. . . . . ಅರ್ಪಣೆ ತರ್ಕ-ವೇದಾಂತಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಪಡೆದು ತಪೋಮಯವಾದ ಜೀವನವನ್ನು ನಡೆಸುತ್ತಿರುವ, ತನ್ನ ಸಿದ್ಧಿಯ ತುಣುಕನ್ನು ನನಗೂ ಅನುಗ್ರಹಿಸಿ ನನ್ನನ್ನು ಮುನ್ನಡೆಸುತ್ತಿರುವ, ನನ್ನ ತೀರ್ಥರೂಪರಾದ ಶ್ರೀ. ಪಿ. ನಾರಾಯಣಾಚಾರ್ಯ, ತರ್ಕಕೇಸರಿ, ನ್ಯಾಯವೇದಾಂತವಾಚಸ್ಪತಿ ಅವರಿಗೆ ಈ ಕೃತಿಯನ್ನು ಅರ್ಪಿಸಿದ್ದೇನೆ. ******** +4+4+ . ಮುನ್ನುಡಿಯನ್ನು ಅನುಗ್ರಹಿಸಿದ ಶ್ರೀ ಫಲಿಮಾರು ಮಠಾಧೀಶರಾದ ರಘುವಲ್ಲಭತೀರ್ಥ ಶ್ರೀಪಾದಂಗಳವರು ' ಶ್ರೀ ಫಲಿಮಾರು ಶ್ರೀಪಾದಂಗಳ ಅನುಗ್ರಹದ ನುಡಿ ಅನುವಾದಕರು ಅನುಗ್ರಹದ ಮುನ್ನುಡಿ ಬರೆಯಬೇಕೆಂದಾಗ ಸ್ವಲ್ಪ ಯೋಚಿಸಿದೆವು. ರಕ್ತಗತವಾದ ಪಾಂಡಿತ್ಯ, ಸಾಹಸ ಅವರಿಗೆ ಸೇರಿದ್ದು. ಅವರು ಕೇಳಿದಾಗ ಬರೆಯಲಾರೆನೆಂದರೆ ಅನುಚಿತವಾಗಬಹುದೆಂದೆನಿಸಿ ಒಪ್ಪಿಕೊಂಡೆವು. ಅಷ್ಟೆ ಅಲ್ಲದೆ ನಮಗೂ ಒಂದು ಬಗೆಯ ತೃಪ್ತಿ, ಆನಂದವಿದೆ. ದಶಪ್ರಮತಿಗಳೊಡನೆ ಹದಿನೈದು ದಿನ ವಾದಮಾಡಿ ಅದ್ವೈತವನ್ನು ತ್ಯಜಿಸಿ ದ್ವೈತ ಸ್ವೀಕರಿಸಿದ ತ್ರಿವಿಕ್ರಮ ಪಂಡಿತಾಚಾರ್ಯರ ಕುಲವಾದ ಲಿಕುಚಕುಲದಲ್ಲಿಯೇ ನನ್ನ ಮಾತೆ ಸೇರಿದ್ದಾಳೆ. ಅಂತಹ ಪಾಂಡಿತ್ಯದ ಪುತ್ರರೇ 'ಯೋಗ-ದೀಪಿಕಾ', 'ಶುಭೋದಯ', 'ಮಧ್ವವಿಜಯ', ಕೆಲ ಸ್ತೋತ್ರಗಳ ರಚಕರೆನಿಸಿದ ನಾರಾಯಣಪಂಡಿತಾಚಾರ್ಯರು, ಅವರ ಶೇಷ್ಠ ಕೃತಿಗಳಲ್ಲೊಂದು ಈ ಸಂಗ್ರಹ ರಾಮಾಯಣ. ಸಂಗ್ರಹದ ಕಾರ್ಯವೆನ್ನುವುದೊಂದು ಪೂರ್ಣ ರಸಾಸ್ವಾದದ ದ್ಯೋತಕವಾಗಬಲ್ಲುದು. ನದೀಪಾತ್ರದಲ್ಲಿ ಸಾಗರದ ನೀರು ಒಳನುಗ್ಗಿದಾಗ ನದಿ ಪೂರ್ಣವಾಗಿ ನಮಗೆ ಆನಂದದಾಯಿಯಾಗುತ್ತದೆ. ಅದೇ ನೀರು ಸಾಗರದಲ್ಲೇ ಇದ್ದಾಗ ಆ ಭವ್ಯತೆಯು ಅಲ್ಲಿ ಕಾಣದಾಗುತ್ತದೆ. ಅಂತೆಯೇ ಮಹಾಗ್ರಂಥಗಳಿಂದ ಮಾನವನ ಮನಸ್ಸಿನ ಭಾವನೆ ಆಕರ್ಷಣೆಗೆ ಒಳಗಾಗಿ ಹೊರಬಂದು ಸಂಗೃಹೀತವಾದಾಗ ಸಂಗೃಹೀತ ಗ್ರಂಥಗಳು ಪೂರ್ಣ ತಪ್ತಿತೃಪ್ತಿಜನಕವಾಗಿ ಇರಬಲ್ಲವು. ಸಂಗೃಹೀತನ ಜ್ಞಾನಶಕ್ತಿ, ವಿವೇಚನಾಶಕ್ತಿ, ಭಾವನಾಶಕ್ತಿಗಳಿಗನುಸಾರವಾಗಿ ಇದು ಇರುತ್ತದೆ. ರವಿ-ಚಂದ್ರರ ವ್ಯತ್ಯಸ್ತ ಪ್ರಭಾವಕ್ಕೆ ಸಾಗರ ಒಳಗಾಗುವಂತೆ. ನಾರಾಯಣಪಂಡಿತಾಚಾರ್ಯರಲ್ಲಿ ಜಗತ್ತಿನ ಹೊರ ಕಾರಣವೆಲ್ಲ ವಿಭಾವವಾಗಿ ಚೆನ್ನಾಗಿ ಪಾಕ ಬಂದಿರುವುದರಿಂದಲೇ ವೇದಾಂತ ಶಾಸ್ತ್ರಗಳಿಗಿಂತ ತದನುಸಾರಿ ಕಾವ್ಯ-ಪುರಾಣಗಳತ್ತ ಇವರೊಲುಮೆ ಹರಿದಂತೆ ಕಾಣುತ್ತದೆ. ಆಚಾರ್ಯರಿಂದ ರಚಿತವಾದ, ಪುರಾಣಗಳಲ್ಲಿ ಕಂಡುಬರುವ ವಿಪ್ರತಿಪತ್ತಿಗಳ ನಿರ್ಣಾಯಕವಾದ ತಾತ್ಪರ್ಯ ನಿರ್ಣಯಾ- ನುಸಾರಿಯಾಗಿ ಇವರು ಸಂಗ್ರಹ ರಾಮಾಯಣವನ್ನು ರಚಿಸಿರುವರೆಂಬುದನ್ನು ಕಾಣಬಹುದು- ವಾಲಿಯ ವಧೆಯ ವಿಷಯದಲ್ಲಿ, ಸೀತಾಪಹರಣದ ಸಂದರ್ಭದಲ್ಲಿ. ಸೀತಾರಾಮರ ಅಚ್ಚುಮೆಚ್ಚಿನ ನೇಹಿಗ, ಭಕ್ತ, ಕಿಂಕರ, ಮಂತ್ರಿ ಎಲ್ಲವೂ ಆದ ಹನುಮಂತನ ರೂಪವು ತನ್ನದೇ ಆದ ಸೇವಾರೂಪದ ಕಾರ್ಯ ಎನ್ನುವುದನ್ನು ಸಂದರ್ಭ ಬಂದಾಗ ಪೂರ್ಣಪ್ರಜ್ಞರು ಕೆಲ ಭಾಷ್ಯಗಳಲ್ಲಿ ಅಪೌರುಷೇಯವಾದ ಬಳಿತ್ಥಾಸೂಕ್ತವನ್ನು ಉಲ್ಲೇಖಿಸಿ ತಮ್ಮ ಅವತಾರದ ಬಗ್ಗೆ ಸಮರ್ಥಿಸುವುದನ್ನು ನಾವು ನೋಡುತ್ತೇವೆ. ಮೂಲ ರಾಮಾಯಣದಿಂದ ಹಿಡಿದು ಈ ಕ್ಷಣದವರೆವಿಗೂ ತನ್ನ ಘನತೆಯನ್ನು, ಸೌಂದರ್ಯವನ್ನು ಉಳಿಸಿಕೊಂಡು ಬಂದ ಪುಣ್ಯಕಥಾನಕವು ರಾಮಾಯಣ ಎಂದರೆ ತಪ್ಪಾಗದು. ರಾಮನಾಮದಿಂದಲೇ ಹಿರಿದೆನಿಸುವ ಇದರ ಮಹಾತ್ಮ್ಯೆ ಬೇರೆ ಬೇರೆ ರೀತಿಯ ಕಾವ್ಯರೂಪತಳೆದು ಬೆಳೆಯುವುದರಲ್ಲಿ ಆಶ್ಚರ್ಯವೇನೂ ಕಾಣಿಸುವುದಿಲ್ಲ. ಆದರೂ ದೊಡ್ಡವರ ಚರಿತ್ರೆಯನ್ನು ಅವರ ಅತ್ಯಂತ ಒಡನಾಡಿಗಳು ಬರೆದು ಪ್ರಕಾಶಕ್ಕೆ ತಂದಾಗ ನಮ್ಮ ನಂಬುಗೆ , ಗೌರವ ಹೆಚ್ಚಾಗುವಂತೆ ಗುಣಪೂರ್ಣ, ದುಃಖರಹಿತ, ಸುಖರೂಪಿ ರಾಮನ ಅವತಾರದ ಬಗ್ಗೆ ಆಚಾರ್ಯರು ತಮ್ಮ ಸ್ವಂತ ಅನುಭವದಿಂದಲೇ ನುಡಿದಿದ್ದಾರೆ ಎಂದಾಗ ನಮಗೆ ಅತಿಶಯ ಆನಂದ-ವಾಗುತ್ತದೆ. ಅವರೀರ್ವರ (ಭಗವಂತ-ವಾಯು) ಸಂಬಂಧ ಅವಿಚ್ಛಿನ್ನವಾದುದು. ಮುಖ್ಯ ಪ್ರಾಣರ ಮೂರನೆಯ ಅವತಾರ ಭಗವತ್ಪ್ರಕಾಶಕ್ಕೆ ಹೆಚ್ಚು ಅವಕಾಶವಿತ್ತಿತು. ಈ ಎಲ್ಲ ಭಾವನೆಗಳ ಮೂಲಕವಾಗಿಯೇ "ಆಚಾರ್ಯರ ಭಕ್ತನೆನಿಸುವ ನಾನು ಈ ರಾಮಾಯಣ ಸಂಗ್ರಹವನ್ನು ಮಾಡಿದ್ದೇನೆ"ಎನ್ನುತ್ತಾರೆ ನಾರಾಯಣಪಂಡಿತಾಚಾರ್ಯರು. ಆದುದರಿಂದಲೇ ಆಚಾರ್ಯರಿಗೆ ವ್ಯತಿರಿಕ್ತವಾಗಿ ಯಾವುದನ್ನೂ ಬಳಸಿಲ್ಲವೆಂದು ನಾವು ನಿರ್ಧರಿಸಬಹುದು. ಆದುದರಿಂದ ಈ ಗ್ರಂಥವು ಅತ್ಯಂತ ಮಾನ್ಯವೂ, ಮನನೀಯವೂ ಅಹುದು. ವೇದಗಳಿಂದ ಮಾತ್ರ ತಿಳಿಯಲು ಸಾಧ್ಯವಾಗುವ ಭಗವತ್ಸ್ವರೂಪವನ್ನು ಕನ್ನಡದ ನುಡಿಯಲ್ಲಿ ದ್ವೈತಭಾವದಿಂದ ಜನತೆ ಕಾಣುವಂತಾಗಲಿ. ಸಂಸ್ಕೃತದಿಂದ ಕನ್ನಡಕ್ಕೆ ಇಳಿದಾಗಲೂ ಮೂಲ- ಸೌಂದರ್ಯವನ್ನು ಕಳೆದುಕೊಳ್ಳದಂತೆ ಅನುವಾದಿಸುವ ಶಕ್ತ ರೀತಿ ಶ್ರೀ ಗೋವಿಂದಾಚಾರ್ಯರಿಗೆ ಒಲಿದಿರುವುದನ್ನು ಈ ಗ್ರಂಥದಲ್ಲಿ ಕಾಣಬಹುದು. ಶ್ರೀಯುತ ಅನುವಾದಕರ ಮನಸ್ಸು, ಜ್ಞಾನ ಪ್ರಾಕೃತಿಕ ಮಾಸುವಿಕೆಗೆ ಒಳಗಾಗದೆ ಶಕ್ತಿಶುದ್ಧವಾಗಿ ಕೆಲಸಮಾಡಿ ಜನತೆಯ ಜನಾರ್ದನ (ಜನಂ ಜನನಂ ಅರ್ದಯತೀತಿ ಜನಾರ್ದನಃ) ನನ್ನು ಸಂತೋಷಗೊಳಿಸಲಿ. ಭಗವಂತನ, ಮುಖ್ಯ ಗುರುವಿನ ವಿನಾ ಮತ್ತಾರಿಗೂ ಅವರ ತಲೆ ಬಾಗದಂತಿರಲಿ, ಹಿರಿಯರಲ್ಲಿ ಪೂಜ್ಯ ಭಾವನೆ ತಾಳುತ್ತ, ಕಿರಿಯರಿಗೆ ಹಿರಿಯರಾಗಿ ಬಾಳಲಿ. "ಈಗಿನ ಅವರ ಚಿಕ್ಕ ವಯಸ್ಸಿನೊಂದಿಗೆ ಸೇರುವ ಆಯುಸ್ಸು ಜ್ಞಾನಪೂರ್ಣವಾಗಿರಲಿ. ಕನ್ನಡದ ಮುಖ ಕಾಣದ ಸಂಸ್ಕೃತ ಗ್ರಂಥಗಳೆಲ್ಲ ಗೋವಿಂದಾಚಾರ್ಯರನ್ನು ಕಾಣುವಂತಾಗಲಿ" ಎಂದು ಆಚಾರ್ಯ ಕರಾರ್ಚಿತ ಶ್ರೀರಾಮಚಂದ್ರ ದೇವರಲ್ಲಿ ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇವೆ. ವಿಜಯದಶಮಿ ಉಡುಪಿ ಶ್ರೀ ರಘುವಲ್ಲಭತೀರ್ಥ ಶ್ರೀಪಾದರು ಫಲಿಮಾರು ಮಠ ಸಂಪಾದಕರ ಮಾತು ವಿಜಯಾದಶಮಿಯ ಶುಭಮೂಹೂರ್ತದಲ್ಲಿ ಸಂಗ್ರಹ ರಾಮಾಯಣವು ಪ್ರಕಟವಾಗುತ್ತಿರುವದು ಒಂದು ಶುಭ ಸೂಚನೆಯಂದೇ ತಿಳಿಯುವೆ. ರಾಮಾಯಣ, ಮಹಾಭಾರತಗಳು ನಮ್ಮ ರಾಷ್ಟ್ರೀಯ ಗ್ರಂಥಗಳು, ಸರ್ವ ಕಾಲಗಳಲ್ಲಿಯೂ ಮಾರ್ಗದರ್ಶಕವಾದಂಥವು. ಭಾರತೀಯ ಜೀವನವನ್ನು ರೂಪಿಸಿದಂಥವು. ಈ ಗ್ರಂಥಗಳ ಅಧ್ಯಯನ, ವಿಮರ್ಶೆಗಳು ರಾಷ್ಟ್ರೀಯ ಪುನರುಜ್ಜಿವನದ ಈ ಸಂಧಿಕಾಲದಲ್ಲಿ ಅತ್ಯಾವಶ್ಯಕವೆಂದು ನಮಗೆ ಅನಿಸುತ್ತಿದೆ. ಈ ದೃಷ್ಟಿಯಿಂದಲೆ ಈ ಗ್ರಂಥದ ಪ್ರಕಟನೆಗೆ ಪ್ರವೃತ್ತವಾದುದು. ಸಂಗ್ರಹ ರಾಮಾಯಣವು ೮೦೦ ವರ್ಷಗಳ ಹಿಂದೆ, ಶ್ರೀಮದಾಚಾರ್ಯರ ಮಾರ್ಗದರ್ಶನದಲ್ಲಿ ಶ್ರೀ ನಾರಾಯಣಪಂಡಿತಾಚಾರ್ಯರಿಂದ ಬರೆಯಲ್ಪಟ್ಟ ಗ್ರಂಥವು. ತತ್ವಜ್ಞಾನ ಹಾಗು ಪುರಾಣಗಳ ಸಮನ್ವಯ ಮಾಡಿದ ಗ್ರಂಥವು. ಪಂಡಿತಾಚಾರ್ಯರು ತೀರ ಎಳೆಯ ವಯಸ್ಸಿನಲ್ಲಿಯೇ ಶ್ರೀಮದಾಚಾರ್ಯರಿಂದ ಪ್ರಭಾವಿತರಾಗಿ ರಚಿಸಿದ ಸುಂದರ ಕಾವ್ಯವಿದು. ಇದನ್ನು ಕನ್ನಡಿಸಿದವರು ಬನ್ನಂಜೆ ಗೋವಿಂದಾಚಾರ್ಯರು. ತರುಣ ಪಂಡಿತರು, ನವ ದೃಷ್ಟಿಯವರು, ಭಾರತೀಯ ಸಂಸ್ಕೃತಿಯು ಉಜ್ವಲವಾಗಿ ಬೆಳಗಬೇಕೆಂಬ ಬಯಕೆಯುಳ್ಳವರು, ತತ್ವಜ್ಞಾನದಲ್ಲಿ ಪಾಂಡಿತ್ಯವನ್ನು ಸಂಪಾದಿಸಿರುವರಲ್ಲದೆ ಎಲ್ಲ ಪುರಾಣಗಳನ್ನು ಅಭ್ಯಸಿಸಿ ಪರಿಣತರಾಗಿರುವರು. ಇಂತಹರು ಈ ಕೃತಿಯನ್ನು ಕನ್ನಡಿಸಿ ಕನ್ನಡಿಗರಿಗೆ ನೀಡಿದ್ದಕ್ಕಾಗಿ ಮಿಂಚಿನಬಳ್ಳಿಯು ಗೋವಿಂದಾಚಾರ್ಯರಿಗೆ ಋಣಿಯಾಗಿದೆ. ಶ್ರೀ ಶ್ರೀ ೧೦೮ ಶ್ರೀ ಫಲಿಮಾರು ಮಠದ ಶ್ರೀಪಾದಂಗಳವರು ಮುನ್ನುಡಿಯನ್ನು ಬರೆದು ಆಶೀರ್ವದಿಸಿದ್ದು ಬಳ್ಳಿಯ ಉತ್ಕರ್ಷದ ಕಾಲವು ಸಮೀಪಿಸಿದೆ ಎಂದು ತಿಳಿಯುತ್ತೇವೆ. ಶ್ರೀಪಾದಂಗಳು ಅನುಗ್ರಹಮಾಡಿದ್ದಕ್ಕಾಗಿ ಅವರಿಗೆ ಅನಂತ ಪ್ರಣಾಮಗಳನ್ನು ಅರ್ಪಿಸುತ್ತೇವೆ. ಮಿಂಚಿನಬಳ್ಳಿಯು ಇನ್ನುಮುಂದೆ ಜನತೆಯ ಸ್ವತ್ತಾಗುವದಿದೆ. ಅದರ ಬೆಳವಣಿಗೆಯು ಅವರನ್ನೇ ಕೂಡಿದೆ. ಮಕ್ಕಳನ್ನು ಒಳ್ಳೆ ರೀತಿಯಿಂದ ಸಲಹಬೇಕೆಂದು ತಂದೆ-ತಾಯಿಗಳಿಗೆ ಹೇಳಬೇಕೆ ? ಕನ್ನಡಿಗರು ತಮ್ಮದೇ ಆದ ಬಳ್ಳಿಯನ್ನು ಬೆಳೆಸಿ ಬಹುಕಾಲ ಬಾಳುವಂತೆ ಮಾಡಬೇಕೆಂದು ಬಳ್ಳಿಯ ಹುಟ್ಟುದಿನದ ಈ ಸಂದರ್ಭದಲ್ಲಿ ಪ್ರಾರ್ಥಿಸುವೆ. ವಿಜಯಾದಶಮಿ ೧೮೮೫ ತಮ್ಮ ಸೇವಕ ಬುರ್ಲಿ ಬಿಂದುಮಾಧವ ಈ ಗ್ರಂಥದ ಕುರಿತು ಅಂದು ಹೈದರಾಬಾದಿನಲ್ಲಿ ಬಿತ್ತಿದ ಬೀಜ ಇಂದು ಧಾರವಾಡದಲ್ಲಿ ಸುಳಿಯೊಡೆದಿದೆ. ಎರಡು ವರ್ಷಗಳ ಕೆಳಗೆ ಶ್ರೀ ಬುರ್ಲಿಯವರನ್ನು ಹೈದರಾಬಾದಿನಲ್ಲಿ ಭೆಟ್ಟಿಯಾದೆ. ಆಗ ಅವರು 'ಸಂಗ್ರಹ ರಾಮಾಯಣ'ವನ್ನು ಕನ್ನಡ ಜನಕ್ಕೆ ಪರಿಚಯಿಸಿಕೊಡ- ಬೇಕೆಂದು ಸೂಚಿಸಿದರು. ಅವರ ಸ್ನೇಹದ ಆದೇಶವನ್ನು ಮೀರುವುದು ನನಗೆ ಅಸಾಧ್ಯವಾಯಿತು, ಸರಿ ಎಂದು ಒಪ್ಪಿಕೊಂಡೆ. ಊರಿಗೆ ಮರಳಿದೆ, ಮತ್ತೆ ದಿನಗಳುರುಳಿದವು. ಜೀವನ- ವೆಂದರೆ ಬೇಕಾದ ಬೇಡವಾದ ಕೆಲಸಗಳ ಒಂದು ತುಮುಲವಿದ್ದಂತೆ, ಈ ತುಮುಲದ ಅಡೆತಡೆಗಳಲ್ಲಿ ಬುರ್ಲಿಯವರ ಉಪಯುಕ್ತ ಸಲಹೆಯನ್ನು ಮರೆತಿದ್ದೆ- ನೆಂದರೂ ತಪ್ಪಲ್ಲ. ಆಗ ನಮ್ಮೂರಿನ ಗೆಳೆಯರೊಬ್ಬರು ನನ್ನನ್ನು ಎಚ್ಚರಿಸಿದರು: "ಬರೆಯ ಬಲ್ಲವರು ಬರೆಯದಿರುವುದು ಸರಸ್ವತಿಯ ದ್ರೋಹ ಮಾಡಿದಂತೆ !" ಕತ್ತಿ ಹಿರಿದು ನಿಂತ ಕ್ಷತ್ರಿಯ ಯುದ್ಧಕ್ಕೆ ಅ೦ಜಬಾರದು. ಲೇಖನಿ ಹೊತ್ತು ತಿರುಗುವವರು ಬರೆಯಲಾರೆ ಎನ್ನಬಾರದು. ಅಲ್ಲವೆ? ಸರಿ. ಬರೆಯತೊಡಗಿದೆ. ಮುಂಬಯಿ ಪ್ರವಾಸ, ದಕ್ಷಿಣಭಾರತ ಪ್ರವಾಸಗಳಿಂದ ನಡುನಡುವೆ ತಡೆದುನಿಂತ ಬರವಣಿಗೆ ಕೂರ್ಮಗತಿ- ಯಿಂದಲೇ ಸಾಗಿತು. ನನ್ನ ಇತ್ತೀಚಿನ ದೈಹಿಕ ಅನಾರೋಗ್ಯದಿಂದಲಂತೂ ಅದು ಇನ್ನಷ್ಟು ಮೆಲುನಡೆ- ಯನ್ನು ಹಿಡಿಯಿತು. ಹೇಗೂ ಎರಡು ವರ್ಷಗಳ ನಂತರ ಈಗ ಹೈದರಾಬಾದಿನಲ್ಲಿ ಬಿತ್ತಿದ ಬೀಜ ಧಾರವಾಡದಲ್ಲಿ ಚಿಗುರಿದಂತಾಯಿತು. ಅದನ್ನು ನೀರೆರೆದು ಚಿಗುರಿಸಿದವರು ಬುರ್ಲಿಯವರು. ಅದರ ಪೂರ್ಣ ಶ್ರೇಯಸ್ಸು ಅವರದು. ನನ್ನ ಮಟ್ಟಿಗೆ ಹೇಳುವುದಿದ್ದರೆ ಇದು ನನಗೆ ಅತ್ಯಂತ ಪ್ರಿಯವಾದ ಕೆಲಸ, ಮೈ-ಮನಗಳು ವಿಷಣ್ಣವಾದಾಗ ರಾಮಚರಿತೆಯನ್ನು ಓದಿ ನಲಿದಿದ್ದೇನೆ. ಅದನ್ನು ಕನ್ನಡಿಸುವ ಮದ್ದನ್ನುಣಿಸಿ ಮೈ-ಮನ- ಗಳಲ್ಲಿ ಹುಮ್ಮಸ್ಸನ್ನು ತುಂಬಿಕೊಂಡಿದ್ದೇನೆ. ಇನ್ನು ನನ್ನ ಈ ಬರವಣಿಗೆ, ಹಿನ್ನೆಲೆಯಾದ ಸಂಸ್ಕೃತದ ಸಂಗ್ರಹ ರಾಮಾಯಣದ ಕುರಿತು ಎರಡುಮಾತು. ಅದನ್ನು ಬರೆದವರು 'ಕೇರಳದ ಕವಿ' ನಾರಾಯಣಪಂಡಿತಾಚಾರ್ಯರು, ಸುಮಾರು ಹದಿಮೂರನೆಯ ಶತಮಾನದಲ್ಲಿ ಬದುಕಿದ್ದವರು. ಆನಂದತೀರ್ಥರ ನೆಚ್ಚಿನ ಶಿಷ್ಯ ತ್ರಿವಿಕ್ರಮಪಂಡಿತರ ಮಕ್ಕಳು. ಅವರಿಗೆ ಆಚಾರ್ಯ ಮಧ್ವರಲ್ಲಿ ಅಪಾರ ಭಕ್ತಿ. ಎಂತಲೇ ಆಚಾರ್ಯರು ಬರೆದ ರಾಮಚರಿತೆಯನ್ನು ಅನುಸರಿಸಿಯೇ ಈ ಗ್ರಂಥವನ್ನು ಬರೆದಿದ್ದಾರೆ. ಆದರೆ ಒಂದು ಮಾತನ್ನು ನಾನಿಲ್ಲಿ ಸೂಚಿಸಬೇಕು. ಈ ಕೃತಿ ವಾಲ್ಮೀಕಿಯ ರಾಮಾಯಣವನ್ನೇ ಅವಲಂಬಿಸಿಕೊಂಡಿದೆ. ಅದರ ಕಥಾಭಾಗಕ್ಕೂ ಇದಕ್ಕೂ ಹೇಳಿಕೊಳ್ಳುವಂಥ ವ್ಯತ್ಯಾಸವೇನಿಲ್ಲ. ಇದ್ದರೆ ನಿರೂಪಣೆಯಲ್ಲಿ ವ್ಯತ್ಯಾಸ . ಅಷ್ಟೆ. ಅಲ್ಲಿನ ಕತೆಯೇ ಇಲ್ಲಿನ ಕತೆ. ಇಲ್ಲಿ ಒಂದು ವಿಶೇಷವಿದೆ. ರಾಮಾಯಣದಲ್ಲಿ ಅಸ್ಪಷ್ಟವಾದ ಕೆಲವು ಮಾತುಗಳನ್ನು ಇವರು ಇದರಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಉದಾ: ಲಕ್ಷ್ಮಣ-ಭರತರಲ್ಲಿ ಯಾರು ಅಣ್ಣ, ಯಾರು ತಮ್ಮ ಎನ್ನುವುದು ರಾಮಾಯಣದಲ್ಲಿ ಅಸ್ಪಷ್ಟವಿದೆ. ಲಕ್ಷ್ಮಲಕ್ಷ್ಮಣನೇ ಅಣ್ಣ ಎನ್ನುವ ಸ್ಪಷ್ಟ ಮಾತು ಈ ಗ್ರಂಥದಿಂದ ತಿಳಿದುಬರುತ್ತದೆ. ಇದಕ್ಕೆ ಅನೇಕ ಪುರಾವೆಗಳೂ ಇವೆ. ಅಂಥ ಅನೇಕ ಸಂದೇಹಗಳು ಈ ಗ್ರಂಥದಲ್ಲಿ ನಿರ್ಣಯವಾಗಿವೆ. ಹೀಗೆ ಈ ಸಂಸ್ಕೃತದ 'ಸಂಗ್ರಹ ರಾಮಾಯಣ' ಆಚಾರ್ಯ ಮಧ್ವರು ಬರೆದ ರಾಮಚರಿತೆಗೂ ವಾಲ್ಮೀಕಿ ಮುನಿಯ ರಾಮಾಯಣಕ್ಕೂ ಒಂದು ಸಂಯೋಜಕದಂತಿದೆ. ಅದರಿಂದ ನನ್ನ ಅನುವಾದವನ್ನು ರಾಮಾಯಣದ ಸಂಗ್ರಹರೂಪವಾದ ಕನ್ನಡಾನುವಾದ ಎಂದರೂ ಒಪ್ಪುವುದು. ಇದು 'ಸಂಗ್ರಹ ರಾಮಾಯಣ'ದ ಅನುವಾದ ಎನ್ನುವುದಕ್ಕಿಂತಲೂ ಅದನ್ನು ಆಧರಿಸಿ ಬರೆದ ಕೃತಿ ಎಂದಷ್ಟೇ ಹೇಳುವುದು ಚೆನ್ನ. ಮೂಲದಲ್ಲಿ ಸಂಸ್ಕೃತದಲ್ಲಿ ಮಾತ್ರವೇ ಎನ್ನಿಸಿದ ಬಣ್ಣನೆಗಳು ಬಂದಾಗ, ವಿಷಯ ಕತೆಯನ್ನು ಮೀರಿ ಹರಿದಾಗ ನಾನು ಅದನ್ನು ಬಳಸದೆ ಬಿಟ್ಟಿದ್ದೇನೆ. ಅದರಲ್ಲೂ ಸೂಕ್ಷವಾಗಿ ಸೂಚಿಸಿ ಬಿಟ್ಟ ಅನೇಕ ವಿಷಯಗಳನ್ನು ಅವಶ್ಯಕ- ವೆನಿಸಿದಲ್ಲಿ ವಿವರಿಸಿ ಬರೆದಿದ್ದೇನೆ. ವಿಸ್ತರಿಸಿ ಬರವಣಿಗೆಯ ಓಘವನ್ನು ಕೆಡಿಸುವ ಕೆಲವು ಉಪಕಥೆಗಳನ್ನು ಬಿಟ್ಟಿದ್ದೇನೆ. ರಾಮಾಯಣವನ್ನು ಕುರಿತು, ರಾಮನ ಕತೆಯ ಕುರಿತು ಅನೇಕ ವಾದ ವಿವಾದಗಳನ್ನು ಕೇಳುತ್ತೇವೆ. ರಾಮಚಂದ್ರನು ಅವತಾರ ಪುರುಷನೇ ಆದರ್ಶ ಮಾನವ ಮಾತ್ರನೇ ಎನ್ನುವ ಕುರಿತೂ 'ಚರ್ಚೆಗಳು' ನಡೆದಿವೆ. ಪ್ರಾಚೀನ ಗ್ರಂಥಗಳೆಲ್ಲ ಆತನನ್ನು ಭಗವಂತನ ಅವತಾರ ಎನ್ನುತ್ತವೆ. ವಾಲ್ಮೀಕೀಯೂ ಕೂಡ ರಾಮಚಂದ್ರ ಹರಿಯ ಅವತಾರ ಎನ್ನುವ ದೃಷ್ಟಿಯಿಂಲೇ ಕತೆಯನ್ನು ಹೆಣೆದುಕೊಂಡು ಹೋಗಿದ್ದಾನೆ. ಆದರೆ 'ರಾಮಾಯಣ ಕವಿಯ ದೃಷ್ಟಿಯಲ್ಲಿ ರಾಮಚಂದ್ರ ಒಬ್ಬ ಆದರ್ಶ ಮಾನವ ಮಾತ್ರ'ವೆಂದು ರಾಜಾಜಿ ಅನ್ನುತ್ತಾರೆ ! ಆದರೂ ಅಲ್ಲಲ್ಲಿ ಅವತಾರದ ಉಲ್ಲೇಖವಿದೆಯೆಂದು ಅವರೂ ಒಪ್ಪಿಕೊಂಡಿದ್ದರೆ. ಈ ಎರಡು ಪಂಥಗಳನ್ನು ಬಿಟ್ಟು ಇನ್ನೂ ಒಂದು ಪಂಥವಿದೆ. ಅದು ರಾಮಾಯಣವನ್ನು ಓದದೆ ಅದನ್ನು ಕುರಿತು ಅಭಿಪ್ರಾಯ ಕೊಡುವ ಪಂಥ. ಉತ್ತರ ದಕ್ಷಿಣಗಳ ಪಿಡುಗು ಹಿಡಿದ ಇಂಥ ಜನ 'ರಾಮಾಯಣವನ್ನು ಉತ್ತರದವರು ಬರೆದುದು. ಅದು ತಮ್ಮನ್ನು ನಿಂದಿಸಲಿಕ್ಕಾಗಿಯೇ ಬರೆದ ಗ್ರಂಥ' ಎಂದು ವಾದಿಸುತ್ತಾರೆ! ರಾಮಾಯಣಕ್ಕೆ ಬಹಿಷ್ಕಾರ ಹಾಕುವವರೆಗೂ ಈ ವೀರ ದಾಕ್ಷಿಣಾತ್ಯರ ಅವಿವೇಕ ಮುಂದುವರಿದಿದೆ ! ಇಂಥವರ ಹಾರಾಟಗಳಿಂದ ರಾಮಾಯಣದಂಥ ವಿಶ್ವಕೃತಿಗೇನೂ ಕುಂದು ಬಾರದು ಎಂದು ರಾಮಾಯಣ ಓದಿದ ಎಲ್ಲರೂ ಬಲ್ಲರು. ಪುಣ್ಯಸಂಪಾದನೆಗಾಗಿ, ಮೋಕ್ಷಸಿದ್ಧಿಗಾಗಿ ರಾಮಾಯಣ- ವನ್ನು ಓದಬೇಕು ಎಂದೇನೂ ನಾನು ಹೇಳ ಹೊರಟಿಲ್ಲ. ಆದರೆ ಮತಪಂಥಗಳ, ದಕ್ಷಿಣೋತ್ತರಗಳ ಪೂರ್ವಾಗ್ರಹ- ವನ್ನು ತೊರೆದು ಒಮ್ಮೆ ಆ ಕಾವ್ಯವನ್ನು ಓದಬೇಕು. ಅದರಲ್ಲಿ ಕಾಣುವ ಮಾನವೀಯ ಸ್ವಭಾವದ ಅದ್ಭುತ ಚಿತ್ರಣವನ್ನು ಕಾಣಬೇಕು. ಕವಿಹೃದಯದ ಪಕ್ವತೆಯನ್ನು ಮನಗಾಣಬೇಕು. ಆಗ ಅಂಥ ಜನವೇ ತಾವು ಮೊದಲು ನೋಡದೆ ನಿಂದಿಸಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾರೆ. ಆ ಕಥೆ ಹಾಗೆ ನಡೆದಿರಲಿ, ಬಿಡಲಿ. ಅದನ್ನು ಚಿತ್ರಿಸಿದ ರಸಕವಿ ಧನ್ಯ. ಅದನ್ನು ಓದುವವನ ಬಾಳು ಧನ್ಯ. ಇಂಥ ರಸ ಸಾಹಿತ್ಯಗಳನ್ನು ಪಡೆದ ನಾಡು ಧನ್ಯ. ಇದನ್ನು ಅರಿಯದ ಕೂಪ ಮಂಡೂಕಗಳು ತಮ್ಮ ಜೀವನದಲ್ಲಿ 'ಶೂನ್ಯ'ವನ್ನು ತುಂಬಿಕೊಳ್ಳುತ್ತಾರೆ ! ಇದು ಸನಾತನಿಗಳಿಗಾಗಿ ಬರೆದ ಕಾವ್ಯವಲ್ಲ; ಹಿಂದೂಗಳಿಗೆ ಮಾತ್ರ ಮೀಸಲಾದ ಕೃತಿಯೂ ಅಲ್ಲ. ಇದು ಹೃದಯ- ವುಳ್ಳವರೆಲ್ಲರಿಗೂ ಬೇಕಾದ ಕೃತಿ, ವಿಶ್ವಕಾವ್ಯ. ಕಾಣುವ ಕಣ್ಣು, ತಿಳಿಯುವ ಬಗೆ ಒಂದು ಇದ್ದರೆ ಯಾವ ಪಂಥ- ದವರಿಗೂ ಇದು ಅವುತಣ, ಅದರಲ್ಲಿರುವ ರಸ ಪರಿಣತಿ- ಯನ್ನು ಅರಸುವ ಜನಕ್ಕೆ ಪಥ ಯಾವುದಾದರೇನು ? ಕತೆ ಯಾವುದಾದರೇನು ? ಜೇನಿರುವ ಎಲ್ಲ ಹೂವೂ ಹೂವೇ. ಭ್ರಮರಕ್ಕೆ ಪಕ್ಷಪಾತವೆಂಬುದಿಲ್ಲ. ಒಳ್ಳೆಯ ಮಾತು ಬೈಬಲ್ಲಿನಲ್ಲಿರಬಹುದು, ವೇದಗಳಲ್ಲಿ ಬರಬಹುದು, ಸರ್ವಜ್ಞ- ಬಸವಣ್ಣನವರ ವಚನಗಳಲ್ಲಿ ಬರಬಹುದು, ರಾಮಾಯಣ-ಪುರಾಣಗಳಲ್ಲಾದರೂ ಬರಬಹುದು. ಎಲ್ಲಿ ಬಂದಿದೆ ಎನ್ನುವುದು ಮುಖ್ಯವಲ್ಲ. ಏನು ಬಂದಿದೆ ಎನ್ನುವುದು ಮುಖ್ಯ. ಗಾಂಧೀಜಿಯವರಿಗೆ ಮೀರಾ ಬಹೆನರು ರಾಮಾಯಣ -ವನ್ನು ಕುರಿತ ಪತ್ರವೊಂದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬೇಕು : "I had about 40 minutes with the Ramayan last night. I had only got half way through Griffith's full translation when I left jail. I want to read it faithfully from cover to cover, so I am keeping it by me. It gives me extraordinary happiness and peace when I read it. It is something I cannot explain. And what joy it is to read the descriptions-the forests, the hermits, the animals, the birds, the peasants, the fields, the villages, the towns though four or five thousand years have gone by, it is all there in the heart still of this blessed land. Eve, since we came back from Europe, this time I have been feeling with double force (if it were possible) the deep, peaceful, eternal Joy of Hindu culture. And all the while it stirs in me a feeling of long past associations- it seems all something I have known and loved since time immemorial. Past births seem almost to stare me in the face sometimes. And you can imagine what the reading of the Ramayan means to me." ರಾಮಾಯಣವನ್ನು ಓದಿದವರೆಲ್ಲರಿಗೂ ಒಂದೇ ತೆರನಾದ ಭಾವನೆ ಬರಬೇಕು ಎಂದೇನೂ ಹೇಳುವಂತಿಲ್ಲ. ಸಾಗರದ ನೀರು ಅನಂತವಾಗಿದೆ. ನಮ್ಮ ಕೊಡದಲ್ಲಿ ತುಂಬುವಷ್ಟು ನಾವು ತುಂಬಿಕೊಳ್ಳೋಣ, ಬರಿ ಕೊಡ ಹೊತ್ತು ಮರಳುವುದು ಬೇಡ ಎಂದಿಷ್ಟೇ ನನ್ನ ಆಶಯ. ಈ ಪ್ರಕಟನೆಗೆ ಫಲಿಮಾರು ಶ್ರೀಪಾದರು ಮುನ್ನುಡಿ ಬರೆದು ಹರಸಿದ್ದಾರೆ. ಅವರು 'ಸಂಗ್ರಹ ರಾಮಾಯಣ' ಮೂಲವನ್ನು ಬರೆದ ನಾರಾಯಣ ಪಂಡಿತಾಚಾರ್ಯರ ವಂಶದವರು. ಆಚಾರ್ಯ ಮಧ್ವರ ಪೀಠವನ್ನು ಅಲಂಕರಿಸಿ ಕಡಗೋಲು ಕೃಷ್ಣನನ್ನು ಪೂಜಿಸಿದವರು, ಮೇಲಾಗಿ ಅವರ ಆರಾಧ್ಯದೈವ ರಾಮಚಂದ್ರನೇ ಆಗಿದ್ದಾನೆ. ಅವರು ನನ್ನಮೇಲಣ ಅತಿಶಯ ವಿಶ್ವಾಸದಿಂದ ನನ್ನ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅವರನ್ನು ಕುರಿತು ಏನನ್ನಾದರೂ ಬರೆವುದಕ್ಕೆ ಗೌರವಾದರಗಳಿಂದ ನನ್ನ ಮಾತು ಮೂಕವಾಗಿದೆ. ಅಂಥವರ ಹರಕೆ ಸದಾ ನನಗೆ ರಕ್ಷಕವಾಗಿರಲಿ. ಆಗ ನಾನು ಇನ್ನಷ್ಟು ಹುಮ್ಮಸದಿಂದ ಕೆಲಸಕ್ಕೆ ತೊಡಗಬಲ್ಲೆ. ಉಡುಪಿ ೨೯-೯-೧೯೫೯ ತಮ್ಮವನೆ ಬನ್ನಂಜೆ ಗೋವಿಂದಾಚಾರ್ಯ . ವಿಷಯಾನುಕ್ರಮಣಿಕೆ ೧ ಬಾಲ ಕಾಂಡ ೨ ಅಯೋಧ್ಯಾ ಕಾಂಡ ೩ ಅರಣ್ಯ ಕಾಂಡ ೪ ಕಿಷ್ಕಂಧಾ ಕಾಂಡ ೫ ಸುಂದರ ಕಾಂಡ ೬ ಯುದ್ಧ ಕಾಂಡ ೭ ಉತ್ತರ ಕಾಂಡ ಶ್ರೀನಾರಾಯಣಪಂಡಿತಾಚಾರ್ಯರ ಸ೦ಗ್ರಹ ರಾಮಾಯಣ ಬಾಲಕಾಂಡ ಬೆಳೆದುಬಂದ ಸೂರ್ಯವಂಶ ಬಹುಕಾಲದ ಹಿಂದಿನ ಮಾತು. ಭಗವಂತನು ತನ್ನ ಸೃಷ್ಟಿಲೀಲೆಯಲ್ಲಿ ತೊಡಗುವ ಮೊದಲಿನ ಮಾತು. ಆಗ ಎಲ್ಲಿ ನೋಡಿದರಲ್ಲಿ ಕಪ್ಪು ನೀರಿನ ಕಡಲೇ ಕಾಣಿಸುತ್ತಿತ್ತು. ಕಾಣುವುದೇನು ಬಂತು ? ಮಾನವ ಪ್ರಾಣಿಯೇ ಇಲ್ಲದ ಆ ಕಾಲದಲ್ಲಿ ಕಾಣುವ ಕಣ್ಣಾದರೂ ಎಲ್ಲಿಂದ ಬರಬೇಕು ? ರಮೆಯರಸನೊಬ್ಬನಲ್ಲದೆ ಇನ್ನಾವನೂ ಈ ಪ್ರಳಯ ಜಲಧಿಯ ಸೆಳೆತದಿಂದ ತಪ್ಪಿಸಿಕೊಳ್ಳಲಾರ. ಸೃಷ್ಟಿಯ ಆದಿಯಲ್ಲಿ ಕಡಲಿನಲ್ಲಿ ಕ್ರೀಡಿಸುತ್ತಿದ್ದ ಶ್ರೀಹರಿ ನಾಲ್ಕುಮೋರೆಯ ಮಗನೊಬ್ಬನನ್ನು ಸೃಜಿಸಿದನು. ಈ ಸೃಷ್ಟಿಚತುರನಾದ ಚತುರಾನನನಿಂದಲೇ ಸೃಷ್ಟಿ- ಕಾರ್ಯ ಮೊದಲಾಯಿತು. ಈ ಚತುರ್ಮುಖನಿಂದ ಪಂಚ ಮುಖನಾದ ರುದ್ರ ಜನಿಸಿದನು; ಸಪ್ತರ್ಷಿಗಳು ಜನಿಸಿದರು. ಸಪ್ತರ್ಷಿಗಳಲ್ಲಿ ಒಬ್ಬನಾದ ಮರೀಚಿಯ ಮಗನೇ ಕಶ್ಯಪ ಪ್ರಜಾಪತಿ, ಆದುದರಿಂದಲೇ ಅವನನ್ನು 'ಮಾರೀಚ' ಎನ್ನುವರು. ಮಾರೀಚನಿಂದ ಅದಿತಿಯಲ್ಲಿ- ಮಂತ್ರಪೂತವಾದ ಅರಣಿಯಲ್ಲಿ ಅಗ್ನಿ ಮೂಡಿಬರುವಂತೆ ಆದಿತ್ಯನ ಉದಯವಾಯಿತು. ಈ ಸೂರ್ಯದೇವನ ಮಗ ಶ್ರಾದ್ಧದೇವ. ಇವನನ್ನು 'ವೈವಸ್ವತ ಮನು' ಎಂದೂ ಕರೆಯುವರು. ಇವನಿಂದ ಇಕ್ಷ್ವಾಕುವೇ ಮೊದಲಾದ ಸೂರ್ಯವಂಶದ ರಾಜ ಪರಂಪರೆ ಬೆಳೆದು ಬಂದಿತು. ಈ ರಾಜರ್ಷಿಗಳ ಮಣಿಮಾಲಿಕೆಯಲ್ಲಿಯೆ ನಾಯಕ- ಮಣಿಯಂತೆ ದಶರಥ ಮಹಾರಾಜನು ಬೆಳಗಿ ಬಂದನು. ಅವನು ಸಪ್ತದ್ವೀಪಗಳಿಂದ ಕೂಡಿದ ಭೂಮಂಡಲದ ಚಕ್ರವರ್ತಿಯಾಗಿದ್ದನು. ಅಯೋಧ್ಯೆ ಅವನ ರಾಜಧಾನಿ ಯಾಗಿತ್ತು. ದಾನವೀರನೂ ಯುದ್ಧವೀರನೂ ಆದ ಮಹಾರಾಜನ ಬಳಿ ಆರ್ಥಿಗಳು ವಿಫಲರಾಗಿ ಹಿಂತೆರಳಿದುದೂ ಇಲ್ಲ; ಯುದ್ಧಕ್ಕೆಂದು ಬಂದು ಎದುರಿಸಿ ತಲೆಯೆತ್ತಿ ನಿಂತವರೂ ಇಲ್ಲ. ರಾಜನಿಗೆ ಮಕ್ಕಳಿಲ್ಲ ಎಂಬುದೊಂದಲ್ಲದೆ ಇನ್ನಾವ ದೂರೂ ಆ ರಾಜ್ಯದಲ್ಲಿ ಕೇಳಬರುತ್ತಿರಲಿಲ್ಲ. ಚಂದ್ರಮನಲ್ಲಿ ಕಲಂಕವೊಂದನ್ನಲ್ಲದೆ ಇನ್ನಾವ ದೂಷಣವನ್ನು ಹೇಳಲು ಸಾಧ್ಯ ? ಆತನಿಗೆ ಕೌಸಲ್ಯ-ಸುಮಿತ್ರೆ-ಕೈಕೇಯಿ ಎಂಬ ಮೂವರು ಮಡದಿಯರಿದ್ದರು. ಈ ಮೂವರು ಮಡದಿಯರಲ್ಲೂ ಕಾಲತಂತುವಾದ ಮಗನನ್ನು ಪಡೆಯದೆ ಚಿಂತಾತುರ- ನಾದ ರಾಜನು, ಅಶ್ವಮೇಧದಿಂದ ಭಗವಂತನನ್ನು ಒಲಿಸಿಕೊಳ್ಳುವುದಾಗಿ ಯೋಚಿಸಿದನು. ಭಕ್ತವತ್ಸಲನಾದ ಭಗವಂತನು ಪ್ರಸನ್ನನಾದನೆಂದರೆ ಅಲಭ್ಯವಾದು- ದಾದರೂ ಏನಿದೆ? ಎಂತಲೇ ಮಹಾರಾಜನು ಯಾಗದ ಮಂತ್ರ-ತಂತ್ರಗಳನ್ನು ಬಲ್ಲ ಬ್ರಾಹ್ಮಣರನ್ನೂ ಬ್ರಹ್ಮರ್ಷಿ- ಗಳೂ ಕುಲಗುರುಗಳೂ ಆದ ವಸಿಷ್ಠರನ್ನೂ ಕರೆತರುವಂತೆ ಸುಮಂತ್ರನಿಗೆ ಆಜ್ಞಾಪಿಸಿದನು. ಕ್ಷಾತ್ರತೇಜಸ್ಸು ಬ್ರಹ್ಮತೇಜಸ್ಸಿನೊಡನೆ ಬೆರೆತಾಗ ಗಾಳಿಯಿಂದ ಭುಗಿಲೆದ್ದ ಬೆಂಕಿಯಂತೆ ಪ್ರಜ್ವಲಿಸುವದಲ್ಲವೇ ? ಪುತ್ರಕಾಮೇಷ್ಟಿ ನಡೆಯಿತು ಸುಯಜ್ಞ, ವಾಮದೇವ, ಜಾಬಾಲಿ, ಕಶ್ಯಪ, ವಸಿಷ್ಠ ಈ ಐದು ಮಹರ್ಷಿಗಳು ಪಂಚಾಗ್ನಿಯಂತೆ ರಾಜಸಭೆಯಲ್ಲಿ ಕಂಗೊಳಿಸಿದರು. ಈ ಎಲ್ಲ ಮಹರ್ಷಿಗಳ ಒಪ್ಪಿಗೆಯನ್ನು ಪಡೆದು ಮಹಾರಾಜನು ಅಶ್ವಮೇಧಕ್ಕೆ ಅಣಿಗೊಳಿಸಿದನು. ಆಗ ಒಮ್ಮೆ ಏಕಾಂತದಲ್ಲಿ ಸುಮಂತ್ರನು ರಾಜನೊಡನೆ ಹೀಗೆಂದನು. "ಓ ಮಹಾರಾಜ, ಸನತ್ಕುಮಾರನು ಋಷಿಗಳಿಗೆ ಹಿಂದೊಮ್ಮೆ ಹೇಳಿದ ಕಥೆಯೊಂದನ್ನರುಹುವೆ, ಆಲಿಸು. 'ಮಹಾತಪಸ್ವಿಯಾದ ವಿಭಾಂಡಕ ಮಹರ್ಷಿಗೆ ಋಷ್ಯಶೃಂಗನೆಂಬ ಮಗನು ಜನಿಸುವನು. ಮುಂದೊಮ್ಮೆ ಅಂಗದೇಶದ ರಾಜನಾದ ಲೋಮಪಾದನ ರಾಜ್ಯದಲ್ಲಿ ಮಳೆ ಬರದೆ ಬರಗಾಲವುಂಟಾಗುವುದು: ಸುಂದರಿಯರಿಂದ ಪ್ರಲೋಭನಗೊಳಿಸಿ ಋಷ್ಯಶೃಂಗನನ್ನು ಅಲ್ಲಿಗೆ ಕರೆತರಿಸಿದಾಗ ಅಲ್ಲಿ ಮಳೆಯೂ ಬೆಳೆಯೂ ಉಂಟಾಗುವುದು. ಎಸಗಿದ ಉಪಕಾರಕ್ಕೆ ಮೂಲ್ಯವೆಂಬಂತೆ ಲೋಮಪಾದನು ತನ್ನ ಮಗಳಾದ ಶಾಂತೆಯನ್ನು ಋಷ್ಯಶೃಂಗನಿಗೆ ಧಾರೆಯೆರೆಯುವನು. ಮುಂದೆ ದಶರಥನೆಂಬ ರಾಜ ಕೂಡ ಇದೇ ಋಷ್ಯಶೃಂಗನಿಂದ ಯಾಗ ಮಾಡಿಸಿ, ಶ್ರೀಹರಿಯನ್ನೆ ಮಗನನ್ನಾಗಿ ಪಡೆಯುವನು. ರಾಮಭದ್ರನ ಯಶಶ್ಚಂದ್ರಿಕೆ ಲೋಕದ ತಮಸ್ಸನ್ನು ತೊಡೆದು ಪಾವನಗೊಳಿಸುವುದು' ಇದು ಸನತ್ಕುಮಾರನು ನುಡಿದ ದೇವಗುಹ್ಯ. ಆದ್ದರಿಂದ ರಾಜನ್, ಲೋಮಪಾದನ ಅರಮನೆಯಿಂದ ಋಷ್ಯಶೃಂಗ ಮಹರ್ಷಿಯನ್ನು ಬರಿಸು." ಸುಮಂತನ ಮಾತನ್ನಾಲಿಸಿದ ದಶರಥನು, ಕುಲಪುರೋಹಿತರಾದ ವಸಿಷ್ಠರ ಅಪ್ಪಣೆ ಪಡೆದು ತಾನೇ ಹೋಗಿ ಮಹರ್ಷಿ ಋಷ್ಯಶೃಂಗನನ್ನು ಕರೆತಂದನು. ಯಜ್ಞದ ಪ್ರಾರಂಭವೂ ಆಯಿತು. ಭೂಮಂಡಲವನ್ನು ಸುತ್ತುವರಿದ ವಿಜಯಾಶ್ವ, ಮರಳಿ ಬಂದುದೂ ಆಯಿತು. ಸರಯೂ ನದಿಯ ಉತ್ತರ ತೀರದಲ್ಲಿ ಯಾಗ ಭೂಮಿಯ ರಚನೆಯೂ ಪೂರ್ಣವಾಯಿತು. ಕರ್ಮಕಾಂಡದಲ್ಲಿ ಪಂಡಿತರಾದ ವಸಿಷ್ಠ, ಋಷ್ಯಶೃಂಗರ ನೇತೃತ್ವದಲ್ಲಿ ಯಾಗವು ಸಾಂಗವಾಯಿತು. ಯಜಮಾನ ದಶರಥ ಮಹಾರಾಜ, ಪುರೋಹಿತರು ಬ್ರಹ್ಮಪುತ್ರರಾದ ಮಹರ್ಷಿ ವಸಿಷ್ಠ ಭಗವತ್ಪಾದರು ಮತ್ತು ಋಷ್ಯಶೃಂಗ ಮಹರ್ಷಿ. ರಾಮಚಂದ್ರಮನ ಉದಯವೇ ಈ ಯಾಗದ ಫಲ. ಅಂಥ ಯಾಗವನ್ನು ಬಣ್ಣಿಸುವ ಬಾಯಾದರೂ ಎಲ್ಲಿದೆ ? ಮಹಾರಾಜ ದಶರಥನು ಪುರೋಹಿತರಿಗೆ, ಋತ್ವಿಜರಿಗೆ, ಹೇರಳವಾಗಿ ಗೋವುಗಳನ್ನೂ ಬೆಳ್ಳ ಬಂಗಾರವನ್ನೂ ಧಾರೆಯೆರೆದನು. 'ಶ್ರೀಹರಿ ಪ್ರಸನ್ನನಾಗಲಿ' ಎಂದು ಎಲ್ಲ ವಿಪ್ರೋತ್ತಮರಿಗೂ ತಲೆವಾಗಿ ವಂದಿಸಿದನು. ಅಶ್ವಮೇಧ ಯಾಗ ಮುಗಿದ ನಂತರ ಋಷ್ಯಶೃಂಗರು ಪುತ್ರಕಾಮೇಷ್ಟಿ- ಯನ್ನು ಮಾಡಲು ತೊಡಗಿದರು. ಯಾಗದ ಹವಿಸ್ಸನ್ನು ಸ್ವೀಕರಿಸಲು ಎಲ್ಲ ದೇವತೆಗಳೂ ಮೈವೆತ್ತು ಬಂದಿದ್ದರು. ಹವಿಸ್ಸನ್ನೀಯುತ್ತಾ ದೇವತೆಗಳನ್ನು ಕುರಿತು ಮಹರ್ಷಿಗಳು ಹೀಗೆಂದರು. "ದಶರಥನು ಮಕ್ಕಳ ಹಂಬಲಿನಿಂದ ನಿಮಗೆ ಶರಣು ಬಂದಿದ್ದಾನೆ. ಅವನ ಮೇಲೆ ದಯದೋರಿರಿ. ಮೂರು ಲೋಕಗಳಲ್ಲಿಯೂ ಅಸಮಾನರಾದ ಮಕ್ಕಳನ್ನು ಇವನು ಅಪೇಕ್ಷಿಸುತ್ತಾನೆ. ಓ ಅಮೃತವನ್ನುಣ್ಣುವವರೆ, ದೇವಕಾರ್ಯದ ಸಿದ್ಧಿಗಾಗಿಯಾದರೂ ನೀವಿದನ್ನು ಅನುಮೋದಿಸಬೇಕು." ಋಷಿಯಿಂದ ಪ್ರಾರ್ಥಿತರಾದ ದೇವತೆಗಳು ಹಾಗೇ ಆಗಲೆಂದು ವರವಿತ್ತು ಬ್ರಹ್ಮಲೋಕಕ್ಕೆ ತೆರಳಿದರು. ಅಲ್ಲಿ ಬ್ರಹ್ಮನನ್ನು ವಂದಿಸಿ ಹೀಗೆ ಬೇಡಿಕೊಂಡರು: "ಓ ದೇವತೆಗಳರಸನೆ, ಅನಾಥರಾದ ಪ್ರಜೆಗಳನ್ನು ಪಾಲಿಸು. ಅವರುರಾಕ್ಷಸರಿಂದ ಪೀಡಿತರಾಗಿದ್ದಾರೆ. ವಿಶ್ರವಸನ ಮಕ್ಕಳಾದ ರಾವಣ-ಕುಂಭಕರ್ಣರು ನಿನ್ನ ವರದಿಂದಲೆ ಸಾವಿಲ್ಲದವರಾಗಿದ್ದಾರೆ. ಲೋಕಪೀಡಕನಾದ ರಾವಣನ ಸಾಮ್ರಾಜ್ಯ ದಿಸೆದಿಸೆಗಳಲ್ಲೂ ಹಬ್ಬಿದೆ. ಸಿಂಹವು ಕಾಡಿ- ನಲ್ಲಿರುವ ಕ್ಷುದ್ರ ಮೃಗಗಳನ್ನು ಮರ್ದಿಸುವಂತೆ ಅವನು ಜಗತ್ತನ್ನು ಮರ್ದಿಸುತ್ತಿದ್ದಾನೆ. ಜಗತ್ತಿನ ಯಾವುದೇ ಒಂದೆಡೆಯಲ್ಲಿ ಸುಂದರ ವಸ್ತುವೊಂದಿದ್ದರೆ ಅದನ್ನು ಲಂಕೆಯಲ್ಲಿ ತಂದಿರಿಸಿಕೊಂಡಿದ್ದಾನೆ. ಸ್ತ್ರೀರತ್ನವನ್ನು ಅಪಹರಿಸುವುದರಲ್ಲಿ ಅವನ ಜಾಣತನ ಹೇಳತೀರದು. ಕುಲಸ್ತ್ರೀಯರ ದೂಷಣೆ ತನಗೊಂದು ಭೂಷಣವೆಂಬಂತೆ ನಡೆದುಕೊಳ್ಳುತ್ತಿದ್ದಾನೆ. ಆತನ ಸಾಮ್ರಾಜ್ಯದಲ್ಲಿ ತಪಸ್ಸಿಗೆಡೆಯಿಲ್ಲ. ಸ್ವಾಧ್ಯಾಯಕ್ಕೆ ತಾಣವಿಲ್ಲ. ವಿಪ್ರರಿಗೆ ಇರವಿಲ್ಲ. ಧರ್ಮವನ್ನು ಕೇಳುವವರಿಲ್ಲ.ಅಧರ್ಮ ಗರಿಗೆದರಿ ನಿಂತಿದೆ. ಎಲ್ಲ ದಿಕ್ಷಾಲಕರೂ- ಆನೆಯನ್ನು ಕಂಡೋಡಾಡುವ ಜಂತುವಿನಂತೆ ಅವನೆದುರು ಹೇಡಿಗಳಾಗಬೇಕಾಗಿದೆ. ಇವನನ್ನು ಕೊಲ್ಲುವ ಉಪಾಯ- ವನ್ನು ಹುಡುಕದಿದ್ದರೆ, ಕಾಲರುದ್ರನಿಲ್ಲದೆಯೇ ಜಗತ್ತು ಪ್ರಳಯದ ಮುಖವನ್ನು ಕಂಡೀತು"! ದೇವತೆಗಳ ಮಾತನ್ನಾಲಿಸಿದ ಬ್ರಹ್ಮನು ಅವರನ್ನು ಸಮಾಧಾನಗೊಳಿಸಿದನು . 'ನಾವೆಲ್ಲರೂ ಯಾರಿಂದ ಉಸಿರೆಳೆಯುತ್ತಿರುವೆವೋ ಯಾವನು ನಮ್ಮೆಲ್ಲರ ಯೋಗಕ್ಷೇಮದ ಹೊರೆಯನ್ನು ಹೊತ್ತಿರುವನೋ ಆ ಕರುಣಾಳು ಶ್ರೀಹರಿ ನಮಗೆಲ್ಲರಿಗೂ ಮಂಗಳವನ್ನು ಮಾಡುವನು.' ಹೀಗೆ ನುಡಿದು ದೇವತೆಗಳೊಡನೆ ಕ್ಷೀರಸಮುದ್ರಕ್ಕೆ ತೆರಳಿದನು. ತೆರೆಗಳಿಂದ ಕುಪ್ಪಳಿಸುತ್ತಿರುವ ಕಡಲಿನ ದಡದಲ್ಲಿ ನಿಂತು ದೇವತೆಗಳೆಲ್ಲ ಒಕ್ಕೊರಲಿನಿಂದ ಶ್ರೀಹರಿಯನ್ನು ತುತಿಸಿದರು: "ಓ ಶೇಷನಲ್ಲಿ ಪವಡಿಸಿದವನೆ, ಆದಿ, ಅಂತಗಳಿಲ್ಲದ ಲೀಲಾಲೋಲನಾದ ನಾರಾಯಣನೆ, ನಿನಗೆ ವಂದನೆ. ಜಗತ್ತಿನ ಸೃಷ್ಟ್ಯಾದಿಗಳೆಲ್ಲ ನಿನ್ನೊಬ್ಬ ನಿಂದಲೆ ಆಗುತ್ತಿವೆ. ನಿನ್ನ ಗುಣಗಳನ್ನು ಕೊಂಡಾಡುವ ಯೋಗ್ಯತೆ ನಮಗಿಲ್ಲ. ಓ ಕರುಣಾಳು ನಾರಾಯಣನೆ, ರಾವಣನೆಂಬ ಬೆಂಕಿ ಜಗತ್ತನ್ನೇ ಸುಡುತ್ತಿದೆ.ನೀನು ದಾಶರಥಿಯಾಗಿ ಜನಿಸಿ, ನಿನ್ನ ಬೀರದ ತೊರೆಗಳಿಂದ ಆ ಜ್ವಾಲೆಯನ್ನು ನಂದಿಸಬೇಕಾಗಿದೆ. ನಿನ್ನ ಭಕ್ತರ ಸಂಕಟವನ್ನು ಪರಿಹರಿಸಬೇಕಾಗಿದೆ." ದೇವತೆಗಳಿಂದ ಸ್ತುತನಾದ ನಾರಾಯಣನು ದಿವ್ಯ ರೂಪಧರನಾಗಿ ಅವರೆದುರು ಮೈದೋರಿದನು. ದಶರಥನಿಗೆ ಮಕ್ಕಳಾದರು ಶ್ರೀಹರಿಯ ತಿಳಿನಗೆಯ ಬೆಳದಿಂಗಳೇ ದೇವತೆಗಳನ್ನು ಸಂತೋಷಗೊಳಿಸಿತು. ಆತನ ಮೇಘಗಂಭೀರವಾದ ವಾಣಿ ಅವರ ಭಯವನ್ನು ತೊಲಗಿಸಿತು. "ಓ ದೇವತೆಗಳಿರಾ, ನೀವು ನಿಶ್ಚಿಂತರಾಗಿ ಹಿಂತೆರಳಿರಿ. ರಾವಣನನ್ನು ಕೊಲ್ಲುವ ಭಾರ ನನ್ನ ಮೇಲಿರಲಿ. ನಿಮ್ಮ ಶತ್ರು ಬದುಕಿಲ್ಲವೆಂದೇ ಬಗೆಯಿರಿ." ಅಮೃತಧಾರೆಯಂತೆ ಮಧುರವಾದ ಮಾತಿನಿಂದ ಸಂತಸಗೊಂಡ ಸಗ್ಗಿಗರು ಸ್ವರ್ಗಕ್ಕೆ ಮರಳಿದರು. ಇತ್ತ ರಾಜನ ಯಾಗಾಗ್ನಿಯಲ್ಲಿ ಬ್ರಹ್ಮನ ಸನ್ನಿಧಾನವುಳ್ಳ ಒಬ್ಬ ಪುರುಷ, ಹರಿಯ ಅಪ್ಪಣೆಯಂತೆ ಮೂಡಿ ಬಂದನು. ಅವನು ಕೈಯಲ್ಲಿದ್ದ ಬಂಗಾರದ ಪಾತ್ರೆಗೆ ಪಾಯಸವನ್ನು ತುಂಬಿ 'ಇದರಿಂದ ಮಕ್ಕಳನ್ನು ಪಡೆ' ಎಂದು ಅದನ್ನು ರಾಜನಿಗೆ ಕೊಟ್ಟನು. ಅನಂತರ ಅಗ್ನಿಯಲ್ಲಿ ಲೀನವಾ ದನು. ರಾಜನು ಆ ಪಾಯಸವನ್ನು ಸರಿಯಾಗಿ ಎರಡು ಪಾಲುಮಾಡಿ ಒಂದನ್ನು ಪಟ್ಟಮಹಿಷಿಯಾದ ಕೌಸಲ್ಯಗೆ ಕೊಟ್ಟನು. ಉಳಿದ ಅರ್ಧಭಾಗವನ್ನು ಇನ್ನೆರಡು ಪಾಲುಮಾಡಿ ಒಂದಂಶವನ್ನು ಸುಮಿತ್ರೆಗೆ ಕೊಟ್ಟು, ಉಳಿದುದನ್ನು ಮತ್ತೆ ಎರಡು ಪಾಲುಮಾಡಿ ಅದರಲ್ಲಿ ಒಂದು ಪಾಲನ್ನು ಕೊನೆಯ ಮಡದಿಯಾದ ಕೈಕೇಯಿಗೂ ಇನ್ನೊಂದು ಪಾಲನ್ನು ಪುನ: ಸುಮಿತ್ರೆಗೂ ಕೊಟ್ಟನು. ಕ್ರಮೇಣ ರಾಣಿಯರು ಗರ್ಭಿಣಿಯರಾದರು. ಶ್ರೀಹರಿಯ ಅವತಾರ ಕಾಲ ಸನ್ನಿಹಿತವಾದುದನ್ನು ಅರಿತ ಬ್ರಹ್ಮ, ದೇವತೆಗಳನ್ನು ಕರೆದು ನುಡಿದನು. "ಶ್ರೀಹರಿ ಪೂರ್ಣಕಾಮನು; ಆದರೂ ಭೂಮಿಯಲ್ಲಿ ಅವತರಿಸುವನು- ಅದು ನಿಮ್ಮ ಇಷ್ಟವನ್ನು ಪೂರಯಿಸುವುದಕ್ಕಾಗಿ, ನೀವೂ ಭೂಮಿಯಲ್ಲಿ ಜನಿಸಿ ಅವನ ಸೇವೆಗೆ ಅಣಿಯಾಗಿರಿ, ಮಂಗಗಳಾಗಿ-ಕರಡಿಗಳಾಗಿ ನೀವು ಜನಿಸಬೇಕು, ಯಮಧರ್ಮರಾಜನು ಮೊದಲೇ ನನ್ನ ಮುಖದಿಂದ ಜಾಂಬವಂತನಾಗಿ ಹುಟ್ಟಿದ್ದಾನೆ." ಬ್ರಹ್ಮನ ಆಣತಿಯಂತೆ ದೇವತೆಗಳು ವಿವಿಧ ರೂಪದಿಂದ ಭೂಮಿಗಿಳಿದು ಬಂದರು. ಹರಿಭಕ್ತರಲ್ಲಿ ಅಗ್ರಗಣ್ಯನೂ ಜೀವೋತ್ತಮನೂ ಆದ ಮುಖ್ಯಪ್ರಾಣನು ಹನುಮಂತ- ನಾದನು. ಇಂದ್ರನು ವಾಲಿಯಾದರೆ, ಚಂದ್ರನು ಅವನ ಮಗ ಅಂಗದನಾಗಿ ಜನಿಸಿದ. ಸೂರ್ಯದೇವನು ಸುಗ್ರೀವ- ನಾದನು. ಅಗ್ನಿದೇವ ನೀಲನೆಂಬ ಕಪಿಯಾದನು. ವರುಣನೂ ವಿಶ್ವಕರ್ಮನೂ ಸುಷೇಣ-ಅನಲರಾಗಿ ಜನಿಸಿದರು. ಅಶ್ವಿನೀಕುಮಾರರು ಮೈಂದ -ವಿವಿದರಾದರು. ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನರು, ಗಜ-ಗವಾಕ್ಷ-ಗವಯ-ವೃಷ-ಗಂಧಮಾದನರಾದರು. ಪನಸನೂ ಶತಬಲಿಯೂ ವಸ್ವಂಶ ಸಂಭೂತರು. ಮರುತ್ತುಗಳಲ್ಲಿ ಇಬ್ಬರು ಶ್ವೇತ-ಸಂಪಾತಿಗಳಾದರು.ಬೃಹಸ್ಪತ್ಯಾಚಾರ್ಯರೇ ತಾರನಾಗಿ ಜನಿಸಿದರು. ಮಹೇಂದ್ರನ ಪಟ್ಟದರಸಿ ಶಚಿಯೇ ತಾರೆಯಾದಳು. ಕುಬೇರನು ಕತ್ಥನನಾಗಿಯೂ ನಿರ್ಋತಿಯು ದುರ್ಮುಖನಾಗಿಯೂ ಜನಿಸಿದರು. ಆಂಜನೇಯನ ತಂದೆಯಾದ ಕೇಸರಿ ಕೂಡ ವಾಯ್ವಂಶಸಂಭೂತನೇ. ಪರ್ಜನ್ಯದೇವನೇ ಶರಭನಾದನು. ಹೀಗೆಯೇ ಋಷಿಗಳೂ ಗಂಧರ್ವರೂ ಸಿದ್ಧರೂ ಶ್ರೀಹರಿ- ಸೇವೆಗೆ ಬದ್ಧಕಂಕಣರಾಗಿ ಕಾಡುಕಪಿಗಳಾಗಿ ಭೂಮಿ- ಯಲ್ಲೆಲ್ಲ ಜನಿಸಿದರು. ಈ ಕಪಿಗಳೇನು ಸಾಮಾನ್ಯರೆ! ಸಿಟ್ಟುಗೊಂಡಾಗ ಭೂಮಿಯನ್ನೇ ಭೇದಿಸಿಯಾರು ! ಪರ್ವತಗಳನ್ನೇ ನೆಗೆದಾರು ! ಸಾವಿರಾರು ಆನೆಗಳ ಬಲ ಒಬ್ಬೊಬ್ಬ ಕಪಿಗೆ, ಉಗುರನ್ನಲ್ಲದೆ ಇನ್ನೊಂದಾಯುಧ- ವನ್ನು ಅವರು ಬಳಸಿದುದಿಲ್ಲ. ಇತ್ತ ವೈವಸ್ವತಮನ್ವಂತರದ ತ್ರೇತಾಯುಗದ ಒಂದು ಉತ್ತರಾಯಣದಲ್ಲಿ, ಚೈತ್ರಶುದ್ಧ ನವಮಿಯ ದಿನ ಹಗಲು- ಹೊತ್ತು, ಪುನರ್ವಸು ನಕ್ಷತ್ರದಲ್ಲಿ, ಗುರು ಚಂದ್ರರ ಉದಯವಾದಾಗ, ಕರ್ಕಾಟಕಲಗ್ನದಲ್ಲಿ ಸೂರ್ಯನು ಮೇಷರಾಶಿಯಲ್ಲಿದ್ದಾಗ, ಅಂಗಾರಕ, ಬುಧ, ಗುರು, ಶುಕ್ರ, ಶನಿ, ಈ ಐದು ಗ್ರಹಗಳು ಕ್ರಮವಾಗಿ ತಮಗೆ ಉಚ್ಚಸ್ಥಾನ- ವಾದ ಮಕರ, ಕನ್ಯಾ, ಕರ್ಕಾಟಕ, ಮೀನ, ತುಲಾರಾಶಿ- ಯಲ್ಲಿದ್ದಾಗ ಕೌಸಲ್ಯೆಯ ಗರ್ಭದಿಂದ ಪರತತ್ವದ ಆವಿರ್ಭಾವ ವಾಯಿತು. ಸಜ್ಜನರ ಹೃದಯ ಅರಳಿತು. ದುರ್ಜನರ ಮನಸ್ಸು ಮುದುಡಿತು. ದೇವತೆಗಳ ಕುಸುಮವೃಷ್ಟಿ ಅಯೋಧ್ಯೆಯನ್ನು ಮುಸುಕಿತು. ಸೂರ್ಯನು ಕರ್ಕಾಟಕಕ್ಕೆ ಬಂದಾಗ, ಆಷಾಢಮಾಸದಲ್ಲಿ, ಆಶ್ಲೇಷಾ ನಕ್ಷತ್ರದಲ್ಲಿ, ಹರಿಯ ಹಾಸುಗೆಯಾದ ಶೇಷನು, ಸುಮಿತ್ರೆಯ ಮಗನಾಗಿ ಜನಿಸಿದನು. ಪುಷ್ಯ ನಕ್ಷತ್ರದಲ್ಲಿ ಕೈಕೇಯಿಯು ಹರಿಯ ಚಕ್ರಾಯುಧವನ್ನೇ ಮಗನನ್ನಾಗಿ ಪಡೆದಳು; ಹರಿಯ ಶಂಖರೂಪನಾದ ಅನಿರುದ್ಧನು ಸುಮಿತ್ರೆಯ ಎರಡನೆಯ ಮಗನಾಗಿ ಜನಿಸಿದನು. ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧ ಎಂಬ ಶ್ರೀಹರಿಯ ನಾಲ್ಕು ರೂಪ- ಗಳಲ್ಲಿ ವಾಸುದೇವನೇ ರಾಮನಾದನು, ಲಕ್ಷ್ಮಣ-ಭರತ-ಶತ್ರುಘ್ನರಲ್ಲಿ ಉಳಿದ ಮೂರು ರೂಪಗಳ ಸನ್ನಿಧಾನವಿತ್ತು, ಎಂದು ಬಲ್ಲವರ ಮತ. ರಾಜನಿಗೆ ಮಕ್ಕಳಾದುವು ಬಡವ- ನಿಗೆ ನಿಧಿ ದೊರೆತಂತಾಯಿತು. ಅಯೋಧ್ಯೆಯ ಮನೆಮನೆ- ಯಲ್ಲೂ ಈ ಸಂತಸದ ವಾರ್ತೆಜನರನ್ನು ಪುಲಕಿತ- ಗೊಳಿಸಿತು. ಗಂಡಸರೂ-ಹೆಂಗಸರೂ-ಎಲ್ಲ ಪುರಜನರೂ ಆನಂದದಿಂದ ಮತ್ತರಾಗಿ ಹಾಡಿದರು, ನಲಿದಾಡಿದರು. ರಾಜನು ಪುರೋಹಿತರಿಂದ ಮಕ್ಕಳಿಗೆ ಜಾತಕರ್ಮ ಮಾಡಿಸಿದನು. ನಾಮಕರಣವೂ ನಡೆಯಿತು. ಮೊದಲನೆಯ ಕುಮಾರನಿಗೆ ರಾಮನೆಂದು ಹೆಸರಿಟ್ಟರು. ಆತ್ಮಾರಾಮನಾದ ಹರಿಗೆ ಒಪ್ಪಾದ ಹೆಸರಲ್ಲವೆ ? ರಾಜ್ಯದ ರಮಣಿಯರ ಮನವನ್ನು ಸೆಳೆದ ಈ ಕೂಸನ್ನು 'ರಾಮ' ಎಂದು ಕರೆವುದೇ ಚೆನ್ನಲ್ಲವೆ ? ಸುಮಿತ್ರೆಯ ಮೊದಲ ಮಗನಿಗೆ ಲಕ್ಷ್ಮಣನೆಂದು ಹೆಸರಿ- ಟ್ಟರು . ಸಾಧುಗಳ ಲಕ್ಷಣದಿಂದ ಕೂಡಿದ ಈ ಕುಮಾರನಿಗೆ ಅನ್ವರ್ಥವಾದ ಹೆಸರಲ್ಲವೆ ಇದು? ಶತ್ರುಮರ್ದನನಾದ ಪಾಂಚಜನ್ಯನು ಇಲ್ಲಿ ಶತ್ರುಘ್ನನಾದ. ಕೈಕೇಯಿಯ ಮಗನನ್ನು ಭರತನೆಂದು ಕರೆದರು. ಗರ್ಭದಿಂದ ಹೊಮ್ಮುವಾಗಲೇ ರಾಮಚಂದ್ರನ ಮೇಲೆ ಭಕ್ತಿಭರಿತನಾದ ಇವನಿಗೆ ಈ ಹೆಸರು ಸಾರ್ಥಕವಾಯಿತು. ನಾಲ್ವರೂ ದೇವಸೇನಾನಿ ಸ್ಕಂದನಂತೆ ಮುದ್ದಾಗಿ ಬೆಳೆದರು. ಸಕಾಲದಲ್ಲಿ ಉಪನಯನವನ್ನು ಪಡೆದ ಈ ಸೋದರರು, ವೇದ-ವೇದಾಂಗಗಳಲ್ಲೂ, ಅಸ್ತ್ರ-ಶಸ್ತ್ರ ವಿದ್ಯೆ- ಯಲ್ಲೂ ಪಾರಂಗತರಾದರು. ಆಟ ಪಾಟಗಳಲ್ಲೆಲ್ಲ ರಾಮ- ಲಕ್ಷ್ಮಣರದು ಒಂದು ಜತೆಯಾದರೆ, ಭರತಶತ್ರುಘ್ನರದೇ ಇನ್ನೊಂದು ಜತೆ. ಹೀಗೆ ನಾಲ್ವರು ಕುಮಾರರೂ ಲೋಕಮಂಗಲರಾಗಿ ಬೆಳೆದರು. ಅವರು ತಮ್ಮ ತಂದೆಯ ಪ್ರಾಣವಾಗಿದ್ದರು. ಗುರುವಿನ ಕಿಂಕರರಾಗಿದ್ದರು. ಜಗತ್ತಿನ ಅಧಿದೈವ- ವಾಗಿದ್ದರು. ತಾಯಂದಿರ ಹೆಮ್ಮೆಯ ಮಕ್ಕಳಾಗಿದ್ದರು. ಪುಟ್ಟ ಕೂಸನ್ನು ಕಾಡಿಗಟ್ಟುವುದೆ ? ಹೀಗಿರಲು ಒಮ್ಮೆ ಅಕಸ್ಮಾತ್ತಾಗಿ ವಿಶ್ವಾಮಿತ್ರಮುನಿಯು ರಾಜಸಭೆಯಲ್ಲಿ ಕಾಣಿಸಿಕೊಂಡನು. ಬಂದ ಮುನಿಗೆ ಆಸನ ಕೊಟ್ಟು ಉಪಚರಿಸಿದ ರಾಜ ವಿಷಯವನ್ನು ಪ್ರಸ್ತಾಪಿಸಿದನು; "ಭಗವದ್ಭಕ್ತರಾದ ನೀವು ಪರಿಪೂರ್ಣರು. ಆದರೂ ನಾವು ನಮ್ಮ ಒಳಿತಿಗಾಗಿ ನಿಮ್ಮ ಕೋರಿಕೆಯನ್ನು ಪೂರಯಿಸು- ವೆವು. ನೀವು ಸೂರ್ಯನಂತೆ ಲೋಕವನ್ನು ಬೆಳಗಿಸಲು ತಿರುಗುತ್ತಿರುವ ತೇಜಃಪುಂಜಗಳು. ತಾವು ಬಂದ ಉದ್ದೇಶವನ್ನು ಅಪ್ಪಣೆ ಕೊಡಬೇಕು. " ರಾಜನ ಮಾತನ್ನಾಲಿಸಿದ ಮಹರ್ಷಿ ಬಂದ ಉದ್ದೇಶವನ್ನು ತಿಳಿಸಿದನು. "ರಾಜನ್, ಮಹಾತ್ಮನಾದ ನಿನ್ನ ಬಾಯಿಂದ ಇಂಥ ಮಾತುಗಳೇ ಬಂದಾವು. ಸೌಜನ್ಯ, ದೊಡ್ಡಸ್ತಿಕೆಯ ಗುಣ, ಆದಿರಲಿ. ಇಬ್ಬರು ರಕ್ಕಸರು ನನ್ನ ಯಜ್ಞಕ್ಕೆ ತಡೆಯಾಗಿದ್ದಾರೆ. ನಾನು ಯಜ್ಞರಕ್ಷಣೆಯನ್ನು ನಿನ್ನಿಂದ ಬಯಸುತ್ತೇನೆ. ರುದ್ರನ ವರದಿಂದ ಅವರು ಅವಧ್ಯರಾಗಿ- ದ್ದಾರೆ. ನೀರಿಗೆಸೆದ ಬೆಂಕಿಯಕೊಳ್ಳಿಯಂತೆ ನನ್ನ ಶಾಪ ಕೂಡ ಅವರಲ್ಲಿ ಫಲಿಸದಾಗಿದೆ. ಈ ಪೀಡೆಯನ್ನು ನಿನ್ನ ಮಗ ರಾಮಚಂದ್ರ ತೊಲಗಿಸಬೇಕು. ಅವನನ್ನು ನನ್ನೊಡನೆ ಕಳುಹಿಸಿಕೊಡು, ನಿನಗೆ ಮಂಗಳವಾಗುವುದು, ನಿನ್ನ ಕುಮಾರನ ತೇಜಸ್ಸನ್ನು ವೇದಗಳೂ ಕೊಂಡಾಡುತ್ತಿವೆ. ಅವನೆದುರು ದೈತ್ಯರೂ ದೇವತೆಗಳೂ ಮಣಿಯುತ್ತಿದ್ದಾರೆ. ಅದು ನನಗೆ ಗೊತ್ತು, ನಿನ್ನವರಾದ ವಸಿಷ್ಠಾದಿಗಳಿಗೂ ಗೊತ್ತು." ಮಹರ್ಷಿಯ ವಚನದಿಂದ ರಾಜನಿಗೆ ದಿಗಿಲಾಯಿತು. ಮಗನ ವಿರಹದ ಯೋಚನೆಯೇ ಅಸಹ್ಯವಾಗಿ ಕಂಡಿತು. ದೀನನಾದ ರಾಜ, ಮುನಿಯೆದುರು ದೈನ್ಯದ ಮಾತನ್ನೇ ನುಡಿದ. " ಓ ಮಹರ್ಷಿಯ, ಸುಖದಲ್ಲಿ ಬೆಳೆದ ಎನ್ನ ಕಂದನನ್ನು ಕೊಂಡೊಯ್ಯಬೇಡ, ಅವನು ಅಸ್ತ್ರ ಪಾಟವವನ್ನು ಎದ ಅರಿಯದಕೂಸು. ಯುದ್ಧದಲ್ಲಿ ಇನ್ನೂ ಪಳಗದವನು. ಒಂಬತ್ತು ಸಾವಿರ ವರ್ಷಗಳ ಕಾಲ ಮಕ್ಕಳಿಗಾಗಿ ಪರಿತಪಿಸಿ-ಪರಿತಪಿಸಿ ಈ ಕುಮಾರನನ್ನು ಪಡೆದಿದ್ದೇನೆ. ಓ ಕರುಣಾಳು ಮುನಿಯೆ, ನಾನು ರಾಮನನ್ನು ತೊರೆದು ಒಂದರೆಗಳಿಗೆಯೂ ಬದುಕಲಾರೆ. ರಾಮನೆಂದರೆ ನನ್ನ ಪ್ರಾಣವೇ, ಈ ನನ್ನ ಪ್ರಾಣಗಳನ್ನು ಕಸಿಯಬೇಡ. ಮಹರ್ಷಿಯೆ, ಮಾಯಾವಿಗಳಾದ ರಾಕ್ಷಸರನ್ನು ಕೊಲ್ಲಲು ಸೇನಾಸಮೇತನಾಗಿ ನಾನೇ ಬರುವೆನು. ಅವರೇನಾದರೂ ರಾವಣನ ಕಡೆಯವರಾಗಿ- ದ್ದರೆ -ಹಾಗಿದ್ದರೆ ನಮಗೆಲ್ಲರಿಗೂ ಅಳಿಗಾಲ ಬಂತೆಂದೇ ಅರ್ಥ. ಜಗತ್ತು ಬುಡಮೇಲಾಗುವ ಕಾಲ ಸಮೀಪಿಸಿತೆಂದೇ ಅರ್ಥ ! ಯಾರ ಹೆಸರನ್ನು ಕೇಳಿಯೇ ಇಂದ್ರಾದಿಗಳೂ ಬೆದರುವರೋ ಅಂಥವನೊಡನೆ ವೈರ ಹೇಗೆ ಸಾಧ್ಯ ? ಚಿಂತಿಸು ಓ ಮಹರ್ಷಿಯೆ. ಆದರೆ ಈ ಕ್ಷತ್ರಿಯ ದೇಹ ಗೋವುಗಳ, ಬ್ರಾಹ್ಮಣರ ಹಿತಕ್ಕಾಗಿ ಮೀಸಲಾಗಿದೆ. ಪ್ರಾಣ ಇರುವತನಕ ನಿಮ್ಮ ವೈರಿಗಳೊಡನೆ ಹೋರಾಡಬಲ್ಲೆ. ಈ ಮೈ ನಿಮ್ಮದು." ಮುನಿಯು ಈ ಮಾತನ್ನು ಕೇಳಿ-ತುಪ್ಪ ಸುರುವಿದ ಬೆಂಕಿಯಂತೆ ಉರಿದೆದ್ದನು. ವಿಶ್ವಾಮಿತ್ರನ ಮುನಿಸು ಕೇಳಬೇಕೆ ? ಈ ಕೋಪೋದ್ರೇಕವನ್ನು ಕಂಡ ವಸಿಷ್ಠರು ರಾಜನ ಬಳಿ ಹೀಗೆಂದು ನುಡಿದರು… "ರಾಜನ್, ಅತಿಥಿಗಳಾದ ಮಹರ್ಷಿಗಳಿಗೆ ನೀನು ಮಾತು ಕೊಟ್ಟಿಲ್ಲವೆ ನಿಮ್ಮ ಅಪೇಕ್ಷೆಯನ್ನು ಪೂರಯಿಸುವೆನೆಂದು ? ಅತಿಥಿಯಾಗಿ ಬಂದ ಶ್ರೋತ್ರೀಯನಾದ ವಿಪ್ರನಿಗೆ ಕೊಟ್ಟ ಮಾತಿಗೆ ತಪ್ಪುವೆಯಾ ? ನಿನ್ನ ಮಗನ ಮಹಿಮೆ ನಿನಗರಿಯದು. ಅವನ ಕೋಪದ ಕಿಡಿಗಣ್ಣು ಬ್ರಹ್ಮಾಂಡವನ್ನೆ ಸುಟ್ಟಿತು. ಪರಮ ವೈಷ್ಣವನಾದ ವಿಶ್ವಾಮಿತ್ರನೇನು ಸಾಮಾನ್ಯನೆ ? ದಕ್ಷನ ಮಕ್ಕಳಾದ ಜಯ-ಸುಪ್ರಭೆಯರಲ್ಲಿ ಹುಟ್ಟಿರುವ ನೂರು ಅಸ್ತ್ರ ವಿದ್ಯೆಗಳನ್ನೂ ಈತ ಬಲ್ಲ. ಆದ್ದರಿಂದ ಈ ಬ್ರಹ್ಮರ್ಷಿಯೊಡನೆ ರಾಮನನ್ನು ಹೋಗಗೊಡು. ಈ ಭಕ್ತವತ್ಸಲನೂ ಈ ಭಕ್ತನೂ ಸೇರಿ ಒಂದು ಮಹಾ ಕಾರ್ಯವಾಗಲಿದೆ. ರಾಜನ್, ರಾಕ್ಷಸ ಕುಲದ ಸಂಹಾರವಾಗಲಿದೆ, ಯಜ್ಞ- ಕಾರ್ಯದ ರಕ್ಷಣೆಯಾಗಲಿದೆ, ಹೋಗಗೊಡು ಅವರನ್ನು." ಮಹರ್ಷಿ ವಸಿಷ್ಠರ ಮಾತು ಮಹಾರಾಜನಿಗೆ ನೆಮ್ಮದಿ- ಯನ್ನೀಯಿತು. ಕುಲಪುರೋಹಿತರ ಆಣತಿಯನ್ನು ನಂಬಿ ಬಾಳಿದ ಮನೆತನ ಅದು. ಆದುದರಿಂದ ದಶರಥನು ರಾಮನನ್ನೂ ಜತೆಗೆ ಲಕ್ಷ್ಮಣನನ್ನೂ ವಿಶ್ವಾಮಿತ್ರ ಮಹರ್ಷಿಗೆ ಅರ್ಪಿಸಿದನು. ಎಳೆಯ ಮಕ್ಕಳಾದರೂ ಮಹಾ ವೀರರಾದ ರಾಮ-ಲಕ್ಷ್ಮಣರು ಧನುರ್ಧಾರಿಗಳಾಗಿ ಮುನಿಯನ್ನನುಸರಿಸಿದರು. ಸುಮಾರು ಒಂದೂವರೆ ಯೋಜನ ದೂರ ಬಂದುದಾ- ಯಿತು . ಸರಯೂ ನದಿಯನ್ನು ದಾಟಿದುದಾಯಿತು. ಆಗ ಮಹರ್ಷಿಯು ರಾಮಚಂದ್ರನನ್ನು ಕರೆದನು ! "ರಾಮಭದ್ರ, "ಬಲಾ'-'ಅತಿಬಲಾ' ಎಂಬ ಮಂತ್ರಗಳನ್ನು ನಿನಗೆ ಉಪದೇಶಿಸುವೆನು. ಇವು ಬ್ರಹ್ಮನಿಂದ ಬಂದ ಮಂತ್ರಗಳು. ಇವನ್ನು ಜಪಿಸಿದರೆ ಹಸಿವೂ ಬರದು-ತೃಷೆಯೂ ಬರದು." ಹೀಗೆಂದು ಋಷಿಯು ಮಂತ್ರಗಳನ್ನುಪದೇಶಿಸಿದನು. ರಾಮನೂ ವಿಧೇಯನಾದ ಶಿಷ್ಯನಂತೆ ಉಪದೇಶವನ್ನಾಲಿಸಿದನು. ಹರಿ ತೋರಿದ ಮಾರ್ಗದಲ್ಲಿ ನರ ನಡೆಯಬೇಕಲ್ಲ. ಅದಕ್ಕೆ ಇದೆಲ್ಲ ನಟನೆ. 