ಕಂಡು ಹಿಡಿದೆತ್ತಿ ನಿಲಿಸಿದನು ಶ್ರೀ ರಾಮಚಂದ್ರನು ಕಮಲಗರ್ಭವ ಪೋಲ್ವ ತನ್ನ ತೋಳುಗಳಿಂದ ॥ ೧೨ ॥ ಒಂಟಿ ಸಾಲಲಿ ಬೆಳೆದ ಏಳು ಸಾಲ್ಮರಗಳನು ಒಂಟಿ ಬಾಣದಿ ಹೊಡೆದು ಉರುಳಿಸಿದ ರಾಮ ವಾಲಿಯಂತಹರಿಗೆ ಸಾಧ್ಯವಿರದೀ ಪರಿಯು ! ಇಂದ್ರಸುತ ವಾಲಿಯನು ಸಂಹರಿಸಿದಾ ರಾಮ ಸೂರಸುತ ಸುಗ್ರೀವಗೆ ಮುದವ ನೀಡಿದನು ವಾಯುಸುತ ಹನುಮನನು ತೆಂಕಣಕ್ಕೆ ಕಳುಹಿದನು ॥ ೧೩ ॥ ಅಪ್ರತಿಮ ಗುಣಗ್ರಾಹಿ ಶ್ರೀರಾಮನಂದು ಹನುಮನನು ಕಿವಿಯ ಬಳಿ ಕರೆದು ತಂದು ಸಂದೇಶವನ್ನುಸುರಿ ಬೀಳ್ಕೊಟ್ಟನಂದು ಕಿವಿಯವರೆಗೆಳೆದು ಬಿಟ್ಟ ಬಾಣದ ತೆರದಿ ಶೋಭಿಸಿದ ಹನುಮಂತ, ಉಗ್ರಪ್ರತಾಪಿ ! ರೆಕ್ಕೆಗಳ ಹೊಂದಿದಾ ಅಂಬು ಈ ಹನುಮ ! ॥ ೧೪ ॥ ಹನುಮಂತನೆಂಬೊಂದು ಹೊಸ ಮುಗಿಲು ಬಂದು ಶ್ರೀರಾಮ ಸಂದೇಶ ಜಲವನ್ನು ತಂದು ವೈದೇಹಿಯೆಂಬೊಂದು ಸಸ್ಯವನ್ನು ಕಂಡು ಮುದಗೊಳಿಸಿತಾ ಗಿಡವ ಜಲಧಾರೆ ಎರೆದು ಕಾನನವ ಹೋಲುವಾ ಅಸುರ ನಿಕರವ ಸುಟ್ಟು ಮರಳಿ ತೆರಳಿತು ಸೇರಿ ರಾಮಪದದಾಗಸವ ॥ ೧೫ ॥ ಗರುಡನಂದದಿ ಇವಗೆ ರೆಕ್ಕೆಗಳು ಇಲ್ಲ ಖಗರಾಜನಂತಿವನು ಹಾರಬಲ್ಲವನಲ್ಲ ಹಕ್ಕಿಯಂತಿರದೀತ ಹಾವುಗಳ ಮೆಲ್ಲ ಜಗವನ್ನೇ ಹೊತ್ತಿರುವ ಶ್ರೀರಾಮಚಂದ್ರನನು ಭುಜದಲ್ಲಿ ಕುಳ್ಳಿರಿಸಿ ಆ ಹನುಮದೇವ ಹಾರಿದನು ಭಕ್ತಿಯಲಿ ಆತನನ್ನು ಪೊತ್ತು ॥ ೧೬ ॥ ರಘುವಂಶಕೇತು ಶ್ರೀರಾಮದೇವರು ಹುಬ್ಬುಗಂಟಿಕ್ಕಿದರು ನಸುಕೋಪದಿಂದ ಸಾಗರದ ಸಾಮ್ರಾಟನಂಜಿದನು ಆಗ ಸಿದ್ಧವಾಯಿತು ಸೇತು ಸಾಗರದ ಮಧ್ಯದಲಿ ಲಂಕೆಯ ಕಾಳಗದಿ ಹನುಮದೇವನು ಅಂದು ರಾವಣಗೆ ತಿನಿಸಿದನು ಮುಷ್ಟಿಪ್ರಹಾರ ॥ ೧೭ ॥ ಲಂಕೆಯಲ್ಲಿನ ಯುದ್ಧ ಯಜ್ಞವೊಂದಂತಾಯ್ತು ಪ್ರಜ್ವಲಿಸಿ ಉರಿದಿತ್ತು ರಾಮನೆಂಬಾ ಅಗ್ನಿ ಯಜಮಾನನಾದನು ಸುಗ್ರೀವ ರಾಜ ಋತ್ವಿಜನು ಲಕ್ಷ್ಮಣನು ಪ್ರತಿಪ್ರಸ್ಥಾತೃ! ಯಜ್ಞದಾ ಅಧ್ವರ್ಯು ಹನುಮಂತ ದೇವ! ಇದ ನೋಡಿ, ಕಾಳಗದ ಅಧ್ಯಾತ್ಮ ದೃಷ್ಟಿ! ॥ ೧೮ ॥ ಗಂಧಮಾದನ ಗಿರಿಯು ಮೂಲಿಕೆಗಳಾಗರವು ಅರ್ಧಶತ ಸಾವಿರ ಯೋಜನದ ದೂರದಿಂ ಎತ್ತಿತಂದನು ಹನುಮ ಸಂಜೀವ ಗಿರಿಯನ್ನು ಶ್ರೀರಾಮ ಚಂದ್ರನ ಪೂಜೆಗೋಸುಗ ಆತ ತನ್ನೆರಡು ಕೈಯಲ್ಲಿ ಹೂವನ್ನು ತರುವ ಅದಕಿಂತ ಸುಲಭ ಗಿರಿಯನ್ನು ಹೊರುವುದು ॥ ೧೯ ॥ ಲಂಕೆಯಾ ಕಾಳಗದ ಶ್ರೀರಾಮ ದೇವರು ಸಂಹರಿಸಿ ರಾವಣ ಕುಂಭಕರ್ಣಾದಿಗಳ ಬೆಂಕಿಯಲಿ ಸ್ಪುಟಗೊಂಡ ಕನಕಹಾರದ ತೆರದಿ ಪರಿಶುದ್ಧ ಮಾತೆ ಸೀತೆಯಾ ಜೊತೆಗೆ ಮರಳಿದರು ಮತ್ತೆ ಅಯೋಧ್ಯೆಯೆಡೆಗೆ ಹಿಂಬಾಲಿಸಿದನವರ ಹನುಮಂತ ದೇವ ॥ ೨೦ ॥ ಶ್ರೀರಾಮದೇವರದು ನಸುನಗೆಯ ಮೊಗವಹುದು ನೀಳ ತೋಳುಗಳೆರಡೂ ದಷ್ಟಪುಷ್ಪ ಕಮಲದಂತಿಹವವರ ಎರಡು ಕಣ್ಣುಗಳು ನಡಿಗೆಯ ಗಾಂಭೀರ್ಯ ಗಜರಾಜನಂತಿಹುದು ಜಗಕೆ ಮಂಗಳವೀವ ಈ ದಿವ್ಯ ಕಾಯವನು ಎವೆಯಿಕ್ಕದೇ ನೋಡಿ ಸೇವಿಸಿದ ಹನುಮ ! ॥ ೨೧ ॥ ರಾಜ್ಯಾಭಿಷೇಕವು ಶ್ರೀರಾಮಗಾಯ್ತು ಮನಸೆಳೆವ ರತ್ನದ ಹಾರವೊಂದನು ತೆಗೆದು ವೈದೇಹಿಗಿತ್ತರು ಶ್ರೀರಾಮದೇವರು "ನಮ್ಮ ಮನ ಗೆದ್ದವಗೆ ನೀಡು ಇದನು" ಎಂದು ಬೆಸಗೈದರು ಶ್ರೀರಾಮದೇವರು ಒಡನೆ ಇತ್ತಳು ಸೀತೆ ಹನುಮಗದನು ॥ ೨೨ ॥ ಹನುಮಂತ ಸಲ್ಲಿಸಿದ ಸೇವೆಯನು ಕಂಡು ಸುಪ್ರೀತರಾದರು ಶ್ರೀ ರಾಮದೇವರು ತಮ್ಮ ಹಸ್ತವನವನ ಶಿರದ ಮೇಲಿರಿಸುತ್ತ ಅನುಕಂಪ ದೃಷ್ಟಿಯನು ಅವನೆಡೆಗೆ ಬೀರುತ್ತ ಹಾಲಸವಿಯಂದದ ನುಡಿಗಳನು ನುಡಿದು ಬ್ರಹ್ಮಪದವಿಯನಿತ್ತು ಹರಸಿದರು ಅವನ ॥ ೨೩ ॥ ಹನುಮಂತನಾ ತೆರದಿ ಬೇರೊಬ್ಬರಿಲ್ಲ ರಾಮಚಂದ್ರನಿಗಷ್ಟು ಪ್ರಿಯರು ಮತ್ತಾರಿಲ್ಲ ರಾಮರಾಜ್ಯದಿ ಸಿಗದ ವಸ್ತುವೇ ಇಲ್ಲ ಆದರೂ ಹನುಮಗೆ ರಾಮಸೇವೆಯೆ ಬೆಲ್ಲ ಮತ್ತಾವ ಭೋಗವೂ ಅವಗೆ ಬೇಕಿಲ್ಲ ನಿಜವಾದ ವೈರಾಗ್ಯ ಇದುವೆ ಅಲ್ಲ? ॥ ೨೪ ॥ ಹನುಮಂತ ಸ್ತುತಿಸಿದನು ಶ್ರೀರಾಮನನ್ನು "ನಮಿಪೆ ಶ್ರೀರಾಮ ! ನಮಿಪೆ ಓ ನಾಥ! ನಮನ, ನಮನವು ನಿನಗೆ ಜಾನಕೀ ಕಾಂತ! ಎರಗುವೆನು ನಿನ್ನಯಾ ಚರಣಾರವಿಂದಕ್ಕೆ ವಂದಿಸುವೆ ನಿನಗೆ ಬಾರಿಬಾರಿಗೂ ನಾನು ಹೀಗೆಂದು ಹನುಮಂತ ಸ್ತುತಿಸಿದನು ಸಂತಸದಿ ॥ ೨೫ ॥ ಭೂಲೋಕವನು ಬಿಟ್ಟು ವೈಕುಂತದೆಡೆಗೆ ಮರಳಿದಾ ಭಗವಂತ ಶ್ರೀ ರಾಮಚಂದ್ರ ಅನುಗಾಲ ಪೂಜಿಸಲು ಅನುಕೂಲವಾಗಲು ತನ್ನೊಂದು ರೂಪವನೇ ಹನುಮನ ಬಳಿ ಇಟ್ಟ ವಾನರಾಗ್ರೇಸರ ಹನುಮಂತನಲ್ಲಿ ಶ್ರೀರಾಮನಭಿಮಾನ ಎಷ್ಟೆಂದು ಬಣ್ಣಿಪುದು ? ॥ ೨೬ ॥ ಶ್ರೀರಾಮಚಂದ್ರನ ಕಥೆಯೆಂಬ ಸುಧೆಯನ್ನು ಶ್ರವಣಮನನಾದಿಗಳಿಂದ ಸೇವಿಸುವ ಮಂದಿಗೆ ಸ್ವರೂಪದಾನಂದದಾವಿರ್ಭಾವ ಮೋಕ್ಷಕ್ಕೆ ದಾರಿಯನು ತೋರುವ ಸಾಧನವು ಅಹುದು ಅದರಲ್ಲಿ ಮುಳುಗಿರುವ ಹನುಮಂತ ದೇವನು ಇಂದಿಗೂ ನೆಲೆಸಿಹನು ಕಿಂ ಪುರುಷ ಖಂಡದಲ್ಲಿ ॥ ೨೭ ॥ ಶ್ರೀ ಭೀಮಾವತಾರ ಲೀಲಾ ವರ್ಣನ : ಸಂತುಷ್ಟರಾದರು ಶ್ರೀ ವಾಯುದೇವರು ಸ್ಪರ್ಶಮಾತ್ರದಿ ಅವರು ವರವನೊಂದಿತ್ತರು ಪಾಂಡುರಾಜನ ಪತ್ನಿ ಕುಂತಿಯದ ಪಡೆದಳು ಜನ್ಮವಿತ್ತಳು ಆಕೆ ದಿವ್ಯ ಶಿಶುವೊಂದಕೆ ಭೀಮಸೇನ ಎಂಬ ಹೆಸರಾಯ್ತು ಅದಕ್ಕೆ ವಾಯುವಿನ ಎರಡನೆಯ ಅವತಾರವಾಯಿತು ॥ ೨೮ ॥ ಹಿಂದೊಂದು ಕಾಲದಲಿ ಸುರಪತಿಯು ಒಮ್ಮೆ ಆಯುಧವ ಬೀಸಿದ್ದ ಪರ್ವತದ ಕಡೆಗೆ ಉದುರಿತ್ತು ಆಗ ರೆಕ್ಕೆಗಳು ಮಾತ್ರ ಭೀಮಸೇನನ ಬಲವು ಇದಕಿಂತ ಹೆಚ್ಚು ಬೆದರಿದ್ದ ತಾಯಿಯ ಕೈಯಿಂದ ಜಾರಿದ ಮಗುವಿನ ಸ್ಪರ್ಶಕ್ಕೆ ಪರ್ವತವು ಚೂರಾಯ್ತು ॥ ೨೯ ॥ ಆಟವಾಡಿದ ಭೀಮ ರಾಜಪುತ್ರರ ಕೂಡೆ ಅತ್ಯಲ್ಪ ಸಾಮರ್ಥ್ಯವನ್ನಾತ ತೋರಿದರೂ ಸರಿಸಾಟಿ ಇರದಾಯ್ತು ಸೆಣಸಲವನೊಡನೆ ಬದರಿಕಾಶ್ರಮದಲ್ಲಿ ತನ್ನ ಬಾಲ್ಯದಲಿ ಸಿಂಹಗಳ ಹಿಂಡನ್ನು ಹತಮಾಡಿದಾ ನೆನಪು ಮರುಕಳಿಸಿ ಬಂದಿತ್ತು ಭೀಮಸೇನನಿಗೆ ॥ ೩೦ ॥ ದಾಯಾದಿಗಳವನನ್ನು ಮತ್ಸರದಿ ಕಂಡರು ಅವರು ಉಣಿಸಿದ ವಿಷವು ಸುಲಭದಲಿ ಅರಗಿತ್ತು ವಿಷಸರ್ಪ ಜಂತುಗಳನಪ್ಪಳಿಸಿ ಕೊಂದನವ ಪ್ರಮಾಣ ಕೋಟೆಯಲಿ ಮುಳುಗೆದ್ದು ಬಂದನವ ಜಗಕೆಲ್ಲ ಜೀವವನು ನೀಡುವವ ಆತ ಎಂತಹ ಅದ್ಭುತವು ! ಆತನೀಪರಿಯು ! ೩೧ ॥ ಯೋಗಬಲದಲಿ ತಮ್ಮ ದೇಹವನು ದಹಿಸಿ ಆರ್ಜಿಸಿದ ಧರ್ಮದಿಂ ಕರ್ಮಗಳ ವರ್ಜಿಸಿ ಯೋಗಿಗಳು ಶ್ರೀ ಹರಿಯ ಸಾನ್ನಿಧ್ಯ ಪಡೆವಂತೆ ಅರಗಿನ ಮನೆಯಿಂದ ಸೋದರರ ರಕ್ಷಿಸಿ ಹಿಡಿಂಬನಂತಹ ಅರಿಗಳನು ಸಂಹರಿಸಿ ವ್ಯಾಸರೂಪದಿ ಬಂದ ಶ್ರೀ ಹರಿಯ ಕಂಡ ॥ ೩೨ ॥ ಪರಿಶುದ್ಧ ಮನಸುಳ್ಳ ಆ ಭೀಮಸೇನ ವ್ಯಾಸಮುನಿಗಳ ಕಂಡು ದರುಶನವ ಪಡೆದು ಅರುಹಿದನು ತನ್ನೆಲ್ಲ ಕಾರ್ಯವೈಖರಿಯ ಅರ್ಪಿಸಿದ ತನ್ನೆಲ್ಲ ಪುಣ್ಯ ಕರ್ಮಗಳ ತಾ ಮಾಡಲಿಹ ಎಲ್ಲ ಕಾರ್ಯಗಳನರುಹಿ ಎಲ್ಲವೂ ವ್ಯಾಸರಿಗೆ ಪೂಜೆಯೆಂದರ್ಪಿಸಿದ ॥ ೩೩ ॥ ಬಕವನ್ನು ಸಂಹರಿಪ ರಾಜಹಂಸ ಶೋಭಿಪುದು ರಮಣೀಯ ರೆಕ್ಕೆಯಿಂದ ಅದರಂತೆ ಈ ನಮ್ಮ ಭೀಮಸೇನ ವಿಷ್ಣುಪದದಾಶ್ರಿತನು ಆತನೆಂದೂ ರಾಜಹಂಸನು ರಾಜಹಂಸಿಣಿಯ ಪಡೆವಂತೆ ದ್ರುಪದನಾ ಸುತೆಯನು ಸತಿಯಾಗಿ ಪಡೆದನು ॥ ೩೪ ॥ ಕನ್ನೈದಿಲೆ ಸೊಬಗನ್ನು ಮೀರಿಸುವ ಕಾತಿ ಚಂದಿರನ ಧಿಕ್ಕರಿಪ ತಿಳಿನಗೆಯ ಮೊಗವದು ! ಕಮಲದಂತಿರುವ ಆ ಬೊಗಸೆಗಂಗಳ ಕಾಂತಿ ! ಈ ದಿವ್ಯ ಸೊಬಗುಳ್ಳ ಶ್ರೀ ಕೃಷ್ಣನನ್ನು ಅತಿ ದೀರ್ಘ ಕಾಲದಾ ನಂತರದಿ ಕಂಡು ಆನಂದ ಹೊಂದಿದನು ಆ ಭೀಮಸೇನ ॥ ೩೫ ॥ ಮಹಾಗದೆಯ ಹೊಂದಿದ್ದ ಚಂಡರಣನಾಗಿದ್ದ ಬೃಹದ್ರಥನ ತನಯ ಜರಾಸಂಧನ ಬಳಿಗೆ ಕೃಷ್ಣಾರ್ಜುನರೊಡಗೂಡಿ ತೆರಳಿದನು ಭೀಮ ಭೀಕರದ ಕಾಳಗದಿ ದೈತ್ಯನನು ಸಂಹರಿಸಿ ಕೀಚಕಾದಿಗಳೊಡನೆ ಶೌರ್ಯದಲ್ಲಿ ಸೆಣಸಿ ನೆರವಾದ ಧರ್ಮಜಗೆ ರಾಜಸೂಯದಲಿ ॥ ೩೬ ॥ ದ್ರೌಪದಿಯ ಮುಂಗುರುಳು ಗುಂಗುರಾಗಿಹುದು ಮೃದುವಾದ ಕೂದಲದು ಕಾಳಕಪ್ಪಿನ ಬಣ್ಣ ಕಡುದುಷ್ಟ ದುಶ್ಯಾಸನನದನೆಳೆದ ಪಾಪಿ ವೈರಿಗಳ ತರಿವುದಕೆ ಸಾಧನವು ಎಂಬಂತೆ ದ್ರೌಪದಿಯ ಕೆದರಿದ ಕೇಶರಾಶಿಯ ಭೀಮ ಒಟ್ಟಾಗಿ ಕಟ್ಟಿದನು ಕೃಷ್ಣಸರ್ಪದ ತೆರದಿ ॥ ೩೭ ॥ ಪ್ರಜ್ವಲಿಪ ಕಾಳ್ಗಿಚ್ಚು ವೃಕ್ಷಗಳ ಸುಡುವಂತೆ ವ್ಯಾಘ್ರ ಸಿಂಹಗಳಂಥ ಮೃಗಗಳನು ಕೊಲುವಂತೆ ವೈರಿಸಂಹಾರದ ಉದ್ದೇಶದಿಂದಲಿ ದ್ವೈತ, ಕಾಮ್ಯಕದಲ್ಲಿ ವೃಕೋದರನು ಅಂದು ಅಗ್ನಿಯೋಪಾದಿಯಲಿ ತೇಜದಲಿ ನಿಂದು ನಾಶಮಾಡಿದನವನು ಕಿರ್ಮೀರ ರಕ್ಕಸರ ॥ ೩೮ ॥ ಅತ್ಯಧಿಕ ಭೋಗಗಳ ಲಾಲಸೆಯ ಹೊಂದಿದ್ದ ಅಪ್ರತಿಮ ಶಕ್ತಿ, ಅರುಣಾಕ್ಷದಿಂದ ಗಂಧಮಾದನದಲ್ಲಿ ಎಲ್ಲೆಲ್ಲೂ ಅಲೆದಿದ್ದ ಎರಡು ನಾಲಗೆಯುಳ್ಳ ಮಣಿಮಂತನೆಂಬುವನ ನಾಯಕತ್ವದೊಳಿದ್ದ ಕ್ರೋಧವಶ ದೈತ್ಯರನು ಸಂಹರಿಸಿದನಾ ಭೀಮ ಬಲು ಪರಾಕ್ರಮದಿ ॥ ೩೯ ॥ ಬೂದಿಯಲ್ಲಿ ಮುಸುಕಿದ್ದ ಕೆಂಡದಾ ಉಂಡೆಗಳು ತಂಗಾಳಿ ಬಂದಾಗ ಪ್ರಜ್ವಲಿಸುವಂತೆ ಮಾರುತನ ನೆರವಿನಲಿ ಬಿದಿರುಮಳೆ ಸುಟ್ಟಂತೆ ಗುಟ್ಟಾಗಿ ಅಡಗಿದ್ದ ಅಜ್ಞಾತ ಭೀಮನು ಯಾರಿಗೂ ಸೋಲದ, ಎಲ್ಲರನು ಜಯಿಸಿದ್ದ ಕೀಚಕರ ತಂಡವನು ಕ್ಷಣದಲಿ ಕೊಂದನು ॥ ೪೦ ॥ ಶೋಭಿಸಿದನಾ ಭೀಮ ರಣರಂಗದಲ್ಲಿ ಅಪ್ರತಿಮ ಆಯುಧಗಳ ಧರಿಸಿದವನು ಎಂದಿಗೂ ಕೃಷ್ಣನಿಗೆ ಪ್ರಿಯನಾದ ಅವನು ಶ್ರೀ ಕೃಷ್ಣ ತೋರಿದ ದಾರಿಯಲೆ ನಡೆವವನು ವೀರ ಪಾರ್ಥನ ಸಂಗ ರಣರಂಗದಲಿ ನಿಂದು ಭೀಷ್ಮ ದ್ರೋಣರ ಎದುರು ಜಯವ ಗಳಿಸಿದನು ॥ ೪೧ ॥ ಧೃತರಾಷ್ಟ್ರ ಪುತ್ರರು ಅಪ್ರತಿಮ ವೀರರು ಆದರವರೆಲ್ಲ ಧರ್ಮವನು ತೊರೆದವರು ಬಂಧುಮಿತ್ರರನೆಲ್ಲ ಕಳೆದುಕೊಂಡವರು ಕಡುತೀಕ್ಷ್ಣ ಕೋಪವನು ಪಡೆದುಕೊಂಡವರು ಹಲವಾರು ರೀತಿಯ ಆಯುಧಗಳಿಂದವರ ಸಂಹರಿಸಿ ಶೋಭಿಸಿದ ಭೀಮಸೇನನು ಅಂದು ॥ ೪೨ ॥ ಕಂಗೊಳಿಸಿದನಾ ಭೀಮ ಸೋದರರ ಸಹಿತ ಕೃಷ್ಣನಡಿದಾವರೆಯ ದುಂಬಿಯಂತೆ ದ್ರೌಪದಿಯ ಮುಖದಲ್ಲಿ ಹಂಸದಂತೆ ಪ್ರಜೆಯೆಂಬ ಕಮಲಕ್ಕೆ ಸೂರ್ಯನಂತೆ ಶೋಭಿಸಿದನಾ ಭೀಮ ಅನುಜರಾಗ್ರಜ ಸಹಿತ ಕಂಗೊಳಿಸಿ ಮೆರೆದನು ವಾಯುಪುತ್ರ ॥ ೪೩ ॥ "ಪವಿತ್ರ" ನಾಮಕನು ಭಗವಂತ ಕೃಷ್ಣನ ಸೋದರಿಯ ಮೊಮ್ಮಗನೆ ಪರೀಕ್ಷಿದ್ರಾಜ ರಾಜ್ಯಭಾರವನವಗೆ ವಹಿಸಿ ಹರಸಿದನು ಅಸುರರಲಿ ತುಂಬಿದನು ಸಂತಾಪವನ್ನು ಮೂರುಲೋಕಗಳೊಳಗೆ ಕೀರ್ತಿಯನು ಗಳಿಸಿ ಕೃಷ್ಣನನು ಎದೆದುಂಬಿ ತುಂಬಿ ಮೂಲರೂಪವ ಸೇರ್ದ ॥ ೪೪ ॥ ಮಧ್ವಾವತಾರ ನಿಮಿತ್ತ ವರ್ಣನೆ : ವಿಷ್ಣು ಪದದಾಶ್ರಿತನು ಭೀಮಸೇನ ಘೋರ ಪ್ರಹಾರದಿಂ ವಧಿಸಿದನು ರಾಕ್ಷಸರ ಚಂಚಲ ಪ್ರವೃತ್ತಿಯ ರಾಕ್ಷಸರು ಎಲ್ಲರೂ ಗತಿಸಿದರು ಶೌರ್ಯದ ಕೊರತೆಯಿಂದಾಗಿ ಗಾಳಿಯ ಧಾಳಿಗೆ ಮೋಡ ಚದರುವ ರೀತಿ ಕಾಂತಿಯನು ಕಳಕೊಂಡು ಕಾಣೆಯಾದರು ಕರಗಿ ॥ ೪೫ ॥ ಸಂಕಟಕೆ ಗುರಿಯಾದ ಈ ಅಸುರರೆಲ್ಲ ನಿರ್ವೀರ್ಯರಾದರು ಭೀಮ ಬಲದಿಂದ ಆ ವೀರನೊಡನೆ ಹಗೆಯನ್ನು ಸಾಧಿಸಲು ಕಲಿಯುಗಕೆ ಕಾಲಿಟ್ಟು ಭೂಮಿಯಲಿ ಹುಟ್ಟಿದರು ಬ್ರಹ್ಮನಿರ್ಗುಣನೆಂಬ ದುಷ್ಟತತ್ವವನಿವರು ಹರಡಿದರು ಬುವಿಯಲಿ ಎಲ್ಲ ಕಡೆಯಲೂ ॥ ೪೬ ॥ ಸೌಗಂಧಿಕಾ ಪುಷ್ಪವನು ತರುವಾಗ ಭೀಮ ಮಣಿಮಂತ ಅಸುರನನು ಸಂಹರಿಸಿ ಹೋಗಿದ್ದ ಅವನೀಗ ರುದ್ರನನು ಮೆಚ್ಚಿಸಿದವನಾಗಿ ವಾಗ್ಮಿಯಾಗುವೆನೆಂಬ ಬಯಕೆಯನು ತೋರಿದ್ದ ಅಂಘ್ರಿತಲ ಮನೆತನದಿ ಮತ್ತೊಂದು ಹೆಸರಿಂದ ಜನಿಸಿದನು ಮತ್ತಿತರ ರಾಕ್ಷಸರ ಕೂಡೆ ॥ ೪೭ ॥ ಇಂತೊಂದು ಮಾರ್ಜಾಲ ಕಳ್ಳಮನಸನು ಹೊತ್ತು ಸಾನ್ನಾಯ್ಯ ಎಂಬೊಂದು ಯಜ್ಞಭಾಗವ ಬಯಸಿದಂತೆ ಅಸಾರ ವಸ್ತುವಿಗೆ ಆಸೆ ಪಡುವಾ ಶುನಕ ಪುರೋಡಾಶವೆಂಬುವ ಹವ್ಯ ಬಯಸಿದಂತೆ ಮತಿಹೀನ ಮಂಗವು ರತ್ನಕಾಶಿಸುವಂತೆ ವೇದಾದಿಗಳಿಗೆ ಕೈಯಿಟ್ಟ ಆ ಧೂರ್ತ ಪಾಪಿ ॥ ೪೮ ॥ "ಸನ್ಯಾಸಿಯಾಗದಿರೆ ಜನ ಮಣಿಯರೆನಗೆ" ಹೀಗೆಂದು ಭಾವಿಸಿದ ಆ ದುಷ್ಟ ವಂಚಕನು ಶೀಘ್ರದಲಿ ಸನ್ಯಾಸ ಸ್ವೀಕರಿಸಿ ಬಂದನು ಇದರಿಂದ ಏನಾಯ್ತು ? ಓ ಭಕ್ತ ಜನರೇ ! ತಾವರೆಯ ಹೂವಿನ ತಿಳಿನೀರ ಕೆರೆಯಲ್ಲಿ ಕೆಸರನೆಬ್ಬಿಸಬಂದ ದುಷ್ಟಗಜದಂತಾಯ್ತು ॥ ೪೯ ॥ ಬೌದ್ಧ ಮತವೆಂಬೊಂದು ಮತವಿತ್ತು ಆಗ ವೇದ ಪ್ರಾಮಾಣ್ಯವನದು ಉಪೇಕ್ಷಿಸಿತ್ತು ಆ ಮತದ ಪಕ್ಷವನೇ ಹಿಡಿದಿದ್ದ ಆತ ಆ ಮತವ ಬೆಂಬಲಿಪ ಯೋಜನೆಯ ಹೂಡಿದ್ದ ಅದಕಾಗಿ ಅಂತಹ ಗ್ರಂಥಗಳ ರಚಿಸಿದ ವೇದ ಸತ್ಯವನವನು ನಿರ್ಲಕ್ಷ್ಯದಲ್ಲಿ ಕಂಡ ॥ ೫೦ ॥ " ಅಸತ್" ಎಂಬುದಕೆ "ಸದಸದ್ವಿಲಕ್ಷಣ" "ಸಂವೃತಿ" ಎಂಬುದನು "ಮಾಯೆ" ಎಂದನು ಅವನು "ಶೂನ್ಯ" ತತ್ವಕ್ಕಾಗಿ ಬ್ರಹ್ಮನೇ "ಅಖಂಡ" ನೆಂದ ಬೌದ್ಧ ಮತ ಬೋಧಿಸಿದ ಮುಖ್ಯ ತತ್ವಗಳನ್ನೇ ಪ್ರಚುರಗೊಳಿಸಿದನವನು ವಿರೂಪಗೊಳಿಸಿ "ಪ್ರಚ್ಛನ್ನ ಬೌದ್ಧ" ಹೆಸರಾಯ್ತು ಅವಗೆ ॥ ೫೧ ॥ ಬ್ರಹ್ಮ ಸೂತ್ರಗಳೆಲ್ಲ ಸೂರ್ಯನಂತಿಹವು ವೇದವಾಕ್ಯಗಳಲ್ಲಿ ವಿಷಯವಾಕ್ಯಗಳು ಸಕಲ ತತ್ವಗಳನ್ನು ಕಿರಣಗಳಿಂ ಬೆಳಗುವುವು ಇಂತಹ ಸೂರ್ಯನನು ಅಪಹರಿಸಿದನಾತ ದುಷ್ಟೀಕೆ, ದುರ್ಯುಕ್ತಿ, ದುರ್ಭಾಷ್ಯದಿಂದ ಜ್ಞಾನಿಗಳು ಹೇಳಿದರು "ಇದು ದೊಡ್ಡ ಚೌರ್ಯ" ॥ ೫೨ ॥ ಕ್ಷಮೆಯೆಂಬ ಸಾಗರನು ನಾರಾಯಣ ವ್ಯಾಸರೂಪದೊಳಿರುವ ಸಂಕರ್ಷಣ ಅವ ರಚಿಸಿ ನೀಡಿದ ಬ್ರಹ್ಮ ಸೂತ್ರಕ್ಕೆ ಸಂಕರನ ಮಾತೆಲ್ಲ ತದ್ವಿರುದ್ಧ ಬ್ರಹ್ಮಸೂತ್ರಕ್ಕೆಲ್ಲ ಭಾಷ್ಯಕಾರನು ತಾನು ಎಂದು ನುಡಿದೀತನನು ಸುಡಲಿಲ್ಲ ನಾರಾಯಣ ॥ ೫೩ ॥ ವೇದಗಳು ಪರಿಶುದ್ಧ ಮಣಿಯ ದೀಪಗಳಂತೆ ಅವನ ವಾಗ್ಜಾಲ ಕೆಸರಿನಲಿ ಮರೆಯಾಯ್ತು ಕಾಂತಿ ವೇದಾಂತವರಿಯದ ಜನರ ಮನದಲ್ಲಿ "ಸೃಷ್ಟಿಯಲಿ ಎಲ್ಲೆಲ್ಲೂ ಭೇದವೇ ಇಲ್ಲ" ಎಂಬ ಅವಿಚಾರವನು ಬಿತ್ತಿ ಬೆಳೆದನು ಆತ ಅದರಿಂದ ಆತ ಸಂಕರನೆಂದು ಖ್ಯಾತ ॥ ೫೪ ॥ "ಜಗವೆಲ್ಲ ಮಿಥ್ಯೆ, ಬ್ರಹ್ಮ ನಿರ್ಗುಣನು ಭೇದವಿಲ್ಲವು ಜೀವ, ಪರಮಾತ್ಮರಲ್ಲಿ '' ಎಂಬಂಥ ಮಾತುಗಳ ದೈತ್ಯರೆಲ್ಲೆಡೆಯೂ ಎಡೆಬಿಡದೆ ತೂರಿದರು ಜನರ ಮನದಲ್ಲಿ ಆನಂದ ಮತ್ತಿತರ ಶ್ರೇಷ್ಠ ಗುಣಗಳ ಒಡೆಯ ವಾಸುದೇವ ಮೆಲಮೆಲನೆ ಮರೆಯಾದ ಸಜ್ಜನರ ಮನಸಿಂದ ॥ ೫೫ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಾಚಾರ್ಯರಿಂದ ರಚಿಸಲ್ಪಟ್ಟ ಶ್ರೀ ಸುಮಧ್ವ ವಿಜಯ ಮಹಾಕಾವ್ಯದ ಆನಂದಾಂಕಿತವಾದ ಮೊದಲ ಸರ್ಗದ ಕನ್ನಡ ಪದ್ಯಾನುವಾದವು ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ ಎರಡನೆಯ ಸರ್ಗ ಶ್ರೀ ಗುರುಭ್ಯೋ ನಮಃ ಎರಡನೆಯ ಸರ್ಗ ಶ್ರೀ ನಾರಾಯಣನಲ್ಲಿ ಬ್ರಹ್ಮಾದಿ ದೇವತೆಗಳ ಪ್ರಾರ್ಥನೆ ಕಲಿಕಾಲ ಬಲದಿಂದ, ಭಾರತದ ನೆಲದಿಂದ ವಿಜ್ಞಾನ ಭಾಸ್ಕರನು ಅಸ್ತಮಿಸಿ ಬಿಟ್ಟ ದುರ್ಭಾಷ್ಯ ತಿಮಿರದಲಿ ಕುರುಡರಾದರು ಮಂದಿ ಸರಿದಾರಿ ತೋರದೆ ದುರ್ಮಾರ್ಗ ಹಿಡಿದರು ಬ್ರಹ್ಮದೇವನನು ಮುಂದಿರಿಸಿಕೊಂಡು ವ್ಯಾಕುಲದಿ ಆ ಸುರರು ಹರಿಗೆ ಶರಣಾದರು ॥ ೧ ॥ ಅವತರಿಸಲು ಶ್ರೀ ವಾಯುದೇವರಿಗೆ ಶ್ರೀ ನಾರಾಯಣನ ಆದೇಶ ಶ್ರೀ ಹರಿಗೆ ಹೆಸರುಂಟು ತ್ರಿಯುಗನು ಎಂದು ಕಲಿಯುಗದಿ ಅವತಾರ ಮಾಡನವನು ಬ್ರಹ್ಮದೇವರಿಗಂತೂ ಅವತಾರವೇ ಇಲ್ಲ ಹಾಗಾಗಿ ಮತ್ತಾರಿಗುಂಟು ಈ ಸಾಮರ್ಥ್ಯ ? ಜಗಕೆಲ್ಲ ಜೀವನವ ಕೊಡುವ ವಾಯುವ ಕುರಿತು ಮೆಲು ನಗೆಯ ಸೂಸುತ್ತ ಹರಿಯು ಇಂತೆಂದ ॥ ೨ ॥ "ವೇದಾರ್ಥ ನಿರ್ಣಯದ ಮಾರ್ಗವರಿಯದ ಮಂದಿ ಪರಿತಪಿಸುತಿಹರಿಂದು ದೀನರಾಗಿ ನಮ್ಮ ಕೃಪೆಗರ್ಹರಾಗಿರುವ ಈ ಜನಕೆ ಬೇರಾವ ಗತಿಯು ಇಲ್ಲವಾಗಿದೆ ಇಂದು ಸಿಂಗರಿಸು ಭೂಮಿಯನು ಬೇರೊಂದು ರೂಪದಲಿ ಮುದಗೊಳಿಸು ಭೂಮಿಯ ಸತ್ಕರ್ಮಿಗಳನು ॥ ೩ ॥ ಶ್ರೀ ವಾಯುದೇವರಿಂದ ಭಗವದಾಜ್ಞಾ ಸ್ವೀಕಾರ ಪ್ರಜ್ವಲಿಪ ಬಣ್ಣಗಳ ಮುಕುಟ, ಹರಿಯಾಜ್ಞೆ! ಶಿರದಲ್ಲಿ ಧರಿಸಿದರು ಕೈಯ ಜೋಡಿಸಿಕೊಂಡು ರುದ್ರಾದಿ ದೇವರ ಪ್ರಾರ್ಥನೆಯನವರು ಮುತ್ತ ಮಾಲೆಯ ತೆರದಿ ಹೃದಯದಲಿ ಧರಿಸಿ ಸಜ್ಜನರನುದ್ಧರಿಸಲಾ ವಾಯು ದೇವರು ಭೂಮಿಯೊಳು ಅವತರಿಸಲಿಚ್ಛಿಸಿದರು ॥ ೪ ॥ ಆ ಕಾಲದ ಭೂಲೋಕದ ಸಜ್ಜನರ ಪರಿಸ್ಥಿತಿ ಅವತಾರ ಕಾಲವದು ಸನ್ನಿಹಿತವಾಯ್ತು ಅಂದಿನಾ ಕಾಲದಲಿ ಭೂಲೋಕದಲ್ಲಿ ಬ್ರಹ್ಮ ಮೀಮಾಂಸೆಯ ತತ್ವರಸಸಾರವು ಗೀರ್ವಾಣ ಕಾಲದ ಸತ್ಸ್ಂಪ್ರದಾಯಗಳು ತಿಳಿಯದಾಗಿದೆ ಎಂದು ತತ್ವಚಿಂತಕರು ಪರಿತಪಿಸಿ ಚಿಂತೆಯಲಿ ಮುಳುಗಿದ್ದರು ॥ ೫ ॥ ಶ್ರೀ ಅನಂತಾಸನನಿಂದ ಮಧ್ವಾವತಾರದ ಮುನ್ಸೂಚನೆ ರಜತ ಪೀಠದ ಪುರದ ಅಧಿವಾಸಿಯಂದು ಮುಂಬರುವ ಶುಭವಾರ್ತೆ ಸೂಚಿಸಲು ಎಂದು ಆ ಪುರದ ಜನರನ್ನು ಮುದಗೊಳಿಸಲೆಂದು ಸಕಲ ಸಂಭ್ರಮದಿಂದ ಸಡಗರಗಳಿಂದ ಸಂಕ್ರಮಣ ಉತ್ಸವಕೆ ನೆರೆದಿದ್ದ ಜನರಲ್ಲಿ ಒಬ್ಬನಲಿ ಆವೇಶ ಉಂಟುಮಾಡಿದರು ॥ ೬ ॥ ಶ್ರೀ ಹರಿಯು ಜನರಲ್ಲಿ ನಂಬಿಕೆಯ ಮೂಡಿಸಲು ಆವೇಶ ಹುಟ್ಟಿಸಿದ ಹುಂಬನೊಬ್ಬನಲಿ ಎತ್ತರದ ಕಂಭದ ತುದಿಯನೇರಿದ ಹುಂಬ ರಂಗ ಮಧ್ಯದಿ ಕುಣಿವ ನಟನ ಪರಿಯಲ್ಲಿ ಕುಣಿಯಲಾರಂಭಿಸಿದ ಚತುರ ನಟನಂತೆ ಜನರು ವಿಸ್ಮಯಗೊಂಡು ನೋಡಿದರು ಮಹಿಮೆಯನು ॥ ೭ ॥ ಇಂತು ಆ ಪುರುಷನಲಿ ಆವಿಷ್ಟನಾದ ಭಗವಂತ ತನ್ನೆರಡು ತೋಳುಗಳನೆತ್ತಿ ಏರುಸ್ವರದಲಿ ನುಡಿದ ಜನನಿವಹದತ್ತ "ಜಗದ ಜನಕೆಲ್ಲ ಮಂಗಳವನೀವ ಎಲ್ಲ ತತ್ವವ ಬಲ್ಲ ಸುಜ್ಞಾನಿಯೊಬ್ಬ ಶೀಘ್ರದಲಿ ಇಲ್ಲಿಯೇ ಅವತರಿಸಲಿರುವ ॥ ೮ ॥ ಮಧ್ಯಗೇಹ ಭಟ್ಟರ ಪೂರ್ವೋತ್ತರ ಏಳು ದ್ವೀಪಗಳಿಂದ, ಏಳು ಜಲಧಿಗಳಿಂದ ಕೂಡಿರುವ ನಮ್ಮದೀ ಭೂಮಂಡಲ ಇದರ ಮಧ್ಯದಲಿಹುದು ಜಂಬೂದ್ವೀಪ ಕರ್ಮಬುವಿ ಎನಿಸಿಹುದು ಭರತಖಂಡ ಇಲ್ಲೊಬ್ಬ ಬ್ರಾಹ್ಮಣನು ಕಲಿಯುಗದಿ ಜನಿಸಿಹನು ಮಧ್ಯಗೇಹರ ಕುಲದ ಬ್ರಾಹ್ಮಣೋತ್ತಮನು ॥ ೯ ॥ ಅವರ ಮೂಲಸ್ಥಳ ಆ ಭೂಸುರನ ಮೂಲ, ಶಿವಳ್ಳಿ ಗ್ರಾಮ ಕಂಗೊಳಿಸುತ್ತಿತ್ತು ಆ ಗ್ರಾಮವಂದು ರಜತ ಪೀಠದ ನಾಥ ಅನಂತಾಸನನಿಂದ ವೇದಗಿರಿ ಎಂಬೊಂದು ಬೆಟ್ಟದಿಂದ ಇಲಾವೃತವೆಂಬೊಂದು ಖಂಡದಂತೆ ಮೇರು ಗಿರಿ ರುದ್ರರ ಸಮ್ಮಿಲನದಂತೆ ॥ ೧೦ ॥ ವಾಸಸ್ಥಳ ಪಾಜಕವೆಂಬೊಂದು ದಿವ್ಯಕ್ಷೇತ್ರ ಮೂರು ಕುಲಗಳಿಗೆ ಅದು ಧ್ವಜದ ಪರಿ ಇಹುದು ಭಾರ್ಗವನು ದುರ್ಗೆಯನು ಸ್ಥಾಪಿಸಿದ ಕ್ಷೇತ್ರ ವಿಮಾನಗಿರಿಯಿಂದ ಶೋಭೆ ಪಡೆದಿಹ ಕ್ಷೇತ್ರ ವಿಶ್ವ ಪಾಲಕನಿಂದ ಜಲವ ಗಳಿಸಿದ ಕ್ಷೇತ್ರ ಆ ಬ್ರಾಹ್ಮಣನು ನೆಲೆಸಿದನು ಈ ಕ್ಷೇತ್ರದಲ್ಲಿ ॥ ೧೧ ॥ ವಿವಾಹ ಪುರುಷಾರ್ಥ ಸಾಧನೆಗೆ ಯೋಗ್ಯವಾಗಿರುವ ಯೋಗ್ಯ ಸ್ವರೂಪದಲಿ ಶೋಭಿಸುತ್ತಿರುವ ಶ್ರೇಷ್ಠ ವರ್ಣದಿ ಕೂಡಿ ಕಂಗೊಳಿಸುತಿರುವ ವೇದವಿದ್ಯೆಗಳೆಲ್ಲ ಮೈವೆತ್ತಿದಂತಿರುವ ಶ್ರೇಷ್ಠ ಕನ್ನೆಯನೊಂದ ಬ್ರಾಹ್ಮಣೋತ್ತಮನಿಂದ ಸ್ವೀಕರಿಸಿದನಾ ವಿಪ್ರ, ಶಾಸ್ತ್ರ ವಿಧಿಗಳ ಸಹಿತ ॥ ೧೨ ॥ ದಾಂಪತ್ಯ ಮಧ್ಯಗೇಹದ ಭಟ್ಟ, ಪರಿಶುದ್ಧ ಚಿತ್ತ ನಾನು ನನ್ನದು ಎಂಬ ಅಭಿಮಾನ ರಹಿತ ಆತನಾ ಪತ್ನಿಯು ಪರಮ ನಿರ್ಮಲಳು ಉಪನಿಷತ್ತುಗಳಂತೆ, ಭಕ್ತಿ, ಮುಕ್ತಿಗಳಂತೆ ಮಧ್ವಮುನಿಯಂತಹ ಸಂತತಿಯ ಕೊಡುವಂಥ ಪರಮ ಪತಿವ್ರತೆಯಲ್ಲಿ ರಮಿಸಿದನು ಭಟ್ಟ ॥ ೧೩ ॥ ''ಭಟ್ಟ '' ಶಬ್ದಾರ್ಥ ನಿಜಧರ್ಮರತನಾದ ಧೀರ, ಆ ಬ್ರಾಹ್ಮಣ ತನ್ನ ಕುಲದೇವರಲಿ ಅತಿಯಾದ ಭಕ್ತಿ ಭಾರತ, ಪುರಾಣಗಳ ಮಹಾರಹಸ್ಯಗಳ ಅರಿತಿದ್ದನಾತ ಅತಿ ಗಾಢವಾಗಿ ಸುಜ್ಞಾನ, ವಿನಯದಾ ಪ್ರತಿ ಮೂರ್ತಿಯವನು ಭಯಭಕ್ತಿಯಿಂದವನನ್ನು ಭಟ್ಟ' ನಿವನೆಂದರು ॥ ೧೪ ॥ ರಜತ ಪೀಠದಲ್ಲಿ ನಿತ್ಯ ಪ್ರವಚನ ಸೇವೆ ಕಥನ ಕೌಶಲದಿಂದ, ವಿಷಯ ಪ್ರೌಢಿಮೆಯಿಂದ ಶ್ರೀ ಹರಿಯ ಚಂದದ ಕಥೆಯೆಂಬ ಸುಧೆಯಿಂದ ಜನರ ಶ್ರವಣಾದಿ ಇಂದ್ರಿಯಗಳನಲ್ಲದೆ ರಜತ ಪೀಠಾಪುರದ ಊರ ದೇವರ ಕೂಡೆ ಸೇವೆಗೈಯುತಲಿದ್ದ ದೇವ ಗಣದೆಲ್ಲರ ಕರ್ಣೇಂದ್ರಿಯಗಳನವನು ತಣಿಸುತ್ತಿದ್ದ ॥ ೧೫ ॥ ಮಧ್ಯಗೇಹರ ಜಿಜ್ಞಾಸೆ ಹರಿಕಥಾಮೃತದಿಂದ ಸಂತೃಪ್ತಿ ಪಡೆದರೂ ಬ್ರಹ್ಮ ನಿರ್ಗುಣನೆಂದು ಆಗ್ರಹದಿ ನುಡಿದಿದ್ದ ಮಾಯಾವಾದಿಗಳಿಂದವನು ತಲ್ಲಣಿಸಿ ಹೋದ ಕಾಲಬಲವೂ ಸೇರಿ ಸಂದೇಹ ಹುಟ್ಟಿತು ಬ್ರಹ್ಮ, ಗುಣಪೂರ್ಣನೋ ? ಅಥವ ನಿರ್ಗುಣನೊ ಎಂದು ತೀಕ್ಷ್ಮಮತಿಯಿಂದವನು ಹೀಗೆಂದು ಚಿಂತಿಸಿದ ॥ ೧೬ ॥ ಸತ್ಪುತ್ರನನ್ನು ಹೊಂದಲು ಪರ್ಯಾಲೋಚನೆ "ಪುನ್ನಾಮ ನರಕಕ್ಕೆ ಹೋಗದೇ ಇರುವಂತೆ ಪಿತೃಗಳ ರಕ್ಷಿಪನೇ ಪುತ್ರನೆಂದೆನಿಸುವನು ಪೂರ್ಣನಲ್ಲದ ವ್ಯಕ್ತಿ ಇದಕೆ ಸರಿಯಿಲ್ಲ ಅದಕಾಗಿ ಬೇರೊಬ್ಬ ವಿದ್ಯಾಪ್ರಪೂರ್ಣ ನಿರ್ದೋಷ ಸರ್ವಜ್ಞ ಪರಿಪೂರ್ಣ ಪುತ್ರ ಅಂತಹ ಪುತ್ರನನ್ನು ಪಡೆದೇವು ಹೇಗೆ ? ॥ ೧೭ ॥ ಕರ್ದಮ, ಪರಾಶರ, ಪಾಂಡುರಾಜ ಪೂರ್ವದಲ್ಲಿ ಯಾರನ್ನು ಸೇವಿಸಿದರೋ ಯಾರ ಮಹಿಮೆಯಿಂದವರು ಫಲವ ಗಳಿಸಿದರೋ ಸಕಲ ಸದ್ಗುಣ ಭರಿತ ಸಂತಾನ ಪಡೆದರೋ ಅಂಥ ಸದ್ಗುಣ ಪೂರ್ಣ ಕರುಣಾಮೃತಾಭ್ದಿ ಕುಲದೈವ ಶ್ರೀಹರಿಯ ಶರಣು ಹೊಂದೋಣ " ॥ ೧೮ ॥ ಉಡುಪಿಯಲ್ಲಿ ಹನ್ನೆರಡು ವರ್ಷಗಳ ಸೇವೆ ಹೀಗೆಂದು ಚಿಂತಿಸಿದ ಆ ಮಧ್ಯಗೇಹ ಶುದ್ಧ ಮನವುಳ್ಳವನು, ದೇವರೇ ಬಂಧುವೆಂದರಿತವನು ಇಷ್ಟಾರ್ಥ ಸಿದ್ಧಿಯನ್ನು ನೀಡುವಾ ಸ್ವಾಮಿಯನು ರಜತ ಪೀಠ ಪುರದ ಅಧಿವಾಸಿಯಾತನನು ಪರಮಭಕ್ತಿಯಲವನು ಪತ್ನಿಯ ಸಹಿತ ಹನ್ನೆರಡು ವರ್ಷಗಳು ಸೇವೆ ಮಾಡಿದನು ॥ ೧೯ ॥ ಶ್ರೀ ಹರಿಯ ಚರಣವನು ಸೇವಿಸಿದನವನು ಪತ್ನಿ ಸಮೇತ, ಭಯಭಕ್ತಿ ಸಹಿತ ಲಘುವಾಯಿತಿನ್ನಷ್ಟು ಅವನ ಭೋಗಗಳು ನಿಗ್ರಹಿತ ಚಿತ್ತವನು ಮತ್ತಷ್ಟು ನಿಗ್ರಹಿಸಿ ಪರಿಶುದ್ಧ ದೇಹವನು ಮತ್ತಷ್ಟು ಶುಚಿಗೊಳಿಸಿ ಉತ್ತಮೋತ್ತಮವಾದ ಸೇವೆಯನು ಸಲಿಸಿದನು ॥ ೨೦ ॥ ಸಕಲ ಗುಣ ಸಂಪನ್ನನೆನ್ನಿಸುವ ಮಗುವನ್ನು ಪಡೆಯಲಿಚ್ಛಿಸಿದ ಆ ದಂಪತಿಗಳಿಬ್ಬರೂ ಪಯೋವ್ರತ ಮುಂತಾದ ವಿವಿಧ ವ್ರತಗಳನು ಶ್ರದ್ಧೆಯಿಂ ನಡೆಸಿದರು ಅದಿತಿ ಕಶ್ಯಪರಂತೆ ದೇವಾಧಿದೇವನನು ವಿವಿಧ ಪೂಜೆಗಳಿಂದ ಸಂತೃಪ್ತಿಗೊಳಿಸಿದರು ಭಕ್ತಿ ನಿಷ್ಠೆಗಳಿಂದ ॥ ೨೧ ॥ ಸಂತುಷ್ಟನಾದನು ಆ ಸ್ವಾಮಿ ಇದರಿಂದ ಕರುಣಸುಧೆಯಿಂದವರ ಅಭಿಷೇಕ ಮಾಡಿದನು ಸಿರಿದೇವಿ ಶ್ರೀರಮಣ ಸನ್ನಿಧಾನದಿ ಅವರು ಬೆಳಗಿದರು ಅಪ್ರತಿಮ ದೇಹ ಕಾಂತಿಯೊಳು ವಿಧವಿಧದ ಉಪವಾಸ ವ್ರತಗಳಿಂದಾಗಿ ಮಿಗಿಲಾದ ಶುದ್ಧಿಯೂ ಅವರದಾಯ್ತು ॥ ೨೨ ॥ ಮಧ್ಯಗೇಹರ ಪತ್ನಿಗೆ ಗರ್ಭಾಂಕುರ ಶುಕ್ಲ ಪಕ್ಷದೊಳೊಂದು ಪರಿಶುಭ್ರ ರಾತ್ರಿಯು ಕತ್ತಲೆಯ ಕಿತ್ತೊಗೆವ ಚಂದ್ರಮನ ಪಡೆವಂತೆ ಆಸೆ ಪಲ್ಲವಿಸಿದಾ ಮಧ್ಯಗೇಹರ ಪತ್ನಿ ಶುಭ್ರವಸ್ತ್ರವ ಧರಿಸಿ, ಸೂಕ್ತ ಋತುಕಾಲದಲಿ ಅಜ್ಞಾನ ತಿಮಿರವನು ಕಳೆವಂಥ ಗರ್ಭವನು ಪತಿಯಿಂದ ಪಡೆದಳು ಜಗದ ಹಿತಕಾಗಿ ॥ ೨೩ ॥ ಶ್ರೀ ಮಧ್ವಾವತಾರ ವೃದ್ಧಿಯಾಯಿತು ಗರ್ಭ, ಶುಕ್ಲಚಂದ್ರನ ತೆರದಿ ಪ್ರಸವಕಾಲವು ಅಂದು ಸನಿಹವಾದಾಗ ಧರೆಗಿಳಿದು ಬಂದರು, ಶ್ರೀ ವಾಯುದೇವರು ಶ್ರೀ ಹರಿಯ ಆಣತಿಯ ಶಿರದಲ್ಲಿ ಧರಿಸಿ ಉಡುಪಿಯಲ್ಲಿನ ಊರ ದೇವರಿಗೆ ನಮಿಸಿ ತೆರಳಿದರು ಭಟ್ಟನ ಮನೆಯತ್ತಲವರು ॥ ೨೪ ॥ ಸಕಲ ಸಲ್ಲಕ್ಷಣದಿ ಶೋಭಿಸುವ ಪುರವನ್ನು ಪರಮಸುಂದರವಾದ ಪುರದ ಮಂದಿರವನ್ನು ರಾಜ ಅರಿಯನ್ನು ಹೊಡೆದಟ್ಟಿ ಹೊಗುವಂತೆ ಶ್ರೀ ಹರಿಯ ಸುಂದರ ಮಂದಿರವ ಹೋಲುವ ಗರ್ಭವನು ಹೊಕ್ಕರು ಶ್ರೀ ವಾಯುದೇವರು ಆಗಲೇ ನೆಲೆಸಿದ್ದ ಜೀವನನು ಹೊಡೆದಟ್ಟಿ ॥ ೨೫ ॥ "ಬುವಿಯಲ್ಲಿ ಅವತರಿಸಿ ಬಿಟ್ಟಿಹರು ಇಂದು ವಾಯುದೇವರ ಭವ್ಯ ಅವತಾರವಾಗಿಹುದು ಮುದಗೊಳಲಿ ಸಜ್ಜನರು, ದುಃಖಸಲಿ ದುರ್ಜನರು " ಹೀಗೆಂದು ಸಾರುವುದೋ ಎಂಬಂಥ ಧ್ವನಿಯಿಂದ ದೇವ ದುಂದುಭಿಗಳೆಲ್ಲ ಮೊಳಗಿದಾಗ ಆ ಧ್ವನಿಯು ಮಾನವರ ಕಿವಿಗಳಿಗೂ ಬಿತ್ತು ॥ ೨೬ ॥ ಅನಂತಾಸನನನ್ನು ಆರಾಧಿಸಿದ ಬಳಿಕ ಮನೆಗೆ ಮರಳುತ್ತಿದ್ದ ಮಧ್ಯಗೇಹರು ಅಂದು ಕೇಳಿದರು ದುಂದುಭಿಯ ಧ್ವನಿಯನ್ನು ಆಗ ಪುತ್ರೋತ್ಸವದ ಸಂಗತಿಯ ಆಗಲೇ ಅರಿತವರು ನಲಿದಾಡಿ ಹೋದರು ಆನಂದದಿಂದ ಪರೋಕ್ಷಜ್ಞಾನವೂ ಇಷ್ಟಸಾಧನವೆಂದು ಅರಿತರವರಾಗ ॥ ೨೭ ॥ ಜಾತಕರ್ಮಾದಿ ಬಳಿಕ ಪೊಕ್ಕರು ತಮ್ಮ ಮನೆಯನ್ನು ಅವರು ಚಂದ್ರನಂದದ ಮುಖದ ಶಿಶುವನ್ನು ಕಂಡರು ಹರಿಯ ಕರುಣೆಯು ತಮಗೆ ಇಂದಾಯಿತೆಂದು ನಲಿನಲಿದು ದೇವರನು ಪಾಡಿ ಪೊಗಳಿದರು ಸದ್ಗುಣದ ಖನಿಯಾದ ಆ ಶಿಶುವಿಗವರು ಜಾತಕರ್ಮಾದಿ ಕ್ರಿಯೆಯ ಸಾಂಗಗೊಳಿಸಿದರು ॥ ೨೮ ॥ ನಾಮಕರಣ ಮಧ್ಯಗೇಹರು ತಮ್ಮ ಮಗುವಿಗಂದು "ವಾಸುದೇವ " ಎಂಬ ಹೆಸರನ್ನು ಕೊಟ್ಟರು ಜ್ಞಾನದಾಯಕನಾದ ಮುಖ್ಯಪ್ರಾಣನೆ ಇವನು ಇದರಿಂದ ಈ ಹೆಸರು ಅನ್ವರ್ಥವಾಯಿತು ವಾಸುದೇವನ ಪದದ ಸುಖವ ಪಡೆವವಗೆ ಹೆಸರು ಸರಿಯಾಯ್ತೆಂದು ಸುರರು ಕೊಂಡಾಡಿದರು ॥ ೨೯ ॥ ಪೂರ್ವಾಲಯರು ಮಾಡಿದ ಅಪೂರ್ವ ಸೇವೆ ಮೂಡಿಲ್ಲಾಯ ಎಂಬೊಬ್ಬ ಪರಮ ಧಾರ್ಮಿಕನು "ಶಿಶುವ ಹಾಲಿಗೆ" ಎಂದು ಗೋವ ನೀಡಿದನೊಂದ ನಂತರದ ಜನ್ಮದಲಿ ಆ ಪರಮ ದಾನಿಯು ಜನಿಸಿ ಬಂದನು ತನ್ನ ಮಗನಿಗೇ ಮಗನಾಗಿ ಉದ್ಧಾರ ಪಡೆದನು ಶಾಸ್ತ್ರಂಗಳಿಂದ ದಾನ ಪಡೆವನ ಗುಣದಿಂ ದಾನಫಲವಲ್ಲವೆ ? ॥ ೩೦ ॥ ಭೂತನಿಗ್ರಹ ಪ್ರಸಂಗ ಅಂಜಿಕೆಯನೇ ಅರಿಯದ ಅಪರೂಪದಾ ಶಿಶುವು ! ಅರಳಿರುವ ಕಣ್ಣುಗಳು ತುಂಬು ಕಾಂತಿಯವು ! ಅತ್ಯಂತ ದುರ್ಲಭದ ಅಂಥ ಶಿಶುರತ್ನವನು ಮಧ್ಯಗೇಹರು ಒಯ್ದು ಕುಲದೇವರೆಡೆಗೆ ಅರ್ಪಿಸಿದರಾ ಶಿಶುವ ಸ್ವಾಮಿಪಾದದ ಅಡಿಗೆ ಶ್ರೀ ಹರಿಯ ಸನ್ನಿಧಿಗೆ ವಾಯುದೇವರ ಕೊಡುಗೆ ॥ ೩೧ ॥ ರಜತ ಪೀಠಾ ಪುರದ ಅಧಿವಾಸಿ ಹರಿಗೆ ನಮಿಸಿದರು ಮಧ್ಯಗೇಹರು ಭಕ್ತಿಯಲಿ ಅಂದು ಪ್ರಾರ್ಥನೆಯ ಗೈದರು ಭಯ ಭಕ್ತಿಯಿಂದ ಬಾಲಕಗೆ ಸಂಪದವು ಲಭಿಸಲೆಂದು ಪರಿವಾರ ಜನರೊಡನೆ ಶಿಶುವ ಕೈಯಲಿ ಹೊತ್ತು ತೆರಳಿದರು ಪಾಜಕಕೆ ನಡುರಾತ್ರಿಯಲ್ಲೇ ॥ ೩೨ ॥ ನಡುರಾತ್ರಿಯಲ್ಲವರು ದಾರಿಯನು ಸವೆಸಿದರು ದಟ್ಟ ಕಾನನದಲ್ಲಿ ಭೂತವೊಂದಾಗ / ಪೀಡಿಸಿತು ಪರಿವಾರದೋರ್ವನನ್ನು ಕಾರಿರುಳ ಮಧ್ಯದಲ್ಲಿ ರಕ್ತಕಾರಿದನವನು ಅದ ನೋಡಿ ಹೀಗೆಂದ ಪರಿವಾರದಲ್ಲೊಬ್ಬ "ಭೂತ ಪೀಡಿಸಲಿಲ್ಲ ಮಗುವನ್ನು ಏಕೋ ?" ॥ ೩೩ ॥ ಭೂತಪೀಡಿತನಲ್ಲಿ ವ್ಯಕ್ತವಾಯಿತು ಭೂತ ಆವಿಷ್ಟನಾದವನು ಎದ್ದು ಕೂತೆಂದ "ಈ ಕಾನನದಿ ನಾನೀಗ ವಿಹರಿಸುತ್ತಿಹೆನು ಅರ್ಧ ರಾತ್ರಿಯೊಳಿಲ್ಲಿ ನೀವೇಕೆ ಬಂದಿರಿ ? ಸಂಹರಿಸಿ ಬಿಡುತ್ತಿದ್ದೆ ನಿಮ್ಮೆಲ್ಲರನ್ನೂ ರಕ್ಷಣೆಯ ನೀಡಿದನು ಶಿಶುವಿವನು ಲೋಕೇಶ " ॥ ೩೪ ॥ ಹುರುಳಿ ತಿಂದ ಪ್ರಸಂಗ ತಾಯಿ ಇನ್ನೊಂದೆಡೆಗೆ ಹೋಗಬೇಕಾಯ್ತೊಮ್ಮೆ ಸ್ತನಪಾನ ಸಾಕಷ್ಟು ಕುಡಿಸಿ ಆ ಮಗುವಿಗೆ ತನ್ನ ಪುತ್ರಿಯ ಕೈಗೆ ಶಿಶುವನೊಪ್ಪಿಸಿದಾಕೆ ಮಗುವ ಜಾಗ್ರತೆಯಿಂದ ನೋಡಿಕೊಳ್ಳೆಂದಳು ಜಗವ ಸಲಹುವ ಮಗನ ಮಗಳು ಸಲಹುವಳೆ? ಮೂಢನಂಬಿಕೆಯಾಯ್ತು ಮುಗ್ಧತಾಯಿಯದು ॥ ೩೫ ॥ ತಾಯಿ ಮರೆಯಾದ ತಕ್ಷಣವೇ ಮಗುವು ಅಳುವ ಪ್ರಾರಂಭಿಸಿತು ಮತ್ತೆ ಮತ್ತೆ ಮುಗುದೆ ಆ ಬಾಲಕಿ ಮಾಡಿಯಾಳೇನು ? ಆಸ್ಪಷ್ಟ ನುಡಿಯಿಂದ ರಮಿಸಿದಳು ಶಿಶುವ "ಅಳಬೇಡ, ಅಳಬೇಡ ಕಂದಯ್ಯ ನೀನು ಬೇಕಾದುದೆಲವನು ತಾಯಿ ತರಲಿಹಳು " ॥ ೩೬ ॥ ಮಗುವಿನಾ ಅಳುವೇನೂ ಹೆಚ್ಚುತ್ತ ಹೋಯಿತು ತಾಯ ಬರುವಿಕೆಯ ಸೂಚನೆಯೇ ಇಲ್ಲ ವ್ಯಥೆಗೊಂಡಳಾ ಬಾಲೆ ದಾರಿಗಾಣದೆ ಹೋಗಿ ತಾಯಿ ಬರುವಲ್ಲಿ ಏಕಿಂತು ತಡವೋ! ಎಂದು ಚಿಂತಿಸಿದಳು ಶಿಶುವನ್ನು ಕೈಯಲ್ಲಿ ಎತ್ತಿಕೊಂಡಾ ಬಾಲೆ ತಾಯ ಬರವನೇ ಎದುರು ನೋಡಿದಳು ॥ ೩೭ ॥ ತಾಯ ಹಾದಿಯ ನೋಡಿ ಬೇಸತ್ತ ಕನ್ಯೆ ಮುಂದೇನು ಮಾಡಲೂ ಅರಿಯದಾದಾಗ ಕ್ಷುದ್ಬಾಧೆಯಿರಬಹುದೆಂದು ಶಂಕೆ ತಾಳಿದಳು ಉಷ್ಣರೋಗವು ಶಿಶುವ ಕಾಡಬಹುದೆಂದಂಜಿ ತಣ್ಣನೆಯ ಹಾಲನ್ನೇ ಊಡುತಿದ್ದಳು ತಾಯಿ ದಿಕ್ಕುತೋರದ ಬಾಲೆ, ಬೆಂದ ಹುರುಳಿಯನುಣಿಸಿ, ಶಿಶುವ ರಮಿಸಿದಳು ॥ ೩೮ ॥ ಇತ್ತ ಆ ತಾಯಿಯು ಬಲು ವ್ಯಸನಗೊಡಳು ಹಾಲ ಮನಸಿನ ಮಗುವು ರೋದಿಸುತ್ತಿರಬೇಕು ಪರರ ಕೆಲಸಗಳಲ್ಲಿ ಆಸಕ್ತಿ ತೋರಿ ಮಗುವನ್ನುಮರೆತ ಎನಗೆ ಧಿಕ್ಕಾರವಿರಲಿ ಮನೆಯೆಡೆಗೆ ಲಗುಬಗನೆ ಮರಳಿದಳು ವನಿತೆ ಹೊಟ್ಟೆ ತುಂಬಿದ ಮಗುವ ಕಂಡು ನಲಿದಾಡಿದಳು ॥ ೩೯ ॥ ಜರುಗಿದ ಸಂಗತಿಯ ಅರುಹಿದಳು ಮಗಳು ಏರುಜವ್ವನಿಗರಿಗೂ ಪಚನವಾಗದ ಹುರುಳಿ ಹಸುಗೂಸಿಗಿನ್ನೆಂಥ ಆಪತ್ತು ತರುವುದೋ ? ಮಗು ಪಡುವ ಬವಣೆಯನು ನೆನೆದು ಹಲುಬಿದಳು ಪರಿಪರಿಯ ರೀತಿಯಲಿ ಮಗಳ ತೆಗಳಿದಳು ಮುಂಬರುವ ಘಟನೆಯನು ಕುರಿತು ಪರಿತಪಿಸಿದಳು ॥ ೪೦ ॥ ಮಗುವಿನಾ ಆರೋಗ್ಯ ಕಿಂಚಿತ್ತು ಕೆಡಲಿಲ್ಲ ಇದ ಕಂಡ ತಾಯಿಗೆ ಎಲ್ಲಿಲ್ಲದಚ್ಚರಿ! ಸಾಗರದ ಮಥನದ ಕಾಲದಲಿ ಈ "ಶಿಶುವು " ಕಾಲಕೂಟದ ವಿಷವ ಸುಲಭದಲಿ ಕುಡಿದಿತ್ತು ಮೂರುಲೋಕದ ತಾಯಿ ಶ್ರೀ ಹರಿಯ ರಾಣಿ ಅಚ್ಚರಿಯ ಪಡಲಿಲ್ಲ "ಮಗುವ " ಸಾಹಸ ಕಂಡು ॥ ೪೧ ॥ ಶಿಶುವನ್ನು ತೊಡೆಯ ಮೇಲಿರಿಸಿಕೊಂಡಾ ತಂದೆ ಪರಿಪರಿಯ ಮಂತ್ರಗಳ ಜಪಿಸತೊಡಗಿದರು ಆನಂದದಲಿ ತಾಯಿ ಸ್ತನವನೂಡಿಸಿದಳು ಇದನು ಕೇಳಿದ ಇತರ ಜನರು ಎಲ್ಲರಿಗೂ ಆನಂದ, ಆಹ್ಲಾದ, ಸಂತಸವು ಉಂಟಾಯ್ತು ಮಗುವ ಮೆಲುನಗೆಯ ಅಮೃತವ ಸವಿದರು ॥ ೪೨ ॥ ವಾಣೀಪತಿಯ ತೊದಲ್ನುಡಿ ವಾಸುದೇವನು ಎಂದು ನುಡಿಯತೊಡಗುವನೆಂದು ಕಾತುರದಿ ಕಾದಿತ್ತು ದೇವವೃಂದವು ಅಂದು ಭಾರತಿಗೆ ಪತಿಯ ನಾಲಿಗೆಯೊಳಿರಲು ನಾಚಿಕೆಯೋ ಎಂಬಂತೆ ಬ್ರಹ್ಮ ಸಭೆಯಲಿ ವಾಣಿ, ಲಜ್ಜೆಯಿಂದಲಿ ತಾನು ತೆರೆಯ ಮರೆಯಿಂದ ಮೆಲಮೆಲನೆ ಬರುವಂತೆ ಮಗುವು ರಂಜಿಸಿತು ತನ್ನ ತೊದಲುನುಡಿಯಿಂದ ॥ ೪೩ ॥ ಜಗಚ್ಚೇಷ್ಟಕನು ಅಂಬೆಗಾಲಿಟ್ಟದ್ದು ಅಂಬೆಗಾಲಿಕ್ಕುತ್ತ ಮೊದಮೊದಲು ನಡೆದು ಸಾವಧಾನದಿ ಎದ್ದು ತೊಡರುತ್ತ ನಿಲುವುದು ತೊಡರು ಹೆಜ್ಜೆಗಳಿಂದ ಎಡವುತ್ತ ನಡೆಯುವುದು ಇಂಥ ಆಟಗಳಿಂದ ವಾಸುದೇವನು ನಲಿದ ಜಗದೆಲ್ಲ ಕಾರ್ಯಗಳೂ ಯಾರಿಂದ ನಡೆಯುವುದೋ ಅವನ ಆ ಲೀಲೆಗಳು ಎಂತಹ ಚೋದ್ಯ ! ॥ ೪೪ ॥ ಎತ್ತಿನ ಬಾಲ ಹಿಡಿದು ಕಾಡಿಗೆ ತೆರಳಿದ ಪ್ರಸಂಗ ಒಂದು ದಿನ ಮುಂಜಾನೆ ಹಟ್ಟಿಯಲ್ಲಿನ ಎತ್ತು ಕಾಡಲ್ಲಿ ಬಗೆಬಗೆಯ ಮೇವನರಸುತ ಹೊರಟು ಮನೆಯಿಂದ ಸಾಗಿತ್ತು ಬಲು ದೂರ ದೂರ ತನ್ನ ಮನ ಗೆದ್ದಿದ್ದ ಬಸವ ಬಾಲವ ಹಿಡಿದು ಹಟ್ಟಿಯನು ಹಿಂದಿಟ್ಟು ಪುಟ್ಟನೂ ಹೊರಟ ಅವನ ಕಾಣದ ಜನರು ಕಂಗೆಟ್ಟು ಹೋದರು ॥ ೪೫ ॥ ಉದ್ದನೆಯ ಕೋಡುಗಳ ಭವ್ಯ ವೃಷಭ ! ತನ್ನ ಪಾದಗಳಿಂದ ಭೂತಲವನಾವರಿಸಿ ಶ್ರೇಷ್ಠತಮ ಒಂಭತ್ತು ದ್ವಾರದಿಂ ಶೋಭಿಸಿದ ಭವ್ಯತೆಯೆ ಮೈವೆತ್ತಿ ಬಂದಂಥ ವೃಷಭ! ಅದರ ಬಾಲವ ಹಿಡಿದು ಹೊರಟಿದ್ದ ಬಾಲ ಉದಯಗಿರಿಯಾಶ್ರಿತ ರವಿಯಂತೆ ಶೋಭಿಸಿದ ॥ ೪೬ ॥ ಎಲ್ಲಿ ಹೋದನು ಬಾಲ? ಎಲ್ಲೆಲ್ಲಿ ಹುಡುಕಿದರೂ ಇಲ್ಲವಲ್ಲ ? ಸುಳ್ಳು ಆಟವ ಕಟ್ಟಿ ಮನೆಯಲ್ಲೆ ಅಡಗಿಹನೊ ? ಸ್ವಚ್ಛಂದ ಆಟದಲಿ ಬಾವಿಯಲಿ ಬಿದ್ದನೋ ? ಪರಿಪರಿಯ ಚಿಂತೆಯಲಿ ಮುಳುಗಿದ ಬಂಧುಗಳು ಹುಡುಕಿದರು ಮಗುವನ್ನು ಮೂಲೆ ಮೂಲೆಗಳಲ್ಲಿ ಕಾಣದಾ ಬಾಲನನು ಕುರಿತು ಪರಿತಪಿಸಿದರು ॥ ೪೭ ॥ ಕಾಡಿನಿಂದಲಿ ಬಂದ ಗೋಪಾಲ ಹೇಳಿದನು "ಮಗುವ ಕಂಡೆನು ಸ್ವಾಮಿ, ಕಾಡಿನಲ್ಲಿ ಎತ್ತ ಬಾಲವ ಹಿಡಿದು ಓಡಿತ್ತು ಮಗುವು " ನಂಬದಾದರು ಜನ ಈ ಮಾತ ಕೇಳಿ ಸಂಜೆ ಮರಳಿತು ಮಗುವು ಎತ್ತಿನ ಹಿಂದೆ ! ಬೆರಗಾಗಿ ನೋಡಿದರು ಊರ ಜನರೆಲ್ಲ ॥ ೪೮ ॥ ಇಷ್ಟಾರ್ಥವೀಯುವ ಶ್ರೇಷ್ಠ ಚಿಂತಾಮಣಿಯು ಬಡವನೊಬ್ಬನ ಬಳಿಯೆ ಬಂದು ಬಿದ್ದಂತೆ ಶ್ರೀ ಹರಿಯ ಭಕ್ತನಿಗೆ ವೇದಾರ್ಥ ಹೊಳೆದಂತೆ ಕಳೆದು ಹೋದಾ ಮಗುವು ಮರಳಿ ಬಂದದ್ದು ಸಂತಸವ ತಂದಿತು ಬಂಧು ಜನರೆಲ್ಲರಿಗೂ ಊರ ದೇವರ ಕರುಣೆ ತಮಗಾಯಿತೆಂದರು ॥ ೪೯ ॥ ತಂದೆಯ ಸಾಲವನ್ನು ತೀರಿಸಿದ್ದು ವಾಸುದೇವನು ಒಮ್ಮೆ ಆಟವನು ಮುಗಿಸಿ ಭೋಜನಕೆ ಬರಲೆಂದು ತಂದೆಯನು ಕರೆದ ಮಗನ ನೋಡುತ ಭಟ್ಟರುಸುರಿದರು ಕಿವಿಯಲ್ಲಿ "ವೃಷಭವ್ಯಾಪಾರಿಯು ಇಂದು ಬಂದಿಹನು ಅವನ ಹಣ ಕೊಡದಿರೆ ಅವ ಊಟ ಮಾಡನು ಅದರಿಂದ ನಮಗೂ ಊಟವೇ ಇಲ್ಲ" ॥ ೫೦ ॥ ತಂದೆಯಾ ವ್ಯಾಕುಲದ ನುಡಿಗಳನು ಆಲಿಸಿ ಮೆಲುನಗೆಯ ಸೂಸಿದನು ವಾಸುದೇವ ಆಟವಾಡುವ ತನ್ನ ಎಳೆಯ ಕೈಯಿಂದ ಸಾಲಿಗನ ಸಾಲವನು ತೀರಿಸುವ ಪರಿಯಲ್ಲಿ ಬೊಗಸೆಗೈಗಳ ತುಂಬ ಹುಣಿಸೆಬೀಜವ ತುಂಬಿ ನೀಡಲಾ ಧನಿಕನು ಸ್ವೀಕರಿಸಿ ಹರಸಿದನು ॥ ೫೧ ॥ ಕೆಲವು ಕಾಲದ ಬಳಿಕ ಮಧ್ಯಗೇಹರು ಮತ್ತೆ ಧನಿಕನೆಡೆ ತೆರಳಿದರು ಸಾಲ ಹಿಂದಿರುಗಿಸಲು ಅಚ್ಚರಿಯ ತೋರಿದಾ ಧನಿಕನಿಂತೆಂದ "ಹಣವನ್ನು ನಿಮ್ಮ ಮಗ ಕೊಟ್ಟಾಯಿತಾಗಲೇ " ಇಂತು ಈ ಪರಿಯಲಾ ವ್ಯಾಪಾರಿಯು ಮೋಕ್ಷವನು ಗಳಿಸಿದನು ಬೀಜರೂಪದಲಿ ॥ ೫೨ ॥ ಪರಿಪರಿಯ ಇಂತಹ ಬಾಲಲೀಲೆಗಳಿಂದ ವಸುದೇವ ತನಯ ಕೃಷ್ಣನಾ ತೆರದಲಿ ವಾಸುದೇವನು ತೋರ್ದ ಲೀಲಾ ವಿಲಾಸವನು ಜನ ನೋಡಿ ನಲಿದರು ತುಂಬು ಮನದಿಂದ ವಾಯುದೇವರ ರೂಪ ವಾಸುದೇವನದು ಅವನ ಲೀಲೆಗಳೆಲ್ಲ ಕೃಷ್ಣಲೀಲೆಗಳಂತೆ ॥ ೫೩ ॥ ಶ್ರೀ ಹರಿಯ ಭಕ್ತ ಶ್ರೀ ವಾಯುದೇವರು ಅವರಿಂತು ಗುಟ್ಟಿನಲಿ ಬುವಿಯಲ್ಲಿ ಬರಲು ಸಜ್ಜನರ ಮನಸೆಲ್ಲ ಆನಂದ ಪೊಂದಿತು ಮೋಡಗಳ ಮರೆಯಲ್ಲಿ ಸೂರ್ಯನುದಯಿಸಿದರೂ ಜನರ ಮನವೆಂಬ ಕಮಲವರಳುವುದು ಅರಳುವುವು ಜಲಧಿಯಲ್ಲಿ ಕಮಲಪುಷ್ಪಗಳು ॥ ೫೪ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಾಚಾರ್ಯರು ರಚಿಸಿದ ಶ್ರೀ ಸುಮಧ್ವ ವಿಜಯವೆಂಬ ಮಹಾಕಾವ್ಯದ ಆನಂದಾಂಕಿತವಾದ ಎರಡನೆಯ ಸರ್ಗದ ಕನ್ನಡ ಪದ್ಯಾನುವಾದವು ಸಮಾಪ್ತಿ. ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ ಮೂರನೆಯ ಸರ್ಗ ಶ್ರೀ ಗುರುಭ್ಯೋ ನಮ: ಮೂರನೆಯ ಸರ್ಗ ಮೂರು ವರ್ಷದ ಮಗುವಾಗಿ ಲೋಕನಿಯಾಮಕನ ಸಾಹಸ ಮೆಲುನಗೆಯ ಸೂಸುವಾ ಮೊಗವುಳ್ಳ ಮಗುವರು ! ಚಂದಿರನ ಹೋಲುವಾ ಮುಖವುಳ್ಳ ಮಗುವದು! ಅಂಥ ಮಗುವನು ಪಡೆದ ಆ ವಿಪ್ರ ದಂಪತಿಗಳು ಊರಜನರೆಲ್ಲರ ಒಲವನ್ನು ಪಡೆದವರು ಇಂತಿರಲು ಒಮ್ಮೆ, ಬಂಧು ಜನರೊಡನೆ ಸಂಭ್ರಮದಿ ತೆರಳಿದರು ಮದುವೆಗೆಂದು ॥ ೧ ॥ ಬ೦ಧುಗಳ ಆಗಮನ ಮತ್ತೆ ನಿರ್ಗಮನ ಉಪಚರಿಸಿ ಅವರನ್ನು ಕುಳ್ಳಿರಿಸುವುದು ಪರಿಪರಿಯ ಸ೦ಭ್ರಮದಿ ಮುಳುಗಿದ್ದ ತಾಯಿಗೆ ತನ್ನ ಮಗುವಿನ ಬಗ್ಗೆ ಪರಿವೆಯೇ ಇಲ್ಲ ತಾಯ ಗಮನವು ಇತ್ತ ಇರಲಿಲ್ಲವೆಂದು ಮಗುವು ಹೊರಬಿತ್ತು ಮನೆಯಿಂದ ಆಚೆ ॥ ೨ ॥ ದಾರಿಹೋಕರು ಕಂಡು ಒಂಟಿ ಮಗುವನ್ನು ಕನಿಕರಿಸಿ ಮಗುವನ್ನು ಕುರಿತು ಇಂತೆಂದರು "ಎತ್ತ ಹೊರಟಿಹೆ ನೀನು ಒಬ್ಬೊಂಟಿಯಾಗಿ ? ನಿನ್ನವರ ಈ ರೀತಿ ತೊರೆಯುವುದು ತರವಲ್ಲ" ಅದ ಕೇಳಿ ಆ ಮಗುವು ಮಾತನಾಡಲೇ ಇಲ್ಲ ನಿರ್ಭಯದ ಮೆಲುನಗೆಯೇ ಜನರಿಗುತ್ತರವಾಯ್ತು ॥ ೩ ॥ ವಾಸುದೇವನು ಹಾದಿ ತ್ವರೆಯಿಂದ ಕ್ರಮಿಸಿದನು ಕುಡುವೂರು ಎಂಬಲ್ಲಿ ದೇವಸದನಕೆ ಬಂದು ರುದ್ರನೊಳು ನೆಲೆಸಿರುವ ಹರಿಗೆ ನಮಿಸಿದನು ಅಲ್ಲಿಂದ ಶೀಘ್ರದಲಿ ಹೊರ ಹೊರಟ ಬಾಲಕ ತಾಳೆಕುಡೆ ಎಂಬೊಂದು ಹೆಸರಾಂತ ದೇಗುಲದಿ ದೇವಾಧಿದೇವನಿಗೆ ವಂದನೆಯನರ್ಪಿಸಿದ ॥ ೪ ॥ ಜನರ ಮನ, ನಯನಗಳ ಕಮಲಗಳಿಗೆ ಸೂರ್ಯನಾ ಪರಿಯಲ್ಲಿ ಆನಂದವೀಯುವ ವಾಸುದೇವನು ಪಡೆದ ಹರಿಯ ದರ್ಶನವ ಇದರಿಂದ ಪೊಂದಿದ ಸಂತೋಷದಿಂದಾಗಿ ಮತ್ತೊಮ್ಮೆ, ಅರಳಿದ ನಯನಗಳ ಸಹಿತ ಮರಳಿದನು ಆ ಬಾಲ ರಜತಪೀಠಾಪುರಕೆ ॥ ೫ ॥ ಅನಂತಾಸನನನ್ನು ಪೂಜಿಸಿದ ಬಾಲಕ ಪರಿಪರಿಯ ವಿಧದಲ್ಲಿ ,ಏಕಾಗ್ರ ಚಿತ್ತದಲಿ. ಚಕಿತಗೊಂಡರು ಸುರರು, ಭೂಸುರರು ಎಲ್ಲ. ವಾಸುದೇವನು ಸ್ತುತಿಪ ಪರಿಯ ಕಂಡೆಂದರು "ಶ್ರೀಹರಿಗೆ ಸಲ್ಲಿಸಿದ ವಾಯುದೇವರ ನಮನ ಹಲವಾರು ಉತ್ಕೃಷ್ಟ ಅಶ್ವಮೇಧಕೂ ಮಿಗಿಲು" ॥ ೬ ॥ ವಾಯುದೇವರ ಪರಿಯು ಇಂತಲೇ ಇಹುದು ಎಂದೆಂದೂ ಶ್ರೀಹರಿಗೆ ವಂದನೆಯ ಸಲಿಸುವರು ಶ್ರೀ ಹರಿಯನೆಂದೆಂದೂ ಕಾಣುತ್ತಲಿರುವವರು ಎಂದೆಂದೂ ದೇವನನು ಪಾಡಿ ಪೊಗಳುವರು ಹರಿಪೂಜೆಯ ನಿಷ್ಠೆ ಜನ ಅರಿಯಲೆಂದೇ ಈ ಪರಿಯ ವೈಶಿಷ್ಟ್ಯ, ಪೂಜಾ ವಿಶೇಷ ॥ ೭ ॥ ಕಾಣದಾದರು ಮಗನ, ಮಧ್ಯಗೇಹರು ಇತ್ತ ಮಗನ ಮಮತೆಯ ಮೋಹ ಅವರನಾವರಿಸಿತ್ತು ದಾರಿಯಲಿ ನಡೆದರು ಪರಿತಾಪ ಪಡುತ ಹಿಂಬಾಲಿಸಿದರವರು ಮಗುವ ಹೆಜ್ಜೆಯ ಗುರುತ "ಮಗುವ ಕಂಡಿರಾ ನೀವು ?" ಎಂಬ ಪ್ರಶ್ನೆಯ ಹೊತ್ತು ಹೆಜ್ಜೆ ಹೆಜ್ಜೆಗೂ ಅವರು ದಾರಿಗರ ಕೇಳಿದರು. ॥ ೮ ॥ ಮಗುವ ಮುಖವೆಂಬೊಂದು ಕಮಲದ ಪುಷ್ಪವನು ಮಧ್ಯಗೇಹರು ಎಂಬ ದುಂಬಿ ಅರಸಿತ್ತು ಪುರಜನರು ದುಂಬಿಗೆ ಗಾಳಿಯಂತಾದರು ಕಮಲಪುಷ್ಪದ ಇರವು ಅವರಿಂದ ತಿಳಿಯಿತು ಅಂತ್ಯದಲ್ಲಿ ದೊರಕಿತ್ತು ಮಧುಕರನಿಗೆ ನಗೆಯಿಂದ ಅರಳಿದ ಮಗುವ ಮುಖಕಮಲ ॥ ೯ ॥ ಮಗುವ ವಿರಹದ ನೋವು ಕಣ್ಣೀರ ತಂದಿತ್ತು ಅಮಂಗಲವ ಸಾರುವ ದುಃಖಾಶ್ರುವನ್ನು ಮಧ್ಯಗೇಹರು ಒಡನೆ ತೊಡೆದು ಹಾಕಿದರು ಪುತ್ರದರ್ಶನ ಭಾಗ್ಯ ಸಂತಸವ ತಂದಿತ್ತು ಆನಂದಬಾಷ್ಪವನೂ ಅವರು ನಿಗ್ರಹಿಸಿ ವಾಸುದೇವನ ಕುರಿತು ಹೀಗೆಂದರು ॥ ೧೦ ॥ "ಸರಿಯಾಗಿ ಅರುಹು, ಮಗು, ನನಗೆಲ್ಲವನ್ನೂ ಬಂಧು ಜನರನು ತೊರೆದು ಒಬ್ಬೊಂಟಿಯಾಗಿ ಏಕೆ ಬಂದಿಹೆ ನೀನು ಇಷ್ಟೊಂದು ದೂರ ? ಏನು ಅರಿಯದ ಮೂರು ವರ್ಷದ ಹಸುಳೆ, ಶಿಶುವು ಹೇಗೆ ಕ್ರಮಿಸಿದೆ ನೀನು ಇಷ್ಟೊಂದು ದೂರ ? ನಿನ್ನ ಜೊತೆ ಯಾರಿದು ನೆರವ ನೀಡಿದರು ?" ॥ ೧೧ ॥ ತಂದೆಯಾಡಿದ ಮಾತನಾಲಿಸಿದ ಹಸುಳೆ ತಾವರೆಯ ಕಂಗಳಿನ ಆ ವಾಸುದೇವ ಮುದಗೊಳಿಪ ತೊದಲು ನುಡಿಗಳಿಂತೆಂದು ನುಡಿದ "ಮದುವೆಯ ಮನೆಯಿಂದ ಹೊರಹೊರಟೆ ನಾನು ಕುಡುವೂರ ಸ್ವಾಮಿಯು ಎಡಬಿಡದೆ ಜೊತೆಯಿದ್ದ ಅಲ್ಲಿಂದ ಮುಂದೆಯೂ ಶ್ರೀಹರಿಯೇ ಸಂಗಾತಿ" ॥ ೧೨ ॥ "ಕುಡುವೂರ ಸ್ವಾಮಿಗೆ ನಮನವನ್ನರ್ಪಿಸಿದೆ ಮುಂದಕ್ಕೆ ಹೊರಟೆ, ತಾಳೆಕುಡೆ ಕಡೆಗೆ ತಾಳೆಕುಡೆಯಿಂದ ಪೂರ್ವಕ್ಕೆ ಸರಿದು ಚಂದ್ರಮೌಳೇಶ್ವರನ ಮಂದಿರಕೆ ಬಂದೆ ಆತನೊಳಗಿರುವ ಶ್ರೀಹರಿಗೆ ವಂದಿಸಿ ಮುಂದುವರಿದೆನು ನಾನು ಶ್ರೀಹರಿಯ ಕೂಡೆ ॥ ೧೩ ॥ "ಮುಂದರಿಸಿ ಪಯಣವನು ಹಲವಾರು ಮೈಲಿ ಮೂಡಲಾಲಯ ಸ್ವಾಮಿಯಂತರ್ಯಾಮಿ ಕಮಲನಾಭನ ಕೂಡೆ ಇಲ್ಲಿ ಬಂದೆ ಸೇವಿಸಿದೆ ಶ್ರೀ ಹರಿಯ ಬಲು ಭಕ್ತಿಯಿಂದ" ಇಂತೆಂದು ನುಡಿದಾ ಮಗುವ ಮಾತನು ಕೇಳಿ ವಿಸ್ಮಯದಿ ಜನರೆಲ್ಲ ಬೆರಗಾಗಿ ನೋಡಿದರು ॥ ೧೪ ॥ "ಬಂಧು ಜನರನು ತೊರೆದು ಒಬ್ಬೊಂಟಿಯಾಗಿ ವಿವಿಧ ಭೂತಗಳಿರುವ ಭೀಕರ ಪ್ರಾಂತದಲಿ ಏಕಾಂಗಿಯಾಗಿಯೇ ಚಲಿಸುವನು ಬಾಲ ಅಲ್ಪ ಭಾಗ್ಯನು ನಾನು ! ನನಗಾರು ಗತಿಯಿಲ್ಲ ಕರುಣಾಳು ಸ್ವಾಮಿಯೇ ಬಾಲಕನ ಪಾಲಿಸು" ಇಂತು ಪ್ರಾರ್ಥಿಸಿ ವಿಪ್ರ ಹರಿಗೆ ನಮಿಸಿದನು ॥ ೧೫ ॥ 15 ತಪದ ನಿಧಿಯೆನಿಸಿದ್ದ ಮಧ್ಯಗೇಹರು ಅಂದು ನಷ್ಟಗೊಂಡಾ ನಿಧಿಯ ಮತ್ತೆ ಪಡೆದವರಂತೆ ಸತಿಸುತರ ಒಡಗೂಡಿ ಮನೆಗೆ ಮರಳಿದರು ವಾಸುದೇವನ ಮೊಗವು ಬಾಲಸೂರ್ಯನ ಹಾಗೆ ಆ ಮೊಗವ ನೋಡಿದಾ ಸಜ್ಜನರ ಮುಖಕಮಲ ಅರಳಿದವು ಉದಯಿಸಿದ ರವಿಯ ಕಂಡಂತೆ ॥ ೧೬ ॥ ವಿಮಾನಗಿರಿಯಲ್ಲಿ ವಾಸುದೇವ ಪಾಜಕದ ಬಳಿಯೊಂದು ವಿಮಾನಗಿರಿಯುಂಟು ದುರ್ಗಮವು ಆ ಗಿರಿಯು ಹಿಮಗಿರಿಯ ಪರಿಯಲ್ಲಿ ಊರ ಜನರಾರೂ ಗಿರಿಯ ಕಡೆ ಮೊಗವಿಡರು ಇಂತಹ ಬೆಟ್ಟದಲಿ ವಾಸುದೇವನು ಮಾತ್ರ ನಿರ್ಭಯದಿ ಸಂಚರಿಸುವನೇಕಾಂಗಿಯಾಗಿ ದುರ್ಗೆಯ ಶ್ರೀರಕ್ಷೆ ಸತತವಿಹುದವಗೆ ॥ ೧೭ ॥ ಭಾರತೀಪತಿಯ ಅಕ್ಷರಾಭ್ಯಾಸ ಮಾತುಗಳದೆಲ್ಲದಕೂ ಮಾತೆ ಭಾರತಿಯು ಅಕ್ಷರದ ರಾಜ್ಯಕ್ಕೆ ಅಕ್ಕರೆಯ ಅಭಿಮಾನಿ ಇಂಥ ಭಾರತಿಗೀತ ಒಡೆಯನಿವನು ಈ ವಾಸುದೇವನಿಗೆ ಅಕ್ಷರಾಭ್ಯಾಸವೆ ? ಬಾಲಕನ ಮಹಿಮೆಯನು ಅರಿಯದಾ ವಿಪ್ರರು ಕಲಿಸಿದರು ಆತನಿಗೆ ಓದು ಬರಹ ॥ ೧೮ ॥ ವಾಸುದೇವನ ಪ್ರತಿಭೆ ಅಪ್ರತಿಮವಹುದು ಭಾರತೀರಮಣನಿಗೆ ಕಲಿಸುವವರಾರು ? "ನಿನ್ನೆ ಬರೆದಿಹುದನ್ನೆ ಇಂದಿಗೂ ಬರೆದಿರುವೆ ನಿನ್ನೆ ಕಲಿತುದುದನ್ನೆ ಮತ್ತೆ ಕಲಿಯಲೆ ನಾನು ?" ಬಾಲಕನು ಉಸುರಿದಾ ನುಡಿಯನ್ನು ಕೇಳಿ ಸಂತಸದಿ ಬೀಗಿದನು ಮಧ್ಯಗೇಹ ॥ ೧೯ ॥ "ಈ ನನ್ನ ವರಪುತ್ರ ಪ್ರತಿಭೆಯ ಸಾಗರ ಮಂದಿಯ ಕೆಡುನೋಟ ಕಾಡದಿರಲೀತನನು ತಟ್ಟದಿರಲೀತನಿಗೆ ದುಷ್ಟ ಗ್ರಹ ಪೀಡೆಗಳು" ಹೀಗೆಂದು ಯೋಚಿಸಿದ ವಾಸುದೇವನ ತಂದೆ ಮಗುವನ್ನು ಕರೆದೊಯ್ದು ಏಕಾಂತ ತಾಣದಲಿ ಅಕ್ಷರಾಭ್ಯಾಸವನ್ನು ಮುಂದುವರಿಸಿದನು ॥ ೨೦ ॥ ಶಿವಾದಿವಂದ್ಯನಿಂದ ಶಿವಭಟ್ಟನ ಪರಾಭವ ವಾಸುದೇವನ ಖ್ಯಾತಿ ಜನಜನಿತವಾಯಿತು. ಆತನಾ ಅಪ್ರತಿಮ ವಾಗ್ಝರಿಯ ಸ್ರೋತ ! ಶಾಸ್ತ್ರಗಳ ಪಠಣಕ್ಕೆ ಮಧುರವಾಣಿಯ ಮೆರುಗು ! "ಘೃತವಲ್ಲಿ " ಎಂಬಲ್ಲಿ ಸಂಭ್ರಮದ ಮದುವೆ ತಾಯಿಯೊಡಗೂಡಿ ವಾಸುದೇವನು ಅಂದು ತೆರಳಿದನು ಮದುವೆಯಲಿ ಪಾಲ್ಗೊಳ್ಳಲು ॥ ೨೧ ॥ ಶಿವಭಟ್ಟನೆಂಬೊಬ್ಬ ಬ್ರಾಹ್ಮಣನು ಅಲ್ಲಿದ್ದ "ಧೌತಪಟ " ವೆಂಬೊಂದು ವಂಶಸ್ಥನವನು ಶ್ರೇಷ್ಠ ಪೌರಾಣಿಕನೆಂದು ಹೆಸರ ಗಳಿಸಿದ್ದವನು ಆತನಾ ಪ್ರವಚನವ ಕೇಳುತ್ತ ಜನರೆಲ್ಲ ಸುತ್ತಲೂ ಕುಳಿತಿದ್ದರಾಸಕ್ತಿಯಿಂದ ಅವರೊಡನೆ ಕುಳಿತಿದ್ದ ವಾಸುದೇವನೂ ಅಲ್ಲಿ ॥ ೨೨ ॥ ವಾಕ್ಯಾರ್ಥ ಚತುರನಾ ವಾಸುದೇವನು ಆಗ ಮೆಲುನಗೆಯ ಮೊಗದಿಂದ, ಕಂಗಳಿನ ಹೊಳಪಿಂದ ಶ್ರೋತೃಗಳ ಮಧ್ಯದಲಿ ನಿಂದು ಉಸುರಿದನು "ಸರಿಯಲ್ಲ ನಿಮ್ಮ ನುಡಿ ಕ್ಷಮಿಸಿ ಗುರುವರ್ಯ! ವ್ಯಾಸ, ಶುಕರಂತಹ ಜ್ಞಾನಿಗಳ ತತ್ವಕ್ಕೆ ಸರಿ ಹೊಂದಲಾರದು, ನಿಮ್ಮ ಹೇಳಿಕೆಯು" ॥ ೨೩ ॥ ನೆರೆದ ಜನರೆಲ್ಲರೂ ಬೆರಗಾಗಿ ನಿಂದರು ಬಾಲಕನ ಧಾರ್ಷ್ಟ್ಯಕ್ಕೆ ತಲೆಯ ತೂಗಿದರು ಮುಖಭಂಗ ಹೊಂದಿದಾ ಶಿವಭಟ್ಟನನ್ನು ಲೆಕ್ಕಿಸದೆ ಹೋದರಾ ಬ್ರಾಹ್ಮಣನ ಜನರು ಕೇಸರಿಯ ಶಿಶುವಿನಾ ಗರ್ಜನೆಯ ಕೇಳ್ದವರು ಊಳಿಡುವ ನರಿಯನ್ನು ಲೆಕ್ಕಿಸುವರೆ ? ॥ ೨೪ ॥ "ಶಿವಭಟ್ಟ ನುಡಿದದ್ದು ತಪ್ಪಾಯಿತೆ ? ಸತ್ಯ ಸಂಗತಿಯನ್ನು ನೀನರುಹು ನಮಗೆ ಹೀಗೆಂದ ಜನರಿಗೆ ವಾಸುದೇವನು ಆಗ ತತ್ವಾರ್ಥ ಚಿಂತನೆಯ ಸತ್ಯಾರ್ಥ ಅರುಹಿದನು ಹರುಷಗೊಂಡರು ಆಗ ದೇವಲೋಕದ ಸುರರು ಮಧ್ವವೃಕ್ಷದ ಬೀಜ ಅಂಕುರಿಸಿತೆಂದು ॥ ೨೫ ॥ ಜನಮನವ ಗೆಲಿದಿದ್ದ ವಾಸುದೇವನು ಆಗ ಮನೆಗೆ ಮರಳಿದ ಮತ್ತೆ ತಾಯಿಯೊಡಗೂಡಿ ನಡೆದ ಸಂಗತಿಯೆಲ್ಲ ತಂದೆಗರುಹಿದ ಹಸುಳೆ "ಶಿವಭಟ್ಟ ಪ್ರವಚನದಿ ಮಿಥ್ಯೆಯನು ನುಡಿದರು ನಾನಾಗ ಸತ್ಯಾರ್ಥ ಜನರಿಗರುಹಿದನು ನನ್ನ ನಡೆ ಸರಿಯಹುದೆ ?" ಎಂದನವ ತಂದೆಯೆಡೆ ನೋಡಿ ॥ ೨೬ ॥ "ಸತ್ಯವನೆ ನುಡಿದಿರುವೆ, ಓ ನನ್ನ ಮಗುವೆ!" ಬಾಲಕನ ಪ್ರತಿಭೆಗೆ ಮಣಿದು ನುಡಿದನು ತಂದೆ ಆಲೋಚಿಸಿದನಾತ ಹರಿಯ ಹಿರಿಮೆಯ ಕುರಿತು ಹಸುಳೆಯ ಪ್ರಖರತೆಯು ದೇವವೃಂದಕೆ ಸಾಟಿ ಇಂಥ ಮಗನನು ಪಡೆದ ನನದೆಂಥ ಭಾಗ್ಯ ! ಎಂಥದೀ ಹರಿಕೃಪೆಯು, ಎಂಥ ಸೌಭಾಗ್ಯ! ॥ ೨೭ ॥ ಲಿಕುಚ ಕುಲಗುರುವಿನಿಂದ ಲಿಕುಚ ಶಬ್ದಾರ್ಥ ನಡುಮನೆಯ ಭಟ್ಟರು ಖ್ಯಾತ ಪೌರಾಣಿಕರು ಜನಜಾತ್ರೆ ಸೇರುವುದು ಅವರ ಪ್ರವಚನಕೆ ಒಮ್ಮೆ ಆ ಊರಿನಲಿ ಪ್ರವಚನದ ಕಾಲದಲಿ ಜನರ ಮನ ಗೆಲಿದಿದ್ದ ವಾಸುದೇವನು ನಿಂದು ವಾಚನವ ಮಾಡಿದ್ದ ಭಾಗವನೆ ಮತ್ತೊಮ್ಮೆ ವಾಚನವ ಮಾಡಿರೆಂದರುಹಿದನು ತಂದೆಗೆ ॥ ೨೮ ॥ ಪ್ರವಚನದ ಸಮಯದಲಿ ನಡುಮನೆಯ ಭಟ್ಟರು ವಿಧವಿಧದ ವೃಕ್ಷಗಳ ವಿವಿಧ ಹೆಸರರುಹಿದರೂ "ಲಿಕುಚ" ಶಬ್ದದ ಅರ್ಥ ಹೇಳಲವರಸಮರ್ಥ ತಂದೆಯ ಗೊಂದಲವ ಕಂಡ ಬಾಲಕನಾಗ "ಲಿಕುಚ ಪದದರ್ಥವನು ಹೇಳಿ ಮುಂದರಿಯಿರಿ" ಎಂದು ನುಡಿದನು ಅಲ್ಲಿ ಧೈರ್ಯದಲಿ ನಿಂದು ॥ ೨೯ ॥ ಕಂಗೆಟ್ಟ ಭಟ್ಟರಿಗೆ ಅರ್ಥ ತೋರಲೇ ಇಲ್ಲ ತಿಳಿಯದಿಹ ಅರ್ಥವನು ಹೇಳಬಲ್ಲರು ಹೇಗೆ ? ತವಕಗೊಂಡಾ ಮಂದಿ ಬಾಲಕಗೆ ಹೇಳಿದರು "ನೀನಾದರೂ ಅರುಹು, ಈ ಪದದ ಅರ್ಥ" "ಲಿಕುಚ" ವೆಂದರೆ ಅರ್ಥ "ಹೆಬ್ಬಲಸು" ಎಂದು ಬಾಲಕನ ನುಡಿ ಕೇಳಿ ತಲೆದೂಗಿದರು ಮ೦ದಿ ॥ ೩೦ ॥ ಭಾವೀ ಬ್ರಹ್ಮನಿಗೆ ಬ್ರಹ್ಮೋಪದೇಶ ವಾಸುದೇವನ ಪ್ರತಿಭೆ ಎಲ್ಲೆಡೆಯು ಹರಡಿತ್ತು. ಬಹುವಿಧದ ಪರಿಯಲ್ಲಿ ಜನಜನಿತವಾಯ್ತು ಚಕಿತಗೊಂಡಿತು ಲೋಕ ಚತುರಮತಿಯನು ಕಂಡು ! ವಾಸುದೇವನ ವಯಸು ಯೋಗ್ಯವಾದುದ ಅರಿತು ಬ್ರಾಹ್ಮಣೋತ್ತಮರಾದ ಮಧ್ಯಗೇಹರು ಅಂದು ಬ್ರಹೋಪದೇಶವನು ಮಾಡಲೆಳಸಿದರು ॥ ೩೧ ॥ ಸಕಲಗ್ರಹ ಸಮ್ಮಿಳಿತ ಸುಮುಹೂರ್ತದಲ್ಲಿ ಗುರುಬಲದ ಬೆಂಬಲದ ಶುಭಫಳಿಗೆಯಲ್ಲಿ ಲೋಪದೋಷಗಳಿರದ ಮಂಗಳದ ಕ್ಷಣದಲ್ಲಿ ಬಂಧುಮಿತ್ರರ, ದ್ವಿಜರ ಹಿರಿಯ ಸಮ್ಮುಖದಲ್ಲಿ ಸಡಗರದಿ ನಡೆಯಿತು ಬ್ರಹ್ಮೋಪದೇಶ ಭಾವೀ ಬ್ರಹ್ಮನಿಗೆ ಜ್ಞಾನೋಪದೇಶ ! ॥ ೩೨ ॥ ಪರಿಪರಿಯ ವೇದಗಳ ಪರಿಪರಿಯ ರೂಪದಲಿ ಸುರವರರ ಪ್ರಮದೆಯರು ಸಂಭ್ರಮೋತ್ಸಾಹದಲಿ ವಾಸುದೇವನ ಹೊಳೆವ ಮುಖವೆಂಬ ಮಂಟಪದಿ ವಿಹರಿಸಲು ಬಯಸಿದರು ಪತಿಯರೊಡಗೂಡಿ ಆಕಾಶದಿಂದಲೇ ಅಭಿನಂದಿಸುತ್ತ ನಲಿದು ಕುಣಿದಾಡಿದರು ಆನಂದದಿಂದ ॥ ೩೩ ॥ ಪರಿಶುದ್ಧ ಮನಸುಳ್ಳ ಮಧ್ಯಗೇಹರು ಆಗ ಸಕಲ ಸಿದ್ಧತೆಯಿಂದ ಸನ್ನದ್ಧರಾಗಿ, ಅಗ್ನಿಯನು ಪ್ರಜ್ವಲಿಸಿ ಹೋಮಾದಿಗಳ ಮಾಡಿ ವೇದೋಕ್ತ ಮಂತ್ರಗಳ ವಿಧಿಗಳನುಸಾರ ಉಪನಯನ ಮಾಡಿದರು ವರಪುತ್ರ ವಟುವಿಗೆ ಶಿಖೆಯಿಂದ ಶೋಭಿಸುತ ಕಂಗೊಳಿಸುತ್ತಿದ್ದವಗೆ ॥ ೩೪ ॥ ವಾಸುದೇವಗೆ ತಂದ ಉಪದೇಶ ಮಾಡಿದನು "ಅಗ್ನಿಯನು ಸೇವಿಸು; ಗುರುಗಣಕೆ ವಂದಿಸು ವೇದಾದಿ ಸಚ್ಛಾಸ್ತ್ರ ಅಧ್ಯಯನ ಮಾಡು ಆಚರಿಸು ವ್ರತಗಳನು, ಸದ್ವಿಪ್ರನಾಗು" ಭಾವೀ ಬ್ರಹ್ಮನಿಗೆ ಬ್ರಹ್ಮೋಪದೇಶವೆ ? ಮೆಲುನಗೆಯ ಬೀರಿದರು ಸೂರ್ಯ ಚಂದ್ರಾದಿಗಳು ॥ ೩೫ ॥ ಬ್ರಹ್ಮಚರ್ಯದ ಧರ್ಮ ನಿಷ್ಠೆಯಲಿ ಪಾಲಿಸುತ ಬ್ರಾಹ್ಮಣೋಚಿತ ಕರ್ಮ ಶ್ರದ್ಧೆಯಲಿ ಮಾಡುತ್ತ ಸುಬ್ರಹ್ಮಣ್ಯನ ತೆರದಿ ಕಂಗೊಳಿಸಿ ಮೆರೆದಿದ್ದ ಸಂಧ್ಯಾದಿ ಕರ್ಮಗಳ ಎಂದೆಂದೂ ಬಿಡದಿದ್ದ ಬಾಲವಟುವನು ಕಂಡ ನಡುಮನೆಯ ಭಟ್ಟ ಮನದೊಳಗೆ ಸಂತಸದಿ ಮುದಗೊಂಡನು ॥ ೩೬ ॥ ಸಕಲ ಲೋಕಕೆ ಒಡೆಯ ಶ್ರೀ ವಾಯುದೇವ ಜನದ ಐಸಿರಿಗೆಲ್ಲ ಈತನೆ ಭಾಜನನು ಇಂಥ ವೈಭವವನ್ನು ಮರೆಮಾಚಿಸುತ್ತ ನಿರ್ಗತಿಕನಂತೊಂದು ಕೌಪೀನ ಧರಿಸುತ್ತ ಎಲ್ಲೆಡೆಯು ಸಂಚರಿಪ ಸೋಜಿಗವ ಕಂಡು ಅಚ್ಚರಿಯು ಮೂಡಿತ್ತು ದೇವವೃಂದದಿ ಅಂದು ॥ ೩೭ ॥ ಕಾಲುಕಚ್ಚಿ ಕಾಲವಶನಾದ ಮಣಿಮಂತ ಸರ್ಪರೂಪದ ಒಬ್ಬ ರಕ್ಕಸನು ಒಮ್ಮೆ ದ್ವೇಷವೆಂಬುವ ದುಷ್ಟ ವಿಷದ ಜ್ವಾಲೆಗಳಿಂದ ಸುತ್ತಮುತ್ತಲ ಜನರ ಅಂಜಿಸುತಲಿದ್ದ ಮಣಿ ಮಂತನೆಂಬುವ ಈ ದುಷ್ಟ ರಾಕ್ಷಸನು ಮನೆಯಿಂದ ಹೊರಬಿದ್ದು ಗಿರಿಯೆಡೆಗೆ ನಡೆದಿದ್ದ ವಟು ವಾಸುದೇವನನು ಕಚ್ಚಿ ಕೊಲ್ಲಲು ಬಂದ ॥ ೩೮ ॥ ವಿಷದ ದವಡೆಗೆ ಸಿಲುಕಿ ಹಸುಳೆ ಸಾಯಲಿ ಎಂದು ಜೀವರಿಗೆ ಪ್ರಭುವಾದ ವಾಸುದೇವನ ಕಡೆಗೆ ಹೆಡೆಯೆತ್ತಿ ತ್ವರೆಯಿಂದ ಧಾವಿಸಿದ ಅಸುರ ಪ್ರಾಣದೇವನಿಗಾರು ಗಾಸಿ ಮಾಡಲು ಸಾಧ್ಯ ? ವಾಸುದೇವನು ತನ್ನ ಕೆಂಪು ಕಾಲ್ಬೆರಳಿಂದ ರಕ್ಕಸನ ತುಳಿತುಳಿದು ಪುಡಿಮಾಡಿ ಬಳಲಿಸಿದ ॥ ೩೯ ॥ ಅಂತಿಂಥದಲ್ಲ ವಾಸುದೇವನ ಪಾದ ! ಸಾಕ್ಷಾತ್ತು ಗರುಡನ ಬಾಯಿಯಂತಹ ಪಾದ ! ಆ ಪಾದಕ್ಕೆ ಬಾಯಿಟ್ಟ ಮಣಿಮಂತನ ಪಾಡು ಗರುಡ ತುಂಡವ ಹೊಕ್ಕ ಹಾವಿನಂತಾಯ್ತು ರಕ್ಕಸನು ತಕ್ಷಣವೇ ಸಾವನಪ್ಪಿದ ಕಂಡು ಸುರರು ಕೊಂಡಾಡಿದರು ವಾಸುದೇವನ ಮಹಿಮ ॥ ೪೦ ॥ ಜಗದ್ಗುರುವಿನ ಗುರುಕುಲವಾಸ ಯಾವ ದೇವನ ದಿವ್ಯ ಪಾದಧೂಳಿಗಳನ್ನು ಶ್ರೀ ರುದ್ರ, ದೇವೇಂದ್ರ, ದೇವಗುರುಗಳು ಎಲ್ಲ ಶಿರದಲ್ಲಿ ಸ್ವೀಕರಿಸಿ ಧನ್ಯರಾಗುವರೋ ಆ ವಾಯುದೇವನು ಇಂದು ಗುರುಪದಕೆ ನಮಿಸುತ್ತ ಮನುಜ ಸಹಜದ ಕರ್ಮ ಶ್ರದ್ಧೆಯಲಿ ಮಾಡುತ್ತ ವೇದಾದಿ ವಿದ್ಯೆಗಳ ಅಧ್ಯಯನ ಮಾಡಿದನು ॥ ೪೧ ॥ ಅಂಗೈಯಲಾಡಿಸುವ ಕಂದುಕದ ಪರಿಯಲ್ಲಿ ಸಕಲ ಶಾಸ್ತ್ರಗಳಿವಗೆ ಕರತಲಾಮಲಕ ಎಲ್ಲವೂ ಸುಸ್ಪಷ್ಟ ಎಲ್ಲವೂ ಅತಿ ಸರಳ ! ಸಾಕ್ಷಾತ್ತು ವಾಯುವಿನ ಅವತಾರ ಈ ಹಸುಳೆ ! ಆದರೂ ಸಾಮಾನ್ಯ ಜನರಂತೆ ಅಧ್ಯಯನ ! ವಾಸುದೇವನ ಮನದಿ ಶ್ರೀ ಹರಿಯೇ ನಿಂದಿರುವ ॥ ೪೨ ॥ ತನಗಿಂತ ಹಿರಿಯರು, ತನಗಿಂತ ಕಿರಿಯರು ಎಲ್ಲ ವಟುಗಳ ಕೂಡಿ ಆ ವಾಸುದೇವನು ಅಧ್ಯಯನದ ನಂತರ, ಬಿಡುವಿನ ವೇಳೆಯಲಿ ದೂರ ದೂರದ ಸ್ಥಳಕೆ ಪಯಣ ಬೆಳಸುತ್ತ ವಿಹರಿಸಿದ ಸುಖಿಸುತ್ತ, ಚತುರ ಮಿತ್ರರ ಸಹಿತ ಆಟ, ಓಟಗಳಲ್ಲಿ ಭಾಗವಹಿಸುತ್ತ ॥ ೪೩ ॥ ಓಡುವರು ಗೆಳೆಯರು ಶರವೇಗದಿಂದ ಗುರಿಯ ಮುಟ್ಟುವ ಬಗೆಗೆ ಎಲ್ಲರಿಗೂ ಕಾತುರ ಲಗುಬಗೆಯ ಓಟದ ಈ ಸ್ಪರ್ಧೆಗಳಲಿ ವಾಸುದೇವನು ಮುಂದೆ, ಉಳಿದವರು ಹಿಂದೆ ಸೋಜಿಗವು ಇದರಲ್ಲಿ ಇನಿತಾದರೂ ಇಲ್ಲ ವಾಯುದೇವನ ವೇಗ ಮೀರ ಬಲ್ಲವರಾರು ? ॥ ೪೪ ॥ ಕೆಲವೊಮ್ಮೆ ಮಿತ್ರರಲಿ ಮತ್ತೊಂದು ಆಟ ಎಲ್ಲರಿಗೂ ಎತ್ತರಕೆ ಜಿಗಿಯುವವರಾರೆಂದು ವಾಸುದೇವನ ಜಿಗಿತ ಎಲ್ಲರಿಗೂ ಮಿಗಿಲು ರಾಮನಾಣತಿಯಂತೆ ಸೀತೆಯನು ಅರಸುತ್ತ ಹೊರಟ ಹನುಮನ ಪರಿಯ ಅಂಥ ಜಿಗಿತ ವಾಲಿಸುತ ಅಂಗದನ ಜಿಗಿತವನು ಮೀರಿಸಿತು ॥ ೪೫ ॥ ಜಲವಿಹಾರದ ಕ್ರೀಡೆ ಮತ್ತೊಂದು ಮೋಜಿನದು ಈಜುಗಾರಿಕೆಯಲ್ಲೂ ವಾಸುದೇವನೇ ಮುಂದು ಸಿಟ್ಟಾದ ಮಿತ್ರರು ಆಟದಲಿ ಸೋತು ತಣ್ಣೀರನೆರಚಿದರು ವಾಸುದೇವನ ಮುಖಕೆ ಇದರಿಂದ ಕೆಂಪಾಯ್ತು ಬಾಲಕನ ಕಂಗಳು ಮುಖದಲ್ಲಿ ಮೂಡಿತ್ತು ನಗೆಯ ಬೆಳದಿಂಗಳು ॥ ೪೬ ॥ ತುಂಬು ತೋಳ್ಬಲದವರು ಆ ಮಿತ್ರರೆಲ್ಲಾ ಒಮ್ಮೊಮ್ಮೆ ಒಬ್ಬೊಬ್ಬ ವಾಸುದೇವನ ಬಳಿಗೆ ಮತ್ತೊಮ್ಮೆ ಎಲ್ಲರೂ ಒಟ್ಟಾಗಿ ಕಲೆತು ಹರಿಹಾಯ್ದು ಬರುವರು ಆತನೆಡೆಗೆ ಸ್ವಲ್ಪವೂ ಧೃತಿಗೆಡದ ವಾಸುದೇವನು ಮಾತ್ರ ಕೆಡುವುವನವರನ್ನು ನಕ್ಕು ನಸುನಗುತ ॥ ೪೭ ॥ ಉಳಿದವರ ಹಿಡಿತದಲ್ಲಿ ಉಳಿಯದೆ ಓಡುವುದು ಬಾಹುಗಳಲವರನ್ನು ಬಲವಾಗಿ ಹಿಡಿಯುವುದು ಭಾರಗಳನೆತ್ತುವುದು ಹೂವ ಮಾಲೆಯ ತೆರದಿ ಇಂಥ ಸಾಹಸವೆಲ್ಲ ಅತಿ ಸುಲಭ ಆತನಿಗೆ ಆ ವಾಸುದೇವನ ಕಂಡು ಊರ ಜನರೆಲ್ಲ "ಭೀಮಸೇನನೆ ಇವನು ಬೇರಲ್ಲ' ಎಂದರು ॥ ೪೮ ॥ ಜಗಕೆಲ್ಲ ಗುರುವಾದ ವಾಸುದೇವನು ಹೀಗೆ ತನ್ನ ಕಾಲವನೆಲ್ಲ ಆಟದಲಿ ಕಳೆಯುತ್ತ ಪಾಠ ಪ್ರವಚನದತ್ತ ನಿಶ್ಚಿಂತೆ ತೋರುತ್ತ ತನ್ನ ಮನೆಯಲ್ಲಿಯೇ ಕಾಲ ಕಳೆಯುತಲಿರಲು ಪೂಗವನ ವಂಶಸ್ಥ ವಾಸುದೇವನ ಗುರುವು ಆತನಾ ನಡೆ ಕಂಡು ಮನನೊಂದರು ॥ ೪೯ ॥ ಇಂತಿರಲು, ಒಮ್ಮೆ , ವಾಸುದೇವನ ಗುರುವು ಕುಪಿತರಾದರು ಅವನ ಚರ್ಯೆಯ ಕಂಡು "ಅಧ್ಯಯನದಿ ಏಕಿಷ್ಟು ಅಶ್ರದ್ಧೆ ನಿನಗೆ ? ಸ್ನೇಹಿತರ ಒಡಗೂಡಿ ಪಠಿಸಲಾರೆಯ ನೀನು ? ಏಕಿಷ್ಟು ಆಲಸ್ಯ ? ಈ ಉದಾಸೀನತೆ ?" ಇಂತೆಂದು ಕನಲಿದರು ಆ ಪರಮ ಗುರುಗಳು ॥ ೫೦ ॥ "ಅರ್ಧ ಋಕ್, ಪಾದಗಳು, ಇತ್ಯಾದಿಯಾಗಿ ಚರಣ ಚರಣಗಳಲ್ಲಿ ಪಠನ ಮಾಡುವ ರೀತಿ ಸ್ವೀಕರಿಸದಾಗಿದೆ ಎನ್ನ ಮನ ಗುರುವೆ" ಶಿಷ್ಯನಾ ನುಡಿ ಕೇಳಿ ಕುಪಿತನಾದನು ಗುರುವು "ಮಾತನಾಡುವೆ ನೀನು ಪಂಡಿತೋತ್ತಮನಂತೆ ಈ ದಿನದ ಪಾಠದ ಉಳಿದ ಭಾಗವ ಹೇಳು" ॥ ೫೧ ॥ ಶಬ್ದಗಳನುಚ್ಚರಿಪ ವಾಸುದೇವನ ಪರಿಯು ಸಕಲ ಲಕ್ಷಣಗಳ ಶಿಕ್ಷಣಕೆ ಅದುವೆ ಮೂಲ ಸ್ಖಲನಾದಿ ದೋಷಗಳಿಂ ದೂರವಾಗಿಹುದು ವೇದಗಳ ಪರಿಸುವ ವಾಸುದೇವನ ಶೈಲಿ ಗುರುಗಳಿಗೆ ಅತ್ಯಂತ ಅಚ್ಚರಿಯ ನೀಡಿತು ಇದ ಕಂಡು ದೇವಗಣ ಮುದಗೊಂಡಿತು ॥ ೫೨ ॥ ಲೋಕಗುರುವಿನಿಂದ ಗುರುಪುತ್ರನ ಉದ್ಧಾರ ಒಮ್ಮೆ ಕಾನನದಲ್ಲಿ ಗುರುಪುತ್ರನೊಡನೆ ವಾಸುದೇವನು ಹೊರಟ ಸಂಚರಿಸಲೆಂದು ಗುರುಪುತ್ರ, ಪ್ರಿಯಮಿತ್ರ, ಈರ್ವರಿಗೂ ಬಲುನಂಟು ಮಿತ್ರ ಬಳಲಿದನಲ್ಲಿ ತಲೆ ಶೂಲೆಯಿಂದ ವಾಸುದೇವನು ಆಗ ಗೆಳೆಯನಾ ಕಿವಿಯಲ್ಲಿ ಗಾಳಿಯನು ಉಸುರಿದನು, ಬಾಧೆ ಪರಿಹರಿಸಿದನು ॥ ೫೩ ॥ ಗುರುವಿಗೆ ಜ್ಞಾನದಕ್ಷಿಣೆ - ಗುರುಕುಲವಾಸ ಸಮಾಪ್ತಿ ವಾಸುದೇವನ ಪ್ರತಿಭೆ ದಿವ್ಯ ಪ್ರತಿಭೆಯದಾಯ್ತು ಶ್ರವಣ ಮಾತ್ರದಿ ಕಲಿವ, ಉಪನಿಷತ್ತುಗಳನ್ನು ಒಮ್ಮೆಯೂ ಕೇಳಿರದ ನೂರಾರು ಶ್ರುತಿಗಳನು ಸುಲಭದಲಿ ಗ್ರಹಿಸುವಾ ದಿವ್ಯ ಪ್ರತಿಭೆ ಇದರಲ್ಲಿ ಅಚ್ಚರಿಯು ಇಲ್ಲವೇ ಇಲ್ಲ ಹೇಗೆಂದು ಬಣ್ಣಿಪುದು ಇಂಥ ಮಹಿಮನ ಮಹಿಮೆ ? ॥ ೫೪ ॥ ಶಿಷ್ಯನಿಂದ ಗುರುವಿಗೆ ಜ್ಞಾನದಾನ ವಾಸುದೇವನು ಒಮ್ಮೆ ಏಕಾಂತದಲ್ಲಿ ಪಾಠವನು ಒಪ್ಪಿಸಿದ ಗುರುವ ಸಮ್ಮುಖದಲ್ಲಿ ಐತರೇಯೋಪನಿಷತ್ತು ಬಲು ಗೂಢವಾದುದು ಅದರಂತರಾರ್ಥವನು ಗುರುಗಳಿಗೇ ತಿಳಿಸಿದನು ಮೋಕ್ಷಬೀಜವದಾಯ್ತು ಗೋವಿಂದ ಭಕ್ತಿ ಗುರುವಿಗಿತ್ತನು ಯೋಗ್ಯ ಗುರುದಕ್ಷಿಣೆ ॥ ೫೫ ॥ "ದಮನ ಮಾಡಿರಿ ಸ್ವಾಮಿ, ದುಷ್ಟದಮನ ಸ್ಪಷ್ಟದಲಿ ತಿಳಿಸಿರಿ ಶ್ರೀ ಹರಿಯ ಗುಣಗಳ ಮುದವ ನೀಡಿರಿ ನಿಮ್ಮ ಭಕ್ತಜನವೃಂದಕೆ" ಹೀಗೆಂದು ಸ್ತುತಿಸಿದ ದೇವಗಣಕಾಗ ಆನಂದ ಕೊಡಲೆಂದು ಮೂರ್ಲೋಕದಾಚಾರ್ಯ ವಾಸುದೇವನು ಪಡೆದ ಗುರುವ ಅನುಮತಿಯ ॥ ೫೬ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀ ನಾರಾಯಣ ಪಂಡಿತರು ರಚಿಸಿರುವ ಶ್ರೀ ಸುಮಧ್ವ ವಿಜಯ ಮಹಾಕಾವ್ಯದ ಆನಂದಾಂಕಿತವಾದ ಮೂರನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ ನಾಲ್ಕನೆಯ ಸರ್ಗ ಶ್ರೀ ಗುರುಭೋ ನಮ: ನಾಲ್ಕನೆಯ ಸರ್ಗ ಸನ್ಯಾಸ ನಿಶ್ಚಯ ಗುರುಕುಲದ ವಾಸವನು ಇಂತು ಮುಗಿಸಿದ ಬಳಿಕ ಸಲ್ಲೋಕ ದಯೆಯೆಂಬ ಅಮೃತದ ಆದ್ರ್ರತೆಯ ಸಚ್ಛಾಸ್ತ್ರ ಚೋರರ ಅವನತಿಯ ಬಯಸಿದ ಶ್ರೀ ಹರಿಯು ಅನುದಿನವೂ ವಾಸಿಸಲು ಆಶಿಸುವ ಚಿತ್ತವೈಶಾಲ್ಯದ ಅಪ್ರತಿಮ ಪ್ರತಿಭೆಯ ವಾಸುದೇವನು ಇಂತು ಆಲೋಚಿಸಿದನಂತೆ "ವಿಷಯ ಸಂಗವನೆಲ್ಲ ತೊರೆಯಲೇ ಬೇಕು ಶ್ರೀ ಹರಿಯ ಗುಣಗಳಲಿ ಆಗ ಉದಿಪುದು ಭಕ್ತಿ ಹಿರಿಯ ಜನಗಳ ನಡತ ಪಾಮರರಿಗಾದರ್ಶ ಸಹಜವಾಗಿಹುದೆನಗೆ ಪರಮಹಂಸಾಶ್ರಮ ಅದಕೆಂದು ನಾನಿಂದು ಸ್ವೀಕರಿಸಿ ಘೋಷಿಸುವ ವೈರಾಗ್ಯ ವೃತ್ತಿಯಲಿ ನನಗಿರುವ ಶ್ರದ್ಧೆಯನು" ಹರಿಯ ನಿಂದಕರಲ್ಲಿ ನನಗಿಹುದು ರೋಷ ಅವರನ್ನು ದಂಡಿಸಲು ಯೋಗ್ಯನಾಗಿಹೆ ನಾನು ದಂಡಧಾರಣೆ ಬಿಟ್ಟು ಬೇರಿಲ್ಲ ಮಾರ್ಗ ಆದರೀ ಕಾರ್ಯ ನನದಲ್ಲವಾಗಿದೆ ಅವತರಿಸಿ ಬರಲಿಹಳು ಶ್ರೀ ಕೃಷ್ಣನನುಜೆ ದುಷ ಸಂಹಾರವನು ದುರ್ಗೆ ಮಾಡುವಳು" 1 2 3 ಇಂತು ಆಲೋಚಿಸಿದ ಆ ವಾಸುದೇವನಿಗೆ ಹಗಲಿರುಳು ಶ್ರೀ ಹರಿಯ ಧ್ಯಾನವೇ ಗ್ರಾಸ ಆಸಕ್ತಿ ತೊರೆದನು ಭೋಗ್ಯವಸ್ತುಗಳಲ್ಲಿ ತ್ಯಜಿಸಿದನು ದುರ್ವಿಷಯ ಭೋಗಲಾಲಸೆಯ ಚೇತನಾ ಚೇತನದಿ ನೆಲೆಸಿರುವ ಶ್ರೀ ಹರಿಯ ಬೇಡಿದನು ಸನ್ಯಾಸಕನುಮತಿಯ ಅಡಿಗಡಿಗೆ ॥ ೪ ॥ "ಜಡವಸ್ತುಗಳಿಗೆಲ್ಲ ಏಕೆ ನಮಿಸುವೆ ನೀನು ?" ತಂದೆಯೇ ಮೊದಲಾದ ಬಂಧುಗಳು ಪ್ರಶ್ನಿಸಲು ಉತ್ತರವ ನೀಡಿದನು ವಾಸುದೇವನು ಆಗ "ಎಲ್ಲ ವಸ್ತುಗಳಲ್ಲೂ ಇರುವ ನನ್ನಯ ಸ್ವಾಮಿ ಅದಕೆಂದೆ ಇವಕೆಲ್ಲ ನನ್ನ ಈ ನಮನ" ಲೋಕಶಿಕ್ಷಕ ಗುರುವು ಅರಸಿ ಹೊರಟನು ಗುರುವ ॥ ೫ ॥ ಅಚ್ಯುತ ಪ್ರೇಕ್ಷರ ಪೂರ್ವೋತ್ತರ ಅಂದಿನಾ ದಿನದಲ್ಲಿ ಈ ಲೋಕದಲ್ಲಿ ಖ್ಯಾತರಾಗಿದ್ದರು ಅಚ್ಯುತ ಪ್ರೇಕ್ಷರು ಯಾವ ಭೂಷಣವಿಲ್ಲ ಈ ಭೂಸುರ ಶ್ರೇಷ್ಠರಿಗೆ ವಿರಕ್ತಿ ಎಂಬೊಂದು ಆಭರಣ ಮಾತ್ರ ತಮ್ಮೆಲ್ಲ ಸೌಶೀಲ್ಯ, ಸದ್ಗುಣಗಳಿಂದ ಅನ್ವರ್ಥವಾಗಿತ್ತು ಅವರಿಗಾ ಹೆಸರು ॥ ೬ ॥ ಪೂರ್ವ ಜನ್ಮದಲಿವರು ಪ್ರಖ್ಯಾತ ಯತಿವರರು ಪಾಂಡವಾಲಯದಲ್ಲಿ ದ್ರೌಪದಿಯ ಹಸ್ತದಲಿ ಪರಿಶುದ್ಧ ಭೋಜನವ ಭುಂಜಿಸಿದ ಸಿದ್ಧರು ಮಧುಕರ ವೃತ್ತಿಯೇ ಬಾಳಿನ ಶೈಲಿ ಇಂಥ ಮಹಿಮರ ಬಾಳ್ವೆ ಎಲ್ಲರಿಗೂ ಆದರ್ಶ ನಾಡ ಜನರೆಲ್ಲರಿಗೂ ದಾರಿ ತೋರುವ ದೀಪ ॥ ೭ ॥ ಮಾರು ಹೋದರು ಅವರು ಮಾಯಾವಾದಕ್ಕೆ ಮರಳಿ ಪರಿತಪಿಸಿದರು ದುಷ್ಟಶಾಸ್ತ್ರ ಕುತರ್ಕಕೆ ಪಾಪಗಳದೆಲ್ಲದಕೂ ಪರಿತಾಪ ಪರಿಹಾರ ಹಿಂದೊಮ್ಮೆ ಶ್ರೀ ಕೃಷ್ಣ ಚರಣಾರವಿಂದವನು ಗಾಸಿಗೊಳಿಸಿದ ವ್ಯಾಧ ಬಾಣವೊಂದನು ಬಿಟ್ಟು ನಂತರದ ಪರಿತಾಪ ಪಾಪ ಪರಿಹರಿಸಿತ್ತು ॥ ೮ ॥ ·ಉಪನಿಷತ್ತುಗಳೆಲ್ಲ ಕರತಲಾಮಲಕ ವಿನಯವೆಂಬುದು ಅವರ ರತ್ನದಾಭರಣ ಹಗಲಿರುಳು ಎನ್ನದೆ ತತ್ವಚಿಂತನೆ ಚಿಂತೆ ಇಂತು ಮೆರೆಯುತಲಿದ್ದ ಅಚ್ಯುತ ಪ್ರೇಕ್ಷರನು ಮರಣ ಶಯ್ಯೆಯಲಿದ್ದ ಅವರ ಗುರುಗಳು ಒಮ್ಮೆ ಏಕಾಂತದಲಿ ಕರೆದು ಇಂತೆಂದು ಹೇಳಿದರು ॥ ೯ ॥ ''ನಾನೆ ಪರಬೊಮ್ಮ, ನನ್ನಿಂದ ಯಾವುದೂ ಬೇರೆ ಅಲ್ಲ" ಎಂಬಂಥ ಮಾತೆಲ್ಲ ಅರ್ಥ ಶೂನ್ಯ ಅಂಥ ಮಾತನು ನಂಬಿ ಮರುಳಾಗಬೇಡ ಮಾಯಾವಾದದ ಸೂತ್ರ, ಧರ್ಮ ಬಾಹಿರ ಸೂತ್ರ ಶಾಸ್ತ್ರೋಕ್ತ ಸಮ್ಮತಿ ಅದಕೆಂದೂ ಇಲ್ಲ ಸುವ್ರತನೆ, ನೀನದನು ತ್ಯಜಿಸಿ ಹೊರಹಾಕು" ॥ ೧೦ ॥ "ಆತ್ಮೈಕ್ಯ" ವೆಂಬುದದು ಮಾಯಾವಾದದ ವಿಧಿಯು ಹರಿಯ ಆರಾಧನೆಗೆ ಸರಿಯಾದ ವಿಧಿಯಹುದೆ ? ಮಿಥ್ಯವಾದದ ತರ್ಕ, ತಥ್ಯವಿಲ್ಲದ ತರ್ಕ ಎನಗಿರಲಿ, ಎನಗಿಂತ ಹಿರಿಯರಾದವರಿಗೂ ಗುರುವ ಗುರುವಿನ ಗುರುವಿಗೂ ತಿಳಿಯಲಾರದ ತರ್ಕ ನಂಬದಿರು ಇದನು, ಮುದದಿಂದ ಭಜಿಸು ಶ್ರೀ ಮುಕುಂದನನು" ॥ ೧೧ ॥ ಇಂತು ಉಪದೇಶಿಸಿದ ಗುರುವರ್ಯರಂದು ಅಚ್ಯುತ ಪ್ರೇಕ್ಷರಿಗೆ ಚತುರ ಉಕ್ತಿಯ ನೀಡಿ ತೆರಳಿದರು ಪರಲೋಕ ಪಯಣವನು ಬೆಳಸಿ ಗುರುಗಳಾಡಿದ ಮಾತ ಎಡಬಿಡದೆ ಮೆಲಕುತ್ತ ರೂಪ್ಯ ಪೀಠಾಲಯದ ಇಂದಿರಾಪತಿಯನ್ನು ಹಗಲಿರುಳು ಧ್ಯಾನಿಸುತ ಸೇವೆಯಲಿ ತೊಡಗಿದರು ॥ ೧೨ ॥ ಗುರುವಾಗುವ ಶಿಷ್ಯನ ನಿರೀಕ್ಷೆಯಲ್ಲಿ ಅಚ್ಯುತ ಪ್ರೇಕ್ಷರು ಶ್ರೀ ಹರಿಯ ತತ್ವವನು ತಿಳಿಯಲೇಬೇಕೆಂಬ ನಿಶ್ಚಲದ ನಿಶ್ಚಯವ ಮಾಡಿದ ಯತಿಗಳಿಗೆ ಹರಿಯ ದರುಶನವಾಯ್ತು ಪುರುಷನೊಬ್ಬನಲಿ "ಲಭಿಸಲಿರುವನು ನಿಮಗೆ, ಶಿಷ್ಯಶ್ರೇಷ್ಠನು ಮುಂದೆ ಅವನಿಂದ ಅರಿಯಿರಿ ಎನ್ನ ತತ್ವವನು" ಹರಿಯು ಆಣತಿಯಿತ್ತ ಇಂತು ಗುರುಗಳಿಗೆ ॥ ೧೩ ॥ ಶ್ರೀ ಹರಿಯು ಸೂಚಿಸಿದ ಶಿಷ್ಯನಾಗಮನಕ್ಕೆ ಕಾತುರದಿ ಕಾದರು ಅಚ್ಯುತ ಪ್ರೇಕ್ಷರು ಅದುವರೆಗೆ ಶ್ರೀ ಹರಿಯ ಕೈಂಕರ್ಯ ಸೇವೆ ! ಒಂದು ಶುಭದಿನದಂದು ಬಂದನಾ ಶಿಷ್ಯ ಮನುಜ ರೂಪವ ತಾಳ್ದ ಆ ವಾಸುದೇವ ಸಕಲ ಸಜ್ಜನಕೆಲ್ಲ ಗುರು ವಾಯುದೇವ ! ॥ ೧೪ ॥ ಮಗನನ್ನು ಮನೆಗೆ ಮರಳಿಸುವ ವಿಫಲ ಪ್ರಯತ್ನ ಮಧ್ಯಗೇಹರ ಮನೆಗೆ ಸುದ್ದಿ ಬಂದಿತ್ತೊಂದು: "ವೈರಾಗ್ಯ ದೀಕ್ಷೆಯನು ತಳೆದಿಹ ಕುಮಾರ ಸನ್ಯಾಸ ಸ್ವೀಕಾರ ಮಾಡಲಿಹನು ಅಚ್ಯುತ ಪ್ರೇಕ್ಷರ ಅನುಚರನು ಅವನೀಗ " ಪುತ್ರವಿರಹದ ಶೋಕ ಭಟ್ಟರನು ಕಾಡಿರಲು ರೂಪ್ಯ ಪೀಠಾಲಯಕೆ ಒಡನೆ ಐತಂದರು ॥ ೧೫ ॥ "ಮುಪ್ಪು ಬಂದಿಹುದೆಮಗೆ, ನಿನ್ನ ತಾಯ್ತಂದೆಗಳಿಗೆ ನಾವಿಬ್ಬರೂ ಇನ್ನೂ ಜೀವಂತವಾಗಿಹೆವು ಸಲಹುವವರಾರಿಲ್ಲ ನಿನ್ನ ಹೊರತು ತರವಲ್ಲ ನೀನೀಗ ಸನ್ಯಾಸಿಯಾಗುವುದು" ಇಂತು ಸುತನೊಳು ಅವರು ಬಿನ್ನಪವಗೈದು ನಿಜಸುತಗೆ ನಮಿಸಿದರು ಸುತ್ತುವರಿದು ॥ ೧೬ ॥ ಕಿರುನಗೆಯ ಸೂಸುತ್ತ ವಾಸುದೇವನು ನುಡಿದ "ಕಿರಿಯರಿಗೆ ಹಿರಿಯರು ನಮಿಸುವುದು ಸಲ್ಲ ಯತಿಗಳಿಗೆ ಮಾತ್ರ ಅರ್ಹತೆಯು ಇದಕೆ ಇದರಿಂದ ಸ್ಪುಟವಾಯ್ತು ಶ್ರೀ ಹರಿಯ ಇಚ್ಛೆ ಆತನೇ ಕೊಡಿಸಿದನು ನಿಮ್ಮ ಅನುಮತಿಯ" ಎಂತಹ ಅದ್ಭುತ! ಎಂಥ ಅಚ್ಚರಿಯು ! ॥ ೧೭ ॥ ಮಗನ ಮಾತಿಗೆ ಅವರು ಉತ್ತರಿಸದಾದರು ದೀಕ್ಷೆಯನು ತ್ಯಜಿಸೆಂದು ಮಗನಲ್ಲಿ ಮೊರೆಯಿಡುತ ಅಚ್ಯುತ ಪ್ರೇಕ್ಷರಿಗೆ ಮತ್ತೊಮ್ಮೆ ನಮಿಸುತ್ತ ಸತಿಯೊಡನೆ ಮನೆಯೆಡೆಗೆ ಮತ್ತೆ ಮರಳಿದರು ಮಗನ ಮುಖಚಂದ್ರಮನ ಹಗಲಿರುಳು ಸ್ಮರಿಸುತ್ತ ಕಲ್ಪದೋಪಾದಿಯಲಿ ಕ್ಷಣಗಳನು ಕಳೆದರು ॥ ೧೮ ॥ ಮಗನ ಮಾತಿಗೆ ತಲೆಬಾಗಿದ ತಂದೆ ಮಗನ ಮನದಿಚ್ಛೆಯನು ಬದಲಿಸುವ ಯತ್ನದಲಿ ಮರಳಿ ತೆರಳಿದರವರು ಮಗನ ಬಳಿಗೆ ನೇತ್ರಾವತಿ ನದಿಯ ಆಚೆಯ ಬದಿಗೆ ಕಾರ್ಮೂರು ಎಂಬೊಂದು ಗ್ರಾಮವುಂಟು ಆ ಗ್ರಾಮದಲ್ಲಿನ ಕುತ್ಯಾಡಿ ಮಠದಲ್ಲಿ ಗುರುವ ಸೇವಿಸುತಿದ್ದ ಮಗನ ನೋಡಿದರು ॥ ೧೯ ॥ ಹಿರಿಯರ ಮಾತನ್ನು ಮೀರಲಂಜುವರವರು ಮಗನ ನಿರ್ಧಾರವದು ಅಚಲ ವೆಂದರಿತವರು ಕುಪಿತರಾದರು ಮಗನ ಮನದ ನಿಶ್ಚಯ ಕಂಡು ನಿಜಸುತನು ಕೌಪೀನ, ದಂಡಕವ ಧರಿಸಿದರೆ ಪ್ರತಿಶ್ರವದ ಸಾಹಸವ ಮಾಡುವೆನು ಎಂದು ದೃಢವಾದ ನುಡಿಯಿಂದವರು ಘೋಷಿಸಿದರು ॥ ೨೦ ॥ ಹೊದೆದ ವಸ್ತ್ರವ ಹರಿದು, ಕೌಪೀನ ಧರಿಸಿ ವಾಸುದೇವನು ನುಡಿದ ಕಿಂಚಿತ್ತು ಅಳುಕದೆ "ಕೌಪೀನ ಧರಿಸಿರುವೆ, ಸಾಹಸವ ತೋರಿರಿ! ಸನ್ಯಾಸ ಸ್ವೀಕಾರ ಹರಿಗೆ ಪ್ರಿಯವಹುದು ಅಡ್ಡಿಯನ್ನೊಡ್ಡುವುದು ನಿಮಗೆ ತರವಲ್ಲ" ವಾಸುದೇವನ ನುಡಿಯು ತುಂಬ ಖಂಡಿತವಾಯ್ತು ॥ ೨೧ ॥ ಮಗನ ಮಾತನು ಕೇಳಿ ತಂದೆ ಮರುನುಡಿದ "ಹಡೆದವರ ಪಾಲನೆಯು ಮಿಗಿಲಾದ ಸತ್ಕಾರ್ಯ ಇಂತು ಪೇಳ್ವರು ಜಗದ ಎಲ್ಲ ಸಜ್ಜನರು ನಿನಗಿಂತಲೂ ಹಿರಿಯ ಇನ್ನೆರಡು ಮಕ್ಕಳು ಅಗಲಿಹರು ನಮ್ಮನ್ನು ಈಗಾಗಲೇ ನೀನು ತೊರೆದರೆ ನಮಗೆ ಇನ್ನಾರು ದಿಕ್ಕು ?" ॥ ೨೨ ॥ "ನಮಗೆಂದು ಮೂಡುವುದೊ ಜೀವನ ವಿರಕ್ತಿ ಅಂದೊದಗಬೇಕೆಮಗೆ ಸನ್ಯಾಸ ಶಕ್ತಿ ವಿಷಯ ಸಂಗವನೆಲ್ಲ ತೊರೆದು ನಿಂದಿಹೆ ನಾನು ನೀವು ಆಡಿದ ಮಾತು ಅಡ್ಡಿಯಾಗದು ಅದಕೆ ಮತ್ತೊಂದು ಮಾತನ್ನು ಖಚಿತಪಡಿಸುವೆ, ಕೇಳಿ ಇನ್ನೊಬ್ಬ ಪಾಲಕನು ಜನಿಸಿದರೆ ಮಾತ್ರ, ಸನ್ಯಾಸಿಯಾಗುವೆನು ನಾನು ಮುಂದೆ ॥ ೨೭ ॥ "ಪರಿಪರಿಯ ಶಾಸ್ತ್ರಗಳ ಬಲ್ಲವನು ನಾನು ಅದರಿಂದ ಸಹಿಸಿಹೆನು ನಿನ್ನ ವಿರಹದ ನೋವ ಸಹಿಸಲಾರಳು ಅದನು , ನಿನ್ನ ಹಡೆದವ್ವ" ತಂದೆಯಾ ನುಡಿ ಕೇಳಿ ವಾಸುದೇವನು ಅಂದ "ಆ ಮಾತು ಹಾಗಿರಲಿ,ನೀವಾದರೂ ನೀಡಿ ಅಪ್ಪಣೆಯನು" ಎಂದೆನುತ ತಂದೆಯ ಚರಣಕೆರಗಿದನು ॥ ೨೪ ॥ ಪರಮಜ್ಞಾನಿಗಳಾದ ಮಧ್ಯಗೇಹರು ಕೂಡ ಸೋಲನನುಭವಿಸಿದರು ವಾಗ್ಯುದ್ಧದಲ್ಲಿ ''ಹಡೆದವ್ವ ಒಪ್ಪಿದರೆ, ಇರದೆನ್ನ ಆಕ್ಷೇಪ" ಎಂದು ನುಡಿಯುತ ಆ ಭೂಸುರೋತ್ತಮರು ಮರಳಿದರು ಮತ್ತೊಮ್ಮೆ ಮನೆಯ ಕಡೆಗೆ ಅರುಹಿದರು ನಿಜಸತಿಗೆ ವಿಷದ ವಿಷಯವನು ॥ ೨೫ ॥ ಭಾವೀ ವಿಷ್ಣುತೀರ್ಥರ ಅವತಾರ ಶ್ರೀ ರಾಮಚಂದ್ರನಿಗೆ ಲಕ್ಷ್ಮಣನ ಪರಿಯಲ್ಲಿ ಶ್ರೀ ಭೀಮಸೇನನಿಗೆ ಇಂದ್ರನಂದನನಂತೆ ಕೃಷ್ಣ ಪರಮಾತ್ಮನಿಗೆ ಅನುಜ ಗದನಂತೆ ವಾಸುದೇವಗೆ ತಮ್ಮ ಹುಟ್ಟಿಯೇ ಬಿಟ್ಟ ಈ ಸೋದರನು ಅತ್ಯಂತ ಅಭಿಮಾನಶಾಲಿ ಅಣ್ಣನಲಿ ವಿಶ್ವಾಸ, ಭಯಭಕ್ತಿ, ಆದರ ॥ ೨೬ ॥ ಮಗನ ಸನ್ಯಾಸಕ್ಕೆ ಮಾತೆಯ ಮೌನ ಸಮ್ಮತಿ ಪ್ರಲಯ ಕಾಲಾಂತ್ಯದಲೂ ನಾಶವಾಗದ ಜ್ಞಾನ ! ಇಂಥ ಜ್ಞಾನವ ಪಡೆದ ಆ ವಾಸುದೇವ, ತನ್ನ ಮನೆಗೈತಂದು ಇಂತು ನುಡಿದ : "ಈ ಬಾಲಕನೆ ನಿಮ್ಮಯ ಪಾಲಕನು ಮುಂದೆ" ಪತಿಯ ಆಣತಿಯಂತೆ ಸುತಗೆ ಸನ್ಯಾಸವನು ಧಿಕ್ಕರಿಸಿ ನುಡಿದಿದ್ದ ಮಾತೆಗಿಂತೆಂದನು : ॥ ೨೭ ॥ "ಮರಳಿ ನನ್ನನು ನೀವು ನೋಡಬಯಸುವಿರಾ ? ಅಂತಾದರಿಂದೆನಗೆ ಅನುಮತಿಯ ನೀಡಿರಿ ಸನ್ಯಾಸ ಸ್ವೀಕರಿಸಿ ಸಾರ್ಥಕ್ಯ ಪಡೆಯುವೆನು ಇಲ್ಲವಾದರೆ ನಿಮಗೆ ನಾನು ಕಾಣುವುದಿಲ್ಲ ಎಂದೆಂದೂ ಬರದಂತೆ ಎಲ್ಲಿಗೋ ತೆರಳುವೆನು ದೇಶ ಕೋಶವ ಬಿಟ್ಟು ದೂರ ಹೋಗುವೆನು" ॥ ೨೮ ಈ ಪರಿಯ ಮಾತನ್ನು ಸುತನು ನುಡಿದುದ ಕೇಳಿ ತಾಯಿ ಪರಿತಪಿಸಿದಳು ಪರಿಪರಿಯ ವಿಧದಲ್ಲಿ "ಎಂದೆಂದೂ ಕಾಣದಿಹ ಮಗನಿದ್ದರೇನು ? ಇಲದಿದ್ದರೇನು ? ಈ ಬಗೆಯ ಬಾಳನ್ನು ತಾಳಲಾರೆನು ನಾನು" ಇಂತೆಂದು ಚಿಂತಿಸಿದ ಆ ಪರಮ ಸಾಧ್ವಿ ಸುತನ ಈ ಸದ್ಬಯಕೆ ಈಡೇರಲೆಂದಳು ॥ ೨೯ ॥ ಸನ್ಯಾಸ ಸ್ವೀಕಾರ ಲೋಕಕೆಲ್ಲಕೂ ಗುರುವು, ಉತ್ತಮೋತ್ತಮ ದೇವ ರುದ್ರಾದಿ ದೇವಗಣಕೆಲ್ಲ ಸಂಪೂಜ್ಯ ಇಂಥ ದೇವರ ದೇವ ಶ್ರೀ ವಾಸುದೇವ ತೆರಳಿದನು ಪರಮಗುರು ಅಚ್ಯುತ ಪ್ರೇಕ್ಷರ ಬಳಿಗೆ ಎಲ್ಲ ಆಶ್ರಮಧರ್ಮ ಪಾಲಿಸುವವನೀತ ಅಂಥ ಸುರವರ ಪಡೆದ ಯತಿಧರ್ಮದಾಶ್ರಯವ ॥ ೩೦ ॥ ಕಾಲಕಾಲಕೆ ತಕ್ಕ ಎಲ್ಲ ಧರ್ಮಗಳನ್ನೂ ವಾಸುದೇವನು ಬಲ್ಲ ನಿರ್ದಿಷ್ಟವಾಗಿ ಶಾಸ್ತ್ರೋಕ್ತ ವಿಧಿಗಳಿಗೆ ಅನುಸಾರವಾಗಿ ಕರ್ಮಗಳ ಮಾಡುವನು ಶ್ರದ್ಧೆ ನಿಷ್ಠೆಗಳಿಂದ ತನಗೆ ಒಲಿದಿರುವ ಶ್ರೀ ಹರಿಯ ಕೃಪೆಗಾಗಿ ತನ್ನೆಲ್ಲ ಸರ್ವಸ್ವ ಆತಗರ್ಪಿಸಿದ ॥ ೩೧ ॥ ಜ್ಞಾನಿಗಳು ಜಪಿಸುವರು ಪ್ರಣವಮಂತ್ರವನು ಮೂರು ಮಾತ್ರೆಗಳಿಂದ ಆರಂಭವಾಗುವ ಮಂತ್ರ ಬಹುವಿಧದ ಮಾತ್ರೆಗಳ ಪರಿಯಲ್ಲಿ ಹರಡುವುದು ಪ್ರಣವ ಮಂತ್ರದ ಜಪಕೆ ಬ್ರಹ್ಮನೇ ಅಧಿಕಾರಿ ಭವಿಷ್ಯ ಬ್ರಹ್ಮ ಈ ವಾಸುದೇವ ಪ್ರಣವ ಪಠಿಸಲು ತಕ್ಕ ಸನ್ಯಾಸಿಯಾದ ॥ ೩೨ ॥ ವಾಯುದೇವರ ಹೆಸರು ಶ್ರೀ ಪೂರ್ಣಬೋಧ ದ್ವಿಜವೃಂದ ವಂದಿತ ವೇದಗಳಲಿದು ಮಾನ್ಯ ಸಕಲ ಶಾಸ್ತ್ರವ ಬಲ್ಲ ಅಚ್ಯುತ ಪ್ರೇಕ್ಷರು ಶಿಷ್ಯನನು ಕರೆದರು ಈ ಹೆಸರಿನಿಂದ ಸಕಲ ಸದ್ಗುಣಗಳಿಗೆ ನೆಲೆ ವಾಸುದೇವ ಈ ಹೆಸರು ಆತನಿಗೆ ಅನ್ವರ್ಥವಾಯಿತು ॥ ೩೩ ॥ ಗಂಧವೇ ಮೊದಲಾದ ಅಂಗಲೇಪನವಿಲ್ಲ ತಾಂಬೂಲ ಮೆಲ್ಲದೆಯೆ ತುಟಿಯೆಲ್ಲ ಕೆಂಪು ಸೌಂದರ್ಯ ವರ್ಧನೆಯ ಯಾವ ಸಾಧನವಿಲ್ಲ ಆದರೂ ಈ ಯತಿಯ ತೇಜಸ್ಸು ಅಪ್ರತಿಮ ದಂಡಮಾತ್ರವ ಹಿಡಿದು ಮೂರು ಲೋಕವ ಗೆಲುವ ಮರುಳಾದರು ಮಂದಿ, ಈ ಯತಿಯ ಕಂಡು ॥ ೩೪ ॥ ಶ್ರೀ ಪೂರ್ಣ ಪ್ರಜ್ಞರ ಅಜ್ಞ ವಿಡಂಬನೆ ಭುಜಂಗ, ಭೂತೇಶ, ವಿಹಂಗಪಾದಿಗಳು ಕಾಯುವರು ಸರದಿಯನು ಈತನಿಗೆ ನಮಿಸಲು ಇಂಥ ಮಹಿಮರು ನಮ್ಮ ಶ್ರೀ ಪೂರ್ಣಬೋಧರು ಅಚ್ಯುತಪ್ರೇಕ್ಷರೇ ಮುಂತಾದ ಯತಿಗಳಿಗೆ ಸಾಷ್ಟಾಂಗ ನಮಿಸಿದರು ಭಕ್ತಿಪೂರ್ವಕವಾಗಿ ಎಂಥದೀ ಚೋದ್ಯ ! ಎಂಥ ವಿಡಂಬನೆ ! ॥ ೩೫ ॥ ಯತಿವರರು ತೊಡಗಿದರು ಬೋಧಿಸಲು ಧರ್ಮವ ಶಿಷ್ಯನಿಗೆ ಎಲ್ಲವೂ ಕರತಲಾಮಲಕ ಚಕಿತಗೊಂಡರು ಗುರುವು ಆಶ್ಚರ್ಯದಿಂದ ಪರಿಪೂರ್ಣ ಜ್ಞಾನದ ಶಿಷ್ಯನನು ಕಂಡು ಕಲಿಸತೊಡಗಿದ ಗುರುವು ತಾವೇ ಕಲಿತರು ಅಂದು ಮನದೊಳಗೆ ವಿಸ್ಮಯದಿ ಮನಸೋತರವರು ॥ ೩೬ ॥ ರೂಪ್ಯ ಪೀಠಾಲಯದ ಅಧಿ ದೈವ ಹರಿಗೆ ನಮಿಸಿದರು ಭಕುತಿಯಲಿ ಶ್ರೀ ಪೂರ್ಣಪ್ರಜ್ಞರು ಆಗೊಂದು ಸೋಜಿಗವು ಜರುಗಿತಲ್ಲಿ ನರನೊಬ್ಬನಲ್ಲಿ ಆವಿಷ್ಟಗೊಂಡನು ಹರಿಯು ಪೂರ್ಣ ಬೋಧರ ತೋಳ ತನ್ನ ತೋಳಿಂದ ಹಿಡಿದೆತ್ತಿ ನಿಲಿಸಿದನು ಶ್ರೀ ಹರಿಯು ಆಗ ॥ ೩೭ ॥ ಅಚ್ಯುತ ಪ್ರೇಕ್ಷರ ಬಳಿಗೆ ಐತಂದು ಶ್ರೀ ಪೂರ್ಣಪ್ರಜ್ಞರನು ಜೊತೆಯಲ್ಲಿ ಕರೆತಂದು ನುಡಿದನಾ ಶ್ರೀ ಹರಿಯು ಆಗ ಇಂತೆಂದು : "ತತ್ವಶಾಸ್ತ್ರಗಳನ್ನು ಅರಿಯುವ ಬಯಕೆಯಲಿ ಸೇವಿಸಿದ ನನ್ನನ್ನು ಬಹಳ ಕಾಲದಲಿ ಸ್ವೀಕರಿಸು ಮಹಿಮನನು, ಈ ಶಿಷ್ಯನನ್ನು " ॥ ೩೮ ॥ ಸ್ವೀಕರಿಸಿ ಆದರದಿ, ಶ್ರೀ ಹರಿಯ ಕರುಣೆಯನು ಸ್ಮರಿಸಿದರು ಆತನನು ಪರಿಪರಿಯ ವಿಧದಲ್ಲಿ ಮುದಗೊಂಡು, ಕೃತ ಕೃತ್ಯ ನಾದೆನೆಂದವರು ವಿಷಯ ಸಂಗವನೆಲ್ಲ ಇಡಿಯಾಗಿ ತೊರೆದವರು ಪೂರ್ಣ ಬೋಧರ ಸಂಗ ಬಹುವಾಗಿ ಬಯಸಿದರು ವಿಷಯ ಪರಿತ್ಯಾಗಕ್ಕೆ ಸತ್ಸಂಗ ಭೂಷಣ ॥ ೩೯ ॥ ಮಧ್ವ ಸರೋವರ ಪ್ರಸಂಗ ಗಂಗೆಯಲಿ ಸ್ನಾನಕ್ಕೆ ಹೋಗಬಯಸಿದ ಶಿಷ್ಯ ಗುರುವ ಅನುಮತಿಗಾಗಿ ಅಡಿಗಡಿಗೆ ನಮಿಸಿದನು ಚಿಂತಿಸುತ ಕುಳಿತರು ಅಚ್ಯುತ ಪ್ರೇಕ್ಷರು ಬರಲಿರುವ ದಿನಗಳಲಿ ಶಿಷ್ಯವಿರಹದ ಬೇಗೆ ಭರಿಸುವುದು ಹೇಗೆಂದು ಪರಿತಪಿಸಿ ಕುಳಿತರು ಹರಿಯ ಮೊರೆ ಹೊಕ್ಕರು ಇದರ ಪರಿಹಾರಕ್ಕೆ ॥ ೪೦ ॥ ಎಂದೆಂದೂ ಓಗೊಡುವ ಶ್ರೀ ಹರಿಯು ಮೊರೆಗೆ ಆ ಕ್ಷಣವೆ ಒಬ್ಬನೊಳು ಆವಿಷ್ಟನಾಗಿ ಆದೇಶವಿತ್ತನಾ ಕರುಣಾಳು ಹರಿಯು "ಇಲ್ಲಿನಾ ಕೊಳದಲ್ಲಿ ನಾಳಿನಾಚೆಯ ದಿನದಿ, ದೇವನದಿ ಗಂಗೆಯು ಬರಲಿಹಳು ಇಲ್ಲಿ ತೆರಳದಿರಿ ನೀವಿನ್ನು ಗಂಗೆಯ ಸ್ನಾನಕ್ಕೆ" ॥ ೪೧ ॥ ಭಗವದಾಣತಿಯಂತೆ ಬಂದಿಳಿದಳಾ ಗಂಗೆ ದೇವಸನ್ನಿಧಿಯಲ್ಲಿ ಪ್ರವಹಿಸುತ ನಿಂದಳು ಪೂರ್ಣಬೋಧರ ಹಿರಿಯ ಮುಂದಾಳುತನದಲ್ಲಿ ಪುಳಕಗೊಂಡರು ಮಂದಿ ಜಳಕವಾಡುತಲಲ್ಲಿ ಅವರಲ್ಲಿ ನೆಲೆಸಿರುವ ಶ್ರೀ ಹರಿಯ ಕೃಪೆಗಾಗಿ ಹರಿಯುವಳು ಹನ್ನೆರಡು ವರ್ಷಗಳಿಗೊಮ್ಮೆ ॥ ೪೨ ॥ ಶ್ರೀ ಪೂರ್ಣ ಪ್ರಜ್ಞ ವಿಜಯ ಆಶ್ರಮವ ಸ್ವೀಕರಿಸಿ ನಾಲ್ವತ್ತು ದಿನವಾಯ್ತು ಪೂರ್ಣಬೋಧರ ಕೀರ್ತಿ ಎಲ್ಲೆಡೆಯು ಹರಡಿತ್ತು ಧಾವಿಸುತ ಬಂದರು ಪಂಡಿತೋತ್ತಮರೆಲ್ಲ ತರ್ಕ ಮೀಮಾಂಸೆಗಳ ದಿಗ್ಗಜಗಳೆಲ್ಲ ವಾಸುದೇವ ಎಂಬ ಖ್ಯಾತ ಪಂಡಿತ ಕೂಡ ಸೋಲನನುಭವಿಸಿದನು ಶಾಸ್ತ್ರಾರ್ಥದಲ್ಲಿ ॥ ೪೩ ॥ ಇಷ್ಟಸಿದ್ಧಿಯು ಅನಿಷ್ಟ ಸಿದ್ಧಿಯಾಯಿತು ಚತುರನಾಗಲಿ ಶಿಷ್ಯ ಮತ್ತಷ್ಟು ಎಂದು ಬಯಸಿದರು ಪರಮಗುರು ಅಚ್ಯುತ ಪ್ರೇಕ್ಷರು "ಇಷ್ಟಸಿದ್ಧಿ" ಎಂಬ ಛಲ ಜಾತಿ ವಾರಿಧಿಯ ಪಠಣ ಬೋಧನವನ್ನು ಪ್ರಾರಂಭಿಸಿದರು ಗುರುವ ಬೋಧನೆಯನ್ನು ಆಲಿಸಿದರಾದರೂ ಮಹಿಮರಿಗೆ ಅದರಲ್ಲಿ ಸ್ವಲ್ಪವೂ ರುಚಿ ಇಲ್ಲ ॥ ೪೪ ॥ "ಆದ್ಯಪದ್ಯಗಳಲ್ಲೇ ದೋಷಗಳು ಇಹುದು ಅವುಗಳಾ ಸಂಖ್ಯೆ ಎರಡು ಹದಿನಾರಹುದು'' ಎಂದು ಅರುಹಿದ ಶಿಷ್ಯ, ಬಿಂಕದಲಿ ನಿಂತು "ಪರಿಹಾರ ದೊರೆಯುವುದು ಅವಕೆಲ್ಲ ಮುಂದೆ" ಗುರುವ ಮಾತನು ಕೇಳಿ, ಶಿಷ್ಯನುಡಿದನು ಮತ್ತೆ "ಏನದಕೆ ಉತ್ತರ ? ಈಗಲೇ ಹೇಳಿಬಿಡಿ" ॥ ೪೫ ॥ ಕನಲಿದರು ಗುರುಗಳು, ಶಿಷ್ಯನಾ ನುಡಿ ಕೇಳಿ ಮಾಯಾವಾದಧ್ವರ್ಯು ಅಚ್ಯುತ ಪ್ರೇಕ್ಷರು ಮಾತ ಮುಂದರಿಸಿದರು ಶಿಷ್ಯನನು ಕುರಿತು "ಪಾಠ ಹೇಳಲು ನಿಮಗೆ, ಸಾಧ್ಯವಾಗದು ನನಗೆ" ಮಾತ ಕೇಳಿದ ಮಂದಿ, ಕಳವಳವ ಹೊಂದಿ ಸಂಶಯವತಳೆದರು ಅದ್ವೈತದಲ್ಲಿ ॥ ೪೬ ॥ ಶ್ರೀ ಪೂರ್ಣ ಪ್ರಜ್ಞರ ಪಾಠ ಪ್ರವಚನ ವೈಖರಿ ಪಾಮರ, ಪಂಡಿತ, ಯತಿವರ್ಗವೆಂದು ಮುಮುಕ್ಷುಗಳಲುಂಟು ಹಲವಾರು ವರ್ಗಗಳು ಪಾಮರಗೆ ಶ್ರವಣ, ವಿಬುಧರಿಗೆ ಪ್ರವಚನ ಯತಿಗಳಿಗೆ ಮತ್ತಿಷ್ಟು ಅಧಿಕ ಸಾಧನೆ ಬೇಕು ಜನವಿನಂತಿಗೆ ಮಣಿದು ಶ್ರೀ ಪೂರ್ಣಪ್ರಜ್ಞರು ಮಿಥ್ಯವಾದದ ತತ್ವ ತಿಳಿಯ ಹೇಳಿದರು ॥ ೪೭ ॥ ಪೂರ್ಣ ಪ್ರಜ್ಞರ ಸಭೆಯು ಸರ್ವಮುದದಾಯಕ ವಿಷಯ ಮಂಡನೆಯಲ್ಲಿ ಅಡೆತಡೆಗಳಿಲ್ಲ ವಸ್ತು ವಿಷಯಗಳಲ್ಲಿ ಸಂದೇಹಕೆಡೆಯಿಲ್ಲ ಪೂರ್ವ ಪಕ್ಷಕೆ ಕೊಡುವ ಉತ್ತರವು ಖಚಿತ ಶಾಸ್ತ್ರ ಪ್ರಮೇಯಗಳ ನೇತಾರರೂ ಕೂಡ ಪ್ರವಚನವ ಕೇಳಿದರು ಅರಿವ ಬಯಕೆಯಲಿ ॥ ೪೮ ॥ ಶ್ರೀ ಪೂರ್ಣ ಪ್ರಜ್ಞರ ಶಾಸ್ತ್ರ ಪಾಂಡಿತ್ಯ ಹೀಗೊಮ್ಮೆ ಗುರುಗಳ ದಿವ್ಯ ಸಮ್ಮುಖದಲ್ಲಿ ಐದಾರು ಶಿಷ್ಯರು ಐದಾರು ರೀತಿಯಲಿ ಭಾಗವತ ಪಾಠವನು ಒಪ್ಪಿಸುತ್ತಿದ್ದರು ಲಿಖಿತ ಪಾಠದ ಪ್ರತಿಯ ಒಂದನ್ನು ತೋರಿ ಪೂರ್ಣ ಪ್ರಜ್ಞರು ನಿಂತು ಖಚಿತದಲಿ ನುಡಿದರು "ಇದು ಮಾತ್ರ ಭಾಗವತದ ಮೂಲ ಪಾಠ" ॥ ೪೯ ॥ "ಇತರ ಪಾಠಗಳಲ್ಲಿ ತಪ್ಪು ಸ್ವಲ್ಪವೂ ಇಲ್ಲ ಇಂತಿರಲು ಹೇಗೆ ಸರಿ, ನಿಮ್ಮ ಈ ನಿರ್ಣಯ ?" ಗುರುಗಳೆಸೆದರು ಪ್ರಶ್ನೆ ಪೂರ್ಣ ಪ್ರಜ್ಞರ ಕಡೆಗೆ ಧೃತಿಗೆಡದೆ ನುಡಿದರು ಪೂರ್ಣಪ್ರಜ್ಞರು ಆಗ "ನಾನು ಹೇಳಿದ ಪಾಠ ಸರಿಯಾದ ಪಾಠ ವೇದವ್ಯಾಸರ ರಚಿತ ಮೂಲ ಪಾಠ" ॥ ೫೦ ॥ ಇದ ಕೇಳಿ ಗುರುಗಳಿಗೆ ಆಶ್ಚರ್ಯವಾಯ್ತು "ಭಾಗವತ ಮೂಲವನು ಬಲ್ಲೆನೆಂಬಿರಿ ನೀವು ಪಂಚಮ ಸ್ಕಂಧದ ಮೂಲಪಾಠವ ಹೇಳಿ " ಎಂದ ಗುರುಗಳ ಮಾತ ಕೇಳಿದಾಕ್ಷಣದಲ್ಲಿ ವ್ಯಾಸವಿರಚಿತ ಮೂಲ ಪಂಚಮ ಸ್ಕಂಧವನು ಪಟಪಟನೆ ನುಡಿದರು ಆ ಪೂರ್ಣಪ್ರಜ್ಞರು ॥ ೫೧ ॥ ಗುರುಗಳಾಣತಿಯಂತೆ ಎಲ್ಲ ಶಿಷ್ಯರೂ ಕೂಡಿ ಪಂಚಮ ಸ್ಕಂಧದ ಪ್ರತಿಗಳೆಲ್ಲವ ನೋಡಿ ಓಡೋಡಿ ಬಂದರು ಗುರುಗಳೆಡೆಗೆ ಪೂರ್ಣ ಪ್ರಜ್ಞರು ನುಡಿದ ಪಂಚಮಸ್ಕಂಧವದು ವೇದವ್ಯಾಸರ ರಚಿತ ಮೂಲ ಕೃತಿಯಾಗಿತ್ತು! ಇದ ಕಂಡ ಎಲ್ಲರಿಗೂ ಅಚ್ಚರಿಯೋ ಅಚ್ಚರಿ! ॥ ೫೨ ॥ ಪೂರ್ಣಪ್ರಜ್ಞರು ಸರ್ವಜ್ಞರು "ಓ ಪೂರ್ಣ ಪ್ರಜ್ಞರೆ ! ಗೆಲುವು ನಿಮದಾಯ್ತಿಂದು ಈ ಜನ್ಮದಲಿ ನೀವು ಒಮ್ಮೆಯೂ ಓದದಿಹ ಇಂಥ ಗ್ರಂಥವನೆಲ್ಲ ಹೇಗೆ ಅರಿತಿರಿ ? ಹೇಳಿ" "ಓದಿರುವೆ ಇದನೆಲ್ಲ ಪೂರ್ವ ಜನ್ಮಗಳಲ್ಲೇ ಧರ್ಮಗ್ರಂಥಗಳೆಲ್ಲ ನಾಲಿಗೆಯಲಿ ನಲಿಯುವುವು" ಎಂಬ ಮಾತನು ಕೇಳಿ ಚಕಿತಗೊಂಡರು ಗುರುವು ॥ ೫೩ ॥ ಶ್ರೀ ಮಧ್ವಕೀರ್ತಿಯ ವೈಭವ ಜಗಕೆಲ್ಲ ಆಚ್ಚರಿಯ ಮೂಡಿಸುವ ಪರಿಯಲ್ಲಿ ಪರಿಪರಿಯ ರೀತಿಯಲಿ ಜ್ಞಾನವನು ಪಡೆದ ಪೂರ್ಣ ಪ್ರಜ್ಞರ ಖ್ಯಾತಿ ಎಲ್ಲೆಡೆಯೂ ಹರಡಿತ್ತು .ಕತ್ತಲೆಯನೋಡಿಸುವ ಸೂರ್ಯನ ಪ್ರಭೆಯಂತೆ ಸುಜನಾಬ್ಜ ನಿವಹಕೆ ಆನಂದವೀಯುವ ಚಂದ್ರಮನ ಪರಿಯಾಯ್ತು ಯತಿವರರ ಕೀರುತಿ ॥ ೫೪ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಾಚಾರ್ಯರು ರಚಿಸಿದ ಶ್ರೀ ಸುಮಧ್ವ ವಿಜಯವೆ೦ಬ ಮಹಾಕಾವ್ಯದ ಆನಂದಾಂಕಿತವಾದ ನಾಲ್ಕನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ ಐದನೆಯ ಸರ್ಗ ಶ್ರೀ ಗುರುಭ್ಯೋ ನಮಃ ಐದನೆಯ ಸರ್ಗ ವೇದಾಂತ ಸಾಮ್ರಾಜ್ಯಾಭಿಷೇಕ ವೇದಾಂತ ವಿದ್ಯೆಯ ಸಾಮ್ರಾಜ್ಯ ಪಾಲನೆಗೆ ಸರ್ವಜ್ಞರಾದಂಥ ಪೂರ್ಣಬೋಧರೇ ಅರ್ಹ ಇಂತೆಂದು ನಿಶ್ಚೈಸಿ ಅಚ್ಯುತ ಪ್ರೇಕ್ಷರು ಶ್ರೀ ಪೂರ್ಣಬೋಧರನು ಆದರದಿ ಕರೆತಂದು ಗಂಗಾದಿ ಪುಣ್ಯ ಜಲ ಕಲಶಗಳ ತಂದು ಅಭಿಷೇಕ ಮಾಡಿದರು ಶಂಖದಲಿ ತುಂಬಿ ॥ ೧ ॥ ಶ್ರೀ ಪೂರ್ಣ ಪ್ರಜ್ಞರು ಆನಂದತೀರ್ಥರಾದರು ಶ್ರೀ ಹರಿಯು ಎಂದೆಂದೂ ಆನಂದ ರೂಪನು ಆತನಲಿ ಮನಸನ್ನು ನಿಲಿಸಿದವರಿವರು ಸ್ವರೂಪ ಸಾಧನದ ಶಾಸ್ತ್ರಗಳ ರಚಿಸುವರು ಪೂರ್ಣ ಬೋಧರು ಈಗ ಆನಂದತೀರ್ಥರು ಅಚ್ಯುತ ಪ್ರೇಕ್ಷರು ನೀಡಿದ ಹೆಸರು ಅನುರೂಪವಾಯಿತು ಸಂಪೂರ್ಣವಾಗಿ ॥ ೨ ॥ ಆನಂದ ತೀರ್ಥರೇ ಅನುಮಾನ ತೀರ್ಥರು ಅಚ್ಯುತ ಪ್ರೇಕ್ಷರ ಯತಿ ಮಿತ್ರರೊಬ್ಬರು ಬಂದರತಿಥಿಗಳಾಗಿ ಶಿಷ್ಯರೊಡಗೂಡಿ ಈ ಶಿಷ್ಯರೆಲ್ಲರೂ ತರ್ಕದಲಿ ನಿಪುಣರು ತಮ್ಮ ಬುದ್ಧಿಯ ಬಗ್ಗೆ ಹೆಚ್ಚು ದುರಹಂಕಾರ ಆನಂದ ತೀರ್ಥರ ಅಪ್ರತಿಮ ಪ್ರತಿಭೆಯನು ಒರೆಗಲಿನಲಿರಿಸಿ ನೋಡುವಾಸೆ ॥ ೩ ॥ ಆನಂದತೀರ್ಥರು ಬಲು ಚತುರ ಮತಿಗಳು "ಅನುಮಾನದಿಂದಲೇ ಭೇದ ಸಾಧಿಸಬಹುದು" ಎಂಬೊಂದು ಯುಕುತಿಯನು ಚತುರತನದಲಿ ಬಳಸಿ ಗೆಲ್ಲಬಂದವರನ್ನು ಗೆಲಿದು ಮೆಟ್ಟಿದರು ಖಗಪತಿಯು ಅಜಗರನ ಅಟ್ಟಿಹೋಗುವ ತೆರದಿ ಎದುರಾಳಿಗಳಿಗೆಲ್ಲ ಬಿರುಗಾಳಿಯಾದರು ॥ ೪ ॥ ಹಿಂದಿರುಗಿ ಬಂದರು ಎದುರಾಳಿಗಳು ಮತ್ತೆ "ಕಂಗಳಿಗೆ ಗೋಚರಿಪ ಜಗವೆಲ್ಲ ಮಿಥ್ಯ ಶುಕ್ತಿಗಳ ಮೇಲಿರುವ ರಜತ ಲೇಪನದಂತೆ" "ಈ ಜಗವು ಸತ್ಯ ಘಟಪಟಾದಿಗಳಂತೆ" ಅನುಮಾನ ವೆಂಬೊಂದು ತರ್ಕಶಸ್ತ್ರದ ಸಹಿತ ಖಂಡನವ ಮಾಡಿದರು ಆನಂದ ತೀರ್ಥರು ॥ ೫ ॥ ಆನಂದ ತೀರ್ಥರ ಪ್ರತಿಭೆಯನು ಕಂಡು ಅಪ್ರತಿಭರಾದರು ಮಧ್ವ ಎದುರಾಳಿಗಳು "ಹೇತುವಿಗೆ ಅತಿವ್ಯಾಪ್ತಿ ದೋಷವಿಹುದೆಂದೆನುತ ಮಧ್ವರನು ತರ್ಕದಲಿ ಗೆಲ್ಲಬಯಸಿದರವರು "ಶಕ್ತಿರೂಪಗಳಲ್ಲಿ ದೃಶ್ಯತ್ವವಿಲ್ಲ ಅದರಿಂದಲದು ಅಹುದು ಮಿಥ್ಯಜ್ಞಾನ" ಎಂಬಂಥ ಯುಕ್ತಿಯಲಿ ಮಧ್ವಮುನಿ ಗೆಲಿದರು ॥ ೬ ॥ "ಅನುಮಾನ ವೆಂಬುದಕೆ ಎರಡು ಅಲಗುಗಳುಂಟು "ಇದು ಮಿಥ್ಯ, ಅದು ಸತ್ಯ" ಎಂಬ ತರ್ಕಗಳನ್ನು ಸರಿಯಾಗಿ ಸೀಳುವುದಕೆ ಸರಿಯಾದ ಶಸ್ತ್ರ ಪ್ರತ್ಯಕ್ಷ, ಆಗಮ ಪ್ರಾಮಾಣ್ಯ ಸತ್ಯ" ಇಂತೆಂದು ವಾದಿಸಿದ ಆನಂದ ತೀರ್ಥರು ಅನುಮಾನ ತೀರ್ಥರೆಂದೆನಿಸಿದರು ಜಗದಿ ॥ ೭ ॥ ಬುದ್ಧಿಸಾಗರನೆಂಬ ವೇದಗಳ ದ್ವೇಷಿಯು ವಾದಿಸಿಂಹ ಎಂಬ ಮತ್ತೊಬ್ಬನೊಡಗೂಡಿ ವಾದಿಕರಿನಿಕರಗಳ ಧ್ವಂಸ ಮಾಡುವ ಎಂದು ತಮ್ಮೊಡನೆ ವಾದಿಸುವ ಪಂಡಿತರ ಅರಸುತ್ತ ಲೋಕದಲ್ಲೆಡೆಯಲ್ಲೂ ಸಂಚಾರ ಮಾಡುತ್ತ ರಜತ ಪೀಠಾಪುರಕೆ ಆಗ ಐತಂದನು ॥ ೮ ॥ ವಾದಿಸಿಂಹ ಗ್ರಾಮಸಿಂಹನಾದನು ಪಾಂಡಿತ್ಯಮದದಿಂದ ಗರ್ವಿಷ್ಠರಾದವರ ಸೊಕ್ಕನಡಗಿಸ ಬಯಸಿ ಅಚ್ಯುತ ಪ್ರೇಕ್ಷರು ಶಿಷ್ಯನೊಬ್ಬನ ಕಳುಹಿ ರೂಪ್ಯ ಪೀಠಾಪುರಕೆ "ಸುಖತೀರ್ಥ" ವೆಂಬೊಂದು ಬಾಣವನು ತರಿಸಿದರು "ಮಠಾಂತರ" ಎಂಬ ಬತ್ತಳಿಕೆಯಿಂದ ಬಾಣಪ್ರಯೋಗಕ್ಕೆ ಸನ್ನದ್ಧರಾದರು ॥ ೯ ॥ ವಾಕ್ಯಾರ್ಥ ವೆಂಬೊಂದು ವಿಬುಧ ಯುದ್ಧದಲಿ ಯಾರು ಗೆಲ್ಲುವರೆಂಬ ತವಕದಲಿ ಕುಳಿತಿದ್ದ ಕೌತುಕದ ಮಂದಿಯನು ನಸುನಗುತ ನೋಡುತ್ತ ತ್ವರಿತ ಗತಿಯಲಿ ಬಂದ ಆನಂದ ತೀರ್ಥರು ರೂಪ್ಯಾ ಪೀಠಾಲಯದ ದೇವಸನ್ನಿಧಿಯಲ್ಲಿ ಆಸೀನರಾಗಿದ ಗುರುಗಳಿಗೆ ನಮಿಸಿದರು ॥ ೧೦ ॥ ಗರ್ವಿಷ್ಠನಾದರೂ ಚತುರಮತಿ, ವಾಗ್ಮಿ ವಾದಿಸಿಂಹನ ವಿದ್ಯೆ ಗಳಿಸಿತ್ತು ಖ್ಯಾತಿ ಪರ್ವತದ ಝರಿಯಂತೆ ಆತನಾ ವಾಕ್ಸರಣಿ ಆನಂದ ತೀರ್ಥರದು ಮೊನಚಾದ ಅಂಬು ಖಂಡಿಸಿತು ಪಂಡಿತನ ವಾದವೆಂಬುವ ಗದೆಯ ತರ್ಕ ವಿಶ್ಲೇಷಣೆಯ ಹರಿತ ಆಯುಧದಿಂದ ॥ ೧೧ ॥ ಆನಂದ ತೀರ್ಥರ ಜ್ಞಾನಕ್ಕೆ ಬೆರಗಾಗಿ, ಮೊದಲ ಸೋಲಿಗೆ ಆತ ಧೃತಿಗೆಡದೆ ಮತ್ತೆ ಮತ್ತೊಂದು ವಿಷಯವನು ವಾದಕ್ಕೆ ಸೂಚಿಸಿದ ವಿಷಯದಲಿ ಹದಿನೆಂಟು ದೋಷಗಳ ತೋರುತ್ತ ಸಡ್ಡು ಹೊಡೆದನು ಮತ್ತೆ ಆನಂದ ತೀರ್ಥರಿಗೆ ತವಕಗೊಂಡರು ಮಂದಿ ಆಚಾರ್ಯರುತ್ತರಕೆ ॥ ೧೨ ॥ ನಕ್ಷತ್ರಗಳಿಗೆಲ್ಲ ವಿಷ್ಣುಪದ ನೆಲೆಯಹುದು ಶ್ರೀ ಹರಿಯ ಚರಣಗಳು ರವಿಕಿರಣಕಾಸರೆಯು ಈ ಕಿರಣ ಕತ್ತಲೆಯ ಬಡಿದು ಓಡಿಸುವಂತೆ ಶ್ರೀ ಹರಿಯ ವಾಕ್ಯಗಳ ಆಸರೆಯ ಪಡೆದು ವಾದಿಸಿಂಹನ ಎಲ್ಲ ವೈಕಲ್ಪಗಳಿಗೂ ವಿವರಣೆಯ ನೀಡಿದರು ಆನಂದ ತೀರ್ಥರು ॥ ೧೩ ॥ ಜಲಧಿ ಮಿಗಿಲಾಗಿಹುದು ಹಲವು ನದಿ ನಿವಹಕ್ಕೆ ಆ ಜಲಧಿಯಂತಿಹುದು ಬುದ್ಧಿಸಾಗರ ಪ್ರತಿಭೆ ಆದರಾ ಪ್ರತಿಭೆಗೆ ಗರ್ವ, ದರ್ಪದ ಕಲುಷ ಕುಂಭಸಂಭವನೊಮ್ಮೆ ಜಲಧಿಯನು ಕುಡಿದಂತೆ ಚಾತುರ್ಯ, ಜಾಣ್ಮೆಗಳ, ಶಾಸ್ತ್ರಗಳ ನೆರವಿಂದ ಗೆಲಿದರೆದುರಾಳಿಯನು ಆನಂದ ತೀರ್ಥರು ॥ ೧೪ ॥ ದಿಕ್ಕೆಟ್ಟು ಹೋದರು, ದುರ್ವಾದಿದ್ವಯರು ನಾಳಿನಲಿ ವಾಕ್ಯಾರ್ಥ ಮುಂದರಿಯಲೆಂದರು ಸಲಹೆಯನು ವರ್ಜಿಸಿದರಾನಂದ ತೀರ್ಥರು ಪಂಡಿತರ ಪಾಂಡಿತ್ಯ ಸಂಶಯಕ್ಕೀಡಾಯ್ತು ನಡುನಿಶೆಯಲಾದ್ವಯರು ಎಲ್ಲಿಗೋ ಓಡಿದರು ಜನಮನದ ಅನುಮಾನ ಇದರಿಂದ ಬಲವಾಯ್ತು ॥ ೧೫ ॥ "ಬುದ್ಧಿಸಾಗರ, ವಾದಿಸಿಂಹರು ಲೋಕದೊಳು ಖ್ಯಾತರು ಭೂಲೋಕದಲ್ಲೆಲ್ಲ ಜಯಭೇರಿ ಹೊಡೆದವರು ಇಂಥ ಪಂಡಿತರನ್ನು ಕ್ಷಣದಲ್ಲಿ ನಿಗ್ರಹಿಸಿ ಅದ್ಭುತವ ತೋರಿದರು ಆನಂದ ತೀರ್ಥರು" ಇಂತೆಂದು ಜನರೆಲ್ಲ ಮೂಕ ವಿಸ್ಮಿತರಾಗಿ ಕುಣಿದು, ಕೊಂಡಾಡಿದರು ಆಚಾರ್ಯರನ್ನು ॥ ೧೬ ॥ ಇಂತಿರಲು ಆಚಾರ್ಯ ಆನಂದ ತೀರ್ಥರು ತರ್ಕ ವಿದ್ಯಾ ನಿಪುಣ ಶಿಷ್ಯರನು ಕುರಿತು ಮಣಿಮಂತ ವಿರಚಿತ ಸೂತ್ರಭಾಷ್ಯದ ಬಗ್ಗೆ ಮೆಲುನಗೆಯ ಸೂಸುವ ಪರಿಹಾಸ ದನಿಯಲ್ಲಿ ನುಡಿದ ಮಾತುಗಳನ್ನು ಆಲಿಸುತ ಆ ಸುರರು ಪರಿಪರಿಯ ಬಗೆಯಲ್ಲಿ ಆನಂದ ಪೊಂದಿದರು ॥ ೧೭ ॥ ಶಂಕರ ಭಾಷ್ಯದ ಖಂಡನೆ ಶಾಂಕರ ಪ್ರತಿಪಾದ್ಯ ಸೂತ್ರಗಳ ಭಾಷ್ಯ ಆಭಾಸ, ಮಿಥ್ಯೆಗಳ ಸರಮಾಲೆಯಹುದು ಪರಿಶುದ್ಧ ಮತಿಯುಳ್ಳ ಪಂಡಿತರ ಮಾತಿಂದ ಬ್ರಹ್ಮಸೂತ್ರದ ಭಾವ ನಾವರಿಯಬೇಕು ದುರ್ಭಾಷ್ಯವೆಲ್ಲರಲು ಈಗ ಸತ್ಕ್ರತವು ಇದು ಎಂಥ ಅಚ್ಚರಿ! ಎಂತಹ ಸೋಜಿಗ! ॥ ೧೮ ॥ ಇಂತು ಪೇಳುತ ನಮ್ಮ ಆನಂದ ತೀರ್ಥರು ಆ ಭಾಷ್ಯದಲ್ಲಿನ ಪ್ರಬಲ ದೋಷವನೆಲ್ಲ ತೆರೆದಿಟ್ಟು ತೋರಿದರು ಮತ್ತೆ ಮತ್ತೆ ವಿಸ್ಮಯವ ಪೊಂದಿದರು ನೆರೆದ ಪಂಡಿತರೆಲ್ಲ ಆಚಾರ್ಯ ವಾಣಿಯಲಿ ಹುರುಳಿಲ್ಲವೆಂದು ವಾದಿಸಲಸಮರ್ಥ ವಾಕ್ಯಾರ್ಥ ನಿಪುಣರು ॥ ೧೯ ॥ "ಶಂಕರರ ಭಾಷ್ಯವನು ಖಂಡಿಸಿದಿರಿಂತು ಅತ್ಯಂತ ಉತ್ಕೃಷ್ಟ ಜ್ಞಾನಿಗಳು ತಾವು ದೋಷರಹಿತಾರ್ಥಗಳ ಸೂತ್ರಭಾಷ್ಯವ ರಚಿಸಿ ಉದ್ಧರಿಸಿರೆಮ್ಮನ್ನು ಆಚಾರ್ಯವರ್ಯ" ಇಂತು ಬಿನ್ನೈಸಿದರು ನೆರೆದಿದ್ದ ಮಂದಿ ಆಚಾರ್ಯ ನುಡಿ ಕೇಳಿ ಅಪ್ರತಿಭರಾಗಿ ॥ ೨೦ ॥ ಬ್ರಹ್ಮಸೂತ್ರದ ಪ್ರವಚನ ಜನರ ಮನವಿಗೆ ಒಲಿದು ಆನಂದತೀರ್ಥರು ಒಡನೆ ತೊಡಗಿದರವರು ವಾಕ್ಯಾರ್ಥದಲ್ಲಿ ಕ್ಲಿಷ್ಟ ಶಬ್ದಾರ್ಥಗಳ ಸರಳವಾಗಿರಿಸಿ ಅವುಗಳನ್ವಯವನ್ನು ಸರಿಯಾಗಿ ಹೊಂದಿಸಿ ಶೃತಿ ಸ್ಮೃತಿಗೆ ಸಮ್ಮತದ ವ್ಯಾಖ್ಯಾನ ಬಿಡಿಸಿ ಬ್ರಹ್ಮ ಸೂತ್ರಗಳರ್ಥ ಸ್ಫುಟ ಪಡಿಸಿದರಿನ್ನಷ್ಟು ॥ ೨೧ ॥ ಪರರಸುಜ್ಞಾನದಲಿ ಮಾತ್ಸರ್ಯ ತಳೆದವರು ತರ್ಕ ಸತ್ಪಥವನ್ನು ತೊರೆದ ದುರ್ಜನರು ತರ್ಕ ಜಿಜ್ಞಾಸುಗಳು ; ದ್ವೇಷವನು ತೊರೆದವರು ಈ ಪರಿಯ ವಿಧವಿಧದ ಮಂದಿಗಳನೆದುರಿಸಿ ತಮ್ಮದೇ ಶೈಲಿಯಲಿ ಆನಂದತೀರ್ಥರು ವಿಜಯವನು ಸಾರಿದರು ನಿರ್ಲಿಪ್ತರಾಗಿ ॥ ೨೨ ॥ ಸೌಮ್ಯ ಮನಪ್ರವೃತ್ತಿ ಮಧ್ಯಗೇಹರ ಗುಣವು ಇಂತಿರಲು ಒಮ್ಮೆ, ಆ ತಂದೆ, ಒಂದು ದಿನ ಮಗನ ಬಳಿಗೈತಂದು ಮುದಗೊಂಡರು ಹಿಂದೊಮ್ಮೆ ಮಗನಲ್ಲಿ ವಿರಸ ನುಸುಳಿದ್ದರೂ ಸುಪ್ರಸನ್ನರು ಈಗ, ಮಗನ ಹಿರಿಮೆಯ ಕಂಡು ಸಜ್ಜನರ ಸದ್ಗುಣಕೆ ಇದು ನಿದರ್ಶನವು ॥ ೨೩ ॥ ಮಧ್ಯಗೇಹರ ಮಧ್ವದರ್ಶನ ನಂದನನ ದೇಹವದು ಭವ್ಯ ಪಾತ್ರೆಯು ಅಹುದು ತುಂಬಿಹುದು ಪಾತ್ರೆಯಲಿ ತೇಜವೆಂಬುವ ಸುಧೆಯು ಮಧ್ಯಗೇಹರು ತಮ್ಮ ನಯನಗಳ ಬೊಗಸೆಯಲಿ ಆ ಸುಧೆಯ ಕುಡಿಕುಡಿದು ತೃಷೆಯ ತಣಿಸಿದರು ಮಗನ ನುಡಿಯೆಂಬ ಗಡಿಗೆಯಲಿ ತುಂಬಿದ್ದ ಜ್ಞಾನವೆಂಬಮೃತವ ಕರ್ಣದಲಿ ಕುಡಿದರು ॥ ೨೪ ॥ ಅಚ್ಯುತಪ್ರೇಕ್ಷರೂ ಆನಂದ ತೀರ್ಥರೂ ಸರಸ ಸಂಭಾಷಣೆಯಲ್ಲಿ ತೊಡಗಿದ್ದರೊಮ್ಮೆ ಪರಿಹಾಸ ದನಿಯಲ್ಲಿ ಗುರುಗಳಿಂತೆಂದರು "ನಾನೊಂದು ಸಲಹೆಯನು ನೀಡುವೆನು ನಿಮಗೆ ಬಲ್ಲೆನೆಂಬಿರಿ ನೀವು ಬ್ರಹ್ಮ ಸೂತ್ರಕೆ ಅರ್ಥ ಉತ್ಕೃಷ್ಟ ಭಾಷ್ಯವನು ರಚಿಸಿ ಬರೆಯಿರಿ ನೀವೇ'' ॥ ೨೫ ॥ ಭಾಷ್ಯ ರಚಿಸಲು ಪ್ರಾರ್ಥನೆ ಹಂಸ ಬೇರ್ಪಡಿಸುವುದು ಹಾಲಿನಲ್ಲಿನ ನೀರ ಅಂತೆಯೇ ಆ ದಿನದಿ ಆನಂದ ತೀರ್ಥರು ಗುರುವಾಣಿಯಲ್ಲಿನ ಆಕ್ಷೇಪ ತೊರೆದು ಆದೇಶದಲ್ಲಿನ ಸತ್ವವನು ಸ್ವೀಕರಿಸಿ ಆ ಕ್ಷಣವೆ ತಳೆದರು ಭಾಷ್ಯ ರಚನೆಯ ದೀಕ್ಷೆ ಸಂತರಿಗೆ ಸಂತೋಷ ಸದ್ಗುಣದ ಅಂಶದಲಿ ॥ ೨೬ ॥ ವೈರಾಗ್ಯ, ವೈಯಾತ್ಯ, ಸದ್ವಾಕ್ಯವೆಲ್ಲವೂ ಪರಮಹಂಸರಿಗೆಲ್ಲ ಆದರ್ಶವಾಗಿಹವು ಇಂಥ ಸದ್ಗುಣ ಖನಿಯು ಲಿಕುಚ ವಂಶೋದ್ಭವರು ಆಶ್ರಮವ ಅಚ್ಯುತ ಪ್ರೇಕ್ಷರಿಂ ಪಡೆದವರು ಆನಂದ ತೀರ್ಥರಿಗೂ ಜ್ಯೇಷ್ಠರೀ ಯತಿಗಳು ಇಂತು ಅರುಹಿದರವರು ಪರಮ ಭಕ್ತಿಯಲಿ ॥ ೨೭ ॥ "ವೇದ ಸಿದ್ಧಾಂತಕ್ಕೆ ಹಲವು ಭಾಷ್ಯಗಳಿಹವು ಅಧಿಕತಮ ಭಾಷ್ಯಗಳು ವೇದ ಸಮ್ಮತವಲ್ಲ ಅಂತಿರಲಿ, ಅದರಿಂದ ನಮಗೇನು ಹಾನಿ ? ಪರಮ ಜ್ಞಾನಿಗಳಾದ ಆನಂದ ತೀರ್ಥರೇ ! ಬ್ರಹ್ಮಸೂತ್ರದ ಕಾಂಕ್ಷೆ ಸರಿಯಾಗಿ ತೋರಿಸುವ ಸತ್ಯನಿಷ್ಠುರವಾದ ಭಾಷ್ಯವನ್ನು ರಚಿಸಿ" ॥ ೨೮ ॥ ಆಶ್ವಯುಜ ಕಾರ್ತಿಕ ಹುಣ್ಣಿಮೆಯ ದಿನದಂದು ಬೆಳಗುವ ಚಂದ್ರಮನ ಬೆಳಕಿನ ಪರಿಯಲ್ಲಿ ಸಜ್ಜನರ ಮನದಲ್ಲಿ ಹುದುಗಿದ್ದ ಕಾಂಕ್ಷೆಗಳು ಪ್ರಕಟವಾಯಿತು ಜ್ಯೇಷ್ಠಯತಿಗಳ ನುಡಿಯಿಂದ ಆನಂದ ತೀರ್ಥರ ಮುಖವೆಂಬ ಚಂದ್ರನಿಂ ಹೊರಬಿತ್ತು ಶ್ರೀ ಹರಿಯ ವ್ಯಾಖ್ಯಾನ ಚಂದ್ರಿಕೆ ॥ ೨೯ ॥ ಕಾಲ ಪರಿಪಾಲಿಸುವ ತೆಂಕಣದ ದಿಸೆಯಲ್ಲಿ ವಿಷ್ಣು ಮಂಗಲವೆಂಬ ಗ್ರಾಮವೊಂದುಂಟು ಗುರುವೊಡನೆ ದಿಗ್ವಿಜಯ ಯಾತ್ರೆಯನು ಕೈಗೊಂಡು ಬಂದಿಳಿದರಲ್ಲಿ ಆನಂದ ತೀರ್ಥರು ಜಗಕೆ ಮಂಗಳ ಕೊಡುವ ಶ್ರೀ ಹರಿಯ ಕ್ಷೇತ್ರವದು ನಮಿಸಿದರು ಭಕ್ತಿಯಲಿ ದೇವಸರ್ವೋತ್ತಮಗೆ ॥ ೩೦ ॥ ದಕ್ಷಿಣ ದಿಗ್ವಿಜಯದ ಆರಂಭ ಭಿಕ್ಷೆಯನು ಏರ್ಪಡಿಸಿ ಭಿಕ್ಷಾಪ್ರದಾತನು ಆನಂದ ತೀರ್ಥರನು ಪರಿಕಿಸುವ ಸಲುವಾಗಿ ಕದಲಿ ಫಲಗಳ ರಾಶಿ ಅವರ ಮುಂದಿರಿಸಿದನು ಎಳ್ಳಷ್ಟು ಕಂಗೆಡದೆ ಆನಂದ ತೀರ್ಥರು ಹಣ್ಣುಗಳನೆಲ್ಲವನು ಭುಜಿಸಿ ಮುಗಿಸಿದರು ನೆರೆದಿದ್ದ ಎಲ್ಲ ಜನ ವಿಸ್ಮಯವ ತಾಳಿದರು ॥ ೩೧ ॥ ವಿಷ್ಣು ಮಂಗಲದಲ್ಲಿ ತೋರಿದ ಅಪೂರ್ವ ಮಹಿಮ ಅಚ್ಚರಿಯ ಸೂಸುತ್ತ ಕೇಳಿದರು ಗುರುಗಳು "ಭೋಜನಾನಂತರವೂ ಎರಡು ಶತ ಹಣ್ಣುಗಳ ಭುಜಿಸಿ ನಿರ್ಲಿಪ್ತರಾಗಿರುವಿರಲ್ಲಾ ತೆಳ್ಳಗಿನ ಉದರವು ಪೀನವಾಗಿಲ್ಲ ಪರಿಶುದ್ಧ ಮನಸುಳ್ಳ ಓ ಪೂರ್ಣ ಪ್ರಜ್ಞರೇ ! ನಿಜವಾದ ಕಾರಣವ ನೀವೆಮಗೆ ತಿಳುಹಿ" ॥ ೩೨ ॥ "ಅಂಗುಷ್ಠಗಾತ್ರದ ಕಿಡಿಯೊಂದು ಉರಿಯುತಿದೆ ಜಾಜ್ವಲ್ಯ ಮಾನವದು ಎನ್ನ ಜಠರದಲಿ ಹಿತವನ್ನು ನೀಡುವುದು ಎಲ್ಲ ಕಾಲದಿ ನನಗೆ ಪ್ರಲಯ ಕಾಲದಿ ಅದುವು ಜಗವನ್ನೆ ಸುಡಬಹುದು" ಇಂತೆಂದು ನುಡಿದರು ಆನಂದ ತೀರ್ಥರು ಎಂದೆಂದು ಶ್ರೀ ಹರಿಯ ಚರಣಸೇವಕರವರು ॥ ೩೩ ॥ ದಿಗ್ವಿಜಯ ಯಾತ್ರೆಯನು ಮುಂದುವರಿಸುತಲವರು ವಿಷ್ಣುಮಂಗಲದಿಂದ ತೆರೆಳಿದರು ಮುಂದೆ ಹಲವು ಪ್ರದೇಶಗಳ ನದಿಗಳನು ದಾಟುತ್ತ ಬಹುಪರಿಯ ಧರ್ಮಗಳ, ಪರಿಪರಿಯ ವಸ್ತುಗಳ ವಿವಿಧ ಪದ ಅರ್ಥಗಳ ಮತಗಳನು ಖಂಡಿಸುತ ಎಲ್ಲ ತಡೆಗಳ ಗೆಲಿದು ಮುನ್ನುಗ್ಗಿ ಹೊರಟರು ॥ ೩೪ ॥ ಪಯಸ್ವಿನೀ ತೀರದಲ್ಲಿ ದುರ್ಗಾದೇವಿಯ ಸ್ಮರಣೆ ಕೇರಳಕೆ ಭೂಷಣವು ನದಿಯೊಂದು ಇಹುದು "ಪಯಸ್ವಿನೀ" ಎಂಬುವುದು ಈ ನದಿಯ ಹೆಸರು ಪ್ರವಹಿಸುವ ಹಾದಿಯಲಿ ವೃಕ್ಷಗಳ ಕೆಡಹುವಳು ತನ್ನಲ್ಲಿ ಮಿಂದವರ ಪರಿಶುದ್ಧ ಮಾಡುವಳು ಭೂಸುರರು ಅರ್ಚಿಸುವ ಈ ತೀರ್ಥ ಕ್ಷೇತ್ರದಲಿ ಚಂಡಿಕೆಯು ಜನಿಸುವುದ ಸ್ಮರಣೆ ಮಾಡಿದರು ॥ ೩೫ ॥ ತಿರುವನಂತಪುರದಲ್ಲಿ ಯಾತ್ರೆಯನು ಮುಂದರಿಸಿ ಆನಂದ ತೀರ್ಥರು ಅನಂತಶಯನ ವೆಂಬೊಂದು ಊರ ಸೇರಿದರು ಪದ್ಮನಾಭನು ಊರ ದೇವರಾಗಿಹನಿಲ್ಲಿ ಆ ಶೇಷಶಯನನಿಗೆ, ಶ್ರೀ ಲಕುಮಿ ಒಡೆಯನಿಗೆ ಸೌಂದರ್ಯ ಕಾಂತಿಯಲಿ ಪ್ರಜ್ವಲಿಪ ದೇವನಿಗೆ ಭಕುತಿಯಲಿ ನಮಿಸಿದರು ಆನಂದ ತೀರ್ಥರು ॥ ೩೬ ॥ ಆನಂದ ತೀರ್ಥರದು ಅಪ್ರತಿಮ ಪ್ರತಿಭೆ ವೇದಾಂತ ಸೂತ್ರಗಳ ಉತ್ತಮೋತ್ತಮ ಜ್ಞಾನ ಶಾಸ್ತ್ರಾರ್ಥ ಬೋಧಿಸುತ ಶಿಷ್ಯಗಣಕೆಲ್ಲ "ಜೀವಗಣಗಳಿಗಿಂತ ಭಿನ್ನ ಪರಮಾತ್ಮ ಬ್ರಹ್ಮನಚ್ಯುತ '' ನೆಂದು ಅಡಿಗಳಿಗೆ ಹೇಳುತ್ತ ಬ್ರಹ್ಮಸೂತ್ರಗಳರ್ಥ ವಿವರದಲಿ ನುಡಿದರು ॥ ೩೭ ॥ ಕುದಿಪುಸ್ತೂರನ ದುಷ್ಟತನ ಶ್ರೀ ಮುಖ್ಯಪ್ರಾಣನಲಿ ಹಗೆಯ ಸಾಧಿಸಲೆಂದೇ "ಕುದಿಪುಸ್ತೂರೆಂಬ" ವಂಶದಲಿ ಜನಿಸಿದ್ದ "ಸಂಕರ"ನು ಮತ್ಸರದಿ ಇಂತು ಉಸುರಿದನು "ಬಹು ದೊಡ್ಡ ಅಪಚಾರವೆಸಗಲಾಗಿದೆ ಇಂದು ಯಾವ ಸೂತ್ರಕ್ಕೂ ಭಾಷ್ಯವನೆ ಬರೆಯದಿಹ ಮಹನೀಯರೊಬ್ಬರು ಶಾಸ್ತ್ರಾರ್ಥ ಬೋಧನೆ ಮಾಡುತಿಹರು " ॥ ೩೮ ॥ "ನಾವು ಹೇಳಿದ ಅರ್ಥಕಾಕ್ಷೇಪವುಂಟೆ ? ಅಂತಾದರೆ ಅದನು ಶೃತಪಡಿಸಿ ಈಗಲೇ ಬ್ರಹ್ಮಸೂತ್ರಕೆ ಭಾಷ್ಯ ನಾವೂ ಬರೆಯಲಿಹೆವು ಬರೆಯಬಾರದು ಎಂಬ ದಂಡಸಂಹಿತೆ ಇದೆಯೆ ?" ಆನಂದ ತೀರ್ಥರ ಮಂದಹಾಸದ ನುಡಿಗೆ ಅಭಿನಂದಿಸಿದರಲ್ಲಿ ನೆರೆದಿದ್ದ ಮಂದಿ ॥ ೩೯ ॥ "ಆನಂದ ತೀರ್ಥರದು ಬಹು ಭವ್ಯ ಆಕೃತಿ ಸಕಲ ಸಲ್ಲಕ್ಷಣದಿಂದ ಸಂಪನ್ನ ದೇಹ ಪ್ರಾಜ್ಞ, ಪ್ರಭೃತಿಗಳಿಗೆ ಸರಿಯಾದ ಲಕ್ಷಣ" ಎಂದು ಹೊಗಳಲು ಅಲ್ಲಿ ನೆರೆದಿದ್ದ ಬಲ್ಲ ಜನ "ಸಂಕರ" ನ ಕಿಂಕರರು ಮತ್ತೇನೂ ಅರಿಯದಲೆ ಅಧಿಕ ಗಾತ್ರದ ಅವನ ಪೃಷ್ಠವನೆ ಹೊಗಳಿದರು ॥ ೪೦ ॥ "ಪೃಷ್ಠಭಾಗದ ಗಾತ್ರ ಮಿತಿಯೊಳಗೆ ಇರಬೇಕು ಲಕ್ಷಣದ ಶಾಸ್ತ್ರಗಳು ಸಾರುತಿದೆ ಹೀಗೆಂದು" ಖತಿಗೊಂಡ ಸಂಕರನು ಈ ಮಾತ ಕೇಳಿ ಪಣ ತೊಟ್ಟ ಖಂಡಿಸಲು ಆಚಾರ್ಯ ದಂಡವನು ಅವನ ಸಾಮರ್ಥ್ಯಕ್ಕೆ ಸರಿಯಾದ ಮಾತಲ್ಲ ಆದರೂ ಇಂಥ ಹಟ ದುಷ್ಟರಿಗೆ ಸಹಜ ॥ ೪೧ ॥ ಕನ್ಯಾಕುಮಾರಿ, ರಾಮೇಶ್ವರ ಸಂದರ್ಶನ ಕೇರಳದಿ ಹಲವಾರು ತೀರ್ಥದರ್ಶನ ಮಾಡಿ ತೆರಳಿದರು ತ್ವರೆಯಿಂದ ಆನಂದ ತೀರ್ಥರು ಕನ್ಯಕಾತೀರ್ಥದಲಿ ಸ್ನಾನವನು ಮಾಡಿ ಸಮುದ್ರಸೇತುವನು ಸಂದರ್ಶಿಸಿದರು ರಾಮೇಶ್ವರವೆಂಬೊಂದು ತೀರ್ಥಕ್ಷೇತ್ರವ ಸೇರಿ ಶ್ರೀ ರಾಮನಾಥನಿಗೆ ಭಕ್ತಿಯಲ್ಲಿ ನಮಿಸಿದರು ॥ ೪೨ ॥ ಯತಿವೇಷ ಧಾರಿಯನು ಎದುರಾಗಿ ಕಂಡು ದಂಡವನು ತೋರುತ್ತ ಆನಂದ ತೀರ್ಥರು ನಗುನಗುತ ಆತನಿಗೆ ನುಡಿದರಿಂತೆಂದು "ಕೋಪಿಷ್ಠ, ಗರ್ವಿಷ್ಠ, ಮಂದಮತಿಯವನೇ ! ನೀ ತೊಟ್ಟ ಪಣದಂತೆ ಮುರಿ, ಈ ದಂಡವ ಇಲ್ಲದಿರೆ ನೀನೊಬ್ಬ ಷಂಡ, ಭಂಡ " ॥ ೪೩ ॥ ಆತ ಕೇಳೀ ಮಾತ, ನಾಚಿ ತಲೆಬಾಗುತ್ತ ಅಲ್ಲಿದ್ದ ಮಿಕ್ಕೆಲ್ಲ ಬ್ರಾಹ್ಮಣರ ನೋಡುತ್ತ ದೈನ್ಯದಲಿ ಯಾಚಿಸಿದ, ನೆರವ ಕೋರುತ್ತ "ಜ್ಞಾನಿಗಳು, ಇವರೊಡನೆ ನಮಗೇಕೆ ದ್ವೇಷ ? ಜಗಕೆಲ್ಲ ಆನಂದ ನೀಡುವುದೀ ಮುಖಚಂದ್ರ" ಇಂತೆಂದು ಬ್ರಾಹ್ಮಣರು ಕೈತೊಳೆದುಕೊಂಡರು ॥ ೪೪ ॥ ರಾಮೇಶ್ವರದಲ್ಲಿ ಚಾತುರ್ಮಾಸ್ಯ ವೇದೋಪನಿಷತ್ತುಗಳ ಎಲ್ಲ ಪರಿಷತ್ತುಗಳು ಬೆರಗುಗೊಂಡವು ಅವರ ವಾಕ್ಯಾರ್ಥ ಪ್ರತಿಭೆಗೆ ಪರಿಪರಿಯ ಶಾಸ್ತ್ರಗಳ, ವಿಧ ವಿಧದ ಕೋವಿದರ ಎಲ್ಲ ವಾಗ್ಯುದ್ಧದಲೂ ಆಚಾರ್ಯರೇ ಮುಂದು ವಿದ್ಯಾಭಿಮಾನಿನಿ ಭಾರತಿಪತಿಯು, ವಾಯುದೇವರೆ ಇಂದು ಜಯಮಾಲೆ ಧರಿಸಿದರು ಎಲ್ಲ ಸಭೆಗಳಲಿ ॥ ೪೫ ॥ ನಾಯಿಗಳ ಬೊಗಳುವಿಕೆ ಸಿಂಹ ಲೆಕ್ಕಿಪುದೆ ? ಗುಹೆಯಲ್ಲಿ ನಿದ್ರಿಪುದು ನಿಶ್ಚಿಂತೆಯಿಂದ ಅಂತೆಯೇ ಈ ನಮ್ಮ ಆನಂದ ತೀರ್ಥರು ದುರ್ಜನರ ಉಪಟಳವ ಲೆಕ್ಕಿಸಲೇ ಇಲ್ಲ ಅಚ್ಯುತ ಪ್ರೇಕ್ಷರ ಪರಮ ಸಹವಾಸದಲಿ ನಾಲ್ಕು ತಿಂಗಳು ಕಳೆದರಾ ಪುಣ್ಯ ಕ್ಷೇತ್ರದಲಿ ॥ ೪೬ ॥ ಶ್ರೀರಂಗಾದಿಗಳಲ್ಲಿ ಭಗವದ್ದರ್ಶನ ನಾಲ್ಕು ತಿಂಗಳ ಬಳಿಕ ಆನಂದ ತೀರ್ಥರು ದಿಗ್ವಿಜಯ ಮುಂದರಿಸಿ ತೆರಳಿದರು ಮುಂದಕ್ಕೆ ಶ್ರೀರಂಗ ಕ್ಷೇತ್ರವನು ಸೇರಿದರು ಅವರು ಆ ಶೇಷಶಯನನೂ, ಶೃಂಗಾರ ಸಿಂಧುವೂ ಕಾವೇರಿ ಕನ್ಯೆಯ ಹಿಮವಾಯು ಸೇವಿತನೂ ಶ್ರೀ ರಂಗನಾಥನಿಗೆ ಭಕ್ತಿಯಲಿ ನಮಿಸಿದರು ॥ ೪೭ ॥ ಅಲ್ಲಿಂದ ಹಿಂದಿರುಗಿ ಆನಂದ ತೀರ್ಥರು ಶ್ರೀ ಮುಷ್ಣ ಮೊದಲಾದ ಕ್ಷೇತ್ರಗಳ ಕಾಣುತ್ತ ವಿವಿಧ ದೇವಾಲಯದಿ ವಿಧವಿಧದಿ ಪೂಜಿಸುತ ಅತಿಶಯದ ಮಹಿಮೆಯನು ಅಲ್ಲಲ್ಲಿ ತೋರುತ್ತ ಶ್ರೀ ಹರಿಯ ಚರಣಕ್ಕೆ ಅಡಿಗಡಿಗೆ ನಮಿಸುತ್ತ ಉತ್ತರೋತ್ತರದಲ್ಲಿ ಉತ್ತರಕೆ ನಡೆದರು ॥ ೪೮ ॥ ಮರಳಿ ಪಯಸ್ವಿನೀ ತೀರಕ್ಕೆ ಸಕಲ ಸಲ್ಲಕ್ಷಣದಿಂದ ಕೂಡಿದಾ ಮಹಿಮರನು ಭವ್ಯ ಆಕೃತಿಯಿಂದ ಕಂಗೊಳಿಸಿ ಮೆರೆದವರ ಬೆರಗಾಗಿ ನೋಡಿದರು ಎಲ್ಲೆಲ್ಲೂ ಮಂದಿ ಹಾದಿಯಲಿ ಹಲವಾರು ಗ್ರಾಮಗಳ ಹಾಯ್ದು ಪಯಸ್ವಿನೀ ನದಿಯ ದಡ ಮತ್ತೆ ಸೇರಿದರವರು ಒಳಹೊಕ್ಕರಲ್ಲಿದ್ದ ಗುಡಿಯ ಸೇರಿ ॥ ೪೯ ॥ ಶಾಸ್ತ್ರೋಕ್ತ ನಿಯಮಗಳಿಗನುಸಾರವಾಗಿ ವ್ಯಾಕರಣ ಮುಂತಾದ ಅಧ್ಯಯನ ಮಾಡಿ ಅರ್ಥ ನಿರ್ಣಯದಲ್ಲಿ ಕೌಶಲ್ಯ ಸಾಧಿಸಿ ಖ್ಯಾತ ಪಂಡಿತರಾದ ಹಲವು ವಿಪ್ರೋತ್ತಮರು ಮೂರ್ಲೋಕ ದಾಚಾರ್ಯ ಆನಂದ ತೀರ್ಥರನು ಕಾಣುವಾ ತವಕದಲಿ ಅಲ್ಲಿಗೈತಂದರು ॥ ೫೦ ॥ ಚಂದ್ರಮನ ಹೋಲುವಾ ಮಂದಹಾಸದ ಮೊಗವು ಕಮಲಪುಷ್ಪದ ಪರಿಯ ಮುದಗೊಳಿಪ ಕಣ್ಣುಗಳು ಹೊನ್ನ ಕಾಂತಿಯ ದೇಹ, ಮೃದು ಮಧುರ ಮಾತುಗಳು ಯಾವ ಭೂಷಣವಿಲ್ಲ, ಮೂರ್ಲೋಕ ಭೂಷಣರು ಇಂಥ ಮಹಿಮರು ನಮ್ಮ ಆನಂದ ತೀರ್ಥರನು ಕಾಣುವಾ ತವಕದಲಿ ಧಾವಿಸಿತು ಮಂದಿ ॥ ೫೧ ॥ ಪಂಡಿತರ ಸುಜ್ಞಾನ ತಾರಾಪ್ರಕಾಶವನು ಸೂರ್ಯನಾ ತೆರದಲ್ಲಿ ನಿಸ್ತೇಜಗೊಳಿಸಿದರು ದುರ್ವಾದಿ ಆನೆಗಳ ದುಸ್ತರ್ಕ ಕುಂಭಗಳ ಸಿಂಹದಾ ತೆರದಲ್ಲಿ ಸೀಳಿ ಹಾಕಿದರು ಲೋಕ ದೃಕ್ಕುಮುದಿನಿಯ ಅರಳಿಸುವ ರವಿಯಂತೆ ಕಂಗೊಳಿಸಿ ಮೆರೆದರು ಆನಂದ ತೀರ್ಥರು ॥ ೫೨ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಾಚಾರ್ಯರಿಂದ ರಚಿಸಲ್ಪಟ್ಟ ಶ್ರೀ ಸುಮಧ್ವ ವಿಜಯ ಮಹಾಕಾವ್ಯದ ಆನಂದಾಂಕಿತವಾದ ಐದನೆಯ ಸರ್ಗವು ಸಮಾಪ್ತಿ. ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ ಆರನೆಯ ಸರ್ಗ ಶ್ರೀ ಗುರುಭ್ಯೋ ನಮಃ ಆರನೆಯ ಸರ್ಗ ಸಭೆಯೊಂದರಲ್ಲಿ ಐತರೇಯ ಕಥನ ಸಭೆಯಲ್ಲಿ ಕುಳಿತಿದ್ದ ಹಿರಿಯ ಪಂಡಿತನೊಬ್ಬ ಆನಂದ ತೀರ್ಥರನು ಕುರಿತು ಇಂತೆಂದ: "ಐತರೇಯದ ಸೂಕ್ತ ತಮ್ಮ ಮುಂದಿರಿಸುವೆನು ಈ ಸೂಕ್ತ ದರ್ಥವನು ಸರಿಯಾಗಿ ಅರಿಯಲು ತವಕದಲಿ ಕಾದಿಹುದು ನಮ್ಮ ಪಂಡಿತ ಸಭೆಯು ಪೂಜ್ಯರಿದ ದಯಮಾಡಿ ಶೃತ ಪಡಿಸಬೇಕು" ॥ ೧ ॥ ದಶಪ್ರಮತಿಗಳಿಂದ ವಿಷ್ಣು ಸಹಸ್ರನಾಮದ ಶತಾರ್ಥ ಕಥನ ಮೇಘ ಸದೃಶವಾದ ಗಂಭೀರ ದನಿಯಲ್ಲಿ ಸಭೆಯತ್ತ ಮೊಗಮಾಡಿ ಹೇಳತೊಡಗಿದರು ವರ್ಣಗಳ ಸ್ಪಷ್ಟತೆ, ಮತ್ತದರ ಹಿರಿಮೆ ಅನುರೂಪ ಮಾತ್ರೆಗಳ ಉಚಿತ ಉಚ್ಚಾರಣೆ ಮತ್ತಿತರ ವ್ಯಾಕರಣ ಲಕ್ಷಣಗಳೊಂದಿಗೆ ಸೂಕ್ತದ ಅರ್ಥವನು ಸರಳಗೊಳಿಸಿದರು ॥ ೨ ॥ "ಮಂತ್ರದುಚ್ಚಾರಣೆಯು ಅತಿ ಸುಲಭ ಇವರಿಗೆ ವಿಹಿತ ಲಕ್ಷಣವೆಲ್ಲ ಕರತಲಾಮಲಕ ದೇವತಾಗುರುಗಳಿಗೆ ಇವರು ಸಮನಾಗಿಹರು '' ಇಂತು ಮನದಲ್ಲಿಯೇ ಆದರಿಸಿ ಪಂಡಿತರು "ಸೂಕ್ತಕ್ಕೆ ಬೇರೊಂದು ಅರ್ಥವೂ ಇಹುದು ನೀವು ಹೇಳಿದ ಅರ್ಥ ಸರಿಯಲ್ಲ" ವೆಂದರು ॥ ೩ ॥ "ನಾವು ಹೇಳಿದ ಅರ್ಥ ಶಾಸ್ತ್ರಸಮ್ಮತವಹುದು ಅಂತೆಯೇ ಆಗಿಹುದು ನಿಮ್ಮ ಅರ್ಥವು ಕೂಡ ಮೂರು ಅರ್ಥವು ಉಂಟು ವೇದಾದಿಗಳಿಗೆ ವ್ಯಾಸ ಭಾರತಕುಂಟು ಹತ್ತು ಅರ್ಥಗಳು ಹರಿಯ ಸಾಸಿರ ನಾಮ ನೂರರ್ಥ ಪಡೆದಿಹುದು ಇಂತೆಂದು ವ್ಯಾಖ್ಯಾನ ಮಾಡಿದರು ಗುರುಗಳು ॥ ೪ ॥ ಆನಂದ ತೀರ್ಥರ ವಾದ ವೈಖರಿ ಕೇಳಿ ಉಲ್ಲಸಿತರಾದರು ಎಲ್ಲ ವಿಪ್ರೋತ್ತಮರು ಆಚಾರ್ಯ ಮಧ್ವರನು ವಾದದಲಿ ಸೋಲಿಸುವ ಬಯಕೆಯನು ಹೊಂದಿದ್ದ ಪಂಡಿತರು ಎಲ್ಲ ಮೊಗದಲ್ಲಿ ನಗೆಯನ್ನು ಸೂಸುತ್ತ ಕೇಳಿದರು "ಅರ್ಥಶತಕವ ಹೇಳಿ, ಹರಿನಾಮ ಸಾಸಿರಕೆ" ॥ ೫ ॥ ಆನಂದ ತೀರ್ಥರು ನಿಯಮವನು ವಿಧಿಸಿದರು "ನೂರು ಅರ್ಥವ ನಾನು ಈಗಲೇ ಹೇಳುವೆನು ಅದರ ಅನುವಾದವನು ನೀವೀಗಲೇ ಕೊಡಬೇಕು ಇದು ನನ್ನ ಕಟ್ಟು; ಒಪ್ಪಿಗೆಯೆ ? ಹೇಳಿ " ಒಪ್ಪಿಕೊಂಡರು ಎಲ್ಲ ಪಂಡಿತರೂ ನಿಯಮಕ್ಕೆ ಕಾರ್ಯದಲಿ ತೊಡಗಿದರು ದೃಢವಾದ ಯತ್ನದಲಿ ॥ ೬ ॥ L "ವಿಶ್ವ" ದಿಂದಾರಂಭ ಹರಿಯ ಸಾಸಿರ ನಾಮ ಈ ಹೆಸರು ಪ್ರಖ್ಯಾತ ಉಪನಿಷತ್ತುಗಳಲ್ಲಿ ಪ್ರಕೃತಿ, ಪ್ರತ್ಯಯದ ಸಂಗಮದ ರೀತಿಯನು ವ್ಯಾಕರಣ ಶಾಸ್ತ್ರದ ವಿಹಿತ ನಿಯಮದ ಸಹಿತ "ವಿಶ್ವ"ಶಬ್ದದ ಅರ್ಥ ನೂರನ್ನು ಬಿಡಿಸಿದರು ಇಂಥ ಚತುರರು ನಮ್ಮ ಆನಂದ ತೀರ್ಥರು ॥ ೭ ॥ ಸಂಶಯಕ್ಕೆಡೆಯಿಲ್ಲ ಅರ್ಥವಿವರಣೆಯಲ್ಲಿ ಶಬ್ದ ಧಾರೆಯ ಸ್ರೋತ ಪುಂಖಾನು ಪುಂಖ ಎಡೆಬಿಡದೆ ಆಚಾರ್ಯ, ಆನಂದ ತೀರ್ಥರು ಹಲವು ಅರ್ಥಗಳ ಕ್ಷಣದಲ್ಲಿ ಬಿಡಿಸಿದರು ಸಂಶ್ಲಿಷ್ಟ ಅರ್ಥಗಳ ಗ್ರಹಿಸಲಾರದ ದ್ವಿಜರು ವ್ಯಾಕುಲವ ತಳೆದರು ಮನದಾಳದಲ್ಲಿ ॥ ೮ ॥ ಅಂತಿಂಥ ಸಾಮಾನ್ಯ ಪಂಡಿತರು ಅವರಲ್ಲ ಸಾಂಗ ವೇದದ ಚತುರ, ಇತಿಹಾಸ ನಿಪುಣರು ಧೈರ್ಯ ಸಾಹಸದಲ್ಲಿ ಹಿಮ್ಮೆಟ್ಟರವರು ಅವರ ಸಂಖ್ಯೆಯು ಕೂಡ ಸಾಕಷ್ಟು ಅಧಿಕ ಪ್ರಲಯ ಕಾಲದ ಜಲವ ತುಂಬಿಟ್ಟು ಕೊಳ್ಳಲು ಬಾವಿ ಸಾವಿರವೆಲ್ಲ ಸಾಕಾಗಬಹುದೆ ? ॥ ೯ ॥ "ನಿಮ್ಮ ಪ್ರತಿಭೆಗೆ ನಾವು ಮಣಿಯುವೆವು ಸ್ವಾಮಿ ದೇವವೃಂದಗಳಲ್ಲೂ ಕಾಣಬರದೀ ಪ್ರತಿಭೆ ಚಪಲ ಮಾನವರಲ್ಲಿ ಇದು ಹೇಗೆ ಸಾಧ್ಯ ? ಸಕಲವನೂ ಬಲ್ಲವರೇ ! ಸೌಮ್ಯ ಸ್ವರೂಪರೇ ! ಕ್ಷಮಿಸಿರೆಮ್ಮನು ನೀವು ಆನಂದ ತೀರ್ಥರೇ !" ಎಂದೆನುತ ನಮಿಸಿದರು ಆಚಾರ್ಯವರ್ಯರಿಗೆ ॥ ೧೦ ॥ ಕೇರಳದ ಪಂಡಿತರ ಪರಾಜಯ ಮತ್ತೊಮ್ಮೆ ಸಭೆಯಲ್ಲಿ ಪಾಲ್ಗೊಳ್ಳಲೆಂದು ಕೇರಳ ಸುಮಂಡಲದಿ ಜನ್ಮವನು ತಾಳಿದ್ದ ವೇದಾದಿ ಶಾಸ್ತ್ರದಲಿ ಪರಿಣತಿಯ ಪಡೆದಿದ್ದ ವಿದ್ಯೆ ನೀಡುವ ಧನಕೆ ಆಶೆಯನು ಹೊಂದಿದ್ದ ಈ ಪರಿಯ ಜನರಿಂದ ತುಂಬಿ ತುಳುಕುತಲಿದ್ದ ದೇವಮಂದಿರವೊಂದ ಹೊಕ್ಕರಾಚಾರ್ಯರು ॥ ೧೧ ॥ "ಇಂದು ಈ ಸಭೆಯಲ್ಲಿ ಮಂಡಿಸಿಹ ಮಧ್ವರು ಅಪ್ರತಿಮ ಪಾಂಡಿತ್ಯ, ಸುಜ್ಞಾನ ವುಳ್ಳವರು ತರ್ಕ, ಮೀಮಾಂಸೆಯಲಿ ವೇದಾದಿ ವಿದ್ಯೆಯಲಿ ನಿಪುಣರಾಗಿಹರನ್ನು ಖಂಡಿಸಿದ ಖ್ಯಾತರು ಅಂಥ ಸುಜ್ಞಾನಿಗೆ ಸರಿಸಾಟಿಯೆ ನಾವು ?" ಒಳಗೊಳಗೆ ತೊಳಲಿದರು ಕೇರಳದ ಪಂಡಿತರು ॥ ೧೨ ॥ ಇಂತೆಂದು ಚಿಂತಿಸಿದ ದ್ವಿಜವರ್ಯರೆಲ್ಲ ಅನ್ಯದೇಶದ ಒಬ್ಬ ಪಂಡಿತನ ಮುಂದಿರಿಸಿ ಆಚಾರ್ಯರೊಂದಿಗೆ ಸೆಣಸಲೆಳಸಿದರು "ಸತ್ಪಾತ್ರ ದಾನವನು ನೀಡುವನ ಹೊಗಳುವ" ವೇದ ಸೂಕ್ತದ ಅರ್ಥ ವಿವರಿಸಿರಿ ಎಂದು ಆಚಾರ್ಯ ಮಧ್ವರಲಿ ಮನವಿ ಮಾಡಿದರು ॥ ೧೩ ॥ ದಾನಸೂಕ್ತದ ಮಂತ್ರ ವಿವರಿಸುತ ಮಧ್ವರು "ಪೃಣೀಯಾತ್' ಶಬ್ದಕ್ಕೆ ಪೃಣ್ ಮೂಲವೆಂದರು ಮಧ್ವ ಅಪಜಯವನ್ನೇ ಆಶಿಸಿದ ಪಂಡಿತ ಈಗೊಂದು ಅವಕಾಶ ಲಭಿಸಿತೆಂದ ಮಧ್ವರ ಮಾತಿನಲಿ ಹುರುಳಿಲ್ಲವೆಂದಂದು "ಪೃಣೀಯಾತ್" ಶಬ್ದಕ್ಕೆ "ಪ್ರೀಜ್" ಧಾತು ಸರಿಯೆಂದ ॥ ೧೪ ॥ ಮರುಗಿದರು ಮಧ್ವರು ಪಂಡಿತನ ಮೌಢ್ಯಕ್ಕೆ "ಪ್ರ" ಧಾತುಗಳ ಭೇದವೇ ಗೊತ್ತಿಲ್ಲ ವ್ಯಾಕರಣ ಪ್ರಾಥಮಿಕ ಶಿಕ್ಷಣವೇ ನಿನಗಿಲ್ಲ ಮೂಢ ! ಅಕ್ಷರವ ಬರೆಬರೆದು ಅಭ್ಯಾಸ ಮಾಡಿಕೊ" ಇಂತೆಂದು ಗದರಿಸುತ ಆನಂದ ತೀರ್ಥರು ಮತ್ಸರಾಕುಲಿತರನು ಅಪಹಾಸ್ಯ ಮಾಡಿದರು ॥ ೧೫ ॥ ಈ ಒಂದು ಪ್ರಕರಣದ ಪ್ರಭಾವ ಬಲದಿಂದ ಆಚಾರ್ಯ ಮಧ್ವರ ಪೂರ್ಣ ಸುಜ್ಞಾನವನು ಅರಿತರಾ ಪಂಡಿತರು ಸುಸ್ಪಷ್ಟವಾಗಿ ರುದ್ರಾದಿ ದೇವಗಣ ಆದರದಿ ವಂದಿಸುವ ಆನಂದ ತೀರ್ಥರಿಗೆ ಸಾಷ್ಟಾಂಗ ನಮಿಸುತ್ತ ಧನ್ಯತಾ ಭಾವದಲಿ ಸಾರ್ಥಕ್ಯ ಪಡೆದರು ॥ ೧೬ ॥ ಅಪಾಲಾ ಶಬ್ದದ ಅಪೂರ್ವಾರ್ಥ ಇಂತಿರಲು ಮತ್ತೊಂದು ಪಂಡಿತರ ಸಭೆಯಲ್ಲಿ ಆ ಸುರೇಂದ್ರನು ಒಮ್ಮೆ ಕನ್ಯ ಕನ್ಯೆಯೋರ್ವಳ ಮೆಚ್ಚಿ ಕಾಂತಿಯುತ ದೇಹವನು ಕರುಣಿಸಿದ ಕಥೆಯನ್ನು ಬಣ್ಣಿಸುವ ಸೂಕ್ತವನು ವಿವರಿಸುತ ಗುರುಗಳು "ಅಪಾಲಾ" ಎಂಬುದಕೆ "ಅತಿ ತರುಣಿ" ಎಂದರ್ಥ ಎಂದು ಹೇಳಿದರಲ್ಲಿ ಆಚಾರ್ಯ ಮಧ್ವರು ॥ ೧೭ ॥ "ಅಪಾಲಾ" ಪದದರ್ಥ "ಶ್ವಿತ್ರಿಣೀ' ಎನ್ನುತ್ತ ಅಲ್ಲಿದ್ದ ಪಂಡಿತರು ಆಕ್ಷೇಪವೆತ್ತಿದರು ತೃಣ ಮಾತ್ರ ಜಗ್ಗದೆ ಆನಂದ ತೀರ್ಥರು "ಶೀಘ್ರದಲಿ ಬರಲಿಹನು ಪಂಡಿತನು ಒಬ್ಬ ನೀಗುವನು ನಿಮ್ಮ ಈ ಸಂಶಯವನವನು" ಎನ್ನುತ್ತ ಅವರು, ಮುಂದಕ್ಕೆ ತೆರಳಿದರು ॥ ೧೮ ॥ ಅತಿ ಶೀಘ್ರದಲ್ಲಿಯೇ ಬಂದನಾ ವಿದ್ವಾಂಸ ಆನಂದ ತೀರ್ಥರಾ ನುಡಿಗೆ ಅನುಗುಣವಾಗಿ ಎಲ್ಲ ಲಕ್ಷಣವನ್ನೂ ಹೊಂದಿದ್ದನಾತ ಅವನನ್ನು ಬರಮಾಡಿ ಪೀಠದಲಿಕುಳ್ಳಿರಿಸಿ "ಅಪಾಲಾ " ಎಂಬುದಕೆ ಅರ್ಥವನು ಕೇಳಲು "ಅತಿ ತರುಣಿ" ಎಂದೇ ಆತನೂ ನುಡಿದನು ॥ ೧೯ ॥ ಶ್ರೀ ಪೂರ್ಣ ಪ್ರಜ್ಞರು ಸರ್ವಜ್ಞರು ಆಚಾರ್ಯ ನುಡಿಗಳಿಗೆ ಪ್ರಾಮಾಣ್ಯ ಆಧಾರ ಸಕಲ ಶೃತಿ ವಿದ್ಯೆಗಳ ಅದ್ಭುತ ಪರಿಜ್ಞಾನ ಅನಾಗತಗತಿಗಳು ಸುಲಭದಲಿ ಸಂವೇದ್ಯ ಇಂತೆಲ್ಲ ಚಿಂತಿಸುತ ಆಚಾರ್ಯರ ಬಗೆಗೆ ಆದರವ ತೋರಿದರು ಮಧ್ವ ಪ್ರಣಾಳಿಕೆಗೆ ತ್ರಿಕಾಲ ಜ್ಞಾನಿಗಳು ಆನಂದ ತೀರ್ಥರು ॥ ೨೦ ॥ ದಕ್ಷಿಣ ದಿಗ್ವಿಜಯ ಪರಿಸಮಾಪ್ತ ಅವರ ಅರಿವಿನ ಹರವು ವಿಸ್ತಾರವಹುದು ಶೃತಿ ಇರಲಿ, ಸ್ಮೃತಿ ಇರಲಿ, ಇತಿಹಾಸವೇ ಇರಲಿ ಎಲ್ಲ ಕ್ಷೇತ್ರಗಳಲ್ಲೂ ಪರಿಪೂರ್ಣ ಸುಜ್ಞಾನ ಆಚಾರ್ಯ ಮಧ್ವರು "ಸರ್ವಜ್ಞ" ಮತಿಗಳು ಎಲ್ಲೆಲ್ಲೂ ಬುಧಜನರು ಎಲ್ಲ ಸಭೆಗಳಲೂ ಆನಂದ ತೀರ್ಥರನು ಮನಸಾರೆ ಮೆಚ್ಚಿದರು ॥ ೨೧ ॥ ಇಂತವರ ಕೀರ್ತಿ ಎಲ್ಲೆಲ್ಲೂ ಹರಡಿತು ಲೋಕ ಪ್ರಸಿದ್ಧರು ಆನಂದ ತೀರ್ಥರು ಸುಜನ ಕೈರವಗಳಿಗೆ ಆತ್ಮೀಯ ಬಂಧು ಪೂರ್ಣ ಚಂದ್ರನ ಬೆಳಕು ಎಲ್ಲೆಲ್ಲೂ ಹರಿವಂತೆ ಆಚಾರ್ಯ ಮಧ್ವರ ಕೀರ್ತಿಯ ಜ್ಯೋತ್ಸ್ನೆಯು ಅವರಿನ್ನೂ ಸೇರದಿಹ ದೇಶವನೂ ವ್ಯಾಪಿಸಿತು ॥ ೨೨ ॥ ರಮ್ಯ ರಮಣೀಯತೆಯ ದೇವ ಮಂದಿರ ನಿವಹ ! ಪರಮಾತ್ಮ ಶ್ರೀ ಹರಿಯ ದಿವ್ಯ ಸನ್ನಿಧಿಗಳು ! ಇಂದಿರಾ ರಮಣನನು ಎಡೆಬಿಡದೆ ನಮಿಸುತ್ತ ಸುವಿಚಾರ ಕುಶಲಿಗಳು ಆನಂದ ತೀರ್ಥರು ಭರದಿಂದ ಸಾಗುತ್ತ ಸಂಚಾರ ಪಥದಲ್ಲಿ ರೂಪ್ಯ ಪೀಠದ ಒಡೆಯ ಹರಿ ಸನಿಹ ಸೇರಿದರು ॥ ೨೩ ॥ ಬ್ರಹ್ಮ ಸೂತ್ರ ಭಾಷ್ಯ ರಚನೆಯ ಸಂಕಲ್ಪ ಯಾಜೋಪಿಯಾಜರು ಭೂಸುರ ಶ್ರೇಷ್ಠರ ಬುದ್ಧಿ ಸಮೃದ್ಧಿಯಿಂ ಪ್ರಕಟವಾದ ಶರೀರ ಅವಯವಗಳಂತೂ ತುಂಬ ರಮಣೀಯ ಬ್ರಹ್ಮ ಸೂತ್ರಗಳೆಂಬ ಹೊಳೆವ ಮಾಲೆಗಳಿಂದ ಶೋಭಿತಳು ಈ ನಮ್ಮ ದ್ರೌಪದೀ ದೇವಿ ಭುವನ ಭೂಷಣಳವಳು, ತೈಲೋಕ್ಯ ವಂದಿತಳು ॥ ೨೪ ॥ ಕಂಗೊಳಿಪ ಚರಣಗಳ ಸುಂದರ ವಿಲಾಸ ಪ್ರಕಟವಾಗಿಹ ಕೃಷ್ಣವರ್ಣ, ಗುಣಾಢ್ಯೆ ಭಾರತೋತ್ತಮರಾದ ಪಾಂಡವರ ಪ್ರಿಯ ಪತ್ನಿ ಅನುರೂಪ ವಸ್ತ್ರಗಳ ಧರಿಸಿಹಳು ಇವಳು ಮೃದುಮಧುರ ಸ್ವರದಿಂದ ಶೋಭಿತಳು ಇವಳು ಪರಮ ಪಾವನೆ ಈಕೆ, ದ್ರೌಪದೀ ದೇವಿ ॥ ೨೫ ॥ ರಾಜಸೂಯವು ಒಂದು ಅತಿ ಶ್ರೇಷ್ಠ ಯಾಗ ಇಂತಹ ಹಲವಾರು ಯಾಗದಲಿ ಪಾಲ್ಗೊಂಡು ವಾಸುದೇವನ ಗುಣದ ನಿಷ್ಠೆಯನು ಹೊಂದಿದ ಸಕಲ ಧರ್ಮಗಳನ್ನೂ ಬೋಧಿಸುವ ಸಾಮರ್ಥ್ಯ ! ಸಕಲ ಶಾಸ್ತ್ರಗಳಲ್ಲೂ ಪಡೆದಿರುವ ನೈಪುಣ್ಯ ! ಜನನಿಯ ತೆರದಲ್ಲಿ ಸರ್ವಜನ ಪೂಜಿತಳು ॥ ೨೬ ॥ ಸದ್ಧರ್ಮ ಪಥವನ್ನು ತೊರೆದ ದುಶ್ಯಾಸನ ದುರುಳ, ದುಷ್ಕರ್ಮಿ, ದುರ್ಬುದ್ಧಿ, ದುಷ್ಟ ಸಾಮ್ರಾಜ್ಯ ಪದವಿಗೆ ಹಾತೊರೆದ ದುರುಳ ಇಂಥ ದುರ್ಜನನಿಂದ ಉಪಟಳವ ಸಹಿಸಿದಳು ಕೇಶರಾಶಿಯ ಸೆಳೆತ ಅನುಭವಿಸಿದವಳು ವಿವಿಧ ಪರಿಯಲಿ ನೊಂದ ಸಾಧ್ವಿ ಇವಳು ॥ ೨೭ ॥ ಕಲಿಯುಗದ ಕಾಲದಲಿ ಕಲಿಯ ಪ್ರಭಾವ ಅದರಿಂದ ಮಾನವರು ದುರ್ಮಾರ್ಗ ನಿರತರು ಸಜ್ಜನರು ಸಂಖ್ಯೆಯಲಿ ಬಹು ಅಲ್ಪ ಮಂದಿ ಇವರಿಂದ ದ್ರೌಪದಿಯು ನಿರ್ಲಕ್ಷ್ಯಳಾದವಳು ಉಳಿದಿಷ್ಟು ಸಾತ್ವಿಕರು ಈ ಮಹಾಸತಿಯನ್ನು ಕಂಡು ಮರುಗಿದರಲ್ಲಿ ನಿಸ್ಸಹಾಯಕರಾಗಿ ॥ ೨೮ ॥ ಶ್ರೀ ಹರಿಯು ಭಿನ್ನನು ಎಲ್ಲ ಜೀವಿಗಳಿಂದ ಪೂರ್ಣ ಸದ್ಗುಣನಿವನು, ದೋಷ ದೂರನು, ಅಜನು ಶ್ರೀ ಹರಿಯನನವರತ ಅತಿ ಭಕುತಿಯಿಂದ ದ್ರೌಪದಿಯು ಧರಿಸಿಹಳು ಹೃದಯ ಮಂದಿರದಲ್ಲಿ "ಅವನೀಧರ, ವಾಸುದೇವ, ಓ, ಸ್ವಾಮಿ, ನಾಥ!" ಎಂದೆನುತ ಅಡಿಗಡಿಗೆ ಪ್ರಾರ್ಥಿಸಿದಳಾ ಸಾಧ್ವಿ ॥ ೨೯ ॥ ಶ್ರೀ ಕೃಷ್ಣ ದ್ವಯರಿಂದ ದ್ರೌಪದಿಯು ರಕ್ಷಿತಳು ಬೇರಾರಿಗೂ ಆಕೆ ಶರಣು ಎಂಬುವುದಿಲ್ಲ ಎಂದೆಂದೂ ಶ್ರೀ ಹರಿಗೆ ಮೊರೆಯನಿಡುವಳು ಅವಳು ಆಕೆಯಾ ಸಂಕಟದ ಕ್ಷಣ ಕಂಡ ಸಜ್ಜನರು "ಹಾ, ಹಾ," ಎಂದೆನುತ "ಇದು ಧರ್ಮವಲ್ಲ" ನಾವೆಲ್ಲ ಇದನೀಗ ಖಂಡಿಸುವೆವೆಂದರು ॥ ೩೦ ॥ ವೇದಿ ಮಧ್ಯದಿ ಜನಿಸಿ ಅವತಾರ ತಾಳಿದ ದ್ರೌಪದಿಯ ಬವಣೆಯನು ಕಂಡು ಕನಲಿದ ಭೀಮ. ಅಂತೆಯೇ ಕರುಣಾಬ್ಧಿ ಆನಂದ ತೀರ್ಥರು ವೇದಗಳ ದುಃಸ್ಥಿತಿಯ ಕಂಡು ಕೆರಳುತ್ತ ದುಷ್ಟ ಪಕ್ಷದ ಜನರ ಕಂಡು ಕನಲುತ್ತ ದಮನ ಮಾಡುವೆನೆಂದು ನಿರ್ಧಾರ ಮಾಡಿದರು ॥ ೩೧ ॥ ಗೀತಾ ಭಾಷ್ಯ ರಚನೆ ಯಾತ್ರೆಯನು ಕೈಗೊಂಡ ಸಜ್ಜನನು ಒಬ್ಬ ತನ್ನೆಲ್ಲ ಬಂಧುಗಳ ಸನಿಹಕ್ಕೆ ಕರೆದು ಉತ್ಕೃಷ್ಟ ಧನರಾಶಿ ಹಂಚಿ ತೆರಳುವ ತೆರದಿ ಶ್ರೇಷ್ಠತಮ ಹರಿಗೀತೆ ಭಾಷ್ಯವೊಂದನು ರಚಿಸಿ ಅಚ್ಯುತ ಪ್ರೇಕ್ಷರಿಗೂ ಜೇಷ್ಠಯತಿಗಳಿಗೂ ಪರಮ ಭಕುತಿಯಲದನು ಅರ್ಪಿಸಿದರು ॥ ೩೨ ॥ ಪ್ರಥಮ ಬದರೀ ಯಾತ್ರೆ ಶ್ರೀ ಹರಿಯ ಸೇವೆಯನು ಸಾಧಿಸುವ ಸಲುವಾಗಿ ಬದರಿಕಾಶ್ರಮದತ್ತ ಪಯಣಿಸುವ ಆಸೆಯಲಿ ಸ್ವಾಮಿ ಪುರುಷೋತ್ತಮರ ಅನುಮತಿಯ ಬೇಡಿದರು ಆನಂದ ತೀರ್ಥರ ಮನದಭೀಷ್ಟವ ಕಂಡು ಶ್ರೀ ಹರಿಯ ರಕ್ಷಣೆಯು ಸರ್ವದಾ ಇರಲೆಂದು ಅನುಮತಿಯನಿತ್ತರು ಪೂಜ್ಯ ಗುರುವರ್ಯರು ॥ ೩೩ ॥ ಮಲಯ ಮಂಡಲದಿಂದ ಭರದಿಂದ ಬರುವಂಥ ಭ್ರಮರಗಳ ಹಿಂಡುಗಳ ಹಿಂದೆಯೇ ಇರುವಂಥ ಪರಮ ಪರಿಶುದ್ಧತೆಯ ವಾಯುವಿನ ತೆರದಲ್ಲಿ ಸಾಧು ಪಾಂಥರ ತಾಪ ಪರಿಹರಿಸಲೆಂಬಂತೆ ಯೋಗ್ಯ ಹಿಂಬಾಲಕರ ತಂಡದಿಂದೊಡಗೂಡಿ ಬಡಗ ನಾಡಿನ ಕಡೆಗೆ ಒಡನೆ ತೆರಳಿದರು ॥ ೩೪ ॥ ಗಂಗಾದಿ ತೀರ್ಥಗಳು, ಭಾಗವತ ಶಾಸ್ತ್ರಗಳು ಪಾಪ ಪರಿಹರಿಸುವ ಎರಡು ವಿಧ ಸಾಧನವು ಬುದ್ಧಿ ಶುದ್ಧಿಯ ಕೊಡುವ ಭಾಗವತ ಬೋಧಿಸುತ ಗಂಗಾದಿ ನದಿಗಳಲಿ ಸ್ನಾನವನು ಮಾಡುತ್ತ ಎರಡು ವಿಧ ಸಾಧನವ ಪರಿಶುದ್ಧಗೊಳಿಸುತ್ತ ಮುಂದಕ್ಕೆ ನಡೆದರು ಆನಂದ ತೀರ್ಥರು ॥ ೩೫ ॥ ವಾಸುದೇವನ ಪದದಿ ಸತತ ಸಂಗವ ಪೊಂದಿ ಸ್ವಂತ ಸಾಮರ್ಥ್ಯದಲಿ ರುದ್ರದೇವನ ಮೆಟ್ಟಿ ಪಾಪನಾಶಕವಾದ ಕೀರ್ತಿಯನು ಪಡೆದಿರುವ ಆಚಾರ್ಯ ಮಧ್ವರು ಯಾತ್ರೆಯನು ಮುಂದರಿಸಿ ಗಂಗಾಪ್ರವಾಹವನು ಕೆಚ್ಚಿನಿಂದಲಿ ಹಾಯ್ದು ಬದರಿಕಾಶ್ರಮದೆಡೆಗೆ ಮುನ್ನಡೆದು ಹೋದರು ॥ ೩೬ ॥ ಹಾದಿಯಲಿ ಅಡಿಗಡಿಗೆ ಆನಂದ ತೀರ್ಥರು ಸ್ಮರಣ ಮಾತ್ರದಿ ಮನಕೆ ಆನಂದ ವೀಯುವ ಮೂರು ಜಗಗಳಿಗೂ ವಿಸ್ಮಯವ ನೀಡುವ ಪರಿ ಪರಿಯ ಕಾರ್ಯವನು ಸುಲಭದಲಿ ಮಾಡುತ್ತ ಶ್ರೀ ಹರಿಯು ನರರಿಗೆ ಗೋಚರಿಪ ಕ್ಷೇತ್ರವದು ಬದರಿಕಾಶ್ರಮದ ಬಳಿ ಬಂದು ಸೇರಿದರು ॥ ೩೭ ॥ ವೇದವ್ಯಾಸಾನುಗ್ರಹ ಭಾರತಕೆ ಭೂಷಣ ಬದರಿನಾರಾಯಣ ಅನಂತ ಗುಣಪೂರ್ಣ, ಸರ್ವೋತ್ತಮ ಸ್ವಾಮಿಯ ಚರಣಕ್ಕೆ ಭಕುತಿಯಲಿ ನಮಿಸುತ್ತ ಅಡಿಗಡಿಗೆ ಆತನ ಕರುಣೆಯನು ಬೇಡುತ್ತ ಭಕ್ತಿಯಲಿ ರಚಿಸಿದಾ ಹರಿಗೀತೆ ಭಾಷ್ಯವನು ಅರ್ಪಿಸಿದರಾತನಾ ಚರಣಾರವಿಂದದಲಿ ॥ ೩೭ ॥ ಸಂಗಡಿಗರೆಲ್ಲರನು ದೂರಕ್ಕೆ ಕಳುಹಿ ಏಕಾಂತದಲ್ಲವರು ಸ್ವಾಮಿ ಸನ್ನಿಧಿ ಸೇರಿ ಅಂತರಂಗದ ಸೇವೆ ಸಲ್ಲಿಸುತಲವರು ಬದರಿನಾರಾಯಣನ ಪ್ರೀತ್ಯರ್ಥವಾಗಿ ಹರಿಗೀತೆ ಭಾಷ್ಯವನು ಪಠಿಸತೊಡಗಿದರು. "ಶಕ್ತಿ ಇದ್ದಷ್ಟರ್ಥ ಹೇಳುವೆನು" ಎಂದರು ॥ ೩೮ ॥ "ಗೀತೆಯಲಿ ಹಲವಾರು ಸೂಕ್ಷ್ಮ ಅರ್ಥಗಳುಂಟು ಎಲ್ಲ ಅರ್ಥಗಳನ್ನು ಹೇಳ ಬಲ್ಲಿರಿ ನೀವು ಆದರೀ ಅರ್ಥಗಳ ಭಾಷ್ಯದಲಿ ಬರೆದಿಲ್ಲ "ಶಕ್ತಿತಃ" ಎಂಬುದಕೆ ಪರ್ಯಾಯವಾಗಿ "ಲೇಶತಃ" ಎಂಬ ಪದ ಬಳಸಿ ಬರೆಯಿರಿ ನೀವು" ಇಂತು ಆಣತಿಯಿತ್ತ ಬದರಿನಾರಾಯಣ ॥ ೪೦ ॥ "ಲೇಶತಃ" ಎಂಬುವ ಪದವನ್ನು ಬರೆದು ಪಠಿಸಿದರು ಮಧ್ವರು ಭಾಷ್ಯವನು ಮತ್ತೆ ಶಿಷ್ಯರೆಲ್ಲರೂ ಅಂದು ರಾತ್ರಿಯಲಿ ನಿದ್ರಿಸಲು ಶ್ರೀ ಹರಿಯು ಭೂಮಿಯನು ಬಡಿದು ಸದ್ದನು ಮಾಡಿ "ಮತ್ತೊಮ್ಮೆ ಪಠಿಸೆಂದು" ಆದೇಶವಿತ್ತನು ಎಚ್ಚೆತ್ತರಾ ಶಿಷ್ಯರೀ ದನಿಯ ಕೇಳಿ ॥ ೪೧ ॥ ಪರಮ ಪುರುಷನು ಹರಿಯು ಪ್ರತಿಮೆಯಲಿ ಸನ್ನಿಹಿತ "ಉಚ್ಯತಾಂ " ಶಬ್ದವನು ಹರಿಯು ನುಡಿದುದ ಕೇಳಿ ಅದರ ಭಾವವನವರು ಸಾವಧಾನದಿ ಗ್ರಹಿಸಿ ಶಿಷ್ಯರೆಲ್ಲರ ಕರೆದು ಆನಂದ ತೀರ್ಥರು ಪ್ರವಚನವ ಮಾಡಿದರು ಗ್ರಂಥವನು ಮತ್ತೊಮ್ಮೆ ಪರಮಾತ್ಮನಿದರಿಂದ ಸುಪ್ರೀತನಾದ ॥ ೪೨ ॥ ಅಲಕನಂದಾ ಸ್ನಾನದ ವೈಖರಿ ಅಲಕನಂದೆಗೆ ಹೆಸರು ಶೈತ್ಯಗಂಗೆ ಎಂದು ಆ ಪುಣ್ಯತೀರ್ಥದ ನೀರು ಅತಿ ಶೀತವಹುದು ಸ್ಪರ್ಶಿಸಲೂ ಅಂಜುವರು ಮಂದಿ ಅದನು ಅರುಣ ಕಾಲದಲೆದ್ದು ಆನಂದ ತೀರ್ಥರು ಮೀಯುವರು ಪ್ರತಿನಿತ್ಯ ಆತಂಕವಿರದೆ ಎಷ್ಟಾದರೂ ಅವರು ಪವಮಾನ ಸುತರು ॥ ೪೩ ॥ ಕಾಷ್ಠಮೌನ ವ್ರತ ಆಚಾರ್ಯ ಮಧ್ವರು ಪರಿಶುದ್ಧ ಚಿತ್ತರು ಸಹಜವಾಗಿಯೇ ಅವರು ಶುದ್ಧಾಂತಃ ಕರಣರು ಎಂದೆಂದೂ ಶ್ರೀ ಹರಿಯ ಕರುಣೆಯನು ಪಡೆದವರು ದೈವಾನುಗ್ರಹವನ್ನು ಮತ್ತಷ್ಟು ಆರ್ಜಿಸಲು "ಅನಂತ ಮಠ" ವೆಂಬ ಮಂದಿರದಿ ನೆಲೆಸಿದರು ಶ್ರದ್ಧೆಯಲಿ ನಡೆಸಿದರು ಮೌನೋಪವಾಸವನು ॥ ೪೪ ॥ ವೇದವ್ಯಾಸರಿಂದ ಉತ್ತರ ಬದರಿಗೆ ಆಹ್ವಾನ ಈ ಪರಿಯ ವ್ರತಗಳನು ಒಂದು ಮಂಡಲ ಪೂರ್ತಿ ಶ್ರದ್ಧೆ ಭಕ್ತಿಯ ಸಹಿತ ಸಾವಧಾನದಿ ಮಾಡಿ ಹರಿಚರಣ ಸೇವೆಯಲಿ ಮೈಮನವ ಮರೆತರು ಪರಮ ಸಂತುಷ್ಟನು, ಶ್ರೀ ಹರಿಯು ಇದರಿಂದ ಅನ್ಯರಿಗೆ ದೀಪ್ತಿಯ ದೃಷ್ಟಿ ಗೋಚರ ಮಾತ್ರ ಮಧ್ವರಿಗೆ ಸನ್ನಿಧಿಗೆ ಬರಲು ಆಹ್ವಾನ! ॥ ೪೫ ॥ ಇಂತು ಆಮಂತ್ರಿಸಿದ ವ್ಯಾಸರೂಪಿ ಹರಿಯು ತೆರಳಿದನು ಆಶ್ರಮಕೆ ನಡುರಾತ್ರಿಯಲ್ಲೆ ಪರಮಾತ್ಮನಾಣತಿಯ ಮನದಲ್ಲೆ ನೆನೆಯುತ್ತ ಮೂರನೆಯ ದಿನದಲ್ಲಿ ಸೂರ್ಯನುದಿಸಿದ ಬಳಿಕ ಶಿಷ್ಯರೆಲ್ಲರಕರೆದು ಆನಂದ ತೀರ್ಥರು ಲಿಖಿತ ಸಂದೇಶವನು ಬರೆದು ತೋರಿದರು ॥ ೪೬ ॥ ಶ್ರೀ ಮಧ್ವ ಸಂದೇಶ "ಬದರಿಕಾಶ್ರಮದಂಥ ಸ್ಥಳವು ಬೇರೊಂದಿಲ್ಲ ವಿಷ್ಣು ಪದಿಯಂದದ ತೀರ್ಥ ಮತ್ತೊಂದಿಲ್ಲ ಶ್ರೀ ಹರಿಗೆ ಸಮನಾದ ದೇವರೇ ಇಲ್ಲ ನಾವು ಬೋಧಿಪ ಶಾಸ್ತ್ರವೇದ ಸಮ್ಮತ ಶಾಸ್ತ್ರ ಇದಕಿಲ್ಲ ಸಮನಾದ ಮತ್ತೊಂದು ಶಾಸ್ತ್ರ" ಎಂಬ ಮಧ್ವರ ನುಡಿಗೆ ಪೂತರಾದರು ಮಂದಿ ॥ ೪೭ ॥ ಬದರಿಗೆ ತೆರಳುವ ಸೂಚನೆ "ಭಗವಂತನಿಹನಲ್ಲಿ, ವ್ಯಾಸರೂಪದಲಿ ತೆರಳುವೆವು ನಾವಲ್ಲಿ ದರುಶನದ ಬಯಕೆಯಲಿ ಮರಳಿ ಬರುವೆವೊ ಮತ್ತೆ ಹೇಳಲಾರೆವು ನಾವು ಯಾರು ಬಲ್ಲರು ಇದನ ? ಅವನ ಹೊರತು ? ಶ್ರೀ ಹರಿಯು ನಿಮಗೆಲ್ಲ ಮಂಗಳವ ನೀಡಲಿ" ಎಂದೆನುತ ಬರೆದಿಟ್ಟು ಮುಗಿಸಿದರು ಮಧ್ವರು ॥ ೪೮ ॥ ಶಿಷ್ಯರ ಆತಂಕ "ಓ ಸ್ವಾಮಿ, ಮಧ್ವರೇ ! ಆಚಾರ್ಯ ಪುಂಗವರೇ ! ನೀವೆಮಗೆ ಪೂಜ್ಯರು ನೀವೆಮಗೆ ಓಡೆಯರು ಈ ಪರಿಯಲೆಮ್ಮನ್ನು ತೊರೆದು ತೆರಳದಿರಿ" ಇಂತು ಆಚಾರ್ಯರನು ಪ್ರಾರ್ಥಿಸಲು ಬಯಸಿದರು ಗುರುಗಳಭಿಮತಕಿದುವು ಯೋಗ್ಯವಲ್ಲಂದೆಣಿಸಿ ಶಿಷ್ಯಗಣ ಕಡುಮೌನ ತಳೆದರಾಗ ॥ ೪೯ ॥ ಸತ್ಯತೀರ್ಥರ ಗುರುಭಕ್ತಿ ಶ್ರೀ ಸತ್ಯತೀರ್ಥರು ಮಧ್ವ ಶಿಷ್ಯೋತ್ತಮರು ಆಚಾರ್ಯ ಮುಖದಿಂದ ಐತರೇಯದ ಅರ್ಥ ಶ್ರವಣ ಮಾಡಿದರವರು ಮೂರು ಬಾರಿ ಆಚಾರ್ಯರಗಲಿಕೆಯ ದುಃಖವನು ತಾಳದೆ ಗುರುಗಳಿಲ್ಲದ ಬಾಳ ಸಹಿಸಿಕೊಳಲಾರದೆ ಗುರುಮಧ್ವರಾ ಹಿಂದೆ ತಾವು ಸಹ ನಡೆದರು ॥ ೫೦ ॥ ಶ್ರೀ ಮಧ್ವಾಚಾರ್ಯರ ಅಪೂರ್ವ ಮಹಿಮೆ ದುರ್ಗ ಮಾರ್ಗವು ತುಂಬ ದುರ್ಗಮವು, ದುಸ್ತರವು ಹಾದಿಯಲಿ ಅತಿ ದೊಡ್ಡ ಹೆಬ್ಬಂಡೆ ಇಹವು ಇಂಥ ಮಾರ್ಗದಿ ನಮ್ಮ ಆನಂದ ತೀರ್ಥರು ವೇಗದಲಿ ಕ್ರಮಿಸಿದರು ಪವನಪುತ್ರನ ತೆರದಿ ಸತ್ಯತೀರ್ಥರು ನಡೆದು ಆಚಾರ್ಯರ ಹಿಂದೆ ಸಂಜೆಯಾದರೂ ಅವರು ಸಂಧಿಸಲೇ ಇಲ್ಲ ॥ ೫೧ ॥ ಮನದಲ್ಲೆ ಅಂಜಿದರು ಶ್ರೀ ಸತ್ಯತೀರ್ಥರು ಹಿಂದಿರುಗಿ ನೋಡಿದರು ಆನಂದ ತೀರ್ಥರು ಶಿಷ್ಯನಾ ಬವಣೆಯನು ಕ್ಷಣದಲ್ಲಿ ಅರಿತರು ಕೈಸನ್ನೆಯಿಂದಲೇ "ಹಿಂದಿರುಗು" ಎಂದರು ದಿನವಿಡೀ ಸಾಗಿದ ಹಾದಿಯೆಲ್ಲವನವರು ಕ್ಷಣದಲ್ಲೆ ಕ್ರಮಿಸುತ್ತ ಆಶ್ರಮಕೆ ಮರಳಿದರು ॥ ೫೨ ॥ ಆಶ್ರಮದಿ ನಿಜಜನರ ಕಂಡರಾ ಯತಿಗಳು ಗುರುಮಧ್ವ ಸಾಹಸವ ಬೆರಗಾಗಿ ಹೇಳಿದರು ಹೆಬ್ಬಂಡೆಗಳ ಮೇಲೆ ಹಾರುವಾ ವೈಖರಿ! ಗಿರಿಶಿಖರಗಳನೇರಿ ಇಳಿಯುವಾ ರೀತಿ ! ಆಚಾರ್ಯ ಮಹಿಮೆಯನು ವಿಧವಿಧದಿ ಬಣ್ಣಿಸುತ ಸತ್ಯತೀರ್ಥರ ಮನವು ಮೈದುಂಬಿ ಬಂತು ॥ ೫೩ ॥ ಮಹಾಮಹಿಮರ ಹಿಮಾಲಯ ಸಂಚಾರ ಹಿಮಗಿರಿಯ ಶೃಂಗದಲಿ ಹಾರುತ್ತ ನಡೆದ, ಪಾಪಗಳನೆಲ್ಲವನೂ ಪರಿಹರಿಸುವಂತಹ ಪುಣ್ಯನಾಮರು ನಮ್ಮ ಆನಂದ ತೀರ್ಥರು ಹಿಂದೊಮ್ಮೆ ಹನುಮಂತ ಜಲಧಿ ಹಾರಿದ ತೆರದಿ ದಾನವರ ಧ್ವಂಸಿಸಿದ ಭೀಮಸೇನನ ತೆರದಿ ಕಂಗೊಳಿಸಿ ಮೆರೆದರಾ ಆನಂದ ತೀರ್ಥರು ॥ ೫೪ ॥ ವೃಷಭರಾಜನ ತೆರದಿ ಬಾಹುಬಲ ಸಿರಿಯು ಅರಳಿದ ಕಣ್ಣುಗಳು ; ಭಯವನರಿಯದ ಧೀರ ಇಂಥ ಜೀವೋತ್ತಮರು, ಆನಂದ ತೀರ್ಥರು ವ್ಯಾಘ್ರ ಕೇಸರಿಯಂಥ ಪ್ರಾಣಿಗಳ ಬೀಡಾದ ಖಗ, ಸರ್ಪ, ವಿಷಜಂತುಗಳಿಗೆಲ್ಲ ನೆಲೆಯಾದ ಹಿಮಗಿರಿಯ ಕಂಡರು, ಆನಂದ ತೀರ್ಥರು ॥ ೫೫ ॥ ಹಿಮಗಿರಿಯ ನೋಡುತ್ತ ಆನಂದ ಹೊಂದುತ್ತ ಆ ಸಿರಿಯ ಕರಗಳಿಂದಪ್ಪುಗೆಯ ಪಡೆದವನ ಸಜ್ಜನರ ಹಿತಕಾಗಿ ಶೇಷಶಯ್ಯೆಯೊಳಿರುವ ಉಲ್ಲಸಿತ ಮನಸಿನ ದೇವವೃಂದದ ನಡುವೆ ರತ್ನಮಯ ಪೀಠದ ಮಧ್ಯದಲಿ ಶೋಭಿಸುವ ರಮಣೀಯ ಮೂರ್ತಿಯನು ಮನದಲ್ಲಿ ಸ್ಮರಿಸಿದರು ॥ ೫೬ ॥ ಅಡಿಗಡಿಗೆ ಅಡಿಗಳಿಗೆ ನಮಿಸುವ ಯತಿಗಡಣ ಚಿನ್ನದಂದದಿ ಹೊಳೆವ ಪೀತವರ್ಣ ದುಕೂಲ ವಿವಿಧ ರತ್ನಾಭರಣ, ಹೊನ್ನ ಕಡಗಗಳು ಕಂಗೊಳಿಪ ವನಮಾಲೆ ರಮಣೀಯ ಕಾಂತಿ ಆನಂದ ಮುಂತಾದ ಸದ್ಗುಣವೇ ದೇಹ ಇಂಥ ಶ್ರೀ ಹರಿಯನ್ನು ಸ್ಮರಿಸಿ ಕೊಂಡಾಡಿದರು ॥ ೫೭ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ ಆನಂದಾಂಕಿತ ಆರನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ ಏಳನೆಯ ಸರ್ಗ ಶ್ರೀ ಗುರುಭ್ಯೋ ನಮಃ ಏಳನೆಯ ಸರ್ಗ ಉತ್ತರ ಬದರಿಯಲ್ಲಿ ಶ್ರೀ ಮಧ್ವಾಚಾರ್ಯರು ಆಚಾರ್ಯ ಮಧ್ವರು ಪಯಣವನು ಮುಂದರಿಸಿ ಹಿಮಗಿರಿಯ ಶೃಂಗದ ಮತ್ತೊಂದು ಬದಿ ಸೇರಿ ಬದರಿಕಾ ಕಾನನದಿ ರಾರಾಜಿಸುತ್ತಿದ್ದ ಭೂತಾಯ ಸೊಬಗಿನ ಐಸಿರಿಗೆ ನೆಲೆಯಾದ ಜಗದ ಎಲ್ಲೆಡೆಯಲ್ಲೂ ಜನಜನಿತವಾಗಿದ್ದ ವ್ಯಾಸಮುನಿಗಳ ಪುಣ್ಯ ಧಾಮವನು ಕಂಡರು ॥ ೧ ॥ ಶ್ರೀ ವ್ಯಾಸಾಶ್ರಮ ವರ್ಣನೆ ಚಳಿ, ಗಾಳಿ, ಮಳೆ, ಬಿಸಿಲು, ಎಲ್ಲವನೂ ಸಹಿಸುವ ಯಜ್ಞಯಾಗಗಳಲ್ಲಿ ಎಡೆಬಿಡದೆ ತೊಡಗಿರುವ ಭೂಸುರರಿಗೆಲ್ಲರಿಗೂ ಶಾಸ್ತ್ರವನು ಬೋಧಿಸುವ ಮುನಿವರೇಣ್ಯರಿಗೆಲ್ಲ ಆಶ್ರಯವು ಆಶ್ರಮ ಉತ್ತುಂಗ ವೃಕ್ಷಗಳ ವನಸಿರಿಯ ಬೆಡಗು ! ಪಶುಪಕ್ಷಿಗಳಿಗೆಲ್ಲ ಉತ್ತಮೋತ್ತಮ ಧಾಮ ! ॥ ೨ ॥ ಗಿಳಿವಿಂಡುಗಳ ಗಾನ ಮಧುರ ಅಮೃತ ಪಾನ ! ಜೇನ ಹನಿ ಸವಿದಂತೆ ಆಪ್ಯಾಯಮಾನ ! ಹಕ್ಕಿಗಳ ಚಿಲಿಪಿಲಿಯ ಇನಿದನಿಯ ಇಂಚರ ! ಶ್ರೀ ರಮಾರಮಣ ಶ್ರೀ ಹರಿಯ ಸ್ಮರಣೆಯಲಿ ಪರಿಶುದ್ಧ ಚಿತ್ತದಲಿ, ಜಪತಪಾದಿಗಳಲ್ಲಿ ತೊಡಗಿರುವ ಭೂಸುರರು ನೆಲೆಸಿದ್ದರಲ್ಲಿ ॥ ೩ ॥ ಅಚ್ಯುತನ ಆಲಯ, ವೈಕುಂಠದಂತೆ ವೈಭವದಿ ಮೆರೆದಿತ್ತು ಬದರಿಕಾಶ್ರಮವು ಎಲ್ಲೆಲ್ಲೂ ನೆರೆದಿರುವ ಭೂಸುರರ ಗಡಣ! ಸಕಲ ಮನದಭಿಲಾಶೆ ಪೂರೈಸುವಾ ತಾಣ! ದ್ವೇಷ ಮತ್ಸರವನ್ನು ಕಿತ್ತೆಸೆದ ಸಜ್ಜನರು ! ಅಲ್ಪರಿಗೆ ದುರ್ಗಮವು ಈ ರಮ್ಯ ತಾಣ!॥ ೪ ॥ ಶ್ರೀ ಮಧ್ವರ ವ್ಯಾಸಾಶ್ರಮ ಪ್ರವೇಶ, ಶ್ರೀ ಮಧ್ವ ವರ್ಣನ ಭೂಲೋಕದಲ್ಲೆ ಪರಮ ಪಾವನ ಕ್ಷೇತ್ರ! ಅತ್ಯಂತ ಆನಂದ, ಭಕ್ತಿಯಲಿ ನಲಿಯುತ್ತ ಆಶ್ರಮವ ಹೊಕ್ಕರು ಆನಂದ ತೀರ್ಥರು ಮೂವತ್ತು ಮತ್ತೆರಡು ಲಕ್ಷಣಗಳಿಂದ ಕಂಗೊಳಿಸಿ ಮೆರೆದಿದ್ದ ಆಚಾರ್ಯ ಮಧ್ವರನು ಕಂಡ ಆ ಬ್ರಾಹ್ಮಣರು ಚಿಂತಿಸಿದರಿಂತೆಂದು ॥ ೫ ॥ "ಯಾರಿವರು ಈ ವ್ಯಕ್ತಿ? ಎಂಥ ಸಲ್ಲಕ್ಷಣವು ! ಕನಕದಿಂದಾಕುಲಿತ ತಾಲವೃಕ್ಷದ ನಿಲುವು ! ಕಮಲಪುಷ್ಪದ ಪರಿಯ ಆ ಬೊಗಸೆಗಂಗಳು ! ಪೂರ್ಣಚಂದ್ರನ ತೆರದ ಆ ಮುಖದ ವರ್ಚಸ್ಸು ! ಗಜರಾಜನ ಪರಿಯ ಗಂಭೀರ ನಡಿಗೆಯದು ! ಯಾರು ಇರಬಹುದಿವರು ? ಇಲ್ಲಿ ಬಂದವರು ? ॥ ೬ ॥ "ಅತಿ ಶಾಂತ ಕಾಯವನು ಪಡೆದಿಹನು ಚಂದ್ರಮನು ರಾತ್ರಿಯಲಿ ಮಾತ್ರವೇ ಬೆಳಗುವನು ಅವನು ಹಾಗಿದ್ದರಿವರು ಚಂದ್ರಮನು ಅಲ್ಲ ಹಗಲಿನಲಿ ಪ್ರಜ್ವಲಿಪ ಸೂರ್ಯನೂ ಇವರಲ್ಲ ಪ್ರಖರ ತಾಪದ ಸುಳಿವು ಇವರೊಳಿಲ್ಲ ಉಪಮಾನವಿಲ್ಲದಿಹ ಸದ್ಗುಣಾರ್ಣವರಿವರು ! ॥ ೭ ॥ "ಆ ಕಮಂಡಲು, ಆ ಯೋಗದಂಡ! ಸನ್ಯಾಸ ದೀಕ್ಷೆಯ ಜಾಜ್ವಲ್ಯ ಕುರುಹುಗಳು ! ಈ ತೇಜಸ್ವಿ ಯಾರೆಂದು ಅರಿಯಲಾರೆವು ನಾವು ಅಪ್ರತಿಮ ಧೀಃಶಕ್ತಿ ಇವರದಾಗಿಹುದು ಮನುಜರೂಪದಲಿರುವ ಈ ಯತಿಶ್ರೇಷ್ಠರು ನಮಗೆಲ್ಲ ವಿಸ್ಮಯವನುಂಟು ಮಾಡುತಲಿಹರು " ॥ ೮ ॥ ಶೃತಿನಾಥನೆಂದೆನಿಸಿ ಖ್ಯಾತಿಯನು ಪಡೆದಿರುವ ವ್ಯಾಸಮುನಿಗಳ ಕಾಂಬ ಹಂಬಲವ ತೋರುತ್ತ ಬರುತಿರ್ಪ ಈ ದಿವ್ಯ ಯತಿವರ್ಯರನು ಕಂಡು ಪವನ, ಚತುರಾನನರೇ ಬರುತಿರ್ಪರೋ ಎಂದು ಸಂಶಯವ ತಳೆಯುತ್ತ ಆಶ್ರಮದ ವಾಸಿಗಳು ಬೆರಗುಗೊಂಡರು ಆಗ ಅಪರಿಚಿತರನು ಕಂಡು ॥ ೯ ॥ ಬದರೀ ವೃಕ್ಷವರ್ಣನ ಅಪರಿಚಿತರಾಗಮನ ವಿಸ್ಮಯವ ಮೂಡಿಸಿತು ಬ್ರಾಹ್ಮಣ ಶ್ರೇಷ್ಠರಲಿ ಕೌತುಕವು ಮೂಡಿತ್ತು ಅಪರಿಚಿತನ ಅಂಗಾಂಗ ಸೌಷ್ಠವವ ಕಂಡು ಸೂಕ್ಷ್ಮ ವಿಶ್ಲೇಷಣೆಯ ಮಾಡತೊಡಗಿದರವರು ಮಧ್ವಮುನಿಗಳು ಆಗ ತ್ವರಿತಗತಿಯಲಿ ನಡೆದು ದೇವ ಪಾದಪದಂಥ ತರುವೊಂದ ಕಂಡರು ॥ ೧೦ ॥ ನುಣುಪಾದ ತ್ವಚೆಯುಳ್ಳ ಉತ್ತುಂಗ ವೃಕ್ಷವದು ರತ್ನದಂತಹ ಹೂವು ಎಲ್ಲೆಡೆಯೂ ಹರಡಿತ್ತು ಶಾಖೋಪಶಾಖೆಗಳು ವೃಕ್ಷವನು ಆವರಿಸಿ ಪನ್ನಗನ ಫಣಿಯಂತೆ ಕಂಗೊಳಿಸಿ ಮೆರೆದಿತ್ತು ಪರಮಾತ್ಮ ಶ್ರೀ ಹರಿಯ ಸೇವೆಗೋ ಎಂಬಂತೆ ಶೇಷ ದೇವರೇ ಅಲ್ಲಿ ನೆಲೆಸಿದಂತಿತ್ತು ॥ ೧೧ ॥ ರಮಣೀಯ ಪತ್ರಗಳು ವೃಕ್ಷಕ್ಕೆ ಆಭರಣ ರಂಗು ರಂಗಿನ ಬಣ್ಣ ಪತ್ರಗಳ ಶೋಭೆ ಸುರಪತಿಯ ಆಯುಧದ ಪರಿಯಲೀ ಪತ್ರಗಳು ರವಿಕಿರಣದಾಕ್ರಮಣ ತಡೆಗಟ್ಟುತ್ತಿದ್ದವು ಮುನಿಗಣಕೆ ಆನಂದವೀಯುತ್ತಲಾ ವೃಕ್ಷ ಇಂದಿರಾಪತಿಯ ಪ್ರಿಯ ಖಗರಾಜನಂತಿತ್ತು ॥ ೧೨ ॥ ಅಮರಲೋಕದ ಮರದ ಪರಿಯಲ್ಲಿ ಆ ಮರವು ಅಮೃತದ ಪರಿಪಕ್ವ ಫಲಗಳನು ನೀಡಿತ್ತು ಹರಿಭಕ್ತಿರಹಿತರಿಗೆ ದುರ್ಲಭವು ಆ ವೃಕ್ಷ ನಿಗಮ ತತಿಗಳೇ ಮೂರ್ತಗೊಂಡಂತಿರುವ ಭಾರತ, ಪುರಾಣಗಳು ಈ ಮರದ ಶಾಖೆಗಳು ಈ ಭವ್ಯ ವೃಕ್ಷವನು ಮಧ್ವಮುನಿ ಕಂಡರು ॥ ೧೩ ॥ ಮುನಿವರ್ಣನ ವೃಕ್ಷದ ವಿಸ್ತಾರ, ಭವ್ಯ ಹರಹು ! ಆ ಮರದ ಸೊಂಪು ಅದರಡಿಯ ತಂಪು ! ರಮ್ಯ ರಮಣೀಯತೆಯೇ ಮೈವೆತ್ತಿನಿಂತಂತೆ ಆ ಮರದ ಬುಡದಲ್ಲಿ ಹತ್ತಾರು ವೇದಿಕೆ ಆಲ್ಲೆಲ್ಲ ತಾಪಸರು ಜಪತಪದಿ ಮಗ್ನರು ಗಗನದಲಿ ಶೋಭಿಸುವ ದೇವತೆಗಳಂತೆ ॥ ೧೪ ॥ ಅಧಿಕ ಸಂಖ್ಯೆಯಲಿಹರು ಆ ಯತೀಶ್ವರರು ಜಟೆಯಿಂದ ಶೋಭಿತರು, ಸದ್ಗುಣಾರ್ಣವರು ಕೋಪ, ಮದ, ದುರ್ಗುಣವ ತ್ಯಜಿಸಿದವರು ಭೋಗ ಲಾಲಸೆಯಲ್ಲಿ ಆಸಕ್ತಿ ತೊರೆದವರು ಗಾಳಿಯೇ ಅವರಿಗೆ ಅಶನಾದಿ ಭೋಜನವು ಇಂಥ ಮುನಿಪುಂಗವರು ಮಧ್ವರಿಗೆ ಕಂಡರು ॥ ೧೫ ॥ ಶ್ರೀ ವೇದವ್ಯಾಸ ವರ್ಣನ ಶ್ರೀ ಹರಿಯ ಮತ್ತೊಂದು ಪ್ರಾಕೃತದ ರೂಪದಲಿ ಮೂರ್ಲೋಕ ಮಂಡಲಕೆ ಲೋಕಭೂಷಣರಾಗಿ ಸತ್ಯವತೀ ಸುತನಾಗಿ, ಇಳೆಯಲ್ಲಿ ಅವತರಿಸಿ ಬದರಿಕಾಶ್ರಮದಲ್ಲಿ ಮುನಿನಿವಹ ಮಧ್ಯದಲಿ ಕಂಗೊಳಿಸಿ ಮೆರೆದಿದ್ದ ವ್ಯಾಸಮುನಿವರ್ಯರನೂ ಪರಿಪೂರ್ಣ ಪ್ರಮತಿ, ಆ ಮಧ್ವಮುನಿ ಕಂಡರು ॥ ೧೬ ॥ ಪರಿಶುದ್ಧ ಚಿತ್ತವನು ಪೊಂದಿಹರು ಮಧ್ವರು ತಮ್ಮ ಹೃತ್ಕಮಲದಲಿ ಆಚಾರ್ಯವರ್ಯರು ಸರ್ವದಾ ಕಾಣುವರು ವ್ಯಾಸಮುನಿಗಳನು ಆ ಸುರೋತ್ತಮರನ್ನು ಅಡಿಗಡಿಗೆ ಕಾಣುತ್ತ ನಿತ್ಯ ನೂತನವೆಂದು ದರುಶನವ ಎಣಿಸುತ್ತ ಅಚ್ಚರಿಯಲಿಂತೆಂದು ಆಲೋಚಿಸಿದರು ॥ ೧೭ ॥ "ಅಗಣ್ಯ ಗುಣಗಳಿಗೆ ಸಾಗರರು ಇವರು ಪರಬೊಮ್ಮನಾಣತಿಗೆ ಅನುಸಾರವಾಗಿ ಮುನಿ ಪರಾಶರರಿಂದ ಸತ್ಯವತಿ ಗರ್ಭದಲಿ ಜನಿಸಿ ಬಂದಿಹರಿವರು ಶ್ರೀ ವೇದವ್ಯಾಸರು ಅಕಳಂಕ ವಾರಿಧಿಯು ಸರ್ವಗುಣ ನಿಧಿಯು ಇವರೀಗ ಸಾಕ್ಷಾತ್ತು ಶ್ರೀ ಹರಿಯೇ ಅಲ್ಲವೆ ?'' ॥ ೧೮ ॥ "ಕಾರುಣ್ಯ ವೆಂಬೊಂದು ಮಂದರಾದ್ರಿಯು ಕಡೆದ ಸಜ್ಜನರ ಮನಸೆಂಬ ಪಾಲ್ಗಡಲಿನಲ್ಲಿ ಶೃತಿರೂಪ ಶ್ರೀ ಹರಿಯ ಹೃತ್ಕಮಲವಾಸಿನಿ ಪರಮ ಲಾವಣ್ಯವತಿ, ಪರಮ ಸೌಂದರ್ಯವತಿ ಸಕಲ ಸಿರಿದಾಯಿನಿ ಶ್ರೀ ರಮಾ ದೇವಿಯು ಪ್ರಕಟಗೊಂಡಳು ದಿವ್ಯ ಸುಮುಹೂರ್ತದಲ್ಲಿ ॥ ೧೯ ॥ ಶ್ರೀ ಮಹಾಭಾರತವು ಪಾರಿಜಾತದ ತೆರದಿ, ಪುರಾಣೇತಿಹಾಸಗಳು ಚಂದ್ರಮನ ಪರಿಯಂತೆ ಕ್ಷೀರಸಾಗರ ಮಥನ ಸಮಯದಲಿ ಅಂದು ಪಾರಿಜಾತದ ಬಳಿಕ ಚಂದ್ರಮನು ಬಂದಂತೆ ಅಂತ್ಯದಲಿ ಅಮೃತದ ಕಲಶವು ದೊರೆತಂತೆ ವ್ಯಾಸಮುಖಮಂಡಲದಿ ಬ್ರಹ್ಮಸೂತ್ರಗಳುದಯ ! ॥ ೨೦ ॥ "ಬ್ರಹ್ಮ ಸೂತ್ರದ ಭಾಷೆ ತುಂಬ ರಮಣೀಯ ದಿವ್ಯ ಸೌಂದರ್ಯದ ವಚನ ಗಾಂಭೀರ್ಯ ಇಂಥ ವಚನಗಳಿಂದ ಭೂಷಿತರು ವ್ಯಾಸರು ಪಾಂಡುಪುತ್ರರ ಪರಿಯ ಸಜ್ಜನಕೆ ಕೃಪೆದೋರಿ ತತ್ವಜ್ಞಾನವನೆಲ್ಲ ಪೋಷಿಸುವ ಸಲುವಾಗಿ ಭೂಲೋಕದಲ್ಲೆಲ್ಲ ಬಹುಕಾಲ ಚರಿಸಿದರು ॥ ೨೧ ॥ "ಶ್ರೀ ವೇದವ್ಯಾಸರು ಷಡ್ಗುಣ ಪ್ರಪೂರ್ಣರು ಸಕಲ ಐಸಿರಿಯಿಂದ ಸಂಪನ್ನರವರು ರಜನಿ ಆಗಸದಲ್ಲಿ ಐತರಲು ಅನುವಾಗಿ ಆ ರವಿಯು ಮರೆಯಾಗಿ ಹಿಂದೆ ಸರಿಯುವ ತೆರದಿ ಪಾಮರರ ಕಂಗಳಿಗೆ ಗೋಚರಿಸದಂತೆ ಬದರಿಕಾಶ್ರಮದಲ್ಲಿ ನೆಲೆಸಿದರು ಅವರು ॥ ೨೨ ॥ "ಪರಮ ಕೃಷ್ಣಾಜಿನದ ಯೋಗಪೀಠದ ಮೇಲೆ ಆಸೀನರಾಗಿರ್ದು ಕಂಗೊಳಿಸಿ ಮೆರೆದಿರುವ ವ್ಯಾಸಮುನಿಗಳ ಕಾಯ ವಿಜೃಂಭಿಸುತ್ತಿಹುದು ಫುಲ್ಲ ಕುಸುಮಿತ ನೀಲ ಕಮಲಪುಷ್ಪದ ತೆರದಿ ರಮಣೀಯ ಕಾಂತಿಯನು ಸೂಸುವಾ ಕಾಯ ! ಎನ್ನ ಮನ, ನಯನಗಳಿಗಾನಂದ ತುಂಬಿಹುದು. ॥ ೨೩ ॥ "ಅಗಣ್ಯಗುಣದಿಂದ ಪರಿಪೂರ್ಣ ಕಾಯ ಅನಂತವಾಗಿಹುದು ಪ್ರತ್ಯೇಕವಾಗಿ ಸಕಲ ಸದ್ಗುಣದಿಂದ ಸಂಪನ್ನವಾಗಿಹುದು ಸಕಲ ದೋಷಗಳಿಂದ ದೂರವಾಗಿಹುದು ಆನಂದ, ಪರಿಪೂರ್ಣ ಜ್ಞಾನಯುಕ್ತವಾಗಿಹ ದೇಹ ಮಂಗಳಾತ್ಮಕರಿವರು, ಸುಸ್ವರೂಪರು ಇವರು ॥ ೨೪ ॥ "ಕಮಲಾಕಮಲಾಸನರು, ಅನಿಲ, ಗರುಡರು, ಶೇಷರು ರುದ್ರೇಂದ್ರ ಮೊದಲಾದ ದೇವತೆಗಳೆಲ್ಲ ಪದಪದ್ಮರಜವನ್ನು ಶಿರದಲ್ಲಿ ಧರಿಸುವರು ಇಂಥ ಮಹಿಮರು ನಮ್ಮ ಶ್ರೀ ನಿಗಮ ವ್ಯಾಸರು ಇವರ ಅಡಿದಾವರೆಯ ದಿವ್ಯ ಧೂಳಿಗಳನ್ನು ಅನವರತ ಮುಡಿಯುವೆನು ಎನ್ನ ಶಿರದಲ್ಲಿ" ॥ ೨೫ ॥ "ಚರಣಗಳಿಗೆರಗುವೆನು ಪರಮ ಭಕುತಿಯಲಿ ತನ್ನ ಭಕುತರ ಮನದ ರಾಗವನು ಮರ್ದಿಸಿದ ಕಾರಣದಿ ಚರಣಗಳು ಅರುಣರಾಗವ ಹೊಂದಿ ಪರಿಶೋಭಿಸುತ್ತಿವೆಯೋ ಎಂಬ ಆಶಂಕೆ ಧ್ವಜ, ವಜ್ರ, ಅಂಕುಶ, ಪದ್ಯಗಳ ಚಿಹ್ನೆಗಳು ಕೂಡಿರುವ ಚರಣಗಳಿಗೆರಗುವೆನು ನಾನು ॥ ೨೬ ॥ "ಇಂಥ ಮಹಿಮರ ಉಗುರುಗಳನೆಂತು ಬಣ್ಣಿಸಲಿ ? ಸಾಕ್ಷಾತ್ತು ಶ್ರೀ ಹರಿಯ ಚರಣಗಳವಕಾಶ್ರಯವು ಪ್ರಜ್ವಲಿಪ ಕಾಂತಿಯಲಿ ಬೆಳಗುವಾ ಉಗುರುಗಳು ! ಉಭಯ ರೀತಿಯ ಇರುಳ ಓಡಿಸುವ ಉಗುರುಗಳು ! ಒಳಗು, ಹೊರಗಿನ ಇರುಳ ಅಟ್ಟುವ ಉಗುರುಗಳು ! ಉದಯ ರವಿ ಕಾಂತಿಯನು ನಾಚಿಸುವ ಉಗುರುಗಳು ! ॥ ೨೭ ॥ "ಕಾಲ್ಪೆರಳ ಸೌಂದರ್ಯ ಮತ್ತಷ್ಟು ರಮಣೀಯ ! ಕೋಮಲತೆಯೇ ಮೈವೆತ್ತಿ ಬಂದಂಥ ಬೆರಳುಗಳು ! ಮರೆಯಲ್ಲಿ ಅಡಗಿರುವ ಆ ದಿವ್ಯ ಹರಡಿಗಳು ! ಶ್ರೀ ವೇದವ್ಯಾಸರ ಈ ಎರಡು ಚರಣಗಳು ಒಂದಕ್ಕೆ ಮತ್ತೊಂದು ಉಪಮಾನವೇ ಹೊರತು ಬೇರೊಂದು ಉಪಮಾನ ಕವಿಗಳಿಗೆ ಹೊಳೆಯದು ॥ ೨೮ ॥ "ಶ್ರೀ ವೇದವ್ಯಾಸರ ಆ ಯುಗಲ ಜಂಘೆಗಳು ಪರಿಶುದ್ಧ, ನಿರ್ಮಲ, ಉತ್ತಮೋತ್ತಮವಹುದು ದುಂಡು ದುಂಡಾಗಿರುವ ಈ ಜೋಡಿ ಕಣಗಾಲು ಗಾತ್ರದಲಿ ಸುಸ್ಥೂಲ, ಮೋಹಕವು, ರಮ್ಯವು ಆ ದೇವ ದೇವನಿಗೆ ಉಚಿತವಹ ಅಂಗಗಳು ಭಜಿಪ ಭಕುತರಿಗೆಲ್ಲ ಸಾರೂಪ್ಯ ನೀಡುವುವು ॥ ೨೯ ॥ "ಮೊರೆ ಹೊಕ್ಕ ಭಕ್ತರಿಗೆ ಸರ್ವೇಷ್ಟ ಕರುಣಿಸುವ ಶ್ರೀ ಹರಿಯ ಬಳಸಿಹುದು ಯೋಗ ಪಟ್ಟಿಕೆಯೊಂದು ! ಅಚಲ ಆಸನಕಿದುವು ಉಚಿತವಾಗಿಹುದು ಸ್ಥಿರವಾಗಿ ಕುಳಿತಿರಲು ಪರಮ ಸಾಧನವಹುದು ಧನ್ಯತೆಯ ಪಡೆದಿಹುದು ಈ ಯೋಗ ಪಟ್ಟಿಕೆಯು ಇಂತು ಚಿಂತಿಸುತಿಹುದು ಎನ್ನ ಮತಿಯು ॥ ೩೦ ॥ "ಪರಮ ಪುರುಪೋತ್ತಮರು ಶ್ರೀ ವೇದವ್ಯಾಸರು ಅವರ ಆ ಜಘನಗಳು ಪರಮ ಪಾವನವಹುದು ಅವುಗಳನು ಬಳಿಸಿರುವ ಆ ಚರ್ಮದಂಬರವು ವೀಕ್ಷಕರ ಕಣ್ಮನವ ಸೆಳೆಯುತ್ತಲಿಹುದು ಸೂರ್ಯನಾ ಜಾಜ್ವಲ್ಯ ಪ್ರಖರತೆಯ ತೆರದಲ್ಲಿ ಅಪರಿಮಿತ ಕಾಂತಿಯನು ಸೂಸುತಲಿಹುದು ॥ ೩೧ ॥ "ಮಹಿಮರಾ ಉದರವು ಮತ್ತೊಂದು ಅದ್ಭುತವು ಶೋಭಿಸುತ್ತಿಹುದಲ್ಲಿ ಶ್ರೇಷ್ಠತಮ ನಾಭಿಯು ಅತಿ ನಿಮ್ನವೂ ಅಹುದು, ಅತಿ ತೆಳುವೂ ಅಹುದು ಮೂರು ವಲಿಭಗಳುಂಟು ಅದರ ಮೇಲ್ಭಾಗದಲಿ ಕಮಲನಾಭರು ನಮ್ಮ ವ್ಯಾಸಮುನಿವರ್ಯರು ಬ್ರಹ್ಮಾಂಡ ಮಂಡಲವ ಉದರದಲಿ ಧರಿಸಿಹರು" ॥ ೩೨ ॥ "ಶ್ರೇಷ್ಠ ಮುನಿವಂಶದಲಿ ಜನಿಸಿಹರು ಇವರು ಸಜ್ಜನರಿಗೆಂದೆಂದೂ ಅಭ್ಯುದಯ ಕರುಣಿಸುವರು ವೇದಸ್ವರೂಪವೂ, ಪರಿಶುದ್ಧ, ನಿರ್ಮಲವೂ ಆಗಿರುವ ಎರಡು ವಿಧಿ ಬ್ರಹ್ಮಸೂತ್ರಗಳನ್ನು ಹೃದಯದಲಿ ಧರಿಸಿಹರು ಈ ವ್ಯಾಸಮುನಿಗಳು ಇವರ ಈ ಹೃದಯವು ಪರಮ ಪರಿಶುದ್ಧವು" ॥ ೩೩ ॥ "ಶ್ರೀ ಹರಿಗೆ ಸಮನಿಲ್ಲ, ಆತ ಸರ್ವೋತ್ತಮನೆಂದು ಸಭೆಗಳಲ್ಲಿ ಸಾಧಿಸುತ ಡಿಂಡಿಮವ ಬಾರಿಸಿದ ವ್ಯಾಸಮುನಿಗಳ ಕಂಡು ಆ ಬ್ರಹ್ಮದೇವರು ದಿಗ್ವಿಜಯ ಸಾಧನೆಯ ಸಂಕೇತವಾಗಿ ಕೋಟಿ ಸೂರ್ಯರ ಪ್ರಭೆಯ ಪ್ರಖರ ಕಾಂತಿಯ ಪಡೆದ ಕೌಸ್ತುಭ ವೆಂಬೊಂದು ಅಡ್ಡಿಕೆಯ ನೀಡಿಹರು" ॥ ೩೪ ॥ "ವೇದವ್ಯಾಸರ ಹಸ್ತ ಲೋಕದೊಳು ಅನುಪಮ ರಂಜಿಸುತ್ತಿಹವು ಅವು ಅರುಣರಾಗದೊಳು ಶಂಖ ಚಕ್ರಾಂಕಿತದಿ ಶೋಭಿಸುತ್ತಿಹವು ಅತ್ಯಂತ ಮೋಹಕವು, ತುಂಬ ಕೋಮಲವು ದುಂಡುದು೦ಡಾಗಿರುವ ಪುಷ್ಟ ಹಸ್ತಗಳು ಕಾಣಲಾರೆವು ಇವಕೆ ಮತ್ತೊಂದು ಹೋಲಿಕೆಯ" ॥ ೩೫ ॥ ಭಕುತರಿಗೆ ಅಭಯವನು ನೀಡುವಾ ಹಸ್ತಗಳು ! ಈ ಹಸ್ತಗಳಲಿಹವು ದಿವ್ಯ ಮುದ್ರೆಗಳು ಬಲಗೈಯ ತುದಿಯಲ್ಲಿ ಜ್ಞಾನಮುದ್ರೆಯು ಇಹುದು ಭಜಿಸುವರ ಅಜ್ಞಾನ ಬಡಿದೋಡಿಸುವುದು ಮೊಣಕಾಲ ಮೇಲಿರುವ ಎಡಗೈಯ ತುದಿಯು ಭವದ ಭಯ ಪರಿಹರಿಸಿ ಮುಕ್ತಿಯನು ಕರುಣಿಪುದು ॥ ೩೬ ॥ "ಗುರುಕಂಠದಲ್ಲಿರುವ ಮೂರು ವರರೇಖೆಗಳು ಉತ್ತಮೋತ್ತಮವಾದ ಜ್ಞಾನ ಸಂಕೇತಗಳು ಸರ್ವಕಾಲದಲೆಲ್ಲ ತಾವು ನಲಿದುಚ್ಚರಿಪ ಮೂರು ವೇದಗಳ ಮಂತ್ರರಾಶಿಯೆಲ್ಲವೂ ಕೂಡಿ ಸ್ಫುಟವಾದ ಅಂಕಿತವ ಪಡೆದಿವೆಯೋ ಎಂಬಂತೆ ಕಂಗೊಳಿಸಿ ಮರೆದಿಹವುಮೆರೆದಿಹವು ಈ ಮೂರು ರೇಖೆಗಳು" ॥ ೩೭ ॥ "ದೇವ ವೃಂದಕೆ ಇವರು ಶಿಖೆಯ ಮಣಿಯಂತಿಹರು ಆ ದಿವ್ಯ ವದನ, ಪ್ರಖರ ಕಾಂತಿಯ ಸದನ ! ಅಪರಿಮಿತ ಶೋಭೆಯಲಿ ಪರಿಶೋಭಿಸುತ್ತಿಹುದು ಹದಿನಾರು ಅಕಲಂಕ ಕಲೆಗಳನು ಹೊಂದಿರುವ ಶತಕೋಟಿ ಚಂದ್ರರಿಗೂ ಮಿಗಿಲಾದ ಕಾಂತಿ ಎಂತು ಬಣ್ಣಿಪುದಿಂಥ ಅಪ್ರತಿಮ ತೇಜವನು ?" ॥ ೩೮ ॥ "ಚೆಲುವಾದ ಚೆಂದುಟಿಯು ನಯನ ಮೋಹಕವಹುದು ಅರುಣ ರಾಗದಿ ಮೆರೆವ ಆ ಅಧರ ಯುಗ್ಮಗಳು ! ಮಾಮರದ ಹೊಸ ಚಿಗುರ ಪರಿಯಲಿಹವು ಪದ್ಮರಾಗದ ಮಣಿಯ ತುಣುಕುಗಳ ನಡುವೆ ಹೊಳೆವ ಮುತ್ತುಗಳ ಮಾಲೆಯನು ಕೂಡ ನಾಚಿಸುವ ತೆರವಿಹವು ದಂತಪಂಕ್ತಿಗಳು" ॥ ೩೯ ॥ ಆಶ್ರಮದ ದ್ವಿಜರಿಗೆ, ಪಂಡಿತೋತ್ತಮರಿಗೆ ವೇದಗಳ ಗೌಪ್ಯವನು ಭೇದಿಸುವ ತವಕ ನೀರ ಒರತೆಗೆ ಕಾಯ್ವ ಬಾವಿಗಳ ತರಹ ಅವರ ಮನದಾಳದಲಿ ಹತ್ತಾರು ಸಂದೇಹ ನೂರಾರು ಪ್ರಶ್ನೆಗಳ ನೂರಾರು ಬಾವಿಗಳ ಒಮ್ಮೆಲೇ ತುಂಬುವುದು ವ್ಯಾಸವಾಣಿಯ ಗಂಗೆ ॥ ೪೦ ॥ "ಕಣ್ಮನಕೆ ಮುದವೀವ ವ್ಯಾಸಮುನಿಗಳ ನೋಟ ! ಅವರ ಆ ನೇತ್ರಗಳು ಕಮಲ ಪುಷ್ಪಗಳಂತೆ ಜಗಕೆಲ್ಲ ನೀಡುವುವು ಸಂತಸದ ಸುಧೆಯನ್ನು ಮಂದಹಾಸವು ಬೆರೆತ ಆ ದಿವ್ಯ ನೋಟವದು ಲಾಲಿಪುದು ಬರಸೆಳೆದು ಬಿಗಿಯ ಬಂಧನದಿಂದ ಪೂರ್ಣಗೊಳಿಪುದು ಎನ್ನ ಮನದ ಆಕಾಂಕ್ಷೆಯನು ॥ ೪೧ ॥ " ಎನ್ನ ಈ ಸ್ಥಾನವನು ಅಪಹರಿಪ ಸಂಚಿನಲಿ ಕಮಲವೇ ಮೊದಲಾದ ಇತರ ಪುಷ್ಪಗಳೆಲ್ಲ ಮತ್ಸರವ ಸೂಸುತ್ತ ಸನ್ನಾಹ ನಡೆಸಿವೆ ಇಂತು ಶ್ರೀ ಹರಿಯಲ್ಲಿ ಮೊರೆ ಇಡುತಲಿಹುದೋ ಎಂಬಂತೆ ತೋರುತಿದೆ ಆ ತುಲಸಿ ದಲವು ಕಿವಿಗಳಲಿ ಕಂಗೊಳಿಪ ಆ ಕರ್ಣ ಭೂಷಣವು " ॥ ೪೨ ॥ "ಜಗಕೆಲ್ಲ ಒಡೆಯರು, ಶ್ರೀ ವೇದವ್ಯಾಸರು ಅವರ ಆ ಭ್ರೂಲಾಸ್ಯ, ಎಂತಹ ಸ್ವಾರಸ್ಯ! ಬ್ರಹ್ಮ ರುದ್ರರ ಸಹಿತ ಎಲ್ಲ ದೇವರ ಕ್ರಿಯೆಯು ಸಕಲ ಜನ ಸಂಪದವು, ಉತ್ಪತ್ತಿ, ನಾಶವು ಎಲ್ಲವೂ ಜರುಗುವುವು ಈ ಲಾಸ್ಯದಿಂದ ಸಕಲ ಭುವನದ ಕಾರ್ಯಕಾರಣವು ಈ ಲಾಸ್ಯ " ॥ ೪೩ ॥ " ಸರ್ವರೊಳು ಉತ್ತಮರು ಶ್ರೀ ವೇದವ್ಯಾಸರು ಮೂರು ಲೋಕಕೂ ಅವರು ತಿಲಕದಂತಿಹರು ಹಣೆಯಲ್ಲಿ ಕಂಗೊಳಿಪ ಆ ಭವ್ಯ ತಿಲಕವದು ನೀಲಮಣಿ ಪರ್ವತದ ಶಿಖರದ ಮಧ್ಯದಲಿ ಕಂಗೊಳಿಪ ಪದ್ಮಮಣಿ ಶಿಲೆಯ ಸಾಲಿನ ತೆರದಿ ಸೂರೆಗೊಳುವುದು ಎಲ್ಲ ದರ್ಶಕರ ಮನವನ್ನು " ॥ ೪೪ ॥ ಮಿರಿಮಿರಿದು ಮಿಂಚುವಾ ಮಿಂಚ ಬಳ್ಳಿಗಳಿಂದ ಮೋಹಗೊಳಿಸುವ ನೀಲ ಮೇಘ ಮಾಲೆಯ ತೆರದಿ ನೀಲವರ್ಣದ ಕಾಯ, ಕೆಂಬಣ್ಣ ಜಟೆಯಿಂದ ಶೋಭಿಸುತ ಮೆರೆದಿರುವ ಶ್ರೀ ವೇದವ್ಯಾಸರ ಭವ್ಯ ದೇಹವ ಕಂಡು ಸಂತಸದಿ ಮುದಗೊಂಡು ಧನ್ಯ ನೆಂದೆಣಿಸಿದರು ಆನಂದ ತೀರ್ಥರು ॥ ೪೫ ॥ ಶ್ರೇಷ್ಠತಮ ದೇವತೆಯು ಶ್ರೀ ರಮಾ ದೇವಿಯು ಹಗಲಿರುಳು ಶ್ರೀ ಹರಿಯ ಸನ್ನಿಧಿಯೊಳಿರ್ಪಳು ಆ ಹರಿಯ ಕಾಲ್ಬೆರಳ ಉಗುರುಗಳ ಅಂಚಿನಲಿ ನಲಿದು ಮೆರೆದಾಡುವ ಸಕಲ ಸದ್ಗುಣಗಳಲಿ ಹಲವಾರು ಗುಣಗಳನು ಅರಿಯದಿಹಳಾಕೆ ಇಂತಿರಲು, ಮತ್ತಿತರ ಪಾಮರರ ಪಾಡೇನು ? ॥ ೪೬ ॥ "ಭೂ, ಅಗ್ನಿ, ಜಲ, ವಾಯು, ಆಕಾಶ ಮುಂತಾದ ಒಂಬತ್ತು ಆವರಣ ಕೂಡಿರುವ ಬ್ರಹ್ಮಾಂಡ ಇದ ಕಾಂಬೆ, ಅನವರತ, ಆಶ್ಚರ್ಯ ವಿರದಂತೆ ಆದರೀ ಸದ್ಗುರುವ ಅದ್ಭುತದ ಕಾಯವನು ಕಂಡು ಈ ಪರಿಯಲ್ಲಿ ಅಚ್ಚರಿಯ ಹೊಂದಿರುವೆ ಎಂಥದೀ ಸೋಜಿಗವು ? ಎಂಥ ಆಶ್ಚರ್ಯ !" ॥ ೪೮ ॥ ಶ್ರೀ ವ್ಯಾಸ-ಮಧ್ವ ಸಮಾಗಮ ಇಂತೆಂದು ಚಿಂತಿಸುತ ಆನಂದ ತೀರ್ಥರು ಮೈಮನಗಳಲ್ಲೆಲ್ಲ ಶ್ರೀ ಹರಿಯ ಧ್ಯಾನಿಸುತ ಬಾಹ್ಯಗತಿಯನು ಅವರು ತ್ವರಿತದಲಿ ಕ್ರಮಿಸುತ್ತ ವೇದಗಳ ಜನಕ ಶ್ರೀ ವ್ಯಾಸಮುನಿಗಳನು ಹಿಂದೆ ಕಣ್ಣಲ್ಲಿ ಕಂಡು ಮುದಗೊಂಡಿದ್ದು ಈಗವರ ನಿಜ ದೇಹ ಸಾಮೀಪ್ಯ ಪೊಂದಿದರು ॥ ೪೮ ॥ ಗುರುಭಕ್ತಿ ಭಾವವದು ತುಂಬ ಗುರುತಮವಹುದು ಇಂಥ ಗುರುಭಕ್ತಿಯ ಅತಿಶಯದ ಭಾರದಲಿ ದೇಹವನು ಬಾಗಿಸಿದ ಆನಂದ ತೀರ್ಥರು ಭಕುತಿಯಿಂದಲಿ ತಮ್ಮ ಎರಡು ಕೈಜೋಡಿಸುತ ಕಣ್ಣರೆಪ್ಪೆಗಳನ್ನು ಅರೆತೆರೆದು ನೋಡುತ್ತ ಪೂಜ್ಯ ಗುರುವರ್ಯರಿಗೆ ಸ್ತೋತ್ರವನು ಸಲಿಸಿದರು ॥ ೪೯ ॥ ಆನಂದ ತೀರ್ಥರಿಗೆ ವಿನಯವೇ ಆಭರಣವು ಭವ್ಯ ಭೂಷಣವಹುದು ಆ ದಿವ್ಯ ಕಾಯಕ್ಕೆ ಸಾಷ್ಟಾಂಗ ಕರ್ಮಗಳ ವಿಹಿತದಲಿ ಮಾಡುತ್ತ ಪೂಜ್ಯರೆನಿಸಿದ ನಮ್ಮ ಆನಂದ ತೀರ್ಥರು ವ್ಯಾಸಮುನಿಗಳ ಪಾದ ಪಂಕಜಗಳಲ್ಲಿ ನಮಿಸಿದರು ಅತ್ಯಂತ ಭಕ್ತಿಪರವಶರಾಗಿ ॥ ೫೦ ॥ ಪರಾಶರಾತ್ಮಜರು, ವ್ಯಾಸ ಭಗವಾನರು ಇಳೆಯೊಳಗೆ ಇಳಿದಿರುವ ಶ್ರೀ ಹರಿಯೇ ಅವರು ತಮ್ಮ ಪಾದಕೆ ಎರಗಿ ಸಾಷ್ಟಾಂಗ ನಮಿಸಿದ ಆನಂದ ತೀರ್ಥರನು ಪ್ರೇಮದಿಂದಲಿ ಕಂಡು ತಮ್ಮೆರಡು ಕೈಗಳನು ಪ್ರೀತಿಯಲಿ ಚಾಚಿ ಹಿಡಿದೆತ್ತಿ ನಿಲಿಸಿದರು ಪರಮ ವಾತ್ಸಲ್ಯದಲಿ ॥ ೫೧ ॥ ಶೃತಿಪತಿಗಳಾಗಿಹರು, ಶ್ರೀ ವೇದವ್ಯಾಸರು ಅವರ ಮನವೆಂಬುದದು ಅಮೃತದ ಕಲಶ ವಾತ್ಸಲ್ಯದಮೃತವು ತುಂಬಿಹುದು ಅದರಲ್ಲಿ ಮಂದಹಾಸದ ಮೊಗದಿ, ಬೊಗಸೆಗಂಗಳ ಹೊಳಪು ! ಆನಂದ ತೀರ್ಥರನು ಆನಂದದಿಂದ ಬರಸೆಳೆದು ಅಪ್ಪಿದರು ಶ್ರೀ ವ್ಯಾಸಮುನಿಗಳು ॥ ೫೨ ॥ ಆನಂದ ತೀರ್ಥರದು ಬಲು ಭವ್ಯ ಕಾಯ ! ಸ್ವರ್ಣವರ್ಣದ ಕಾಯ, ಬಲು ರಂಜನೀಯ ! ವ್ಯಾಸಮುನಿ ಮಧ್ವರಾ ದಿವ್ಯ ಆಲಿಂಗನವು ಭವ್ಯ ಸಂಗಮವಾಯ್ತು, ಮಧುರ ಮಿಲನವದಾಯ್ತು ಹೊನ್ನ ನೀರಿನ ಧಾರೆ, ಯಮುನೆಯ ಜೊತೆಗೂಡಿ ಹರಿಯುವಾ ನೋಟವನು ಹೋಲುವಂತಿತು ॥ ೫೩ ॥ ಭೂಸುರ ಶ್ರೇಷ್ಠರ ವಂಶಜರು ಈರ್ವರೂ ಹರಿ-ವಾಯುಗಳ ದಿವ್ಯ ಅವತಾರ ತಳೆದಿಹರು ರಾಜ ಭೂಷಣದಿಂದ ಶೋಭಿತರು ಆದಲ್ಲಿ ರಾಜ ಕುವರರ ತೆರದಿ ಬೆಳಗ ಬಲ್ಲರು ಇವರು ದ್ವಾಪರದ ಶ್ರೀ ಕೃಷ್ಣ ಭೀಮಸೇನರ ತೆರದಿ ಕಂಗೊಳಿಸಿ ಮೆರೆದರಾ ಶ್ರೀ ವ್ಯಾಸ ಮಧ್ವರು ॥ ೫೪ ॥ ವ್ಯಾಸ ಮಧ್ವರ ಮಿಲನ ತುಂಬ ಅತಿಶಯವಾಯ್ತು ಮೂಕ ವಿಸ್ಮಿತರಾದ ಆಶ್ರಮದ ದ್ವಿಜಗಣವು ಕೊಂಡಾಡಿತಿಂತೆಂದು ಅದ್ಭುತದ ನೋಟವನು ವಿಶ್ವಪತಿ ವ್ಯಾಸರು ಶುಕಮುನಿಯ ತಂದೆ ಅವರಿಗೂ ಲಭಿಸದ ಇಂಥ ಲಾಲನೆಯನ್ನು ಪಡೆದ ಈ ಮಧ್ವರು, ಅತ್ಯಂತ ಧನ್ಯರು ॥ ೫೫ ॥ ರುದ್ರಾದಿ ಸುರರಂಥ ಹರಿಯ ಸೇವಕರೆಲ್ಲ ನಾಲ್ಮೊಗದ ಬ್ರಹ್ಮನನು ಸೇವಿಸುವ ಪರಿಯಲ್ಲಿ ವ್ಯಾಸ ಮುನಿ ಆಶ್ರಮದ ಶಿಷ್ಯರೆಲ್ಲರೂ ಕೂಡಿ ಗುಲ್ವಾಜ್ಞೆ ಇಂಗಿತವನರಿತವರ ತೆರದಲ್ಲಿ ಆನಂದ ತೀರ್ಥರಿಗೆ ಅನುರೂಪ ಆಸನವ ಭಕ್ತಿ ಆದರವನ್ನು ತೋರುತ್ತ ನೀಡಿದರು ॥ ೫೬ ॥ "ಕುಳಿತುಕೊಳ್ಳಿರಿ'' ಎಂದು ಎಲ್ಲರಿಗೂ ಸೂಚಿಸುತ ಸತ್ಯವಾದಿಗಳಾದ ಆ ವ್ಯಾಸ ಮುನಿವರ್ಯರು ಪೀಠಸ್ಥರಾದರು ಗಾಂಭೀರ್ಯದಿಂದ ಆ ಬಳಿಕ ಆ ನಮ್ಮ ಆನಂದ ತೀರ್ಥರು ಮುಗುಳು ನಗೆ ಸೂಸುತ್ತ, ದ್ವಿಜಗಣವ ನೋಡುತ್ತ ಆಸಿನರಾದರು ಉಚಿತ ಆಸನದಿ ॥ ೫೭ ॥ "ಆನಂದ ತೀರ್ಥರು ಎಮಗಿಂತ ಉತ್ತಮರು" ಇಂತೆಂದು ಅರಿತಿದ್ದ ಆಶ್ರಮದ ಯತಿಗಣವು ವಿಧಿ ವಿಧಾನಗಳನ್ನು ಉಚಿತದಲಿ ಅನುಸರಿಸಿ ಆಚಾರ್ಯವರ್ಯರನು ಆದರದಿ ಉಪಚರಿಸಿ, ಶ್ರವಣ-ಮೋಹಕವಾದ ವ್ಯಾಸ - ಮಧ್ವರ ವಾಣಿ ಮುದದಿಂದ ಆಲಿಸುತ ಸಂತಸವ ಪೊಂದಿದರು ॥ ೫೮ ॥ ಸುಜ್ಞಾನ ನಿಧಿಗಳು ಶ್ರೀ ವೇದವ್ಯಾಸರು ಸಾಕ್ಷಾತ್ತು ಶ್ರೀ ಹರಿಯ ದಿವ್ಯಾವತಾರವು ಸಜ್ಜನಕೆ ತತ್ವವನು ಕರುಣಿಸಲು ಬಂದಿಹರು ಆನಂದ ತೀರ್ಥರ ಹೆಸರನ್ನು ಹೊತ್ತು ಧರೆಗಳಿದು ಬಂದಿಹರು ವಾಯುದೇವರು ಇಂದು ಈ ಹರಿ-ವಾಯು ಮಿಲನವು ಆಶ್ರಮವ ಬೆಳಗಿತ್ತು ॥ ೫೯ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ ಆನಂದಾಂಕಿತ ಏಳನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ ಎಂಟನೆಯ ಸರ್ಗ ಶ್ರೀ ಗುರುಭ್ಯೋ ನಮಃ ಎಂಟನೆಯ ಸರ್ಗ ಶ್ರೀ ವೇದವ್ಯಾಸರ ಬಳಿ ಶ್ರೀ ಮಧ್ವಾಚಾರ್ಯರ ಶಿಷ್ಯವೃತ್ತಿ ಬದರಿಕಾಶ್ರಮದಲ್ಲಿ ಆನಂದ ತೀರ್ಥರು ಸುಜ್ಞಾನ, ನಯವಿನಯ ತೇಜಸ್ಸು ಮುಂತಾದ ಹಲವಾರು ಅಪ್ರತಿಮ ಸದ್ಗುಣಗಳಿಂದ ವಿಪ್ರವೃಂದದ ಸ್ನೇಹ ಸಂಪಾದಿಸಿರಲು ವೇದನಾಯಕರಾದ ವ್ಯಾಸ ಮುನಿವರ್ಯರನು ಏಕಾಂತದಲ್ಲೊಮ್ಮೆ ಸಂಧಿಸಿದರು ॥ ೧ ॥ "ಶ್ರೀ ಹರಿಯ ಮಹಿಮೆಗಳು ಸುವಿಶೇಷವಾದವು ರುದ್ರಾದಿ ದೇವರಿಗೂ ತಿಳಿಯದಂತಹವು ಇವುಗಳನು ಅರಿಯಲು ವಾಯುದೇವರೇ ಅರ್ಹ ವ್ಯಾಸಮುನಿ ಮಧ್ವರ ಗುರು ಶಿಷ್ಯ ಸಂಬಂಧ ಅತ್ಯಂತ ಉಚಿತ, ಅತ್ಯಂತ ಯೋಗ್ಯವು" ಇಂತೆಂದು ಸ್ತುತಿಸಿದರು ದೇವತೆಗಳು ॥ ೨ ॥ ದ್ವಾರಕಾನಗರಿಯು ಸಕಲ ಐಸಿರಿ ಭೂಮಿ ಶ್ರೀ ಕೃಷ್ಣ ಪರಮಾತ್ಮ ಆ ನಗರಿಯನ್ನು ಮತ್ತಷ್ಟು ಸಿರಿಯಿಂದ ಸಮೃದ್ಧಗೊಳಿಸಿದನು ಅಂತೆಯೇ ಈ ನಮ್ಮ ವಾಸಿಷ್ಠ-ಕೃಷ್ಣರು ಜ್ಞಾನದೈಸಿರಿಯಿಂದ ಸಮೃದ್ಧಗೊಂಡಿದ್ದ ಮಧ್ವರಿಗೆ ಜ್ಞಾನವನು ಮತ್ತಷ್ಟು ತುಂಬಿದರು ॥ ೩ ॥ ಭಾಗವತ, ಭಾರತ, ರಾಮಾಯಣಾದಿಗಳು ಬ್ರಹ್ಮಸೂತ್ರಗಳಂಥ ಶ್ರೇಷ್ಠತಮ ಸೂತ್ರಗಳು ಸಜ್ಜನಕೆ ಪ್ರಿಯವಾದ ಪಂಚರಾತ್ರಗಳು ವೇದಾದಿ ವಿದ್ಯೆಗಳ ಗೂಢಾರ್ಥವನ್ನೆಲ್ಲ ಅಪ್ರತಿಮ ಜ್ಞಾನಿ ಶ್ರೀ ಮಧ್ವಮುನಿಗಳು ಅತ್ಯಲ್ಪ ಕಾಲದಲಿ ಅಧ್ಯಯನ ಮಾಡಿದರು ॥ ೪ ॥ ಶ್ರೀ ಮಧ್ವಮುನಿಗಳು ಋಜುಗಣ ಶ್ರೇಷ್ಠರು ಅನಂತ ಜನುಮದಲಿ ಸಾಧನೆಯ ಮಾಡಿಹರು ಸಕಲ ಶಾಸ್ತ್ರಗಳಲ್ಲಿ ನಿಷ್ಣಾತ ಕೋವಿದರು ಇಂತಹ ಮಧ್ವರಿಗೆ ಆ ಶೇಷಶಯನನು ಮತ್ತಷ್ಟು ಜ್ಞಾನವನು ಪ್ರೀತಿಯಲಿ ಕರುಣಿಸಿ ಉತ್ತಮೋತ್ತಮರನ್ನು ಉತ್ಕೃಷ್ಟಗೊಳಿಸಿದನು ॥ ೫ ॥ ಶ್ರೀ ವೇದವ್ಯಾಸರೊಂದಿಗೆ ನಾರಾಯಣಾಶ್ರಮಕ್ಕೆ ಪ್ರಯಾಣ ಬಳಿಕ ಆ ಸರ್ವಜ್ಞ ಶ್ರೀಮದಾಚಾರ್ಯರು ಬಾದರಾಯಣರೆಂಬ ಸಂಪದವ ಹೊಂದಿ ಬದರಿಕಾಶ್ರಮದಲ್ಲಿ ಮತ್ತೊಂದು ಭಾಗದಲಿ ನಾರಾಯಣ ಎಂಬ ಮತ್ತೊಂದು ರೂಪದಲಿ ನೆಲೆಸಿದ್ದ ಶ್ರೀ ಹರಿಯ ದರುಶನವ ಪೊಂದಲು ತೆರಳಿದರು ತ್ವರಿತದಲಿ ಶ್ರೀ ಹರಿಗೆ ನಮಿಸಲು ॥ ೬ ॥ ಉತ್ತಮೋತ್ತಮವಾದ ವಲ್ಕಲದ ಕೌಪೀನ ಶ್ರೇಷ್ಠತಮ ಮೌಂಜಿಯನು ಧರಿಸಿಹನು ಆತ ಭವ್ಯಕಾಂತಿಯ ಬೆಡಗು ಆ ಜಟಾಮಂಡಲಕೆ ಧೂಮವರ್ಜಿತ ಭವ್ಯ ವಹ್ನಿಯಂದದ ತೇಜ ಆದಿ ಪುರುಷನು ಆತ ಆ ನಾರಾಯಣ ಆ ಭವ್ಯ ಮೂರ್ತಿಯನು ಕಂಡರಾ ಮಧ್ವರು ॥ ೭ ॥ ಇಂದ್ರಿಯವ ಜಯಿಸುವುದು ಅತಿ ಕಠಿಣವಹುದು ನಿಷ್ಠುರದ ಜಪತಪವೇ ಇದಕ್ಕೆ ಸಾಧನವಹುದು ಈ ವ್ರತವ ಸಾಧಿಸುತ ವನದಲಿಹನೆಂಬಂತೆ ನಿರಪೇಕ್ಷ, ನಿರ್ಮಲದ ಆತ್ಮಸೌಖ್ಯದಿ ನಿರತ ಬದರಿನಾರಾಯಣನನ್ನು ಮಧ್ವಮುನಿಗಳು ಕಂಡು ಪರಮ ಸಂತೃಪ್ತಿಯಲ್ಲಿ ಆನಂದ ಪೊಂದಿದರು ॥ ೮ ॥ ಸಂಪೂರ್ಣ ಅರಳಿರುವ ಕಮಲ ಪುಷ್ಪದ ತೆರದಿ ಶೋಭಿಸುತ ಬೆಳಗುತಿಹ ತಮ್ಮೆರಡು ಕಂಗಳಿಂ ಆನಂದ ತೀರ್ಥರು ಪರಮ ವಿಸ್ಮಯದಿಂದ ಧರ್ಮಬಾಹಿರ ಕರ್ಮ ಕಂಡು ಮುನಿಸಾಗುವ ಯಮಧರ್ಮ ಪುತ್ರನಾ ನಾರಾಯಣನ ಕಂಡು ಮನದೊಳಗೆ ಇಂತೆಂದು ಸ್ಮರಿಸತೊಡಗಿದರು ॥ ೯ ॥ ಶ್ರೀ ನಾರಾಯಣ ವರ್ಣನ "ಸರ್ವರೊಳು ಉತ್ತಮನು, ಸರ್ವಗುಣ ಸಂಪನ್ನ ಹಗಲಿರುಳು ಶ್ರೀ ಲಕುಮಿ ಸಂಗದಲ್ಲಿರುವವನು ನಾಲ್ಮೊಗದ ಬ್ರಹ್ಮನೇ ಮೊದಲಾದ ದೇವಗಣ ಕೂಡಿರುವ ಹದಿನಾಲ್ಕು ಲೋಕವನ್ನೆಲ್ಲ ಪ್ರಳಯವೈದಿಸುವನಿವನು ಇತಿಹಾಸ ಪುರುಷ ಸರ್ವದೇವೋತ್ತಮನು ನಾರಾಯಣ ॥ ೧೦ ॥ "ಪ್ರಕೃತಿ ಎಂಬುದು ಒಂದು ಮಿಗಿಲಾದ ತತ್ವ ಸತ್ವ, ರಜ, ತಮಸೆಂಬ ತ್ರಿಗುಣಗಳು ಕೂಡಿಹವು ಅದಕಿಂತ ಮಿಗಿಲಾದ್ದು ಮಹತ್ತತ್ವವಿಹುದು ಇದರಿಂದ ಮೂರು ವಿಧ ಅಹಂಕಾರ ತತ್ವವನೂ ಪಂಚಭೂತಗಳನ್ನೂ, ಬ್ರಹ್ಮಾಂಡವನ್ನೂ ಸೃಜಿಸಿಹನು, ಭಗವಂತ, ನಾರಾಯಣ ॥ ೧೧ ॥ "ವಿಧಿ, ವಾಯು, ಗರುಡರು, ರುದ್ರೇಂದ್ರ ದೇವಗಣ ಈ ಸುರರ ಅನುಗರು ಗಂಧರ್ವ, ಅಸುರರು ಎಲ್ಲರನೂ ಸೃಜಿಸುವನು ಲೀಲೆಯಿಂ ಭಗವಂತ ಅನವರತ ಸೃಷ್ಟಿಸುತ, ಪರಿಪಾಲಿಸುತ್ತ ಮತ್ತೆ ಇವರೆಲ್ಲರನೂ ಸಂಹಾರ ಮಾಡುತ್ತ ಅವರವರ ಗತಿಯನ್ನು ಹೊಂದಿಸುವನೀತ ॥ ೧೨ ॥ "ಅಗಣ್ಯ ಸದ್ಗುಣ ವಿದೂಷಣನು ಈತ ಸಕಲ ದೋಷ ವಿದೂರನಿವನು ಎಲ್ಲವನು ಅಂಕೆಯಲ್ಲಿರಿಸಿಕೊಂಡಿರುವವನು ಸ್ಮರಣೆ, ಸ್ತೋತ್ರಗಳಿಂದ ತನ್ನೆಲ್ಲ ಭಕುತರೂ ಮುಕುತಿಯನು ಆರ್ಜಿಸಲು ಅನುಕೂಲವಾಗಲು ಸ್ವೇಚ್ಛೆಯಿಂ ಧರಿಸಿಹನು ವಿವಿಧ ರೂಪಗಳ ॥ ೧೩ ॥ ಮತ್ಸ್ಯಾದಿ ಭಗವದ್ರೂಪ ವರ್ಣನೆ ಹಿಂದೊಮ್ಮೆ ಮತ್ಸ್ಯಾವತಾರವನು ಧರಿಸಿ ವೇದಗಳ ಕದ್ದೊಯ್ದ ದೈತ್ಯನನು ವಧಿಸಿದನು ಹಯಗ್ರೀವ ರೂಪದೊಳು ಮತ್ತೊಮ್ಮೆ ಹರಿಯು ಮಧುವೆಂಬ ರಾಕ್ಷಸನ ಸಂಹರಿಸಿ ಕೊಂದನು ನಾಲ್ಕು ವೇದಗಳನ್ನು ಈ ತರದಿ ಉದ್ಧರಿಸಿ ನಾಲ್ಮೊಗದ ಬ್ರಹ್ಮನಿಗೆ ಮತ್ತೊಮ್ಮೆ ನೀಡಿದನು ॥ ೧೪ ॥ ಮತ್ತೊಮ್ಮೆ ಭಗವಂತ ಕೂರ್ಮ ರೂಪವ ತಾಳಿ ದೇವ-ದೈತ್ಯರು ಕೂಡಿ ಮಥಿಸಿದಾ ಮಂದರವು ಜಲಧಿಯಲಿ ಮುಳುಗುವುದ ತಡೆಹಿಡಿದು ನಿಲಿಸಿದನು ಸೂಕರನ ರೂಪವನು ತಳೆದು ಮತ್ತೊಮ್ಮೆ ದೈತ್ಯನೊಬ್ಬನು ಎಳೆದು ನೀರಿನಲಿ ಮುಳುಗಿಸಿದ ಧರಣಿಯನು ಮೇಲೆತ್ತಿ ಸಂರಕ್ಷಿಸಿದನು ॥ ೧೫ ॥ ನಖಚಕ್ರ ತೇಜ, ಬಲ, ಶಕ್ತಿಯಿಂದಲಿ ಕೂಡಿ ನರಸಿಂಹ ರೂಪವನು ತಳೆದ ಆ ಭಗವಂತ ಸೀಳಿ ಹಾಕಿದನಾತ ತನ್ನ ರಿಪುವನ್ನು ಮತ್ತೊಮ್ಮೆ ಭಗವಂತ ತಾಪಸನ ರೂಪದಲಿ ಚಕ್ರವೆಂಬಾಯುಧವ ತ್ವರಿತದಲಿ ಬಳಸಿ ನಕ್ರನನು ಸಂಹರಿಸಿ ಗಜವ ರಕ್ಷಿಸಿದ ॥ ೧೬ ॥ ಕೌಮಾರ್ಯ ತೇಜದಲಿ ಕಂಗೊಳಿಸಿ ಮರೆಯುತ್ತಮೆರೆಯುತ್ತ ಬಾಲವಟು ವಾಮನನ ರೂಪವನು ತಳೆಯುತ್ತ ಪ್ರತಿಭಾ ಪ್ರಕಾಶದಿಂ ದಾನವರ ಮೆಚ್ಚಿಸುತ ದಾನವಾಧಿಪನಾದ ಬಲಿಯ ಬಳಿ ಐತಂದು ದಾನವನು ಯಾಚಿಸುತ ಸುತಲ ಲೋಕಕೆ ತುಳಿದು ಸುರರ ಲೋಕವ ಮತ್ತೆ ಸುರಪತಿಗೆ ನೀಡಿದನು ॥ ೧೭ ॥ ಝಗ ಝಗನೆ ಬೆಳಗುವ ಪರಶುವನು ಹಿಡಿದು ಕ್ಷಾತ್ರಕುಲ ತಿಮಿರಕ್ಕೆ ರವಿಯಂತೆ ಮೆರೆದು ತಾಪಸರ ದಿವ್ಯಾಂಶ ಸಂಭೂತನೆಂದೆನಿಸಿ ಜಗಕೆ ಮಂಗಳವೀವ ದಿವ್ಯಕಾರ್ಯವನೆಸಗಿ ಧರೆಯೊಳವತರಿಸಿದ ನಾರಾಯಣಾವತಾರನನು ಜ್ಞಾನಿಗಳು ಸ್ತುತಿಸಿದರು ಮತ್ತೊಬ್ಬರವಿಯೆಂದು ॥ ೧೮ ॥ ಪರಮ ಕರುಣಾಳು, ಈ ನಮ್ಮ ಭಗವಂತ ಅಷ್ಟವಸುಗಳ ಪರಿಯ ದೇವಗಣಕೆಲ್ಲ ಮುದವನ್ನು ನೀಡುತ್ತ ಸಂತಸವ ಕೊಡಲೆಂದು ಹಿಂದೊಮ್ಮೆ ಜನಿಸಿದನು ಸೂರ್ಯವಂಶದಲಾತ ಹತ್ತು ದಿಶೆಯನು ಗೆಲಿದ, ಸಂಪದದಿ ಕೂಡಿದ್ದ ದಶರಥನು ಆತನಿಗೆ ತಂದೆಯೆನಿಸಿದ್ದ ॥ ೧೯ ॥ ಸಕಲ ಭುವನಕೆ ಒಡೆಯ, ನಮ್ಮ ಭಗವಂತ ಆತನಿಗೆ ಅತಿ ಪ್ರಿಯನು, ಭುಜಗ ಪತಿಯು ಧರೆಯೊಳವತರಿಸಿದ ಈತ ಲಕ್ಷ್ಮಣನ ಹೆಸರಿನಲಿ ಕಾಮ, ಅನಿರುದ್ಧರು, ಭರತ, ಶತ್ರುಘ್ನರು ಇವರ ಅಗ್ರಜನೀಗ ಶ್ರೀ ರಾಮಚಂದ್ರ ಇವನ ಕಾಂತಿಗೆ ನಮ್ಮ ಚಂದ್ರಮನೂ ಸಮನಲ್ಲ ॥ ೨೦ ॥ ಸಜ್ಜನಕೆ ಉಪಟಳವ ನೀಡುತ್ತ ರಕ್ಕಸರು ಸ್ವೇಚ್ಛೆಯಲಿ ಕಾನನದಿ ವಿಹರಿಸುತಲಿದ್ದರು ಪರಮಾತ್ಮ ತೆರಳಿದನು ಕಾನನಕೆ ಆಗ ಧೂರ್ತ ದಾನವರನ್ನು ಸದೆಬಡಿಯಲೆಂದು ಇಂತು ತೆರಳಿದ ಮಗನ ವಿರಹವನು ತಾಳದೆಯೆ ಕಾತುರದಿ ನೋಡಿದನು ಪಿತನು ಸುತನೆಡೆಗೆ ॥ ೨೧ ॥ ಕಟುಕೇಶಿ ರಕ್ಕಸರ ನಾಯಕತ್ವವ ವಹಿಸಿ ತಾಪಸರ ಯಜ್ಞಕ್ಕೆ ವಿಘ್ನ, ಹಾನಿಯ ಮಾಡಿ ಮುನಿಜನಕೆ ಎದುರಾಗಿ ಕಲಹವನು ಸಾರಿ ಹಲವು ಪರಿಯಲಿ ದುಷ್ಟ ಚೇಷ್ಟೆಗಳನೆಸಗಿದ್ದ ಬಲಶಾಲಿ ದಾನವನ ಸಂಹರಿಸಿ ಪರಮಾತ್ಮ ಗಳಿಸಿದನು ಸಜ್ಜನರ, ಸುರರ ಒಲುಮೆಯನು ॥ ೨೨ ॥ ಉತ್ತಮೋತ್ತಮರಾದ ಭೂಸುರರ ನಿವಹವು ಬೆಳಗಿತ್ತು ಕಾನನದ ತೃಣ, ಕಾಷ್ಠ ಲತೆಗಳನು ಮೊಳಗಿತ್ತು ಸುಸ್ವರದ, ಮಂತ್ರಘೋಷಗಳಲ್ಲಿ ಮುನಿಜನರ ಯಜ್ಞಕ್ಕೆ ರಕ್ಷಣೆಯ ನೀಡುತ್ತ ವಿಹರಿಸಿದ ವೇದಾದಿ ಸಚ್ಛಾಸ್ತ್ರ ಪ್ರತಿಪಾದ್ಯ ಆಲಿಸುತ ರಮಣೀಯ ವಾಣಿ ಪುಂಖವನು ॥ ೨೩ ॥ ಅನುಜನ ಜೊತೆಗೂಡಿ ಪರಮಾತ್ಮನಾಗ ಮರಳಿದನು ಮತ್ತೊಮ್ಮೆ ಮಧುರ ಪುರಿಗೆ ಜನಕನಿಗೆ ಒಲವನ್ನು ತಂದಿತ್ತ ನಗರಿಗೆ ಜಗದೇಕ ಸುಂದರನು ನಮ್ಮ ಪರಮಾತ್ಮ ಸ್ತ್ರೀಪುರುಷರೆನ್ನದೆಲೆ ಎಲ್ಲರ ಕಂಗಳಿಗೆ ಹಬ್ಬವಾಯಿತು ಇಂಥ ಸ್ಮರಣೀಯ ದೃಶ್ಯ ॥ ೨೪ ॥ ನಂತರದಿ ಲೀಲೆಯನು ತೋರುತ್ತ ಪರಮಾತ್ಮ ಶಿವನ ಆ ಧನುವನ್ನು ಸುಲಭದಲಿ ಖಂಡಿಸಿದ ಉಗ್ರಸೇನಾ ಬಲವ ಹೆಮ್ಮೆಯಲಿ ಹೊಂದಿದ್ದ ರಾಜ ಕುವರರ ಗರ್ವ ಕ್ಷಣದಲ್ಲಿ ಭಂಗಿಸಿದ ಬ್ರಹ್ಮಪಿತ ಪರಮಾತ್ಮ ವಿಪ್ರಗುರುವನು ತಣಿಸಿ ಮುದವಿತ್ತ ಭಕ್ತರಿಗೆ ಮಹಿಮೆಯನು ಉಣಿಸಿ ॥ ೨೫ ॥ ಪದ್ಮಪತ್ರದ ತೆರದಿ ನೇತ್ರಗಳ ಪಡೆದಿದ್ದು ರಾಜಕುವರಿಯ ಹಾಗೆ ಧರಣಿಯಲಿ ಜನಿಸಿರ್ದ ಲಕುಮಿಯನು ವರಿಸಿದನು ನಮ್ಮ ಶ್ರೀ ಹರಿಯು ಸಹಜ ಲೀಲೆಗಳಿಂದ ಕ್ಷಾತ್ರವೈರಿಯ ಗೆಲಿದು ಕಡಲಿನಾ ಪರಿಯಲ್ಲಿ ದುರ್ಗಮವು ಎನಿಸಿದ್ದ ಪುರವ ಹೊಕ್ಕನು ನಮ್ಮ ಪರಮಾತ್ಮ ಮುದದಿ ॥ ೨೬ ॥ ಜನನಿಯನು ಸಂತುಷ್ಟಗೊಳಿಸುವ ಸಲುವಾಗಿ ಪತ್ನಿಯಿಂದೊಡಗೂಡಿ, ಅನುಜನೊಂದಿಗೆ ಕೂಡಿ ವೈರಿಗಳನೆದುರಿಸುತ, ವಿಜಯವನು ಸಾಧಿಸುತ, ಧ್ವಜವನ್ನು ಹಾರಿಸುತ, ಲಾಂಛನವ ತೋರುತ್ತ ಪರಮಾತ್ಮ ತೆರಳಿದನು ಕಾನನದ ಕಡೆಗೆ ಭಕ್ತರಾಭೀಷ್ಟವನು ಪೂರೈಸುವೆಡೆಗೆ ॥ ೨೭ ॥ ಪರಮಾತ್ಮ ಕ್ರಮಿಸಿದನು ದುರ್ಗಮದ ಹಾದಿಯನು ಏರಿದನು ಹಲವಾರು ಉತ್ತುಂಗ ಶಿಖರವನು ಆ ನಿಬಿಡ ಕಾನನದಿ ಹಲವಾರು ದುರ್ಜನರು! ಖರ ದೂಷಣರ ಪರಿಯ ಖೂಳ ರಕ್ಕಸರು ! ಸುಜನರಿಗೆ ಪರಿಪರಿಯ ವ್ಯಾಕುಲವ ಕೊಡುವವರ ಭಗವಂತ ನೂಕಿದನು ಘೋರ ನರಕದೊಳು ॥ ೨೮ ॥ ಪ್ರಮಾದ, ಮದದಿಂದ ತುಂಬಿರುವ ದಾನವರ ಸುರಪತಿಯ ಶತ್ರುಗಳ ಅಪರಿಮಿತ ಗಡಣವನು ಪರಮಾತ್ಮ ಕ್ಷಣದಲ್ಲಿ ನಿಗ್ರಹಿಸಿ ಬೆಳಗಿದನು ರುಚಿರಾಶ್ರಮಾಂಗಣವ ತೇಜದಲಿ ಬೆಳಗಿಸುತ ಲೋಕವಂದಿತಳಾದ ಲೋಕಮಾತೆಯ ಸಹಿತ ಭಗವಂತ ಬೆಳಗಿದನು ಪ್ರಖರ ಕಾಂತಿಯಲಿ ॥ ೨೯ ॥ ತನ್ನ ಪ್ರಿಯತಮೆಯಾದ ಶ್ರೀ ಮಹಾಲಕುಮಿಯನು ಆಪಹರಿಸಿ ಅತಿಯಾದ ವ್ಯಾಕುಲವ ನೀಡಿದ್ದ ನರದೇವ ಮಂಡಲವ, ಅಷ್ಟ ದಿಕ್ಪಾಲಕರ ಸುಲಭದಲಿ ನಿಗ್ರಹಿಸಿ ಆ ನಮ್ಮ ಭಗವಂತ ದುಷ್ಟದಾನವನಾದ ಹತ್ತು ತಲೆಯವನನ್ನು ಕಂಡು ಕಾಣದ ರೀತಿ ತಾತ್ಸಾರ ಮಾಡಿದನು ॥ ೩೦ ॥ ಪವನನಂದನನಿಂದ ಅಭಿವಂಧಿತನು ಹರಿಯು ಇಂದ್ರಸುತ ವಾಲಿಯನು ಶರದಿಂದ ಸಂಹರಿಸಿ ಹರಿಸೂನುವಿಗೆ ಪರಮ ಕರುಣೆಯನು ತೋರಿದನು ನಿಜರಾಜ್ಯ ಸಂಪದವ ಆತನಿಗೆ ನೀಡಿ ಜ್ಞಾನ ಸಾಮ್ರಾಜ್ಯದ ದಾನವನು ಮಾಡಿ ಪರಮಾತ್ಮ ತೋರಿದನು ಕರುಣಾ ಕಟಾಕ್ಷ ॥ ೩೧ ॥ ಮರತ್ಸುತನ ಮುಖದಿಂದ ವಾರ್ತೆಯೊಂದನು ಕೇಳಿ ಸಂತೋಷ ಸಂಭ್ರಮದ ಸುದ್ದಿಯಿಂದಲಿ ಹಿಗ್ಗಿ ಮಧುವೈರಿ ಪಯಣಿಸಿದ ಮುಂದಕ್ಕೆ ಸಾಗಿ ಹರಿತಿಗ್ಮ ಚಕ್ರದಲಿ ಶೋಭಿತನು ತಾನಾಗಿ ಪುಣ್ಯಚರಿತರಿಂದೆಲ್ಲ ಸೇವಿತನು ತಾನಾಗಿ ಕಡಲ ಮಧ್ಯದ ಪುರವ ವೈಭವದಿ ಸೇರಿದನು ॥ ೩೨ ॥ ಮದಿಸಿದಾನೆಯ ತೆರದಿ ಗರ್ವವನು ತೋರಿದ್ದ ಕುಂಭಕರ್ಣ ಎಂಬ ಸ್ಥೂಲ ದಾನವನನ್ನು ಪ್ರಭುವು ಸಂಹರಿಸಿದನು ಸೋದರನ ಸಹಿತ ಮೊನಚಾದ ಬಾಣಗಳ ದಿವ್ಯ ಪ್ರಯೋಗದಲಿ ಚಾಪವಿದ್ಯೆಯ ತನ್ನ ಕೌಶಲ್ಯ ತೋರುತ್ತ ದಾನವರ ಸೈನ್ಯವನು ಸುಲಭದಲಿ ಗೆಲಿದನು ॥ ೩೩ ॥ ಅಗ್ನಿದೀಕ್ಷೆಯ ತೊಟ್ಟು ಪರಿಶುದ್ಧಳಾಗಿದ್ದ ಪತ್ನಿಯಿಂದೊಡಗೂಡಿ ಸೋದರನ ಸಹಿತ ಪರಮಾತ್ಮ ಹೊಕ್ಕನು ನಿಜಪುರಕೆ ಆಗ ಬಹಳ ಕಾಲದವರೆಗೆ ಸಜ್ಜನರ ಪಾಲಿಸುತ ಭಕ್ತರಾಭೀಷ್ಟವನು ಸರ್ವದಾ ನೀಡುತ್ತ ಮೂಲರೂಪದೊಳಾತ ಐಕ್ಯವನು ಹೊಂದಿದನು ॥ ೩೪ ॥ ಹರಿಕೀರ್ತಿ ಕಥನದಲಿ ಪ್ರವೃತ್ತನಾಗಿ ಪರಿಶುದ್ಧ ಮನವುಳ್ಳ ಬ್ರಾಹ್ಮಣನ ಪತ್ನಿಯಲಿ ಹರಿಯು ಅವತರಿಸಿದನಲ್ಲಿ ಮತ್ತೊಂದು ಬಾರಿ ಮಹಿದಾಸನೆಂಬುವ ಹೆಸರನ್ನು ಹೊತ್ತು ಪೂಜ್ಯ ಚರಣನು ಎಂಬ ಖ್ಯಾತಿಯನು ಹೊತ್ತು ಪರಿಪರಿಯ ಸಚ್ಛಾಸ್ತ್ರ ರಚಿಸಿದನು ಆತ ॥ ೩೫ ॥ ಕರ್ದಮ ಪ್ರಜಾಪತಿಯ ಪಿತೃತ್ವದಿಂದ ಸ್ವಾಯಂಭೂ ಮನುವಿನ ಪುತ್ರಿಯ ಗರ್ಭದಲಿ ಪರಮಾತ್ಮ ಜನಿಸಿದನು ಮತ್ತೊಮ್ಮೆ ಧರೆಯಲ್ಲಿ ತನ್ನಲ್ಲಿ ಅತಿಶಯದ ಭಕ್ತಿಯನು ತೋರಿದ್ದ ದೇವತೆಗಳೆಲ್ಲರಿಗೆ ಸಚ್ಛಾಸ್ತ್ರ ಬೋಧಿಸುತ ಅವರಿಂದ ಪಡೆದನು ಅಪರಿಮಿತ ಭಕ್ತಿಯನು ॥ ೩೬ ॥ ತುಂಬು ತಾರುಣ್ಯದ ವೈಭವದ ಲಾಂಛನ ಹಾಲ ಕಲಶಗಳಂತೆ ಆ ಬೃಹತ್ತ್ಸನಗಳು ರಮಣೀಯ ರಮಣಿಯ ವೇಷವನು ಹೊತ್ತು ವರವಿಲಾಸಿನಿಯಂತೆ ಮಂದಹಾಸವ ಬಿತ್ತು ಅಮೃತದ ಕಲಶವನು ಅಸುರರಿಂದಲಿ ಕಿತ್ತು ಪರಮಾತ್ಮ ಉಣಿಸಿದನು ಸುರರಿಗಾ ಸುಧೆಯ ॥ ೩೭ ॥ ಸುಜನರಾ ಮನವನ್ನು ಪರಿಶುದ್ಧಗೊಳಿಪುವನು ಸರ್ವದಾ ಪರಿಶುದ್ಧ ಸರ್ವಕಾಲದೊಳಿರುವ ಮುನಿಕುಲೋತ್ತಮರಾದ ಅತ್ರಿಯ ಪತ್ನಿ ಅನಸೂಯ ಗರ್ಭದಲಿ ಜನ್ಮತಾಳಿದನವನು ಸುಕುಮಾರ ರೂಪದಲಿ, "ದತ್ತ" ನಾಮದಲಿ ಎಂತು ಬಣ್ಣಿಸಲಹುದು ಅವನ ಲೀಲೆಗಳ ? ॥ ೩೮ ॥ ಸಜ್ಜನರಿಗತಿಪ್ರಿಯನು ನಾರಾಯಣ ಪರತತ್ವ ಈಪ್ಸಿತ ಸನಕಾದಿ ವಂದಿತ ಪರಮ ಪಾವನವಾದ ಸಿದ್ಧಾಂತ ಶೋಭಿತ ಋಷಭ ನಾಮಕ ರಾಜ ರೂಪವನು ಧರಿಸಿ ಪರಮ ಹಂಸರ ಶ್ರೇಷ್ಠ ಆಶ್ರಮವ ಸ್ವೀಕರಿಸಿ ವಿಹರಿಸಿದ ಭಗವಂತ ಈ ಧರೆಯಲಿ ॥ ೩೯ ॥ ನರದೇವ ಸೋದರನು ನಾರಾಯಣ ಪರಮೋಚ್ಚ ವಿಕ್ರಮನು, ಪರಮಾರ್ಥ ಸಾಧಕನು ಸಜ್ಜನರ ಸಂತಸಕೆ ಎಂದೆಂದೂ ಭಾಜನನು "ಹರಿ " ಎಂಬ ಹೆಸರಿಂದ ಯಮಪುತ್ರನಾದನು "ಕೃಷ್ಣ" ಎಂಬುವ ಮತ್ತಿನ್ನೊಂದು ಹೆಸರಿಂದ ಹರಿಯ ಆ ರೂಪಕ್ಕೆ ಅನುಜನೆಂದೆನಿಸಿದನು ॥ ೪೦ ॥ 'ಹತ್ತಾವತಾರನಿಗೆ ಅಭಿವಂದನೆ, ನಿನಗೆ ಅಭಿವಂದನೆ ನಾರಾಯಣಾದಿಗಳ ನೂರು ಸ್ವರೂಪನಿಗೆ ವಿಶ್ವಾದಿ ಸಾವಿರಕೂ ಮಿಗಿಲಾದ ರೂಪನಿಗೆ ಅವಿಕಾರಿ ರೂಪನಿಗೆ, ಅಂತ್ಯವಿರದವನಿಗೆ ಸಕಲ ಚಿತ್ಸುಖನಿಗೆ, ವಂದನೆಯು ನಿನಗೆ ವಂದನೆಯು, ವಂದನೆಯು, ವಂದನೆಯು ನಿನಗೆ" ॥ ೪೧ ॥ ನಾರಾಯಣ ದರ್ಶನ - ಭಾಷ್ಯ ರಚನೆಗೆ ಆಜ್ಞಾಸ್ವೀಕಾರ ಇಂತೆಂದು ಭಜಿಸುತ್ತ ಶ್ರೀಮದಾಚಾರ್ಯರು ನಮಿಸಿದರು ಭಕುತಿಯಲಿ ಪರಮಾತ್ಮಗೆ ದೇವ ದೇವೋತ್ತಮನ ಆದರವ ಪಡೆದರು ವ್ಯಾಸ ನಾರಾಯಣರ ದ್ವಂದ್ವ ರೂಪಗಳೆರಡು ಪರಸ್ಪರರ ಆದರಿಸಿ ಆಸೀನರಾಗಲು ಮಧ್ವಮುನಿ ಕುಳಿತರು ನಂತರದಿ ನಮಿಸಿ ॥ ೪೨ ॥ ಸರಸ ಸಂಭಾಷಣೆ, ಸಲ್ಲಾಪ, ಮುಂತಾದ ಪರಿಪರಿಯ ಸನ್ನಡತೆ, ಶಿಷ್ಟನುಡಿಗಳಿಂದ ಲೋಕಪತಿ ಆಗಿರುವ ಆ ನಮ್ಮ ನಾರಾಯಣ ವ್ಯಾಸದೇವರ ಭವ್ಯ ಆನನವ ವೀಕ್ಷಿಸುತ ಭಕ್ತಿ, ನಮ್ರತೆಗಳೇ ಮೈವೆತ್ತ ಮಧ್ವರನು ಕಂಡು ಏಕಾಂತದಲಿ ಇಂತೆಂದು ನುಡಿದನು ॥ ೪೩ ॥ "ಓ, ಮಧ್ವರಾಯರೇ ! ಮಾತೊಂದನಾಲಿಸಿರಿ ನಿಮ್ಮ ಧೈರ್ಯಕೆ ನಾವು ಮಾರು ಹೋಗಿಹೆವು ನಾವು ಹೇಳುವ ಮಾತು ವ್ಯಾಸರಿಗೂ ಸಮ್ಮತವು ನಿರ್ಣಯವ ಮಾಡಿಹೆವು ದೇವಕಾರ್ಯದ ಬಗೆಗೆ ಈ ಕಾರ್ಯಸಾಧನೆಯು ನಿಮ್ಮಿಂದಲೇ ಸಾಧ್ಯ ಆಗಲೇ ಫಲಿಸುವುದು ನಿಮ್ಮ ಅವತಾರ ॥ ೪೪ ॥ "ಅಸುರ, ದುರ್ಜನರೀಗ ದುರ್ಮಾರ್ಗದಲಿ ನಡೆದು ವೇದಾದಿ ಶಾಸ್ತ್ರಗಳ ಅರ್ಥವನು ಪಲ್ಲಟಿಸಿ ಸ್ಟೇಚ್ಛೆಯಿಂದಲಿ ಅವಕೆ ಭಾಷ್ಯವನು ರಚಿಸಿಹರು ಸಜ್ಜನಕೆ ಪ್ರಿಯವಾದ ಬ್ರಹ್ಮಸೂತ್ರಗಳೆಲ್ಲ ಮರೆಯಾಗಿ ಹೋಗಿಹವು ಸಂಪೂರ್ಣವಾಗಿ ತತ್ವಶಾಸ್ತ್ರದ ತಿರುಳು ನಾಶವಾಗಿದೆ ಇಂದು ॥ ೪೫ ॥ "ದುರ್ಜನರು ಎಸಗಿರುವ ಇಂಥ ದುಷ್ಕೃತ್ಯಗಳು ಧರ್ಮ ವಾಹಿನಿಗಿಂದು ಅಡಚಣೆಯ ನೀಡಿಹವು ಅದಕಾಗಿ ನೀವೀಗ, ಓ ಪೂರ್ಣಪ್ರಜ್ಞರೇ ! ಬ್ರಹ್ಮ ಸೂತ್ರಕೆ ಭಾಷ್ಯ ತ್ವರಿತದಲಿ ರಚಿಸಿರಿ ನಮ್ಮ ಭಕ್ತರಿಗೆಲ್ಲ ಶುಭವನ್ನು ನೀಡಿರಿ ಅದಕಾಗಿ ಶೀಘ್ರವೇ ಇಲ್ಲಿಂದ ಮರಳಿರಿ" ॥ ೪೬ ॥ ಪರಮಾತ್ಮನಾ ವಾಣಿ ಸಂಕ್ಷಿಪ್ತವಾಗಿತ್ತು ಆದರೂ ಅರ್ಥದಲಿ ವಿಸ್ತಾರವಾಗಿತ್ತು ಜಗದೊಡೆಯ ಭಗವಂತನಾ ನುಡಿಯ ಕೇಳಿ ಪರಮ ಜ್ಞಾನಿಗಳಾದ ಶ್ರೀ ಮಧ್ವಮುನಿಗಳು ಪರಮಾತ್ಮ ರೂಪಗಳ ವಿರಹವನು ತಾಳದೆಯೆ ಇಂತೆಂದು ನುಡಿದರು ದೇವಸನ್ನಿಧಿಯಲ್ಲಿ ॥ ೪೭ ॥ "ಸಿರಿರಮಣ, ಭೂರಮಣ, ನಾರಾಯಣ! ಸಕಲ ಸದ್ಗುಣಕೆಲ್ಲ ಆಶ್ರಯವು ನೀನು ನಿನ್ನ ಸೇವೆಯೆ ಎನಗೆ ಅಮೃತದ ಜಲಧಿ ಆ ಜಲಧಿಯಲಿ ಮುಳುಗಲು ಅವಕಾಶ ನೀಡು ನಿನ್ನ ಸನ್ನಿಧಿಯಲ್ಲಿ ನೆಲೆಯನ್ನು ನೀಡು ಲಭಿಸದೀ ಸುಖವು ಮೂರ್ಲೋಕದಲ್ಲೂ ॥ ೪೮ ॥ "ಕಲಿಗಾಲವೆಂಬುದಿದು ಮಲಿನವಾಗಿಹ ಕಾಲ ಧರೆಯೊಳಗೆ ನಶಿಸಿಹವು ಸದ್ಗುಣಗಳೆಲ್ಲ ತತ್ವಜ್ಞಾನವ ಪಡೆದ ಯೋಗ್ಯರೇ ಇಲ್ಲಿಲ್ಲ ಶುದ್ಧ ಚೇತನರಾದ ಮಂದಿಯೂ ಇಲ್ಲಿಲ್ಲ ಯೋಗ್ಯರಲ್ಲದ ಜನಕೆ ತತ್ವ ಬೋಧನೆಯೆ ? ಶುನಕಕ್ಕೆ ನೀಡುವುದೆ ಹವ್ಯ ದಾನವನು ?" ॥ ೪೯ ॥ ಮಧ್ವರಾಡಿದ ನುಡಿಯ ಆಲಿಸಿದ ಭಗವಂತ ಸಂತೈಸಿದನು ಅವರ, ಇಂತೆಂದು ನುಡಿಯುತ್ತ "ಸಜ್ಜನರು ಧರಯೊಳಗೆ ಇಂದಿಗೂ ಇಹರು ಸೂತ್ರದಿಂ ಕಳಚಿರುವ ಮಣಿಗಳಂತಿಹರು ದಯೆಯಿಂದ, ಪರಿಶುದ್ಧ ಶಾಸ್ತ್ರವಚನಗಳೆಂಬ ಪರಿಶುದ್ಧ ಜಲದಿಂದ ಶುದ್ಧಿಗೊಳಿಸಿರಿ ಅವರ" ॥ ೫೦ ॥ "ಸೂರ್ಯ ಕಿರಣದ ಪ್ರಖರ ಜಾಜ್ವಲ್ಯ ಪ್ರಭೆಯು ಕೌಶಿಕಾ ನಿವಹವನು ವ್ಯಥೆಪಡಿಸುವಂತೆ ದುಷ್ಟರಿಗೆ ಕಷ್ಟವನು ನೀಡುವಿರಿ ನೀವು ತಾವರೆಯ ಸೂರ್ಯನಾ ಬೆಳಕು ಅರಳಿಸುವಂತೆ ನಿಮ್ಮ ಕೀರ್ತಿಯ ಪ್ರಭೆಯು ನನ್ನ ಆಣತಿಯಂತೆ ಅರಳಿಪುದು ಸಜ್ಜನರ ಹೃತ್ಕಮಲವ" ॥ ೫೧ ॥ ನಾರಾಯಣನಾ ನುಡಿಯು ಭೂಧರನ ಮುಖದಿಂದ ಧರಣಿಯಲಿ ಹರಿಯುವಾ ಪುಣ್ಯನದಿಯಂತಾಯ್ತು ಮಧ್ವಮುನಿಗಳ ಶ್ರೇಷ್ಠ ಪೃಥು ಬುದ್ಧಿ ವಾರಿಧಿಯು ಚಂದ್ರಕಿರಣವ ಕಂಡು ಉಕ್ಕುವಾ ಕಡಲಾಯ್ತು ಕಡಲೊಡಲು ನದಿಯನ್ನು ಸ್ವೀಕರಿಸುವಂತೆ ಮಧ್ವಮಾನಸದಲ್ಲಿ ದೇವ ನುಡಿ ಹರಿಯಿತು ॥ ೫೨ ॥ "ಸರ್ವಶ್ರೇಷ್ಠರು ನಮ್ಮ ವ್ಯಾಸ ನಾರಾಯಣರು ಅವರು ನುಡಿದಿಹ ಮಾತು ಎಲ್ಲರಿಗೂ ಮಾನ್ಯ" ಇಂತೆಂದು ಚಿಂತಿಸುತ ಮಧ್ವಗುರುವರ್ಯರು ಭಗವಂತನಾಣತಿಗೆ ಸಮ್ಮತಿಯನರುಹಿದರು ಯಾರಿಗೂ ಸುಲಭದಲಿ ಸಾಧ್ಯವಾಗದ ಮಾತ ಶಿರದಲ್ಲಿ ಧರಿಸಿದರು ಅತಿಶಯದ ಭಕ್ತಿಯಲಿ ॥ ೫೩ ॥ ತತ್ವವನು ಬೋಧಿಸುವ ಮೂರು ವೇದಗಳಂತೆ ಪಾಪಗಳ ಪರಿಹರಿಪ ಮೂರು ಅಗ್ನಿಗಳಂತೆ ಸಕಲವನು ಹೊತ್ತಿರುವ ಮೂರು ಲೋಕಗಳಂತೆ ವ್ಯಾಸ, ನಾರಾಯಣರು, ಶ್ರೀ ಪೂರ್ಣಪ್ರಜ್ಞರು ಭವ್ಯತೆಯ ಬೆಡಗಿಂದ ಕಂಗೊಳಿಸಿ ಮೆರೆದರು ಆನಂದ ಪೂರ್ಣರು ಈ ಮೂರು ಮಹಿಮರು ॥ ೫೪ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀ ಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ ಆನಂದಾಂಕಿತ ಎಂಟನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ ಒಂಭತ್ತನೆಯ ಸರ್ಗ ಶ್ರೀ ಗುರುಭ್ಯೋ ನಮಃ ಒಂಭತ್ತನೆಯ ಸರ್ಗ ನಾರಾಯಣಾಶ್ರಮದಿಂದ ವ್ಯಾಸಾಶ್ರಮಕ್ಕೆ ಆಗಮನ ಕವಿಲೋಕನಾಯಕರು ಆನಂದ ತೀರ್ಥರು ಏಕಾಗ್ರ ಚಿತ್ತದಲ್ಲಿ ಸ್ತುತಿಸುತ್ತ ನಿಂದು ಸಾಷ್ಟಾಂಗ ಗೈದರು ಆದರದಿ ಶ್ರೀ ಹರಿಗೆ ಸೌಖ್ಯ ತೀರ್ಥರ ಕಂಡು ಧರ್ಮ ಪುತ್ರನು ಆಗ "ವೇದನಾಯಕ ಪುರಿಗೆ ಮರಳಿ ತೆರಳಿರಿ ನೀವು" ಇಂತೆಂದು ಆಣತಿಯನಿತ್ತನವನು ॥ ೧ ॥ ಪರಮಾತ್ಮನಾಣತಿಯ ಶಿರದಲ್ಲಿ ಹೊತ್ತು ವ್ಯಾಸಮುನಿದರ್ಶನವ ಮನದಲ್ಲಿ ಬಿತ್ತು ಮಧ್ವಮುನಿ ಸೇರಿದರು ವ್ಯಾಸಗುರುಧಾಮಕೆ ಶ್ರಾವ್ಯವಾದುದನೆಲ್ಲ ಶ್ರವಣ ಮಾಡುತ್ತ ಗುರು ಚಿತ್ತವೃತ್ತಿಯನು ಸುಲಭದಲಿ ಅರಿಯುತ್ತ ಮಧ್ವಮುನಿ ಅಲ್ಲಿಂದ ತೆರಳಲೆಳಸಿದರು ॥ ೨ ॥ ವ್ಯಾಸಾಶ್ರಮದಿಂದ ವಿಶಾಲ ಬದರಿಗೆ ಪ್ರಯಾಣ ಮಂದಹಾಸದ ಮೃದು ಸುಂದರಾನನದವರು ವಂದನೀಯರ ನಡುವೆ ಅಭಿವಂದಿತರು ಅವರು ಪ್ರಾಜ್ಞರ ಕುಲಕೆಲ್ಲ ಮೌಲಿಮಣಿಯಿವರು ಇಂಥ ಶ್ರೀ ವ್ಯಾಸರಿಗೆ ಸಾಷ್ಟಾಂಗ ನಮಿಸುತ್ತ ಅಪ್ರತಿಮ ಸುಜ್ಞಾನಿ ಆನಂದ ತೀರ್ಥರು ಗುರುಗಳನುಮತಿ ಪಡೆದು ಅಲ್ಲಿಂದ ತೆರಳಿದರು ॥ ೩ ॥ ಮಧ್ವಮುನಿಗಳ ಮನವು ಸುಜ್ಞಾನದ ಜಲಧಿ ವ್ಯಾಸಮುನಿಗಳಿಗದುವೆ ಅತ್ಯಂತ ಪ್ರಿಯವಹುದು ಆ ಚಿತ್ತ ಜಲಧಿಯಲಿ ವ್ಯಾಸಮುನಿ ನೆಲೆಸಿದರು ತೊರೆಯದಾದರು ಅವರು ಆ ಪೃಥುಲ ಶರಧಿಯನು ಇದರಿಂದ ಗುರುವಿರಹ ಮಧ್ವರಿಗೆ ಇಲವಾಯ್ತು ಪೊಂದಿದರು ಸಂತಸವ ಸತತವಾಗಿ ॥ ೪ ॥ ಸಾವಧಾನದಿ ಅವರು ಹಿಮಗಿರಿಯನಿಳಿದರು ಸರಸರನೆ ಸರಿಯುತ್ತ ದಾರಿಯನು ಕ್ರಮಿಸಿದರು ಹಾದಿಯಲಿ ಹಲವಾರು ಮೃಗಗಳನು ಕಂಡರು ಕ್ರೂರಮೃಗಗಳಿಗೆಲ್ಲ ಸಿಂಹದೋಪಾದಿಯಲಿ ಸಾಧು ಪ್ರಾಣಿಗಳೊಡನೆ ಸೌಮ್ಯತೆಯ ತೋರುತ್ತ ಉಚಿತ ರೀತಿಯಲವರು ಎಲ್ಲರಿಗೂ ಕಂಡರು ॥ ೫ ॥ ವಾರಿಧಿಯ ಲಂಘಿಸಿದ ವಾನರೇಂದ್ರನ ತೆರದಿ ರತ್ನರಾಜನ ತಂದ ವಾಸುದೇವನ ತೆರದಿ ಸೌಗಂಧಿಕೆಯ ತಂದ ಭೀಮಸೇನನ ತೆರದಿ ಆನಂದಮಠದತ್ತ ಮರಳಿದರು ಮಧ್ವರು ಇದ ಕಂಡು ಅಲ್ಲಿನ ಶಿಷ್ಯಗಣವೆಲ್ಲ ಕುಣಿ ಕುಣಿದು, ನಲಿನಲಿದು ಮುದದಿಂದ ಪಾಡಿದರು ॥ ೬ ॥ ಅಗ್ನಿಶರ್ಮ, ಮತ್ತಿನ್ನೈದು ಬ್ರಾಹ್ಮಣರು ಐದಾರು ಜನರುಣುವ ಭಕ್ಷ್ಯಗಳ ತಂದು ಅರುಹಿದರು ಮಧ್ವರಿಗೆ ಸ್ವೀಕರಿಸಿ ಎಂದು ಚರಾಚರಾತ್ಮಕ ಜಗವ ಭುಜಿಸಬಲ್ಲರು ಅವರು ಚಿಟಿಕೆಯಲಿ ಮುಗಿಸಿದರು ಭೂರಿಭೋಜನವ ವಿಸ್ಮಯವಿದೆಂತಹುದು ! ಚಕಿತಗೊಂಡರು ಜನರು ॥ ೭ ॥ ಬ್ರಹ್ಮ ಸೂತ್ರ ಭಾಷ್ಯ ರಚನೆ : ಭಾಷ್ಯ ವರ್ಣನೆ ವಾಸುದೇವನ ಸಕಲ ಕಲ್ಯಾಣ ಗುಣಗಳು ವ್ಯಾಸಮುನಿ ಹೃದಯಕ್ಕೆ ಅತ್ಯಂತ ಸನಿಹ ಇವುಗಳನು ಬಣ್ಣಿಸುವ ಪರಮಾತ್ಮ ಸೂತ್ರಗಳು ಸಾರುವುವು ಪರಮಾತ್ಮ ದೋಷವರ್ಜಿತನೆಂದು ಜ್ಞಾನ ಭಕ್ತಿಗಳನ್ನು ಸುಲಭದಲಿ ಕರುಣಿಪುವು ಚಿರಸುಖದ ನೆಲೆಯಾದ ಮುಕುತಿಯನು ನೀಡುವುವು ॥ ೮ ॥ ಬ್ರಹ್ಮಸೂತ್ರದ ಭಾಷೆ ಅತಿ ಗೂಢವಹುದು ವಿಬುಧ ಮುನಿವರ್ಗಕೂ ತಿಳಿಯದ ಪರಿಭಾಷೆ ಇಂಥ ಶಾಸ್ತ್ರಕೆ ನಮ್ಮ ಆನಂದ ತೀರ್ಥರು ವೇದ ವಾಕ್ಯವನೆಲ್ಲ ಉದಹರಿಸಿ ಹೇಳುತ್ತ ಬಾರಿಬಾರಿಗೂ ಅರ್ಥ ವಿವರಣೆಯ ನೀಡುತ್ತ ಪ್ರಪ್ರಥಮ ಭಾಷ್ಯವನು ರಚಿಸತೊಡಗಿದರು ॥ ೯ ॥ ಬಾಲರು, ಬಾಲಿಶರು, ಪ್ರೌಢಾಪ್ರಬುದ್ಧರು ಎಲ್ಲರಿಗೂ ಎಟಕುವ ವಿವರಣೆಯ ಕೌಶಲ್ಯ ಅಲ್ಲಲ್ಲಿ ಕಬ್ಬಿಣದ ಕಡಲೆಯಂತಹ ವಾಕ್ಯ ಸುಪ್ರಸನ್ನತೆಯನ್ನು ಪಸರಿಸುವ ಪದಪುಂಜ ಸುಜನ ಸಜ್ಜನ ಮನಕೆ ಆಪ್ಯಾಯಮಾನ ಭೀಷಣವು ದುರ್ವಾದಿ ಪ್ರತಿಪಕ್ಷ ಜನಕೆ ॥ ೧೦ ॥ ವಾಕ್ಯ ರಚನೆಗಳೆಲ್ಲ ಅತ್ಯಂತ ಶುದ್ಧ ವ್ಯಾಕರಣ ನಿಯಮಕ್ಕೆ ಸಂಪೂರ್ಣ ಬದ್ಧ ಅರ್ಥ ಗರ್ಭಿತ ಮಾತು, ವ್ಯರ್ಥವೆನಿಸದ ವಚನ ಸಕಲ ಸಲ್ಲಕ್ಷಣದಿ ಶೋಭಿಸುವ ವ್ಯಾಖ್ಯಾನ ದೇವಗಣಕೂ ಕೂಡಿ ಮುದವ ನೀಡುವ ತೆರದಿ ಮಧ್ವಮುನಿ ರಚಿಸಿದರು ಬ್ರಹ್ಮಸೂತ್ರಕೆ ಭಾಷ್ಯ ॥ ೧೧ ॥ ಇಪ್ಪತ್ತು ಮತ್ತೊಂದು ದುರ್ಭಾಷ್ಯವುಂಟು ವೇದಗಳ ಸಹಜಾರ್ಥ ಇದರಿಂದ ಕಲುಷಿತವು ಇಂಥ ದುರ್ಭಾಷ್ಯಗಳ ಖಂಡಿಸುವ ಸಲುವಾಗಿ ಅಂದಿಗೂ ಇಂದಿಗು ಎಂದಿಗೂ ಇರಬಲ್ಲ ಖಂಡನೆಗೆ ಲವಲೇಶ ಆವಕಾಶ ಇರದಂಥ ಭಾಷ್ಯವನು ರಚಿಸಿದರು ಆನಂದ ತೀರ್ಥರು ॥ ೧೨ ॥ ಶ್ರೀ ಸತ್ಯತೀರ್ಥರಿಂದ ಭಾಷ್ಯ ಲೇಖನ ಮಂಗಳವ ನೀಡುವ ಗಂಗಾ ತರಂಗಗಳು ಭೋರ್ಗರೆದು ಪ್ರವಹಿಸುವ ಪುಣ್ಯ ಪ್ರದೇಶದಲಿ ಅಪ್ರತಿಮ ಕಾಂತಿಯಲಿ ಮೆರೆವ ಹರಿಮಂದಿರವ ನಿರ್ಮಿಸುವ ರೂವಾರಿ ಎಂತಹ ಪೂತ ? ಅಂತಹ ಶಿಲ್ಪಕ್ಕೆ ಸಮನಾದ ಭಾಷ್ಯಕ್ಕೆ ಲೇಖನಿಯ ನೀಡಿದರು ಶ್ರೀ ಸತ್ಯತೀರ್ಥರು ॥ ೧೩ ॥ ವಿದ್ವತ್ಸಭೆಗೆ ಆಗಮನ ಬದರಿಕಾಶ್ರಮದಲ್ಲಿ ಆನಂದ ತೀರ್ಥರು ಪರಮಾತ್ಮ ನರಹರಿಗೆ ಕೈಮುಗಿದು ನಿಂದು ಆತನಾಣತಿಯನ್ನು ಪೂರೈಸಲೆಂದು ನೂರಾರು ಶಿಷ್ಯರನು ಜೊತೆ ಮಾಡಿಕೊಂಡು ಹಾದಿಯಲಿ ಹಲವಾರು ಕ್ಷೇತ್ರಗಳ ಕಂಡು ಗೋದಾವರೀ ನದಿಯ ದಂಡೆಯನು ಸೇರಿದರು ॥ ೧೪ ॥ ಗೋದಾವರೀ ನದಿಯ ತೀರದೊಳು ನೆರೆದಿದ್ದ ವೇದಗಳ ಹದಿನೆಂಟು ಶಾಖೆಗಳ ಪರಿಣತರು ಆನಂದ ತೀರ್ಥರನು ಪರಿಕಿಸುವ ಸಲುವಾಗಿ ತೂರಿದರು ಪ್ರಶ್ನೆಗಳ ಸರಮಾಲೆಯನ್ನೇ ಸಕಲ ವೇದದ ಸಾರ ವಿವರಿಸಿದ ಮಧ್ವಮುನಿ ಖಂಡನೆಯ ಮಾಡಿದರು ಆರು ದರ್ಶನವ ॥ ೧೫ ॥ ಹತ್ತಾರು ಪಂಡಿತರು ಹಲವಾರು ವಿಧದಲ್ಲಿ ಸೂಕ್ಷ್ಮಾತಿ ಸೂಕ್ಷ್ಮದ ಸಂದೇಹ ಒಡ್ಡಿದರು ಆಚಾರ್ಯ ಮುಖದಿಂದ ಎಲ್ಲದಕೂ ವಿವರಣೆ ! ಸೋಲನೊಪ್ಪಿದರಾಗ ಆ ಎಲ್ಲ ಪಂಡಿತರು "ಜ್ಞಾನಿಗಳ ಜಗದಲ್ಲಿ ನಿಮಗೆ ಸಮರಿಲ್ಲ" ಇಂತೆಂದು ಮಧ್ವರನು ಪೊಗಳಿ ಸ್ತುತಿಸಿದರು ॥ ೧೬ ॥ ಶೋಭನ ಭಟ್ಟರು ಮಧ್ವ ಶಿಷ್ಯರಾದರು ಸಭೆಗೆ ಶೋಭಿತರೋರ್ವ ಶೋಭನ ಭಟ್ಟರು ಜ್ಞಾನಿಗಳೊಳುತ್ತಮರು, ವೇದ ಪಾರಂಗತರು ಎಲ್ಲದಕೂ ಪರಿಹಾರ ಸೂಚಿಸುವ ಸಮರ್ಥರು ಇಂಥ ವಿಬುಧೋತ್ತಮರು ಮಧ್ವರಿಗೆ ಶರಣು ! ಮಧ್ವರಿಗೆ ಸಮನಿಲ್ಲ ಜಗದ ಮೂಲೆಗಳಲ್ಲಿ ಪಾಂಡಿತ್ಯ ಪ್ರಖರತೆಯು ಸೂರ್ಯನಿಗೆ ಸಮವಹುದು ॥ ೧೭ ॥ ಶೋಭನಾಚಾರ್ಯರು ವಿದ್ಯಾ ವಿಶೋಭಿತರು ಶಾಸ್ತ್ರ ವಿಶ್ಲೇಷಣೆಗೆ ಮತ್ತೊಂದು ಹೆಸರವರು ಅಂದು ಪ್ರಚಲಿತವಿದ್ದ ಎಲ್ಲ ಮತಗಳ ಜಯಿಸಿ ಆಧ್ಯಾತ್ಮಲೋಕದ ಪ್ರಭುವೆಂದು ಖ್ಯಾತರು ಮಧ್ವಮುನಿಗಳ ದಿವ್ಯ ಸಮ್ಮುಖದಿ ಕುಳಿತವರು ಆಚಾರ್ಯ ಭಾಷ್ಯವನು ಶ್ರವಣ ಮಾಡಿದರು ॥ ೧೮ ॥ ಅರವಿಂದ ಕುಸುಮದ ಮಕರಂದವನ್ನು ಸವಿದು ಸಂತಸಗೊಂಡ ಹಂಸಪಕ್ಷಿಗೆ ಮತ್ತೆ ಮತ್ತೊಂದು ಪುಷ್ಪದ ಮಧುವು ರುಚಿಯಹುದೆ ? ಮಧ್ವ ಭಾಷ್ಯದ ಸವಿಯ ರುಚಿ ಕಂಡ ಭಟ್ಟರಿಗೆ ಮತ್ತಾವ ಭಾಷ್ಯವೂ ರುಚಿಸದಂತಾಯ್ತು ಎಂತಹ ಸವಿ ಇಹುದು ಆಚಾರ್ಯ ಭಾಷ್ಯದಲಿ ? ॥ ೧೯ ॥ ಶೋಭನ ಭಟ್ಟರಿಂದ ಮಧ್ವಮತ ಪ್ರಸಾರ ಅಲ್ಲಲ್ಲಿ ಪ್ರವಚನವ ಆಗಾಗ್ಗೆ ನಡೆಸುತ್ತ ದುರ್ಭಾಷ್ಯಗಳನೆಲ್ಲ ಎಲ್ಲೆಲ್ಲೂ ಖಂಡಿಸುತ ಮಧ್ವ ಭಾಷ್ಯದಲುಕ್ತ ಉಕ್ತಿ ಉದ್ಗರಿಸುತ್ತ ನಡೆದರಾ ಭಟ್ಟರು ದಿಗ್ವಿಜಯ ಸಾಧಿಸುತ ಮಧ್ವಸಿದ್ಧಾಂತಗಳ ಶುದ್ಧ ಪ್ರತಿಪಾದಕರು ಮಧ್ವ ಶಿಷ್ಯರ ನಿವಹದಗ್ರಗಾಮಿಗಳವರು ॥ ೨೦ ॥ ಶಂಖ ಚೂರ್ಣಕನೊಬ್ಬ ಬಗೆಬಗೆಯ ಶಂಖಗಳ ನುಚ್ಚು ನೂರಾಗಿಸುತ ಪುಡಿಗೈದನಂತೆ ಶಂಖಗಳ ಜೊತೆಯಿದ್ದ ಬಲಮುರಿಯ ಬಗೆಯೊಂದು ಚೂರ್ಣಕನ ಶಕ್ತಿಯನು ನಿಸ್ಸಾರಗೊಳಿಸಿತ್ತು ಬಲಮುರಿಯ ಹಿರಿಮೆಯನು ಅರಿಯಲಾರದ ಆತ ಅಪ್ರಯೋಜಕವೆಂದು ಅದ ಬಿಸುಟನಂತೆ ॥ ೨೧ ॥ ಬಲಮುರಿಯ ಹಿರಿಮೆಯನು ಬಲ್ಲವರೆ ಬಲ್ಲರು ಮೌಢ್ಯತೆ ಮುಸುಕಿನಲಿ ಮೌಲ್ಯ ಕಾಣುವುದೆ ? ಮಧ್ವ ಶಾಸ್ತ್ರದ ಹಿರಿಮೆ ಬಲಮುರಿಗೆ ಸಮವಂತೆ ಆ ಹಿರಿಮೆ ಅರಿಯದವ ಪುಣ್ಯ ಹೀನನೆ ಸರಿಯು ಮಧ್ವ ಶಾಸ್ತ್ರವ ತೊರೆದು ಪುಣ್ಯ ತೊರೆವುದು ಸಲ್ಲ ಮಧ್ವ ಶಾಸ್ತ್ರದ ಹಿರಿಮೆ ಸಾಮಾನ್ಯ ವಲ್ಲ ॥ ೨೨ ॥ ಬಲಮುರಿಯ ಮೌಲ್ಯ ವನು ಬಲ್ಲ ಬಲ್ಲಿದನೊಬ್ಬ ಮತ್ತೊಬ್ಬಗದ ಮಾರಿ ಲಾಭ ಗಳಿಸಿದನಂತೆ ಪೂರ್ವದಲಿ ಗಳಿಸಿದ್ದ ಪುಣ್ಯಗಳ ಫಲವಾಗಿ ಬೆಲೆ ಇರದ ಬಲಮುರಿಯು ಅವಗೆ ಲಭಿಸಿತ್ತು ಆದರದು ಆತನಿಗೆ ಲಭ್ಯವಿಲ್ಲದೆ ಹೋಯ್ತು ಅವರವರ ಯೋಗ್ಯತೆಗೆ ಅವರವರ ಗಳಿಕೆ ! ॥ ೨೩ ॥ ಧನಕನಕ ವಸ್ತುಗಳ ಹಂಬಲವ ಪಡೆದಿರುವ ಮಧ್ವ ಸಿದ್ಧಾಂತದ ಕೋವಿದರು ಉಂಟು ಮಧ್ವ ಶಾಸ್ತ್ರದೊಳಿರುವ ತಿರುಳನ್ನು ಅರಿಯದೆಯೆ ಇಹಸುಖವ ಮಾತ್ರವೇ ಬಯಸುವ ಈ ಮಂದಿ ಬಲಮುರಿಯ ಶಂಖವನು ಮಾರಾಟ ಮಾಡಿ ಧನವನ್ನು ಗಳಿಸಿದ ಬಲ್ಲಿದನ ಪರಿ ಇಹರು ॥ ೨೪ ॥ ಪರಮಾತ್ಮ ಸೃಷ್ಟಿಯಲಿ ಬಲಮುರಿಯು ಶ್ರೇಷ್ಠ ಮಾನವನ ಉನ್ನತಿಗೆ ಸಹಕಾರಿಯಾಗಿಹುದು ರಾಜ್ಯಾಧಿಪತಿಯೊಬ್ಬ ಇಂಥ ಶಂಖವ ಕೊಂಡು ಪರಿಪರಿಯ ವಿಧದಲ್ಲಿ ಅದನು ಪೂಜಿಸುತ ಸಕಲ ಸಿರಿ ಸಂಪದಕೆ ಅಧಿಕಾರಿಯಾದ ವಾಙ್ಮನಕೆ ಮೀರಿದುದು ಬಲಮುರಿಯ ಮಹಿಮೆ ॥ ೨೫ ॥ ಮಧ್ವಮುನಿ ರೂಪಿಸಿದ ಮಧ್ವಸಿದ್ಧಾಂತಗಳು ಶಾಸ್ತ್ರಗಳ ಕಲ್ಪತರು ಎಂಬ ಹೆಸರಲಿ ಮಾನ್ಯ ಮಧ್ವ ಸಿದ್ಧಾಂತಗಳ ಶ್ರವಣ ಮನನಗಳಿಂದ ಆ ನರಪತಿಯ ತೆರದಲ್ಲಿ ಜನಮಾನ್ಯರಾಗುವರು ಮಧ್ವಶಾಸ್ತ್ರದ ಮಹಿಮೆ ಏನೆಂದು ಪೊಗಳಲಿ ? ಇಂತು ಆ ಶೋಭನರು ಜನಕೆ ಮುದ ನೀಡಿದರು ॥ ೨೬ ॥ ಈ ಪರಿಯೊಳಾ ಪೂಜ್ಯ ಆನಂದ ತೀರ್ಥರು ತಮ್ಮ ಸಿದ್ಧಾಂತಗಳ ಸಜ್ಜನಕೆ ಬೋಧಿಸುತ ಗಳಿಸಿದರು ಶೀಘ್ರದಲಿ ಶಿಷ್ಯ ಕೋಟಿಯನು ಶೋಭನಾಚಾರ್ಯರು ಈ ಶಿಷ್ಯರಲಿ ಪ್ರಮುಖರು ಮಧ್ವಮುನಿ ಬೋಧಿಸಿದ ಈ ತತ್ವಚಿಂತನೆಯು ರುದ್ರೇಂದ್ರ, ದೇವಗುರು, ಎಲ್ಲರಿಗೂ ಮಾನ್ಯ ॥ ೨೭ ॥ ಜುಳು ಜುಳು ಹರಿಯುವ ನದಿಯ ನೀರಿನ ತೆರದಿ ಮಧ್ವಮುನಿಗಳ ವಾಣಿ ತಡೆಯಿರದೆ ಹರಿದಿತ್ತು ನಿಮ್ಮ ಪಾತ್ರದ ಭೂಮಿ ನೀರುಂಡು ತಣಿವಂತೆ ಸಜ್ಜನರ ಮನವೆಲ್ಲ ತಂಪಾಗಿ ತಣಿದಿತ್ತು ದುರ್ಜನರ ಮನವೆಲ್ಲ ಬರಡಾಗಿ ಉಳಿದಿತ್ತು ತುಂಗ ಪ್ರದೇಶಕ್ಕೆ ನೀರೆಂತು ಹರಿವುದು ? ॥ ೨೮ ॥ ರಜತ ಪೀಠಕ್ಕೆ ಪುನರಾಗಮನ ಪರಿಪರಿಯ ಕೌತುಕವ ದಾರಿಯಲಿ ತೋರಿ ವಿಧವಿಧದ ಜನರಿಂದ ಸನ್ಮಾನ ಸ್ವೀಕರಿಸಿ ಮರಳಿದರು ಮಧ್ವಮುನಿ ರಾಜತಾಸನ ಪುರಕೆ ರಜತಗಿರಿಯಿಂದವರು ರಜತಪುರಿ ಸೇರಿದರು ಅನಂತಾಸನನನ್ನು ಅತಿಯಾಗಿ ಸ್ತುತಿಸಿದರು ಶ್ರೀ ಹರಿಯ ಕೃಪೆಯನ್ನು ಸಂಭ್ರಮದಿ ಪಡೆದರು ॥ ೨೯ ॥ ಅಚ್ಯುತ ಪ್ರೇಕ್ಷರಿಗೆ ಆದ ಆನಂದ ಅಚ್ಯುತ ಪ್ರಿಯರಾದ ಆನಂದ ತೀರ್ಥರು ಅಚ್ಯುತ ಪ್ರೇಕ್ಷರಿಗೆ ಸಾಷ್ಟಾಂಗ ನಮಿಸಿದರು ಹಲವಾರು ದಿನದಿಂದ ಶಿಷ್ಯನನು ಕಾಣದಲೆ ಪರಿತಪಿಸಿ ಕಂಗೆಟ್ಟ ಗುರುವರೇಣ್ಯರಿಗೆ ಶಿಷ್ಯನನು ಕಾಣುತಲೆ ಆನಂದವತಿಯಾಯ್ತು ಆತನನು ಸ್ವಾಗತಿಸಿ ಹರುಷಗೊಂಡರು ಅವರು ॥ ೩೦ ॥ ಬ್ರಹ್ಮ ಸೂತ್ರಕೆ ಬರೆದ ಆಚಾರ್ಯ ಭಾಷ್ಯ ಈ ಮುನ್ನವೇ ಗುರುವ ಕೈಯ ಸೇರಿತ್ತು ಅದನೋದಿ ಗುರುವರ್ಯ ಪುಳಕಗೊಂಡಿದ್ದರು ಸಾಕ್ಷಾತ್ತು ಶಿಷ್ಯನನು ಇಂದು ನೋಡಿದ ಬಳಿಕ ಗುರುವಿನ ಸಂತಸವು ನೂರುಮಡಿಯಾಯ್ತು ಗುರು-ಶಿಷ್ಯ ಮಿಲನವು ಸಂಭ್ರಮದಿ ಕೂಡಿತ್ತು ॥ ೩೧ ॥ ಮಧ್ವಮುನಿ ಎಂಬುವ ಸಾಗರದ ನೆಲೆಯಲ್ಲಿ ಬ್ರಹ್ಮಸೂತ್ರದ ಭಾಷ್ಯ ಅಮೃತದ ಜಲದಂತೆ ಜೇಷ್ಠಯತಿಯೆಂಬುವ ಮುಗಿಲೊಂದು ಬಂದು ಈ ಜಲವ ತನ್ನೊಳಗೆ ಸಾಂದ್ರವಾಗಿಸಿಕೊಂಡು ಶಿಷ್ಯಜನರೆಂಬುವ ಧರೆಗೆ ಉಣಿಸಿದರು ಮುಗಿಲಿನ ಜಲನಿಧಿಯು ಮತ್ತಷ್ಟು ಮಿಗಿಲಾಯ್ತು ॥ ೩೨ ॥ ಅಚ್ಯುತಪ್ರೇಕ್ಷರು ಶ್ರೇಷ್ಠ ಸುವಿಚಾರಿಗಳು ಕಲಿಕಾಲ ಬಲದಿಂದ ಅದೈತಿಯಾದವರು ಆನಂದ ತೀರ್ಥರು ಅನುನೀತಿ ರಥರು ಸುವಿಚಾರಧಾರೆ, ವಿನಯೋಕ್ತಿಯಿಂದ ಶಾಸ್ತ್ರ ಸಮ್ಮತವಾದ ತರ್ಕ ಚತುರತೆಯಿಂದ ಸೂತ್ರಭಾಷ್ಯದ ಹಿರಿಮೆ ಗುರುಗಳಿಗೆ ಹೇಳಿದರು ॥ ೩೩ ॥ ಅಚ್ಯುತ ಪ್ರೇಕ್ಷರು ಅಚಲ ಸಿದ್ಧಾಂತಿಗಳು ಅದ್ವೈತ ಬಿಳಲುಗಳಲಿ ಬಂಧವಾಗಿದ್ದವರು ಆನಂದ ತೀರ್ಥರು ಗೊಂದಲವ ನೀಗುತ್ತ ಸೂತ್ರಗಳ ಅರ್ಥವನು ವಿವರದಲಿ ಹೇಳುತ್ತ ರೋಗಿಗಳ ವ್ಯಾಧಿಯನು ವೈದ್ಯ ಗುರುತಿಸುವಂತೆ ಗುರುಮನದ ಸಂಶಯವ ಕೀಳ ತೊಡಗಿದರು ॥ ೩೪ ॥ ಮಾನಸ ಸರೋವರದಿ ಕಾಗೆ ಕುಳಿತಾಗ ಅದನು ಓಡಿಸಲೊಂದು ಹಂಸಪಕ್ಷಿಯು ಬಂದು ರೆಕ್ಕೆಗಳನಪ್ಪಳಿಸಿ ಭೀಕರದಿ ಚೀತ್ಕರಿಸಿ ಅಂಜಿದಾ ಕಾಗೆಯನು ಓಡಿಸುವ ಪರಿಯಲ್ಲಿ ಮಧ್ವಮುನಿಗಳು ತಮ್ಮ ಬುದ್ಧಿ ಸಾಮರ್ಥ್ಯದಲಿ ಗುರುಮನದ ಕಲ್ಮಷವ ಕಿತ್ತೆಸೆದರು ॥ ೩೫ ॥ ಅಚ್ಯುತ ಪ್ರೇಕ್ಷರ ಅಚ್ಚು ಮೆಚ್ಚಿನ ಶಿಷ್ಯ ಆನಂದ ತೀರ್ಥರ ಶಾಸ್ತ್ರರಸ ತೀರ್ಥವನು ಆಸ್ವಾದಿಸುತ ನಲಿದ ಗುರುವ ಪರಿಶುಭ್ರ ಮನ ಅಕಲಂಕ ಚಂದ್ರಮನ ಮಂಡಲದ ಪರಿಯಲ್ಲಿ ಅರಳಿರುವ ತಾವರೆಯ ಹೂವಿನ ಪರಿಯಲ್ಲಿ ಶೋಭಿಸಿತು ಶಾರದನ ವಾರಿಧಿಯ ಜಲದಂತೆ ॥ ೩೬ ॥ ಮನದಾಳದಲ್ಲಿಳಿದ ಅದ್ವೈತ ಸಿದ್ಧಾಂತ ಅಚ್ಯುತ ಪ್ರೇಕ್ಷರನು ಅಚಲರಾಗಿರಿಸಿತ್ತು ಬಾಯಾರಿದವನೊಬ್ಬ ಉಪ್ಪು ನೀರನು ಕುಡಿದು ಬಳಿಕ ಸಿಹಿನೀರನ್ನು ಕುಡಿದು ನಲಿಯುವ ಹಾಗೆ ಮಧ್ವ ಶಾಸ್ತ್ರದ ಶ್ರವಣ ಆ ಗುರುವ ಮನದಲ್ಲಿ ಆಪ್ಯಾಯಕರವಾದ ಆನಂದ ತಂದಿತು ॥ ೩೭ ॥ ನಂತರದ ಕಥೆಯಂತೂ ತುಂಬ ಸ್ವಾರಸ್ಯ ಅಚ್ಯುತ ಪ್ರೇಕ್ಷರೂ ಜೇಷ್ಠಯತಿಗಳೂ ಕೂಡಿ ಮಧ್ವ ಮುನಿಯೆಂಬುವ ವಿಷ್ಣು ಪದವಾಶ್ರಯಿಸಿ ಮಧ್ವಶಾಸ್ತ್ರದ ತಿರುಳ ಎಲ್ಲೆಲ್ಲೂ ಹರಡಿ ಬಾನಿನಲಿ ರವಿ ಚಂದ್ರ ಕೂಡಿ ಬೆಳಗುವ ಹಾಗೆ ನೀಗಿದರು ಜನಮನದಿ ಕವಿದ ಕತ್ತಲೆಯ ॥ ೩೮ ॥ ಮಧ್ವಮತ ಪಾಲಿಸಲು ಯೋಗ್ಯತೆಯು ಬೇಕು ದುಷ್ಟ, ದುರ್ಜನಕೆಲ್ಲ ಮಧ್ವಮತ ಸಲ್ಲ ಮಧ್ವಾನುಯಾಯಿಗಳ ಕುರುಹುಗಳು ಏನು ? ತಪ್ತ ಮುದ್ರೆಯ ಧರಿಸಿ ಬೀಗುವನೇ ಮಾಧ್ವ ಸಕಲ ದುರಿತವ ಕಳೆವ ಶಂಖ ಚಕ್ರಾಂಕಿತವ ಮಧ್ವಮುನಿ ನೀಡಿದರು ತಮ್ಮೆಲ್ಲ ಶಿಷ್ಯರಿಗೆ ॥ ೩೯ ॥ ಈ ಪರಿಯೊಳಾ ಪೂಜ್ಯ ಆನಂದ ತೀರ್ಥರು ರೂಪ್ಯ ಪೀಠಾಪುರದಿ ವಾಸಿಸಲು ತೊಡಗಿದರು ಯಾವ ಬಗೆ ಆಶ್ರಯವೂ ಇಲ್ಲದ ಸಜ್ಜನಕೆ ಮುಕುತಿ ಮಾರ್ಗಕೆ ದಾರಿ ತೋರಬೇಕೆಂದೆನಿಸಿ ಏನಾದರೂ ಸತ್ಕೃತಿಯ ಮಾಡಲೆಳಸಿದರು. ನಿರ್ವ್ಯಾಜ ಪ್ರೇಮವನು ಜನಕೆ ತೋರಿದರು ॥ ೪೦ ॥ ಉಡುಪಿಯಲ್ಲಿ ಶ್ರೀ ಕೃಷ್ಣ ಪ್ರತಿಷ್ಠೆ ಗೋಪಿಕಾಸ್ತ್ರೀಯರ ಚಿತ್ತದೊಲ್ಲಭನಾದ ಶ್ರೀ ಲಕುಮಿಪತಿಯಾದ ಶ್ರೀ ಕೃಷ್ಣ ಪ್ರತಿಮೆಯನು ಪರಿಶುದ್ಧ ಜಲದಿಂದ ತುಂಬಿ ತುಳುಕುತ್ತಿದ್ದ ಮಧ್ವಮುನಿ ನಾಮದ ಕಲ್ಯಾಣಿಯಲ್ಲಿ ಮೂರ್ನಾಲ್ಕು ಶಿಷ್ಯರ ನೆರವಿನಲಿ ತೊಳೆದು ಅಭಿಷೇಕ ಮಾಡಿದರು ಆ ಸರೋವರದಿ ॥ ೪೧ ॥ ಆ ಪ್ರತಿಮೆಯೇನು ಸಾಮಾನ್ಯವಲ್ಲ ಮೂವತ್ತು ಬಲಶಾಲಿ ಜನರದನು ಹೊರರು ಇಂತಹ ಪ್ರತಿಮೆಯನು ಪೂಜ್ಯ ಆಚಾರ್ಯರು ಸುಲಭದಲಿ ಎತ್ತುತ್ತ ಮಠಕೆ ಕೊಂಡೊಯ್ದರು ಶ್ರೀ ಹರಿಯ ಸಾನ್ನಿಧ್ಯ ಪ್ರತಿಮೆಯೊಳಗಿತ್ತು ಆಚಾರ್ಯ ಸ್ಪರ್ಶವದ ಪಾವನವ ಮಾಡಿತ್ತು ॥ ೪೨ ॥ ನಂದನಂದನನಾದ ಆ ಕೃಷ್ಣಮೂರ್ತಿ ಮೃದು ಮಂದಹಾಸದ ಸುಂದರಾನನ ಮೂರ್ತಿ ಪ್ರಾಕೃತದ ಇಂದ್ರಿಯಕೆ ಗೋಚರಿಸನವನು ರಮಣೀಯ ಸುಂದರನು, ಬ್ರಹ್ಮಾಂಡ ಪೂಜಿತನು ಆ ದಿವ್ಯ ಮೂರ್ತಿಯನು ಆನಂದ ತೀರ್ಥರು ವಿಹಿತದಲಿ ಪ್ರತಿಮೆಯಲಿ ಸನ್ನಿಹಿತಗೊಳಿಸಿದರು ॥ ೪೩ ॥ ಜರಾಘಟಿತನ ಪರಾಭವ ಜರಾಘಟಿತ ಗೋತ್ರದ ದುರ್ಜನನು ಒಬ್ಬ ಮೊರಡಿಕಾಯನೆಂಬುವುದು ಮತ್ತೊಂದು ಹೆಸರವಗೆ ದುರುಳರಲಿ ದುರುಳನು; ಎಲ್ಲರನೂ ಕೆಣಕುವನು ದೇವತಾ ವರದಾನ ಪಡೆದವನು ಆವನು ॥ ೪೪ ॥ ಪ್ರತಿಭೆಯ ಪ್ರಭೆಯನ್ನು ಹೊಂದಿದ್ದನವನು ಪ್ರಬಲರೆಲ್ಲರೂ ಅವನ ವಶದಲ್ಲಿ ಇದ್ದವರು ಗುರುಪುತ್ರನಿಂದ ಅಪೂರ್ವ ಯಜ್ಞ ಪ್ರಾಬಲ್ಯ ಮದದಿಂದ ಬೀಗುತ್ತಲಿದ್ದವನು ಇಷ್ಟದೈವವು ತನಗೆ ಒಲಿದಿರುವುದೆಂದು ಯಜ್ಞಯಾಗಾದಿಯಲಿ ಹಿರಿಮೆ ತನದೆಂದು ಬೇರಾರಿಗೂ ಇದರ ಅರ್ಹತೆಯು ಇಲವೆಂದು ಇಂತೆಂದು ಹಲವಾರು ದುರ್ಯುಕ್ತಿಯಿಂದ ಆ ಘಾತುಕನು ಜನತೆಯಲಿ ಕಿರುಕುಳವ ಮೂಡಿಸಿದ ॥ ೪೫ ॥ ಹೀಗಿರಲು, ಒಂದು ದಿನ ಆ ದುರುಳ ಮನುಜನು ಆನಂದ ತೀರ್ಥರಿಗೆ ಅತ್ಯಂತ ಪ್ರಿಯರಾದ ಪರಮಾಪ್ತ ಗುರುಪುತ್ರ ವಾಸುದೇವಾಚಾರ್ಯರಿಗೆ ಹವನ ಹೋಮಾದಿಗಳಲಡ್ಡಿ ತಂದೊಡ್ಡಿದನು ಆ ದುಷ್ಟನನು ನಿಗ್ರಹಿಸಿ ಶಿಷ್ಟರನು ರಕ್ಷಿಸಲು ಆನಂದ ತೀರ್ಥರು ಸನ್ನದ್ಧರಾದರು ಈ ಹಿಂದೆ ದ್ವಾಪರದಿ ಭೀಮಸೇನನು ಹೇಗೆ ಧರ್ಮಸೂನುವಿನಿಂದ ಯಜ್ಞವನು ಮಾಡಿಸಿದ ಅದರಂತೆ ಕಲಿಯುಗದಿ ಮಧ್ವಮುನಿ ನೆರವಿಂದ ವಾಸುದೇವನ ಯಜ್ಞ ನಿರ್ವಿಘ್ನವಾಯ್ತು ಮಧ್ವಮುನಿಗಳ ಕೀರ್ತಿ ಮುಗಿಲನ್ನು ಮುಟ್ಟಿತು ಅಡಿಗಡಿಗೆ ಜನರವರ ಅಡಿಗಳಿಗೆ ನಮಿಸಿದರು ॥ ೪೭ ॥ ಸಂಭ್ರಮದಿ ಜರುಗಿತು, ವಾಸುದೇವರ ಯಜ್ಞ ನೂರಾರು ಹವ್ಯಕರು, ಹಲವಾರು ಋತ್ವಿಕರು ಆನಂದ ತೀರ್ಥರ ಅನುಜರೇ ಹೋತೃಗಳು ಅನುವಾಕ್ಯ ಯಾಜ್ಯೆಗಳು, ಪ್ರವರ್ಗ್ಯ ಅಭಿಷ್ಟವಗಳು ಎಲ್ಲವೂ ಮೇಳವಿಸಿ ವಿಜೃಂಭಿಸಿತ್ತು ಸುರರೆಲ್ಲ ಇದ ಕಂಡು ಮುದವ ತಾಳಿದರು ॥ ೪೮ ॥ ಮಧ್ವರ ಅನುಜರು ಅತಿಶಯದ ಪರಿಣತರು ವೀರಶ್ರೇಷ್ಠನ ತರದಿ ವೈಶ್ವದೇವರ ಕರೆದು ಹಲವಾರು ಮಂತ್ರಗಳ, ಶಸ್ತ್ರಗಳ ಬಳಸಿ ಯಜ್ಞಕ್ಕೆ ವಿಘ್ನವನು ತರುವ ಅಸುರರ ತಡೆದು ಸುರಗಣಕೆ ನೀಡಿದರು ಹವಿರ್ಭಾಗವನ್ನು ವಾಸುದೇವರ ಯಜ್ಞ ಸಾಫಲ್ಯ ಪಡೆಯಿತು ॥ ೪೯ ॥ ದೇವತೆಗಳೆಲ್ಲರಲಿ ವಾಯುದೇವರೆ ಶ್ರೇಷ್ಠ ಸೋಮರಸಪಾನವನು ಮೂರು ಸಲ ಮಾಳ್ದವರು ಆನಂದತೀರ್ಥರು ವಾಯುವಿನ ಅವತಾರ ಅಂತಹ ಮಹನೀಯ ಪ್ರಭೃತಿಗಳು ಮಹಾಕ್ರತುವೆಂಬುವ ಯಜ್ಞನೇತಾರರು ಇಂತಿರಲು ಆ ಯಜ್ಞ ಬಣ್ಣನೆಗೆ ನಿಲುಕುವುದೆ ? ॥ ೫೦ ॥ ಬ್ರಹ್ಮನ ಜ್ಞಾನವನು ಅರಸಿ ಹೊರಟವರಿಗೆ ಕರ್ಮವೇ ಸಾಧನವು ಅದರ ಸಂಪಾದನೆಗೆ ಬ್ರಹ್ಮ ಜ್ಞಾನದ ಬಗ್ಗೆ ಅಧಿಕಾರ ಉಳ್ಳವಗೆ ಅರಿವನ್ನು ಮೂಡಿಸಲು ಮಧ್ವಮುನಿ ಜನಿಸಿದರು ಯಜ್ಞಾದಿ ಕರ್ಮಗಳೂ ಪರಮಾತ್ಮ ವಿಷಯವೇ; ಅದರಿಂದಲೇ ಅವರು ಇವುಗಳಲೂ ತೊಡಗಿದರು ॥ ೫೧ ॥ ದ್ವಿತೀಯ ಬದರಿಯಾತ್ರೆ; ರಜತಪೀಠಕ್ಕೆ ಮರಳಿದುದು ಆನಂದ ತೀರ್ಥರದು ಅತಿ ಮಧುರ ಚರಿತೆ ಹೃದಯ ವೈಶಾಲ್ಯತೆಗೆ ಪರಿಧಿಗಳೇ ಇಲ್ಲ ಅವರು ನಡೆಸಿದ ಕಾರ್ಯ ಅತ್ಯಂತ ಶ್ರೇಷ್ಠ ಅವರ ನುಡಿ, ವಚನಗಳು ಅತ್ಯಮೂಲ್ಯ ಅವರ ಸಾಧನೆಯಹುದು ವಿಶ್ವವಿಸ್ಮಯಜನಿತ ಎಂತಹ ಅದ್ಭುತ! ಎಂತಹ ಅಚ್ಚರಿ! ॥ ೫೨ ॥ ಚೈತನ್ಯ ಜಗಕೆಲ್ಲ ಚೇತನವ ನೀಡುವ ಪುಣ್ಯನದಿ, ತೀರ್ಥಗಳ ಹಲವಾರು ದಾಟಿ ಸಹ್ಯಾದ್ರಿ ವಿಂಧ್ಯಾದ್ರಿ ಶಿಖರಗಳನೇರಿ ಶ್ರೀ ವ್ಯಾಸದೇವರಿಗೆ ಅತ್ಯಂತ ಪ್ರಿಯವಾದ ಬದರಿಕಾಶ್ರಮವನ್ನು ಮಧ್ವಮುನಿ ಸೇರಿದರು ಉತ್ತಮೋತ್ತಮವಾದ ಸನ್ಯಾಸ ಪಡೆದಂತೆ ॥ ೫೩ ॥ ಮಧ್ವ ಮುನಿ ರಚಿಸಿರುವ ಸೂತ್ರ ಭಾಷ್ಯವ ಕಂಡು ಅತಿಯಾಗಿ ಮುದಗೊಂಡ ಶ್ರೀ ವ್ಯಾಸದೇವರು ಈ ಹಿಂದೆ ತ್ರೇತೆಯಲಿ ಹನುಮನಿಗೆ ನೀಡಿದ್ದ ಸಹಭೋಗವೆಂಬುವ ಬ್ರಹ್ಮ ಪದವಿಯ ಕೊಟ್ಟು ಆದರವ ತೋರಿದರು ಆನಂದ ತೀರ್ಥರಿಗೆ ಬೇರಾರಿಗುಂಟು ಇಂತಹ ಪುಣ್ಯ? ॥ ೫೪ ॥ ಇಂತು ಮತ್ತೊಮ್ಮೆ ಆ ಆನಂದ ತೀರ್ಥರು ಬದರಿಕಾಶ್ರಮದಲ್ಲಿ ಕಾರ್ಯಗಳ ಪೂರೈಸಿ ಗುರು ಸಾರ್ವಭೌಮರಿಗೆ ಮತ್ತೊಮ್ಮೆ ನಮಿಸುತ್ತ ಅವರ ಆದೇಶವನು ಶಿರದಲ್ಲಿ ಧರಿಸುತ್ತ ಪರಿವಾರ ಜನರೊಡನೆ ಮರಳಿದರು ಉಡುಪಿಗೆ ಆನಂದದಿಂದವರು ಶ್ರೀ ಹರಿಗೆ ನಮಿಸಿದರು ॥ ೫೫ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ ಆನಂದಾಂಕಿತ ಒಂಭತ್ತನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ ಹತ್ತನೆಯ ಸರ್ಗ ಶ್ರೀ ಗುರುಭ್ಯೋ ನಮ: ಹತ್ತನೆಯ ಸರ್ಗ ದ್ವಿತೀಯ ಬದರೀಯಾತ್ರೆಯಲ್ಲಿ ನಡೆದ ಮಹಿಮೆಗಳು ಮಾಧವನ ಗುಣಗಳನು ಸಾಧಿಸುವ ಮಹಿಮ ಪಾಪದ ಪಥಿಕರಿಗೆ ತಾಪವನು ನೀಡುವ ಚೈತ್ರ ವೈಶಾಖದಲಿ ಕುಸುಮಗಳ ಸೃಜಿಸುವ ಮಧ್ವಮುನಿಯೆಂಬುವ ಆ ಪ್ರಖರ ಸೂರ್ಯರು ಭೃಗು ಕುಲೋತ್ತುಂಗರ ಆ ದಿವ್ಯ ಕ್ಷೇತ್ರದಲಿ ಸಕಲ ಸಂಭ್ರಮದಿಂದ ವಿಜೃಂಭಿಸಿದರು ॥ ೧ ॥ ಆನಂದ ತೀರ್ಥರ ಶಿಷ್ಯರಲ್ಲೊಬ್ಬಾತ ಆಸಕ್ತಿಯಲಿ ಕುಳಿತ ಶ್ರೋತೃನಿವಹವ ಕುರಿತು ವಿವಿಧ ಸುವೃತ್ತಗಳು ವಿವಿಧ ಛಂದಗಳಿರುವ ಖಂಡಕಾವ್ಯದಲಿರುವ ನಾಯಕನ ಸ್ತುತಿಯಂತೆ ಗುರುಮಧ್ವ ಸ್ತುತಿಯನ್ನು ಪಠಿಸತೊಡಗಿದನು ಆನಂದ ತೀರ್ಥರ ಚರಿತೆಯನು ಪೊಗಳಿದನು ॥ ೨ ॥ "ಮಧ್ವಮುನಿಗಳ ಚರಿತೆ ಉತ್ಕೃಷ್ಟ ಗೀತೆ ಸಕಲ ಭುವನಗಳಲ್ಲಿ ಇದಕೆ ಸರಿಸಮನಿಲ್ಲ ಸುರರ ಆಯುಷ್ಯದಲೂ ಮುಗಿಸಲಾಗದು ಅದನು ಆದರೂ ಶ್ರೋತೃಗಳೆ ! ಕೇಳ ಬಯಸಿಹಿರಿ ಅಷ್ಟಿಷ್ಟು ಅಲ್ಲಲ್ಲಿ ಹೇಳಿ ಮುಗಿಸುವೆನು ಎಂದಿಗೂ ಮುಗಿಯದ ಮಧ್ವ ಚರಿತೆಯನು ॥ ೩ ॥ ಅಗೆಯಲು ಹೇಳಿ ಅಗೆಯತೊಡಗಿದ ಈಶ್ವರದೇವ "ಮಧ್ವಮುನಿಗಳು ಒಮ್ಮೆ ಪಯಣದ ಹಾದಿಯಲಿ ಶಿವದೇವನೆಂಬೊಬ್ಬ ರಾಜನನು ಕಂಡರು ಆ ರಾಜ ಪಥಿಕರಿಗೆ ಆದೇಶ ವೀಯುತ್ತ ಈ ನೆಲವ ನೀವೆಲ್ಲ ಅಗೆಯಿರೆನ್ನುತಲಿದ್ದ " ಮಧ್ವರಿಗೂ ಇಂತೆಯೇ ಆದೇಶವೀಯಲು "ಅಗೆವ ಶೈಲಿಯನೊಮ್ಮೆ ತಿಳಿಸು ನೀನೆಂದರು" ॥ ೪ ॥ ದುರುಳ ಈಶ್ವರ ದೇವ ಮಧ್ವಮಹಿಮೆಯನರಿಯ ಅವರೊಬ್ಬ ಸಾಮಾನ್ಯ ಮನುಜರೆಂದರಿತಾತ ಅಗೆಯತೊಡಗಿದ ನೆಲವ ಶೂರತ್ವದಿಂದ ರಾಜನ ದರ್ಪವನು ಇಳಿಸಲೋಸುಗ ಅವರು ಮಹಿಮೆಯನು ತೋರಿದರು ರಾಜನಲ್ಲಿ ಇದರಿಂದ ಅಗೆತವನವ ನಿಲ್ಲಿಸಲೇ ಇಲ್ಲ ॥ ೫ ॥ ಆನಂದ ತೀರ್ಥರು ವಾಯುದೇವರ ರೂಪ ಸರ್ವ ಜೀವೋತ್ತಮರು, ಸಕಲ ದೋಷವಿಮುಕ್ತರು ಸಕಲ ಚೇತನಕೆಲ್ಲ ಇವರು ಪ್ರೇರೇಪಕರು ಬ್ರಹ್ಮಾದಿಗಳು ಸಕಲ ಚೇತನಕೆ ಒಡೆಯರು ಇವರೊಳಗೆ ನೆಲೆಸಿರುವ ಲಕುಮಿಪತಿ ಮಾತ್ರ ವಾಯುವಿನ ಪ್ರೇರಣೆಗೆ ನಿಲುಕದವನು ॥ ೬ ॥ ಯಮ ಶೇಷ ಭವರನ್ನು ಸ್ಮರಿಸುವ ಮಂದಿಗೆ ಭವದೊಳಗೆ ಉದ್ಭವಿಪ ದುಃಖಾಬ್ಧಿಯೆಂಬುದು ಕ್ಷಣದಲ್ಲಿ ಕಣ್ಮರೆ ಅವರ ಕೃಪೆಯಿಂದ ಯಮ ಶೇಷ ಭವರಂಥ ಜಗದ ಪಾಲಕರೆಲ್ಲ ವಾಯುದೇವರ ಸ್ತುತಿಸಿ, ಪಾಡಿ ನಲಿದಾಡುವರು ಮಧ್ವಮುನಿ ಮಾರುತನ ಅವತಾರವಲ್ಲವೆ ? ॥ ೭ ॥ ಶಿಷ್ಯರನ್ನು ಗಂಗಾನದಿ ದಾಟಿಸಿದ್ದು : ತುರುಷ್ಕರಾಜನ ವಿಸ್ಮಯ ವೈಷ್ಣವಾಗ್ರೇಸರರು ಆನಂದ ತೀರ್ಥರು ಜ್ಞಾನ ಪ್ರಪೂರ್ಣರು ಶಿಷ್ಯರಿಗೆ ಅತಿ ಪ್ರಿಯರು ಬಡಗ ದಿಕ್ಕಿನ ಕಡೆಗೆ ಮತ್ತೊಮ್ಮೆ ಪಯಣಿಸುತ ಶಿಷ್ಯರಿಂದೊಡಗೂಡಿ ಗಂಗೆಯೆಡೆ ನಡೆದರು ಶತ್ರುಭಯದಿಂದಾಗಿ ಅಂಬಿಗರ ಸುಳಿವಿಲ್ಲ ಗಂಗೆಯನು ದಾಟಲು ನಾವೆಗಳೇ ಇಲ್ಲ ॥ ೮ ॥ ಪರಮ ಕರುಣಾಳುಗಳು ಆನಂದ ತೀರ್ಥರು ಶಿಷ್ಯರಿಗೆ ಆಶ್ರಯವ ಮೂಲದಲಿ ನೀಡುವರು ಇಂದವರು ಸಿಲುಕಿರುವ ಸಂದಿಗ್ಧವನು ಅರಿತು ಎಲ್ಲರಿಗೂ ಅಭಯವನು ನೀಡಿ ಹುರಿದುಂಬಿಸಿ ಸಂಸಾರ ಸಾಗರವ ದಾಟಿಹರೋ ಎಂಬಂತೆ ಶಿಷ್ಯರೊಂದಿಗೆ ತುಂಬು ಗಂಗೆಯನು ಹಾಯ್ದರು ॥ ೯ ॥ ಕೂಗೊಂದು ಕೇಳಿಸಿತು "ತಡೆಯಿರಿ ! ತಡೆಯಿರಿ! ತೀರ ಸೇರುವ ಮುನ್ನ ವೈರಿಗಳ ಕೊಲ್ಲಿರಿ" ಅಲ್ಲಿದ್ದ ತ್ವರಕ ಭಟರಿಂತೆಂದು ಕೂಗುತ್ತ ಹರಿಹಾಯ್ದು ಬಂದರು ಮಧ್ವಸಜ್ಜನರೆಡೆಗೆ ತುರುಕ ಪುರುಷರ ಇಂಥ ಸೊಕ್ಕನ್ನು ಲೆಕ್ಕಿಸದೆ ಅವರ ತಾಯ್ನುಡಿಯಲ್ಲೇ ಮಧ್ವರಿಂತೆಂದರು ॥ ೧೦ ॥ "ಮಂದಮತಿಗಳು ನೀವು ಶುದ್ಧ ಅವಿವೇಕಿಗಳು ಹುಚ್ಚುತನದಲಿ ನೀವು ನೀರಿನಲಿ ಕೊಚ್ಚದಿರಿ ಹೆಚ್ಚು ಸಂಖ್ಯೆಯ ನಿಮಗೆ ನಮ್ಮಿಂದ ಭಯವೆ ? ನಿಮ್ಮರಸನರಸಿಯೇ ನಾವು ಬಂದಿಹೆವಿಂದು ಇಂತಿರಲು ನಮ್ಮೊಡನೆ ನಿಮಗೇಕೆ ಕಲಹ ? " ಇಂತೆಂದು ತ್ವರಕರನು ಸಂಭ್ರಾಂತಿಗೊಳಿಸಿದರು ॥ ೧೧ ॥ ಗರುಡ ಮಂತ್ರವ ಬಲ್ಲ ಶ್ರೇಷ್ಠ ಮಾನವನೊಬ್ಬ ಮಂತ್ರದಲಿ ಹಾವುಗಳ ಸೆರೆ ಹಿಡಿವ ಹಾಗೆ ಬಿರುನುಡಿಯ ಬಲದಿಂದ ಆನಂದ ತೀರ್ಥರು ತಡೆಹಿಡಿದು ನಿಲಿಸಿದರು ತುರುಕ ಭಟರನ್ನು ಮರಣ ಭಯವೆಂಬುವ ನದಿಯನ್ನೇ ಅಲ್ಲದೆ ದೇವನದಿಯನು ಕೂಡ ಪರಿಜನರು ದಾಟಿದರು ॥ ೧೨ ॥ ತುರುಕ ಕಿಂಕರ ಸಂಖ್ಯೆ ಸಾವಿರದಲಿಹುದು ಆದರೂ ಮಧ್ವಮುನಿ ನಿರ್ವಿಕಾರರು ಅಹುದು ಜಗವೆಲ್ಲ ಸಲಹುವ ಮಾರುತನ ಅವತಾರ ಕ್ರೂರ ಕಿಂಕರರ ಭಯ ಅವರಿಗೇಕೆ ? ನರಿಗಳ ಗುಂಪಿನಲಿ ಕೇಸರಿಯು ಇರುವಂತೆ ಕಂಗೊಳಿಸಿ ಮೆರೆದರು ಆನಂದ ತೀರ್ಥರು ॥ ೧೩ ॥ ತುರುಕ ರಾಜನು ತನ್ನ ಸೌಧ ಶಿಖರದಿ ನಿಂತು ತನ್ನ ನಗರಿಯ ಹೊಕ್ಕ ಆನಂದ ತೀರ್ಥರನು ಎವೆ ಇಕ್ಕದೇ ನೋಡಿ ಆಶ್ಚರ್ಯಗೊಂಡನು ಏನಿವರ ಸೌಷ್ಠವ ! ಏನಿದೀ ಮೈಮಾಟ ! ದೇವ ದಾನವರಿಂದ ನಡುಗಿಸಲಸಾಧ್ಯ ! ಆ ನೃಪತಿ ಮಧ್ವರನು ಕುರಿತು ಇಂತೆಂದನು ॥ ೧೪ ॥ "ಹಾದಿಹೋಕರು ಎಲ್ಲ ಬೇಹುಗಾರರು ಎಂಬ ಶಂಕೆಯಿಂದಲಿ ನಮ್ಮ ರಾಜ ಭಟರೆಲ್ಲ ಪಥಿಕರಿಗೆ ಕಿರುಕುಳವ ಕೊಡುತಲಿರಬಹುದು ಪಥಿಕ ಪಾಟನ ಕರ್ಮ ದೀಕ್ಷಿತರು ಅವರಹುದು ಕಾಲದೂತರ ತರಹ ಕರುಣೆಯೇ ಇರದವರು ಅವರಿಂದ ಪಾರಾಗಿ ಹೇಗೆ ಬಂದಿರಿ ತಾವು ? ॥ ೧೫ ॥ "ಗಂಗೆ ಹರಿದಿಹಳಿಲ್ಲಿ ಭೀಬತ್ಸ ರೂಪದಲಿ ಆಕೆಯನು ಎದುರಿಸುತ ಹೇಗೆ ಬಂದಿರಿ ತಾವು ? ನಾವೆಗಳ ನೆರವಿಲ್ಲದೆ ತೀರವನು ಸೇರಿದಿರೆ ?" ಈ ಪರಿಯೊಳಾ ನೃಪತಿ ಪರಿಪರಿಯ ಪ್ರಶ್ನೆಗಳ ಸರಮಾಲೆಯನೆ ಸುರಿಸಿ ಚಕಿತಗೊಂಡುದ ಕಂಡು ನಸುನಗುತ ನುಡಿದರು ಶ್ರೀ ಹರಿಯ ಭಕ್ತರು ॥ ೧೬ ॥ "ಯಾವ ದೇವರು ಜಗವ ದಿನನಿತ್ಯ ಬೆಳಗುವನೊ ಯಾರ ಪ್ರಖರತೆಯಿಂದ ಜಗವು ಜಗಜಗಿಸುವುದೊ ಯಾವ ಪರಮಾತ್ಮನು ಸೂರ್ಯನೊಳು ಅಡಗಿಹನೊ ಆ ದಿವ್ಯ ಚೇತನನ ಪರಮ ಕೃಪೆಯಲಿ ನಾವು ಈ ಬಗೆಯ ಸಾಹಸದ ಕಾರ್ಯವನು ಎಸಗಿದೆವು" ಎಂದವರು ಉಸುರಿದರು ತುರುಕ ಭಾಷೆಯಲಿ ॥ ೧೭ ॥ ಆನಂದ ತೀರ್ಥರ ಮೇರುತರ ಗಾಂಭೀರ್ಯ ಉತ್ಕೃಷ್ಟ ಪೌರುಷ, ಧೈರ್ಯ ಸಾಹಸವನ್ನು ಅವರಲ್ಲಿ ನೆಲೆಗೊಂಡ ಪೂಜ್ಯತೆ, ವಿದ್ವತ್ತು ಕಾಲ ದೇಶಕೆ ತಕ್ಕ ಸ್ಫುಟವಾದ ಮಾತು ಈ ಎಲ್ಲವನೂ ಬೆರಗಿನಲಿ ಗಮನಿಸಿದ ಆ ರಾಜ ತನ್ನರ್ಧ ರಾಜ್ಯವನೇ ಕೊಟ್ಟನುಂಬಳಿಯಾಗಿ ॥ ೧೮ ॥ ಎಂಥದೀ ಸೋಜಿಗವು ! ಎಂಥದೀ ಅದ್ಭುತವು ! ದಂಡಾರ್ಹವೆನಿಸಿದರು ರಾಜಭಟರಿಗೆ ಅವರು ರಾಜ್ಯಾರ್ಹರೆನಿಸಿದರು ರಾಜನಿಗೆ ಅವರು ಮುನ್ನುಗ್ಗಬಹುದಿತ್ತು ಬಾಹುಬಲ ತೋರುತ್ತ ಆದರೂ ಸಂಯಮದಿ ಮಾತುಕತೆ ನಡೆಸಿದರು ಸಂಕಷ್ಟ ಎದುರಿಸಲು ಸಂಯಮವು ಅತಿ ಮುಖ್ಯ ॥ ೧೯ ॥ ಅನೇಕ ತೆರನಾದ ಚೋರರನ್ನು ಜಯಿಸಿದ್ದು ಮತ್ತೊಮ್ಮೆ ಚೋರರ ಗುಂಪೊಂದು ಬಂದು ಮಧ್ವರ ಶಿಷ್ಯರಿಗೆ ಕಿರುಕುಳವ ನೀಡಿದರು ಆಗಲಾ ಮಧ್ವಮುನಿ ಗಂಟೊಂದ ಹಿಡಿದು ಅದರೊಳಗೆ ಹಣವಿರುವ ಭ್ರಾಂತಿಯನು ಹುಟ್ಟಿಸಿ ಸಂತಪ್ತಕರ ಸಂಗ ಪಾರ್ಥ ಮಾಡಿದ ತೆರದಿ ಚೋರರೆಲ್ಲರ ನಡುವೆ ಕಲಹವೇರ್ಪಡಿಸಿದರು ॥ ೨೦ ॥ ಇನ್ನೊಮ್ಮೆ ಮಧ್ವರನು ಹತ್ಯೆಗೈಯಲು ಎಣಿಸಿ ಶೂರರೆಂದೆನಿಸಿದ್ದ ನೂರಾರು ಚೋರರು ಒಮ್ಮೆಲೇ ನುಗ್ಗಿದರು ಪರಿವಾರದೆಡೆಗೆ ಎದೆಗುಂದಿ ಕಂಗೆಡದ ಆನಂದ ತೀರ್ಥರು ಶಿಷ್ಯನೊಬ್ಬನ ಕರೆದು ಕೊಡಲಿಯೊಂದನು ನೀಡಿ ಕಳ್ಳರನು ಬಡಿದಟ್ಟಿ ಹಿಮ್ಮೆಟ್ಟಿಸಿದರು ॥ ೨೧ ॥ ಮತ್ತೊಂದು ಸ್ಥಳದಲ್ಲಿ ಮತ್ತೊಂದು ಬಾರಿ ಮಧ್ವ ಪರಿವಾರವನು ಸಂಧಿಸಿದ ಚೋರರಿಗೆ ಶಿಲೆಯ ಪ್ರತಿಮೆಗಳಂತೆ ಮಧ್ವಗಣ ಕಂಡಿತು ಇದರಿಂದ ಖತಿಗೊಂಡು ಮುನ್ನಡೆದ ಚೋರರು ಹಿಂದಿರುಗಿ ನೋಡಿದರೆ ಮತ್ತೆ ಮನುಜರೆ ಅವರು! ಮಧ್ವಮಹಿಮೆಯ ಕಂಡು ಉದ್ದಂಡ ನಮಿಸಿದರು ॥ ೨೨ ॥ ಶ್ರೀ ಸತ್ಯತೀರ್ಥರ ರಕ್ಷಣೆ ಮಧ್ವಮುನಿಗಳ ಶಿಷ್ಯ ಶ್ರೀ ಸತ್ಯತೀರ್ಥರು ಹಿಮಗಿರಿಯ ಪ್ರಾಂತದಲಿ ಸಂಚರಿಸುತಿರಲು ದೈತ್ಯನೊಬ್ಬನು ಬಂದು ವ್ಯಾಘ್ರರೂಪದಿ ನಿಂತು ಸತ್ಯತೀರ್ಥರ ಹತ್ಯೆಗೈಯಲೆತ್ನಿಸಿದ ಇದ ಕಂಡು ಮಧ್ವಮುನಿ ಬಹು ಕೃದ್ಧಗೊಂಡು ಹಸ್ತತಾಡನದಿಂದ ದೈತ್ಯನನು ವಧಿಸಿದರು ॥ ೨೩ ॥ ನಾರಾಯಣಾಶ್ರಮದಲ್ಲಿ ವ್ಯಾಸಮುಷ್ಟಿಗಳನ್ನು ಸ್ವೀಕರಿಸಿದ್ದು ಮರಳಿ ಆ ಮಧ್ವಮುನಿ ಬಡಗ ಬದರಿಗೆ ತೆರಳಿ ಶ್ರೀ ವೇದವ್ಯಾಸರ ದರುಶನವ ಮಾಡುತ್ತ ವ್ಯಾಸಮುಷ್ಟಿಗಳೆಂಬ ಪ್ರತಿಮೆಗಳ ಪಡೆದರು ಈ ವ್ಯಾಸಮುಷ್ಟಿಗಳ ಮಹಿಮೆ ಅಪ್ರತಿಮ ಲಕುಮಿ ನಾರಾಯಣರು ಇವುಗಳಲಿ ಸನ್ನಿಹಿತ ಶ್ರೇಷ್ಠ ದಿವಿಜರು ಮಾತ್ರ ಪಡೆಯಬಲ್ಲರು ಇವನು ॥ ೨೪ ॥ ಭಾರತ ತಾತ್ಪರ್ಯ ನಿರ್ಣಯವನ್ನು ರಚಿಸಲು ವೇದವ್ಯಾಸರ ಆದೇಶ ಎಲ್ಲವನೂ ಬಲ್ಲವರು ಶ್ರೀ ವೇದ ವ್ಯಾಸರು ಪರಮಾರ್ಥ ಜ್ಞಾನಕ್ಕೆ ಮಧ್ವರು ಸಮರ್ಥರು ಎಂದೆಣಿಸಿ ಪರಮಗುರು ವ್ಯಾಸದೇವರು ಅಂದು ಆಣತಿಯ ನೀಡಿದರು ಆನಂದ ತೀರ್ಥರಿಗೆ ಭಾರತ ತಾತ್ಪರ್ಯ ನಿರ್ಣಯವ ರಚಿಸಿರಿ ಪರತತ್ವ ಖ್ಯಾತಿಗೆ ಕಾರಣರು ನೀವಾಗಿ ॥ ೨೫ ॥ ಮರಳಿ ಗಂಗೆಯನ್ನು ದಾಟಿದ ಮಹಿಮ ಸಕಲ ತೀರ್ಥಗಳಲ್ಲೂ ಶ್ರೀ ಹರಿಯ ರೂಪ ಸಕಲ ಕ್ಷೇತ್ರಗಳಲ್ಲಿ ಪರಮಾತ್ಮ ಸನ್ನಿಹಿತ ಇಂತೆಣಿಸಿ ಆ ಮಹಿಮ ಆನಂದ ತೀರ್ಥರು ಸಕಲ ತೀರ್ಥದಿ ಮಿಂದು ಸಕಲಕ್ಷೇತ್ರದಿ ಭಜಿಸಿ ಗಂಗಾ ತರಂಗಗಳ ತುಂಗ ಮಾಲೆಯ ಕಂಡು ಅನುಚರರ ಒಡಗೂಡಿ ತೀರವನು ಸೇರಿದರು ॥ ೨೬ ॥ ಹಿಂದೊಮ್ಮೆ ನಡೆದಂತೆ ಮತ್ತೊಮ್ಮೆ ನಡೆಯಿತು ಗಂಗೆಯ ತೀರದಲಿ ನಾವೆಗಳೇ ಇಲ್ಲ ಸಂಧ್ಯೆಯ ಸೂರ್ಯನು ಅಸ್ತಮಿಸುತಿರಲು ಮುಂದೇನು ಗತಿ ಎಂದು ವಿಹ್ವಲರು ಶಿಷ್ಯರು ಶಿಷ್ಯರಾ ಚಿಂತೆಯನು ಮನಗಂಡು ಮಧ್ವರು ದಾಟಿದರು ಗಂಗೆಯನು ಉಟ್ಟ ಬಟ್ಟೆಯಲೆ ॥ ೨೭ ॥ ಶರಧಿಯನು ಲಂಘಿಸಿದ ಹನುಮರಿವರು ಗಂಗೆಯಲಿ ವಿಹರಿಸಿದ ಭೀಮರೀ ಮಧ್ವರು ಶಿಷ್ಯರಿಗೆ ಇವುಗಳ ಸ್ಮರಣೆಯೇ ಇಲವಾಯ್ತು ಇಲ್ಲದಿರೆ ಅವರುಗಳು ಶಂಕೆಯನು ತಾಳುತ್ತ ಗಂಗೆಯನು ದಾಟುವುದು ಗುರುಗಳಿಗೆ ಶಕ್ಯವೆ ? ಎಂದೆಲ್ಲ ಚಿಂತಿಸುತ ಕೂಡುತ್ತಲಿದ್ದರೆ ? ॥ ೨೮ ॥ ಕಿರಣಗಳ ನೆರವಿಂದ ಜಗವ ಬೆಳಗುವ ಸೂರ್ಯ ಜ್ಞಾನ ಕಿರಣದಿ ಮನವ ಬೆಳಗಿಸುವ ಮಧ್ವಾರ್ಯ ಪಡುವಣದ ಬಾನಿನಲಿ ಅಸ್ತಮಿಸಿದಾ ಸೂರ್ಯ ನಯನಗಳಿಗತಿ ದೂರ ಈ ಮಧ್ವ ಸೂರ್ಯ ಸೂರ್ಯಾಸ್ತಮಾನದಲಿ ಕಳೆಯಳಿದ ನಳಿನದ ಹಾಗೆ ಬಾಡಿದವು ಶಿಷ್ಯರ ನೇತ್ರ ಕಮಲಗಳು ॥ ೨೯ ॥ ಪಶುಪದವ ವಿನತ ತಾ ದಾಟಿದಾ ತರದಲ್ಲಿ ಮಧ್ವಮುನಿ ದಾಟಿದರು ತುಂಬು ಗಂಗೆಯನು ಧರಿಸಿದ್ದ ವಸ್ತ್ರದಲಿ ಆರ್ದ್ರತೆಯ ಸುಳಿವಿಲ್ಲ ದೂರ ತೀರದೊಳಿದ್ದ ನರದೇವ ಭೂದೇವ ಕೌತುಕದ ಈ ನೋಟ ಕಂಡು ಅಚ್ಚರಿಗೊಂಡು ಆನಂದ ತೀರ್ಥರಿಗೆ ಉದ್ದಂಡ ನಮಿಸಿದನು ॥ ೩೦ ॥ ಇನ್ನೊಂದು ತೀರದಲಿ ಉಳಿದಿದ್ದ ಶಿಷ್ಯರಿಗೆ ಗಂಗೆಯನು ದಾಟುವುದು ಅತಿ ಕಠಿಣವಾಯ್ತು ರಾಜನನು ಲೀಲೆಯಲಿ ಮರುಳುಗೊಳಿಸಿದ ಗುರುವು ಶಿಷ್ಯರನು ಕರತರಲು ನಾವೆ ಕಳುಹೆಂದರು ಆಚಾರ್ಯರಾಣತಿಗೆ ಮಣಿಯುತ್ತಆ ರಾಜ ಶಿಷ್ಯರನು ಕರೆತಂದ ನಾವೆಗಳ ಕಳುಹಿ ॥ ೩೧ ॥ ಗುರುಗಳನು ಕಾಂಬುವ ತವಕದಲಿ ಶಿಷ್ಯರು ಗಂಗೆಯನು ನಾವೆಯಲಿ ತ್ವರಿತದಲಿ ದಾಟಿ ತೀರವನು ಸೇರಿದರು ಬಲು ಬೇಗ ಬೇಗ ಗಂಗೆಯ ತೀರವದು ಬಲು ಶೋಭಿಸಿತ್ತು ಜನನಿಬಿಡ ಜಂಗುಳಿ ಜಗಜಗಿಪ ದೀಪಗಳು ಪಂಡಿತರ ಸ್ತೋಮವನು ಕಂಡರಾ ಶಿಷ್ಯರು ॥ ೩೨ ॥ ಗಂಗೆಯ ತಟದಲ್ಲಿ ಪಂಡಿತೋತ್ತಮ ಸಭೆಯು ಸುರಲೋಕದಲ್ಲಿನ ಸಭೆಯಂತೆ ಕಂಡಿತು ಆನಂದ ತೀರ್ಥರು ವೇದಾರ್ಥ ನಿಪುಣರು ಅರ್ಥ ಸೂಕ್ಷ್ಮತೆಯನ್ನು ಸುಲಭದಲಿ ಬಿಡಿಸುವರು ದೇವಸಭೆಯಲಿ ಕುಳಿತ ಬ್ರಹ್ಮದೇವರ ತೆರದಿ ಕಂಗೊಳಿಸಿ ಮೆರೆದಿದ್ದರಾನಂದ ತೀರ್ಥರು ॥ ೩೩ ॥ ಹಸ್ತಿನಾಪುರದಲ್ಲಿ ಚಾತುರ್ಮಾಸ್ಯ ಮರಳಿ ತೆರಳಿದರಾಗ ಆನಂದ ತೀರ್ಥರು ಹಸ್ತಿನಾಪುರದತ್ತ ಪಯಣ ಮುಂದರಿಸಿದರು ಆಲ್ಲೊಂದು ಸ್ಥಳದಲ್ಲಿ ಗಂಗೆಗತಿ ದೂರದಲಿ ಏಕಾಂತವಾಗಿದ್ದ ಮಠವೊಂದರಲ್ಲಿ ಶ್ರೀ ಹರಿಯ ಚಿಂತನೆಯ ಎಡೆಬಿಡದೆ ಮಾಡುತ್ತ ನಾಲ್ಕು ತಿಂಗಳ ಕಾಲ ವಾಸ್ತವ್ಯ ಹೂಡಿದರು ॥ ೩೪ ॥ ಗಂಗೆಯಿಂದಲೂ ಪೂಜಿತರು ಆನಂದ ತೀರ್ಥರಿಗೆ ಸೇವೆ ಸಲ್ಲಿಸಲೆಂದು ದೇವನದಿ ಗಂಗೆಯು ಕವಲಾಗಿ ಒಡೆದು ಭೂಮಿಯನು ಭೇದಿಸುತ ಅವರ ಬಳಿ ತೆರಳಿದಳು ರುದ್ರಾದಿ ದೇವರಿಗೆ ಭಾರತಿಯು ಪೂಜ್ಯಳು ಆಕೆಯೂ ಸೇವಿಪಳು ಆನಂದ ತೀರ್ಥರನು ಗಂಗೆಯ ಸೇವೆಯಲಿ ಅಚ್ಚರಿ ಇನ್ನೇನು ? ॥ ೩೫ ॥ ಪ್ರಕಟವಾದಳು ಅಲ್ಲಿ ಭಾಗೀರಥಿ ದೇವಿ ಭಯಭಕ್ತಿಯಿಂದವಳು ಬಹುದೂರದಿಂದ ನಮಿಸಿದಳು ಆಚಾರ್ಯ ಪಾದಾರವಿಂದಕ್ಕೆ ಅಪ್ರತಿಮ ಸುಂದರಿಯು ಲೋಕದೊಳು ಆಕೆ ಇದ ನೋಡಿ ಬೆರಗಾಗಿ ಆ ಶಿಷ್ಯರೆಲ್ಲ ವಿಸ್ಮಯದಿ ಕುಳಿತರು ಚಕಿತರಾಗಿ ॥ ೩೬ ॥ ದೇಹಬಲದಲ್ಲೂ ಶಿಷ್ಯರನ್ನು ಮೀರಿಸಿದ ಗುರು ಆನಂದ ತೀರ್ಥರು ಪಾಪ ಪರಿಹಾರಕರು ಆದರೂ ನಡೆದರು ವಾರಣಾಸಿಯ ಕಡೆಗೆ ಅಲ್ಲವರು ಮತ್ತೊಂದು ಮೋಜ ನಡೆಸಿದರು ಶಿಷ್ಯರಲಿ ಹಲವರು ಬಲು ಗರ್ವಶಾಲಿಗಳು ಬಾಹುಬಲದಲಿ ತಮಗೆ ಸಮರಿಲ್ಲ ವೆಂಬುವರು ಮಧ್ವಮುನಿ ಅವರನ್ನು ಕುರಿತು ಇಂತೆಂದರು ॥ ೩೭ ॥ "ಗರುವ ಪಡದಿರಿ ನೀವು ಬಲವಂತರೆಂದು ನೀವೆಲ್ಲ ಒಟ್ಟಾಗಿ ನಮ್ಮ ಮೇಲೆರಗಿರಿ ದ್ವಂದ್ವ ಯುದ್ಧವ ನೀವು ನಮ್ಮೊಡನೆ ಮಾಡಿ ನಿಮ್ಮೆಲ್ಲ ಶಕ್ತಿಯನು ಕಾಳಗದಿ ಬಳಸಿ ಇಲ್ಲದಿರೆ ಗುರ್ವಾಜ್ಞೆ ಉಲ್ಲಂಘಿಸಿದರೆಂಬ ಪಾತಕಕೆ ನೀವೆಲ್ಲ ಗುರಿಯಾಗಬಹುದು" ॥ ೩೮ ॥ ಗುರುಗಳಾಡಿದ ಮಾತ ಕೇಳಿದಾ ಶಿಷ್ಯರು ತಮ್ಮೊಳಗೆ ಹದಿನೈದು ಮಂದಿಯನು ಆಯ್ದರು ಅವರೆಲ್ಲ ಒಟ್ಟಾಗಿ ಗುರುವೆಡೆಗೆ ನುಗ್ಗಿದರು ಎಲ್ಲರನೂ ಒಟ್ಟಾಗಿ ಕೆಡವಿದರು ಗುರುಗಳು "ಸಾಮರ್ಥ್ಯವಿದ್ದವರು ಮೇಲೇಳಿ ನೋಡುವ" ಎಂದೆನುತ ಮೆಲುನಗೆಯ ಕುಹಕವಾಡಿದರು ಮಧ್ವಬಂಧಕ್ಕೆ ಸಿಲುಕಿ ನಲುಗಿದರು ಶಿಷ್ಯರು ॥ ೩೯ ॥ ವಿಲವಿಲನೆ ನರಳುತ್ತ ವ್ಯಾಕುಲದಿ ಹೊರಳಿದರು "ದಯಮಾಡಿ ಬಿಟ್ಟು ಬಿಡಿ ಓ ಮಹಿಮರೇ ! ನಿಮ್ಮ ಅಂಗಾಂಗ ಬೆರಳುಗಳು ಮೇರುಗಿರಿ ಸಮವಿಹವು ತಾಳಲಾರೆವು ನಾವು, ಬಿಡುಗಡೆಯ ನೀಡಿ" ಎಂದೆನುತ ಗುರುಗಳಲಿ ಬಿನ್ನೈಸಿಕೊಂಡರು ॥ ೪೦ ॥ ಮಧ್ವ ಬಾಹುಗಳಿಂದ ಮುಕ್ತರಾದವರೆಲ್ಲ ಮಧ್ವ ಬಲದೈಸಿರಿಗೆ ಮರುಳಾಗಿ ಹೋದರು ಯಾರ ಭ್ರೂಲಾಸ್ಯದಲಿ ಜಗವೆಲ್ಲ ಕುಣಿವುದೊ ಯಾರಿಂದ ರುದ್ರೇಂದ್ರ ಸುರರೆಲ್ಲ ನಲಿವರೊ ಅಂತಹ ವಾಯುವಿನ ದಿವ್ಯಾವತಾರವಿದು ಇದನರಿಯದವರಿಗೆ ಸೋಜಿಗವು ಸಹಜ ॥ ೪೧ ॥ ಅಮರಾವತಿಯ ಪರಾಭವ ಅಮರಾವತಿ ಎಂಬೊಬ್ಬ ಸನ್ಯಾಸಿಯೊಬ್ಬ ಅಂದು ಪ್ರಚಲಿತವಿದ್ದ ಸಿದ್ಧಾಂತವೆಲ್ಲವನು ತರ್ಕನಿಪುಣತೆಯಿಂದ ಖಂಡಿಸುತಲಿದ್ದ ಇವನೊಮ್ಮೆ ಆನಂದ ತೀರ್ಥರಲಿ ಬಂದು "ಪುರುಷಾರ್ಥ ಸಾಧನೆಗೆ ಜ್ಞಾನ ಕರ್ಮವು ಬೇಕು'' ಎಂಬುದನು ಸಾಧಿಸಿರಿ ಎಂದೆನುತ ಕೇಳಿದನು ॥ ೪೨ ॥ ಆನಂದ ತೀರ್ಥರು ಪರಿಪೂರ್ಣ ಪ್ರಜ್ಞರು ಸನ್ಯಾಸಿ ಪ್ರಶ್ನೆಯನು ತಿಳಿಯಾಗಿಸಿದರು "ಜ್ಞಾನದಿಂದಲೆ ಮೋಕ್ಷ, ಕರ್ಮ ಸಾಧನವದಕೆ" "ಜ್ಞಾನವೆಂದರೆ ಏನು ?" ಮತ್ತೊಮ್ಮೆ ಕೇಳಿದನು 'ಜ್ಞಾನವಿದ್ದರೆ ಮಾತ್ರ ಅದು ನಿನಗೆ ತಿಳಿಯುವುದು" ಇಂತೆಂದು ಆತನನು ಖಂಡಿಸಿದರವರು ॥ ೪೩ ॥ ಶ್ರೀ ಮಧ್ವ ವಿಜಯ ವ್ಯಾಸ ಶಿಷ್ಯೋತ್ತಮರು ಆನಂದ ತೀರ್ಥರು ತಿಳಿವೆಂಬ ತಿಳಿಯಾದ ಬೆಳಕ ಮಿಂಚುಗಳಿಂದ ಮೌಢ್ಯವೆಂಬುವ ಕಾಳ ಕತ್ತಲೆಯ ಕಿತ್ತರು ಜೊನ್ನವೆಂಬುವ ಹೊನ್ನ ಸಂಪದವ ಹೊಂದಿರುವ ಆಶ್ವಯುಜ ಚಂದ್ರಮನು ಬಾನಿನಲಿ ಹೊಳೆವಂತೆ ವಿಬುಧ ಸಭೆಯಲ್ಲವರು ಕಂಗೊಳಿಸಿ ಮೆರೆದರು ॥ ೪೪ ॥ ಕಾಲಕಾಲದೊಳೆಲ್ಲ ಸೃಷ್ಟಿ ಸ್ಥಿತಿ ಗತಿಗಳು ಕಾಲಕಾಲದೊಳು ಸಂಹಾರ ಲಯಗಳು ಎಲ್ಲವೂ ನಡೆಯುವುವು ಬ್ರಹ್ಮಸಂಕಲ್ಪದಲಿ ಕಾಲ ನಿರ್ಧರಿಸುವ ನಾಶವವ ಹೊಂದನು ವೇದಾದಿ ಶಾಸ್ತ್ರದೊಳು ಸಕಲ ಚೇತನದಲ್ಲೂ ನೆಲೆಸಿರುವ ಶಕ್ತನವ, ಸರ್ವ ಸ್ವತಂತ್ರ ॥ ೪೫ ॥ ಶ್ರೀ ಹರಿಯು ಜಗಕೆಲ್ಲ ಬಳಿ ಇರುವ ಬಂಧು ಜಗದೊಡನೆ ಹಗಲಿರುಳು ಆಟವಾಡುವನವನು ದುಷ್ಟರನು ಶಿಕ್ಷಿಸುತ ಶಿಷ್ಟರನು ರಕ್ಷಿಪನು ಮುಕುತಿಯೋಗ್ಯರನವನು ನಿರ್ದೋಷಿಯಾಗಿಪನು ದೋಷ ವರ್ಜಿತನವನು ಕಲ್ಯಾಣ ಗುಣ ಪೂರ್ಣ ಸತ್ವಾದಿ ಪ್ರಕೃತಿ ಗುಣ ರಹಿತನವನಾಗಿಹನು ॥ ೪೬ ॥ "ಸಮಾಭ್ಯಧಿಕ ರಹಿತನವ ಲಕುಮಿಪತಿ ಹರಿಯು ಜಗದೆಲ್ಲ ರೂಪದಲಿ ಆತ ಭಿನ್ನ ಆಗಮಗಳೆಲ್ಲದರ ಇದುವೆ ಸತ್ಸಾರ" ಮುಂತಾದ ಹಿರಿದಾದ ಅರ್ಥಗಳನೆಲ್ಲ ಆನಂದ ತೀರ್ಥರ ವ್ಯಾಖ್ಯಾನವೆಲ್ಲ ವಿವರದಲಿ ತಿಳಿಸಿಹವು ಸುಜ್ಞಾನಿಗಳಿಗೆ ॥ ೪೭ ॥ ಅ೦ದಿನಾ ಕಾಲದಲಿ ಎಲ್ಲ ಕಡೆಯಲ್ಲಿ ಮಾಯಾವಾದದ ಬಿಳಲು ಜನಮನದಿ ಮೂಡಿತ್ತು ವಿರೋಧಾಭಾಸಗಳ ಸರಮಾಲೆ ಈ ವಾದ ಮಧ್ವರ ವ್ಯಾಖ್ಯಾನ ಅತಿ ತರ್ಕಬದ್ಧ ಯಾರಿಂದಲೂ ಅದನು ಖಂಡಿಸಲಸಾಧ್ಯ ಅಷ್ಟಾಂಗ ತರ್ಕದಲಿ ಅದು ಶೋಭಿಸಿತ್ತು ॥ ೪೮ ॥ ಕುರುಕ್ಷೇತ್ರದಲ್ಲಿ ತೋರಿದ ವಿಶೇಷ ಮಹಿಮೆ ಕುರುಕ್ಷೇತ್ರವೆಂಬುದು ಅತಿ ದಿವ್ಯ ಕ್ಷೇತ್ರ ಅರಸರಿಗೆ ಸ್ವರ್ಗದ ದಾರಿ ತೋರುವ ಕ್ಷೇತ್ರ ಆಚಾರ್ಯ ಪರಿವಾರ ಅಲ್ಲಿ ತೆರಳಿತ್ತು ಮಾರೀಚನಾಗಲಿಹ ವ್ಯಕ್ತಿಯೊಬ್ಬನ ಕಂಡು ಭೀಮಸೇನನ ದಿವ್ಯ ಗದೆಯನ್ನು ನೋಡಿ ದ್ವಾಪರದ ಯುದ್ಧದ ವೈಭವವ ಸ್ಮರಿಸಿದರು ॥ ೪೯ ॥ ವ್ಯೋಮಕೇಶನಿಂದ ನಡೆದ ಪೂಜೆ ಬಳಿಕವರು ತೆರಳಿದರು ಹೃಷಿಕೇಶ ಕ್ಷೇತ್ರಕ್ಕೆ ಧವಳ ಕಾಂತಿಯ ಶಿವನು ಕ್ಷಣ ಮಾತ್ರ ಗೋಚರಿಸಿ ನಮಿಸಿದನು ಮಧ್ವರಿಗೆ ಅತಿ ವಿನಯದಲ್ಲಿ ಭಕ್ತನಿಗೆ ಸ್ವಪ್ನದಲಿ ದರುಶನವ ನೀಡಿ ಮೃಷ್ಟಾನ್ನ ಭೋಜನವ ಪರಿವಾರಕರ್ಪಿಸಿ ಶ್ರೀಮದಾಚಾರ್ಯರಿಗೆ ಸತ್ಕಾರ ಮಾಡಿದನು ॥ ೫೦ ॥ ಇಷುಪಾತದಲ್ಲಿ ತೋರಿದ ಮಹಿಮೆ ಇಷುಪಾತವೆಂಬುವ ಮತ್ತೊಂದು ಕ್ಷೇತ್ರದಲಿ ಕ್ಷೇತ್ರಾಧಿಪತಿಯಾದ ಶ್ರೀ ಪರಶುರಾಮರಿಗೆ ಪೂಜೆಯನು ಸಲಿಸಿದರು ಅತಿ ಭಕ್ತಿಯಿಂದ ರಾಜಕೇಲಿ ಎಂಬ ಬಾಳೆಯ ಹಣ್ಣುಗಳ ಭುಜಿಸಿದರು ಮಧ್ವಮುನಿ ಸಾವಿರದ ಸಂಖ್ಯೆಯಲಿ ಜನ ನೋಡಿ ನಲಿದರು ಅಚ್ಚರಿಯ ಕಂಡು ॥ ೫೧ ॥ ಗೋವಾದಲ್ಲಿ ಮತ್ತೊಮ್ಮೆ ಪಡುವಣದ ಗೋವೆಯ ತೀರದಲಿ ಮಧ್ವಮುನಿ ಪರಿವಾರ ವಾಸ್ತವ್ಯ ಹೂಡಿತ್ತು ಶಂಕರ ಎಂಬುವ ಬ್ರಾಹ್ಮಣೋತ್ತಮನೊಬ್ಬ ಅರ್ಪಿಸಿದ ನಲವತ್ತು ನೂರು ಕದಲಿಗಳನ್ನು ಮೂರು ದಶ ಹಾಲಿನ ಕೊಡಗಳನ್ನು ಕ್ಷಣದಲ್ಲಿ ಭುಜಿಸಿದರು ಆನಂದ ತೀರ್ಥರು ॥ ೫೨ ॥ ಪಶುಪೆಯಲ್ಲಿ ಸಂಗೀತ ಪ್ರೌಢಿಮೆ ಅಲ್ಲಿಂದ ಪಯಣವನು ಮುಂದರಿಸಿ ಮಧ್ವರು ಪಶುಪ ಎಂಬುವ ಸ್ಥಳವ ತ್ವರಿತದಲಿ ಸೇರಿದರು ಜನನಿವೇದನೆಗವರು ಶೀಘ್ರದಲಿ ಓಗೊಟ್ಟು ಮೈಮರೆಸುವಂತಹ ಗಾಯನವ ಪಾಡಿದರು ಒಮ್ಮೆಲೇ ಫಲಪುಷ್ಪ ತುಂಬಿದುವು ಮರಗಳಲಿ ಎಂತಹ ಮಹಿಮೆ ! ಏನು ವೈಚಿತ್ರ್ಯ! ॥ ೫೩ ॥ ಶ್ರೀ ಮಧ್ವವರ್ಣನ ನಿರಪೇಕ್ಷ, ಗುಣಪೂರ್ಣ, ದೈತ್ಯ ಹೃದಯಕೆ ಶಲ್ಯ ನಾಲ್ಮೊಗನ ಸಮರು, ದುಃಶಾಸ್ತ್ರವೈರಿಗಳು ಪೂರ್ಣ ಚಂದ್ರನ ತೆರದಿ ಕಾಂತಿಯನು ಸೂಸುವರು ಹೃದಯ ವೈಶಾಲ್ಯದ ಆನಂದ ತೀರ್ಥರು ಸಂಪೂರ್ಣ ಭಕ್ತಿಯಲಿ ಶ್ರೀ ಹರಿಯ ಪೂಜಿಸುತ ಜನಮನದ ಅನುರಾಗ ಎಲ್ಲೆಲ್ಲೂ ಪಡೆದರು ॥ ೫೪ ॥ ಮೂರ್ಲೋಕ ಭೂಷಣರು ಆನಂದ ತೀರ್ಥರು ಅವರ ಮಹಿಮೆಗಳೆಲ್ಲ ಅಗಣಿತವು ಅದ್ಭುತವು ಇಂತಹ ಮಹಿಮರ ಉತ್ತಮೋತ್ತಮ ಚರಿತೆ ಶ್ರವಣ, ಕೀರ್ತನ ಮತ್ತು ಮನನಗಳ ನೆರವಿಂದ ಯೋಗ್ಯ ಜನರಿಗೆ ಅವರ ಎಲ್ಲಭೀಷ್ಟಗಳನ್ನು ಸಫಲಗೊಳಿಪುವು ಎಂದು ಸುರರು ಕೊಂಡಾಡಿದರು ॥ ೫೫ ॥ ಸರ್ಗೋಪಸಂಹಾರ : ಇಂತಹ ನುಡಿಗಳ ಜಲಧಾರೆಯಿಂದ ಅರಿವೆಂಬ ಮಿಂಚನ್ನು ತನ್ನಲ್ಲಿ ಇರಿಸಿರುವ ಮಧ್ವಮುನಿಗಳ ಶಿಷ್ಯಗಣವೆಂಬ ಮೇಘಗಳು ಭವಭಯದ ಬೇಗೆಯಲಿ ಪರಿತಪಿಸಿ ಬೆಂದಿರುವ ಸಜ್ಜನರು ಎಂಬುವ ವೃಕ್ಷ ಸಮುದಾಯದಲಿ ಫಲಪುಷ್ಪಗಳನಿರಿಸಿ ಆನಂದ ನೀಡಿದವು ॥ ೫೬ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ ಆನಂದಾಂಕಿತ ಹತ್ತನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. . ಶ್ರೀ ಗುರುಭ್ಯೋ ನಮಃ ಹನ್ನೊಂದನೆಯ ಸರ್ಗ ಶೇಷ ಸನಕಾದಿಗಳಿಂದ ಶ್ರೀ ಮಧ್ವ ಭಾಷ್ಯ ಶ್ರವಣ ಆನಂದ ತೀರ್ಥರ ಪ್ರವಚನವು ಜನಜನಿತ ಎಲ್ಲೆಲ್ಲೂ ಶ್ಲಾಘನೆ, ಭಕ್ತಿ, ಆದರಗಳು ಪ್ರವಚನದ ಹಿರಿಮೆ ಸುರಲೋಕ ಸೇರಿತು ಆದಿಶೇಷರ ಕೂಡೆ ಸನಕಾದಿ ಮುನಿಜನರು ಪ್ರವಚನದ ಸಾರವನು ಹೀರಿ ಮುದಗೊಂಡವರು ಇಳೆಯೊಳಗೆ ಮಿಂಚಂತೆ ಇಳಿದು ತೆರಳಿದರು ॥ ೧ ॥ ಸನಕಾದಿ ಮುನಿಗಳು ಅತಿ ವಿನಯ ಭೂಷಿತರು ಜಾಜ್ವಲ್ಯ ಮಾನದ ತೇಜವನು ಹೊಂದಿರುವ ಮಸ್ತಕ ಸಹಸ್ರದಲಿ ಶೋಭಿಸುತ್ತಿರುವ ಆದಿಶೇಷರ ಕಂಡು ಸನಕಾದಿ ಮುನಿಗಳು ಭಕ್ತಿಗೌರವದಿಂದ ಆ ದೇವನಿಗೆ ನಮಿಸುತ್ತ ಬ್ರಹ್ಮ ಸೂತ್ರದ ಬಗ್ಗೆ ಇಂತೆಂದು ಕೇಳಿದರು ॥ ೨ ॥ "ನಾಗಲೋಕದ ಒಡೆಯ, ಓ, ಶೇಷದೇವ! ಬ್ರಹ್ಮಸೂತ್ರದ ಭಾಷ್ಯ ಅತಿ ರಮ್ಯ ಕಾವ್ಯ ತಮ್ಮಂಥ ವಿಬುಧರಿಗೆ ಅತ್ಯಂತ ಪೂಜ್ಯ ಸಕಲ ಐಸಿರಿಯಿಂದ ತುಂಬಿ ತುಳುಕುತ್ತಿರುವ ಆನಂದ ತೀರ್ಥರ ಈ ಮೇರು ಕೃತಿಯನ್ನು ಅಡಿಗಡಿಗೆ ಪಠಿಸಿರಲು ಬರುವ ಫಲವೇನು ?" ॥ ೩ ॥ "ಫಲವನ್ನು ಚೆನ್ನಾಗಿ ಅರಿತ ಅಧಿಕಾರಿಗಳು ಶಾಸ್ತ್ರಶ್ರವಣಗಳಲ್ಲಿ ಪ್ರವೃತ್ತರು ತಾವು ಶ್ರೋತೃವಿಗೆ ಮುದ ಕೊಡುವ ವಾಗ್ಮಿಗಳು ತಾವು ಜ್ಞಾನಾದಿ ಸಕಲ ಗುಣ ಪರಿಪೂರ್ಣರು ಮಧ್ವ ಶಾಸ್ತ್ರದ ಶ್ರವಣ ಪಠನಾದಿ ಫಲವನ್ನು ವಿವರದಲಿ ತಾವೆಮಗೆ ಹೇಳಬೇಕು " ॥ ೪ ॥ ಶ್ರೀ ಶೇಷದೇವರಿಂದ ಶ್ರೀ ಮಧ್ವಭಾಷ್ಯದ ಫಲಶೃತಿ ಸನಕಾದಿ ಮುನಿಗಳ ಮಾತನ್ನು ಆಲಿಸುತ ಶ್ರೇಷ್ಠತಮ ಅರಿವನ್ನು ಪಡೆದ ಆ ಶೇಷರು "ಮರ್ತ್ಯರಿಗೆ ಅತಿ ಪೂಜ್ಯ ಮಧ್ವ ಶಾಸ್ತ್ರ ಮಧ್ವರಾ ಈ ಕೊಡುಗೆ ಅತ್ಯಮೂಲ್ಯ ಮಧ್ವ ಶಾಸ್ತ್ರದ ಶ್ರವಣ ಅತಿ ಪೂಜನೀಯ ಅದರ ಶ್ರವಣದ ಫಲವ ತಿಳಿಸುವೆನು ಕೇಳಿ" ॥ ೫ ॥ "ಬೇಸಾಯ ಕಾರ್ಯದಲಿ ಧಾನ್ಯವೇ ಮುಖ್ಯ ಹುಲ್ಲು ಹೊಟ್ಟುಗಳೆಲ್ಲ ಗೌಣವಾಗುವುವು ಮಧ್ವಶಾಸ್ತ್ರದ ಶ್ರವಣ ಅದರಂತೆ ಇಹುದು ಸ್ವರ್ಗ ಲೋಕದಿ ಸ್ಥಾನ ಇದರಿಂದ ಸಿಗಬಹುದು ಆದರದು ಗೌಣ; ಅದು ಮುಖ್ಯ ಫಲವಲ್ಲ ಶಾರದಾ ಶುಕರೆಲ್ಲ ವರ್ಣಿಸಿಹ ಮೋಕ್ಷವೇ ಮುಖ್ಯಫಲವಹುದು ॥ ೬ ॥ 'ಸುರರಲ್ಲಿ ಅತಿ ಶ್ರೇಷ್ಠ ಶ್ರೀ ವಾಯುದೇವರು ಭೂಮಿಯಲಿ ಆನಂದ ತೀರ್ಥರಾಗಿಹರು ಸಕಲ ಸಚ್ಛಾಸ್ತ್ರಗಳೂ ಇವರಿಂದ ರಚಿತ ಶ್ರವಣ ಮನನಗಳಿಂದ ಪರಮ ವೈಷ್ಣವ ದೀಕ್ಷೆ ಪಡೆವ ಸಜ್ಜನಕೆಲ್ಲ ಆ ನಮ್ಮ ಶ್ರೀ ಹರಿಯು ಕರುಣಿಪನು ವೈಕುಂಠ ಲೋಕ ರಂಜನೆಯ ॥ ೭ ॥ ವೈಕುಂಠ ವರ್ಣನೆ ವೈಕುಂಠ ಲೋಕದಲಿ ಶ್ರೀ ಹರಿಯ ಪುರಿ ಇಹುದು ಎಂಥ ಅದ್ಭುತ ನಗರಿ! ಎಂತಹ ಐಸಿರಿ ! ಮಾತು ವಾಕ್ಯಗಳಲದನು ವರ್ಣಿಸಲು ಸಾಧ್ಯವೆ ? ರತ್ನಮಣಿ ಮಯವಾದ ರಮಣೀಯ ಪ್ರಾಕಾರ ಅವುಗಳಲಿ ಪ್ರತಿ ಫಲಿತ ಅವುಗಳದೇ ಪ್ರತಿಬಿಂಬ ಬಿಂಬಕ್ಕೆ ಉಪಮಾನ ಪ್ರತಿ ಬಿಂಬವಾಗಿಹುದು ॥ ೮ ॥ ಎಲ್ಲಿ ನೋಡಿದರಲ್ಲಿ ಶ್ವೇತಮಣಿ ಸೌಧಗಳು ಅದರೊಡನೆ ಪದ್ಮಮಣಿ ಸೌಧಗಳ ಸಾಲು ಯಾವುದಕೆ ಹೋಲಿಪುದು ಈ ಸೌಧ ಸೌಂದರ್ಯ ? ಶಯನ ಸೌಖ್ಯವನೀವೆ ಶ್ರೀ ಹರಿಗೆ ನಾನು ಧವಳ ಕಾಂತಿಯ ನನ್ನ ಕಾಯದಲಿ ಪವಡಿಸಿಹ ಅರುಣರವಿವರ್ಣದ ಶ್ರೀ ಹರಿಯೆ ಉಪಮಾನ ॥ ೯ ॥ ಭವನಗಳ ಸೂರಿಗೆ ಫಲಕಗಳು ಕೂಡಿಹವು ಫಲಕಗಳ ತುದಿಯಲ್ಲಿ ಸ್ಫಟಿಕ ಮಣಿಗಳ ಕಾಂತಿ ಮೇಲು ಹೊದಿಕೆಯ ತುಂಬ ಇಂದ್ರನೀಲದ ಮುಸುಕು ಈ ಎರಡು ರಾಗಗಳ ಭವ್ಯ ಸಮ್ಮಿಲನವದು ಶುಭ್ರ ಗಂಗೆಯ ಜೊತೆಗೆ ಯಮುನೆ ಸೇರಿದ ಹಾಗೆ ಭವ್ಯತೆಯ ಪ್ರತಿರೂಪ ಆ ಸುರಲೋಕ ನಗರಿ ॥ ೧೦ ॥ ವೈಕುಂಠ ವಾಸಿಗಳು ಭ್ರಮೆ ಇಲ್ಲದವರೆ ? ಅಂತಹ ನಿಯಮಗಳು ಎಲ್ಲಾದರಿದೆಯೆ ? ಹಾಗಾದರಿಲ್ಲೊಂದು ಸೋಜಿಗವು ಇಹುದು ವೈಕುಂಠ ಲೋಕದಲಿ ಮನೆಗಳ ಸಾಲಿನಲಿ ಪಕ್ಷಿಗೃಹಗಳಲಿ ಬೊಂಬೆಗಳ ಗಡಣ ಈ ಗಡಣ ನಿಜವೆಂದೇ ಭ್ರಮಿಸುವಂತಾಗಿತ್ತು ॥ ೧೧ ॥ "ಆ ಪುರದ ಮನೆಮನೆಯೂ ಭವ್ಯತೆಯ ಬೀಡು ತುಲೋಪಗತವಾದ ಚಿತ್ರ ಸುವಿತಾನಗಳ ಅಡಿಯಲ್ಲಿ ಜೋಲುತಿಹ ಮಣಿರತ್ನ ಮಾಲೆಗಳು ಮನೆಯ ಒಳ ಹೊರಗೆಲ್ಲ ತುಂಬಿ ತುಳುಕುತಲಿಹುದು ಮಣಿಕಾಂತಿ ಪ್ರಖರತೆಯು ಹೊರಚೆಲ್ಲಿ ಹರಡಿಹುದು ಎಂಬ ವಿಭ್ರಮೆ ಎಲ್ಲ ನೋಟಕರಿಗಹುದು" ॥ ೧೨ ॥ "ಶ್ರೀ ಹರಿಯ ನಗರಿ ಇದು ಭವ್ಯತೆಯ ಬೀಡು ಸಕಲ ವಸ್ತುಗಳಲ್ಲಿ ಸ್ವರ್ಣ ಮಣಿ ಮಾಲೆಯಲಿ ಸನ್ನಿಹಿತಳಾಗಿಹಳು ಶ್ರೀ ರಮಾದೇವಿ ಅಳೆಯಲಾಗದು ಇದನು ಮನುಜರ ಮಾನದಂಡದಿಂದ ಅತಿಶಯೋಕ್ತಿಯ ನುಡಿವ ಕವಿವರ್ಯರೂ ಕೂಡ ಸೋಲುವರು ಬಣ್ಣಿಸಲು ಇಂಥ ವೈಭವವ" ॥ ೧೩ ॥ "'ಜನನಿಬಿಡವಾಗಿಹುದು ಮುಕುತರಿಂದೀ ನಗರಿ ಬ್ರಹ್ಮದೇವರು ಪ್ರಮುಖ ಈ ಮಂದಿಯಲ್ಲಿ ಅತಿ ಪೂರ್ವ ಕಾಲದಿಂ ಬರುತಿಹರು ಜನರಿಲ್ಲಿ ಆದರೂ ಕಿಂಚಿತ್ತು ಜನರ ದಟ್ಟಣೆ ಇಲ್ಲ ಎಲ್ಲೆಲ್ಲೂ ವಿಸ್ತಾರ ಬಯಲು ಪ್ರದೇಶಗಳು ಶ್ರೀ ಹರಿಯ ಮಹಿಮೆಯನು ಏನೆಂದು ಬಣ್ಣಿಪುದು ?" ॥ ೧೪ ॥ "ಹಲವಾರು ದಿವಿನಾದ ಮಂದಿರಗಳುಂಟಲ್ಲಿ ಒಂದೊಂದು ಮಂದಿರವೂ ಅಷ್ಟಷ್ಟು ಶ್ರೇಷ್ಠ ದೇವಮಂದಿರಗಳ ನಿವಹಗಳ ನಡುವೆ ಸಕಲ ಭುವನದ ಒಡೆಯ ಶ್ರೀ ಹರಿಯ ಮಂದಿರ ಮೂರು ಲೋಕದ ಎಲ್ಲ ಅದ್ಭುತವ ಮೀರಿದುದು ನಕ್ಷತ್ರ ಪುಂಜದಲಿ ಚಂದ್ರ ಮಂಡಲದಂತೆ ॥ ೧೫ ॥ ಶ್ರೀ ರಮಾದೇವಿಯು ಭಗವಂತನನ್ನು ಸೇವಿಸುವ ಪರಿ "ಶ್ರೀ ಹರಿಯ ಮಂದಿರವು ರಮ್ಯ ರಮಣೀಯ ಗೃಹಕೃತ್ಯ ನಿಪುಣೆ, ಶ್ರೀ ರಮೆಯು ಮನೆಯೊಡತಿ ಶತಕೋಟಿ ಕಿಂಕರರು ಈಕೆಯ ಅನುಚರರು ಆದರೂ ಮನೆಗೆಲಸ ತಾನೆ ಮಾಡುವಳೀಕೆ ಸಾನುರಾಗದಿ ಹರಿಯ ಸೇವೆಯನು ಮಾಳ್ಪಳು ಇಂತಿರಲು ಆ ಮನೆಯ ಹೇಗೆ ಬಣ್ಣಿಪುದು ?" ॥ ೧೬ ॥ "ಹರಿಯು ಸರ್ವೋತ್ತಮನು ಸಕಲ ಗುಣ ಪೂರ್ಣನು ಕಮನೀಯನವನು ಕಮಲೆಯ ಪತಿಯು ಕಮಲಲೋಚನನವನು ಕಮಲಮಾಮಲನು ಶ್ರೀ ಹರಿಯು ಸ್ವರತನು; ಮೈಥುನ ವಿರಕ್ತನು ಕೋಮಲಾಂಗದ ಆದಿಶೇಷನಲಿ ಪವಡಿಸಿಹ ರಮಿಸುವನು ಆಗಾಗ ರಮೆಯ ಕೂಡೆ ॥ ೧೭ ॥ ಶ್ರೀ ಹರಿಯ ಅನಂತ ಗುಣಪೂರ್ಣತ್ವ ''ಶತದಶಕ ಸೂರ್ಯರಿಗೆ ಸಮನು ಶ್ರೀ ಹರಿಯು ಕನಕ ಪೀತಾಂಬರವ ಧರಿಸಿ ಮೆರೆದಿಹನು ನವರತ್ನ ಖಚಿತದ ಆಭರಣ ಭೂಷಿತನು ಮೆಲುನಗೆಯ ಬೀರುವ ಚಂದ್ರಬಿಂಬದ ಮೊಗವು ಪುಂಡರೀಕಾಕ್ಷನವ, ಶ್ರೀ ಚಕ್ರಪಾಣಿ ಅನುದಿನವು ಆತನನು ಸ್ಮರಿಸಬೇಕು ॥ ೧೮ ॥ ಶ್ರೀ ಹರಿಯು ಸಕಲ ಗುಣ ಪರಿಪೂರ್ಣನಾಗಿಹನು ಅವುಗಳನು ಎಣಿಪುದಕೆ ಶ್ರೀ ರಮೆಗೂ ಆಗದು ಆಗದದು ನಾಲ್ಮೊಗದ ಬ್ರಹ್ಮದೇವನಿಗೂ ಸಾವಿರದ ಮೊಗವುಳ್ಳ ನಮ್ಮಿಂದಲೂ ಆಗದು ರುದ್ರಾದಿಗಳು ಕೆಲವು ಗುಣಗಳನು ಬಣ್ಣಿಪರು ಅದಕಿಂತ ಮಿಗಿಲಾಗಿ ಬಣ್ಣಿಸಲು ಬಲ್ಲೆವು ॥ ೧೯ ॥ ವೈಕುಂಠಲೋಕದಲಿ ಅಗಣಿತರು ಬ್ರಹ್ಮರು ಗರುಡರೂ ಶೇಷರೂ ಇಂದ್ರರೂ ಅಗಣಿತರು ಅವರೆಲ್ಲರೂ ತಮ್ಮ ಸಹಧರ್ಮಿಣಿಯರೊಡನೆ ಶ್ರೀ ಹರಿಯ ದರುಶನದ ಲಾಭವನು ಪಡೆಯುತ್ತ ಶ್ರೀ ಹರಿಯ ಧ್ಯಾನದ ಸವಿಯನ್ನು ಸವಿಯುತ್ತ ಆನಂದ ರಸವನ್ನು ಅನುಭವಿಸುತಿಹರು ॥ ೨೦ ॥ ಮುಕ್ತ ವರ್ಣನೆ ಆ ಪುರದಿ ಶ್ರೀ ಹರಿಯ ಸಾಮೀಪ್ಯ ಪಡೆದವರು ನಾಲ್ಕು ತೋಳುಗಳಿಂದ ವಿಜೃಂಭಿಸಿಹರು ಅವರ ಕಣ್ಣುಗಳೆಲ್ಲ ಕಮಲದಂತಿಹವು ವೇಷಭೂಷಣವೆಲ್ಲ ಅತ್ಯಂತ ಮೋಹಕವು ಉದಯರವಿಯಂದದ ಕಾಂತಿಯಲಿ ಬೆಳಗುತಿಹ ಮೇಘವರ್ಣದ ಇವರು ವಿಹರಿಪರು ಮುದದಿಂದ ॥ ೨೧ ॥ ಸಾಲೋಕ್ಯ ಸಾರೂಪ್ಯ ಸಾಮೀಪ್ಯ ಸಾಯುಜ್ಯ ಎಂಬಂಥ ನಾಲ್ಕು ವಿಧಿ ಮುಕ್ತರೂಪಗಳುಂಟು ಭಗವಂತ ಸಾಮೀಪ್ಯ ಪಡೆದವರು ಮಾತ್ರ ಅನುಪಮಾನಂದವನು ಪಡೆವರೆಂಬುದು ಅಲ್ಲ ವೈಕುಂಠ ಲೋಕವನು ಸೇರುವ ಸಕಲರಿಗೂ ಅಪರಿಮಿತ ಆನಂದ ಲಾಭ ಲಭಿಸುವುದು ॥ ೨೨ ॥ ಮರ್ತ್ಯಲೋಕದ ಬಾಧೆ ಯಾವುದೂ ಇಲ್ಲಿಲ್ಲ ಹುಟ್ಟು ಸಾವುಗಳಿಲ್ಲ ಮುಪ್ಪಿನ ಭಯವಿಲ್ಲ ಮೂರು ವಿಧ ತಾಪಗಳ ಸುಳಿವು ಇಲ್ಲಿಲ್ಲ ಮಾನವರ ಬಾಧಿಸುವ ಕಾಮ ಕ್ರೋಧಾದಿಗಳು ಸತ್ವ, ರಜ, ತಮಸೆಂಬ ಮೂಲ ಗುಣರೂಪಗಳು ಎಲ್ಲವನು ತೊರೆದಿಹರು ವೈಕುಂಠವಾಸಿಗಳು ॥ ೨೩ ॥ ಅನಂತ ಸಖರಾದ ವೈಕುಂಠವಾಸಿಗಳು ಸತತವೂ ಸುಖವನ್ನು ಅನುಭವಿಸುವವರು ತಾರತಮ್ಯವ ನೆನೆದು ಅದರಂತೆ ನಡೆವವರು ಗುರುಹಿರಿಯರೆಲ್ಲರಲಿ ಭಕ್ತಿಯನು ತೋರುವರು ಒಡನಾಡಿಗಳ ಸಂಗ ಅತಿಪ್ರೇಮ ತೋರುವರು ಆ ಸಕಲ ಮುಕ್ತರೂ ಸತ್ಯ ಸಂತುಷ್ಟರು ॥ ೨೪ ॥ ಸುರಲೋಕ ವಾಸಿಗಳು ಸೌಂದರ್ಯ ಖನಿಗಳು ಉದಯ ಚಂದ್ರನ ತೆರದಿ ಕೆಂಪು ಬಣ್ಣವ ಹೊಂದಿ ಹರಿಯ ಚಂದನವೆಂಬ ಅಂಗ ಲೇಪನದಿಂದ ಮಧುರ ಪರಿಮಳವನ್ನು ಸೂಸುತ್ತಲಿಹರು ಚಾಮರವ ಬೀಸುತಿಹ ಅನುಚರರ ಒಡಗೂಡಿ ನಿತ್ಯ ತಾರುಣ್ಯದಲಿ ವಿಹರಿಸುತ್ತಿಹರು ॥ ೨೫ ॥ ನರ್ತನ ವಿಲಾಸದಲಿ ಕಂಗಳನು ತಣಿಸುತ್ತ ಮೃದು ಗೀತೆ ವಾದ್ಯಗಳ ಮಾಧುರ್ಯ ಸವಿಯುತ್ತ ಸಗ್ಗದ ಸುಖದಲ್ಲಿ ಮೈಮರೆಯುತಿಹರು ಏರು ಜವ್ವನದಲ್ಲಿ ಬೀಗುತ್ತ ಬಾಗುತ್ತ ಕಮಲನೇತ್ರೆಯರಾದ ರಮಣಿಯರ ರಮಿಸುತ್ತ ವೈಕುಂಠವಾಸಿಗಳು ವೈಭವವ ಸವಿಯುವರು ॥ ೨೬ ॥ ಚೆಲುವಾದ ಹರಿಣಿಗಳ ಕಣ್ಣುಗಳ ತರುಣಿಯರು ಉದ್ಯಾನವನದತ್ತ ಹೊರಟ ಪತಿಯರ ಹಿಂದೆ ಹೊರಡುವರು ಬಿಂಬದ ಪ್ರತಿಬಿಂಬದಂತೆ ಚಂದ್ರಮಂಡಲದಿಂದ ಹೊರಟ ಕಿರಣಗಳಂತೆ ನಿರ್ಮಲ ವಿಮಾನಗಳ ವಲಯಗಳ ಮಧ್ಯದಲಿ ಹೊರಡುವರು ಮೆಲಮೆಲನೆ ಈ ತರುಣಿ ವೃಂದ ॥ ೨೭ ॥ ಹಾರುಯಂತ್ರಗಳಿಂದ ಕೆಳಗಿಳಿವ ತರುಣಿಯರು ಸೌಂದರ್ಯ ರಾಶಿಯಲಿ ಸರಿಸಾಟಿ ಇರದವರು ಪದ್ಮರಾಗದ ಮಣಿಯ ಕೆಂಪು ಬಣ್ಣದ ಕೆಲರು ಮುತ್ತಮಾಲೆಯ ತೆರದ ಧವಳ ರಾಗದ ಕೆಲರು ಇಂದ್ರನೀಲಗಳಂತೆ ಕೃಷ್ಣವರ್ಣದ ಕೆಲರು ಆಭರಣಭೂಷಿತರು ಸುಂದರಿಯರೆಲ್ಲರೂ ॥ ೨೮ ॥ ಅಳಿಸಲಾಗದ ಕಾಂತಿ ಅವರ ಮೈ ಕಾಂತಿ ಅತಿ ಸೂಕ್ಷ್ಮ ಅಂಬರವ ಧರಿಸಿಹರು ಅವರು ಗಿಣಿಗಳುಲಿದಂತಿಹುದು ಅವರ ಆ ವಾಣಿ ಸ್ತನದ ಜೋಡಿಗಳಂತೂ ಶೋಭಾಯಮಾನ ತರಳೆಯರ ಸೌಂದರ್ಯವೆಂತು ಬಣ್ಣಿಪುದು ? ಜಲಧರಾವಲಯದ ಮೇಘಪಕ್ಷಿಗಳಂತಿಹರು ॥ ೨೯ ॥ ಸುರಲೋಕ ರಮಣಿಯರ ಪಾದ ಪಲ್ಲವದಲ್ಲಿ ಪದ್ಮ ಮಣಿಯಂತಿಹುದು ಅರುಣ ನಖ ಪಂಕ್ತಿಗಳು ಅವರು ನಡೆಯುವ ನೆಲದ ಬಣ್ಣದ ಜೊತೆಗೂಡಿ ಉಗುರ ಬಣ್ಣವು ಬೆರೆತು ಎಲ್ಲವೂ ಅಸ್ಪಷ್ಟ! ಬಳಿಕ ಭೂಮಿಯ ಬಣ್ಣ ಸ್ಫಟಿಕ ವರ್ಣವ ತಳೆದು ತರುಣಿಯರ ನಖ ಕಾಂತಿ ಸುಸ್ಪಷ್ಟವಾಯ್ತು ॥ ೩೦ ॥ ಸುರಲೋಕ ತರುಣಿಯರ ಅಂಗಾಂಗ ಮಾಧುರ್ಯ ನೋಡಿ ಸವಿಯಲು ಬೇಕು : ಕೇಳಿ ತಿಳಿಯುವುದಲ್ಲ ಹರಿಣಾಕ್ಷಿ ಎಂಬುವ ವರ್ಣನೆಗೆ ನಿಲುಕಿರುವ ಆ ರಮಣಿಯರ ಜಘನಗಳು ಅತ್ಯಂತ ರಮಣೀಯ ಆ ಜಘನ ಮಂಡಲಕೆ ತೆರೆಯೆನಿಪ ವಸ್ತ್ರಗಳು ನಿಶ್ಚಿತದಿ ಮನ್ಮಥನ ವಿಜಯ ಪತಾಕೆಗಳು ! ॥ ೩೧ ॥ ತರುಣಿಯರ ಕೈಗಳವು ಚೈತ್ರಪಲ್ಲವದಂತೆ ಬಂಗಾರ ಬಳೆಯಿಂದ ಸಿಂಗಾರವಾಗಿಹವು ಬಳೆಯ ಕಿಂಕಿಣಿನಾದ ಕೇಳಲತಿ ಮಧುರ ಅತಿ ಚೂಷ್ಮ, ತರುಣಿಯರ ಕೋಮಲೋದರಗಳು ನವಿರಾಗಿ ಹರಡಿಹವು ಸೂಕ್ಷ್ಮ ರೋಮಗಳು ತ್ರಿವಲಿ ಎಂಬುವ ಸೂಕ್ಷ್ಮ ರೇಖೆಗಳು ಇಹವಲ್ಲಿ ॥ ೩೩ ॥ ತರುಣಿಯರ ಕುಚಗಳು ಕಂಗಳಿಗೆ ಹಬ್ಬ ರಸಭರಿತ ಕುಂಭಗಳು ಆ ಎರಡು ಕುಚಗಳು ಅವುಗಳಲ್ಲಿನ ಕಾಂತಿ ಅಮೃತ ಜಲ ಸೇಚನ ಕೊರಳಲ್ಲಿ ಇಳಿದಿರುವ ಧವಳ ಮಣಿ ಮಾಲೆಗಳು ಎದೆಯಲ್ಲಿ ಲಾವಣ್ಯ ಲಾಸ್ಯವಾಡುವುವು ಕಬ್ಬಿನಂತಿಹ ನೋಟ ಕಬ್ಬಿಗಗೆ ಕಬ್ಬ ॥ ೩೪ ॥ ಬಲದ ಕೈಯಲಿ ಕಮಲ ಪುಷ್ಪವನು ಹಿಡಿದಿಹರು ಎಡದ ಕೈಯನು ಸಖಿಯ ಭುಜದ ಮೇಲಿರಿಸಿಹರು ಕುಂಡಲದಿ ಶೋಭಿಸುವ ಆ ಎರಡು ಕೆನ್ನೆಗಳು ಚೆಲು ಕಾಂತಿ ಸೂಸಿರುವ ಮಂದಹಾಸದ ಮೊಗವು ಸ್ವಾಗತವ ಬಯಸುತಿಹ ಕಣ್ಣುಗಳ ಕುಡಿನೋಟ ಶೃಂಗಾರ ರಸಧಾರೆ ಈ ಚದುರೆಯರ ಮೋರೆ ॥ ೩೫ ॥ ಹಾರು ಯಂತ್ರವನಿಳಿದು ಲಗುಬಗೆಯ ನಡಿಗೆಯಲಿ ಬೆಡಗು ಬಿನ್ನಾಣಗಳ ಸುರಲೋಕ ಲಲನೆಯರು ಒಡ್ಯಾಣ ನೂಪುರದ ಝಣ ಝಣತ್ಕಾರದಲಿ ಬಾಗಿ ಬಳುಕುತ ತಮ್ಮ ಅಡಿಗಳನು ಇಡುತಿರಲು ಅವರ ದೇಹದ ಸೊಬಗ ಸವಿಯಲೋ ಎಂಬಂತೆ ಮುನ್ನಡೆದ ತರುಣರು ಹಿನ್ನೋಟ ಬೀರಿದರು ॥ ೩೬ ॥ . ತೀವ್ರಯೌವನ ಭರಿತ ಕುಚಭಾರದಿಂದಾಗಿ ಬಾಗುತ್ತ ಬಳುಕುತ್ತ ಬಸವಳಿದು ನಡೆಯುತ್ತ ಪ್ರಿಯತಮೆಯ ಬರವನ್ನು ಕಾತುರದಿ ಕಾಯುತಿಹ ಪ್ರಿಯತಮರ ಕೂಟವನು ಸಂಧಿಸಿದರವರು ಬಳಿಕವರ ಆಸರೆಯ ಬಲದಿಂದ ತರುಣಿಯರು ಪರಮ ಉಪವನದೊಳಗೆ ಮೆಲಮೆಲನೆ ತೆರಳಿದರು ॥ ೩೬ ॥ ಸೃಷ್ಟಿಯಲಿ ತಂಗಾಳಿ ಆಪ್ಯಾಯಮಾನ ಅರಳಿರುವ ಹೂವುಗಳ ಅತಿ ಭಾರದಿಂದಾಗಿ ತೂಗಿ ಬಳುಕುವ ಎಲ್ಲ ಸ್ವರ್ಣ ಮಣಿ ವೃಕ್ಷಗಳ ಬಾಚಿ ಆಲಂಗಿಸುವ ಸಿಂಧುಸಖ ಮಾರುತನು ಯಾರ ಸುಖವನು ತಾನೆ ಹೆಚ್ಚಿಸಲಸಮರ್ಥ ? ಮಾರುತನ ಮಹಿಮೆಯದು ವರ್ಣನಾತೀತ ॥ ೩೭ ॥ ಸ್ವರ್ಗದಲ್ಲಿಹುದೊಂದು ರಮ್ಯ ಉದ್ಯಾನ ಔಪಚಾರಿಕವಾಗಿ ನಂದನವು ಎನಿಸಿಹುದು ಆದರಿದು ವಾಸ್ತವದಿ ನಂದನವು ಅಲ್ಲ ನಿಯಮೇನ ಎಲ್ಲರಿಗೂ ಸುಖವ ನೀಡುವುದಿಲ್ಲ ಶ್ರೀ ಹರಿಯ ವೈಕುಂಠ ಲೋಕದೊಳು ಇರುವ ಆ ವನವೇ ನಿಜವಾದ ನಂದನೋದ್ಯಾನ ॥ ೩೮ ॥ ಮುಕ್ತ ಭೋಗ ವರ್ಣನೆ ವೈಕುಂಠ ಲೋಕದ ಈ ಉದ್ಯಾನದಲ್ಲಿ ಹಲವಾರು ಶ್ರೇಷ್ಠತಮ ವೃಕ್ಷಗಳು ಇಹವು ವರ ಪಾರಿಭದ್ರಕವು, ವ್ರಜ ಪಾರಿಜಾತವು ವರ ಕಲ್ಪವೃಕ್ಷವು, ಸಂತಾನ, ಚಂದನ ಎಂಬಂಥ ಐದು ವಿಧ ದೇವವೃಕ್ಷಗಳಿಹುವು ಸಾರ್ವಕಾಲಿಕವಾಗಿ ಆರು ಋತುಗಳು ಇಹವು ॥ ೩೯ ॥ ಅರಳಿರುವ ಮಾಧವೀ ಕುಸುಮ ಲತೆಗಳ ಕಂಪು ಹೊಚ್ಚ ಹೊಸ ಸಂಪಿಗೆ, ಇತರ ಹೂಗಳ ಪೆಂಪು ಹೂಗಳನು ಚುಂಬಿಸುವ ದುಂಬಿಗಳ ಇಂಪು ಮಧುಮಾಸ ಮಾಧುರ್ಯ ಮೇಳವಿಸಿ ನಿಂದಿಹವು ಮಧುಸೂದನ ಪ್ರಿಯರ ಮನವ ಮುದಗೊಳಿಸಹುದು ಆ ಉಪವನದ ಹಿರಿಮೆಯನು ಎಂತು ಬಣ್ಣಿಪುದು ? ॥ ೪೦ ॥ ಗ್ರೀಷ್ಮ ಋತುವಿನ ಇಂಥ ಮಧುರ ಪರಿಸರದಲ್ಲಿ ಪ್ರಿಯತಮನು ಮಲ್ಲಿಗೆಯ ಹಾರವೊಂದನು ತಂದು ಪ್ರಣಯಿನಿಯ ತುರುಬಿನಲಿ ಪ್ರೇಮದಲಿ ಮುಡಿಸುತ್ತ ಪ್ರೇಮ ಸಲ್ಲಾಪಗಳ ಪಿಸುಮಾತ ಉಸುರುತ್ತ ರಸಭರಿತ ಸ್ತನಗಳನು ಹಿಡಿದು ಮುದ್ದಾಡುತ್ತ ಕಾಮಕೇಳಿಯ ದಿವ್ಯ ಲೋಕದಲಿ ವಿಹರಿಸಿದನು ॥ ೪೧ ॥ ವರ್ಷಋತುವಿನ ಹರ್ಷ, ವರ್ಷಧಾರೆಯ ತರಹ ಎಲ್ಲೆಲ್ಲೂ ನವಿಲುಗಳ ರಮಣೀಯ ಲಾಸ್ಯ ಸಂಗೀತ, ನೃತ್ಯಗಳ ಅಪರೂಪ ದೃಶ್ಯ ಗರಿಗೆದರಿ ಹಾಡುವ ನವಿಲುಗಳ ಗರಿ ಶಿಖೆಯ ನೂರಾರು ನೇತ್ರಗಳು ವಿಜೃಂಭಿಸುತ್ತಿಹವು ಸಾಸಿರದ ಕಣ್ಣುಗಳ ಇಂದ್ರನಾ ಪರಿಯಲ್ಲಿ ॥ ೪೨ ॥ ಚದುರೆಯರ ಮಾದಕತೆ ಶರತ್ಕಾಲದಂತೆ ಅರಳಿರುವ ನೈದಿಲೆಯ ಹೂವಿನಂತಹ ಕಣ್ಣು ! ಬಿರಿದ ತಾವರೆಯಂಥ ಮಂದಹಾಸದ ಮೊಗವು ಅರಗಿಣಿಯ ತೆರದಲ್ಲಿ ಉಲಿವ ಆ ಇನಿದನಿ ಹಂಸಿಣಿಯ ನಾಚಿಸುವ ಕಾಲ್ಬಳೆಯ ಕಿಂಕಿಣಿ ಇಂಥ ರಮ್ಯತೆಯಲ್ಲಿ ಕ್ರೀಡಿಸುವ ಮುಕ್ತರು ॥ ೪೩ ॥ ಶಿಶಿರನ ಹಿರಿಮೆಯನು ಅರಿಯದವರಾರು ? ಸ್ಫಟಿಕಮಯ ಪರ್ವತಕೆ ಮುದವ ನೀಡುವನವನು ಹಿಮಭರಿತ ಹೇಮಂತನಾಪ್ತ ಸಖನಿವನು ಫಲಿನಿ ಕುಲ ಕುಸುಮಗಳಿಗಾಸರೆಯ ನೀಡುವನು ಅರಳಿರುವ ನವ ಕುಂದ ಪುಷ್ಪಗಳ ಕಾಂತಿಯಲಿ ಶಿಶಿರ ನಗುತಿಹನೆಂಬ ಕಲ್ಪನೆಯು ಮೂಡಿಹುದು ॥ ೪೪ ॥ ವೈಕುಂಠ ಲೋಕವದು ಆರು ಋತುಗಳ ತವರು ಹಿಮ, ಶೀತ ವರ್ಷಗಳ ದೋಷ ವಿಲ್ಲವು ಇವಕೆ ಮುಕ್ತ ಜನರಾರಿಗೂ ಬಾಧೆ ಇವುಗಳದಿರದು ಎಲ್ಲ ಋತುಗಳೂ ಇಲ್ಲಿ ಆಪ್ಯಾಯಮಾನ ಹಿತಕಾರಿಯಾಗಿಹವು ವೈಕುಂಠ ಜನತೆಗೆ ಋತುಗಣವೂ ನಿರ್ದೋಷವೆಂಬುದೇ ಸೋಜಿಗವು ॥ ೪೫ ॥ ವೈಕುಂಠ ವಾಸಿಗಳು ಸಹಜದಲಿ ಮುಕ್ತರು ನಿರ್ದಿಷ್ಟ ಕರ್ಮಗಳ ಬಂಧನವು ಅಲ್ಲಿಲ್ಲ ಕರ್ಮದಾಚರಣೆಯಲಿ ಅವರು ಸ್ವತಂತ್ರರು ಆದರೂ ಕರ್ಮದಲಿ ಅವರೆಲ್ಲ ತೊಡಗುವರು ಫಲಪುಷ್ಪಮಾಲೆಗಳ ಶ್ರೀ ಹರಿಗೆ ಅರ್ಪಿಪರು ಸಕಲ ಸಜ್ಜನ ಪ್ರಕೃತಿ ಸರ್ವದಾ ಒಂದಿಹುದು ॥ ೪೬ ॥ ಪ್ರಮದೆಯರು ಆನಂದದತಿರೇಕದಿಂದ ಶೃಂಗಾರವನದೊಳಗೆ ಸ್ಪಚ್ಛಂದ ವಿಹರಿಸುತ ಪ್ರಿಯತಮರ ಜೊತೆಯಲ್ಲಿ ಸತತವೂ ಸುಖಿಸುತ್ತ ಗಾನದಸುಧೆಯಮೃತವ ಎಲ್ಲೆಲ್ಲೂ ಹಂಚುತ್ತ ಮಧುವೈರಿ ಚರಿತೆಯನು, ಮಧುರ ಸವಿಗೀತೆಯನು ಮಧುರವಾಣಿಯಲವರು ಸತತ ಪಾಡುತಲಿಹರು ॥ ೪೭ ॥ ಲಲನೆಯರು ತಮ್ಮಯ ಪತಿಗಳನು ಕುಳ್ಳಿರಿಸಿ ನರ್ತನವಗೈಯುವರು ಅವರ ಎದುರಿನಲಿ ಹೂವುಗಳ ಬಿಡಿಸುವರು ಕೆಲವು ಲಲನೆಯರು ಹಾರಗಳ ಪೋಣಿಸುತ ನಲಿಯುವರು ಕೆಲರು ತಮ್ಮ ಪತಿಗಳ ಸುಖವೆ ತಮ್ಮ ಸುಖವೆಂದೆಣಿಸಿ ರಮಣಿಯರು ರಮಿಸುವರು ಅವರೆಲ್ಲರನ್ನು ॥ ೪೮ ॥ ಇಂತು, ಆ ಉಪವನದಿ ಅತಿಸುಖದಿ ವಿಹರಿಸುತ ಪೂರ್ಣ ಸಂತೃಪ್ತಿಯನು ಪಡೆದ ಆ ತರುಣರು ಲತೆಯ ಮಂದಿರಗಳಲ್ಲಿ ಲಲನೆಯರ ಜೊತೆಗೂಡಿ ತುಂಬು ಮೊಲೆ ಭಾರದಲಿ ಬಾಗಿದ ಅವರನ್ನು ತಬ್ಬಿಟ್ಟು ಮುದ್ದಾಡಿ ವದನಾರವಿಂದದ ಮಧುವ ಹೀರುತ್ತ ರತಿಕ್ರೀಡೆ ನಡೆಸುವರು ಮನ್ಮಥನ ತೆರದಿ ॥ ೪೯ ॥ ರಸಿಕತೆಯ ಭೋಗದಲಿ ನುರಿತ ನಾರಿಯರವರು ನೂಪುರದ ನಾದವನು ಅಡಿಗಡಿಗೆ ಸೂಸುತ್ತ ಸಾರಸಿಕ ಹಕ್ಕಿಗಳ ದನಿಯ ಅನುಕರಿಸುತ್ತ ರಸಿಕ ಪತಿಯರ ಕೂಡಿ ಬಿನ್ನಾಣಗೈಯುತ್ತ ಅಮೃತಕೆ ಸಮನಿರುವ ನೀರ ಕೊಳದಲಿ ಇಳಿದು ಜಲಮಡ್ಡು ಕೋತ್ಸವದಿ ವಿಹರಿಪರು ತನ್ಮಯದಿ ॥ ೫೦ ॥ ನೀರಿನೊಳು ಬಗೆಬಗೆಯ ಲೀಲಾವಿನೋದದಲಿ ಮೈಮನವ ತಣಿಸುತ್ತ ಮೈಮರೆತ ನೀರೆಯರು ವಿದ್ರುಮದಿ ಶೋಭಿಸುವ ತಟಗಳಿಗೆ ತೆರಳಿ ಸಖಿಯರ ಕೈಯಿಂದ ಸುರಭಿಯನು ಸ್ವೀಕರಿಸಿ ಅಂಗರಾಗವನೆಲ್ಲಅಂಗ ಕೆಲ್ಲಕೂ ಪೂಸಿ ಮೈಯ ಪರಿಮಳದಿಂದ ವಿಜೃಂಭಿಸಿದರು ॥ ೫೧ ॥ ಆ ತರಳೆಯರ ಕಣ್ಣುಗಳು ತಾವರೆಯ ಹೋಲುವುವು ಜಘನಗಳನಾವರಿಸಿ ಗೌಪ್ಯವನು ಸೂಚ್ಯವಾಗಿರಿಸಿರುವ ವಸ್ತ್ರಗಳು ಕರ್ಣ ಕುಂಡಲ, ಕಡಗ ಮುಂತಾದ ಆಭರಣ ಸಮೃದ್ಧ ವಾಗಿರುವ ಕುಚದ ಕುಂಕುಮವು ಮುಡಿಗೆ ಹೂಮಾಲೆಗಳು, ಕಂಗಳಿಗೆ ಕಾಡಿಗೆ ಎಲ್ಲವೂ ಪೂರಕವು ಶೃಂಗಾರ ಸಾಧನಕೆ ॥ ೫೨ ॥ ಬಡನಡುವ ಸುಂದರಿಯರಾ ಚತುರ ಚದುರೆಯರು ಪ್ರಾಣಸಖರೊಡಗೂಡಿ ಸ್ವಗೃಹಕೆ ತೆರಳಿಹರು ರಜತ, ರತ್ನಗಳಿಂದ ಬೆಳಗಿ ಶೋಭಿಸುತಿರುವ ಮಧುಪಾನ ಪಾತ್ರೆಯಲಿ ಅಮೃತವ ತುಂಬಿ ಮರ್ತ್ಯರಿಗೆ ಎಂದೆಂದೂ ಲಭಿಸದ ಸವಿಯನ್ನು ಪ್ರಿಯತಮರ ಒಡಗೂಡಿ ಸವಿಯುತಿಹರು ॥ ೫೩ ॥ ಪ್ರತಿ ಹೆಜ್ಜೆ ಹೆಜ್ಜೆಗೂ ಲಜ್ಜೆಯನು ತೋರುತ್ತ ಗೆಜ್ಜೆಯ ಕಾಲ್ಗಳನು ನಸುನಾಚಿ ಮುಂದಿಡುತ ಪ್ರೇಮಾನುರಾಗದಲಿ ಕಾಯುತಿಹ ಪ್ರಿಯತಮನ ಮೆತ್ತನೆಯ ಹಾಸಿಗೆಯ ಮಣಿಖಚಿತ ಮಂಚವನು ಪತಿಯಿಂದ ಅತಿಯಾಗಿ ಹುರಿದುಂಬಿದವಳಾಗಿ ಮೆಲಮೆಲನೆ ಏರಿದಳು ಅತಿ ವಿನಯದಲ್ಲಿ ॥ ೫೪ ॥ ಪತಿಯೆದುರು ಕುಳಿತಿರುವ ಆ ಏರುಜವ್ವನೆಯು ಹೂವನ್ನು ಮುಡಿಯಲ್ಲಿ ಏರಿಸುವ ಸಲುವಾಗಿ ತನ್ನೆರಡು ಕೈಯನ್ನು ಮೇಲಕೇರಿಸುವಾಗ ಆಕೆಯ ಸ್ತನವೆರಡು ಭವ್ಯ ಶಿಖರಗಳಾಯ್ತು ಬಾಹುಮೂಲದ ರೇಖೆ ಸುಸ್ಪಷ್ಟ ಗೋಚರಿಸಿ ಪ್ರಿಯತಮನು ಆಕೆಯನ್ನು ತಬ್ಬಿ ಮುದ್ದಾಡಿದನು ॥ ೫೫ ॥ ರಮಣ ರಮಣೀ ಪ್ರಣಯ ಅತ್ಯಂತ ರಮಣೀಯ ರಮಣೀಯ ಉತ್ತುಂಗ ವರ್ತುಲದ ಸ್ತನವೆರಡು ರಮಣನ ವಕ್ಷಕ್ಕೆ ತಡೆಯೊಡ್ಡಿ ನಿಂದಿಹವು ತನ್ನೆರಡು ಬಲವಾದ ಬಾಹುಗಳ ಬಂಧನದಿ ರಮಣಿಯನು ಮುದ್ದಾಡಿ ಮುತ್ತ ಮಳೆ ಸುರಿಸುವನು ಯಾವ ರಮಣನು ತಾನೆ ಇಂಥ ಸುಖ ಸವಿಯ ? ॥ ೫೬ ॥ ಪ್ರಿಯತಮೆಯ ಮುಖ ಒಂದು ಅರಳಿರುವ ಹೂವಂತೆ ಮಂದಹಾಸವ ಬೀರಿ ನಳಿನಳಿಪ ಕೆನ್ನೆಗಳು ಝಗಝಗಿಸಿ ಹೊಳೆಯುವ ಮಣಿಯ ಕುಂಡಲವು ಮನವ ತಣಿಸುವ ಮಧುರ ಕುಡಿನೋಟಗಳು ಇಂಥ ಚತುರೆಯ ಮುಖವ, ಇಂಥ ಚದುರೆಯ ಸುಖವ ಬಹುಕಾಲ ಅನುಭವಿಸಿ, ಚುಂಬನದ ಮಳೆಗರೆದ ॥ ೫೭ ॥ ಪತ್ನಿಯ ತೋಳ್ತೆಕ್ಕೆ ಪ್ರಿಯತಮಗೆ ಹಿತವಾಯ್ತು ನಸುನಾಚಿ ಬಾಗಿದ ಪ್ರಿಯತಮೆಯ ಮುಖ ಚಂದ್ರ ಹಿಡಿದೆತ್ತಿ ಅತಿಯಾದ ಪ್ರೇಮಾನುರಾಗದಲಿ ಪ್ರಿಯತಮೆಯ ಅಧರ ರಸ ಹೀರುತ್ತ ಹೀರುತ್ತ ಪ್ರಿಯತಮನು ಮುಳುಗಿದನು ಪ್ರಣಯ ಸಾಗರದಲ್ಲಿ ಚುಂಬನವು ಎಡಬಿಡದೆ ಬಹುಕಾಲ ಸಾಗಿತ್ತು ॥ ೫೮ ॥ ಸುರತ ಸಂಭ್ರಮಕೀಗ ಪ್ರಿಯತಮನು ಅಣಿಯಾದ ಮೆಲಮೆಲನೆ ಕೈಯನ್ನು ಅವಳ ಸನಿಹಕೆ ತಂದು ವಸ್ತ್ರವನು ಸರಿಸುವ ಸನ್ನಾಹ ನಡೆಸಿದನು ಬೊಗಸೆಗಂಗಳ ತರುಣಿ ಅತಿ ಲಜ್ಜೆಯಿಂದ ಪ್ರಿಯಕರನ ಕೈಗಳನು ತಡೆದು ಹೊರಳಿದಳು ಪ್ರಿಯತಮನ ಕೈವೇಗ ಈಗ ಇಮ್ಮಡಿಯಾಯ್ತು ॥ ೫೯ ॥ ಸುರತ ಕ್ರೀಡೆಗಳಲ್ಲಿ ಅತಿ ನಿಪುಣೆ ಯುವತಿಯರು ರಭಸದಲಿ ಸ್ತನಗಳನು ಕೆಳಗೆ ವಾಲಿಸುತ ಮಣಿತವೇ ಮೊದಲಾದ ಅತಿ ದೃಷ್ಟ ಸುರತಗಳ ವಿಸ್ತರಿಸಿ ಅವುಗಳಲಿ ಕೌಶಲವ ತೋರಿಸುತ ಯುವತಿ ಸಂಘವು ತಮ್ಮ ಪತಿಗಳ ಸಂಗದಲಿ ಪರಮ ರತಿ ಸುಖವನ್ನು ಸವಿ ಸವಿದು ಮೆರೆಯುವರು ॥ ೬೦ ॥ ಸುರ ಲೋಕ ಲಲನೆಯರು ವೈಶಿಷ್ಟ್ಯ ಪೂರ್ಣರು ಇತರ ಲೋಕದೊಳಿರದ ಗುಣವು ಇವರಲಿ ಇಹುದು ಇವರ ಪತಿಯರು ಕೂಡ ಗುಣ ವಿಲಕ್ಷಣರು ತಮ್ಮ ರಮಿಸುವ ಪತಿಯ ಹುರಿದುಂಬಿಸುತ್ತ ರತಿಭೋಗ ಕ್ರೀಡೆಯಲಿ ಮೈಮರೆತು ಸುಖಿಸುವರು ಇತರ ಲೋಕದೊಳಿರದು ಈ ದಿವ್ಯ ಮೈಥುನ ॥ ೬೧ ॥ ಸುರಲೋಕದಲ್ಲಿನ ಆ ಸುರತ ಕ್ರೀಡೆಯು ಎಲ್ಲ ದೋಷಗಳಿಂದ ಮುಕ್ತವಾಗಿಹುದು ಆ ದಿವ್ಯ ಕ್ರೀಡೆಯಲಿ ಶ್ರಮವೆಂಬುದಿಲ್ಲ ಪತಿ ಪತ್ನಿಗಳ ನಡುವೆ ವಿರಹ ವೇದನೆ ಇಲ್ಲ ಸವತಿಗಳ ಸಲುವಾಗಿ ಕಲಹಗಳು ಇಲ್ಲಿಲ್ಲ ಎಲ್ಲವೂ ನಿರ್ದುಷ್ಟ ಎಲ್ಲವೂ ನಿರ್ದೋಷ ॥ ೬೨ ॥ ಶ್ರೀ ಹರಿಯ ಲೋಕವದು ವೈಕುಂಠ ಲೋಕ ಎಲ್ಲೆಲ್ಲೂ ಹರಡಿಹವು ಪರಿಮಳ ಸುಗಂಧ ಸತಿಪತಿಯ ದೇಹಗಳು ಜ್ಞಾನ, ಸುಖ ರೂಪಗಳು ಆ ಮಿಥುನ ಒಡಲುಗಳ ಒಳ ಹೊರಗು ಕೂಡ ಸೂಸುವುದು ಪರಿಮಳವು ಅತಿ ಸುವಾಸನೆಯು ಮುನಿಗಳಿಂದಲೂ ಮಾನ್ಯ ಇಂಥ ಸುರತವು ॥ ೬೩ ॥ ಮುಕ್ತಲೋಕಗತಿ ಭಗವದ್ರೂಪ ವರ್ಣನೆ ವೈಕುಂಠ ಲೋಕದಲಿ ಶ್ರೀ ಹರಿಯೆ ಅಧಿಪತಿಯು ಇಂದಿರಾಪತಿಯವನು, ಇಂದೀವರಾಕ್ಷ ರಮಣೀಯ ರೂಪನು ಮನಸೆಳೆವ ಮೂರ್ತಿಯು ಇತರ ಲೋಕದ ಜನಕೆ ಸರ್ವದಾ ಕಾಣನು ಮುಕ್ತ ಜನರಿಗೆ ಮಾತ್ರ ಎಂದಿಗೂ ಗೋಚರನು ಕೇಳಿರೀತನ ಮಹಿಮೆ ಭಕ್ತಿ ಆದರದಿಂದ ॥ ೬೪ ॥ ಪರಮಾತ್ಮನ ರೂಪ ಅತಿ ರಮ್ಯ ವಹುದು ಮಣಿ ರಾಜಿ ರಾಜಿತವು ಆ ಮಹಾ ಮುಕುಟವು ಶಿತಿಕಾಂತಿ ಕುಂತಳವು ಸಾವಿರ ಸಂಖ್ಯೆಯಲಿ ಅರ್ಧ ಚಂದ್ರಾಕೃತಿಯ ತಿಲಕವದು ಹಣೆಯಲ್ಲಿ ಶೋಭಿಸುತ್ತಿಹುದಲ್ಲಿ ಅಪರಿಮಿತ ಕಾಂತಿಯಲಿ ಕಿವಿಗಳಲಿ ಬೆಳಗಿಹುದು ಕರ್ಣಕುಂಡಲವು ॥ ೬೫ ॥ ಪರಮಾತ್ಮನಾ ಭವ್ಯ ವದನಾರವಿಂದವದು ಪರಿಪೂರ್ಣ ಚಂದ್ರನನು ಪರಿಹಾಸ ಮಾಡುತಿದೆ ತಾವರೆಯ ಹೂವುಗಳ ಅತಿಯಾಗಿ ಹೋಲುವ ಅರುಣರಾಗದ ಭವ್ಯ ಅಧರ ಜೋಡಿಗಳು ಸರಿಸಾಟಿ ಇಲ್ಲದ ಮೆಲುನಗೆಯ ಕುಡಿನೋಟ ನಮಿಸುವ ಭಕ್ತರನು ಅಭಿನಂದಿಸುವುದು ॥ ೬೬ ॥ ಭಗವಂತನ ಕಂಠ ನವಕಂಬು ಕಂಠ ಶೋಭಾಯಮಾನವದು ಮೂರು ರೇಖೆಗಳಿಂದ ಕಂಠದಲಿ ಶೋಭಿಸುವ ಆ ದಿವ್ಯ ಕೌಸ್ತುಭವು ಸೂರ್ಯಕಾಂತಿಯ ತೆರದಿ ಕಾಂತಿಯನು ಪಡೆದಿಹುದು ರಮಣೀಯ ರತ್ನಗಣ ರಾರಾಜಿಸುತ್ತಿಹುದು ಕಡಗ, ಉಂಗುರದಲ್ಲಿ, ಅಂಗದಗಳಲ್ಲಿ ॥ ೬೭ ॥ ಶ್ರೀ ಹರಿಯ ಹಸ್ತದಲಿ ಚಕ್ರವೊಂದಿಹುದು ಸೂರ್ಯರಾಶಿಯ ತೆರದಿ ಅದರ ಕಾಂತಿಯ ರಾಶಿ ಪಾಂಚಜನ್ಯದ ಸೊಬಗು ವಿಧು ಬಿಂಬ ದಂತೆ ಕೌಮೋದಕೀ, ಪದ್ಮ, ಮತ್ತೆರಡು ಹಸ್ತದಲಿ ಶಾರ್ಙ್ಗಧನ್ವನು ಈತ ಈ ಮಹಾಮಹಿಮ ಪೃಥುವೃತ್ತ ಹಸ್ತಗಳು, ಅತಿ ತಾಮ್ರ ತಲಗಳು ॥ ೬೮ ॥ ಭಗವಂತನ ರೂಪ ಬಣ್ಣಿಸಲು ಶಕ್ಯವೆ ? ಉತ್ತುಂಗ ನಿಲುವಿನ ಹೆಗಲುಗಳು ಎರಡು ! ಮಣಿ ಮಂಟಪವ ಪೋಲ್ವ ಆ ದಿವ್ಯ ವಕ್ಷ! ವಕ್ಷ ಸನ್ನಿಧಿಯಲ್ಲಿ ಶ್ರೀ ಮಹಾಲಕುಮಿ ! ಈರೇಳು ಲೋಕವನು ಧರಿಸಿರುವ ಉದರ ! ನಾಭಿಕಮಲದಿ ಇರುವ ಬ್ರಹ್ಮನೆಂಬುವ ದುಂಬಿ ! ॥ ೬೯ ॥ ಪರಮಾತ್ಮನ ಕಟಿಯು ಅತಿ ಭವ್ಯ ಕಟಿಯು ! ಅಲ್ಲಿ ಶೋಭಿಸುತಿರುವ ಆ ದಿವ್ಯ ಒಡ್ಯಾಣ ! ಒಡ್ಯಾಣದೊಡನಿರುವ ಸ್ವರ್ಣ ಪೀತಾಂಬರ ಆನೆಗಳ ಸೊಂಡಿಲನು ಹೋಲುವ ತೊಡೆಗಳು ವರ್ತುಲಾಕಾರದ ಆ ಭವ್ಯ ಜಘನೆಗಳು ಭಗವಂತನ ರೂಪ ಉಪಮಾನವಿಲ್ಲದುದು ॥ ೭೦ ॥ ಧರಿಸಿರುವ ನೂಪುರವು ಅತಿ ದಿವ್ಯ, ಭವ್ಯ ! ಮುಂಗಾಲುಗಳ ಸೊಬಗು ಬಣ್ಣಿಸಲು ಸಾಧ್ಯವೆ ?ಹೊಸತಾದ ಹವಳಗಳ ಕಾಂತಿಯ ಕಾಲುಗುರು ಧ್ವಜ, ಚಕ್ರ, ಶಂಖಗಳ ಚಿಹ್ನೆಗಳು ಪಾದದಲಿ ಈ ಪಾದಧೂಳಿಗಳು ಮೂರು ಲೋಕಗಳನ್ನು ಪಾವನವ ಮಾಡುವುವು ಎಲ್ಲ ಕಾಲಗಳಲ್ಲಿ ॥ ೭೧ ॥ ಸಕಲ ಆಗಮಗಳಿಗೆ ವೇದ್ಯವಾಗಿಹ ರೂಪ ಆನಂದ, ಜ್ಞಾನವೇ ಮೊದಲಾದ ಗುಣದಿಂದ ಅಡಿಯಿಂದ ಮುಡಿವರೆಗೆ ಸಕಲ ಅವಯವದಿಂದ ಮತ್ಸ್ಯಾದಿ ರೂಪಗಳೂ, ನರಸಿಂಹ, ವಾಮನ ಎಲ್ಲವೂ ಶ್ರೀ ಹರಿಯ ನಿರ್ಭೇದ ರೂಪ ರೂಪವೈವಿಧ್ಯದಲಿ, ದೋಷ ಲೇಶವೂ ಇಲ್ಲ ॥ ೭೨ ॥ ಹರಿಯ ಸ್ವರೂಪದ ದರುಶನದ ಭಾಗ್ಯ ಅಧಿಕಾರಿಗಳಿಗುಂಟು, ಇತರರಿಗೆ ಇಲ್ಲ ಸಂಪೂರ್ಣ ದರ್ಶನವು ಎಲ್ಲರಿಗೂ ಆಗದು ಅವರವರ ಗುಣಗಳಿಗೆ ಅನುಸಾರವಾಗಿ ಕೆಲವರಿಗೆ ಕಾಂಬುವುದು ಹರಿಪಾದ ಮಾತ್ರ ಶಿರ, ನೇತ್ರ ದರ್ಶನವು ಅತ್ಯಧಿಕ ಪೂತರಿಗೆ ॥ ೭೩ ॥ ಶ್ರೀ ಹರಿಯ ರೂಪವು ಅತ್ಯಧಿಕ ಕಾಂತಿಯದು ಹಲವಾರು ರಮಣೀಯ ಕಾಂತಿಗಳ ಮಿಲನ ಉದಯ ಸೂರ್ಯನ ತರಹ ಬಂಗಾರದ ಬೆಳಗು ಮುತ್ತಿನ ಹಾರಗಳ ಧವಳ ಕಾಂತಿಯ ಬೆಡಗು ಇಂದ್ರನೀಲದ ತೆರದಿ ನೀಲವರ್ಣದ ಕಾಂತಿ ಸುಖ, ಬೋಧ, ಸೌರಭ, ರೂಪ, ಗುಣ, ಸಂಗಮ ॥ ೭೪ ॥ ಮೂರ್ಜಗದಿ ಕಾಣದಿಹ ಅಚ್ಚರಿಯು ಇಲ್ಲಿಹುದು ಶ್ರೀ ಹರಿಯ ರೂಪವದು ಅಷ್ಟೊಂದು ಅದ್ಭುತವು ಪ್ರತಿಬಾರಿ ಶ್ರೀ ಹರಿಯ ಕಂಡಾಗಲೂ ಕೂಡ "ಸೋಜಿಗವು ! ಸೋಜಿಗವು ! " ಎಂಬ ಉದ್ಗಾರ ವೈಕುಂಠ ಲೋಕದಲಿ ಇಂದಿರಾಪತಿ ರೂಪ ಮುಕ್ತರನು ಸರ್ವದಾ ಮುದಗೊಳಿಸುತಿಹುದು ॥ ೭೫ ॥ ವೈಕುಂಠ ವಾಸಿಗಳು ಬಲುಬಗೆಯ ಪರಿಣತರು ಯಜ್ಞಶೀಲರು ತಮ್ಮ ಯಜ್ಞ ಕಾರ್ಯಗಳಿಂದ ಯಜ್ಞನಾಮಕ ಹರಿಯ ಆರಾಧಿಸುವರು ಪ್ರವಚನದ ಪಟುಗಳು ಹರಿಯ ಪಾರಮ್ಯಕರು ಗಾನಲೋಲನ ಸ್ತುತಿಸಿ ಗಾಯಕರು ಹಾಡುವರು ವಿಧ್ಯಬದ್ಧರು ಇವರು, ಆನಂದ ಸಾಂದ್ರರು ॥ ೭೬ ॥ ವೈಕುಂಠ ವಾಸಿಗಳ ಶೋಭಾ ವಿಶೇಷ ಮಾತು, ಮನಗಳಿಗೆಂದೂ ನಿಲುಕದಂತಹವು ಸಾಕ್ಷಾತ್ತು ಹರಿಯಿಂದ ಸನ್ನಿಹಿತವಾದ ಶ್ರೀ ಲಕುಮಿ, ಬ್ರಹ್ಮೇಂದ್ರ ರುದ್ರಾದಿ ದೇವಗಣ ಗರುಡ ಶೇಷಾದಿಗಳ ಮತ್ತೆಲ್ಲ ಮುಕ್ತರ ಲೋಕದಲಿ ಈ ಹಿರಿಮೆ ಅತಿ ಯುಕ್ತವಹುದು ॥ ೭೭ ॥ ವೈಕುಂಠದ ಹಿರಿಮೆ ವೈಕುಂಠ ಲೋಕವದು ಸಂಕಲ್ಪ ಲೋಕ ಅಲ್ಲಿಯ ವಾಸಿಗಳು ಅತ್ಯಂತ ಸುಖಿಗಳು ಯಾರ್ಯಾರು, ಯಾವ್ಯಾವ ವಿಷಯವನು ಬಯಸುವರೊ ಎಲ್ಲವೂ ಲಭಿಸುವುದು ಸಂಕಲ್ಪದಿಂದ ಇಂತೆಂದು ವೇದಗಳು ಪ್ರತಿಪಾದಿಸುವುವು ಇಂಥ ಮುಕ್ತಿಗೂ ಮಿಗಿಲು ಬೇರಾವ ಸಿರಿ ಇಹುದು ? ॥ ೭೮ ॥ ಮುಕ್ತಿಗೆ ಸಾಧನ ಆ ಸುರರು ಮೊದಲಾಗಿ ನರರವರೆಗೂ ಕೂಡ ಆನಂದ ತೀರ್ಥರ ಭಾಷ್ಯ ಭಾವವ ಅರಿತು ಯೋಗ್ಯತೆಗೆ ಅನುಗುಣದಿ ಮಾತು ಮನಸುಗಳಿಂದ ಬಾರಿಬಾರಿಗೂ ಯಾರು ಶ್ರವಣವನು ಮಾಡುವರೊ ಅಂಥವರು ನರಹರಿಯ ಕರುಣೆಯನು ಪಡೆಯುವರು ವೈಕುಂಠ ಲೋಕದಲಿ ಸ್ಥಾನವನು ಗಳಿಸುವರು ॥ ೭೯ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ ಆನಂದಾಂಕಿತ ಹನ್ನೊಂದನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. . . . ಶ್ರೀ ಗುರುಭ್ಯೋ ನಮ: ಹನ್ನೆರಡನೆಯ ಸರ್ಗ ಮಾಯಾವಾದಿಗಳಿಗಾದ ವಿಷಾದ ಮಧ್ವಮುನಿಗಳು ಒಬ್ಬ ವೇದಾಂತಿ ಸಿಂಹರು ವ್ಯಾಖ್ಯಾನ ಪ್ರವಚನದಿ ವಿಜೃಂಭಿಸುವರು ಪ್ರತಿವಾದಿ ಎಂಬುವ ಕಾಡಾನೆಗಳಿಗೆಲ್ಲ ಭಯವನ್ನು ಹುಟ್ಟಿಸುತ ಕಾಡುವವರವರು ಆನಂದ ತೀರ್ಥರ ಸಿಂಹ ಗರ್ಜನೆಯಿಂದ ಕೋಭೆಗೊಂಡಿತು ಅಲ್ಲಿ ಮಾಯಿಗಳ ನರಿಹಿಂಡು ॥ ೧ ॥ ಅವರು ನಡೆಸಿದ ಸಭೆಯ ಪೂರ್ವಾಪರ ಭುವನ ಭೂಷಣರಾದ ಆ ವಾಯುದೇವರಲಿ ಚೋಲಜ ದ್ವೀಪಿಗಳು ಮುಂತಾದ ಪಾಪಿಗಳು ಅತಿಯಾದ ಮಾತ್ಸರ್ಯ ಮಧ್ವರಲಿ ತಳೆದು ಹಿಂದೊಮ್ಮೆ ಮರುಳರು ಕುರುಪತಿಯ ಬಳಿಯಲ್ಲಿ ವಂಚನೆಯ ಸಂಚುಗಳ ನಡೆಸಿದ ಹಾಗೆ ಮಧ್ವರನು ತಗ್ಗಿಸುವ ಸನ್ನಾಹ ನಡೆಸಿದರು ॥ ೨ ॥ ಇಂತು ಆ ವಂಚಕರ ಸಂಚಿನ ಸಭೆಯಲ್ಲಿ ಗಾಂಧಾರ ದೇಶದ ರಾಜಪುತ್ರನ ತೆರದಿ ಕುಟಿಲ ನೀತಿಗಳಲ್ಲಿ ನಿಷ್ಣಾತನಾಗಿದ್ದ ವಾಚಾಳಿಯೋರ್ವನು ಎದ್ದು ನಿಲ್ಲುತ್ತ ಸಜ್ಜನರ ವಿಷಯದಲಿ ಮಾತ್ಸರ್ಯ ತುಂಬುತ್ತ ಪದ್ಮತೀರ್ಥನಿಗವನು ಇಂತೆಂದು ಉಸುರಿದನು ॥ ೩ ॥ "ಮಾಯಾವಾದವು ತುಂಬ ಪ್ರಾಚೀನವಾದುದು ದೌರ್ಘಟ್ಯ ಭೂಷವು ಅತ್ಯಪೂರ್ವವು ಶಂಕರರ ಶಾಸ್ತ್ರವು ಅಚ್ಚರಿಯ ಶಾಸ್ತ್ರವು ಈ ಜಗವು ಮಿಥ್ಯ ಎಂಬುದನು ಸಾರುವುದು ಬ್ರಹ್ಮವಸ್ತುವು ಏಕ ಎಂಬುವುದು ಅದರರ್ಥ ಶೃತಿ ವಾಕ್ಯಗಳು ಕೂಡ ಇವುಗಳನೆ ಹೇಳುವುವು ॥ ೪ ॥ "ಈ ಜಗದಿ ಭೇದಗಳು ಎಲ್ಲರಿಗೂ ವಿದಿತ ಮರ್ತ್ಯ, ಸುರ, ದಾನವರು, ವಿಪ್ರ, ಚಂಡಾಲರೂ ಎಲ್ಲರೂ ಇರುತಿರುವ ಈ ವಿಶ್ವವೆಲ್ಲ ಭೇದಯುಕ್ತವು ಎಂದು ಜನಮಾನ್ಯವಾಗಿಹುದು ಮಾಯಾವಾದದ ತತ್ವದಾಶ್ರಯವ ಪಡೆದು ನಿರ್ಭೇದ ತತ್ವವನು ದೃಢದಿ ಸಾಧಿಸಬಹುದು ॥ ೫ ॥ "ಪಾಮರರ ಮನದಲ್ಲಿ ಅಜ್ಞಾನವಿದ್ದಾಗ ಜಗವೆಲ್ಲ ಸತ್ಯ ಎಂಬಂತೆ ತೋರುವುದು ಮನದಲ್ಲಿ ಅಜ್ಞಾನ ಅಳಿದಾಗ ಮಾತ್ರ ಸುಟ್ಟ ಬಟ್ಟೆಯ ತೆರದಿ ಮಿಥ್ಯತೆಯ ಅರಿವಹುದು ತಪ್ತ ಲೋಹದ ಮೇಲೆ ಬಿದ್ದ ನೀರಂತಿರುವ ಜಗದ ಮಿಥ್ಯತ್ವವನು ಶಂಕರರು ಸಾರಿಹರು ॥ ೬ ॥ ಜ್ಞಾನಿ ಶ್ರೇಷ್ಠನ ತರಹ ಶ್ರೇಷ್ಠ ವಿಜ್ಞಾನಿಗಳು ಮತ್ತಿತರ ಇಂದಿನ ಎಲ್ಲ ವಿಜ್ಞಾನಿಗಳು ನಿರ್ಗುಣ ಬ್ರಹ್ಮೈಕ್ಯ ಸಾಧಿಸುತ್ತಿಹರು ಇಂತಹ ಸಮಯದಲಿ ಓ ನಮ್ಮ ನಾಯಕರೆ ಆಲಿಸಿರಿ ಈ ನನ್ನ ರೋಷದಾಕ್ರಂದನವ ಹಾ ಹಾ ಮಾಯಾವಾದ ನಾಶಗೊಳುತಿದೆಯಲ್ಲ ॥ ೭ ॥ "ಮಾಯಾವಾದವದು ದುರ್ಗಮದ ಕಾನನವು ಭಾಟ್ಟ ಮೀಮಾಂಸಕರು ಇದರಲ್ಲಿ ಭ್ರಷ್ಟರು ಪ್ರಭಾಕರನ ಪ್ರಭೆಯೆಲ್ಲ ಇದರಲ್ಲಿ ನಿಂದಿಹುದು ಇದ ಕಂಡು ಬೌದ್ಧರು ಭೀತಿಗೊಂಡಿಹರು ಇಂತಹ ಕಾನನವ ಸುಡಲು ಮುಂದಾಗಿರುವ ತತ್ವವಾದಾಗ್ನಿಯನು ಕಡೆಗಣಿಸಬಹುದೆ ? ॥ ೮ ॥ "ನಮ್ಮ ನಾಯಕರಾದ ಶ್ರೀ ಪದ್ಮತೀರ್ಥರು ಮಧ್ವ ಮುನಿಗಳು ಸೇರಿ ಹೊರ ಹೊರಟ ಸ್ಥಳದಿಂದ ಮುನ್ನಡೆದು ಬರದಿರಲು ಪಣವ ತೊಟ್ಟಿದ್ದರು ಆದರದು ಮಧ್ವರನು ತಡೆಯದೆ ಹೋಯ್ತು ಮುನ್ನುಗ್ಗಿ ಮುನ್ನುಗ್ಗಿ ಬರುತಲೇ ಇಹರವರು ಅಕಟಕಟ ! ನಾವೆಂಥ ನತದೃಷ್ಟರಾಗಿಹೆವು ! ॥ ೯ ॥ 'ಪ್ರತಿವಾದಿ ಪ್ರಶ್ನೆಗೆ ಉತ್ತರವು ಸಿದ್ಧ ಬೇರಾರೂ ಖಂಡಿಸಲು ಸಾಧ್ಯವಿಲ್ಲದ ಪ್ರಶ್ನೆ ಮಧ್ವಮುನಿ ಬಿಡಿಸುವರು ಚತುರೋಕ್ತಿಯಿಂದ ಪ್ರತಿವಾದಿ ಗುಂಪನ್ನು ಲಜ್ಜೆಗೊಳಪಡಿಸುವರು ಇಂತಹ ಮಾತುಗಳು ಎಲ್ಲೆಲ್ಲೂ ಕೇಳುತಿವೆ ನಾವೀಗ ಮಾಡುವುದು ಏನೆಂಬ ಅರಿವಿಲ್ಲ ॥ ೧೦ ॥ "ಸಪಾದ ಲಕ್ಷದ ಸಂಖ್ಯೆಗಳ ಶ್ಲೋಕಗಳು ಅತಿ ಪುರಾತನವಹುದು ಈ ಮಾಯಾವಾದ ಇಂತಹ ಶಾಸ್ತ್ರವನು ಆನಂದ ತೀರ್ಥರು ಒಂದೆರಡು ವಾಕ್ಯದಲಿ ಖಂಡಿಸುತ್ತಿಹರು ಇಂತೆಂಬ ಮಾತುಗಳ ಹೇಳುವರು ಪಾಂಥರು ಇದರಿಂದ ನೊಂದಿರುವ ನಾ ಬಂದೆ ನಿಮ್ಮ ಬಳಿ ॥ ೧೧ ॥ ಮಂದಹಾಸವ ಸೂಸಿ ಶೋಭಿಸುವ ಮೂರುತಿ ಮಧ್ವಮುನಿಗಳ ಕಂಡ ಜನರು ಉಸುರುವರು 'ಇವರೇನು ಸಾಕ್ಷಾತ್ತು ವ್ಯಾಸಮುನಿವರ್ಯರೋ ವೇದಗಳೆ ಮೈವೆತ್ತಿ ಇಳೆಗಿಳಿದ ಮಹಿಮರೋ' ಇಂಥ ಮಾತನು ಕೇಳಿ ನಮಗಿಂದು ಅನಿಸುತಿದೆ ಮಾಯಾವಾದದ ಮೂಲ ತತ್ತರಿಸಿ ಬೀಳುತಿದೆ ॥ ೧೨ ॥ "ನಮ್ಮ ಪಕ್ಷದ ಕೆಲರು ಹೀಗೆ ನುಡಿಯುತಲಿಹರು "ಮಧ್ವಮುನಿ ರಚಿಸಿರುವ ಬ್ರಹ್ಮಸೂತ್ರದ ಭಾಷ್ಯ ಅಕ್ಲಿಷ್ಟವಾಗಿಹುದು, ಋಜು ಮಾರ್ಗದಲ್ಲಿಹುದು ನಮಗೇನು ಕ್ಷತಿ ಇರದು ಈ ಭಾಷ್ಯದಿಂದ" ಇಂತೆಂದು ಹೇಳುತ್ತ ಆ ನಿರ್ಲಜ್ಜ ಜನರು ಮುಳುಗಿಸಿಹರೆಮ್ಮನ್ನು ಲಜ್ಜಾ ಸಮುದ್ರದಲಿ ॥ ೧೩ ॥ "ಮಧ್ವಮುನಿ ಶಿಷ್ಯರು ಸೌಜನ್ಯ ಶೀಲರು ಶಂಖ, ಚಕ್ರವ ತೊಟ್ಟ ವೈಷ್ಣವಾಗ್ರಣಿಗಳು ಈ ಶಿಷ್ಯ ಜಾಲಗಳು ಸಭೆಯೆಂಬ ಸಾಗರದಿ ಶ್ರೋತೃಮನವೆಂಬುವ ಜಲಚರಗಳನ್ನು ಸೆರೆಹಿಡಿಯದಂತಿರುವ ಯಾವುದಾದರೂ ಒಂದು ಯುಕ್ತಿಯನು ನಮ್ಮಗಳ ಕ್ಷೇಮಕ್ಕೆ ಯೋಚಿಸಿರಿ" ॥ ೧೪ ॥ "ಬ್ರಹ್ಮ ಸಗುಣತ್ವವನು ಸಾರುವರು ಇವರು ನಿರ್ಗುಣ ಬ್ರಹ್ಮನನು ಖಂಡಿಸುವರಿವರು ಹಂಸಗಳ ಧ್ವನಿಯನ್ನು ಅಡಗಿಸುವ ಮುಗಿಲುಗಳು ಜಲಧಾರೆ ಸುರಿಸುತ್ತ ಶರಧಿ ಉಕ್ಕಿಸುವಂತೆ ನಮ್ಮ ಪಕ್ಷದ ಸೊಲ್ಲ ಅತಿಯಾಗಿ ಅಡಗಿಸುತ ಸಗುಣ ಬ್ರಹ್ಮನ ವಾದ ಬಲವಾಗಿ ಸಾರಿಹರು" ॥ ೧೫ ॥ "ಮಧ್ವಮುನಿಗಳ ಇಂಥ ತತ್ವಬೋಧನೆಯನ್ನು ವಿಸ್ತರಿಸಿ ಬೆಳೆವುದಕೆ ಬಿಡುವುದು ಸಲ್ಲ ನಮ್ಮ ಮತಕಿಂದೊದಗಿ ಬಂದಿಹುದು ಆಪತ್ತು ಲೋಕಗಳು ಕ್ಷಯಿಸುವ ಪ್ರಲಯದ ಕಾಲದಲಿ ರಭಸದಲಿ ನುಗ್ಗುವ ಪ್ರಲಯ ಜಲದಂತೆ ಜಗದಲ್ಲಿ ಎಲ್ಲೆಲ್ಲೂ ನುಗ್ಗಿಹರು ವೈಷ್ಣವರು " ॥ ೧೬ ॥ ಈ ಮಾತುಗಳನಾಲಿಸಿದ ಮತ್ತೊಬ್ಬ ದುಷ್ಟ ಪದ್ಮತೀರ್ಥರ ಮನವ ಚೆನ್ನಾಗಿ ಬಲ್ಲವನು ದುರಭಿಮಾನವನು ಹೃದಯದಲಿ ತಳೆದವನು ಮಂದಮತಿಯುಳ್ಳವನು ಅತಿ ಕುಟಿಲ ಮನದವನು ತನ್ನವರ ಮನವನ್ನು ಹರುಷಗೊಳಿಸಲು ಎಂದು ಧಾರ್ಷ್ಟ್ಯದ ನುಡಿಗಳನು ಏರುದನಿಯಲ್ಲಿ ನುಡಿದ ॥ ೧೭ ॥ "ಮಧ್ವಶಿಷ್ಯರ ತೇಜ ಅನುಪಮವು ದಿಟವು ಶ್ರವಣ ಮಾತ್ರದಿ ನೀವು ಕರಗದಿರಿ ಇಂತು ಭೀರುಗಳು, ಅಭಿಮಾನ್ಯ ಶೂನ್ಯರು ನೀವು ನಿಮ್ಮ ಈ ಹುಂಬತನಕೆನ್ನ ಧಿಕ್ಕಾರ ನವನೀತ ಕರಗುವುದು ಅಗ್ನಿಸ್ಪರ್ಶದ ಬಳಿಕ ಆ ನವನೀತವೇ ಗಟ್ಟಿ ನಿಮ್ಮ ಮನಸುಗಳಿಗಿಂತ" ॥ ೧೮ ॥ "ಪದ್ಮತೀರ್ಥಾದಿಗಳು ಶಂಕರರ ಶಿಷ್ಯರು ದೇವಾದಿಗಳಿಗವರು ಬಾಧಕ ಜ್ಞಾನವನು ಅದರ ವಿಷಯತ್ವವನು ಸಾಧಿಸುತ್ತಿಹರು ದೇವಗುರುಗಳು ಕೂಡ ಲಜ್ಜೆ ಪಡುವಂತೆ ಸುಖಕರದ ಅದ್ವೈತ ವಿದ್ಯಾ ವಿಶಾರದರ ದಿವ್ಯ ಸನ್ನಿಧಿಯಲ್ಲಿ ನಮಗೇಕೆ ಚಿಂತೆ ? ॥ ೧೯ ॥ "ತತ್ವವಾದಿಯ ಮುಕ್ತಿ ಸಗುಣತ್ವ ಸಾಧಕವು ಅದನಲ್ಲಗಳೆಯುವುದು ಕಠಿಣತಮವಾದುದು ಅದ್ವೈತ ಸಾಧನೆಗೆ ಇದರಿಂದ ಅಡ್ಡಿ ಷಟ್ಕರ್ಮ ಜ್ಞಾನಿಗಳೂ, ಮಂತ್ರೌಷಧ ವೇತ್ತರೂ ಆಗಿಹರು ಈ ನಮ್ಮ ಪದ್ಮತೀರ್ಥಾದಿಗಳು ನಾವವರ ರಕ್ಷಿತರು, ಯಾರೆಮ್ಮ ಸೋಲಿಪರು ?" ॥ ೨೦ ॥ "ಶಂಕರಾಚಾರ್ಯರೇ ಮೊದಲಾದ ಜ್ಞಾನಿಗಳು ಅದ್ವೈತ ತತ್ವದ ಅಧ್ವರ್ಯು ಇಹರು ಇಂಥವರು ಶಂಕಿಪರು ಮಧ್ವಸಿದ್ಧಾಂತವನು ಇಂದು ಬಂದೊದಗಿರುವ ಇಂತಹ ಕುತ್ತನ್ನು ನಿರ್ಲಕ್ಷ್ಯವನು ತೊಡೆದು ಎದುರಿಸಲೇ ಬೇಕು ಗೋಳಿಡುವ ಕಾಲ ನಮಗಿನ್ನು ಬಂದಿಲ್ಲ" ॥ ೨೧ ॥ "ನಮ್ಮ ಈ ಜನತೆಯಲಿ ಹಲವಾರು ಮಂದಿ ಅಲ್ಲೂ ಸಲ್ಲದ, ಇದನು ಒಲ್ಲದ ಮಧ್ಯಸ್ತರಿಹರು ಅಂಥವರ ಮಧ್ಯದಲ್ಲಿ ಬೆರೆಯಬೇಕು ಹೊಸದಾಗಿ ಬಂದಿರುವ ಈ ಮಧ್ವಶಾಸ್ತ್ರವು ಪರಂಪರೆಯ ತತ್ವವನು ಅಳಿಸುತಿದೆಯಲ್ಲ ಎಂಬಂಥ ಸಂದೇಶ ಹರಡಬೇಕು" ॥ ೨೨ ॥ "ನಮ್ಮ ಮತ ಬ್ರಹ್ಮನನು ಅವಾಚ್ಯವೆನ್ನುವುದು ಯಾವ ರೀತಿಯಲೆಮ್ಮ ಮತವನ್ನು ಸಾಧಿಪೆವೊ ಅಂತೆಯೇ ನಾವಿಂದು ಹೋರಾಡಬೇಕು ಮಾಯಾಶಕ್ತಿಯಲಿ ಎಲ್ಲವೂ ಸಿದ್ಧಿಪುದು ನಮ್ಮ ಎದುರಾಳಿಯನು ಎದುರಿಸಲೇ ಬೇಕು ಬಹಿರಂಗಗೊಳಿಸದಿರಿ ನಮ್ಮಭಿಪ್ರಾಯವನು" ॥ ೨೩ ॥ "ಹಳ್ಳಿ ಹಳ್ಳಿಗಳಲ್ಲಿ ತಡೆಯೊಡ್ಡ ಬೇಕು ಸಾಮವೇ ಮುಂತಾದ ಯುಕ್ತಿಗಳ ಬಳಸಿ ಹಳ್ಳಿಗರು ಅವರಿಗೆ ಗೌರವಾದರಗಳನು ಸಲ್ಲಿಸುವ ಕಾರ್ಯವನು ನಿಲ್ಲಿಸಲೇ ಬೇಕು ಮಾನಾಪಹರಣವನು ಮಾಡಬೇಕು ಗ್ರಂಥ ಚೌರ್ಯವ ಮಾಡಿ ಬುದ್ಧಿ ಕಲಿಸಲಿಬೇಕು " ॥ ೨೪ ॥ ಕುಟಿಲ ಬುದ್ಧಿಯನುಳ್ಳ ಆ ಮಾಯಾವಾದಿಗಳು ಚಕ್ರಧಾರಿಯ ಭಕ್ತ ಗುರುಮಧ್ವರನು ಆಗ ಎದುರಾಳಿಗಳನಾಗಿ ಭಾವಿಸಿದರು. ಇಲ್ಲವಾದಲ್ಲವರು ದುಃಖವೆಂಬುವ ಉಗ್ರ ಜಲದಿಂದ ಕೂಡಿದ ಅಂಧತಾಮಿಸ್ರದ ಸಾಗರದಿ ಮುಳುಗಲು ಅರ್ಹರಾಗುವರೆ ? ॥ ೨೫ ॥ ರೂಪ್ಯ ಪೀಠಾಪುರದಿ ಆ ಮಾಯಾವಾದಿಗಳು ಜನತೆಯ ಜೊತೆಯಲ್ಲಿ ಮಿಳಿತಗೊಂಡಿದ್ದು ವಾಕ್ಯಾರ್ಥ ನೆಪದಲ್ಲಿ ಆನಂದತೀರ್ಥರನು ಅಪಮಾನಗೊಳಿಸುವ ಸಂಚು ಒಂದನು ಹೂಡಿ ಪುಂಡರಿಕ ಪುರಿಯೆಂಬ ಹರಿವೈರಿಯೊಬ್ಬನನು ಮಧ್ವರ ಎದುರಿನಲಿ ವಾದಕಣಿಗೊಳಿಸಿದರು ॥ ೨೬ ॥ ಕೇಸರಿಯ ಎದುರೊಂದು ಶ್ವಾನ ಸೆಣಸಿದ ತೆರದಿ ಹಂಸ ಪಕ್ಷಿಯ ಎದುರು ಕಾಗೆ ಸೆಣಸಿದ ತೆರದಿ ನರಿಯೊಂದು ಹುಲಿಯೊಡನೆ ಹೋರಾಡಿದ ತೆರದಿ ಆ ಮೂಢ ಪುಂಡರಿಕ ವ್ಯರ್ಥ ಶ್ರಮವನು ವಹಿಸಿ ವಿದ್ವದ್ವರೇಣ್ಯ ಆ ಮಧ್ವಮುನಿಗಳನು ಶಾಸ್ತ್ರಾರ್ಥ ವಾಗ್ಯುದ್ಧಕಾಮಂತ್ರಿಸಿದನು ॥ ೨೭ ॥ ಆನಂದ ತೀರ್ಥರು ತೇಜೋವಿಲಾಸಿಗಳು ಅಗ್ನಿಯ ಜ್ವಾಲೆಯಂತವರ ಆ ತೇಜಸ್ಸು ಪುಂಡರೀಕನು ಒಂದು ಮಿಣಕು ಹುಳುವಂತೆ ಅತ್ಯಂತ ಚಂಚಲನು, ಅತಿ ಅಪ್ರಬುದ್ಧನು ಆದರೂ ಅವರವನ ಕಡೆಗಣಿಸಲಿಲ್ಲ ಅವನೂಡನೆ ವಾಗ್ಯುದ್ಧ ಪ್ರಾರಂಭಿಸಿದರು ॥ ೨೮ ॥ ಶ್ರೀ ಮಧ್ವಾಚಾರ್ಯರ ಅಪೂರ್ವ ವೇದಪಾಠ ವೇದಾದಿ ವಿದ್ಯೆಯಲಿ ಅತಿ ಚತುರ ಮಧ್ವರು ವೇದ ಪ್ರಮಾಣಗಳ ಸರ್ವ ಭೂಷಿತರವರು ತಮ್ಮೊಡನೆ ವಾಕ್ಯಾರ್ಥ ಸುಳಿಯಲ್ಲಿ ಸಿಲುಕಿದ ಪುಂಡರೀಕನನವರು ಸುಲಭದಲಿ ಗೆಲಿದರು ತಮ್ಮ ಸಿದ್ಧಾಂತಕ್ಕೆ ಕನ್ನಡಿಯ ತೋರಿದರು ವೇದ ವ್ಯಾಖ್ಯಾನವನು ಮತ್ತೊಮ್ಮೆ ಮಾಡಿದರು ॥ ೨೯ ॥ ರೂಪ ಪೀಠಾಪುರದ ಬ್ರಾಹ್ಮಣರು ಬಂದು ಸಭೆಯಲ್ಲಿ ಸೇರಿದರು ಗೌರವದಿ ನಿಂದು ಅಪ ಪಾಠಗಳು ಅವರ ಸನಿಹದಲಿ ಸುಳಿಯುವು ಪಠಣಾದಿ ಕ್ರಿಯೆಗಳಲಿ ಎಲ್ಲರೂ ಮುಂದು ಅಂತಹ ಬ್ರಾಹ್ಮಣರು ಮಧ್ವರನು ಕಂಡು ಕೌತುಕದಿ ನೋಡಿದರು ವೇದವ್ಯಾಖ್ಯಾತೃವನು ॥ ೩೦ ॥ ಸ್ವರಗಳನು ಉಚ್ಚರಿಪ ಸೊಬಗಿನ ಬೆಡಗು ! ಮಾತ್ರೆಗಳ ಅಭಿವ್ಯಕ್ತಿಯಲ್ಲಿನ ಸೊಗಸು ! ಪಶ್ಯಂತಿ, ಮಧ್ಯಮ, ವೈಖರಿಗಳೆಂಬುವ ತ್ರಿಸ್ಥಿತಿಯ ಅಭಿಮಾನಿ ದೇವತೆಗಳೆಲ್ಲ ಆಚಾರ್ಯ ಮುಖದಿಂದ ಹೊಮ್ಮುವ ವಾಕ್ಯಗಳ ಕೇಳಿ ನಲಿದಾಡುತ್ತ ಸ್ಮರಿಸಿದರು ಶ್ರೀ ಹರಿಯ ಆನಂದದಿಂದ ॥ ೩೧ ॥ ಮೊದಮೊದಲು ಹ್ರಸ್ವತ್ವವೆಂಬ ಕಾರಣದಿಂದ ವತ್ಸಾನುವೃತ್ತಿಯಲಿ ಮಾತ್ರೆಗಳ ಕಾಲದ ದ್ವಿಪಾದ ಉಚ್ಚರಿಸಿ ದೇವಾನುದೇವರಿಗೆ ಗೋಚರಿಸಿ ನಿಂದು ಬಳಿಕ ಆ ಇತರ ವಿವೃತ್ತಿ ಉಚ್ಚರಿಸಿ ಗೋವಿಂದ ಭಕ್ತರಿಹ ಆನಂದ ತೀರ್ಥರು ಗೋವಿಂದ ನಂತೆಯೇ ಕಂಗೊಳಿಸಿ ಮೆರೆದರು ॥ ೩೨ ॥ ಮಂಗಳಾಂಗಗಳಿಂದ ಭಾವಗಳ ಪ್ರಕಟಿಸುತ ಮೂರು ಲೋಕಗಳಲ್ಲಿ ಅಚ್ಚರಿಯ ಮೂಡಿಸುತ ರಂಗವೆಂಬುವ ಸ್ವರದಿ ವೈಭವದಿ ಮೆರೆಯುತ್ತ ಸುಸ್ವರದಿ ಶೋಭಿಸುತ ಕಂಗೊಳಿಪ ಆ ದನಿಯು ಆನಂದ ತೀರ್ಥರ ಆ ವೇದವಾಣಿಯು ಮತ್ತೊಬ್ಬ ದ್ರೌಪದಿಯ ಸ್ವರದಂತೆ ತೋರಿತ್ತು ॥ ೩೩ ॥ ಔದಾರ್ಯದಿಂದಲೇ ಗಾಂಭೀರ್ಯ ಹುಟ್ಟುವುದು ಗಾಂಭೀರ್ಯ ಔದಾರ್ಯ ಗುಣ ಭರಿತ ಮಧ್ವರು ನಾನಾ ನಾದಗಳ ಶ್ಲಾಘ್ಯ ಅಭಿವ್ಯಕ್ತಿ ಶಿಕ್ಷಾ ಲಕ್ಷಣವೇ ಮೈವೆತ್ತಿ ನಿಂತಂತೆ ಗುರುವರೇಣ್ಯರ ಆ ವೇದದುಚ್ಚಾರಣೆಯು ಅನುಪಮವು ಅತಿಶಯವು ಎಂದು ನಾ ಭಾವಿಪೆನು ॥ ೩೪ ॥ ಕಲ್ಪ ವೇದಾಂಗಗಳ, ವೇದಾರ್ಥ ನಿಯಮಗಳ ಛಂದಸ್ಸು, ಶಾಸ್ತ್ರಗಳ ನಿಯಮಗಳ ಪ್ರಕಟಿಸುತ ವ್ಯಾಕರಣ ಶಾಸ್ತ್ರದ ಒಳ ಹೊರಗ ತೋರಿಸುತ ನಿರುಕ್ತದಲ್ಲಿನ ಶಬ್ದ ನಿರ್ವಚನದಲಿ ಜ್ಯೋತಿಷ್ಯ ಶಾಸ್ತ್ರದಲಿ ಪರಿಣತರು ಮಧ್ವರು ವೇದವನು ಈ ರೀತಿ ವ್ಯಾಖ್ಯಾನಿಸಿದರು ॥ ೩೫ ॥ ಆನಂದ ತೀರ್ಥರ ವೇದವ್ಯಾಖ್ಯಾನಗಳು, ವಾಕ್ಯ ಉಚ್ಚಾರಣೆಯು ಅತಿ ಮಧುರವಹುದು ಎಲ್ಲವೂ ಸುಸ್ಪಷ್ಟ: ಕೇಳುಗರಿಗತಿ ಹಿತವು ವಾಗ್ದೇವಿ ಸರಸ್ವತಿ, ದೇವಗುರು, ಗರುಡರೂ ಆಶ್ಚರ್ಯದಿಂದದನು ಬಣ್ಣಿಸುವರು ನನ್ನಂಥ ಪಾಮರನು ಇನ್ನೆಂತು ಬಣ್ಣಿಪೆನು ? ॥ ೩೬ ॥ ಇಂದ್ರಪುರಿಯ ಪರಾಭವ ಉಲ್ಲಸಿತ ಚಿತ್ತರೂ ನಗೆಮೊಗದ ಬ್ರಾಹ್ಮಣರು ಕಂಗೊಳಿಸಿ ಮೆರೆದಿದ್ದ ಆ ವಿಬುಧ ಸಭೆಯಲ್ಲಿ ನಾಲ್ಮೊಗದ ಬ್ರಹ್ಮನ ಹೋಲುವಾ ಪರಿಯಲ್ಲಿ ಆನಂದ ತೀರ್ಥರು ಅರ್ಥ ಗರ್ಭಿತವಾಗಿ ಶೃತಿಸಮೂಹವನು ವ್ಯಾಖ್ಯಾನಿಪುದ ಕೇಳಿ ಪುಂಡರೀಕನ ಕುರಿತು ವಿಪ್ರರಿಂತೆಂದರು ॥ ೩೭ ॥ "ಈ ಮಧ್ವಮುನಿಗಳು ಪರಿಪೂರ್ಣ ಪ್ರಜ್ಞರು ಪರಿಪೂರ್ಣ ಪ್ರಜ್ಞೆಯಲಿ ವೇದಾರ್ಥ ನುಡಿದಿಹರು ಇಂತಹ ಅದ್ಭುತವ ನಾವೆಂದೂ ಕೇಳಿಲ್ಲ ಇಂಥ ಸುಜ್ಞಾನಿಗೆ ಎದುರಾಳಿಯೆ ನೀನು ? ದಯಮಾಡಿ ಇಂತಹುದೇ ಅದ್ಭುತ ವ್ಯಾಖ್ಯಾನವನು ನಮಗಾಗಿ ಶೃತಪಡಿಸು ಎಂದು ಬೇಡುವೆವು" ॥ ೩೮ ॥ ಬ್ರಾಹ್ಮಣರ ಮನವಿಯನು ಕೇಳಿದಾ ದುರುಳನು ಮಧ್ವಮುನಿಗಳ ಸಾಮ್ಯ ಪಡೆವುದಕೆ ಯತ್ನಿಸುತ ಹಿಂದೊಮ್ಮೆ ಕೃಷ್ಣನ ಸಾಮ್ಯವನು ಬಯಸುತ್ತ ಗರುಡವಾಹನವನ್ನು, ನಾಲ್ಕು ತೋಳುಗಳನ್ನು ಶ್ರೀವತ್ಸ ಚಿಹ್ನೆಯನೂ ಕೃತಕದಲಿ ಪಡೆದಿದ್ದ ಪೌಂಡ್ರಕನ ಪರಿಯಲ್ಲಿ ನಗೆಪಾಟಲಾದನು ॥ ೩೯ ॥ ಐತರೇಯದ ವಾಕ್ಯ "ಅಗ್ನಿನಾ ರಯಿಮಶ್ನವತ್ ಪದವಿಭಾಗವು ಸ್ವಲ್ಪ ಜಟಿಲವಾಗಿಹುದು ತಪ್ಪಾಗಿ ಹೇಳಿದರೆ ಆಭಾಸವಾಗುವುದು ವ್ಯಾಕರಣ " ಪಂಡಿತ" ಪುಂಡಲೀಕನು ಆಗ ತಪ್ಪು ತಪ್ಪಾಗಿದನು ವ್ಯಾಖ್ಯಾನಿಸಿದನು ತುಂಬಿದ ಸಭೆಯಲ್ಲಿ ನಿಂದೆಗೊಳಗಾದನು ॥ ೪೦ ॥ ಆ ಮೊದಲು ಪಂಡಿತರ ಸಭೆಗಳಲ್ಲೆಲ್ಲಾ ಶಾರ್ದೂಲನೆಂದೇ ಖ್ಯಾತಿಯನು ಗಳಿಸಿದ್ದ ಪುಂಡರೀಕ ಪುರಿ ಎಂಬ ಆ ಧೂರ್ತ ಗೋಮಾಯು ದುರ್ವಾದಿ ಎಂಬುವ ವ್ಯಾಘ್ರರನು ವಧಿಸುವ ಗುರು ಮಧ್ವ ಸಿಂಹರನು ಎದುರಿಸಲು ಹೋಗಿ ಹೆಸರಿನಲಿ ಶಾರ್ದೂಲ ಮಾತ್ರದಂತಾದನು ॥ ೪೧ ॥ ಪದ್ಮ ತೀರ್ಥಾದಿಗಳಿಂದ ಮಧ್ವಗ್ರಂಥಗಳ ಅಪಹರಣ "ಶ್ರೀ" ಎಂಬ ಹೆಸರಿಂದ ದ್ರೌಪದಿಯು ಖ್ಯಾತಳು "ಶಾಸ್ತ್ರ" ವೆಂಬುದು ಅವಳ ಮತ್ತೊಂದು ಹೆಸರು ಸುಜ್ಞಾನಿ ಭೂಸುರರು ಆಕೆಯನು ಪಾಲಿಪರು ಪದ್ಮತೀರ್ಥ ಎಂಬ ದುಷ್ಟ ಸೈಂಧವನೊಬ್ಬ ದ್ರೌಪದಿಯ ಅಪಹರಿಸಿ ಕೊಂಡೊಯ್ಯುತಿಹನೆಂದು ಮಧ್ವರೆಂಬುವ ಆ ಪಾರ್ಥ ಕೇಳಿದನು ॥ ೪೨ ॥ ಜ್ಯೇಷ್ಠಯತಿಗಳ ಕೂಡಿ ಆನಂದ ತೀರ್ಥರು ಹಲವಾರು ಯೋಜನದ ದೂರವನು ಕ್ರಮಿಸಿ ಪ್ರಾಗ್ರ್ಯವಾಟದಿ ಪದ್ಮತೀರ್ಥನನು ಸಂಧಿಸಿ ವಾಗ್ಬಾಣದಿಂದವನ ಅಂಜಿಸುತ ತಡೆದು ಸಿರಿದೇವಿಯನ್ನವರು ಹಿಂದಿರುಗಿ ಪಡೆದು ಹಾಸ್ಯ ಮಾಡಿದರವನ ವಾದ ವೈಖರಿಯ ॥ ೪೩ ॥ ತನ್ನ ಮರಿಯನು ಕೊಂದ ಹಂದಿಯನು ಕಂಡು ಸಿಂಹ ತಾ ಹಂದಿಯನು ಹೇಗೆ ಬಿಡದಿಹುದೊ ಅಂತೆಯೇ ಆನಂದ ತೀರ್ಥರೆಂಬುವ ಸಿಂಹ ಗ್ರಂಥಪಾಲಕನಾದ ಶಂಕರನ ಬೆದರಿಸಿ ಗ್ರಂಥಗಳ ಅಪಹರಿಸಿ ನಡೆದಿದ್ದ ದುರುಳನನು ಕ್ಷಮಿಸದೆ ಶಿಕ್ಷಿಸಲು ನಿಶ್ಚಯವ ಮಾಡಿದರು ॥ ೪೪ ॥ ಈ ಹಿಂದೆ ಆನಂದ ತೀರ್ಥರ ಕೂಡೆ ವಾಗ್ಯುದ್ಧದಲಿ ಸೋತ ಪುಂಡರೀಕನು ಆಗ ಮಧ್ವರಿಗೆ ಭಯಪಟ್ಟು ಹಿಂದಕ್ಕೆ ಅಡಗಿದ್ದ ಪದ್ಮತೀರ್ಥಗೆ ಹಿತವನುಂಟು ಮಾಡಲು ಬಯಸಿ ಹಲವಾರು ಅಂಶಗಳ ಸಭೆಯ ಮುಂದಿರಿಸಿದನು ಮಧ್ವರಿದ ಖಂಡಿಸಿದರೈದಾರು ವಾಕ್ಯದಲಿ ॥ ೪೫ ॥ ಪದ್ಮತೀರ್ಥಾದಿಗಳ ಪರಾಭವ ದ್ವಾಪರದ ಪಾರ್ಥನಾ ತೆರದಿ ಈ ಮಧ್ವರು ಪುಂಖಾನುಪುಂಖದಲಿ ವಾಗ್ಬಾಣ ಬೀರುತ್ತ ಹರಿಯ ಸ್ವರೂಪವನು ನಿರ್ಧರಿಸಿ ತೋರುತ್ತ ತಡೆಯಿರದ ಜಲಧಾರೆಯಂತಿರುವ ನುಡಿಯಿಂದ ಖಂಡಿಸಲು ಬಾರದ ತರ್ಕನಿಪುಣತೆಯಿಂದ ಆ ಪದ್ಮತೀರ್ಥನನು ಗೆಲಿದು ಮೆಟ್ಟಿದರು ॥ ೪೬ ॥ ಶ್ರೀ ಮಧ್ವಶಿಷ್ಯರು ಹಾಡಿದ ಶ್ರೀ ಮಧ್ಯಮಾಹಾತ್ಮ್ಯ "ಎಲವೆಲವೊ ಚೋರರೆ ! ಭಗವಂತ ನಿಂದಕರೆ ! ನಿಲ್ಲಿಸಿರಿ ಈ ನಿಮ್ಮ ದುಷ್ಕೃತ್ಯಗಳನು ನಿಲ್ಲಿಸಿರಿ ಈ ಜಗವು ಮಾಯವೆಂಬುವ ತರ್ಕ ಓಡಿರಿ, ಓಡಿರಿ, ಇಲ್ಲಿಂದ ಓಡಿರಿ! ಜನರೆಲ್ಲ ನಿಮ್ಮನ್ನು ಅಟ್ಟುತ್ತ ಬರುತಿಹರು ಗುಹೆಗಳನು ಸೇರುವ ಕಾಲ ಒದಗಿದೆ ನಿಮಗೆ ॥ ೪೭ ॥ "ವಿಬುಧಗಣವೆಂಬುವ ಚಂದ್ರ ಕಳೆಗುಂದಿಹನು ದುರ್ವಾದಿಗಣವೆಂಬ ತಾರೆಗಳ ಮಂಡಲವು ಅಳಿದುಳಿದ ಕಾಂತಿಯಲಿ ನಿಸ್ತೇಜವಾಗಿಹುದು ಈ ಚಂದ್ರ ತಾರೆಗಳ ತೇಜೋವಿಹೀನತೆಗೆ ಕಾರಣವು ತಾನಾಗಿ ವಿಶ್ವವನು ವ್ಯಾಪಿಸಿದ ಅಂಧಕಾರವು ಈಗ ಕೊನೆಗೊಳ್ಳುತಿಹುದು ॥ ೪೮ ॥ ತನ್ನ ವಾಕ್ಕಿರಣಗಳ ನೆರವನ್ನು ಪಡೆಯುತ್ತ ಬ್ರಹ್ಮಾದಿ ದೇವತೆಗಳಭಿಲಾಷೆ ಪೂರೈಸಿ ಸಪ್ತವಿದ್ಯೆಗಳೆಂಬ ಅಶ್ವಗಳ ನೆರವಿಂದ ಸಕಲ ಜಗಕೆಲ್ಲಕೂ ಬೆಳಕನ್ನು ನೀಡುತ್ತ ಕ್ರೀಡಾದಿ ಗುಣಭರಿತ ಆನಂದ ತೀರ್ಥರು ರವಿಯ ತೆರದಲಿ ಹೊಳೆದು ಬೆಳಗುವುದ ಕಾಣಿರೇ ? ॥ ೪೯ ॥ ಬ್ರಹ್ಮವೆಂಬುವ ಹೆಸರು ಶ್ರೀ ಹರಿಯೂ ಹೊತ್ತಿಹನು ಸರ್ವರಿಗೆ ಆಧಾರ, ರಮ್ಯ ಸ್ವರೂಪನವ ನೈದಿಲೆಯ ಹೂವಂತೆ ನೀಲವರ್ಣದ ಇವನು ವೇದದಲಿ ವರ್ಣಿತನು ಗುಣಪೂರ್ಣನೆಂದು ಇಂತಹ ಹರಿಪದದ ಆಶ್ರಿತನು ಮಧ್ವರವಿ ಆತನನು ಮರೆಯಿಸಲು ಯಾರಿಗಾಹುದು ಸಾಧ್ಯ ? ॥ ೫೦ ॥ "ಓಡಿರಿ, ಓಡಿರಿ, ಓ ಮಾಯಾವಾದಿಗಳೇ ಅಲ್ಲವೆಂದೆನ್ನದಿರಿ ವೇದ ವಚನಗಳನ್ನು ಮಧ್ವ ಮುನಿಯೆಂಬುವ ನರಹರಿಯು ಈಗ ಜಾಜ್ವಲ್ಯ ಕಾಂತಿಯಲಿ ಪ್ರಜ್ವಲಿಸುತಿಹನು ಸಿಂಹಗರ್ಜನೆಯಿಂದ ಅವಿವೇಕಿಗಳನಾತ ಸೀಳುವನು ಹರಿತನುಡಿ ಎಂಬ ನಖದಿಂದ ॥ ೫೧ ॥ "ಎರಡು ನಾಲಿಗೆಯುಳ್ಳ ಹಾವುಗಳು ನೀವು! ಲೋಕಪತಿ ಶ್ರೀ ಹರಿಯ ಹೃದಯದಲಿ ಧರಿಸಿರುವ ಸಕಲ ಸಜ್ಜನಕೆಲ್ಲ ಜ್ಞಾನದಮೃತ ಕೊಡುವ ಮಧ್ವ ಮುನಿಯೆಂಬುವ ಮತ್ತೊಬ್ಬ ಖಗರಾಜ ನಿಮ್ಮ ಸಿರಿಸಂಪದವ ನಾಶಗೊಳಿಸುವನು ತ್ವರೆ ಮಾಡಿ ! ಪರ್ವತದ ಬಿಲಗಳನು ಸೇರಿರಿ ॥ ೫೨ ॥ "ಮಧ್ವನಾರಾಯಣನು ವೇದ ಚಕ್ರವ ಹಿಡಿದು ತರ್ಕವೆಂಬುವ ಪಾಂಚಜನ್ಯವನು ಮೊಳಗಿಸುತ ಪುರಾಣವೆಂಬುವ ಗದೆಯನ್ನು ಬೀಸುತ್ತ ಪಂಚರಾತ್ರಗಳೆಂಬ ಖಡ್ಗವನು ಝಳಪಿಸುತ ಬರಲಿಹನು ನಿಮ್ಮನ್ನು ನಿಗ್ರಹಿಸಲೆಂದು ತ್ವರೆಯಿಂದ ಧಾವಿಸಿರಿ, ಓ ಮಾಯಾವಾದಿಗಳೇ !" ॥ ೫೩ ॥ ಪ್ರಾಗ್ರ್ಯವಾಟದಲ್ಲಿ ಚಾತುರ್ಮಾಸ್ಯ ಮಾಯಾವಾದಿಗಳಲ್ಲಿ ದ್ವೇಷವನೆ ತಳೆದಿದ್ದ ಸಜ್ಜನರು ಈ ರೀತಿ ನುಡಿದು ನಲಿದಾಡಲು ಸ್ವಾರಾಮ ಎಂಬುವ ಗ್ರಾಮವನು ಬಿಟ್ಟು ಪ್ರಾಗ್ರ್ಯವಾಟದ ದೇವ ಮಂದಿರದಿ ಮಧ್ವರು ಆನಂದ ಮೂರ್ತಿ ಆ ಗೋವಿಂದನ ನೆನೆದು ನಾಲ್ಕು ತಿಂಗಳ ಕಾಲ ಅಲ್ಲಿ ನೆಲೆಸಿದರು ॥ ೫೪ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವ ವಿಜಯ ಮಹಾಕಾವ್ಯದ ಆನಂದಾಂಕಿತ ಹನ್ನೆರಡನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. . . ಶ್ರೀ ಗುರುಭ್ಯೋ ನಮಃ ಹದಿಮೂರನೆಯ ಸರ್ಗ ಸಹ್ಯ ಪರ್ವತದಲ್ಲಿ ಆಚಾರ್ಯರು ನಾಲ್ಕು ತಿಂಗಳ ವ್ರತವ ಪೂರೈಸಿದ ಬಳಿಕ ಆನಂದ ತೀರ್ಥರು ತ್ವರಿತ ಯತ್ನವ ನಡೆಸಿ ಅಪಹರಿತ ಗ್ರಂಥಗಳ ಮರಳಿ ಸ್ವೀಕರಿಸಿದರು ಜಯಸಿಂಹ ಭೂಪತಿಯ ವಂದನೆಯ ಸ್ವೀಕರಿಸಿ ಸಹ್ಯಾದ್ರಿಗೈತಂದರಾ ಶಿಷ್ಯರೊಡಗೂಡಿ ರಾಜ ಭೃತ್ಯನು ಬಂದ ಅಲ್ಲಿಗಾ ಸಮಯದಲಿ ॥ ೧ ॥ ಭೃತ್ಯನ ಮೂಲಕ ಜಯಸಿಂಹ ರಾಜನ ಪ್ರಾರ್ಥನೆ ಗುರುಗಳಿಗೆ ನಮಿಸುತ್ತ ಆ ಭೃತ್ಯನಾಗ ಇಂತೆಂದು ನುಡಿದನು ವಿನಯದಲಿ ಬಾಗಿ "ನಮ್ಮ ಭೂಪಾಲನು ಇಂತು ಬಿನ್ನೈಸಿಹನು ತಮ್ಮ ಕಿಂಕರರಾದ ನಮ್ಮೆಲ್ಲರನ್ನೂ ಪೂಜ್ಯರಾಗಿಹ ತಾವು ಹರಸಬೇಕು ನಮ್ಮ ಸತ್ಕಾರವನು ಸ್ವೀಕರಿಸಬೇಕು" ॥ ೨ ॥ ಜಯಸಿಂಹರಾಜನ ಪಟ್ಟಣಕ್ಕೆ ಶ್ರೀ ಮಧ್ವಾಚಾರ್ಯರ ಪ್ರಯಾಣ ಪಯಣವನು ಮುಂದರಿಸಿ ಆನಂದ ತೀರ್ಥರು ಮೂಡಲದ ದಿಸೆಯಿಂದ ಪಡುವಣದ ಕಡೆಗೆ ಅಪ್ರತಿಮ ತೇಜದಲಿ ಶೋಭಿಸುತ ನಡೆದು ಸೂರ್ಯಕಿರಣದ ತೆರದಿ ಪಾದಗಳನಿರಿಸುತ್ತ ಸ್ಪರ್ಶ ಮಾತ್ರದಿ ಬುವಿಯ ಪಾವನವಗೊಳಿಸುತ್ತ ಭವ್ಯತೆಯ ಸಾರುತ್ತ ನಡೆದರಾ ಗುರುಗಳು ॥ ೩ ॥ ಗಂಗಾ ಪ್ರವಾಹವನು ಹೋಲುವಾ ರೀತಿಯಲಿ ಮಾಯಾವಾದಿಗಳೆಂಬ ಕ್ಷುದ್ರಪರ್ವತ ತ್ಯಜಿಸಿ ಪರಮ ಸ್ನೇಹಿಗಳಾದ ಸಜ್ಜನರ ಮನವೊಲಿಸಿ ಮುನ್ನಡೆದ ಆ ನಮ್ಮ ಆನಂದ ತೀರ್ಥರನು ಉತ್ತುಂಗ ಪರ್ವತದ ಶಿಖರದಲಿ ಪ್ರವಹಿಸುವ ನದಿಗಳೋಪಾದಿಯಲಿ ಸುಜನರನುಸರಿಸಿದರು ॥ ೪ ॥ ಫಲಪುಷ್ಪ ತುಂಬಿರುವ ಉತ್ತುಂಗ ವೃಕ್ಷಗಳ ಬಾಗಿಸುತ ಹರಿಯುವುದು ಗಂಗಾ ಪ್ರವಾಹ ಬಾಗದ ವೃಕ್ಷಗಳ ಮುರಿಯುತ್ತ ಹರಿವುದದು ಅಂತೆಯೇ ಈ ನಮ್ಮ ಆನಂದ ತೀರ್ಥರು ಸುಮನಫಲ ಶೋಭಿತರಾದ ಸುಜನರನು ಹರಸುತ್ತ ದೃಢಮನದ ಜನರನ್ನು ಮುರಿಯುತ್ತ ನಡೆದರು ॥ ೫ ॥ ಪಯಣದ ಸಂಭ್ರಮವು ಅಚ್ಚರಿಯ ಹುಟ್ಟಿಸಿತು ವಿವಿಧ ದೇಶದ ಜನರ ವಿಧವಿಧದ ಸತ್ಕಾರ ! ಎಲ್ಲೆಡೆಯೂ ಪಸರಿಸಿತು ಮಧ್ವರಾ ಕೀರ್ತಿ ಸಂಸಾರ ಕ್ಲೇಶದಲಿ ಮನನೊಂದ ಜನರೆಲ್ಲ ಅವರೆಡೆಗೆ ಬಂದರು ಪರಿಹಾರ ತಿಳಿಯಲು ಕಿಕ್ಕಿರಿದು ನೆರೆದಿತ್ತು ಅಭಿಮಾನಿ ಸಮುದಾಯ ॥ ೬ ॥ ಹರಿಪಾದ ಸಂಬಂಧ ಪಡೆದ ಮಹಿಮರು ಇವರು ಲೋಕದೊಳು ಪಾವನರು, ಜೀವಸರ್ವೋತ್ತಮರು ಮನುಜರಿಗೆ ಸುಲಭದಲಿ ಗೋಚರಿಸದೆ ಇರುವ ದೇವತೆಗಳಿಂದಲೂ, ದೇವಾನುಚರರಾದ ಗಂಧರ್ವರಿಂದಲೂ ಮುನಿಗಣೋತ್ತಮರಿಂದ ಪೂಜಿತರು ಇವರು ಇಂಥ ಮಹಿಮರ ಮಹಿಮೆ ಎಂತು ಬಣ್ಣಿಪುದು ? ॥ ೭ ॥ ಶುದ್ಧ ಸ್ವರೂಪರೂ ಪರಿಶುದ್ಧ ಚಿತ್ತರೂ ವಿಭುಗಣದ ಪ್ರಭುಗಳು ಆನಂದತೀರ್ಥರು ಎಡೆಬಿಡದೆ ಎಲ್ಲೆಡೆಯೂ ಸಂಚಾರ ಮಾಡುತ್ತ ಎಡರು ತೊಡರಿಲ್ಲದೆಯೆ ಪಯಣವನು ಸಾಗಿಸುತ ಸುರಸಿಂಧು ಗಂಗೆಯು ಪ್ರವಹಿಸುವ ಪರಿಯಲ್ಲಿ ಪಯಣದ ಹಾದಿಯಲಿ ಅತಿಶಯದಿ ಮೆರೆದರು ॥ ೮ ॥ ಮದನೇಶ್ವರ ದೇವಾಲಯದಲ್ಲಿ ಈ ರೀತಿ ಪಯಣವನು ಸುಲಭದಲಿ ಸಾಗಿಸುತ ಅಲ್ಲಲ್ಲಿ ಶಿಷ್ಯರನು ಹೆಚ್ಚಾಗಿ ಗಳಿಸುತ್ತ ಅತಿ ಶೀಘ್ರದಲ್ಲಿಯೇ ಆನಂದ ತೀರ್ಥರು ಸ್ತಂಭಪದವೆಂಬುವ ಸ್ಥಳವನ್ನು ಸೇರಿ ಲೋಕಪೂಜಿತನಾಗಿ ಮದನಾಧಿಪತಿ ಇರುವ ದೇವಮಂದಿರವನ್ನು ಭಕ್ತಿಯಲಿ ಹೊಕ್ಕರು ॥ ೯ ॥ ಆ ಸ್ಥಳದಿ ರಾತ್ರಿಯನು ಅಲ್ಲಿಯೇ ಕಳೆದು ಮುಂಜಾನೆ ಲಗುಬಗನೆ ನಿತ್ಯವಿಧಿಗಳ ಮುಗಿಸಿ ಸಜ್ಜಾಗಿ ನಿಂದಿರುವ ಗುರುಗಳನು ಕಂಡು ಮು೦ಬರುವ ಪಯಣಕಿದು ಸೂಚನೆ ಎಂದರಿತು ಶಿಷ್ಯರೆಲ್ಲರೂ ಇದನು ಸೂಕ್ಷ್ಮದಲಿ ಗ್ರಹಿಸಿ ಗುರುಗಳ ಒಡಗೂಡಿ ತೆರಳಲನುವಾದರು ॥ ೧೦ ॥ ಪಯಣಕ್ಕೆ ಅಣಿಯಾದ ಆ ಮಧ್ವ ಶಿಷ್ಯರು ಕಾಷಾಯ ವಸ್ತ್ರಗಳ ಕಟ್ಟಿ ಸುತ್ತಿಟ್ಟು ಸ್ವಯೋಗ್ಯ ಮುದ್ರೆಯ ದಂಡ ಕಮಂಡಲುಗಳ ಮತ್ತಿತರ ಆಶ್ರಮದ ಎಲ್ಲ ಸಾಮಗ್ರಿಯನು ಸುವ್ಯವಸ್ಥಿತವಾಗಿ ಕಟ್ಟಿಟ್ಟ ಬಳಿಕ ಮುಂಬರುವ ಪಯಣಕ್ಕೆ ಸನ್ನದ್ಧರಾದರು ॥ ೧೧ ॥ ಆಚಾರ್ಯ ಮಧ್ವರು ಮುಖದಲ್ಲಿ ಧರಿಸಿದ್ದ ಚಕ್ರ ಶಂಖದ ಮುದ್ರೆ, ಊರ್ಧ್ವ ಪುಂಡ್ರಗಳೆಲ್ಲ ಶುಷ್ಕವಾಗಿಹುದನ್ನು ಶಿಷ್ಯನೊಬ್ಬನು ಕಂಡು ಧರಿಸಲತಿ ಶ್ರೇಷ್ಠತಮ, ಮನಕೆ ಮುದವನು ಕೊಡುವ ಶ್ರೀ ಹರಿಯ ನಿರ್ಮಾಲ್ಯ ತುಲಸಿಮಾಲೆಯನೊಂದ ಗುರುವ ಸಿರಿ ಕಂಠದಲಿ ಭಕ್ತಿಯೊಳು ಮುಡಿಸಿದನು ॥ ೧೨ ॥ ಉಸಿರು, ಮಾತುಗಳನ್ನು ಅಂಕೆಯಲಿ ಇರಿಸುತ್ತ ಗುರುಮಧ್ವರ ಶಿಷ್ಯ ಯತಿ ಶ್ರೇಷ್ಠರೊಬ್ಬರು ಪರಿಶುದ್ಧ ಮನದಿಂದ, ಅತಿ ಶುದ್ಧ ಹಸ್ತದಲಿ ಕುಂಡಲದಿ ಶೋಭಿಸುವ, ಗುಣಬದ್ಧವಾಗಿದ್ದ ಚಕ್ರ, ಮೂರ್ತಿಗಳಿಂದ ತುಂಬಿ ತುಳುಕುತಲಿದ್ದ ದೇವರ ಪೆಟ್ಟಿಗೆಯ ತಲೆಯಲ್ಲಿ ಹೊತ್ತರು ॥ ೧೩ ॥ ಮಂಡಲ, ಕಮಂಡಲದ ಭಾರವನು ಹೊತ್ತು ಅತಿ ಭಾರ ಪುಸ್ತಕದ ಹೊರೆಯನ್ನು ಹೊತ್ತು ತರುಣ ಶಿಷ್ಯರ ಗಡಣ ಪಯಣಕ್ಕೆ ಅನುವಾಯ್ತು ಆಯಾಸದ ಕುರುಹು ಅವರಾರಿಗೂ ಇಲ್ಲ ದಕ್ಷತೆಯೇ ಮೈವೆತ್ತಿ ನಿಂತ ಆ ಶಿಷ್ಯರಿಗೆ ಒಪ್ಪಿಸಿದ ಕೆಲಸದಲಿ ಅತಿಯಾದ ಆಸಕ್ತಿ ॥ ೧೪ ॥ ಇಂತು ಆ ಪಯಣಿಗರು ಅಣಿಯಾಗುತಿರಲು ಹೊಸದಾಗಿ ಶಿಷ್ಯಗಣ ಸೇರಿದವನೊಬ್ಬ ಹೊರೆಯನ್ನು ಬಿಗಿಯುವ ಹಗ್ಗವನು ಕಾಣದೆ ಪರದಾಡಿ, ಪರದಾಡಿ, ಎಲ್ಲರಲಿ ಬಂದು "ಹಗ್ಗವನು ಕಂಡಿರಾ ?" ಎನ್ನುವುದ ಕೇಳಿ ಮುಳುಗಿದರು ಎಲ್ಲರೂ ನಗೆಗಡಲಿನಲ್ಲಿ ॥ ೧೫ ॥ ಮುಂದುವರಿದ ಪ್ರಯಾಣ ಮಧ್ವಶಿಷ್ಯರು ಇಂತು ಪಯಣಕ್ಕೆ ಅಣಿಯಾಗಿ ಎಲ್ಲರೂ ತಲೆಯಲ್ಲಿ ಹೊರೆಯನ್ನು ಹೊತ್ತು ಪಯಣಕ್ಕೆ ಹೊರಡಲು ಸಿದ್ಧರಾಗಿರುವಾಗ ಮಂದಿರದ ಘಂಟೆಯ ಘನನಾದದಿಂದ ಪ್ರೇರಿತರು ತಾವಾಗಿ ಆನಂದ ತೀರ್ಥರು ಶಿಷ್ಯವೃಂದವ ಕೂಡಿ ತಾವು ಹೊರ ಹೊರಟರು ॥ ೧೬ ॥ ವಾರಣ ನಿವಾರಣ ಆಚಾರ್ಯ ಮಧ್ವರು ವರಣೀಯರವರು, ವ್ರತರಾಜರವರು ಶಿಷ್ಯನೊಬ್ಬನು ಆಗ ಬೆಳ್ಗೊಡೆಯ ತಂದು ಆಚಾರ್ಯ ಶಿರದಲ್ಲಿ ಭಕ್ತಿಯಲಿ ಇರಿಸಿದನು ಪ್ರಜ್ವಲಿಸಿ ಬೆಳಗುವ ಉದಯ ರವಿಯೊಡನೆ ಕಂಗೊಳಿಪ ಚಂದ್ರಮನ ಕಾಂತಿಯಂತಾಯ್ತು ॥ ೧೭ ॥ ಮೂರು ಭುವನಗಳನ್ನು ಧರಿಸಿಹ ಮುಕುಂದ ಆತನನು ಹೃದಯದಲಿ ಧರಿಸಿಹರು ಮಧ್ವರು ಇಂತಹ ಮಹಿಮರನು ಶಿಷ್ಯನೊಬ್ಬನು ಅಂದು ಭುಜದಲ್ಲಿ ಧರಿಸಿದನು ಆನಂದದಿಂದ ಇದರಲ್ಲಿ ಅಚ್ಚರಿಯು ಕಿಂಚಿತ್ತು ಇಲ್ಲ ಆ ಶಿಷ್ಯನನೆ ಧರಿಸಿಹರು ಪ್ರಾಣಪತಿ ಮಧ್ವರು॥ ೧೮ ॥ ಕಾಮ್ಯ ಭಾವನೆಗಳನೆಲ್ಲವನೂ ವರ್ಜಿಸಿಹ ಶೃತಿವಾಕ್ಯವೆಲ್ಲವನೂ ತಪ್ಪದೆಯೆ ಪಾಲಿಸುವ ಮುನಿವರೇಣ್ಯರ ಮತ್ತು ಸದ್ಗೃಹಸ್ಥರ ಜೊತೆಗೆ ಸಾವಿರದ ಸಂಖ್ಯೆಯಲಿ ಬ್ರಹ್ಮಚಾರಿಗಳೆಲ್ಲ ವರ್ಣಧರ್ಮಗಳೇ ಬಂದು ಮೂರ್ತಿವೆತ್ತಂತಾಗಿ ಮುನ್ನಡೆದ ಮಧ್ವರನು ಹಿಂಬಾಲಿಸಿದರು ॥ ೧೯ ॥ ಇಂತು ಮುನ್ನಡೆದ ಆ ಮಧ್ವರ ಹಿಂದೆ ಸಾವಿರದ ಸಂಖ್ಯೆಯಲಿ ನಡೆದರಾ ಮಂದಿ ಪುರುಷಸರ್ವೋತ್ತಮರು, ಆನಂದ ತೀರ್ಥರು ಅವರನ್ನು ಕಣ್ಣಾರೆ ಕಂಡಿದ್ದ ಮಂದಿಗೆ ಪಯಣದ ಶ್ರಮವಿನಿತು ತೋರಲೇ ಇಲ್ಲ ಆಚಾರ್ಯ ಸ್ಮರಣೆಯೇ ಮುಕುತಿಯನು ನೀಡುವುದು ॥ ೨೦ ॥ ಜಯಸಿಂಹ ರಾಜನಿಂದ ಸ್ವಾಗತ ಮದನಾಧಿಪತಿ ಇರುವ ಆ ತಾಣದಲ್ಲಿ ಆಚಾರ್ಯ ಮಧ್ವರು ಬಂದಿಹುದ ಕೇಳಿ ಸ್ತಂಭಕೇಸರಿ ಎಂಬ ಬಿರುದನ್ನು ಹೊತ್ತ ಜಯಸಿಂಹನೆಂಬುವ ಆಳರಸನಾಗ ತನ್ನೆಲ್ಲ ಪರಿವಾರ ಜನರನ್ನು ಕೂಡಿ ತ್ವರೆಯಿಂದ ಮಧ್ವರನು ಸ್ವಾಗತಿಸ ಹೊರಟ ॥ ೨೧ ॥ ಮಧ್ವರಾಯರು ಬರುವ ಸ್ವಲ್ಪ ಹೊತ್ತಿಗೆ ಮುನ್ನ ಜಯಸಿಂಹ ರಾಜನು ಆ ಸ್ಥಳಕೆ ಬಂದು ತ್ವರೆಯಿಂದ ಪಲ್ಲಕ್ಕಿಯಿಂದಿಳಿದು ನಿಂತು ಅಂಗ ರಕ್ಷಕರನ್ನು ದೂರದಲ್ಲಿರಿಸಿ ವಿಪ್ರರ ಹಿಂದೆ ತಾ ಗೌರವದಿ ನಡೆದು ತ್ರಿಜಗವಂದಿತರಾದ ಮಧ್ವರಿಗೆ ನಮಿಸಿದನು ॥ ೨೨ ॥ ಜಯಸಿಂಹ ರಾಜನಿಗೆ ಗುರುಗಳಲಿ ಅತಿ ಭಕ್ತಿ ವಿನಯ ಗೌರವದಿಂದ ಆರ್ದ್ರವಾಗಿಹ ಮನಸು ಗುರುಗಳನು ಆದರದಿ ಸ್ವಾಗತಿಸಿ ರಾಜನು ಮಧ್ವರನು ಮುಂದಿಟ್ಟು ಹಿಂದೆ ತಾ ನಡೆದನು ತ್ವರೆಯಿಂದ ಪಯಣಿಸುತ ಆ ಗುರುಶಿಷ್ಯಗಣವು ವಿಷ್ಣುಮಂಗಲದೊಂದು ಮಂದಿರಕೆ ಬಂದರು ॥ ೨೩ ॥ ನರದೇವನನು ಕಾಂಬ ತವಕದಲಿ ಹಳ್ಳಿಗರು ನೂರಾರು ಸಂಖ್ಯೆಯಲಿ ಹಾದಿಯಲಿ ನಿಂದು ಪರಿವಾರದಾಗಮನ ಕಾಂಬುದಕೆ ಕಾದರು ರಾಜನ ಜೊತೆಯಲ್ಲಿ ಗುರುಗಳನೂ ಕಂಡು ಚಕಿತಗೊಂಡರು ಅವರು ಮಧ್ವತೇಜವ ಕಂಡು ಆ ಕಾಂತಿ ರಾಶಿಯನು ಕಾತುರದಿ ಸವಿದರು ॥ ೨೪ ॥ ಶ್ರೀ ಆಚಾರ್ಯರ ಅಪೂರ್ವ ಆಕೃತಿಯ ವರ್ಣನೆ ಮಧ್ವಶಿಷ್ಯರ ಗಡಣ ನೋಡುವುದಕೆ ಹಬ್ಬ ! ತೋಳಿನಲಿ ಮುದ್ರೆಗಳು, ಶಂಖಚಕ್ರದ ಚಿಹ್ನೆ! ಕೊರಳಲ್ಲಿ ರಮಣೀಯ ಕಮಲಾಕ್ಷಮಾಲೆ ಸಂಭ್ರಮದ ಉತ್ಸವದ ಮುಂಚೂಣಿಯಲ್ಲಿ ನಲಿಯುತ್ತ ನರ್ತಿಸುವ ನರ್ತನವಿಶಾರದರು ! ಇನಿದನಿಯ ಇಂಪಾದ ಗಾಯನದ ಗಾಯಕರು ॥ ೨೫ ॥ ಗುರುಗಳ ಕರುಣೆಯನು ಪಡೆಯ ಬೇಕೆನ್ನುವ ಉತ್ಕಟಾಕಾಂಕ್ಷೆಯಲಿ ಜಯಸಿಂಹ ರಾಜನು ಕಾಪಟ್ಯವನು ತ್ಯಜಿಸಿ ದಾಸ್ಯವನು ಹೊಂದಿ ಜನತೆಯ ಒತ್ತಡವ ಕಿಂಚಿತ್ತು ಲಕ್ಷಿಸದೆ ಗುರುಗಳನು ಅನುಸರಿಸಿ ಅತಿ ವಿನಯಭಾವದಲಿ ಕೈಗಳನು ಜೋಡಿಸುತ ಭಕ್ತಿಯಲಿ ನಡೆದನು ॥ ೨೬ ॥ ಗುರು ಮಧ್ವರಾಯರದು ಅತಿ ಹಿರಿಯ ವ್ಯಕ್ತಿತ್ವ! ಇದು ಹೀಗೆಯೇ ಎಂದು ನಿರ್ಧರಿಸಲಾಗದದು ಆ ದಿವ್ಯ ತೇಜಸ್ಸು ! ಆ ಪ್ರಖರ ಕಾಂತಿಯು ! ಸೂರ್ಯನನು ನಾಚಿಸುವ ಆ ಜಾಜ್ವಲ್ಯ ಪ್ರಭೆಯು ಅವರು ನಡೆದಾಡುವ ಭೂಮಿಯನ್ನೆಲ್ಲ ಸೂರ್ಯನಿಗೂ ಮಿಗಿಲಾಗಿ ಬೆಳಗಿ ಬರುತಿದ್ದರು ॥ ೨೭ ಮಧ್ವ ಮುನಿಗಳ ನಡಿಗೆ ಅತಿ ಗಂಭೀರವಹುದು ಗತಿಯು ಅತಿ ತ್ವರಿತ; ಆದರೂ ತೋರುವುದು ಅತಿ ನಿಧಾನ ಯುವ ಕೇಸರಿಯ ತೆರದಿ ಗಂಭೀರ ಹೆಜ್ಜೆಗಳು ಪಾದಪಲ್ಲವವೆರಡು ಅತಿ ಕೆಂಪು ಬಣ್ಣ ಇಂಥ ಅಡಿಗಳನಿಟ್ಟು ಆನಂದ ತೀರ್ಥರು ಇಡಿಯ ಭೂಮಂಡಲವ ಪಾವನಗೊಳಿಸಿದರು ॥ ೨೮ ॥ ಮಧ್ವಮುನಿಗಳ ಉಗುರ ಆ ದಿವ್ಯ ಕಾಂತಿಯು ಪದ್ಮರಾಗದ ಮಣಿಯ ಕೆಂಪ ಹೋಲುತಲಿತ್ತು ವರಕೂರ್ಮನಂತಿತ್ತು ಅವರ ಮುಂಗಾಲುಗಳು ಅತಿ ಗೂಢವಹುದವರ ಪಾದದ ಹರಡಿಗಳು ಸುರವರ್ಯ ಕರಗಳಲಿ ಸೇವ್ಯ ಆ ಜಂಘಗಳು ತೊಡೆಯೆರಡು ಆನೆಯ ಸೊಂಡಿಲುಗಳಂತೆ ॥ ೨೯ ॥ ಶುಭ ಶುದ್ಧ ಕಟಿಯಲ್ಲಿ ರಾಜಿಸುತ್ತಿಹ ವಸ್ತ್ರ ಆ ಬಾಹು ವಸ್ತ್ರವು ಶುದ್ಧ ರೇಷಿಮೆಯಹುದು ಮಧ್ವರಾ ಉದರದಲಿ, ಕಂಠ, ಲಲಾಟದಲಿ ಮೂರು ಸುಸ್ಪಷ್ಟ ಶ್ರೇಷ್ಠತಮ ರೇಖೆಗಳು ಪ್ರಕಟಗೊಂಡಿಹವಲ್ಲಿ ಶೋಭಾಯಮಾನದಲಿ ಮಧ್ವ ಕಾಯದ ಸೊಬಗು ಅತಿ ವರ್ಣನೀಯ ॥ ೩೦ ॥ ಮಧ್ವಮುನಿ ಹೊದೆದಿರುವ ಆ ಶಾಲಿನ ಸೊಬಗು ! ಅತಿ ನವಿರು, ಕೋಮಲ, ಅತಿ ಗಾಢ ಕೆಂಪು ! ಈ ಕ್ಷಣದಿ ಉದಿಸಿರುವ ಸೂರ್ಯ ಕಿರಣದ ತೆರದಿ ಮನಸೂರೆಗೈಯುವುದು ನಯವಾದ ಉಣ್ಣೆಯದು ಇಂಥ ಶಾಲನು ಹೊದೆದ ಆ ಮಧ್ವಮುನಿಗಳು ಸ್ವರ್ಣ ಶಿಖರವ ಪಡೆದ ಮೇರುಗಿರಿಯಾದರು ॥ ೩೧ ॥ ಆನಂದ ತೀರ್ಥರ ಆ ಚಂದ ಕಾಯ ! ವಕ್ಷವೈಶಾಲ್ಯವದು ರಮ್ಯ ರಮಣೀಯ ! ಹೆಗಲುಗಳು ಉತ್ತುಂಗ, ಬಾಹುಗಳು ಅತಿ ಪುಷ್ಟ ಪಾಣಿಪಲ್ಲವವೆರಡೂ ಮಧುರ ಪಾಟಲ ವರ್ಣ ಅವುಗಳಲಿ ಬೆಳಗಿರುವ ಆ ಊರ್ಧ್ವ ರೇಖೆ ಧ್ವಜ, ಚಕ್ರ, ಮೊದಲಾದ ಶ್ರೇಷ್ಠತಮ ಲಾಂಛನ !॥ ೩೨ ॥ ಆನಂದ ತೀರ್ಥರ ಆ ಚಂದ್ರ ವದನ ! ಮೊದಲ ನೋಟಕೆ ಪೂರ್ಣ ಚಂದ್ರಬಿಂಬದ ತರಹ ಪರಿಶುದ್ಧ ಕಾಂತಿಯ ಆಗರವು ಆಗಿಹುದು ಬಳಿಕ ಆ ನಲ್ಮೊಗವು ಅಕಳಂಕವೆಂಬುದನು ಅರಿತ ಆ ನೋಟಕರು ವಿಭ್ರಾಂತರಾಗುವರು ಚಂದ್ರಮಂಡಲಕಿಂತ ಆ ವದನವೇ ಪರಿಶುದ್ಧ! ॥ ೩೩ ॥ ಆನಂದ ತೀರ್ಥರ ಆ ದಂತ ಪಂಕ್ತಿ! ಮಂದಹಾಸದಿ ಹೊಳೆವ ಕುಂದ ಪುಷ್ಪಗಳಂತೆ ಅರುಣ ರಾಗದ ಅಧರ ಅತ್ಯಂತ ಸುಂದರ ! ತಾವರೆಯ ಹೂಗಳನು ಹೋಲುವಾ ಕಣ್ಣುಗಳು ! ಆ ಕಂಗಳಿನ ನೋಟದಲಿ ಸಕಲ ಲೋಕಗಳನ್ನು ಆನಂದ ಪಡಿಸುವರು ಆನಂದ ತೀರ್ಥರು ॥ ೩೪ ॥ ಅವರ ಕರ್ಣದ್ವಯವು ಅತ್ಯಂತ ಭಾಸುರವು ತುಳಸಿಯ ಗುಚ್ಛಗಳು ಶೋಭಿಸಿವೆ ಕಿವಿಗಳಲಿ ಅವರ ಆ ಕೆನ್ನೆಗಳ ಕಾಂತಿ ಅದ್ಭುತವಹುದು ಮೂರು ಭುವನಗಳಲ್ಲಿ ಅವರ ಆ ಭ್ರೂಲಾಸ್ಯ ಸಜ್ಜನಕೆ ಒಳಿತನ್ನೂ ದುಷ್ಟರಿಗೆ ಕೆಡುಕನ್ನೂ ತರುವಲ್ಲಿ ನಿಪುಣತೆಯ ಸಾಧಿಸಿತ್ತು ॥ ೩೫ ॥ ಪುರುಷ ಲಕ್ಷಣವನ್ನು ಚೆನ್ನಾಗಿ ಅರಿತವರು ಮಧ್ವಮುನಿಗಳ ಸಕಲ ಅವಯವನು ನೋಡಿ ಲಕ್ಷಣದ ಶಾಸ್ತ್ರಕ್ಕೆ ಇದು ನಿದರ್ಶನವೆಂದು ಅವಯವದಿ ಅಧ್ಯಯನಕಿದುವೆ ಮಾದರಿಯೆಂದು ಒಮ್ಮತದಿಂ ನಿರ್ಧರಿಸಿ ತೀರ್ಮಾನಿಸಿದರು ಇಂತಿರಲು ನಾವವರ ಬಣ್ಣಿಪುದು ಸರಿಯೆ ? ॥ ೩೬ ॥ ಸಭೆಯಲ್ಲಿ ಶ್ರೀ ಮಧ್ವಾಚಾರ್ಯರು ಮಧ್ವದರ್ಶನ ಬಯಸಿ ಕಾತುರದಿ ನಿಂದರು ಸಾವಿರದ ಸಂಖ್ಯೆಯಲಿ ಆ ಹಳ್ಳಿಗಳ ಮಂದಿ ದರ್ಶನಾರ್ಥಿಗಳಲ್ಲಿ ನೂರಾರು ಮಂದಿ ನೂಕುನುಗ್ಗಲಿಗಂಜಿ ದೂರವೇ ಉಳಿದರು ತಮ್ಮ ದರ್ಶನ ಭಾಗ್ಯ ಎಲ್ಲರಿಗೂ ಸಿಗಲೆಂದು ಮಧ್ವಮುನಿ ಎದೆಯನ್ನು ಎತ್ತರಿಸಿ ನಿಂದರು ॥ ೩೭ ॥ ಅರಳಿರುವ ಕಣ್ಣುಗಳು, ಜೋಡಿಸಿಹ ಕೈಗಳು ವಿನಯ ಭೂಷಿತರಾಗಿ ಆನಂದ ತೀರ್ಥರು ಪರಮ ಗೌರವದಿಂದ ತಮ್ಮನ್ನು ಸ್ವಾಗತಿಸಿ ಸತ್ಕರಿಸಿದಾ ಮಂದಿಯನು ತ್ವರಿತದಲಿ ಜೊತೆಗೂಡಿ ಶ್ರೀ ಹರಿಗೆ ಪ್ರಿಯವಾದ ಮತ್ತೊಂದು ಮಂದಿರವ ಭಕ್ತಿಯಲಿ ಹರಿನಾಮ ಜಪಿಸುತ್ತ ಸೇರಿದರು ॥ ೩೮ ॥ ಜಯಸಿಂಹನೇರ್ಪಡಿಸಿ ರಾಜ ಸಭೆಯೊಂದ ನೂರಾರು ಜನರನ್ನು ಆಹ್ವಾನಿಸಿದ್ದ ಆ ರಾಜಸಭೆಯಲ್ಲಿ ಮಧ್ವಮುನಿ ಅಧ್ವರ್ಯು ರಾಜರು ಬೆಳಗಿದರು ತಾರೆಗಳ ತೆರದಲ್ಲಿ ಆ ತಾರೆಗಳ ನಿವಹದಲಿ ಜಯಸಿಂಹ ಮಂಗಳನು ಈ ನಕ್ಷತ್ರ ಮಂಡಲದಿ ಮಧ್ವರೇ ಚಂದ್ರಮರು ॥ ೩೯ ॥ ಭಾಗವತ ಪ್ರವಚನ ಮಧ್ವಮುನಿಗಳ ಶಿಷ್ಯ ಹೃಷಿಕೇಶ ತೀರ್ಥರು ಅನುರೂಪ ಗುಣಗಳಿಗೆ ಭಾಜನರು ಅವರು ಭಾಗವತ ವಾಚನದಿ ಪರಮ ಪರಿಣತರು ಶಿಷ್ಯರಾ ವಾಚನಕೆ ಆನಂದ ತೀರ್ಥರು ಭವದ ಬಂಧಗಳನ್ನು ಸುಲಭದಲಿ ಪರಿಹರಿಪ ಚಕ್ರಪಾಣಿಯ ಕಥೆಯ ವ್ಯಾಖ್ಯಾನ ಮಾಡಿದರು ॥ ೪೦ ॥ ಅವರ ಆ ಕಥನವು ಪರಮ ಧೈರ್ಯದ ಸಾರ ಮಧುರ ಪುಷ್ಕಲ ಭಾವ, ಪರಿಪೂರ್ಣ ಪಾಂಡಿತ್ಯ ಸುಪ್ರಸನ್ನತೆಯನ್ನು ಸೂಸುವಾ ಪ್ರವಚನವು ಪಂಡಿತರ, ಪಾಮರರ ಮನವನ್ನು ಗೆಲಿದಿತ್ತು ಆನಂದ ಜಲದಿಂದ ತುಂಬಿದ್ದ ಸಾಗರದಿ ಶ್ರೋತೃಗಳನೆಲ್ಲರನೂ ಸಂಪೂರ್ಣ ಮುಳುಗಿಸಿತು ॥ ೪೧ ॥ ಆನಂದ ತೀರ್ಥರ ದಿವ್ಯ ಲೀಲೆಗಳನ್ನು ನನ್ನಂಥ ಪಾಮರಗೆ ಬಣ್ಣಿಸಲು ಸಾಧ್ಯವೆ ? ಆವರ ಆ ಆಸನವು, ಗಮನ, ಸಂಕಥೆಗಳು ಮುಂತಾದ ಲೀಲೆಗಳ ಸ್ಮರಣೆಯಿಂದಲೆ ಸಾಕು ಭವದ ಬಂಧನ ನೀಗಿ ಮುಕುತಿ ದೊರಕುವುದು ಅವುಗಳನು ಬಣ್ಣಿಸಲು ಅಮರರಿಗೇ ಸಾಧ್ಯ ॥ ೪೨ ॥ ತ್ರಿವಿಕ್ರಮ ಪಂಡಿತರ ಪೂರ್ವೋತ್ತರ ಅಂದಿನಾ ದಿನದಲ್ಲಿ ಆ ಕಾಲದಲ್ಲಿ ಅಭವದ್ಗು ಹರೆಂಬ ಹೆಸರನ್ನು ಹೊತ್ತ ಲಿಕುಚ ವಂಶೋದ್ಭವರು, ಪಂಡಿತೋತ್ತಮರು ಆಂಗಿರಸ ಗೋತ್ರದಲಿ ಜನಿಸಿದ ಮಹಿಮರು ಶ್ರೇಷ್ಠತಮ ಕವಿಗಳು, ಉತ್ತಮ ತಪಸ್ವಿಗಳು ಅಖಿಲ ವಾದಿಗಳಿಂದ ವಂದನೀಯರು ಅವರು ॥ ೪೩ ॥ ಆ ಪಂಡಿತೋತ್ತಮರಿಗೆ ಪತ್ನಿಯೋರ್ವಳು ಇದ್ದು ಅನುರೂಪ ದಾಂಪತ್ಯ ಅವರದಾಗಿತ್ತು ವಾತ್ಸಲ್ಯಮಯಿ ಆಕೆ ಶ್ರೀ ಕೃಷ್ಣ ಭಕ್ತಿ ಸಕಲ ಸದ್ಗುಣ ಭರಿತೆ, ಸೌಜನ್ಯ ಶೀಲೆ ವಿಧಿಬರಹದಿಂದವಳು ಪುತ್ರ ಶೋಕವ ಹೊಂದಿ ಸಂತಾನ ಪಡೆಯಲು ಹರಿ ಹರರ ಸ್ತುತಿಸಿದಳು.॥ ೪೪ ॥ ಹರಿ ಹರರ ಕೃಪೆಯಿಂದ ಆ ಸೂರಿಪತ್ನಿ ಸುತರತ್ನವೊಂದನ್ನು ಶೀಘ್ರದಲಿ ಪಡೆದಳು ವಿಬುಧ ಸಭೆಯೆಂಬುವ ಶ್ರೇಷ್ಠ ಪಟ್ಟಣದಲ್ಲಿ ರತ್ನ ಪರಿವೀಕ್ಷಕರು ರತ್ನಗಳ ಮೌಲ್ಯವನು ನಿರ್ಧರಿಸಲಾಗದೆ ಕೈಕಟ್ಟಿ ಕುಳಿತಂತೆ ಆ ಪುತ್ರರತ್ನದ ಮೌಲ್ಯ ತಿಳಿಯದೆ ಹೋಯ್ತು ॥ ೪೫ ॥ ತಂದೆ, ಆ ನಂದನನ ವದನೇಂದುವನು ನೋಡಿ - ತನ್ನ ಕುಲ ಉದ್ಧರಿಪ ಸುತನು ಇವನೆಂದರಿತು ಕೃತ ಕೃತ್ಯ ಭಾವದಲಿ ಆನಂದ ಪೊಂದಿದರು ಜಾತಕರ್ಮಾದಿಗಳ ವಿಹಿತದಲಿ ಪೂರೈಸಿ ಸೂಕ್ತ ಹೆಸರೊಂದನ್ನು ಸುತನಿಗಿಡಬೇಕೆಂದೆನಿಸಿ ತ್ರಿವಿಕ್ರಮನೆಂದವಗೆ ಹೆಸರನಿರಿಸಿದರು ॥ ೪೬ ॥ ಆ ಸೂರಿಪೋತನು ಅಚ್ಚರಿಯ ಕೂಸು ಕಲಭಾಷೆಯಲ್ಲಿಯೇ ಶ್ಲೋಕಗಳನೆಲ್ಲ ಯಾವ ದೋಷವೂ ಇರದೆ ರಚಿಸುವಂತಹ ಕೂಸು ಆಕಾಶದಲ್ಲಿರುವ ಆ ಪೂಜ್ಯ ಸೂರ್ಯನು ಉದಿಸಿದ ಕ್ಷಣದಲ್ಲೇ ಪ್ರಖರವಾಗಿರುವಂತೆ ಈ ಶಿಶುವೂ ಪ್ರತಿಭೆಯ ಪ್ರಖರತೆಯ ತೋರಿತ್ತು ॥ ೪೭ ॥ ಸಕಲ ವೇದಾಂಗಗಳ ಅಧ್ಯಯನ ಮಾಡಿ ಲಿಕುಚ ವಂಶೋದ್ಭವರಾದ ಈ ತ್ರಿವಿಕ್ರಮರು ಅಂದಿನ ಕಾಲದ ಎಲ್ಲ ಪಂಡಿತ ಗಣದ ಮಾನ್ಯತೆಯ ಗಳಿಸುತ್ತ ವಿಖ್ಯಾತರಾದರು ಸಜ್ಜನರು ಎಂಬುವ ದಾರಿಗರ ಉಪಕರಿಸಿ ಕಾವ್ಯವೆಂಬುವ ಫಲದ ರಸವ ನೀಡಿದರು ॥ ೪೮ ॥ ಮಾಯಾವಾದವಿದು ತರ್ಕಕ್ಕೆ ದೂರ ಪೂರ್ವಾಪರ ಚಿಂತನೆಗೆ ಇದು ಒಂದು ಆಭಾಸ ಇಂತೆಂದು ಅವರಾಗಿ ಪ್ರತಿ ಪಾದಿಸಿದರು ಅವರ ಸಂಶಯವನ್ನು ಗುರು ನಿವಾರಿಸಲಿಲ್ಲ ಆದರೂ ಗೆಳೆಯರ ಮನವಿಗೆ ಮನಸೋತು ಗುರುಗಳ ಪ್ರವಚನವ ಶ್ರವಣ ಮಾಡಿದರು ॥ ೪೯ ॥ ವಾಗ್ವಿಲಾಸದಿ ಕೂಡಿ ಆ ತ್ರಿವಿಕ್ರಮರು ನಾರಾಯಣನ ತೆರದಿ ವೇದ ನಿಪುಣತೆಯೆಂಬ ಉದಯವನು ಹೊಂದುತ್ತ ಬಾಲ್ಯವನು ತ್ಯಜಿಸಿದರು ಇಂತು ಆ ತ್ರಿವಿಕ್ರಮರು ಪ್ರೌಢರಾಗುತ್ತಿರಲು ಭಾನುಪಂಡಿತನಂಥ ಸಕಲ ವಾದಿಗಳೆಲ್ಲ ಸೂರ್ಯನೆದುರಿನ ಮಿಣುಕು ಹುಳುವಿನಂತಾದರು ॥ ೫೦ ॥ ಸಪಾದ ಲಕ್ಷವಿಹ ಮಾಯಾವಾದದ ಗ್ರಂಥ ಇವುಗಳಲಿ ಪರಿಣತಿಯ ಪಡೆದಿಹರು ತ್ರಿವಿಕ್ರಮರು ಅತಿ ಸೂಕ್ಷ್ಮಮತಿಯವರು, ಯುಕ್ತಿಶೂರರು ಅವರು ಹಿರಿಮೆಯಿಂದಲಿ ಅವರು ಜಗದಲ್ಲಿ ಮಾನ್ಯರು ಇಂತಹ ನಂದನನ ಹತ್ತಿರಕೆ ಕರೆದು ಏಕಾಂತದಲಿ ತಂದೆ ಇಂತೆಂದು ಉಸುರಿದರು ॥ ೫೧ ॥ "ಆಲಿಸು, ಓ, ಕಂದ! ಆಲಿಸೆನ್ನಯ ಮಾತ ಎಚ್ಚರಿಕೆಯಿಂದ ನುಡಿಯುತಿಹೆ ಈ ಮಾತ ಸಂಪೂರ್ಣ ಅರಿವಿಂದ ಪರಮಾತ್ಮ ನಿರ್ಗುಣನು ಎಂಬ ಭಾವನೆ ಮಿಥ್ಯ ಕಲಿಯುಗದಲೀ ಮಾತು ಸುಖಕೆ ಸಾಧನವಿರದು ಸಕಲ ಗುಣ ಪರಿಪೂರ್ಣ ಈ ವಾಸುದೇವ ಮುಕುತಿ ಪೊಂದಲು ನೀನು ಆತನನೇ ಸ್ಮರಿಸು" ॥ ೫೨ ॥ ಪಂಡಿತೋತ್ತಮ ಪಿತರ ಈ ಮಾತನಾಲಿಸುತ ಸುತನು ಅನುಭವಿಸಿದನು ಅತಿ ತೀವ್ರ ಗೊಂದಲವ ತಂದೆಯಾ ನುಡಿಗಳಲಿ ಸಂದೇಹವುಂಟಾಯ್ತು ಸತ್ಯವನು ಶಾಸ್ತ್ರಾರ್ಥ ಒರೆಗಲ್ಲಿನಲ್ಲಿರಿಸಿ ಸಂಸಾರ ಸಾಗರವ ದಾಟುವ ಬಯಕೆಯಲಿ ನಿರ್ಗುಣೋಪಾಸನೆಯ ಶ್ರವಣ ಮಾಡಿದರು ॥ ೫೩ ॥ ವಿಹಿತ ಧರ್ಮದ ನಿರತ ಆ ತ್ರಿವಿಕ್ರಮರು ಭವಿಗಳಲಿ ಶ್ರೇಷ್ಠರು, ಶ್ರೇಷ್ಠ ಅನುಭಾವಿಗಳು ಅತಿ ತೀಕ್ಷ್ಣಮತಿಯನ್ನು ಹುಟ್ಟಿನಲೇ ಪಡೆದವರು ಕಲಿಗಾಲ ಬಲದಿಂದ ವ್ಯಾಕುಲವ ಹೊಂದಿದರು ಶಾಸ್ತ್ರ ಪ್ರಮೇಯದಲಿ ಗೊಂದಲವ ಕಾಣುತ್ತ ಒಮ್ಮೆ ಇಂತೆಂದವರು ಆಲೋಚಿಸಿದರು ॥ ೫೪ ॥ "ಸತ್ಯವತೀ ಸುತರಿಂದ ರಚಿತವಾಗಿಹ ಸೂತ್ರ ತತ್ವ ನಿರ್ಣಯಕೆಲ್ಲ ಆಧಾರ ಸೂತ್ರ ಈ ಬ್ರಹ್ಮಸೂತ್ರಕ್ಕೆ ಏಕವಿಂಶತಿ ಭಾಷ್ಯ ಇವುಗಳಲಿ ಯಾವುವೂ ಮೂಲಕ್ಕೆ ಸರಿಯಲ್ಲ ಒಂದಕ್ಕೆ ಮತ್ತೊಂದು ತದ್ವಿರುದ್ಧ ಇವುಗಳ ಪ್ರಾಮಾಣ್ಯ ಸ್ವೀಕರಿಸಲಾರೆ" ॥ ೫೫ ॥ "ಇಂಥ ವಿಷಯದಿ ನಾವು ಆಗ್ರಹವ ಬಿಡಬೇಕು ಅಂತಹ ಆಗ್ರಹವ ತ್ಯಜಿಸಿ ಪರಿಕಿಸಿದಾಗ ಸೂತ್ರಗಳ ಅರ್ಥಕ್ಕೆ ಅನುಗುಣವು ಎನಿಸುವ ಒಂದಾದರೂ ಭಾಷ್ಯ ನಮಗೆ ದೊರೆಯುವುದಿಲ್ಲ ಶಂಕರಾಚಾರ್ಯ ಕೃತ ಭಾಷ್ಯವೊಂದನು ಮಾತ್ರ ಪಠಣ ಮಾಡದೆ ಇರಲು ಸಾಧ್ಯವೆಮಗಿಲ್ಲ ॥ ೫೬ ॥ "ಅಲ್ಪಮತಿಗಳು ನಾವು, ಅತಿ ಅಪ್ರಬುದ್ಧರು ಉಪನಿಷತ್ತಿನ ವಾಣಿ ಕೇಳಿಸದು ನಮಗೆ" ಎಂದೆನುತ ಪರಬ್ರಹ್ಮ ತತ್ವ ಮನಗಾಣದಿರೆ ಮುಕ್ತಿಯನು ಕಾಂಬುವುದು ಎಂತು ಸಾಧ್ಯ ? ಅದಕೆಂದೇ ನಾವಿಂದು ಬ್ರಹ್ಮಸೂತ್ರಗಳಂಥ ಸಚ್ಛಾಸ್ತ್ರಗಳಲಿರುವ ತತ್ವಗಳ ಚಿಂತಿಪೆವು ॥ ೫೭ ॥ "ತತ್ವವನು ಬಲ್ಲವರು ಇಂತು ಪೇಳುತಲಿಹರು ವಿತತನವ ಶ್ರೀ ಹರಿಯು ಅತ್ಯುಪಾಸ್ಯನು ಅವನು ಸುಜ್ಞಾನ, ಸುಖಪೂರ್ಣ, ಕರ ಚರಣ ಯುಕ್ತ ಇಂತು ಪ್ರತಿಪಾದಿತನು ಆ ನಮ್ಮ ಪರಮಾತ್ಮ ಆಗಲಾರನು ಬ್ರಹ್ಮ ಬರಿಯ ಬೆಳಕಿನ ರೂಪ ಶಾಸ್ತ್ರಗಳ ಸಾರವನು ನಾವರಿಯಬೇಕು ॥ ೫೮ ॥ "ಬ್ರಹ್ಮನೆಂಬುದು ಒಂದು ಬೆಳಕು ಸಹ ಅಲ್ಲವೆ ? ಹಾಗಾದರಲ್ಲೊಂದು ಕತ್ತಲೆಯ ತೆರೆ ಇಹುದೆ ? ಇಂಥ ಕತ್ತಲೆಯಲ್ಲಿ ಬ್ರಹ್ಮನನು ಕಾಂಬುವುದೆ ? ಮೋಕ್ಷವಹುದೆ ಬರಿಯ ಕತ್ತಲಿನ ತಡಕಾಟ ? ಬ್ರಹ್ಮ ನಿರ್ಗುಣನೆಂಬ ತತ್ವವದು ಮಿಥ್ಯ ಎಮ್ಮ ಉದ್ಧರಿಪುದೆ ಇಂತಹ ತತ್ವ ? ॥ ೫೯ ॥ "ವೇದಾದಿ ಶಾಸ್ತ್ರಗಳ, ಭಾರತ, ಪುರಾಣಗಳ ಸಾರಗಳ ಸಂಗ್ರಹಿಸಿ ಸ್ವತಃ ಯೋಚಿಸಬೇಕು ಅವುಗಳಲ್ಲಿನ ತಿರುಳ ಮನನ ಮಾಡಲೇ ಬೇಕು ಆ ಮುಕುಂದನು ಸಕಲ ಕಲ್ಯಾಣಗುಣ ಪೂರ್ಣ ಸ್ಮೃತ್ಯುಕ್ತ ಧರ್ಮಗಳ ವಿಹಿತದಲಿ ಆಚರಿಸಿ ಶ್ರೀ ಮುಕುಂದನ ನಾವು ಅನುದಿನವೂ ಸ್ಮರಿಸೋಣ" ॥ ೬೦ ॥ ಇಂತು ನಿಶ್ಚಯಿಸುತ್ತ ಆ ಪಂಡಿತಾಚಾರ್ಯರು ಅಪ್ರತಿಮ ಪ್ರತಿಭೆಯ ನೆರವನ್ನು ಪಡೆಯುತ್ತ ಅಂತರಂಗದ ದನಿಗೆ ಧ್ವನಿಯನ್ನು ಕೂಡಿಸುತ ವೇದಗಳ ಅಧ್ಯಯನದಿ ಸ್ವತಃ ತೊಡಗಿದರು ಈಗಾಗಲೇ ವ್ಯಾಪಿಸಿದ ಗುರುಮಧ್ವ ಕೀರ್ತಿ ಪಂಡಿತರ ಕಿವಿಗಳಿಗೂ ತ್ವರೆಯಿಂದ ಸೇರಿತು ॥ ೬೧ ॥ "ಪರಂಪರಾಗತವಹುದು ಈ ಮಾಯಾವಾದ ಇಂತಹ ಪ್ರಾಚೀನ ಶಾಸ್ತ್ರವನ್ನೀಗ ಮಧ್ವಮುನಿ ಎಂಬುವ ನಿಷ್ಣಾತ ವಾಗ್ಮಿಗಳು ಎಡಬಿಡದೆ ಖಂಡಿಸುತ ದಿಗ್ವಿಜಯ ಸಾರಿಹರು ಯುಕ್ತಿ ನಿಪುಣರು ನೀವು ಅವರ ಸೋಲಿಸಬೇಕು ಬೇರಾರಿಗೂ ಈ ಕೆಲಸ ಸಾಧ್ಯವಿಲ್ಲ" ॥ ೬೨ ॥ "ಪಂಡಿತರ ನಿವಹದಲಿ ತ್ರಿವಿಕ್ರಮರು ನೀವು ವಾದಿಗಜಗಳಲೆಲ್ಲ ಬಲಶಾಲಿಗಳು ನೀವು ವೇದ ತೀರ್ಥಗಳಲ್ಲಿ ಮಿಂದು ಬಂದವರು ಶಾಸ್ತ್ರ ವಾರಿಧಿಯಲ್ಲಿ ವಿಹರಿಸಿರುವವರು ನವಕಾವ್ಯರಸಗಳಲಿ ಅನುರಾಗ ತಳೆದಿಹಿರಿ ನಿಮ್ಮನೆದುರಿಪ ಗಜವು ಹುಟ್ಟಿಯೇ ಇಲ್ಲ" ॥ ೬೩ ॥ "ಒದಗಿಹುದು ಅವಕಾಶ ವಿಧಿಯ ಬಲದಿಂದೊಂದು ಮಧ್ವಮುನಿಯೆಂಬುವ ಪ್ರತಿವಾದಿ ಗಜವನ್ನು ಕೂಡಲೇ ಎದುರಿಸಿರಿ ನಿಮ್ಮೆಲ್ಲ ಬಲದಿಂದ ಸ್ವಜನ ವೃಂದಕೆ ಬಂದ ಭಯವನ್ನು ಪರಿಹರಿಸಿ ಚಂದ್ರಮನ ತೆರದಲ್ಲಿ ಧವಳ ಕೀರ್ತಿಯ ಗಳಿಸಿ ನಿಮ್ಮಲ್ಲಿ ಆಶ್ರಯವ ಬೇಡುವೆವು ನಾವಿಂದು" ॥ ೬೪ ॥ ಮಾಯಿಜನರಿಂದಿಂಥ ಪ್ರಾರ್ಥನೆಯ ಕೇಳಿ ಪೇಚಿನಲಿ ಸಿಲುಕಿದರು ಪಂಡಿತಾಚಾರ್ಯರು ತಮ್ಮದೇ ಜನರೆಂಬ ಒಂದು ಕಾರಣದಿಂದ ಅನುಕೂಲಕರವಾದ ಮಾತುಗಳನಾಡಿದರು ಸಂಶಯವ ಪರಿಹರಿಪ ಸಾಮರ್ಥ್ಯವುಳ್ಳವರು ಮಧ್ವರನು ಜಯಿಪುದಕೆ ಸಂಶಯವ ತಳೆದರು ॥ ೬೫ ॥ ಮಧ್ವ ವಚನಗಳೆಂಬ ತೀಕ್ಷ್ಣ ಅಂಕುಶವನ್ನು ಬಲವಾಗಿ ತಿವಿಯುವ ಕೆಲ ಮಧ್ವಶಿಷ್ಯರನು ಖೇದಗೊಳಿಸುತ ಅಟ್ಟಿ ಆ ತ್ರಿವಿಕ್ರಮರು ಮುನಿದೆದ್ದ ಮದ್ದಾನೆ ತೆರದಲ್ಲಿ ಓಡುತ್ತ ವಿವಿಧ ಉತ್ತರವೆಂಬ ಧೂಳಿಯನು ಎರಚುತ್ತ ಕುರುಡರನ್ನಾಗಿಸಿತು ಆ ಮಧ್ವ ಶಿಷ್ಯರನು ॥ ೬೬ ॥ ತ್ರಿವಿಕ್ರಮ ಪಂಡಿತರಿಂದ ಮಧ್ವಗ್ರಂಥಗಳ ಅಧ್ಯಯನ ಅತಿ ವಿವೇಕಿಗಳವರು, ಪಂಡಿತಾಚಾರ್ಯರು ರಾತ್ರಿಯ ಕಾಲದಲಿ ಅತಿ ಗೋಪ್ಯವಾಗಿ ಆನಂದ ತೀರ್ಥರ ಗ್ರಂಥ ಸಮುದಾಯವನು ಸೂಕ್ಷ್ಮಾವಲೋಕನದಿ ಅಧ್ಯಯನ ಮಾಡಿದರು ಮಧ್ವಮುನಿ ಮಂಡಿಸಿದ ಶಾಸ್ತ್ರ ಸಾರವ ಕಂಡು ವಿಸ್ಮಯವ ತಳೆದರು ತಮ್ಮ ಮನದಲ್ಲಿ ॥ ೬೭ ॥ ಬೆರಗಾದ ಪಂಡಿತರು ಬೆಳಗಾದ ಕೂಡಲೇ ವಿಷಯ ವಿನಿಮಯಕಾಗಿ ಮಧ್ವರನು ಕಂಡರು ನಾನಾ ಪ್ರಮೇಯಗಳ ಚರ್ಚೆಯನು ನಡೆಸಿ ಮಧ್ವ ಸಿದ್ಧಾಂತದಲಿ ದೋಷವಿಲ್ಲೆಂದರು ಆದರೂ ತಕ್ಷಣವೇ ಸ್ವೀಕರಿಸಲಿಲ್ಲ ಜ್ಞಾನಿಗಳು ಎಲ್ಲವನೂ ಒರೆಗಲ್ಲಲಿರಿಸುವರು ॥ ೬೮ ॥ ಶ್ರೀ ಮಧ್ವಾಚಾರ್ಯರ ಬಳಿಗೆ ತ್ರಿವಿಕ್ರಮ ಪಂಡಿತರ ಆಗಮನ ಚೆಲುಮೊಗದ ಕಿರುನಗೆಯ ಕಾಂತಿಯಿಂದೊಪ್ಪುವ ನೋಟಕರ ಮನಸಿಗೆ ಆನಂದವೀಯುವ ಆನಂದ ತೀರ್ಥರನು ವಿಷ್ಣು ಮಂಗಲದಲ್ಲಿ ಮಂದಹಾಸದ ಮೊಗದ ನಾಲ್ಮೊಗನ ಬಳಿಗೆ ತತ್ವಗಳ ತಿಳಿಯಲು ಅಮರೇಂದ್ರ ಬಂದಂತೆ ಪಂಡಿತಾಚಾರ್ಯರು ಬಂದು ನಮಿಸಿದರು ॥ ೬೯ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವ ವಿಜಯ ಕಾವ್ಯದ ಆನಂದಾಂಕಿತ ಹದಿಮೂರನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. . . ಶ್ರೀ ಗುರುಭ್ಯೋ ನಮ: ಹದಿನಾಲ್ಕನೆಯ ಸರ್ಗ ಶ್ರೀ ಮಧ್ವಾಚಾರ್ಯರ ಅಪ್ಪಣೆಯಂತೆ ಶಂಕರ ಪಂಡಿತರಿಂದ ಗ್ರಂಥ ಸ್ವೀಕಾರ ಕಾರ್ತಿಕ ಮಾಸದಲಿ ಮೇಘ ನೀರಸವಹುದು ಅದರಂತೆ ಜಯಸಿಂಹ ಭೂಪತಿಯ ಬಲದಿಂದ ಸ್ತಂಭ, ವಿಷಯಗಳೆಂಬ ಗ್ರಾಮ ಅಧಿಪತಿಗಳು ಮಧ್ವಮುನಿಗಳ ಬಗ್ಗೆ ದ್ವೇಷವನು ತೊರೆದರು ಮಧ್ವ ಸೂರ್ಯರು ಹುಟ್ಟಿ ಸುಜನ ಕಮಲಗಳರಳಿ ಎಲ್ಲೆಡೆಯೂ ಪಸರಿಸಿತು ಹರ್ಷದಾಯಕ ದೃಶ್ಯ ! ॥ ೧ ॥ "ಅಪಚಾರವಾಗಿಹುದು ತಾವು ಮನ್ನಿಸಬೇಕು'' ಇಂತೆಂಬ ಪ್ರಭುವಿನ ಬಿನ್ನಪವ ಮನ್ನಿಸುತ ಶ್ರೀಮದಾಚಾರ್ಯರ ಆಣತಿಯ ಪಾಲಿಸುತ ವೈರಿಗಳು ಅಪಹರಿಸಿ ಕೊಂಡೊಯ್ದ ಗ್ರಂಥಗಳ ಮಧ್ವಮುನಿಗಳ ಗ್ರಂಥ ಭಾಂಡಾರಿಯಾಗಿದ್ದ ಶಂಕರ ಪಂಡಿತರು ವಿನಯದಲಿ ಪಡೆದರು ॥ ೨ ॥ ಸಭೆಗೆ ತ್ರಿವಿಕ್ರಮ ಪಂಡಿತರ ಆಗಮನ ಕವಿಕುಲೋತ್ತಮರಾದ ಆ ತ್ರಿವಿಕ್ರಮರಿಗೆ ಸೋದರನ ವಿಜಯವು ಮುದವನ್ನು ನೀಡಿತ್ತು. ಗ್ರಾಮಾಧಿಪತಿಗಳು, ವಿಪ್ರ ನಿವಹದ ಮಧ್ಯೆ ಆನಂದ ತೀರ್ಥರ ಚರಣ ಸನ್ನಿಧಿಯಲ್ಲಿ ವಿನಯದಲಿ ಕುಳಿತಿದ್ದ ಜಯಸಿಂಹ ರಾಜನನು ಪಂಡಿತಾಚಾರ್ಯರು ಹರಸಿ ಮುದಗೊಳಿಸಿದರು ॥ ೩ ॥ "ಪರಿಶುದ್ಧ ಮನಸಿನ ಜಯಸಿಂಹ ನೃಪ ಕೇಳು ಆನಂದ ತೀರ್ಥರ ಶ್ರೀಪಾದ ರೇಣು ಪರಮಪಾವನ ಪೂಜ್ಯ, ಸುಜನ ಶಿರೋಧಾರ್ಯ ಇದ ಭಜಿಪ ಸುಜನರಿಗೆ ಇಂದ್ರಪದ ಲಭಿಸುವುದು ಅದೃಷ್ಟ ಹೀನರಿಗೆ ದುರ್ಲಭವು ಇದಹುದು ಈ ಪಾದಧೂಳಿಯು ಕರುಣಿಸಲಿ ಮಂಗಳವ" ॥ ೪ ॥ "ಪರಿಚಯವೇ ಇಲ್ಲದ ಕಾನನದಿ ಕೂಡ ಭೃಂಗರಾಜನು ಪುಷ್ಪ ಮಕರಂದ ಅರಿತಂತೆ ಪಂಡಿತೋತ್ತಮರಾದ ಆ ತ್ರಿವಿಕ್ರಮರು ಅಪರಿಚಿತ ಮಧ್ವರ ಅಪರಿಚಿತ ಸದ್ಗುಣವ ಒಮ್ಮೆಗೇ ಅರಿತರು ಸ್ವಜ್ಞಾನ ಬಲದಿಂದ ಇದರಲ್ಲಿ ಅಚ್ಚರಿಯು ಲವಲೇಶವೂ ಇಲ್ಲ ॥ ೫ ॥ ಶ್ರೀ ಮಧ್ವಾಚಾರ್ಯರ ಆಹ್ನಿಕ ವರ್ಣನೆ ಖಳಕುಲಕೆ ದ್ವೇಷದ ದೋಷವನು ಹೆಚ್ಚಿಸುತ ಮಧ್ಯಮರಿಗೆಲ್ಲರಿಗೂ ಕೌತುಕವ ಹುಟ್ಟಿಸುತ ಮುಕುತಿಪದ ಯೋಗ್ಯರಿಗೆ ಐಸಿರಿಯ ನೀಡುತ್ತ ನಾಲ್ಕು ತಿಂಗಳ ವ್ರತವ ನಿಷ್ಠೆಯಲಿ ಮಾಡುತ್ತ ಶ್ರೀ ಪೂರ್ಣಪ್ರಜ್ಞರು ವಿಷ್ಣು ಮಂಗಲದಲ್ಲಿ ಹಲವು ರಾತ್ರಿಗಳನ್ನು ಸಂಭ್ರಮದಿ ಕಳೆದರು ॥ ೬ ॥ ವಿಹಿತ ಕರ್ಮಗಳನ್ನು ಬಲ್ಲ ಜನರಲ್ಲಿ ಮಧ್ವಮುನಿ ಉತ್ತಮರು, ಎಲ್ಲರೊಳು ಶ್ರೇಷ್ಠರು ಬ್ರಾಹ್ಮೀ ಮುಹೂರ್ತದಲಿ ನಿದ್ದೆಯಿಂದೇಳುತ ಸ್ನಾನಾದಿ ಕಾರ್ಯಗಳ ವಿಹಿತದಲಿ ಮುಗಿಸಿ ಅರುಣ ಯವನಿಕೆಯೊಳಗೆ ಯೋಗ್ಯ ಯೋಗಾಸನದಿ ನಾರಾಯಣ ಎಂಬ ಬ್ರಹ್ಮನನು ಸ್ಮರಿಸಿದರು ॥ ೭ ॥ ಮಧ್ವಮುನಿಗಳ ಹಲವು ಯತಿಶ್ರೇಷ್ಠ ಶಿಷ್ಯರು ಶಾಸ್ತ್ರದಲಿ ಸೂಚಿಸಿಹ ದಂತಕಾಷ್ಠಗಳಿಂದ ದಂತಗಳಿಗೀಯುವರು ಧವಳ ಕಾಂತಿಯನು ಕಲ್ಯಾಣಿಯಲಿ ಮಿಂದು ಶುದ್ಧಿಗೊಳ್ಳುವರು ಈ ತೆರದ ಶ್ರೇಷ್ಠತಮ ಕರ್ಮದಾಚರಣೆಯಲಿ ಗುರುಗಳಲಿ ನಿಷ್ಠೆಯನು ಸ್ಫುಟಗೊಳಿಸುತ್ತಿದ್ದರು ॥ ೮ ॥ ರಾತ್ರಿಯಲಿ ಗುರುಗಳು ಪವಡಿಸಿದ ಬಳಿಕವೇ ಶಿಷ್ಯರೆಲ್ಲರೂ ತಮ್ಮ ಶಯ್ಯೆಗಳ ಸೇರುವರು ಬೆಳಗಿನಲಿ ಗುರುಗಳಿಗೆ ಮುಂಚಿತವೇ ಎಚ್ಚೆತ್ತು ಮರುದಿನದ ರಾತ್ರಿಯ ಮಧ್ಯದ ವರೆಗೂ ಸಂತೋಷ ಚಿತ್ತದಲಿ ಗುರುಸೇವೆ ಮಾಡುವರು ಇಲ್ಲದಿರೆ ಶಿಷ್ಯರಿಗೆ ಸದ್ಗತಿಯು ಲಭಿಸುವುದೆ ? ॥ ೯ ॥ ಹಿಂದಿನ ರಾತ್ರಿಯಲಿ ಶ್ರವಣ ಮನನಗಳಿಂದ ಬಹುವಾಗಿ ದಣಿದಿದ್ದ ಹೊಸ ಶಿಷ್ಯನೊಬ್ಬ ರಾತ್ರಿಯಲಿ ಸರಿಯಾಗಿ ನಿದ್ರಿಸದೆ ಆತ ಬೆಳಗಿನ ಮಂಪರಲಿ ಪರಮ ಪರವಶನಾದ ತನಗಿಂತಲೂ ಮೊದಲು ಗುರುವು ಹೊರಟುದ ಕಂಡು ಆ ಶಿಷ್ಯ ಬಹುವಾಗಿ ಪರಿತಾಪ ಪಟ್ಟ ॥ ೧೦ ॥ "ನಮಗಿಂತಲೂ ಮೊದಲು ನೀವೇಳಲಿಲ್ಲ ನಿಮ್ಮ ಪಾಲಿನ ಕೆಲಸ ನಿರ್ವಹಿಸಲಿಲ್ಲ" ಎಂದೆಲ್ಲ ಗುರುಗಳು ಆರೋಪಿಸುವರೆಂಬ ಶಂಕೆಯನು ತಾಳುತ್ತ ಹಲವಾರು ಶಿಷ್ಯರು ನಮ್ರಭಾವದಿ ನಿಂತು, ದಾರಿಗಡ್ಡವ ಬಿಟ್ಟು ನೀರೊಳಗೆ ಇಳಿಯದೆಯೆ ಪ್ರವಚನವ ಕೇಳಿದರು ॥ ೧೧ ॥ ಮನವ ನಿಗ್ರಹಿಸಿದ ಸನ್ಯಾಸಿಯೊಬ್ಬರು ದೀಪಗಳು ಬೆಳಗುತಿಹ ಅರುಣಕಾಲದೊಳೆದ್ದು ಮಧ್ವಮುನಿಗಳ ಬಳಿಯ ಶ್ರೇಷ್ಠತಮ ಶಂಖದಲಿ ಅರ್ಘ್ಯ ಪಾದ್ಯಾದಿಗಳ ದೇವರಿಗೆ ಅರ್ಪಿಸಿ ಶಾಲಗ್ರಾಮಗಳಿಂದ ನಿಬಿಡವಾಗಿಹ ಹರಿಯ ಪ್ರತಿಮೆಗಳ ಮಧ್ಯದಿಂ ಪುಷ್ಪಗಳ ತೆರೆದು ಆದರದಿ ಇರಿಸಿದರು ॥ ೧೨ ॥ ಪ್ರತಿನಿತ್ಯ ಅಮೃತವೇ ದೇವತೆಗಳಿಗಶನವು ಇಂಥ ದೇವತೆಗಳು ಮಧ್ವರನು ಸೇವಿಪರು ನಿರ್ಮಾಲ್ಯ ಪುಷ್ಪದಲಿ ಸುರಿದ ಅಮೃತವನ್ನು ಘೃತವೆಂದೇ ತಿಳಿದರು ಆ ಮಧ್ವಶಿಷ್ಯರು ಮಧ್ವಮಾಹಾತ್ಮ್ಯವನು ಬಲ್ಲ ಸ್ವೋತ್ತಮರಿಂದ ಭ್ರಮೆ ನಿವಾರಿಸಿಕೊಂಡು ಅಮೃತ ವನರಿತರು ॥ ೧೩ ॥ ಗಾಯತ್ರಿ ಮುಂತಾದ ಮಂತ್ರದಿಂದಲಿ ಕೂಡಿ ಮೂರು ಉದಯಗಳನ್ನು ಹೊಂದಿಹನು ಸೂರ್ಯ ಮೂರು ವಿಧ ಶಕ್ತಿಗಳ ಹೊಂದಿರುವ ಆತ ಮಂಡಲದ ಮಧ್ಯದಲಿ ವಿಷ್ಣುವನು ಧರಿಸಿಹನು ಉಷ್ಣಕಿರಣ ಎಂಬ ಹೆಸರನ್ನು ಹೊತ್ತಿರುವ ಸೂರ್ಯ ಸಾಮ್ರಾಟನು ಆಗ ಉದಿಸಿದನು ॥ ೧೪ ॥ ಕತ್ತಲೆಯು ಅತಿ ತೀಕ್ಷ್ಣ, ಅತ್ಯಂತ ಸ್ಥಿರವಹುದು ಪ್ರಾಣಿಗಳ ಮಾರ್ಗಕ್ಕೆ ಅಡ್ಡಿಯನು ಮಾಡುವುದು ಭುವನ ಮಂದಿರದಲ್ಲಿ ವ್ಯಾಪ್ತವಾಗಿಹುದು ಅದು ಅಂಜನವ ಹೋಲುವ ಕತ್ತಲೆಂಬುವ ಆನೆ ಸಿಂಹಗಳ ನಖದಿಂದ ತತ್ತರಿಸಿ ಬಿದ್ದಂತೆ ಸೂರ್ಯ ಕಿರಣಗಳಿಂದ ಕತ್ತಲೆಯು ಬಿತ್ತು ॥ ೧೫ ॥ ಹಕ್ಕಿಗಳ ಮಧುರತಮ ದನಿಯ ಇಂಚರದಂತೆ ನಿಶೆಯಲ್ಲಿ ಹನಿಯುವ ಹಿಮದ ಮಣಿಯಂತೆ ವಿಪುಲ ಆನುರಾಗವನುವಿಪುಲಾನುರಾಗವನು ತಕ್ಷಣವೇ ಪಡೆದಂತೆ ತನ್ನ ಆಗಮನದಲಿ ಸಂತುಷ್ಟಿ ಪಡೆದಂಥ ನಿರ್ಮಲಾಂಬರದಲ್ಲಿ ಸ್ಮಿತಕಮಲ ವದನಗಳ ದಿಕ್ಪುರಂಧ್ರಿಗಳನ್ನು ಉದಯರವಿ ಚುಂಬಿಸಿದ ॥ ೧೬ ॥ ರಭಸದಿಂದಲಿ ಮಾಳ್ದ ನಮನದಿಂದಾಗಿ ಹುಟ್ಟಿದಾ ಧೂಳಿಗಳ ಶೋಭಾವಿಶೇಷ ! ಕಿಟಕಿಯಲಿ ತೂರಿದಾ ಸೂರ್ಯ ಕಿರಣಗಳು ಸಕಲ ದಿಕ್ಕುಗಳಲ್ಲಿ ಸಾರಿತ್ತು ಸಂದೇಶ: "ಶಾಸ್ತ್ರ ಶ್ರವಣಕೆ ಇದು ಸರಿಯಾದ ಕಾಲ" ಮಧ್ವ ಶಿಷ್ಯರಿಗಾಯ್ತು ಮಿತ್ರ ಉಪಕಾರ ॥ ೧೭ ॥ ವಿಹಿತ ಕರ್ಮವನೆಲ್ಲ ವಿಹಿತದಲಿ ಪೂರೈಸಿ ಧನ್ಯ ಸನ್ಯಾಸಿಗಳ ವರ್ಗದಿಂದೊಡಗೂಡಿ ತ್ವರೆಯಿಂದ ಆ ಮಧ್ವ ಶಿಷ್ಯರುಗಳೆಲ್ಲ ವ್ಯಾಖ್ಯಾನ ಮಂಟಪದಿ ರಾರಾಜಿಸುತ್ತಿದ್ದ ಮಧ್ವಮುನಿಗಳ ಶ್ರೇಷ್ಠ ಯೋಗಪೀಠದ ಸುತ್ತ ಕೂಡಿದರು ವ್ಯಾಖ್ಯಾನ ಶ್ರವಣಕಾಗಿ ॥ ೧೮ ॥ ಮುರವೈರಿಯಾವಾಸ ಸ್ಥಾನ ದಂತಿದ್ದ ನಿರ್ಮಲ ಬಭುರದಿ ರಾರಾಜಿಸುತ್ತಿದ್ದ ರಮ್ಯ ಆಚ್ಛಾದನದಿ ಕೂಡಿ ಕಂಗೊಳಿಸಿದ್ದ ವಿವಿಧ ಕವಲಿಕೆಯಿಂದ ಕೂಡಿ ಮೆರೆದಿದ್ದ ತಾಲಪತ್ರಗಳ ಆ ಶ್ರೇಷ್ಠತಮ ಸಂಪುಟಗಳು ಅಂತರಂಗದ ಬುದ್ಧಿ ಪರಮಾತ್ಮ ರೂಪಗಳು ! ॥ ೧೯ ॥ ಈ ಪತ್ರಗಳ ಅಕ್ಷರವು ನೋಡಲಿಕೆ ಸುಂದರ ಅತಿ ವಿರಲವಲ್ಲದ, ನೇರ, ಸಮ, ಪಂಕ್ತಿಗಳು ಲಿಪಿಗಳೆಲ್ಲವೂ ಕೂಡ ಅಶ್ವ, ಗಜದಾಕಾರ ! ಪತ್ರಗಳ ನಾಲ್ಕೆಡೆಯು ಲಿಪಿಯಿಂದ ವರ್ಜಿತ! ಕುಶಲ ಲಿಪಿ ಕಾರರು ಬರೆದಿರುವ ಪತ್ರದ ಅಕ್ಷರವು ಶೋಭಿಸುತ ಮನವ ತಣಿಸುತ್ತಿತ್ತು ॥ ೨೦ ॥ ಅಭ್ಯಾಸ, ಚಾತುರ್ಯ, ಬಲವುಳ್ಳ ಶಿಷ್ಯರು ವಾಚಿಸಲು ಯೋಗ್ಯವಹ ಗ್ರಂಥಗಳ ಆದಿಯನು ತಕ್ಷಣವೇ ನೋಡಿದರು ಅಭಿರುಚಿಯ ಬಲದಿಂದ ಮತ್ತೆ ಕೆಲವರು ಅದನು ತಡವಾಗಿ ಓದಿದರು ಆದರೂ ಅವರೆಲ್ಲ ಸಾಮ್ಯವನು ಹೊಂದಿದರು ಹರಿ, ಗುರುವ ನಮನ, ಸಿದ್ಧಿ ಸಾಧನೆಯಿಂದ ॥ ೨೧ ॥ ನಮಿಸಿ ಆ ಶ್ರೋತೃಗಳು ಮೌನದಲಿ ಕುಳಿತಿರಲು ರವಿಗಿಂತ ಮಿಗಿಲಾದ ರವಿವಂದ್ಯ ಚರಣರು ಸಂಜೆಯ ಮುಗಿಲಿನ ಕೆಂಪುಬಣ್ಣದ ತೆರೆಯ ಮೆಲಮೆಲನೆ ಸರಿಸುತ್ತ ಆನಂದ ತೀರ್ಥರು ಸುಜನ ಸಭೆಯೆಂಬುವ ಆ ಗಗನದಲ್ಲಿ ಶೋಭಿಸುತ ಕುಳಿತರು ಭವ್ಯತೆಯ ಬೆಡಗಿನಲಿ ॥ ೨೨ ॥ ಮೂರು ಭುವನಗಳಲ್ಲಿ ಶ್ರೇಷ್ಠವೆಂದೆನಿಸಿರುವ ಮೂರು ತೇಜಗಳಿಂದ ಪ್ರಕಟ ಗೊಳ್ಳುತಲಿರುವ ಮೂರು ವೇದಗಳನ್ನು ವಿವರದಲಿ ವರ್ಣಿಸುವ ಮೂರು ವ್ಯಾಹೃತಿಗಳ ಸಾರವಾಗಿರುವ ಮೂರು ವರ್ಣಗಳನ್ನು ಒಂದಾಗಿ ಕೂಡಿಸುತ ಮಧ್ವಮುನಿ ಪ್ರಣವವನು ಉಚ್ಚರಿಸಿದರಲ್ಲಿ ॥ ೨೩ ॥ ಪ್ರವಚನವ ಪ್ರಾರಂಭಿಸಿದರವರು ಆಗ ಉಪನಿಷದ್ಭಾಷ್ಯವನು ಅತಿ ಮಂದ್ರಸ್ಥಾಯಿಯಲಿ ಶಿಷ್ಯರೆಲ್ಲರೂ ಗ್ರಹಿಸಿ ಅರ್ಥೈಸಿಕೊಳುವಂತೆ ಸುಸ್ಪಷ್ಟ ಪಠನವನು ಸುಲಭದಲಿ ಮಾಡಿದರು ಶ್ರವಣೇಂದ್ರಿಯಗಳಿಗೆಲ್ಲ ಅಮೃತ ಪ್ರಾಯವದು ಅಮೃತಮಯ ಮೋಕ್ಷಕ್ಕೆ ಸಾಧನವು ಅಹುದು ॥ ೨೪ ॥ ಆನಂದ ತೀರ್ಥರು ಆಲಸ್ಯರಹಿತರು ಪ್ರಶ್ನೆಗಳಿಗೆಲ್ಲದಕೂ ನಗುಮೊಗದ ಉತ್ತರ! ಸೂರ್ಯಸುತ ಕರ್ಣನು ಧನವ ನೀಡಿದ ಹಾಗೆ ಸುಜನರಿಗೆ ಉತ್ತರವ ದಯಪಾಲಿಸಿದರು ಕದನದಲಿ ಪಾರ್ಥನು ಬಿಟ್ಟ ಬಾಣದ ತೆರದಿ ದುಷ್ಟರಿಗೆ ಖಂಡನೆಯ ಮಾತುಗಳ ನೀಡಿದರು ॥ ೨೫ ॥ ಹತ್ತಾರು ಸಾವಿರದ ಕಿರಣಗಳ ಆ ಸೂರ್ಯ - ಮೆಲಮೆಲನೆ ಪಡುವಣದ ಕಡೆಗೆ ಸರಿದಿರಲು ಪ್ರವಚನವ ಪೂರೈಸಿ ಕೊಳದ ಬಳಿ ನಡೆದಿರಲು ಆನಂದ ತೀರ್ಥರ ಸಂಬಂಧ ಹೊಂದಲು ಗಂಗಾದಿ ತೀರ್ಥಾಭಿಮಾನಿಗಳು ಎಲ್ಲರೂ ತ್ವರೆಯಿಂದ ಕೊಳದಲ್ಲಿ ಸನ್ನಿಹಿತರಾದರು ॥ ೨೬ ॥ ಅತ್ಯಂತ ಪರಿಶುದ್ಧ ಆ ಜಲಸಮೂಹ! ಅಂತರಂಗದ ತುಂಬ ಸ್ನೇಹವನು ತುಂಬಿಟ್ಟು ಶ್ರೇಷ್ಠತಮ ಮುನಿಗಣವ ಹೋಲುವಂತಿತ್ತು ಮೊದಲಿನಲಿ ಮಧ್ವರಾ ಪ್ರತಿಬಿಂಬ ಸ್ವೀಕರಿಸಿ ಸುಜನರಿಗೆ ಪ್ರಿಯವಾದ ಮಧ್ವರಾಕೃತಿಯನ್ನು ಮಜ್ಜನದ ಕಾಲದಲಿ ಸ್ಫುಟವಾಗಿ ಪಡೆಯಿತು ॥ ೨೭ ॥ ಪೂಜೆಯ ಸಮಯದಲಿ ಶ್ರೀಮದಾಚಾರ್ಯರು ಹದಿನಾರು ಉಪಚಾರ, ಅರ್ಘ್ಯ ಪಾದ್ಯಾದಿಗಳನ್ನು ಶಾರ್ಙ್ಞಪಾಣಿಗೆ ಸಲಿಸಿ ಆತನನು ಮೆಚ್ಚಿಸುತ ದ್ವಾತ್ರಿಂಶದಪರಾಧ ದೋಷಗಳ ವರ್ಜಿಸುತ ಪರಮಭಕ್ತಿಯಲವರು ಶ್ರೀಹರಿಯ ನರ್ಚಿಸುತ ಸಲಿಸಿದರು ಆರು ಬಗೆ ಅನೂಪಚಾರಗಳ ॥ ೩೬ ॥ ದೇಹವೆಂಬುವ ತಮ್ಮ ದಿವ್ಯ ಮಂದಿರದಲ್ಲಿ ಶ್ರದ್ಧೆಯೆಂಬುವ ದಿವ್ಯ ತೀರ್ಥವನು ಹರಿಸಿ ಚಿತ್ತವೆಂಬುವ ದಿವ್ಯ ಜಲದಿಂದ ಅಭಿಷಿಕ್ತ ಪದ್ಮರಾಗದ ಮಣಿಯ ಕಾಂತಿಯಲಿ ಕೂಡಿರುವ ಹೃತ್ಸರೋಜದಲಿ ಆಸೀನನಾಗಿರುವ ಶ್ರೀ ಹರಿಯ ಪೂಜಿಪರು ಭಾವಾಷ್ಟಪುಷ್ಪದಲಿ ॥ ೩೭ ॥ ಇಂತು ಆ ಶ್ರೀ ಹರಿಯ ಭಕ್ತಿಯಲಿ ಪೂಜಿಸಿ ಭುಜಯುಗ್ಮಗಳಿಗೆಲ್ಲ ಸಾಂದ್ರ ಚಂದನ ಹಚ್ಚಿ ಪರಿಮಳವ ಸೂಸುವ ಕಿರುನಗೆಯ ಮೊಗದಿಂದ ಸ್ನಿಗ್ಧ ಕೌಶೇಯದ ವಸ್ತ್ರದಲಿ ಶೋಭಿಸುತ ಮನುಜ, ಸುರ, ಮುನಿಗಳ ಕಂಗಳೌತಣವಾಗಿ ಅತಿಶಯದಿ ಮೆರೆದರು ಆನಂದ ತೀರ್ಥರು ॥ ೩೮ ॥ ವೇದವಾದಿಗಳಲ್ಲಿ ಕೋವಿದರು ಮಧ್ವರು ಶ್ರೀ ಹರಿಗೆ ಪೊಡಮಡುವ ಪರಮ ಭಕ್ತರು ಅವರು "ಲೋಕನಿಯಮಕ್ಕೆಲ್ಲ ಆದೇಶ ನೀಡುವವ ಶ್ರೀ ಹರಿಯು ಕರುಣಿಸಲಿ ಎಮಗೆ ಮಂಗಳವ" ಎನ್ನುತಲಿ ಆ ಗುರುವು ಅಪ್ರಯಾಸದಿ ದೊರೆತ ಪರಮಾನ್ನ ನೈವೇದ್ಯ ಭಕ್ತಿಯಲಿ ಭುಜಿಸಿದರು ॥ ೩೯ ॥ ಆಗಲೇ ಶಿಷ್ಯರು ಸಿದ್ಧಪಡಿಸಿರಿಸಿದ್ದ ಸೂಕ್ಷ್ಮ ವಸ್ತ್ರಗಳಿಂದ ಆವರಿಸಿ ಮೆರೆದಿದ್ದ ರಮಣೀಯ ಪೀಠದಲಿ ಆಸೀನರಾಗಿ ಅಲ್ಲಿದ್ದ ಕವಿವರ್ಯ, ಪಂಡಿತ ಪರಾಯಣರ, ಹಲವುರೀತಿಯ ಹೃದ್ಯ ವಿದ್ಯಾವಿಲಾಸದಲಿ ಮನವ ಮುದಗೊಳಿಸುತ್ತ ರಂಜಿಸಿದರವರು ॥ ೪೦ ॥ ಇಂತಿರಲು ಆಚಾರ್ಯ ಭ್ರೂವಿಲಾಸವ ಕಂಡು ಮೆಲುನಗೆಯ ಇಂಗಿತವ ಅರಳುಗಂಗಳಲರಿತು ಶಿಷ್ಯನೊಬ್ಬನು ಎದ್ದು ಗುರುಗಳ ಬಳಿ ಬಂದು ಪಾಣಿ ಪ್ರವಾಲವನು ಅಡ್ಡವಾಗಿರಿಸಿಕೊಂಡು ಗುರುಗಳ ಕಿವಿಯಲ್ಲಿ ವಿಷಯವೊಂದನು ತಂದು ಉಸುರಿದನು ಶೀಘ್ರದಲಿ ಸಂಕ್ಷೇಪವಾಗಿ ॥ ೪೧ ॥ ಗುರುಗಳಿಗೆ ನಮಿಸುತ್ತ ಕೃತಕೃತ್ಯರಾಗುತ್ತ ಜನನಿವಹ ಅವರ ಬಳಿ ಅತ್ಯಧಿಕವಾಯ್ತು ಈ ಜನರ ನಿವಹವನು ದಾಟುವುದಕೆತ್ನಿಸುತ ಗುರುಗಳ ಬಳಿ ಸಾರಿ ನಮಿಸುವ ಬಯಕೆಯಲಿ ನಾನು ತಾನೆಂದೆನುತ ಮುನ್ನುಗ್ಗಿ ಬಂದು ಆ ಗೃಹಸ್ಥರು ಗುರುವ ಚರಣಗಳಿಗೆರಗಿದರು ॥ ೪೨ ॥ ಮಧ್ವ ಮುನಿಗಳ ಮಹಿಮೆ ಕೇಳಿದಾ ಬಹು ಮಂದಿ ದೂರದೂರುಗಳಿಂದ ಬಂದು ಸೇರಿದರು ಗುರುಗಳ ಮಹಿಮೆಗಳು ನೂರು ಮಡಿ ಅಧಿಕ ಎಂತೆಂದು ವಾಸ್ತವದಿ ಅರಿತ ಆ ಜನರೆಲ್ಲ ಮೂಕವಿಸ್ಮಿತರಾಗಿ ಗುರುಗಳಿಗೆ ನಮಿಸಿದರು ಕುಳ್ಳಿರೆನ್ನುತ ಅವರ ಗುರುಗಳಾದರಿಸಿದರು ॥ ೪೩ ॥ ಪಠಣ ಮಾಡಿದ ಪಾಠ ಮನನ ಮಾಡುತಲಿದ್ದ ಮಿತ್ರರನು ಕುರಿತೊಬ್ಬ ಶಿಷ್ಯನಿಂತೆಂದನು: "ಶ್ರವಣ ಮಾಡಿದ ಗ್ರಂಥ ಅನುವಾದಿಸದಿರಿ ಈಗ ಮನನ ಕಾರ್ಯವನೂ ನೀವು ಮಾಡದಿರಿ ಈಗ ಗುರುಗಳ ಪ್ರವಚನವು ಪ್ರಾರಂಭವಾಗಿಹುದು ಈಗಲೇ ನೀವೆಲ್ಲ ಅಲ್ಲಿ ಬನ್ನಿ " ॥ ೪೪ ॥ ಪ್ರವಚನದಿ ತೊಡಗಿದ್ದ ಆನಂದ ತೀರ್ಥರು ಸತ್ಯವತೀ ಸುತರಂತೆ ಕಂಗೊಳಿಸುತಿದ್ದರು ಇಂಥ ಸುಜ್ಞಾನಿಗಳ ಕಂಡ ಆ ಜನರೆಲ್ಲ ಬಿಡುಗಣ್ಣ ಮುಚ್ಚದೇ ಅವರನ್ನೇ ನೋಡುತ್ತ ಮನದಲ್ಲಿ ಅತ್ಯಧಿಕ ಮುದವನ್ನು ಪಡೆಯುತ್ತ ಕಾಲಚಕ್ರದ ಉರುಳ ಅರಿಯದವರಾದರು ॥ ೪೫ ॥ ಜಗಕೆಲ್ಲ ಬೆಳಕನ್ನು ನೀಡುವಾ ಸೂರ್ಯ ಉದಯಿಸುವಕಾಲದಲಿ, ಆಸ್ತಮಿಪ ಸಮಯದಲಿ ಅರುಣರಾಗವ ಹೊಂದಿ ಸ್ಫುಟವಾಗಿ ಶೋಭಿಸುವ ಅಂತೆಯೇ ಮಧ್ವಮುನಿ ವಿಷ್ಣುಪದದಾಶ್ರಿತರು ಉತ್ಕೃಷ್ಟ ತೇಜದ ಅತಿಶಯದ ಮಹಿಮರಿಗೆ ಸಂಪದ್ವಿಪತ್ತುಗಳ ವೈಕಲ್ಯ ವಿರದಾಯ್ತು ॥ ೪೬ ॥ ಪೃಥಿವೀ ಎಂಬುವ ಲಲನೆ ತುಂಬು ವೈಯಾರದಲಿ ಜಲಧಿ ಎಂಬುವ ನೀಲ ವಸನವನು ಧರಿಸಿಹಳು ಅರ್ಧಕ್ಷಣ ಸಮಯದಲಿ ಅರ್ಧ ಮರೆಯಾಗಿದ್ದ ಅರುಣ ತರಣಿಯ ಬಿಂಬ ಅರುಣ ಕಿರಣದ ಕಾಂತಿ ಪದ್ಮರಾಗದ ಮಣಿಯ ಬಣ್ಣಗಳ ಚೆಲ್ಲಿಹವು ರಮ್ಯ ರಮಣೀಯತೆಯ ಸೊಗವ ನೀಡುವ ಸಗ್ಗ ! ॥ ೪೭ ॥ ಅವನಿ, ವನ, ಪವನಾಗ್ನಿ, ಆಕಾಶ, ನಾನೆಂಬ ಆರು ಹಿರಿ ತತ್ವಗಳ, ಸತ್ವ, ರಜ, ತಮಸೆಂಬ ಮೂರು ಗುಣ ಸಹಿತದ ಅವ್ಯಾಕೃತಂಬರದಿ ವ್ಯಾಪ್ತನಾಗಿಹನವನು, ಭೇದವರ್ಜಿತನವನು ಅಸುರ, ಸುರ, ನರರಿಂದ ಅತ್ಯಂತ ಭಿನ್ನನು ಇಂತಹ ಶ್ರೀ ಹರಿಯ ಚಿಂತಿಸಿದರವರು ॥ ೪೮ ॥ ಸ್ಮೃತ್ಯಾದಿ ಶಾಸ್ತ್ರದಲಿ ವಿಧಿಸಿರುವ ಕ್ರಮದಂತೆ ಧರ್ಮ ಕುಶಲಿಗಳಾದ ಆ ಅವನಿದೇವರು ಸೂರ್ಯ ಕಿರಣವು ಕಂಡ ಕ್ಷಣದಿಂದ ಮೊದಲಿಟ್ಟು ಸೂರ್ಯನಲಿ ಶ್ರೀ ಹರಿಯ ಕಂಡು ಧ್ಯಾನವ ಮಾಡಿ ತಾರೆಗಳು ಗೋಚರಿಪ ಸಮಯದ ವರೆಗೂ ನಿತ್ಯ ಕೃತ್ಯವ ಮಾಡಿ ಧನ್ಯತೆಯ ಪಡೆದರು॥ ೪೯ ॥ ದೇವೇಂದ್ರ ರುದ್ರರನು ಆದ್ಯಂತದಲ್ಲಿ ಹೊಂದಿರುವ ಹದಿನಾರು ದೇವತೆಗಳನ್ನು ಚೆನ್ನಾಗಿ ಅರಿತಿರುವ ಭೂಸುರರು ಅಂದು ಹವಿಸನ್ನು ಅಗ್ನಿಯಲಿ ಭಕ್ತಿಯಿಂದರ್ಪಿಸುತ ಉಚಿತ ರೂಪದ ಅಗ್ನಿಹೋತ್ರವನು ಮಾಡಿದರು ಗಾಯತ್ರೀಲೋಕವು ಇದರಿಂದ ಲಭಿಸುವುದು ॥ ೫೦ ॥ ಈ ಚಂದ್ರ ಪ್ರಾಯಶಃ ಅಕಳಂಕನಾದಲ್ಲಿ ನಿಜ ಸಹೋದರಿಯಾದ ಲಕುಮಿ ಆನನವೆಂಬ ಪೂರ್ಣೇಂದು ಸಮನಾಗಿ ಬೆಳಗಬಹುದಿತ್ತು ಇಂತೆಂದು ಖೇಚರೀ ಲಲನೆಯರು ಗಗನದಲಿ ಚಂದ್ರ ಸೌಂದರ್ಯವನು ಕಂಡು ಹಿಗ್ಗುತಲಿರಲು ಚಂದ್ರಮನು ಉದಿಸಿದನು ಅಂಬರದ ತುದಿಯಲ್ಲಿ ॥ ೫೧ ॥ ಇನವಿರಹ ಸಹಿಸದಿಹ ಚಕ್ರವಾಕವು, ಪದ್ಮ ಚಂದ್ರ ಕಿರಣವ ಕಂಡು ಆನಂದಗೊಂಡವು ಸೂರ್ಯಕಿರಣಗಳಿಂದ ಪರಿತಪ್ತವಾಗಿದ್ದ ಆ ಜೊನ್ನವಕ್ಕಿಗಳು, ಕುಮುದ ಕುಸುಮಗಳೆಲ್ಲ ಬೆಳದಿಂಗಳನು ಕಂಡು ಸಂತುಷ್ಟಗೊಂಡವು ದೈವ ಸೃಜಿಸುವುದಿಲ್ಲ ಎಲ್ಲದಕೂ ಹೃದ್ಯವನು ॥ ೫೨ ॥ ಹರಿಯ ಸ್ವರೂಪವನು ಎಂತು ಬಣ್ಣಿಪಬಹುದು ? ಇಂದ್ರನೀಲದ ಮಣಿಯ ನೀಲಕಾಂತಿಯ ಸೊಬಗು! ನವಕುಂದ ಪುಷ್ಪಗಳ ಸೊಬಗಿನ ದ್ವಿಜ ಪಂಕ್ತಿ! ಶ್ರೀ ಹರಿಗೆ ಪ್ರಿಯವಾದ ವೃಕ್ಷಗಳ ವನರಾಣಿ ! ಪಾರಿಜಾತದ ಪರಿಯ ವೃಕ್ಷಗಳ ಕಾಂತಿಯಲಿ ಎಲ್ಲೆಡೆಯೂ ಪರಿಮಳವ ಸೂಸುವ ವನಮಾಲೆ ! ॥ ೫೩ ॥ ಮಂದಗಾಮಿನಿಯರು, ಲಜ್ಜೆಯನು ತೊರೆದವರೂ ಕಿರುನಗೆಯ ಸೂಸುವ ಗೋಪ ಬಾಲೆಯರಿಗೆ ಸಂತಸವ ನೀಡುವ ಕೃಷ್ಣನ ರೂಪ ! ಪರಿತಾಪ ಹೀನವದು, ಉಜ್ವಲವು, ವ್ಯಾಪಕವು ಅತ್ಯಂತ ನವಿರಾದ ವಸ್ತ್ರವನು ತೊಟ್ಟಿಹುದು ಅತ್ಯಂತ ಉತ್ತಮವು, ಅತ್ಯಂತ ಉತ್ಕೃಷ್ಟ ! ॥ ೫೪ ॥ ಆನಂದ ಜ್ಞಾನಾದಿ ಗುಣಪೂರ್ಣನಾದ ಶ್ರೀ ಕೃಷ್ಣನೆಂಬುವ ಅತಿ ಶ್ರೇಷ್ಠ ವಸ್ತುವನು ಆ ಮಧ್ವಮುನಿಗಳು ಪ್ರಕಟಗೊಳಿಸಿದರು ಶಬ್ದವೆಂಬುವ ಗುಣವ ಹೊಂದಿದಾಕಾಶವನು ತನ್ನ ಕಿರಣಗಳಿಂದ ಕತ್ತಲೆಯ ಭೇದಿಸುವ ಚಂದ್ರ, ಮಧ್ವರ ಭೇದ ಇಂತು ಕಾಣಲಿಬಹುದು ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ ಆನಂದಾಂಕಿತ ಹದಿನಾಲ್ಕನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. ' . ಶ್ರೀ ಗುರುಭ್ಯೋ ನಮಃ ಹದಿನೈದನೆಯ ಸರ್ಗ ಅಮರಾಲಯದಲ್ಲಿ ಅಪೂರ್ವ ಭಾಷ್ಯೋಪನ್ಯಾಸ ಆ ಬಳಿಕ ಮತ್ತೊಮ್ಮೆ ಆನಂದ ತೀರ್ಥರು ಹಳ್ಳಿಯಲಿ ಹಳ್ಳಿಗರು ಎಲ್ಲರೂ ಸೇರುವ ಅಮರಾಲಯ ಎಂಬ ಸ್ಥಳದಲ್ಲಿ ಕುಳಿತು ಅದ್ಭುತದ ಭಾಷ್ಯವನು ಪ್ರವಚನವ ಮಾಡಿದರು ॥ ೧ ॥ ತ್ರಿವಿಕ್ರಮ ಪಂಡಿತರಿಂದ ಉಪನ್ಯಾಸ ಶ್ರವಣ ಅನ್ಯ ಸಿದ್ಧಾಂತದ ರಥವೊಂದನೇರುತ್ತ ತೀಕ್ಷ್ಣಯುಕ್ತಿಗಳೆಂಬ ಆಯುಧವ ಹೊಂದಿದ್ದ ಪಂಡಿತೋತ್ತಮರಾದ ಶ್ರೀ ತ್ರಿವಿಕ್ರಮರನ್ನು ಪ್ರತಿವೀರನೆಂಬಂತೆ ಮಧ್ವಮುನಿ ಕಂಡರು ॥ ೨ ॥ ಶ್ರೀಮದಾಚಾರ್ಯರ ಉಪನ್ಯಾಸ ವೈಭವ ಹರಿಯೇ ಸರ್ವೋತ್ತಮ ಎಂದೆನುತ ಸಾಧಿಸುವ ಮಧ್ವರ ಪ್ರವಚನವು ಆಗ್ರಹವ ಹೊಂದಿದ್ದು ಸ್ವಾಮಿಯ ವಿಜಯದಲಿ ಶಿಬಿರದಿಂ ಹೊರಡುವ ಸೈನಿಕರ ತೆರದಲ್ಲಿ ಹೊರಸೂಸುತಿತ್ತು ॥ ೩ ॥ ಅತಿ ಮಂದವಿರದ ಗತಿ, ವೇಗವೂ ಅಲ್ಲದುದು ಶಬ್ದಾರ್ಥ ಸ್ಖಾಲಿತ್ಯ ಹೊಂದದಿಹುದು ಅದು ಸ್ವರವರ್ಣ ರೂಪಗಳ ಅವಯವವ ಹೊಂದಿರದೆ ಪ್ರವಚನವು ಸಂಕೀರ್ಣ ಜಲಧಾರೆಯಂತಿತ್ತು ॥ ೩ ॥ ಬ್ರಹ್ಮ ಸೂತ್ರಗಳೆಂಬ ರಥ ಸಮೂಹಗಳಿಂದ ನಾಲ್ಕು ವೇದಗಳೆಂಬ ಗಜ ನಿವಹದಿಂದ ಚತುರೋಕ್ತಿಯೆಂಬುವ ಕಾಲಾಳು ಪಡೆಯಿಂದ ಸ್ಮೃತಿಯೆಂಬ ಅಶ್ವಗಳ ಬಲದಿಂದ ಕೂಡಿತ್ತು ॥ ೫ ॥ ವೃದ್ಧಿ ಹಾಸಗಳಿಂದ, ಶ್ರೀ ಹರಿಗೆ ಪ್ರಿಯವಾದ ಮೇಘಗರ್ಜನೆಯಂಥ ಸುಸ್ವರದಿ ಕೂಡಿರುವ ವಿವರದಲಿ ಅರ್ಥಗಳ ನೀಡುವ ಪ್ರವಚನವು ಸಾಗರದಿ ಜನಿಸಿದ ಲಕುಮಿಯಂತಿತ್ತು ॥ ೬ ॥ ಪದ್ಮೇಶ ಪದ ಪದ್ಮದಾಶ್ರಿತ್ಯೆ ಭಾರತಿ ಕಮಲ ಸಂಭವನಾದ ನಾಲ್ಮೊಗದ ಬ್ರಹ್ಮ ಈಶ್ವರನ ಶಿರದಲ್ಲಿ ಲಾಲಿತಳು ಗಂಗೆ ಇವರ ಸಂಗಮವಾಯ್ತು ಮಧ್ವಪ್ರವಚನದಲಿ ॥ ೭ ॥ ಶ್ರೀಮದಾಚಾರ್ಯರ ಉಪದೇಶ ಸಾರ "ನಾರಾಯಣನು ಅನಂತ ಗುಣನಾಗಿಹನು ಬ್ರಹ್ಮನಾಯಕನಿವನು; ವೇದ ಪ್ರತಿಪಾದ್ಯನು ವಿಶ್ವಕರ್ತನು ಇವನು: ವಿಶ್ವಜ್ಞನವನು" ಶೃತಿಯುಕ್ತಿಯಿಂದಿಂತು ಅವರು ಮಂಡಿಸಿದರು ॥ ೮ ॥ "ಪ್ರಧಾನವಪರಾಧೀನವಾಗಿಹುದು ಹಾಲಿನಂತೆ" ಎಂಬೊಂದು ದೃಷ್ಟಾಂತ ನೀಡಿದರೆ ನಾವು ಸಾಧ್ಯ ವೈಕಲ್ಯದ ದೋಷ ಉಂಟಾಗುವುದು ಇಂತೆಂದು ನಿರೀಶ್ವರವಾದ ಖಂಡಿಸಿದರು ॥ ೯ ॥ ಸೃಷ್ಟಿಯ ಕ್ರಿಯೆಯೀಗ ವಿವಾದ ವಿಷಯ ಸೃಷ್ಟಿಯು ಚೇತನನ ಇಚ್ಛೆಯಂತಿಹುದು ವಸ್ತ್ರವನು ನೇಕಾರ ಸೃಷ್ಟಿಸುವ ತೆರದಲ್ಲಿ ಪರಮಾತ್ಮ ಸೃಷ್ಟಿಸಿಹ ಜೀವ ಜಡ ಜಗವನ್ನು ॥ ೧೦ ॥ ಈ ಜಗದ ಸೃಷ್ಟಿಗೆ ಚೇತನವು ಅಂಗ ಆ ಚೇತನವು ಅಂಗಿ ಎಂದು ಸಾರುವ ಮತವು ಈಶ್ವರನ ಸ್ವಾತಂತ್ರ್ಯ ಮನ್ನಿಸದೆ ಹೋದಲ್ಲಿ ತರ್ಕಗಳಿಗಾ ತರ್ಕ ಗ್ರಾಹ್ಯವಾಗುವುದಿಲ್ಲ ॥ ೧೧ ॥ ಸಕಲವೂ ಸರ್ವಜ್ಞ ಪರಮಾತ್ಮ ನಿರ್ಮಿತ ಆತ್ಮನ ಪರಿಯಲ್ಲಿ ವಿಶ್ವವೂ ಅನಿತ್ಯ ಅದರಿಂದ ಇವೆರಡು ಈಶ್ವರನ ಸೃಷ್ಟಿ ಇಂತಹ ಮುಕ್ತಿಯಲಿ ಈಶ್ವರನು ಮಾನ್ಯ ॥ ೧೨ ॥ ಸಕಲ ಅನುಮಾನಕೂ ವೇದಗಳ ಬೆಂಬಲ ಶೃತಿಮಾನ್ಯ ವಲ್ಲದ ಅನುಮಾನವೆಲ್ಲ ಪತಿಯಿಂದ ವರ್ಜಿತ ಕಾಮಿನಿಯ ತೆರದಲ್ಲಿ ಪ್ರತಿವಾದಿಗಳ ಇಚ್ಛೆ ಅನುಸರಿಸುವವು ॥ ೧೩ ॥ ಈ ವಿಶ್ವವೆಲ್ಲಕೂ ಬ್ರಹ್ಮನೇ ಚೇತನನು ಅದರಿಂದ ಪರಿಣಾಮ ಕಾರಣವು ಅವನಲ್ಲ ಪರಿಣಾಮ ಕಾರಣವು ಚೇತನವು ಅಲ್ಲ ಹಾಲಿನ ದೃಷ್ಟಾಂತ ಇಲ್ಲಿ ದಿಟವಹುದು ॥ ೧೪ ॥ ಪಶುಪತಿಯು ಎಂದೆಂದೂ ವಿಶ್ವಕಾರಣನಲ್ಲ ಚೈತ್ರದಂತಿವನಲ್ಲಿ ದೋಷಗಳು ಇಹವು ಗಣಪತಿ ಸೂರ್ಯರೂ ವಿಶ್ವಕಾರಣರಲ್ಲ ಎಂಬುದಿದು ಕೈಮುತ್ಯ ಸಿದ್ಧವಾಗಿಹುದು ॥ ೧೫ ॥ ಸುಖಾದಿ ಗುಣಗಳನು ಈಶ್ವರನು ಹೊಂದಿಲ್ಲ ದುಃಖಾದಿ ಗುಣಗಳನೂ ಆತ ಹೊಂದಿಲ್ಲ ಸುಖಾದಿಗಳನಾವ ಹೊಂದಿರುವುದಿಲ್ಲವೋ ಸಾಂಸಾರಿಕನ ತೆರದಿ ಅವ ದು:ಖವನೂ ಹೊಂದನು ॥ ೧೬ ॥ ಈ ರೀತಿ ಯುಕ್ತಿಯನು ಮುಂದಿರಿಸಿದಲ್ಲಿ ಭಗವಂತನಜ್ಞಾನಿ, ಭ್ರಾಂತಿರಹಿತನು ಎಂದಾಗುವುದು ಜ್ಞಾನವಿಲ್ಲದ ಆತ ಭ್ರಾಂತಿ ಶೂನ್ಯನು ಹೇಗೆ ? ಸಂಸಾರಿ ಜೀವನೊಲು ಇದು ಸಾಧ್ಯವೆ? ॥ ೧೭ ॥ ಸರ್ವಜ್ಞದಜ್ಞತ್ವ ಎಲ್ಲಿಯದು ಎಂದು ವೇದಗಳು ವಾದಿಸಿ ಎಂದೆಲ್ಲ ಬಲ್ಲೆವು ಆ ವೇದಗಳೆ ಈಶ್ವರನು ಆನಂದ ಪೂರ್ಣ ಇಂತೆಂದು ಬಣ್ಣಿಪುದ ನೀ ಕೇಳಿಲ್ಲವೇನು ? ॥ ೧೮ ॥ ಈಶ್ವರಗೆ ದುಃಖವನು ಪರಿಹರಿಸಲೆಂದು ಸುಖವನೂ ಆತನಿಗೆ ನೀಡರವಿವೇಕಿಗಳು ಆತನಿಗೆ ದುಃಖಃತ್ವ ಇಲ್ಲವೆಂದಾದಲ್ಲಿ ಚೇತನತ್ವವು ಅವಗೆ ಎಲ್ಲಿಂದ ಬಹುದು ? ॥ ೧೯ ॥ ಚೈತ್ರನಲಿ ಇರುತಿಹುದು ದುಃಖ ಸಮವಾಯ ಜ್ಞಾನ, ಇಚ್ಛೆಗಳೆರಡು ಸಮವಾಯ ಅಂಗಗಳು ಈಶ್ವರನು ಹೊಂದಿಹನು ಈ ಎರಡು ಅಂಗಗಳ ಎರಡು ಸಮವಾಯಗಳ ಭಿನ್ನತೆಯು ಸರಿಯೆ ? ॥ ೨೦ ॥ ಉಪಾಧಿ ಭೇದವನು ಒಪ್ಪುವೆಯ ನೀನು ? ಈ ಭೇದ ಸತ್ಯವೋ ಮಿಥ್ಯವೋ ಹೇಳು ಇದರಿಂದ ಈ ಶನಿಗೆಈಶನಿಗೆದೋಷ ಉಂಟಾಗುವುದು ಮಾಯಿಗಳ ಪಕ್ಷವನು ನೀ ತಿಳಿಯಲಾರೆ ॥ ೨೧ ॥ ಈಶ್ವರನ ಗುಣಗಳಿಗೆ ಭೇದವಿಹುದೆನ್ನುವರು ಸಮವಾಯಕುಂಟೆ ? ಔಪಾಧಿಕ ಭೇದ ? ಅವರ ಈ ಯುಕ್ತಿಯದು ಶಾಸ್ತ್ರ ಸಮ್ಮತವಲ್ಲ ಪರಮಾತ್ಮನೆಂದೆಂದೂ ಗುಣ ಪೂರ್ಣನಾಗಿಹನು ॥ ೨೨ ॥ ಗುಣಭೇದ ಸಂಬಂಧ ವಿಶ್ಲೇಷಿಸಿದರೆ ಪರಮಾತ್ಮನ ಸ್ಥಿತಿಯು ವ್ಯಕ್ತವಾಗುವುದು ಈಶ್ವರನ ಗುಣಗಳಿಗೆ ಅಭೇದ ಒಪ್ಪುವೆವು ಭೇದ ವ್ಯವಹಾರಿಕೆ ಅಡ್ಡಿ ನಮಗಿರದು ॥ ೨೩ ॥ ವೈಶೇಷಿಕಾದಿಗಳು ವೇದಗಳ ವೈರಿಗಳು ಶೂನ್ಯವೇ ತತ್ವವೆಂದೆನ್ನುವರು ಕೆಲರು ಮಾಧ್ಯಮಿಕರೆನಿಸಿರುವ ಬೌದ್ಧೈಕ ದೇಶಗಳು ಎರಡು ಪಂಗಡವಾಗಿ ಒಡೆದಿಹರು ಇಂದು ॥ ೨೪ ॥ ಮಾಯಾವಾದಿಗಳೆಂಬ ಪ್ರಚ್ಛನ್ನ ಶೂನ್ಯರು ಕರೆದಿಹರು ವೇದಗಳ ಅತತ್ವವೇದಕವೆಂದು ಶೂನ್ಯವನೆ ಬ್ರಹ್ಮ ವೆಂದವರು ಕರೆಯುವರು ತಮ್ಮನ್ನು ವೇದಾಂತಿಗಳು ಎಂದು ಎನ್ನುವರು ॥ ೨೫ ॥ ವಿಯದಾದಿ ಜಗದೆಲ್ಲ ಅಪರ ತತ್ವಗಳೆಲ್ಲ ಪರತತ್ವ ಬ್ರಹ್ಮನಲಿ ತೋರಿಹುದು ಎನ್ನುವರು ಶೂನ್ಯಕ್ಕೂ ಮಿಗಿಲಾದ ವೈಶಿಷ್ಟ್ಯ ಅವಗಿಲ್ಲ ಬ್ರಹ್ಮ, ಶೂನ್ಯದ ನಡುವೆ ಭೇದವೇ ಇಲ್ಲ ॥ ೨೬ ॥ ತಮ್ಮ ಸಿದ್ಧಾಂತಗಳ ಮನ್ನಿಸದ ಮಂದಿಗಳ ತರ್ಕವಿಲ್ಲದ ನ್ಯಾಯದಾಭಾಸಗಳನೆಲ್ಲ ಸೂಕ್ತ ತರ್ಕದ ಸಹಿತ ಶಾಸ್ತ್ರಸಮ್ಮತವಾಗಿ ಖಂಡಿಸುತ ನಡೆದರು ಆನಂದ ತೀರ್ಥರು ॥ ೨೭ ॥ ಜಗಕೆ ಕಾರಣವಲ್ಲ ವಿಮತವಾಗಿಹ ಶೂನ್ಯ ಕಾರಣವು ಸತ್ ಎಂಬುದಾಗಿರಲೇಬೇಕು ಕುಂಭಕಾರನ ತೆರದಿ ವ್ಯತಿರೇಕ ಅನುಮಾನ ಇದರಿಂದ ಆ ಶೂನ್ಯ ಹುಸಿಯಾಗಬೇಕು ॥ ೨೮ ॥ ಓ, ತಾಪಸನೆ ! ನೀನೀಗ ನನ್ನ ಮಾತನು ಕೇಳು ಕುಂಬಾರನಂತೇ ಜಗಕೆ ಶೂನ್ಯ ಕಾರಣವಲ್ಲ ಶೂನ್ಯದ ಅರಿವಿರದ ಯಾವ ಜಗ ಕಾಣುವುದೋ ಅಂತಹ ಶೂನ್ಯವೇ ಈ ಜಗಕೆ ಕಾರಣವೆ ? ॥ ೨೯ ॥ ಓ ದೀರ್ಘಾಯು ಮಾನವನೆ ! ಈ ಮಾತ ಕೇಳು ಅಂತಹ ಶೂನ್ಯವದು ಜಗಕೆ ಕಾರಣವಲ್ಲ "ಅಧಿಷ್ಠಾನ" ಎಂಬುವ ಶೂನ್ಯವನು ನೀನು ಗುರುಗಳ ಗೃಹದಲ್ಲಿ ಸರಿಯಾಗಿ ಅರ್ಥೈಸು ॥ ೩೦ ॥ ಶೂನ್ಯವೆಂಬುದು ಒಂದು ಭಿನ್ನಮತ ವಿಷಯ "ಅಸತ್ " ಆಗಿಹುದು ಅದು ಆಧಾರವಾಗದು ಅಧಿಷ್ಠಾನವಾಹುದಕೆ ಸತ್ ಆಗಬೇಕು ಶುಕ್ತ್ಯಾದಿಗಳ ತೆರದಿ ವೈಧರ್ಮ್ಯ ದೃಷ್ಟಾಂತವಿದು ॥ ೩೧ ॥ ಅತತ್ವಾವೇದಕವು ಪ್ರಮಾಣವೆಂಬುವ ಮಾತು ಅತ್ಯಂತ ವ್ಯಾಹತವು, ಆಭಾಸ ಉಕ್ತಿ ವೇದಗಳು ಅತತ್ವಾವೇದಕವೆನ್ನುವ ಮಂದಿ ವೇದಗಳ ಪ್ರಾಮಾಣ್ಯ ಅಲ್ಲಗಳೆದಂತಾಯ್ತು ॥ ೩೨ ॥ ಮಾಯಾವಾದಿಗಳೆಲ್ಲ ವೇದ ದೂಷಕರಹುದು ಅವಾಚ್ಯವಾಗಿಹುದವರ ಆ ಬ್ರಹ್ಮತತ್ವ ವೇದಾಂಗವೆನಿಸಿರುವ ಉಪನಿಷತ್ತುಗಳನ್ನು ತತ್ವಾವೇದಕವೆಂದು ಹೇಗೆ ಎಣಿಸುವರು ? ॥ ೩೩ ॥ ಮೂರು ಲಕ್ಷಣದಿಂದ ವೇದವಾಕ್ಯಗಳೆಲ್ಲ ಬ್ರಹ್ಮ ಲಕ್ಷಣವನ್ನು ಗುರ್ತಿಪುವು ಎಂದಲ್ಲಿ ಬ್ರಹ್ಮನಿಗೆ ವಾಚ್ಯತ್ವ ರೂಪವೆಲ್ಲವೂ ಕೂಡಿ ವಿಶೇಷಣವು ಎಂಬುವ ಅನಿಷ್ಟ ಒದಗುವುದು ॥ ೩೪ ॥ "ಸತ್ಯಂ, ಜ್ಞಾನಂ, ಅನಂತಂ, ಬ್ರಹ್ಮ" ಎಂಬಂಥ ವಾಕ್ಯಗಳು ವೇದ ಪ್ರತಿಪಾದಿತವು ನಿರ್ಗುಣ ಬ್ರಹ್ಮನನು ವಿವರಿಸುವ ವಾಕ್ಯಗಳು ಬ್ರಹ್ಮನಿಗೆ ವಿಶೇಷಣಗಳಿಲ್ಲವೆಂಬುವುವು ॥ ೩೫ ॥ "ಜಡತ್ವಾದಿ ಗುಣಗಳೂ ಬ್ರಹ್ಮನಲ್ಲಿಲ್ಲ" ಇಂತಹ ಮಾತುಗಳೂ ಶೋಭಿಸುವುದಿಲ್ಲ ಭಾವರೂಪದ ಬ್ರಹ್ಮಗೆ ಅಭಾವ ಅಸಂಭವವು ನಿರ್ವಿಶೇಷನು ಅವನು; ಭಾವಾಭಾವಗಳೆಲ್ಲ ಅವನಿಗಿಲ್ಲ ॥ ೩೬ ॥ ವೇದ ಪ್ರತಿಪಾದಿತ ಪ್ರಮೇಯಗಳನೆಲ್ಲ ಸರ್ವದಾ ಸಟೆಯೆಂದು ಸಾಧಿಸುವ ಶಪಥವನು ಈ ಮಾಯಾವಾದಿಗಳು ಎಂದೆಂದೂ ತೊಟ್ಟಿಹರು ಜ್ಞಾನಗಳು ಇವರನ್ನು ವೇದ ಬಾಹ್ಯರೆನಬೇಕು ॥ ೩೭ ॥ ಮಾಯಾವಾದವು ಮತ್ತು ಶೂನ್ಯವಾದಗಳೆರಡೂ ಸಜ್ಜನರು ಒಪ್ಪದಿಹ ಎರಡು ಮತಗಳು ಅಹುದು ಶೂನ್ಯಮತವನು ಅವರು ಆಗಲೇ ತಳ್ಳಿಹರು ಮಾಯಾವಾದಿಗಳನ್ನೂ ನಾವು ಜರೆಯಬೇಕೀಗ ॥ ೩೮ ॥ ಬ್ರಹ್ಮ ಶೂನ್ಯಗಳೆರಡೂ ಅವಿಶೇಷವಾಗಿಹವು ಇದರಿಂದ "ಅಸತ್ವಾತ್" ಎಂಬೊಂದು ಹೇತುವು ಬ್ರಹ್ಮ ಕಾರಣತ್ವವನು ಸಾಧಿಸುವ ಮಿಥ್ಯರಿಗೆ "ಅಸಿದ್ಧ" ವಾಗುವುದು ಎಂಬುವಂತಿಲ್ಲ ॥ ೩೯ ॥ ಮಾಯಾವಾದಿಗಳೆಲ್ಲ ತಮ್ಮ ತತ್ವವನು ಅನುಸರಿಸಿ ಬ್ರಹ್ಮನಿಗೆ ಸತ್ವವೊಂದುಂಟೆಂದು ಒಪ್ಪಿದರೆ ಆಗವನು ವಿಶೇಷವನು ಹೊಂದುವುದು ಸಹಜ ಆಗವರು ಬ್ರಹ್ಮನಿಗೆ ಅಸತ್ವವನು ಒಪ್ಪುವರೆ ? ॥ ೪೦ ॥ ಬ್ರಹ್ಮಾದಿ ತತ್ವಗಳು ಭಾವ ವಸ್ತುಗಳಲ್ಲ ಭೇದರಹಿತವು ಅವು ಶೂನ್ಯಾತ್ಮಕ ವಹುದು ಧ್ಯಾನ ವಿಷಯಕವು ಅಲ್ಲ, ಶ್ರವಣ ಮನನವು ಸಲ್ಲ ಅಭೀಷ್ಟ ಫಲಗಳನು ಕೊಡುವಂಥವಲ್ಲ ॥ ೪೧ ॥ ಗಗನ ಕುಸುಮದ ತೆರದಿ ಈ ಬ್ರಹ್ಮಾದಿ ತತ್ವಗಳು ವಿಚಾರ್ಯವಾಗದದು; ಧ್ಯೇಯವೂ ಆಗದು ಪ್ರಮಾಣಾದಿಗಳಂತೆ ಈ ತತ್ವಗಳನು ವ್ಯತಿರೇಕ ದೃಷ್ಟಾಂತ ಊಹಿಸುತಲಿರಬೇಕು ॥ ೪೨ ॥ ವೇದಗಳು ಅಪ್ರಮಾಣವೆಂದು ತಿಳಿದಲ್ಲಿ ಧರ್ಮಾದಿ ಭಾವಗಳು ಅಪ್ರಾಮಾಣ್ಯವಾಗುವುವು ಪ್ರತ್ಯಕ್ಷವೇ ಪ್ರಮಾಣ ಎಂದು ನಂಬುವ ಮಂದಿ ಧರ್ಮದಭಾವವನು ಸಾಧಿಸಲು ಸಾಧ್ಯವೆ ? ॥ ೪೩ ॥ ಧರ್ಮಾದಿ ವಸ್ತುಗಳು ಅತೀಂದ್ರಿಯವು ಅಹುದು ಪುರುಷಕೃತ ವಾಕ್ಯಗಳು ಪ್ರಮಾಣ ವಲ್ಲವವಕೆ ಉನ್ಮತ್ತನೊಬ್ಬನು ಮಾತನಾಡುವ ತೆರದಿ ಇಂತಹ ವಾಕ್ಯಗಳು ಅಪ್ರಮಾಣವಾಗುವುವು ॥ ೪೪ ॥ ವಿಮತನೊಬ್ಬನು ಅಜ್ಞ, ವಂಚಕನು ಇರಬಹುದು "ಪುರುಷನಾಗಿಹ ಆತ ಚೈತ್ರನಂತೆ" ಓರ್ವನನು ಸರ್ವಜ್ಞನೆಂದು ಸಾಧಿಸುವಲ್ಲಿ ಇಂತಹ ಯುಕ್ತಿಗಳು ಸರ್ವಥಾ ಸಲ್ಲ ॥ ೪೫ ॥ ಆಗ್ರಹವನಿರಿಸಿದರೆ ದುಃಶಾಸ್ತ್ರಗಳಲಿ ಪರದೈವ ಜ್ಞಾನವು ತಪ್ಪಾಗಿ ತಿಳಿಯುವುದು ದುಃಖಕ್ಕೆ ಆಕರವು ಅತಿ ಘೋರ ಲೋಕವು ಇದರಿಂದ ದೊರೆಯುವುದು ಅಜ್ಞಾನಿಗಳಿಗೆ ॥ ೪೬ ॥ ನಮ್ಮ ಸಿದ್ಧಾಂತವನು ನೀವು ಸ್ವೀಕರಿಸಿದರೆ ಆನಂದ ಸವಿಯುತ್ತ ಶಬ್ದಾದಿ ವಿಷಯಗಳ ಸೇವಿಸುವ ಸಜ್ಜನರ ಸಂಗದ ಮೋಕ್ಷವನು ಕರುಣಿಸುವ ಆ ನಮ್ಮ ಅಧೋಕ್ಷಜ ಹರಿಯು ॥ ೪೭ ॥ ಮುಕ್ತಿಯೆಂಬುದು ಒಂದು ನಿರ್ವಿಶೇಷದ ವಸ್ತು ಅದು ಎಲ್ಲಿ ಲಭಿಸುವುದು ? ಹೇಗೆ ಲಭಿಸುವುದು ? ಇಂತೆಲ್ಲ ಪ್ರಶ್ನೆಗಳು ಸ್ವವ್ಯಾಹತವಾಗುವುವು ಯೋಚನಾಶೀಲರಿಗೆ ಇದು ಗ್ರಾಹ್ಯವಲ್ಲ ॥ ೪೮ ॥ ಬುದ್ಧಿಯೇ ಮೊದಲಾದ ಎಲ್ಲ ಕಾರಣದಿಂದ ಮುಕ್ತನಾಗಿರುವವನು ಆ ಮುಕ್ತ ಜೀವನು ಆನುಭವವೇ ಇರದಿರುವ ಕಟ್ಟಿಗೆಯ ಬೊಂಬೆ ಎಂದೆಂದಿಗೂ ಇದಕೆ ಪುರುಷಾರ್ಥವೇ ಇಲ್ಲ ॥ ೪೯ ॥ ಜ್ಞಾನ, ಪ್ರಯತ್ನಗಳ ವಾಂಛೆಗಳ ಹೊಂದಿರುವ ಈಶ್ವರನು ಎಂದಿಗೂ ಅಶುಭವನು ಹೊಂದನು ತನ್ನದೇ ಸಾಮರ್ಥ್ಯ ಹೊಂದಿರುವ ಆತ ಮುಕ್ತರಿಗೆ ಜ್ಞಾನಾದಿ ಗುಣಗಳನು ನೀಡುವನು ॥ ೫೦ ॥ ಸಂಸಾರಿ ಜೀವನವು ಸುಖದುಃಖ ಮಿಶ್ರಿತವು ಇದ ಕಂಡು ಸುಖಪೂರ್ಣ ಮುಕ್ತಿಯನು ತೊರೆದಲ್ಲಿ ಮುಕ್ತಿಯೊಳು ಸ್ವರೂಪವೂ ಇಲ್ಲವೆಂದೆನಬೇಕು ಇದರಿಂದ ವಾದಿಯು ಶೂನ್ಯತ್ವ ಒಪ್ಪುವನು ॥ ೫೧ ॥ ಮುಕ್ತಜೀವನು ವಿಪ್ರತಿಪನ್ನನು ದೇಹವನು ಆತನು ಹೊಂದಿರುವನಾದರೆ ಚೈತ್ರನಂತವನಿಗೆ ಊರ್ಮಿಗಳು ಇರಬೇಕು ಅಶುದ್ಧ ದೇಹವು ಇದಕೊಂದು ಉಪಾಧಿ ॥ ೫೨ ॥ ದೇಹವಿದ್ದರೂ ಈಶನಿಗೆ ಊರ್ಮಿಗಳು ಇಲ್ಲ ದೇಹತ್ವ ಹೇತುವಿಗೆ ಅನೈಕಾಂತಿಕತೆ ಬಹುದು ಈಶ್ವರಗೆ ದೇಹವಿರದಿರೆ, ಇಚ್ಛಾದಿಗಳೂ ಇರದು ಆಗವನು ಶಶವಿಷಾಣದ ತೆರದಿ ಅಸತ್ ಆಗುವನು ॥ ೫೩ ॥ ಜ್ಞಾತ್ರಾದಿ ರೂಪಗಳ ವೈಲಕ್ಷಣ್ಯವನು ನೀಡಿದರೆ ಈಶ್ವರಗೂ ದೇಹವನು ಒಪ್ಪಿದಂತಾಯ್ತು ಇದರಿಂದ ನಮ್ಮ ಮತ ಒಪ್ಪಿದಂತಾಯ್ತು ಪ್ರಾಕೃತಾಕೃತಿ ಅವಗೆ ನಾವು ಹೇಳುವುದಿಲ್ಲ ॥ ೫೪ ॥ ಅಂತಾದರೆ ನಾವು ಈಶ್ವರನ ತೆರದಿ ಸ್ವರೂಪ ಭೂತದ ದೇಹ ಮುಕ್ತನಿಗೂ ಇದೆ ಎಂಬಂಥ ಮಾತನ್ನು ಸ್ವೀಕರಿಸಬೇಕು ಮುಕ್ತನಿಗೆ ಪ್ರಾಕೃತದ ದೇಹದನಿಷ್ಟವಿರದು ॥ ೫೫ ॥ ಮುಕ್ತನಿಗೆ ಇಹುದೆ ಅವಯವಗಳು ? ವಿನಾಶತ್ವ ಪ್ರಸಂಗದಿಂದ ಅವಗಿಲ್ಲ ಅವಯವ ಪಟದಂತೆ ಎಂಬುವ ಅನುಮಾನ ಹೊಂದಿದರೆ ಎಂತಹ ಅವಯವವ ನೀವು ಒಪ್ಪುವುದಿಲ್ಲ? ॥ ೫೬ ॥ ಸ್ವರೂಪದೊಳು ಭಿನ್ನವಹ ಅವಯವಗಳನ್ನು ಮುಕ್ತನಿಗೆ ಇಲ್ಲವೆಂದನ್ನುವಿರೆ ನೀವು ? ಅದರಿಂದ ಸಿದ್ಧಿ ಸಾಧನ ದೋಷ ಬಹುದು. ಮುಕ್ತಸ್ವರೂಪರಿಗೆ ತಕ್ಕ ಅವಯವವನ್ನು ನಾವು ಒಪ್ಪೋಣ ॥ ೫೭ ॥ ಪ್ರತಿವಾದಿ ಪಕ್ಷದಲಿ ಪರಮಾತ್ಮ ವ್ಯಾಪ್ತಿಯನು ಪರಮಾಣ್ವಾದಿ ಕ್ಷೇತ್ರದಲಿ, ವ್ಯಾಮಾದಿಗಳಲಿ ಅಭಿನ್ನ ಅವಯವವ ಸ್ವೀಕರಿಸಲಾಗಿದೆ ಅಂತೆಯೇ ಮುಕ್ತರಿಗೆ ಅವಯವಗಳಿಹವು ॥ ೫೮ ॥ ರೂಪಾದಿ ಜ್ಞಾನವನು ಮುಕ್ತ ಹೊಂದಿರುವನು ಈಶ್ವರನ ತೆರದಲ್ಲಿ ಸತ್ ಅವನು, ಜಡವಲ್ಲ ಈಶ್ವರನು ಸರ್ವಜ್ಞನೆಂದು ನೀ ಒಪ್ಪಿದರೆ ಸಾಧ್ಯ ವೈಕಲ್ಯದ ದೋಷ ಉಂಟಾಗದು ॥ ೫೯ ॥ ರೂಪಾದಿ ಅನುಭವವು ಈಶ್ವರಗೆ ಉಂಟು ಆದರೂ ಈಶ್ವರನು "ಸುಖ" ವ ಪಡೆದವನಲ್ಲ ಸುಖಿಯಾದ ಚೇತನಕೆ ದುಃಖವೂ ಉಂಟೆನಬೇಡ ಇಂತಹ ವ್ಯಾಪ್ತಿಯನು ನಾವು ಒಪ್ಪುವುದಿಲ್ಲ ॥ ೬೦ ॥ ಈಶ್ವರನ ದೃಷ್ಟಾಂತ ಒಪ್ಪದೇ ಇದ್ದಲ್ಲಿ ಪಾಷಣದಂತೆಂಬ ದೃಷ್ಟಾಂತ ನೀಡುವೆವು ಶುದ್ಧ ಚಿದ್ದೇಹೇಂದ್ರಿಯ ಭೋಗವನು ಮುಕ್ತನನುಭವಿಸುವನು ಪರಲೋಕದಲ್ಲಿ ॥ ೬೧ ॥ ಸ್ವಾನಂದ ಅನುಭವದ ಮೋಕ್ಷದ ವಿಷಯವು ವೇದೋಕ್ತವಾಗಿಹುದು ಮುಕ್ತಿಸಾಧಿತವಹುದು ಈ ಬಗ್ಗೆ ದ್ವೇಷಕ್ಕೆ ಕಾರಣವು ಏನು ? ನಿರ್ವಿಶೇಷ ಬ್ರಹ್ಮನಲಿ ಆಗ್ರಹವು ಏಕೆ ? ॥ ೬೨ ॥ "ವೇದಗಳು ಆಗಿಹವು ಸ್ವಪ್ರಮಾಣಿತವು ಕ್ರೀಡಾದಿಗುಣಶಿಷ್ಠ ವೇದ ಪ್ರತಿಪಾದ್ಯನು ಶ್ರೀ ಹರಿಯು ನೀಡುವನು ಮೋಕ್ಷಾದಿಗಳನು" ಇಂತೆಂದು ಒಪ್ಪಿದರೆ ಲಭಿಸುವುದು ಮಂಗಲವು ॥ ೬೩ ॥ ತ್ರಿವಿಕ್ರಮ ಪಂಡಿತರ ವಾದಕಥಾ ಇತ್ಯಾದಿ ಶಾಸ್ತ್ರಗಳ ಅರ್ಥಗಳ ವಿವರಿಸುವ ಆನಂದ ತೀರ್ಥರ ವ್ಯಾಖ್ಯೋಪನ್ಯಾಸಗಳ ಪಂಡಿತೋತ್ತಮರಾದ ಆ ತ್ರಿವಿಕ್ರಮರು ಏಕಾಗ್ರ ಚಿತ್ತದಲಿ ಶ್ರವಣ ಮಾಡಿದರು. ॥ ೬೪ ॥ ನಂತರದಿ ಆ ಪಂಡಿತೋತ್ತಮರು ತ್ವರೆಯಿಂದ ಜ್ಞಾನವೆಂಬುವ ಚಾಪ ಮೌರ್ವಿಯ ನೆರವಿಂದ ವಿವಿಧ ತರ್ಕಗಳೆಂಬ ಬಾಣಗಳ ಹೂಡಿ ಬುದ್ಧಿ ಬಲದಿಂದವನು ಸರಸರನೆ ಬಿಟ್ಟರು ॥ ೬೫ ॥ ನಗುನಗುತ ಆ ನಮ್ಮ ಆನಂದ ತೀರ್ಥರು ತ್ರಿವಿಕ್ರಮರ ಯುಕ್ತಿಗಳ ಬಾಣಗಳನೆಲ್ಲ ಪ್ರತಿ ತರ್ಕವೆಂಬುವ ಬಾಣಗಳ ಹೂಡಿ ಸುಲಭದಲಿ ಅವುಗಳನು ಖಂಡಿಸಿದರು ॥ ೬೬ ॥ ಆನಂದ ತೀರ್ಥರನು ಗೆಲ್ಲಬಯಸಿದ ಅವರು ಇತರ ಮಂದಿಗಳಿಂದ ಧರಿಸಲಾಗದ ತೆರದತೆರದಿ ಮತ್ತಿತರ ಪುರುಷರು ತಡೆಯಲಾಗದ ತೆರದತೆರದಿ ವೇದವಾಕ್ಯಗಳೆಂಬ ಅಸ್ತ್ರಗಳ ಬೀರಿದರು ॥ ೬೭ ॥ ನಿರವಕಾಶವಹ, ಬಹುವಾದ ಸಂಖ್ಯೆ ಇಹ ವೇದಗತ ವಾಕ್ಯಗಳ ಅತಿಶಯದ ನೆರವಿಂದ ಆನಂದತೀರ್ಥರು ವಿಧವಿಧದ ಅರ್ಥಗಳ ಪ್ರತ್ಯಸ್ತ್ರಗಳ ತೆರದಿ ಖಂಡಿಸಿದರವುಗಳನು ॥ ೬೮ ॥ ವಾಕ್ಯಾರ್ಥ ಜರುಗಿದವು ಎರಡು ಸಪ್ತಾಹದಲಿ ಎರಡು ದಿಗ್ಗಜಗಳ ಅಪ್ರತಿಮ ಕಾಳಗ ! ಚಕ್ರಪಾಣಿಯ ಪ್ರಿಯರು ಆನಂದ ತೀರ್ಥರು ಕತ್ತರಿಸಿ ಹಾಕಿದರು ಎಲ್ಲ ಸಂಶಯವ ॥ ೬೯ ॥ ತ್ರಿವಿಕ್ರಮರು ಮಧ್ವಶಿಷ್ಯರಾದದ್ದು ಸಾತ್ವಿಕತೆಯೇ ಮೈವೆತ್ತ ಆ ತ್ರಿವಿಕ್ರಮರು ಆನಂದ ತೀರ್ಥರನು ಕುರಿತು ಇಂತೆಂದರು: "ಮನ್ನಿಸಿರಿ, ಓ ಸ್ವಾಮಿ! ಈ ನನ್ನ ಚಾಪಲ್ಯ! ಪದಪದ್ಮಧೂಳಿಯ ಸೇವೆಯನು ಕರುಣಿಸಿರಿ" ಬ್ರಹ್ಮಸೂತ್ರದ ಭಾಷ್ಯ ವ್ಯಾಖ್ಯಾನವನ್ನು ನಂತರದಿ ಮಧ್ವಮುನಿ ಆರಂಭಿಸಿದರು ಸೂರಿನಂದನರದನು ಶ್ರವಣ ಮಾಡಿದರು ಸಂತರ ಪ್ರೀತಿಯನು, ದುಷ್ಟರಪ್ರೀತಿಯನು ಒಮ್ಮೆಗೇ ಪಡೆದರು ॥ ೭೧ ॥ ತ್ರಿವಿಕ್ರಮ ಪಂಡಿತಕೃತ ಮಧ್ಯಗ್ರಂಥ ವರ್ಣನ ವಿಕ್ರಮಾರ್ಯರು ಆಗ ಗುರ್ವಾಜ್ಞೆ ಗೌರವಿಸಿ ದುಷ್ಕರದ ಭಾಷ್ಯಕ್ಕೆ ಟೀಕೆಯನು ರಚಿಸಲು ಉದ್ಯುಕ್ತರಾಗುತ್ತ ಪರಮಗುರು ಮಧ್ವರನು ಕುರಿತು ಇಂತೆಂದು ಪ್ರಾರ್ಥಿಸಲು ತೊಡಗಿದರು ॥ ೭೨ ॥ "ಕವಿವರ್ಯರೆಲ್ಲರೂ ಹಗಲಿರಳು ಶ್ರಮಿಸುತ್ತ ನಿಮ್ಮ ಭಾಷ್ಯಾಬ್ಧಿಯ ನ್ಯಾಯರತ್ನಗಳನ್ನು ಹೆಕ್ಕುತ್ತ ತೆಗೆದರೂ ಸಂಗ್ರಹವು ಮುಗಿದಿಲ್ಲ ಅದ್ಭುತವು ! ಅದ್ಭುತವು ! ಇದರ ಗಾಂಭೀರ್ಯ !" ॥ ೭೩ ॥ "ಉಪನಿಷದ್ಭಾಷ್ಯಗಳ ಮಂದಿರಗಳಲ್ಲಿ ಯುಕ್ತವಹ ಅರ್ಥಗಳ ಹತ್ತು ಉಪನಿಷತ್ತುಗಳ ದೇವತೆಗಳೆಲ್ಲರೂ ದೇವಿಯರೆಲ್ಲರನು ಸುಪ್ರೀತಗೊಳಿಸುವ ತರದಲ್ಲಿ ಇಹವು ॥ ೭೪ ॥ "ಗೀತೆಯ ಭಾಷ್ಯಗಳು, ಅದರ ತಾತ್ಪರ್ಯಗಳು ಪ್ರತಿವಾದ ಹೂಡಲು ಸಾಧ್ಯವಿರದಂತಹ ವಚನವೃಂದಗಳಿಂದ ವಿಜೃಂಭಿಸಿಹವು ಅರ್ಕೇಂದು ಕಿರಣದಲಿ ಜಗವು ಬೆಳಗಿದ ಹಾಗೆ" ॥ ೭೫ ॥ "ನಿಮ್ಮ ಚಿತ್ತಾದ್ರಿಯು ಮಥಿಸಿ ಹೊರತೆಗೆದಿರುವ ಇತಿಹಾಸ ಪುರಾಣದ ಕ್ಷೀರಸಾಗರದಿಂದ ಹೊರಬಂದ ಭಾರತದ ತಾತ್ಪರ್ಯ ಸುಧೆಯನ್ನು ಯಾವ ಸುಜನನು ತಾನೆ ಸವಿಯದಿಹನು" ? ॥ ೭೬ ॥ 'ಮೂರು ಭಾಷೆಗಳಲ್ಲಿ ಅರಿವನ್ನು ಅರಿಯದೆ ಪುರಾಣಗಳನಾಶ್ರಯಿಪ ಪಾಂಥರಿಗೆ ತಮ್ಮಿಂದ ಭಾಗವತ ತಾತ್ಪರ್ಯ ನಿರ್ಣಯವು ಎಂಬ ಸಖನೊಬ್ಬ ದೊರತಿಹನು ಪುಣ್ಯ ಫಲದಿಂದ " ॥ ೭೭ ॥ "ಅಮರರಾಶ್ರಯಿಸುವ ಛಾಯೆಯನು ಹೊಂದಿರುವ ಕಲ್ಪವೃಕ್ಷದ ತೆರದಿ ಉತ್ತಮೋತ್ತಮವಾದ ದೇವತಾಪ್ರಿಯವಾದ ತಂತ್ರಸಾರವ ಪಡೆದ ಆವನಿಹ ಬಯಕೆಯನು ಪೂರೈಸಿಕೊಳ್ಳದವ ?" ॥ ೭೮ ॥ "ಕರುಣೆಯ ಸಾಗರರೆ, ಆನಂದ ತೀರ್ಥರೆ ಕಥಾ ಪ್ರಮಾಣಗಳ ದರ್ಶನವ ಪಡೆವುದಕೆ " ಕಣ್ಣುಗಳ ತರದಲ್ಲಿ ಶೋಭಿಸುತ್ತಿರುವ ವಾದ ಸನ್ಮಾನ ಲಕ್ಷಣವ ರಚಿಸಿಹಿರಿ ॥ ೭೯ ॥ "ತತ್ವನಿರ್ಣಯವೆಂಬ ಆ ನಿಮ್ಮ ರಚನೆ ಅಸಹಾಯ ಶೂರ ಆ ಪಾರ್ಥನಾ ತೆರದಲ್ಲಿ ವಾದಿಗಳ ತಲೆಯನ್ನು ಮೆಟ್ಟಿ ನಿಂತಿಹುದು ಯಾರಿಂದ ಇದು ಪೂಜ್ಯ ವಲ್ಲವಾಗಿಹುದು ?" ॥ ೮೦ ॥ "ವಾದವೇ ಮೊದಲಾದ ಪ್ರಕರಣ ಗ್ರಂಥಗಳು ಬೆಂಕಿಯ ಕಿಡಿಯಂತೆ ಅತಿ ಸಣ್ಣವಿಹವು ವಿಪಕ್ಷ ಕಕ್ಷದಿ ಒಣಗಿದ ಕಾನನವ ಮಾರುತನ ರೀತಿಯಲಿ ನಾಶಗೊಳಿಸಿಹವು" ॥ ೮೧ ॥ "ಆ ಕೃಷ್ಣನಾನನದಿ ವಿಶ್ವ ತೋರಿದ ಹಾಗೆ ಅನಂತರ್ಥಗಳ ಹೊಂದಿಹ ಭಾಷ್ಯ ಸಂಗ್ರಹವು ಗಾತ್ರದಲಿ ಕಿರಿದಾಗಿ, ಪಾತ್ರದಲಿ ಹಿರಿದಾಗಿ ತಮ್ಮ ಅದ್ಭುತವಾದ ಸಾಮರ್ಥ್ಯ ತೋರಿಹುದು " ॥ ೮೨ ॥ "ಯಮಕ ಭಾರತವೊಂದು ವಿಶ್ವವಿಸ್ಮಯ ರಚನೆ ! ಭಾರತದ ಗೌಪ್ಯದ ಅರ್ಥ ಸಂಗ್ರಹ ರೂಪ ! ಕಾವ್ಯ ಸಾಮರ್ಥ್ಯವನು ಜಗಕೆ ತೋರಿಸಲೆಂದು ಓ ಮಧ್ವಮುನಿಗಳೇ ! ರಚಿಸಿಹಿರಿ ಈ ಕಾವ್ಯ" ॥ ೮೩ ॥ "ರತ್ನದಾಕರವಾದ ಜ್ಞಾನಸಾಗರ ನೀವು ! ಸಾಗರದ ಗರ್ಭದಲಿ ಅಡಗಿರುವ ರತ್ನಗಳ ವಿಧ ವಿಧದ ಸ್ತೋತ್ರಗಳ, ಜಾಣ್ನುಡಿಯ, ಗಾಥೆಗಳ ಅಮೂಲ್ಯ ತುಣುಕುಗಳನೆಣಿಸುವರು ಯಾರು?" ॥ ೮೪ ॥ "ಶಬ್ದದಲಿ ಪರಿಮಿತವು ಅರ್ಥದಲಿ ಅಪರಿಮಿತ ಈ ತಮ್ಮ ಸಾಹಿತ್ಯ ದಿವ್ಯ ಚಿಂತಾಮಣಿಯು ಇಂತೆಂದು ಭಾವಿಸಿಹ ಸುಜನರ ಈ ಸಭೆಯು ಅಲ್ಪಮತಿಗಳ ಕಂಡು ಪರಿಹಾಸ ಮಾಡುತಿದೆ'' ॥ ೮೫ ॥ ಅನುವ್ಯಾಖ್ಯಾನ ಗ್ರಂಥ ರಚನೆ "ಪುರುಹೂತನಂತಹ ದೇವತೆಗಳಿದ್ದರೂ ತಾರಕನ ವೈರಿಯನೇ ಅಮರರಿಚ್ಛಿಸಿದಂತೆ ಇಷ್ಟೊಂದು ಗ್ರಂಥಗಳ ತಾವು ರಚಿಸಿದ್ದರೂ ಮತ್ತೊಂದು ಗ್ರಂಥವನು ತಮ್ಮಿಂದ ಬಯಸುವೆವು'' ॥ ೮೬ ॥ "ಗಂಭೀರವಾಗಿರುವ ಈ ಗ್ರಂಥ ಯುಕ್ತಿಗಳು ಮನದ ಮಾಂದ್ಯತೆಯಿಂದ ನಮಗೆ ಅವು ಅಗ್ರಾಹ್ಯ ಅಂತಹ ಯುಕ್ತಿಗಳ ಸರಳಗೊಳಿಸುವ ಹಾಗೆ ಮತ್ತೊಂದು ಗ್ರಂಥವನು ದಯಮಾಡಿ ರಚಿಸಿರಿ'' ॥ ೮೭ ॥ ಮಧ್ವಮುನಿಗಳು ಇಂತು ಪ್ರಾರ್ಥನೆಗೆ ಓಗೊಟ್ಟು ಸಜ್ಜನಕೆ ಸುಧೆಯಂತೆ, ದುರ್ವಾದಿ ಗರ್ವಕ್ಕೆ ವಜ್ರಸದೃಶದಂತೆ ಮಾಯಿಗಳ ಕತ್ತಲೆಗೆ ರವಿಯ ಬೆಳಕಂತೆ ಅನು ಭಾಷ್ಯವೆಂಬುವ ಗ್ರಂಥವನು ರಚಿಸಿದರು ॥ ೮೮ ॥ ಬಲು ಚತುರರು ನಮ್ಮ ಆನಂದ ತೀರ್ಥರು ನಾಲ್ಕು ಜನ ಶಿಷ್ಯರನು ಒಂದೆಡೆಯೇ ಕುಳ್ಳಿರಿಸಿ ನಾಲ್ಕು ಅಧ್ಯಾಯಗಳ ಅನುಭಾಷ್ಯವನ್ನು ಒಮ್ಮೆಗೇ ಬರೆಸಿದರು ಸುಲಲಿತವಾಗಿ ॥ ೮೯ ॥ ನ್ಯಾಯ ವಿವರಣ ರಚನೆ ತಮ್ಮ ಈ ಗ್ರಂಥದಲಿ ಉಪಪನ್ನವಾದ ಯುಕ್ತಿ ಮಾಲಾ ಎಂಬ ಭಾಗಕ್ಕೆ ಮಧ್ವರು ಸಿದ್ಧಾಂತ ಯುಕ್ತಿಗಳ ವಿವರಣೆಯ ಸಲುವಾಗಿ ನ್ಯಾಯವಿವರಣ ವೆಂಬ ಗ್ರಂಥವನು ರಚಿಸಿದರು ॥ ೯೦ ॥ ಶ್ರೀ ವಿಷ್ಣುತೀರ್ಥರ ಮಹಿಮಾ ವರ್ಣನೆ ಮಧ್ವೇಂದುವಿನ ನಿತ್ಯ ಸಂಬಂಧದಿಂದ ಅಜ್ಞಾನ, ತಾಪಗಳ ಬಂಧನವ ತೊರೆಯುತ್ತ ವೈಕುಂಠ ಯಾತ್ರೆಯನು ತಾಯ್ತಂದೆ ಮಾಡಿದರು ಮಧ್ವರನುಜರು ಆಗ ಪಾಜಕದಿ ಉಳಿದರು ॥ ೯೧ ॥ ವಿಧಿಯ ಭ್ರೂಲಾಸ್ಯದಲಿ ಆ ಮಧ್ವರನುಜರು ಧನ, ಧಾನ್ಯ ಗೋವುಗಳು ನಾಶವಾದುದ ಕಂಡು ವೈರಾಗ್ಯ ಭಾವವನು ಕೂಡಲೇ ತಳೆದು ವೇದವ್ಯಾಖ್ಯೆಯ ನಿಪುಣ ಅಗ್ರಜನ ಕಂಡರು ॥ ೯೨ ॥ ಅಡಿಗಡಿಗೆ ಅಗ್ರಜರ ಅಡಿಗಳಿಗೆ ಎರಗುತ್ತ ಸನ್ಯಾಸವನ್ನೆಮಗೆ ನೀಡಿರೆಂದನ್ನುತ್ತ ಬಿನ್ನಹವ ಮಾಡಿದ ಅನುಜನಿಗೆ ಮಧ್ವರು ಕಾಲಸನ್ನಿಹಿತವಾಗಿಲ್ಲವೆಂದೆನ್ನುತ್ತ ಕಳುಹಿದರು ಆತನನು ಪಾಜಕಕ್ಕೆ ॥ ೯೩ ॥ ಊಟ ನಿದ್ರೆಗಳನ್ನು, ಆಮೋದಗಳ ತೊರೆದು ಸನ್ಯಾಸ ಸ್ವೀಕಾರ ಕಾಲವನು ವೀಕ್ಷಿಸುತ ಜ್ಯೇಷ್ಠರಾಮನ ಬರವ ಭರತ ಕಾಯ್ದಂತೆ ಹಾತೊರದು ಕಾಯ್ದರು ಆ ಮಧ್ವರನುಜರು ॥ ೯೪ ॥ ನಾಲ್ಕು ತಿಂಗಳ ವ್ರತದ ಗಡುವು ಮುಗಿದಿರಲು ಮಧ್ವಮುನಿಗಳು ಪಯಣ ಮುಂದುವರಿಸಿರಲು ಅಗಲಿಕೆಯ ತಾಳದೆಯೆ ತಾನೂ ಹೊರಡುವೆನೆಂದ ರಾಜನನು ಸಂತೈಸಿ ಪಾಜಕಕೆ ಮರಳಿದರು ॥ ೯೫ ॥ ಪರಿಶುದ್ಧ ವಂಶದಲಿ ಜನ್ಮವನು ತಳೆದವರು ವೇದಾದಿ ವಿದ್ಯೆಯಲಿ ಪರಮ ಪಾರಂಗತರು ಕೃತಕೃತ್ಯಕ್ರಿಯರೂ, ವಿಷಯ ವಿರಕ್ತರೂ ಅನುಜರಿಗೆ ಆಶ್ರಮವ ಮಧ್ವಮುನಿ ನೀಡಿದರು ॥ ೯೬ ॥ ನಾಲ್ಮೊಗದ ಬ್ರಹ್ಮನಿಗೆ ಸಮರು ಗುರುಮಧ್ವರು ಏಕಾಂತದಲ್ಲವರು, ಪಂಚಾಗ್ನಿಗಳ ನಡುವೆ ತಾಪಸೋತ್ತಮರಿಗೂ ಅರಿಯಲು ಬಾರದಿಹ ಅತಿ ಗೂಢ ತತ್ವಗಳ ಬೋಧಿಸಿದರು ॥ ೯೭ ॥ ಪ್ರೇಮದಮೃತದಿಂದ ಕೂಡಿರುವ ಮೊಗದಿಂದ ಕಿರುನಗೆಯ ಸೂಸುತ್ತ, ಕುಡಿನೋಟ ಬೀರುತ್ತ ಆನಂದ ತೀರ್ಥರು, ತಮ್ಮ ಆ ಅನುಜರಿಗೆ "ವಿಷ್ಣು ತೀರ್ಥರು " ಎಂಬ ಹೆಸರನ್ನು ನೀಡಿದರು ॥ ೯೮ ॥ ವೇದಾಂತಗುರುಗಳ ಸೋದರರು ಆಗ ವೇದಾಂತ ಶಾಸ್ತ್ರದ ಶ್ರವಣ ಮನನಾದಿಯಲಿ ಅನುವಾದ ಮುಂತಾದ ಸತ್ಕರ್ಮಗಳಲಿ ಸತ್ಕಾಲ ಕ್ಷೇಪವನು ಮಾಡುತ್ತ ಕಳೆದರು ॥ ೯೯ ॥ ಗುರುಕೃಪೆಯ ಅಂಕುರವ ತ್ವರಿತದಲಿ ಗಳಿಸಿ ಶ್ರೀ ವಿಷ್ಣುತೀರ್ಥರು ಇಂದ್ರಿಯಗಳ ನಿಗ್ರಹ, ಹರಿಗುರುವ ಭಕ್ತಿ, ಮಾಧುರ್ಯ, ಪರಿಚರ್ಯ ಮುಂತಾದ ಸಾಧನದಿ ಹೆಮ್ಮರವ ಮಾಡಿದರು ॥ ೧೦೦ ॥ ಆನಂದ ತೀರ್ಥರ ಕಾರುಣ್ಯ ವೆಂಬುವ ಕಲ್ಪವೃಕ್ಷದ ಕೆಳಗೆ ಆಶ್ರಮವ ಪಡೆದ ವಿಷ್ಣುತೀರ್ಥರ ಮಹಿಮೆ ಬಣ್ಣಿಸಲಸದಳವು ಆದರೂ ಬಣ್ಣಿಪೆವು ಶಕ್ತ್ಯಾನುಸಾರ ॥ ೧೦೧ ॥ ಶ್ರೀ ವಿಷ್ಣುತೀರ್ಥರು ಪ್ರವಚನದಿ ಚತುರರು ಪ್ರಣವಾದಿ ಮಂತ್ರದಲಿ ಅತ್ಯಂತ ಕುಶಲರು "ಮಧ್ವಮುನಿ ದಾಸರಲಿ ಪ್ರಪ್ರಥಮ ನಾನು" ಅಂತಾಗಬೇಕೆಂದು ಅವರು ನಿಶ್ಚೈಸಿದರು ॥ ೧೦೨ ॥ ಬಡಗ ದಿಕ್ಕಿಗೆ ಅವರು ತೀರ್ಥಯಾತ್ರೆಗೆ ಹೊರಟು ಹಲವಾರು ತೀರ್ಥದಲಿ ಮಜ್ಜನವಗೈದರು ತೀರ್ಥಗಳ ಜಲದಿಂದ ಪೂತರಾದರು ಅವರು ಅವರ ಸಂಪರ್ಕದಲಿ ತೀರ್ಥ ಪಾವನವಾಯ್ತು ॥ ೧೦೩ ॥ ಕಾಮ್ಯಕರ್ಮವ ತೊರೆದು ತಪವಗೈಯುವ ಜನಕೆ ಸಾಧನೆಯ ಸ್ಥಳವೆಂದು ಖ್ಯಾತಗೊಂಡಂತಹ ಹರಿಶ್ಚಂದ್ರವೆಂಬುವ ಪರ್ವತದ ಪ್ರಾಂತಕ್ಕೆ ಐತಂದರವರು ಅದೃಶ್ಯರಾಗಿ ॥ ೧೦೪ ॥ ಮಾತ್ಸರ್ಯ ರಹಿತರು, ಶ್ರೀ ವಿಷ್ಣುತೀರ್ಥರು ಶೀತ, ಉಷ್ಣಗಳೆಂಬ ದ್ವಂದ್ವದಲಿ ಜನಿಸುವ ದುಃಖವೆಂಬಗ್ನಿಯಲಿ ದ್ವೇಷವನು ತಳೆಯುತ್ತ ಅದಕೆ ಇಂಧನವಾದ ಅಶನವನು ತ್ಯಜಿಸಿದರು ॥ ೧೦೫ ॥ ಶ್ರೀ ವಿಷ್ಣುತೀರ್ಥರು ಪರಮ ಯತಿಶ್ರೇಷ್ಠರು ಭಕ್ತ ಜನರಿಂದವರು ಪರಮ ಸನ್ಮಾನಿತರು ಶಿಷ್ಯವರ್ಗವು ತಂದ ಪಂಚಗವ್ಯವನವರು ಐದು ದಿನಕೊಮ್ಮೆ ಸ್ವಲ್ಪ ಸ್ವೀಕರಿಸಿದರು ॥ ೧೦೬ ॥ ಇಂದ್ರಿಯಗಳ ನಿಗ್ರಹವು ಅತಿ ಸುಲಭವವರಿಗೆ ಕಾಲಾನುಕ್ರಮದಲ್ಲಿ ಪಂಚಗವ್ಯವ ತೊರೆದು ಗಿಡಗಳಿಂದುದುರಿದ ಬಿಲ್ವ ಪತ್ರೆಗಳನ್ನು ಕಿಂಚಿತ್ತು ಜಲದಿಂದ ಉದರವನು ಸಲಹಿದರು ॥ ೧೦೭ ॥ ಪರಮಾತ್ಮ ಕೃಪೆಯನ್ನು ಪಡೆದ ಮುನಿಗಳು ಕೂಡ ಕುಳಿತು ಕೊಳ್ಳಲು ಬರದ ಶಿಲೆಯಲ್ಲಿ ಕುಳಿತು ಮನವ ನಿಗ್ರಹಿಸುತ್ತ, ಸನ್ನಡತೆ ರೂಢಿಸುವ ವಿಷ್ಣುತೀರ್ಥರು ಆಗ ಕಠಿಣ ತಪಗೈದರು ॥ ೧೦೮ ॥ ರೇಚಕಾದಿಗಳಿಂದ ಶ್ವಾಸವಾಯುವ ಜಯಿಸಿ ಪವನಾಂಶ ಅನುಜರು ಆ ವಿಷ್ಣುತೀರ್ಥರು ಮನವೆಂಬ ಸಾರಥಿಯ ನೆರವನ್ನು ಪಡೆದು ವಿಷಯವೆಂಬುವ ಅಶ್ವ ವಶಪಡಿಸಿಕೊಂಡರು ॥ ೧೦೯ ॥ ವೇದಾಂತ ಕೋವಿದರು ಶ್ರೀ ವಿಷ್ಣುತೀರ್ಥರು ಶ್ರೀ ಹರಿಯ ರೂಪವನು ಮನದಲ್ಲಿ ಸ್ಮರಿಸುತ್ತ ಯೋಗದಲಿ ಲಭಿಸುವ, ವ್ಯಥೆಯ ನಿವಾರಿಸುವ "ಸಮಾಧಿ" ಸ್ಥಿತಿಯನ್ನು ಶೀಘ್ರದಲಿ ಗಳಿಸಿದರು ॥ ೧೧೦ ॥ ನಿರ್ದೋಷ, ಆನಂದ ಗುಣಗಳಿಗೆ ಸಾಗರನೂ ಸ್ವಾಶ್ಚರ್ಯ ರತ್ನ ಆ ಮುಕುಂದನನು ಸುಂದರದ ರೂಪದಲಿ ಮನವನ್ನು ತೊಡಗಿಸಿದ ಶ್ರೀ ವಿಷ್ಣುತೀರ್ಥರು ಬೇರಾವುದನ್ನೂ ಗಮನಿಸಲೆ ಇಲ್ಲ ॥ ೧೧೧ ॥ ವಿಷ್ಣುತೀರ್ಥರ ಧ್ಯಾನ ಅದ್ಭುತದ ಪರಿಯದು ಕಾಮ ಮಣಿ ದೋಷವನು ಹೊಂದಿರದ ಧ್ಯಾನವದು ಅಪರೋಕ್ಷಜ್ಞಾನದ ಬೆಳಕ ಪಡೆದಿಹ ಧ್ಯಾನ ಕೈವಲ್ಯ ಸಾಮ್ರಾಜ್ಯ ಅದಕೆ ಮೌಲ್ಯ ॥ ೧೧೨ ॥ ಮಧ್ವನಾಥನು ಆಗ ಮಧ್ವರಾ ಅನುಜರಿಗೆ ಕರುಣಿಸಿದ ಕೃಪೆಯು ಮನಕೆ ಗೋಚರಿಸದು ಅತಿಯಾದ ಗೋಪ್ಯತೆಯ ಹೊಂದಿರುವ ಕರುಣೆಯನು ವರ್ಣಿಸಲಸಾಧ್ಯವು ಈ ಕಥನದಲ್ಲಿ ॥ ೧೧೩ ॥ ಪೂರ್ಣಬೋಧರ ಸೇವೆ ಮಹಿಮೆಯಲಿ ಕೂಡಿಹುದು ಆದರಿಂದಲೇ ಅನುಜರಿಗೆ ಇಂತಹ ಸಿದ್ಧಿ ಇಂತೆಂದು ಮಧ್ವಮುನಿ ಸೇವೆಯ ಮಹಿಮೆಯದು ಮಾನ್ಯವಾಯಿತು ಜೀವ ದೇವಾದಿ ಗಣದಲ್ಲಿ ॥ ೧೧೪ ॥ ಕಠಿಣತಮ ವ್ರತಗಳಲಿ ನಿಷ್ಠೆಯಿಂದಿದ್ದಿಹ ಅತೀಂದ್ರಿಯ ಜ್ಞಾನದಲಿ ನೈಪುಣ್ಯ ಪಡೆದಿದ್ದ ವಿದ್ಯಾಸಮುದ್ರರೂ, ತರ್ಕಕೋವಿದರಾದ ಅನಿರುದ್ಧ ತೀರ್ಥರು ಐತಂದರಲ್ಲಾಗ ॥ ೧೧೫ ॥ ಅವರ ಪ್ರಾರ್ಥನೆಯಿಂದ ಸಂಪ್ರೀತಗೊಂಡು ರೂಪ್ಯಾಪೀಠಾಪುರಕೆ ವಿಷ್ಣುತೀರ್ಥರು ಅಂದು ಮರಳಿದುದ ಕಂಡ ಶಿಷ್ಯಗಣವೆಲ್ಲವೂ "ಮಧ್ವಮುನಿ ಇವರೇ" ಎಂಬ ಭ್ರಮೆಯನ್ನು ಹೊಂದಿದರು ॥ ೧೧೬ ॥ ಕವಿಕುಲಾಗ್ರಣಿಗಳೂ, ಪಂಡಿತಶ್ರೇಷ್ಠರೂ ಮಧ್ವಮುನಿ ಕೇಲಿಗಳ ಗಿಳಿಯ ಪರಿಯಲ್ಲೂ ಇದ್ದ ತಾಪಸಾಗ್ರಣಿಯಾದ ಬಾದರಾಯಣರೆಂಬ ಮತ್ತೊಬ್ಬ ಶಿಷ್ಯರೂ ವಿಷ್ಣುತೀರ್ಥರಿಗಿದ್ದರು ॥ ೧೧೭ ॥ ದೃಢಚಿತ್ತದಿಂದಲಿ ಶಿಷ್ಯತ್ವ ವಹಿಸಿದ್ದ ಬಾದರಾಯಣರನ್ನು ಶ್ರೀ ವಿಷ್ಣುತೀರ್ಥರು ಅತಿಯಾದ ಕೃಪೆಯನ್ನು ಅವರಲ್ಲಿ ತೋರುತ್ತ ಉತ್ತಮರೊಳುತ್ತಮರು ಎಂಬಂತೆ ಮಾಡಿದರು ॥ ೧೧೮ ॥ ಸರ್ವದಾ ಶ್ರೀ ಹರಿಗೆ ಪ್ರಿಯವಾದ ಕಾರ್ಯವನೆ ಎಸಗುವ ಆ ನಮ್ಮ ಶ್ರೀ ವಿಷ್ಣುತೀರ್ಥರು ಇತರರಿಗೆ ಏರಲು ಅತಿ ಕಠಿಣವಾದಂಥ ಕುಮಾರ ಪರ್ವತವನೇರಿದರು ಸುಲಭದಲಿ ॥ ೧೧೯ ॥ ಶ್ರೀ ಪದ್ಮನಾಭತೀರ್ಥರ ಮಹಿಮೆ ಗೋದಾವರೀ ನದಿಯ ತೀರದಿಂದೈತಂದ ಪದ್ಮನಾಭರು ಎಂಬ ಪಂಡಿತೋತ್ತಮರು ಭೂಮಿಯಲಿ ಪಸರಿಸಿದ ಮಧ್ವಮುನಿ ಗುಣದಿಂದ ಆಕರ್ಷಣೆಯ ಹೊಂದಿ ಶಿಷ್ಯತ್ವ ವಹಿಸಿದರು ॥ ೧೨೦ ॥ ಶ್ರವಣ, ಮನನಾದಿಗಳು, ಭಕ್ತಿ, ವಿರಕ್ತಿಗಳು ನಿತ್ಯಸೇವೆಗಳಿಂದ ಸಂತುಷ್ಟರಾಗಿ ಆನಂದ ತೀರ್ಥರು ಶ್ರೀ ಪದ್ಮನಾಭರಿಗೆ ತ್ವರಿತದಲಿ ಬೋಧಿಸಿದರಧ್ಯಾತ್ಮ ವಿದ್ಯೆಯ ॥ ೧೨೧ ॥ ಯುಕ್ತಿ ಪ್ರವಾಹದಲಿ ರೋಷವನು ತಾಳಿ ಪರಶಾಸ್ತ್ರ ನದಿಗಳಲಿ ಸಂಚಾರ ಹೂಡಿ ವಿದ್ವತ್ತಿಮಿಂಗಿಲರು, ಆ ಪದ್ಮನಾಭರು ವೇದಾಂತ ಸಾಗರವ ತೊರೆಯಲೇ ಇಲ್ಲ ॥ ೧೨೨ ॥ ವಾದಿಗಳಲತಿ ಶ್ರೇಷ್ಠ ಶ್ರೀ ಪದ್ಮನಾಭರು ತಮ್ಮ ಮಂಡಲದಲ್ಲಿ ವೀರರೆಂದೆಣಿಸಿದ್ದ ಮಾಯಾವಾದಿಗಳೆಂಬ ಗ್ರಾಮಸಿಂಹಗಳನ್ನು ವ್ಯಾಖ್ಯಾನ ಗರ್ಜನೆಯ ನೆರವಿಂದ ಜಯಿಸಿದರು ॥ ೧೨೩ ॥ ಮದಿಸಿದ ದುರ್ವಾದಿ ಮಾತಂಗ ನಿವಹದ ಯುಕ್ತಿ ಎಂಬುವ ಕುಂಭ ಸ್ಥಳಗಳನು ಸೀಳುವ ಕೇಸರಿಯ ತೆರದಲ್ಲಿ ಆ ಪದ್ಮನಾಭರು ವೇದಾಂತ ತತ್ವವನು ಎಲ್ಲೆಲ್ಲೂ ಹರಡಿದರು ॥ ೧೨೪ ॥ ಮಧ್ವರಾ ಕೃತಿರತ್ನ ಅನುವ್ಯಾಖ್ಯಾನಕೆ ಜ್ಞಾನಸಾಗರರಾದ ಶ್ರೀ ಪದ್ಮನಾಭರು ಸನ್ನ್ಯಾಯ ರತ್ನಾವಲಿ ಎಂಬ ಟೀಕೆಯನು ಬರೆದು ಬೆಲೆಯಿರದ ರತ್ನಗಳ ಮಾಲೆಯನು ರಚಿಸಿದರು ॥ ೧೨೫ ॥ ವೇದಾದಿ ಪ್ರವಚನಕೆ ಆಚಾರ್ಯರಾಗಿರುವ ಗುರು ಮಧ್ವರ ಶಿಷ್ಯರಗ್ರಣಿಯು ಇವರೆಂದು ಎಲ್ಲೆಲ್ಲೂ ಮಾನ್ಯರು ಶ್ರೀ ಪದ್ಮನಾಭರು ವೇದ ವ್ಯಾಖ್ಯಾನವನು ಸಭೆಗಳಲಿ ಮಾಡಿದರು ॥ ೧೨೬ ॥ ಶ್ರೀ ಮದಾಚಾರ್ಯರ ಇತರ ಸನ್ಯಾಸಿ ಶಿಷ್ಯರು ಈ ಈರ್ವ ಶಿಷ್ಯಕುಲಮಣಿಗಳಲ್ಲದೆ ಆನಂದ ತೀರ್ಥರ ದಿವ್ಯ ಸನ್ನಿಧಿಯಲ್ಲಿ ನಾನಾಪ್ರದೇಶಗಳ ನೂರಾರು ಯತಿಗಳು ಈರ್ವರ ಬಳಿಕವೂ, ಮತ್ತವರ ಮುನ್ನವೂ ಶಿಷ್ಯತ್ವ ವಹಿಸಿದರು ॥ ೧೨೭ ॥ ಅವರಲ್ಲಿ ಹಲವರು ಇಂದ್ರಿಯವ ಗೆಲಿದವರು ಇನ್ನಷ್ಟು ಕೆಲವರು ಜನನ ಮರಣವ ಜಯಿಸಿದವರು ನರಸಿಂಹನ ಪಾದದಾಶ್ರಿತರು ಕೆಲರು ಹರಿನಾಮ ಹಾಡಿದ ಭಕ್ತರು ಕೆಲವರು ॥ ೧೨೮ ॥ ದೀರ್ಘವಲ್ಲದ ಹೆಸರನುಳ್ಳವರು ಕೆಲರು ಶ್ರೀ ರಾಮ ಪಾದಗಳ ರಕ್ಷಿತರು ಕೆಲರು ಉತ್ಕೃಷ್ಟರಪ್ರತ್ಯಕ್ಷ ಗುಣದಿಂದ ಕೆಲರು ಎಲ್ಲರೂ ವೈರಾಗ್ಯ ಭಕ್ತಿ ಸಾಗರರು ॥ ೧೨೯ ॥ ಮಧ್ವಮುನಿಗಳ ಶಿಷ್ಯ ಸಂಕುಲಗಳೆಲ್ಲ ಧರಗಿಳಿದ ಸೂರ್ಯರೊ ಎಂಬಂತೆ ಬೆಳಗುತ್ತ ತಮ್ಮ ಪದರಜದಿಂದ ಬುವಿಯಭುವಿಯ ಪಾವನ ಮಾಡಿ ದುರ್ಮತದ ತಿಮಿರವನು ನಾಶಮಾಡಿದರು ॥ ೧೩೦ ॥ ಮೋಕ್ಷಶಾಸ್ತ್ರದ ಕ್ಷೀರ ಸಾಗರದಿ ಮುಳುಗುತ್ತ ನಿತ್ಯ ಸುಖಪೂರ್ಣರು ಆ ಮಧ್ವ ಶಿಷ್ಯರು ಶ್ರೀ ಹರಿಯ ಅಪ್ರತಿಮ ಪ್ರತಿಮೆಗಳ ಪೂಜಿಸುತ ಚಕ್ರಪಾಣಿಯ ಚರಣ ಸೇವೆಯಲಿ ನಿರತರು ॥ ೧೩೧ ॥ ಮಧ್ವಮುನಿ ಶಿಷ್ಯಗಣ ಬಹುವಾಗಿ ಬೆಳೆಯಿತು ಮಧ್ವರಾ ಶಿಷ್ಯರು ಮತ್ತವರ ಶಿಷ್ಯರು, ಅವರ ಪ್ರಶಿಷ್ಯರು ಹರಿಭಕ್ತಿ ವೈರಾಗ್ಯ ಗುಣದಿಂದ ಭೂಷಿತರು ಜಗದಗಲ ಪಸರಿಸುತ ಬುವಿಭುವಿಯಲಂಕರಿಸಿದರು ॥ ೧೩೨ ॥ ಸರ್ವದಾ ಸಕಲ ಸಚ್ಛಾಸ್ತ್ರ ವ್ಯಾಖ್ಯೆಗಳು ಇದರಿಂದ ಲಭಿಸುವ ಸೌಖ್ಯ ಸಾಗರದಲ್ಲಿ ಆ ಶಿಷ್ಯರೆಲ್ಲರೂ ವಿಹರಿಸುತ್ತಿದ್ದರು ದುರ್ವಚನ ಖಂಡಿಸುತ ಸಚ್ಛಾಸ್ತ್ರ ಸಾರಿದರು ॥ ೧೩೩ ॥ ಮಧ್ವರಾ ಶಿಷ್ಯ ಪ್ರಶಿಷ್ಯರಲಿ ಕೆಲರು ಅಲ್ಪ ಶ್ರವಣವ ಮಾಡಿ ಭಕ್ತಿಯನು ತಳೆದವರು ಅಲ್ಪ ಬುದ್ಧಿಯ ಕೆಲರು ಶಾಸ್ತ್ರಗಳ ಶ್ರವಣವನು ಬಹು ಬಾರಿ ಮಾಡುತ್ತ ಸಾರ್ಥಕ್ಯ ಪಡೆದವರು ॥ ೧೩೪ ॥ ಗೃಹಸ್ಥ ಶಿಷ್ಯರು ಮಧ್ವಮುನಿ ಶಿಷ್ಯರಲಿ ಸಂಸಾರಿ ಹಲವರು ಗುರುಗಳ ಅಪರಿಮಿತ ಕರುಣೆಯನು ಪಡೆದವರು ಲಿಕುಚ ವಂಶೋದ್ಭವರಾದ ಮೂರು ಮಹನೀಯರು ತ್ರೇತಾಗ್ನಿ ಯಂದದ ತೇಜವನು ಪಡೆದವರು ॥ ೧೩೫ ॥ ಪಂಡಿತ್ತೋತ್ತಮರಾದ ಆ ಲಿಕುಚ ಶೇಖರರು ಶಿಷ್ಯರೆಂಬುವ ಹೊಲದಿ ಸದ್ವಿದ್ಯೆಯನು ಬಿತ್ತು ಆ ಕಾರ್ಯದಲ್ಲಿಯೇ ಹಗಲಿರುಳು ಕಳೆದು ಗುರುಮಧ್ವರಾದೇಶ ಅನವರತ ಸ್ಮರಿಸಿದರು ॥ ೧೩೬ ॥ ನಾಲ್ಕು ವರ್ಣದ ಜನಕೆ, ಗ್ರಾಮಾಧಿಪತಿಗಳಿಗೆ ಶಿಷ್ಟ ರಕ್ಷಣದಿಂದ ಪರಮ ಪದ ದೊರೆಯುವುದು ಇಂತು ಆ ಗುರುಗಳಲಿ ಎಲ್ಲ ವರ್ಣದ ಜನರೂ ಶಿಷ್ಯತ್ವ ವಹಿಸುತ್ತ ಅರಸಿದರು ಮುಕ್ತಿಯನು ॥ ೧೩೭ ॥ ಆಚಾರ್ಯರು ಮಾಡಿದ ಅನುಗ್ರಹ ಶ್ರೀ ರಾಮನ ಪ್ರಿಯರು ಶ್ರೀ ಮಧ್ವಮುನಿಗಳು ಶ್ರೀ ರಾಮನಾ ತೆರದಿ ಪರಿಚರ್ಯ, ದೀಕ್ಷೆ ಭಕ್ತಿಯೇ ಮೊದಲಾದ ಸದ್ಗುಣದ ಸಜ್ಜನಕೆ ಯೋಗಿ ದುರ್ಲಭವಾದ ಗತಿಯನ್ನು ಕರುಣಿಸಿದರು ॥ ೧೩೮ ॥ ಯಾವ ಗುರು ಕರುಣೆಯಲಿ ಶಿಷ್ಯ ಪ್ರಶಿಷ್ಯರ ಸಾಮರ್ಥ್ಯ ಪ್ರತಿಭೆಗಳು ಖ್ಯಾತಿಯನು ಪೊಂದಿದವೋ ಸುಲಭದ ಭಕುತಿಗೆ ಅತಿ ಸುಲಭರೆನಿಸುವ ಮಧ್ವಪದ ಸುರ ತರುವ ಬಯಸದವ ಯಾರು ? ॥ ೧೩೯ ॥ ಏಕವಾಟದಲ್ಲಿ ಚಾತುರ್ಮಾಸ್ಯ ಆಷಾಢ ಶುಕ್ಲದ ಹನ್ನೊಂದನೆಯ ದಿನದಂದು ಶ್ರೀ ಶೇಷಶಯನನು ಶಯನವನು ಮಾಡಲು ಸಕಲ ಸಜ್ಜನರೆಲ್ಲ ಪೂಜಿಸುವ ಮಧ್ವರು ಕಣ್ವ ತೀರ್ಥದ ಮೇಲೆ ಬೀಸುವ ಗಾಳಿಯಲಿ ಪರಮ ಪಾವನ ತಾಂತ್ರ್ಯ ಗ್ರಾಮದ ಮಠದಲ್ಲಿ ಭಕ್ತಿ ವಾತ್ಸಲ್ಯದಲಿ ವಾಸ್ತವ್ಯ ಹೂಡಿದರು ॥ ೧೪೦ ॥ ಶ್ರೀ ಮಧ್ವ ಶಿಷ್ಯರ ಮಹಿಮೆ ಆನಂದ ತೀರ್ಥರ ವದನೇಂದು ಬಿಂಬವು ಭಕ್ತರ ಭವ ತಾಪ ಪರಿಹರಿಸ ಬಲ್ಲದು ವಿದ್ಯೆಯೆಂಬುವ ಸುಧೆಯ ಕಾಂತಿಯನು ಹೊಂದಿಹುದು ನಿರ್ದುಷ್ಟ ಕಾಂತಿಯಲಿ ಬೆಳಕ ಚೆಲ್ಲುತಲಿಹುದು ಯಾವ ಭಕ್ತರು ಇಂಥ ಮೊಗವ ಕಂಡಿಹರೋ ಅಂಥವರ ದಾಸತ್ವ ಕೊಡದಿಹುದೆ ಇಷ್ಟಗಳ ? ॥ ೧೪೧ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ ಆನಂದಾಂಕಿತ ಹದಿನೈದನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. ' . . ಶ್ರೀ ಗುರುಭ್ಯೋ ನಮ: ಹದಿನಾರನೆಯ ಸರ್ಗ ಮತ್ತೊಬ್ಬ ಮಧ್ವಶಿಷ್ಯರಿಂದ ಮಹಿಮಾ ವರ್ಣನ ಇಂತಿರಲು ಒಮ್ಮೆ ಮಧ್ವಮುನಿ ಶಿಷ್ಯನು ಮಧುಮಥನ ಅಂಫ್ರಿಅಂಘ್ರಿಯಲಿ ಭಕ್ತಿಯನು ಹೊಂದಿದ್ದ ವೇದ ಪಾಠಕರಾದ ಸಜ್ಜನರ ವೃಂದಕ್ಕೆ ಆನಂದ ತೀರ್ಥರ ಅತಿಶಯದ ಮಹಿಮೆಯನು ಬಂಧಗಳ ಬಿಡಿಸುವ, ಮೋಕ್ಷವನು ಕರುಣಿಸುವ ವೇದಾಂತ ಶಾಸ್ತ್ರವೋ ಎಂಬಂತೆ ನುಡಿದನು ॥ ೧ ॥ ಗೋಮತೀ ತೀರದಲ್ಲಿ ವೇದ ಪ್ರಾಮಾಣ್ಯ ಸ್ಥಾಪನೆ ಶೃತಿಗಳನು ದ್ವೇಷಿಸುವ ವಾಚಾಲನೊಬ್ಬನು ಗೋಮತೀ ತೀರದ ಬಳಿಯಲ್ಲಿ ಇದ್ದವನು ಅಂತ್ಯ ವರ್ಣಜನಾದ ಕ್ಷಿತಿಪತಿಯು ಅವನು ಕೀರ್ತಿಯೆಂಬುವ ಧವಳ ಚಂದ್ರನನು ಪಡೆದಿದ್ದ ಶೃತಿಗುಣದ ಸಾಧಕರೂ ಕುಶಲ ವಾಗ್ಮಿಗಳೂ ಆದ ಆನಂದ ತೀರ್ಥರನು ಕುರಿತು ಇಂತೆಂದನು ॥ ೨ ॥ "ವೇದವಾಕ್ಯಗಳುಂಟು ಸಾವಿರದ ನೂರಾರು ವಾಕ್ಯವೊಂದರ ಫಲವು ಸಿದ್ಧಿಸದೆ ಹೋದರೂ ಸಟೆಯಾಗುವುದು ಅದು ಮಾತಿನಂತೆ ಸಕಲ ಶೃತಿವಚನಗಳ ಪ್ರಾಮಾಣ್ಯ ದೋಷಕ್ಕೆ ಇಂತಹ ವಚನಗಳು ದೃಷ್ಟಾಂತವಾಗುವುವು" ಎಂಬಂಥ ಮಾತುಗಳ ಆತ ನುಡಿಯುತಲಿರಲು ॥ ೩ ॥ ಅಧಿಕಾರವುಳ್ಳವಗೆ ವೇದೋಕ್ತ ಫಲ ಖಚಿತ ಇಂತೆಂದು ಮಧ್ವಮುನಿ ಉತ್ತರಿಸುತ್ತಿರಲು ಆ ಧೂರ್ತ ಮತ್ತೊಮ್ಮೆ ಇಂತೆಂದು ನುಡಿದನು "ವೇದೋಕ್ತ ಫಲವನ್ನು ಪಡೆದವನ ನಾ ಕಾಣೆ ಇಂತಿರಲು ಅಂತಹ ಯೋಗ್ಯತೆಯ ಅಧಿಕಾರಿ ಖರವಿಷಾಣದ ತೆರದಿ ಅಪರೂಪಲ್ಲವೆ?" ॥ ೪ ॥ ಅಂತಹ ಆಕ್ಷೇಪ ಸಹಿಸದಾ ಮಧ್ವರು ನಿಜ ಕರದ ಪಲ್ಲವದಿ ಧಾನ್ಯವನು ಹಿಡಿದು ಓಷಧೀ ಸೂಕ್ತವನು ಪಠಿಸಿದ ಕ್ಷಣದಲ್ಲೇ ಬೀಜಗಳು ತಕ್ಷಣವೇ ಮೊಳಕೆಗಳ ತಳೆದವು ನಂತರದಿ ದಲಗಳು, ಎಲೆಗಳು, ಫಲಗಳೂ ಹುಟ್ಟಿದುವು ಈ ಮಹಿಮೆಯನು ಕಂಡು ಬೆರಗಾದನಾ ಧೂರ್ತ ॥ ೫ ॥ ಪಾದದ ಬೆರಳಿನಿಂದ ಪ್ರಕಾಶ ಮತ್ತೊಂದು ಮಧ್ವರ ಮಹಿಮೆಯನು ಕೇಳಿ ! ರಾತ್ರಿಯ ಕಾಲದಲಿ ಅವರು ಬೋಧಿಸುತಿರಲು ವ್ಯಾಸಪೀಠದ ದೀಪ ನಂದಿ ಹೋಗುತ್ತಿರಲು ಆನಂದ ತೀರ್ಥರ ಪಾದದಂಗುಷ್ಠದ ಉಗುರಿನ ತುದಿಯಿಂದ ಹೊಮ್ಮಿದ ಬೆಳಕಿಂದ ಶಿಷ್ಯರೆಲ್ಲರೂ ಗ್ರಂಥ ಪಠನವನು ಮಾಡಿದರು ॥ ೬ ॥ ಬಂಡೆಯನು ಎತ್ತಿರಿಸಿದ ಪ್ರಸಂಗ ಒಮ್ಮೆ ಒಂದೆಡೆಯಲ್ಲಿ ನದಿಯ ತೀರದಲಿ ಇರಿಸಲೋಸುಗ ಜನರು ಸಾವಿರದ ಸಂಖ್ಯೆಯಲಿ ಹೆಬ್ಬಂಡೆಯೊಂದನ್ನು ನೂಕುತ್ತ ನೂಕುತ್ತ ಮತ್ತಷ್ಟು ನೂಕಲು ಸಾಧ್ಯ ವಿಲ್ಲೆನ್ನುತ್ತ ಬಂಡೆಯನು ಹಾದಿಯಲೆ ಇರಿಸಿ ಹೋಗಿದ್ದರು ಇದ ಕಂಡ ಮಧ್ವರು ಇಂತೆಂದು ನುಡಿದರು ॥ ೭ ॥ "ಈ ಬಂಡೆ ನೀವೆಲ್ಲ ಸರಿಯಾಗಿ ಇರಿಸಿದರೆ ಅತಿಯಾದ ಉಪಕಾರ ಜನಗಳಿಗೆ ಆಗುವುದು'' ಎಂಬ ಈ ಮಾತನ್ನು ಆಲಿಸಿದ ಆ ಜನರು "ಓ ಗುರುವೆ! ಮನುಜರಿಗೆ ಇದು ಸಾಧ್ಯವಿಲ್ಲ ಭೀಮನಾದರೂ ಈ ಕೆಲಸ ಯತ್ನಿಸಿದರೆ ಆಗಲೂ ಸಾಧ್ಯವೋ ಹೇಳುವಂತಿಲ್ಲ" ॥ ೮ ॥ ಹನುಮಾವತಾರದಲಿ ತಾವಂದು ತ್ರೇತೆಯಲಿ ಗಂಧಮಾದನಗಿರಿಯ ಎಂತು ಹೊತ್ತಿದ್ದರೋ ಅಂತೆಯೇ ಗುರುಮಧ್ವರಾಯರು ಇಂದು ಸುಲಲಿತ ಶೈಲಿಯಲಿ ಅತಿ ಸುಲಭವಾಗಿ ಬಂಡೆಯನು ಕರಕಮಲದಲ್ಲಿರಿಸಿಕೊಂಡು ನದಿಯ ಬಳಿ ಇರಿಸಿದರು ಉಚಿತ ಸ್ಥಳದಲ್ಲಿ ॥ ೯ ॥ ಸೂರ್ಯಗ್ರಹಣ ಕಾಲದಲ್ಲಿ ನಡೆದ ಸಮುದ್ರಸ್ನಾನದ ಪ್ರಸಂಗ ಸೂರ್ಯ ಚಂದ್ರರು ಕೂಡಿ ಇರುವ ತಿಥಿಯಂದು ಯತಿ, ಗೃಹಸ್ಥರು ಮುಂತಾದ ಶಿಷ್ಯರುಗಳಿಂದ ಶಾಸ್ತ್ರಾರ್ಥ ವಿಷಯಗಳ ಚರ್ಚೆಯಲಿ ಶೋಭಿಸಿದ ಮಾರ್ಗದಲಿ ನಡೆಯುತ್ತ ಆನಂದ ತೀರ್ಥರು ಗ್ರಹಣದ ಕಾಲದಲಿ ಸ್ನಾನದ ಸಲುವಾಗಿ ಕಡಲಿನ ತೀರಕ್ಕೆ ತ್ವರಿತದಲಿ ನಡೆದರು ॥ ೧೦ ॥ ಕಣ್ವಮುನಿಯೆಂಬುವ ಅತಿಶ್ರೇಷ್ಠ ವಿಪ್ರರಿಗೆ ಅತ್ಯಂತ ಪ್ರಿಯವಾದ ಕಣ್ವತೀರ್ಥದಿ ಮಿಂದು ಆ ಗ್ರಾಮದಲಿ ನೆಲೆಸಿದ್ದ ಆರ್ದ್ರಾಂಗರಾಗಿದ್ದ ಬಾಲಕರು, ವೃದ್ಧರು, ಮತ್ತೆಲ್ಲ ವಯಸವರು ಗ್ರಹಣ ಮೋಕ್ಷದ ಸಮಯ ಸ್ನಾನವನು ಮಾಡಿ ಮಧ್ವರಾಗಮನಕ್ಕೆ ಮುಂಚಿತವೇ ಬಂದರು ॥ ೧೧ ॥ ಪರಿವಾರ ಸಹಿತ ಬಂದರಾ ಮಧ್ವರು ಅವರನ್ನು ಕಾಣುತ್ತ ಸಜ್ಜನರು ಎಲ್ಲ ಮಂದಹಾಸದ ಮೊಗದ ಫುಲ್ಲಾಕ್ಷರಾದರು ದುರ್ಜನರು ದುರ್ಮುಖದ ಬಿಗುಮಾನ ಬೀರುತ್ತ ಆನಂದ ತೀರ್ಥರನು ನಿಂದಿಸಲು ತೊಡಗಿದರು ಅವರವರ ಭಾವಕ್ಕೆ ತಕ್ಕಂಥ ವರ್ತನೆ! ॥ ೧೨ ॥ "ವಿಶ್ವಗುರು ಮಧ್ವರನು ನಿಂದಿಪುದು ಸಲ್ಲ" ಎಂದು ಧಿಕ್ಕರಿಸುತ್ತ ದುರ್ಜನಕೆ ಶಿಕ್ಷೆಯನು ಈಯಲೋಸುಗವೋ ಎಂದು ಘನ ಘೋಷದ ಘೋರ ವೇಷದಲಿ ನಿಂದು ಸಂಕ್ಷೋಭೆ, ಸಂರಂಭ, ಸಂತಾಪ ತೋರಿಸುತ ಖಲದಮನನಂತೆ ಆ ಸಿಂಧುರಾಜನು ಬಂದ ॥ ೧೩ ॥ ಅಮಿತ ಸಮ್ಮೋದದಲಿ ಚಂಚಲವು ಆ ಸಿಂಧು ಧೃತಗತಿಯ ಚಲನೆಯಲಿ ಗಂಭೀರ ದನಿಯಲ್ಲಿ ಸ್ತುತಿಸಿ ಪಾಡುವ ಮಧುರ ಇಂಚರದ ತೆರದಲ್ಲಿ ನೊರೆಯೆಂಬ ತಿಳಿನಗೆಯ ಮೃದುಮಧುರ ಲಾಸ್ಯದಲಿ ತೆರೆಗಳೆಂಬುವ ತನ್ನ ಅವಯವಗಳಿಂದಲಿ ಮಧ್ವರಿಗೆ ನಮಿಸುವ ಪರಿಯಲ್ಲಿ ತೋರಿತ್ತು ॥ ೧೪ ॥ ಸಿಂಧುರಾಜನ ಜೊತೆಗೆ ಆನಂದ ತೀರ್ಥರು ಗಾಂಭೀರ್ಯ, ವಾಕ್ಕು, ಜಲಲೀಲೆಯಂತಹ ವಿವಿಧ ಗುಣರತ್ನಗಳ ಒಡೆಯರು ತಾವಾಗಿ ಈರ್ವರಾ ಒಡನಾಟ ಅತಿಯಾಗಿ ಶೋಭಿಸಿತು ಮಧ್ವರಾ ಲಾವಣ್ಯ ಜನಕೆ ಅತಿ ಪ್ರಿಯವಹುದು ಜಲಧಿಯ ಲವಣತ್ವ, ಜನಕೆ ಓಕರಿಕೆ ! ॥ ೧೫ ॥ ಅಂಬುಧಿಯ ಧೃತಗತಿಯ ಅಲೆಗಳೆಂಬುವ ಹಸ್ತ ತೊಳೆದಿಹವು ತಟವನ್ನು ಅತಿ ಸ್ವಚ್ಛವಾಗಿ ಇಂತಹ ತಟವೆಂಬ ಆಸನದ ಮೇಲೆ ಆನಂದ ತೀರ್ಥರು ಆಸೀನರಾಗಿ ಐತರೇಯದ ಸೂಕ್ತ ಅತಿ ರಮ್ಯವಾಗಿ ವ್ಯಾಖ್ಯಾನ ಮಾಡಿದರು ಅತಿ ದೀರ್ಘವಾಗಿ ॥ ೧೬ ॥ ಗಾಂಭೀರ್ಯ ಪಡೆದಿರುವ ಇವರ ಈ ಧ್ವನಿಯು ಸಿಂಧುವಿನ ದನಿಯನ್ನು ಮೀರಿಸುತ್ತಿಹುದು! ಸುಶ್ರಾವ್ಯವೀ ದನಿಯು, ಅತಿ ಮಧುರವಹುದು ಪೂರ್ಣಚಂದ್ರನ ಕಾಂತಿ ಮೊಗವುಳ್ಳ ರೀತಿ ಯಾರೆಂದು ತವಕಿಸುತ, ಅಚ್ಚರಿಯ ಸೂಸುತ್ತ ಜನಜಲಧಿ ಅವರೆಡೆಗೆ ತ್ವರೆಯಿಂದ ಧಾವಿಸಿತು ॥ ೧೭ ॥ ಮಧ್ವಮುನಿಗಳ ವೇದ ವ್ಯಾಖ್ಯಾನವನ್ನು ಅಚ್ಚರಿಯೊಳಾಲಿಸುತ ಕೈಜೋಡಿಸುತ್ತ ಮಧ್ವರಿಗೆ ವಂದಿಸುತ ಬಳಿಕ ಇಂತೆಂದರು "ವೇದ ಭಾವವನುಚಿತ ರೀತಿಯಲಿ ತಿಳಿಸುವ ಮಧ್ವರನು ದುರ್ಜನರು ಶೃತಿವೈರಿ ಎನುವರು ಧಿಕ್ಕಾರ, ಧಿಕ್ಕಾರ ಇಂತಹ ಜನಕೆ " ॥ ೧೮ ॥ ಆನಂದ ತೀರ್ಥರಿಗೆ ಆ ವಿಪ್ರವೃಂದವು ಭಕ್ತಿಯಿಂದಲಿ ತಮ್ಮ ಗೌರವವ ತೋರಿಸುತ ಅವರ ಪದಧೂಳಿಯನು ಶಿರದಲ್ಲಿ ಧರಿಸಿತು ಆನಂದ ತೀರ್ಥರ ಮಜ್ಜನದ ಪರಿಣಾಮ ಅಧಿಕತಮ ಪಾವಿತ್ರ್ಯ ಹೊಂದದಹೊಂದಿದ ಸಾಗರದಿ ವಿಹಿತ ಕಾಲದಿ ಮಂದಿ ಮುದಗೊಂಡು ಮಿಂದರು ॥ ೧೯ ॥ ಸಾಗರದ ತೆರೆಗಳು ಅತ್ಯಂತ ಪ್ರಬಲ ಸಾಮಾನ್ಯ ಜನರಿಗದು ಎದುರಿಸಲಸಾಧ್ಯ ಈ ತರಂಗಗಳೆಲ್ಲ ಮಂದಿಯನು ಅಪ್ಪಳಿಸಿ ಕರಿನಿಕರ ಧಾಳಿಗೆ ತುತ್ತಾದ ತೆರದಲ್ಲಿ ಆಕ್ರಾಂತರಾಗಿದ್ದ ಭಯ ಭೀತ ಜನರನ್ನು ಅಪಹಾಸ್ಯ ಮಾಡಿದರು ಇತರ ಜನರೆಲ್ಲ ॥ ೨೦ ॥ ಅಲ್ಲಿದ್ದ ದುರ್ಜನಕೆ ಇದು ಮೋಜ ನೀಡಿತು ಮಜ್ಜನದ ಸಮಯದಲಿ ಸಾಗರ ತರಂಗಗಳು ಆವರಿಸಿದಾ ಮಧ್ವಮುನಿಗಳನು ಕಂಡು ಲೋಕ ಪೂಜಿತರೆಂಬ ಈ ಪರಮ ಗುರುಗಳು ಸಾಗರದ ತೆರೆಗಳಿಗೆ ತತ್ತರಿಸಿ ಹೋಗಿಹರು ಇಂತೆಂದು ದುರ್ಜನರು ಪರಿಹಾಸ್ಯ ಮಾಡಿದರು ॥ ೨೧ ॥ ಇಂತಹ ಮಾತುಗಳು ಸಾಮಾನ್ಯ ಮಂದಿಗೆ ಮನಕೆ ಅತಿಯಾದ ಕ್ಷೋಭೆಯನು ನೀಡುವುದು ಆದರಾ ಮಧ್ವಮುನಿ ಪರಿಪೂರ್ಣ ಪ್ರಜ್ಞರು ನೀಚರಾ ನುಡಿಯನ್ನು ಗಮನಿಸಲೇ ಇಲ್ಲ ನರಿ ಊಳುವಿಕೆಗಳಿಗೆ ನಾಯಿ ಬೆದರುವುದು ಸಿಂಹಕ್ಕೆ ಲವಲೇಶ ಕ್ಷೇಶ ಇದರಿಂದಿಲ್ಲ ॥ ೨೨ ॥ ಸಮುದ್ರ ತಟಾಕದಂತಾಯಿತು ಮಧ್ವಮುನಿಗಳ ನೋಟ ಪರಮ ಪಾವನವಹುದು ಸಕಲ ಲೋಕಕೆ ಜನ್ಮ, ಸ್ಥಿತಿ, ಲಯವ ನೀಡುವುದು ಅಂಬುಧಿಯ ಕಡೆಗವರು ಕುಡಿನೋಟ ಬೀರಿದರು ಆ ಕಟಾಕ್ಷವು ಆಗ ದಿವ್ಯತೆಯ ಪಡೆಯಿತು ಇದರಿಂದ ಸಾಗರವು ಚಲನೆಯನೇ ತೊರೆದು ಪ್ರಕ್ಷುಬ್ಧವಾಗಿರದ ಪುಷ್ಕರಣಿಯಂತಾಯ್ತು ॥ ೨೩ ॥ ಮಧ್ವರಾಯರ ಮಹಿಮೆ ಇಂತು ಅಸದೃಶವಹುದು ಇತರರಿಗೆ ಸಾಧ್ಯವೆ ಇಂಥ ಸಾಹಸವು ? ಆದರೂ ದುರ್ಜನರು ಮಧ್ವರ ಬಗೆಗೆ ಈರ್ಷ್ಯೆಯನು ಸ್ಥಿರವಾಗಿ ತಳೆಯುತ್ತಲೇ ಇದ್ದರು ಗುರುಗಳಲಿ ದ್ವೇಷವನು ಸಾಧಿಸುತ್ತಲೇ ಇದ್ದರು ಭಾಗ್ಯ ಹೀನರಿಗಿಂಥ ವರ್ತನೆಯು ಸಹಜ ॥ ೨೪ ॥ ಗಂಡವಾಟ ಪರಾಜಯ ಅಲ್ಪ ಸೇವೆಯನೀತ ಸಲ್ಲಿಸಲು ಬಂದಿಹನು ಎಂಬಂಥ ನುಡಿಯಿಂದ ಅಲ್ಲಿನಾ ಕೆಲಜನರು ಮಧ್ವರಾ ಶಕ್ತಿಯನು ಪರಿಕಿಸಲು ಬಯಸುತ್ತ ಗಂಡವಾಟ ಎಂಬ ಮತ್ತೊಬ್ಬ ದುಷ್ಟನನು ಸೋದರನ ಸಹಿತ ಎದುರಲ್ಲಿ ನಿಲ್ಲಿಸಿದರು ಮಧ್ವರಾಗಳುಕದೆ ಬಲವ ತೋರೆಂದವಗೆ ಆದೇಶಿಸಿದರು ॥ ೨೫ ॥ ಗಂಡವಾಟನು ತುಂಬ ಬಲಶಾಲಿಯಾದವನು ಶ್ರೀ ಕಾಂತ ದೇಗುಲದ ಮೂವತ್ತು ಮಂದಿ ಒಟ್ಟಾಗಿ ತಂದಿದ್ದ ಬಾವುಟದ ಕಂಬವನು ಒಬ್ಬನೇ ಎತ್ತಿಟ್ಟು ಕಿರುನಗೆಯ ಬೀರಿದ್ದ ಗದೆಯೊಂದನಪ್ಪಳಸಿ ತೆಂಗಿನ ಮರದಿಂದ ಫಲಗಳನು ಉದುರಿಸಿ ಸೈ ಎನಿಸಿಕೊಂಡಿದ್ದ ॥ ೨೬ ॥ ಇಂತಹ ಬಲಶಾಲಿ ಗಂಡವಾಟನು ಆಗ ತನ್ನ ಜೊತೆಯಲ್ಲವನ ಅಣ್ಣನನೂ ಸೇರಿಸಿ ಮಧ್ವರ ಕಂಠವನು ಬಲವಾಗಿ ಹಿಡಿದು ಎಡೆಬಿಡದೆ ಅದುಮುತ್ತ ಸಾಹಸವಗೈದರು ಆದರವರಾ ಯತ್ನ ಅತಿ ವಿಫಲವಾಯ್ತು ಮಧ್ವರಾ ಕಂಠವು ಮತ್ತಷ್ಟು ಬಲವಾಯ್ತು ॥ ೨೭ ॥ ಸೋದರರು ಬಳಲುತ್ತ ಬಸವಳಿದು ಬೆವರಿದರು ಕ್ರಮವಾಗಿ ಸಾಮರ್ಥ್ಯ ಉಡುಗುತ್ತ ಬಂದಿತು ಗುರುಗಳಾಣತಿಯಂತೆ ಮಧ್ವ ಶಿಷ್ಯರಲೊಬ್ಬ ಬೀಸಣಿಕೆಯಿಂದವರ ಉಪಚರಿಸತೊಡಗಿದ ಕಠಿಣತಮ ತ್ವಚೆಯುಳ್ಳ ಮಧ್ವರ ಕಂಠವನು ಹಿಡಿದುಕೊಳ್ಳಲು ಸೋತು ಇಬ್ಬರೂ ಬಿದ್ದರು ॥ ೨೮ ॥ ಗರ್ವವಿನ್ನೂ ಉಳಿದ ಆ ಸೋದರರು ಇಬ್ಬರೂ ಶ್ರಮ ನಿವಾರಿಸಿಕೊಂಡು ಕುಳಿತ ಬಳಿಕ ಮಧ್ವರಾ ಈರ್ವರಿಗೆ ಮತ್ತೊಂದು ವಿಧಿಸಿದರು ನೆಲದಲ್ಲಿ ಊರಿರುವ ತಮ್ಮ ಅಂಗುಲಿಯನ್ನು ಮೇಲೆತ್ತಬೇಕೆಂದು ಆಣತಿಯನಿತ್ತರು ಅವರೆಷ್ಟು ತಿಣುಕಿದರೂ ಬೆರಳು ಅಲುಗಲೇ ಇಲ್ಲ ॥ ೨೯ ॥ ವಟುವಿನ ಮೇಲೆ ಕುಳಿತು ಪ್ರದಕ್ಷಿಣೆ ಮಾಡಿದ್ದು ಇಂತಹ ಬಲಶಾಲಿ ಆಚಾರ್ಯರೊಮ್ಮೆ ವಟುವೊಬ್ಬನನು ಕರೆದು ಕಿರುನಗೆಯ ಸೂಸುತ್ತ ಶ್ರಮವಾಗದಂತವನ ಹೆಗಲನೇರುತ್ತ ನರಸಿಂಹ ಮಂದಿರವ ಸುತ್ತು ಹಾಕಿದರು ಈ ಬಗೆಯ ಲಘಿಮಾದಿ ಐಸಿರಿಗಳಿಂದ ತ್ರಿಭುವನದ ರತ್ನಗಳ ರಾಜನೆನಿಸಿದರು ॥ ೩೦ ॥ ಪೂರ್ವವಾಟ ಪರಾಜಯ ಪೂರ್ವ ವಾಟ ಎಂಬ ಮತ್ತೊಬ್ಬ ಬಲಶಾಲಿ ಅರ್ಧ ಶತ ರಾಜಭಟರೆತ್ತಿ ತಂದಿರಿಸಿದ್ದ ಏಣಿಯೊಂದನು ತಾನು ಒಬ್ಬನೇ ಹೊತ್ತಿದ್ದ ಇಂತಹ ಬಲಶಾಲಿ, ದುಷ್ಟರಾಣತಿಯಂತೆ ಮಧ್ವಮುನಿ ಪ್ರವಚನವ ತಡೆಹಿಡಿಯಲೆಂದು ಅವರ ಗಂಟಲ ಹಿಡಿದು, ಅದುಮತೊಡಗಿದನು ॥ ೩೧ ॥ ದುಷ್ಟ ವರ್ತನೆಯಲ್ಲಿ ನಿಪುಣ ಆ ಕ್ರೂರಿ ಬೆವರನ್ನು ಸುರಿಸುತ್ತ ಕಠಿಣ ಶ್ರಮ ಪಟ್ಟರೂ ಮಧ್ವರಾ ಪ್ರವಚನವು ಮತ್ತಷ್ಟು ಶೋಭಿಸಿತು ಮತ್ತೊಮ್ಮೆ ಮಧ್ವರಾ ಅಂಗುಲಿಯನಾತ ಹಿಡಿದೆತ್ತಿ ನಿಲಿಸಲು ಸಂಪೂರ್ಣ ಸೋತನು ಇದರಿಂದ ಮಂದಿಯಲಿ ಅಚ್ಚರಿಯು ಹೆಚ್ಚಿತು ॥ ೩೨ ॥ ಶಿವಾಗ್ನಿ ಮೊದಲಾದವರ ಪರಾಭವ ಅಪ್ರತಿಮ ಸಾಮರ್ಥ್ಯ ಪಡೆದಿದ್ದ ಮಧ್ವರನು ಶಿವಾಗ್ನಿ ಮುಂತಾದ ಹಲವಾರು ಬ್ರಾಹ್ಮಣರು ಪ್ರಬಲ ಯತ್ನಗಳಿಂದ ಒರೆಯಿಟ್ಟು ನೋಡಿದರು ಮಧ್ವರಾ ಸಾಮರ್ಥ್ಯ ಅವರು ಮನಗಂಡರು ದ್ವಾಪರದಿ ಶೌರ್ಯ ಪ್ರತಾಪಗಳ ನೆಲೆಯಾದ ಭೀಮನೇ ಇವರೆಂದು ಅವರೆಲ್ಲ ನುಡಿದರು ॥ ೩೩ ॥ ಅತಿ ಶಕ್ತರಾದಂಥ ಹಲವಾರು ಮಂದಿ ಚಿಮ್ಮಟದ ನೆರವಿಂದ ಮಧ್ವರಾ ರೋಮಗಳ ಬುಡದಿಂದ ಕೀಳಲು ಯತ್ನಿಸಿದರಾದರೂ ಒಂದು ಕೂದಲಿನೆಳೆಯೂ ಕಿತ್ತು ಬರಲಿಲ್ಲ ಮೃದುವಾದ ನಾಸಿಕಕೆ ಮುಷ್ಟಿ ಅಪ್ಪಳಿಸಿದರೂ ಮಧ್ವಮುಖ ಚಂದಿರನು ಕಳೆಗುಂದಲಿಲ್ಲ ॥ ೩೪ ॥ ನಾಯಿಗಳ ಗುಂಪಿನಲಿ ಸಿಂಹ ವರ್ತಿಸುವಂತೆ ಶತೃಗಳ ಎದುರಿನಲಿ ದರ್ಪವನು ತೋರಿದರು ಅಲ್ಪನದಿಗಳ ಕೂಡೆ ಸಾಗರವು ನಡೆವಂತೆ ಸಾತ್ವಿಕರ ಜೊತೆಯಲ್ಲಿ ಮಧ್ವಮುನಿ ನಡೆದರು ಮಿಂಚು ಹುಳುಗಳ ಜೊತೆಗೆ ಸೂರ್ಯನಾ ತೆರದಲ್ಲಿ ರಾಜಸದ ಗುಣವುಳ್ಳ ಮಂದಿಯನು ಕಂಡರು ॥ ೩೫ ॥ 'ಪಾರಂತೀ' ದೇವಾಲಯದಲ್ಲಿ ತೋರಿದ ಮಹಿಮೆ ನೈವೇದ್ಯ, ಪೂಜೆಗಳು ಸ್ಥಗಿತ ಗೊಂಡಿದ್ದಂಥ ಪಾರಂತೀ ಎಂಬ ದೇವಸದನದಿ ಒಮ್ಮೆ ಅತಿಯಾದ ಭಕ್ತಿಯಲಿ ಮಧ್ವಮುನಿ ತೆರಳಿ ಗ್ರಾಮಾಧಿಪತಿಗಳನು, ಆ ನಾಡನೃಪನನ್ನು ಒಂದೆಡೆ ಕಲೆ ಹಾಕಿ ಚರ್ಚೆಯನು ನಡೆಸಿ ಅರ್ಧದಷ್ಟೇ ದಿನದಿ ಭೂತಬಲಿ ನಡೆಸಿದರು ॥ ೩೬ ॥ ಹಿಂದೊಮ್ಮೆ ದ್ವಾಪರದಿ, ಭೀಮಾವತಾರದಲಿ ಸೋದರರ ಜೊತೆಗೂಡಿ ಪಂಚಾತ್ಮ ಶ್ರೀ ಹರಿಯ ಪಾರಂತೀ ಗ್ರಾಮದಲಿ ಪ್ರತಿಷ್ಠಿಸಿದುದ ನೆನೆದು ಭೂತಬಲಿ ಪೂಜೆಯ ಅಂಗದಲಿ ಒಂದಾದ ಜಲಧಿಯನು ಅರ್ಪಿಸಿದ ದ್ರೌಪದಿಯ ಒಡಗೂಡಿ ಶ್ರೀ ಹರಿಯ ಪೂಜಿಸಿದ ಪರಿಯನ್ನು ಸ್ಮರಿಸಿದರು ॥ ೩೭ ॥ ಸರಿದಂತರದಲ್ಲಿ ತರಿಸಿದ ಮಳೆ ಸರಿದಂತರ ವೆಂಬ ಹೆಸರನ್ನು ಹೊತ್ತಿದ್ದ ಗ್ರಾಮಕ್ಕೆ ಐತಂದ ಮಧ್ವಮುನಿಗಳು ಒಮ್ಮೆ ಗ್ರೀಷ್ಮದಲಿ ಆ ಊರ ಕೆರೆಯು ಒಣಗಿದ ಕೇಳಿ ತಕ್ಷಣದಿ ಮೋಡಗಳ ಸಾಲು ಸಾಲನೆ ಕರೆದು ಮಳೆಯನ್ನು ಸುರಿಸುತ್ತ ಕೆರೆಯ ತುಂಬಿಸುದ ಕಂಡು ವಿಸ್ಮಯವ ತಾಳಿದರು ಆ ಊರ ಜನರು ॥ ೩೮ ॥ ಗ್ರಾಮಾಧಿಪತಿಯ ಶರಣಾಗತಿ ದುರ್ಮಂತ್ರ, ದುಷ್ಕೃತ್ಯ, ದುರಭಿಮಾನವ ತಳೆದ ದುಷ್ಟರ ಮಾತಿಗೆ ಕಿವಿಗೊಟ್ಟ ಗ್ರಾಮೇಶ ಮಧ್ವರನು ವಧಿಸುವ ಸಂಚೊಂದ ಹೂಡಿದನು ಬಳಿಕ ಆ ದುಷ್ಟನು ಮಧ್ವರನು ಕಂಡು ಸೂರ್ಯನಂತಹ ತೇಜ ಇವರಿಗಿಹುದೆಂದು ಮಹಿಮರಿಗೆ ನಮಿಸಿದನು ಮೂಕವಿಸ್ಮಿತನಾಗಿ ॥ ೩೯ ॥ "ಕೃಷ್ಣಾಮೃತ ಮಹಾರ್ಣವ" ಗ್ರಂಥ ರಚನೆ ಕೆಲವು ಕಾಲದ ಬಳಿಕ ಆನಂದ ತೀರ್ಥರು ತ್ರಿಭುವನದ ವೈದ್ಯರ ಒಡೆಯರಿಗೆ ಒಡೆಯ ಧನ್ವಂತ್ರಿ ದೇವನು ಗ್ರಾಮಾಧಿಪತಿಯಾದ ಕೊಕ್ಕಡ ಎಂಬುವ ದಿವ್ಯ ಕ್ಷೇತ್ರಕೆ ಬಂದು ಅಲ್ಲಿದ್ದ ಭಕ್ತನ ಶ್ರೇಯದ ಸಲುವಾಗಿ ಶ್ರೀ ಕೃಷ್ಣ ಪರಮಾರ್ಣ ಗ್ರಂಥವನು ರಚಿಸಿದರು ॥ ೪೦ ॥ ಉಜಿರೆಯಲ್ಲಿ ನಡೆದ ವಿಜಯ ಉಚ್ಚಭೂತಿ ಎಂಬ ಮತ್ತೊಂದು ಗ್ರಾಮದಲಿ "ಎಲ್ಲವನೂ ಬಲ್ಲೆವು" ಎಂಬಂಥ ಗರ್ವದಲಿ ದುರಭಿಮಾನವ ತಳೆದ ಪಂಡಿತರ ಕುರಿತು ಅವರುಗಳ ಸೊಕ್ಕನ್ನು ಅಡಗಿಸಲೋ ಎಂಬಂತೆ ಬಾವಿಯಲಿ ಅಡಗಿರುವ ಕಪ್ಪೆಗಳ ತೆರವಿರುವ ಪಂಡಿತರು ಎಲ್ಲೆಂದು ಮಧ್ವರಬ್ಬರಿಸಿದರು ॥ ೪೧ ॥ "ಸರ್ವಜ್ಞರಿರಬಹುದು ಈ ಮಧ್ವಮುನಿಗಳು ಯಜ್ಞಭಂಗಿಯ ಬಗ್ಗೆ ಅಜ್ಞರಿರಬೇಕು" ಇಂತೆಂದು ಯೋಚಿಸಿದ ವಿದ್ವಾಂಸರೆಲ್ಲ ಕರ್ಮವಿಷಯಕವಾದ ವೇದಭಾಗಗಳಲ್ಲಿ ಗಹನಾರ್ಥ ಹೊಂದಿರುವ ಬ್ರಾಹ್ಮಣಗಳಲ್ಲಿನ ಅರ್ಥವನು ಕೇಳಿದರು ಮಧ್ವರಲ್ಲಿ ॥ ೪೨ ॥ ಕಿಂಚಿತ್ತು ಅಳುಕದಲೆ ಆನಂದ ತೀರ್ಥರು ಪಂಡಿತರು ಕೇಳಿದ ವೇದಾರ್ಥ ವಿವರಿಸುತ ವೇದ ರಸ ಸಾರಕೆ ಚ್ಯುತಿ ಇರದೆ ಸಂಚಯಿಪ ಪ್ರಜಾಧಿಪ ಬ್ರಹ್ಮನು ಷಷ್ಠೇಷ್ಠಿಯಲಿ ವಿತರಿಸುವ ನಾರಾಶಂಸ್ಯವೇ ಮೊದಲಾದ ಮಂತ್ರ ಪ್ರಭೇದಗಳ ವಿವರಗಳ ತಿಳಿಸಿದರು ಅತಿ ವಿವರದಲ್ಲಿ ॥ ೪೩ ॥ ಮಧ್ವಮುನಿಗಳ ಇಂಥ ಪಾಂಡಿತ್ಯ ಕಂಡು ಕ್ಷೋಭೆಯನು ತಾಳಿದ್ದ ಶತ್ರು ಪಂಗಡದವರು "ನೀವು ಹೇಳಿದ ಅರ್ಥ ಸರಿಯಾದುದಲ್ಲ" ಇಂತೆಂದು ನುಡಿಯುತ್ತ ಮಧ್ವರನು ಟೀಕಿಸಲು "ಹಾಗಾದರಿದರರ್ಥ ನೀವೇ ಹೇಳಿ " ಎಂಬ ಮಧ್ವರ ನುಡಿ ಕೇಳಿ ಓಟವನು ಕಿತ್ತರು ॥ ೪೪ ॥ ಇಂತು ಓಡಿದ ಅವರು ಮತ್ತವರ ಬಳಿ ಬಂದು ಋಙ್ಮಂತ್ರಗಳ ಐದು ಪಾದ ಸಂಯೋಜನೆಯ ಮಹಾನಾಮ್ನೀ ಋಕ್ಕುಗಳ ಅವಯವಗಳುಕ್ತವಾಗಿರುವ ಬ್ರಾಹ್ಮಣದ ಅರ್ಥವನು ಹೇಳಿರೆಂದಂದಾಗ ಆ ಋಕ್ಕುಗಳ ಅರ್ಥವನು ಕೂಡಲೇ ಮಧ್ವರು ಶೃತಪಡಿಸಿ ತಕ್ಷಣವೇ ಲೇಖನವ ಬರೆಸಿದರು॥ ೪೫ ॥ ಆಚಾರ್ಯರ ಇನ್ನೂ ಕೆಲವು ಮಹಿಮೆಗಳು ಸಂಪೂರ್ಣ ಉದಿಸಿದ ಪೂರ್ಣಚಂದ್ರನ ತೆರದಿ ಬೆಳಗುವ ನಗೆಮೊಗದ ಮಧ್ವರನು ಕಂಡು ತಾವೆಲ್ಲ ಅವರಿಗೆ ಪ್ರತಿವಾದಿ ಎಂದೆಣಿಸಿ ದುಷ್ಟನಿಕರದ ಶ್ವಾನ ದೂರದಲಿ ಬೊಗಳುತ್ತ ಅವರಿಂದ ಮತ್ತೊಮ್ಮೆ ಸೋತು ಓಡಿದರು ಅಮೃತಾಕರರಾದ ಮಧ್ವರಿಗೆ ಹಾನಿಯೆ ? ॥ ೪೬ ॥ ಶ್ರೀ ಮಧ್ವಮುನಿಗಳು ಪರಮ ದಯಾ ಶೀಲರು ಸಿರಿವಂತರಲ್ಲದ ಭಕ್ತಿಜನರರ್ಪಿಸಿದ ಅನ್ನವನು ನಾಲ್ಕು ಮಡಿ ಹೆಚ್ಚಿಸುಣಿಸಿದರು ಸಿರಿವಂತರು ತಂದ ತ್ರಿದಶ ಜನರುಣ್ಣುವ ಅನ್ನವನು ಒಬ್ಬರೇ ಸುಲಭದಲಿ ಭುಜಿಸುವರು ಇದರಿಂದ ಎಲ್ಲರೂ ಸುಪ್ರೀತರಾಗುವರು ॥ ೪೭ ॥ ವರ್ಷಧಾರೆಯ ಸುರಿಸಿ ಹಲವು ಮಹಿಮೆಯ ತೋರ್ದ ಭುವನನಿಯಾಮಕರಾದ ವಾಯುದೇವರ ರೂಪ ಮಧ್ವಮುನಿ ಚರಿತೆಯಲಿ ಅಚ್ಚರಿಯು ಏನಿಲ್ಲ ಸಕಲ ಜಗಕೆಲ್ಲರೂ ಗುರುವರ್ಯರವರು ಅವರ ಚರಿತೆಯ ಕಥನ ನಮ್ಮ ಕರ್ತವ್ಯ ಅದರಿಂದ ವರ್ಣಿಪೆವು ಈ ಪುಣ್ಯ ಶ್ಲೋಕರ ಕಥನ ॥ ೪೮ ॥ ದೇವತೆಗಳಿಂದಲೂ ಸುಮಧ್ವವಿಜಯದ ಗಾನ ಮಧ್ವಮುನಿಗಳ ಚರಿತೆ ಅತಿಮಾನ್ಯವಾಗಿಹುದು ಆ ಮಹಿಮರ ಮಹಿಮೆ ವೈವಿಧ್ಯಮಯವಹುದು ಮಾಧ್ವೀಯ ಬ್ರಾಹ್ಮಣನ ಲೇಖನಿಯ ನೆರವಿಂದ ಈ ಮಹಿಮೆ ಎಲ್ಲೆಡೆಯು ಹರಡಿತೆಂಬುದು ಸಲ್ಲ ದೇವವರರೆಲ್ಲರನು ಮುದಗೊಳಿಪ ಈ ಕಥನ ಗಂಧರ್ವ ಗಾಯನದಿ ಸಾರ್ಥಕ್ಯ ಪಡೆದಿಹುದು ॥ ೪೯ ॥ ಕಾಕಿ ಎಂಬುವ ದೋಷವಿಲ್ಲದಾ ಮಧುರ ಧ್ವನಿ ಗಾಂಧಾರ ಇತ್ಯಾದಿ ಶೃತಿಗಳನು ಪ್ರಕಟಿಸುವ ಉಚಿತ ತಾನದಿ ಕೂಡಿ ಪಂಚಮದ ಸ್ವರದಲ್ಲಿ ದೇವಲೋಕದ ಆ ಗಂಧರ್ವ ಗಾಯಕರು ಸ್ವರ ವಿಕಾಸಗಳಿಂದ ಸುರರ ಆ ಕವನವನು ಮಧ್ವಗೀತೆಯನವರು ಪಾಡತೊಡಗಿದರು ॥ ೫೦ ॥ ಗಂಧರ್ವ ಗಾಯನದ ಮಧ್ವಮುನಿ ಚರಿತೆಯನು ಸುಮುಕುಟ ಮೌಲಿಗಳ ಆಭರಣ ಭೂಷಿತರೂ ಅರಳಿದ ಮುಖಕಮಲ ಶೋಭಿತರು ಆ ಸುರರು ನಮ್ರತೆ, ದೃಢಭಕ್ತಿ, ವಿನಯದಲಿ ಕೂಡಿ ಆಲಿಸಿದರಾ ದಿವ್ಯ ಭವ್ಯ ಕಥನವನು ಗಂಧರ್ವ ಗಾಯನದ ಮಧ್ವಮುನಿ ಚರಿತೆಯನು ॥ ೫೧ ॥ ರಜತಪೀಠಕ್ಕೆ ದೇವತೆಗಳ ಆಗಮನ ಮಧ್ವಮುನಿಗಳ ದಿವ್ಯ ವಿಜಯದ ಉತ್ಸವವ ಗೀರ್ವಾಣರೆಲ್ಲರೂ ಭಕ್ತಿಯಲಿ ಪೂಜಿಸುತ ಮಂದಹಾಸವ ತಳೆದು ವಿಸ್ಮಯದಿ ಕೂಡಿ ಮುನಿ ನಿಕರ, ಗಂಧರ್ವರೆಲ್ಲರ ಸಹಿತ ತೆರಳಿದರು ಭುವಿಯತ್ತ ಮಧ್ವದರ್ಶನಕೆಂದು ಆನಂದ ತೀರ್ಥರನು ನೋಡಲೆಂದು ॥ ೫೨ ॥ "ಮಧ್ವಮುನಿ ರಚಿಸಿರುವ ಸಚ್ಛಾಸ್ತ್ರವೆಲ್ಲವೂ ಶ್ರೀ ಹರಿಯ ಗುಣಗಳಿಗೆ ಹಿಡಿದಿರುವ ಕನ್ನಡಿ" ಇಂತೆಂದು ಪಾಡುತ್ತ ಕೊಂಡಾಡಿ ಸ್ತುತಿಸುತ್ತ ಅಪರಿಮಿತ ತೇಜದಲಿ ಗಗನವನು ಬೆಳಗುತ್ತ ದೇವವೃಂದವು ಅಂದು ಧರೆಯತ್ತ ನೋಡುತ್ತ ಆನಂದ ತೀರ್ಥರನು ಭಕ್ತಿಯಲಿ ಕಂಡರು ॥ ೫೩ ॥ ಭೂಭಾಗದಲಿ ನೆಲೆಸಿ, ಆ ಮಧ್ವಮುನಿಗಳು ಭುವನ ಭೂಷಿತರಾಗಿ ಜಗವ ಸಲಹಿರುವರು ಹಲವು ಬಗೆ ಶಿಷ್ಯರಾ ಮಧ್ಯದಲಿ ಕುಳಿತು ಐತರೇಯದ ಮುಖ್ಯ ವ್ಯಾಖ್ಯಾನ ಮಾಡುತ್ತ ಸಭೆಯಲ್ಲಿ ಬೆಳಗಿದಾ ಮಧ್ವರನು ಕಂಡು ಗಗನದಲಿ ಆ ಸುರರು ಭಕ್ತಿಯಲಿ ನಮಿಸಿದರು ॥ ೫೪ ॥ ಶ್ರೀಮಂತರವರು, ಶಶಿವದನ ಭೂಷಿತರು ಕಮಲನೇತ್ರರು ಅವರು, ಗಂಭೀರ ಧ್ವನಿಯವರು ಅತಿದಿವ್ಯ ಲಕ್ಷಣರು, ಸಂಪೂರ್ಣ ಕಾಮರು ಸರ್ವರಿಗೂ ಗುರುವಾದ ಮಧ್ವರನು ಕಾಣುತ್ತ ನಾವೆಲ್ಲ ಕೃತ ಕೃತ್ಯರೆಂದೆಣಿಸಿ ಆ ಸುರರು ವಚನ ಪುಷ್ಪಗಳಿಂದ ಪೂಜಿಸಲು ತೊಡಗಿದರು ॥ ೫೫ ॥ "ಜಗಕೆ ಗುರುಗಳು ತಾವು, ಓ ಮಧ್ವಮುನಿಗಳೇ ! ವಚನವೆಂಬುವ ಸೂರ್ಯ ಕಿರಣ ಬಿಂಬಗಳಿಂದ ದುಃಶಾಸ್ತ್ರವೆಂಬುವ ಕತ್ತಲೆಯ ಹರಿಸಿಹಿರಿ ಶ್ರೀ ಹರಿಯ ಗುಣವೃಂದವೆಲ್ಲವನೂ ತೋರಿಹಿರಿ ಹದಿನಾಲ್ಕು ಲೋಕವನು ಸದ್ಗುಣದಿ ಮೀರಿಹಿರಿ ನೀವಾಗಿ ಆಸರೆಯು ನಮ್ಮೆಲ್ಲ ಜನಕೆ" ॥ ೫೬ ॥ ನಮಿಸುವೆನು ಪ್ರಾಣೇಶ ! ನಮಿಸುವೆನು ರಾಮಸಖ ! ನಮಿಸುವೆನು ಶ್ರೀ ಕೃಷ್ಣ ಪರಮಾತ್ಮ ಪ್ರಾಣಸಖ ! ಅಪ್ರತಿಮ ಬಲಶಾಲಿ ಭೀಮಸೇನರು ತಾವು ಮೊರೆಹೊಕ್ಕ ಸಜ್ಜನಕೆ ಜ್ಞಾನ ಬಲ ದೈಸಿರಿಯ ಕರುಣಿಸಲು ಭುವಿಗೆ ಬಂದಿಳಿದಿಹಿರಿ ನೀವು ನಮಿಸುವೆನು ಮಧ್ವಮುನಿ ! ಜಯವಾಗಲಿ ತಮಗೆ ಜಯವಾಗಲಿ! ॥ ೫೭ ॥ ದೇವತೆಗಳಿಂದ ಪುಷ್ಪವೃಷ್ಟಿ (ಗ್ರಂಥೋಪಸಂಹಾರ) ಇಂತು ನಲಿದಾಡುತ್ತ ಸಂಭ್ರಮದಿ ಕುಣಿಯುತ್ತ ಬಾನಿನಂಗಳದಲ್ಲಿ ಇಂದ್ರಾದಿ ಸುರಗಣವು ಗುರು ಮಧ್ವರ ವಿಜಯ ಧ್ವಜವನ್ನು ಹಾರಿಸುತ ಶ್ರೀ ಹರಿಗೆ ಪ್ರಿಯರಾದ ಆನಂದ ತೀರ್ಥರನು ಜಗದ ಜನ ವಿಸ್ಮಯದಿ ತಲ್ಲೀನರಾಗಿರಲು ಹೂವಿನ ಮಳೆಯಲ್ಲಿ ಮುಳುಗಿಸುತ ನಿಂದರು ॥ ೫೮ ॥ ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ ಶ್ರೀಮನ್ನಾರಾಯಣ ಪಂಡಿತರು ರಚಿಸಿದ ಶ್ರೀಸುಮಧ್ವವಿಜಯ ಮಹಾಕಾವ್ಯದ ಆನಂದಾಂಕಿತವಾದ ಹದಿನಾರನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ. ಅನುವಾದಕನ ನುಡಿ : ಆನಂದ ತೀರ್ಥರ ಅಪರಿಮಿತ ಮಹಿಮೆಯನು ಪಾಡಿ ಪೊಗಳುವ ಭಾಗ್ಯ ಈ ಮಂದಮತಿಗಾಯ್ತು ನಾರಾಯಣಾರ್ಯರ ಮೇರುಗಿರಿ ಕಾವ್ಯವನು ಕನ್ನಡದಿ ನುಡಿಯುವ ಪುಣ್ಯ ಎನಗಾಯ್ತು ನರಹರಿಯು ಕರುಣಿಸಿಹ ಸರಸತಿಯ ಭಿಕ್ಷೆಯನು ಅನುಗಾಲ ಸೇವಿಸುತ ನಲಿವ ಮನವೆನದಾಯ್ತು ಗಗನದೆತ್ತರದಲ್ಲಿ ಸೂರ್ಯನಿಗೂ ಮಿಗಿಲಾಗಿ ಬೆಳಗಿರಲಿ ಪ್ರಜ್ವಲಿಸಿ ಮಧ್ವಮತ ದೀಪ ಶ್ರೀ ಹರಿಗೆ ಪೊಡಮಡುವ ಈ ಸುಪ್ರದೀಪ ಸಿರಿದೇವಿಗಾನಂದ ನೀಡುವಾ ದೀಪ ಬ್ರಹ್ಮರುದ್ರೇಂದ್ರರು ಪಾಡಿ ಪೊಗಳುವ ದೀಪ ಹನುಮ ಭೀಮರಿಗೆಲ್ಲ ನಲಿವು ನೀಡುವ ದೀಪ ಆನಂದ ತೀರ್ಥರ ಸುಜ್ಞಾನ ದೀಪ ಪರಮಾತ್ಮ ಪಾರಮ್ಯ ಸಾರುವ ದೀಪ ದ್ವೈತ ಭಾವವ ಸ್ಫುರಿಸಿ ಉದ್ಧರಿಪ ದೀಪ ಮನುಜ ಚೇತನಕೆಲ್ಲ ಮುಕುತಿ ನೀಡುವ ದೀಪ ಜಗದ ಮೂಲೆಗಳಲ್ಲಿ ಬೆಳಗಲೀ ದೀಪ ಧನ್ಯತೆಯ ಚಿನ್ಮಯತೆ ಮೂಡಿಸಲೀ ದೀಪ ದಿವ್ಯತೆಯ ಭವ್ಯತೆಗೆ ದಾರಿ ತೋರಲಿ ದೀಪ ನರಹರಿಯ ಕರುಣೆಯನು ಕರುಣಿಸಲಿ ದೀಪ ಶ್ರೀ ಹರಿವಾಯುಗುರುಗಳ ಪದಕಮಲಗಳಲ್ಲಿ ಭಕ್ತಿಪುರಸ್ಸರವಾಗಿ ಸಮರ್ಪಿಸಲಾಗಿದೆ ಶ್ರೀ ಲಕ್ಷ್ಮೀನರಸಿಂಹಾಯ ನಮಃ . -' "ಶ್ರೀ ಸುಮಧ್ವವಿಜಯ' ಮಾಧ್ವಸಾಹಿತ್ಯದ ಮಾಂಗಲ್ಯ ಕಾವ್ಯ. ಅದು ಶ್ರೀಮದಾಚಾರ್ಯರ ಐಹಿಕ ಬದುಕಿನ ಹಲವಾರು ಸ್ವಾರಸ್ಯಕರ ಘಟನೆಗಳನ್ನೂ ಹಾಗೂ ಅವರ ಆಧ್ಯಾತ್ಮಿಕ ಹಿರಿಮೆಯನ್ನೂ ಚಾರಿತ್ರಿಕ ನೆಲೆಗಟ್ಟಿನಲ್ಲಿ ವಿವರಿಸುವ ಒಂದು ಪ್ರಾಮಾಣಿಕ ಕಾವ್ಯ. ಸಂಸ್ಕೃತ ಸಾಹಿತ್ಯದಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದಿರುವ ಈ ಮಹಾಕಾವ್ಯ ಅಶ್ವಘೋಷನ ಬುದ್ಧ ಚರಿತೆಗಿಂತಲೂ ಹೆಚ್ಚು ಮಹತ್ವವನ್ನು ಪಡೆದಿರುವುದಾದರೂ, ಸಂಸ್ಕೃತ ಸಾಹಿತ್ಯ ವಿಮರ್ಶನ ಕ್ಷೇತ್ರದಲ್ಲಿ ಗಳಿಸಬೇಕಾದ ಸ್ಥಾನ ಗಳಿಸದಿರುವುದು ಒಂದು ದುರಂತ ಎಂದು ಅನೇಕ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. "ಶ್ರೀ ಸುಮಧ್ವವಿಜಯ" ದ ಕರ್ತೃ ಶ್ರೀಮನ್ನಾರಾಯಣ ಪಂಡಿತರು (ಕ್ರಿ. ಶ. 1295 - 1370) ಅಸಾಮಾನ್ಯ ಪಂಡಿತ ಪರಂಪರೆಯಲ್ಲಿ ಬೆಳಗಿದ ಪ್ರಭೃತಿಗಳು. ಹದಿನಾರು ಸರ್ಗಗಳಲ್ಲಿ ರಚಿತವಾಗಿರುವ ನಾರಾಯಣ ಪಂಡಿತಾಚಾರ್ಯರ "ಶ್ರೀ ಸುಮಧ್ವವಿಜಯ' ಮಹಾಕಾವ್ಯವು ಶಾಸ್ತ್ರಾನುಭೂತಿ ಮತ್ತು ಕಾವ್ಯ ಪ್ರತಿಭೆಗಳ ಸುಂದರ ಸಂಗಮ. "ಶ್ರೀ ಸುಮಧ್ವವಿಜಯವನ್ನೊಳಗೊಂಡು ಸುಮಾರು 25 ಕೃತಿಗಳನ್ನು ಇವರು ರಚಿಸಿದ್ದಾರೆ. ಶ್ಲೇಷ, ಉಪಮಾ ಮೊದಲಾದ ಅಲಂಕಾರಗಳನ್ನು ತುಂಬಾ ಸಮರ್ಥವಾಗಿ ಬಳಸುವ ಇವರ ಕಾವ್ಯಗಳ ರಚನಾ ವೈಖರಿ ಅದ್ಭುತವಾದದ್ದು. ಮಾಧ್ವ ಪರಂಪರೆಯ ಅನೇಕ ಯತಿಶ್ರೇಷ್ಠರು ಮತ್ತು ಪಂಡಿತ ದಿಗ್ಗಜಗಳೂ ಈ ಕೃತಿಯ ಹೆಗ್ಗಳಿಕೆಯನ್ನು ಹಾಡಿಹೊಗಳಿದ್ದಾರೆ. ಇಂತಹ ಕಾವ್ಯರತ್ನವನ್ನು ಕನ್ನಡಿಸಿ ನುಡಿಯುವ ಸೌಭಾಗ್ಯವನ್ನು ಶ್ರೀ ಹರಿಯು ನನ್ನಂತಹ ಪಾಮರನಿಗೆ ಕರುಣಿಸಿದ್ದಾನೆ. ಸದ್ಭಕ್ತರು ನನ್ನ ಈ ಪ್ರಯತ್ನವನ್ನು ಸಹೃದಯತೆಯಿಂದ ಸ್ವೀಕರಿಸುವರೆಂದು ನನ್ನ ನಂಬಿಕೆ. - ಇ. ಡಿ. ನರಹರಿ