'ಮಮ ವತ್ಮಾನುವರ್ತಂತೇ ಮನುಷ್ಯಃ ಪಾರ್ಥ ಸರ್ವಶ:' ಅಂದು ರಾತ್ರಿ ಅಲ್ಲಿ ಸರಯೂತೀರದಲ್ಲಿ ತಂಗಿದರು. ಮರುದಿನ ಮುಂಜಾನೆ ಸಂಧ್ಯಾಕರ್ಮಗಳನ್ನು ತೀರಿಸಿ- ಕೊಂಡು ಸರಯೂ-ಗಂಗಾ ಸಂಗಮ ಸ್ಥಳದಲ್ಲಿರುವ ಆಶ್ರಮದ ಕಡೆ ತೆರಳಿದರು. ಇಲ್ಲೇ-ಹಿಂದೆ ಮನ್ಮಥನು ಪಾರ್ವತೀ ಪತಿಯ ಹಣೆಗಣ್ಣಿನ ಕಿಡಿಗೆ ತನ್ನ ಅಂಗವನ್ನರ್ಪಿಸಿ ಅನಂಗನಾಗಿದ್ದನಂತೆ ! ಹರನು ತಪಸ್ಸು- ಗೈದ ಆ ಪವಿತ್ರ ಆಶ್ರಮದಲ್ಲಿ ಆ ರಾತ್ರಿಯನ್ನು ಕಳೆದರು. ಬೆಳಿಗ್ಗೆ ಸಂಧ್ಯಾವಂದನೆಗೆ ತೆರಳುತ್ತಿದ್ದ ಅಲ್ಲಿಯ ಮುನಿಗಣ ರಾಮರೂಪನಾದ ಶ್ರೀಹರಿಯನ್ನು ಕಂಡು 'ಇಂದು ನಮಗೆ ಸುಪ್ರಭಾತ' ಎಂದುಕೊಂಡು ನಲಿದರು. ಸರಯನದಿಯ ತೆರೆಗಳೊಡನೆ ಬೆರೆತು ಕುಲುಕುಲು ನಾದವನ್ನೆಬ್ಬಿಸುತ್ತಿರುವ ಗಂಗೆಯನ್ನು ದಾಟಿ, ರಾಮ-ಲಕ್ಷ್ಮಣರೂ-ವಿಶ್ವಾಮಿತ್ರನೂ ಮುಂದುವರಿದರು. ಎದುರಿ- ನಲ್ಲಿ ಎತ್ತೆತ್ತಲೂ ಕಾಡೇಕಾಡು. ಕಣ್ಣು ಹರಿಯುವಷ್ಟು ದೂರವೂ ಹಸುರು ಬನ, ಸೂರ್ಯನ ಬೆಳಕ ಹರಿಯದಂತೆ ಹೆಣೆದುಕೊಂಡಿರುವ ಮರಗಳ ಗುಂಪು, ಮೈ ಜುಮ್ಮೆನ್ನುವ ನೋಟ, ಆಗ ಕುತೂಹಲಿಯಾದ ರಾಮಚಂದ್ರ "ಇದು ಯಾವ ಕಾಡು" ಎಂದು ಮುನಿಯನ್ನು ಪ್ರಶ್ನಿಸಿದನು. ಮಹರ್ಷಿಯು ಆ ಕಾಡಿನ ಜಾತಕವನ್ನು ಸ್ಫುಟಗೊಳಿಸಿ- ದನು: " ರಾಮಭದ್ರ, ಒಂದು ಕಾಲದಲ್ಲಿ ಇವು ಮಲಯಕಾರೂಶ ದೇಶಗಳಾಗಿ ಮೆರೆದಿದ್ದವು. ಈಗ ಕಗ್ಗಾಡಾಗಿ ಮೆರೆಯುತ್ತಿವೆ. ಇದು ಕಾಲಚಕ್ರದ ಪ್ರಭಾವ. ಇಲ್ಲಿ 'ತಾಟಿಕೆ'ಯೆಂಬೊಬ್ಬಳು ರಕ್ಕಸಿಯಿದ್ದಾಳೆ, ಅವಳು ಸುಕೇತು ಎಂಬ ಯಕ್ಷನ ಮಗಳು, ಸುಂದಾಸುರನ ಮಡದಿ, ಮಾರೀಚನ ತಾಯಿ, ಅಗಸ್ತ್ಯನ ಶಾಪದಿಂದ ರಕ್ಕಸಿಯಾಗಿದ್ದಾಳೆ. ನಾವೆಲ್ಲ ಮನುಷ್ಯರು ಅವಳ ಆಹಾರ. ಓ ಅಲ್ಲಿ ನೋಡು, ಅವಳು ತಿಂದು ಬಿಸುಟ ಗೋ-ಬ್ರಾಹ್ಮಣರ ಎಲುಬಿನ ಹಂದರದ ರಾಶಿ ! ನಿನ್ನಂಥ ಹಸುಳೆ ನೋಡಬಾರದ ದೃಶ್ಯ-ಅಲ್ಲವೆ ?" ಹೀಗೆಂದು ನುಡಿದು ಮೌನದಾಳಿದ ಮುನಿಯೊಡನೆ ರಾಮಚಂದ್ರನು ತಾಟಕೆಯ ನಾಡಾದ ಕಾಡನ್ನು ಪ್ರವೇಶಿ- ಸಿದನು. ಅವನು ಬಿಲ್ಲನ್ನು ಅಣಿಗೊಳಿಸುತ್ತಿದ್ದಂತೆ ಅದರ ಟಂಕಾರವು ತಾಟಕೆಯ ಕಿವಿಯನ್ನು ಮುಟ್ಟಿತು. ಬಿಲ್ಲಿನ ಬಿರುದನಿಗೆ ಬೆದರಿದ ಮಿಗಗಳೆಲ್ಲ ಮೂಲೆ ಮೂಲೆಯ ಗುಹೆಗಳನ್ನು ಸೇರಿಕೊಂಡವು. ತಾಟಕೆ ಮಾತ್ರ ತನ್ನ ಗುಹೆಯಿಂದ ಹೊರಬಿದ್ದು ಸದ್ದು ಬಂದೆಡೆಗೆ ಧಾವಿಸಿದಳು. ಗುಹೆಯಂಥ ಬಾಯನ್ನು ತೆರೆದು ಹೂಂಕರಿಸುತ್ತಿರುವ ಮಹಾಕಾಯಳಾದ ತಾಟಕೆಯು ಇವರೆದುರು ಕಾಣಿಸಿ- ಕೊಂಡಳು ! ಈ ಭೂತಾಕಾರದ ರಕ್ಕಸಿಯ ಮುಂದೆಯೂ ರಾಮನು ನಿರ್ಭಯನಾಗಿ ಕದಲದೆ ನಿಂತಿದ್ದ. ಕೋಪ- ಗೊಂಡ ತಾಟಕೆ ಧೂಳಿನ ಮಳೆಯನ್ನು ರಾಮನ ಮೇಲೆ ಸುರಿದಳು. ಆ ಮೇಲೆ ಕಗ್ಗಲ್ಲಿನ ಸುರಿಮಳೆ ! ಇದನ್ನು ಕಂಡು ರಾಮ ಎರಡು ಬಾಣಗಳಿಂದ ಅವಳ ಎರಡು ತೋಳು- ಗಳನ್ನೂ ಕತ್ತರಿಸಿದ. ಲಕ್ಷ್ಮಣನು ಅವಳ ತುಟಿ-ಮೂಗು- ಗಳನ್ನು ಕತ್ತರಿಸಿದ. ಆಗ ಆಕೆ ಆಕಾಶದಲ್ಲಿ ಮಾಯವಾಗಿ ನಾನಾ ವಿಧವಾದ ಆಯುಧಗಳನ್ನೆಸೆಯತೊಡಗಿದಳು. ಆದರೂ ಹೆಣ್ಕೊಲೆಗೆ ಹಿಂಜರಿದು ರಾಮನು ನಿಂತೇ ಇದ್ದನು. ಅದನ್ನರಿತ ಮಹರ್ಷಿ ವಿಶ್ವಾಮಿತ್ರನು ರಾಮನನ್ನು ಪ್ರಚೋದಿಸಿದನು: "ಚಿಂತಿಸಬೇಡ ವತ್ಸಾ, ಇದು ನಾರಿಯಲ್ಲ; ಸಜ್ಜನರನ್ನು ಪೀಡಿಸುವ ಮಾರಿ . ಧರ್ಮವನ್ನು ಹೊಲೆಗೆಡಿಸುವ ಪಿಶಾಚಿ, ಕೊಲ್ಲು-ಕೊಲ್ಲುಈ ಅನಿಷ್ಟವನ್ನು." ಮುನಿ ವಚನವನ್ನಾಲಿಸಿದ ರಾಮಚಂದ್ರ ಕ್ಷಣ ಮಾತ್ರದಲ್ಲಿ ಅವಳನ್ನು ಶರಪಂಜರದಲ್ಲಿ ಬಂಧಿಸಿದನು. ಎದುರಾಗಿ ಓಡಿ ಬರುತ್ತಿರುವ ಈ ಡಾಕಿನಿಯ ಎದೆಯನ್ನು ಸೀಳಿ ನೆಲಕ್ಕೆ ಕೆಡವಿದಾಗ-ದೇವತೆಗಳು ಆಕಾಶದಲ್ಲಿ ಜಯಜಯಕಾರವನ್ನೆಸಗುತ್ತಿದ್ದರು. ಆನಂದದಿಂದ ಹೂಮಳೆಗರೆಯು- ತ್ತಿದ್ದರು. ಯಾಗದ ಪೀಡೆ ತೊಲಗಿತು ಕತ್ತಲು ಕಳೆದು ಬೆಳಕು ಹರಿದಾಗ ಮೂವರೂ ಪ್ರಾತಃ- ಕರ್ಮವನ್ನು ಮುಗಿಸಿದರು. ಆನಂತರ ಮುನಿಯು ರಾಮಚಂದ್ರನನ್ನು ಏಕಾಂತಕ್ಕೆ ಕರೆದು ವೈಷ್ಣವಾಸ್ತ್ರ- -ಬ್ರಹ್ಮಾಸ್ತ್ರ-ಶೈವಾಸ್ತ್ರ- ಆಗ್ನೇಯಾಸ್ತ್ರ-ಜೃಂಭಕಾಸ್ತ್ರ ಹೀಗೆ ಇನ್ನೂ ಅನೇಕ ಅಸ್ತ್ರಗಳನ್ನು ಉಪದೇಶಿಸಿದನು. ಸರ್ವಜ್ಞ- ನಾದಹರಿಗೆ ವಿಶ್ವಾಮಿತ್ರನು ಈ ಮಂತ್ರಗಳನ್ನು ಉಪದೇಶಿಸಿ ತನ್ನ ಪಾಲಿನ ಕರ್ತವ್ಯವನ್ನು ತೀರಿಸಿದನು. ಅಸ್ತ್ರರೂಪರಾದ ಬ್ರಹ್ಮಾದಿಗಳು ರಾಮಚಂದ್ರನನ್ನು ಸುತ್ತುವರಿದು 'ನಾವೆಲ್ಲ ನಿನ್ನ ಕಿಂಕರರು' ಎಂದು ಕೈ ಮುಗಿದರು. ಬ್ರಹ್ಮಾಸ್ತ್ರ ಮೊದಲಾದ ಕೆಲವು ಅಸ್ತ್ರಗಳನ್ನು ಲಕ್ಷ್ಮಣನೂ ಉಪದೇಶ ಪಡೆದನು. ಮಂತ್ರಾಕ್ಷರಗಳನ್ನು ಮನದಲ್ಲಿ ಹೊತ್ತು ಮುಂದು- ವರಿಯುತ್ತಿದ್ದಾಗ ಎದುರೊಂದು ಆಶ್ರಮ ಕಾಣಿಸಿತು. ರಾಮನ ಜಿಜ್ಞಾಸೆಯನ್ನರಿತ ಮಹರ್ಷಿಯು ಆ ಪ್ರದೇಶದ ಇತಿಹಾಸವನ್ನರುಹಿದನು. "ರಾಮಚಂದ್ರಮ, ಅನೇಕ ಮಂದಿ ಮಹರ್ಷಿಗಳು ಈ ತಪೋವನದಲ್ಲೆ ಸಿದ್ಧಿಯನ್ನು ಪಡೆದು ಮುಕ್ತಿಯ- ನ್ನೈದಿದ್ದಾರೆ. ಎಂತಲೆ ಇದನ್ನು 'ಸಿದ್ಧಾಶ್ರಮ' ಎಂದು ಕರೆಯುತ್ತಾರೆ. ಒಂದೊಮ್ಮೆ ಇದು ಸಾಕ್ಷಾತ್ ಹರಿಯ ಆಶ್ರಮವೆ ಆಗಿತ್ತು. ಬಲಿ ಚಕ್ರವರ್ತಿ ದೇವತೆಗಳನ್ನೆಲ್ಲ ಪದಚ್ಯುತರನ್ನಾಗಿ ಮಾಡಿ ಸಾಮ್ರಾಜ್ಯ ಕಟ್ಟಿದ ಕಾಲ. ಆಗ ಕಶ್ಯಪನ ಮಡದಿ ಅದಿತಿಯಲ್ಲಿ ಹರಿ ವಾಮನ ನಾಗಿ ಅವತರಿಸಿ, ಬಲಿಯ ಬಳಿ ಮೂರುಹೆಜ್ಜೆಯಷ್ಟು ಭೂಮಿಯನ್ನು ಬೇಡಿದನಷ್ಟೆ ! ಬಲಿ ಮೂರು ಹೆಜ್ಜೆ ನೆಲವನ್ನು ಕೊಡುವೆನೆಂದುದೇ ತಡ, ಈ ಪುಟ್ಟ ವಾಮನ ವಿಶ್ವಮೂರ್ತಿಯಾಗಿ ತ್ರಿವಿಕ್ರಮನಾದ ! 'ಅಣೋರಣೀಯಾನ್' ಎನ್ನಿಸಿದವನೇ 'ಮಹತೋ ಮಹಿಯಾನ್' ಆಗಿದ್ದ ! ಆ ತ್ರಿವಿಕ್ರಮ ವಾಸಿಸು ತಿದ್ದ ಆಶ್ರಮವೇ ಇದು. ನಾನೂ- ಇನ್ನುಳಿದ ತಾಪಸರೂ ಇಲ್ಲೇ ವಾಸಿಸುವುದು." ಮಾತು ಸಾಗಿದಂತೆ ಮಾರ್ಗವೂ ಸಾಗಿತ್ತು. ಆಶ್ರಮ ಸಮೀಪವಾದಾಗ ಸೂರ್ಯ ಮುಳುಗುವುದರಲ್ಲಿದ್ದ. ಅಲ್ಲಿ- ಆ ಆಶ್ರಮದಲ್ಲಿ ಆರು ದಿನಗಳ ಯಾಗ- ವೊಂದನ್ನು ಸಪ್ತರ್ಷಿಗಳೊಡನೆ ಮಾಡತೊಡಗಿದನು. ಆರನೆಯ ದಿನ-ಯಜ್ಞ ಕೊನೆಗೊಳ್ಳುವ ಸಮಯ-ಯಾಗವೇದಿಕೆಯ ಸುತ್ತಲೂ ಉರಿಯೆದ್ದಿತು. ಮುನಿ ವೃಂದದಲ್ಲೆಲ್ಲ ಹಾಹಾಕಾರವೆದ್ದಿತು. ಆಕಾಶದಲ್ಲಿ ಸುಬಾಹು-ಮಾರೀಚರು ಕಾಣಿಸಿಕೊಂಡರು. ರಾಮಚಂದ್ರನು ಲಕ್ಷ್ಮಣನಿಗೆ ಅಣಿಯಾಗು ಎಂದು ಸೂಚಿಸಿ ಬಿಲ್ಲನ್ನು ಸಜ್ಜುಗೊಳಿಸಿದನು. ಆ ರಕ್ಕಸರು ನೆತ್ತರನ್ನು ಕಾರಿ ಯಾಗವನ್ನು ಕೆಡಿಸುವ ಮೊದಲೇ ರಾಮನು ಅವರೆಡೆಗೆ ಬಿರುಸಾದ ಬಾಣಗಳನ್ನೆಸೆದನು. ರಾಮಬಾಣದಿಂದ ತಾಡಿತನಾದ ಮಾರೀಚನು ನೂರುಯೋಜನ ದೂರದ ಸಮುದ್ರದಲ್ಲಿ ಹೋಗಿ ಬಿದ್ದ. ರಾಮನ ಇನ್ನೊಂದು ಬಾಣ ಸುಬಾಹುವನ್ನು, ಅವನ ತಾಯಿ ಹೋದ ತಾಣಕ್ಕೆ-ಯಮಪುರಿಗೆ ಅಟ್ಟಿತು. ಅವರ ಅನುಯಾಯಿಗಳಲ್ಲಿ ಕೆಲವರು ರಾಮಬಾಣದ ರುಚಿಯನ್ನು ಕಂಡರು. ಕೆಲವರು ಕಂಗೆಟ್ಟು ಓಡಿದರು. ಯಜ್ಞ ನಿರ್ವಿಘ್ನವಾಗಿ ಕೊನೆಗೊಂಡಿತು. ಋಷಿಗಳೆಲ್ಲ ರಾಮನನ್ನು ಕೊಂಡಾಡಿದರು. ಅಂದು ರಾತ್ರೆಯೂ ಅಲ್ಲೇ ತಂಗಿದ್ದಾಯಿತು. ಬೆಳಗಾದಾಗ ಮಹರ್ಷಿಯು ರಾಮಲಕ್ಷ್ಮಣರನ್ನು ಕುರಿತು ಹೀಗೆಂದನು; " ವತ್ಸ, ಜನಕನ ಮಗಳು ಸೀತೆಗೆ ಸ್ವಯಂವರವಂತೆ. ಈ ಉತ್ಸವವನ್ನು ಕಾಣಲು ಎಲ್ಲರೂ ವಿದೇಹ ರಾಜಧಾನಿಗೆ ಹೋಗು ತ್ತಿದ್ದಾರೆ. ಸೀತೆಯನ್ನು ವರಿಸಲೆಂದು ರಾಜವೃಂದವೂ ಬರುತ್ತಿದೆ. ನಾವೂ ಅಲ್ಲಿಗೆ ಹೋಗುವುದು ಚೆನ್ನು, ಆ ಉತ್ಸವದಲ್ಲಿ ನಾವೂ ಪಾಲುಗಾರರಾಗೋಣ. " ಹೀಗೆ ಹೇಳಿ ಮುನಿಯು ರಾಮ ಲಕ್ಷ್ಮಣರೊಡನೆ ಉತ್ತರದಿಕ್ಕಿ- ನೆಡೆಗೆ ಮುನ್ನಡೆದನು.ದಾರಿಯಲ್ಲಿ ಶೋಣನದ ಎದುರಾಯಿತು. ಆ ರಾತ್ರಿ ಅವರೆಲ್ಲ ಅಲ್ಲಿ ತಂಗಿದರು. ಕುಶಿಕವಂಶದ ರಾಜರದೇಶ-ವಾಗಿದ್ದ ಆ ಭಾಗವನ್ನು ಕಂಡಾಗ ಮಹರ್ಷಿಯು ತನ್ನ ಪೂರ್ವ- ಜರಕಥೆಯನ್ನು ರಾಮನಿಗೆ ಅರುಹಿದನು. ಕುಶನಿಂದ ಕುಶನಾಭ, ಅವನಿಂದ ಗಾಧಿ, ಗಾಧಿಯಿಂದ ತನ್ನ ಜನನ ಇವೆಲ್ಲ ಕಥೆಗಳನ್ನು ಹೇಳಿದನು. ಬೆಳಿಗ್ಗೆ ಅಲ್ಲಿಂದ ಹೊರಟವರು ಮಧ್ಯಾಹ್ನದ ಹೊತ್ತಿಗೆ ಗಂಗಾತಟವನ್ನು ಸೇರಿ ಅಲ್ಲೇ ವಿಶ್ರಮಿಸಿದರು. ಆಗ ಗಂಗೆಯ ಪೂರ್ವಚರಿತ್ರೆಯನ್ನು ಕೇಳಬಯಸಿದ ರಾಮಚಂದ್ರನಿಗೆ ಮುನಿ ಆ ಕಥೆಯನ್ನು ವಿವರಿಸಿದನು; " ಪರ್ವತರಾಜನಾದ ಹಿಮವಂತನಿಗೆ ಇಬ್ಬರು ಮಕ್ಕಳು. ಅವರಲ್ಲಿ ಗಂಗೆ ಸ್ವರ್ಗದ ನದಿಯಾಗಿ ಹರಿದಳು. ಉಮೆ ಶಂಕರನ ಅರ್ಧಾಂಗಿಯಾದಳು. ಬಹು ಸಹಸ್ರವರ್ಷಗಳವರೆಗೆ ಶಿವ ಪಾರ್ವತಿಯರ ರತಿಕ್ರೀಡೆ ನಡೆಯಿತು. ಯಾರೊಬ್ಬರೂ ತೃಪ್ತಿಗೊಂಡ ಚಿಹ್ನೆ ಕಂಡುಬರಲಿಲ್ಲ. ಈ ಸುಸಿಲಿಗೆ ಕೊನೆಯಲ್ಲಿ? ಎಂದು? "ಅವನ ರೇತಸ್ಸಿನ ಶಕ್ತಿಯನ್ನರಿತ ದೇವತೆಗಳು ಅದಕ್ಕೆ ತಡೆಯನ್ನೆಸಗಿದರು. ಆಗ ಶಿವ ತನ್ನ ರೇತಸ್ಸನ್ನು ಗಂಗೆಯಲ್ಲಿ-ವಹ್ನಿಯ ಮುಖಕ್ಕೆ ಚೆಲ್ಲಿ- ದನು. ಆ ತೇಜಸ್ಸೇ ಮುಂದೆ ಸ್ಕಂದನಾದುದು, ದೇವ- ಸೇನಾನಿಯಾದುದು ! ಅನಂತರ ಹರಿಪ್ರಸಾದಕ್ಕಾಗಿ ಉಮಾಶಂಕರರು ತಪಸ್ಸಿನಲ್ಲಿ ತೊಡಗಿದರು. ಇದು ಒಬ್ಬಮಗಳ ಕಥೆ, ಇನ್ನೊಬ್ಬಳ ಕಥೆಯನ್ನಾಲಿಸು." "ತ್ರಿವಿಕ್ರಮನ ಪಾದೋದಕವಾಗಿದ್ದ ಗಂಗೆ ಯಾವುದೋ ಕಾರಣಕ್ಕಾಗಿ ಹಿಮಗಿರಿಯ ಮಗಳಾಗಿ ಜನಿಸಿ ಪುನಃ ಸ್ವರ್ಗವನ್ನೇ ಸೇರಿಕೊಂಡಳು. ಮತ್ತೆ ಅವಳನ್ನು ಭೂಮಿಗೆ ತಂದವರು ನಿನ್ನ ಪೂರ್ವಜರು". "ನಿಮ್ಮ ವಂಶದ ಪೂರ್ವ ಪುರುಷನಾದ ಸಗರನೆಂಬ ರಾಜ, ಮಕ್ಕಳಿಗಾಗಿ ತಪಸ್ಸು ಮಾಡಿದನು. ಅವನ ಒಬ್ಬ ಹೆಂಡತಿಯಲ್ಲಿ 'ಅಸಮಂಜಸ' ಎಂಬ ಒಬ್ಬ ಮಗನೂ ಎರಡನೆಯವಳಲ್ಲಿ ಅರುವತ್ತು ಸಾವಿರ ಮಕ್ಕಳೂ ಆದರು. ಅಸಮಂಜಸನಿಗೂ ಒಬ್ಬ ಮಗನಿದ್ದ. ಅಂಶುಮಂತನೆಂದು ಅವನ ಹೆಸರು. ಏಕಾಂತಪ್ರಿಯನಾದ ಅಸಮಂಜಸನು ಪಟ್ಟಣದಲ್ಲಿ ಬೇಕೆಂದೇ ಕ್ರೂರರಂತೆ ವರ್ತಿಸಿದನು. ಅವನ ವರ್ತನೆಯಿಂದ ಬೇಸತ್ತ ಸಗರ ಅವನನ್ನು ಕಾಡಿಗಟ್ಟಿ ದನು. ಅವನ ಬಯಕೆ ಈಡೇರಿದಂತಾಯಿತು." "ಮುಂದೊಮ್ಮೆ ಸಗರನು ಅಶ್ವಮೇಧ ಯಾಗವನ್ನು ಮಾಡಿದನು. ಆಗ ಇಂದ್ರನು ಇವನ ಯಾಗಾಶ್ವವನ್ನಪಹರಿಸಿದನು. ಆ ಕುದುರೆಯನ್ನು ಹುಡುಕುವುದಕ್ಕಾಗಿ ಸಗರನ ಅರುವತ್ತು ಸಾವಿರ ಮಕ್ಕಳೂ ನೆಲವನ್ನಗೆದರು. ಅವರು ಅಗೆದ ನೆಲವೇ ಕಡಲಾಯಿತು. ಆದ್ದರಿಂದಲೇ ಕಡಲನ್ನು ಅಂದಿ- ನಿಂದಲೂ 'ಸಾಗರ' ಎಂದು ಕರೆಯುವುದು ರೂಢಿ. ಸಗರಪುತ್ರರು ಕುದುರೆಗಾಗಿ ಅಲೆಯುತ್ತಾ ಕಪಿಲ ಮಹರ್ಷಿಯನ್ನು ಕಂಡರು. ಅವನ ಬಳಿಯಲ್ಲಿ ತಮ್ಮ ಕುದುರೆಯನ್ನೂ ಕಂಡರು. ಆದ್ದರಿಂದ ಅವನೇ ಕಳ್ಳನಿರಬೇಕೆಂದು ಭ್ರಮಿಸಿ ಈ ಸಗರ ಪುತ್ರರು- ಪತಂಗಗಳು ಬೆಂಕಿಯೆಡೆಗೆ ಧಾವಿಸುವಂತೆ ಅವನೆಡೆಗೆ ನುಗ್ಗಿದರು. ಕಪಿಲರೂಪಿಯಾದ ಶ್ರೀಹರಿಯ ಕಿಡಿಗಣ್ಣಿನಿಂದ ಅವರ ಬಾಳು ಲಯವಾಯಿತು. ಪ್ರಳಯ ಕಾಲದಲ್ಲಿ ಜಗತ್ತನ್ನೇ ಕಬಳಿಸುವ ಹರಿಗೆ ಇದೊಂದು ದೊಡ್ಡದೆ ? "ಅನಂತರ ಕುದುರೆಯನ್ನೂ- ಸಾಗರರನ್ನೂ ಹುಡುಕುವುದಕ್ಕಾಗಿ ಅಸಮಂಜಸನ ಮಗ ಅಂಶು- ಮಂತ ಹೊರಟುನಿಂತ. ಅವನೂ ಅಲೆಯುತ್ತ ಕಪಿಲ ಮಹರ್ಷಿಯಿದ್ದಲ್ಲಿಗೆ ಬಂದನು. ವಿಷಯವನ್ನರಿತು- 'ಕ್ಷಮಿಸು ನಮ್ಮನ್ನು' ಎಂದು ಬೇಡಿಕೊಂಡನು. ಪ್ರೀತನಾದ ಕಪಿಲದೇವ ಯಜ್ಞಾಶ್ವವನ್ನು ಕೊಂಡೊಯ್ಯಲು ಒಪ್ಪಿಗೆಯಿತ್ತನು. ಕುದುರೆ ಬಂತು. ಸಗರನ ಯಜ್ಞವೂ ಪೂರ್ಣವಾಯಿತು. ಅಂಶುಮಂತನ ತಾಳ್ಮೆ ಕೆಲಸವನ್ನು ಸಾಧಿಸಿತು. ಸಮರ್ಥರಾದವರ ತಾಳ್ಮೆಗಿಂತ ಮಿಗಿಲಾದ ಪರಾಕ್ರಮವೆಂಥದು ? " "ಮೃತರಾದ ಸಗರಪುತ್ರರಿಗೆ ಸದ್ಗತಿಯಾಗಲೆಂದು ಗಂಗೆಯನ್ನು ಬರಿಸುವುದಕ್ಕಾಗಿ ಅಂಶುಮಂತನು ತಪಸ್ಸನ್ನಾಚರಿಸುತ್ತಿದ್ದಂತೆಯೇ ಮೃತನಾದನು. ಅವನ ಮಗ ದಿಲೀಪನೂ ಹೀಗೆಯೇ ಅರ್ಧ ತಪಸ್ಸಿ- ನಲ್ಲಿ ಮೃತನಾದನು. ದಿಲೀಪನ ಮಗ ಭಗೀರಥ. ಅವನು ಬ್ರಹ್ಮನನ್ನೂ ವಿಷ್ಣು ಪಾದೋದಕವಾದ ಗಂಗೆಯನ್ನು ಧರಿಸಲು ಸಮರ್ಥನಾದ ರುದ್ರನನ್ನೂ ಪ್ರಸನ್ನಗೊಳಿಸಿ, ಗಂಗೆಯನ್ನು ಭೂಮಿಗಿಳಿಸಿದನು. ಗಂಗಾಜಲದ ಸಿಂಚನದಿಂದ ತನ್ನ ತಾತ ಮುತ್ತಾತಂದಿರಿಗೆಲ್ಲ ಸದ್ಗತಿಯನ್ನಿತ್ತಿನು. ಹೀಗೆ ಈ ಭಗೀರಥನಿಂದ ಈ ಗಂಗೆ 'ಭಾಗೀರಥಿ' ಯಾದಳು. ಅದೇ ಭಾಗೀರಥಿ ಇಂದಿಗೂ ಭಕ್ತರ ಪಾಪಗಳನ್ನು ತೊಳೆಯುತ್ತ ನಿತ್ಯ ಪವಿತ್ರಳಾಗಿ ಈ ಭೂಮಿಯಲ್ಲಿ ಹರಿಯುತ್ತಿದ್ದಾಳೆ." ಕಲ್ಲು ಹೆಣ್ಣಾಯಿತು ಹೀಗೆ ಕಥಾವಿನೋದದಿಂದ ರಾತ್ರಿಯು ಕ್ಷಣದಂತೆ ಕಳೆದು ಹೋಯಿತು. ಪ್ರಾತಃಕಾಲ ಮುನಿವೃಂದ- ದೊಡನೆ ಗಂಗೆಯನ್ನು ದಾಟಿ ವಿಶಾಲನೆಂಬ ರಾಜನು ನಿರ್ಮಿಸಿದ ವೈಶಾಲೀ ನಗರವನ್ನು ಪ್ರವೇಶಿಸಿದರು. ಅಲ್ಲಿಗೆ ಬರುತ್ತ ಮುನಿಯು ರಾಮನಿಗೆ ವಿಶಾಲನ ಕಥೆಯನ್ನರುಹಿದನು. "ಹಿಂದೊಮ್ಮೆ ದೇವದಾನವರೆಲ್ಲ ಬೆರತು ಕಡಲ- ನ್ನು ಕಡೆದರು. ಮಂದರವೇ ಕಡೆಗೋಲು, ವಾಸುಕಿಯೇ ಹಗ್ಗ- ಈ ಮಥನಕ್ಕೆ, ಮುಳುಗುತ್ತಿರುವ ಮಂದರವನ್ನು ಕೂರ್ಮ ರೂಪಿಯಾದ ಶ್ರೀಹರಿಯೇ ಎತ್ತಿ ಹಿಡಿದನು. ದೇವತೆಗಳೂ ದಾನವರೂ ಬಸವ- ಳಿದು ಕೈ ಬಿಟ್ಟಾಗ ಮುಂದೆ ಬಂದು ಕಡೆದವನೂ ಶ್ರೀಹರಿಯೇ. ಆಗ ಸಮುದ್ರದಿಂದ ಚಂದ್ರನೂ, ಲಕ್ಷ್ಮಿಯೂ, ಅಪ್ಸರೆಯರೂ ಉದಿಸಿದರು. ಅಮೃತದ ಕೊಡವನ್ನು ಹೊತ್ತು ಧನ್ವಂತರಿಯೂ ಮೂಡಿ ಬಂದ. ಅಮೃತ ಕಲಶವನ್ನಪಹರಿಸಲು ದಾನವರೆಲ್ಲ ಮುತ್ತಿದರು. ಆಗ ಶ್ರೀಹರಿಯೇ ಮೋಹಿನಿ ರೂಪದಿಂದ ಅವರನ್ನು ಮೋಹಿಸಿ ದೇವತೆಗಳಿಗೆ ಅಮೃತವನ್ನುಣಿಸಿದನು. ಆ ಕ್ಷೀರ ಸಮುದ್ರದಲ್ಲಿ ಹುಟ್ಟಿದ ಅಪ್ಸರೆಯರಲ್ಲಿ 'ಅಲಂಬುಸಾ' ಎಂಬವಳು ಅತ್ಯಂತ ಸುಂದರಿಯಂತೆ. ನಿಮ್ಮ ಸೂರ್ಯವಂಶದ ಪೂರ್ವಪುರುಷನಾದ ಇಕ್ಷ್ವಾಕುವಿನಿಂದ ಆ 'ಅಲಂಬುಸೆ'ಯಲ್ಲಿ ಹುಟ್ಟಿದವನೇ ವಿಶಾಲ." ಈ ಅಪೂರ್ವ-ಅತಿಥಿಗಳನ್ನು ಅಲ್ಲಿಯ ಒಡೆಯ- ನಾದ ಸುಮತಿಯು ಸಂತೋಷದಿಂದ ಸ್ವಾಗತಿಸಿ ಸತ್ಕರಿಸಿದನು. ವೈಶಾಲಿಯಲ್ಲಿಯೇ ಸುಮತಿಯ ಭವ್ಯ ಆತಿಥ್ಯದಲ್ಲಿ ರಾತ್ರಿಯನ್ನು ಕಳೆದು ಬೆಳಿಗ್ಗೆ ಪ್ರಯಾಣವನ್ನು ಮುಂದುವರಿಸಿ ಮಿಥಿಲೆಯ ಬಳಿ- ಯಲ್ಲೆ ಇರುವ ಉಪವನವೊಂದನ್ನು ಸೇರಿದರು. ಆ ಉಪವನದ ಪಕ್ಕದಲ್ಲಿ ಒಂದು ಆಶ್ರಮವಿತ್ತು. ಅದನ್ನು ವಿಶ್ವಾಮಿತ್ರನು ರಾಮಚಂದ್ರನಿಗೆ ತೋರಿಸುತ್ತಾ ಹೀಗೆಂದು ನುಡಿದನು. "ರಾಮಭದ್ರ, ಯೋಗ್ಯತೆಯನ್ನು ಮೀರಿ ಬೆಳೆದ ಗೌತಮನ ಪುಣ್ಯ ರಾಶಿಯನ್ನು ಕುಗ್ಗಿಸುವುದಕ್ಕಾಗಿ ಇಂದ್ರನು ಒಮ್ಮೆ ಅಹಲ್ಯೆಯನ್ನು ಕೆಡಿಸಿದನು. ಆಶ್ರಮಕ್ಕೆ ಬಂದ ಖುಷಿ ಇದನ್ನು ತಿಳಿದು ಸಿಟ್ಟು- ಗೊಂಡನು. ಸಿಟ್ಟಿನ ಭರದಲ್ಲಿ"ನಿನ್ನ ಜಾರ ನಿರ್ವೀರ್ಯನಾಗಲಿ, ಮತ್ತು ನೀನು ರಾಮದರ್ಶನ- ವಾಗುವ ತನಕ ಕಲ್ಲಾಗಿ ಬಾಳು' ಎಂದು ಶಪಿಸಿದನು. ವಿಕೃ ದೇವತೆಗಳೆಲ್ಲ ತಮ್ಮ ಕುರಿಯ ಅಂಡವನ್ನು ಇಂದ್ರನಿಗೆ ಜೋಡಿಸಿ ಅವನ ನಪುಂಸಕತ್ವವನ್ನು ಹೋಗಲಾಡಿಸಿದರು. ಅಂದಿನಿಂದ ಅವನು 'ಮೇಷವೃಷಣ'ನೆನಿಸಿದ್ದಾನೆ". "ಒಬ್ಬನ ಶಾಪ ಪರಿಹಾರವಾದಂತಾಯಿತು. ಇನ್ನೊಬ್ಬಳ ಶಾಪ ನಿನ್ನಿಂದ ಪರಿಹಾರವಾಗಬೇಕಾ- ಗಿದೆ. ಇಂದ್ರನ ಚಿಂತೆಯನ್ನು ಪರಿಹರಿಸು. ಅಭಾಗಿನಿ ಅಹಲ್ಯೆಯ ಮೇಲೆ ದಯೆದೋರು. " ಋಷಿಯ ಮಾತನ್ನಾಲಿಸಿದ ರಾಮಭದ್ರ ತನ್ನ ಕರುಣೆತುಂಬಿದ ನೋಟದಿಂದ ಅಹಲ್ಯೆಯನ್ನು ಬದುಕಿಸಿದನು. ಕುಡಿಕಣ್ನೋಟದಿಂದಲೇ ಜಗತ್ತನ್ನು ಸೃಜಿಸುವ ಹರಿಗೆ ಇದು ಏತರಲೆಕ್ಕ ? ಕಲ್ಲಾದ ಮಡದಿಯನ್ನು ಮರಳಿ ಬದುಕಿಸಿಕೊಟ್ಟ ರಾಮಚಂದ್ರನನ್ನೂ ಅದಕ್ಕೆ ನೆರವಾದ ವಿಶ್ವಾಮಿತ್ರ- ನನ್ನೂ ಗೌತಮನು ಸತ್ಕರಿಸಿ ಕಳುಹಿಸಿಕೊಟ್ಟನು. ಅನಂತರ ಈಶಾನ್ಯದೆಡೆಗೆ ಸರಿದಾಗ- ಅಲ್ಲಿ ಜನಕನ ಯಜ್ಞಭೂಮಿ ಕಾಣಿಸಿಕೊಂಡಿತು. ಜನರು ನೆರೆದಿದ್ದ ತಾಣದಿಂದ ದೂರವಾಗಿ ಒಂದು ಏಕಾಂತ ಸ್ಥಳದಲ್ಲಿ ಮುನಿಯೂ ರಾಮಲಕ್ಷ್ಮಣರೂ ನಿಂತು- ಕೊಂಡರು. ವಿಶ್ವಾಮಿತ್ರನನ್ನೂ ಜತೆಗೆ ಇಬ್ಬರು ಹೊಸ ಹುಡುಗರನ್ನೂ ಕಂಡ ವಿದೇಹನಾಥ ಸೀರಧ್ವಜನು ಪುರೋಹಿತರಾದ ಶತಾನಂದರೊಡನೆ ಬಂದು ಈ ಅತಿಥಿಗಳನ್ನು ಸ್ವಾಗತಿಸಿದನು. ಅತಿಥಿ ಸತ್ಕಾರವೆಲ್ಲ ಮುಗಿದ ಮೇಲೆ ಜನಕನು ರಾಮನೆಡೆಗೆ ಕೈ ತೋರಿಸಿ "ಕಣ್ಮನಗಳನ್ನು ಸೆಳೆವ ಈ ಸುಂದರ ಯಾರು ? ನೆರಳಿನಂತೆ ಅವನನ್ನನುಸರಿಸುತ್ತಿರುವ ಈ ತರುಣನಾದರೂ ಯಾರು ? " ಎಂದು ಮುನಿಯನ್ನು ಕೇಳಿದನು. ರಾಜನ ಮಾತನ್ನು ಕೇಳಿದವನೇ ಮುಗುಳುನಗೆ ಬೀರುತ್ತಾ ಮುನಿ ಉತ್ತರಿಸಿದನು. "ರಾಜನ್, ಇವನು ದಶರಥನ ಮಗನಾದ ರಾಮ. ದೇವಕಾರ್ಯವನ್ನು ಸಾಧಿಸಲು ಮೂಡಿ ಬಂದ ಪುರುಷೋತ್ತಮ. ಜತೆಯಲ್ಲಿರುವವನು ಅವನ ತಮ್ಮ ಲಕ್ಷಣ. ಇವರನ್ನು ನಾನು ಅಯೋಧ್ಯೆಯಿಂದ ಸಿದ್ಧಾಶ್ರಮಕ್ಕೆ ಕರೆದುಕೊಂಡು ಬಂದಿದ್ದೆ. ಈ ರಾಮ- ಭದ್ರ ಯಜ್ಞಕಂಟಕರಾದ ದಾನವರನ್ನು ಲೀಲೆ- ಯಿಂದಲೇ ಸಂಹರಿಸಿದನು. ಕಣ್ನೋಟದಿಂದಲೇ ಮುನಿಶಾಪಗ್ರಸ್ತಳಾದ ಅಹಲೈಯನ್ನುಬದುಕಿಸಿದನು. ಬಿಲ್ಲೋಜರಲ್ಲೇ ಮೊದಲಿಗನಾದ ಈತ ನಿನ್ನ ಧನುಸ್ಸನ್ನು ಕಾಣಬಯಸುತ್ತಾನೆ. ನಿನ್ನ ಬಿಲ್ಲು, ಬಿಲ್ಲೋಜರನ್ನು ಪರೀಕ್ಷಿಸುವ ಒರೆಗಲ್ಲಲ್ಲವೆ ? ಸಮುದ್ರರಾಜನಂತೆ ನೀನು ಕೂಡ ಪುರಾಣಪುರುಷ- ನನ್ನೇ ಅಳಿಯನನ್ನಾಗಿ ಪಡೆವ ಭಾಗ್ಯಶಾಲಿಯಾಗು." ಈ ಮಾತನ್ನು ಕೇಳಿದ ಶತಾನಂದನು ಆನಂದದಿಂದ ನುಡಿದನು: "ರಾಮಚಂದ್ರನೆ, ನಿಮ್ಮಿಬ್ಬರೂ ಸೋದರರಿಗೆ ಸ್ವಾಗತ, ಪುರುಷೋತ್ತಮನಾದ ನೀನೂ ಯಾರನ್ನು ಶಿಷ್ಯನಂತೆ ಅನುಸರಿಸುತ್ತಿರುವೆಯೋ ಆ ವಿಶ್ವಾಮಿತ್ರನೇ ಧನ್ಯನು. ಈತನೂ ಒಮ್ಮೆ ನಿಮ್ಮಂತೆಯೇ ರಾಜರ್ಷಿಯಾಗಿದ್ದ. ರಾಮಚಂದ್ರ, ನಿಮ್ಮ ಪುರೋಹಿತರಾದ ವಸಿಷ್ಠ ಭಗವತ್ಪಾದರ ಗೋವನ್ನ- ಪಹರಿಸಲೆಳಸಿದ ಅರಸನೀತ." "ಆ ನಂದಿನಿ ಮಾತ್ರ ತನ್ನ ಅಂಗಗಳಿಂದ ವಿವಿಧ ಸೇನೆಗಳನ್ನು ಸೃಜಿಸಿ ರಾಜನ ಸೇನೆಯನ್ನು ಸಂಹರಿ- ಸಿತು; ಬಲವನ್ನು ಉಡುಗಿಸಿತು, ಆಗ ಈ ಪೂರ್ವ ರಾಜರ್ಷಿಯು ರುದ್ರನನ್ನು ತಪಸ್ಸು ಮಾಡಿ ಪಡೆದ ಅಸ್ತ್ರಗಳಿಂದ ವಸಿಷ್ಠನೊಡನೆ ಕದನ ಹೂಡಿದನು. ಆ ಅಸ್ತ್ರಗಳನ್ನೆಲ್ಲ ವಸಿಷ್ಠ ಮಹರ್ಷಿಯ ವೈಷ್ಣವ ದಂಡವು ವಿಫಲಗೊಳಿಸಿತು. ಚಂಡಾಲನಾದ ತ್ರಿಶಂಕುವನ್ನು ಈತ ಸ್ವರ್ಗಕ್ಕೇರಿ- ಸಿದ್ದು ಕೂಡ ವಿಷ್ಣುವಿನ ಅನುಗ್ರಹದಿಂದಲೇ. ಹರಿಶ್ಚಂದ್ರನ ಯಾಗದಲ್ಲಿ ಪಶುವಾಗಿ ಜೀವತೆರಲಿದ್ದ ಶುನಃಶೇಪನನ್ನು ಬದುಕಿಸಿ, ಮಗನೆಂದು ಸ್ವೀಕರಿಸಿದ ಮಹಾನುಭಾವನೀತ ! ಒಮ್ಮೆ ನಾರಾಯಣನ ತಪಸ್ಸಿನಲ್ಲಿ ಮಗ್ನನಾಗಿದ್ದಾಗ ಮೇನಕೆಯನ್ನು ಕಾಮಿಸಿ, ಮತ್ತೊಮ್ಮೆ ರಂಭೆಯ ಮೇಲೆ ಸಿಟ್ಟುಗೊಂಡು ತನ್ನ ತಪಸ್ಸು ನಿಷ್ಪಲವಾದಾಗ, ಆಹಾರವನ್ನೂ ತೊರೆದು ನಿಶ್ಚಲವಾಗಿ ಶ್ವಾಸನಿರೋಧ ಮಾಡಿಕೊಂಡು, ಸಾವಿರಾರು ವರ್ಷ ತಪಸ್ಸು ಮಾಡಿದ ಸಾಹಸಿಯೀತ. ರಾಜರ್ಷಿಯಾದ ವಿಶ್ವಾಮಿತ್ರ ತನ್ನ ಹಠಯೋಗದಿಂದ ಕೊನೆಗೂ ಬ್ರಹ್ಮರ್ಷಿಯಾದ. ಮಹರ್ಷಿಯ ಮೇಲೆ ಭಗವಂತನ ಅನುಗ್ರಹ ಅಂಥದು ! " ಶತಾನಂದರು ಹೇಳಿದ ಕಥೆಯನ್ನು ಕಿವಿಗೊಟ್ಟಾಲಿ- ಸುತ್ತಿದ್ದ ರಾಮಚಂದ್ರ ಮುಗುಳುನಗುತ್ತ ವಿಶ್ವಾ- ಮಿತ್ರನೆಡೆಗೆ ನೋಡಿದನು. ಸರ್ವಜ್ಞನಾದ ಶ್ರೀಹರಿ ಕೂಡ ಲೋಕದ ಅನುವರ್ತನೆಗಾಗಿ ಮಕ್ಕಳಂತೆ ಕಥೆ ಕೇಳುವ ನಾಟಕವಾಡುವುದುಂಟು ! ವಿಜ್ಞಾನ ಭಾಸ್ಕರನಲ್ಲಿ ಅಜ್ಞಾನದ ಕುಶಂಕೆಯನ್ನು ಮಾಡಲು ಸಾಧ್ಯವೆ ? ತೇಜಃಪುಂಜನಾದ ಸೂರ್ಯನಲ್ಲಿ ಕತ್ತಲಿನ ಸುಳಿವಾದರೂ ಹೇಗ ಬಂದೀತು ? ಹರನ ಬಿಲ್ಲು ಮುರಿಯಿತು ಮರುದಿನ ಮುಂಜಾವದಲ್ಲಿ ಜನಕ ಮಹಾರಾಜನು ಈ ಮೂವರನ್ನೂ ತನ್ನ ಅಂತಃಪುರಕ್ಕೆ ಕರೆದು ವಿನಯದಿಂದ ಬಿನ್ನವಿಸಿಕೊಂಡನು. "ಮಹರ್ಷಿ ವಿಶ್ವಾಮಿತ್ರನೆ, ಯಾಗಕ್ಕಾಗಿ ಭೂಮಿ- ಯನ್ನು ನೇಗಿಲದಿಂದ ಶೋಧಿಸುತ್ತಿದ್ದಾಗ ಅಲ್ಲಿ ದೊರಕಿದವಳು ನನ್ನ ಸೀತೆ. ಸೀರ(ನೇಗಿಲು)ಜಾತೆಯಾದುದರಿಂದ ಅವಳನ್ನು ಸೀತೆಯೆಂದೇ ಕರೆದೆ. ಸೀತೆಯನ್ನು ಪಡೆದ ನಾನು ನಿಧಿ ದೊರೆತ ಬಡವ- ನಂತೆ ಸಂತಸಗೊಂಡೆ. ಅವಳು ಚಂದ್ರಕಲೆಯಂತೆ ದಿನದಿನಕ್ಕೆ ಬೆಳೆದಳು. ಜವ್ವನದ ಸಿರಿಯಿಂದ ಮೈತುಂಬಿನಿಂತಳು. ಕಂಡವರ ಕಣ್ಣಿಗೆ ಹಬ್ಬವಾಗಿ ಮುದ್ದಾಗಿ ಬೆಳೆದಳು. ಆಗ ನನಗೆ ಯೋಚನೆಗಿಟ್ಟುಕೊಂಡಿತು. ಈ ಕನ್ನೆ ಅಯೋಗ್ಯರ ಕೈಪಾಲಾಗಬಾರದು. ವೇದವಿದ್ಯೆ ಪತಿತನ ವಶ- ವಾಗಬಾರದು. ಅದಕ್ಕೊಂದು ಉಪಾಯ ಹೂಡಿದೆ. ನನ್ನ ಬಳಿ ರುದ್ರನನ್ನು ತಪಸ್ಸು ಮಾಡಿ ಗಳಿಸಿದ ಬಿಲ್ಲೊಂದಿದೆ. ಅವನ ಅನುಗ್ರಹದಿಂದ ನಾನೊಬ್ಬ- ನದನ್ನು ಎತ್ತಬಲ್ಲೆ. ಆ ಧನುಸ್ಸನ್ನು ಹರನಲ್ಲದೆ ಇನ್ನೊಬ್ಬನು ನಲುಗಿಸಲಾರದ ಧನುಸ್ಸನ್ನು ಯಾರು ಹೆದೆಯೇರಿಸುವರೋ ಅಂಥವನಿಗೆ ನನ್ನ ಮಗಳನ್ನು ಕೊಡುವೆನೆಂದು ನನ್ನ ಪ್ರತಿಜ್ಞೆ. ಕಮಲದ ಸರಸ್ಸಿಗೆ ಹಂಸಗಳು ಮುತ್ತುವಂತೆ ಅನೇಕ ರಾಜರು ಈ ಸ್ವಯಂವರಕ್ಕೆ ಹಾತೊರೆದು ಬಂದರು. ತಂದ ಉತ್ಸಾಹಕ್ಕಿಂತ ಹೆಚ್ಚಿನ ನಿರುತ್ಸಾಹವನ್ನು ಹೊತ್ತು ತೆರಳಿದರು ! ಬಂದವರಲ್ಲಿ ಕೆಲವರು ಧನುಸ್ಸನ್ನು ನೋಡಿಯೇ ಬೆದರಿಕೊಂಡರು ! ಕೆಲವರು ಬಳಿಸಾರಿ ಹಿಮ್ಮೆಟ್ಟಿದರು. ಕೆಲವರು ಎತ್ತ- ಲಾರದೆ ಕೈಬಿಟ್ಟರು. ಕೆಲವರು ನಲುಗಿಸಿ ಕೈಕೊಡವಿ- ಕೊಂಡರು. ಹೀಗೆ ಎಲ್ಲ ವೀರರೂ ಇದರೆದುರು ತಮ್ಮ ಬೀರವನ್ನು ಕಳೆದುಕೊಂಡರು. ಇಂಥ ವೀರರೆಲ್ಲ ಕೈಸುಟ್ಟುಕೊಂಡುದನ್ನು ಕಂಡೇ ಕಂಗಾಲಾದ ಕೆಲ ರಾಜರು ಸ್ವಯಂವರದ ಗೋಜಿಗೇ ಬರಲಿಲ್ಲ ! ಮಿಥಿಲೆಯ ಬಳಿಗೇ ಸುಳಿಯಲಿಲ್ಲ ! ಉದ್ಧತರಾದ ರಾವಣನಂಥವರೂ ಧಾರ್ಷ್ಟ್ಯದಿಂದ ಧನುಸ್ಸನ್ನು ಎತ್ತ ಹೋಗಿ ಬೆವತು ಕುಪ್ಪಳಿಸಿ ಬಿದ್ದಿದ್ದಾರೆ! ಉಳಿದವರ ಪಾಡೇನು ? ಬ್ರಹ್ಮ ವರದ ಬಲ ನನಗಿರುವುದರಿಂದ ಯಾರೂ ಸೀತೆಯನ್ನು ಬಲಾತ್ಕರಿಸಿ ಕೊಂಡೊಯ್ಯುವಂತಿಲ್ಲ. ಆದ್ದರಿಂದ ರಾಮಚಂದ್ರನು ಆ ಧನುಸ್ಸನ್ನು ಹೂಡಲಿ, ಸೀತೆ ಅನುರೂಪನಾದ ಪತಿಯನ್ನು ಪಡೆಯಲಿ, ನನ್ನ ಬೆಳದಿಂಗಳು ಈ ಹುಣ್ಣಿಮೆಯ ಚಂದ್ರನನ್ನು ಸೇರಲಿ." ವಿಶ್ವಾಮಿತ್ರನು ಆ ಬಿಲ್ಲನ್ನುತರಿಸುವಂತೆ ಹೇಳಿದನು. ಎಂಟು ಚಕ್ರಗಳನ್ನುಳ್ಳ ಕಬ್ಬಿಣದ ಪೆಟ್ಟಿಗೆಯಲ್ಲಿ ಗುಪ್ತವಾದ ಆ ಧನುಸ್ಸನ್ನು ರುದ್ರನ ವರಬಲದಿಂದ- ಲೇ ಸಮರ್ಥರಾದ ಐದು ಸಾವಿರ ಮಂದಿ ವೀರರು ಎಳೆದು ತಂದು ರಾಜನ ಮುಂದಿರಿಸಿದರು. ಅದನ್ನು ಕಂಡವನೆ 'ಈ ಬಿಲ್ಲನ್ನು ಆರೋಪಿಸು ರಾಮಚಂದ್ರ' ಎಂದನು ವಿಶ್ವಾಮಿತ್ರ ಮುನಿ. ಮುನಿಯ ಮಾತಿಗೆ ಒಪ್ಪಿಗೆಯ ಮುಗುಳನ್ನು ಬೀರಿ ಮುಂದೆ ಬಂದು ನಿಂತ ರಾಮನನ್ನು ಕಂಡ ಪುರ- ರಮಣಿಯರು ವಿಸ್ಮಿತರಾಗಿ ತಮ್ಮೊಳಗೇ ಮಾತನಾಡಿ- ಕೊಳ್ಳುತ್ತಿದ್ದರು. " ಇಂಥ ಮಗನನ್ನು ಪಡೆದ ಕೌಸಲ್ಯಯೂ ದಶರಥನೂ ಧನ್ಯರು . ಅಕೃತ್ರಿಮ ಸೌಂದರ್ಯದ ನೆಲೆವೀಡಾದ ಈ ರಾಮಚಂದ್ರನು ಕಣ್ಗೆಸೆಯುವ ಸೋಜಿಗವಾಗಿದ್ದಾನೆ. ನೇಗಿಲದ ದಾರೆಯಲ್ಲಿ ಹುಟ್ಟಿದ ಸೀತೆಯೂ ಸಾಮಾನ್ಯಳೇನಲ್ಲ. ನೆಲದ ಮಗಳಾದ ಸೀತೆಯೇ ರಾಮನಿಗೆ ಅನುರೂಪಳಾದ ಮಡದಿ, ರಾಮನೇ ಸೀತೆಗೆ ಅನುರೂಪನಾದ ಪತಿ." ರಮೆಯೇ ಹರಿಗೆ ತಕ್ಕವಳಾದ ಪತ್ನಿ; ಹರಿಯೇ ರಮೆಗೆ ತಕ್ಕವನಾದ ಪತಿ, ಅಲ್ಲವೆ ? ಇವನು ಸೀತೆಗೆ ತಕ್ಕ ಇನಿಯ ಎನ್ನುವುದನ್ನು ಬಿಲ್ಲು ಹಿಡಿದೇ ಪರೀಕ್ಷಿಸಬೇಕೇಕೆ ? ಸೂರ್ಯನ ಬೆಳಕನ್ನು ಗುರುತಿಸುವುದಕ್ಕೆ ಪಂಜು ಹಿಡಿದು ಹುಡುಕಬೇಕೆ ? ನಮ್ಮ ಪುಣ್ಯಫಲವನ್ನಾದರೂ ಧಾರೆಯೆರೆದು ನಾವು ದೇವರಲ್ಲಿ ಬೇಡಿಕೊಳ್ಳುವೆವು, ಭಗವಾನ್, ಇವನೇ ಸೀತೆಯನ್ನು ವರಿಸುವಂತಾಗಲಿ. ಇನ್ನೆಲ್ಲಿ ಸಿಗಬೇಕು ಇಂಥ ಜೋಡಿ !" ಊರ ಮುತ್ತೈದೆಯರು ಪಿಸುಗುಟ್ಟಿದ ಮಾತು ರಾಮನ ಕಿವಿಗೆ ಬೀಳದಿರಲಿಲ್ಲ. ಇಂಪಾದ ಮಾತ- ನ್ನಾಲಿಸಿದ ರಾಮಚಂದ್ರನು ಮುಗುಳುನಗೆ ನಗುತ್ತ ಮೆಲ್ಲಗೆ ಎಡಗೈಯಿಂದ ಬಿಲ್ಲನ್ನೆತ್ತಿದನು. ರಾಜರ ಗುಂಪು ಅಚ್ಚರಿಯಿಂದ ಕಣ್ಕಣ್ಣು ಬಿಡು- ತ್ತಿತ್ತು. ಸೀರಧ್ವಜನೂ ವಿಶ್ವಾಮಿತ್ರನೂ ಮನದಲ್ಲಿ 'ಶುಭವಾಗಲಿ' ಎಂದು ಕೋರುತ್ತಿದ್ದರು. ಲಕ್ಷ್ಮಣನು ನಗುಮೋರೆಯಿಂದ ಅಣ್ಣನ ಬೀರವನ್ನು ನಿರೀಕ್ಷಿ- ಸುತ್ತಿದ್ದನು. ರಾಮನು ಹೆದೆಯೇರಿಸಿ ಬಿಲ್ಲಿಗೆ ಇಂಬನ್ನು ಹೂಡಿ- ದನು. ಭಾರಿ ಪ್ರಮಾಣದ ಆ ಧನುಸ್ಸು ಈ ಕುಮಾರನ ಸೆಳೆತಕ್ಕೆ ತಾಳಲಾರದೆ ಐರಾವತದ ಸೊಂಡಿಲಿನಲ್ಲಿ ಸಿಕ್ಕ ಕಬ್ಬಿನ ಕೋಲಿನಂತೆ ಮಧ್ಯದಲ್ಲೆ ಮುರಿದು ಬಿತ್ತು ! ಸಿಡಿದ ಧನುಸ್ಸಿನಿಂದ ಹೊಮ್ಮಿದ ನಾದ 'ರಾಮನು ಸೀತೆಯನ್ನು ಗೆಲಿದ' ಎಂಬ ಸುದ್ದಿಯನ್ನು ಒಯ್ಯುವ ಹರಿಕಾರನಂತೆ ದಿಗಂತಕ್ಕೆ ಪಸರಿಸಿತು. ಮಿಥಿಲೆಯ ಅಂತಃಪುರದಲ್ಲಿ ಬೆಳೆದ ರಮೆಯ ಮೂರ್ತಿ, ಲೋಕಸುಂದರನಾದ ರಾಮನೆಡೆಗೆ ಹಂಸಗತಿಯಿಂದ ನಡೆದು ಬಂತು. ನೋಡಿದಷ್ಟು ಹೊಸತೆನಿಸುವ ರೂಪ ಸೀತೆಯದು. ಕಾಂತಿಯೇ ಮುಖದಲ್ಲಿ ಮಂದಹಾಸದ ಕಳೆಯನ್ನು ತಂದಿತ್ತು. ಕಣ್ಣಿನಿಂದಲೆ ಮನದ ಇಂಗಿತವನ್ನು ನುಡಿವ ಸೊಬಗಿ ಸೀತೆ. ಆಕೆಯ ಎಲ್ಲ ಗುಣಗಳನ್ನು ಪಾಡಲು ನಾಲ್ಕುಮೋರೆಯ ವಿಧಿಗೇ ಸಾಧ್ಯವಾಗ- ಲಿಲ್ಲವಂತೆ ! ನಮ್ಮಂಥವರ ಪಾಡೇನು? ನಾಚಿಕೆಯ ಪೂರವನ್ನು ಭಕ್ತಿ ಸಡಲಿಸಿತು. ಕಣ್ಣು ತಂತಾನೇ ರಾಮನೆಡೆಗೆ ಹರಿಯಿತು. ಸೀತೆ ಮೆಲ್ಲನೆ ಬಂಗಾರದ ತಾವರೆಯ ಮಾಲೆಯನ್ನುರಾಮನ ಕತ್ತಿನಲ್ಲಿ ಹಾಕಿದಳು. ಪ್ರತಿಯಾಗಿ ರಾಮನೂ ಕುಡಿಗಣ್ಣೋಟದ ಮಾಲೆಯನ್ನು ಸೀತೆಯ ಮೇಲೆ ಚೆಲ್ಲಿದನು. ಲೋಕದ ತಾಯಿ ತಂದೆಗಳಾದ ಈ ನವ ದಂಪತಿ- ಗಳನ್ನು ಕಂಡು, ದೇವಲೋಕಕ್ಕೆ ದೇವಲೋಕವೇ ಆನಂದಸಾಗರದಲ್ಲಿ ತೇಲಾಡಿತು. ಗಂಧರ್ವರು ಹಾಡಿದರು. ಅಚ್ಚರಸಿಯರು ನಾಟ್ಯವಾಡಿದರು. ದೇವತೆಗಳು ಸಲ್ಲಿಸಿದ ಪೂಜೆಯಿಂದ ರಮೆಯೂ ರಮೆಯರಸನೂ ಸಂತಸಗೊಂಡರು. ಕದನದ ನಾಟಕವಾಡಿದರು ವಿಶ್ವಾಮಿತ್ರನ ಒಪ್ಪಿಗೆ ಪಡೆದು ಸೀರಧ್ವಜನು ದಶರಥನೆಡೆಗೆ ದೂತರನ್ನಟ್ಟಿದನು. ಮೂರು ದಿನಗಳ ದಾರಿ ನಡೆದು ದೂತರು ಅಯೋಧ್ಯೆಯನ್ನು ತಲುಪಿದರು. ಮಂತ್ರಿಗಳು ನೆರೆದ ಸಭೆಯಲ್ಲಿ ಅವರು ದಶರಥನೆದುರು ಈ ರೀತಿ ಬಿನ್ನವಿಸಿಕೊಂಡರು: "ಮಹಾರಾಜನೆ, ಭೂಮಂಡಲದ ಎಲ್ಲ ವೀರರೂ ಮಾಡಲಾರದ ಕಾರ್ಯವನ್ನು, ನಿಮ್ಮ ಕುಮಾರ ರಾಮಚಂದ್ರ ಮಾಡಿದ್ದಾನೆ. ಅವನು ಹರನ ಧನುಸ್ಸನ್ನು ಮುರಿದಿದ್ದಾನೆ ! ಸೀತೆ ಅವನಲ್ಲಿ ಅನು- ರಕ್ತಳಾಗಿದ್ದಾಳೆ. ವಿವಾಹಕ್ಕೆ ಎಲ್ಲವೂ ಅಣಿಯಾಗಿದೆ. ನಿಮ್ಮ ಗೆಳೆಯರಾದ ವಿಶ್ವಾಮಿತ್ರ ಮಹರ್ಷಿಗಳು ನಿಮ್ಮ ಬರವನ್ನೆ ಕಾಯುತ್ತಿದ್ದಾರೆ. ಜನಕ ಭೂಪತಿಯು ನಿಮಗೆಲ್ಲರಿಗೂ ಮದುವೆಯ ಕರೆಯನ್ನು ಕಳುಹಿದ್ದಾನೆ." ದೂತರ ವಾರ್ತೆ ರಾಜನಿಗೆ ಮುದವನ್ನೊಡ್ಡಿತು. ಮಂತ್ರಿಗಳೊಡನೆ ಹೊರಡುವ ಸಿದ್ಧತೆಯೂ ತ್ವರೆಯಿಂದ ನಡೆಯಿತು. ಮರುದಿನ ಬೆಳಿಗ್ಗೆಯೇ ಮುಂಚಿತವಾಗಿ ತಮ್ಮ ಬರವನ್ನು ದೂತರಿಂದ ದಶರಥನು ತಿಳಿಯಪಡಿಸಿದನು. ಸುಮಂತನು ರಥವನ್ನು ಸಜ್ಜುಗೊಳಿಸಿದನು. ರಾಜವೈಭವದ ಸೇನೆ ಮುಂಬದಿಯಲ್ಲಿ ಹೊರಟು ನಿಂತಿತ್ತು. ಮಂತ್ರಿಗಳು-ಬ್ರಾಹ್ಮಣರು- ಪಟ್ಟದರಸಿ- ಯರು- ವಸಿಷ್ಠ ಮಹರ್ಷಿಗಳು ಇವರೆಲ್ಲರೊಡನೆ ಮಹಾರಾಜ ದಶರಥನು ಮಿಥಿಲೆಗೆ ತೆರಳಿದನು. ಮಹಾರಾಜನ ಬರವನ್ನು ದೂರದಲ್ಲಿಯೆ ಗಮನಿಸಿದ ಜನಕರಾಯನು ಶತಾನಂದರೊಡನೆ ಎದುರ್ಗೊಂಡು, ವೈಭವದ ಸ್ವಾಗತವನ್ನು ಕೋರಿದನು. ಸತ್ಕಾರವೆಲ್ಲ ನಡೆದಮೇಲೆ ಯೋಗ- ಕ್ಷೇಮದೊಡನೆ ವಿಷಯದ ಪ್ರಸ್ತಾವವೂ ಬಂತು. "ಮಹಾರಾಜನನ್ನು ಕಂಡು ತುಂಬ ಸಂತೋಷ -ವಾಯಿತು. ನಿಮ್ಮಂಥವರ ದರ್ಶನ ಪ್ರಿಯವಾದರೂ ದುರ್ಲಭವಾಗಿದೆ. ರಘುವಂಶದ ರಾಜರೊಡನೆ ನಮ್ಮ ಸಂಬಂಧ ಬೆಳೆವುದು ನಮಗೆ ಸಂತಸದ ಮಾತು. ಯಜ್ಞಕಾರ್ಯವು ಮುಗಿದಮೇಲೆ ನನ್ನ ಕನ್ನೆಯರಾದ ಸೀತೋರ್ಮಿಲೆಯರನ್ನು ನಿಮ್ಮೆಲ್ಲರ ಒಪ್ಪಿಗೆಯಿದ್ದರೆ ರಾಮ-ಲಕ್ಷ್ಮಣರಿಗೆ ಕೊಡುವುದೆಂದು ಬಯಸಿದ್ದೇನೆ." ದಶರಥನ ಉತ್ತರ ಚುಟುಕು ಆದರೂ ಸಮಗ್ರ- ವಾಗಿತ್ತು: "ಕೊಡುಗೆಯಲ್ಲಿ ಕೊಳ್ಳುವವರ ಇಚ್ಛೆಗಿಂತಲೂ ಕೊಡುವವರ ಇಚ್ಛೆ ಮೇಲಲ್ಲವೆ ? 'ಪ್ರತಿಗ್ರಹೋ ದಾತೃವಶಃ'. ಅಂತೂ ಈ ಮದುವೆಗೆ ನಾನು ಸಂತೋಷದಿಂದ ಸಮ್ಮತಿಸಬಲ್ಲೆ. ಇದು ನಮಗೆ ಪ್ರಿಯವಾದ ಸಂಬಂಧ" ಜನಕನ ತಮ್ಮನಾದ ಕುಶಧ್ವಜನೂ ಮದುವೆಯ ವಾರ್ತೆಯನ್ನು ದೂತರಿಂದ ತಿಳಿದು ಮಿಥಿಲೆಗೆ ಹೊರಟು ಬಂದನು. ಕುಲಾಚಾರ್ಯರಾದ ವಸಿಷ್ಠ ಮಿಶ್ರರು ಕುಲ ಪದ್ಧತಿಗಳನ್ನೆಲ್ಲ ನೆರವೇರಿಸಿದರು. ಇಕ್ಷಾಕು-ಮಾಂಧಾತೃ-ಸಗರ-ಅಂಬರೀಷ-ರಘು-ಅಜರಂಥ ಹರಿಭಕ್ತರಾದ ಸಾರ್ವಭೌಮರನ್ನು ಪಡೆದ ವರವಂಶವನ್ನು ಬಣ್ಣಿಸಿದರು. ಮುನಿಗಳ ಅಪ್ಪಣೆಯಂತೆ ವಧೂವಂಶವನ್ನು ಜನಕನೇ ಬಣ್ಣಿಸಿದನು: "ನಿಮಿ-ದೇವರಾತ-ಹ್ರಸ್ವರೋಮ ಮೊದಲಾದ ರಾಜರ್ಷಿಗಳ ವಂಶದಲ್ಲಿ ಜನಿಸಿದ ಈ ಸೀರಧ್ವಜನು ತನ್ನ ಕನ್ನೆಯರನ್ನು ರಾಮ-ಲಕ್ಷ್ಮಣರಿಗೆ ವಾಗ್ದಾನವಿತ್ತಿದ್ದಾನೆ." ಇಷ್ಟರಲ್ಲಿ ತೃಪ್ತರಾಗದೆ ವಸಿಷ್ಠರೂ ವಿಶ್ವಾಮಿತ್ರ- ಮುನಿಯೂ ಒಟ್ಟಾಗಿ ಜನಕನನ್ನು ಕೇಳಿಕೊಂಡರು. "ರಾಜನ್, ನಿನ್ನ ತಮ್ಮ ಕುಶಧ್ವಜನಿಗೆ ಮಾಂಡವಿ-ಶ್ರುತಕೀರ್ತಿ ಎಂದು ಇಬ್ಬರು ಕನ್ನೆಯರಿದ್ದಾರೆ. ಅವರನ್ನು ಭರತ ಶತ್ರುಘ್ನರಿಗೆ ಕೊಡಬೇಕೆಂದು ನಮ್ಮ ಅಪೇಕ್ಷೆ. " ಅದನ್ನು ಕೇಳಿದ ಜನಕನೂ ಕುಶಧ್ವಜನೂ 'ನಾವು ಏನನ್ನು ಬಯಸುತಿದ್ದೆವೋ ಅದನ್ನೇ ನೀವು ಆಡಿದಿರಿ' ಎಂದುಕೊಂಡರು. ಮರುದಿನವೇ ನಾಂದೀಶ್ರಾದ್ದ ನೆರವೇರಿತು. ಮಕ್ಕಳ ಒಳಿತಿಗಾಗಿ ದಶರಥನು ವಿಪ್ರರಿಗೆ ನಾಲ್ಕು ಸಾವಿರ ಗೋವುಗಳನ್ನು ದಾನಮಾಡಿದನು. ಮದುವೆಯ ಕಾಲಕ್ಕೆ ಸರಿಯಾಗಿ ಭರತನ ಸೋದರಮಾವನಾದ ಯುಧಾಜಿತ್ತು ಕೂಡ ಅಲ್ಲಿಗೆ ಬಂದು ಸೇರಿಕೊಂಡನು. ಇತ್ತ ಸೀರಧ್ವಜನೂ ಕುಶಧ್ವಜನೂ ತಮ್ಮ ಮಕ್ಕಳಿಗೆ ಮಾಡಬೇಕಾದ ಕಟ್ಟು ಕಟ್ಟಳೆಗಳನ್ನು ಶತಾನಂದರ ನಿರ್ದೇಶನದಲ್ಲಿ ಪೂರಯಿಸಿದರು. ನಾಲ್ವರಿಗೂ ಉತ್ತರಾಫಲ್ಗುನೀ ಸುಮುಹೂರ್ತದಲ್ಲಿ ವಿವಾಹ ಜರುಗಿತು. ವಿಶ್ವಾಮಿತ್ರನ ಅನುಮತಿಯಂತೆ ವಸಿಷ್ಠರೇ ವರನ ಕಡೆಯ ಪುರೋಹಿತರಾದರು. ಜಗನ್ಮಾತೆ ಸೀತೆಯ ಕಮಲಾಂಕಿತವಾದ ಚಿಗುರುಗೈ ಜಗನ್ನಾಯಕ ರಾಮನ ಚಕ್ರಾಂಕಿತವಾದ ಕೈ ಒಂದನ್ನೊಂದು ಮಿದುವಾಗಿ ಅದುಮಿಕೊಂಡವು. ಸಪ್ತಪದಿಯ ಕಾರ್ಯವೂ ನೆರವೇರಿತು. ಜಗತ್ತಿನ ಜನನಿಯೂ ಜನಕನೂ ನೂತನ ವಧೂ-ವರರಾಗಿ ಪುನರ್ಮಿಳಿತರಾದರು. ಈ ಸೊಬಗನ್ನು ಕಾಣಲು ನೆರೆದ ಸುರರ ವಿಮಾನವೇ ಬಾನಿನಲ್ಲೆಲ್ಲ ತುಂಬಿಕೊಂಡಿತ್ತು. ಸಗ್ಗಿಗರು ವಾದ್ಯ- ಗಳನ್ನು ಮೊಳಗಿಸಿದರು. ಗಂಧರ್ವರು ಗೀತಗಳನ್ನು ಹಾಡಿದರು. ನಂದನದ ಹೂ ಬಳ್ಳಿಗಳು ಕುಸುಮದ ಸರಿಯನ್ನು ಚೆಲ್ಲಿದವು. ಅಪ್ಸರೆಯರು ಕುಣಿದರು. ಭೂವ್ಯೋಮಗಳಲ್ಲಿ ಕಣ್ಸೆಳೆಯುವ ಬೆಡಗಿಯರ ಸಡಗರದ ಕೋಲಾಹಲ. ಜನಕನು ನಾಲ್ವರೂ ಮದುಮಕ್ಕಳಿಗೆ ಉಡುಗೊರೆ- ಯೆಂದು ಮಣಿರತ್ನಗಳನ್ನೂ ಪಟ್ಟೆ ಪೀತಾಂಬರ- ಗಳನ್ನೂ-ಹಸುಗಳನ್ನೂ- ಸೇನೆಗಳನ್ನೂ- ಬಂಗಾರದ ರಾಶಿಯನ್ನೂ-ದಾಸದಾಸಿಯರನ್ನೂ ಕೊಟ್ಟನು. ಲಕ್ಷ್ಮಿಯು ನಾರಾಯಣನನ್ನೆಂಬಂತೆ, ಜಯಂತಿಯು ವೃಷಭದೇವನನ್ನೆಂಬಂತೆ ಸೀತೆಯು ರಾಮನನ್ನನು- ಸರಿಸಿದಳು. ಗುಣಭರಿತರಾದ ಈ ದಂಪತಿಗಳು ಜಗತ್ತಿ- ನ ತಾಯಿ-ತಂದೆಯರಲ್ಲವೆ ? ಇವರಿಗೆ ಮುಪ್ಪೆಂಬು- ದಿಲ್ಲವಂತೆ ! ದೋಷದ ಲೇಶವೂ ಇಲ್ಲವಂತೆ ! ದೇವತೆಗಳು ಪ್ರಾರ್ಥಿಸಿದರೆಂದು ಇವರು ಭೂಮಿ- ಯಲ್ಲಿ ಅವತರಿಸಿದರಂತೆ ! ಹೀಗೆಂದು ಮದುವೆಯ ಮನೆಯಲ್ಲಿ ಜನರಾಡಿಕೊಳ್ಳುತ್ತಿದ್ದರು. ಅನಂತರ ಜನಕನ ಒಪ್ಪಿಗೆ ಪಡೆದು ವಿಪ್ರರೊಡನೆ, ಸೇನೆಗಳೊಡನೆ, ಮಕ್ಕಳು ಸೊಸೆಯಂದಿರೊಡನೆ ರಾಜನು ಅಯೋಧ್ಯೆಗೆ ತೆರಳಿದನು. ಸಂತಸದಲ್ಲಿ ಸಾಗಿತ್ತು ಪ್ರಯಾಣ. ನಡುವೆ ಏಕೋ ಭಯದ ಕಾರ್ಮುಗಿಲು ಸುಳಿದಂತಾಯಿತು. ಯಾವುದೋ ಪ್ರಾಣಿ ಸಂತಸದ ಸೇನೆಗೆ ಅಪಶಕುನದ ಬೇನೆಯನ್ನು ಕೀಲಿಸಿತ್ತು. ಏನೀದುಶ್ಶಕುನದ ಅರ್ಥ? ರಾಜನ ಬಗೆ ತಳಮಳಗೊಂಡಿತು. ಬರಬಹುದಾದ ವಿಪತ್ತಿನ ಕಲ್ಪನೆಯಿಂದ ಮೂಕಯಾತನೆಯನ್ನನುಭವಿಸಿತು. ಇಂಥ ಸಂದರ್ಭದಲ್ಲಿ ವಸಿಷ್ಠರೇ ಊರುಗೋಲು, ಅವರ ಸಮಾಧಾನದ ಮಾತೇ ಆಸರೆ, ನಿರೀಕ್ಷಿಸಿ- ದಂತೆಯೇ ಆ ಆಸರೆ ದಶರಥನಿಗೆ ದೊರೆಯಿತು. "ಆಪತ್ತು ಸನ್ನಿಹಿತವಾಗಿದೆ ರಾಜನ್, ಆದರೆ ಅದು ಬೇಗನೆ ಶಾಂತವಾಗಲಿದೆ, ಕಳವಳಬೇಡ ತಾಳ್ಮೆಯಿಂ- ದಿರು. " ವಸಿಷ್ಠರ ಮಾತು ಮುಗಿವುದರೊಳಗೆ ಪ್ರಳಯಾಗ್ನಿ- ಯಂತೆ ಪಜ್ಜಳಿಸುವ ಒಂದು ರೂಪ, ಸೇನೆಯ ಮುಂದೆ ನಿಂತಿತ್ತು. ಆ ರೂಪವನ್ನು ಕಂಡು ಮಹರ್ಷಿಗಳೂ ಚಿಂತೆಗೀಡಾದರು. ಇಪ್ಪತ್ತೊಂದು ಬಾರಿ ಭೂಮಿಯಲ್ಲಿ ಕ್ಷತ್ರಿಯರ ಸಂತಾನವನ್ನು ಸದೆಬಡಿದ ಈ ಪರಶುರಾಮ ಮತ್ತೆ ಪುನಃ ಏಕೆ ಉರಿದೆದ್ದಿದ್ದಾನೆ ? ಹೆಗಲಲ್ಲಿರಿಸಿದ ಈ ಕೊಡಲಿ-ಕೈಯಲ್ಲಿ ತೊಳಗುವ ಈ ಧನುರ್ಬಾಣ ಏನನ್ನು ಬಯಸುತ್ತಿದೆ ? ಮತ್ತೊಮ್ಮೆ ಈ ರಾಮಾಗ್ನಿ- ಯು ಕ್ಷತ್ರಿಯ ವಂಶವನ್ನು ಒಣಹುಲ್ಲಿನಂತೆ ಸುಡಬಯಸುವುದಿಲ್ಲ ತಾನೆ ? ತ್ರೈಲೋಕ್ಯವನ್ನೇ ನಾಶಿಸ- ಬಯಸುವುದಿಲ್ಲ ತಾನೆ ? ವಸಿಷ್ಠಾದಿಗಳು ಮುಂದೆ ಬಂದು 'ಪ್ರಸನ್ನನಾಗು ಜಾಮದಗ್ನ್ಯ' ಎಂದು ಬೇಡಿಕೊಂಡರು. ಕೊಡಲಿರಾಮ ನೇರವಾಗಿ ದಾಶರಥಿ ರಾಮನೆಡೆಗೆ ಬಂದು ನುಡಿದನು. "ದಶರಥಕುಮಾರ ! ಹಿಂದೆ ಹರಿಯೂ ಹರನೂ ಜಗತ್ಪ್ರಸಿದ್ಧವಾದ ತಮ್ಮ ಬಿಲ್ಲಿನಿಂದ ರಕ್ಕಸರನ್ನು ಸಂಹರಿಸಿದ್ದರು. ಹರಿಹರರ ಶಕ್ತಿಯನ್ನು ತಿಳಿಯುವ ಬಯಕೆಯಿಂದ ದೇವತೆಗಳೊಮ್ಮೆ ಅವರು ಅನ್ಯೋನ್ಯ ಯುದ್ಧ ಮಾಡಿಕೊಳ್ಳುವಂತೆ ಬೇಡಿ- ಕೊಂಡರು. ಭಕ್ತವತ್ಸಲರಾದ ಅವರು ಯುದ್ಧ ಸನ್ನದ್ಧರಾದರು. ಅಹಂಕಾರತತ್ವದ ಅಭಿಮಾನಿ ಯಾದ ರುದ್ರನನ್ನು ಶ್ರೀಹರಿ ಹುಂಕಾರಮಾತ್ರದಿಂದ- ಲೇ ಸ್ಥಗಿತಗೊಳಿಸಿದನು-ಗರುಡನು ಹಾವನ್ನು ಸ್ತಬ್ಧ- ಗೊಳಿಸುವಂತೆ ! ಜಯಶಾಲಿಯಾದ ಹರಿಯನ್ನು ಬ್ರಹ್ಮಾದಿಗಳು ಸ್ತುತಿಸಿದರು. ಜಗತ್ತನ್ನೆಲ್ಲ ನಿಯಮಿಸ- ಬಲ್ಲ ಹರಿಗೆ ಇದೊಂದು ದೊಡ್ಡದಲ್ಲ ಎಂದು ಎಲ್ಲರೂ-ರುದ್ರನೂ ಕೊಂಡಾಡಿದರು. " ಆ ರುದ್ರಧನುಸ್ಸನ್ನು ನೀನೀಗ ಮುರಿದಿದ್ದೀಯಾ, ಅಷ್ಟರಿಂದ ನೀನು ಅಪ್ರತಿಮನೆಂದು ಜನ ಕೊಂಡಾಡಿದರು ! ಅದರಿಂದೇನು ಬಂತು ? ಇಗೋಆ ವಿಷ್ಣುವಿನ ಧನುಸ್ಸು ಇಲ್ಲಿ ನನ್ನ ಬಳಿಯಲ್ಲಿದೆ. ನಿನ್ನಲ್ಲಿ ಕಸುವಿರುವುದು ನಿಜವಾದರೆ ಇದನ್ನೆತ್ತಿ ಹೆದೆಯೇರಿಸು. ಹೂಡು ಅದರಲ್ಲಿ ಬಾಣವನ್ನು, ಆಗ ನೀನೂ ನನ್ನಂತೆಯೇ ವೀರ ಎಂಬುದನ್ನು ಒಪ್ಪಬಲ್ಲೆ. ಇಲ್ಲದಿದ್ದರೆ ಹೇಗೆ ? " ಸಿಟ್ಟುಗೊಂಡ ಭಾರ್ಗವನನ್ನು ಕಂಡು ಭೀತನಾದ ದಶರಥ ಅವನನ್ನು ವಂದಿಸಿ ಕಣ್ಣೀರುಗರೆದು ಬೇಡಿಕೊಂಡನು. "ರಾಗ ದ್ವೇಷರಹಿತನಾದ ಪರಮಪುರುಷನಲ್ಲವೆ ನೀನು ? ಭೂಭಾರವನ್ನು ಪರಿಹರಿಸುವುದಕ್ಕಾಗಿ ರೇಣುಕೆಯಲ್ಲಿ ಮೈದೋರಿದವನಲ್ಲವೆ ನೀನು ? ಭಕ್ತವತ್ಸಲನಾದ ಓ ಭಾರ್ಗವನೆ, ಈ ವೃದ್ಧನಾದ ಭಕ್ತನ ಮೇಲೆ ದಯೆದೋರು. ನನಗೆ ಪುತ್ರ ಭಿಕ್ಷೆ - ಯನ್ನು ನೀಡು. " ಅದಕ್ಕೆ ಪರಶುರಾಮನ ಉತ್ತರ ಮಾರ್ಮಿಕ- ವಾಗಿತ್ತು: "ಮೂರು ಮಕ್ಕಳನ್ನು ನಿನಗೆ ಬಿಟ್ಟಿದ್ದೇನೆ. ರಾಮನು ನನ್ನ ಎದುರಾಳಿಯೇ ಸರಿ. " ಹೀಗೆಂದು ರಾಮನೆಡೆಗೆ ತಿರುಗಿ ನುಡಿದನು: "ರಾಮಚಂದ್ರ, ತೆಗೆದುಕೋ ಈ ಬಿಲ್ಲನ್ನುಹರಿಯಲ್ಲದೆ ಬೇರೊಬ್ಬನು ಎತ್ತಲಾರದ ಬಿಲ್ಲನ್ನು." ರಾಮನು ವಿನಯದಿಂದ 'ಹಾಗೆಯೇ ಆಗಲಿ' ಎಂದು ನುಡಿದು, ತೇಜಃಪುಂಜದಂತಿರುವ ಆ ಬಿಲ್ಲನ್ನು ತೆಗೆದುಕೊಂಡು ಹೆದೆಯೇರಿಸಿ ಲೀಲಾಜಾಲವಾಗಿ ಬಾಣವನ್ನು ಹೂಡಿದನು. ದೇವತೆಗಳೂ ಮುನಿಗಳೂ ಈ ಲೀಲಾ ನಾಟಕವನ್ನು ನೋಡಲು ಗಗನದಲ್ಲಿ ಮುಕುರಿದ್ದರು. "ಪರಮಪುರುಷನಾದ ಪರಶುರಾಮನೆ, ನಿನ್ನನ್ನು ಈ ಬಾಣ ಭೇದಿಸಲಾರದು" ಎಂದು ರಾಮನು ಬಾಣ- ವನ್ನು ಬಿಡಲುದ್ಯುಕ್ತನಾದಾಗ ಪರಶುರಾಮನು ದೇವಗುಹ್ಯವೊಂದನ್ನು ಹೊರಗೆಡಹಿದನು: "ಕಾರಣಾಂತರದಿಂದ ನನ್ನ ಎದೆಯಲ್ಲಿ ಅತುಲ- ನೆಂಬ ಒಬ್ಬ ಅಸುರನು ನೆಲಸಿದ್ದಾನೆ. ನಿನ್ನ ಈ ಕೂರ್ಗಣೆಯನ್ನು ಅವನ ಮೇಲೆ ಎಸೆ, ನನ್ನನ್ನಲ್ಲದಿದ್ದರೂ ಅವನನ್ನು ಅದು ಭೇದಿಸಬಲ್ಲುದು. " ರಾಮನು ತನ್ನ ನಿಶಿತವಾದ ಬಾಣದಿಂದ ಅತುಲ- ನನ್ನು ಭಸ್ಮವಾಗಿಸಿದನು. ತನ್ನ ಉದ್ದೇಶವನ್ನು ಸಾಧಿಸಿದವನಂತೆ ಪರಶುರಾಮನು 'ನೀನು ಸಾಕ್ಷಾತ್ ನಾರಾಯಣನ ಅವತಾರ ಎನ್ನುವುದು ಜನರಿಗೆ ಇದರಿಂದ ತಿಳಿದಂತಾಯಿತು' ಎಂದು ನುಡಿದು ಮಹೇಂದ್ರದ್ವೀಪಕ್ಕೆ ಮರಳಿದನು. ಇದು ಭಗವಂತನ ಲೀಲೆ ! ಭಗವದ್ರೂಪಗಳಲ್ಲಿ ಭೇದವೆಲ್ಲಿಂದ ಬರಬೇಕು? ಎಂದುಕೊಳ್ಳುತ್ತ ದೇವತೆಗಳು ಸ್ವರ್ಗಕ್ಕೆ ಮರಳಿದರು. ಇಬ್ಬನಿಗೆ ಮುದುಡಿದ್ದ ತಾವರೆ ಮುಂಜಾವದ ಹೊಂಬಿಸಿಲಿಗೆ ಅರಳುವಂತೆ ದಶರಥನ ಮುಖ ಪುತ್ರವಿಜಯದಿಂದ ನಳನಳಿಸಿತು. ಪರಿವಾರಸಮೇತ ನಾದ ರಾಜ ಆನಂದದಿಂದ ರಾಜಧಾನಿಗೆ ತೆರಳಿದನು. ಅಯೋಧ್ಯೆಯನ್ನು ತಳಿರುತೋರಣಗಳಿಂದ ಅಲಂಕರಿಸಿದ್ದರು. ಹೂಗಳನ್ನು ಚೆಲ್ಲಿ ಬೀದಿಗಳನ್ನು ಸಿಂಗರಿಸಿದ್ದರು. ಪುರಜನರು ವಿವಿಧವಾದ್ಯಗಳಿಂದ ಪೂರ್ಣಕುಂಭದೊಡನೆ ವಧೂವರರನ್ನು ಎದುರು- ಗೊಂಡರು. ನಾಲ್ವರೂ ವಧೂವರರು ಬ್ರಾಹ್ಮಣರ ಆಶೀರ್ವಾದ- ವನ್ನು ಪಡೆದು ಸಂತಸಗೊಂಡರು. ಸೀತೆ ಎಲ್ಲ ಮುತ್ತೈದೆಯರಿಗೂ ಮನೆಮಾತಾದಳು. ಅವರು 'ಸೀತೆಯೆಂದರೆ ಗುಣದಲ್ಲಿ ಸಾಕ್ಷಾತ್ ಲಕ್ಷ್ಮಿದೇವಿ' ಎಂದಾಡಿಕೊಳ್ಳುತ್ತಿದ್ದರು ! ಅವರಂದುಕೊಂಡದ್ದು ನಿಜವೇ ತಾನೆ ? ಶ್ವೇತದ್ವೀಪದಲ್ಲಿ ರಮೆಯೊಡನೆ ರಂಜಿಸುವ ಹರಿಯೇ ಜಂಬುದ್ವೀಪದಲ್ಲಿ ಜನಕಜೆ- ಯೊಡನೆ ಶೋಭಿಸಿದನು. ಅಯೋಧ್ಯಾಕಾಂಡ ಜಗತ್ಪತಿಗೆ ಯುವರಾಜ ಪದವಿ ಸೀತಾ-ರಾಮರ ಜೋಡಿ ಬೆಳದಿಂಗಳು-ಚಂದ್ರಮರ ಜೋಡಿಯಂತಿತ್ತು.ಎಂತಲೇ ಮಹಾರಾಜ ದಶರಥನು ಕಡಲಿನಂತೆ ಅನಂದಪೂರದಲ್ಲಿ ತುಂಬಿಹೋದನು. ಭರತ-ಶತ್ರುಘ್ನರು ಕೇಕಯ ರಾಜನ ಬಳಿಯೇ ನೆಲಸಿದ್ದರು. ಮನೆಮನೆಯಲ್ಲಿ, ಊರು-ಕೇರಿಗಳಲ್ಲಿ, ಬೀದಿ-ಅಂಗಡಿಗಳಲ್ಲಿ, ಎಲ್ಲೆಲ್ಲೂ-ಎಲ್ಲರೂ ರಾಮಭದ್ರನನ್ನು ಕೊಂಡಾಡುವವರೆ. ರಾಮನ ಗುಣಗಾನವನ್ನು ಕೊಂಡಾಡುವವರೆ. ರಾಮನ ಗುಣಗಾನವನ್ನು ಕೇಳಿ ರಾಜನ ಹೃದಯ ತುಂಬಿ ಬಂದಿತು. ಕ್ರಮೇಣ ರಾಮನಿಗೆ ರಾಜ್ಯಾಭಿಷೇಕ ಮಾಡಿಸಬೇಕು ಎನ್ನುವ ಯೋಚನೆ ತಲೆಯಲ್ಲಿ ಸುಳಿಯಿತು. ಕೂಡಲೆ ಮಂತ್ರಿ ಪ್ರಮುಖರೊಡನೆ ಈ ವಿಷಯವನ್ನು ಚರ್ಚಿಸಿ ಕೊನೆಗೊಂದು ಸಭೆ ಕರೆದನು. ಅದಕ್ಕೆ ಎಲ್ಲ ಮಾಂಡಲಿಕ ರಾಜರಿಗೂ ಪ್ರಜೆಗಳಿಗೂ ಆಹ್ವಾನ ಕಳುಹಿದನು. ಜನರೆಲ್ಲ ನೆರೆದ ಸಭೆಯಲ್ಲಿ ಮಹಾರಾಜ ತನ್ನ ಬಯಕೆಯ ಒತ್ತಡವನ್ನು ತಡೆಹಿಡಿದು ಶಾಂತನಾಗಿ ನುಡಿದನು: "ನನ್ನ ಕುಮಾರ ರಾಮಚಂದ್ರು ಜವ್ವನದ ಹೊಸಿತಿಲನ್ನು ಏರುವ ಹಂತದಲ್ಲಿದ್ದಾನೆ. ಅವನನ್ನು ಯುವರಾಜನನ್ನಾಗಿ ಮಾಡಬೇಕೆಂದು ನನ್ನ ಬಯಕೆ. ಕೊನೆಯ ತೀರ್ಪು ನಿಮ್ಮೆಲ್ಲರ ಒಪ್ಪಿಗೆಯ ಮೇಲಿದೆ." ಈ ಮಾತನ್ನಾಲಿಸಿದ ಸಭಾಸದರ ಮೈಯೆಲ್ಲ ಪುಲಕಗೊಂಡಿತು. ಕಂಣಂಚಿನಲ್ಲಿ ಆನಂದಾಶ್ರು ಚಿಮ್ಮಿತು. ಮನದಲ್ಲಿ ರಾಮನ ಭವ್ಯ ಮೂರ್ತಿ ನಲಿ- ದಾಡಿತು. ಎಲ್ಲರೂ ಅರಳಿದ ಮೋರೆಯಿಂದ ರಾಜನ ಸೂಚನೆಯನ್ನು 'ಸಾಧು, ಸಾಧು' ಎಂದು ಕೊಂಡಾಡಿದರು. ಸಭೆಯಲ್ಲಿ ಸೇರಿದ ಜನವೃಂದ ಏನನ್ನೋ ಹೇಳಲು ಬಯಸಿದಂತಿತ್ತು. ಇಂಗಿತವನ್ನರಿತ ವೃದ್ಧ ವಿದ್ವಾಂಸರಾದ ವಸಿಷ್ಠಾದಿಗಳು ತಮ್ಮ ಪಕ್ವವಾಣಿ- ಯಲ್ಲಿ ಸಭೆಯ ಅಭಿಪ್ರಾಯವನ್ನು ಪಡಿಮೂಡಿಸಿ- ದರು: "ಮಹಾರಾಜ, ಈ ಜನಪದದ ಪ್ರತಿಯೊಬ್ಬ ಪ್ರಜೆ- ಯೂ ಮಾನಸಿಕವಾಗಿ ದಿನವೂ ರಾಮಚಂದ್ರನಿಗೆ ಅಭಿಷೇಕಗೈಯುತ್ತದೆ. ಆ ಕೆಲಸವು ನಿನ್ನ ಕೈಯಿಂದ ಆದಷ್ಟು ಬೇಗನೆ ಕಾರ್ಯರೂಪಕ್ಕೆ ಬರುವಂತಾಗಲಿ ಎನ್ನುವುದೇ ಎಲ್ಲರ ಬಯಕೆ. ಪ್ರಜಾಪಾಲಕ, ನಿನ್ನ ಮಗನಲ್ಲಿ ತುಂಬಿರುವ ಅಕೃತ್ರಿಮ ಗುಣಗಳಿಂದ ಅವನು ಪ್ರಜೆಗಳ ಮನಸ್ಸ- ನ್ನು ಸೂರೆಗೊಂಡಿದ್ದಾನೆ. ಅಯಸ್ಕಾಂತ ಶಿಲೆಯಂತೆ ಅವನು ಆಕರ್ಷಣಶೀಲನಾಗಿದ್ದಾನೆ. ನಿನ್ನ ಕುಮಾರನೆಂದರೆ - ನಮಗೆಲ್ಲರಿಗೂ ಪರಾಯಣನಾದ ಪರಮಪುರುಷ ನಾರಾಯಣನಲ್ಲವೆ ? ಭೂಮಿಯ ಮಳಲನ್ನಾದರೂ ಲೆಕ್ಕಿಸುವುದು ಸಾಧ್ಯ. ಅವನ ಗುಣಗಳನ್ನು ಇಷ್ಟೆಂದು ಎಣಿಸಿದವರುಂಟೆ ? ಅವನು ಅಣುವಿನಲ್ಲೂ ಇರುವ ಅಣುರೂಪಿ; ಜಗತ್ತನ್ನೆ ತುಂಬಿರುವ ವಿಶ್ವರೂಪಿ ! ಬ್ರಹ್ಮಾಂಡವನ್ನೇ ಹೊತ್ತಿರುವ ಅವನಿಗಿಂತ ಗುರುತರವಾದ ವಸ್ತು ಇನ್ನೊಂದಿದೆಯೆ ? ಆ ಹರಿಯೇ ಹೂವಿಗಿಂತ ಹಗುರವೂ ಆಗಿಲ್ಲವೆ ? ಅವನು ಹುಬ್ಬು ಹಾರಿಸಿದರೆ ಸಾಕು- ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳು ನಡೆಯುತ್ತವೆ. ಇವನ ಕೀರ್ತಿ-ಚಂದ್ರನಿಗೆ ಪಕ್ಷಗಳಲ್ಲಿ ವೃದ್ಧಿ ಹ್ರಾಸಗಳಿಲ್ಲ; ಕಲಂಕದ ಲೇಶವೂ ಇಲ್ಲ. ಇದರೆದುರು ಈ ಬಾನಿನ ಚಂದ್ರಮ ಎಲ್ಲಿಯ ಎಣೆ ? ತಾಯಿ ಲಕ್ಷ್ಮೀದೇವಿ ಜನಕನ ಮಗಳಾಗಿ ಭೂಮಿ- ಯಲ್ಲಿ ಮೂಡಿಬಂದುದು ಇವನ ಸೊಬಗಿಗೆ ಮರುಳಾಗಿಯಲ್ಲವೆ? ಅಂಥ ಅನುಪಮವಾದ ರೂಪಶ್ರೀಯನ್ನು ಕಣ್ಣಾರೆ ಕಾಣುವ ಭಾಗ್ಯಶಾಲಿಗಳು ನಾವು ! " ಹಿಂದೆ ಇದ್ದ- ಈಗ ಇರುವ- ಮುಂದೆ ಬರುವ ಎಲ್ಲ ವಸ್ತುಗಳನ್ನೂ ಕೈಯಲ್ಲಿನ ಹೂಮಾಲೆಯನ್ನೆಂಬಂತೆ -ನಿನ್ನ ಮಗ ಕಾಣಬಲ್ಲ. ಅವನ ತಿಳಿವಿಗೊಂದು ಎಣೆಯೆಂಬುದುಂಟೆ ? ಎಲ್ಲೆಯೆಂಬುದುಂಟೆ ? ನಿಜಾನಂದಮಗ್ನನಾದ ನಿನ್ನ ತನಯನಿಗೆ ರಾಜ್ಯ- ಭೋಗದ ಸುಖವಾದರೂ ಏತಕ್ಕೆ ಬೇಕು ? ವೇದ- ಗಳಲ್ಲಿ ಮತ್ತು ನೀತಿ ಶಾಸ್ತ್ರಗಳಲ್ಲಿ ಹೇಳಿದ ಎಲ್ಲ ಗುಣಗಳಿಗೂ ನಿಜವಾದ ನೆಲೆ-ಆಸರೆ ನಿನ್ನ ಮಗನಾದ ರಾಮಚಂದ್ರನೊಬ್ಬನೆ. ಬ್ರಹ್ಮನ ಪರಮ ಪದವಿ, ಶಿವನ ಓಜಸ್ಸು, ಇಂದ್ರನ ಐಸಿರಿ, ಎಲ್ಲರ ಎಲ್ಲ ಗುಣಗಳೂ ನಿನ್ನ ಮಗನ ಮಹಾಗುಣದ ಅಂಶಗಳು. ಆ ಮಹಾಸಾಗರದ ಬಿಂದುಗಳು, ಸೀರ್ಪನಿಗಳು. ಕಾಮಾದಿ ಷಡ್ವೈರಿಗಳನ್ನು ನಿಗ್ರಹಿಸಿದ ದಾಂತ ನಮ್ಮ ರಾಮಚಂದ್ರ. 'ಆದಿತ್ಯವರ್ಣಂ ತಮಸಃ ಪರಸ್ತಾತ್' ಎಂದು ವೇದಗಳೇ ಕೊಂಡಾಡಿದ ಅವ ನಲ್ಲೂ ದೋಷವನ್ನು ಕಾಣುವ ಕಣ್ಣಿನಲ್ಲಿ ಕುದುರೆಗೆ ಕೋಡು ಮೂಡೀತು. ಹೀಗೆ ರಾಮಚಂದ್ರನು ಸರ್ವ ಪ್ರಕಾರದಿಂದಲೂ ಪರಿಪೂರ್ಣನಿದ್ದಾನೆ. ಯುವರಾಜನಾಗಲು ಅರ್ಹನಿದ್ದಾನೆ. ಸಾಗರಕ್ಕೆ ಬೊಗಸೆಯ ಅರ್ಘ್ಯವನ್ನೀವಂತೆ -ಸೂರ್ಯನಿಗೆ ಸೊಡರನ್ನೆತ್ತಿ ಪೂಜೆ ಸಲ್ಲಿಸುವಂತೆ-ಈ ಜಗತ್ಪತಿಗೆ, ಈ ಗುಣಧಾಮ- ನಿಗೆ ರಾಷ್ಟ್ರದ ಯುವರಾಜ ಪದವಿಯನ್ನರ್ಪಿಸು. ರಾಷ್ಟ್ರದ ಜನರ ಬಯಕೆ ಈಡೇರಲಿ." ಹೀಗೆ ವಸಿಷ್ಠಾದಿಗಳಿಂದ ಪ್ರೇರಿತನಾದ ಮಹಾರಾಜ- ನು ರಾಮನಿಗೆ ಯುವರಾಜ ಪದವಿಯನ್ನೀಯುವು- ದಾಗಿ ಸಭೆಯಲ್ಲಿ ಘೋಷಿಸಿದನು. ಪೌರರು ನಲಿದಾಡಿದರು ರಾಜನ ಘೋಷಣೆಯನ್ನು ಕೇಳಿದ ಸಭೆಗೆ ಸಭೆಯೇ ಜಯಜಯಕಾರವನ್ನು ಮಾಡಿತು. ತನ್ನ ತನಯನ ಮೇಲೆ ಪ್ರಜೆಗಳಿಗಿರುವ ಒಲವನ್ನು ಕಂಡು ಮಹಾರಾಜನ ಕಣ್ಣುಗಳು ಹನಿಗೂಡಿದವು. ಮುಂದಿನ ಸಿದ್ಧತೆಗಾಗಿ ರಾಜ ವಸಿಷ್ಠಾದಿಗಳನ್ನು ವಿನಂತಿಸಿಕೊಂಡ: "ಈ ಚೈತ್ರಮಾಸ ಅಭಿಷೇಕಕ್ಕೆ ಪ್ರಶಸ್ತವಾದ ಕಾಲ. ಪ್ರಕೃತಿದೇವಿ ಹೂ-ತಳಿರುಗಳಿಂದ ರಾಮನ ಅಭಿಷೇಕೋತ್ಸವಕ್ಕೆಂದೇ ಸಿಂಗರಿಸಿಕೊಂಡಂತಿದೆ. ನಾಳೆಯ ದಿನವೇ ಅಭಿಷೇಕದ ಕಾರ್ಯವನ್ನು ಪೂರಯಿಸುವುದು ಚೆನ್ನು, ಅದಕ್ಕಾಗಿ ಎಲ್ಲ ಅಭಿಷೇಕ ಸಾಮಗ್ರಿಗಳನ್ನು ತರಿಸಿಕೊಳ್ಳಿ. " ದಶರಥನ ಆಶಯವನ್ನರಿತ ವಸಿಷ್ಠಮಿಶ್ರರು ಕೂಡಲೇ ಅಭಿಷೇಕ ಸಾಮಗ್ರಿಗಳನ್ನು ಬರಿಸಿ- ಕೊಂಡರು. ಹೊಸ ತರದ ಬಟ್ಟೆ-ಬರೆಗಳು ಮುತ್ತುರತ್ನಗಳು ಬಹು ಬಗೆಯ ಒಡವೆ-ತೊಡವೆಗಳು ಬಂಗಾರದ ಕೊಡಗಳಲ್ಲಿ ತುಂಬಿದ ನೂರಾರು ತೀರ್ಥೋದಕಗಳು ಮುಂತಾದ ಎಲ್ಲ ಸಾಮಗ್ರಿಗಳೂ ಚತುರರಾದ ದೂತರಿಂದ ಅಣಿಗೊಳಿಸಲ್ಪಟ್ಟವು. ಮಹಾರಾಜ, ದಶರಥನು-ರಾಮನನ್ನು ತನ್ನ ಬಳಿ ಕರತರುವಂತೆ ಸುಮಂತ್ರವನ್ನು ಆಜ್ಞಾಪಿಸಿದನು. ಸುಮಂತ್ರನು ರಥವೇರಿ ರಾಮನ ಬಳಿ ಸಾರಿ ವಿನಯದಿಂದ ಮಹಾರಾಜನ ಆಣತಿಯನ್ನು ತಿಳಿಸುವುದೇ ತಡ-ರಾಮಚಂದ್ರ ರಥವೇರಿ ತಂದೆಯ ಬಳಿಗೆ ನಡೆದನು. ಸಾಮಂತರಾಜರಿಂದ ಸುತ್ತುವರಿದು ಕುಳಿತಿದ್ದ ಮಹಾರಾಜನು ದೂರದಲ್ಲೆ ಬರುತ್ತಿರುವ ತನ್ನ ಮಗನ ವರ್ಚಸ್ವಿ ಆಕೃತಿಯನ್ನು ಕಂಡು ಆನಂದಿತ- ನಾದನು. ಹುಣ್ಣಿಮೆಯ ಚಂದಿರನಂಥ ಮೋರೆ. ಅದರಲ್ಲಿ ಸದಾ ಮಿನುಗುವ ನೈಜವಾದ ಮುಗುಳ್ನಗೆ- ಯ ಕಳೆ, ಸಿಂಹದಂಥ ಮೈಕಟ್ಟು, ಸಲಗದಂತೆ ಗಂಭೀರವಾದ ನಡೆ, ತಾವರೆಯಂತೆ ಅರಳಿದ ಕಣ್ಣು. ಇಂಥ ಸರ್ವಾಂಗಸುಂದರವಾದ ಮೂರ್ತಿ ಯಾರನ್ನು ತಾನೆ ಮರುಳುಗೊಳಿಸಲಿಕ್ಕಿಲ್ಲ ? ರಾಮಚಂದ್ರ ರಥದಿಂದಿಳಿದು ದಶರಥನ ಬಳಿ ಬಂದು ಅವನ ಕಾಲಿಗೆರಗಿದನು. ಮಹಾರಾಜ ಮಣಿದ ಮಗನನ್ನು ಎತ್ತಿ ಬಿಗಿದಪ್ಪಿಕೊಂಡು, ಆನಂದಾಶ್ರುಗಳಿಂದ ಅಭಿಷೇಕಿಸಿ, 'ಸಾರ್ವಭೌಮ- ನಾಗು ಕಂದ' ಎಂದು ಆಶೀರ್ವದಿಸಿದನು. ತಂದೆಯ ಒಪ್ಪಿಗೆ ಪಡೆದು ಮಿಸುನಿಯ ಆಸನದಲ್ಲಿ ಕುಳಿತ ರಾಮಚಂದ್ರ, ಉದಯಾದ್ರಿಯನ್ನೇರಿದ ದಿವಾಕರನಂತೆ ಕಂಡನು. ಮಹಾರಾಜನು ಮೆಲ್ಲನೆ ಮಗನ ಬಳಿ ಸಾರಿ ತನ್ನ ಆಶೆಯನ್ನು ಹೊರಗೆಡಹಿ- ದನು: "ನಿನ್ನನ್ನು ಯುವರಾಜಪದವಿಗೇರಿಸಬೇಕೆಂದು ನನ್ನಿಚ್ಛೆ, ಅದನ್ನು ಅನುಮೋದಿಸುವೆಯಾ ಕಂದ ? ರಕ್ಷಣೆಯ ಭಾರವನ್ನು ಹೊರಬಲ್ಲ ನಿನ್ನಲ್ಲಿ ಈ ಹೊರೆಯನ್ನಿಳಿಸಿ ಮುದುವಿನಿಂದ ದುರ್ಬಲನಾದ ನಾನು ವಿಶ್ರಾಂತಿಯ ಯೋಚನೆಯನ್ನು ಮಾಡ- ಬೇಕಾಗಿದೆ." ರಾಮಚಂದ್ರ 'ನಿಮ್ಮಿಚ್ಛೆಯೇ ನನ್ನಿಚ್ಛೆ' ಎಂದವನೆ ತನ್ನರಮನೆಗೆ ತೆರಳಿದ. ರಾಮನನ್ನು ಕಳುಹಿಕೊಟ್ಟು ಅಂತಃಪುರಕ್ಕೆ ತೆರಳಿದ ಮಹಾರಾಜನು ದಾರಿಯಲ್ಲಿ ಅಪಶಕುನಗಳನ್ನು ಕಂಡು ದಿಗಿಲುಗೊಂಡನು. ಏಕೋ ಮನಸ್ಸಿಗೆ ನೆಮ್ಮದಿ ಇಲ್ಲದಂತಾಯಿತು. ಕೂಡಲೆ ಮತ್ತೊಮ್ಮೆ ರಾಮಚಂದ್ರನನ್ನು ಕರೆಸಿ ಏಕಾಂತದಲ್ಲಿ ಹೀಗೆಂದು ನುಡಿದನು: "ರಾಮಭದ್ರ, ಧರ್ಮಕ್ಕೆ ಚ್ಯುತಿ ಬಾರದಂತೆ ಈ ವರೆಗೆ ರಾಜ್ಯವನ್ನಾಳುತ್ತ ಬಂದೆ. ಈಗ ಕೊನೆಯಗಳಿಗೆಯಲ್ಲಿ ನನ್ನ ಈ ಕೈಯಿಂದಲೇ ನಿನಗೆ ಅಭಿಷೇಕ ಮಾಡುವ ಭಾಗ್ಯ ನನಗೆ ಇಲ್ಲವೋ ಎಂಬ ಸಂಶಯ ಮೂಡುತ್ತಿದೆ. ಈ ಅಮಂಗಲ ಶಕುನಗಳು ನನಗೆ ಸಾವಿನ ಬಾಗಿಲನ್ನು ತೋರುತ್ತಿವೆ. ನಾರಾಯಣನ ಕರುಣೆಯಿಂದ ಅಂತರಾಯಗಳೆಲ್ಲ ಪರಿಹಾರ- ವಾಗಲಿ. ಏಕೋ ಮನಸ್ಸು ತಳಮಳಿಸುತ್ತಿದೆ. ನನಗಾಗಿ ನೀವು ದಂಪತಿಗಳು ಉಪವಾಸದೀಕ್ಷಿತರಾಗಬೇಕು ಕಂದ." ತಂದೆಯ ಮಾತಿಗೆ ಒಪ್ಪಿಗೆಯನ್ನಿತ್ತು ನೇರವಾಗಿ ರಾಮಚಂದ್ರ ತನ್ನ ತಾಯಿ ಕೌಸಲ್ಯಯ ಬಳಿಗೆ ಬಂದನು. ರಾಮನ ಅಭಿಷೇಕ ವಾರ್ತೆಯನ್ನು ಕೇಳಿ ಸಂತಸಗೊಂಡ ಕೌಸಲ್ಯ ಸುಮಿತ್ರೆಯೊಡನೆ ಭಗವಾನ್ ನಾರಾಯಣನನ್ನು ಪೂಜಿಸುತ್ತಿದ್ದಳು. ಜತೆಗಿದ್ದ ಲಕ್ಷ್ಮಣನೊಡನೆ ರಾಮ ತಾಯಂದಿರಿಗೆ ವಂದಿಸಿದ. ಆನಂದದ ಕಂಬನಿಯನ್ನೊರೆಸಿಕೊಳ್ಳುತ್ತ ತಾಯಿ ಮಗನನ್ನು ಹರಸಿದಳು: "ನನ್ನ ಚಿನ್ನ, ನಿನಗೆ ಮಂಗಳವಾಗಲಿ, ದೌರ್ಜನ್ಯ- ವನ್ನು ತುಳಿದಟ್ಟಿ ಸಜ್ಜನಿಕೆಯನ್ನು ಸಲಹು. ಜಗನ್ನಾಥನಾದ ನಿನ್ನ ಪಿನಲ್ಲಿ ಲೋಕಪಥವನ್ನು ಕಾಣಲಿ." ತಾಯಿಯ ಆಶೀರ್ವಾದವನ್ನು ಪಡೆದು ಲಕ್ಷ್ಮಣ- ನನ್ನು ಬೀಳ್ಕೊಟ್ಟು- ರಾಮಚಂದ್ರ ಸೀತೆಯೊಡನೆ ತನ್ನ ಅರಮನೆಯನ್ನು ಸೇರಿದನು. ದಶರಥನ ನಿವೇದನೆಯಂತೆ ಪುರೋಹಿತರಾದ ವಸಿಷ್ಠಮಿಶ್ರರು ರಾಮನಿದ್ದಲ್ಲಿಗೈತಂದರು. ಜಗದ್ಗುರುವಾದ ರಾಮಭದ್ರ ಗುರು ವಸಿಷ್ಠರನ್ನು ವಿನಯಪೂರ್ವಕವಾಗಿ ಸತ್ಕರಿಸಿದನು.ಕುಲಗುರುಗಳು ಅಭಿಷೇಕ ದೀಕ್ಷೆಯನ್ನಿತ್ತರು. ಪುರೋಹಿತರಿಗೆ ದಕ್ಷಿಣಾರೂಪವಾಗಿ ರಾಮಚಂದ್ರ ಹತ್ತು ಸಾವಿರ ಗೋವುಗಳನ್ನೂ ಬಹು ಆಭರಣಗಳನ್ನೂ ಸಮರ್ಪಿಸಿದನು. ಅಂದು ರಾತ್ರಿ ಬ್ರಹ್ಮರ್ಷಿಗಳ ವಚನದಂತೆ ದೀಕ್ಷಿತನಾದ ರಾಮಚಂದ್ರ ಸೀತೆಯೊಡನೆ ದರ್ಭ- ತಲ್ಪದಲ್ಲಿ ಪವಡಿಸಿದನು. ಊರಲ್ಲೆಲ್ಲ ಅಭಿಷೇಕದ ಸುದ್ದಿ ಹಬ್ಬಿತು. ಆಡುವ ಜನಕ್ಕೊಂದು ಆಹಾರ; ಕೇಳುವ ಜನಕ್ಕೊಂದು ಸಂತಸ. ಎಲ್ಲೆಡೆಯೂ ಸಂಭ್ರಮ-ಸಡಗರ. ಎಂದು ಬೆಳಗಾದೀತು ಎಂದು ಅಭಿಷಿಕ್ತರಾದ ಯುವರಾಜ ದಂಪತಿಗಳನ್ನು ಕಂಡೇವು ಎಂದು ಎಲ್ಲರಿಗೂ ತವಕ. ಮಕ್ಕಳು, ಮುದುಕರು ಹೆಂಗಳೆಯರು ಎಲ್ಲರ ಬಾಯಲ್ಲೂ ಒಂದೇ ಮಾತು. ಈ ಸಂಭ್ರಮದಲ್ಲಿ- ಸಂತಸದಲ್ಲಿ ನಿದ್ದೆಯೆಲ್ಲಿ ಸುಳಿಯಬೇಕು ? ಸಾರ್ವಭೌಮನ ಆಜ್ಞೆಯಂತೆ ಜನರು ಊರನ್ನೆಲ್ಲ ಸಿಂಗರಿಸಿದರು. ಮನೆಮನೆಯನ್ನು ಹೂಮಾಲೆ- ಗಳಿಂದ ಅಲಂಕರಿಸಿದರು. ಬೀದಿಬೀದಿಗಳಲ್ಲಿ ತಳಿರು ತೋರಣದ ಸಾಲು. ರಾಷ್ಟ್ರಧ್ವಜಗಳೂ ಪತಾಕೆಗಳೂ ಊರೆಲ್ಲ ತಲೆಯೆತ್ತಿ ನಿಂತಿದ್ದವು. ಅಯೋಧ್ಯೆಯೋ ಏನು ? ಭೂಮಂಡಲವೇ ಏನು ? ಮೂರು ಲೋಕ- ಗಳೂ ಈ ವಾರ್ತೆಯನ್ನು ಕೇಳಿ ಸಂತಸಗೊಂಡವು. ಈ ಪ್ರಭು ರಾಮಚಂದ್ರ ಮೂರು ಲೋಕಗಳ ಅರಸನಲ್ಲವೆ? ಇತಿಹಾಸ ಬದಲಿಸಿದ ಹೆಣ್ಣು! ಮಂಥರೆ ! ಮನಸಿನ ಮಾಲಿನ್ಯವನ್ನು ಬಿಂಬಿಸುವಂತೆ ಸೊಟ್ಟ ಮೈಯ ಹೆಂಗಸು ! ಕೇಕಯರಾಜನ ಅರಮನೆಯಲ್ಲಿ ಹುಟ್ಟಿ-ಕೈಕೇಯಿಯ ಹುಟ್ಟುಸಂಗಾತಿಯಾಗಿ ಬೆಳೆದು ಬಂದ ತೊತ್ತಿನ ಹೆಣ್ಣು ! ಕೈಕೇಯಿಯ ನೆಚ್ಚಿನ ದಾಸಿ! ಒಂದು ತೆರನಾದ ದೂರದ ಬಾಂಧವ್ಯವೂ ಅವರ- ಲ್ಲಿತ್ತು. ಈ ಕೈಕೇಯಿಯ ನೆಚ್ಚಿನ ದಾದಿ ಮಂಥರೆ, ಅರಮನೆಯ ಅಟ್ಟವನ್ನೇರಿ ಪಟ್ಟಣಿಗರ ಸಂಭ್ರಮ- ವನ್ನು ದಿಟ್ಟಿಸಿದಳು. ಊರಿನ ಜನರೆಲ್ಲ ಸಂತಸದಿಂದ ಕುಣಿಯುತ್ತಿದ್ದಾರೆ! ಊರನ್ನೆಲ್ಲ ಪರಿಪರಿಯಾಗಿ ಸಿಂಗರಿಸಿದ್ದಾರೆ! ತೆರ ತೆರನಾದ ವಾದ್ಯಗಳು ಮೊಳಗು- ತ್ತಿವೆ! ಈ ಸಂಭ್ರಮವೆಲ್ಲ ಏತಕ್ಕಾಗಿ ಎಂದೇ ಆಕೆಗೆ ಅರಿವಾಗಲಿಲ್ಲ. ಬಳಿಯಲ್ಲಿ ಇದ್ದ ಇನ್ನೊಬ್ಬ ವೃದ್ಧೆಯನ್ನು ವಿಚಾರಿಸಿದಳು. "ತಾಯಿ, ಇದಾವ ಉತ್ಸವಕ್ಕೆ ಈ ಜನ ಅಣಿ ಮಾಡು- ತ್ತಿದ್ದಾರೆ ! ಆ ರಾಮನ ತಾಯಿ ಬ್ರಾಹ್ಮಣರಿಗೆ ಭಾರಿ ದಕ್ಷಿಣೆಗಳನ್ನು ಚೆಲ್ಲುತ್ತಿದ್ದಾಳಲ್ಲ-ಅದಾದರೂ ಏತಕ್ಕಾಗಿ ?" ಇದನ್ನು ಕೇಳಿದ ಮುದಿ ದಾದಿ, ಸಂತಸದಿಂದ ನಲಿದು ನುಡಿದಳು: "ನಿನಗಿನ್ನೂ ತಿಳಿದಿಲ್ಲವೆ ಈ ಸಂತಸದ ಸುದ್ದಿ ? ನಾಳೆ ರಾಮಚಂದ್ರನಿಗೆ ಅಭಿಷೇಕ ನಡೆಯಲಿದೆ. ಆ ಕುಮಾರ ನಮ್ಮ ಯುವರಾಜನಾಗಲಿದ್ದಾನೆ. ಸಂತಸದ ಮಾತಲ್ಲವೆ ? ಹೋಗು ಮಗಳೆ, ಹೊಸ ಸೀರೆಯುಟ್ಟು, ಮೈತುಂಬ ಬಂಗಾರ ತೊಟ್ಟು ಸಂತಸದ ಸಿಂಗಾರ ಮಾಡಿಕೊಳ್ಳಮ್ಮ." ಸುದ್ದಿಯನ್ನು ಕೇಳಿ ಕಣ್ಣು ಕಿಡಿ ಕಾರಿತು. ಮಾಟಗಾರೆ ಮಂಥರೆ ಕೋಲಿನಿಂದ ಹೊಡೆಸಿಕೊಂಡ ಹಾವಿ- ನಂತೆ ಬುಸುಗುಟ್ಟಿದಳು. ಮರಿಯನ್ನುಕಳೆದುಕೊಂಡ ಹುಲಿಯಂತೆ ಎಗರಾಡಿದಳು, ಲಕ್ಷ್ಮೀಪತಿಯನ್ನು ಕಂಡರಾಗದ ಅಲಕ್ಷ್ಮಿಯಲ್ಲವೆ ಈ ಮಂಥರೆ ! ಬಾಲ್ಯದಲ್ಲಿ ರಾಮಚಂದ್ರ ಯಾವುದೋ ನೆಪದಿಂದ ಇವಳನ್ನು ಕಾಲಿಂದ ಒದೆ- ದಿದ್ದನಂತೆ, ಈ ಕಪಟ ನಾಟಕ ಸೂತ್ರಧಾರಿ ಅಂದೇ ನಾಟಕಕ್ಕೆ ಪೀಠಿಕೆ ಹಾಕಿದ್ದನಂತೆ! ಆ ಮುನಿಸು ಇಂದಿಗೂ ಅವಳಲ್ಲಿ ಮಾಸಿರಲಿಲ್ಲ, ನಿಟ್ಟುಸಿರು ಬಿಡುತ್ತಾ ಮಹಡಿಯೊಂದಿದವಳೇ ಕೈಕೇಯಿಯ ರಾಣೀವಾಸಕ್ಕೆ ಬಂದು 'ಅಯ್ಯೋ ಕೆಲಸ ಕೆಟ್ಟಿತಲ್ಲಾ' ಎಂದು ಹಲುಬಿದಳು ! ಆಕಸ್ಮಿಕವಾದ ಈ ಕೂಗನ್ನು ಕೇಳಿ ಕೈಕೇಯಿ ಕಾತರಳಾದಳು. 'ನಡೆದುದಾದರೂ ಏನು ? ಏತಕ್ಕೆ ಹೀಗೆ ಕೂಗುತ್ತಿರುವೆ ?' ಎಂದು ಅಷ್ಟೇ ಲವಲವಿಕೆಯಿಂದ ಕೇಳಿದಳು. ಮಾಯಾವಿನಿ ಮಂಥರೆ ತನ್ನ ಬಗೆಯ ಬವಣೆಯನ್ನರುಹಿದಳು. " ಆ ರಾಮನಿಗೆ ರಾಜ್ಯವಂತೆ ! ಅವನಿನ್ನು ಯುವರಾಜನಂತೆ ! ಬಂತು ತಾಯಿ, ನಮಗೆ ಕೇಡುಗಾಲ ! " ಕೈಕೇಯಿ ಸುದ್ದಿಯನ್ನು ಕೇಳಿದವಳೇ ಆನಂದ- ದಿಂದ ತನ್ನ ಕೊರಳಿನ ಸ್ವರ್ಣ ಹಾರವನ್ನೇ ಅವಳಿಗೆ ತೊಡಿಸಿದಳು. "ಭದ್ರೆ, ಏತಕ್ಕಾಗಿ ಬೆದರಿಕೊಂಡೆ? ನಮಗೆಂಥ ಕೇಡುಗಾಲ ? ನನಗೆ ಭರತನಂತೆಯೇ ರಾಮಚಂದ್ರ- ನೂ ಮಗನಲ್ಲವೆ ? ಗುಣಭರಿತನೂ ಪ್ರಜಾಪ್ರಿಯನೂ ಹಿರಿಯ ಮಗನೂ ಆದ ರಾಮನು ಯುವರಾಜ- ನಾಗುವುದು ನ್ಯಾಯವೇ ಅಲ್ಲವೆ ? ಅವನು ನನ್ನನ್ನು ತನ್ನ ಹೆತ್ತ ತಾಯಿಯಂತೆಯೇ ಪ್ರೀತಿಸುತ್ತಾನೆ. ನಾನು ಅವನಿಗೆ ಎರಡೆಣಿಸುವುದು ಹೇಗೆ ಸಾಧ್ಯ?" ನಿರ್ಭಾಗ್ಯ ಮಂಥರೆಯ ಸಿಟ್ಟು ಇಮ್ಮಡಿಯಾಯಿತು. ರಾಣಿ ತೊಡಿಸಿದದೊಡವೆಯನ್ನು ಕಿತ್ತುಚೆಲ್ಲಿ ಆಕೆ- ಯನ್ನು ಗದರುವಂತೆ ನುಡಿದಳು. "ನಿನ್ನ ಈ ವಿನಯವೇ ನಿನಗೆ ಮುಳುವಾಗಲಿದೆ ನೋಡು. ಭಾರಿ ವಿಪತ್ತಿನ ಮಡುವಿನಲ್ಲಿ ಮುಳುಗ- ಬೇಕೆಂದು ಬಯಸಿರುವೆಯಾ ? ನಿನ್ನ ಸವತಿಯಾದ ಕೌಸಲ್ಯೆಯ ಮೇಲೆಯೇ ರಾಜನಿಗೆ ಒಲವು. ಎಂಥ ಪಕ್ಷಪಾತ ! ಅಯ್ಯೋ ! ಏನೂ ಅರಿಯದ ಮುಗುದೆ ನೀನು, ಅವನ ಕವಡಿಗೆ ಬಲಿಯಾದೆಯಾ ? ಆಲೋಚಿಸು, ಭರತನನ್ನು ಶತ್ರುಘ್ನನೊಡನೆ ಕೇಕಯಕ್ಕಟ್ಟಿ ಇಲ್ಲಿ ಪಟ್ಟ ಕಟ್ಟುವ ಸಂಚು ನಡೆಯುತ್ತಿದೆ. ಇದು ಏತರ ನ್ಯಾಯ ? ವಸಿಷ್ಠರು ಪುರೋಹಿತರಾಗಿದ್ದು, ದಶರಥ ರಾಜನಾಗಿದ್ದು, ರಘುವಂಶದಲ್ಲಿ ಇಂಥ ಅನ್ಯಾಯ ನಡೆವುದೆ ? ಲಕ್ಷ್ಮಣನಂತೂ ರಾಮನ ಬೆನ್ನುಹತ್ತಿದ್ದಾನೆ. ಇದರಲ್ಲಿ ದೂರಾಗುವವರು ನಮ್ಮ ಭರತ ಮತ್ತು ಆ ಸುಮಿತ್ರೆಯ ಮಗ ಇಬ್ಬರೇ. ರಾಮ ನಿನ್ನ ಸವತಿಯ ಮಗ ಎಂಬುದನ್ನುಮರೆಯಬೇಡ. ಅವನು ಅರಸನಾದರೆ- ನೀನು ನಿನ್ನ ಮಕ್ಕಳು ಕೌಸಲ್ಯೆಯ ತೊತ್ತುಗಳಾಗಿ ಬಾಳಬೇಕಾದೀತು ! ಒಂದಿಷ್ಟಾದರೂ ಮುಂದಿನ ಯೋಚನೆ ಬೇಡವೆ ? ಯಾರ ಮನಸ್ಸು ಎಂಥದೋ ಯಾರಿಗೆ ಗೊತ್ತು ! ರಾಮನ ಅಂತರಂಗವನ್ನು ಹೊಕ್ಕು ನೀನು ಕಂಡುಬಂದಿರುವೆಯಾ ? ಅವನಿಗೆ ರಾಜ್ಯವಾದರೆ ನಿನ್ನ ಮಗನಿಗೆ ಇಲ್ಲಿ ಯಾವ ತಾಣವೂ ಇರಲಾರದು. ನೀನು ರಾಮನ ಮೇಲಿನ ಮಮತೆಯಿಂದ ನಿನ್ನ ಕರುಳಿನ ಕಂದನ ಕೊರಳು ಕೊಯ್ಯುತ್ತಿದ್ದೀಯಾ! ಭರತನು ರಾಜನಾಗದಿದ್ದರೆ ಭರತನ ಸಂತತಿಯೇ ರಾಜತ್ವದ ಐಸಿರಿಯನ್ನು ಕಳೆದುಕೊಂಡಂತೆ ! ಶಾಶ್ವತವಾಗಿ ರಾಮನ ಸಂತಾನಕ್ಕೆ ರಾಜಪದವಿ- ಯನ್ನು ಧಾರೆಯೆರೆದು ಕೊಟ್ಟಂತಾಯಿತು ! ಒಬ್ಬೊಬ್ಬರಿಗೆ ಒಂದೊಂದು ಕಾಲ. ಎಡೆಸಿಕ್ಕಲ್ಲಿ ಪರರನ್ನು ತುಳಿದು ಅಧಿಕಾರವನ್ನು ಕಸಿವುದು, ಕ್ಷತ್ರಿಯರ ತಲೆಮಾರಿನ ಧರ್ಮವಲ್ಲವೆ?" ಮಂಥರೆಯ ಮಾತಿನ ಮೋಡಿ ಕೈಕೇಯಿಯನ್ನು ಮರುಳುಗೊಳಿಸಿತು. ಅವಳ ವಾಕ್ಸರಣಿಯಿಂದ ಪ್ರಭಾವಿತಳಾದ ರಾಣಿ ಖಿನ್ನಳಾಗಿ ನುಡಿದಳು. "ನೀನನ್ನುವುದೂ ನಿಜ. ಆದರೆ ನನ್ನ ಮಗನಿಗೆ ರಾಜ್ಯ ದೊರಕುವ ಬಗೆ ಹೇಗೆ ? ನೀತಿವಂತನೂ ವಿನೀತನೂ ಆದ ರಾಮನನ್ನು ರಾಜ್ಯದಿಂದ ಹೊರಗಟ್ಟುವುದಾದರೂ ಹೇಗೆ ? " ತನ್ನ ಉಪನ್ಯಾಸದಿಂದ ರಾಣಿ ಸರಿದಾರಿಗೆ ಬರು- ತ್ತಿದ್ದಾಳೆ ಎಂದು ಮಂಥರೆಗೆ ತುಸು ನೆಮ್ಮದಿ- ಯಾಯಿತು. ಮುಂದಿನ ಸಿದ್ಧತೆಯನ್ನೆಲ್ಲ ಅವಳು ಈ ಮೊದಲೆ ಅಣಿಗೊಳಿಸಿದ್ದಳು. "ಓ ಮುಗುದೆ, ಮಹಾರಾಜ ಹಿಂದೆ ನಿನಗೆ ಮಾತು ಕೊಟ್ಟಿದ್ದ ಎರಡು ವರಗಳ ವಿಚಾರವನ್ನು ಮರೆತೇ ಬಿಟ್ಟೆಯಾ? ನೀನು ಮರೆತರೂ ನಾನು ಮರೆಯಲಾರೆ. ನೀನು ಆ ವರಗಳನ್ನು ಬಳಸಿಕೊಳ್ಳುವ ಕಾಲ ಈಗ ಬಂದಿದೆ. ಹದಿನಾಲ್ಕು ವರ್ಷಗಳ ಕಾಲ ರಾಮ ಕಾಡಿ- ನಲ್ಲಲೆಯಬೇಕು; ಭರತನಿಗೆ ಸಾಮ್ರಾಜ್ಯ ದೊರೆಯ- ಬೇಕು; ಹೀಗೆಂದು ವರಗಳನ್ನು ಕೇಳು, ಆ ಕೌಸಲ್ಯೆಯ ಮಗ ಹದಿನಾಲ್ಕು ವರ್ಷ ಕಗ್ಗಾಡಿನಲ್ಲಿ ಅಲೆದು, ಬಳಲಿ ಮತ್ತೆ ಹಿಂದಿರುಗುವುದುಂಟೆ ? ಕನಸಿನ ಮಾತು. ನಮ್ಮ ಭರತನಿಗೆಯೇ ತಡೆಯಿಲ್ಲದ ರಾಜ್ಯ ಖಂಡಿತ." ಮಂಥರೆಯ ಬುದ್ಧಿಯ ಚಳಕವನ್ನು ಕಂಡು ಕೈಕೇಯಿ ಅಚ್ಚರಿಗೊಂಡು, ಅವಳನ್ನು ಅಪ್ಪಿ ಕೊಂಡಾಡಿದಳು. ತನ್ನ ಕಿವಿಯೋಲೆಯನ್ನೆ ಅವಳಿಗೆ ಉಡುಗರೆಯಾಗಿತ್ತಳು ! ಹೀಗೆ ಅರಮನೆಯ ಒಬ್ಬ ದೂತಿಯಿಂದ ರಾಮಾಯಣದ ಇತಿಹಾಸವೇ ಬದ- ಲಾಯಿತು ! ಪಟ್ಟಾಭಿಷೇಕದಿಂದ ಕಾಡಿಗೆ ತಿರುಗಿತು ! ಮಂಥರೆಯ ಮಾತಿನಂತೆ ಕೈಕೇಯಿ ಮುನಿಸಿನ ಮನೆಯಲ್ಲಿ ಹೋಗಿ ಮಲಗಿಕೊಂಡಳು. ಇತ್ತ ರಾಜ ಅಭಿಷೇಕದ ಸಿದ್ಧತೆಯಲ್ಲಿದ್ದ. ಎಲ್ಲ ವ್ಯವಸ್ಥೆಯೂ ನಡೆದ ಮೇಲೆ ಕೈಕೇಯಿಗೂ ಈ ಸಂತಸದ ಸುದ್ದಿಯನ್ನು ತಿಳಿಸಿ ಮುಂಡಾಡಬೇಕು ಎಂದು ಅವಳ ಅಂತಃಪುರದೆಡೆಗೆ ನಡೆದನು. ರತ್ನ- ದೀಪಗಳಿಂದ ಬೆಳಗುತ್ತಿರುವ, ಸುಸಜ್ಜಿತವಾದ ಸೆಜ್ಜೆ- ಮನೆಯಲ್ಲಿ ರಾಣಿಯ ಸುಳಿವು ಕಂಡುಬರಲಿಲ್ಲ. ' ನನ್ನ ಮುದ್ದು ಮಡದಿಯೆಲ್ಲಿ ?' ಎಂದು ರಾಜ ಸಂಭ್ರಾಂತನಾದ. ಅವಳನ್ನರಸುತ್ತಾ ಮುನಿಸಿನ ಮನೆಗೆ ಬಂದಾಗ- ಬರಿನೆಲದಲ್ಲಿ ಮಲಗಿದ್ದ ತನ್ನ ಮಾನಿನಿ ಮಡದಿಯನ್ನು ಕಂಡ. ಅವಳ ದುರಾಲೋಚನೆಗಳ ಕಲ್ಪನೆಯೂ ಇರದ ಮಹಾರಾಜ, ಅವಳೊಡನೆ ಲಲ್ಲೆಯಾಡತೊಡಗಿ- ದನು- ಹಾವನ್ನು ಹೂಮಾಲೆಯೆಂದು ನಂಬಿ ಮೈಗೆ ತೊಟ್ಟುಕೊಳ್ಳುವಂತೆ ! " ಓ ನನ್ನ ಅರಳ್ಗಣ್ಣಿನ ಸುಂದರಿ, ದುಗುಡವನ್ನು ಬಿಡು. ನಿನ್ನನ್ನು ಮೋಹಿಸಿ ಬಂದಿರುವ ನನ್ನೊಡನೆ ಮಾತನಾಡು. ನಿನಗೆ ಯಾರಮೇಲೆ ಮುನಿಸು, ಅದ- ನ್ನಾದರೂ ಹೇಳು. ಈ ಭೂಮಂಡಲದ ಯಾವ ಮೂಲೆಯಲ್ಲಿಯೇ ಇರಲಿ- ಆ ಪ್ರಾಣಿ ಹುಟ್ಟಿಯೇ ಇಲ್ಲ ಎಂದು ಮಾಡುವ ಭಾರ ನನ್ನ ಮೇಲಿರಲಿ, ಓ ತೆಳುಮೈಯವಳೆ, ನೀನು ಬಯಸಿದ್ದನ್ನು ಕೊಡ- ಬಲ್ಲೆ. ಒಮ್ಮೆ ಎದ್ದು ನಸುನಗೆಯ ಕಳೆಯನ್ನು ಬೀರಲಾರೆಯಾ ? " ದಶರಥನ ಮಾತಿಗೆ ಕೈಕೇಯಿ ನಯವಾಗಿ ಉತ್ತರಿಸಿದಳು; " ಧರ್ಮಜ್ಞನಾದ ಮಹಾರಾಜ, ಆಡಿದ ಮಾತನ್ನು ತಪ್ಪದೆ ನಡೆಸುವುದು ನಿನ್ನ ಧರ್ಮವೆ ತಾನೆ ? ಹಿಂದೆ ದೇವ ದಾನವರ ಯುದ್ಧದ ಕಾಲದಲ್ಲಿ ರಾತ್ರಿಯ ಕಾಲ ದೈತ್ಯರಿಂದ ರಕ್ಷಿಸಿದವಳು ನಾನು. ಒಬ್ಬ ಬ್ರಾಹ್ಮಣನು ಉಪದೇಶಿಸಿದ ಮಂತ್ರದ ಬಲದಿಂದ ಅದು ನನಗೆ ಸಾಧ್ಯವಾಯಿತು ಅಲ್ಲವೆ ? ಆಗ ನೀನು ನನ್ನ ಮೇಲೆ ಸಂತೋಷಗೊಂಡು ಎರಡು ವರಗಳ- ನ್ನೀವುದಾಗಿ ನುಡಿದಿದ್ದೆ. ನೆನಪಿದೆಯೆ ? ಅವುಗಳನ್ನು ಕೇಳಬೇಕಾದ ಕಾಲ ಈಗ ಬಂದೊದಗಿದೆ. " ಬೇಡ ಬಾರಿಸಿದ ಗೋರಿಗೆ, ಮರುಳಾದ ಹುಲ್ಲೆ- ಯಂತೆ ರಾಜ ಈ ಮಾತುಗಳಿಗೆ ಮಾರುಹೋದ ! " ಓ, ಇಷ್ಟು ಕೇಳಲು ಇಷ್ಟೊಂದು ಮುನಿಸಿನ ಪೀಠಿಕೆಯೆ ? ಬೇಕಾದ ವರಗಳನ್ನು ಕೇಳು. ಅದಕ್ಕೇನಂತೆ ? ನಾನು ಇಲ್ಲವೆಂದೆನೆ ? ಛೇ, ರಘು-ಕುಲದಲ್ಲಿ ಹುಟ್ಟಿದ ಈ ಮೈ, ಸುಳ್ಳನ್ನು ಸಹಿಸು- ವುದಿಲ್ಲ. ಖಂಡಿತವಾಗಿ ನಿನ್ನ ಬೇಡಿಕೆಯನ್ನು ಪೂರಯಿಸುತ್ತೇನೆ. ಇಲ್ಲವಾದರೆ ನನಗೆ ಹರಣಕ್ಕಿಂತಲೂ ಹೆಚ್ಚು ಪ್ರಿಯನಾದ ನನ್ನ ಕಂದ ರಾಮಚಂದ್ರನ ಆಣೆಯಿದೆ ! " ರಾಜನ ದೃಢವಾಣಿಯನ್ನು ಕೇಳಿ ರಾಣಿಯ ಕಣ್ಣ- ರಳಿತು. ಜಗತ್ತಿನ ಮಂಗಲಕ್ಕೆ ಕೊಡಲಿಯೇಟಿನಂತಿ- ರುವ ವಾಗ್ವಜ್ರವನ್ನು ಮೆಲ್ಲನೆ ಅವನೆಡೆಗೆ ಎಸೆದಳು. " ಮಹಾರಾಜ, ಧರ್ಮದೇವತೆಗಳು ನಿನ್ನ ಪ್ರತಿಜ್ಞೆಗೆ ಸಾಕ್ಷಿಪುರುಷರಾಗಿರಲಿ, ನಿನಗೆ ರಾಮನ ಮೇಲೆ ನಿಜ- ವಾದ ಪ್ರೀತಿಯಿರುವುದಾದರೆ ನನ್ನ ಎರಡು ಬೇಡಿಕೆ- ಗಳನ್ನು ಪೂರಯಿಸಿಕೊಡು, ನಾನು ಕೇಳಬೇಕಾದ ಮಾತು ಇಷ್ಟೆ. ಊರನ್ನು ಸಿಂಗರಿಸಿಯಂತೂ ಆಯಿತು. ಈ ಸಿಂಗಾರ ಭರತನ ಅಭಿಷೇಕಕ್ಕಾಗಿ ಉಪಯೋಗಿಸಲ್ಪಡಲಿ. ಭರತನೇ ಯುವರಾಜನಾಗಲಿ ಎರಡನೆಯದಾಗಿ ಹದಿನಾಲ್ಕು ವರ್ಷಗಳ ಕಾಲ ರಾಮ ವನವಾಸವನ್ನನುಭವಿಸಲಿ." ಮಾತಿನ ಕೂರ್ಗಣೆ ನಾಟಿದುದೇ ತಡ- ಮಹಾರಾಜ ಬುಡ ತರಿದ ಮರದಂತೆ ಭೂಮಿಯ ಮೇಲೊರಗಿದ ! ಮಂಥರೆ, ಕೈಕೇಯಿಯೆಂಬ ಬಿಲ್ಲಿನಿಂದ ಹೂಡಿದ ಈ ಮುಳ್ಮಾತಿನ ಬಾಣ -ದೈತ್ಯರ ಬಾಣಗಳಿಂದಲೂ ಗಾಸಿಗೊಳದ ರಾಜನನ್ನು ಧೃತಿಗೆಡಿಸಿತು ! ದುಃಖ ಉಮ್ಮಳಿಸುತಿತ್ತು. ಮುನಿಸಿನಿಂದ ಕಣ್ಣೀರು ಕುದಿ- ಯುತಿತ್ತು. ಹೇಗೋ ಸಾವರಿಸಿಕೊಂಡ ಮಹಾರಾಜ ನಿಡಿದಾದ ನಿಟ್ಟುಸಿರೊಂದನ್ನೆಳೆದು ರಾಣಿಯೆಡೆಗೆ ತಿರುಗಿ ನುಡಿದನು. " ಓ ತಿಳಿಗೇಡಿ, ಇದು ಬುದ್ಧಿವಂತಿಗೆಯ ಮಾತೆಂದು ಬಗೆದಿರುವೆಯಾ ? ಅಯ್ಯೋ ಮಂಕೆ, ನಾಟಕದ ತಾರೆಯರಂತೆ ಈ ಕೃತ್ರಿಮ ಅಭಿನಯದಿಂದ ನನ್ನನ್ನು ವಂಚಿಸಿದೆಯಾ? ಈ ಮನೆಯಿಂದ ರಾಮಚಂದ್ರನನ್ನು, ಈ ದೇಹದಿಂದ ನನ್ನನ್ನು, ನಿನ್ನ ಸ್ನೇಹದಿಂದ ಭರತನನ್ನು ತೊಲಗಿಸಿ ಜಗತ್ತನ್ನು 39 ಕತ್ತಲಿನ ರೂಪಕ್ಕೆ ತಳ್ಳುವೆಯಾ ? ಸೂರ್ಯನಿಲ್ಲದೆ ಹಗಲೂ ಇಲ್ಲ. ನೀರಿಲ್ಲದೆ ತಾವರೆಯೂ ಇಲ್ಲ. ರಾಮನಿಲ್ಲದೆ ನಾನೂ ಇಲ್ಲ. ರಾಮಚಂದ್ರನೂ ನಾನೂ ಇರದ ತಾಣದಲ್ಲಿ ಭರತನೂ ಇರಲಾರನು. ನೀನು ಭರತನ ತಾಯಿ, ನನ್ನ ಧರ್ಮಪತ್ನಿ, ಅಶ್ವಪತಿ ರಾಜನ ಮಗಳು-ಹೀಗಿದ್ದು ನಮ್ಮ ಮೂವರ ಹೆಸರಿಗೂ ಮಸಿ ಬಳಿಯುವೆಯಾ ? ನೀನು ಈ ವರೆಗೆ ಇಂಥ ಚುಚ್ಚು ಮಾತುಗಳನ್ನಾಡಿದವಳಲ್ಲ ! ಇಂದೇನಾಯಿತು ನಿನಗೆ ? ನಿನ್ನ ಎಲ್ಲ ಗುಣಗಳೂ ಈ ಒಂದು ಮುಳ್ಮಾತಿನ ಅಪರಾಧಕ್ಕೆ ಸಾಟಿಯಾಗ- ಲಾರವು. ಎಲ್ಲರಿಗೂ ಪ್ರಿಯನಾದ, ಗುಣಭರಿತನೂ ಋಜು ಸ್ವಭಾವದವನೂ ಆದ ರಾಮಚಂದ್ರನನ್ನು ಯಾವ ಪಾತಕಿಯೂ ಕಿಚ್ಚಿನ ಕಣ್ಣಿನಿಂದ ನೋಡಲಾರ. ಇಂದೇನು ನಿನಗೆ ಗರ ಬಡಿದಿದೆ ? ನನಗೆ ರಾಮನೂ ಭರತನೂ ಇಬ್ಬರೂ ಒಂದೇ ಎಂದು ಈ ಮೊದಲು ಗಳಹುತ್ತಿದ್ದೆಯಲ್ಲ. ಅಂಥ ರಾಮನನ್ನು -ನಿನ್ನ ಶುಶ್ರೂಷೆಯಲ್ಲಿ ಭರತನಿಗಿಂತಲೂ ಮೇಲುಗೈ- ಯೆನ್ನಿಸಿದ ರಾಮಚಂದ್ರನನ್ನು ಕಾಡಿಗಟ್ಟಲು ನಿನಗೆ ಮನಸ್ಸು ಬರುವುದೆ ? ನಿರ್ದೋಷಿಯಾದ ರಾಮಚಂದ್ರನಿಗೆ 'ಕಾಡಿಗೆ ಹೋಗು ' ಎಂದು ಯಾವ ಬಾಯಿಂದ ಹೇಳಲಿ ? ಹೊಸ ಹರೆಯದಲ್ಲೇ ಗಂಡನಿಂದ ಅಗಲಿಸಿ ಪಾಪ, ಆ ಸೀತೆಗಾದರೂ ಯಾವ ಮೋರೆ ತೋರಿಸುವುದು ? ನಮ್ಮ ರಾಷ್ಟ್ರದ ಜನಕ್ಕೆ ನಿನ್ನ ಕುರಿತು ಒಳ್ಳೆಯ ಗೌರವದ ಭಾವನೆಯಿದೆ. ಈ ಕುವರ್ತನೆಯಿಂದ ಆ ಗೌರವವನ್ನು ಕಳೆದುಕೊಳ್ಳಬೇಡ. ಈ ವರಗಳನ್ನು- ಳಿದು ಇನ್ನೇನಾದರೂ ಕೇಳು. ಆದರೆ ಇಂಥ ಮಾತ- ನ್ನು ಮಾತ್ರ ಆಡಬೇಡ. ಇದೋ ಮುಪ್ಪಡರಿದ ಈ ತಲೆಯನ್ನು ಬಗ್ಗಿ ಬೇಡಿಕೊಳ್ಳುತ್ತಿದ್ದೆನೆ. ನಿನ್ನ ಪ್ರಿಯಕರನ ಈ ಕರುಣಾವಸ್ಥೆಯನ್ನು ಕಂಡಾದರೂ ನಿನ್ನ ಮನಸ್ಸು ಕರಗದೆ ? " ಮಹಾರಾಜ ಭೂಮಿಯಲ್ಲಿ ಬಿದ್ದು ಹಲುಬು- ತ್ತಿದ್ದಾನೆ. ಆದರೆ ಮಂಥರೆ ಅರೆದ ಮದ್ದು ಕೈಕೇಯಿ- ಯಲ್ಲಿ ಇನ್ನೂ ಪರಿಣಾಮಕಾರಿಯಾಗಿತ್ತು ! ಅವಳು ಸೆಟೆದುಕೊಂಡೇ ಉತ್ತರಿಸಿದಳು: " ನೀನು ಈ ವರಗಳನ್ನು ಕೊಡದಿದ್ದರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಮಹಾರಾಜ, ಸ್ವಲ್ಪ ಚಿಂತಿಸು, ನಿನ್ನ ಸತ್ಯಸಂಧತೆಗೆ ಏನು ಬೆಲೆ ಬಂದ ಹಾಗಾಯಿತು ? ಸತ್ಯ ಬಾಹಿರವಾದ ನಿನ್ನ ಯಶಸ್ಸು - ನಿನ್ನ ಧಾರ್ಮಿಕತೆ ಇವೆಲ್ಲಕ್ಕಾದರೂ ಏನು ಬೆಲೆ? ಸತ್ಯಕ್ಕಾಗಿ ದೇಹವನ್ನು ತೆತ್ತ ಮಹನೀಯರು ಹುಟ್ಟಿಬಂದ ವಂಶವಿದು. ನಿನಗೆ ಮಾತ್ರ ಸತ್ಯದ ಮೇಲೆ ಒಲವಿಲ್ಲ ! ಆ ರಾಮನನ್ನು ರಾಜ್ಯದಲ್ಲಿ ಅಭಿಷೇಕಿಸಬೇಕು, ಕೌಸಲ್ಯೆಯೊಡನೆ ರಮಿಸಬೇಕು ಎಂದಲ್ಲವೆ ನಿನ್ನ ಹಂಚಿಕೆ ? ನನ್ನ ಸವತಿಯನ್ನು ನೀನು, ಇಷ್ಟೊಂದು ಮುಂಡಾಡುವುದನ್ನು ನಾನು ಸಹಿಸಲಾರೆ. ಒಂದು ದಿನವಾದರೂ ಅವಳೂ ನನ್ನಂತೆಯೇ ಇಂಥ ಸಂಕಟ ಪಟ್ಟುದನ್ನು ಕಂಡಿದ್ದರೆ ನನ್ನ ಬಾಳು ಸಾರ್ಥಕ- ವಾಯಿತು ಎಂದು ಬಗೆಯುತ್ತಿದ್ದೆ. ಅಂತೂ ನನ್ನ ಅಭಿಪ್ರಾಯದಲ್ಲಿ ಇನ್ನು ಬದಲಾವಣೆ ಸಾಧ್ಯವಿಲ್ಲ. ನನ್ನ ಬಯಕೆಯನ್ನು ಪೂರಯಿಸಿದರೇ ಸರಿ; ಇಲ್ಲವಾದರೆ ವಿಷ ಕುಡಿದು ನಿನಗೆ ಬೇಡಾದ ಈ ದೇಹವನ್ನು ನಿನ್ನೆದುರು ಚೆಲ್ಲಿ- ಬಿಡುತ್ತೇನೆ. ಆ ಮೇಲಾದರೂ ನೀನು ಹಾಯಾಗಿರ- ಬಹುದು. " ' ಹಾ ರಾಮಚಂದ್ರ' ಎಂದು ಭೂಮಿಗೆ ಬಿದ್ದ ಮಹಾರಾಜನು ಹೇಗೋ ಚೇತರಿಸಿಕೊಂಡು ರಾಣಿಯನ್ನು ಬಹುವಾಗಿ ಸಾಂತ್ವನಗೊಳಿಸಿದನು. ಅವಳು ಪಟ್ಟು ಹಿಡಿದು ಕುಳಿತುಬಿಟ್ಟಳು ! ತಾಳ್ಮೆ ತಪ್ಪಿದ ರಾಜ ರೇಗಿ ಕೂಗತೊಡಗಿದನು: " ನೀನೊಂದು ಪಾಪಕೂಪ. ನಿನ್ನ ಕೈ ಹಿಡಿದುದು ನನ್ನ ತಪ್ಪು, ನಿನಗೆ ಸಲುಗೆಯಿತ್ತು ಮುಂಡಾಡಿದ್ದು ನನ್ನ ತಪ್ಪು, ನಾನು ನಿನ್ನ ಕೈ ಹಿಡಿದುದಕ್ಕೆ ಅಗ್ನಿ, ಸಾಕ್ಷಿ ನುಡಿಯಬಹುದು. ಆದರೆ ನಾನು ಅದನ್ನು ಬಿಟ್ಟುಬಿಡಲು ಸಿದ್ಧನಿದ್ದೇನೆ. ವಿಷ ಕನ್ಯೆಯಿಂದ ಎಷ್ಟು ದೂರಿದ್ದರೆ ಅಷ್ಟು ಚೆನ್ನು ! ಅಯ್ಯೋ, ಈ ವಿಷಯ ರಾಮನಿಗೆ ತಿಳಿಯಿತೆಂದರೆ ಅವನು ಖಂಡಿತವಾಗಿಯೂ ಕಾಡಿಗೆ ಹೊರಟು ಹೋಗುತ್ತಾನೆ. ಈ ರಾಷ್ಟ್ರ ಅನಾಥವಾಗುತ್ತದೆ ! " ಕೈಕೇಯಿಯ ಮಾತಿನಿಂದ ನೊಂದ ಮಹಾರಾಜ- ನಿಗೆ ಆ ರಾತ್ರಿ ಒಂದು ಯುಗದಂತೆ ಭಾಸವಾಯಿತು. ಬೆಳಗಾಯಿತು. ವಂದಿಮಾಗಧರು ತಮ್ಮ ಕೆಲಸಕ್ಕೆ ತೊಡಗಿದರು. ರಾಮಚಂದ್ರನ ಅರಮನೆಯ ಮಾಗಧ ತನ್ನ ಸೊಲ್ಲನ್ನು ಹಾಡುತ್ತಿದ್ದ: " ಓ ರಾಮಭದ್ರ, ಮೂಡಣ ದಿಗಂತದಲ್ಲಿ ಮೂಡು- ತ್ತಿರುವ ಸೂರ್ಯನ ಹೊಂಬೆಳಕಿನಂತೆ ನಿನ್ನ ಕೀರ್ತಿ ಪ್ರಭೆ ಜಗತ್ತನ್ನು ಬೆಳಗಿಸಲಿ," " ಇಂದೇ ಯುವರಾಜನಾಗು ಕಂದ" ಮರುದಿನ ಮುಂಜಾನೆ ಮಹಾರಾಜ ಇನ್ನೂ ಎದ್ದು ಬಾರದ್ದನ್ನು ಕಂಡು ಕಾರ್ಯಜ್ಞನಾದ ಸುಮಂತ್ರನು ತ್ವರಿತವಾಗಿ ಅಂತಃಪುರವನ್ನು ಪ್ರವೇಶಿಸಿದನು. ಅಲ್ಲಿ ಮಹಾರಾಜನು ಶಯ್ಯೆಯಲ್ಲಿ ಮಲಗಿಕೊಂಡೇ ಇದ್ದ. ಸುಮಂತನು ಮೆಲ್ಲನ ಉಸುರಿದ: " ಮಹಾರಾಜ, ರಾಜಕಾರ್ಯದಿಂದ ನಿನ್ನನ್ನು ಎಚ್ಚರಿಸಬೇಕಾಗಿದೆ. ಪೌರ ಜಾನಪದರೆಲ್ಲ ಬಂದು ನೆರೆದಿದ್ದಾರೆ, ಉತ್ಸುಕತೆಯಿಂದ ಅಭಿಷೇಕ ಕ್ಷಣವನ್ನು ಇದಿರು ನೋಡುತ್ತಿದ್ದಾರೆ. ರಾಮನ ಅಭಿಷೇಕ ಕಾಲ ಸನ್ನಿಹಿತವಾಗಿದೆ. ಸಭೆಗೆ ಚಿತ್ತೈಸಬೇಕು. " ರಾಜ ಒಂದು ಮಾತನ್ನೂ ಆಡಲಿಲ್ಲ. ಬಗ್ಗಿಸಿದ್ದ ತಲೆಯನ್ನೂ ಮೇಲೆತ್ತಲಿಲ್ಲ. ತೋರುವುದಾದರೂ ಯಾವ ಮುಖವನ್ನು ? ಆಡುವದಾದರೂ ಯಾವ ಮಾತನ್ನು ? ಕೈಕೇಯಿಯೇ ಸುಮಂತ್ರನ ಮಾತಿಗೆ ಮಾರ್ನುಡಿದಳು: " ಸುಮಂತ್ರ, ಪಟ್ಟಾಭಿಷೇಕದ ಸಂತಸದಿಂದ ಮಹಾರಾಜ ರಾತ್ರಿಯಿಡೀ ಎಚ್ಚರಾಗಿದ್ದ, ಅದರಿಂದ ಈಗ ಜೊಂಪು ಹತ್ತಿರಬೇಕು. ಚಿಂತಿಲ್ಲ, ಬೇಗನೆ ರಾಮನನ್ನು ಇಲ್ಲಿಗೆ ಕರೆದುಕೊಂಡು ಬಾ. " ಕೈಕೇಯಿಯ ಮಾತನ್ನು ನಿಜವೆಂದು ಬಗೆದ ಮಂತ್ರಿ ಸುಮಂತ್ರನು ಮರಳುತ್ತಿದ್ದಾಗ ಅಂತಪುರದ್ವಾರದಲ್ಲಿ ರಾಜನ ಬರವನ್ನು ಕಾದು ನಿಂತಿದ್ದ ಮಂತ್ರಿಗಳು-ಪುರೋಹಿತರು ಸುಮಂತ್ರನ ಬಳಿ ವಿಜ್ಞಾಪಿಸಿ- ಕೊಂಡರು: " ಮಂತ್ರಿ, ಸೂರ್ಯದೇವ ಉದಿಸುತ್ತಿದ್ದಾನೆ. ಸಾಮಗ್ರಿಯೆಲ್ಲ ಸಿದ್ಧವಾಗಿದೆ. ಬೇಗನೆ ಚಿತ್ತೈಸುವಂತೆ ಸನ್ನಿಧಾನದಲ್ಲಿ ನಿವೇದಿಸಿಕೊಳ್ಳು." ಎಲ್ಲಿ ಕಾಲ ಮೀರೀತೋ ಎನ್ನುವ ದುಗುಡ ಎಲ್ಲರಿಗೂ. ಕಳವಳದಿಂದಲೇ ಸುಮಂತ್ರ ಮತ್ತೊಮ್ಮೆ ಅಂತಃಪುರವನ್ನು ಸೇರಿ ರಾಜನನ್ನು ನುತಿಸಿ ಎಚ್ಚರಿ ಸಿದನು: " ಓ ಮಹೇಂದ್ರ ತುಲ್ಯನಾದ ಮಹಾರಾಜನೆ. ಓ ರಕ್ಕಸರ ಸೊಕ್ಕನ್ನು ಮುರಿದ ಮಹಾ ವೀರನೆ, ಓ ರಾಮಚಂದ್ರನನ್ನು ಮಗನನ್ನಾಗಿ ಪಡೆದ ಪುಣ್ಯ ಚರಿತನೆ ಎಚ್ಚರ, ಎಚ್ಚರ. ದುಃಖಿತನಾದ ಮಹಾರಾಜನಿಗೆ ಕೈಕೇಯಿಯ ಬಿರುನುಡಿಗಿಂತಲೂ ಸುಮಂತ್ರನ ಹೊಗಳು ಮಾತೇ ಹೆಚ್ಚು ದುಃಸಹವಾಗಿ ಕಂಡಿತು. ಚಿಂತಾಕುಲ ನಾಗಿಯೇ ರಾಜನು ಉತ್ತರಿಸಿದನು: "ಈ ಜೀವಚ್ಛವವನ್ನು ಏಕೆ ಹೊಗಳುವೆ ಮಂತ್ರಿನ್? ಕೂಡಲೆ ನನ್ನ ಕಂದನನ್ನು ಕರೆದು ತಾ. ಬದುಕಿದ್ದಾಗಲೆ ಅವನನ್ನು ಇನ್ನೊಮ್ಮೆ ಕಾಣುವ ಭಾಗ್ಯವಾದರೂ ದೊರೆಯಲಿ." ಏನು ನಡೆಯಿತು ಎಂಬುದನ್ನರಿಯದೆ ದಿಗಿಲು- ಗೊಂಡ ಸುಮಂತ್ರನು ಬೇಗನೆ ರಾಮಚಂದ್ರನ ಅರಮನೆಗೆ ತೆರಳಿದ. ವೇಗವಾಗಿ ಸಪ್ತಪ್ರಾಕಾರಗಳಿಂದ ಗುಪ್ತವಾದ ವೈಕುಂಠ ಸುಂದರವಾದ ಮಂದಿರವನ್ನು ಪ್ರವೇಶಿಸಿದ. ಅಂತಃಪುರದಲ್ಲಿ ರಾಮಭದ್ರ ಬಂಗಾರದ ಮಂಚದಲ್ಲಿ ಕುಳಿತಿದ್ದ. ಹಿಂಬದಿಯಲ್ಲಿ ಸೀತೆ ತನ್ನ ಕೈಗಳಿಂದಲೇ ಚಾಮರವನ್ನು ಬೀಸು- ತ್ತಿದ್ದಳು. ಸುಮಂತ್ರ ಪ್ರವೇಶಿಸಿದವನೆ ' ಮಹಾರಾಜ ನಿನ್ನನ್ನು ನೋಡಬಯಸುತ್ತಾನೆ ' ಎಂದು ಉಸುರಿದ. ಸೀತಾದೇವಿಯ ಕುಡಿನೋಟದ ಕಾಪನ್ನು ಪಡೆದು ರಾಮಚಂದ್ರ ಸೂರ್ಯತುಲ್ಯವಾದ ರಥವನ್ನೇರಿ- ದನು. ಗುಹೆಯಿಂದ ಹೊರಹೊರಟ ಸಿಂಹದಂತೆ ಈ ಪುರುಷಸಿಂಹ ಅರಮನೆಯಿಂದ ರಾಜವೀಧಿಗೆ ಇಳಿದು ಬಂದ. ದಾರಿಯಲ್ಲಿ ನರನಾರಿಯರು ಉಪ್ಪರಿಗೆಯನ್ನೇರಿ ಇವನ ಬರವನ್ನು ಕಂಡು ಸಂತೋಷದಿಂದ ನುಡಿಯುತ್ತಿದ್ದರು: "ರಾಮನನ್ನು ಪತಿಯಾಗಿ ಪಡೆದ ಸೀತಾಮಾತೆ ಧನ್ಯೆ; ಮಗನನ್ನಾಗಿ ಪಡೆದ ದಶರಥ ಕೌಸಲ್ಯೆಯರು ಧನ್ಯರು; ರಾಜನನ್ನಾಗಿ ಪಡೆದ ನಾವೂ ಧನ್ಯರು." ಈ ಜನರೆಡೆಗೆ ಮಂದಹಾಸದಿಂದ ಬೆರೆತ ಕಟಾಕ್ಷ- ವನ್ನು ಬೀರುತ್ತಾ ರಾಮಚಂದ್ರ ಮುಂದೆ ಸಾಗಿದ. ಅಂತಃಪುರವನ್ನು ಪ್ರವೇಶಿಸಿದವನೇ ದಶರಥನನ್ನೂ ಕೈಕೇಯಿಯನ್ನೂ ಕಾಲ್ಮುಟ್ಟಿ ವಂದಿಸಿದನು. 'ಚಿರಂಜೀವಿಯಾಗು ವತ್ಸಾ' ಎಂದು ಹೇಳಬಯಸಿ- ದರೂ ರಾಜನ ಬಾಯಿಂದ ಮಾತೇ ಬಾರದಾಯಿತು. ಕಣ್ಣಿನಿಂದ ಸುರಿವ ಕಂಬನಿಯಧಾರೆ ಎದೆಯ ಮೂಕ ವೇದನೆಯನ್ನು ತೋರುತ್ತಿತ್ತು. ಎಲ್ಲವನ್ನು ಬಲ್ಲ ಲೋಕವಿಡಂಬಕನಾದ ರಾಮಚಂದ್ರ ಕವಡರಿಯದವನಂತೆ ತಂದೆಯ ಅಳುವಿನ ಕಾರಣ- ವನ್ನು ಕೈಕೇಯಿಯ ಬಳಿ ಕೇಳಿದನು: "ತಾಯಿ, ತಾತ ಏತಕ್ಕಾಗಿ ಅಳುತ್ತಿದ್ದಾನೆ? ನನ್ನಿಂದ ಏನಾದರೂ ಪ್ರಮಾದ ನಡೆಯಿತೆ ? ನಿನ್ನ ಮೇಲೇ- ನಾದರೂ ಕೋಪಗೊಂಡನೆ ? ಮಗನ ಬಳಿ ಹೇಳಲಾರೆಯಾ?" ಮುಗುಳುನಗುತ್ತಲೆ ಕೈಕೇಯಿ ಉತ್ತರಿಸಿದಳು: "ವತ್ಸಾ, ನಿನ್ನಿಂದಾಗಲಿ ನನ್ನಿಂದಾಗಲಿ ರಾಜನಿಗೆ ಕಣ್ಣೀರು ಬರಿಸುವ ಯಾವ ತಪ್ಪು ನಡೆದಿಲ್ಲ. ಮಹಾರಾಜನಿಂದ ನಾನು ಪಡೆದ ವರಗಳನ್ನು ನಿನಗೆ ತಿಳಿಸಲು ಸಂಕೋಚಗೊಂಡು ಆತ ಹೀಗೆ ಪರಿ- ತಪಿಸುತ್ತಿದ್ದಾನೆ ಅಷ್ಟೆ. ನಿನ್ನ ತಂದೆಯನ್ನು ಈ ಧರ್ಮಸಂಕಟದಿಂದ ಪಾರುಗಾಣಿಸುವುದು ನಿನ್ನ ಧರ್ಮವಲ್ಲವೆ? ಖಂಡಿತ ಪಾಲಿಸುವುದಾಗಿ ಮಾತುಕೊಟ್ಟರೆ ನಾನದನ್ನು ನಿನಗೆ ಹೇಳಬಲ್ಲೆ." ಅದಕ್ಕೆ ರಾಮಚಂದ್ರನು ಧೈರ್ಯದಿಂದ ಉತ್ತರಿಸಿದನು: "ತಂದೆಗೆ ಪ್ರಿಯವಾದುದನ್ನು ಏನನ್ನೂ ನಾನು ಮಾಡಬಲ್ಲೆ. ಕಾಲಕೂಟವನ್ನು ಕುಡಿ ಎಂದರೆ- ಬೆಂಕಿಯಲ್ಲಿ ಧುಮ್ಮಿಕ್ಕು ಎಂದರೆ- ಅದಕ್ಕೂ ನಾನು ಅಳಕುವವನಲ್ಲ. ತಂದೆಯನ್ನು ಸಮಾಧಾನ- ಗೊಳಿಸಮ್ಮ, ತಂದೆ ನಿನಗಿತ್ತ ವರಗಳನ್ನು ನೆರ- ವೇರಿಸುವುದಾಗಿ ಇದೋ ಪ್ರತಿಜ್ಞೆಗೈಯುತ್ತಿದ್ದೇನೆ." ಸಮಯವನ್ನು ಕಾದಿದ್ದ ಕೈಕೇಯಿ ಮೆಲ್ಲನೆ ಉಸುರಿದಳು: "ಹಿಂದೆ ದೇವಾಸುರರ ಯುದ್ಧ ಕಾಲದಲ್ಲಿ ನಿನ್ನ ತಂದೆ ನನಗೆ ಎರಡು ವರಗಳನ್ನು ಕೊಡುವುದಾಗಿ ಮಾತು ಕೊಟ್ಟಿದ್ದ. ಈಗ ಅದನ್ನು ಕೇಳುವ ಕಾಲ ಬಂತು- ಎಂತಲೆ ಕೇಳಿದೆ. ವರವನ್ನು ಕೊಟ್ಟರೂ- ಮಹಾರಾಜ ತನ್ನ ಸೌಜನ್ಯದಿಂದ ಅದನ್ನು ನಿನಗೆ ಹೇಳಲಾರದವನಾಗಿದ್ದಾನೆ. ಸಂಗತಿಯಿಷ್ಟೆನೀನು ಹದಿನಾಲ್ಕು ವರ್ಷ ಕಾಡಿನಲ್ಲಿ ವಾಸಿಸಬೇಕು. ನಿನ್ನ ಬದಲು ಭರತರಾಜ್ಯದ ಉತ್ತರಾಧಿಕಾರಿ- ಯಾಗಬೇಕು. ಇವು ಮಹಾರಾಜ ನನಗಿತ್ತ ವರಗಳು." ಸ್ವಲ್ಪವೂ ವಿಚಲಿತನಾಗದೆ ರಾಮಚಂದ್ರ ಉತ್ತರಿಸಿದ: "ಇದೋ ನಾನು ಆನಂದದಿಂದ ಕಾಡಿಗೆ ತೆರಳು- ತ್ತಿದ್ದೇನೆ. ದೂತರಿಂದ ಬರಿಸಿ ಭರತನಿಗೆ ಯುವರಾಜ ಪದವಿಯನ್ನರ್ಪಿಸಿರಿ. ಇದಕ್ಕಿಂತ ಮಿಗಿಲಾದ ಸಂತಸದ ಸುದ್ದಿ ಬೇರೊಂದಿರಲಾರದು. ಇದನ್ನ ಅರುಹಲು ನಮ್ಮ ತಂದೆ ಏಕೆ ಸಂಕುಚಿತನಾಗ- ಬೇಕಿತ್ತು ?" ಕಪಟನಿಯಾದ ಕೈಕೇಯಿ ನುಡಿದಳು: "ಮಾನಧನನಾದ ಮಹಾರಾಜ ನಾಚಿಕೆಯಿಂದ ಇದನ್ನು ನಿನಗೆ ತಿಳಿಸಲಾರದಾದ. ಅವನ ಗೂಢಭಾವವನ್ನು ನಾನರಿಯಬಲ್ಲೆ ಅರುಹಬಲ್ಲೆ, ನೀನು ಎಂದೂ ಗುರ್ವಾಜ್ಞೆಯನ್ನು ಮೀರಿದವನಲ್ಲ. ಅದರಿಂದ ನಿನಗೆ ತಿಳಿಸುತ್ತಿದ್ದೇನೆ: ನೀನು ಇಲ್ಲಿರುವ- ವರೆಗೆ ನಿನ್ನ ತಂದೆ ಕಳವಳದಿಂದ ಉಣ್ಣಲೂಲಾರ. ಅದರಿಂದ ಆದಷ್ಟು ಬೇಗ ಈ ರಾಜ್ಯದಿಂದ ದೂರಾಗು." ಕೈಕೇಯಿಯ ಮಾತನ್ನು ಕೇಳಿಯೂ ಏನೂ ಹೇಳಲಾರದೆ ಮಹಾರಾಜ ದುಃಖಾತಿಶಯದಿಂದ ಮೂರ್ಛೆಗೊಂಡನು. ರಾಮನು ವಿನಯದಿಂದ ಕೈಕೇಯಿಯಲ್ಲಿ ವಿನಂತಿಸಿಕೊಂಡನು: "ರಾಜ್ಞಿ, ತಾಯಿಯನ್ನು ಕಂಡು, ಸೀತೆಯನ್ನು ಸಾಂತ್ವನಗೊಳಿಸಿ ಬೇಗನೆ ತಾಪಸವೇಷದಿಂದ ಕಾಡಿಗೆ ತೆರಳುವೆ. ಇಷ್ಟೊಂದು ಕಾಲವಿಲಂಬವನ್ನುಕ್ಷಮಿಸು. ಪಿತೃಶುಶ್ರೂಷೆಯಲ್ಲಿ ನಿರತನಾದ ಭರತ, ಈ ಭೂಮಂಡಲದ ಅಧಿಪತಿಯಾಗಲಿ." ರಾಮನ ಮಾತನ್ನಾಲಿಸಿದ ದಶರಥ ' ಓ ನನ್ನ ಕಂದ ರಾಮಭದ್ರ' ಎಂದು ತನ್ನಷ್ಟಕ್ಕೆ ಎಂಬಂತೆ ಹಲುಬಿದ. ನಿಶ್ಚೇಷ್ಟಿತನಾಗಿ ಕುಳಿತಿದ್ದ ರಾಜನ ಮತ್ತು ಕೈಕೇಯಿಯ ಪಾದಧೂಲಿಯನ್ನು ಹಣೆಗೆ ಹಚ್ಚಿಕೊಂಡು, ರಾಮಚಂದ್ರ ಅಂತಃಪುರದಿಂದ ಶಾಂತಗಂಭೀರವಾಗಿ ಹೊರನಡೆದ. ಅಂತಃಪುರದಲ್ಲೆಲ್ಲ ರಾಮಚಂದ್ರನ ನಿರ್ಗಮನ- ವನ್ನು ಕಂಡ ಜನ ಹಾಹಾಕಾರವನ್ನೆ ಮಾಡಲಾ- ರಂಭಿಸಿತು. ಲಕ್ಷ್ಮಣ ಮಾತ್ರ ಈ ಸಂದರ್ಭದಿಂದ ಕ್ಷೋಭೆಗೊಂಡಿದ್ದ. ಒಂದೆಡೆ ಸಿಟ್ಟು- ಒಂದೆಡೆ ದುಗುಡ, ಒಂದೆಡೆ ಸಿಗ್ಗು- ಇವೆಲ್ಲ ಭಾವ ತುಮುಲ- ಗಳಿಂದ ಅವನಿಗೆ ಮಾತೇ ಹೊರಡದಂತಿತ್ತು. ಸುಮ್ಮನೆ ಮೂಕನಾಗಿ ತನ್ನಣ್ಣನನ್ನು ಹಿಂಬಾಲಿಸಿ- ದನು. ಈ ಪ್ರಸಂಗದಲ್ಲಿ ಧೃತಿಗೆಡದೆ ನಗು ಮುಖ- ದಿಂದ ಬರುತ್ತಿದ್ದ ಒಬ್ಬನೇ ಒಬ್ಬ ವ್ಯಕ್ತಿಯೆಂದರೆ ರಾಮಚಂದ್ರ. ರಾಮಚಂದ್ರ ನೇರವಾಗಿ ತಾಯಿಯ ಕೋಣೆಗೆ ಹೋಗಿ ಭಗವತ್ಪೂಜೆಯಲ್ಲಿ ಮಗ್ನಳಾದ ತಾಯಿಗೆ ಅಭಿವಂದಿಸಿದನು. ನಡೆದಿದ್ದ ಅವಾಂತರದ ಸುಳಿವನ್ನೂಅರಿಯದ ರಾಜ್ಞಿ ಕೌಸಲ್ಯೆ, ಮಗನನ್ನು ನಲ್ಮೆಯಿಂದ ತಬ್ಬಿ ಹನಿಗೂಡಿದ ಕಣ್ಣುಗಳಿಂದ ಹರಸಿದಳು: "ಇಂದೇ ಯುವರಾಜನಾಗು, ಕಂದ." ಕೌಸಲ್ಯೆ ಮರುಗಿದಳು ತಾಯಿಯ ಮಾತನ್ನಾಲಿಸಿದ ರಾಮಚಂದ್ರ ತಮ್ಮನ ಮುಖವನ್ನೊಮ್ಮೆ ದಿಟ್ಟಿಸಿ ಮುಗುಳುನಕ್ಕು ನುಡಿದ: "ತಾಯಿ, ನಿನಗೆ ಒಂದು ದುಃಖದ ಸಂಗತಿಯನ್ನು ಹೇಳಬೇಕಾಗಿದೆ. ಕೈಕೇಯಿ ತಾಯಿ, ತಂದೆಯಿಂದ ವರವನ್ನು ಪಡೆದಿದ್ದಾಳೆ- ತನ್ನ ಸಂತತಿಗೇ ರಾಜ್ಯಾಧಿಕಾರ ಸಿಗಬೇಕು ಮತ್ತು ನಾನು ಹದಿನಾಲ್ಕು ವರ್ಷಗಳ ಕಾಲ ಕಾಡಿನಲ್ಲಿರಬೇಕು- ಎಂದು." ಈ ಮಾತನ್ನು ಆಲಿಸಿದ್ದೇ ತಡ -ಕೌಸಲ್ಯೆ ಮೂರ್ಛಿತಳಾಗಿ ಭೂಮಿಗೆ ಬಿದ್ದು ಬಿಟ್ಟಳು- ಕತ್ತರಿಸಿಬಿಟ್ಟ ಹೂಬಳ್ಳಿಯಂತೆ; ಬಾಣದ ಪೆಟ್ಟು ತಿಂದ ಹುಲ್ಲೆಯಂತೆ! ಭೂಮಿಗೆ ಬಿದ್ದ ತಾಯಿಯನ್ನು ರಾಮಚಂದ್ರ ಮೆಲ್ಲನೆ ಹಿಡಿದೆತ್ತಿ ಅವಳ ಮೈಗಂಟಿದ ಧೂಳನ್ನು ತನ್ನ ಮೃದುಪಾಣಿಯಿಂದ ಒರಸಿ ತೆಗೆದನು. ಹೇಗೋ ಎಚ್ಚೆತ್ತ ಕೌಸಲ್ಯೆ ಕಣ್ಣೀರಿಟ್ಟು ನುಡಿದಳು: "ನಿರಪರಾಧಿನಿಯಾದ ನನ್ನನ್ನು ಬಿಟ್ಟು ಹೋಗಬೇಡ ಕಂದ. ವಕ್ರ ಸ್ವಭಾವಳಾದ ಕೈಕೇಯಿಯ ಬಯಕೆಯನ್ನು ಪೂರಯಿಸುವುದರಲ್ಲಿ ನಿನಗಿಷ್ಟು ಭರವೆ ? ಜತೆಗೆ ಮಾತೃ ಹೃದಯಕ್ಕಾಗಿ ಹಂಬಲಿಸಿ-ಹಂಬಲಿಸಿ ಈ ಸೌಭಾಗ್ಯವನ್ನು ಕಾಣುವುದಕ್ಕಾಗಿ ಬದುಕಬೇಕಾಯಿತೆ ? ಕಂದ, ಮಕ್ಕಳಿಗೆ ತಂದೆಗಿಂತ ತಾಯಿ ಮೇಲಲ್ಲವೆ ? ನಾನು ಆಣತಿ ಮಾಡುತ್ತಿದ್ದೇನೆ- ಕಾಡಿಗೆ ಹೋಗಕೂಡದು. ನಿನ್ನನ್ನು ಕಳೆದುಕೊಂಡು ನಾನಾದರೂ ಏಕೆ ಬದುಕಬೇಕು ವತ್ಸ ? ನೀನು ಕಾಡಿಗೆ ಹೋಗುವುದು ನಿಶ್ಚಯವೆಂದಾದರೆ ನನ್ನನ್ನೂ ಕರೆದುಕೊಂಡು ಹೋಗು. ನಾವು ಕಾಡಿ- ನಲ್ಲಿ ಸೊಪ್ಪು-ಗಡ್ಡೆ ತಿಂದು ಬದುಕೋಣ. ಈ ಹಾಳು ಸಂಪತ್ತನ್ನು ಕೈಕೇಯಿಯೊಬ್ಬಳೆ ಉಣ್ಣಲಿ." ಕೌಸಲ್ಯೆಯ ಮಾತುಗಳಿಂದ ಲಕ್ಷ್ಮಣನಿಗೆ ಕರುಳು ಕಿತ್ತು ಬಂದಂತಾಗುತಿತ್ತು. ಅವನನ್ನು ತಡೆದು ರಾಮಚಂದ್ರನೇ ಉತ್ತರಿಸಿದ: " ಮಾತೆ, ಜಗತ್ತಿನಲ್ಲಿ ತಾಯಿಗೆ ಸರಿ-ಸಾಟಿಯಾದುದು ಬೇರೊಂದಿಲ್ಲ ಎಂದು ಬಲ್ಲೆ: ಆದರೆ ಭಗವದಿಚ್ಛೆ ಎಲ್ಲಕ್ಕಿಂತಲೂ ದೊಡ್ಡದು. ಅದಕ್ಕೆ ಎಲ್ಲರೂ ಮಣಿ- ಯಬೇಕು. ಹಿಂದೆ ಪರಶುರಾಮ ತಂದೆಯ ಮಾತಿನಿಂದಲೇ ತಾಯಿಯ ತಲೆಯನ್ನು ತರಿದು ಮತ್ತೆ ಬದುಕಿಸಿದ್ದ. ಪಂಡಿತನಾದ ಕಂಡು ಮಹರ್ಷಿ ತಂದೆಯ ವಚನಕ್ಕಾಗಿ ಗೋಹತ್ಯೆಯನ್ನೇ ಮಾಡಿದ್ದ. ನೀನು ನನ್ನನ್ನು ಪ್ರೀತಿಸುವುದಾದರೆ ತಂದೆಯ ಮಾತನ್ನು ನಡೆಸುವಂತೆ ನನಗೆ ಆಶೀರ್ವದಿಸು ತಾಯಿ." ಹೀಗೆ ತಾಯಿಯನ್ನು ಸಮಾಧಾನಗೊಳಿಸಿ ಲಕ್ಷ್ಮಣನೆಡೆಗೆ ತಿರುಗಿ ನುಡಿದನು; " ದೈವಸಂಕಲ್ಪಕ್ಕೆ ವಿರುದ್ಧವಾಗಿ ಸಿಟ್ಟಾಗುವುದು ಚೆನ್ನಲ್ಲ ತಮ್ಮ ಸಮಾಧಾನ ತಾಳು. " ಕೈಕೇಯಿಯ ಕಪಟ, ಪ್ರಜೆಗಳ ಕಳವಳ, ರಾಮ- ಚಂದ್ರನ ನಿರ್ವ್ಯಾಜ ಸರಳತೆಗಳನ್ನು ಯೋಚಿಸಿದಾ- ಗ ಲಕ್ಷ್ಮಣನಿಗೆ ಸಿಟ್ಟು ಬರದಿರುವುದಾದರೂ ಹೇಗೆ ?ಹುಬ್ಬು ಗಂಟಿಕ್ಕಿತು; ಕಣ್ಣು ಕಿಡಿ ಕಾರಿತು ; ಸೆಟೆದು ನಿಂತು ಲಕ್ಷ್ಮಣನು ತನ್ನ ಖಡ್ಗವನ್ನು ಝಳಪಿಸುತ್ತ ನುಡಿದನು. " ಅಣ್ಣ, ನಿನ್ನ ಒಪ್ಪಿಗೆಯಿಲ್ಲದೆ ನಾನೇನನ್ನೂ ಮಾಡುವಂತಿಲ್ಲ. ಇಲ್ಲದಿದ್ದರೆ ನಿನ್ನ ರಾಜ್ಯ ಪ್ರಾಪ್ತಿಗೆ ಕಂಟಕವಾದ ಆ ದೈವ-ಅದರ ಸಂಕಲ್ಪ ಎಂಥದು ಎಂದು ನೋಡಿಬಿಡುತ್ತಿದ್ದೆ. ಲಕ್ಷ್ಮಣನ ಪೌರುಷ ಇನ್ನೂ ಸತ್ತು ಹೋಗಿಲ್ಲ. ಈ ಬ್ರಹ್ಮಾಂಡದಲ್ಲಿ ಯಾವನೇ ಆಗಲಿ ನಿನ್ನ ಅಭಿವೃದ್ಧಿಗೆ ಕಿಚ್ಚು ಪಡು- ವವನಿದ್ದರೆ ಅವನ ರಕ್ತವನ್ನು ಹೀರಲಿಕ್ಕೆ ನನ್ನ ನಿರ್ದಯಿ ಖಡ್ಗಕ್ಕೆ ಏನೂ ಸಂಕೋಚವಿಲ್ಲ. ಕೈಕೇಯಿ ಕವಡಿನಿಂದ ವರವನ್ನು ಪಡೆದರೆ ಅಖಂಡ ಪ್ರಜಾವರ್ಗದ ಅಭಿಪ್ರಾಯವನ್ನು ಕಡೆಗಣಿಸಿ-ಒಬ್ಬ ಕೈಕೇಯಿಗಾಗಿ ಈ ಕೋಟಿಕಂಠದ ಕರೆಯನ್ನು ನಿರ್ಲಕ್ಷಿಸಿ ಕಾಡಿಗೆ ತೆರಳುವುದು ನ್ಯಾಯವೆ ಅಣ್ಣ ??" " ಲಕ್ಷಣ, ಯಾವುದಕ್ಕೂ ದುಡುಕಬಾರದು. ಸುಖ-ದುಃಖ ಎನ್ನುವುದು ಅರಮನೆಯಲ್ಲಿ- ಕಾಡಿನಲ್ಲಿ ಬೆಲೆಗೆ ಪಡೆವಂಥ ಮಾಲಲ್ಲ. ಅದು ಅಂತರಂಗದ ವಿಷಯ,ನಿಸ್ಸಂಗರಾಗಿ ಅಲೆವ ಜನಕ್ಕೆ ಪಟ್ಟಣವೇನು? ವನವೇನು? ರಾಮಚಂದ್ರ ರಾಜ್ಯದ ಮೋಹದಿಂದ ತಂದೆಯ ಮಾತನ್ನು ಮೀರಿದ ಎಂದು ಜನ ಆಡಿಕೊಳ್ಳುವಂತಾಗಬಾರದಲ್ಲ. ನಮ್ಮ ಕುಲದ ಪರಂಪರೆಗೆ ನನ್ನಿಂದಾಗಿ ಕಲಂಕ ತಟ್ಟಬಾರದಲ್ಲ: ಅದು ಮುಖ್ಯ ವಿಷಯ: ಕಾಡಿನಲ್ಲಿ ತಪಸ್ವಿಗಳ ಸೇವೆ ಮಾಡುತ್ತ ಸುಖವಾಗಿರಬಲ್ಲೆ. ಅಲ್ಲದೆ ಕಾಡಿಗೆ ಹೋಗುವುದರಿಂದ ಮುಂದೆ ತುಂಬ ಪ್ರಯೋಜನ- ವಾಗಲಿದೆ. ಅದಿರಲಿ ಕುಮಾರ, ನಿನಗೆ ನನ್ನ ಮೇಲೆ ತುಂಬ ಮಮತೆ, ಅದರಿಂದ ನಿನಗೆ ಹೀಗೆ ತೋರುವುದೂ ಸಹಜ, ನನ್ನ ಚಿಂತೆ ತೊರೆದುಬಿಡು. ಭರತನೊಡನೆ ತಂದೆ-ತಾಯಂದಿರ ಸೇವೆಗೆ ದೀಕ್ಷೆತೊಡು. " ರಾಮಚಂದ್ರನ ಮಾತಿನಿಂದ ಲಕ್ಷ್ಮಣನ ಕೋಪ ಮಾಸಿದರೂ ಅಣ್ಣನ ಅಗಲುವಿಕೆಯ ಯೋಚನೆಯ ಕಳವಳವಾಯಿತು. ಆತನಿಗೆ ಅಣ್ಣನ ಸೇವೆಯೆಂದರೆ ಎಲ್ಲಿಲ್ಲದ ಸಂತಸ. ಎಂತಲೆ ಈ ಯೋಚನೆಯಿಂದ ಕಣ್ಣು ತೇವವಾಯಿತು. ಕುತ್ತಿಗೆ ಬಿಗಿದು ಬಂತು. ಕೈ ಮುಗಿದು ಅಣ್ಣನ ಬಳಿ ವಿಜ್ಞಾಪಿಸಿಕೊಂಡ : " ಅಣ್ಣ, ನಿನ್ನ ಸೇವೆಯ ಸೊಗಸಿಲ್ಲದ ಸಂಪತ್ತು ನನಗೆ ಬೇಕಿಲ್ಲ. ನೀನೆಲ್ಲಿರುವೆಯೋ ಅಲ್ಲಿ ನನ್ನ ವಾಸ. ನೀನು ನನ್ನನ್ನು ಕರೆದುಕೊಂಡು ಹೋಗ - ಲಾರೆಯಾದರೆ ಈ ಕ್ಷುದ್ರ ದೇಹವನ್ನು ತೊರೆದು ಇನ್ನೊಂದು ಜನ್ಮದಲ್ಲಾದರೂ ನಿನ್ನ ಸೇವೆಗೆ ಅಣಿಯಾಗುವುದು ಖಂಡಿತ. " ತಮ್ಮನ ಕಳಕಳಿಯನ್ನು ಕಂಡ ರಾಮಚಂದ್ರ ನಕ್ಕು"ಆಗಲಿ, ನನ್ನ ಜತೆ ಬರುವಿಯಂತೆ ಅದಕ್ಕೇನು?" ಎಂದು ಸಂತೈಸಿದ. ರಾಮನ ನಿರ್ಣಯವನ್ನರಿತ ಕೌಸಲ್ಯೆ ಮತ್ತೆ ಅಂಗಲಾಚಿಕೊಂಡಳು. "ಕುಮಾರ, ಮನುಷ್ಯರ ಸಂತತಿಯ ಮೂಲ- ಪುರುಷನಾದ ಮನುವಿನ ಮಾತನ್ನು ಕೇಳಿಲ್ಲವೆ ? 'ಒಳಿತು ಕೆಡುಕುಗಳನ್ನು ವಿವೇಚಿಸದೆ ಗರ್ವದಿಂದ ಮನಬಂದಂತೆ ನಡೆವಂಥವನು ಗುರುವೇ ಆಗಿದ್ದರೂ ಅವನ ಮಾತನ್ನು ಗೌರವಿಸಬೇಕಾಗಿಲ್ಲ' ಎಂದು ಅವನು ಹೇಳಿಲ್ಲವೆ ? ಹೆಣ್ಣಿನ ಮಾತಿನಿಂದ ದಾರಿ- ತಪ್ಪಿದ ರಾಜನನ್ನು ಸರಿದಾರಿಗೆ ಬರಿಸುವುದು ನಿನ್ನ ಹೊಣೆಯಲ್ಲವೆ ?" " ಶಮದಮಸಂಪನ್ನನಾದ ತಂದೆಯ ಮಾತನ್ನು ಪಾಲಿಸುವುದೇ ಚೆನ್ನಲ್ಲವೆ ತಾಯಿ ?" " ಓ ನನ್ನ ಕಂದ, ಹುಲಿಯೆದುರು ಸಿಕ್ಕಿದ ಹಸು- ವಿನಂತೆ ನನ್ನ ಸವತಿಗೆ ನಾನು ಹೆದರಬೇಕಾಗಿದೆ. ಇಂಥ ದೆಸೆಯಲ್ಲಿ ನನ್ನನ್ನು ತೊರೆಯಬೇಡ ಮಗನೆ. ನಾನೂ ನಿನ್ನೊಡನೆ ಬಂದುಬಿಡುವೆ. " " ಮಾತೆ, ಇದೆಂಥ ಮಾತು ? ನೀನು ಪತಿಸೇವೆಮಾಡಿಕೊಂಡು ಇಲ್ಲೇ ಇರುವುದು ದೇವರು ಮೆಚ್ಚುವ ಕೆಲಸ, ಭರತನೂ ನಿನಗೆ ದೂರದವನಲ್ಲ. ನನ್ನಂತೆಯೇ ಅವನನ್ನು ನೋಡಿಕೊಂಡಿರು. ಅವನೂ ನಿನ್ನನ್ನು ಭಕ್ತಿಯಿಂದ ಸೇವಿಸಬಲ್ಲ. ಹದಿನಾಲ್ಕು ವರ್ಷಗಳು ಕಳೆದಾಗ ಮತ್ತೆ ಬಂದು ನಿನ್ನ ಆಶೀರ್ವಾದವನ್ನು ಪಡೆಯುತ್ತೇನೆ ಕ್ಷಮಿಸು." ರಾಮನ ದೃಢನಿಶ್ಚಯವನ್ನರಿತ ಮಹಾರಾಣಿ ಅವನನ್ನು ಕಾಡಿಗೆ ಹೋಗದಂತೆ ತಡೆವುದು ಅಶಕ್ಯ- ವೆಂದು ತಿಳಿದು ಹೇಗೋ ದುಃಖವನ್ನು ಸಾವರಿಸಿ- ಕೊಂಡು ರಾಮನಿಗೆ ಸ್ವಸ್ತ್ಯಯನವನ್ನು ಆಚರಿಸಿ ಹರಸಿದಳು. " ಸರ್ವಭೂತಗಳೂ ನಿನಗೆ ಮಂಗಳವನ್ನುಂಟು ಮಾಡಲಿ. ಸರ್ವಭೂತ ಸಾಕ್ಷಿಯಾದ ನಾರಾಯಣ ನಿನ್ನನ್ನು ರಕ್ಷಿಸಲಿ. ಭಗವತ್ಪ್ರಸಾದದಿಂದ ವಿಕ್ರಮ ಶಾಲಿಯಾಗಿ ಕಾಡಿನಿಂದ ಮರಳಿದ ನಿನ್ನನ್ನು ನೋಡುವ ಭಾಗ್ಯ ನನ್ನದಾಗಲಿ.ಹೋಗಿ ಬಾ ಕಂದ. " ಪ್ರಯಾಣದ ಮುನ್ನ ಸರ್ವಸ್ವದಾನ ತಾಯಿಯ ಚರಣರಜಸ್ಸನ್ನು ಹಣೆಗೊತ್ತಿಕೊಂಡು ಅಲ್ಲಿಂದ ಮರಳಿದ ರಾಮಚಂದ್ರ ತನ್ನ ಅಂತಃ- ಪುರಕ್ಕೆ ಬಂದು ಸೀತೆಯ ಬಳಿ ಕೇಳಿದನು. " ಜಾನಕಿ, ನಿನ್ನ ನಿರ್ಣಯವೇನು ? " " ನಿನ್ನೊಡನೆ ಕಾಡಿಗೆ ಬರುವುದೆಂದೇ ನಿಶ್ಚಯಿಸಿ- ದ್ದೇನೆ." "ಹೆಣ್ಣು ಹೆಂಗಸಿಗೆ ಅದು ಕಷ್ಟ. ಅತ್ತೆಯಂದಿರ ಜತೆ ನೀನು ಇಲ್ಲೆಇರಬಹುದಲ್ಲ. " ರಾಮನ ಯಾವ ಸಮಾಧಾನವೂ ಉಪಯೋಗಕ್ಕೆ ಬೀಳಲಿಲ್ಲ. ಕೊನೆಗೂ ಸೀತೆ ಪಟ್ಟು ಹಿಡಿದು ಗಂಡನನ್ನು ಒಪ್ಪಿಸಿಯೇ ಬಿಟ್ಟಳು. ನಿತ್ಯಾವಿಯೋಗಿನಿಯಾದ ಸೀತೆ ರಾಮನ ಜತೆ ಕಾಡಿಗೆ ತೆರಳುವುದೆಂದು ನಿರ್ಣ ಯವಾಯಿತು. ಇದೂ ಒಂದು ವಿಡಂಬನೆ ! ಅಂತಃಪುರವೆಲ್ಲ ಈ ಸುದ್ದಿಯನ್ನು ಕೇಳಿ ಗೋಳಿಟ್ಟಿತು. ಲಕ್ಷ್ಮಣನೂ ಒದ್ದೆ ಕಣ್ಣಿನಿಂದ ತಲೆಬಗ್ಗಿಸಿ ದಿಗ್ಭ್ರಾಂತನಾಗಿ ನಿಂತಿದ್ದ. ರಾಮಚಂದ್ರ ಮತ್ತೊಮ್ಮೆ ಅವನನ್ನು ಸಾಂತ್ವನೆಗೊಳಿಸಿದ. "ಲಕ್ಷಣ, ಕೈಕೇಯಿಯ ಮೋಹಕ್ಕೆ ಬಲಿಬಿದ್ದ ತಂದೆ ನಮ್ಮ ತಾಯಂದಿರನ್ನು ಕಡೆಗಣಿಸಬಹುದು. ಭರತನನ್ನೂ ಸಂಪತ್ತಿನ ಮದ, ಯಾವೆಡೆಗೆ ಕೊಂಡೊಯ್ಯುವುದೋ ಹೇಳಬರುವದಿಲ್ಲ. ಅದರಿಂದ ನೀನು ಇಲ್ಲೇ ಇರುವುದು ಉತ್ತಮ. ನಾನು ನಿನ್ನನ್ನು ಕಾಡಿಗೆ ಕರೆದೊಯ್ದು ಕಷ್ಟಪಡಿಸ ಬಯಸುವದಿಲ್ಲ. " ರಾಮನು ಮಾತನ್ನು ಮುಗಿಸುವ ಮೊದಲೇ ಲಕ್ಷ್ಮಣನು ಅವನ ಕಾಲಿಗೆ ಅಡ್ಡ ಬಿದ್ದು ಕಂಬನಿ- ಯಿಂದ ಅವನ ಕಾಲನ್ನು ತೊಳೆದು ವಿಜ್ಞಾಪಿಸಿ- ಕೊಂಡನು: "ಭರತನು ಬದುಕಿರುವವರೆಗೆ ನಮ್ಮ ತಾಯಂದಿ- ರಿಗೆ ಯಾವ ತೊಡಕೂ ಬರಲಾರದು. ಭರತನಿಗೆ ನಿನ್ನ ಮೇಲೆ ಎಂಥ ಗೌರವವಿದೆ ಎಂಬುದು ನನಗೆ ಗೊತ್ತು. ಅವನಿರುವಾಗ ಇಲ್ಲಿ ನನ್ನ ಆವಶ್ಯಕತೆಯಿಲ್ಲ. ನೀನು ಮತ್ತು ಅತ್ತಿಗೆ ಕಾಡಿನಲ್ಲಿ ವಿಹರಿಸುವಾಗ ನಿಮ್ಮನ್ನು ಸೇವಿಸುವ ಭಾಗ್ಯ ದೊರಕಿದರೆ ಅದೇ ದೊಡ್ಡದು. ನನ್ನನ್ನು ತೊರೆದು ಹೋಗಬೇಡ ಅಣ್ಣ." "ಆಗಲಿ ಕುಮಾರ, ಹಾಗೆಯೇ ಆಗಲಿ. ನೀನು ಹೊರಡುವ ಸುದ್ದಿಯನ್ನು ಬಂಧುಗಳಿಗೆ ಅರುಹಿ ಬಾ, ಮರಳಿ ಬರುವಾಗ ಆಚಾರ್ಯಮಂದಿರದಲ್ಲಿ- ರುವ ವರುಣದತ್ತಗಳಾದ ಬಿಲ್ಲುಗಳನ್ನೂ ಕವಚ- ವನ್ನೂ ಅಕ್ಷಯ ಬಾಣಗಳುಳ್ಳ ಬತ್ತಳಿಕೆಗಳನ್ನೂ ಖಡ್ಗಗಳನ್ನೂ ಹಿಡಿದುಕೊಂಡು ಬಾ." ಲಕ್ಷ್ಮಣನಿಗೆ ಅಣ್ಣನ ಒಪ್ಪಿಗೆ ದೊರೆತುದು ನಿಧಿ ದೊರೆತಂತಾಯಿತು. ಆನಂದದಿಂದ ಕ್ಷಣಮಾತ್ರದಲ್ಲಿ ಈ ಕಾರ್ಯಗಳನ್ನು ಪೂರೈಸಿದನು. ರಾಮನು ತನ್ನ ಮೈಯ ದಿವ್ಯಾಭರಣಗಳನ್ನು ಕಳಚಿ ವಸಿಷ್ಠಪುತ್ರ- ನಾದ ಸುಯಜ್ಞನಿಗೆ ಅರ್ಪಿಸಿದನು. ಅಂತೆಯೇ ಜನಕರಾಜನು ತನಗೆ ಬಳುವಳಿಯಾಗಿ ಕೊಟ್ಟಿದ್ದ ಶತ್ರುಂಜಯವೆಂಬ ಆನೆಯನ್ನೂ ಅವನಿಗಿತ್ತನು. ಸೀತೆಯೂ ತನ್ನ ಒಡವೆಗಳನ್ನು ಸುಯಜ್ಞನ ಮಡದಿ- ಗೊಪ್ಪಿಸಿದಳು. ರಾಮನು ಬಹಳ ಸಂತಸದಿಂದ ಯಾರು ಏನನ್ನು ಕೇಳಿದರೆ ಅದನ್ನು ಹಂಚಿಬಿಡು- ತ್ತಿದ್ದ. ಬ್ರಾಹ್ಮಣರಿಗೆ-ಪುರಜನರಿಗೆ ಅಂತಃಪುರದ ಆಳುಗಳಿಗೆ ದಾಸ-ದಾಸಿಯರಿಗೆ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಬಹುಮಾನವನ್ನಿತ್ತು ಸತ್ಕರಿಸಿದನು. ತೆಗೆದುಕೊಳ್ಳುವವನ ಕಣ್ಣೀರು ಕೊಡುವವನ ಮಂದಹಾಸದಲ್ಲಿ ಲೀನವಾಗುತ್ತಿತ್ತು. ಅಷ್ಟರಲ್ಲಿ ತ್ರಿಜಟನೆಂಬ ಮುದಿ ಹಾರುವನೊಬ್ಬ ಕೋಲನ್ನೂರಿಕೊಂಡು ಬಂದು ನುಡಿದ: "ರಾಮಭದ್ರ, ನೋಡು, ನಾನು ಮುದುಕ, ಮನೆಯಲ್ಲಿ ಹರೆಯದ ಮಡದಿ: ಮನೆತುಂಬ ಮಕ್ಕಳು. ಬಡತನದ ಬಾಳು. ನನಗೂ ಏನನ್ನಾದರೂ ಕೊಡು." ಮುಗುಳುನಕ್ಕು ಹಾಸ್ಯಕ್ಕಾಗಿ ರಾಮಚಂದ್ರ ನುಡಿದ: " ಓ ಅಲ್ಲಿ ಸರಯುವಿನ ತಡಿಯಲ್ಲಿ ಹಸುವಿನ ಮಂದೆಯಿದೆಯಲ್ಲ. ಪೂಜ್ಯರೆ, ಇಲ್ಲಿಂದ ನಿಮ್ಮ ಕೋಲನ್ನು ಬೀಸಿ ಅಲ್ಲಿಗೆ ಎಸೆದಿರಾದರೆ ಅವುಗಳನ್ನು ನಿಮಗೇ ಕೊಡಬಲ್ಲೆ." ಆ ಬ್ರಾಹ್ಮಣ ಚಿಂದಿ ಬಟ್ಟೆಗಳನ್ನೇ ಹೇಗೋ ಸೊಂಟಕ್ಕೆ ಬಿಗಿದುಕೊಂಡು ಎಲ್ಲಿಲ್ಲದ ಹುಮ್ಮಸ- ದಿಂದ ಯಾವಚ್ಛಕ್ತಿ ಕೋಲನ್ನು ಬಲವಾಗಿ ಬೀಸಿ ಎಸೆದನು. ಅದು ಸರಯುವನ್ನು ದಾಟಿ ಒಂದು ಸಾವಿರ ಗೋವುಗಳಾಚೆ ಹೋಗಿ ಬಿತ್ತು. ಸಂತಸ- ಗೊಂಡ ರಾಮಚಂದ್ರ ಆ ಒಂದು ಸಾವಿರ ಹಸುಗಳ- ನ್ನೂ ಜತೆಗೆ ಹೇರಳವಾದ ಹಣವನ್ನೂ ಆ ವಿಪ್ರ- ನಿಗಿತ್ತು ಅಭಿನಂದಿಸಿದನು. ಅನಂತರ ತಂದೆಯನ್ನು ಕಾಣುವದಕ್ಕೆಂದು ಅಂತಃಪುರದಿಂದ ಇಳಿದು ಬಂದನು. ಸೀತೆಯೂ ಲಕ್ಷಣನೂ ಅವನನ್ನು ಅನುಸರಿಸಿದರು. ಒಂದು ಕಾಲವಿತ್ತು ಆಗ ಸೂರ್ಯ ಚಂದ್ರರೂ ಕೂಡ ಸೀತೆಯ ಮೋರೆಯನ್ನು ಸರಿಯಾಗಿ ಕಂಡಿರಲಿಲ್ಲ. ಅದೇ ಸೀತೆ ಇಂದು ಬೀದಿಯಲ್ಲಿ ಬರಿಗಾಲಿನಿಂದ ನಡೆದು ಬರುತ್ತಿರುವುದನ್ನು ಬೀದಿಹೋಕರು ಕೂಡ ಕಂಡರು ! "ರಾಮನು ಕಾಡಿಗೆ ಹೋಗುವವನಾದರೆ ನಾವೂ ಅವನ ಜತೆಗೆ ಬರುವೆವು. ಅವನನ್ನುಳಿದು ನಮ್ಮದೆಂಥ ಬಾಳು" ಎಂದು ಜನರು ಗೋಳಿಡು- ತ್ತಿರುವುದನ್ನಾಲಿಸುತ್ತ ರಾಮನು ತಂದೆಯ ಮಂದಿರ-ವನ್ನು ಪ್ರವೇಶಿಸಿದನು. ರಾಮನ ಆಗಮನವನ್ನು ಸುಮಂತ್ರನಿಂದ ತಿಳಿದ ದಶರಥನ ಮುನ್ನೂರೈವತ್ತು ಮಂದಿಮಡದಿಯರೂ ಅವನೆಡೆ ಧಾವಿಸಿದರು. ದುಃಖಪೂರದಲ್ಲಿ ಮುಳುಗಿದ್ದ ಜನಕ್ಕೆ ಒಮ್ಮೆಲೆ ರಾಮಭದ್ರನ ಮುಖಚಂದ್ರನ ದರ್ಶನದಿಂದ ಮನಸ್ಸು ನೆಮ್ಮದಿಯ ನೆಲೆಯನ್ನು ಕಂಡಂತಾ- ಯಿತು. ನಾರುಡೆಯನ್ನುಟ್ಟು ಹೊರಟರು ತನ್ನ ಬಳಿಗೆ ಬರುತ್ತಿರುವ ರಾಮಚಂದ್ರನನ್ನು ಕಂಡ ಮಹಾರಾಜ ಸಿಂಹಾಸನದಿಂದ ಧಿಗ್ಗನೆದ್ದು 'ಬಾ ಮಗನೆ' ಎಂದು ಗದ್ಗದಿತನಾಗಿ ನುಡಿದು ಮುಂದೆ ಹೋಗಲಾರದೆ ಭೂಮಿಗೆ ಕುಸಿದು ಬಿದ್ದನು. ಅಷ್ಟರಲ್ಲಿ ರಾಮಚಂದ್ರ ಧಾವಿಸಿ ಬಂದು ತಂದೆಯ- ನ್ನವಲಂಬಿಸಿಕೊಂಡ. ಎಚ್ಚತ್ತ ದಶರಥ ಮಗನನ್ನು ಬಿಗಿದಪ್ಪಿಕೊಂಡನು. ರಾಮ-ಲಕ್ಷ್ಮಣರನ್ನೂ ಸೀತೆಯನ್ನೂ ಮಡಿಲಲ್ಲಿ ಕುಳ್ಳಿರಿಸಿಕೊಂಡು ಏನೋ ಹೇಳತೊಡಗಿದನು. ಅಷ್ಟರಲ್ಲೆ ದುಃಖ ಉಮ್ಮಳಿಸಿ ಮೂರ್ಛಿತನಾಗಿಬಿದ್ದು ಬಿಟ್ಟ. ಇದನ್ನು ಕಂಡು ಕನ್ನೆವಾಡದ ಹೆಂಗಳೆ- ಯರೆಲ್ಲ ಚೀರಿದರು. ಮೆಲ್ಲನೆ ಮೂರ್ಛೆ ತಿಳಿದೆದ್ದ ರಾಜನ ಬಳಿ, ರಾಮಚಂದ್ರ ವಿನಯದಿಂದ ವಿಜ್ಞಾಪಿಸಿಕೊಂಡ. " ತಾತ, ನನಗೆ ಕಾಡಿಗೆ ತೆರಳಲು ಅಪ್ಪಣೆಕೊಡು. ಈ ಸೀತೆ- ಈ ಲಕ್ಷಣ ನಾನು ಬೇಡವೆಂದರೂ ಬರುತ್ತೇವೆ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಅವರಿಗೂ ಒಪ್ಪಿಗೆ ಕೊಡು. " " ಕುಮಾರ, ವಂಚಕಿಯಾದ ಕೈಕೇಯಿ ನನ್ನಿಂದ ವರವನ್ನು ಕಸಿದುಕೊಂಡಳು. ಅದರಲ್ಲಿ ನಾನೂ ತಪ್ಪುಗಾರ, ಆದರಿಂದ ನನಗೆ ತಕ್ಕ ಶಾಸ್ತಿಯನ್ನು ಮಾಡಿ ನೀನು ರಾಜ್ಯವನ್ನು ಪಾಲಿಸಬೇಕು. ಇದು ಧರ್ಮ, ನೀನು ಸರ್ವಥಾ ಕಾಡಿಗೆ ಹೋಗುವುದೇ ದಿಟವಾದರೆ ನನ್ನನ್ನೂ ಕರೆದುಕೊಂಡು ಹೋಗು. ಓ ನನ್ನ ಮಾಣಿಕ್ಯವೆ, ನಿನ್ನನ್ನು ತೊರೆದು ನಾನು ಬದುಕಲಾರೆ. " " ಹಾಗೆನ್ನಬೇಡ ಅಪ್ಪ, ನಾನು ಶಾಸ್ತಿ ಮಾಡಬೇಕೆ? ಇದೋ- ನೀನೇ ರಾಜನಾಗಿರಬೇಕು. ಕುಮಾರ ಭರತನು ಯುವರಾಜನಾಗಬೇಕು- ಇದು ನನ್ನ ಬಯಕೆ, ಸ್ವರ್ಗ-ನರಕಗಳಲ್ಲಾಗಲಿ, ನಾಡು-ಕಾಡು- ಗಳಲ್ಲಾಗಲಿ ಎಲ್ಲಾದರೂ ನನಗೆ ಸುಖವೇ ಹೊರತು ದುಃಖವೆಂಬುದಿಲ್ಲ. ಅದಕ್ಕಾಗಿ ನೀನು ಚಿಂತಿಸಬೇಡ" ರಾಮನ ನಿರ್ಧಾರವನ್ನರಿತ ಮಹಾರಾಜ ಮಂತ್ರಿಯನ್ನಾಜ್ಞಾಪಿಸಿದನು." ನಮ್ಮ ರಾಜ್ಯದ ಸೇನೆ-ಸಂಪತ್ತು, ಸಕಲ ವೈಭವವೂ ರಾಮನ ಜತೆಗೆ ಕಾಡಿಗೆ ಹೋಗಲಿ. ನನ್ನ ಮಗ ಕಾಡಿನಲ್ಲಾದರೂ ಸುಖವಾಗಿರಲಿ, ಹಾಳು ಬಿದ್ದ ಅಯೋಧ್ಯೆಯನ್ನು ಕೈಕೇಯಿಯ ಮಗ ಆಳಲಿ, ವಯಸ್ಸಿನಲ್ಲೂ ಗುಣ- ದಲ್ಲೂ ಹಿರಿಯನಾದ ರಾಮಚಂದ್ರ ಕೈಕೇಯಿಯ ಕೈತವದಿಂದ ದುಃಖಪಡುವಂತಾಗಬಾರದು." ಇದನ್ನು ಕೇಳಿ ಕೈಕೇಯಿಗೆ ಮುನಿಸು ತಡೆಯ- ಲಾಗಲಿಲ್ಲ. ಅವಳು ಸೆಟೆದು ನುಡಿದಳು. "ಈ ಹಿಂದೆ ಸಗರನು ತನ್ನ ಹಿರಿಯ ಮಗ ಅಸಮಂಜಸನನ್ನು ಕಾಡಿಗೆ ಅಟ್ಟಿಲ್ಲವೆ ? ಹಾಗೆಯೇ ಇವನನ್ನೂ ತೊರೆದರೆ ತಪ್ಪೇನು ? " ರಾಜನಿಗೆ ನಾಚುಗೆಯಿಂದ ತಲೆ ತಗ್ಗಿಸುವಂತಾ- ಯಿತು. ಮಂತ್ರಿಗಳಿಗೂ ಇದು ಸಹನೆಯಾಗಲಿಲ್ಲ. ಸಿದ್ಧಾರ್ಥನೆಂಬ ಮಂತ್ರಿ ನುಡಿದ. "ಅಸಮಂಜಸ, ಹೆಸರಿಗೆ ತಕ್ಕಂತೆಯೆ ಸಮಂಜಸ- ವಾಗಿ ನಡೆದುಕೊಂಡಿಲ್ಲ. ನಿರಪರಾಧಿ ಮಕ್ಕಳನ್ನು ನದಿಗೆಸೆದು ಕೊಲ್ಲುತ್ತಿದ್ದ. ಅದರಿಂದ ಸಗರ ರಾಜ್ಯ- ದಿಂದ ಅವನನ್ನು ದೂರಮಾಡಿದ. ರಾಮಭದ್ರನನ್ನು ಯಾವ ತಪ್ಪಿಗಾಗಿ ಕಾಡಿಗಟ್ಟಬೇಕು ಮಹಾರಾಣಿ ? ಅಪ್ಪಣೆಕೊಡಿಸಬೇಕು. ಜಗತ್ತೆಲ್ಲ ಯಾರನ್ನು ತನ್ನ ಒಡೆಯನೆಂದು ಕೂಗಿ ಕರೆಯುತ್ತಿದೆಯೋ ಅಂಥ ಗುಣಧಾಮನಾದ ಪ್ರಿಯಪುತ್ರನನ್ನು ಮಹಾರಾಜ ಹೇಗೆ ಕಾಡಿಗಟ್ಟುವುದು ? ಮಾನವೀಯತೆ ಎಂಬು- ದೊಂದಿದೆಯಲ್ಲ ! ನೆರೆದವರೆಲ್ಲ ಕೈಕೇಯಿಯನ್ನು ಜರೆವವರೆ, ಮಹಾರಾಜನೂ ಅವಳನ್ನು ಶಪಿಸತೊಡಗಿದ. ನಡುವೆ ರಾಮಚಂದ್ರ ಪ್ರವೇಶಿಸಿ ನುಡಿದ : " ರಾಜನ್, ರಾಜ್ಯವನ್ನು ತೊರೆದ ನನಗೆ ರಾಜ- ವೈಭವದಿಂದೇನು ? ಸಲಗವಿಲ್ಲದವನಿಗೆ ಸಂಕಲೆ- ಯೇಕೆ ? ನನಗೆ ಬೇಕಾದುದು ಕೆಲವು ನಾರುಡೆಗಳು, ಒಂದು ಗುದ್ದಲಿ-ಒಂದು ಸಣ್ಣ ಬುಟ್ಟಿ -ಒಂದು ಜೋಳಿಗೆ ಇಷ್ಟೆ. ಉಳಿದುದೆಲ್ಲವೂ ಮಾತೆ ಕೈಕೇಯಿ- ಗಿರಲಿ." ಮರುಕ್ಷಣದಲ್ಲೇ ನಾಣ್‌ಗೇಡಿ ಕೈಕೇಯಿ ನಾರುಡೆ ಗಳನ್ನು ಬರಿಸಿ "ಇದೋ ಉಟ್ಟುಕೊಳ್ಳು" ಎಂದು ರಾಮನಿಗೆ ಕೊಟ್ಟಳು. ರಾಮನು ನಗುತ್ತಲೆ ಅವನ್ನು ತೆಗೆದುಕೊಂಡು, ತನ್ನ ಸೂಕ್ಷ್ಮವಸ್ತ್ರಗಳನ್ನು ತ್ಯಜಿಸಿ ಅವನ್ನುಟ್ಟುಕೊಂಡನು. ರಾಮನನ್ನು ಕಂಡು ಲಕ್ಷ್ಮಣನೂ ಚೀರಧಾರಿಯಾದ.ಕೈಕೇಯಿ ಸೀತೆಯನ್ನು ಬಿಟ್ಟಿರಲಿಲ್ಲ. ಅವಳಿಗೂ ನಾರುಡೆಯನ್ನು ತರಿಸಿ ಕೊಟ್ಟಳು. ಪಟ್ಟೆ-ಪೀತಾಂಬರಗಳನ್ನಷ್ಟೆ ತೊಟ್ಟು ಬಲ್ಲ ಸೊಗಸಿ ಸೀತೆ, ನಾರುಡೆಯನ್ನು ಕಂಡು ಅಚ್ಚರಿಗೊಂಡಳು. ಈ ಮರಡು ಬಟ್ಟೆಯನ್ನು ಉಡುವುದು ಹೇಗೆಂದೇ ಅವಳಿಗೆ ತೋಚದು. ಕೊಟ್ಟ ನಾರುಡೆಯನ್ನು ಕತ್ತಿನಲ್ಲಿ ಇಳಿಬಿಟ್ಟು ರಾಮನನ್ನು ನೋಡಿ ನುಡಿದಳು: " ಈ ಕಂಬಳಿಯನ್ನು ಹೇಗೆ ಉಟ್ಟುಕೊಳ್ಳುವುದು ನಾಥ ? ಕಾಡಿನ ಹೆಂಗಳೆಯರಾದರೂ ಇದನ್ನು ಹೇಗೆ ಉಡುವರೋ ! " ಈ ಮಾತನ್ನಾಡುವಾಗ ಅವಳ ಕೆನ್ನೆ ನಾಚಿಕೆ- ಯಿಂದ ನಸುಗೆಂಪಾಗಿತ್ತು. ರಾಮನು ತಾನೇ ಬಂದು ಅವಳಿಗೆ ನಾರುಡೆಯನ್ನುಡಿಸಿದನು.ಜಗನ್ಮಾತೆಯಾದ ಸೀತೆಯ ಮೈಯಲ್ಲಿ ನಾರುಡೆಯನ್ನು ಕಂಡಾಗ, ವಸಿಷ್ಠರು ಈ ವರೆಗೆ ತಡೆಹಿಡಿದಿದ್ದ ಸಿಟ್ಟು ಹೊನ- ಲಾಗಿ ಹರಿಯಿತು, "ಬೇಡ ತಾಯಿ ನಾರುಡೆಯನ್ನು- ಡಬೇಡ" ಎಂದು ಸೀತೆಯನ್ನು ತಡೆದು ಅವರು ಕೈಕೇಯಿಯೆಡೆಗೆ ತಿರುಗಿ ನುಡಿದರು: " ಕೈಕೇಯಿ, ನಿನ್ನ ಈ ದುಡುಕುತನ ಎಲ್ಲೆ ಮೀರುತ್ತಿದೆ. ನೀನು ಈ ಅಕೃತ್ಯದಿಂದ ಇಡಿಯ ಕೇಕಯವಂಶಕ್ಕೆ ಮಸಿಬಳೆಯುತ್ತಿರುವೆ. ನಿನ್ನ ದುರ್ವೃತ್ತದ ಫಲವಾಗಿಯೂ ಸೀತೆ ಕಾಡಿಗೆ ಹೋಗು- ವುದನ್ನು ನಾನು ಸಹಿಸಲಾರೆ. ಗಂಡ-ಹೆಂಡಿರೆಂದರೆ ಒಂದು ಮನಸಿನ ಎರಡು ಮೈಗಳು. ರಾಮನ ಅರ್ಧಾಂಗಿ ಸೀತೆ ನಮ್ಮ ರಾಣಿಯಾಗಿ ಇಲ್ಲೇ ಉಳಿ- ಯಲಿ, ಸೀತಾ ರಾಮರಿಬ್ಬರೂ ಕಾಡಿಗೆ ಹೋಗುವು- ದಾದರೆ ನಮಗಾದರೂ ಏಕೆ ಈ ರಾಜ್ಯ ? ನಾವೂ ರಾಮನ ಜತೆಗೆ ತಪಸ್ವಿಗಳಾಗಿ ಬಾಳುವೆವು. ಕಾಡಿನಲ್ಲೇ ಹೊಸ ರಾಷ್ಟ್ರವನ್ನು ನಿರ್ಮಾಣ ಮಾಡು ವೆವು. ಭರತ-ಶತುಘ್ನರೂ ನಮ್ಮ ಜತೆಗೆ ಬಂದು ಬಿಡುವರು. ಓ ಕುಹಕಿ ಕೈಕೇಯಿಯೇ, ನಿರ್ಜನವಾದ ಅಯೋಧ್ಯೆಯ ಮರ-ಬಳ್ಳಿಗಳನ್ನು ನೀನು ಮಹಾ ರಾಣಿಯಾಗಿ ಆಳು ತಾಯಿ, ಅಯೋಧ್ಯೆಯ ಪುಣ್ಯ- ನೆಲದ ಮೇಲೆ ನಡೆಯಲಿ ಈ ಮಹಾಕಾಳಿಯ ಪ್ರಳಯ ನೃತ್ಯ ! " ಮಹಾರಾಜನೂ ನಿರ್ವಿಣ್ಣನಾಗಿ ನುಡಿದ: "ರಾಮನೊಬ್ಬ ಕಾಡಿಗೆ ಹೋಗಬೇಕಂದಲ್ಲವೆ ನೀನು ಬಯಸಿದ್ದು ? ಪಾಪ-ಸೀತೆಗೂ ಲಕ್ಷ್ಮಣನಿಗೂ ಏಕೆ ನಾರುಡೆಯನ್ನು ತೊಡಿಸಿದೆ ಪಾಪಿಷ್ಠೆ ?" ಇಡಿಯ ಅಂತಃಪುರವೇ ಪ್ರಕ್ಷುಬ್ಧವಾಗ ಕೈಕೇಯಿ- ಯ ಮೇಲೆ ಹರಿಹಾಯುವಂತಿದ್ದುದನ್ನು ನೋಡಿ ಕರುಣಾಳು ರಾಮಚಂದ್ರ ನುಡಿದ. " ಮಹಾರಾಜ, ನನಗಾಗಿ ನೀವಾರೂ ತಾಯಿ ಕೈಕೇಯಿಯನ್ನು ಹೀಗೆ ನೋಯಿಸಬಾರದು. ಏನಿದ್ದರೂ ಅವಳು ನನ್ನ ತಾಯಿ. ದಯವಿಟ್ಟು ನನಗೋಸ್ಕರ ಅವಳ ಮೇಲೆ ನೀವೆಲ್ಲ ಕೃಪೆತಾಳ- ಬೇಕು." ರಾಮನು ಮೆಲ್ಲನೆ ಅಂತಃಪುರದಿಂದ ಹೊರ ನಡೆದ. ಅದನ್ನು ಕಂಡು ಮಹಾರಾಜನಿಗೆ ದುಃಖ ತಡೆಯಲಾಗಲಿಲ್ಲ. ಕೈಕೇಯಿಯನ್ನು ಪರಿಪರಿಯಾಗಿ ತೆಗಳಿದನು. ರಾಮನನ್ನು ನೆನೆದು ಮಕ್ಕಳಂತೆ ಅತ್ತು ಬಿಟ್ಟನು. ನೂರಾರು ಮಹಿಷಿಯರೂ ಚೀತ್ಕರಿಸಿದರು. ಯುವರಾಜನಾಗಬೇಕಿದ್ದ ರಾಮಚಂದ್ರ ಕಾಲುನಡಿಗೆಯಿಂದ ಕಾಡಿಗೆ ಹೊರಟು ದನ್ನು ಕಂಡು, ಮಹಾರಾಜ ಸುಮಂತ್ರನನ್ನು ಕರೆದು ಆಜ್ಞಾಪಿಸಿದ: "ಸುಮಂತ್ರ, ನನ್ನ ಕಂದನನ್ನು ನನ್ನ ರಥದಲ್ಲಿ ಕರೆದುಕೊಂಡು ಹೋಗು, ತಾಯಿ-ತಂದೆಯರು ಕೈಬಿಟ್ಟ ಮಗನನ್ನು ಕಾಡಿಗೆ ಬಿಟ್ಟು ಬಾ ಸುಮಂತ್ರ." ಒಡನೆ ಸುಮಂತ್ರ ರಥವನ್ನು ದ್ವಾರದಲ್ಲಿ ತಂದಿರಿಸಿದ. ಚೀರವಸನೆಯಾದ ಸೀತೆಯನ್ನು ಕಂಡು, ಮಹಾರಾಜ ಕೋಶಾಧ್ಯಕ್ಷನನ್ನು ಬರಿಸಿ ನುಡಿದನು: "ಬೆಲೆಬಾಳುವ ಬಟ್ಟೆಗಳು, ಬಂಗಾರದೊಡವೆ ಗಳು ಇನ್ನೂ ಎಲ್ಲ ಸಿಂಗಾರದ ಬಗೆಗಳನ್ನು ನನ್ನ ಸೊಸೆ ಸೀತೆಗೆ ತಂದುಕೊಡು." ಕೋಶಾಗಾರದ ಅಮೂಲ್ಯ ಆಭರಣಗಳು ಸೀತೆಯ ಮೈಯಲ್ಲಿ ತೊಳಗಿದವು. ಕೌಸಲ್ಯೆ ಸೀತೆಯನ್ನು ಮಗಳಂತೆ ಮುಂಡಾಡಿ ನುಡಿದಳು: "ಮಗಳೆ ! ನಾನು ಬಲ್ಲೆ, ರಾಮಚಂದ್ರನ ಮೇಲೆ ನಿನಗೆ ತುಂಬ ಒಲವು. ಅವನು ಯಾವುದೋ ದುರ್ವಿಪಾಕದಿಂದ ಕಾಡಿಗೆ ತೆರಳುತ್ತಿದ್ದಾನೆ. ತಪಸಿ- ಯಾದ ಗಂಡನನ್ನು ಹಳಿಯಬೇಡ ತಾಯಿ. ಅವನ ಮನಸ್ಸು ನೋಯುವಂಥ ಯಾವ ಮಾತನ್ನೂ ಆಡಬೇಡ, ಸಾಧ್ವಿಯಾಗಿ ಬಾಳು. " " ಅತ್ತೆ ! ಗಂಡನನ್ನು ಗೌರವಿಸದ ಕುಸಂಸ್ಕೃತ- ರೊಡನೆ ನನ್ನನ್ನು ಹೋಲಿಸಬೇಡಿ. ಗಂಡನಿಲ್ಲದ ತರುಣಿ ಗಾಲಿಯಿಲ್ಲದ ತೇರು ಎಂದು ನನಗೆ ಗೊತ್ತು. ತಂತಿಯಿಲ್ಲದ ವೀಣೆ ಎಂದಿಗೂ ನುಡಿಯಲಾರದು. " ಸೊಸೆಯ ಮಾತಿನಿಂದ ಸಂತಸಗೊಂಡ ಕೌಸಲ್ಯೆ ಅವಳನ್ನು ಬಿಗಿದಪ್ಪಿ, ರಾಮನಿಗೂ ಒಂದೆರಡು ಹಿತದ ನುಡಿಯನ್ನಾಡಿದಳು : " ಕಂದ, ಕಾಡಿನಲ್ಲಿ ಎಚ್ಚರಿಕೆಯಿಂದಿರು. ಅಂತೆಯೇ ನನ್ನ ಸೊಸೆಯನ್ನೂ ಕುಮಾರ ಲಕ್ಷ್ಮಣನನ್ನೂ ಜೋಪಾನವಾಗಿ ನೋಡಿಕೊಂಡಿರು ವತ್ಸ. " "ಮಾತೆ, ಈ ತ್ರೈಲೋಕ್ಯದಲ್ಲಿ ದೇವ-ದಾನವರೆಲ್ಲ ಕೂಡಿ ಕದನ ಹೂಡಿ ನನಗೆ ಸೋಲೆಂಬುದಿಲ್ಲ, ಕಳವಳಗೊಳ್ಳಬೇಡ. ಆದಷ್ಟು ಬೇಗ ನಿನ್ನ ಸೊಸೆಯನ್ನು ಕುಮಾರ ಲಕ್ಷ್ಮಣನನ್ನೂ ಕರೆದು ಕೊಂಡು ಬರುವೆ ತಾಯಿ. " ರಾಮಚಂದ್ರನು ಕ್ರಮವಾಗಿ ಮಹಾರಾಜನ ಮುನ್ನೂರೈವತ್ತು ಮಡದಿಯರನ್ನು ವಂದಿಸಿ- ಬೇಡಿಕೊಂಡನು ; "ತಾಯಂದಿರೆ, ನಿಮ್ಮ ಮಗ ಕಾಡಿಗೆ ತೆರಳು- ತ್ತಿದ್ದಾನೆ. ಈ ವರೆಗೆ ನಿಮಗೆ ನನ್ನಿಂದ ಏನಾದರೂ ಅಪಚಾರವಾಗಿದ್ದರೆ ಅದನ್ನು ಮರೆತುಬಿಡಿ. ಸಂತೋಷದಿಂದ ಹರಸಿ ಕಳಿಸಿಕೊಡಿ. " ರಾಜಪತ್ನಿಯರ ಕರುಣಕ್ರಂದನವೇ ಇದಕ್ಕೆ ಉತ್ತರವಾಗಿತ್ತು. ಅನಂತರ ರಾಮ-ಲಕ್ಷ್ಮಣ-ಸೀತೆ- ಯರು ಮಹಾರಾಜನಿಗೆ ಸುತ್ತುವರಿದು ಮಣಿದು, ಕೌಸಲ್ಯೆಗೂ ಸುಮಿತ್ರೆಗೂ ನಮಸ್ಕರಿಸಿದರು. ಸುಮಿತ್ರೆ ಕಾಲಿಗೆರಗಿದ ಲಕ್ಷ್ಮಣನನ್ನು ಕಂಡು ಕಣ್ಣೀರು ತಡೆದು ಕೊಂಡು ನುಡಿದಳು : "ಲಕ್ಷಣ, ನಿನ್ನಂಥ ಮಗನನ್ನು ಪಡೆದದ್ದಕ್ಕೆ ನನಗೆ ಹೆಮ್ಮೆಯೆನಿಸುತ್ತಿದೆ. ಹರೆಯದ ಮಡದಿಯನ್ನೂ ಒಲುಮೆಯ ತಾಯಿಯನ್ನೂ ತೊರೆದು ಅಣ್ಣ- ನೊಡನೆ ಹೊರಟಿರುವೆ. ಕಂದ, ರಾಮನನ್ನು ತಂದೆಯೆಂದೇ ತಿಳಿ. ಸೀತೆಯನ್ನು ತಾಯಿಯಂತೆ ಪೂಜಿಸು. ಆಗ ನೀನು ಕಾಡಿನಲ್ಲೆ ಅಯೋಧ್ಯೆಯನ್ನು ಕಾಣಬಲ್ಲೆ. ಹೋಗಿ ಬಾ ವತ್ಸ, ರಾಮಭದ್ರನ ಆಶೀರ್ವಾದದ ಕಾವಲು ನಿನಗಿರಲಿ." ಹೀಗೆಂದು ರಾಮನೆಡೆಗೆ ತಿರುಗಿ ನುಡಿದಳು : "ಕುಮಾರ, ನಿನ್ನ ತಮ್ಮನನ್ನು ನೋಡಿಕೊಳ್ಳುವ ಭಾರ ನಿನ್ನದು." ರಾಮಚಂದ್ರನು ಸುಮಿತ್ರೆಯ ಮಾತಿಗೆ ಒಪ್ಪಿಗೆಯನ್ನಿತ್ತು ಹೊರಡಲನುವಾದನು. ಸುಮಂತ್ರನು ತೇರನ್ನು ಆಗಲೇ ಸಜ್ಜುಗೊಳಿಸಿ- ಯಾಗಿತ್ತು. ರಾಮಚಂದ್ರ ಲಕ್ಷ್ಮಣನೊಡನೆ ತೇರನೇರಿ ಸೀತೆಯನ್ನೂ ಕೈ ಹಿಡಿದು ಮೇಲೆತ್ತಿಕೊಂಡನು. ದೇವತೆಗಳ ಮನೋರಥವನ್ನು ಪೂರಯಿಸು- ವುದಕ್ಕಾಗಿ ರಾಮಭದ್ರ ರಥವೇರಿ ಕಾಡಿಗೆ ಹೊರಟನು. ಅಯೋಧ್ಯೆಯೆಲ್ಲ ಕಣ್ಣೀರಿಡುತ್ತಿದ್ದರೆ ದೇವತೆಗಳೆಲ್ಲ ಭವಿಷ್ಯತ್ತನ್ನು ನೆನೆದು ಪುಲಕಿತರಾದರು; ನೆಮ್ಮದಿಯ ಉಸಿರುಗರೆದರು ! ಗುಹನ ಗೆಳೆತನ ದೊರಕಿತು ರಾಮನ ರಥದ ಹಿಂದೆ ಊರಿಗೆ ಊರೇ ನಡೆದು ಬಂತು. ದಶರಥನೂ ರಾಜಸ್ತ್ರೀಯರೂ ಆ ಕಡೆಗೆ ಧಾವಿಸಿದರು. ದಶರಥ ಸುಮಂತ್ರನೊಡನೆ 'ರಥವನ್ನು ನಿಲ್ಲಿಸು' ಎಂದರೆ ರಾಮ 'ಮುಂದೆ ಸಾಗಿಸು' ಎನ್ನುತ್ತಿದ್ದ. ಸುಮಂತ್ರ ಇಕ್ಕಟ್ಟಿನಲ್ಲಿ ಸಿಲುಕಿಕೊಂಡ. ವಸಿಷ್ಠಾದಿಗಳು ಮಹಾರಾಜನನ್ನು ಸಮಾಧಾನಗೊಳಿಸಿ ತಡೆದು ನಿಲ್ಲಿಸಿದರು. ಜೀವವಿಲ್ಲದ ದೇಹದಂತೆ ರಾಮನಿಲ್ಲದ ಅಯೋಧ್ಯೆ ಅಮಂಗಳವಾಗಿ ಕಾಣುತ್ತಿತ್ತು. ಮನುಷ್ಯನೇ ಏನು? ಮರ-ಮಟ್ಟುಗಳೂ ಪ್ರಾಣಿ-ಪಕ್ಷಿಗಳೂ ಇಡಿಯ ಪ್ರಕೃತಿಯೇ ಮೂಕ ವೇದನೆಯನ್ನನುಭವಿಸುವಂತಿತ್ತು. ಪುತ್ರವಿರಹದಿಂದ ದುಃಖಿತನಾದ ರಾಜ ನೆಲದ ಮೇಲೆ ಕುಸಿದು ಬಿದ್ದ. ಕೌಸಲ್ಯೆ, ಕೈಕೇಯಿಯರು ಇದನ್ನು ಕಂಡು ಕಾತರತೆಯಿಂದ ರಾಜನ ಎರಡೂ ತೋಳನ್ನು ಹಿಡಿದು ಮೇಲೆತ್ತಿದರು. ಮಹಾರಾಜ ಸಿಟ್ಟಿನಿಂದ ಕೈಕೇಯಿಯೆಡೆಗೆ ಕೆಕ್ಕರಿಸಿ, ಅವಳು ಹಿಡಿದ ತೋಳನ್ನು ಝಾಡಿಸಿ ಹಂಗಿಸಿದ : " ತೊಲಗು ಚಂಡಾಲಿ, ನನ್ನನ್ನು ಮುಟ್ಟಬೇಡ. ನೀನು ಕವಡಿನಿಂದ ಪಡೆದ ರಾಜ್ಯವನ್ನು ಭರತ ಭೋಗಿಸುವುದಾದರೆ, ಅವನಿತ್ತ ಪಿಂಡವನ್ನು ನನ್ನ ಮೃತಾತ್ಮವೂ ಮುಟ್ಟಲಾರದು; " ಹೀಗೆಂದು ರಾಮನು ಹೋದ ದಾರಿಯನ್ನೆ ಸ್ವಲ್ಪ ಹೊತ್ತು ದಿಟ್ಟಿಸಿ-ದೀರ್ಘವಾದ ನಿಟ್ಟುಸಿರೊಂದನ್ನೆಳೆದು ನುಡಿದ: " ಕೌಸಲ್ಯೆಯ ಕನ್ನೆವಾಡಕ್ಕೆ ನನ್ನನ್ನು ಕರೆದೊಯ್ಯಿರಿ, ರಾಮನು ನಡೆದ ನೆಲವನ್ನಾದರೂ ಕಣ್ಣಿಂದ ಕಾಣುವೆನು. " ಕೌಸಲ್ಯೆಯ ಅಂತಃಪುರದಲ್ಲಿ ರಾಜ ಬಹು ವಿಧ- ವಾಗಿ ವಿಲಾಪಿಸಿದನು. ರಾಮನನ್ನು ನೆನೆದುಕೊಂಡು ಹೇಗೋ ಕಾಲವನ್ನು ಕಳೆದನು. ಇತ್ತ ಪುರಸ್ತ್ರೀಯರು-ಮಕ್ಕಳು ರಾಮನ ವನ ಗಮನವನ್ನು ಕಂಡು ದುಃಖ ತಡೆಯಲಾರದೆ ಕಣ್ಣೀರ ಕೋಡಿಯನ್ನೆ ಹರಿಸಿದರು. ಪೌರರೆಲ್ಲ 'ರಾಮಭದ್ರ ನಮ್ಮನ್ನು ತೊರೆದು ಹೋಗಬೇಡ' ಎಂದು ರಥದ ಹಿಂದೆಯೆ ಧಾವಿಸಿದರು. ರಾಮನು ಗಂಭೀರ ವಾಣಿಯಿಂದ ಅವರನ್ನು ಸಮಾಧಾನಗೊಳಿಸಿದ: " ನೀವೆಲ್ಲ ಹಿಂತಿರುಗಬೇಕು. ಇನ್ನು ಭರತ ನಿಮ್ಮ ಯುವರಾಜ, ಅವನ ಆದೇಶದಂತೆ ನೀವು ನಡೆಯ- ಬೇಕು, ಅದರಿಂದ ನನಗೆ ಸಂತೋಷವಾಗುವುದು. " ಆದರೂ ಪೌರರು ಅವನನ್ನೇ ಹಿಂಬಾಲಿಸಿದರು. ಅದನ್ನು ಕಂಡು ಕರುಣಾಳು ರಾಮಚಂದ್ರ ರಥ- ದಿಂದಿಳಿದು ಬರಿಗಾಲಿನಿಂದ ಅವರ ಜತೆಗೇ ನಡೆದು ಬಂದನು. ಆಗ ನಗರದ ವಿಪ್ರರೆಲ್ಲ ರಾಮನಲ್ಲಿ ವಿನಂತಿಸಿಕೊಂಡರು: "ರಾಮಚಂದ್ರ, ಊರಿಗೆ ಮರಳು. ನಮ್ಮನ್ನೆಲ್ಲ ಪಾಲಿಸು. ಹಂಸದಂತೆ ಬಿಳಿಗೂದಲಿನ ಈ ಹಾರುವ- ರನ್ನೊಮ್ಮೆ ನೋಡು,ನೀನು ಊರಿಗೆ ಮರಳ- ಬೇಕೆಂದು ಅವರು ಯಾಚಿಸುತ್ತಿದ್ದಾರೆ. ಶ್ವೇತಚ್ಛತ್ರ- ದಡಿಯಲ್ಲಿ ನಡೆಯಬೇಕಾಗಿದ್ದ ನೀನು ಕೊಡೆ- ಯಿಲ್ಲದೆ ಹೋಗುತ್ತಿರುವೆ. ಬ್ರಾಹ್ಮಣರೆಲ್ಲ ವಾಜಪೇಯಯಾಗದ ಛತ್ರವನ್ನು ನಿನಗೆ ಹಿಡಿಯುತ್ತಿದ್ದಾರೆ." ವಿಪ್ರರ ಮಾತುಗಳನ್ನಾಲಿಸುತ್ತ ರಾಮನು ಸುಮ್ಮನೆ ಮುಂದುವರಿಯುತಿದ್ದ. ಸಂಜೆ ಸಮಾಪಿಸಿತು. ಎಲ್ಲರೂ ತಮಸಾನದಿಯ ದಡಕ್ಕೆ ಬಂದಿದ್ದರು. ರಾಮಚಂದ್ರ ಲಕ್ಷ್ಮಣನೊಡನೆ ಹಾಸ್ಯಕ್ಕೆಂಬಂತೆ ನುಡಿದನು: "ಅರಮನೆಯ ರಾಜಭೋಗವನ್ನು ನೆನೆದು ಕೊರಗಬೇಡ ಲಕ್ಷಣ. ಈ ತಿಳಿ ನೀರು ಈ ಹಣ್ಣು ಗಡ್ಡೆಗಳೇ ನಮಗಿನ್ನು ಆಹಾರ. " ಸುಮಂತ್ರನು ಬಳಲಿದ ಕುದುರೆಗೆ ಮೇವು ತಿನ್ನಿಸಿದನು. ಸಾಯಂ ಸಂಧ್ಯಾವಂದನೆ ಮುಗಿದ ಬಳಿಕ ಎಲ್ಲರೂ ತಮಸಾ ನದಿಯ ತಡಿಯಲ್ಲೆ ಮಲಗಿದರು. ನಡುರಾತ್ರಿಯ ಕಾಲ. ರಾಮಚಂದ್ರ ಎದ್ದು ಕುಳಿತು ಲಕ್ಷ್ಮಣನನ್ನು ಕರೆದು ನುಡಿದನು. " ತಮ್ಮ ಮನೆಯನ್ನು ತೊರೆದು ಈ ಪುರಜನರೆಲ್ಲ ಇಲ್ಲಿ ಬಂದು ಮಲಗಿದ್ದಾರೆ. ಮಡದಿ-ಮಕ್ಕಳನ್ನು ತೊರೆದು ನನ್ನ ಬೆನ್ನು ಹಿಡಿದಿದ್ದಾರೆ ! ಈಗಿನ್ನೂ ಇವರು ಎಚ್ಚೆತ್ತಿಲ್ಲ. ಆ ಮೊದಲೇ ನಾವು ಇಲ್ಲಿಂದ ಹೊರಟುಹೋಗಬೇಕು. " ಒಂದು ಕ್ಷಣ ಸುಮ್ಮನಿದ್ದು ಮತ್ತೆ ನುಡಿದ : "ನಮ್ಮನ್ನು ನಂಬಿ ಬಂದ ಇವರನ್ನು ವಂಚಿಸಿ ಹೋಗುವುದು ಎಂಥ ಕಷ್ಟದ ಕೆಲಸ! ಅಲ್ಲವೆ ಲಕ್ಷಣ ? " ಮತ್ತೆ ಸುಮಂತ್ರನೆಡೆಗೆ ತಿರುಗಿ ನುಡಿದನು: " ಪೌರರು ನಾನು ಊರಿಗೆ ಮರಳಿದೆ- ನೆಂದು ತಿಳಿವಂತೆ ರಥವನ್ನು ಸ್ವಲ್ಪ ಉತ್ತರಕ್ಕೆ ಕೊಂಡೊಯ್ದು ಬಾ. " ಸುಮಂತ್ರನು ಹಾಗೆ ಮಾಡಿದಮೇಲೆ ರಾಮ-ಲಕ್ಷ್ಮಣ-ಸೀತೆಯರು ರಥವನ್ನೇರಿ ಬೆಳಗಾಗುವುದ- ರೊಳಗೆ ಬಹುದೂರ ಸಾಗಿ ಹೋಗಿದ್ದರು. ಬೆಳಿಗ್ಗೆ ತಮಸಾನದಿಯ ತಡಿಯಲ್ಲಿ ರಾಮನಿಲ್ಲದ್ದನ್ನು ಕಂಡ ಪೌರರು, ಅವನು ಊರಿಗೆ ಮರಳಿದನೆಂದೇ ನಂಬಿ ಸಂತಸದಿಂದ ನಗರದೆಡೆಗೆ ನಡೆದರು. ಇತ್ತ ರಾಮಚಂದ್ರ ದಾರಿಯಲ್ಲಿ ಸಿಕ್ಕ ವೇದಶ್ರುತಿ ಎಂಬ ನದಿಯನ್ನೂ, ಗೋಮತೀ ನದಿಯನ್ನೂ ದಾಟಿ ಮುಂದೆ ಸಾಗಿದ. ಇಲ್ಲಿಯೂ ಕೋಸಲದ ಜಾನಪದರು ಅವರನ್ನು ಹಿಂಬಾಲಿಸತೊಡಗಿದರು. ಆಗ ರಾಮ ಅವರನ್ನು ಹಿಂದಿರುಗುವಂತೆ ಕೇಳಿ- ಕೊಂಡನು. ಹೀಗೆಯೇ ಮುಂದೆ ಸಾಗುತ್ತಿದ್ದಂತೆ ಎದುರಿನಲ್ಲಿ ಗಂಗಾನದಿ ಕಾಣಿಸಿಕೊಂಡಿತು. ಸುಮಂತ್ರನೂ ಸೀತಾ-ರಾಮ-ಲಕ್ಷ್ಮಣರೂ ನದಿಯ ತಡೆಯಲ್ಲಿ ಇದ್ದ ಇಂಗುದೀ ವೃಕ್ಷವೊಂದರ ಬುಡ- ದಲ್ಲಿ ವಿಶ್ರಮಿಸಿಕೊಂಡರು. ಅದು ಬೇಡರ ಒಡೆಯನಾದ ಗುಹನೆಂಬ ಸತ್ಪುರುಷನ ಸೀಮೆಯಾಗಿತ್ತು. ಅವನು ತನ್ನ ಪ್ರಾಂತದಲ್ಲಿ ಬಂದ ಪ್ರಭು ರಾಮಚಂದ್ರನನ್ನು ಕಂಡು ಸಂತಸಗೊಂಡು ಬಂದು ಕಾಲಿಗೆರಗಿದನು. ವಿನಯದಿಂದ ಬೇಡಿಕೊಂಡನು: "ಈ ಸೀಮೆ ನಿನ್ನದು. ನಾವೆಲ್ಲ ನಿನ್ನ ದಾಸರು. ನೀನಿಲ್ಲೇ ಇರಬೇಕೆಂದು ನನ್ನ ಬಯಕೆ." ಗುಹನ ಆತಿಥ್ಯಕ್ಕೆ ರಾಮನ ಒಪ್ಪಿಗೆ ದೊರೆಯಿತು. ಸಂಧ್ಯಾಕಾಲ ಕಳೆಯಿತು. ರಾಮ ಸೀತೆಯರು ಬರಿ ಹುಲ್ಲಮೇಲೆ ಪವಡಿಸಿದರು. ಲಕ್ಷ್ಮಣ ಮಾತ್ರ ಮಲಗದೆ ಸುಮ್ಮನೆ ನಿಂತಿದ್ದ. ಕೈಯಲ್ಲಿ ಬಿಲ್ಲು ಬಾಣಗಳಿದ್ದವು. ಇದನ್ನು ಕಂಡು ಗುಹನು ರಾಮ ಸೀತೆಯರಿಗೆ ತಾನು ಕಾವಲಿರುವದಾಗಿ ನುಡಿದು, ಲಕ್ಷ್ಮಣನನ್ನು ವಿಶ್ರಮಿಸುವಂತೆ ಕೇಳಿಕೊಂಡನು. ಲಕ್ಷ್ಮಣನು ಗದ್ಗದಿತನಾಗಿ ಉತ್ತರಿಸಿದ: " ರಾಜಪ್ರಾಸಾದದಲ್ಲಿ ಹಂಸತೂಲಿಕೆಯಲ್ಲಿ ಮಲಗುತ್ತಿದ್ದ ನನ್ನ ಅಣ್ಣ-ನನ್ನ ಅತ್ತಿಗೆ, ಈ ಹುಲ್ಲುಗರಿಕೆಯ ಮೇಲೆ ಪವಡಿಸಿದ್ದನ್ನು ಕಂಡು ನನ್ನ ಕರುಳು ಕಿವುಚಿದಂತಾಗುತ್ತಿದೆ. ಗುಹ, ನಿನ್ನಲ್ಲಿ ರಹಸ್ಯ ಮಾಡಲಾರೆ. ಅಲ್ಲಿ ಅಯೋಧ್ಯೆಯಲ್ಲಿ ಅಣ್ಣನನ್ನು ನೆನೆದು, ತಂದೆ-ತಾಯಂದಿರು ಎಷ್ಟು ಕರುಬುತ್ತಿರುವರೋ ! ಅಯ್ಯೋ ! ಅದನ್ನು ನೆನೆದು ಕೊಂಡರೆ ನಿದ್ದೆ ಬರುವುದು ಸಾಧ್ಯವೆ ಗುಹ ?" ರಾಮಧ್ಯಾನತತ್ಪರರಾಗಿ ರಾಮನ ಕುರಿತೇ ಮಾತಾಡುತ್ತಿದ್ದ ಗುಹನಿಗೂ ಲಕ್ಷ್ಮಣನಿಗೂ ಮಾತಿನ ಭರದಲ್ಲಿ ಬೆಳಗಾದುದೇ ಗೊತ್ತಾಗಲಿಲ್ಲ. ಚಿತ್ರಕೂಟದಲ್ಲಿ ಪರ್ಣಕುಟೀರ ಪ್ರಾತಃಕಾಲ ರಾಮನ ಆಜ್ಞೆಯಂತೆ ಗುಹನು ನದಿ- ಯನ್ನು ದಾಟಲು ಸುದೃಢವಾದ ದೋಣಿಯೊಂದ- ನ್ನು ತರಿಸಿದನು. ಸುಮಂತ್ರನನ್ನು ಬೀಳ್ಕೊಡುತ್ತ ರಾಮನು ನುಡಿದನು: "ಸುಮಂತ್ರ, ಇನ್ನು ಅಯೋಧ್ಯೆಗೆ ಹಿಂದಿರುಗು, ದುಃಖಿತನಾದ ನನ್ನ ತಂದೆಯನ್ನು ಸಂತೈಸು. ಕೈಕೇಯಿಯನ್ನು ಯಾರೂ ಅವಮಾನಗೊಳಿಸಬೇಡಿ. ಭರತನು ಯುವರಾಜನಾಗಲಿ. ಮಹಾರಾಜನ ಆಜ್ಞೆಯಂತೆ ನೀವೆಲ್ಲ ಇದ್ದರೆ ಅದೇ ನನಗೆ ಸಂತೋಷ. ನನ್ನ ತಾಯಿ ತಂದೆ, ವಸಿಷ್ಠಾದಿಗಳು ಯಾರೂ ನನಗಾಗಿ ದುಃಖ ಪಡಬಾರದು ಎಂದು ಹೇಳು." ಲಕ್ಷ್ಮಣನು ಮಧ್ಯದಲ್ಲಿ ಸಿಟ್ಟನ್ನು ಅದುಮಿ- ಕೊಂಡು ಹೇಳಿದನು: "ಮಹಾರಾಜನು ಕೈಕೇಯಿ- ಯಿಂದ ಕೃತಕೃತ್ಯನಾಗಿದ್ದಾನೆ. ಕಾಡಿಗೆ ಹೋದ ಮಗನ ನೆನಪೂ ಅವನ ಬಳಿ ಸುಳಿಯಲಾರದು." ರಾಮನು ತನ್ನ ಮಾತನ್ನು ಮುಂದುವರಿಸಿದನು: "ಸೂತ, ಲಕ್ಷ್ಮಣನು ಸಿಟ್ಟಿನಿಂದ ಕುರುಡಾಗಿ ಮಾತನಾಡುತ್ತಿದ್ದಾನೆ. ಇದನ್ನು ತಂದೆಗೆ ಅರುಹ- ಬೇಡ, ಮೊದಲೇ ದುಃಖಿತನಾದ ಅವನಿಗೆ ಮಗನಿಂದ ಈ ಉಪಚಾರವೆಂದರೆ ಜೀವವೇ ಭಾರವಾದೀತು. ಇನ್ನು ಹೊರಡು ಸುಮಂತ್ರ." ಸುಮಂತ್ರನು ಕಣ್ಣೀರು ಸುರಿಸುತ್ತ ಸುಮ್ಮನೆ ನಿಂತಿದ್ದು ಕೊನೆಗೆ ಹೇಳಿದ: "ವೀರನಿಲ್ಲದ ಸೇನೆ- ಯಂತೆ, ಪತಿಹೀನಳಾದ ಯುವತಿಯಂತೆ, ನೀನಿಲ್ಲದ ಈ ತೇರನ್ನು ಹೇಗೆ ನಡೆಸಲಿ ರಾಮಚಂದ್ರ ? ಊರಿಗೆ ಮರಳಿದವನು ನಿನ್ನ ತಂದೆ-ತಾಯಂದಿರಿಗೆ, ಪೌರರಿಗೆ ಏನೆಂದು ಹೇಳಲಿ ? ಯಾವ ಮೋರೆಯನ್ನು ತೋರಲಿ ? ನನ್ನನ್ನು ಹೋಗೆನಬೇಡ, ನಿನ್ನ ಸೇವೆ ಮಾಡುತ್ತ ನಾನೂ ಇಲ್ಲೆಇದ್ದು ಬಿಡುತ್ತೇನೆ." "ಹಾಗಲ್ಲ ಸುಮಂತ್ರ, ನೀನು ಮರಳಲೇಬೇಕು. ನೀನು ಮರಳಿದರೆ ತಾಯಿ ಕೈಕೇಯಿಗೆ ನಾನು ಕಾಡಿಗೆ ಹೋದೆ ಎಂಬ ವಿಷಯದಲ್ಲಿ ನಂಬಿಕೆ ಮೂಡು- ವುದು. ಅದೇ ನೀನು ನನಗೆ ಮಾಡುವ ಸೇವೆ. ಹೋಗಿ ಬಾ ಸುಮಂತ್ರ." ಮುಂದಿನ ಪ್ರಯಾಣಕ್ಕಾಗಿ ಜಟಾಧಾರಿಗಳಾದ ರಾಮ-ಲಕ್ಷ್ಮಣರು ನರ-ನಾರಾಯಣರಂತೆ ಸೊಗಯಿಸಿದರು. ಅನಂತರ ಗುಹನನ್ನೂ ಸೂತ- ನನ್ನೂ ಬೀಳ್ಕೊಟ್ಟು ಮೂವರೂ ಸುಂದರವಾದ ದೋಣಿಯನ್ನೇರಿದರು. ಕ್ಷಣಾರ್ಧದಲ್ಲಿ ದೋಣಿ ಆಚೆಯ ತಡಿಯನ್ನು ಸೇರಿತು. ದೋಣಿಯಿಂದಿಳಿದು ಲಕ್ಷ್ಮಣನೊಡನೆ ರಾಮಚಂದ್ರ ನುಡಿದ: "ಲಕ್ಷಣ, ನೀನು ಮುಂದಿನಿಂದ ಹೋಗು. ಸೀತೆ ಮಧ್ಯದಲ್ಲಿ ಬರಲಿ. ನಿಮ್ಮಿಬ್ಬರ ಬೆಂಗಾವಲಾಗಿ ನಾನು ಕೊನೆಯಲ್ಲಿ ಬರುತ್ತೇನೆ." ಹೀಗೆ ಸಾಗುತ್ತ ಒಂದು ದೊಡ್ಡ ಕಾಡನ್ನು ಸೇರಿ- ದರು. ಅಲ್ಲೊಂದು ಆಲದ ಮರವಿತ್ತು. ಅದರ ಬುಡ- ದಲ್ಲಿ ತಂಗಿದರು. ಕಮಲದ ನಾಲವನ್ನು ಅಂದು ಆಹಾರವಾಗಿ ಸೇವಿಸಿದರು. ಎಲ್ಲಿಲ್ಲದ ಮಾತುಕತೆ- ಗಳಿಂದ ಆ ರಾತ್ರಿ ಸುಖಮಯವಾಗಿ ಸಾಗಿತು. ಬೆಳಗಾದರೆ ಮತ್ತೆ ಪುನಃ ಪ್ರಯಾಣ. ಹೀಗೆ ಬಹು ಪ್ರದೇಶಗಳನ್ನು ದಾಟಿ, ಸಂಜೆಯ ಹೊತ್ತಿಗೆ ಗಂಗೆ-ಯಮುನೆಯರ ಸಂಗಮ ಸ್ಥಳಕ್ಕೆ ಬಂದು ತಲುಪಿದರು. ಬೃಹಸ್ಪತಿಯ ಮಕ್ಕಳಾದ ಭರದ್ವಾಜರ ಆಶ್ರಮ ಅಲ್ಲೆ ಬಳಿಯಲ್ಲಿತ್ತು. ಅವರು ರಾಮಚಂದ್ರ ಬಂದು- ದನ್ನು ತಿಳಿದು ಆಶ್ರಮಕ್ಕೆ ಕರೆದು ಸತ್ಕರಿಸಿದರು. ಹಣ್ಣು-ಗಡ್ಡೆಗಳನ್ನು ಉಣಿಸಿದರು. ಭಕ್ತಿಯಿಂದ ಆಸನದಲ್ಲಿ ಕುಳ್ಳಿರಿಸಿ ಕೈಮುಗಿದು ವಿಜ್ಞಾಪಿಸಿ ಕೊಂಡರು: "ಪರಮಪುರುಷ, ನಿನ್ನನ್ನು ಕಾಣುವ ಭಾಗ್ಯಇಷ್ಟು ವಿಲಂಬವಾಗಿಯಾದರೂ ನನಗೆ ದೊರಕಿತಲ್ಲ ! ಅದೇ ಮಹಾಪುಣ್ಯ, ರಾಮಭದ್ರ, ಈ ಪ್ರದೇಶ ತುಂಬ ಸೊಗಸಾಗಿದೆ; ಹಿತವಾಗಿದೆ. ನೀನು ಇಲ್ಲೇ ಇದ್ದು ಬಿಟ್ಟರೆ ನಮಗೆಲ್ಲ ಆನಂದವಾಗುವುದು." "ಮಹರ್ಷಿಯೆ, ನಾನಿಲ್ಲಿದ್ದರೆ ಜನರೆಲ್ಲ ಒಂದು ಮುತ್ತಿ ಬಿಡುತ್ತಾರೆ. ಇದಕ್ಕಿಂತಲೂ ಏಕಾಂತವಾದ ಒಂದು ನಿರ್ಜನಾರಣ್ಯವನ್ನು ತಿಳಿಸಿದರೆಚೆನ್ನಾಗಿತ್ತು." ಆಗ ಭರದ್ವಾಜರು ಕಪಾಲಶಿರ ಮೊದಲಾದ ತಪಸ್ವಿಗಳು ಸಿದ್ದಿ ಪಡೆದ ತಾಣವಾದ ಚಿತ್ರಕೂಟ- ವನ್ನು ಸೂಚಿಸಿದರು. ಮರುದಿನ ಬೆಳಿಗ್ಗೆ ಮುನಿಗಳಿಗೆ ಅಭಿವಂದಿಸಿ ಸೀತಾಲಕ್ಷ್ಮಣರೊಡನೆ ರಾಮಚಂದ್ರ ಪಶ್ಚಿಮಾಭಿ ಮುಖವಾಗಿ ಮುಂದೆ ಹೊರಟನು. ದಾರಿಯಲ್ಲಿ ಯಮುನಾನದಿ ಅಡ್ಡವಾಯಿತು. ಆಗ ಲಕ್ಷ್ಮಣನು ಸುತ್ತುಮುತ್ತಲಿನ ಗಿಡಬಳ್ಳಿಗಳನ್ನು ಕಡಿದು, ಒಂದು ಬೀಳುದೋಣಿಯನ್ನು ರಚಿಸಿದನು. ಸಂಕೋಚನಾಚಿಕೆಗಳಿಂದ ಕುಗ್ಗಿದ ಸೀತೆಯನ್ನು ಆ ಬೈತ್ರದಲ್ಲಿ ಕುಳ್ಳಿರಿಸಿ ಆಭರಣ ಆಯುಧಗಳನ್ನೂ ಅದರಲ್ಲಿರಿಸಿ, ಸೋದರರು ಯಮುನೆಯನ್ನು ದಾಟಿದರು. ಯಮುನೆಯ ತಡಿಯ ಕಾಡಿನಲ್ಲಿ ತಾವರೆಗಳಿಂದ ತುಂಬಿದ ಕೊಳವೊಂದರ ಬಳಿ ವಿಶ್ರಮಿಸಿ 'ಶ್ಯಾಮ' ಎಂಬ ಆಲದ ಮರವೊಂದರ ಬಳಿಗೆ ಬಂದರು. ಮುಂದೆ ಲಕ್ಷ್ಮಣ-ಹಿಂದೆ ರಾಮ-ನಡುವೆ ಸೀತೆ ಹೀಗೆ ಇವರ ಪ್ರಯಾಣ ಸಾಗಿತು. ಒಂದೆರಡು ಕ್ರೋಶ (ಸುಮಾರು ೨ ಮೈಲು) ದೂರ ಸಾಗಿ ಕೆಲವು ಹಣ್ಣು-ಗಡ್ಡೆಗಳನ್ನು ಆಹಾರಕ್ಕಾಗಿ ಕೊಂಡು, ಅವನ್ನು ಹಿಡಿದುಕೊಂಡು ಯಮುನೆಯ ತಡಿಯಲ್ಲಿ ಒಂದೆಡೆ ರಾತ್ರಿಯನ್ನು ಕಳೆದರು. ಬೆಳಿಗ್ಗೆ ಮೊದಲೆ ಎಚ್ಚತ್ತ ರಾಮಚಂದ್ರ, ಲಕ್ಷ್ಮಣನನ್ನು ಕುಲುಕಿ ಎಬ್ಬಿಸಿದನು. ಮೂವರೂ ಬೇಗನೆ ಎದ್ದು ಹೊರಟವರು ಸ್ವಲ್ಪದರಲ್ಲೆ ಚಿತ್ರಕೂಟವನ್ನು ಸೇರಿದರು. ಅಲ್ಲಿ ಆಶ್ರಮಕ್ಕೆ ಅನು- ಕೂಲವಾದ ಸ್ಥಳದ ಶೋಧ ನಡೆಯಿತು. ಸುತ್ತಲೂ ಹೂ-ಹಣ್ಣುಗಳಿಂದ ತೊನೆವ ಗಿಡಬಳ್ಳಿಗಳು, ಸನಿಯದಲ್ಲೆ ಕಲಕಲ ನಾದದಿಂದ ಹರಿವ ಗಂಗೆ, ಸುತ್ತಲೂ ತಂಗಾಳಿಯಿಂದ ತಂಪಾದ ತಾಣ. ಪ್ರಕೃತಿ ಸುಂದರವಾದ ಈ ಕಾಡಿನಲ್ಲಿ ಇಲ್ಲದ್ದಾದರೂ ಏನು ? ಅಲ್ಲಿ ದೊಡ್ಡದಾದ ಎರಡು ಪರ್ಣಶಾಲೆಗಳನ್ನು ಕಟ್ಟತೊಡಗಿದರು. ಆನೆಗಳು ಬೀಳಿಸಿದ ಮರದ ಗೆಲ್ಲುಗಳಿಂದ ಕಂಬವೂರಿ, ತರಗೆಲೆಗಳಿಂದ ಹುಲ್ಲುಗರಿಗಳಿಂದ ಸುತ್ತಲೂ ಮುಚ್ಚಿ, ಮೇಲೆ ಹೂ ಬಳ್ಳಿಯ ಮಾಡನ್ನು ರಚಿಸಿದರು. ಪರ್ಣಶಾಲೆ- ಯೆಂದರೆ ರಾಜೋದ್ಯಾನದ ಬಳ್ಳಿ ಮಾಡದಂತೆ ಕಣ್ಸೆಳೆಯುತ್ತಿತ್ತು. ಸೀತೆ ಗೋಡೆಗೆ ನೆಲಕ್ಕೆ ಮಣ್ಣು ಬಳಿದು ಚೊಕ್ಕಗೊಳಿಸಿದಳು. ಆಶ್ರಮದ ಕೆಲಸ ಮುಗಿದಂತಾಯಿತು. ಇನ್ನು ಆಹಾರದ ಚಿಂತೆ. ಅದಕ್ಕಾಗಿ ಲಕ್ಷ್ಮಣನು ಕೆಲವು ಹಣ್ಣು-ಗಡ್ಡೆಗಳನ್ನು ಆಯ್ದು ತಂದನು. ಮೂವರೂ ಸೇವಿಸಿದರು. ಎಲ್ಲರೂ ಸ್ನಾನಮಾಡಿದರು. ನಿತ್ಯಕರ್ಮವನ್ನು ಪೂರೈಸಿದ ರಾಮಚಂದ್ರ ಹವಿರ್ಭಾಗವನ್ನು ದೇವತೆಗಳಿಗರ್ಪಿಸಿದನು. ಅನಂತರ ಸೀತೆ ಗಂಡನಿಗೂ ಮೈದುನನಿಗೂ ಬಡಿಸಿ ತಾನೂ ಉಂಡಳು. ಈ ಹಿತಜೀವನದಿಂದ ರಾಮನಿಗೂ ಸೀತೆಗೂ ನೆಮ್ಮದಿಯಾಗಿತ್ತು. ಕಾಡಿನ ತಂಗಾಳಿಯೂ ಲಕ್ಷ್ಮಣನೊಡನೆ ಇವರ ಸೇವೆಯಲ್ಲಿ ಹುಮ್ಮಸ ತಾಳಿ ದಂತಿತ್ತು ! ಮುನಿಶಾಪ ದಿಟವಾಯಿತು ಇತ್ತ ಅಯೋಧ್ಯೆಯಲ್ಲಿ ಎಲ್ಲರಿಗೂ ರಾಮನದೇ ಯೋಚನೆ. ಎಲ್ಲರೂ ರಾಮನ ಕುರಿತೇ ಮಾತನಾಡು- ವವರು, ಅವನ ಗುಣವನ್ನೇ ಗಾನಮಾಡುವವರು. ಮಕ್ಕಳು-ಮುದುಕರು-ಗಂಡಸರು-ಹೆಂಗಸರು ಎಲ್ಲರ ಬಾಯಲ್ಲೂಒಂದೇಮಾತು. ಮನೆ ಮನೆಯಲ್ಲೂ ಒಂದೇ ಪಲ್ಲವಿ ಕೇಳಿಬರುತ್ತಿತ್ತು: " ಭಾಗ್ಯದೇವಿಯ ಕೃಪಾಕಟಾಕ್ಷ ಅಯೋಧ್ಯೆ- ಯಿಂದ ಕಾಡಿನೆಡೆಗೆ ಹರಿದಿದೆ, ರಾಮಚಂದ್ರನ ಪಾದ ಸ್ಪರ್ಶದ ಸುಖವನ್ನನುಭವಿಸುವ ಕಾಡುದಾರಿಯ ಹುಲ್ಲು-ಕಲ್ಲುಗಳು ಎಂಥ ಪುಣ್ಯಶಾಲಿಗಳೊ ! ರಾಮನ ಮಜ್ಜನದಿಂದ ಕಾಡಿನ ನದಿಗಳೆಲ್ಲ ಇಂದು ಪಾವನವಾದವು. ಕಾಡಿನ ಪಶುಪಕ್ಷಿಗಳಿಗೊಂದು ಭಾಗ್ಯ. ಮುನಿಗಳ ಕಣ್ಣಿಗೊಂದು ಹಬ್ಬ." ದಶರಥ ಮಹಾರಾಜನ ರೋದನಕ್ಕಂತೂ ಎಣೆಯೇ ಇರಲಿಲ್ಲ. ಅವನಿಗೆ ಒಂದೊಂದು ದಿನವೂ ಒಂದು ಯುಗದಂತೆ ಕಾಣುತ್ತಿತ್ತು. ಇತ್ತ ಸುಮಂತ್ರನು ರಥವನ್ನೇರಿ ಅಯೋಧ್ಯೆಗೆ ಬಂದನು. 'ನಮ್ಮ ರಾಮನನ್ನು ಎಲ್ಲಿ ತೊರೆದು ಬಂದೆ ?' ಎಂದು ಜನರೆಲ್ಲ ಸುತ್ತುವರಿದರು. ಕಣ್ಣೀರ- ನ್ನೊರಸಿಕೊಳ್ಳುತ್ತ ಸುಮಂತ್ರ ರಾಜಮಂದಿರವನ್ನು ಪ್ರವೇಶಿಸಿದ. ರಾಮನ ವಾರ್ತೆಯನ್ನು ಕೇಳಲು ಕಾತರನಾದ ರಾಜನ ಬಳಿ ಸುಮಂತ ನಿವೇದಿಸಿಕೊಂಡನು: " ನರೇಂದ್ರ, ಪ್ರತಿಜ್ಞೆಯ ಅವಧಿ ಮುಗಿದ ಮೇಲೆ ರಾಮಚಂದ್ರ ನಿನ್ನನ್ನು ಸಂತೋಷಗೊಳಿಸಲಿರು- ವನು. ಭರತನು ಯುವರಾಜನಾಗಲಿ ಎಂದು ಅವನು ಕೇಳಿಕೊಂಡಿದ್ದಾನೆ. ಸೀತೆಯೂ ರಾಮ-ಲಕ್ಷ್ಮಣರೂ ನಿನಗೆ ವಂದನೆಯನ್ನುತಿಳಿಸಿದ್ದಾರೆ. ಗುಣನಿಧಿಯಾದ ರಾಮಚಂದ್ರನು ಕಾಡಿನಲ್ಲೂ ಸುಖವಾಗಿದ್ದಾನೆ. ರಾಮನ ಸುಖವೇ ತನ್ನ ಸುಖವೆಂದು ಸೀತೆಯೂ ಹುಮ್ಮಸದಿಂದಿದ್ದಾಳೆ. ಲಕ್ಷ್ಮಣನಿಗೋ ರಾಮಸೇವೆ- ಗಿಂತ ಮಿಗಿಲಾದ ಆನಂದವೆಂಥದು ? ಅದರಿಂದ ಅವರ ಕುರಿತು ಚಿಂತಿಸುತ್ತ ನೀನು ಕೊರಗಬೇಡ ಮಹಾರಾಜ." ಹೀಗೆಂದು ಸುಮಂತ್ರನು ಹೊರಟುಹೋದನು. ಕೌಸಲ್ಯೆಗೆ ಇದನ್ನು ಕೇಳಿ ತಡೆಯಲಾಗಲಿಲ್ಲ. ಅವಳು ರಾಜನನ್ನು ಕೆಣಕುವಂಥ ಮಾತನ್ನಾಡಿದಳು : " ಇದ್ದ ಒಬ್ಬ ಮಗನನ್ನೂ ಕಾಡಿಗಟ್ಟಿದೆ, ನನ್ನದೇನು ಬಾಳು ಮಣ್ಣು, ನೀನಾದರೂ ಕೈಕೇಯಿಯೊಡನೆ ಸುಖವಾಗಿರು ಮಹಾರಾಜ." " ಹಾಗೆನ್ನಬೇಡ ದೇವಿ, ನನ್ನನ್ನು ಮತ್ತಷ್ಟು ಗಾಸಿ- ಗೊಳಿಸಬೇಡ. ನನ್ನ ಕೌಸಲ್ಯೆ, ನಿನ್ನ ತೋಳುಗಳಿಂದ ನನ್ನನ್ನೊಮ್ಮೆ ನಲುಮೆಯಿಂದ ನೇವರಿಸು." ಕೌಸಲ್ಯೆ ತನ್ನ ಮಾತಿಗೆ ತಾನೇ ಪಶ್ಚಾತ್ತಾಪಪಟ್ಟು ಕೊಂಡಳು. 'ಶೋಕದಿಂದ ವಿವೇಕಹೀನಳಾಗಿ ಏನನ್ನೊ ಗಳುಹಿದೆ, ಕ್ಷಮಿಸು' ಎಂದು ಕಾಲಿಗೆ ಅಡ್ಡ ಬಿದ್ದಳು. ಹೀಗೆ ಅಳುತ್ತಲೇ ಐದು ದಿನಗಳು ಕಳೆದು ಹೋದವು. ಕೊನೆಗೊಮ್ಮೆ ಸುಮಿತ್ರ ಬಂದು ದಶರಥ ಕೌಸಲ್ಯೆಯರನ್ನು ಸಂತೈಸಿದಳು. ಆಕೆಯ ಸಮಾಧಾ- ನದ ನುಡಿಗಳಿಂದ ಅವರ ದುಃಖ ಸ್ವಲ್ಪ ಸಹ್ಯ- ವಾದಂತಾಯಿತು. ಆರನೆಯ ದಿನ, ರಾತ್ರಿಯಾಗಿತ್ತು. ದಶರಥನ ಮನಸ್ಸಿನಲ್ಲಿ ಗತಕಾಲದ ಘಟನೆಯೊಂದು ಮಿಂಚಿ ಹೋಯಿತು. ಅವನು ಕೌಸಲ್ಯಗೆ ಆ ಹಿಂದಿನ ಇತಿಹಾಸವನ್ನರುಹಿದನು : "ಕೌಸಲ್ಯೆ, ನಾನು ಹಿಂದೊಮ್ಮೆ ಬೇಟೆಯಾಡುತ್ತ-ಶಬ್ದ ವೇಧದ ಬಲದಿಂದ ಕಾಡಾನೆಯೆಂದು ಭ್ರಮಿಸಿ, ಕೊಡವನ್ನು ನೀರಿನಲ್ಲಿ ಮುಳುಗಿಸುತ್ತಿದ್ದ ಮುನಿ ಪುತ್ರನೊಬ್ಬನನ್ನು ಕೊಂದಿದ್ದೆ. ಹೋಗಿ ಕಂಡಾಗ ಮುನಿಕುಮಾರ ಬಾಣದ ಪೆಟ್ಟಿನಿಂದ ನರಳುತ್ತಿದ್ದ. ಅವನು ನನ್ನನ್ನು ಕಂಡು 'ಗೊತ್ತಿಲ್ಲದೆ ಹೊಡೆದುದ ರಿಂದ ನಿನಗೆ ಬ್ರಹ್ಮಹತ್ಯೆ ತಟ್ಟದಿರಲಿ' ಎಂದು ಹರಸಿ ಕಣ್ಮುಚ್ಚಿದನು. ಕುರುಡರೂ ವೃದ್ಧರೂ ಆದ ಅವನ ತಂದೆ-ತಾಯಂದಿರ ಬಳಿಸಾರಿ, ದುಃಖದಿಂದಲೆ ಈ ಸುದ್ದಿಯನ್ನು ನಿವೇದಿಸಿಕೊಂಡೆ. "ನಿನಗೂ ಹೀಗೆಯೇ ಪುತ್ರವಿರಹದಿಂದ ಸಾವು ಬರಲಿ ಎಂದು ಶಪಿಸಿ, ಆ ತಪಸಿ ಮಡದಿಯೊಡನೆ ಸಾವನ್ನಪ್ಪಿದನು. ನಾನು ಮಾಡಿದ ಪಾಪದ ಫಲ ಈಗ ನನ್ನ ಬೆನ್ನು ಹತ್ತಿದೆ. ನಾನು ಪಾತಕಿ, ಭಾಗ್ಯಶಾಲಿಗಳು ಮಾತ್ರ ನನ್ನ ಕಂದನನ್ನು ಕಾಣಬಲ್ಲರು. ಜನ್ಮಾಂತರದಲ್ಲಾದರೂ ಆ ಭಾಗ್ಯ ನನಗೆ ದೊರಕಲಿ, " ಮಾತು ಮಂದವಾಯಿತು. ರಾಜನು ಸಮಾಧಿ- ಸ್ಥನಂತೆ ಕುಳಿತುಬಿಟ್ಟನು. ರಾಜನಿಗೆ ನಿದ್ದೆ ಬಂದಿರ ಬೇಕೆಂದು ತಿಳಿದು ಕೌಸಲ್ಯಯೂ ಬಳಿಯಲ್ಲೆ ಮಲಗಿ ನಿದ್ರಿಸಿದಳು. ಬೆಳಗಾಯಿತು. ಬಂದಿಗಳು 'ಮಹಾರಾಜನೆ ಎಚ್ಚರು' ಎಂದು ಹಾಡಿದರು. ರಾಜಪತ್ನಿಯರು ಬಳಿಸಾರಿದರು. ರಾಜನ ಅಂಗಾಲು ಹಿಮದಂತಿತ್ತು ! ಓ ! ದಶರಥ ಮಹಾರಾಜನು ಇನ್ನಿಲ್ಲ ! ಅಂತಃಪುರದ ಹೆಂಗಸರೆಲ್ಲ ಹೆದರಿ ಚೀರಿದರು. ಸುಮಿತ್ರೆ, ಕೌಸಲ್ಯೆಯರು ಎದೆ ಬಡಿದುಕೊಂಡು ಬೊಬ್ಬಿಟ್ಟರು. ಕಾಲಜ್ಞರಾದ ವಸಿಷ್ಠರೂ ಅಲ್ಲಿಗೆ ಚಿತ್ತೈಸಿದರು. ಅವರು ರಾಜಪತ್ನಿಯರನ್ನೆಲ್ಲ ಅಲ್ಲಿಂದ ಕಳುಹಿಸಿ ರಾಜನ ಕಳೇಬರವನ್ನು ಎಣ್ಣೆಯ ದೋಣಿಯೊಂದ ರಲ್ಲಿ ಇಡಿಸಿದರು. ರಾಮನನ್ನು ನೆನೆದು ಕೌಸಲ್ಯೆ ಹೇಗೋ ದುಃಖ- ವನ್ನು ತಡೆದುಕೊಂಡಳು. ಕನಸು ಕಣಿ ಹೇಳಿತು ಮಹಾರಾಜ ಸ್ವರ್ಗವನ್ನೈದಿದ. ರಾಮಚಂದ್ರ ಕಾಡಿಗೆ ಹೊರಟುಹೋದ. ಮುಂದೆ ಮಾಡಬೇಕಾದು ದೇನು ? ಅರಾಜಕವಾದ ರಾಷ್ಟ್ರ ಸುಖವನ್ನುಣ್ಣಲಾರದು. ಅದರಿಂದ ಭರತನನ್ನು ಕೇಕಯದಿಂದ ಬರಿಸುವು- ದೊಂದೇ ದಾರಿ. ಒಡನೆ ವಸಿಷ್ಠರು ನಾಲ್ವರು ಅಮಾತ್ಯರನ್ನು ಕರೆದು, ಭರತನನ್ನು ಕರೆದು ತರುವಂತೆ ಆಜ್ಞಾಪಿಸಿ- ದರು. ಇಲ್ಲಿಯ ದುರಂತವನ್ನು ಅವನಿಗೆ ತಿಳಿಸ- ದಂತೆಯೂ ಸೂಚನೆಯಿತ್ತರು. ಆ ಅಮಾತ್ಯರು ಅಯೋಧ್ಯೆಯಿಂದ ಹಸ್ತಿನಾಪುರಕ್ಕೆ ಬಂದು ಅಲ್ಲಿಂದ ಗಂಗೆಯನ್ನು ದಾಟಿ, ಪಶ್ಚಿಮಾಭಿಮುಖವಾಗಿ ಸಾಗಿದರು. ಇಕ್ಷುಮತಿ ಮೊದಲಾದ ನದಿಗಳನ್ನೂ ಪಾಂಚಾಲ-ಬಾಹ್ಲೀಕ ಮೊದಲಾದ ದೇಶಗಳನ್ನೂ ದಾಟಿ ಏಳನೆಯ ದಿನ ಕೇಕೆಯವನ್ನು ತಲುಪಿದರು. ಇವರು ಹೋದ ದಿನವೆ ರಾತ್ರಿ ಮಲಗಿದ್ದ ಭರತನಿಗೆ ಎಲ್ಲಿಲ್ಲದ ಕನಸುಗಳು. ಅದೂ ಎಂಥ ಕೆಟ್ಟ ಕನಸು ! ಕಡಲು ಬತ್ತಿ ಹೋದಂತೆ- ಚಂದ್ರ ಭೂಮಿಗೆ ಬಿದ್ದಂತೆ ತನ್ನ ತಂದೆ ಕೆಂಪು ಹೂಮಾಲೆ ಕಪ್ಪು ಬಟ್ಟೆ ಧರಿಸಿ, ಕತ್ತೆಯ ಮೇಲೆ ಕಬ್ಬಿಣದ ಮಣೆಯಲ್ಲಿ ತಲೆಗೆದರಿ ಕುಳಿತುಕೊಂಡು ಎಣ್ಣೆ ಕುಡಿಯುವಂತೆ ಕನಸುಗಳು ! ದುಃಸ್ವಪ್ನದಿಂದ ಬೆದರಿದ ಭರತ ಬೆಳಗ್ಗೆ ಎದ್ದವನೇ ದೂತರೊಡನೆ ಎಲ್ಲರ ಕ್ಷೇಮವನ್ನು ವಿಚಾರಿಸಿದನು. ಬಂದ ದೂತರು ವಿನೀತರಾಗಿ ಉತ್ತರಿಸಿದರು: "ಅಯೋಧ್ಯೆಯಲ್ಲಿ ಎಲ್ಲರೂ ಕ್ಷೇಮದಿಂದಿದ್ದಾರೆ. ಏನೋ ಒಂದು ಮಹಾ ಕಾರ್ಯಕ್ಕಾಗಿ ವಸಿಷ್ಠರು ನಿನ್ನನ್ನು ಬರಹೇಳಿದ್ದಾರೆ. ಅತ್ತೆ-ಮಾವಂದಿರನ್ನು ಬೀಳ್ಕೊಟ್ಟು ಸೇನಾಸಮೇತನಾಗಿ ನೀನು ಬೇಗನೆ ಹೊರಟು ಬರಬೇಕೆಂದು ಗುರುಗಳಅಪ್ಪಣೆಯಾಗಿದೆ." ಮತ್ತೆ ಏಳು ದಿನಗಳ ಪ್ರಯಾಣದ ನಂತರ ಎಲ್ಲರೂ ಅಯೋಧ್ಯೆಯನ್ನು ತಲುಪಿದರು, ಊರಲ್ಲಿ ಎಲ್ಲೂ ಗೆಲುವಿರಲಿಲ್ಲ. ಭರತನಿಗೆ ಏಕೋ ಭಯವಾಯಿತು. ಸಂದೇಹದಿಂದಲೇ ತಾಯಿಯ ಅಂತಃಪುರವನ್ನು ಪ್ರವೇಶಿಸಿದನು. ಬಹುದಿನಗಳ ನಂತರ ಬಂದ ಮಗನನ್ನು ಕೈಕೇಯಿ ಸಂತಸದಿಂದ ಆಲಿಂಗಿಸಿದಳು; ಬಂಧುಗಳ ಕುಶಲವನ್ನು ವಿಚಾರಿಸಿ ದಳು. ಭರತನು ಅವರ ಕ್ಷೇಮಸಮಾಚಾರವನ್ನು ತಿಳಿಸಿ 'ತಂದೆಯಲ್ಲಿ' ಎಂದು ಕೇಳಿದನು. ಕೈಕೇಯಿ ಉತ್ತರಿಸಿದಳು: " ಹುಟ್ಟಿದವನು ಒಂದಲ್ಲ ಒಂದು ದಿನ ಹೊಂದಲೇಬೇಕಾದ ಗತಿಯನ್ನು ನಿನ್ನ ತಂದೆಯೂ ಪಡೆದಿದ್ದಾನೆ." ಭರತನಿಗೆ ದುಃಖ ತಡೆಯಲಾಗಲಿಲ್ಲ. ಮೋಹ- ಗೊಂಡು ನೆಲದಮೇಲೆ ಕುಸಿದುಬಿದ್ದ. ಕೈಕೇಯಿ ಎಬ್ಬಿಸಿ ಸಮಾಧಾನಪಡಿಸಿದಳು. ಮೂರ್ಛೆಯಿಂದ ತಿಳಿದೆದ್ದ ಭರತ ಕಣ್ಣೀರು ಮಿಡಿಯುತ್ತ ನುಡಿದ: "ಅಣ್ಣನ ಪಟ್ಟಾಭಿಷೇಕಕ್ಕಾಗಿ ನನಗೆ ಕರೆ ಬಂದಿರ ಬೇಕೆಂದು ಸಂತಸದಿಂದ ಬಂದರೆ, ಇಂಥ ಆಪತ್ತು ಇಲ್ಲಿ ಕಾದಿರಬೇಕೆ ? ಎಲ್ಲಿ ? ನನ್ನ ಅಣ್ಣರಾಮಚಂದ್ರ ನೆಲ್ಲಿ ? ಅವನ ಕಾಲಿಗೆರಗದೆ ನನಗೆ ಸಮಾಧಾನವಿಲ್ಲ ....... ಹಾ ! ನನ್ನ ತಂದೆಗೆ ಏನಾಯಿತು ? ಯಾವ ಕಾರಣದಿಂದ ಸಾವು ಬಂತು ? ಕೊನೆಯಗಳಿಗೆಯಲ್ಲಿ ಅವನಾಡಿದ ಮಾತುಗಳಾವುವು ? ಅದನ್ನಾದರೂ ಹೇಳು ತಾಯಿ. " "ಕೃತಕೃತ್ಯರಾಗಿ ಮರಳಿದ ರಾಮ-ಸೀತೆಯರನ್ನು ಕಾಣುವ ಕಣ್ಣು ಪುಣ್ಯ ಮಾಡಿರಬೇಕು ಎಂದು ಹಲುಬಿ-ರಾಮನನ್ನು ನೆನೆದುಕೊಂಡೇ ಮಹಾ 'ರಾಜ' ಪ್ರಾಣವನ್ನು ತ್ಯಜಿಸಿದನು." " ಜಗನ್ನಾಥನಾದ ರಾಮಚಂದ್ರನೆಲ್ಲಿದ್ದಾನೆ ? ಅತ್ತಿಗೆ ಸೀತೆಯೆಲ್ಲಿರುವಳು ?" ಭರತನಿಗೆ ಪ್ರಿಯವಾದ ವಾರ್ತೆಯನ್ನರಹುತ್ತಿರು- ವೆನೆಂಬ ಹೆಮ್ಮೆಯಿಂದ ಕೈಕೇಯಿ ಕಣ್ಣರಳಿಸಿ ನುಡಿದಳು: "ರಾಮ-ಸೀತೆಯರು ಚೀರಧಾರಿಗಳಾಗಿ ಕಾಡಿಗೆ ಹೊರಟು ಹೋದರು. ಲಕ್ಷ್ಮಣನೂ ಅವರ ಜತೆಗೇ ಹೋದನು." ಭರತನಿಗೆ ಒಂದೂ ಅರಿವಾಗಲಿಲ್ಲ. ಅವನು ಕಂಗಾಲಾಗಿ ಕೇಳಿದನು: "ಯಾವ ಕಾರಣಕ್ಕಾಗಿ ?" ಮಗನ ವ್ಯಾಕುಲತೆಯನ್ನು ಹೋಗಲಾಡಿಸುವ ಹುಮ್ಮಸಿನಿಂದ ಕೈಕೇಯಿ ನುಡಿದಳು: " ರಾಮನು ಪ್ರಜೆಗಳ ಪ್ರೀತಿಯನ್ನು ಸಂಪಾದಿಸಿ- ಕೊಂಡಿದ್ದಾನೆ ಪ್ರಜೆಗಳೆಲ್ಲಅವನು ಯುವರಾಜ- ನಾಗಬೇಕೆಂದು ಬಯಸಿದರು. ಅವನ ಅಭಿಷೇಕದ ಸಿದ್ಧತೆಯೂ ಮೊನ್ನೆ ಇಲ್ಲಿ ನಡೆಯಿತು. ಆದರೆ ನಾನು ನಿನಗಾಗಿ ಅದನ್ನು ವಿರೋಧಿಸಿದೆ. ರಾಮನು ಕಾಡಿಗೆ ಹೋಗಬೇಕು; ನೀನೇ ಯುವರಾಜನಾಗಬೇಕು ಎಂದು ಕೇಳಿಕೊಂಡೆ. ನನ್ನ ಮಾತಿನಂತೆಯೆ ರಾಮಚಂದ್ರ ಕಾಡಿಗೆ ಹೋದ. ಪುತ್ರಶೋಕದಿಂದ ರಾಜನೂ ಮೃತನಾದ. ನಾನು ಮಾಡಿದ ಕೆಲಸ ಕೆಟ್ಟದು ಎಂಬುದನ್ನು ಬಲ್ಲೆ. ಆದರೆ ನಿನ್ನ ಮೇಲಿನ ಮಮತೆಯಿಂದ ಹಾಗೆ ಮಾಡಿದೆ. ರಾಷ್ಟ್ರದ ಅಧಿರಾಜನಾಗು ಭರತ, ನನ್ನ ಬಯಕೆಯನ್ನು ಪೂರೈಸಿ ಕೊಡು." ಶೋಕಾಗ್ನಿಯಿಂದ ಭರತನ ಮೈ ಸುಡುವಂತಾ- ಯಿತು. ಅವನು ಕಿಡಿ ಕಿಡಿಯಾಗಿಯೇ ನುಡಿದನು: " ಯಾವ ಸೌಭಾಗ್ಯಕ್ಕಾಗಿ ನನ್ನ ತಂದೆಯನ್ನು ಕೊಂದೆ ? ನನ್ನ ಅಣ್ಣನನ್ನು ಕಾಡಿಗಟ್ಟಿದೆ ! ನಾಣ್‌ಗೇಡಿಯಾಗಿ ಈ ಅಮಾನುಷ ಕೃತ್ಯವನ್ನು ಮಾಡಿ, ಅದು ನನ್ನ ಮೇಲಣ ಮಮತೆಯಿಂದ- ಎಂದು ನನ್ನನ್ನೂ ಆ ಪಾಪಕುಂಡಕ್ಕೆ ತಳ್ಳುತ್ತಿರು- ವೆಯಾ ? ತಂದೆಯನ್ನು ಕೊಂದು, ಅಣ್ಣನನ್ನು ಕಾಡಿಗಟ್ಟಿ ನಾನು ರಾಜ್ಯವಾಳಲಾರೆ. ಇದಕ್ಕೆ ಎಲ್ಲ ದೇವತೆಗಳೂ ಸಾಕ್ಷಿಯಾಗಿರಲಿ. ನಿನ್ನ ಮೈಯಿಂದ ಹುಟ್ಟಿದ ಈ ಕೊಳಕು ಮೈಯನ್ನು ನಾನು ಹೊತ್ತುಕೊಂಡಿರಲಾರೆ. ಇಂದೇ ಈ ಶರೀರವನ್ನು ತೊರೆದುಬಿಡುತ್ತೇನೆ. ಗಂಡನನ್ನು ಕೊಂದವಳಿಗೆ ಮಗನ ಸಾವಿನಿಂದೇ- ನಾದೀತು? ನೀನು ಅಶ್ವಪತಿಯ ಮಗಳಲ್ಲ; ಯಾವನೋರಾಕ್ಷಸನ ಮಗಳು ! ಮನುಷ್ಯರಾದವರು ಇಂಥ ಕೆಲಸವನ್ನು ಮಾಡುವದುಂಟೆ ! " ಶತ್ರುಘ್ನನಿಗೆ ಇದನ್ನೆಲ್ಲ ಕೇಳಿ ಎಲ್ಲಿಲ್ಲದ ಅಚ್ಚರಿ ! ಹೆಣ್ಣು ಹೆಂಗಸಿನ ಮಾತಿಗೆ ರಾಮಚಂದ್ರ ರಾಜ್ಯ ತೊರೆವುದೆಂದರೇನು? ಕಾಡಿಗೆ ತೆರಳುವುದೆಂದರೇನು? ಒಂದು ವೇಳೆ ರಾಮಚಂದ್ರ ಹೊರಟರೂ ಲಕ್ಷಣ ಅವನನ್ನು ತಡೆವುದು ಬಿಟ್ಟು, ಅವನ ಜತೆಗೇ ಕಾಡಿಗೆ ಹೋಗುವುದೆಂದರೇನು ! ಇಷ್ಟೆಲ್ಲ ಗಲಭೆ ನಡೆಯುತ್ತಿದ್ದಾಗ ಅಂತಃಪುರದ ಬಾಗಿಲಲ್ಲಿ ಮಂಥರೆ ಬಂದು ಸಡಗರದಿಂದ ನಿಂತಿ- ದ್ದಳು. ಅವಳು ತನ್ನನ್ನು ರಾಣಿಯಂತೆ ಸಿಂಗರಿಸಿ ಕೊಂಡಿದ್ದಳು. ಭರತನು ಬರುವ ಸಂತಸವಲ್ಲವೆ ಈ ಗೂನಿಗೆ ! ಎಲ್ಲ ಅನರ್ಥಗಳಿಗೂ ಈ ಮಂಥರೆಯೇ ಮೂಲ ಎಂದು ತಿಳಿದಾಗ ಶತ್ರುಘ್ನನಿಗೆ ಸಿಟ್ಟು ತಡೆಯಲಾಗ- ಲಿಲ್ಲ. ಅವಳ ತುರುಬನ್ನು ಹಿಡಿದು ದರದರನೆ ಎಳೆದು ತಂದನು. ಅದನ್ನು ಕಂಡ ಪರಿವಾರದ ಜನ ಇದನ್ನು ನಿವೇದಿಸಲು ಕೌಸಲ್ಯೆಯೆಡೆಗೆ ಓಡಿತು. ಮಂಥರೆ 'ನನ್ನನ್ನು ಕೊಲ್ಲಬೇಡಿ' ಎಂದು ಕೂಗು ತಿದ್ದಂತೆ ಶತ್ರುಘ್ನ ಬಲವಾಗಿ ಎಳೆದನು. ತೆರೆದ ಬಾಯೊಳಗೆ ನೆಲದ ಮಣ್ಣು ತುಂಬಿಕೊಂಡಿತು. ಶತ್ರುಘ್ನನು ಗರ್ಜಿಸಿದನು : "ನಮ್ಮಣ್ಣನನ್ನು ಕಾಡಿಗಟ್ಟಿ ತಂದೆಯನ್ನುಕೊಂದು, ಮೆರೆಯಬೇಕೆಂದಿರುವೆಯಾ ತೊತ್ತಿನ ಹೆಣ್ಣೆ ? ನೀನಿನ್ನು ಬದುಕಿರುವುದು ಸಾಧ್ಯವಿಲ್ಲ. ಇಂದೇ ನಿನ್ನ ಒಡತಿ ಕೈಕೇಯಿಯ ಮನೆ ಬಾಗಿಲಲ್ಲಿ ನಿನ್ನ ಹೆಣವನ್ನು ತೂಗಿಸಿ ಬಿಡುತ್ತೇನೆ." ಮಧ್ಯದಲ್ಲಿ ಭರತ ತಡೆದು ನುಡಿದನು : "ಶತ್ರುಘ್ನ, ಬಿಟ್ಟುಬಿಡು ಅವಳನ್ನು. ಕೈಕೇಯಿ- ಯನ್ನೂ ಮಂಥರೆಯನ್ನೂ ಸಿಗಿದು ಬಿಡುವಷ್ಟು ಸಿಟ್ಟು ನನಗೂ ಬಂದಿದೆ. ಆದರೆ ರಾಮಚಂದ್ರ ಇದನ್ನು ಸಹಿಸಲಾರ. ಅವನು ಸ್ತ್ರೀ ಘಾತುಕರೆಂದು ನಮ್ಮನ್ನು ತೊರೆದಾನು, ರಾಮಚಂದ್ರನ ಪಾದಧೂಲಿಯ ಲೋಭದಿಂದಲಾದರೂ ಇವಳನ್ನು ಬದುಕಗೊಡು. ಕೃತಾಂತನ ಕಾಲಪಾಶದ ಕುಣಿಕೆಯನ್ನು ತಪ್ಪಿಸು- ವುದು ನಮ್ಮಿಂದ ಯಾರಿಂದಲೂ ಸಾಧ್ಯವಿಲ್ಲ." ಭರತನು ಶತ್ರುಘ್ನನನ್ನು ಕರೆದುಕೊಂಡು ಬಂದು ಕೌಸಲ್ಯೆಗೂ ಸುಮಿತ್ರೆಗೂ ಸಂಕೋಚದಿಂದ ಕುಗ್ಗಿ ನಮಸ್ಕರಿಸಿದನು. ಕೌಸಲ್ಯೆಗೆ ಭರತನ ಇಂಗಿತದ ಅರಿವಾಗಲಿಲ್ಲ. ಅವನು ಯುವರಾಜದರ್ಪವನ್ನು ಮೆರೆಯಿಸಲಿಕ್ಕೆಂದೇ ಬಂದಿರಬೇಕೆಂದು ಬಗೆದು ಸ್ವಲ್ಪು ನಂಜುಮಾತನ್ನೇ ಆಡಿದಳು: "ಭರತ, ನಿನ್ನ ತಾಯಿ ನಿನಗೆ ರಾಜ್ಯವನ್ನು ಕೊಡಿಸಿದ್ದಾಳೆ. ನೀನಾದರೂ ರಾಜನಾಗಿ ಸುಖಪಡು. ನಿನ್ನ ತಂದೆಯನ್ನು ಕೊಂದು ಅಣ್ಣನನ್ನು ಓಡಿಸಿ, ನಿನ್ನ ತಾಯಿ ಪಡೆದ ಸೌಭಾಗ್ಯವನ್ನು ಅನುಭವಿಸು ವತ್ಸ. ನಾನೂ ಸುಮಿತ್ರೆಯೂ ರಾಮ- ನಿದ್ದಲ್ಲಿಗೆ ಹೋಗಿಬಿಡುವೆವು. " ಕೌಸಲ್ಯೆಯ ಮಾತನ್ನು ಭರತನಿಂದ ಸಹಿಸುವು- ದಾಗಲಿಲ್ಲ. " ಓ ನನ್ನ ತಾಯಿ, ಹಾಗೆನ್ನದಿರು" ಎಂದು ಅವಳ ಕಾಲಿಗೆ ಅಡ್ಡ ಬಿದ್ದು ವಿಜ್ಞಾಪಿಕೊಂಡನು: " ನನ್ನ ಭಾವವನ್ನರಿಯದೆ ನನ್ನನ್ನು ಹಂಗಿಸ- ಬೇಡ ತಾಯಿ, ನಾನು ರಾಮಚಂದ್ರನ ಚರಣ ದಾಸ, ಈ ಮಾತು ಮೂರುಕಾಲಕ್ಕೂ ಸತ್ಯ. ರಾಮಚಂದ್ರ-ನನ್ನು ಕಾಡಿಗಟ್ಟಿ ನಾನು ರಾಜ್ಯವನ್ನು ಭೋಗಿಸಿದೆ- ನಾದರೆ, ಪ್ರಪಂಚದ ಎಲ್ಲ ಪಾತಕಿಗಳ ಎಲ್ಲ ಪಾತಕವೂ ನನಗೆ ಬರಲಿ." ಭರತನ ಸರಳತೆಯನ್ನು ಕಂಡು ಕೌಸಲ್ಯೆಗೆ ಆನಂದವಾಯಿತು. ಅವಳು ನುಡಿದಳು: " ನನಗೆ ಗೊತ್ತು ಕಂದ. ನೀನು ಅಂಥವನಲ್ಲ. ಏನಾದರೂ ನೀನು ರಾಮಚಂದ್ರನ ತಮ್ಮನಲ್ಲವೆ ? ಹೋಗು ಭರತ, ತಂದೆಯ ಸಂಸ್ಕಾರವನ್ನು ಪೂರಯಿಸು; ರಾಜ್ಯದ ಉತ್ತರಾಧಿಕಾರಿಯಾಗು. ಹದಿನಾಲ್ಕು ವರ್ಷಗಳ ನಂತರ ಸೋದರರೆಲ್ಲ ಸೇರುವಿರಂತೆ. " ಆ ರಾತ್ರಿಯಿಡೀ ಭರತನಿಗೆ ರಾಮನದೇ ಚಿಂತೆ. ಆ ರಾಷ್ಟ್ರದ ಜನರಿಗೂ ಹಾಗೆಯೆ. ಎಲ್ಲರಿಗೂ ರಾಮಚಂದ್ರನದೇ ಚಿಂತೆ. ಆದರೂ ಅವರು ಸುಖಿಗಳೆಂದೇ ಹೇಳಬೇಕು. ಭಗವಂತನ ನಿರಂತರ ಸ್ಮರಣೆ- ಗಿಂತ ಮಿಗಿಲಾದ ಸುಖವಾದರೂ ಏನಿದೆ ? ಹೊನ್ನ ಹಾವುಗೆ ಹೊತ್ತು ತಂದನು ಸೂರ್ಯನ ಹೊಂಬೆಳಕು ಅಯೋಧ್ಯೆಯನ್ನು ಬೆಳಗಿಸಿದರೂ ಭರತನ ಅಂತರಂಗದಲ್ಲಿ ಇನ್ನೂ ಕತ್ತಲು ದಟ್ಟೈಸಿತ್ತು. ಅದನ್ನರಿತ ವಸಿಷ್ಠರು ಮುಂದಿನ ಕಾರ್ಯಕ್ಕಾಗಿ ಅವನನ್ನು ಪ್ರೇರಿಸಿದರು: "ಆಯುಷ್ಮನ್, ಎದ್ದೇಳು. ತಂದೆಯ ಉತ್ತರಕ್ರಿಯೆ- ಯನ್ನು ನೆರವೇರಿಸು. ತೆರವಾದ ರಾಜಾಸನವನ್ನ- ಲಂಕರಿಸು, ನಡೆದುದಕ್ಕಾಗಿ ಚಿಂತಿಸಬೇಡ. ಇದೆಲ್ಲ ಕಾಲಪುರುಷನ ಲೀಲೆ. ವಿದ್ವಾಂಸರು ಸುಖಬಂದಾಗ ಉಬ್ಬುವುದಿಲ್ಲ; ದುಃಖಬಂದಾಗ ಕುಗ್ಗುವುದೂ ಇಲ್ಲ. ಲೋಕದ ಗತಿಯೇ ಹೀಗೆ ! " ಕಣ್ಣೀರನೊರಸುತ್ತ ಭರತನು ಪಡಿನುಡಿದನು: "ಗುರುಗಳೆ, ದುಃಖದಲ್ಲಿ ಕುಗ್ಗದಷ್ಟು ನನ್ನ ಪ್ರಜ್ಞೆ ಇನ್ನೂ ಪಕ್ವವಾಗಿಲ್ಲ. ರಾಮನನ್ನು ಬಿಟ್ಟು ನಾನಿರ ಲಾರೆ. ಕಾಡಿನಲ್ಲಿ ರಾಮನಸೇವೆ ಮಾಡಿಕೊಂಡಿರುವುದು ಸಾಮ್ರಾಜ್ಯಸುಖಕ್ಕಿಂತ ನೂರುಪಟ್ಟು ಮಿಗಿಲು. ಬ್ರಹ್ಮನಂದನರಾದ ಮಹರ್ಷಿಗಳೆ, ಜಗನ್ನಾಥನಾದ ರಾಮಚಂದ್ರನನ್ನು ಕಾಡಿಗಟ್ಟಿ 'ಸ್ವಾಮಿನ್', 'ಮಹಾರಾಜ' ಎಂದು ನಿಮ್ಮಿಂದ ಸಂಬೋಧಿಸಿಕೊಳ್ಳುವ ನಾಟಕ ನನಗೆ ಬೇಡ." ಭರತನ ಸೌಜನ್ಯವನ್ನು ಕಂಡು ಪ್ರಜೆಗಳೂ ಕಾರುಣ್ಯದಲ್ಲಿ ಕರಗಿಹೋದರು ! ವಸಿಷ್ಠರು ಭರತನನ್ನು ರಾಣೀವಾಸಕ್ಕೆ ಕರೆ- ದೊಯ್ದರು. ಅಲ್ಲಿ ಎಣ್ಣೆಯ ದೋಣಿಯಲ್ಲಿ ಹಾಕಿದ್ದ ದಶರಥನ ಕಳೇಬರವನ್ನು ಕಂಡಾಗ ಭರತನಿಗೆ ದು:ಖ ತಡೆಯಲಾಗಲಿಲ್ಲ. ಅಂತಃಪುರದ ಹದಿನಾಲ್ಕು ಸಾವಿರ ಸ್ತ್ರೀಯರು, ರಾಜಪತ್ನಿಯರು ಎಲ್ಲರೊಡನೆ ಭರತನೂ ಗೋಳೋ ಎಂದು ಅತ್ತು ಬಿಟ್ಟನು. ಮತ್ತೆ ವಸಿಷ್ಠರೇ ಬಂದು ಸಮಾಧಾನಗೊಳಿಸ- ಬೇಕಾಯಿತು: " ಪ್ರಾಕೃತಜನರಂತೆ ಅಳುತ್ತ ಕುಳಿತಿರುವುದು ಚೆನ್ನಲ್ಲ ಭರತ, ಬಂಧುಗಳ ಕಣ್ಣೀರು ಸ್ವರ್ಗದಲ್ಲಿ- ರುವ ಪುಣ್ಯಜೀವಿಯನ್ನು ಕೆಳಕ್ಕೆ ತಳ್ಳುವುದಂತೆ. ಕಣ್ಣೊರಸಿಕೊ ಭರತ. ಮುಂದಿನ ಕೆಲಸಕ್ಕೆ ಅಣಿ- ಯಾಗು. " ಭರತನು " ಗುರುಗಳ ಅಪ್ಪಣೆ " ಎಂದು ಎದ್ದು ಹೊರಟನು. ಅವನು ಬರುತ್ತಿದ್ದಾಗ ದಾರಿಯಲ್ಲಿಯ ಕೆಲಸದಾಳುಗಳು ಅವನಿಗೆ ಮಹಾರಾಜನಿಗೆಂಬಂತೆ ಬಗ್ಗಿ ನಮಸ್ಕರಿಸಿದರು. " ನಾನೇನೂ ರಾಜನಲ್ಲ. ನನಗೇಕೆ ಹಾಗೆ ನಮಸ್ಕರಿಸುತ್ತೀರಿ" ಎಂದು ಭರತನು ಅವರನ್ನು ಗದರಿಸಿ, ಶತ್ರುಘ್ನನೊಡನೆ ನುಡಿದನು. " ತಮ್ಮ, ಕೈಕೇಯಿಯ ದುರ್ವರ್ತನೆಯ ಫಲ ವನ್ನು ಸ್ವಲ್ಪ ನೋಡು. ರಾಮನಿಲ್ಲದ ಅಯೋಧ್ಯೆ ವಿಧವೆಯಂತೆ ಕಾಂತಿಹೀನವಾಗಿದೆ. ರಾಷ್ಟ್ರ ಶೂನ್ಯ ವಾಯಿತು ! ಜನಕುಲದ ಬಯಕೆ ಶೂನ್ಯವಾಯಿತು ! ತನ್ನ ಕರ್ಮಣಿಯನ್ನು ಬಲಿಯಿತ್ತು, ನನ್ನ ತಾಯಿ ಏನನ್ನು ಸಾಧಿಸಿಕೊಂಡಂತಾಯಿತು !" ಮಂತ್ರಿಗಳೊಡನೆ ನಡೆದ ಮಂತ್ರಾಲೋಚನೆಯ ಪ್ರಕಾರ ಮಹಾರಾಜನ ಕಳೇಬರದ ಅಂತ್ಯಕ್ರಿಯೆಗೆ ಮೊದಲಾಯಿತು. ಪಾಲಕಿಯಲ್ಲಿ ಕಳೇಬರವನ್ನಿಟ್ಟುಸರಯೂನದಿಯ ದಡಕ್ಕೆ ವೈಭವದಿಂದ ಕೊಂಡೊಯ್ದು-ಅಗರು, ಚಂದನದ ಕಟ್ಟಿಗೆಗಳಿಂದ ಚಿತೆಯನ್ನು ಏರ್ಪಡಿಸಿ ಅಲಂಕೃತವಾದ ಕಳೇಬರ- ವನ್ನು ಭರತ-ಶತ್ರುಘ್ನರು ಅದರ ಮೇಲಿರಿಸಿದರು. ಚಿತೆಯ ಜ್ವಾಲೆ ಮುಗಿಲನ್ನು ಮುಟ್ಟಿತು. ಪುರೋಹಿತರ ವಚನದಂತೆ ಎಲ್ಲ ಕಾರ್ಯವೂ ನೆರವೇರಿತು. ಅರೆಮನೆಯವರೂ ಪೌರರೂ-ಜಾನಪದರೂ ಸರಯುವಿನಲ್ಲಿ ಮಹಾರಾಜನಿಗೆ ಜಲಾಂಜಲಿಯನ್ನಿತ್ತರು. ಅಲ್ಲಿಂದ ಅಯೋಧ್ಯೆಗೆ ಮರಳುವುದೆಂದರೆ ಭರತನಿಗೆ ಬೇಸರ. ಕೊನೆಗೆ ಧರ್ಮಪಾಲನೆಂಬ ಮಂತ್ರಿ ಅವನನ್ನು ಹೇಗೋ ಸಮಾಧಾನಗೊಳಿಸಿ ಕರೆದುಕೊಂಡು ಹೋದನು. ಆಶೌಚ ಮುಗಿದ ನಂತರ ಶ್ರಾದ್ಧಾದಿ ಕರ್ಮ- ಗಳನ್ನು ವೈಭವದಿಂದ ನೆರವೇರಿಸಿದ ಭರತ ವಿಪ್ರರಿಗೆ ಬೇಕಾದಷ್ಟು ಗ್ರಾಮಗಳನ್ನೂ ಧನಧಾನ್ಯಗಳನ್ನೂ ಧಾರೆಯೆರೆದನು. ಹೀಗೆ ಮಹಾರಾಜನ ಅಂತ್ಯಕ್ರಿಯೆ ಸಾಂಗವಾಗಿ ನೆರವೇರಿತು. ಒಂದು ದಿನ ಮಂತ್ರಿಗಳು ಭರತನ ಬಳಿ ವಿಜ್ಞಾಪಿಸಿಕೊಂಡರು: " ಭರತ, ರಾಷ್ಟ್ರ ರಾಜಕವಾಗಿದೆ. ಎಷ್ಟು ದಿನ ಹೀಗಿರಲು ಸಾಧ್ಯ? ಪ್ರಜೆಗಳು ವಿನಂತಿಸಿಕೊಳ್ಳುತ್ತಿ- ದ್ದಾರೆ. ನೀನು ಅವರ ಅಧಿರಾಜನಾಗಿ ರಕ್ಷಣೆಯ ಪಣ ತೊಡಬೇಕು." " ಅಮಾತ್ಯರೆ, ಪ್ರಜೆಗಳ ಬಯಕೆಯೇನೋ ಸ್ವಾಭಾವಿಕವಾದುದೇ. ಆದರೆ ರಾಮಚಂದ್ರನನ್ನು ತೊರೆದು ನಾನು ರಾಜನಾಗುವುದು ಸಾಧ್ಯವಿಲ್ಲ. ರಾಮನ ಬದಲು ನಾನು ವನವಾಸವನ್ನು ಅನು- ಭವಿಸುತ್ತೇನೆ. ಏನಿದ್ದರೂ ಕೈಕೇಯಿಯ ಬಯಕೆ ಮಣ್ಣುಗೂಡುವುದು ನನಗೆ ಬೇಕಾಗಿದೆ. " ಭರತನ ಮಾತನ್ನು ಕೇಳಿದವರೆಲ್ಲರೂ ಸಂತಸ ದಿಂದ "ರಾಮ ಭಕ್ತನಾದ ನಿನಗೆ ಮಂಗಳವಾಗಲಿ " ಎಂದು ಕೊಂಡಾಡಿದರು. ಸೈನಿಕರು-ಪ್ರಜೆಗಳ ಸಹಿತ ರಾಮನಿದ್ದಲ್ಲಿಗೆ ಹೋಗುವುದಕ್ಕಾಗಿ ಭರತನು ಶಿಲ್ಪಿಗಳಿಂದ ಆಳು- ಗಳಿಂದ ರಸ್ತೆಯನ್ನು ರಚಿಸಿದನು. ರಸ್ತೆ ಸಿದ್ಧವಾ- ದೊಡನೆ ಪ್ರಯಾಣ ಸಾಗಿತು. ತಾಯಂದಿರ ಜತೆಗೆ ಹೊರಟ ಭರತನನ್ನು ಎಲ್ಲ ಪೌರರೂ ಅನುಸರಿಸಿ- ದರು. ತಗ್ಗಿದ್ದಲ್ಲಿ ಹರಿವುದು ನೀರಿನ ಸ್ವಭಾವವಲ್ಲವೆ ? ಬಲಗುಂದಿದ ಮುದುಕರು-ಮಕ್ಕಳು ಕೂಡ ರಾಮ- ನನ್ನು ಕಾಣುವ ಆಸೆಯಿಂದ 'ನಾನು-ತಾನು' ಎಂದು ಈ ಕೂಟದಲ್ಲಿ ಸೇರಿಕೊಂಡರು ! ಗಂಗೆಯ ತಡಿಯಲ್ಲಿ ಸೈನ್ಯ ತಂಗಿತು. ಭರತನು ಗಂಗೆಯಲ್ಲೊಮ್ಮೆ ಪಿತೃತರ್ಪಣವನ್ನಿತ್ತನು. ಈ ಅಸಂಖ್ಯ ಸೇನೆಯನ್ನು ಕಂಡು ಗುಹನಿಗೆ ಸಂಶಯ ಮೂಡಿತು. ಭರತನು ರಾಮನಿಗೆ ಎರಡೆಣಿಸಿ ಬಂದಿರ- ಬಹುದೆ ? ಆದರೆ ಭರತನನ್ನು ಕಂಡಾಗ - ಅವನೊ- ಡನೆ ಮಾತನಾಡಿದಾಗ, ಗುಹನು ತನ್ನ ಸಂಶಯಕ್ಕಾಗಿ ತಾನೇ ನಾಚಿಕೊಳ್ಳುವಂತಾಯಿತು. ಗುಹನು ಭರತನ ಬಯಕೆಯಂತೆ-ರಾಮನು ಇಳಿದಿದ್ದ ತಾಣ-ಅವನು ಮಲಗಿದ್ದ ತಾಣ-ಅವರಿಬ್ಬರೂ ಭೆಟ್ಟಿಯಾದಲ್ಲಿರುವ ಇಂಗುದೀವೃಕ್ಷ-ಎಲ್ಲವನ್ನೂ ತೋರಿಸಿದನು. ಭರತನಿಗೆ ಇದನ್ನೆಲ್ಲ ಕಾಣುವುದು ಸಾಧ್ಯವಾಗಲಿಲ್ಲ. ಅವನು ಸಹಿಸಲಾರದೆ ಕುಸಿದು ಬಿದ್ದು ಬಿಟ್ಟ. ರಾಮ-ಸೀತೆ- ಯರನ್ನೂ ಲಕ್ಷ್ಮಣನನ್ನೂ ನೆನೆದು ಕೊಂಡಾಡಿದ. ಆ ರಾತ್ರಿ ಹೀಗೆಯೇ ಸಾಗಿತು. ಅನಂತರ ಪ್ರಾತಃ- ಸಂಧ್ಯೆಯನ್ನು ತೀರಿಸಿಕೊಂಡು ಭರತನು ಪರಿವಾರ- ದೊಡನೆ ಗುಹನ ಸಹಕಾರದಿಂದ ಗಂಗೆಯನ್ನು ದಾಟಿ ಪ್ರಯಾಗವನ್ನು ಸೇರಿದನು. ಅಲ್ಲಿ ಭರದ್ವಾಜ ಮುನಿಗಳ ದರ್ಶನವಾಯಿತು. ಭರತನ ಮಹಾ ಸೇನೆಯನ್ನು ಕಂಡು ಮುನಿಗಳೂ ಚಿಕಿತ್ಸಕ ದೃಷ್ಟಿಯಿಂದ ನುಡಿದರು : "ರಾಮನನ್ನು ಕಾಡಿಗೆ ಕಳುಹಿಸಿಯಂತೂ ಆಯಿತು. ಈ ಸೈನ್ಯವನ್ನು ಕಟ್ಟಿಕೊಂಡು ಇನ್ನೂ ಏನು ಮಾಡಬೇಕೆಂದಿರುವೆ ಭರತ ? " " ಮಹರ್ಷಿ, ತಾಯಿಯ ಕೈತವದಿಂದ ನನಗೆ ತಲೆ ತಗ್ಗಿಸುವಂತಾಗಿದೆ. ನಾನು ಬಂದದ್ದು ತಾಯಿಯ ಬಯಕೆಯನ್ನು ನಡೆಯಿಸಲಿಕ್ಕಲ್ಲ; ನಮ್ಮ ಅಣ್ಣ ನನ್ನು ನಮ್ಮ ರಾಷ್ಟ್ರದ ಅಧಿನಾಯಕನನ್ನು ಜಗತ್ಪ್ರಭುವನ್ನು, ಕಾಡಿನಿಂದ ನಾಡಿಗೆ ಕರೆದೊಯ್ಯಲು ಬಂದಿದ್ದೆನೆ." " ಧನ್ಯ, ಭರತ ಧನ್ಯ. ನೀನು ರಾಮನ ತಮ್ಮನೇ ನಿಜ, " ಎಂದು ಭರದ್ವಾಜರು ಅವನನ್ನು ಕೊಂಡಾಡಿ ದರು. ಆವತ್ತಿನ ಆತಿಥ್ಯ ತಮ್ಮಲ್ಲಿಯೆ ನಡೆಯ ಬೇಕೆಂ- ದು ಕೇಳಿಕೊಂಡರು. ಸಿದ್ಧ ಪುರುಷರಾದ ಭರದ್ವಾಜ- ರು ಭಗವತ್ಪ್ರಸಾದದಿಂದ ಆ ಕಾಡಿನಲ್ಲಿ ಆ ಅಸಂಖ್ಯಾತ ಸೈನಿಕರಿಗೆ- ಜಾನಪದರಿಗೆ ರಾಜಭೋಗ- ವನ್ನುಣಿಸಿದರು. ಯಾರು ಏನನ್ನು ಬಯಿಸಿದರೆ ಅದು ಅವರಿಗೆ ದೊರಕುತ್ತಿತ್ತು. ಮರುದಿನ ಪ್ರಾತಃಕಾಲ ಹೊರಟುನಿಂತ ಭರತನು ಮಹರ್ಷಿಯನ್ನು ವಂದಿಸಿದನು. ರಾಜಮಹಿಷಿ- ಯರೂ ಮುನಿಗೆ ತಲೆವಾಗಿದರು. ಭರದ್ವಾಜರಂದರು : " ಈ ಮೂರು ಮಹಿಷಿಯರು ಯಾರು ಯಾರು ಎಂದು ಪರಿಚಯಿಸಿಕೊಡು ಭರತ. " " ನಿಮಗೆ ಮೊದಲು ವಂದಿಸಿದವಳು ಪುತ್ರವಿರಹ ದಿಂದ ದುಃಖಿತಳಾದ ಮಾತೆ ಕೌಸಲ್ಯೆ,, ಅವಳ ಬಳಿ ಯಲ್ಲಿರುವಾಕೆ ವೀರರಾದ ಲಕ್ಷ್ಮಣ-ಶತ್ರುಘ್ನರ ಜನನಿಯಾದ ಸುಮಿತ್ರೆ, ಓ- ಅಲ್ಲಿ ನಾಚಿಕೆಯಿಂದ ತಲೆ ತಗ್ಗಿಸಿ ನಿಂತವಳೆ ರಾಮನನ್ನು ಕಾಡಿಗಟ್ಟಿದ ಹೆಂಗಸು-ಕೈಕೇಯಿ; ನಿರ್ಭಾಗ್ಯನಾದ ಈ ಭರತನನ್ನು ಹಡೆದ ತಾಯಿ. " ಆಗ ಭರದ್ವಾಜರು ಸಮಾಧಾನಗೊಳಿಸಿದರು : " ಭರತ, ಕೈಕೇಯಿ ಒಂದು ನಿಮಿತ್ತ ಮಾತ್ರ. ರಾಮಚಂದ್ರ ದೇವಕಾರ್ಯಕ್ಕಾಗಿ ಕಾಡಿಗೆ ತೆರಳಿ- ದ್ದಾನೆ. ತಾಯಿಯ ಮೇಲೆ ತಪ್ಪನ್ನು ಹೊರಿಸಬೇಡ, ಪ್ರಭುವಿನ ಲೀಲಾ ನಾಟಕಕ್ಕೆ ನಾವೆಲ್ಲ ಒಂದಲ್ಲ ಒಂದು ನಿಮಿತ್ತಗಳು- ಅಷ್ಟೆ. " ಭರದ್ವಾಜರ ಒಪ್ಪಿಗೆ ಪಡೆದು ಅವರಿಂದ ರಾಮನ ಆಶ್ರಮದ ತಾಣವನ್ನು ತಿಳಿದುಕೊಂಡು ಭರತನು ಅಲ್ಲಿಂದ ಹೊರಟನು. ಕ್ರಮೇಣ ಯಮುನೆಯನ್ನು ದಾಟಿ ಚಿತ್ರಕೂಟವನ್ನು ಸೇರಿದನು. ಚಿತ್ರಕೂಟದ ತಪ್ಪಲಲ್ಲೆ ಸೈನ್ಯವನ್ನು ನಿಲ್ಲಿಸಿ ಪುರೋಹಿತರೊಡನೆ-ಮಾತೆಯರೊಡನೆ ಭರತನು ಮುಂದುವರಿದನು. ಮುನಿಗಳೊಡನೆ ರಾಮನಿರುವ ತಾಣವನ್ನು ಕೇಳುತ್ತ ರಾಮನ ಆಶ್ರಮದ ಸನಿಯಕ್ಕೆ ಬಂದನು. ಇತ್ತ ಲಕ್ಷ್ಮಣನು ಸೈನ್ಯದ ಧೂಲಿಯಿಂದ ಮುಗಿಲೆಲ್ಲ ಮುಸುಕಿದ್ದನ್ನು ಕಂಡು ಮರವೇರಿ 'ಇದು ಏನಿರಬಹುದು' ಎಂದು ಪರಿಕಿಸಿದನು. ದೂರದಲ್ಲಿ ಭರತನ ಕೋವಿದಾರಧ್ವಜ ಕಾಣಿಸಿತು ! ಸಿಟ್ಟಿನಿಂದಲೆ ಲಕ್ಷ್ಮಣನು ನುಡಿದನು: "ಅಣ್ಣ, ಭರತನು ಸೈನ್ಯ ಕಟ್ಟಿಕೊಂಡು ಬಂದಿ- ದ್ದಾನೆ. ಅವನ ದರ್ಪಕ್ಕೆ ಮಿತಿಯೇ ಇಲ್ಲ. ಅವನಿಗೆ ಬುದ್ಧಿ ಕಲಿಸಲಿಕ್ಕೆ ನಾನೊಬ್ಬನೆ ಸಾಕು. ನನಗೆ ಅನುಮತಿ ಕೊಡು ಅಣ್ಣ." ರಾಮನು ಸಮಾಧಾನವಾಗಿಯೆ ಉತ್ತರಿಸಿದ: "ಭರತನು ಶಾಂತ ಪ್ರಕೃತಿಯವನು. ಅವನು ಎಂದೂ ದರ್ಪವನ್ನು ಮೆರೆಯಿಸುವವನಲ್ಲ. ಶಾಂತನಾಗು ಲಕ್ಷಣ. ಭರತನು ನಮ್ಮನ್ನು ನೋಡ- ಲಿಕ್ಕೆ- ನಮ್ಮ ಯೋಗಕ್ಷೇಮವನ್ನು ವಿಚಾರಿಸಲಿಕ್ಕೆ ಬಂದಿರಬೇಕು. ದುಡುಕಬೇಡ." ಇಷ್ಟರಲ್ಲಿಯೆ ಭರತನು ಪರ್ಣಶಾಲೆಯ ಬಳಿ ಬಂದಿದ್ದನು. ಸುಂದರವಾದ ಎರಡು ಆಶ್ರಮಗಳು. ಈಶಾನ್ಯದಲ್ಲಿ ಹೋಮಾಗ್ನಿ, ಜಟಾಧಾರಿಯಾಗಿ ನಾರುಡೆಯನ್ನು ತೊಟ್ಟು ಕುಳಿತಿರುವ ರಾಮ. ಅವನ ಪಕ್ಕದಲ್ಲಿ ತಪಸಿನಿ ಸೀತೆ, ಬಳಿಯಲ್ಲಿ ಹಸನ್ಮುಖನಾದ ಲಕ್ಷಣ. ಈ ಸುಖಮಯ ಶಾಂತ ಜೀವನದಿದಿರು ರಾಜಭೋಗಕ್ಕೆ ಕಿಚ್ಚು ಹಚ್ಚಬೇಕು. ತಾಯಿಯ ತಪ್ಪಿನಿಂದ ಲಜ್ಜಿತನಾದ ಭರತ ರಾಮನ ಕಾಲಿಗೆ ಬಿದ್ದು ಹೊರಳಾಡಿದನು. ರಾಮಚಂದ್ರ ನು ಎಬ್ಬಿಸಿ ಬಿಗಿದಪ್ಪಿಕೊಂಡನು. ಸೋದರಪ್ರೇಮ ಅಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಿತ್ತು! ಎಲ್ಲವನ್ನೂ ಬಲ್ಲ ರಾಮಚಂದ್ರ ತಂದೆಯ ಕ್ಷೇಮವನ್ನು ವಿಚಾರಿಸಿದನು ! ಅಯೋಧ್ಯೆಯ ಯೋಗ-ಕ್ಷೇಮಗಳನ್ನು ಕೇಳಬಯಸಿದನು ! ದಶರಥನು ಸತ್ತ ವಾರ್ತೆಯನ್ನು ಕೇಳಿ-ನಿರ್ದುಃಖ- ನಾದ ರಾಮಚಂದ್ರ ಮಕ್ಕಳಂತೆ ಅತ್ತು ಬಿಟ್ಟನು ! ಇದೂ ಒಂದು ಲೋಕನಾಯಕನ ಲೀಲೆ ! ಅನಂತರ ರಾಮ-ಲಕ್ಷಣ-ಸೀತೆಯರು ಗಂಗೆಯಲ್ಲಿ ಮುಳುಗಿ ಮಹಾರಾಜನಿಗೆ ಜಲಾಂಜಲಿಯನ್ನಿತ್ತರು. ನಾರುಮಡಿಯುಟ್ಟ ಮಕ್ಕಳನ್ನು ಕಂಡು ಕೌಸಲ್ಯೆಯ ಕಣ್ಣು ತೇವವಾಯಿತು. ತಾಯಂದಿರನ್ನು ಕಂಡವನೆ ರಾಮಚಂದ್ರ ಮೂವರಿಗೂ ನಮಸ್ಕರಿಸಿದನು. ಲಕ್ಷ್ಮಣನೂ ತಾಯಂದಿರಿಗೆ ವಂದಿಸಿದನು. ಸೀತೆಯೂ ಅತ್ತೆಂದಿರ ಆಶೀರ್ವಾದವನ್ನು ಪಡೆದುಕೊಂಡಳು. ಆ ರಾತ್ರಿ ಹಾಗೆಯೇ ಕಳೆಯಿತು. ಮರುದಿನ ಮುಂಜಾವದಲ್ಲಿ ಎಲ್ಲರೂ ಒಂದೆಡೆ ಸೇರಿದರು. ಭರತನು ಏನೆಂದು ಬೇಡಿಕೊಳ್ಳುವನೊ ? ಅದಕ್ಕೆ ರಾಮಚಂದ್ರ ಏನನ್ನುವನೋ ? ಎಂದು ಎಲ್ಲರಿಗೂ ಕುತೂಹಲ ಎಲ್ಲರೂ ಕಿವಿ ನಿಮಿರಿಸಿಕೊಂಡು ಕುಳಿತಿದ್ದರು. ಭರತನು ರಾಮನ ಬಳಿ ವಿಜ್ಞಾಪಿಸಿಕೊಂಡನು : "ರಾಮಚಂದ್ರ, ನಮ್ಮ ಮೇಲೆ ಅನುಗ್ರಹ ಮಾಡಿ ನಿನ್ನದೇ ಆದ ಅಯೋಧ್ಯೆಯನ್ನು ನೀನು ಪ್ರವೇಶಿಸ ಬೇಕು. ಈ ಕಾಡಿನ ಬಾಳು ಇನ್ನುಸಾಕು. ಭೂಮಿ- ತಾಯಿ ಅನಾಥೆಯಾಗಿದ್ದಾಳೆ. ನಾಡಿನ ಈ ವೈಧವ್ಯ- ವನ್ನು ತೊಲಗಿಸು. ನಮ್ಮನ್ನು ಈ ಸಂಕಟದಿಂದ ಪಾರುಗಾಣಿಸು." ರಾಮನು ಚುಟುಕಾಗಿ ಉತ್ತರಿಸಿದನು : "ನಾವು ತಂದೆಯ ಮಾತಿನಂತೆ ನಡೆಯುವವರು. ಸಜ್ಜನರ ಹಿತಕ್ಕಾಗಿ ನಾನಿಲ್ಲೇ ಇರಬಯಸುತ್ತೇನೆ. ರಾಜ್ಯವನ್ನು ಹಿಡಿದು ನಡೆಸುವ ಭಾರ ನಿನ್ನದು." ಭರತನು ಗದ್ಗದಿತನಾಗಿ ಮತ್ತೆ ಮತ್ತೆ ಬಿನ್ನವಿಸಿ ಕೊಂಡನು : "ಎಲ್ಲ ಅನರ್ಥಗಳಿಗೂ ನನ್ನ ತಾಯಿಯೇ ಕಾರಣ. ನಿನ್ನನ್ನು ಕಾಡಿಗೋಡಿಸಿದಳು. ಗಂಡನನ್ನು ಕೊಂದಳು. ನನ್ನ ಮನಸಿನ ಬಯಕೆಯನ್ನು ಮಣ್ಣು ಗೂಡಿಸಿದಳು. ಜಗತ್ತನ್ನೇ ದುಃಖದ ಕಡಲಲ್ಲಿ ತೇಲಿಸಿ ದಳು. ಅವಳ ನೆನಪು ಬಂದಾಗ ಮೈಯೆಲ್ಲ ಉರಿ- ದೇಳುತ್ತದೆ. ತಾಯಿಯಾದರೇನು ? ಇಂಥ ಕುಲ- ಕಲಂಕಿನಿಯ ತಲೆ ಸವರಿಬಿಡಬೇಕು ಎನ್ನುವಷ್ಟು ಸಿಟ್ಟು ಮೂಡುತ್ತದೆ. ಆದರೆ ನಿನ್ನ ನೆನಪು ಬಂದಾಗ ಮತ್ತೆ ಮನಸ್ಸು ಶಾಂತವಾಗುತ್ತದೆ. ಸ್ತ್ರೀ ಘಾತಕನಾದ ಭರತನನ್ನು ನೀನು ಕ್ಷಮಿಸಲಾರೆ ಎಂಬ ಭಯದಿಂದ ಸುಮ್ಮನಿರಬೇಕಾಗಿದೆ. ಏನಿದ್ದರೂ ನಾನು ನಿನ್ನ ಭಕ್ತ-ಕಿಂಕರ, ನನ್ನನ್ನು ಮನ್ನಿಸಿಬಿಡು. ಮಹಾರಾಜನ ವರದಂತೆ ನನಗೆ ಬಂದಿರುವ ರಾಜ್ಯವನ್ನು ನಾನು ನಿನಗೆ ಅರ್ಪಿಸಿದ್ದೇನೆ. ನನ್ನ ಮೇಲಣ ಪ್ರೀತಿಯಿಂದಲಾದರೂ ನೀನು ಅದನ್ನು ಸ್ವೀಕರಿಸಬೇಕು, ರಾಮಚಂದ್ರ, ನೀನು ಊರಿಗೆ ಮರಳದಿರುವುದೇ ದಿಟವಾದರೆ ನಾನೂ ಲಕ್ಷ್ಮಣನೊಡನೆ ನಿನ್ನ ಸೇವೆಯಲ್ಲಿ ಇದ್ದು ಬಿಡು -ತ್ತೇನೆ. ಯೋಗಿಗಳಿಗೂ ದುರ್ಲಭವಾದ ಈ ಪಾದದ ಸೇವೆ ಮಾಡುವ ಭಾಗ್ಯ ನನ್ನದಾಗಲಿ." ಭರತನ ಮಾತನ್ನು ಎಲ್ಲ ಮಂತ್ರಿಗಳೂ- ಮಹರ್ಷಿಗಳೂ- ಮಾತೆಯರೂ ಸಮರ್ಥಿಸಿ ರಾಮ ನನ್ನು ರಾಜ್ಯಕ್ಕೆ ಮರಳುವಂತೆ ಅಂಗಲಾಚಿ- ಕೊಂಡರು. ಜಾಬಾಲಿ ಮುನಿಗಳು ನಾಸ್ತಿಕತೆಯ ಸೋಗಿನಲ್ಲಿ ನುಡಿದರು: "ಹೆಣ್ಣಿನ ಮಾತಿಗೆ ಮರುಳಾದ ತಂದೆಯ ಮಾತನ್ನು ಪಾಲಿಸಿದರೆಷ್ಟು ? ಬಿಟ್ಟರೆಷ್ಟು ? ಗುರು-ಶಿಷ್ಯರು, ತಂದೆ-ಮಕ್ಕಳು ಎನ್ನುವುದೆಲ್ಲ ಬರಿಯ ಭ್ರಮೆ. ಏನೋ ಧಾರ್ಮಿಕತೆಯ ಭ್ರಾಂತಿಯಿಂದ ರಾಜ್ಯಭೋಗವನ್ನು ತೊರೆದು ಕಾಡಿನಲ್ಲಿ ಅಂಡಲೆ- ಯಬೇಡ. ದೃಷ್ಟವನ್ನು ಬದಿಗೊತ್ತಿ ಎಂಥ ಅದೃಷ್ಟ ? ಅರ್ಥವಿಲ್ಲದ ಮಾತು !" ಪರಮಾಸ್ತಿಕರಾದ ಜಾಬಾಲಿಗಳೂ ಕಪಟನಾಟಕ ಸೂತ್ರಧಾರಿಯ ಇದಿರು ಒಂದು ನಾಟಕವಾಡಿದರು ! ವಸಿಷ್ಠರೂ ರಾಮನ ಬಳಿ ಕಳಕಳಿಯಿಂದ ಕೇಳಿಕೊಂಡರು: "ಕುಮಾರ, ನೀನು ಹೀಗೆ 'ಧರ್ಮ ಧರ್ಮ' ಎಂದು ಕಾಡಿನಲ್ಲಿ ತಿರುಗಿದರೆ ರಾಷ್ಟ್ರ ಅರಾಜಕವಾಗುತ್ತದೆ. ತಲೆಮಾರು-ತಲೆಮಾರುಗಳಿಂದ ನಿನ್ನ ಪೂರ್ವಜರು ಪಾಲಿಸಿಕೊಂಡು ಬಂದ ಪರಂಪರೆ ಒಮ್ಮೆಲೆ ಕಡಿದು ಹೋಗುವುದನ್ನು ನಾವು ಸಹಿಸಲಾರೆವು." ಪೌರರ ಬೇಡಿಕೆಯೂ ಮುನಿಗಳ ಉಪದೇಶವೂ ತಾಯಂದಿರ ಕರುಳಕರೆಯೂ ಯಾವುದೂ ರಾಮನ ನಿರ್ಣಯವನ್ನು ಬದಲಿಸಲಾರದಾಯಿತು ! ದುಃಖಿತನಾದ ಭರತನೆಂದನು: "ರಾಮಚಂದ್ರನು ನನ್ನ ಮೇಲೆ ಪ್ರಸನ್ನನಾಗಿ ಊರಿಗೆ ತೆರಳಲು ಒಪ್ಪುವವರೆಗೆ ನಾನಿಲ್ಲೇ ನಿರಾಹಾರನಾಗಿ ಇದ್ದುಬಿಡುತ್ತೇನೆ. ಜಗದ್ಗುರುವೆ, ಗುರ್ವಾಜ್ಞೆಯನ್ನು ಪಾಲಿಸುವ ಹೊರೆಯನ್ನು ನನ್ನ ಮೇಲೆ ಬಿಡು, ನಾನು ಹದಿನಾಲ್ಕುವರ್ಷ ಕಾಲ ಕಾಡಿನಲ್ಲಿರುತ್ತೇನೆ. ನೀನು ಹಿಂದಿರುಗಿ ರಾಜ್ಯವನ್ನಾಳು." ರಾಮಚಂದ್ರನು ಖಂಡತುಂಡವಾಗಿ ಆದರೂ ನಗುತ್ತಲೆ ಉತ್ತರಿಸಿದನು: "ನನ್ನ ನಿರ್ಣಯದಲ್ಲಿ ಬದಲಾವಣೆ ಸಾಧ್ಯವಿಲ್ಲ, ಭರತ." ಭರತನು ಮತ್ತೂ ಮತ್ತೂ ಪಟ್ಟು ಹಿಡಿದು ರಾಮಚಂದ್ರನು ಮರಳುವಂತೆ ಬಿನ್ನವಿಸಿಕೊಳ್ಳು ತ್ತಿದ್ದ. ಇಷ್ಟರಲ್ಲಿ ಅಲ್ಲಿಗೆ ಕೆಲವು ಮಹರ್ಷಿಗಳು ಚಿತ್ತೈಸಿದರು. ಭಗವತ್ಸಂಕಲ್ಪವನ್ನು ಬಲ್ಲ ಜ್ಞಾನಿಗಳಾದ ಅವರು ಭರತನನ್ನು ಸಮಾಧಾನ ಗೊಳಿಸಿದರು. "ಭರತ, ರಾಮಚಂದ್ರನನ್ನು ಈಗ ನೀನು ಕರೆದುಕೊಂಡು ಹೋಗಲಾರೆ. ಅವನು ನಮಗಾಗಿ ಭವಿಷ್ಯತ್ತಿನ ಹಿತಕ್ಕಾಗಿ ಕಾಡಿನಲ್ಲಿರಬೇಕಾಗಿದೆ. ಕೆಲಸ ನೆರವೇರಿದಾಗ ಅವನು ಅಯೋಧ್ಯೆಗೆ ಬಂದು ನಿಮ್ಮನ್ನು ಸಂತಸಪಡಿಸುವನು." ಆದರೂ ಭರತನಿಗೆ ಸಮಾಧಾನವಿಲ್ಲ. ಅವನು ರಾಮನ ಪಾದಮೂಲದಲ್ಲಿ ಹೊರಳಾಡುತ್ತಿದ್ದ ! ಈ ಸಮಸ್ಯೆಯನ್ನು ಹೇಗಾದರೂ ಬಗೆಹರಿಸುವ ದೃಷ್ಟಿ- ಯಿಂದ ವಸಿಷ್ಠರು ನುಡಿದರು: "ರಾಮಚಂದ್ರ, ನಿನ್ನ ಹೊನ್ನಹಾವುಗೆಗಳನ್ನಾ- ದರೂ ಭರತನಿಗೆ ನೀಡು. ನಿನ್ನ ಪಾದುಕೆಗಳನ್ನು ಸಾಕ್ಷಿಯಾಗಿಟ್ಟುಕೊಂಡು, ಅದರ ಪ್ರತಿನಿಧಿಯಾಗಿ ಭರತ ರಾಜ್ಯವಾಳಲಿ: " ರಾಮಚಂದ್ರನು ಕೂಡಲೆ ತನ್ನ ಪಾದುಕೆಗಳನ್ನು ಕಳಚಿ ಭರತನಿಗೆ ಒಪ್ಪಿಸಿದನು. ಭರತನು ಭಕ್ತಿಯಿಂದ ಅವನ್ನು ತಲೆಯಲ್ಲಿಟ್ಟುಕೊಂಡು ಕೈಮುಗಿದು ಬಿನ್ನವಿಸಿಕೊಂಡ: " ರಾಮಭದ್ರ, ನೀನು ಬರುವವರೆಗೆ ನಾನು ನಗರವನ್ನು ಪ್ರವೇಶಿಸುವುದಿಲ್ಲ; ಮತ್ತು ಹದಿನಾಲ್ಕು ವರ್ಷಗಳು ತುಂಬಿದಾಗಲೂ ನೀನು ಬರದಿದ್ದರೆ ಅಗ್ನಿ ಪ್ರವೇಶ ಮಾಡುತ್ತೇನೆ." 'ಭರತನು ಹೀಗೆ ಎರಡು ವೀರಪ್ರತಿಜ್ಞೆಗಳನ್ನು ಮಾಡಿ, ರಾಮನಿಗೆ ಅಭಿವಂದಿಸಿ ಪರಿವಾರದೊಡನೆ ವಿಷಣ್ಣನಾಗಿ ಮರಳಿದನು. ತನ್ನ ತಾಯಂದಿರನ್ನು ಅಯೋಧ್ಯೆಗೆ ಕಳುಹಿಸಿ ಭರತ ಮಾತ್ರ ನಂದಿಗ್ರಾಮದಲ್ಲೇ ಉಳಿದನು. ಅಲ್ಲಿ ರಾಮನ ಹಾವುಗೆಗಳನ್ನು ಸಿಂಹಾಸನದಲ್ಲಿರಿಸಿ ರಾಜೋಪಚಾರಗಳಿಂದ ಗೌರವಿಸಿದನು. ಹಾವುಗೆಯ ಹಿರಿತನದಲ್ಲಿ ಭರತನು ರಾಜ್ಯಸೂತ್ರವನ್ನು ಕೈಗೆತ್ತಿಕೊಂಡನು ! ಇತ್ತ ಸೀತಾ-ರಾಮರ ಕಾಡಿನ ಜೀವನ ಸುಖಮಯ ವಾಗಿ ಸಾಗಿತ್ತು. ಹೂ-ಹಣ್ಣುಗಳಿಂದ ತೊನೆವ ನಿಸರ್ಗದ ಮಡಿಲಲ್ಲಿ ಅವರು ವಿಹರಿಸುತ್ತಿದ್ದರು. ಹೀಗೆಯೇ ಒಂದು ದಿನ ಸೀತಾ-ರಾಮರು ವಿಶ್ರಮಿಸಿದ್ದರು. ಆಗ ಅಸುರಾವಿಷ್ಟನಾದ ಇಂದ್ರ- ಪುತ್ರನು ಕಾಗೆಯ ರೂಪಿನಿಂದ ಅಲ್ಲಿಗೆ ಬಂದು ಮೆಲ್ಲನೆ ಜಗನ್ಮಾತೆಯ ಮೊಲೆಯನ್ನು ಕುಟುಕಿದನು. ಎಚ್ಚೆತ್ತ ರಾಮಚಂದ್ರ ಕೈಬೀಸಿ ಗದರಿಸಿದರೂ ಈ ಮಾಯಾವಿ ಕಾಗೆ ಆ ತಾಣದಿಂದ ಕದಲಲೇ ಇಲ್ಲ. ಆಗ ರಾಮಚಂದ್ರ ಒಂದು ಹುಲ್ಲುಕಡ್ಡಿಯನ್ನು ಅದರೆಡೆಗೆ ಎಸೆದನು. ಸುಡುತ್ತಿರುವ ಹುಲ್ಲುಕಡ್ಡಿ ಯನ್ನು ಕಂಡು ಹೆದರಿದ ಕಾಕಾಸುರ ಬ್ರಹ್ಮಾದಿಗಳಿಗೆ ಮೊರೆಯಿಟ್ಟನು. ರಾಮನುಬಿಟ್ಟ ಹುಲ್ಲುಕಡ್ಡಿಯನ್ನೇ ಆದರೂ ನಿಗ್ರಹಿಸುವ ಶಕ್ತಿ ತಮಗೆಲ್ಲಿ ? ಎಂದು ಬ್ರಹ್ಮ ರುದ್ರಾದಿಗಳು ಅವನನ್ನು ಗದರಿಸಿ ಕಳುಹಿದರು. ತ್ರೈಲೋಕ್ಯದ ದೇವಾಸುರರೆಲ್ಲ ಕೈ ಬಿಟ್ಟ ಕಾಕಾಸುರ ಕೊನೆಗೆ ರಾಮಚಂದ್ರನಿಗೇ ಶರಣುಬಂದ, ದಯಾಳು ವಾದ ರಾಮಚಂದ್ರ ಅವನನ್ನು ಕೊಲ್ಲದೆ ಒಂದು ಕಣ್ಣನ್ನು ಮಾತ್ರ ಕುರುಡಾಗಿಸಿದನು. ಅಂದಿನಿಂದ ಕಾಗೆಗಳ ಸಂತಾನಕ್ಕೆಯೆ ಒಂದೇ ಕಣ್ಣು ! ದಯನೀಯನಾದ ಈ ಅಸುರನ ಪಾಡನ್ನು ಕಂಡು, ರಾಮಚಂದ್ರ ರಾಕ್ಷಸರ ಕುಲಕೋಟಿಯನ್ನು ಸುಟ್ಟೊಗೆಯಬಲ್ಲ ತನ್ನ ಕುಡಿನೋಟವನ್ನು ಸೀತೆ- ಯಡೆಗೆ ಬೀರಿದನು. ಸೀತೆಯ ಮುಖದಲ್ಲಿ ಮೆಲುನಗು ವಿನ ಕೋಲ್ಮಿಂಚೊಂದು ಹರಿದು ಮಾಯವಾಯಿತು! ಅರಣ್ಯ ಕಾಂಡ ಪುಲಸ್ತ್ಯವಂಶದಲ್ಲಿ ಮೂಡಿಬಂದ ಧೂಮಕೇತು ಪುಲಸ್ತ್ಯರು ಬ್ರಹ್ಮದೇವರ ಮಾನಸಪುತ್ರರು. ಅವರು ಮೇರುಗಿರಿಯ ಕಡೆಯಲ್ಲಿ ತಪೋನಿರತ ರಾಗಿದ್ದರು. ಆ ಪ್ರದೇಶ ರಮ್ಯವಾಗಿತ್ತು; ವಿಹಾರ ಯೋಗ್ಯವಾಗಿತ್ತು. ಅಪ್ಸರೆಯರು ಅಲ್ಲಿ ಬಂದು ಹಾಡುತ್ತಿದ್ದರು, ನಲಿಯುತ್ತಿದ್ದರು, ಮಹರ್ಷಿಗಳ ತಪಸ್ಸಿಗೆ ಅದರಿಂದ ತಡೆಯುಂಟಾಯಿತು. ಅವರು ಕೋಪಗೊಂಡು ನುಡಿದರು: " ಯಾವ ಹೆಣ್ಣು ಇಲ್ಲಿ ಬಂದು ನನ್ನನ್ನು ಕಾಣುವಳೋ ಅವಳು ಗರ್ಭಿಣಿಯಾಗಲಿ." ಹೆದರಿದ ಹರೆಯದ ಕನ್ನೆಯರು ಮತ್ತೆ ಅಲ್ಲಿಗೆ ಕಾಲಿಡಲಿಲ್ಲ. ರಾಜರ್ಷಿ ತೃಣಬಿಂದುವಿನ ಮಗಳಿಗೆ ಮಾತ್ರ ಈ ಸಂಗತಿ ತಿಳಿದಿರಲಿಲ್ಲ. ಅವಳು ಒಮ್ಮೆ ಆ ಕಡೆ ಬಂದವಳು ಮಹರ್ಷಿಯನ್ನು ನೋಡಿ ದಳು. ಏಕೋ ಮೈ ಬಿಳುಪೇರಿತು ! ತನ್ನ ಜವ್ವನದ ಅಚುಂಬಿತತೆ ಚ್ಯುತವಾದಂತೆ ಅವಳಿಗನ್ನಿಸಿತು ! ಪಾಪ ! ಆ ಮುಗುದೆಗೆ ಒಂದೂ ಅರಿವಾಗಲಿಲ್ಲ. ತೃಣಬಿಂದುವಿಗೆ ಪ್ರಸಂಗದ ಅರಿವಾಯಿತು. ಅವನು ಪುಲಸ್ತ್ಯರನ್ನು ಕಂಡು ತನ್ನ ಮಗಳ ಕೈಹಿಡಿ- ವಂತೆ ಕೇಳಿಕೊಂಡನು. ಪುಲಸ್ತ್ಯರು ಒಪ್ಪಿದರು. ಮದುವೆಗೆ ಮುಂಚೆಯೆ ಚಕ್ಷು ಪ್ರೀತಿಯಿಂದಲೆ ಗರ್ಣಿಣಿಯಾದ ಈ ಹೆಣ್ಣು ಒಬ್ಬ ತೇಜಸ್ವಿ ಕುಮಾರ- ನನ್ನು ಹೆತ್ತಳು. ಪುಲಸ್ತ್ಯರು ಮಗನಿಗೆ ವಿಶ್ರವಸನೆಂದು ಹೆಸರಿಟ್ಟರು. ವಿಶ್ರವಸನೂ ತಂದೆಯಂತೆ ತಪಸ್ವಿಯಾಗಿ ಬೆಳೆದನು. ಅವನಿಗೆ ಭರದ್ವಾಜಮುನಿಗಳ ಮಗಳನ್ನು ಕೊಟ್ಟು ಮದುವೆಯಾಯಿತು. ಅವಳಿಂದ ವಿಶ್ರವಸನಿಗೆ ವೈಶ್ರವಣನೆಂಬ ಮಗನು ಜನಿಸಿದನು. ಅವನಿಗೆ ಬ್ರಹ್ಮಪ್ರಸಾದದಿಂದ ಉತ್ತರದಿಕ್ಕಿನ ಆಧಿಪತ್ಯವೂ, ಪುಷ್ಪಕವಿಮಾನವೂ ದೊರಕಿತು. ಇನ್ನೊಂದೆಡೆ ಬ್ರಹ್ಮದೇವರು ಹೇತಿ ಎಂಬ ರಾಕ್ಷಸ ನನ್ನುಸೃಷ್ಟಿಸಿದರು. ಅವನ ಮಗ ವಿದ್ಯುತ್ಯೇಶ. ವಿದ್ಯುತ್ಯೇಶನ ಮಗ ಸುತೇಶ, ಸುತೇಶನಿಗೆ ಮಾಲ್ಯವಂತ, ಸುಮಾಲ, ಮಾಲಿ ಎಂದು ಮೂವರು ಮಕ್ಕಳು. ಅವರು ಮೂವರೂ ಬ್ರಹ್ಮವರದಿಂದ ಅವಧ್ಯರಾಗಿದ್ದರು. ಬ್ರಾಹ್ಮಣ ಹಿಂಸೆ ಅವರ ಕುಲವ್ರತ. ಲಂಕೆ ಅವರ ರಾಜಧಾನಿ. ಈ ಮೂವರಿಂದ ಮೂರು ಲೋಕವೂ ಬೆದರಿತು. ದೇವತೆಗಳು ಶಂಕರನನ್ನು ಶರಣು ಹೋದರು. ಬಂದ ದೇವತೆಗಳನ್ನು ಶಂಕರನು ಸಂತೈಸಿದನು. " ಬ್ರಹ್ಮನ ವರವನ್ನು ಮೀರಿ ನಾನು ಅವರನ್ನು ಕೊಲ್ಲಲಾರೆ. ಈಗ ನಮಗೆ ಉಳಿದಿರುವುದು ಒಂದೇ ದಾರಿ. ಶ್ರೀ ಹರಿಗೆ ಶರಣಾಗುವುದು. ಬನ್ನಿ, ಅವನು ನಮಗೆ ಒಳಿತನ್ನುಂಟುಮಾಡುವನು." ಕ್ಷೀರಸಾಗರದ ತಡಿಯಲ್ಲಿ ದೇವತೆಗಳು ಶ್ರೀಹರಿಯನ್ನು ಬಿನ್ನವಿಸಿಕೊಂಡರು: "ಜಗನ್ನಾಥ ! ಸುಕೇಶನ ಮಕ್ಕಳಿಂದ ನಮ್ಮನ್ನು ಪಾರುಗಾಣಿಸು. ಜಗತ್ತನ್ನು ಪ್ರಳಯದ ಬಾಗಿಲಿಂದ ತಪ್ಪಿಸು. " ದೈತ್ಯರನ್ನು ಸಂಹರಿಸಲು ಭಗವಂತನು ಗರುಡನನ್ನೇರಿ ಬಂದನು. ರಕ್ಕಸರೆಲ್ಲ ಯುದ್ಧಕ್ಕೆ ಅಣಿಯಾಗಿ ಬಂದೆರಗಿದರು. ಬೆಂಕಿಯಲ್ಲಿ ಬಿದ್ದ ಪತಂಗಗಳಂತೆ ಅವರ ಪಾಡಾಯಿತು. ಅಂದು, ಮಾಲಿ ತೋರಿದ ಕೆಚ್ಚು, ದೇವತೆಗಳೂ ಅಚ್ಚರಿಪಡುವಂಥದು. ಆದರೆ ಶ್ರೀಹರಿಯ ಮುಂದೆ ಯಾರ ಕೆಚ್ಚುಏನು ನಡೆದೀತು ? ಮಾಲಿ ಮಡಿದುರುಳಿದನು . ಸುಮಾಲಿ ಮತ್ತು ಮಾಲ್ಯವಂತ ತಲೆತಪ್ಪಿಸಿ ಕೊಂಡರು. ದೇವತೆಗಳು ನೆಮ್ಮದಿಯ ನಿಟ್ಟುಸಿರುಗರೆದರು. ಯುದ್ಧದಲ್ಲಿ ಓಡಿಹೋದ ಸುಮಾಲಗೆ ಮನಸ್ಸಿನಲ್ಲಿ ಕಿಚ್ಚು ತಾಂಡವವಾಡುತ್ತಿತ್ತು. ದೇವತೆಗಳನ್ನು ಹೇಗಾದರೂ ಸದೆಬಡಿಯ -ಬೇಕೆಂದು ಪಣತೊಟ್ಟನು. ಅದಕ್ಕೆಂದೇ ತನ್ನ ಮಗಳು ಕೈಕಸಿಯನ್ನು ಪಾತಾಳದಿಂದ ಕರೆದುಕೊಂಡು ಬಂದು ವಿಶ್ರವಸನ ಬಳಿ ಬಿಟ್ಟನು. ಕೈಕಸಿಯ ಯೌವನ-ಲಾವಣ್ಯ ತಾಪಸನ ಮನಸ್ಸಿಗೆ ನಾಟಿತು. ವಿಶ್ರವಸ-ಕೈಕಸಿಯರು ಜತೆಯಾದರು. ಮೊದಲು ಹತ್ತು ತಲೆಯ ಮಗನೊಬ್ಬ ಹುಟ್ಟಿದ. ಅನಂತರ ಕುಂಭಕರ್ಣ. ಮೂರನೆಯವಳು ಶೂರ್ಪಣಖೆ, ಕೊನೆಯವನೆ ಪುಣ್ಯಾತ್ಮನಾದ ವಿಭೀಷಣ. ತನ್ನ ಸವತಿಯ ಮಗ ಕುಬೇರನ ಸಿರಿಯನ್ನು ಕಂಡು ಕೈಕಸಿಗೆ ಕಿಚ್ಚಾ ಯಿತು. ಅವಳು ತನ್ನ ಮಕ್ಕಳನ್ನು ತಪಸ್ಸಿಗೆ ಪ್ರಚೋದಿಸಿದಳು. ಮೂವರೂ ಸೋದರರು ಸಾವಿರ-ಸಾವಿರ ವರ್ಷಕಾಲ ತಪಸ್ಸನ್ನಾಚರಿ- ಸಿದರು. ದಶಕಂಠನು ತನ್ನ ಒಂದೊಂದೇ ತಲೆಯನ್ನು ಕತ್ತರಿಸಿ ಉರಿಯುವ ಅಗ್ನಿಯಲ್ಲಿ ಆಹುತಿಯಾಗಿತ್ತನು. ತಪಸ್ಸು ಆರಂಭವಾಗಿ ಸುಮಾರು ಹತ್ತುಸಾವಿರ ವರ್ಷಗಳು ಕಳೆದವು. ದಶಾನನನು ಒಂಬತ್ತು ತಲೆಗಳನ್ನೂ ಆಹುತಿ ಕೊಟ್ಟಾಗಿತ್ತು. ಇದೀಗ ಹತ್ತನೆಯ ತಲೆಯನ್ನೂ ಬಲಿ ಕೊಡುವ ಕಾಲ. ಒಮ್ಮೆಲೆ ಬ್ರಹ್ಮದೇವರು ಕಾಣಿಸಿಕೊಂಡು "ಮೆಚ್ಚಿದೆ, ಬೇಕಾದ ವರವನ್ನು ಕೇಳು" ಎಂದು ಮುಗುಳುನಕ್ಕರು. 'ದೇವಾಸುರರೋ-ಯಕ್ಷರಾಕ್ಷಸರೋ-ಪಕ್ಷಿಪನ್ನಗಗಳೋ ತನ್ನನ್ನು ಕೊಲ್ಲಬಾರದು. ಮತ್ತು ಕಳೆದು ಹೋದ ಒಂಬತ್ತು ತಲೆಗಳೂ ಮತ್ತೆ ಚಿಗುರಬೇಕು.' ಎಂದು ರಾವಣನು ಬೇಡಿಕೊಂಡನು. ಭಗವತ್ಪರಾಯಣ ನಾದ ವಿಭೀಷಣನು 'ತನ್ನ ಮನಸ್ಸು ಧರ್ಮದಿಂದ ವಿಚಲಿತವಾಗದಿರಲಿ' ಎಂದು ಕೇಳಿಕೊಂಡನು. ವಾಗ್ದೇವತೆಯಿಂದ ವಾಕ್-ಶಕ್ತಿಯನ್ನು ಕಳೆದುಕೊಂಡ ಕುಂಭಕರ್ಣನು 'ನಿದ್ರಾಸುಖ ಬಹುವಾಗಿರಲಿ' ಎಂದು ಕೇಳಿಕೊಂಡನು ! ವರ ದೊರಕಿತು. ಇನ್ನೇತರ ಭಯ ? ರಾವಣನು ತನ್ನ ಪೂರ್ವಜನಾದ ಕುಬೇರನನ್ನು ಓಡಿಸಿ ಲಂಕೆಯಲ್ಲಿ ಬಂದು ನೆಲಸಿದನು. ಪ್ರಹಸ್ತ ಸುಮಾಲೆಗಳ ರಾಜನೀತಿ ರಾವಣನ ರಾಜತ್ವಕ್ಕೆ ಸಾಕ್ಷಿಯನ್ನಿತ್ತಿತು. ಮಯಾಸುರನಿಗೆ ಒಬ್ಬ ಮಗಳಿದ್ದಳು. ಅವಳ ಹೆಸರು ಮಂಡೋದರಿ. ಅವಳನ್ನು ದಶಾನನ ಮದುವೆಯಾದನು. ಈ ದಾಂಪತ್ಯದ ಫಲವಾಗಿ ಮೇಘನಾದ ಜನಿಸಿದನು. ನಿದ್ರಾಳುವಾದ ಕುಂಭಕರ್ಣ ವಿದ್ಯುಜ್ನಿಹ್ವೆ ಎಂಬವಳನ್ನು ಮದುವೆಯಾದನು. ಪರಮ ಭಾಗವತನಾದ ವಿಭೀಷಣನು ಗಂಧರ್ವಕನ್ನೆಯಾದ ಸುರಮೆಯನ್ನು ವರಿಸಿದನು. ಗೋ ಹಿಂಸೆ-ಬ್ರಾಹ್ಮಣ ಹಿಂಸೆ ದಶಾನನನ ನಿತ್ಯ ಕಾರ್ಯ, ಮೂರು ಲೋಕವೂ ಇವನಿಗೆ ಕಪ್ಪವನ್ನೊಪ್ಪಿಸಿತು. ಕುಬೇರನನ್ನೂ ಸೋಲಿಸಿ ಅವನ ಪುಷ್ಪಕವನ್ನು ಲಂಕೆಗೆ ಒಯ್ದನು. ದಶಕಂಠನಿಗೆ ಬಲು ಹೆಮ್ಮೆ, ಕೈಲಾಸವನ್ನಾದರೂ ನೆಗೆದೇನು ಎನ್ನುವ ಹಮ್ಮು ! ಒಮ್ಮೆ ಹಾಗೆ ಮಾಡಿಯೂ ಮಾಡಿದನು. ಆದರೆ ಕೈಸಾಗದೆ ಮೈ ಮುರಿದುಕೊಂಡು ಅಯ್ಯೋ ಎಂದು ಚೀರಿದನು. ಅಂದಿನ ಆ ವೀರ ರವವನ್ನು ಕೇಳಿದ ಜನ, ಅವನನ್ನು 'ರಾವಣ' ಎಂದು ಕರೆದರು. ಲೋಕವನ್ನು ಗೋಳಿಡಿಸುತ್ತಿದ್ದ ಅವನಿಗೆ ಆ ಹೆಸರು ಸಾರ್ಥಕವಾಗಿತ್ತು. ಅವನೊಮ್ಮೆ ಹಿಮಾಲಯ ಪ್ರಾಂತದಲ್ಲಿ ವೇದವತಿ ಎಂಬ ಸುಂದರಿಯನ್ನು ಕಂಡನು. ಇದು ದೇವಮಾಯೆ ಎಂದು ಅವನಿಗೇನು ಗೊತ್ತು ! ಆ ರೂಪಶ್ರೀಯನ್ನು ಕಂಡ ರಾವಣನಿಗೆ ಸುಮ್ಮನಿರಲಾಗಲಿಲ್ಲ. ಅವನು ಅವಳನ್ನು ಬಲಾತ್ಕರಿಸಹೋದನು. ಆದರೆ ಅವಳು ರಾವಣ- ನಿಂದ ದೂರ ಸರಿದು ಬೆಂಕಿಯನ್ನು ಹೊಕ್ಕಳು ! ಆಗ ಅವಳಾಡಿದ ಮಾತು ರಾವಣನ ಕಿವಿಯಲ್ಲಿ ಕರ್ಕಶವಾಗಿ ಗುಂಯ್ ಗುಟ್ಟಿತು. "ನಿನ್ನ ಸಾವಿಗಾಗಿ ನಾನು ಇನ್ನೊಮ್ಮೆ ಹುಟ್ಟಿ ಬರಲಿದ್ದೇನೆ." ರಘುವಂಶದ ಪೂರ್ವರಾಜನಾದ ಅನರಣ್ಯನಿಗೂ ರಾವಣನಿಗೂ ಯುದ್ಧ ನಡೆದಾಗ ಅನರಣ್ಯನಾಡಿದ ಮಾತೂ ಅವನ ಮನಸ್ಸನ್ನು ಕುಡುಕುತ್ತಿತ್ತು ! "ನನ್ನ ವಂಶದಲ್ಲಿ ಜನಿಸಿಬಂದ ಶ್ರೀಹರಿ ನಿನ್ನ ಸಂಹಾರಕನಾಗಲಿ." ಆದರೂ ರಾವಣನ ತ್ರಿಲೋಕ ವಿಜಯ ಯಶಸ್ವಿಯಾಗಿಯೇ ನಡೆಯಿತು. ಏಳು ದಿನದ ಕಾಳಗದಲ್ಲಿ ಯಮರಾಜನೂ ಸೋತುಹೋದ. ನಾಗರೆಲ್ಲ ಶರಣಾದರು. ವರುಣನ ಮಕ್ಕಳೂ ಸೋತುಹೋದರು. ನಿವಾತಕವಚರೆಂಬ ದೈತ್ಯರ ಗೆಳೆತನ ಬೇರೆ ದೊರಕಿತು. ಅಕ್ಷೋಹಿಣಿ ಸಂಖ್ಯೆಯಲ್ಲಿ ಸೇನೆ, ಕುಂಭಕರ್ಣ-ಮೇಘುನಾದನಂಥವರ ಸಹಕಾರ, ಕೇಳುವುದೇನು ? ದೇವತೆಗಳೆಲ್ಲ ಸೋತು ಶರಣಾದರು ! ರಾವಣನು ಮಾಡಿದ ಅವಾಂತರಗಳು ಒಂದೆರಡೇನಲ್ಲ. ಅವನು ಗೆದ್ದ ಕತೆಗಳೂ ವಿಚಿತ್ರ ! ಸೋತ ಕತೆಗಳೂ ವಿಚಿತ್ರ ! ಒಮ್ಮೆ ಸಾವಿರ ತೋಳಿನ ಕಾರ್ತವೀರ್ಯಾರ್ಜುನನೊಡನೆ ಈ ಇಪ್ಪತ್ತು ತೋಳಿನ ರಾವಣ ಕದನ ಹೂಡಿದ್ದ. ಕಾರ್ತವೀರ್ಯನೋ ನಿರ್ದಾಕ್ಷಿಣ್ಯವಾಗಿ ಈ ತ್ರಿಲೋಕ ವಿಜಯನನ್ನು ಕಟ್ಟಿ ಕಾರಾಗಾರದಲ್ಲಿ ಬಂಧಿಸಿಬಿಟ್ಟ. ಕೊನೆಗೆ ಅಜ್ಜ ಪುಲಸ್ತ್ಯರು ಬಂದು ಈ ಮೊಮ್ಮಗನನ್ನು ಬಿಡಿಸಬೇಕಾಯಿತು ! ವಾಲಿಯ ಕೈಯಲ್ಲಿ ರಾವಣಪಟ್ಟ ಪಾಡು ಇನ್ನೂ ವಿಚಿತ್ರ. ಸಂಧ್ಯಾವಂದನೆಗೆಂದು ಹೊರಟ ವಾಲಿಯನ್ನು ರಾವಣ ಯುದ್ಧಕ್ಕೆ ಕರೆದನು. ಈ ಮಹಾವೀರನಿಗೆ ರಾವಣನು ಯಾವ ಎಣೆ ? ಅವನು ರಾವಣನನ್ನು ಕಂಕುಳದಲ್ಲಿರಿಸಿಕೊಂಡೇ ತನ್ನ ಸಂಧ್ಯಾವಂದನೆಯನ್ನು ಪೂರಯಿಸಿದನು. ಒಮ್ಮೆ ಇದೇ ರಾವಣನು ಬಲಿಯನ್ನು ಗೆಲ್ಲಹೋಗಿ, ಬಲಿಯ ಬಾಗಿಲು ಕಾಯುವ ಶ್ರೀಹರಿಯ ಒದೆತವನ್ನು ತಿಂದು, ಸಾವಿರ-ಸಾವಿರ ಯೋಜನ ದೂರ ಬಿದ್ದು ಒದ್ದಾಡಿದ್ದ ! ಆದರೂ ರಾವಣನೇನು ಸಾಮಾನ್ಯನಲ್ಲ. ಕೆಲವು ಕಾರಣಗಳಿಂದ ಕೆಲ ವೆಡೆ ಅವನಿಗೆ ಪರಾಭವ ಒದಗಿರಬಹುದು. ಆದರೆ ಶ್ರೀಹರಿಯಲ್ಲದೆ ಮತ್ತಾರಿಂದಲೂ ಅವನನ್ನು ಕೊಲ್ಲುವುದು ಸಾಧ್ಯವಾಗಲಾರದು. ರಾವಣನೆಂದರೆ ದೇವತೆಗಳಿಗೂ ಭಯ, ಇವನೆದುರು ಗಾಳಿ ಮೆಲ್ಲಮೆಲ್ಲನೆ ಸುಳಿಯುತ್ತಿತ್ತು ! ಸೂರ್ಯನೂ ಕೂಡ ಇವನ ರಾಜ್ಯದಲ್ಲಿ ತನ್ನ ಬಿಸಿಲನ್ನು ತಂಪುಗೊಳಿಸಿದ್ದ ! ಬೆಂಕಿ ಇವನ ಒಪ್ಪಿಗೆಯಿಲ್ಲದೆ ಸುಡುವ ಸಾಹಸವನ್ನೆ ಮಾಡುತ್ತಿರಲಿಲ್ಲ ! ಒಟ್ಟಿನಲ್ಲಿ ರಾವಣನ ಹುಬ್ಬಿನ ಕುಣಿತಕ್ಕೆ ಮೂರು ಲೋಕವೂ ತಾಳ ಹಾಕುತ್ತಿತ್ತು ! ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಸುಂದರಿಯರು ಅವನ ಅಂತಃಪುರವನ್ನು ಸೇರುತ್ತಿದ್ದರು. ಪ್ರಪಂಚದ ಅಪೂರ್ವ ಯೌವನವೆಲ್ಲ ಈ ನಿರ್ದಯಿಯ ಇದಿರು ಬಾಡಿಹೋಗುತ್ತಿತ್ತು ! ಅವನ ಕ್ರೌರ್ಯಕ್ಕೆ ಎಣೆಯೆಂಬುದೇ ಇಲ್ಲ. ತಂದೆ-ತಾಯಂದಿರು ಬೊಬ್ಬಿಡುತ್ತಿರುವಂತೆ ಮಕ್ಕಳನ್ನು ಕೊಂದುಬಿಡುತಿದ್ದ. ಹರೆಯದ ಹೆಣ್ಣು ಗಂಡು ಬೆರತಾಗಲೆ ಬಂದು ಹೆಣ್ಣನ್ನು ಕಸಿದುಕೊಳ್ಳುತಿದ್ದ. ಯಾಗಕ್ಕಾಗಿ ಸಾಕಿದ ಗೋವು- ಗಳನ್ನು ರಾಕ್ಷಸರಿಗೆ ಉಣಬಡಿಸುತ್ತಿದ್ದ. ಇದಕ್ಕಿಂತ ಹೆಚ್ಚಿನ ಘಾತಕ- ತನವಾದರೂ ಏನಿದೆ ! ರಾವಣನ ಪೀಡೆ ಚಿತ್ರಕೂಟದಲ್ಲಿರುವ ಮುನಿಗಳವರೆಗೂ ಹರಡಿತ್ತು. ಈ ನೃಶಂಸನ ಅಕೃತ್ಯಗಳನ್ನು ಕಂಡು ಉರಿದೇಳುತ್ತಿದ್ದ ರಾಮಚಂದ್ರನ ಮನಸ್ಸು, ಈ ಮುನಿಗಳ ಪಾಡನ್ನು ಕಂಡು ಕರಗುತ್ತಿತ್ತು. ರಾವಣ ಸಂಹಾರಕೆ ಪೂರ್ವರಂಗವೋ ಎಂಬಂತೆ ರಾಮಚಂದ್ರನು ದಂಡಕಾರಣ್ಯದೆಡೆಗೆ ತೆರಳಿದನು. ಭಕ್ತ ವೈಕುಂಠಕ್ಕೆ, ಭಗವಂತ ಪಂಚವಟಿಗೆ ಚಿತ್ರಕೂಟದಿಂದ ತೆರಳಿದ ರಾಮಚಂದ್ರ ನೇರಾಗಿ ಅತ್ರಿ ಮಹರ್ಷಿಯ ಆಶ್ರಮಕ್ಕೆ ಬಂದನು. ಜಗನ್ಮಾತಾಪಿತೃಗಳನ್ನು ಕಂಡು ಅತ್ರಿ-ಅನಸೂಯೆ ಯರು ಸಂತಸಗೊಂಡು ಪೂಜಿಸಿದರು. ಅವರ ಪೂಜೆಯನ್ನು ಕೈಕೊಂಡು ರಾಮಚಂದ್ರ ದಂಡಹೆಯನ್ನು ಪ್ರವೇಶಿಸಿದನು. ಭಗವದ್ದರ್ಶನವನ್ನು ಪಡೆದ ದಂಡಕಾರಣ್ಯದ ಮುನಿಗಳ ಸಂತಸಕ್ಕೆ ಪಾರವೇ ಇಲ್ಲ. ಎಲ್ಲ ಮುನಿಗಳೂ ಭಕ್ತಿಗದ್ಗದರಾಗಿ ರಾಮಚಂದ್ರನನ್ನು ಪೂಜಿಸಿದರು. ರಾವಣನಿಂದ ಜಗತ್ತನ್ನು ಪಾರು- ಗಾಣಿಸು ಎಂದು ಬೇಡಿಕೊಂಡರು. ಒಂದುದಿನ ರಾಮಚಂದ್ರ ಶರಭಂಗಾಶ್ರಮಕ್ಕೆ ತೆರಳಿದನು. ರಾಮನ ದರ್ಶನಕ್ಕಾಗಿಯೇ ಜೀವಹಿಡಿದಿದ್ದ ಜೀರ್ಣಾಂಗನಾದ ಆ ಮುನಿಯು ರಾಮಚಂದ್ರನನ್ನು ಕಂಡು ಪರಮಾನಂದದಿಂದ ಒಂದು ಕ್ಷಣ ತನ್ನ ಆಶ್ರಮದಲ್ಲಿ ನಿಲ್ಲುವಂತೆ ವಿಜ್ಞಾಪಿಸಿಕೊಂಡನು. ಭಕ್ತವತ್ಸಲನಾದ ರಾಮನು ಒಪ್ಪಿದನು. ಅವನೆದುರಿನಲ್ಲಿ ಈ ಮುನಿಯು ತನ್ನ ಜೀರ್ಣ ದೇಹವನ್ನು, ಮಂತ್ರಪೂತವಾದ ಹವಿಸ್ಸಿನಂತೆ ಅಗ್ನಿಗರ್ಪಿಸಿದನು. ಶರಭಂಗನ ಆತ್ಮ ಪರಮ ಪದವಿಯನ್ನು ಸೇರಿತು. ರಾಮಚಂದ್ರ ಸೀತಾ-ಸೌಮಿತ್ರಿಯರೊಡನೆ ಮತ್ತೊಂದು ದಟ್ಟಡವಿ- ಯನ್ನು ಹೊಕ್ಕನು. ಅಲ್ಲಿ ಇವರಿಗೆ ವಿರಾಧನು ಕಾಣಿಸಿಕೊಂಡನು. ಶೂಲ ಧಾರಿಯಾದ ಈ ರಾಕ್ಷಸನು ಸೀತೆಯನ್ನು ಎತ್ತಿಕೊಂಡು ಆಕಾಶಕ್ಕೆ ನೆಗೆದನು. ಇದನ್ನು ಕಂಡ ಲಕ್ಷ್ಮಣನು ಅವನೆಡೆಗೆ ಬಾಣಗಳನ್ನೆಸೆದನು. ಅದಕ್ಕೆ ಪ್ರತಿಯಾಗಿ ರಾಕ್ಷಸನು ತನ್ನ ಶೂಲವನ್ನೇ ಲಕ್ಷ್ಮಣನ ಮೇಲೆ ಎಸೆದನು. ಆಗ ರಾಮಚಂದ್ರ ತನ್ನೆರಡು ಬಾಣಗಳಿಂದ ಆ ಶೂಲವನ್ನು ತುಂಡರಿಸಿದನು. ಆಗ ವಿರಾಧ ರಾಕ್ಷಸನು ರಾಮ-ಲಕ್ಷ್ಮಣರಿಬ್ಬರನ್ನೂ ತನ್ನ ಹೆಗಲ ಮೇಲಿರಿಸಿಕೊಂಡು ಹೋಗತೊಡಗಿದನು. ರಾಮ-ಲಕ್ಷ್ಮಣ ರಿಗೆ ಸರಿಯಾದ ಅವಕಾಶ ದೊರೆತಂತಾಯಿತು. ಅವರು ತಮ್ಮ ಖಡ್ಗಗಳಿಂದ ಅವನ ಎರಡೂ ತೋಳುಗಳನ್ನು ಕತ್ತರಿಸಿದರು. ರಾಮನ ಬಾಣದ ಪೆಟ್ಟಿನಿಂದ ವಿರಾಧನ ಪ್ರಾಣಪಕ್ಷಿ ಹಾರುವುದ- ರಲ್ಲಿತ್ತು. ಅಷ್ಟರಲ್ಲಿ ಅವನು ಕೈಮುಗಿದು ನುಡಿದನು: " ರಾಮಚಂದ್ರ! ನೀನು ಭಗವದ್ವಿಭೂತಿ ಎಂಬುದನ್ನು ಬಲ್ಲೆ. ನಾನು ನಿನ್ನ ದಾಸನಾದ ತುಂಬುರು. ಒಮ್ಮೆ ಊರ್ವಶಿಯ ಸಂಗಮಾಡಿದ್ದಕ್ಕಾಗಿ ಕುಬೇರ ನನಗೆ ಈ ಶಾಪವಿತ್ತನು. ಅದರಿಂದ ಈ ರಾಕ್ಷಸನ ಜನ್ಮ ನನಗೆ ಬಂತು. ನಿನ್ನ ಪ್ರಸಾದದಿಂದ ಅದು ಪರಿಹಾರವಾದಂತಾಯಿತು. ನಿನಗೆ ಜಯವಾಗಲಿ. " ವಿರಾಧನ ದೇಹವನ್ನು ಲಕ್ಷ್ಮಣನು ಒಂದು ಬಿಲದೊಳಗೆ ತುರುಕಿದನು. ಅನಂತರ ಮೂವರೂ ಮುಂದೆ ಸಾಗಿದರು. ದಾರಿಯುದ್ದಕ್ಕೂ ಮುನಿಗಳು ರಾವಣನ ಪಡೆಯ ಪೀಡೆಗಳಿಂದ ತಮ್ಮನ್ನು ಉಳಿಸುವಂತೆ ಬೇಡಿಕೊಳ್ಳುತ್ತಿದ್ದರು. ಅವರೆಲ್ಲರಿಗೂ ಅಭಯವನ್ನಿತ್ತು ರಾಮಚಂದ್ರ ಮುಂದೆ ಸಾಗುತ್ತಲಿದ್ದ. ದಾರಿಯಲ್ಲಿ ಸುತೀಕ್ಷ್ಣ ಮಹರ್ಷಿಯ ಆಶ್ರಮ ಎದುರಾಯಿತು. ಎಲ್ಲರೂ ಅಲ್ಲಿ ತಂಗಿದ್ದು, ಮುಂದೆ ಪಯಣವನ್ನು ಬೆಳೆಸಿದರು. ದಾರಿಯಲ್ಲಿ ಹಾಸ್ಯಕ್ಕಾಗಿ ಸೀತೆ ರಾಮಚಂದ್ರನನ್ನು ಪ್ರಶ್ನಿಸಿದಳು : "ರಾಮಭದ್ರ, ರಾಜ್ಯವನ್ನು ತ್ಯಾಗಮಾಡಿ, ಮುನಿಗಳಂತೆ ಬಾಳುವ ನಿನಗೆ ಈ ರಾಕ್ಷಸರನ್ನು ಕೊಲ್ಲುವ ಗೋಜೇಕೆ ? ತಾಪಸ ಜೀವನಕ್ಕೆ ಅದು ವಿರುದ್ಧವಲ್ಲವೆ ? " ರಾಮಚಂದ್ರನೂ ಅಷ್ಟೇ ಮೃದುವಾಗಿ ಉತ್ತರಿಸಿದನು : " ಜಾನಕಿ, ಬೆಂಕಿಗೆ ಸುಡುವುದು ಹೇಗೆ ಧರ್ಮವೊ ಹಾಗೆ ದುಷ್ಟನಿಗ್ರಹ ಕ್ಷತ್ರಿಯರ ಸ್ವಭಾವ. ಅದಕ್ಕೆ ರಾಜತ್ವದ-ಸಿಂಹಾಸನದ ಮುದ್ರೆ ಬೇಕಾಗಿಲ್ಲ." ಎದುರಿನಲ್ಲಿ ರಾಮ, ಮಧ್ಯದಲ್ಲಿ ಸೀತೆ, ಅವಳ ಹಿಂದೆ ಲಕ್ಷ್ಮಣ, ಅವನ ಹಿಂದೆ ಮುನಿಗಳ ಗುಂಪು, ಹೀಗೆ ಸಾಗಿತ್ತು ಪಯಣ. ಸಾಯಂಕಾಲದ ಹೊತ್ತಿಗೆ ಎಲ್ಲರೂ ಪಂಚಸರಸ್ಸು ಎಂಬ ತಟಾಗದ ಬಳಿಗೆ ಬಂದರು. ಅದೊಂದು ವಿಚಿತ್ರವಾದ ಕೆರೆ. ಐದು ಜನ ಅಪ್ಸರೆಯರೊಡನೆ ಮದಕರ್ಣಿ ಎಂಬ ಮುನಿ ಅದರಲ್ಲಿ ವಾಸವಾಗಿದ್ದನು. ಅಪ್ಸರೆಯರ ಗಾನದ ಹೊನಲು ಯಾವಾಗಲೂ ಕೆರೆಯಮೇಲೆ ಕೇಳಬರುತ್ತಿತ್ತು. ರಾಮಚಂದ್ರ ಅದನ್ನುಕಂಡು ಅಚ್ಚರಿಗೊಂಡನು. ಹೀಗೆ ಒಂದೊಂದೇ ಆಶ್ರಮದಲ್ಲಿ ಒಂದು ತಿಂಗಳು, ಎರಡು ತಿಂಗಳು ವಾಸಿಸುತ್ತ ಸುಖವಾಗಿ ಕಾಲವನ್ನು ಕಳೆಯುತ್ತಿದ್ದ ಅವರಿಗೆ ತಮ್ಮ ವನವಾಸದ ಅವಧಿಯ ಒಂಬತ್ತು ವರ್ಷಗಳು ಬಹು ಬೇಗನೆ ಕಳೆದು ಹೋದವು. ಒಂದು ದಿನ ರಾಮಚಂದ್ರ ಅಗಸ್ತ್ಯರ ಆಶ್ರಮಕ್ಕೆ ಬಂದನು. ಅಗಸ್ತ್ಯರಿಗೆ ಜಗತ್ಪ್ರಭು ತನ್ನ ಎಲೆಮನೆಗೆ ಬಂದುದು ಎಲ್ಲಿಲ್ಲದ ಸಂತೋಷ. 'ಅವರು ಸೀತಾ-ರಾಮನನ್ನೂ ಲಕ್ಷ್ಮಣನನ್ನೂ ಪರಿಪರಿಯಾಗಿ ಸತ್ಕರಿಸಿದರು. ಇಂದ್ರನು ಅವರ ಬಳಿ ಇಟ್ಟಿದ್ದ ವೈಷ್ಣವ ಧನುಸ್ಸನ್ನೂ ಬಾಣ-ಬತ್ತಳಿಕೆ ಗಳನ್ನೂ ರಾಮನಿಗೆ ಅರ್ಪಿಸಿ ದರು. ರಾಮನು ಅವನ್ನು ಸ್ವೀಕರಿಸಿ ಪಂಚವಟಿಯ ಕಡೆಗೆ ತೆರಳಿದನು. ಅಲ್ಲಿ ಜಟಾಯುವೆಂಬ ಪಕ್ಷಿರಾಜನ ಪರಿಚಯವಾಯಿತು. ಅವನು ತನ್ನ ಕಥೆಯನ್ನು ಪ್ರಭುವಿನ ಬಳಿ ನಿವೇದಿಸಿಕೊಂಡನು: "ರಾಮಚಂದ್ರ, ನಾನು ದಶರಥನ ಹಳೆಯ ಗೆಳೆಯ. ನನ್ನ ಹೆಸರು ಜಟಾಯು ಎಂದು. ನಾನು ವಿನತಾಪುತ್ರನಾದ ಅರುಣನ ಮಗ." ಜಟಾಯುವಿನ ಜತೆಗೆ ರಾಮನು ಗೋದಾವರಿಯ ತಡಿಯಲ್ಲಿರುವ ಪಂಚವಟಿಯನ್ನು ಪ್ರವೇಶಿಸಿದನು. ಪಂಚವಟಿ ನಿಸರ್ಗ ರಮಣಿಯ ನೆಲೆವೀಡು. ಎಲ್ಲೆಲ್ಲಿಯೂ ಹೂ-ಹಣ್ಣುಗಳಿಂದ ತುಂಬಿದ ಮರಗಳು, ಬಳ್ಳಿಗಳು, ಫಲಭಾರದಿಂದ ಬಗ್ಗಿದ್ದ ಮರಗಳು, ರಾಮನನ್ನು ಕಂಡು ಗೌರವದಿಂದ ತಲೆ ಬಾಗಿಸಿದಂತಿತ್ತು ! ತಂಬೆಲರಿನಿಂದ ನಲುಗುವ ಚಿಗುರುಗಳಿಂದ ಕೈಮುಗಿವವೋ ಎನ್ನುವಂತಿತ್ತು ! ಉದುರಿದ ಹೂ- ಗಳಿಂದ, ಹಣ್ಣುಗಳಿಂದ ಪುಷ್ಪಾಂಜಲಿಯನ್ನೂ ನೈವೇದ್ಯವನ್ನೂ ಅರ್ಪಿಸುವಂತಿತ್ತು ! ಮಾವಿನ ಮರಗಳಲ್ಲಿ ಇಂಚರಗೆಯ್ಯುತ್ತಿದ್ದ ಕೋಗಿಲೆಗಳು ರಾಮನ ಗುಣಗಾನ ಮಾಡುತ್ತಿದ್ದವು ! ಕಾಡಿಗೆ ಕಾಡೇ ಸಂತಸದಿಂದ ನಲೆದಾಡುತ್ತಿತ್ತು. ಜಡದಲ್ಲೂ ಚೈತನ್ಯ ತುಂಬಿತ್ತು. ಪ್ರಕೃತಿ ದೇವಿಯ ಸೌಂದರ್ಯಪತಾಕೆ ಆ ಬನದಲ್ಲಿ ಹಾರಾಡುತ್ತಿತ್ತು. ರಾಮಚಂದ್ರನಿಗೆ ಈ ತಾಣ ತುಂಬ ಹಿತವಾಗಿ ಕಂಡಿತು. ಅಲ್ಲಿ ವಾಸಕ್ಕೆ ಯೋಗ್ಯವಾದ ಎಲೆಮನೆಯೊಂದನ್ನು ರಚಿಸುವಂತೆ ಲಕ್ಷ್ಮಣನಿಗೆ ಆಜ್ಞಾಪಿಸಿದನು. ಲಕ್ಷ್ಮಣನ ಕೈಚುರುಕು ಕೇಳಬೇಕೆ ? ಕ್ಷಣಾರ್ಧದಲ್ಲಿ ಅರ- ಮನೆಯನ್ನೂ ನಾಚಿಸುವಂಥ ಪರ್ಣಶಾಲೆಯ ನಿರ್ಮಾಣವಾಯಿತು. ತಮ್ಮನ ಕೌಶಲ್ಯಕ್ಕೆ ಮೆಚ್ಚಿದ ರಾಮಚಂದ್ರ ಅವನನ್ನು ಬಿಗಿದಪ್ಪಿ- ಕೊಂಡನು. ಮೂಗು ಕತ್ತರಿಸಿ ಮುಹೂರ್ತ ಮಾಡಿದರು ವನವಾಸದ ಅವಧಿಯಲ್ಲಿ ಸುಮಾರು ಹದಿಮೂರು ವರ್ಷಗಳು ಸಂದವು. ಹೇಮಂತ ಋತುವಿನ ಒಂದು ಪ್ರಾತಃಕಾಲ, ಕಾಡೆಲ್ಲ ಮಂಜು ಕವಿದಿತ್ತು. ಹೊರಬಂದರೆ ಮೈ ಕೊರೆವಂಥ ಚಳಿ, ರಾಮಚಂದ್ರನು ಗೋದಾವರಿಯೆಡೆಗೆ ಸ್ನಾನಕ್ಕಾಗಿ ತೆರಳಿದ್ದನು. ಅವನ ಹಿಂದೆ ಕಲಶ ಹಸ್ತನಾದ ಸೌಮಿತ್ರಿಯೂ ಸೀತೆಯೂ ಇದ್ದರು. ಲಕ್ಷ್ಮಣನು ಏನೋ ನೆನೆಸಿಕೊಂಡವನಂತೆ ಉದ್ಗರಿಸಿದನು: "ಜನರಿಗೆ ಜಾಡ್ಯ ಬರಿಸುವ ಹಿಮಸಂತತಿ ಎಲ್ಲೆಡೆಯೂ ತುಂಬಿ ಕೊಂಡಿದೆ. ಆದರೆ ನಿನ್ನ ಚರಣವನ್ನಾಶ್ರಯಿಸಿದ ನನಗೆ ಅದರ ಭಯ- ವಿಲ್ಲ. ಅಲ್ಲಿ ಅಯೋಧ್ಯೆಯಲ್ಲಿ ಭರತನೂ ಈಗ ಸ್ನಾನಕ್ಕಾಗಿ ಸರಯು- ವಿನೆಡೆಗೆ ಹೋಗುತ್ತಿರಬಹುದು. ಪಾಪ ! ನಿನಗಾಗಿ ಅವನು ನಾಡಿನಲ್ಲೇ ಕಾಡಿನ ಬಾಳನ್ನು ಬಾಳುತ್ತಿದ್ದಾನೆ. ಭರತನ ಬಾಳು ಧನ್ಯವಾಯಿತು. ಆದರೆ ಆ ಕೈಕೇಯಿ ! ದಶರಥನ ಧರ್ಮಪತ್ನಿಯಾಗಿ ಭರತನಂಥ ಮಗನನ್ನು ಪಡೆದು ಅವಳಿಗೆ ಇಂಥ ಬುದ್ಧಿ ಹೇಗೆ ಬಂತೋ !" ಆಗ ರಾಮಚಂದ್ರ ಸಂತೈಸಿದನು: "ಲಕ್ಷಣ, ನಾವು ಬಂದುದು ರಾಕ್ಷಸರ ವಧೆಗಾಗಿ, ನೆನಪಿರಲಿ. ಅದಕ್ಕೆ ಕೈಕೇಯಿ ನಿಮಿತ್ತ ಮಾತ್ರ." ಪ್ರಾತಃಕರ್ಮಗಳನ್ನು ತೀರಿಸಿ ರಾಮಚಂದ್ರ ಸೀತೆಯೊಡನೆ ಕುಳಿತಿದ್ದ. ಆಗ ರಾವಣನ ತಂಗಿ ಶೂರ್ಪಣಖೆ ಅವನ ಪರ್ಣಶಾಲೆಯೆಡೆಗೆ ಬಂದಳು. ಪ್ರಮಾದದಿಂದ ಹಿಂದೆ ರಾವಣನು ಅವಳ ಗಂಡನನ್ನು ಕೊಂದಿದ್ದ. ಅಂದಿನಿಂದ ಅವಳು ತನ್ನ ಬಯಕೆಯನ್ನು ನೀಗಿಸಬಲ್ಲ ಪುರುಷನಿಗಾಗಿ ಹುಡುಕಾಡುತ್ತಿದ್ದಳು. ರಾಮನ ರೂಪ ಅವಳ ಮನಸ್ಸನ್ನು ಸೆಳೆಯಿತು. ಅವಳು ರಾಮನ ಬಳಿ ಪ್ರೇಮ ಭಿಕ್ಷೆಯನ್ನು ಬೇಡಿದಳು : "ಓ ಸುಂದರನಾದ ಯುವಕನೆ, ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನಗೆ ಅನುರೂಪಳಾದ ನನ್ನನ್ನು ವರಿಸು. ನಾನು ಯಾರು ಗೊತ್ತೆ ? ನೀನು ರಾವಣೇಶ್ವರನ ಹೆಸರು ಕೇಳಿರಬಹುದಲ್ಲ ! ಅವನ ಹೆಸರನ್ನು ಕೇಳದ- ವರುಂಟೆ ? ಆ ಲಂಕೇಶನ ತಂಗಿ ನಾನು. ಈ ದುರ್ಬಲೆ ಸೀತೆಯನ್ನು ತ್ಯಜಿಸಿಬಿಡು." ರಾಮನು ಮೋಜಿಗಾಗಿ ನುಡಿದನು : "ಛೇ, ಛೇ, ಅದು ಹೇಗೆ ಸಾಧ್ಯ ? ನನಗೆ ಈ ಸೀತೆಯೆಂದರೆ ಎಲ್ಲಿಲ್ಲದ ಪ್ರೀತಿ, ನಿನಗೆ ಯೋಗ್ಯನಾದ ವರನೆಂದರೆ ನನ್ನ ತಮ್ಮನೇ ಸರಿ. ಅವನಿಗೆ ಜತೆಯಲ್ಲಿ ಹೆಂಡತಿಯೂ ಇಲ್ಲ. ನೀನು ನನ್ನ ನೆಗೆಣ್ಣಿಯಾಗು." ರಾಕ್ಷಸಿ ಲಕ್ಷ್ಮಣನೆಡೆಗೆ ಬಂದು ನುಡಿದಳು : "ಓ ತರುಣನೆ, ನೀನೂ ನನ್ನಂತೆಯೆ ಒಬ್ಬಂಟಿಗನಾಗಿರುವೆ. ಇಂಥ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಏಕಾಕಿಯಾಗಿರುವುದು ತುಂಬ ಕಷ್ಟ, ಹೀಗಿರುವಾಗ ನೀನು ನನ್ನನ್ನೇಕೆ ಮದುವೆಯಾಗಬಾರದು?" ಲಕ್ಷ್ಮಣನು ಚತುರತೆಯಿಂದ ಉತ್ತರಿಸಿದನು: "ನಾನು ಎಷ್ಟಾದರೂ ನನ್ನಣ್ಣನ ಸೇವಕ. ಒಬ್ಬ ಕೂಲಿಯಾಳನ್ನು ಗಂಡನೆಂದು ಕರೆವುದು ನಿನಗೆ ಅವಮಾನ. ನಿನ್ನಂಥ ಸುಂದರಿ ನನ್ನ ಅಣ್ಣನನ್ನೆ ವರಿಸಬೇಕು. ನೋಡು, ಅವನ ಹೆಂಡತಿ ಎಂಥ ಬಡಕಲಾಗಿ- ದ್ದಾಳೆ. ನಿನ್ನಂಥ ಮುದ್ದು ಅತ್ತಿಗೆ ದೊರಕುವುದಾದರೆ ನನಗೆ ಅದೊಂದು ಹೆಮ್ಮೆ!" ಇವರ ಹಾಸ್ಯ ಅವಳಿಗೆ ಹೇಗೆ ಅರಿವಾಗಬೇಕು ! ಅವಳು ಮತ್ತೆ ರಾಮನೆಡೆಗೆ ಬಂದು ನುಡಿದಳು : "ನೀನೇ ನನ್ನ ಗಂಡನಾಗಬೇಕು. ಆಗ ನಮ್ಮ ದಾಂಪತ್ಯ ಎಷ್ಟು ಸೊಗಸಾದೀತು ? ಇವಳು ನನ್ನ ಸವತಿ. ಇವಳೇ ಅಲ್ಲವೆ ನಿನ್ನ ಮನಸ್ಸನ್ನು ಸೆರೆಹಿಡಿದದ್ದು, ನೋಡುತ್ತಿರು, ಈ ತೆಳು ನಡುವಿನ ಹೆಣ್ಣು ಹುಟ್ಟಿಯೇ ಇಲ್ಲ ಎಂದು ಮಾಡದಿದ್ದರೆ ಮತ್ತೆ ಹೇಳು." ಎಂದು ಸೀತೆ ಯನ್ನು ಹಿಡಿದು ಕೊಲ್ಲಹೋದಳು. ಚುರುಕು ಕೈಯ ಸೌಮಿತ್ರಿ ಅಷ್ಟರಲ್ಲಿಯೆ ತನ್ನ ಕೂರಸಿಯಿಂದ ರಾಕ್ಷಸಿಯ ಕಿವಿ-ಮೂಗುಗಳನ್ನು ಕತ್ತರಿಸಿಬಿಟ್ಟಿದ್ದ. ರಾಕ್ಷಸರ ಸಂಹಾರಕ್ಕೆ ಇದು ನಾಂದಿಯಾಯಿತು. ಶೂರ್ಪಣಖೆಯ ಮೈಯೆಲ್ಲ ಈ ನೆತ್ತರಿನಿಂದ ತೊಯ್ದು ಕೆಂಪಾಯಿತು. ಅವಳು ವಿಕಾರವಾಗಿ ಕೂಗಿದಳು. ಓಡಿಹೋಗಿ ಸೋದರರಾದ ಖರ-ದೂಷಣರಿಗೆ ದೂರನ್ನಿತ್ತಳು. ಖರನು ಕುಪಿತನಾಗಿ ಗರ್ಜಿಸಿದನು: "ಯಾರವನು ನಿನ್ನ ಮೈಯಲ್ಲಿ ನೆತ್ತರು ಬರಿಸಿದವನು ? ನನ್ನ ಬಾಣಗಳ ಬಾಯಾರಿಕೆಯನ್ನು ಅವನ ನೆತ್ತರಿನಿಂದಲೆ ಹಿಂಗಿಸುವೆ." "ಇಬ್ಬರು ತರುಣರು-ಒಬ್ಬ ಯುವತಿ ಇದೇ ಕಾಡಿನಲ್ಲಿ ಅಲೆಯು- ತ್ತಿದ್ದಾರೆ. ಅವರ ನೆತ್ತರನ್ನು ಹೀರದೆ ನನಗೆ ತೃಪ್ತಿಯೇ ಇಲ್ಲ." ಖರನು ಕೂಡಲೆ ತನ್ನ ಅನುಚರರಾದ ಹದಿನಾಲ್ಕು ಮಂದಿ ಪ್ರಧಾನ ರಾಕ್ಷಸರನ್ನು ಶೂರ್ಪಣಖೆಯೊಡನೆ ಕಳಿಸಿಕೊಟ್ಟನು. ಬಂದ ರಾಕ್ಷಸರನು ಕಂಡು ರಾಮಚಂದ್ರ ನುಡಿದ : "ಬ್ರಹ್ಮದ್ರೋಹಿಗಳೆ ! ನನ್ನೆದುರು ಬಂದಿರಾದರೆ ನೀವು ಜೀವಸಹಿತ ಹಿಂತಿರುಗಲಾರಿರಿ." ರಾಮಚಂದ್ರನ ಒಂದೊಂದು ಬಾಣವೂ ಒಬ್ಬೊಬ್ಬ ರಾಕ್ಷಸನನ್ನು ನೆಲದಲ್ಲಿ ಮಲಗಿಸಿತು ! ಹತಾಶಳಾದ ಶೂರ್ಪಣಖೆ ಖರನೆಡೆಗೆ ಧಾವಿಸಿ ಬೊಬ್ಬಿಟ್ಟಳು : " ಓ ನನ್ನ ಸೋದರ, ನೀನೊಬ್ಬ ನಪುಂಸಕ. ಮನುಷ್ಯರಿಬ್ಬರಿಗೆ ಹೆದರಿ ಗುಹೆಯೊಳಗೆ ಅವಿತಿರುವ ನಿನ್ನ ಷಂಡತನಕ್ಕೆ ಬೆಂಕಿಬೀಳಲಿ." ಸೋದರಿಯ ಮಾತಿನಿಂದ ಖರನು ಉದ್ವೇಜಿತನಾಗಿ ಹದಿನಾಲ್ಕು ಸಾವಿರ ರಾಕ್ಷಸರನ್ನು ಯುದ್ಧಕ್ಕಾಗಿ ಕಳುಹಿದನು. ಪರ್ವತ ಶಿಖರ- ದಂತಿರುವ ರಥವನ್ನೇರಿ ತಾನೂ ದೂಷಣನೊಡನೆ ಹೊರಟನು. ಇತ್ತ ರಾಮನು ಲಕ್ಷ್ಮಣನನ್ನು ಕರೆದು ನುಡಿದನು : " ಸೌಮಿತ್ರಿ, ನನ್ನ ಬಲದ ತೋಳು ಅದಿರುತ್ತಿದೆ. ಏನೋ ದೊಡ್ಡದೊಂದು ಕಲಹ ಸಂಭವಿಸುವಂತಿದೆ. ನೀನೂ ಸೀತೆಯೂ ಆ ಗುಹೆ- ಯಲ್ಲಿ ಅವಿತುಕೊಳ್ಳಿ." ಲಕ್ಷ್ಮಣನು ಹಾಗೆಯೇ ಮಾಡಿದನು. ರಾಮನು ಯುದ್ಧಕ್ಕೆ ಅಣಿ- ಯಾಗಿ ನಿಂತನು. ವೇಗವಾಗಿ ಮುನ್ನುಗ್ಗುತ್ತಿದ್ದ ರಾಕ್ಷಸಸೇನೆ ಎದುರು ನಿಂತಿರುವ ರಾಮನನ್ನು ಕಂಡು ಒಮ್ಮಿಂದೊಮ್ಮೆಲೆ ಸ್ತಬ್ಧವಾಯಿತು. ಸಿಟ್ಟಿನಿಂದ ಖರ ಮುಂದೆ ಮುಂದೆ ಹೋಗುತ್ತಿದ್ದ. ಶ್ಯೇನಗಾಮಿ, ಪೃಥುಗ್ರೀವ, ಯಜ್ಞಶತ್ರು, ಮಹಾವಿಷ, ದುರ್ಜಯ, ಕರವೀರಾಕ್ಷ, ಪರುಷ, ಕಾಲಕಾರ್ಮುಕ, ಮೇಘಮಾಲಿ, ಮಹಾಬಾಹು, ಮಹಾಸ್ಯ, ಲೋಹಿತಾಂ- ಬರ ಎಂಬ ಹನ್ನೆರಡು ಮಂದಿ ಮಹಾಬಲಿಷ್ಠರಾದ ರಕ್ಕಸರು ಸೇನೆಗೆ ಹುರಿದುಂಬಿಸುತ್ತ ಮುನ್ನುಗ್ಗುತ್ತಿದ್ದರು. ಮಹಾಕಪಾಲ, ಸ್ಥೂಲಾಕ್ಷ, ಪ್ರಮಾಥಿ, ತ್ರಿಶಿರ ಈ ನಾಲ್ವರು ಸೇನೆಯ ಮುಂಬದಿಯಲ್ಲಿ ದೂಷಣ- ನೊಡನೆ ಬರುತ್ತಿದ್ದರು. ರಾಮಚಂದ್ರನ ಧನುಷ್ಟೇಂಕಾರ ರಾಕ್ಷಸರ ಕರ್ಣವನ್ನು ಭೇದಿಸಿತು. ದೇವತೆಗಳೂ ಋಷಿಗಳೂ ಈ ಮಹಾಯುದ್ಧವನ್ನು ಕಾಣಲು ಆಕಾಶದಲ್ಲಿ ಮುತ್ತಿದರು. ಏಕಾಕಿಯಾದ ರಾಮಭದ್ರನೊಡನೆ ರಾಕ್ಷಸಸೇನೆ ಕಾದತೊಡಗಿತು. ರಾಮನ ಬಾಣಗಳು ದೂಷಣನ ಧ್ವಜವನ್ನೂ ಕುದುರೆಗಳನ್ನೂ ಸಾರಥಿ ಯನ್ನೂ ಕತ್ತರಿಸಿದವು. ದೂಷಣನು ಎಸೆದ ಗದೆಯೂ ರಾಮಬಾಣಕ್ಕೆ ಆಹುತಿಯಾಯಿತು. ರಾಮನ ಎಂಟು ಬಾಣಗಳು ಆ ರಕ್ಕಸನನ್ನು ಗಾಸಿ ಗೊಳಿಸಿದವು. ಅವನು ದೊಡ್ಡ ಕಬ್ಬಿಣದ ಸಲಾಕೆಯೊಂದನ್ನೆತ್ತಿಕೊಂಡು ರಾಮನೆಡೆಗೆ ಧಾವಿಸಿದನು. ಆಗ ರಾಮಚಂದ್ರನು ಲೀಲಾಜಾಲವಾಗಿ ಅವನ ಎರಡೂ ತೋಳುಗಳನ್ನು ಕತ್ತರಿಸಿ ಹಾಕಿದನು. ದೇವತೆಗಳು 'ಜಯಜಯ' ಎಂದು ಕೊಂಡಾಡಿದರು. ಆಕಾಶದಿಂದ ಹೂಮಳೆ ಸುರಿಯಿತು. ಮಹಾಕಪಾಲ, ಸ್ಥೂಲಾಕ್ಷ, ಪ್ರಮಾಥಿಗಳೂ ರಾಮಬಾಣದಿಂದ ಹತ ರಾದರು. ಹದಿನಾಲ್ಕು ಸಾವಿರ ರಾಕ್ಷಸರೂ ಜೀವ ಕಳೆದುಕೊಂಡರು! ಕೊನೆಯದಾಗಿ ಖರನೇ ರಾಮನೊಡನೆ ಯುದ್ಧಕ್ಕೆ ಸಿದ್ಧನಾದನು. ಬಂಗಾರದ ಜಿಂಕೆ ಬಂತು ಆಗ ತ್ರಿಶಿರನು ಖರನನ್ನು ತಡೆದು ತಾನು ಮುಂದೆ ಬಂದು ಸಿಂಹ- ನಾದಗೈದನು. ರಾಮಚಂದ್ರನ ಧನುರ್ಘೋಷ ಅದಕ್ಕೆ ಪ್ರತ್ಯುತ್ತರ- ವಿತ್ತಿತು. ರಾಮನ ಮೇಲೆ ತ್ರಿಶಿರನು ಮೂರು ಬಾಣಗಳನ್ನೆಸೆದರೆ, ತ್ರಿಶಿರನಮೇಲೆ ರಾಮನು ಹದಿನಾಲ್ಕು ಬಾಣಗಳನ್ನೆಸೆದನು. ಸಾರಥಿ, ಕುದುರೆ, ಧ್ವಜ ಎಲ್ಲವೂ ಮುರಿದು ಬಿತ್ತು. ಮೂರು ಬಾಣಗಳಿಂದ ತ್ರಿಶಿರನ ಮೂರು ತಲೆಗಳೂ ಕೆಳಗುರುಳಿದವು. ರಾಕ್ಷಸರ ಕುಲವೇ ನಾಶವಾದುದನ್ನು ಕಂಡು ಕೋಪಗೊಂಡ ಖರನು ರಾಮನನ್ನಿದಿರ್ಗೊಂಡು ಬಾಣಗಳಿಂದ ಬಾನನ್ನು ತುಂಬಿದನು. ರಾಮನ ಬಾಣ ಬಾನನ್ನು ಮತ್ತೆ ಸ್ವಚ್ಛಗೊಳಿಸಿತು. ದಿಕ್ಕುಗಳಲ್ಲೆಲ್ಲ ಇವರೀರ್ವರ ಬಾಣಗಳೇ ತುಂಬಿಕೊಂಡವು. ಖರನು ಏಳು ಬಾಣಗಳಿಂದ ರಾಮನ ಬಿಲ್ಲನ್ನೂ ಕವಚವನ್ನೂ ಭೇದಿಸಿದನು. ಈಗ ರಾಮನು ವೈಷ್ಣವ ಧನುಸ್ಸನ್ನು ಕೈಗೆತ್ತಿಕೊಂಡು ಬರಿಮೈಯಿಂದ ಯುದ್ಧ ಮಾಡಿದನು. ಖರನ ಧ್ವಜ ಮುರಿಯಿತು. ರಾಮನು ಒಂದು ತೀಕ್ಷ್ಮವಾದ ಬಾಣವನ್ನು ಅವನ ಮೇಲೆ ಎಸೆಯುತ್ತ ನುಡಿದನು : "ದಂಡಕಾರಣ್ಯದ ಸಾಧು ತಪಸಿಗಳಿಗೆ ಪೀಡೆ ಕೊಟ್ಟುದಕ್ಕೆ ನಿನಗಿದು ಫಲ." ಖರನು ಅದಕ್ಕೆ ಪ್ರತಿಯಾಗಿ ಒಂದು ಗದೆಯನ್ನೆಸೆದು ನುಡಿದನು: "ರಾಕ್ಷಸರ ಕುಲವನ್ನು ಹಾಳುಗೆಡವಿದ ನಿನಗೆ ಈ ಗದೆ ಬುದ್ದಿ ಕಲಿಸಬಲ್ಲದು. ಗದೆಯನ್ನು ರಾಮಚಂದ್ರನು ಬಾಣದಿಂದ ಭೇದಿಸಿ ಹಂಗಿಸಿದನು : "ಎಲ್ಲಿದೆ ನಿನ್ನ ಗದೆ ಬುದ್ದಿ ಕಲಿಸಲಿಕ್ಕೆ ? ನಿನ್ನ ಬಲವೆಲ್ಲ ಉಡುಗಿ ಹೋಗಿದೆ. ಓ ಬ್ರಹ್ಮದ್ರೋಹಿಯೆ, ಈಗ ನೀನು ನಪುಂಸಕನಿಗಿಂತ ಕಡೆ." ತಡೆಯಲಾರದ ಸಿಟ್ಟಿನಿಂದ ಖರನು ತಾಲವೃಕ್ಷವೊಂದನ್ನು ಕಿತ್ತು ತಂದನು. ರಾಮಚಂದ್ರನ ಬಾಣಗಳು ಆ ವೃಕ್ಷವನ್ನೂ, ಅದನ್ನು ಹೊತ್ತು ತಂದವನನ್ನೂ ಜತೆಯಾಗಿ ನೆಲಕ್ಕುರುಳಿಸಿದವು. ವಜ್ರದ ಪೆಟ್ಟು ತಿಂದ ಪರ್ವತದಂತೆ ಖರನು ಕುಸಿದುಬಿದ್ದನು. ದೇವತೆಗಳು ಕೊಂಡಾಡಿದರು. ಋಷಿಗಳು ಹರಸಿದರು. ಗುಹೆಯಿಂದ ಸೀತೆ-ಲಕ್ಷ್ಮಣರು ಹೊರ ಬಂದರು. ಲಕ್ಷ್ಮಣನು ಆನಂದ ಪರವಶನಾಗಿ ಅಣ್ಣನಿಗೆ ವಂದಿಸಿದನು. "ಮುನಿಗಳ ರಕ್ಷಣೆಯ ದೀಕ್ಷೆಯನ್ನು ತೊಟ್ಟ ಓ ನನ್ನ ಆರ್ಯಪುತ್ರನೆ ! ನಿನ್ನ ಕೀರ್ತಿ ಜಗತ್ತನ್ನು ಬೆಳಗಿಸಿತು" ಎಂದು ನಲುಮೆಯ ಸೀತೆ ಪತಿಯನ್ನಪ್ಪಿಕೊಂಡಳು. ಶೂರ್ಪಣಖೆ ಲಂಕೆಗೆ ಧಾವಿಸಿದಳು; ರಾವಣನ ಕಾಲಿಗೆ ಅಡ್ಡ ಬಿದ್ದು ನುಡಿದಳು : "ನೀನು ಬರಿಯ ವಿಷಯಲಂಪಟ, ಮೂರು ಲೋಕಗಳನ್ನು ಗೆದ್ದರೇನಂತೆ ? ಹೆಣ್ಣುಗಳ ಕೂಟದಲ್ಲಿ ಹೊತ್ತು ಕಳೆವ ನಿನಗೆ ರಾಜತ್ವದ ಬೆಲೆಯೇನು ಗೊತ್ತು ? ಅಣ್ಣ, ಬಂದ ಅನಿಷ್ಟವನ್ನಾದರೂ ಯೋಚಿಸು- ತ್ತಿರುವೆಯಾ ? ದಂಡಕಾರಣ್ಯದಲ್ಲಿ ಖರ-ದೂಷಣ-ತ್ರಿಶಿರರನ್ನು ರಾಮ ಕೊಂದಿದ್ದಾನೆ. ನನ್ನನ್ನು ಹೀಗೆ ವಿರೂಪಗೊಳಿಸಿದ್ದಾನೆ ! ನೀನು ಇದ್ದರೂ ಸತ್ತಂತೆ ಇಲ್ಲಿ ಬಿದ್ದು ಕೊಂಡಿರುವೆ." ಪೆಟ್ಟುತಿಂದ ಹಾವಿನಂತೆ ಸೆಟೆದು ನಿಂತು ರಾವಣನು ಕೇಳಿದ: "ಯಾರವನು ರಾಮನೆಂದರೆ ?" ಭಯದಿಂದ ಕಂಪಿಸುತ್ತಲೆ ಶೂರ್ಪಣಖೆ ಉತ್ತರಿಸಿದಳು: "ಆ ರಾಮನು ನೋಡಲು ಬಲು ಚೆಲುವನು, ಅವನು ದಶರಥನ ಮಗ ನಂತೆ. ಹದಿನಾಲ್ಕು ಸಾವಿರ ರಕ್ಕಸರನ್ನು ಅವನೊಬ್ಬನೆ ಕೊಂದನೆಂದ- ಮೇಲೆ ಅವನ ಶೌರ್ಯಕ್ಕೆ ಬೇರೆ ಸಾಕ್ಷಿ ಬೇಕೆ ? ಅವನಿಗೊಬ್ಬ ತಮ್ಮ- ನಿದ್ದಾನೆ. ಅವನ ಹೆಸರು ಲಕ್ಷ್ಮಣನಂತೆ. ನನ್ನ ಮೋರೆಗೆ ಕತ್ತಿಯಿಟ್ಟವನು ಅವನೆ ! ರಾಮನ ಜತೆಗೆ ಅವನ ಮಡದಿಯೂ ಇದ್ದಾಳೆ. ಅವಳ ಹೆಸರು ಸೀತೆಯೆಂದು ಕೇಳಿದ್ದೇನೆ. ಅಣ್ಣ, ನಿಜವಾಗಿ ಅವಳು ನಿನ್ನ ಅರಸಿ- ಯಾಗಬೇಕಿತ್ತು. ಅಬ್ಬ ! ಅವಳೆಂಥ ಸುಂದರಿ ! ಅವಳ ಕೈಸೋಂಕಿದಲ್ಲಿ ಅಮೃತದ ತೊರೆಹರಿದೀತು ! ಅಂಥ ಸರ್ವಾಂಗ ಸುಂದರಿಯನ್ನು ನಾನೆಲ್ಲಿಯೂ ಕಂಡಿಲ್ಲ." ಹೀಗೆಂದು ಕ್ಷಣಕಾಲ ರಾವಣನನ್ನೇ ದಿಟ್ಟಿಸಿ ಮಾತು ಮುಂದುವರಿಸಿದಳು. "ಎದ್ದೇಳು ಲಂಕೇಶ್ವರ, ರಾಮನಿಂದ ಕಂಗಾಲಾದ ರಾಕ್ಷಸಕುಲವನ್ನು ಉಳಿಸು." ಬಹುಹೊತ್ತು ಯೋಚಿಸಿದ ನಂತರ ರಾವಣನು ಒಂದು ನಿರ್ಣಯದ ನೆಲೆಗೆ ಬಂದನು. ಒಡನೆ ರಥವೇರಿ ಸಮುದ್ರತೀರದ ಗೋಕರ್ಣ ಕ್ಷೇತ್ರಕ್ಕೆ ಬಂದನು. ಅದು ಮಾರೀಚನಿರುವ ತಾಣ, ರಾವಣನನ್ನು ಕಂಡು ಮಾರೀಚನು ಗೌರವದಿಂದ ಸತ್ಕರಿಸಿದನು. ರಾವಣನು ಬಂದ ಕಜ್ಜವನ್ನರುಹಿದನು: "ಮಾರೀಚ, ಮನುಷ್ಯ ಮಾತ್ರನಾದ ರಾಮನಿಂದ ರಾಕ್ಷಸಕುಲದ ನಾಶ ವಾಗುತ್ತಲಿದೆ. ಅವನಿಗೆ ಪ್ರತೀಕಾರ ಮಾಡುವದಕ್ಕಾಗಿ ಅವನ ಮಡದಿ- ಯನ್ನು ಅಪಹರಿಸಬೇಕೆಂದಿದ್ದೇನೆ. ಆ ಕಾರ್ಯದಲ್ಲಿ ನಿನ್ನ ಸಹಕಾರ ಅವಶ್ಯವಿದೆ. ನೀನೊಂದು ಮಿಸುನಿಯ ಜಿಂಕೆಯಾಗಿ ಸೀತೆಯನ್ನು ಮರುಳುಗೊಳಿಸು. ರಾಮನು ನಿನ್ನನ್ನು ಬೆನ್ನಟ್ಟಿಕೊಂಡು ಹೊರಟಾಗ ನಾನು ಸುಖವಾಗಿ ಸೀತೆಯನ್ನುಕೊಂಡೊಯ್ಯಬಹುದು." ಮಾರೀಚನು ಒಮ್ಮೆಲೆ ದಿಗಿಲಾಗಿ ನುಡಿದನು: "ರಾವಣ, ರಾಮನ ವಿಷಯ ನೀನರಿಯೆ, ಅವನ ಒಂದೇ ಒಂದು ಬಾಣ ರಾಕ್ಷಸರ ಸಂತಾನವನ್ನೇ ನಿರ್ಮೂಲಗೊಳಿಸೀತು. ವಿಶ್ವಾಮಿತ್ರನ ಆಶ್ರಮ ದಲ್ಲಿ ಅವನ ಬಾಣದ ರುಚಿಯನ್ನು ಕಂಡವನು ನಾನು. ಲಂಕೇಶ್ವರ, ಬದುಕುವ ಬಯಕೆಯಿದ್ದರೆ ರಾಮನ ಸುದ್ದಿಗೆ ಹೋಗದಿರಬೇಕು." "ನೀನು ರಾಮನ ಕಡೆಯ ದೂತನಂತೆ ನುಡಿಯುತ್ತಿರುವೆ. ನನ್ನ ಆಜ್ಞೆ ಯನ್ನು ಮೀರಿ ನೀನು ಬದುಕಿರುವುದು ಸಾಧ್ಯವಿಲ್ಲ." ಎಂದವನೇ ರಾವಣನು ಒರೆಯಿಂದ ಕತ್ತಿಯನ್ನೆಳೆದನು. ಮಾರೀಚನು ಸಾವಿಗೆ ಅಂಜದವನಲ್ಲ. ರಾವಣನ ಖಡ್ಗಕ್ಕೆ ಬಲಿಯಾ ಗಲು ಮನಸ್ಸಿಲ್ಲದೆ, ಅವನು ಕೊನೆಗೆ ಮಾಯಾಮೃಗವಾಗಲು ಒಪ್ಪಿ- ಕೊಂಡನು. ರಾಮನ ಆಶ್ರಮದ ಬಳಿ ಒಂದು ಬಂಗಾರದ ಜಿಂಕೆ ಬಂತು; ಅದು ಸೀತೆಯ ಕಣ್ಮುಂದೆ ಅತ್ತಿತ್ತ ಸುಳಿದಾಡಿತು. ಮೈಯೆಲ್ಲ ಬಂಗಾರದ ಚುಕ್ಕೆಗಳು. ದೂರಕ್ಕೂ ತಳತಳಿಸುವ ಕೊಂಬುಗಳು, ಚಿಗುರೆಲೆಗಳ ನಡುವೆ ಜಿಗಿಯುವ ಈ ಜಿಂಕೆ, ಸೀತೆಯ ಮನವನ್ನು ಸೆಳೆಯಿತು. ಮಾಯಾಮಾನುಷನಾದ ರಾಮಚಂದ್ರನ ಲೀಲೆಗೆ ತಕ್ಕಂತೆ ಸೀತೆಯೂ ಅಭಿನಯಿಸಿದಳು. ದಂಡಕೆಯಿಂದ ಲಂಕೆಗೆ "ಆರ್ಯಪುತ್ರ ! ಈ ಬಣ್ಣದ ಜಿಂಕೆಯನ್ನು ಆಡಿಸುವುದೆಂದರೆ ನನಗೆ ಪ್ರೀತಿ, ಅದನ್ನು ಹಿಡಿದು ಕೊಡಲಾರೆಯಾ ? ಅದು ಜೀವಂತವಾಗಿ ದೊರೆಯದಿದ್ದರೆ, ಅದರ ಬಣ್ಣದ ಚರ್ಮವಾದರೂ ನಮ್ಮ ಆಸನಕ್ಕೆ ಉಪಯೋಗವಾಗಬೇಕು." ಎಂದು ಸೀತೆ ಒತ್ತಾಯಿಸಿದಳು. ರಾಮಚಂದ್ರನು " ನಾನು ಬರುವವರೆಗೆ ಜೋಕೆಯಾಗಿರು" ಎಂದು ಲಕ್ಷ್ಮಣನನ್ನು ಎಚ್ಚರಿಸಿ, ಧನುರ್ಧಾರಿಯಾಗಿ ಜಿಂಕೆಯ ಬೆನ್ನಟ್ಟಿದನು. ಮೃಗರೂಪಿಯಾದ ಮಾರೀಚ ಆಶ್ರಮದಿಂದ ದೂರ-ಬಹುದೂರ ಜಿಗಿದನು. ಜೀವಂತವಾಗಿ ಆ ಜಿಂಕೆಯನ್ನು ಹಿಡಿಯುವದು ಸಾಧ್ಯವಿಲ್ಲ- ವೆಂದು ತಿಳಿದ ರಾಮಚಂದ್ರ ಆ ಮಾಯಾಮೃಗದೆಡೆಗೆ ಒಂದು ಬಾಣ- ವನ್ನೆಸೆದನು. ಪಾತಕಿಯಾದ ಮಾರೀಚ ಪೆಟ್ಟು ತಿಂದು ನಿಜರೂಪವನ್ನು ತಾಳಿ ನೆಲಕ್ಕುರುಳಿದನು. ಅವನು ಕೊನೆಯುಸಿರು ಎಳೆಯುವಾಗ ನುಡಿದ ನುಡಿ "ಓ ಲಕ್ಷ್ಮಣಾ" ಎಂದು ಕಾಡಿನ ಮೂಲೆ ಮೂಲೆಗಳಲ್ಲಿ ಮಾರ್ಮೊಳಗಿತು ! ಕೂಗು ಸೀತೆಗೂ ಕೇಳಿಸಿತು. ಅವಳು ಲಕ್ಷ್ಮಣನನ್ನು ಕರೆದು ನುಡಿದಳು: "ಲಕ್ಷ್ಮಣ, ರಾಮಚಂದ್ರನ ಕೂಗಿನಂತೆ ಕೇಳಿಸುತ್ತಿದೆ ನೋಡು. ನನ್ನ ನಾಥನಿಗೆ ಏನಾಯಿತೆಂದು ಬೇಗನೆ ತಿಳಿದುಕೊಂಡು ಬಾ ತಮ್ಮ, ಹೋಗು." "ರಾಮಚಂದ್ರನಿಗೆ ಎಲ್ಲಿಯ ಭಯ ತಾಯಿ ? ಇದು ಯಾರದೋ ರಾಕ್ಷಸರ ಮಾಯೆಯಿರಬೇಕು." . ಅದಕ್ಕೆ ಸೀತೆ ಕಠಿಣವಾಗಿ ಉತ್ತರಿಸಿದಳು; "ಅಣ್ಣನ ಮೇಲೆ ನಿನಗೆ ನಿಜವಾದ ಪ್ರೀತಿ ಇದ್ದರೆ ನೀನು ಈ ಮಾತ ನಾಡುತ್ತಿದ್ದಿಲ್ಲ." ಎಂದವಳೆ ಸ್ವಗತವೆಂಬಂತೆ ನುಡಿದಳು: "ತನ್ನ ಒಡಹುಟ್ಟಿದವನನ್ನು ಕೊಂದು, ತನ್ನ ಅತ್ತಿಗೆಯ ಯೌವನವನ್ನು ಬಯಸುತ್ತಿದ್ದಾನೆ ಈ ನೀಚ." ಕೇಳಬಾರದ ಮಾತು ಕಿವಿಗೆ ಬಿತ್ತು. ಲಕ್ಷ್ಮಣನ ಕಣ್ಣಿನಿಂದ ನೀರು ಹರಿಯಿತು. ಅವನು ಸಾವರಿಸಿಕೊಂಡು ನುಡಿದನು: "ತಾಯಿ, ಇಂಥ ಮಾತನ್ನು ಕೇಳುವ ದೌರ್ಭಾಗ್ಯಕ್ಕಾಗಿ ನನಗೆ ಧಿಕ್ಕಾರ ವಿರಲಿ, ಅಣ್ಣನ ಮಾತನ್ನಾದರೂ ಮೀರಿ ನಡೆದೇನು. ಅತ್ತಿಗೆಯ ಮಾತನ್ನು ಮೀರಲಾರೆ. ಆಗಲಿ ಅತ್ತಿಗೆ , ರಾಮನೆಡೆಗೆ ತೆರಳುವೆನು. ನಿನಗೆ ಶುಭವಾಗಲಿ ತಾಯಿ. ದೇವರು ನಿನ್ನನ್ನು ಕಾಪಾಡಲಿ." ಲಕ್ಷ್ಮಣ ರಾಮನೆಡೆಗೆ ಧಾವಿಸಿದನು. ಸೀತೆ ದೇವಕಾರ್ಯವನ್ನು ಸಾಧಿಸುವುದಕ್ಕಾಗಿ ಆಶ್ರಮದಲ್ಲಿ ಉಳಿದಳು. ಪತಿತನಾದವನು ವೇದವನ್ನು ಬಯಸುವಂತೆ, ರಾವಣನು ಸೀತೆಯನ್ನು ಕಂಡು ಮೋಹಿತನಾದನು. ಅವನು ಮುನಿರೂಪ ತಾಳಿ ಆಶ್ರಮದ ಬಳಿಗೆ ಬಂದು ಸೀತೆಯನ್ನು ಕಂಡು ಮಾತಾಡಿಸಿದನು : " ಸುಂದರಿ, ದೇವಸ್ತ್ರೀಯಂತೆ ಕಾಣಿಸುವ ನೀನಾರು ? ಈ ಕಗ್ಗಾಡಿಗೇಕೆ ಬಂದೆ ?" " ದಶರಥ ಮಹಾರಾಜನ ಹಿರಿಯ ಮಗ ರಾಮಭದ್ರನ ಹೆಸರು ಕೇಳಿರ ಬಹುದು. ಅವನು ತಂದೆಯ ಮಾತಿನಂತೆ ವನವಾಸದಲ್ಲಿದ್ದಾನೆ. ನಾನು ಅವನ ಅರ್ಧಾಂಗಿ ಸೀತೆ." ರಾವಣನು ತನ್ನ ಇಂಗಿತವನ್ನರುಹಿದನು : " ಮೂರು ಲೋಕಗಳನ್ನು ನಡುಗಿಸುವ ಮಹಾವೀರ ರಾವಣನೆಂದರೆ : ನಾನೆ. ನಿನ್ನ ರೂಪಶ್ರೀಯನ್ನು ಕೇಳಿ ಮೋಹಿತನಾಗಿ ಬಂದೆ. ನೀನು ಈ ರಾವಣನ ಪ್ರೇಯಸಿಯಾಗಬೇಕೆಂದು ನನ್ನ ಬಯಕೆ." ಆಗ ಸೀತೆ ಅವನನ್ನೆಚ್ಚರಿಸಿದಳು : " ನನ್ನ ಪತಿಯ ಶಕ್ತಿ-ಸಾಮರ್ಥ್ಯಗಳ ಅರಿವು ನಿನಗಿಲ್ಲ. ಎಂತಲೆ ಹೀಗೆ ಗಳುಹುತ್ತಿರುವೆ. ನನ್ನ ವ್ಯಾಮೋಹದಿಂದ ಜೀವಕ್ಕೆರವಾಗಬೇಡ. ರಾಮಚಂದ್ರ ಬರುವ ಮುಂಚೆ ತೊಲಗಾಚೆ. " " ದೇವತೆಗಳನ್ನೂ ಬಗ್ಗಿಸಿದ ನನಗೆ ಮನುಷ್ಯ ಮಾತ್ರನಾದ ರಾಮನಿಂದೇನು ಭಯ ? " ಎಂದು ರಾವಣನು ತನ್ನ ಉಗ್ರವಾದ ನಿಜರೂಪ ವನ್ನು ಧರಿಸಿ ಮುಂದುವರಿದನು. ಭಗವದಿಚ್ಛೆಯಂತೆ ಸೀತೆ ಅಂತರ್ಧಾನವಾಗಿ ಕೈಲಾಸಕ್ಕೆ ತೆರಳಿದಳು. ಸೀತೆಯ ಪ್ರತಿಕೃತಿಯನ್ನು ರಾವಣ ಮೋಹದಿಂದ ಎತ್ತಿಕೊಂಡು ತನ್ನ ರಥವನ್ನು ಆಕಾಶಕ್ಕೆ ಹಾರಿಸಿದನು. ಮಾಯಾಮೃಗವನ್ನು ಬಲಿಕೊಟ್ಟು ಮಾಯಾಸೀತೆಯನ್ನು ಕದ್ದೊಯ್ದನು. ರಾವಣನು ಕದ್ದೊಯ್ದ ಸೀತೆ ದಾರಿಯಲ್ಲಿ ಹಲುಬಿದಳು : " ಹಾಯ್, ಆರ್ಯಪುತ್ರ, ರಾವಣನಿಂದ ನನ್ನನ್ನು ರಕ್ಷಿಸು. ಲಕ್ಷ್ಮಣ, ನೀನೂ ನನ್ನನ್ನು ಗಮನಿಸಲಾರೆಯಾ ? ಓ ವನದೇವತೆಯೆ, ನನ್ನನ್ನು ಈ ನೀಚ ಕದ್ದೊಯ್ದ ಸುದ್ದಿಯನ್ನು ರಾಮನಿಗೆ ತಿಳಿಸುವೆಯಾ ? ಓ ಪಕ್ಷಿ- ರಾಜನಾದ ಜಟಾಯುವೆ! ನೀನಾದರೂ ನನ್ನ ಪಾಡನ್ನು ನನ್ನಿನಿಯನಿಗೆ ಅರುಹುವೆಯಾ ?" 'ಜಟಾಯು' ಎಂಬ ಕರುಣಕಂದ್ರನ ಕಿವಿಗೆ ಬಿದ್ದುದೆ ತಡ, ಪರ್ವತವೆ ನೆಗೆದು ಬಂದಂತೆ ಜಟಾಯು ರಾವಣನಿಗೆ ಅಡ್ಡವಾದನು. "ಓ ರಾವಣ, ರಾಮನ ಮಹಿಷಿಯನ್ನು ಕದ್ದು ಕೊಂಡೊಯ್ಯುವೆಯಾ ! ನಾನು ಬದುಕಿರುವವರೆಗೆ ಅದು ಸಾಧ್ಯವಿಲ್ಲ. ರಾಮನ ಬಾಣಗಳಿಂದ ಸಾಯಬೇಕೆಂದು ಆಸೆಯಿದೆಯೇನು ?" ಪಕ್ಷೀಂದ್ರನಿಗೂ ರಾಕ್ಷಸೇಂದ್ರನಿಗೂ ಭೀಕರವಾದ ಯುದ್ಧವೆ ನಡೆ- ಯಿತು. ಜಟಾಯುವಿನ ಉಗುರು-ಕೊಕ್ಕುಗಳಿಂದ ರಾವಣನ ಮೈಯೆಲ್ಲ ಗಾಯವಾಗಿ ನೆತ್ತರು ಸುರಿಯತೊಡಗಿತು. ಜಟಾಯುವು ತನ್ನ ಪುಕ್ಕ- ಗಳಿಂದಲೆ ರಾವಣನ ಬಿಲ್ಲನ್ನು ಮುರಿದನು. ಅವನ ಉಗುರಿನ ಹೊಡೆತಕ್ಕೆ ಸಾರಥಿ, ರಥ, ಕುದುರೆಗಳೆಲ್ಲ ನಾಶವಾದವು. ಒಮ್ಮೆಲೆ ಜಟಾಯು ರಾವಣನ ಬೆನ್ನ ಮೇಲೇರಿ ಉಗುರುಗಳಿಂದ ಅವನ ಬೆನ್ನೆಲಬನ್ನು ನಲುಗಿಸಿದನು; ಅವನ ತಲೆಗೂದಲನ್ನು ಕಿತ್ತೆಸೆದನು. ಸೀತೆಯನ್ನು ಕೆಳಗಿರಿಸಿ ರಾವಣ ಮತ್ತೆ ಯುದ್ಧಕ್ಕೆ ಅಣಿಯಾದನು. ಸ್ವಲ್ಪ ಹೊತ್ತು ಇಬ್ಬರೂ ದೇವತೆಗಳೂ ದಂಗು ಪಡುವಂತೆ ಕದನ ವಾಡಿದರು. ಅರುವತ್ತು ಸಾವಿರ ವರ್ಷಗಳ ಜೀವನವನ್ನುಂಡು ಮುದುಕನಾದ ಜಟಾಯು ಅಷ್ಟರಲ್ಲಿ ಬಳಲಿದಂತೆ ಭಾಸವಾಯಿತು. ಬಸವಳಿದ ಜಟಾಯುವಿನ ರೆಕ್ಕೆಗಳನ್ನೂ ಕಾಲುಗಳನ್ನೂ ರಾವಣನು ಕತ್ತರಿಸಿದನು. ಮಹಾವೀರ- ನಾದ ಜಟಾಯು ನೆಲಕ್ಕೆ ಕುಸಿದುಬಿದ್ದ. ಸೀತೆ ಆ ಮುದಿ-ದೇಹವನ್ನಪ್ಪಿ ಅತ್ತು ಗೋಗರೆದಳು. ಬಲಾತ್ಕಾರವಾಗಿ ಅವಳನ್ನು ಸೆಳೆದುಕೊಂಡು ರಾವಣನು ಆಕಾಶದಲ್ಲಿ ವಾಯುವೇಗದಿಂದ ಸಾಗಿದನು. ಬುಸುಗುಡುತ್ತಿರುವ ಹಾವಿನ ಮರಿಯಂತೆ, ಉರಿಯುತ್ತಿರುವ ಅಗ್ನಿ ಶಿಖೆಯಂತೆ ಉದ್ವಿಗ್ನಳಾದ ಸೀತೆಯನ್ನು ತೊಡೆಯಲ್ಲಿರಿಸಿಕೊಂಡು, ರಾವಣನು ತನ್ನ ಸಾವಿನ ನಾಂದಿಗಾಗಿ ಲಂಕೆಗೆ ತೆರಳಿದನು. ಆಕಾಶದಲ್ಲಿ ಸಾಗುತ್ತಿದ್ದಾಗ ದಾರಿಯಲ್ಲೊಂದೆಡೆ ಸೀತೆ ಐದು ಮಂದಿ ವಾನರರು ದೂರದಲ್ಲಿ ಕುಳಿತಿದ್ದುದನ್ನು ಕಂಡಳು. ಕೂಡಲೆ ತನ್ನ ಉತ್ತರೀಯ- ವನ್ನೂ ಮೈಯ ಬಂಗಾರವನ್ನೂ ಅವರೆಡೆಗೆ ಎಸೆದಳು. ಅವರಾದರೂ ರಾಮಚಂದ್ರನಿಗೆ ಕುರುಹನ್ನಿತ್ತಾರು ಎಂಬ ಆಸೆಯಿಂದ. ರಾವಣನು ಲಂಕೆಗೆ ಬಂದು ರಾಮನ ವಾರ್ತೆಯನ್ನು ತಿಳಿವುದಕ್ಕಾಗಿ ಎಂಟು ಮಂದಿ ಗೂಢಚಾರರನ್ನು ದಂಡಕೆಗೆ ಕಳಿಸಿದನು. ಅನಂತರ ಸೀತೆಗೆ ತನ್ನ ಅಂತಃಪುರವನ್ನು ತೋರಿಸಿ ನುಡಿದನು : "ಈ ದುರ್ಗವನ್ನು ದಾಟಿ ರಾಮನು ಇಲ್ಲಿಗೆ ಬರುವುದೆಂದರೇನು ? ಕನಸಿನ ಮಾತು ! ಬಿಟ್ಟುಬಿಡು ರಾಮನ ಆಸೆಯನ್ನು. ನನ್ನ ಮಡದಿ- ಯಾಗು ಸೀತೆ." ಸೀತೆ ಕಣ್ಣೀರೊರಸಿಕೊಂಡು ನುಡಿದಳು: ರಾಮನು ಬರದ ತಾಣವೂ ಒಂದುಂಟೆ ? ನೀನು ಎಲ್ಲಿ ಅಡಗಿದರೂ ಅವನಿಂದ ತಪ್ಪಿಸಿಕೊಳ್ಳಲಾರೆ." ರಾವಣನು ಸೀತೆಯನ್ನು ಪರಿಪರಿಯಾಗಿ ಗದರಿಸಿದನು. ರಾಕ್ಷಸಿ- ಯರಿಂದ ಗದರಿಸಿದನು. ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಅವಳನ್ನು ಅಶೋಕ ವನದಲ್ಲಿ ಇರಿಸಿದನು. ರಾಕ್ಷಸಿಯರಿಂದ ಸುತ್ತು- ವರಿದ ಸೀತೆ ಶಿಂಶುಪಾ ವೃಕ್ಷದ ಮೂಲದಲ್ಲಿ, ಟಿಟ್ಟಿಭಗಳಿಂದ ಸುತ್ತು- ವರಿದ ಹಂಸೆಯಂತೆ- ಕಾಗೆಗಳಿಂದ ಸುತ್ತುವರಿದ ಕೋಗಿಲೆಯಂತೆ ವಾಸಿಸಿದಳು. ಸೀತಾ-ರಾಮರ ಮುಂದಿನ ಅಭಿನಯದಲ್ಲಿ ವಿಪ್ರಲಂಭ ಶೃಂಗಾರದ ಅಂಕಪರದೆ ತೆರೆಯಿತು ! ಪಂಪಾಸರೋವರದ ಬಳಿ ಮಾರೀಚನನ್ನು ಕೊಂದು ಮರಳುತ್ತಿದ್ದಾಗ ರಾಮಚಂದ್ರನಿಗೆ ಲಕ್ಷ್ಮಣನು ಎದುರಾದನು. "ಮಾಯಾವಿ ರಾಕ್ಷಸರಿಂದ ತುಂಬಿದ ಕಾಡಿ- ನಲ್ಲಿ ಸೀತೆಯೊಬ್ಬಳನ್ನೆ, ಏಕೆ ಬಿಟ್ಟು ಬಂದೆ ?" ಎಂದು ರಾಮಚಂದ್ರನು ಲಕ್ಷ್ಮಣನನ್ನು ಗದರಿಸಿ ತ್ವರಿತವಾಗಿ ಆಶ್ರಮದೆಡೆಗೆ ತೆರಳಿದನು. ಸೀತೆ- ಯಿಂದ ಬರಿದಾದ ಆಶ್ರಮವನ್ನು ಕಂಡು ರಾಮಚಂದ್ರನು ಹಲುಬಿ- ದನು; ಲಕ್ಷ್ಮಣನನ್ನು ಹಂಗಿಸಿದನು: " ಲಕ್ಷಣ, ನೀನು ಪವಿತ್ರಳಾದ ಸೀತೆಯನ್ನೂ ಹಾಗೂ ನನ್ನಾಜ್ಞೆ ಯನ್ನೂ ಪಾಲಿಸದೆ ಹೋದೆ." ಲೀಲಾನಾಟಕ ಸೂತ್ರಧಾರಿಯ ಅಭಿನಯ ಕೇಳಬೇಕೆ ! ಲಕ್ಷ್ಮಣನೂ ದುಃಖದಿಂದ ವಿಷಯವನ್ನು ನಿವೇದಿಸಿಕೊಂಡ : "ನಾವು ಆಶ್ರಮದಲ್ಲಿದ್ದಾಗ ' ಓ ಲಕ್ಷ್ಮಣ ' ಎಂಬ ಕೂಗು ಕೇಳಿಸಿತು. ಆಗ ಅತ್ತಿಗೆ ನನ್ನನ್ನು ನಿನ್ನೆಡೆಗೆ ಹೋಗುವಂತೆ ಒತ್ತಾಯಿಸಿದಳು. ನಾನು ನಿರಾಕರಿಸಿದೆ. ಆಗ ಅವಳೆಂದಳು; ' ಅಣ್ಣನನ್ನು ಕೊಂದು ನನ್ನನ್ನು ಪಡೆಯಲೆಳೆಸುವ ನೀಚ ನೀನು !' ಅಣ್ಣ, ನಿನ್ನ ಬಾಣದ ಪೆಟ್ಟನ್ನು ತಿಂದ ಮಾರೀಚನಿಗಿಂತ ಅತ್ತಿಗೆಯ ವಾಗ್ಬಾಣದಿಂದ ಆಹತನಾದ ನನ್ನ ವೇದನೆಯೇನೂ ಕಡಿಮೆಯದಲ್ಲ. ನಾನೇನು ಮಾಡಲಿ ?" ರಾಮಚಂದ್ರನು " ಓ ನನ್ನ ಸೀತೆ, ಎಲ್ಲಿರುವೆ ? " ಎಂದು ಕಾಡಲ್ಲಿ ಕೂಗಿ ಕರೆದನು. ಗೋಳಿಟ್ಟನು. ಸಜ್ಜನರು ರಾಮನ ಲೀಲೆಯನ್ನು ಕಂಡು ಆನಂದಾಶ್ರುಗಳನ್ನು ಸುರಿಸಿದರು. ದುರ್ಜನರು ತಮ್ಮ ದೌರ್ಜನ್ಯಕ್ಕೆ ತಕ್ಕಂತೆ ಈ ಭಗವನ್ಮಾಯೆಯಿಂದ ವಿವಂಚಿತರಾದರು. ಸೀತೆಯನ್ನು ಹುಡುಕುತ್ತ ರಾಮಚಂದ್ರ ಮುಂದುವರಿದ. ಜನಸ್ಥಾನದ ಪ್ರಾಂತದಲ್ಲಿ ಜಟಾಯುವಿನ ದರ್ಶನವಾಯಿತು. ಸೀತೆಯನ್ನು ಕಾಪಾಡ ಹೋಗಿ ತಾನು ಮೈಮುರಿದುಕೊಂಡಿರುವ ಈ ಪೂಜ್ಯ ಪಕ್ಷೀಂದ್ರನನ್ನು ಕಂಡು ರಾಮಚಂದ್ರನಿಗೆ ದುಃಖವಾಯಿತು. ಜಟಾಯುವು ರಾವಣನಿಂದ ಸೀತೆ ಅಪಹೃತಳಾದ ವಾರ್ತೆಯನ್ನು ನಿವೇದಿಸಿ ರಾಮಚಂದ್ರನ ಚರಣ ಕಮಲಗಳ ಬಳಿ ತನ್ನಅಸುವನ್ನು ನೀಗಿದನು. ಅವನ ಆತ್ಮ ಸದ್ಗತಿಯನ್ನೈದಿತು. ಅವನ ಕಳೇಬರಕ್ಕೆ ಲಕ್ಷ್ಮಣನು ಅಂತ್ಯ ಸಂಸ್ಕಾರ ಮಾಡಿದನು. ರಾಮ-ಲಕ್ಷ್ಮಣರು ಗೋದಾವರಿ ಪಕ್ಷಿರಾಜನಿಗೆ ಜಲಾಂಜಲಿಯನ್ನಿತ್ತು, ರಾತ್ರಿಯನ್ನು ಜನ- ಸ್ಥಾನದಲ್ಲಿ ಕಳೆದು ಬೆಳಿಗ್ಗೆ ಪಶ್ಚಿಮಾಭಿಮುಖವಾಗಿ ಹೊರಟರು. ಹೀಗೆ ಕಾಡುಗಳಮೇಲೆ ಕಾಡುಗಳನ್ನು ದಾಟಿ ಸಾಗುತ್ತಿದ್ದಾಗ ಹೊಟ್ಟೆಯೊಳಗೆ ತಲೆ ಹೂತುಕೊಂಡ ಕಬಂಧನೆಂಬ ರಾಕ್ಷಸನನ್ನು ಕಂಡರು. ಅವನಿಗೆ ಒಂದು ಯೋಜನದಷ್ಟು ಉದ್ದವಾದ ತೋಳುಗಳಿದ್ದವು. ಅವನು ಅಷ್ಟು ದೂರದ ವರೆಗೆ ಕೈಚಾಚಿ ಎಟುಕಿದ ಪ್ರಾಣಿಗಳನ್ನೆಲ್ಲ ಎಳೆದು ಕಬಳಿಸುತ್ತಿದ್ದ. ರಾಮ ಲಕ್ಷ್ಮಣರೂ ಅವನ ತೋಳ ಸೆರೆಯಲ್ಲಿ ಸಿಕ್ಕಿಕೊಂಡರು. ಆಗ ರಾಮಚಂದ್ರನು ಅವನ ಬಲದ ತೋಳನ್ನು ಕತ್ತರಿಸಿದನು. ಲಕ್ಷ್ಮಣನು ಎಡದ ತೋಳನ್ನು ಕತ್ತರಿಸಿದನು. ಕೈ ಕಳೆದು- ಕೊಂಡು ನೆತ್ತರಿನಿಂದ ತೊಯ್ದು ನೆಲಕ್ಕುರುಳಿದ ಕಬಂಧನು ರಾಮ-ಲಕ್ಷ್ಮಣರನ್ನು ಕುರಿತು "ವೀರರಾದ ನೀವಾರು ?" ಎಂದು ಕೇಳಿದನು. ಲಕ್ಷ್ಮಣನು ತಮ್ಮ ಪರಿಚಯವನ್ನರುಹಿದನು. ಸಂತುಷ್ಟನಾದ ಕಬಂಧನು ನುಡಿದನು : "ಜಗನ್ನಾಥನಾದ ರಾಮಚಂದ್ರನೇ ! ನಿನಗೆ ವಂದನೆಗಳು, ನನಗೆ ಶಾಪ ವಿಮೋಚನೆಯಾದಂತಾಯಿತು. ನಾನು ದನು ಎಂಬ ಗಂಧರ್ವ, ಶಾಪ ದಿಂದ ರಾಕ್ಷಸನಾಗಿದ್ದೇನೆ. ಬ್ರಹ್ಮವರದಿಂದ ನಾನು ಅವಧ್ಯನಾಗಿದ್ದೇನೆ. ಇಂದ್ರನ ವಜ್ರದ ಏಟಿಗೆ ತಲೆ ಹೊಟ್ಟೆಯೊಳಗೆ ಸೇರಿಕೊಂಡಿದೆ. ಆದರೆ ಇನ್ನು ನಾನು ಈ ಪಾಪದಿಂದ ದೂರಾದೆನು. ಪರಮ ಪುರುಷನೆ, ಪ್ರಸನ್ನನಾಗು. " ಹೀಗೆಂದು ಅವನು ತನ್ನ ಪಾಪಶರೀರವನ್ನು ತೊರೆದು ಗಂಧರ್ವ- ನಾದನು. ಲಕ್ಷ್ಮಣನು ಅವನ ತನುವನ್ನು ಬೆಂಕಿಯಲ್ಲಿ ಸುಟ್ಟನು. ದನು ಗಂಧರ್ವ ಮತ್ತೆ ನುಡಿದನು : " ಹನುಮಂತನಿಂದ ಕೂಡಿದ ಸುಗ್ರೀವನೆಂಬ ಕಪಿ ನಿನ್ನ ಭಕ್ತನಾಗಿದ್ದಾನೆ. ಅವನು ನಿನಗೆ ಸೀತಾನ್ವೇಷಣೆಯಲ್ಲಿ ಸಹಕರಿಸಬಲ್ಲನು." ಹೀಗೆಂದು ದನು ರಾಮನಿಗೆ ಸುತ್ತುವರಿದು ವಂದಿಸಿ ಸ್ವರ್ಗಕ್ಕೆ ತೆರಳಿದನು. ರಾಮಚಂದ್ರನು ದನು ಹೇಳಿದ ಮಾರ್ಗದಲ್ಲಿ ಪಂಪೆಗೆ ತೆರಳಿದನು. ಒಂದು ಬೆಟ್ಟದ ತುದಿಯಲ್ಲಿ ರಾತ್ರಿಯನ್ನು ಕಳೆದು ಪ್ರಾತಃ- ಕಾಲದಲ್ಲಿ ಮತಂಗನ ಆಶ್ರಮಕ್ಕೆ ಬಂದನು. ಅಲ್ಲಿ ಶಬರಿ ಎಂಬ ತಾಪಸಿ ಇವರಿಬ್ಬರನ್ನೂ ಫಲಮೂಲಗಳಿಂದ ಉಪಚರಿಸಿ ಪೂಜಿಸಿದಳು. ರಾಮಚಂದ್ರನು 'ತಾಯಿ, ಕ್ಷೇಮವೆ ' ಎಂದಾಗ ಅವಳು ನುಡಿದಳು : " ರಾಮಚಂದ್ರ ನಿನ್ನ ಚರಣ ಕಿಂಕರರಾದ ಮುನಿಗಳ ಆಶೀರ್ವಾದ- ದಿಂದ ನಾನು ಕ್ಷೇಮವಾಗಿದ್ದೇನೆ. ಇನ್ನು ಕ್ಷೇಮಚಿಂತನೆ ಸಾಕು. ನನಗೆ ಒಪ್ಪಿಗೆಯನ್ನು ಕೊಡು. " ಎಂದು ಅವನೆದುರಿನಲ್ಲೆ ಉರಿಯುವ ಬೆಂಕಿಯಲ್ಲಿ ಪ್ರವೇಶಿಸಿದಳು. ಶಬರಿಯ ಭಗವದ್ಭಕ್ತಿ ಅವಳಿಗೆ ಸುಗತಿಯನ್ನೊದಗಿಸಿತು. ಅಲ್ಲಿಂದ ರಾಮ-ಲಕ್ಷ್ಮಣರು ಮುಂದುವರಿದರು. ದಾರಿಯಲ್ಲಿ ಕಮಲಗಳಿಂದ ಕಂಗೊಳಿಸುವ ಸ್ವಚ್ಛವಾದ ಪಂಪಾಸರೋವರ ಕಾಣಿಸಿತು. ಸುಂದರವಾದ ಕೊಳವನ್ನು ಕಂಡಾಗ ರಾಮನ ವಿರಹ ದುಃಖ ಮರುಕಳಿಸಿತು. ಒಮ್ಮೆಲೆ ತನ್ನ ಭಾವೀ ಕಾರ್ಯದಲ್ಲಿ ಸಹಕಾರಿಯಾಗ ಬಲ್ಲ ಕಪಿವೀರ ಹನುಮಂತನ ನೆನಪು ರಾಮಚಂದ್ರನಿಗಾಯಿತು. ಕಿಷ್ಕಿಂಧಾಕಾಂಡ ಪವಮಾನನ ಅವತಾರ ಕೇಸರಿ ಕಪಿರಾಜ್ಯದ ಅಧಿಪತಿ, ಆತನ ವಾಸ ಮೇರುಪರ್ವತದಲ್ಲಿ. ಅಂಜನಾದೇವಿ ಆತನ ಮಡದಿ. ಒಮ್ಮೆ ಹೀಗೆ ನಡೆಯಿತು. ಮತ್ತೇರಿದ ಆನೆಯೊಂದು ಭರದ್ವಾಜರನ್ನು ಕೊಲ್ಲಲು ಬೆನ್ನಟ್ಟುತ್ತಿತ್ತು. ಕೇಸರಿ ಅದನ್ನು ಕಂಡವನೆ ಸಿಂಹದಂತೆ ಆ ಆನೆಯ ಮೇಲೆರಗಿದನು. ಆನೆ ಸತ್ತು ಬಿದ್ದಿತು. ಮುನಿಗಳಿಗೆ ನಿರ್ಭಯ- ದಿಂದ ತಿರುಗಾಡಲು ಸಾಧ್ಯವಾಯಿತು. ಸಂತಸಗೊಂಡ ಮುನಿವೃಂದ ಬಯಸಿದ ವರವನ್ನು ಬೇಡುವಂತೆ ಕೇಸರಿಯನ್ನು ಕೇಳಿಕೊಂಡಿತು. ವಿನೀತನಾದ ಕೇಸರಿ ಉತ್ತರಿಸಿದನು : " ಪೂಜ್ಯರಾದ ತಾವೆಲ್ಲ ನನ್ನ ಮೇಲೆ ಪ್ರಸನ್ನರಾಗಿದ್ದೀರಿ. ಅದು ನನ್ನ ಭಾಗ್ಯ, ಪ್ರಸನ್ನರಾದ ತಾವು ನನಗೊಬ್ಬ ಮಗನನ್ನು ಕರುಣಿಸಬೇಕು. ಶ್ರೀಹರಿಯನ್ನು ಬಿಟ್ಟರೆ ಅವನನ್ನು ಮೀರಿಸುವವನು ಇನ್ನೊಬ್ಬನಿರ- ಬಾರದು. ಅಂಥ ಮಗ ನನಗೆ ಬೇಕು. " ಮುನಿಗಳು 'ತಥಾಸ್ತು' ಎಂದು ಹರಸಿ ಮುಂದೆ ನಡೆದರು. ಒಂದುದಿನ ಅಂಜನೆ ಋತುಸ್ನಾತೆಯಾಗಿ ಉದ್ಯಾನದಲ್ಲಿ ತಿರುಗು- ತ್ತಿದ್ದಾಗ ಪವಮಾನನನ್ನು ಕಂಡಳು. ನಾಚಿಕೆಯಲ್ಲಿ ಮುಳುಗಿಹೋದ ಆಕೆಯನ್ನು ಸಂತೈಸುತ್ತ ಪವಮಾನನು ಆಕೆಯ ಗರ್ಭದಲ್ಲಿ ತನ್ನ ಸನ್ನಿಧಾನವನ್ನಿಟ್ಟನು. ಮೂಡಣ ದಿಕ್ಕಿನಲ್ಲಿ ಭಾನು ಉದಿಸುವಂತೆ ಆಕೆಯ ಗರ್ಭದಿಂದ ತೇಜಸ್ವಿಯಾದ ಮಾರುತಿಯು ಜನಿಸಿದನು. ದೇವತೆಗಳು ಸಂತಸ- ಗೊಂಡರು. ಅಸುರಸ್ತ್ರೀಯರ ಗರ್ಭ ಮಿಡಿದಂತಾಯಿತು. ನೆಲಮುಟ್ಟಿದೊಡನೆಯೆ ಈ ಭಾರಿ ಶಿಶು ಹಸಿವೆನ್ನತೊಡಗಿತು. ತಾಯಿ ಹಣ್ಣು ತರಲೆಂದು ಹೊರಬಿದ್ದಳು. ಮಗು ಒಮ್ಮೆಲೆ ಆಕಾಶಕ್ಕೆ ನೆಗೆಯಿತು. ಉದಿಸುವ ಸೂರ್ಯನನ್ನು ಕಬಳಿಸಹೊರಟ ರಾಹುವನ್ನೆ ಕೆಡವುವದಕ್ಕಾಗಿ ನೆಗೆಯಿತು. ಹುಟ್ಟಿದಕ್ಷಣದಲ್ಲೆ ಈ ಅದ್ಭುತವನ್ನು ಸಾಧಿಸಿದ ಮಗು ಮುಂದೇನು ಮಾಡಲಾರದು ಎಂದು ಜನ ದಿಗಿಲಾದರು. ಹೆದರಿದ ರಾಹು ಇಂದ್ರನಿಗೆ ಶರಣಾದನು. ಇಂದ್ರ ಮಗುವಿನೆಡೆಗೆ ತನ್ನ ವಜ್ರಾಯುಧವನ್ನೆಸೆದನು. ರಾಹುವಿನ ಸಹವಾಸದಿಂದ ಇಂದ್ರನ ಬುದ್ಧಿಯೂ ಮಂಕಾಗಿದ್ದಿರಬೇಕು ! ಇಲ್ಲದಿದ್ದರೆ ಪವಮಾನನ ಮೇಲೆ ವಜ್ರವನ್ನೆಸೆವುದೆಂದರೇನರ್ಥ ? ವಜ್ರದ ಪೆಟ್ಟಿಗೆ ಮಗು ಪರ್ವತದ ಶಿಖರದಮೇಲೆ ಉರುಳಿಬಿತ್ತು. ಇದನ್ನು ಕಂಡು ಕೋಪಗೊಂಡ ಪ್ರಾಣದೇವರು ಮಗುವನ್ನು ತಾವೇ ಎತ್ತಿಕೊಂಡರು. ಪ್ರಾಣನಾಯಕ ಕೋಪಗೊಂಡ ಎಂದಮೇಲೆ ಜಗತ್ತು ನಡೆವುದಾದರೂ ಹೇಗೆ ? ಲೋಕವೆಲ್ಲ ವ್ಯಾಕುಲವಾಯಿತು. ಯಜ್ಞಾಧ್ಯಯನಾದಿಗಳು ಕೂಡ ನಿಂತುಹೋದವು. ಭೀತರಾದ ದೇವತೆಗಳು ಬ್ರಹ್ಮನನ್ನು ಮೊರೆ ಹೊಕ್ಕರು. ಬ್ರಹ್ಮನು ಸ್ವಲ್ಪ ಸಿಟ್ಟಿನಿಂದಲೇ ನುಡಿದನು : "ಬದುಕ ಬಯಸುವ ಯಾವನಾದರೂ ತನ್ನ ಒಡೆಯನಿಗೇ ದ್ರೋಹ ಬಗೆವುದಿದೆಯೆ ? ಇಂದ್ರನಿಗೆ ಐಶ್ವರ್ಯದ ಮತ್ತು ನೆತ್ತಿಗೇರಿದೆ. ಅವನು ತನಗೂ ಜಗತ್ತಿಗೂ ದುಃಖವನ್ನು ತಂದೊಡ್ಡಿದ್ದಾನೆ. ಪವಮಾನನು ಜಗತ್ತಿನ ಪ್ರೇರಕ, ಸೂತ್ರಧಾರಿ. ಅವನು ನನ್ನ ಅಥವಾ ರುದ್ರಾದಿಗಳ ಹಿಡಿತದಲ್ಲಿ ಸಿಗಲಾರ. ನಾರಾಯಣನೊಬ್ಬನೆ ಆತನ ನಾಥ, ನಾನೇನು ಮಾಡಲಿ ?" ಹೀಗೆ ದೇವತೆಗಳನ್ನು ಗದರಿಸಿ ಬ್ರಹ್ಮನು ದೇವತೆಗಳೊಡನೆ ಪ್ರಾಣದೇವರಿದ್ದಲ್ಲಿಗೆ ತೆರಳಿದನು. ಹುಬ್ಬಿನ ಕುಣಿತ ಮಾತ್ರದಿಂದ ಜಗತ್ತನ್ನು ನಾಶ ಪಡಿಸಬಲ್ಲ ಪವಮಾನನು ಮಾರುತಿಯನ್ನು ತೊಡೆಯಲ್ಲಿರಿಸಿಕೊಂಡು, ಶಾಂತನಾಗಿ ನೆಲದಲ್ಲಿ ಕುಳಿತಿದ್ದ. ಚತುರ್ಮುಖನು ನಲ್ಮೆಯಿಂದ ಮಗು- ವಿನ ಮೈಯನ್ನು ಪೂಸಿ ನುಡಿದನು : "ನನ್ನ ಪರಮ ಸ್ನೇಹಿತನಾದ ಪವಮಾನನೆ ! ತಂದೆ, ಮಕ್ಕಳ ಮೇಲೆ ಸಿಟ್ಟಾಗಬಾರದು. ನೀನು ದೇವತೆಗಳ ಪ್ರಭು. ಅವರನ್ನು ಮುನ್ನಿಸಿಬಿಡು." ಹೀಗೆಂದು ನುಡಿದು ಕೈಗೆ ಕೈಕೊಟ್ಟು ಎಬ್ಬಿಸಿದನು. ಪ್ರಾಣದೇವರು ಸಂತಸಗೊಂಡಾಗ ಜಗತ್ತೇ ಸಂತಸಗೊಂಡಿತು. ಬೇಸಗೆಯಲ್ಲಿ ಬೆಂದ ಜೀವಕ್ಕೆ ಮಳೆ ನೀರನ್ನು ಕಂಡಂತಾಯಿತು. "ಮಗುವಿನ ದವಡೆ (ಹನು) ವಜ್ರದ ಪೆಟ್ಟಿಗೂ ಗಾಯಗೊಳ್ಳದುದರಿಂದ ಈತನ ಹೆಸರು ' ಹನುಮಾನ್' ಎಂದೇ ಇರಲಿ" ಎಂದು ಹರಸಿ, ಇಂದ್ರನು ಬಾಡದ ಹೂಮಾಲೆಯೊಂದನ್ನು ಮಗುವಿಗೆ ಅರ್ಪಿಸಿದನು. ಚತುಮುರ್ಖನೂ ಮಗುವನ್ನು ಹರಸಿದನು: "ಇವನು ಎಲ್ಲ ಶತ್ರುಗಳನ್ನೂ ಸದೆಬಡಿಯಬಲ್ಲ ಮಹಾವೀರ, ಶಾಸ್ತ್ರ- ಗಳಲ್ಲಿಯೂ ಪಾರಂಗತನಾದ ಮಹಾ ಪಂಡಿತ. ನಾರಾಯಣನ ಆಪ್ತರಲ್ಲೆಲ್ಲ ಶ್ರೇಷ್ಠನಾದ ಮಹಾಭಕ್ತ." ಗ್ರಂಥದ ರಾಶಿಯನ್ನು ಹೊತ್ತು ಕೊಂಡೇ ಸೂರ್ಯನೊಡನೆ ಹಗಲೆಲ್ಲ ಸುತ್ತಾಡಿ ಈ ಹನುಮಂತ ಮಹಾವ್ಯಾಕರಣವನ್ನು ಅಧ್ಯಯನ ಮಾಡಿದ ನಂತೆ. ಸೂರ್ಯನಾರಾಯಣನ ಈ ಶಿಷ್ಯ ನೈಷ್ಠಿಕ ಬ್ರಹ್ಮಚಾರಿ ಬೇರೆ. ಗುಣನಿಧಿಯಾದ ಈ ಹನುಮಂತನಿಗೆ ಮೂರು ಲೋಕಗಳಲ್ಲಿ ಯಾರು ಸಾಟಿ ? ಸುಗ್ರೀವನೆಂಬ ಕಪಿಪುಂಗವನಿಗೆ ಈತನೊಡನೆ ಗೆಳೆತನವಿತ್ತು. ಕಪಿ ರಾಜನಾದ ಸುಗ್ರೀವನಿಗೆ, ಮಹಾ ವೈಯಾಕರಣಿಯಾದ ಮಾರುತಿಯೇ ಮುಖ್ಯಮಂತ್ರಿ. ಒಮ್ಮೆ ಈ ಕಪಿಪುಂಗವರಿಬ್ಬರೂ ಪಂಪೆಯ ತಡಿಯಲ್ಲಿ ಸೀತೆಗಾಗಿ ಕೊರಗುತ್ತಿರುವ ರಾಮಚಂದ್ರನನ್ನೂ ಸಂಗಾತಿಯಾದ ಲಕ್ಷ್ಮಣನನ್ನೂ ಕಂಡರು. ಧನುರ್ಬಾಣ ಧಾರಿಯೂ ಮಹಾ ಪರಾಕ್ರಮಿಯೂ ಆದ ಪುರುಷಸಿಂಹ ರಾಮನನ್ನು ಕಂಡು ಸುಗ್ರೀವ ಹೆದರಿಕೊಂಡನು. ಅವನ ಪರಿವಾರವೆಲ್ಲ ದಿಕ್ಕುಗೆಟ್ಟು ಓಡತೊಡಗಿತು. ಆಗ ಅವರಿಗೆಲ್ಲ ಹನುಮಂತನು ಧೈರ್ಯತುಂಬಬೇಕಾಯಿತು: "ಪರಮ ಪುರುಷನಾದ ರಾಮಚಂದ್ರ ಚಿತ್ತೈಸಿದ್ದಾನೆ. ಯಾರೂ ಭಯ ಪಡುವ ಕಾರಣವಿಲ್ಲ." ಸುಗ್ರೀವ ಭಯ ಸಂದೇಹಗಳಿಂದಲೆ ನುಡಿದನು : " ಇವರು ವಾಲಿಗೆ ಹಿತವನ್ನು ಬಯಸಿ ನನ್ನನ್ನು ಕೊಲ್ಲಬಂದಿರ- ಬೇಕು.ಏನಿದ್ದರೂ ಇವರನ್ನು ಪರೀಕ್ಷಿಸುವುದು ಅವಶ್ಯವಿದೆ." ಸುಗ್ರೀವನ ಮಾತಿನಂತೆ ಹನುಮಂತ ಭಿಕ್ಷು ವೇಷವನ್ನು ಧರಿಸಿ- ಕೊಂಡು ರಾಮಚಂದ್ರನ ಬಳಿಗೆ ಬಂದು ವಿನಯಪೂರ್ವಕವಾಗಿ ಕಾಲಿಗೆರಗಿದನು. ಕಾಲಿಗೆರಗಿದ ನಿಜ ದಾಸನನ್ನು ರಾಮಚಂದ್ರನು ಚಕ್ರಾಂಕಿತವಾದ ತನ್ನ ಕೈಯಿಂದ ಹಿಡಿದೆಬ್ಬಿಸಿದನು. ಸುಗ್ರೀವನೊಡನೆ ಸಖ್ಯ ಆಂಜನೇಯನು ಕೈಮುಗಿದು ನಿಂತು ಪ್ರಭು ರಾಮಚಂದ್ರನೊಡನೆ ವಿಜ್ಞಾಪಿಸಿಕೊಂಡನು : "ವೀರನೆ ! ನಾನು ಕೇಳುತ್ತಿರುವ ಪ್ರಶ್ನೆಗೆ ನನ್ನ ಮನಸ್ಸೆ ಉತ್ತರ ಕೊಡು ತಿದೆ. ಆದರೂ ನಿನ್ನ ಮುಖದಿಂದ ಉತ್ತರವನ್ನು ಕೇಳಬೇಕೆಂಬ ಚಾಪಲ, ಲೋಕೋತ್ತರ ಸುಂದರನಾದ ನೀನು ಯಾರು ? ನಿನ್ನ ಕಣ್ಣುಗಳು ಯಾರನ್ನೋ ಹುಡುಕುವಂತಿವೆ ! ನೀನು ಅರಸುತ್ತಿರುವ ವ್ಯಕ್ತಿಯಾದರೂ ಯಾರು ? ನಿನ್ನ ಜತೆಗಾರನಾದ ಈತನಾದರೂ ಯಾರು ? ನನಗೇನೋ ನಿಮ್ಮನ್ನು ಕಂಡಾಗ ನರ-ನಾರಾಯಣರನ್ನು ಕಂಡಂತೆ ಸಂತಸವಾಗು- ತ್ತಿದೆ. ಸುಗ್ರೀವನೆಂಬ ಕಪಿರಾಜ ತನ್ನ ಅಣ್ಣನಾದ ವಾಲಿಯೊಡನೆ ಜಗಳಾಡಿ ಇಲ್ಲಿ ನೆಲಸಿದ್ದಾನೆ. ವಾಯುಪುತ್ರನಾದ ನಾನು ಆತನ ಮಿತ್ರ, ಹೊಸಬ- ರಾದ ನಿಮ್ಮಿಬ್ಬರನ್ನು ಕಂಡು ದಿಗಿಲುಗೊಂಡ ಸುಗ್ರೀವ ನನ್ನನ್ನು ಇಲ್ಲಿಗೆ ಕಳುಹಿದನು. ಆತನ ಬಯಕೆಯಂತೆ ಭಿಕ್ಷು ವೇಷದಿಂದ ನಾನಿಲ್ಲಿಗೆ ಬಂದಿದ್ದೇನೆ." ಹನುಮಂತನ ಮಾತನ್ನಾಲಿಸಿದ ರಾಮಚಂದ್ರ ಲಕ್ಷ್ಮಣನೊಡನೆ ನುಡಿದನು: "ಲಕ್ಷಣ, ಈತ ನಮ್ಮ ಪರಮಮಿತ್ರ. ಶಬ್ದಶಾಸ್ತ್ರದಲ್ಲಿ ಮಹಾ ಪಂಡಿತನೆಂಬುದು ಇವನ ಮಾತಿನಿಂದಲೇ ತಿಳಿವುದಲ್ಲವೆ ? ಎಂಥ ಪರಿಶುದ್ಧವಾದ ಮಾತುಗಾರಿಕೆ !" ಅಣ್ಣನ ಇಂಗಿತವನ್ನರಿತ ತಮ್ಮ ಮಾರುತಿಗೆ ಉತ್ತರಿಸಿದನು : "ಮಿತ್ರನೆ, ದಶರಥ ಪುತ್ರನಾದ ರಾಮಚಂದ್ರನೇ ಈತನು. ಗುರುವಚನ ವನ್ನು ಪಾಲಿಸುವುದಕ್ಕಾಗಿ ರಾಜ್ಯವನ್ನು ತ್ಯಜಿಸಿ ಕಾಡಿಗೆ ಬಂದಿದ್ದಾನೆ. ಪತಿವ್ರತೆಯಾದ ನನ್ನ ಅತ್ತಿಗೆ ಸೀತೆ, ಕಾಡಿನಲ್ಲಿಯೂ ನೆರಳಿನಂತೆ ಅಣ್ಣನನ್ನು ಅನುಸರಿಸಿ ಬಂದಳು. ಅಣ್ಣನ ಪಾದಧೂಳಿಯ ಸೇವೆಯ ಲೋಭದಿಂದ ನಾನೂ ಜತೆಗೆ ಬಂದೆನು. ನನ್ನನ್ನು ಲಕ್ಷಣ ಎಂದು ಕರೆಯುತ್ತಾರೆ. ನಾವು ಕಾಡಿನಲ್ಲಿದ್ದಾಗ ಯಾವನೋ ಪಾತಕಿ ಸೀತಾಮಾತೆ ಯನ್ನು ಕದ್ದೊಯ್ದನು. ಸಜ್ಜನನಾದ ಸುಗ್ರೀವನಿಂದ ಸೀತಾನ್ವೇಷಣೆಯ ವಿಷಯದಲ್ಲಿ ಸಹಾಯ ದೊರಕಬಹುದೆಂದು ನಮ್ಮಣ್ಣ ನಿರೀಕ್ಷಿಸು- ತ್ತಿದ್ದಾನೆ." ಆಗ ಹನುಮಂತನು ಸಂತಸಗೊಂಡು ನುಡಿದನು : " ವಾಲಿಯಿಂದ ತೊಂದರೆಗೊಳಗಾದ ಸುಗ್ರೀವ ನಿನಗೆ ಶರಣಾಗತ ನಾಗಿದ್ದಾನೆ. ಓ ಪುರುಷೋತ್ತಮನೆ ! ತನ್ನ ಹಿತಕ್ಕಾಗಿಯಾದರೂ ಸುಗ್ರೀವ ನಿನ್ನ ಸಖ್ಯವನ್ನು ಬಯಸುತ್ತಾನೆ. ನೀನು ನಮ್ಮ ಸ್ವಾಮಿ, ನಿನ್ನ ಕಾರ್ಯ ಬೇರಲ್ಲ-ನಮ್ಮ ಕಾರ್ಯ ಬೇರಲ್ಲ. ಅದನ್ನು ಪೂರಯಿಸುವುದು ನಮ್ಮ ಕರ್ತವ್ಯ. " ಎಂದವನೇ ರಾಮ-ಲಕ್ಷ್ಮಣರನ್ನು ತನ್ನ ಹೆಗಲ ಮೇಲೇರಿಸಿ ಸುಗ್ರೀವನೆಡೆಗೆ ನಡೆದನು. ದೂರದಿಂದಲೆ ಸುಗ್ರೀವನನ್ನು ಕೂಗಿ ಹೇಳಿದನು: " ಸುಗ್ರೀವ ! ನಮಗೆಲ್ಲರಿಗೂ ಸ್ವಾಮಿಯಾದ ರಾಮಚಂದ್ರ ಚಿತ್ತೈಸಿದ್ದಾನೆ, ನೋಡು. ಕೋಟಿ ಜನ್ಮಗಳ ಪುಣ್ಯಕ್ಕೂ ದೊರಕದ ಪ್ರಭುವಿನ ದರ್ಶನ ನಮ್ಮ ಭಾಗ್ಯದಿಂದ ನಮಗೆ ದೊರಕಿದೆ. ಇವನನ್ನು ಶರಣಾಗು. ನಮ್ಮ ದುಗುಡವೆಲ್ಲ ದೂರಾಯಿತೆಂದು ತಿಳಿ, ನನ್ನ ಮೇಲೆ ವಿಶ್ವಾಸ- ವಿಟ್ಟು ನೀವಿಬ್ಬರೂ ಗೆಳೆಯರಾಗಬೇಕು. ರಾಮಪತ್ನಿಯ ಅನ್ವೇಷಣೆ- ಯಲ್ಲಿ ನೀನು ಸಹಾಯಕನಾಗಬೇಕು. " ಮಾರುತಿಯ ಮಾತನ್ನಾಲಿಸಿದ ಸುಗ್ರೀವ 'ಧನ್ಯನಾದೆ' ಎಂದು ರಾಮಚಂದ್ರನ ಪಾದಗಳಿಗೆರಗಿದನು, ರಾಮಚಂದ್ರ ಅವನನ್ನು ಹಿಡಿದೆಬ್ಬಿಸಿ "ನಾವಿಬ್ಬರೂ ಮಿತ್ರರಿದ್ದೇವೆ. ಇನ್ನು ನನ್ನ ಕೆಲಸದಲ್ಲಿ ನಿನ್ನ ಹೊಣೆ- ಯಿದೆ; ನಿನ್ನ ಕೆಲಸದಲ್ಲಿ ನನ್ನದೂ ಹೊಣೆಯಿದೆ" ಎಂದು ಸಂತೈಸಿದನು. ಹನುಮಂತನು ಕೂಡಲೆ ಸಾಕ್ಷಿಭೂತನಾದ ಅಗ್ನಿಯನ್ನು ಬೆಳಗಿಸಿ- ದನು. ರಾಮಭದ್ರನೂ ಸುಗ್ರೀವನೂ ಕೈಕೈ ಹಿಡಿದುಕೊಂಡು ಅಗ್ನಿಗೆ ಸುತ್ತುವರಿದು ಮೈತ್ರಿಯ ಪ್ರತಿಜ್ಞೆಯನ್ನು ಪೂರಯಿಸಿದರು. ರಾಮನನ್ನು ಸತ್ಕರಿಸಿದ ಸುಗ್ರೀವನು ಮುಂದಿನ ವಿಷಯವನ್ನು ಪ್ರಸ್ತಾಪಿಸಿದನು : " ಪೂಜ್ಯನಾದ ಸ್ನೇಹಿತನೇ ! ನಿನ್ನ ಕಾರ್ಯವನ್ನು ಈ ಮೊದಲೆ ಹನುಮಂತನಿಂದ ತಿಳಿದುಕೊಂಡಿದ್ದೇನೆ. ಸೀತೆಯ ಕುರಿತು ನಮಗೆ ದೊರೆತ ಕುರುಹುಗಳನ್ನು ನಾನು ವಿನಂತಿಸಿಕೊಳ್ಳಬೇಕು. ನಾನೊಮ್ಮೆ ಸಚಿವರೊಡನೆ ಪರ್ವತದ ತಪ್ಪಲಲ್ಲಿ ಕುಳಿತಿದ್ದೆ. ಆಗ ರಾವಣನು ಆಕಾಶದಲ್ಲಿ ಹಾರುತ್ತಿರುವದನ್ನು ಕಂಡೆ. ಅವನ ಬಳಿಯಲ್ಲಿ ಒಬ್ಬ ಸುಂದರ ಲಲನೆಯಿದ್ದಳು. ಹಾ ರಾಮಚಂದ್ರ , ಹಾ ಲಕ್ಷ್ಮಣ ಎಂದಾಕೆ ಕೂಗುತ್ತಿದ್ದಳು. ಆಕೆ ನಮ್ಮನ್ನು ಕಂಡೇ ಇರಬೇಕು ಅಂತೆಯೇ ತನ್ನ ಮೇಲುದವನ್ನೂ ಕೆಲ ಆಭರಣವನ್ನೂ ಕೆಳಕ್ಕೆ ಚೆಲ್ಲಿದಳು. ಅವು ನನ್ನ ಬಳಿಯಲ್ಲಿವೆ. ಅವನ್ನು ಕಂಡು ನೀನು ಗುರುತಿಸಬಹುದು" ಎಂದು ಗುಹೆಯಿಂದ ಅವನ್ನು ಹೊರತಂದು ರಾಮನಿಗೆ ಒಪ್ಪಿಸಿದನು. ಸುಖನಿಧಿಯಾದ ರಾಮಚಂದ್ರ ಅವುಗಳನ್ನು ಕಂಡು ಮಮ್ಮಲ ಮರುಗಿದನು. ಆಗ ಸುಗ್ರೀವನು "ರಾಮಭದ್ರ ! ರಾಕ್ಷಸ- ರನ್ನು ಸಂಹರಿಸಿ ಸೀತೆಯನ್ನು ಕರೆದುತರುವ ಕಾರ್ಯದಲ್ಲಿ ನಾವೆಲ್ಲ ನಿನ್ನ ಜತೆಯಿದ್ದೇವೆ. ನೀನು ಕೊರಗಬಾರದು" ಎಂದು ಸಂತೈಸಿದನು. ಸುಗ್ರೀವನ ಮಾತನ್ನು ಕೇಳಿದ ರಾಮಚಂದ್ರ ಸಂತಸದಿಂದ ಆತನನ್ನು ಬಿಗಿದಪ್ಪಿ ನುಡಿದನು: "ಸುಗ್ರೀವ! ನಿನ್ನ ಸೌಜನ್ಯಕ್ಕೆ ನಾವು ಮರುಳಾಗಿದ್ದೇವೆ. ನಮ್ಮ ಕಾರ್ಯ ದಲ್ಲಿ ನಿಮ್ಮ ಸಹಕಾರ ಬೇಕು. ಅಂತೆಯೇ ನಿನ್ನ ಕಾರ್ಯದಲ್ಲಿಯೂ ನೀನು ನಮ್ಮ ಸಹಕಾರವನ್ನು ಪಡೆವುದು ಇಷ್ಟವಾಗಿದೆ. ನಿನ್ನ ಆತಂಕ- ಗಳನ್ನರುಹಿದರೆ ಪರಿಹರಿಸಬಲ್ಲೆ." ನಿಂತುಕೊಂಡೇ ಮಾತು ನಡೆದಿತ್ತು. ಇದನ್ನು ಕಂಡು ಸುಗ್ರೀವನೂ ಹನುಮಂತನೂ ಹೂಗಳಿಂದ ಸುವಾಸಿತದ ಎರಡು ಗೆಲ್ಲುಗಳನ್ನು ತಂದು ರಾಮ-ಲಕ್ಷ್ಮಣರಿಗೆ ಆಸನವನ್ನಿತ್ತು ಸತ್ಕರಿಸಿದರು. ಬುಧ-ಬೃಹಸ್ಪತಿಗಳಿಂದ ಕೂಡಿದ ಸೂರ್ಯ-ಚಂದ್ರರಂತೆ, ರಾಮಲಕ್ಷ್ಮಣರು ಸುಗ್ರೀವ-ಹನುಮಂತರೊಡನೆ ಶೋಭಿಸಿದರು. ಇನ್ನು ವಾಲಿಗೆ ಉಳಿಗಾಲವಿಲ್ಲ ರಾಮಚಂದ್ರನು ಒಂದೆಡೆ ಕುಳಿತಿದ್ದ. ಇನ್ನೊಂದೆಡೆ ಹನುಮಂತನೊಡನೆ ಸುಗ್ರೀವ ಕುಳಿತಿದ್ದ. ಮಾತಿಗೆ ಪ್ರಾರಂಭವಾಯಿತು. ಸುಗ್ರೀವನು ರಾಮಚಂದ್ರನೆದುರು ತನ್ನ ಗೋಳನ್ನು ತೋಡಿಕೊಂಡನು: "ರಾಮಭದ್ರ ! ನನಗೊಬ್ಬ ಅಣ್ಣನಿದ್ದಾನೆ. ಅವನು ಮೂರು ಲೋಕ ಗಳಲ್ಲೂ ಮಹಾ ಪರಾಕ್ರಮಿ. ಅವನ ಹೆಸರು ವಾಲಿ. ರಾಜ್ಯವನ್ನೂ ಸಂಪತ್ತನ್ನೂ ಅಪಹರಿಸಿ ನನ್ನನ್ನು ರಾಜ್ಯದಿಂದ ಅಟ್ಟಿದ್ದಾನೆ. ಇನ್ನೊಂದು ಮಾತು ನಿನ್ನೆದುರು ಹೇಳಲು ಮನಸ್ಸು ನಾಚುತ್ತಿದೆ. ಆದರೂ ಗೆಳೆತನ ಹೇಳು ಎನ್ನುತ್ತಿದೆ. ನನ್ನ ಪ್ರೀತಿಯ ಪತ್ನಿಯನ್ನು ಆತ ಬಲಾತ್ಕಾರದಿಂದ ಉಪಭೋಗಿ ಸುತ್ತಿದ್ದಾನೆ. ಹೀಗಿದೆ ನಮ್ಮ ಭ್ರಾತೃಸ್ನೇಹ ! ಇಂಥ ಕಷ್ಟ ಕಾಲದಲ್ಲಿಯೂ ಈ ಹನುಮಂತನೊಬ್ಬ ನನಗೆ ಬಂಧು, ಆಸರೆ. ನೀರಿನಲ್ಲಿ ಮುಳುಗುವ- ವನಿಗೆ ದೋಣಿಯಂತೆ ಆತ ನನಗೆ ಸರ್ವಸ್ವವಾಗಿದ್ದಾನೆ. ಹೀಗೆ ಅಣ್ಣನ ಕಾಟ ತಪ್ಪಿಸಿಕೊಳ್ಳಲು ಈ ತಮ್ಮ ನಿನ್ನನ್ನು ಶರಣು ಹೊಂದಿದ್ದಾನೆ. ನೀನು ಶರಣಾಗತ ವತ್ಸಲ ಎಂದು ಕೇಳಿದ್ದೇನೆ. ಇನ್ನು ವಾಲಿಯ ಕುರಿತು ಹೇಳುವೆ. ಅವನ ಪರಾಕ್ರಮ ಅನುಪಮ ವಾಗಿದೆ. ಆತ ಪರ್ವತಗಳನ್ನು ಚೆಂಡಿನಂತೆ ಎಸೆಯಬಲ್ಲ. ಸಾಗರಗಳನ್ನು ಬಾವಿಯಷ್ಟು ಹಗುರಾಗಿ ದಾಟಬಲ್ಲ. ಅವನೆದುರು ತ್ರೈಲೋಕ್ಯದ ಸಮಸ್ತ ಬಲವೂ ಹುಲ್ಲುಕಡ್ಡಿಗೆ ಸಮ. ನನ್ನಿಂದ ಸಣ್ಣ ಅಪರಾಧ- ವೇನೋ ನಡೆದದ್ದು ನಿಜ. ಅದೂ ಗೊತ್ತಿದ್ದು ಮಾಡಿದುದಲ್ಲ. ಅದಕ್ಕೆ ಅವನು ಕೊಟ್ಟ ಶಿಕ್ಷೆ ಎಂಥ ಅಸಹ್ಯವಾದುದು ! ನನ್ನ ಮಾತಿನ ಸತ್ಯತೆಯನ್ನು ನೀನು ಮಾರುತಿಯಿಂದ ತಿಳಿಯಬಹುದು. ಈ ಸಂದರ್ಭದಲ್ಲಿ ನಮ್ಮ ಪೂರ್ವವೃತ್ತವನ್ನು ನಿವೇದಿಸಿಕೊಳ್ಳುತ್ತೇನೆ. ನಮ್ಮ ತಂದೆ ಋಕ್ಷಶಿರಸ್ಸು ಮೃತನಾದಾಗ ನಮ್ಮಣ್ಣ ವಾಲಿ ರಾಜನಾದ- ನು. ನಾನು ಯುವರಾಜನಾದೆ. ಒಂದು ದಿನ ರಾತ್ರಿ, ದುಂದುಭಿಯ ಅಣ್ಣ ಮಾಯಾವಿ ಎಂಬ ಅಸುರ ಯುದ್ಧಕ್ಕಾಗಿ ಕಿಷ್ಕಿಂಧೆಗೆ ಬಂದನು. ಗುಹೆಯ ಬಾಗಿಲಲ್ಲಿ ನಿಂತು ವಾಲಿಯನ್ನು ಯುದ್ಧಕ್ಕಾಗಿ ಕರೆದನು. ವಾಲಿ ನಾವು ತಡೆದರೂ ಕೇಳದೆ ಹೊರಟುಹೋದನು. ಅಸುರನನ್ನು ಬೆನ್ನಟ್ಟಿ- ಕೊಂಡು ಓಡಿಹೋಗುವ ವಾಲಿಯನ್ನು ಭ್ರಾತೃಸ್ನೇಹದಿಂದ ನಾನೂ ಹಿಂಬಾಲಿಸಿದೆನು. ಮಾಯಾವಿ ಓಡುತ್ತ ಓಡುತ್ತ ಪಾತಾಲವನ್ನು ಪ್ರವೇಶಿಸಿದನು. ಗುಹೆಯ ಬಾಗಿಲಲ್ಲಿ ನನ್ನನ್ನು ನಿಲ್ಲಿಸಿ ವಾಲಿಯೂ ಅವನ ಹಿಂದೆಯೇ ಪಾತಾಲಕ್ಕೆನಡೆದನು. ಗುಹೆಯ ಬಳಿ ನಾನು ಕಾದು ಕುಳಿತೆ. ಒಂದು ವರ್ಷದತನಕ ಕಾದು ಕುಳಿತೆ. ಅಣ್ಣನ ಸುಳಿವಿಲ್ಲ. ಬದಲಾಗಿ ರಕ್ತಧಾರೆ ಬಿಲದಿಂದ ಹರಿದು ಬರುವುದನ್ನು ಕಂಡೆ, ಮರಣ ವೇದನೆಯಿಂದ ಕೂಗಿಕೊಳ್ಳುವಂತೆಯೂ ಸದ್ದು ಕೇಳಿಸಿತು. ಮನಸ್ಸು ಏಕೋ ಅಮಂಗಲವನ್ನು ಆಶಂಕಿಸಿತು. ಕಣ್ಣಿನಲ್ಲಿ ನೀರು ಮಿಡಿಯಿತು. ಒಂದು ದೊಡ್ಡ ಬಂಡೆಯಿಂದ ಗುಹೆಯನ್ನು ಮುಚ್ಚಿ ಹೊರಟು ಬಂದುಬಿಟ್ಟೆ. ಅಣ್ಣನನ್ನು ಕಳೆದುಕೊಂಡು ಮನಸ್ಸು ವಿಷಣ್ಣವಾಗಿತ್ತು. ರಾಜ್ಯದ ಬಯಕೆಯೂ ನನಗಿರಲಿಲ್ಲ. ಆದರೂ ಮಂತ್ರಿಗಳ ಬಂಧುಗಳ ಒತ್ತಾಯಕ್ಕೆ ಕಟ್ಟು ಬಿದ್ದು ರಾಜ್ಯಸೂತ್ರವನ್ನು ಕೈಗೆ ತೆಗೆದುಕೊಂಡೆ. ಆಗ ವಾಲಿ ಬಂದ ! ಒಂದು ವರ್ಷದ ವರೆಗೆ ಮಾಯಾವಿಯೊಡನೆ ಹೋರಾಡಿ ಅವನು ಹೊರಟು ಬಂದಾಗ ಬಿಲ ಮುಚ್ಚಿದ್ದನ್ನು ಕಂಡನು. ನನ್ನನ್ನು ಕೂಗಿ ಕರೆದರೂ ನನ್ನ ಪ್ರತಿಸ್ವರ ಕೇಳಿಸಲಿಲ್ಲ. ಆಗ ಬಂಡೆಯನ್ನೊದ್ದು ಬಿಲ- ದಿಂದ ಹೊರಬಿದ್ದವನೇ ಕಿಷ್ಕಂಧೆಗೆ ಬಂದ. ಸಿಟ್ಟಿನಿಂದ ಬುಸುಗುಡು- ತ್ತಿರುವ ಅವನನ್ನು ಕಂಡು ನಾನು ಕಾಲಿಗೆರಗಿದೆ. "ನನ್ನಿಂದ ತಪ್ಪಾಯಿತು. ಪ್ರಮಾದ ನಡೆದುಹೋಯಿತು. ಕ್ಷಮಿಸು,ರಾಜ್ಯಭಾರವನ್ನು ನಿನ್ನ ಚರಣಗಳಲ್ಲಿ ಒಪ್ಪಿಸಿದ್ದೇನೆ" ಎಂದು ಬೇಡಿಕೊಂಡೆ. ಆದರೆ ಅವನ ಮನಸ್ಸು ಕರಗಲಿಲ್ಲ. ಮನ ಬಂದಂತೆ ತೆಗಳಿ, ಉಟ್ಟ ಬಟ್ಟೆಯಲ್ಲಿ ನನ್ನನ್ನು ರಾಜ್ಯದಿಂದ ಹೊರಗಟ್ಟಿದನು. ಈ ಋಷ್ಯಮೂಕವೊಂದು ಅವನಿಗೆ ಅಗಮ್ಯವಾಗಿದೆ. ಎಂತಲೇ ಇಲ್ಲಿ ಧೈರ್ಯದಿಂದ ವಾಸವಾಗಿ- ದ್ದೇನೆ. ಇಂಥ ಸಂಕಟದಲ್ಲಿ ನಮ್ಮ ಗೆಳೆತನದ ಉಪಯೋಗವನ್ನು ನಾನು ಪಡೆಯಲಿಚ್ಛಿಸುತ್ತೇನೆ." ಸುಗ್ರೀವನ ಮಾತನ್ನು ಕೇಳಿ ರಾಮನೆಂದನು ; "ತಮ್ಮನ ಮಡದಿಯನ್ನು ಭೋಗಿಸುವ ವಾಲಿ ನನ್ನ ಒಂದು ಬಾಣದ ಆಹಾರ." ವಾಲಿಯ ಮಹಾಬಲವನ್ನು ಕಂಡ ಸುಗ್ರೀವನು ಸ್ವಲ್ಪ ಶಂಕಿತ- ನಾಗಿಯೆ ನುಡಿದನು : " ಮಹಾದೈತ್ಯರ ಆಯುಧಗಳು ಯಾರ ಕವಚವನ್ನು ಕೂಡ ನಲುಗಿಸ ಲಾರವೋ ಅಂಥ ವಾಲಿಯ ಮಟ್ಟಿಗೆ ನಿನ್ನ ಪ್ರತಿಜ್ಞೆಯನ್ನು ಹೇಗೆ ನಂಬಲಿ ರಾಮಚಂದ್ರ ? " ಆಗ ಲಕ್ಷ್ಮಣ ನುಡಿದನು : " ಏನು ಪ್ರಯೋಗಮಾಡಿ ತೋರಿಸಿದರೆ ನಿನಗೆ ನಂಬುಗೆಯಾದೀತು, ಹೇಳು. " " ಹಾಗಿದ್ದರೆ ಒಂದು ಮಾತು. ದುಂದುಭಿ ಎಂದೊಬ್ಬ ಇಂದ್ರನ ಶತ್ರುವಿದ್ದ. ಅವನೊಮ್ಮೆ ವರುಣನೊಡನೆ ಜಗಳಾಡಹೋದ. ಸಾವಿಗಂಜಿದ ವರುಣ ಹಿಮವಂತನನ್ನು ಆಶ್ರಯಿಸಿದ. ಹಿಮವಂತನೋ ವಾಲಿಯೆಡೆಗೆ ಕೈ ಚಾಚಿದ. ಸರಿ, ದುಂದುಭಿಯ ಯುದ್ಧ ವಾಲಿಯೊಡನೆ ಸಾಗಿತು. ವಾಲಿಯ ಕೈಯಲ್ಲಿ ದುಂದುಭಿ ಬದುಕಿ ಉಳಿಯಲಿಲ್ಲ. ಅವನ ಕಳೇಬರವನ್ನು ವಾಲಿ ಒಂದು ಯೋಜನ ದೂರಕ್ಕೆ ಎಸೆದ. ಆತನ ದೇಹದಿಂದ ರಕ್ತಬಿಂದುಗಳು ಚಿಮ್ಮುತ್ತಿದ್ದವು. ಋುಷ್ಯಮೂಕಾಶ್ರಮದ ಪವಿತ್ರ ಸ್ಥಳ- ದಲ್ಲೂ ಆ ನೆತ್ತರಿನ ಹನಿಗಳು ಬಿದ್ದವು. ಋಷಿಮಾತಂಗರು ಸಿಟ್ಟಾದರು. ಸಿಟ್ಟಿನಲ್ಲಿ ವಾಲಿಯನ್ನು ಶಪಿಸಿದರು : 'ಈ ದೇಶಕ್ಕೆ ಕಾಲಿಟ್ಟರೆ ನಿನಗೆ ಸಾವು ಬರಲಿ' ಎಂದು. ವಾಲಿಯ ಶಾಪ ನನಗೆ ವರವಾಯಿತು. ವಾಲಿ- ಯಿಂದ ನಿರ್ವಾಸಿತನಾದ ನನಗೆ ಈ ಋಷ್ಯಮೂಕವನ್ನು ಬಿಟ್ಟರೆ ಮೂರು ಲೋಕದಲ್ಲಿ ಬೇರೆ ತಾಣವಿಲ್ಲ. ಆ ದುಂದುಭಿಯ ಬಹುಭಾರದ ಕಳೇಬರ ಇಲ್ಲೆ ಬಳಿಯಲ್ಲಿದೆ. ಅದನ್ನು ಎಲ್ಲಾದರೂ ದೂರ ಎಸೆದೆ- ಯಾದರೆ ನಿನ್ನ ಬಲದಮೇಲೆ ನಂಬುಗೆಯಾದೀತು. " ಪರ್ವತದಂತೆ ರಾಶಿ ಬಿದ್ದಿರುವ ದುಂದುಭಿಯ ಅಸ್ಥಿಪಂಜರವನ್ನು ರಾಮಚಂದ್ರ ಕಾಲ ಹೆಬ್ಬೆರಳಿನಿಂದ ನೂರು ಯೋಜನ ದೂರ ಎಸೆದು ಬಿಟ್ಟ. ಅದು ಭೂಮಿಯನ್ನು ಭೇದಿಸಿ ಪಾತಾಲದಲ್ಲಿ ರುದ್ರವರದಿಂದ ಮತ್ತರಾದ ಅನೇಕಅಸುರರನ್ನು ಧ್ವಂಸಗೊಳಿಸಿತು. ಶತ್ರು ಸಂಹಾರಕ್ಕೆ ಶತ್ರುವಿನ ಕಳೇವರವೇ ಆಯುಧವಾಯಿತು ! ಸುಗ್ರೀವನಿಗೆ ಇನ್ನೂ ಸಂದೇಹ, ಇನ್ನೂ ಭಯ, ಎಂತಲೆ ಮತ್ತೆ ಪುನಃ ವಿನಂತಿಸಿಕೊಂಡನು : "ನನ್ನ ಚಾಪಲವನ್ನು ಕ್ಷಮಿಸಬೇಕು. ನನ್ನ ಚಿತ್ತದ ಸಂಶಯ ಇನ್ನೂ ತೊಲಗಲಿಲ್ಲ. ಒಬ್ಬನನ್ನು ಸೋಲಿಸಲು ಅವನಿಂದ ನಾಲ್ಕು ಪಟ್ಟು ಬಲವಿರಬೇಕು ಮತ್ತು ಕೊಲ್ಲಲು ನೂರು ಪಟ್ಟು ಬಲಬೇಕು ಎಂದು ಕೇಳಿದ್ದೇನೆ. ವಾಲಿ ಯೋಜನ ದೂರ ಎಸೆದುದನ್ನು ನೀನು ನೂರು ಯೋಜನ ಎಸೆದಿರುವೆ. ನಿಜ, ಆದರೆ ಒಣಕಲು ಅಸ್ಥಿಪಂಜರ ಹಿಂದಿನ ಭಾರವನ್ನು ಕಳೆದುಕೊಂಡಿದೆ. ಇನ್ನೊಂದು ಸೂಚನೆ. ಇಲ್ಲಿ ಏಳು ತಾಳೆಯ ಮರಗಳಿವೆ. ಅವು- ಗಳನ್ನು ವಾಲಿಯೊಬ್ಬನು ಕಷ್ಟದಿಂದ ನಲುಗಿಸಬಲ್ಲ. ಪತ್ರಗಳನ್ನು ಕೀಳುವದು ಅವನಿಂದಲೂ ಆಗದ ಮಾತು. ನೀನು ಒಂದು ಬಾಣದಿಂದ ಅವನ್ನು ಭೇದಿಸಿದೆಯಾದರೆ ಜತೆಗೆ ನನ್ನ ಮನದ ಸಂಶಯವನ್ನು ಭೇದಿಸಬಲ್ಲೆ." ಸುಗ್ರೀವನ ಮಾತನ್ನಾಲಿಸಿದ ರಾಮ ಧನುಸ್ಸನ್ನು ಸಜ್ಜುಗೊಳಿಸಿ ಲಕ್ಷ್ಮಣನೆಡೆಗೆ ನೋಡಿ ಬಾಣವೊಂದನ್ನು ಹೂಡಿದನು. ಆ ಮರಗಳು ನಿಜವೆಂದರೆ ಮಾಯಾವಿಗಳಾದ ಅಸುರರು. ಬ್ರಹ್ಮನ ವರ ಬೇರೆಯಿದೆ ಅವರಿಗೆ ಎಂತಲೆ ರಾಮಚಂದ್ರ ಆ ವೃಕ್ಷಗಳೆಡೆಗೆ ಬಾಣವೆಸೆದನು. ಆ ಬಾಣ ಸಪ್ತತಾಲಗಳನ್ನು ಭೇದಿಸಿ ಭೂಮಿಯನ್ನು ಸೀಳಿಕೊಂಡು ಪಾತಾಲದಲ್ಲಿದ್ದ 'ಕುಮುದಿ' ಗಳೆಂಬ ಬ್ರಹ್ಮವರಮತ್ತರಾದ ದೈತ್ಯರನ್ನೂ ಸಂಹರಿಸಿತು. ಪ್ರಭುವಿನ ಒಂದು ಬಾಣದಿಂದ ಲೋಕದ ನೂರಾರು ಕಂಟಕ ನಾಶವಾಗಬಲ್ಲುದು. ಈ ಅದ್ಭುತವನ್ನು ಕಂಡ ಸುಗ್ರೀವ ರಾಮನ ಕಾಲಿಗೆರಗಿ ಬಿನ್ನವಿಸಿ- ಕೊಂಡ : " ರಾಮಚಂದ್ರ, ನನ್ನ ಮೇಲೆ ಪ್ರಸನ್ನನಾಗಬೇಕು. ಹುಲ್ಲು ಕವಿದ ಬಾವಿಯಂತೆ, ಬೂದಿ ಮುಚ್ಚಿದ ಕೆಂಡದಂತೆ ಗುಪ್ತನಾಗಿರುವ ನಿನ್ನನ್ನು ನಾನು ತಿಳಿಯದಾದೆ. ನನ್ನ ಅಜ್ಞಾನಕ್ಕೆ ಕ್ಷಮೆಯಿರಲಿ. ಇಂದು ರಾತ್ರಿ ನಾನು ಶತ್ರುಭಯವಿಲ್ಲದೆ ಸುಖವಾಗಿ ನಿದ್ರಿಸಬಲ್ಲೆ." ಹನುಮಂತ-ಸುಗ್ರೀವರೊಡನೆ ರಾಮ-ಲಕ್ಷ್ಮಣರು ಕಿಷ್ಕಂಧೆಗೆ ತೆರಳಿದರು. ಸುಗ್ರೀವನ ಮನಸ್ಸು ಸಂತಸದಿಂದ ನುಡಿಯುತ್ತಿತ್ತು: ಇನ್ನು ವಾಲಿಗೆ ಉಳಿಗಾಲವಿಲ್ಲ. ಕಿಷ್ಕಿಂಧೆಯ ತೇಜಸ್ಸು ನಂದಿತು ರಾಮನು ಸಿದ್ಧನಾದ ಸುಗ್ರೀವನನ್ನು ಕಂಡು ನುಡಿದನು: "ಇನ್ನು ನೀನು ವಾಲಿಯನ್ನು ಯುದ್ಧಕ್ಕೆ ಕರೆಯಬಹುದು." ಸುಗ್ರೀವನು ವಾಲಿಯ ಗುಹೆಯ ಬಳಿ ಬಂದು ಕೂಗಿದನು. ಸುಗ್ರೀವನ ಕರೆಯನ್ನು ಕೇಳಿದ ವಾಲಿ, ಹೊಡೆಸಿಕೊಂಡ ಹಾವಿನಂತೆ ಗುಹೆಯಿಂದ ಹೊರಗೆ ಬಂದನು- ಅಣ್ಣ ತಮ್ಮಂದಿರು ಜಗಳಾಡತೊಡಗಿದರು. ಹೊಡೆದುಕೊಳ್ಳುವದು, ಗುದ್ದಿಕೊಳ್ಳುವದು ನಡೆಯಿತು. ಸುಗ್ರೀವನ ಬಲ ಉಡುಗಿದಂತಾಯಿತು. ಅವನು ಅಲ್ಲಿಂದ ಕಾಲು ಕಿತ್ತವನು ಋಷ್ಯಮೂಕ ಕ್ಕೆ ಬಂದ ಮೇಲೆಯೇ ಉಸಿರೆಳೆದದ್ದು ! ಮೆಲ್ಲನೆ ರಾಮಚಂದ್ರನ ಸವಾರಿಯೂ ಅತ್ತ ಚಿತ್ತೈಸಿತು. ನೆತ್ತರಿನಿಂದ ತೊಯ್ದ ಮೈಯನ್ನು ರಾಮಚಂದ್ರನ ಕಾಲುಗಳ ಮೇಲೆ ಚೆಲ್ಲಿ ಸುಗ್ರೀವ ವಿಲಾಪಿಸತೊಡಗಿ- ದನು: "ನಿನಗೂ ನನ್ನ ಮೇಲೆ ದಯೆ ಬರಲಿಲ್ಲವೆ ರಾಮಚಂದ್ರ ? ನಿನ್ನೆದೆಯೂ ಕಲ್ಲಾಯಿತೆ ?" "ನೀವಿಬ್ಬರೂ ಅಣ್ಣ-ತಮ್ಮಂದಿರು ಒಂದೇ ತೆರನಿದ್ದೀರಿ. ಒಂದೇ ರೂಪು ಒಂದೇ ವೇಷ, ಒಂದೇ ದನಿ. ಅದರಿಂದ ನಿಮ್ಮಿಬ್ಬರನ್ನು ಪ್ರತ್ಯೇಕವಾಗಿ ಗುರುತಿಸುವುದು ನನ್ನಿಂದ ಸಾಧ್ಯವಾಗಲಿಲ್ಲ. ಅದರಿಂದ ಬಾಣ ಬಿಡ- ಲಾಗಲಿಲ್ಲ." ನಿಜ ಹೇಳುವುದಾದರೆ ಅಣ್ಣ-ತಮ್ಮಂದಿರ ಜಗಳದಲ್ಲಿ ಮೂರನೆ- ಯವರು ಒಮ್ಮೆಲೆ ಕೈ ಹಾಕಿ ದುಡುಕಬಾರದು ಎಂಬ ಲೋಕನೀತಿ- ಯನ್ನು ತೋರುವುದಕ್ಕಾಗಿಯೆ ರಾಮಚಂದ್ರನು ಬಾಣ ಬಿಡದಿದ್ದುದು. ಕೈಯೊಳಗಿನ ಕಂದುಕದಂತೆ ಜಗತ್ತನ್ನೆಲ್ಲ ಕಾಣುವ ಪ್ರಭುವಿಗೆ ಸುಗ್ರೀವ- ನಾರು-ವಾಲಿ ಯಾರು ಎಂದು ತಿಳಿಯದೆ ? ಸರಿ, ಅಣ್ಣ-ತಮ್ಮಂದಿರ ವ್ಯತ್ಯಾಸ ತಿಳಿವುದಕ್ಕಾಗಿ ರಾಮನಾಣತಿ- ಯಂತೆ ಹನುಮಂತನು ಸುಗ್ರೀವನಿಗೆ ಒಂದು ಮಾಲೆ ಹಾಕಿದನು. ಮತ್ತೆ ಕಪಿ ಸೇನೆಯೊಡನೆ ಸುಗ್ರೀವ ಕಿಷ್ಕಿಂಧೆಗೆ ನಡೆದನು. ರಾಮಚಂದ್ರನು ಭಾವೀ ಕಾರ್ಯವನ್ನು ಚಿಂತಿಸತೊಡಗಿದನು : "ವಾಲಿ ನನ್ನನ್ನು ಕಂಡನಾದರೆ ಕಾಲಿಗೆರಗುವನು. ಆಮೇಲೆ ಅವನನ್ನು ಕೊಲ್ಲುವುದು ಅಸಾಧ್ಯವಾಗುವುದು. ಆದರೆ ವಾಲಿ ವಧೆಯ ಪ್ರತಿಜ್ಞೆ ಮಾಡಿಯಾಗಿದೆ. ಅದರಿಂದ ಮರೆಯಲ್ಲಿ ನಿಂತೇ ಅವನನ್ನು ಕೊಲ್ಲಬೇಕು." ರಾಮಚಂದ್ರನು ಮರಗಳೆಡೆಯಲ್ಲಿ ಮರೆಯಾದನು. ಸುಗ್ರೀವ ಯುದ್ಧಕ್ಕೆ ಮುನ್ನಡೆದನು. ಅವನ ಸಿಂಹನಾದಕ್ಕೆ ಕಿಷ್ಕಿಂಧೆಯ ಕಪಿಗಳ ದೇಹ ನಡುಗಿತು; ಬಲ ಉಡುಗಿತು. ವಾಲಿ ಕನಲಿ ಎದ್ದು ನಿಂತನು. ಅವನ ಮಡದಿ ತಾರೆ, ಅವನನ್ನು ಬಿಗಿದಪ್ಪಿ ನುಡಿದಳು : "ನಾಥ, ನಾನು ಪಿಶುನತೆಯಿಂದಲೋ-ಚಾಪಲಕ್ಕಾಗಿಯೋ ಹೇಳು ತಿಲ್ಲ. ನನ್ನಂತರಂಗದ ದನಿಯನ್ನು ಅರಿಕೆ ಮಾಡಿಕೊಳ್ಳುತ್ತಿದ್ದೇನೆ ಅಷ್ಟೆ. ಸುಗ್ರೀವ ನಿಮಗೆ ಎದುರು ನಿಲ್ಲಬೇಕಾದರೆ ಬಲವಾದ ಬೆಂಬಲವಿದ್ದೇ ತೀರಬೇಕು. ಮಹಾವೀರನಾದ ರಾಮನಿಗೂ ಸುಗ್ರೀವನಿಗೂ ಗೆಳೆತನವಿದೆ ಎಂದು ಅಂಗದನ ಬಾಯಿಂದ ಕೇಳಿದ್ದೇನೆ. ಲೋಕಮಿತ್ರನಾದ ರಾಮಚಂದ್ರ ನಮಗೂ ಮಿತ್ರನಲ್ಲವೆ ? ಅಂಗದನು ಮುತ್ತು-ಮಾಣಿಕ್ಯಗಳಿಂದ ರಾಮಚಂದ್ರನನ್ನು ಸ್ವಾಗತಿ ಸಲಿ, ನೀವು ಅಣ್ಣ-ತಮ್ಮಂದಿರು ರಾಜಿಯಾಗಿರಿ, ಸುಗ್ರೀವನು ಯುವರಾಜ ನಾಗಲಿ. ಇದು ಸರ್ವಥಾ ಅಶಕ್ಯವಾದರೆ, ಈ ತಾಣವನ್ನೆ ಬಿಟ್ಟು ಬೇರೆಲ್ಲಾದರೂ ತೆರಳೋಣ. ರಾಮಚಂದ್ರನ ವಿರೋಧವನ್ನು ಕಟ್ಟಿಕೊಂಡು ನಾವು ಬದುಕಿ ಉಳಿವಂತಿಲ್ಲ." ವಾಲಿ ಮಡದಿಯನ್ನು ಸಂತೈಸಿದನು: "ಪ್ರಿಯೆ, ನಾನು ನಪುಂಸಕನಲ್ಲ. ಶತ್ರು ಯುದ್ಧಕ್ಕೆ ಕರೆದಾಗ ತಲೆಬಾಗಲಾರೆ. ಓಡಿಯೂ ಹೋಗಲಾರೆ. ದಯಾಳುವಾದ ರಾಮಚಂದ್ರ ನನಗೇನೂ ಮಾಡಲಾರ ಎಂದು ನನ್ನ ವಿಶ್ವಾಸ, ಅಥವಾ ರಾಮನ ಬಾಣ ನನಗೆ ನಾಟಿತೆಂದರೆ ನಾನು ಪವಿತ್ರನಾದೆ, ಧನ್ಯನಾದೆ ಎಂದು ತಿಳಿಯುತ್ತೇನೆ. ನನ್ನ ಮೇಲಣ ಪ್ರೀತಿಯಿಂದ ನೀನಾಡಿದ ಮಾತು ಸಹಜ ವಾಗಿದೆ. ನಾನು ಯುದ್ಧಕ್ಕೆ ತೆರಳಬೇಕು. ನೀನಿನ್ನು ಒಳಗೆ ಹೋಗು ದೇವಿ. " ತಾರೆ ಗಂಡನಿಗೆ ಸುತ್ತುವರಿದು 'ಮಂಗಳವಾಗಲಿ' ಎಂದು ಮನದಲ್ಲೆ ದೇವರನ್ನು ಸ್ಮರಿಸಿಕೊಂಡಳು. ಏಕೋ ಕಣ್ಣೀರು ಕಟ್ಟೆಯೊಡೆದು ಹರಿದು ವಾಲಿಯನ್ನು ಕಾಣುವುದೂ ಆಕೆಯಿಂದಾಗಲಿಲ್ಲ. ವಾಲಿ ಬರುತ್ತಿರುವುದನ್ನು ಕಂಡು ಸುಗ್ರೀವ ಟೊಂಕಬಿಗಿದು ನಿಂತನು. ಮತ್ತೆ ಹೊಡೆದಾಟಕ್ಕೆ ಪ್ರಾರಂಭವಾಯಿತು. ವಾಲಿ ಸಿಟ್ಟಿನಿಂದ ಮುಷ್ಟಿ ಬಿಗಿದು "ಈ ಮುಷ್ಟಿಗೆ ನಿನ್ನ ಹರಣ ಬಲಿಯಾಗಲಿದೆ" ಎಂದನು. "ನಿನ್ನ ಹರಣ ನನ್ನ ಮುಷ್ಟಿಯಲ್ಲಿದೆ" ಎಂದು ಸುಗ್ರೀವನೂ ಮುಷ್ಟಿ ಬಿಗಿದು ವಾಲಿಗೆ ಬಲವಾಗಿ ಹೊಡೆದನು. ರಾಮಚಂದ್ರನ ಅನುಗ್ರಹದಿಂದ ಸುಗ್ರೀವನಲ್ಲಿ ಕಸುವು ಬಂದಂತಾಗಿತ್ತು. ಪೆಟ್ಟುತಿಂದ ವಾಲಿ ನೆತ್ತರು- ಕಾರುತ್ತ ನೆಲಕ್ಕೆ ಕುಸಿದನು. ಉತ್ಸಾಹಗೊಂಡ ಸುಗ್ರೀವ ದೊಡ್ಡ ಮರ- ವೊಂದನ್ನು ಕಿತ್ತು ತಂದು ವಾಲಿಯ ನೆತ್ತಿಗೆ ಹೊಡೆದನು. ಒಮ್ಮೆಗೆ ತತ್ತರಿಸಿದರೂ ಕ್ಷಣಮಾತ್ರದಲ್ಲಿ ವಾಲಿ ಸಿಟ್ಟಿನಿಂದ ಎದ್ದು ನಿಂತನು. ಇನ್ನೇನು ಸುಗ್ರೀವ ಕುಪಿತನಾದ ವಾಲಿಯ ಕೈಯಲ್ಲಿ ಸಿಕ್ಕಿ ನುಗ್ಗಾಗು- ವುದರಲ್ಲಿದ್ದ. ಅಷ್ಟರಲ್ಲಿ ರಾಮಚಂದ್ರನ ಬಾಣ ವಾಲಿಯ ನೆತ್ತಿಯನ್ನು ಭೇದಿಸಿತು. ವಾಲಿ ನೆಲಕ್ಕೆ ಕುಸಿದುಬಿದ್ದನು. ಚೇತರಿಸಿಕೊಂಡು ಕರೆದಾಗ ಎದುರಿನಲ್ಲಿ ರಾಮಚಂದ್ರ ಕಾಣಿಸಿಕೊಂಡ. ಮನದಲ್ಲಿ ಪ್ರಭುವಿಗೆ ವಂದಿಸಿ ವಾಲಿ ನುಡಿದನು : " ಪರಮಧಾರ್ಮಿಕನಾದ ರಾಮನೆ, ನಿರಪರಾಧಿಯೂ, ನಿರುಪದ್ರವಿ- ಯೂ ಆದ ನನ್ನನ್ನು ನೀನು ಹೀಗೆ ದಮಿಸಿವುದು ಸರಿಯೆ ! ನನ್ನ ಯಾವ ಅಪರಾಧಕ್ಕೆ ಈ ಶಿಕ್ಷೆ? " ಮುಗುಳು ನಗುವನ್ನು ಬೀರುತ್ತಲೆ ರಾಮಚಂದ್ರನು ಉತ್ತರಿಸಿದನು : " ಹಿಂಸ್ರ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಶಾಸ್ತ್ರದಲ್ಲಿ ಮೂರು ಬಗೆ- ಗಳನ್ನು ಬರೆದಿದ್ದಾರೆ. ಬಲೆಯೆಸೆವುದು, ಅಡಗಿ ಕೊಲ್ಲುವುದು ಇಲ್ಲವೆ ಪಾಶದಿಂದ ಬಂಧಿಸುವುದು. ನೀನು ಕಾಡು ಮಿಗಗಳ ಜಾತಿಗೆ ಸೇರಿದವನು ಎಂಬುದನ್ನು ಮರೆಯಬೇಡ. ಅದರಿಂದಲೆ ಅಡಗಿ ಕುಳಿತು ನಿನಗೆ ಬಾಣ ವೆಸೆದೆ. ನೀನು ಮಾಡಿದ ತಪ್ಪೂ ಕೂಡ ಕಮ್ಮಿಯದಲ್ಲ. ತಮ್ಮನನ್ನು ತೊರೆದೆ, ಸೊಸೆಗೆ ಸಮಾನಳಾದ ತಮ್ಮನ ಮಡದಿಯನ್ನು ಭೋಗಿಸಿದೆ. ದುಷ್ಟರನ್ನು ದಮನ ಮಾಡುವುದು ನನ್ನ ಕರ್ತವ್ಯ. ಆ ನನ್ನ ಕರ್ತವ್ಯ- ವನ್ನು ಪೂರಯಿಸಿದ್ದೇನೆ. ನಿನಗೆ ಬದುಕೇ ಪ್ರಿಯವಾದರೆ ಇನ್ನಾದರೂ ನಿನ್ನನ್ನು ಬದುಕಿಸಬಲ್ಲೆ." ರಾಮನ ವಾಣಿ ಅಮೃತದಂತೆ ವಾಲಿಯಲ್ಲಿ ಚೈತನ್ಯವನ್ನು ಹುಟ್ಟಿಸಿತು. ಭಕ್ತಿ ಭರದಿಂದ ಕಣ್ಣು ತೇವಗೊಂಡಿತು : "ರಾಮಚಂದ್ರ, ವೇದನೆಯಿಂದ ಚುಚ್ಚು ಮಾತುಗಳನ್ನಾಡಿದ್ದರೆ ಕ್ಷಮಿಸು. ಸಾಯುವ ಕ್ಷಣದಲ್ಲಿ ಯಾರ ಸ್ಮರಣೆಯನ್ನು ಮಾಡುವುದಕ್ಕಾಗಿ ಜೀವನವಿಡೀ ತಪಸ್ಸನ್ನಾಚರಿಸುವರೋ ಅಂಥ ನಿನ್ನನ್ನು ಕಣ್ಣೆದುರು ಕಾಣುತ್ತ ಜೀವ ಬಿಡುವ ನಾನೇ ಭಾಗ್ಯಶಾಲಿ." ಇಷ್ಟು ನುಡಿದು ವಾಲಿ ಮೂರ್ಛೆಗೊಂಡನು. ಮರಣ ಪರಿಹಾರಕ- ವಾದ, ಇಂದ್ರದತ್ತವಾದ ಬಂಗಾರದ ಮಾಲೆಯನ್ನು ಹೊತ್ತ ವಾಲಿ ಮೂರ್ಛಿತನಾದ ವಾರ್ತೆಯನ್ನು ಕೇಳಿದ ತಾರೆ ಕಣ್ಣೀರ್ಗರೆಯುತ್ತ ಗುಹೆಯಿಂದ ಧಾವಿಸಿ ಬಂದಳು. ಆಗ ವಾಲಿಯ ಸೇವಕರು ಸಿಟ್ಟಿನಿಂದ ಸುಗ್ರೀವನನ್ನೆ ಹಿಡಿದು ಸದೆಬಡಿಯಬೇಕು ಎಂದು ಹಾರಾಡುತ್ತಿದ್ದರು. ಅವರನ್ನು ಸಂತೈಸುವ ಕೆಲಸವನ್ನೂ ತಾರೆಯೇ ಮಾಡಬೇಕಾಯಿತು : "ರಾಜ್ಯ ಕಾಮನೆಯಿಂದ ಒಬ್ಬ ಸೋದರ ಇನ್ನೊಬ್ಬನನ್ನು ಕೊಂದಿದ್ದಾನೆ. ಸರಿ, ಇನ್ನು ಸುಗ್ರೀವ ನಿಮ್ಮ ರಾಜನಾದ. ಅವನಿಗೆ ದ್ರೋಹ ಮಾಡಬೇಡಿ. ನಾನಂತೂ ನನ್ನ ಪತಿಯೊಡನೆ ಜತೆ ಸಾಗುವವಳು." ತಾರೆಯು ಪ್ರಲಾಪಿಸುತ್ತ, ರಣರಂಗದಲ್ಲಿ ರಕ್ತಸಿಕ್ತನಾಗಿ ಬಿದ್ದಿರುವ ವಾಲಿಯನ್ನು ಕಂಡಳು. ಕಂಡವಳೆ "ಓ ನನ್ನ ಜೀವದ ಜೀವವೆ' ಎಂದು ಬೊಬ್ಬಿರಿದು ವಾಲಿಯ ಕಾಲ ಬುಡದಲ್ಲಿ ಬಿದ್ದು ಬಿಟ್ಟಳು. ಅಂಗದನೂ ಇತರ ವಾನರ ಸ್ತ್ರೀಯರೂ ದುಃಖಿತರಾಗಿ ಅಳತೊಡಗಿದರು. ತಾರೆ- ಯಂತೂ ಪದೇ ಪದೇ ಎದೆ ಬಡಿದುಕೊಂಡು ವಿಲಾಪಿಸುತ್ತಿದ್ದಳು: "ಎದ್ದೇಳು ನಾಥ, ನಿನ್ನ ಪ್ರಿಯೆಯಾದ ನಾನು ಇಲ್ಲಿದ್ದೇನೆ. ನಿರಪರಾ- ಧಿನಿಯಾದ ನನ್ನ ಮೇಲೇಕೆ ಸಿಟ್ಟು, ಒಮ್ಮೆ ಕಣ್ತೆರೆದು ನೋಡು, ನಿನ್ನ ಮಗ ಅಂಗದನನ್ನಾದರೂ ನೋಡಿ ಏಳಲಾರೆಯಾ? ನನ್ನನ್ನು ಬಿಟ್ಟು ಲೋಕಾಂತರಕ್ಕೆ ತೆರಳುವಷ್ಟು ನಿರ್ದಯನೆ ನೀನು ? ನನ್ನನ್ನೂ ನಿನ್ನ ಜತೆಗೆ ಕರೆದೊಯ್ಯು, ನಿನ್ನ ದಾಸಿಯಾಗಿ ಅಲ್ಲೂ ಇರುತ್ತೇನೆ. ಓ ಸುಗ್ರೀವ ! ಈಗಲಾದರೂ ನಿನಗೆ ಸಂತಸವಾಯಿತೆ ? ನಿನ್ನ ಅಣ್ಣನ ನೆತ್ತರಿನಿಂದ ತೊಯ್ದ ರಾಜ್ಯವನ್ನು ನೀನು ಸುಖವಾಗಿ ಭೋಗಿಸು. ನಿನಗಾದರೂ ದೇವರು ಮಂಗಲ ಮಾಡಲಿ." ವಾಲಿಯ ತೊಡೆಯಲ್ಲಿ ತಲೆಯಿಟ್ಟು ತಾರೆ ವಿಲಾಪಿಸುತ್ತಲೇ ಇದ್ದಳು. ತಾರೆಯ ಮತ್ತು ಪರಿವಾರದ ಕೂಗನ್ನು ಕೇಳಿ ಎಚ್ಚತ್ತ ವಾಲಿ ಮೆಲ್ಲನೆ ಕಣ್ಣೆರೆದು ಸುಗ್ರೀವನನ್ನು ಕರೆದು ಇಂತೆಂದನು : "ಸುಗ್ರೀವ ! ಇನ್ನು ನಮ್ಮಲ್ಲಿ ವೈರವಿಲ್ಲ. ನಾನು ನಿನಗೆ ಅಪರಾಧ ಮಾಡಿದ್ದೇನೆ. ಅದನ್ನು ಮರೆತುಬಿಡು. ನನ್ನ ಮಗನಾದ ಅಂಗದನನ್ನು ನಿನ್ನ ಮಗನೆಂದೇ ತಿಳಿ, ಇನ್ನು ಈ ಸಾಮ್ರಾಜ್ಯದ ಅಧಿಕಾರ ನಿನ್ನದು. ಅಂಗದ ಯುವರಾಜನಾಗಲಿ, ನನ್ನ ಪ್ರೇಯಸಿ ತಾರೆಯನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ಇಹಪರಗಳ ಒಳಿತಿಗಾಗಿ ಎಂದೆಂದೂ ರಾಮನ ಚರಣದಾಸನಾಗಿ ಬದುಕು. ರಾಮ ಕಾರ್ಯಗಳಲ್ಲಿ ಪ್ರಮಾದವನ್ನೆಸಗದಿರು. ಅಂಗದ ! ನೀನು ಕೂಡ ಹಿರಿಯರಿಗೆ ಒಪ್ಪಾಗಿ ಬಾಳಬೇಕೆಂದು ನನ್ನ ಬಯಕೆ, ಪ್ರಭು ರಾಮಚಂದ್ರ ! ಸುಗ್ರೀವನನ್ನು ಅಂಗದನನ್ನು ನಿನ್ನ ಕೈಯಲ್ಲಿ ಅರ್ಪಿಸಿದ್ದೇನೆ." ಹೀಗೆಂದು ತನ್ನ ಕತ್ತಿನಲ್ಲಿಯ ಮಾಲೆಯನ್ನು ರಾಮನ ಪಾದಗಳಿಗೆ ಅರ್ಪಿಸಿದನು. ಜತೆಗೆ ತನ್ನನ್ನು ಕೂಡ. ವಾಲಿಯ ಆತ್ಮ ಮಹೇಂದ್ರನಲ್ಲಿ ಸೇರಿಕೊಂಡಿತು. ಕಿಷ್ಕಿಂಧೆಯ ತೇಜಸ್ಸು ನಂದಿತು. ಸುಗ್ರೀವನಿಗೆ ಪಟ್ಟವಾಯಿತು ಅಗ್ರಜನ ಮೃತದೇಹವನ್ನು ಕಂಡ ಸುಗ್ರೀವನಿಗೆ ದುಃಖವನ್ನು ತಡೆಯುವುದಾಗಲಿಲ್ಲ. ಭ್ರಾತೃಸ್ನೇಹ ಕಟ್ಟೆಯೊಡೆದು ಹರಿದು ಬಂತು. ವಾಲಿಯ ಕಾಲಿಗೆ ಬಿದ್ದು ವಿಲಾಪಿಸತೊಡಗಿದನು. ತಾರೆಯೂ ಬಾಣ ನೆಟ್ಟಿರುವ ಪತಿಯ ಮೈಮೇಲೆ ಕೊಡವಿಬಿದ್ದು ಶೋಕಿಸತೊಡಗಿದಳು. ನೀಲನು ಮೆಲ್ಲನೆ ಬಂದು ಕಣ್ಣೊರಿಸಿಕೊಳ್ಳುತ್ತ ವಾಲಿಯ ಮೈಯಿಂದ ಬಾಣವನ್ನೆಳೆದು ತೆಗೆದನು. ತಾರೆ ಇನ್ನೂ ವಾಲಿಯ ಮೈ ನೆತ್ತರಲ್ಲಿ ಹೊರಳಾಡುತ್ತಲೇ ದೂರದಲ್ಲಿ ನಿಂತುಕೊಂಡಿರುವ ಮಗನನ್ನು ಕೂಗಿ ಕರೆದಳು: "ಮಗನೆ, ನಿನ್ನ ತಂದೆ ನಮ್ಮನ್ನೆಲ್ಲ ಬಿಟ್ಟು ತೆರಳುತ್ತಿದ್ದಾನೆ. ಅವನ ಕಾಲಿಗೆರಗು. ಅವನ ಆಶೀರ್ವಾದವನ್ನು ಪಡೆ." ಅಂಗದ ತಾಯಿಯ ಮಾತಿನಂತೆ ವಾಲಿಗೆ ನಮಸ್ಕರಿಸಿದನು. ತಾರೆ ಯಂತೂ ಗೋಳಿಡುತ್ತಲೇ ಇದ್ದಳು: "ಓ ನಾಥನೆ, ನಾನು ನಿನಗೆ ಪ್ರಿಯಳಾಗಿದ್ದುದು ನಿಜವಾದರೆ ಈಗೇಕೆ ನೀನು ನನ್ನೊಡನೆ ಮಾತಾಡುತ್ತಿಲ್ಲ ? ವೀರರು ಹೀಗೆ ನೆಲದಲ್ಲಿ ಬಿದ್ದಿರ ಕೂಡದು. ನಿನ್ನ ಸಂಗ್ರಾಮ ಯಜ್ಞದಲ್ಲಿ ಸಹಧರ್ಮಚಾರಿಣಿಯಾದ ನನ್ನನ್ನು ತೊರೆದು ಹೋಗಬೇಡ. ನನ್ನನ್ನು ಕರೆದುಕೊ, ವಿಷವ- ನ್ನಾದರೂ ಕುಡಿದೇನು. ಬೆಂಕಿಗಾದರೂ ಹಾರಿಯೇನು, ವೀರನ ಪತ್ನಿ ವಿಧವೆಯಾದಳು ಎನ್ನುವ ಮಾತು ನನಗೆ ಬಾರದಿರಲಿ. ಓ ನನ್ನ ಜೀವದ ಜೀವವೇ, ಓ ದಯೆಯ ಕಡಲೆ, ನಾನು ನಿನಗೇನಾದರೂ ತಪ್ಪನ್ನೆಸಗಿದ್ದರೆ ಅದನ್ನು ಮರೆತುಬಿಡು. ಈ ಪಾಪಿಯನ್ನು ಕ್ಷಮಿಸು. ಇನ್ನೊಂದು ಜನ್ಮದಲ್ಲೂ ನಾನು ನಿನ್ನವಳಾಗುವಂತೆ ಕರುಣಿಸು." ಮೇರೆ ಮೀರಿ ಹರಿಯುತ್ತಿರುವ ತಾರೆಯ ಕರುಣಕ್ರಂದನವನ್ನು ಯಾರ ಸಮಾಧಾನದ ಮಾತೂ ತಡೆಹಿಡಿಯಲಾರದಾಯಿತು. ಕೊನೆಗೆ ಪ್ರಾಜ್ಞನಾದ ವೃದ್ಧವಾನರನೊಬ್ಬ ಮುಂದೆ ಬಂದು ನುಡಿದನು : "ತಾಯಿ, ಗಂಡ-ಹೆಂಡತಿ ತಂದೆ-ಮಕ್ಕಳು ಇದೆಲ್ಲ ಒಂದು ಮಾಯೆ ! ಯಾರಿಗೆ ಯಾರು ಏನಾಗಬೇಕು ? ಈಶ್ವರೇಚ್ಛೆಯಂತೆ ಸಾಗುತ್ತಿರುವ ನಮ್ಮ ಬಾಳು ಹಸಿ ಮಡಕೆಯಲ್ಲಿ ತುಂಬಿದ ನೀರು, ತಾರೆ, ನೀನಂತೂ ತಿಳಿದವಳು. ಹೀಗೆ ಪ್ರಲಾಪಿಸುವುದು ಚೆನ್ನಲ್ಲ. ನಿನ್ನ ಗಂಡನದೇ ಪ್ರತಿಕೃತಿಯಾದ ಕುಮಾರ ಅಂಗದನನ್ನು ರಕ್ಷಿಸು. ಅದೇ ನೀನು ವಾಲಿಗೆ ಸಲ್ಲಿಸತಕ್ಕ ಸೇವೆಯಾಗಿದೆ ! ವೀರಪತ್ನಿಗೆ ಇದಕ್ಕಿಂತ ಮಿಗಿಲು ಏನನ್ನು ನಾನು ಹೇಳಬಲ್ಲೆ !" ದುಃಖದ ಉದ್ವೇಗ ಇನ್ನೂ ಮಾಸಲಿಲ್ಲ. ಸುಗ್ರೀವನೂ ದಂಗಾಗಿ ಮಾತು ಬಾರದವನಂತೆ ನಿಂತಿದ್ದ. ಅದನ್ನು ಕಂಡು ಲಕ್ಷ್ಮಣನೇ ಸ್ಪಷ್ಟೋಕ್ತಿಯಿಂದ ಎಚ್ಚರಿಸಬೇಕಾಯಿತು: " ಏನು ಬಳೆತೊಟ್ಟವರಂತೆ ನಿಂತಿರುವೆ ಸುಗ್ರೀವ ? ತಾರೆಯನ್ನು ಸಮಾಧಾನಗೊಳಿಸು. ನಿನ್ನಣ್ಣನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಯಲಿ." ಹನುಮಂತನಿಂದ ಅಜ್ಞಪ್ತರಾದ ಕಪಿಗಳು ಪರಿಮಳ ದ್ರವ್ಯಗಳನ್ನು ಅಣಿಗೊಳಿಸಿದರು. ತಾರನು ಶವಕ್ಕಾಗಿ ಶಿಬಿಕೆಯನ್ನು ತಂದಿರಿಸಿದನು. ಅಂಗದನೂ ಸುಗ್ರೀವನೂ ವಾಲಿಯ ಕಳೇಬರವನ್ನು ಶಿಬಿಕೆಯ ಮೇಲೇರಿಸಿದರು. ಶವಸಂಪುಟವನ್ನು ವೈಭವದಿಂದ ಒಂದು ನದಿಯೆಡೆಗೆ ಸಾಗಿಸಿ ಸುಟ್ಟರು. ಸಂಸ್ಕಾರಗಳೆಲ್ಲ ತೀರಿದಮೇಲೆ ಪಂಪೆಯಲ್ಲಿ ತರ್ಪಣ- ವನ್ನಿತ್ತು ಎಲ್ಲರೂ ರಾಮನ ಬಳಿಗೆ ಬಂದರು. ಕಪಿಗಳ ಸಾಲಿಗೆ ಸಾಲೇ ರಾಮಪಾದಕ್ಕೆ ಅಡ್ಡಬಿದ್ದಿರಲು ಪಂಡಿತ-ನಾದ ಹನುಮಂತ ಮುಂದೆಬಂದು ನಿವೇದಿಸಿಕೊಂಡನು: " ರಾಮಚಂದ್ರ, ನೀನು ತನ್ನ ರಾಜ್ಯದಲ್ಲಿ ಇರಬೇಕೆಂದು ಸುಗ್ರೀವನ ಬಯಕೆ, ಮೂರು ಲೋಕಗಳಿಗೂ ಅಧಿಪತಿಯಾಗಿರುವ ನೀನು ನಮ್ಮಲ್ಲಿರುವುದು ನಮಗೊಂದು ಹೆಮ್ಮೆಯ ಮಾತು. " ರಾಮಚಂದ್ರನು ಪ್ರೀತಿಯ ಮುಗುಳನ್ನು ಬೀರುತ್ತ ಉತ್ತರಿಸಿದನು : " ನಾನು ಯಾರ ರಾಜ್ಯದಲ್ಲೂ ಇರಲಾರೆ. ಇನ್ನು ಹದಿನಾಲ್ಕು ವರ್ಷ ಕಾಲ ಕಾಡಿನಲ್ಲಿ ಮಾತ್ರ ಇರಬಲ್ಲೆ. ಅದು ನನ್ನ ತಂದೆಯ ಆಜ್ಞೆ. ಅದಿರಲಿ, ಸುಗ್ರೀವ ! ನೀನು ಕಪಿಸಾಮ್ರಾಜ್ಯದ ಅಧಿಪತಿಯಾಗು, ಅಂಗದನು ಯುವರಾಜನಾಗಲಿ. ಈಗ ಶ್ರಾವಣ ನಡೆಯುತ್ತದೆ. ಕಾರ್ತಿಕ ದಲ್ಲಿ ನಮ್ಮ ಕೆಲಸದ ಕಡೆ ಗಮನವಿರಲಿ. " ಅಂಗದ-ಸುಗ್ರೀವರಿಬ್ಬರೂ ತಲೆಬಾಗಿ ರಾಮನ ಆಜ್ಞೆಯನ್ನು ಸ್ವೀಕರಿಸಿದರು. ಹತ್ತು ದಿನಗಳ ವರೆಗಿನ ಪಿತೃಕ್ರಿಯೆಗಳನ್ನು ಅಂಗದನು ವಿಹಿತವಾದ ರೀತಿಯಲ್ಲಿ ನೆರವೇರಿಸಿದನು. ವೈಭವದ ನೆಲೆಯಾದ, ಸಂಪದದ ಸೆಲೆಯಾದ ತನ್ನ ಅಂತಃಪುರವನ್ನು ಸುಗ್ರೀವ ಪ್ರವೇಶಿಸಿದ. ಕಪಿಗಳೆಲ್ಲ ಕಾಲಿಗೆರಗಿದರು. ಜಯಘೋಷವನ್ನೆಸಗಿದರು. ಮಂತ್ರಿಗಳ, ಮಾರುತಿಯ ಒಪ್ಪಿಗೆಯನ್ನು ಪಡೆದು ಸುಗ್ರೀವ ಅಭಿಷೇಕಕ್ಕಾಗಿ ಅಣಿಮಾಡಿದ ಅಟ್ಟವನ್ನೇರಿದನು. ಅನೇಕ ನದಿಗಳ ಪುಣ್ಯಸಲಿಲದಿಂದ ಅಭಿಷೇಕಕಾರ್ಯ ವೈಭವವಾಗಿ ಜರುಗಿತು. ವಾದ್ಯಗಳು ಮೊಳಗಿದವು. ದಕ್ಷಿಣೆಗಳಿಂದ ಬ್ರಾಹ್ಮಣರ ಮನೆಯೂ ಮನವೂ ತುಂಬಿತು. ಹರೆಯದ ಹುಡುಗಿಯರ ನೃತ್ಯ ನೆರೆದವರ ಕಣ್ಮನ ಸೆಳೆಯಿತು. ದೀಪಗಳು ಬೆಳಗಿದವು. ವನಿತೆಯರು ಅರಳು ಹೂಗಳನ್ನು ಚೆಲ್ಲಿದರು, ಸುಗ್ರೀವನು ಸಿಂಹಾಸನವನ್ನೇರಿದನು. ಮಾರುತಿಯ ಆದೇಶದಂತೆ ಗಜ, ಗವಾಕ್ಷ, ಗವಯ, ಶರಭ, ಗಂಧಮಾದನ, ನೀಲ, ಮೈಂದ, ವಿವಿದ, ಸುಷೇಣ, ಜಾಂಬವಂತ ಮೊದಲಾದವರೆಲ್ಲ ಸೂರ್ಯಪುತ್ರ ಸುಗ್ರೀವನಿಗೆ ಅಭಿಷೇಕಗೈದರು. ಪನಸನು ಬೆಳ್ಕೊಡೆ- ಯನ್ನು ಹಿಡಿದನು. ನಲನೂ ತಾರನೂ ಇಕ್ಕೆಲಗಳಲ್ಲಿ ಚಾಮರ ಬೀಸಿ- ದರು. ರಾಮನ ಆಜ್ಞೆಯಂತೆ ಸುಗ್ರೀವನು ಅಂಗದನಿಗೆ ಯುವರಾಜ ಪದವಿಯನ್ನೊಪ್ಪಿಸಿದನು. ನೆರದವರೆಲ್ಲ ಸುಗ್ರೀವನನ್ನು ಕೊಂಡಾಡಿ ಹರಸಿದರು. ರಾಮನ ಅಪ್ಪಣೆಯಂತೆ ಪಟ್ಟಣ ಪ್ರವೇಶ ನಡೆಯಿತು. ತಾರೆ-ರುಮೆಯರೊಡನೆ ಸುಗ್ರೀವನು ಕಿಷ್ಕಿಂಧೆಯನ್ನು ಪ್ರವೇಶಿಸಿದನು. ವಾಲಿಯನ್ನು ಕೊಂದು ಸುಗ್ರೀವನಿಗೆ ಅನುಗ್ರಹಿಸಿದ ಕರುಣಾಳು ರಾಮಚಂದ್ರ ಮಾಲ್ಯವತ್ಪರ್ವತದ ಗುಹೆಗಳಲ್ಲಿ ಸುಖವಾಗಿ ಇರತೊಡಗಿ ದನು. ಹೂ-ಹಣ್ಣುಗಳಿಂದ ತುಂಬಿದ ಗಿಡಬಳ್ಳಿಗಳು. ಅಲ್ಲಲ್ಲಿ ತಿಳಿನೀರಿನ ಕೊಳಗಳು. ಮೇಲವಾದ ಗಾಳಿ, ನಿಬಿಡವಾದ ಕಾಡಿನ ಗಾಂಭೀರ್ಯದ ನಡುವೆ ಸುಳಿಯುವ ಸೊಂಪಿನ ಚಂದ್ರ. ಒಟ್ಟಿನಲ್ಲಿ ವಾತಾವರಣವೇ ಅತ್ಯಂತ ಮೋಹಕವಾಗಿತ್ತು. ಮಡದಿಯನ್ನು ಕಳೆದುಕೊಂಡ ರಾಮಚಂದ್ರ ದುಃಖಿತರಂತೆ ಕಾಣಿಸಿಕೊಂಡನು. ಪರಮಪುರುಷನಿಗೆ ದುಃಖವೆಲ್ಲಿಯದು ? ವಿರಹವೆಲ್ಲಿಯದು ? ಇದೆಲ್ಲ ಲೋಕ ವಿಡಂಬನೆ. ಹೆಣ್ಣಿಗಾಗಿ ಮರುಗುವ ಜನರ ಪಾಡೆಂಥದು ಎಂದು ತೋರಿಸುವ ಲೀಲಾ ನಾಟಕ ! ಅಸುರರಿಗೆ ಮೋಹದ ಬಲೆ ಬೀಸುವ ಬಗೆ ಅಷ್ಟೆ. ಯಾರ ಪಾದ ಸ್ಮರಣೆಯಿಂದ ಸನಕಾದಿಮುನಿಗಳು ವಿಷಯ ಭೋಗವನ್ನು ತೃಣಕ್ಕಿಂತ ಕಡೆಯಾಗಿ ಎಣಿಸುವರೋ ಅಂಥ ರಾಮಚಂದ್ರನಿಗೆ ವಿರಹ ಎಲ್ಲಿಂದ ತಟ್ಟಬೇಕು? ರಾಮ-ಲಕ್ಷ್ಮಣರು ಪರ್ವತ ಗುಹೆಗಳಲ್ಲಿ ಏನೇನೋ ಕತೆಗಳನ್ನಾಡುತ್ತಾ ವಾಸಿಸಿದರು. ಕ್ರಮೇಣ ಮಳೆಗಾಲದ ಚಿಹ್ನೆ ಕಾಣಿಸಿಕೊಂಡಿತು. ಅದೂ ಕಳೆದುದಾಯಿತು. ಬಾನೆಲ್ಲ ಸ್ವಚ್ಛವಾಯಿತು. ಶರತ್ಕಾಲದ ಶೋಭೆ ದಿಸೆಗಳನ್ನು ಬೆಳಗಿತು. ಶರದದ ಶೋಭೆಯಲ್ಲಿ ಲಕ್ಷ್ಮಣನಿಗೆ ಒಂದು ಸಂದೇಶ ವಿತ್ತು : ' ಇದು ಸೀತೆಯನ್ನು ಹುಡುಕುವ ಕಾಲ.' ಮರೆತೂ ಬಾಳುವುದುಂಟೆ ! ಸುಗ್ರೀವನಿಗೆ ರಾಜಭೋಗ ದೊರಕಿದೆ. ಐಸಿರಿಯ ಪೂರದಲ್ಲಿ, ಹೆಣ್ಣುಗಳ ತೋಳಿನಲ್ಲಿ ದಿನಗಳೆವ ಅವನಿಗೆ ರಾಮಚಂದ್ರನ ಸಖ್ಯದ ನೆನಪೂ ಬರಲಿಲ್ಲ. ಆಗ ಧೀಮಂತ ಹನುಮಂತನೇ ಎಚ್ಚರಿಸ-ಬೇಕಾಯಿತು : "ಮಹಾರಾಜ, ರಾಜ್ಯ ಕೋಶ, ಸ್ತ್ರೀ ಸಂಪತ್ತು ಎಲ್ಲವೂ ನಿನಗೆ ರಾಮ ಚಂದ್ರನ ಅನುಗ್ರಹದಿಂದ ದೊರೆತುದೆಂಬುದನ್ನು ಮರೆಯಬೇಡ. ಆದರೆ ನೀನು ಅವನನ್ನೇ ಮರೆತಂತಿದೆ. ಸಂಪತ್ತಿನ ಮದ ನಿನ್ನನ್ನಡರಿದಂತಿದೆ. ನಾನಿರುವವರೆಗೆ ಇಂಥ ಅಪಚಾರ ನಡೆಯಗೊಡಲಾರೆ. ಉಪಕಾರ ದ್ರೋಹ ಮಾಡುವವರಿಗೆ ಶಿಕ್ಷಿಸುವ ಬಗೆ ನನಗೆ ಗೊತ್ತು. ರಾಮನೆಂದರೆ ಮೂರುಲೋಕದ ನಾಥ, ಅವನ ಕೆಲಸವನ್ನು ನೆರವೇರಿಸುವುದು ನಮ್ಮ ಭಾಗ್ಯಫಲ. ಬೇಗನೆ ಸೀತೆಯನ್ನು ಹುಡುಕಲಿಕ್ಕಾಗಿ ವಾನರರನ್ನು ದಿಕ್ಕು ದಿಕ್ಕುಗಳಿಗೆ ಕಳಿಸು." ಹನುಮಂತನ ಮಾತು ಸುಗ್ರೀವನ ಮೇಲೆ ಪ್ರಭಾವ ಬೀರಿತು. ಒಡನೆ ನೀಲ, ಪ್ರಭೃತಿ ಕಪಿಗಳನ್ನು ಬರಿಸಿ ಆಜ್ಞಾಪಿಸಿದನು: "ಓ ಸೇನಾಪತಿಯಾದ ನೀಲನೆ ! ನಮ್ಮ ಕಪಿಗಳೆಲ್ಲರನ್ನೂ ಒಮ್ಮೆ ಇಲ್ಲಿಗೆ ಬರಿಸು. ನೀನೂ ಅಂಗದನೂ ಸೇರಿ ನಾಡಿದ್ದು ಹುಣ್ಣಿಮೆಯ ದಿವಸ ಎಲ್ಲ ಸೇನೆಗಳನ್ನು ಒಟ್ಟೈಸಬೇಕು. ಏಳು ದಿನಗಳೊಳಗೆ ನನಗೆ ಮುಖ ತೋರಿಸದ ಯಾವ ವಾನರನಿಗೂ ಉಳಿಗಾಲವಿಲ್ಲ ಎಂದು ನೆನಪಿರಲಿ." ಇತ್ತ ಶರತ್ಕಾಲದ ತಿಳಿಯಾದ ಮುಗಿಲನ್ನು ಕಂಡ ರಾಮನೂ ಲಕ್ಷಣ ನೊಡನೆ ಪ್ರಸ್ತಾವವೆತ್ತಿದನು: "ತಮ್ಮ, ಕಿಷ್ಕಿಂಧೆಗೆ ತೆರಳಿ ಸುಗ್ರೀವನಿಗೆ ಅವನ ಕರ್ತವ್ಯದ ಕುರಿತು ಮುನ್ನೆಚ್ಚರಿಕೆಯನ್ನೀಯಬೇಕಾಗಿದೆ. ನೀನು ಅವನೊಡನೆ ನುಡಿಯಬೇಕು'ನಮ್ಮ ಕೆಲಸವನ್ನು ಇಷ್ಟರಲ್ಲೆ ಮರೆತೆಯಾದರೆ ವಾಲಿಯನ್ನು ಬಲಿ ತೆಗೆದುಕೊಂಡ ಬಾಣಕ್ಕೆ ನಿನ್ನ ಕುರಿತೇನೂ ಕರುಣೆ ಮೂಡಲಾರದು' ಎಂದು." ಲಕ್ಷ್ಮಣನು ಸಿಡಿದುಕೊಂಡೇ ಉತ್ತರಿಸಿದನು: "ಅಣ್ಣ, ಮರ್ಯಾದೆಗೇಡಿಯಾದ ಆ ಕಪಿಗೆ ಈಗಲೇ ಬುದ್ಧಿಗಲಿಸಿ ಬರುತ್ತೇನೆ. ಸುಗ್ರೀವನೂ ವಾಲಿಯ ದಾರಿಯನ್ನೇ ಹಿಡಿದು ಹೋಗಲಿ, ಅಂಗದನು ನಮಗೆ ಸೀತಾನ್ವೇಷಣೆಯಲ್ಲಿ ಸಹಾಯ ಮಾಡುವನು. ಅಥವಾ ಈ ವಿಡಂಬನೆಗಳಾದರೂ ಏಕೆ ? ಈ ಮಂಗಗಳಿಂದೇನು ನಡೆದೀತು ? ನಿನ್ನ ಹುಬ್ಬಿನ ಕುಣಿತಕ್ಕೆ ಮೂರು ಲೋಕವೂ ಮಣಿಯುತ್ತಿದೆ." ಲಕ್ಷ್ಮಣನು ಸಿಟ್ಟಿಗೆದ್ದದನ್ನು ಕಂಡು "ಬೇಡ ತಮ್ಮ, ದುಡುಕಬಾರದು" ಎಂದು ರಾಮಚಂದ್ರನು ನಕ್ಕು ಸಮಾಧಾನಗೊಳಿಸಿ ಕಳಿಸಿಕೊಟ್ಟನು. ಸುಗ್ರೀವನ ಅಲಸ್ಯಕ್ಕೆ ಕೋಪಗೊಂಡ ಲಕ್ಷ್ಮಣನ ದಿಟ್ಟ ಹೆಜ್ಜೆಗೆ ಕಲ್ಲುಗಳು ಮರ-ಮಟ್ಟುಗಳು ಸಿಡಿದು ಬೀಳುತ್ತಿದ್ದವು. ಕಾಲಪುರುಷನಂತೆ ಕಿಷ್ಕಿಂಧೆಯನ್ನು ಪ್ರವೇಶಿಸಿದ ಲಕ್ಷ್ಮಣನನ್ನು ಕಂಡ ವಾನರರು ದಿಕ್ಕು- ಗೆಟ್ಟು ಓಡತೊಡಗಿದರು. ಕಾಮಿನಿಯರ ಕೂಟದಲ್ಲಿ ಮೈಮರೆತ ಸುಗ್ರೀವನಿಗೆ ಲಕ್ಷ್ಮಣನ ಬರವು ಗೋಚರಕ್ಕೆ ಬರಲಿಲ್ಲ. ಭೀತನಾದ ದೂತ- ನೊಬ್ಬ ಅಂಗದನ ಬಳಿ ಈ ಸುದ್ದಿಯನ್ನು ಮುಟ್ಟಿಸಿ ತೆರಳಿದನು. ಅಂಗದ ಸುಗ್ರೀವನಿಗೆ ಅರುಹಿದ. ನನ್ನ ಯಾವ ಅಪರಾಧಕ್ಕಾಗಿ ಲಕ್ಷ್ಮಣ ಕೋಪ ಗೊಂಡಿರಬಹುದು ?" ಎಂದು ಸುಗ್ರೀವ ಚಿಂತಾಕುಲನಾದ. ಧೀಮಂತ- ನಾದ ಹನಮಂತನ ಎಚ್ಚರಿಕೆಯ ಮಾತು ಅಲ್ಲೂ ಸಿದ್ಧವಾಗಿತ್ತು: "ರಾಮಸೇವೆಯಲ್ಲಿ ಆಲಸ್ಯ ತೋರುವುದಕ್ಕಿಂತ ದೊಡ್ಡ ಅಪರಾಧ- ವೇನಿದೆ ಸುಗ್ರೀವ ? ನೀನೀಗ ಲಕ್ಷ್ಮಣನನ್ನು ಸಂತೈಸಬೇಕು." ಬಾಗಿಲು ಕಾಯುವವರನ್ನು ಬದಿಗೆ ತಳ್ಳಿ ಕೋಪದ ಕಿಡಿ ಕಾರುತ್ತ ಲಕ್ಷ್ಮಣನು ಅಂತಃಪುರವನ್ನೆ ಪ್ರವೇಶಿಸಿದನು. ಅಂತಃಪುರದಲ್ಲಿ ತಾರೆ-ರುಮೆಯರನ್ನು ಆಲಿಂಗಿಸಿಕೊಂಡು ಸಿಂಹಾಸನದಲ್ಲಿ ಕುಳಿತಿರುವ ಸುಗ್ರೀವನನ್ನು ಕಂಡು ಲಕ್ಷ್ಮಣನ ಹುಬ್ಬು ಗಂಟಿಕ್ಕಿತು. ತುಟಿ ಅದುಮಿ- ಕೊಂಡು ಬಿಲ್ಲನ್ನು ಕೈಗೆ ತೆಗೆದುಕೊಂಡನು. ಸುಗ್ರೀವನ ಎದೆ ನಡುಗಿತು. ಓಡಿ ಬಂದು ಸಂತೈಸಿ ಕುಳ್ಳಿರಿಸಿದನು. ಸಿಟ್ಟಿನ ಭರದಲ್ಲಿ ಲಕ್ಷ್ಮಣನು ಮಾತಿನ ಕಿಡಿಗಳನ್ನೆಸೆದನು : "ಅಗ್ನಿ ಸಾಕ್ಷಿಕವಾಗಿ ರಾಮಚಂದ್ರನ ಮುಂದೆ ನೀನಂದುದೇನು ? 'ನನಗೆ ನನ್ನ ರಾಜ್ಯವನ್ನು ದೊರಕಿಸಿಕೊಟ್ಟರೆ ನಾನು ಸೀತಾನ್ವೇಷಣೆ- ಯಲ್ಲಿ ನೆರವಾಗುವೆನು' ಎಂದು ಮಾತುಕೊಟ್ಟಿಲ್ಲವೆ? ರಾಜ್ಯ ದೊರಕಿತು. ಹೆಣ್ಣುಗಳ ಭೋಗ, ರಾಜ್ಯದ ಸಿರಿ ನೆತ್ತಿಗೆ ಪಿತ್ತವನ್ನಡರಿಸಿದೆ. ತಿಂಗಳುಗಳು ಉರುಳುತ್ತಿವೆ. ಸೀತಾನ್ವೇಷಣೆ ಮರೆತೇಹೋದಂತಿದೆ ! ನಿನ್ನಿಂದ ಸ್ನೇಹ- ದ್ರೋಹ ನಡೆದಿದೆ. ಮಾತು ನೆನಪಿರಲಿ, ನಿನ್ನ ಸಹಾಯವಿಲ್ಲದೆಯೂ ರಾಮಚಂದ್ರ ಸೀತೆಯನ್ನು ಪಡೆಯಬಲ್ಲ. ಸಮುದ್ರ ತುಂಬಲಿಕ್ಕೆ ಕೊಳದ ನೀರು ಸುರಿಯಬೇಕಾಗಿಲ್ಲ. ಆದರೆ ಲೋಕ ಗುರುವಿಗೆ ಎರಡೆಣಿಸಿದ ನಿನ್ನೆದೆಯ ನೆತ್ತರನ್ನು ನನ್ನ ಬಾಣ ಕುಡಿಯಬಯಸುತ್ತಿದೆ." ಲಕ್ಷ್ಮಣನ ಸಿಟ್ಟು ಇನ್ನೂ ತಗ್ಗಿರಲಿಲ್ಲ. ಕಪಿಗಳೆಲ್ಲ ತಬ್ಬಿಬ್ಬಾಗಿದ್ದರು. ಆಗ ಸಾಧ್ವಿ ತಾರೆಯೇ ಎದ್ದು ನಿಂತು ಲಕ್ಷ್ಮಣನನ್ನು ಸಮಾಧಾನಗೊಳಿಸಿ- ದಳು: "ಧಾರ್ಮಿಕನಾದ ರಾಜಕುಮಾರನೆ ! ಶಾಂತನಾಗು, ನಮ್ಮ ಮಹಾರಾಜ ರಾಮ ಕಾರ್ಯವನ್ನು ಮರೆತಿಲ್ಲ. ಇಷ್ಟರಲ್ಲಿ ಕಪಿಗಳನ್ನು ಬರಿಸಲು ದೇಶ ದೇಶಗಳಿಗೆ ದೂತರನ್ನು ಅಟ್ಟಿಯಾಗಿದೆ. ಆದರೆ ನನ್ನ ಪತಿ ವಾಲಿ ನುಡಿದುದನ್ನು ನಾನು ಕೇಳಿದ್ದೆ. ಸೀತೆಯನ್ನು ರಾವಣನು ಕದ್ದೊಯ್ದನಂತೆ. ಅವನ ಸಂಹಾರಕ್ಕೆ ದೊಡ್ಡಸೇನೆಯ ಆವಶ್ಯಕತೆಯಿದೆ. ಅದರ ಸನ್ನಾಹವೆಲ್ಲ ನಡೆಯುತ್ತಿದೆ. ನಮ್ಮ ಮಹಾರಾಜ ಸುಗ್ರೀವನು ಹಿಂದಿನಂತೆಯೆ ನಿಮ್ಮ ಗೆಳೆಯನಾಗಿದ್ದಾನೆ. ಹನುಮಂತ ಬದುಕಿರುವ- ವರೆಗೆ ಈ ರಾಜ್ಯದಲ್ಲಿ ಸ್ನೇಹದ್ರೋಹ ನಡೆಯಲಾರದು. ಮುಖ್ಯವಾಗಿ ನೀನು ಶಾಂತನಾಗಬೇಕು. ನಿನ್ನ ಕಿಡಿಗಣ್ಣನ್ನು ಕಂಡು ನನ್ನ ದಾಸಿಯರು ದಿಗಿಲಾಗಿದ್ದಾರೆ." ಸುಗ್ರೀವನೂ ತಾರೆಯ ಮಾತಿಗೆ ದನಿಗೂಡಿಸಿದ : "ಲಕ್ಷಣ ! ನನ್ನ ಅಪರಾಧಕ್ಕೆ ಕ್ಷಮೆಯಿರಲಿ. ರಾಮಚಂದ್ರನ ಒಂದು ಬಾಣಕ್ಕೆ ಮೂರು ಲೋಕವೂ ಎಣೆಯಲ್ಲ. ಅಂಥವನಿಗೆ ನಮ್ಮಿಂದೇನು ಲಾಭ ? ನಾವು ನಮ್ಮ ಸ್ವಾರ್ಥಕ್ಕಾಗಿ ರಾಮಚಂದ್ರನನ್ನು ಮೊರೆ ಹೊಕ್ಕವರು." ಇಷ್ಟರಲ್ಲಿ ಲಕ್ಷ್ಮಣನೂ ಶಾಂತನಾಗಿ ನುಡಿದನು : "ಕಾರ್ಯದ ಭರದಲ್ಲಿ ನಾನೂ ದುಡುಕಿ ನಡೆದೆ, ಕಪಿರಾಜ ಅದನ್ನು ಕ್ಷಮಿಸಬೇಕು." ಸಂದರ್ಭ ತಿಳಿಯಾದುದನ್ನು ಕಂಡು ಹನುಮಂತನು ಕಪಿಗಳನ್ನು ಕರೆಯಿಸಿ ಆಜ್ಞಾಪಿಸಿದನು : "ಮಹೇಂದ್ರ-ಮಲಯ ಮೊದಲಾದ ದ್ವೀಪಗಳಲ್ಲಿರುವ ಎಲ್ಲ ಕಪಿಗಳೂ ಹತ್ತು ದಿನಗಳೊಳಗೆ ಇಲ್ಲಿಗೆ ಬರಬೇಕು. ಇಲ್ಲದಿದ್ದರೆ ರಾಜದಂಡಕ್ಕೆ ಗುರಿಯಾಗಬೇಕಾದೀತು." ವಾನರರ ಪಡೆ ವಾಯುವೇಗದಿಂದ ಈ ವಾರ್ತೆಯನ್ನು ಎಲ್ಲೆಡೆಗೆ ಹಬ್ಬಿಸಿತು. ತೋತಾದ್ರಿ, ಕೈಲಾಸದ ಕಡೆಯಿಂದ ಕೂಡ ಕೋಟಿಗಟ್ಟಲೆ ಕಪಿಗಳು ಬಂದು ಸೇರಿದರು. ವಿಂಧ್ಯ-ಹಿಮಾಲಯಗಳಿಂದ, ನಾನಾ ಪರ್ವತಗಳಿಂದ ದೇವಾಂಶ ಸಂಭೂತರಾದ ವಾನರರು ರಾಮನಾಮ ಕಿವಿಗೆ ಬಿದ್ದೊಡನೆ ಸುಗ್ರೀವ- ನೆಡೆಗೆ ಧಾವಿಸಿದರು. ಸುಗ್ರೀವನು ತನ್ನ ಶಿಬಿಕೆಯಲ್ಲಿ ಲಕ್ಷ್ಮಣನನ್ನೂ ಕುಳ್ಳಿರಿಸಿಕೊಂಡು ರಾಮನೆಡೆಗೆ ತೆರಳಿದನು. "ಅಪರಾಧಿಯನ್ನು ಕ್ಷಮಿಸಬೇಕು" ಎಂದು ಕಾಲಿಗೆರಗಿದ ಕಪಿರಾಜನನ್ನು ರಾಮಚಂದ್ರನು ಪ್ರೀತಿಯಿಂದ ಆಲಿಂಗಿಸಿ ಕೊಂಡನು. ಕಪಿಗಳ ಪಯಣ ಸುಗ್ರೀವನ ಆಜ್ಞೆಯಂತೆ ಎಲ್ಲ ಕಪಿಗಳೂ ರಾಮನೆಡೆಗೆ ಬಂದು ಸೇರಿ- ದರು. ಕಪಿಪ್ರಧಾನರಾದ ಅಂಗದ, ನೀಲ, ಸುಷೇಣ, ಪನಸ, ಹನಮಂತನ ತಂದೆ ವೃದ್ಧ ವಾನರ ಕೇಸರಿ, ಗವಾಕ್ಷ, ಧೂಮ್ರಾಕ್ಷ, ಗವಯ, ಗಂಧ- ಮಾದನ, ಗಜ, ವೃಷಭ, ಶಲಭ, ಶರಭ, ಮೈಂದ, ವಿವಿದ, ರುಮಣ್ವಂತ, ತಾರ, ಇಂದ್ರಜಾನು, ದಧಿಮುಖ, ಕುಮುದ, ದರೀಮುಖ, ಜಾಂಬವಂತ, ವಿನತ, ರಂಭ, ಭೀಮ, ಸಂಪಾತಿ, ವಿಜಯ, ವೇದರ್ಶಿ, ಮಹಾಹಸು, ಶರಾರ್ಚಿ, ಶರಗುಲ್ಮ, ಸುಹೋತ್ರ, ಉಲ್ಕಾಮುಖ ಮೊದಲಾದವರೆಲ್ಲ ಕೋಟಿಗಟ್ಟಲೆ ಕಪಿಸೇನೆಯೊಡನೆ ಬಂದು ನೆರೆದರು. ಕೈ ಜೋಡಿಸಿ ನಿಂತ ಕಪಿಗಳನ್ನು ಕುಳ್ಳಿರಿಸಿ ಸುಗ್ರೀವನು ರಾಮಚಂದ್ರನೊಡನೆ ವಿಜ್ಞಾಪಿಸಿಕೊಂಡನು: "ಸ್ವಾಮಿನ್, ಇವರೆಲ್ಲ ನಿನ್ನ ದಾಸರು, ನಿನ್ನ ಸೇವೆಗಾಗಿ ಇವರೆಲ್ಲರೂ ಕಂಕಣಬದ್ಧರಾಗಿದ್ದಾರೆ. ಆಜ್ಞಾಪಿಸಬೇಕು." "ಆಜ್ಞಾಪಿಸುವ ಕಾರ್ಯ ಕಪಿರಾಜನಾದ ನಿನ್ನನೇ."ನಿನ್ನದೇ ಎಂದು ರಾಮಚಂದ್ರ- ನು ಸೌಜನ್ಯಪೂರ್ಣವಾಗಿ ಉತ್ತರಿಸಿದನು. ಒಡನೆ ಸುಗ್ರೀವನು ನಾನಾದಿಕ್ಕುಗಳಿಗೆ ಕಪಿಸೇನೆಯನ್ನು ಕಳಿಸಿದನು. ವಿನತನನ್ನು ಪೂರ್ವದಿಕ್ಕಿಗೆ ತೆರಳುವಂತೆ ಆಜ್ಞಾಪಿಸಿದನು. ತಾರೆಯ ತಂದೆ ಸುಷೇಣನನ್ನು ಪಶ್ಚಿಮಕ್ಕೂ, ಶತಬಲಿಯನ್ನು ಉತ್ತರಕ್ಕೂ ಕಳಿಸಲಾಯಿತು. ಹನುಮಂತನನ್ನು ತೆಂಕಣ ನಾಡಿಗೆ ಹೋಗುವಂತೆ ವಿಜ್ಞಾಪಿಸಿಕೊಂಡ ಸುಗ್ರೀವನು ಹನುಮಂತನನ್ನು ಕರೆದು ಹೀಗೆ ನುಡಿದನು: "ಪ್ರಿಯ ಹನುಮಂತನೆ ! ನೀನು ನನ್ನ ಮಂತ್ರಿ, ಮಿತ್ರ, ಗುರು, ಆಶ್ರಯ ಎಲ್ಲವೂ ಆಗಿದ್ದೀಯೆ. ಸೀತೆ ದಕ್ಷಿಣ ಕಡೆ ಇರುವದು ಹೆಚ್ಚು ಸಂಭವ, ಎಂತಲೆ ನಿನ್ನನ್ನು ಆ ದಿಸೆಗೆ ಕಳಿಸುತ್ತಿದ್ದೇನೆ. ಅಂಗದಾದಿಗಳು ನಿನ್ನ ಜತೆಗಾರರಾಗಿರಲಿ, ರಾವಣನ ಮನೆಯನ್ನಾದರೂ ನುಗ್ಗಿ ಸೀತೆಯನ್ನು ಕಂಡು ಬರಬಲ್ಲವನು ನೀನೊಬ್ಬನೆ ಎಂದು ನನ್ನ ಭಾವನೆ. ನೀನು ಸಂಚರಿಸದ ಎಡೆಯಿಲ್ಲ. ನಿನಗೆ ತಡೆ ಎಂಬುದೂ ಇಲ್ಲ. ರಾಮಚಂದ್ರನ ಬಳಿ ನಾನು ಮಾಡಿದ ಪ್ರತಿಜ್ಞೆಯನ್ನು ಪೂರಯಿಸುವದು ನಿನ್ನ ಕೈಯಲ್ಲಿದೆ. ನೀನೇ ನನ್ನ ಸರ್ವಸ್ವ." ರಾಮ ಕಾರ್ಯದಲ್ಲಿ ಹನುಮಂತನ ಜಾಣತನ ಕೇಳಬೇಕೆ ? ಅವನು ಸಂತಸದಿಂದ ಒಪ್ಪಿಕೊಂಡನು. ಎಲ್ಲರೂ ಒಂದು ತಿಂಗಳೊಳಗೆ ಮರಳಿ ಬರಬೇಕು. ಇಲ್ಲದಿದ್ದರೆ ಶಿಕ್ಷೆಗೆ ಗುರಿಯಾಗಬೇಕಾದೀತು ಎಂದು ವಿಧಿಸ- ಲಾಯಿತು. ಸೀತೆಯನ್ನು ಕಂಡು ಹುಡುಕಿದವನಿಗೆ ಅರ್ಧ ರಾಜ್ಯವನ್ನು ಕೊಡುವುದಾಗಿ ಸುಗ್ರೀವನು ಸಾರಿದನು. ಕಪಿಗಳೆಲ್ಲ ತೆರಳಿದ ಮೇಲೆ ರಾಮಚಂದ್ರ ಮಾರುತಿಯನ್ನು ಕರೆದು ನುಡಿದನು : "ಮಾರುತಿ ! ಈ ಕಾರ್ಯವನ್ನು ನೀನು ಮಾತ್ರವೇ ಮಾಡಬಲ್ಲೆ. ಎಂತಲೇ ನೀನು ದಕ್ಷಿಣದಿಕ್ಕಿಗೆ ತೆರಳುವುದು ನನಗೂ ಸಮ್ಮತ. ನನ್ನ ಈ ಉಂಗುರ ನಿನ್ನ ಬಳಿಯಿರಲಿ." ಎಂದು ತನ್ನ ಕೈಯಲ್ಲಿಯ ರತ್ನಾಂಗುಲೀಯಕವನ್ನು ಹನಮಂತನಿಗಿತ್ತನು. ಆತನು ಅದನ್ನು ಸ್ವೀಕರಿಸಿ, ರಾಮನ ಪಾದಗಳಿಗೆರಗಿ ತಾರ ಜಾಂಬವಂತ ಮೊದಲಾದವರೊಡನೆ ತೆಂಕಣ ನಾಡಿಗೆ ತೆರಳಿದನು. ಪೂರ್ವ-ಪಶ್ಚಿಮ-ಉತ್ತರಗಳಿಗೆ ತೆರಳಿದ್ದ ವಿನತ-ಸುಷೇಣ ಮತ್ತು ಶತ ಬಲಿ ಒಂದು ತಿಂಗಳ ನಂತರ ಮರಳಿ ಬಂದು ಸೀತೆಯನ್ನು ತಮ್ಮಿಂದ ಕಾಣಲಾಗಲಿಲ್ಲ ಎಂದು ನಿವೇದಿಸಿಕೊಂಡರು. ಸುಗ್ರೀವನ ಆಸೆ ಆಕಾಂಕ್ಷೆ ಗಳೆಲ್ಲ ಹನುಮಂತನಲ್ಲಿ ಕೇಂದ್ರೀಕೃತವಾದವು. ಇತ್ತ ಹನುಮಂತನು ವಿಂಧ್ಯಪರ್ವತದ ಗುಹೆಗಳಲ್ಲಿ ಕಾಡು-ಮೇಡು ಗಳಲ್ಲಿ ತನ್ನ ಪರಿವಾರದೊಡನೆ ಸೀತೆಯನ್ನು ಹುಡುಕತೊಡಗಿದನು. ಒಂದು ಗುಹೆಯಲ್ಲಿ ಮಾರೀಚನ ಮಗ ಕುಳಿತಿದ್ದ. ಕಪಿಗಳು ರಾವಣನೇ ಅಲ್ಲಿ ಅಡಗಿ ಕುಳಿತಿರಬೇಕು ಎಂದು ಭಾವಿಸಿದರು. ಅಂಗದನಂತೂ ತನ್ನ ಮುಷ್ಟಿ ಪ್ರಹಾರದಿಂದ ಅವನ ಕಥೆಯನ್ನೇ ತೀರಿಸಿಬಿಟ್ಟ ! ಅನೇಕ ಕಡೆ ಹುಡುಕಿ ತಿರುಗಿ ಬಳಲಿದ ಕಪಿಗಳು ಒಂದೆಡೆ ವಿಶ್ರಾಂತಿ ಗಾಗಿ ಕುಳಿತಿದ್ದರು. ಅವರ ಮನೋವೃತ್ತಿಯನ್ನು ಪರೀಕ್ಷಿಸುವುದಕ್ಕಾಗಿ ಹನುಮಂತ ಒಂದು ಪ್ರಶ್ನೆಯನ್ನು ಅವರ ಮುಂದಿರಿಸಿದನು : " ಬಹುದಿನಗಳಿಂದ ಸೀತೆಯನ್ನು ಹುಡುಕುತ್ತಿದ್ದೇವೆ. ಆದರೂ ಆಕೆ ಕಾಣ ಸಿಗುವ ಚಿಹ್ನೆಯಿಲ್ಲ. ಮುಂದೇನು ಮಾಡುವುದು ?" ಒಡನೆ ಉತ್ಸುಕನಾದ ಅಂಗವನು ಉತ್ತರಿಸಿದನು : " ರಾಮಸೇವೆ ನಮಗೆಲ್ಲರಿಗೂ ಕರ್ತವ್ಯವಾಗಿದೆ. ಸುಗ್ರೀವನ ಆಜ್ಞೆ- ಯನ್ನೂ ಅವಶ್ಯವಾಗಿ ಪಾಲಿಸಬೇಕು. ಕೆಲಸ ಕೈಗೂಡುವ ವರೆಗೆ ಪ್ರಯತ್ನಿಸುವುದು ಇಷ್ಟವಾಗಿದೆ. ನಾವು ಕಂಗೆಡಬಾರದು. ಸೀತೆಯ ಅನ್ವೇಷಣೆ ಮುಂದುವರಿಯಬೇಕು ಎಂಬುದೇ ನಮ್ಮೆಲ್ಲರ ಆಶಯ." ಹಸಿವು ಬಾಯಾರಿಕೆಗಳನ್ನೂ ಮರೆತು ಕಪಿಗಳೆಲ್ಲ ಅಂಗದನ ಮಾತನ್ನು ಅನುಮೋದಿಸಿದರು. ಕಾಡು ಗುಹೆಗಳನ್ನು ಹೊಕ್ಕು ಸೀತೆಯನ್ನು ಹುಡುಕುವ ಕಪಿಗಳ ಕೋಲಾಹಲದಲ್ಲಿ ಕಾಡು ಪ್ರಾಣಿಗಳ ಜೀವಕ್ಕೆ ಬೆಲೆಯೇನು ? ಕಪಿಗಳಿಗೆ ಅಡ್ಡವಾದ ಯಾವ ಪ್ರಾಣಿಯೂ ಬದುಕಿ ಹಿಂತೆರಳಲಿಲ್ಲ. ಎಲ್ಲ ಸೀತೆಯ ಸುಳುವಿಲ್ಲ. ಕಪಿಗಳಿಗೆ ಹೇಳತೀರದ ಬಳಲಿಕೆ, ಸಿಕ್ಕಿದ್ದನ್ನು ಕಬಳಿಸುವ ಹಸಿವು-ಬಾಯಾರಿಕೆ. ಇಂಥ ಸಂದರ್ಭದಲ್ಲಿ ಒಂದು ದೊಡ್ಡ ಗುಹೆ ಅವರಿಗೆ ಎದುರಾಯಿತು. ಅಲ್ಲಿ ಹಂಸಗಳು ಹಾರಾಡು- ವುದನ್ನು ಕಂಡು ಕಪಿಗಳು ಗುಹೆಯೊಳಗೆ ನೀರಿರಬೇಕು ಎಂದು ಊಹಿಸಿದರು. ಬಾಯಾರಿ ಬಳಲಿದ ವಾನರ ವೃಂದ ಗುಹೆಯನ್ನು ಪ್ರವೇಶಿಸಿತು. ಗುಹೆಯೆಂದರೆ ಅಂಧಂತಮಸ್ಸು. ಕತ್ತಲು ಕವಿದ ಯೋಜನ ದೂರದ ಮಾರ್ಗ. ಅಲ್ಲಿ ಕಣ್ಣಿದ್ದವರೂ ಕುರುಡರೇ, ಸೂರ್ಯದೇವನ ಕರುಣೆ ಆ ಗುಹೆಯೆಡೆಗೆ ಹರಿದೇ ಇರಲಿಲ್ಲ ! ಒಬ್ಬರ ಕೈಯನ್ನು ಒಬ್ಬರು ಹಿಡಿದು- ಕೊಂಡು ಕಪಿಗಳು ಮುಂದೆ ಸಾಗಿದರು. ಎತ್ತ ಪಯಣ ? ಯಾವುದು ದಾರಿ? ಯಾರಿಗೆ ಗೊತ್ತು ? ನಿರಾಶರಾದ ಕಪಿಗಳು ರಾಮನಾಮವನ್ನು ಗಟ್ಟಿಯಾಗಿ ಜಪಿಸುತ್ತ ಮುಂದೆ ಮುಂದೆ ಸಾಗಿದರು. ಏನು ಅದ್ಭುತ ! ಕತ್ತಲೆ ಕಳೆದು ಹೊಂಬೆ- ಳಕು ಕಾಣಿಸುತ್ತಿದೆ. ಏನು ಸುಂದರವಾದ ಕಾಡು! ಅದೂ ಅಲ್ಲದೆ ಒಬ್ಬ ಹೆಣ್ಣು ಹೆಂಗಸು. ಕಪಿಗಳು ದಿಗ್ಭ್ರಾಂತರಾದರು. ಹನುಮಂತನು ಆಕೆಯ ಬಳಿಸಾರಿ ನುಡಿದನು: " ಸುಂದರಿ, ನೀನು ಯಾರು ? ಇದು ಯಾರ ಭೂಮಿ ? ಇನ್ನು ನಮ್ಮ ಕುರಿತು ಹೇಳುವದಾದರೆ- ಸುಗ್ರೀವನ ಗೆಳೆಯನಾದ ರಾಮಚಂದ್ರನ ಭೃತ್ಯರು ನಾವು. ಆತನ ಮಡದಿಯನ್ನು ಹುಡುಕಿಕೊಂಡು ಬರುತ್ತಿದ್ದಾಗ ಅಕಸ್ಮಾತ್ತಾಗಿ ಈ ಗುಹೆಯನ್ನು ಹೊಕ್ಕೆವು." ಯೋಗಿನಿಯು ಸಂತಸದಿಂದಲೇ ಉತ್ತರಿಸಿದಳು: "ನಾನು ಮೇರುಸಾವರ್ಣಿಯ ಮಗಳು, ನನ್ನ ಹೆಸರು ಸ್ವಯಂಪ್ರಭೆ, ಈ ಗುಹೆ ಮಯನಿಂದ ನಿರ್ಮಿತವಾದುದು. ಹೇಮಾ ಎಂಬ ಅಪ್ಸರೆಯೊಡನೆ ಆತ ಇಲ್ಲಿ ಬಹುಕಾಲ ವಾಸವಾಗಿದ್ದ. ನಾನು ಆ ಅಪ್ಸರೆಯ ಸಖಿ. ನೀವೆಲ್ಲ ಬಳಲಿ ಬಂದಿದ್ದೀರಿ. ನಿಮಗೆಲ್ಲರಿಗೂ ನನ್ನ ಪ್ರೀತಿಯ ಸ್ವಾಗತ ವಿದೆ." ಎಂದು ಮಾತಿನಿಂದ ಅವರನ್ನು ತಣಿಸಿ ಅಮೃತದಂಥ ಹಣ್ಣು-ಗಡ್ಡೆ ಗಳಿಂದ ಅವರ ಹಸಿವನ್ನು ನೀಗಿಸಿದಳು. ಹೊಟ್ಟೆ ತುಂಬಿದ ಮೇಲೆ ಹೊರಡುವ ಯೋಚನೆ. ಆದರೆ ಏಕೋ ಕಣ್ಣು ಕಟ್ಟಿದಂತಾಯಿತು. ಹೋಗುವ ಮಾರ್ಗವೇ ಕಾಣಿಸದು. ಆಗ ಸ್ವಯಂಪ್ರಭೆಯೇ ಅವರಿಗೆ ಮಾರ್ಗದರ್ಶಕಳಾದಳು: "ಬ್ರಹ್ಮನ ವರಬಲದಿಂದ ಈ ಗುಹೆ ದುಷ್ಪ್ರವೇಶ್ಯವಾಗಿದೆ. ಯಾರೂ ಇದರ ಪ್ರವೇಶ ನಿರ್ಗಮಗಳನ್ನು ಅರಿಯರು. ಆದರೂ ಯೋಗಬಲ- ದಿಂದ ನಿಮ್ಮನ್ನು ಕಳಿಸಿಕೊಡುತ್ತೇನೆ. ದಯವಿಟ್ಟು ಎಲ್ಲರೂ ಕಣ್ಣು ಮುಚ್ಚಿ- ಕೊಳ್ಳಬೇಕು." ಕಪಿಗಳು ಕಣ್ತೆರೆದಾಗ ವಿಂಧ್ಯದ ಶಿಖರದಲ್ಲಿದ್ದರು ! ಮರಗಳಲ್ಲಿ ಅರಳಿ ನಿಂತ ಹೂಗಳು ಹೇಮಂತದ ಬರವನ್ನು ಸೂಚಿಸುತ್ತಿದ್ದವು. ತಿಂಗಳು ತುಂಬುತ್ತ ಬಂತು. ಸೀತೆ ದೊರಕಲಿಲ್ಲ. ಸುಗ್ರೀವನ ದಂಡವನ್ನು ನೆನೆದು ಕಪಿಗಳು ಚಿಂತಿಸತೊಡಗಿದರು. ಆಗ ಅಂಗದನು ತನ್ನಅಭಿಪ್ರಾಯವನ್ನು ಕಪಿಗಳ ಮುಂದೆ ನಿವೇದಿಸಿಕೊಂಡನು. "ಸೀತೆಯನ್ನು ಕಾಣದೆ ತೆರಳಿದರೆ ಸುಗ್ರೀವನ ದಂಡಕ್ಕೆ ನಾವು ಗುರಿಯಾಗುತ್ತೇವೆ. ರಾಜನ ಕೈದಿಯಾಗಿ ಸಾವನ್ನಪ್ಪುವದಕ್ಕಿಂತ ಇಲ್ಲೇ ಉಪವಾಸ ಬಿದ್ದು ಸಾಯುವದು ಮೇಲು." ಕಪಿಗಳ ಕಣ್ಣು ತೇವಗೊಂಡಿತು. ಆದರೆ ತಾರನು ಮಾತ್ರ ಏನೋ ಭಿನ್ನಾಭಿಪ್ರಾಯ ಉಳ್ಳವನಂತೆ ಎದ್ದುನಿಂತು ನುಡಿಯತೊಡಗಿದನು: " ತನ್ನ ಒಡಹುಟ್ಟಿದ ಅಣ್ಣನನ್ನು ಕೊಂದು ಅತ್ತಿಗೆಯನ್ನು ತನ್ನ ಅಂತಃ ಪುರದಲ್ಲಿರಿಸಿಕೊಂಡ ಸುಗ್ರೀವನಿಗೂ ನ್ಯಾಯ ದಯೆಗಳೆಂಬುದಿವೆಯೆ ? ಸುಗ್ರೀವನ ಬಳಿಗೆ ನಾವು ಹೋಗಲಾರೆವು. ನನಗೆ ನಮ್ಮ ಜೀವ ಭಾರ- ವಾಗಿಲ್ಲ. ನಾವು ಈ ಗುಹೆಯನ್ನು ಹೊಕ್ಕು ಸುಖವಾಗಿ ಬಾಳಬಹುದು. ಇಂದ್ರನ ವಜ್ರಾಯುಧಕ್ಕೂ ನಲುಗದ ಈ ಗುಹೆಯಲ್ಲಿ ರಾಮನ ಬೇಳೆ ಬೇಯದು. ಇದು ನಮಗೆ ನೆಮ್ಮದಿಯ ನೆಲೆ." ಕೆಟ್ಟ ಮಾತು ರುಚಿಸುವುದು ಬೇಗ. ಎಲ್ಲ ಕಪಿಗಳಿಗೂ ಈ ಮಾತು ರುಚಿಸಿತು. ಎಲ್ಲರೂ 'ಇದೇ ಸರಿ' ಎಂದು ತೀರ್ಮಾನಕ್ಕೆ ಬಂದರು. ನ್ಯಾಯ ಅವಿವೇಕದ ಅಡಿಯಲ್ಲಿ ನುಸುಳಿ ಹೋಗತೊಡಗಿದಾಗ ಹನುಮಂತನು ಎಚ್ಚರಿಸ ಬೇಕಾಯಿತು: " ತಾರನ ಮಾತಿನ ಅರ್ಥ ನನಗಾಗುತ್ತಿದೆ. ಅವನ ದುರ್ನೀತಿಯನ್ನು ನಾನು ಚೆನ್ನಾಗಿ ಬಲ್ಲೆ. ತನ್ನ ಸೋದರಳಿಯನಾದ ಅಂಗದನ ಪಟ್ಟ ವನ್ನು ಅಪಹರಿಸುವ ದುರ್ಯೋಚನೆ ಆತನಲ್ಲಿ ಮೂಡಿದೆ. ಸುಗ್ರೀವ ಸೀತೆಯನ್ನು ರಾಮನಿಗೆ ಒಪ್ಪಿಸದಿದ್ದರೆ ಅವರ ಗೆಳೆತನ ಭಂಗವಾಗು- ವುದು. ಆಗ ತನ್ನ ಕೆಲಸವನ್ನು ಪೂರೈಸಬಹುದು ಎಂದು ಆತ ಚಿಂತಿಸು- ತ್ತಿದ್ದಾನೆ. ರಾಮಕಾರ್ಯ ವನ್ನು ಅಲಕ್ಷಿಸುವುದು ಬುದ್ಧಿವಂತಿಕೆಯೆಂದು ತಿಳಿದಿದ್ದೀರಾ ? ನಿಮಗೆ ಬುದ್ಧಿ ಕಲಿಸುವ ಮಾರ್ಗ ನನಗೆ ಗೊತ್ತು. ರಾಮದ್ರೋಹಿಯಾದವನು ಹನುಮಂತನ ಕೈಯಿಂದ ತಪ್ಪಿಸಿಕೊಂಡು ಬದುಕಿ ಉಳಿಯಲಾರ. ರಾಮನ ಮಾತು ಒತ್ತಟ್ಟಿಗಿರಲಿ. ಲಕ್ಷ್ಮಣನ ಬಾಣ ಕೂಡ ಇಂದ್ರನ ವಜ್ರಾಯುಧಕ್ಕಿಂತ ನೂರುಪಟ್ಟು ಬಲಿಷ್ಠವಾಗಿದೆ. ಅವನ ಒಂದು ಬಾಣಕ್ಕೆ ನಿಮ್ಮ ಗುಹೆ ತರಗೆಲೆಯಂತೆ ನುಚ್ಚು ನೂರಾದೀತು. ಯಾರ ಹುಬ್ಬಿನ ಕುಣಿತಕ್ಕೆ ಮೂರು ಲೋಕಗಳೂ ತಾಳಹಾಕುತ್ತಿವೆಯೋ ಅಂಥ ರಾಮಚಂದ್ರನಿಗೆ ಈ ಬಿಲ ಅಗಮ್ಯವೆ ? ಏನು ಹುಡುಗಾಟದ ಮಾತು ! " ಮಹಾನದಿಯ ಪೂರದಲ್ಲಿ ಶಾಖಾನದಿಗಳೆಲ್ಲ ಸೇರಿಕೊಳ್ಳುವಂತೆ ಕಪಿಗಳೆಲ್ಲ ಮಾರುತಿಯ ಮತವನ್ನನುಸರಿಸಿದರು. ಕಪಿಗಳ ಪಯಣಕ್ಕೆ ತಡೆಯಾಗಿ ಎದುರಿನಲ್ಲಿ ಕಡಲು ಅಬ್ಬರಿಸುತ್ತಿತ್ತು. ನಿರುಪಾಯರಾದ ಕಪಿಗಳು ಕಡಲಬದಿಯಲ್ಲಿಯ ಕಾಡೊಂದರಲ್ಲಿ ನಿಂತು ವಿಶ್ರಾಂತಿ ಪಡೆದರು. ರಾಮನಾಮದಿಂದ ಗರಿಮೂಡಿತು ಅಂಗದನಿಗೆ ಹೋದಲ್ಲೆಲ್ಲ ನಿರಾಶೆಯೇ ಆವರಿಸುತ್ತಿತ್ತು. ಕಡಲಿನ ಕರೆ ಯನ್ನು ಕಂಡಮೇಲಂತೂ ಅವನಿಗೆ ಉಪಾಯವೇ ತೋಚದಾಯಿತು. ಕುಲವೃದ್ಧರಾದ ಕಪಿಗಳಿಗೆಲ್ಲ ಅಭಿನಂದಿಸಿ ಅವನು ವಿಜ್ಞಾಪಿಸಿ- ಕೊಂಡನು: " ನಮಗೆ ಕೊಟ್ಟ ಅವಧಿ ಮುಗಿಯುತ್ತಿದೆ. ಸೀತೆಯನ್ನು ಹುಡುಕುವುದು ನಮ್ಮಿಂದಾಗಲಿಲ್ಲ. ಎದುರುಗಡೆ ಕಣ್ಣು ಹರಿವಷ್ಟು ದೂರ ಕಡಲು ಸೆಟೆದು ನಿಂತಿದೆ. ಮಾರ್ಗವೇ ಕಾಣದಾಗಿದೆ. ನನಗೆ ಯುವರಾಜ ಪದವಿಯೇನೋ ದೊರಕಿದೆ. ಅದು ಸುಗ್ರೀವನಿಂದಲ್ಲ; ರಾಮದೇವನ ಕರುಣೆಯಿಂದ. ನಾನು ರಾಮಚಂದ್ರನ ಋಣ- ವನ್ನು ತೀರಿಸಬೇಕಿತ್ತು. ಇಲ್ಲದಿದ್ದರೆ ಬದುಕಿಯಾದರೂ ಏನು ಫಲ ? ಇಲ್ಲ. ನಾನಿನ್ನು ರಾಮಚಂದ್ರನಿಗೆ ಮೋರೆ ತೋರಿಸಲಾರೆ. ಇಲ್ಲಿ ಉಪವಾಸದೀಕ್ಷೆ ತೊಡುತ್ತೇನೆ. ನನ್ನ ತಾಯಿಯನ್ನು ಸಮಾಧಾನಗೊಳಿ- ಸುವ ಭಾರ ಮಾತ್ರ ನಿಮ್ಮ ಮೇಲಿದೆ. ಪತಿಶೋಕದಿಂದ ಬಾಡಿದ ಜೀವ, ಪುತ್ರಶೋಕದಿಂದ ಕಮರಿಹೋಗಬಾರದು." ಅಂಗದನ ಮಾತನ್ನು ಕೇಳಿದ ಕಪಿಗಳನೇಕರು ಗೋಳೋ ಎಂದು ಅತ್ತುಬಿಟ್ಟರು. ಎಲ್ಲರೂ ಅವನ ಜತೆಗೆ ನಿರಶನ ವ್ರತವನ್ನು ಕೈಗೊಳ್ಳು- ವುದೆಂದು ನಿಶ್ಚಯಿಸಿದರು. ಉಪವಾಸ ಬಿದ್ದು ಸಾಯ ಹೊರಟ ಕಪಿ- ಗಳನ್ನು ಕಂಡು ಸಂತೋಷಗೊಂಡ ಪ್ರಾಣಿಯೊಂದು ಅಲ್ಲಿತ್ತು. ಅದೇ ಪಕ್ಷಿರಾಜನಾದ ಸಂಪಾತಿ, ರೆಕ್ಕೆಗಳನ್ನು ಕಳಕೊಂಡು ಹಾರಲಾರದೆ ಬಿದ್ದು ಕೊಂಡಿದ್ದ ಸಂಪಾತಿಗೆ ಎಲ್ಲಿಲ್ಲದ ಹಸಿವಾಗಿತ್ತು. ಬಳಿಯಲ್ಲಿ ಈ ಕಪಿಗಳನ್ನು ಕಂಡಮೇಲಂತೂ ಎಲ್ಲಿಲ್ಲದ ಆನಂದವಾಯಿತು. ಇತ್ತ ಕಪಿಗಳು ರಾಮಚಂದ್ರನ ಚರಿತೆಯನ್ನು ಹಾಡತೊಡಗಿದರು. ಶೀಲಭ್ರಷ್ಟನಾದ ಅಜಾಮಿಲನಿಗೂ ಮೋಕ್ಷವನ್ನಿತ್ತು ಕರುಣಿಸಿದ ನಾರಾಯಣನನ್ನು ಕೊಂಡಾಡತೊಡಗಿದರು: "ನಾರಾಯಣನು ರಘುವಂಶದಲ್ಲಿ ರಾಮನಾಗಿ ಜನಿಸಿದನು. ವಿಶ್ವಾಮಿತ್ರನ ಯಜ್ಞಕ್ಕೆ ಕಾವಲಾಗಿ ದುಷ್ಟ ಶಕ್ತಿಗಳನ್ನು ಸಂಹರಿಸಿದನು. ಮನೆ ಯಲ್ಲಿ ದೇವಿ ಸೀತೆಯನ್ನು ಸಂತಸಗೊಳಿಸಿದನು. ಕೈಕೇಯಿಯ ಒಂದು ಮಾತಿಗೆ ರಾಜ್ಯವನ್ನು ತೊರೆದು ಕಾಡಿಗೆ ತೆರಳಿದನು. ಅಲ್ಲಿ ಹದಿನಾಲ್ಕು ಸಾವಿರ ರಾಕ್ಷಸರನ್ನು ಸಂಹರಿಸಿದನು. ಒಮ್ಮೆ ನಿರ್ಜನವಾದ ಜನಸ್ಥಾನ- ದಲ್ಲಿ ಮೋಹಿತನಾದ ರಾವಣ ರಾಮಚಂದ್ರನ ಮಡದಿ ಸೀತೆಯನ್ನು ಕದ್ದೊಯ್ದನು. ಮಣಿ ಮಾಲೆಯನ್ನು ಕಾಗೆ ಗೂಬೆಗಳು ಕೊಂಡೊಯ್ಯು- ವಂತೆ ! ದಾರಿಯಲ್ಲಿ ಮಹಾತ್ಮನಾದ ಜಟಾಯು ಅವನನ್ನು ಎದುರಿಸಿ- ದನು. ಆ ಮಹಾನುಭಾವನಾದ ಪಕ್ಷಿರಾಜ ರಾಮಚಂದ್ರನಿಗಾಗಿ ದೇಹ- ವನ್ನು ತೊರೆದು ಯಶಃಶರೀರನಾದ. ರಾಮನಿಗಾಗಿ ಜೀವನವನ್ನು ಧಾರೆಯೆರೆದ ಪಕ್ಷಿಯ ಬಾಳು ಧನ್ಯವಾಯಿತು. ನಮಗೆ ರಾಮಸೇವೆಯ ಭಾಗ್ಯ ದೊರಕದಾಯಿತು. ವಿಫಲರಾಗಿ ಜೀವನವನ್ನು ತೊರೆಯು- ತ್ತಿದ್ದೇವೆ ! ಮಂಥರೆಯ ಮಂತ್ರ ಫಲಿಸಿತು. ಕೈಕೇಯಿಯ ಕಾಮನೆ ಕೈಗೂಡಿತು. ಆಕೆಯ ಕಾಮನೆಗೆ ದಶರಥನ ಜೀವ ಬಲಿಯಾಯಿತು. ವಾಲಿಯ ಪ್ರಾಣವೂ ಬಲಿಯಾಯಿತು. ಈಗ ನಮ್ಮ ಹರಣಗಳು ಕೂಡ ಆಕೆಯನ್ನು ತಣಿಸಲಿವೆ. ರಘುಕುಲದ ಡಾಕಿನಿಯ ಬಯಕೆ ಈಡೇರಿತು. ಸೀತಾನ್ವೇಷಣೆ ಯಲ್ಲಿ ಬಳಲಿದ ನಮ್ಮನ್ನು ದುಃಖದಿಂದ ರಾಮಚಂದ್ರ ನೆನೆದುಕೊಳ್ಳು- ತ್ತಿರಬಹುದು. ರಾಮಚಂದ್ರನಿಗೆ ಜಯವಾಗಲಿ. ಸಚ್ಛಕ್ತಿಗೆ ಜಯವಾಗಲಿ." ಜಟಾಯುವಿನ ಸಾವಿನ ವಾರ್ತೆಯನ್ನು ಕೇಳಿ ಸಂಪಾತಿಗೆ ಸಿಡಿಲೆರಗಿ ದಂತಾಯಿತು. ಸಂಪಾತಿ ಜಟಾಯುವಿನ ಒಡಹುಟ್ಟಿದ ಅಣ್ಣ, ತಮ್ಮನ ಸಾವಿನ ವಾರ್ತೆ ಮುದಿಜೀವವನ್ನು ಮತ್ತಷ್ಟು ಜರ್ಜರಗೊಳಿಸಿತು. ದುಃಖದ ದನಿಯಿಂದಲೇ ಆತ ಕಪಿಗಳನ್ನು ಪ್ರಶ್ನಿಸಿದ: "ನನ್ನ ಪ್ರಾಣಸಮನಾದ ಸೋದರ, ನನ್ನ ಪ್ರೀತಿಯ ಜಟಾಯು ರಾವಣ ನಿಂದ ಹತನಾದನೆ ? ಇದು ನಿಮಗೆ ಹೇಗೆ ತಿಳಿಯಿತು ? ಯಾರು ನೀವು ? ಇಲ್ಲಿ ಉಪವಾಸ ಕುಳಿತಿರುವುದಾದರೂ ಏತಕ್ಕೆ ?" "ಧರ್ಮಾತ್ಮನಾದ ಪಕ್ಷಿರಾಜನೆ ! ರಾಮಚಂದ್ರನ ಮಡದಿ ಸೀತೆಯನ್ನು ರಾವಣನು ಅಪಹರಿಸಿದನು. ಅದನ್ನು ಕಂಡ ಜಟಾಯು ನಡುದಾರಿ ಯಲ್ಲಿ ರಾವಣನನ್ನು ತಡೆದು ನಿಲ್ಲಿಸಿದನು. ಕಪಟಿಯಾದ ರಾವಣ ಅವನನ್ನು ಕೊಂದುಬಿಟ್ಟನು. ನಂತರ ರಾಮಚಂದ್ರ ಆತನ ಅಂತ್ಯ- ಸಂಸ್ಕಾರಗಳನ್ನು ಪೂರಯಿಸಿದನು. ಮುಂದೆ ರಾಮಚಂದ್ರನಿಗೂ ಸುಗ್ರೀವನಿಗೂ ಗೆಳೆತನವಾಯಿತು. ವಾಲಿಯ ವಧೆಯೂ ನಡೆಯಿತು. ಕಪಿರಾಜನ ನಿರ್ದೇಶದಿಂದ ನಾವು ಸೀತೆಯನ್ನುಹುಡುಕಲು ಹೊರಟೆವು. ನಮಗೆ ಕೊಟ್ಟ ಅವಧಿ ತೀರುತ್ತಿದೆ. ಸೀತೆಯನ್ನು ಹುಡುಕುವುದು ನಮ್ಮಿಂದಾಗಲಿಲ್ಲ. ಮುಂದೇನು ಮಾಡುವುದು ? ಉಪವಾಸವಲ್ಲದೆ ಬೇರೆ ಉಪಾಯವೇ ನಮಗೆ ಉಳಿದಿಲ್ಲ. ಪಕ್ಷಿರಾಜನೆ, ನಿನ್ನ ರೆಕ್ಕೆಗಳೇಕೆ ಕಾಣಿಸುತ್ತಿಲ್ಲ ? ನೀನು ಇಲ್ಲಿ ಬಿದ್ದಿ- ರಲು ಕಾರಣವೇನು ? ಸೀತೆಯ ಕುರಿತು ನಿನಗೇನಾದರೂ ಗೊತ್ತಿದೆಯೆ ?" ಕಪಿಗಳಿಂದ ವಿವರಗಳನ್ನು ತಿಳಿದುಕೊಂಡ ಸಂಪಾತಿಯು ತಮ್ಮನಿಗೆ ತರ್ಪಣವಿತ್ತು ಬಂದು, ತನ್ನ ಕಥೆಯನ್ನರುಹಿದನು: "ನಾನು ಮತ್ತು ಜಟಾಯು ಅರುಣನ ಮಕ್ಕಳು. ಯೌವನದಲ್ಲಿ ನಾವು ಒಂದು ಪಣ ಹೂಡಿದೆವು. ಯಾರು ಹೆಚ್ಚು ವೇಗವಾಗಿ ಓಡಬಲ್ಲರು ಎಂದು ಪರೀಕ್ಷಿಸುವುದೇ ನಮ್ಮ ಪಣದ ಉದ್ದೇಶವಾಗಿತ್ತು. ನಾವು ವೇಗವಾಗಿ ಮೇಲೇರಿದೆವು; ಎಲ್ಲ ಪಕ್ಷಿಗಳನ್ನೂ ಹಿಂದೆ ಹಾಕಿ ಮೇಲೇರಿ- ದೆವು. ಉದಿಸುತ್ತಿರುವ ಸೂರ್ಯನೆಡೆಗೆ ಹಾರಿದೆವು. ಹೊತ್ತು ನೆತ್ತಿಗೇರಿತ್ತು. ಬಿಸಿಲು ಅಸಹನೀಯವಾಗಿತ್ತು. ನಾವು ಬಳಲಿದೆವು. ನನ್ನ ತಮ್ಮನಂತೂ ಸಂಪೂರ್ಣ ಸೋತಿದ್ದ. ಆಗ ನನ್ನ ರೆಕ್ಕೆಗಳ ನೆಳಲಿನಲ್ಲಿ ಆತನನ್ನು ನಿಲ್ಲಿಸಿಕೊಂಡೆ. ನನ್ನ ರೆಕ್ಕೆಗಳು ಮಾತ್ರ ಬಿಸಿಲಿನ ಬೇಗೆಗೆ ಕರಕಿ ಹೋದುವು. ಪುಣ್ಯ ತೀರಿದ ಜೀವಿ ಯಂತೆ ನಾನು ನೆಲಕ್ಕುರುಳಿದೆ. ಏಳು ದಿನಗಳ ನಂತರ ಹೇಗೋ ಪ್ರಜ್ಞೆ ಬಂತು. ರೆಕ್ಕೆಯಿಲ್ಲದೆ ಬದುಕುವದೆಂತು ? ಆದರೆ ಒಬ್ಬ ಋಷಿಯ ಸಾಂತ್ವನದಿಂದ ನಾನು ಇನ್ನೂ ಬದುಕಿ ಉಳಿದಂತಾಯಿತು. 'ನಿನ್ನಿಂದ ರಾಮಕಾರ್ಯ ನೆರವೇರಲಿದೆ. ನೀನು ಬದುಕಿರಬೇಕು.' ಎಂದು ಋಷಿ- ವಾಣಿ ನನ್ನನ್ನು ಸಂತೈಸಿತು. ಆ ಋಷಿ ನನ್ನ ಗೆಳೆಯನಾಗಿದ್ದ. ಆತನ ಹೆಸರು ನಿಶಾಕರ ಎಂದು. ಎಂತಲೇ ಆತನ ಮಾತಿನಂತೆ ರಾಮದೂತ- ರನ್ನು ನಿರೀಕ್ಷಿಸುತ್ತ ಇಲ್ಲಿ ಕುಳಿತಿದ್ದೇನೆ. ದಶರಥನೆಂದರೆ ನನಗೆ ಪ್ರಾಣಕ್ಕಿಂತಲೂ ಮಿಗಿಲಾದ ಸ್ನೇಹಿತ. ಅವನ ಮಕ್ಕಳು ನನಗೂ ಮಕ್ಕಳಂತೆ. ಅವನ ಸೊಸೆ ನನಗೂ ಸೊಸೆಯಾಗಿದ್ದಾಳೆ. ಕಪಟಿಯಾದ ರಾವಣ ನನ್ನ ಸೊಸೆ ಜಾನಕಿಯನ್ನು ಕದ್ದೊಯ್ದನೆ ? ನನ್ನ ಸೋದರ ಜಟಾಯುವನ್ನು ಕೊಂದನೆ ? ಅವನನ್ನು ಸದೆಬಡಿಯುವ ಶಕ್ತಿ ನನ್ನಲ್ಲಿ ಇಲ್ಲವಾಯಿತಲ್ಲ ಎಂದು ಕೊರಗುತ್ತಿದ್ದೇನೆ. ವಾನರ ಪುಂಗವರೆ ! ಹಿಂದಿನ ಘಟನೆ ಈಗ ನೆನಪಿಗೆ ಬರುತ್ತಿದೆ. ಹಿಂದೊಮ್ಮೆ ನನ್ನ ಮಗ ಸುಪಾರ್ಶ್ವನೆಂಬವನು ನನಗೆ ಆಹಾರವನ್ನೊ- ದಗಿಸಲು ಆಕಾಶದಲ್ಲಿ ಹಾರಾಡುತ್ತಿದ್ದಾಗ ಬಲಾತ್ಕಾರವಾಗಿ ಒಬ್ಬ ಸ್ತ್ರೀಯನ್ನು ಕೊಂಡೊಯ್ಯುತ್ತಿರುವ ರಾವಣನನ್ನು ಕಂಡಿದ್ದನಂತೆ. ಆಕೆ 'ರಾಮ, ರಾಮ' ಎಂದು ಕೂಗುತ್ತಿದ್ದಳಂತೆ. ರಾಮಕಾರ್ಯವನ್ನು ಮಾಡುವುದು ನನಗೂ ಸಂತಸದ ಮಾತು. ನಾನು ನಿಮಗೆ ಒಂದು ಮಾತನ್ನು ಹೇಳಬಯಸುತ್ತೇನೆ. ನಾನು ಜನ್ಮತಃ ದೂರದರ್ಶಿಯಾಗಿದ್ದೇನೆ. ಓ, ಅಲ್ಲಿ ದೂರದಲ್ಲಿ ಲಂಕೆ ನನಗೆ ಕಾಣಿಸುತ್ತಿದೆ. ಅದು ಇಲ್ಲಿಂದ ನೂರು ಯೋಜನ ದೂರದಲ್ಲಿದೆ. ಅಲ್ಲಿ ಒಂದೆಡೆ ರಾಕ್ಷಸಿಯರಿಂದ ಸುತ್ತುವರಿದು ಸೀತೆ ಕುಳಿತಿದ್ದಾಳೆ. ರಾಕ್ಷಸಿಯರು ತಂದೀವ ಆಹಾರವನ್ನು ಆಕೆ ಮುಟ್ಟುವುದಿಲ್ಲ. ದಿನವೂ ಇಂದ್ರನು ತಂದೀವ ಅಮೃತಾನ್ನವೇ ಆಕೆಯ ಆಹಾರ. "ಇದು ನನ್ನ ಸ್ವಾಮಿ ರಾಮಚಂದ್ರನಿಗೆ, ಇದು ನನ್ನ ಮೈದುನ ಲಕ್ಷ್ಮಣನಿಗೆ" ಎಂದು ಎರಡು ಪಾಲುಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಿ ತಾನು ತಿನ್ನುತ್ತಾಳೆ ! ಓ ! ರಾಮನ ಮಹಿಮೆ ಎಷ್ಟು ಅಪಾರವಾಗಿದೆ. ಆತನ ಕತೆ ಕೇಳುತಿದ್ದಂತೆ ನನ್ನ ಮೈಯಲ್ಲಿ ತಾರುಣ್ಯ ಮೂಡುತ್ತಿದೆ. ಸುಟ್ಟ ರೆಕ್ಕೆಗಳು ಮತ್ತೆ ಚಿಗುರುತ್ತಿವೆ. ಮುಪ್ಪು ತಾನೇ ಮುದುಡಿಕೊಳ್ಳುತ್ತಿದೆ. ನಾನೀಗ ಸಂಪೂರ್ಣ ಯುವಕನಾಗಿದ್ದೇನೆ. ನಾನೀಗ ನನ್ನ ಮಂದಿರವಾದ ಹಿಮಾಲಯಕ್ಕೆ ತೆರಳಬೇಕು. ನಿಮ್ಮಲ್ಲಿ ಯಾರು ನೂರು ಯೋಜನ ದೂರ ಹಾರಬಲ್ಲರೋ ಅವರು ಸೀತೆಯನ್ನು ಕಾಣಬಲ್ಲರು. ನಿಮಗೆ ಮಂಗಳ- ವಾಗಲಿ, ನಾನಿನ್ನು ಬರುತ್ತೇನೆ." ಸಂಪಾತಿ ಹೊಸತಾಗಿ ಮೂಡಿದ ರೆಕ್ಕೆಗಳನ್ನು ನವಿಗಿಸುತ್ತಾ ಆಕಾಶ- ದಲ್ಲಿ ಮಾಯವಾದ. ಕಪಿಗಳು ರಾಮ ಮಹಿಮೆಯ ಅದ್ಭುತವನ್ನು ಕಂಡು ಬೆರಗಾಗಿ ಕೈ ಜೋಡಿಸಿದರು. ಎಲ್ಲರೂ ತೆಂಕಣಕಡಲಿನ ಬಳಿ- ಯಲ್ಲಿ ಬಂದು ನೆರೆದರು. ಎದುರುಗಡೆ ಅಪಾರವಾದ ಜಲರಾಶಿ ! ಮುಂದೇನು ಮಾಡುವುದು ? "ಯಾರು ಎಷ್ಟು ದೂರ ಹಾರಬಲ್ಲರು ಎಂಬುದನ್ನು ಪ್ರತಿಯೊಬ್ಬನೂ ನಿವೇದಿಸಬೇಕು" ಎಂದು ವೃದ್ದ ಜಾಂಬವಂತನ ಸೂಚನೆಯಂತೆ ಒಬ್ಬೊಬ್ಬರೂ , "ಹತ್ತು ಯೋಜನೆ ಹಾರಬಹುದು" ಎಂದ ಗಜ. ಗವಾಕ್ಷ ಇಪ್ಪತ್ತು ಯೋಜನ ಹಾರಿದರೆ, ಶರಭ ಮೂವತ್ತು ಯೋಜನ ಹಾರಬಲ್ಲ. ಋಷಭ ನಾಲ್ವತ್ತು ಯೋಜನ; ಗಂಧಮಾದನ ಐವತ್ತು ಯೋಜನ; ಮೈಂದ ವಿವಿದರು ಕ್ರಮವಾಗಿ ಅರುವತ್ತು-ಎಪ್ಪತ್ತು ಯೋಜನಗಳ ವರೆಗೆ ಹಾರ- ಬಲ್ಲರು ಎಂದು ತಿಳಿದುಬಂತು. ತಾರ "ಎಂಭತ್ತು ಯೋಜನಗಳವರೆಗೂ ಹಾರಬಲ್ಲೆ" ಎಂದ. ಆಗ ಮುದಿ ಜಾಂಬವನೂ ತನ್ನ ಅಳವಿನ ಆಳ- ವನ್ನು ವಿವರಿಸಿದ : "ನೀವು ಹರೆಯದವರು ನನ್ನನ್ನು ಮುದಿಗೊಡ್ಡು ಎಂದು ಗಾಳಿ- ಗೊಡ್ಡುವಿರೋ ಏನೋ ! ಆದರೂ ನಾನು ನನ್ನ ಕುರಿತು ಹೇಳಿಕೊಳ್ಳ- ಬೇಕು. ಹಿಂದೆ ವಾಮನನು ತ್ರಿವಿಕ್ರಮನಾಗಿ ಭೂಮ್ಯಾಕಾಶಗಳನ್ನು ತುಳಿದು ನಿಂತಾಗ ಈ ಆನಂದ ಸಂದೇಶವನ್ನು ಹೊತ್ತ ಹರಿಕಾರನಾಗಿ ನಾನು ಮೂರು ಲೋಕಗಳನ್ನೂ ಸುತ್ತಾಡಿದ್ದೆ. ಆಗ ಮೇರುಶಿಖರ ನನ್ನ ಮಣಿಗಂಟಿಗೆ ತಾಗಿ ನನ್ನ ವೇಗ ಕುಂಠಿತವಾಗಿದೆ. ನಾನೀಗ ಕೇವಲ ತೊಂಬತ್ತು ಯೋಜನ ದೂರ ಮಾತ್ರವೇ ಹಾರಬಲ್ಲೆ." ನೂರು ಯೋಜನ ಹಾರಿ ಲಂಕೆಯನ್ನು ಸೇರಬಹುದಾದರೂ ಮರಳಿ ಹಾರಿ ಬರುವುದು ತನ್ನಿಂದ ಸಾಧ್ಯವಾಗಲಾರದು ಎನ್ನುವ ಭಾವವನ್ನು ಅಂಗದ ವ್ಯಕ್ತಪಡಿಸಿದನು. ಸಂದೇಹದ ಪರಿಸ್ಥಿತಿಯಲ್ಲಿ ಹೋಗುವುದು ಚೆನ್ನವಲ್ಲವೆಂದು ಜಾಂಬವಂತನೂ ನುಡಿದನು. ಮತ್ತೆ ಕಪಿಗಳ ಮುಂದೆ ಅದೇ ಪ್ರಶ್ನೆ! ಮುಂದೇನು ಮಾಡುವುದು ? ಬೇಸರಗೊಂಡ ಅಂಗದನಂತೂ ಮತ್ತೆ ಉಪವಾಸದೆಡೆಗೆ ವಾಲತೊಡ ಗಿದನು: "ಈ ಕಷ್ಟದಲ್ಲಿ ಯಾರು ನಮಗೆ ಆಸರೆ ? ಕಡಲನ್ನು ದಾಟುವ ಸಾಹಸಿ ಯಾರು ? ರಾಮನ ಕಾರ್ಯವನ್ನು ಸಾಧಿಸುವ ಪುಣ್ಯಾತ್ಮ ಯಾರೂ ಇಲ್ಲವೆ ? ಹಾಗಿದ್ದರೆ ನಮಗೆ ಉಪವಾಸವೊಂದೇ ಶರಣು." ಆಗ ಜಾಂಬವಂತನ ಎಚ್ಚರದ ನುಡಿ ಸಿದ್ಧವಾಗಿತ್ತು: "ನಿರಾಶನಾಗಬೇಡ ಅಂಗದ, ನಮ್ಮಲ್ಲಿ ಒಬ್ಬ ಮಹಾವೀರ ಈ ಕಾರ್ಯವನ್ನು ಮಾಡಬಲ್ಲ." ಎಂದವನೇ ಹನುಮಂತನೆಡೆಗೆ ತಿರುಗಿ ನುಡಿದನು: "ಮಹಾವೀರನೆ, ಏಕೆ ಮೌನವಾಗಿರುವೆ ? ಕಪಿಕುಲವೆಲ್ಲ ಭಯದಿಂದ ತತ್ತರಿಸಿದರೂ ನಿನಗೆ ಕರುಣೆ ತೋರದೆ ? ಪ್ರಾಣದೇವನ ಮಗನಲ್ಲವೆ ನೀನು ? ಬಲದೇವತೆಯಲ್ಲವೇ ನೀನು ? ವೇಗದಲ್ಲಿ ಗರುಡ ಕೂಡ ನಿನಗೆ ಎಣೆಯಲ್ಲ. ಉಳಿದವರ ಪಾಡೇನು ! ಎದ್ದೇಳು ಮಾರುತಿಯೇ ! ನಿನ್ನ ಬಂಧುಗಳನ್ನು ಉಳಿಸಿ ಕಾಪಾಡುವ ಭಾರ ನಿನ್ನ ಮೇಲಿದೆ. ನಿನ್ನ ಪರಾಕ್ರಮವನ್ನು ನೀನು ಜಗತ್ತಿಗೆ ತೋರಿಸಿ ಕೊಡಬೇಕು." ಕಪಿಗಳಿಗೆಲ್ಲ ಉತ್ಸಾಹ ತುಂಬುವಂತೆ ಹನುಮಂತ ನಗುತ್ತಲೆ ನುಡಿದನು: "ನೂರು ಯೋಜನ ದಾಟಿ ಬರುವದು ನನಗೊಂದು ಲೆಕ್ಕವೇ ಅಲ್ಲ. ಸೂರ್ಯನ ಬಳಿ ಓದುತ್ತಿದ್ದಾಗ ಮೇರುವಿಗೆ ನೂರಾರು ಬಾರಿ ಸುತ್ತು ಬಂದವನು ನಾನು. ರಾಮಚಂದ್ರನ ಅನುಗ್ರಹದಿಂದ ನನಗೆ ಈ ಕಡಲು ಒಂದು ಹೆಜ್ಜೆ ದೂರವೂ ಅಲ್ಲ. ನೀವು ಇಲ್ಲಿ ನಿರೀಕ್ಷಿಸುತ್ತಿರಿ. ನಾನು ರಾಮಕಾರ್ಯವನ್ನು ಪೂರೈಸಿಕೊಂಡು ಬರುವೆನು." ಕಪಿಗಳ ಜಯಕಾರ ಮುಗಿಲನ್ನು ಮುತ್ತಿತು. ಉದಯಾದ್ರಿಯನ್ನೇರಿದ ಉದಯಭಾನುವಿನಂತೆ- ಮಹೇಂದ್ರ ಪರ್ವತವನ್ನೇರಿ ನಿಂತ ಹನುಮಂತನ ಶೋಭೆ ಅವರ್ಣನೀಯವಾಗಿತ್ತು. ಹಾರುವ ಮುನ್ನ ಹನುಮಂತನು ಮನದಲ್ಲೆ ರಾಮಚಂದ್ರನ ಚರಣಗಳಿಗೆ ವಂದಿಸಿದನು. ಸುಂದರಕಾಂಡ ಮಾಹೇಂದ್ರದಿಂದ ತ್ರಿಕೂಟಕ್ಕೆ ಮಹೇಂದ್ರ ಪರ್ವತಶಿಖರದಲ್ಲಿ ಮಹೋನ್ನತನಾಗಿ ಬೆಳೆದು ನಿಂತ ಮಾರುತಿಯು ಮತ್ತೊಮ್ಮೆ ರಾಮಚರಣಗಳಿಗೆ ವಂದಿಸಿದನು. ಕೆಂಪು ಮೈಯ ಮಾರುತಿಯನ್ನು ಕಂಡಾಗ ಲಂಕೆಯನ್ನು ಸುಟ್ಟುಬಿಡಲು ಭುಗಿಲೆನ್ನುವ ಅಗ್ನಿಜ್ವಾಲೆಯಂತೆ ಕಾಣಿಸುತ್ತಿತ್ತು. ಸುತ್ತ ಸುಳಿವ ಮೋಡಗಳು ಈ ಬೆಂಕಿಯುಗುಳುವ ಹೊಗೆಯೇನೊ ! ಇಂದ್ರಿಯಗಳನ್ನು ನಿಗ್ರಹಿಸಿ, ಆತ್ಮತೇಜಸ್ಸನ್ನು ಬೆಳಗಿಸಿ ಹಾರಲು ಸನ್ನದ್ಧನಾಗಿ ನಿಂತ ಹನುಮಂತನ ವೀರವಾಣಿ ಕಪಿಗಳಿಗೆ ಮೈನಿವಿರೆಬ್ಬಿಸಿತು: " ರಾಮಚಂದ್ರನ ಬಾಣದಂತೆ ನಾನು ಲಂಕೆಗೆ ಹಾರಿ ಸೀತೆಯನ್ನು ಹುಡುಕುವೆನು. ಒಂದು ವೇಳೆ ಸೀತೆ ದೊರಕದಿದ್ದರೆ ಲಂಕೆಯನ್ನು ಕಿತ್ತು ತಂದೇನು; ರಾವಣನನ್ನು ಬಲಿಕೊಡುವ ಪಶುವಿನಂತೆ ಕಟ್ಟಿ ರಾಮ- ಚರಣಗಳ ಮುಂದೆ ತಂದು ನಿಲ್ಲಿಸಿಯೇನು. ಕಡಲನ್ನು ಬತ್ತಿಸಿಯಾದರೂ ಸರಿ, ಗಿರಿಪರ್ವತಗಳನ್ನು ನೆಗಹಿಯಾದರೂ ಸರಿ, ದೇವದಾನವರೊಡನೆ ಹೋರಾಡಿಯಾದರೂ ಸರಿಯೆ-ಸೀತೆಯನ್ನು ಕಂಡೇ ಬರುವೆನು, ವಾಯುವಿನಂತೆ ಮೂರುಲೋಕವನೆಲ್ಲ ಸುತ್ತಾಡಿದರೂ ಸರಿ ಸೀತೆ- ಯನ್ನು ಕಂಡು ಮಾತಾಡಿಸದೆ ಈ ಹನುಮಂತ ಮರಳುವುದಿಲ್ಲ. ರಾಮ- ಚರಣಗಳ ನಮ್ರಕಿಂಕರನಾದ ಈ ಪವಮಾನತನಯನ ನುಡಿ ಮೂರು ಕಾಲಕ್ಕೂ ಸತ್ಯ. ನನ್ನ ಬಂಧುಗಳೆ, ನನ್ನ ಸ್ನೇಹಿತರೆ, ನಿಮ್ಮೆಲ್ಲರನ್ನು ಬೀಳ್ಕೊಡುತ್ತಿದ್ದೇನೆ. ಸಫಲವಾಗಿ ಮರಳಿಬಂದು ನಿಮ್ಮನ್ನು ಕಾಣುವೆನು." ಕಪಿಗಳು ಕಣ್ಣರಳಿಸಿ ಮುಗಿಲಕಡೆ ದಿಟ್ಟಿಸುತ್ತಿದ್ದರು. ಹನುಮಂತನು ಮಹೇಂದ್ರ ಪರ್ವತವನ್ನೊಮ್ಮೆ ತುದಿಗಾಲಿನಿಂದ ಒತ್ತಿ ಆಕಾಶಕ್ಕೆ ಚಿಮ್ಮಿದನು. ಪರ್ವತ ಮಾರುತನ ಭಾರವನ್ನು ತಡೆಯಲಾರದೆ ನಡುಗಿತು. ಕಲ್ಲುಗಳು ಒಡೆದುರುಳಿದವು. ವಿದ್ಯಾಧರರು-ತಪಸ್ವಿಗಳು ದಿಗಿಲುಗೊಂಡರು. ಆಕಾಶದಲ್ಲಿ ಅಪ್ಸರೆಯರು ಹೂಗಳಿಂದಲೂ ನಯನಾಂಬುಜ- ಗಳಿಂದಲೂ ಹನುಮಂತನನ್ನು ಹರಸಿದರು. ದೇವತೆಗಳೂ-ಮುನಿಗಳೂ ಸಂತಸದಿಂದ "ಸಾಧು ಸಾಧು' ಎಂದು ಕೊಂಡಾಡಿದರು. ಆಕಾಶದಲ್ಲಿ ನೆರೆದ ಸಾಧು ಜೀವಿಗಳೆಲ್ಲ ಹನುಮಂತನನ್ನು ಹೊಗಳುವವರೆ : "ದೇವಕಾರ್ಯಕ್ಕಾಗಿ ಮಾಹೇಂದ್ರದಿಂದ ತ್ರಿಕೂಟಕ್ಕೆ ಹಾರುತ್ತಿರುವ ಹನುಮಂತನಿಗೆ ಜಯವಾಗಲಿ, ಮೂವತ್ತು ಯೋಜನ ವಿಸ್ತಾರವಾದ ನೆರಳನ್ನು ಸಾಗರದಲ್ಲಿ ಚೆಲ್ಲಿ ಚಿಮ್ಮುತ್ತಿರುವ ಮಾರುತಿಗೆ ಜಯವಾಗಲಿ, ರಾಮಚಂದ್ರನ ಕರುಣಲತೆಯ ಮೊದಲ ಮೊಗ್ಗೆಯಾದ ಪವಮಾನ ತನಯನಿಗೆ ಜಯವಾಗಲಿ." ರಾವಣನ ರಾಜಧಾನಿಯಲ್ಲಿ ಸಮುದ್ರ ರಾಜನಿಗೆ ರಾಮಭಕ್ತನ ಮೇಲೆ ಅಪಾರ ಗೌರವ. ಅವನು ತನ್ನಲ್ಲಿ ಹುದುಗಿರುವ ಹಿಮಮಂತನ ಮಗನಾದ ಮೈನಾಕನನ್ನು ಮೇಲೆದ್ದು ಬಂದು ಹನುಮಂತನಿಗೆ ಉಪಚರಿಸುವಂತೆ ಕೇಳಿಕೊಂಡನು. ಮೈನಾಕ ನೀರಿನ ಮೇಲೆ ಕಾಣಿಸಿಕೊಂಡನು. ಹನುಮಂತನು ಇದನ್ನು ಗಮನಿಸದೆ ಒಂದೇಸಮನೆ ಮುಂದುವರಿಯುತ್ತಿದ್ದ. ಆಗ ಮೈನಾಕನು-"ಮಹಾವೀರನೆ ! ಇಲ್ಲಿ ವಿಶ್ರಮಿಸಿ ನಾನು ಅರ್ಪಿಸಿದ ಸ್ವಾದು ಫಲಗಳನ್ನು ಸೇವಿಸಿ ಆಯಾಸವನ್ನು ಪರಿಹರಿಸಿಕೊಳ್ಳಬೇಕು. ನಾವಿಬ್ಬರೂ ಒಂದು ದೃಷ್ಟಿಯಿಂದ ಬಂಧುಗಳೇ ಆಗಿದ್ದೇವೆ." ಎಂದು ಪ್ರಾರ್ಥಿಸಿಕೊಂಡನು. ಆಗ ಹನುಮಂತನು: "ನನ್ನ ಮಾತಿರಲಿ. ಶಿವನ ಭಾವ-ಮೈದುನನಾದ ನೀನು ಇಲ್ಲಿ ಹುದುಗಿರಲು ಕಾರಣವೇನು ?" ಎಂದು ಕೇಳಿದನು. ಮೈನಾಕ ತನ್ನ ಕತೆಯ ಗೋಳನ್ನರುಹಿಕೊಂಡನು: " ಹಿಂದೆ ಪರ್ವತಗಳೆಲ್ಲ ಹಕ್ಕಿಯಂತೆ ಹಾರಬಲ್ಲವುಗಳಾಗಿದ್ದವು. ಅವುಗಳ ಹಾರಾಟದಿಂದ ಲೋಕವೆಲ್ಲ ತ್ರಸ್ತವಾಯಿತು. ಇದರಿಂದ ಕೋಪಗೊಂಡ ದೇವೇಂದ್ರನು ಎಲ್ಲ ಪರ್ವತಗಳ ರೆಕ್ಕೆಗಳನ್ನೂ ವಜ್ರಾಯುಧದಿಂದ ಕತ್ತರಿಸಿಬಿಟ್ಟನು. ಆಗ ನಾನು ನಿನ್ನ ತಂದೆಯಾದ ಪವಮಾನನನ್ನು ಮೊರೆಹೊಕ್ಕೆ. ಅವನು ನನ್ನನ್ನು ಇಲ್ಲಿ ಹುದುಗಿಸಿ ರಕ್ಷಿಸಿದ ಪ್ರಾಣದಾತನು. ಎಲ್ಲರ ರಕ್ಷಕನಾದ ಪ್ರಾಣದೇವನಿಂದ ನನ್ನ ರೆಕ್ಕೆಗಳು ಉಳಿದುಕೊಂಡವು. ಎಂತಲೇ ನೀನು ನನ್ನ ಬಂಧು ,ನನ್ನ ಹೆಮ್ಮೆಯ ಅತಿಥಿ. ಅಲ್ಲದೆ ಸಮುದ್ರರಾಜ ಕೂಡ ನಿನಗೆ ಸತ್ಕರಿಸುವಂತೆ ನನ್ನಲ್ಲಿ ವಿನಂತಿಸಿಕೊಂಡಿದ್ದಾನೆ. ನಮ್ಮ ಅಲ್ಪ ಆತಿಥ್ಯವನ್ನು ಕೃಪೆಯಿಟ್ಟು ಸ್ವೀಕರಿಸಿ ಅನುಗ್ರಹಿಸಬೇಕು." ಪುರುಷರೂಪದಿಂದ ಯಾಚಿಸುತ್ತಿರುವ ಮೈನಾಕನ ಮೈದಡವಿ ಹನುಮಂತನು ಸಂತೈಸಿದನು: "ಮಿತ್ರನಾದ ಮೈನಾಕನೆ! ದಣಿದವರಿಗೆ ಮಾತ್ರವೇ ವಿಶ್ರಾಂತಿಯ ಆವಶ್ಯಕತೆ, ನನಗಂತೂ ದಣಿವೆಂಬುದೇ ಇಲ್ಲ. ನನ್ನ ಕಾರ್ಯದ ಅವಧಿ- ಯೂ ಹೆಚ್ಚಿಲ್ಲ. ಅದರಿಂದ ತ್ವರೆಯಿಂದ ಮುಂದುವರಿಯಬೇಕಾಗಿದೆ. ರಾಮಕಾರ್ಯವನ್ನು ಪೂರೈಸಿದ ಹೊರತು ನನಗೆ ಯಾವ ಆತಿಥ್ಯವೂ ಬೇಕಿಲ್ಲ. ನಿನ್ನ ಸೌಜನ್ಯಕ್ಕೆ ಕೃತಜ್ಞತೆಗಳು." ಮುಗಿಲಿನಲ್ಲಿ ದೇವತೆಗಳು ಹರ್ಷೋದ್ಗಾರಗೈದರು. ನಿರಪೇಕ್ಷೆಯೂ ಸಾಮರ್ಥ್ಯದ ಒಂದು ಲಕ್ಷಣ. ದೊಡ್ಡವರು ತಮ್ಮ ಸ್ವಂತಬಲದಿಂದಲೇ ಕಾರ್ಯವನ್ನು ಸಾಧಿಸಿಕೊಳ್ಳುವರು; ಅವರು ಎಂದಿಗೂ ಇನ್ನೊಬ್ಬರ ಸಹಕಾರದ ಮೋರೆಯನ್ನು ನೋಡಲಾರರು ! ಮೈನಾಕದ ಕೃತ್ಯದಿಂದ ಸಂತೋಷಗೊಂಡ ಇಂದ್ರನು "ರಾಮಸೇವಾ ನಿರತನಾದ ನಿನಗೆ ಇನ್ನು ನನ್ನಿಂದ ಭಯವಿಲ್ಲ" ಎಂದು ಸಂತೈಸಿದನು. ಹನುಮಂತನು ಮೊದಲಿಗಿಂತ ಎರಡುಪಟ್ಟು ವೇಗದಲ್ಲಿ ಹಾರ- ತೊಡಗಿದನು. ಆಗ ದೇವತೆಗಳು ಸುರಸೆಯೆಂಬ ನಾಗಸ್ತ್ರೀಯನ್ನು ಕರೆದು ನುಡಿದರು : "ನೀನು ಹೋಗಿ ಮಾರುತಿಗೆ ಅಡ್ಡಿಯನ್ನೊಡ್ಡಬೇಕು. ನಾವೀಗ ಅವನ ಸಾಮರ್ಥ್ಯವನ್ನು ಪರೀಕ್ಷಿಸಬೇಕಾಗಿದೆ. ನೀನು ಬಯಸಿದುದು ನಿನ್ನ ಬಾಯಲ್ಲಿ ಬಂದು ಬೀಳಲಿ, ಹೋಗು ನಮ್ಮ ಕಾರ್ಯವನ್ನು ಸಾಧಿಸು." ಸುರಸೆ ಮಾರುತಿಯ ಮಾರ್ಗಕ್ಕೆ ಅಡ್ಡವಾಗಿ ರಾಕ್ಷಸಿಯ ರೂಪು ತಾಳಿ ಬಾಯಿ ತೆರೆದು ನಿಂತಳು. ಆಗ ಹನುಮಂತನು "ನಾನು ಮಾರುತಿ, ರಾಮಚಂದ್ರನ ಕಿಂಕರ; ನನಗೆ ದಾರಿ ಬಿಡು" ಎಂದು ಕೇಳಿಕೊಂಡನು. ಒಡನೆ ಸುರಸೆ ನುಡಿದಳು ; " ನೀನು ಯಾರಾದರೆ ನನಗೇನು ? ಮೊದಲು ನನ್ನ ಬಾಯಿಯೊಳಹೊಕ್ಕು ಜೀರ್ಣವಾಗು." ಆಗ ಹನುಮಂತನು ಕೋಪಗೊಂಡು ಪರ್ವತಾಕಾರದ ರೂಪನ್ನು ತಾಳಿ "ಈಗ ನನ್ನನ್ನು ಹೇಗೆ ತಿನ್ನುವೆ ?" ಎಂದು ಅಣಕಿಸಿದನು. ಅವನ ದೇಹಕ್ಕಿಂತ ಎರಡುಪಟ್ಟು ದೊಡ್ಡದಾಗಿ ಬಾಯಗಲಿಸಿದಳು ಸುರಸೆ ! ತತ್ ಕ್ಷಣ ಹನುಮಂತ ಹೆಬ್ಬೆರಳಿನಷ್ಟು ಚಿಕ್ಕದಾಗಿ ಆಕೆಯ ಬಾಯಿಯನ್ನು ಹೊಕ್ಕು ಹೊರಬಂದನು. ಅವನ ಪ್ರಭಾವವನ್ನು ಕಂಡ ಸುರಸೆ ಮೆಚ್ಚಿಗೆಯ ಮಾತನ್ನಾಡಿದಳು : "ನೀನೂ ಬದುಕಿದೆ. ದೇವತೆಗಳ ವರವನ್ನೂ ಬದುಕಿಸಿದೆ. ನಿನ್ನ ಶಕ್ತಿ ಹಾಗೂ ಯುಕ್ತಿ ಅಪಾರವಾಗಿದೆ. ನೀನು ನಿಶ್ಚಯವಾಗಿ ಲಂಕೆಯನ್ನು ಸೇರಬಲ್ಲೆ. ಸೀತೆಯನ್ನು ಕಾಣಬಲ್ಲೆ." ಆಕೆಯ ಹರಕೆಯ ಮಾತನ್ನು ಹೊತ್ತು ಹನುಮಂತನು ಮುಂದುವರಿದನು. ಆಕಾಶದಲ್ಲಿ ಹಾರುವ ಈ ಮಹಾದೇಹ ಸಿಂಹಿಕೆಯ ಕಣ್ಣಿಗೆ ಬಿತ್ತು. ಆಕೆ ಲಂಕೆಯನ್ನು ಕಾಯುವವಳು. ಬ್ರಹ್ಮನ ವರ ಬಲದಿಂದ ಆಕೆಗೆ ಸಾವೂ ತಟ್ಟದು. ನೆರಳು ಸಿಕ್ಕಿದರೆ ಸಾಕು; ಜನರನ್ನು ಸೆಳೆದುಬಿಡು- ತ್ತಿದ್ದಳಂತೆ ಆಕೆ. ಅದರಿಂದಲೇ ಅವಳನ್ನು ಛಾಯಾಗ್ರಹ ಎಂದೂ ಕರೆಯುತ್ತಿದ್ದರು. ಹನುಮಂತನನ್ನು ನುಂಗಿಬಿಡುವೆನೆಂದು ಬಾಯಿ ತೆರೆದು ನಿಂತಿದ್ದಳು. ಇಲ್ಲಿ ಹನುಮಂತನು ಹಿಂದಿನದೇ ಉಪಾಯವನ್ನು ಹೂಡಿದನು. ಮೊದಲು ಮುಗಿಲು ತುಂಬ ಬೆಳೆದು ನಿಂತನು. ಆಕೆಯೂ ಮುಗಿಲೆತ್ತರಕ್ಕೆ ಬಾಯಗಲಿಸಿದಾಗ ಚಿಕ್ಕದಾಗಿ ಅವಳ ಹೊಟ್ಟೆಯನ್ನು ಪ್ರವೇಶಿಸಿ ಹೃದಯವನ್ನು ಭೇದಿಸಿದನು. ಸಿಂಹಿಕೆಯನ್ನು ಕೊಂದು ಅವಳ ಕರುಳನ್ನೇ ಕಿತ್ತು ತಂದ ಹನುಮಂತನನ್ನು ಕಂಡು ದೇವತೆಗಳು ಬೆರಗಾಗಿ ಕೊಂಡಾಡಿದರು : "ಮಹಾ ಮಹಿಮನಾದ ಮಾರುತಿಯೇ ! ಎಲ್ಲ ದುಷ್ಟ ಶಕ್ತಿಗಳನ್ನೂ ನೀನು ಸಂಹರಿಸಿರುವೆ. ಇನ್ನು ನಾವೆಲ್ಲ ಧೈರ್ಯದಿಂದ ಆಕಾಶದಲ್ಲಿ ತಿರುಗಾಡಬಹುದು. ಇನ್ನು ಮುಂದೆ ನಮ್ಮೆಲ್ಲರ ಬಾಯಿಯೂ ನಿನ್ನನ್ನು ಕೊಂಡಾಡುತ್ತಿರುತ್ತದೆ." ದೇವತೆಗಳು ಸಂತಸದಿಂದ ಹೂಮಳೆ ಸುರಿಸಿದರು. ಹನಮಂತನು ಕುಡಿಗಣ್ ನೋಟದಿಂದ ಅವರನ್ನು ಕರುಣಿಸಿ ಮುಂದೆ ಸಾಗಿದನು. ಮುಗಿಲನ್ನೂ ಕಡಲನ್ನೂ ಹಿಂದೆ ಹಾಕಿ ಮುಂದೆ ಸಾಗಿದನು. ಎದುರು- ಗಡೆ ಲಂಕೆಯ ರಕ್ಷೆಗೆ ಕೋಟೆಯಂತಿರುವ ಲಂಬ ಪರ್ವತ ಕಾಣಿಸಿತು. ವೇಗದಿಂದ ಬಂದ ಹನುಮಂತನು ಗಿರಿ ಶಿಖರದಲ್ಲಿ ಕಾಲೂರಿದನು. ಈ ಸಂರಂಭಕ್ಕೆ ಹೆದರಿದ ಮೃಗ-ಪಕ್ಷಿಗಳು ದಿಕ್ಕುಗೆಟ್ಟು ಸಿಕ್ಕಾಬಟ್ಟೆ ಓಡ- ತೊಡಗಿದವು. ತ್ರಿಕೂಟದ ಶಿಖರದಲ್ಲಿ ನಿಂತ ಹನುಮಂತನ ಮೇಲೆ ಸುರರು ಹೂಮಳೆಗರೆದರು. ನೂರು ಯೋಜನ ದೂರದ ಉತ್ಪತನದಿಂದಲೂ ಹನುಮಂತ ದಣಿಯಲಿಲ್ಲ. ಬೆಳಗುವ ವಹ್ನಿ ಕತ್ತಲಲ್ಲೂ ಬೆಳಗುತ್ತಿರುತ್ತದೆ. ತ್ರಿಕೂಟದ ಶಿಖರದಲ್ಲಿ ನಿಂತ ಹನುಮಂತ ಒಮ್ಮೆ ಲಂಕೆಯೆಡೆಗೆ ಕಣ್ಣು ಹಾಯಿಸಿದನು. ಲಂಕೆಯ ಸೊಬಗನ್ನು ಕೇಳುವುದೇನು ? ಎರಡನೆಯ ಅಮರಾವತಿ, ಕೋಟೆಗಳಿಂದ ಪ್ರಾಕಾರಗಳಿಂದ ಭದ್ರವಾದ ಲಂಕೆಯನ್ನು ಪ್ರವೇಶಿಸುವ ಅದಟು ಯಾರಿಗಿದೆ ? ಈ ಕಡಲನ್ನು ದಾಟುವುದೇ ಅಶಕ್ಯವಾದ ಮಾತು. ದಾಟಿದರೂ ಈ ನಗರವನ್ನು ಹೊಕ್ಕುವುದು ಸಾಧಾರಣಕೆಲಸವಲ್ಲ. ಆದರೆ ರಾಮದೇವನ ನಿಚ್ಚಳ ಭಕ್ತನಾದ ಹನುಮಂತನಿಗೆ ಇದೆಲ್ಲ ಒಂದು ಲೆಕ್ಕವೆ ? ಅವನಿಗೆ ದುಷ್ಕರವೆಂಬುದೇ ಇಲ್ಲ. ಹೊತ್ತು ಮುಳುಗುವುದರಲ್ಲಿತ್ತು. ರಾತ್ರಿಯಾದ ಮೇಲೆ ಊರನ್ನು ಪ್ರವೇಶಿಸುವುದು ಎಂದು ನಿಶ್ಚಯಿಸಿದ ಹನುಮಂತ, ಬೆಕ್ಕಿನಂತೆ ಬಹು ಚಿಕ್ಕರೂಪವನ್ನು ಧರಿಸಿಕೊಂಡ. ಯೋಗೇಶ್ವರನಾದ ಭಗವಂತನ ಪರಮಭಕ್ತನಿಗೆ ಇದೇನು ದೊಡ್ಡದಲ್ಲ. ಕ್ರಮೇಣ ಕತ್ತಲು ಕವಿಯಿತು. ಗೇಣುದ್ದದ ಹನುಮಂತ ಲಂಕೆಯೊಳಗೆ ಪ್ರವೇಶಿಸಿದನು. " ಯಾರು ನೀನು ಅಪ್ಪಣೆಯಿಲ್ಲದೆ ಊರೊಳಗೆ ಕಾಲಿಡು ವವನು ? " ಎಂದು ಗರ್ಜಿಸುತ್ತ ಪುರದೇವತೆ ಅಡ್ಡವಾಗಿ ನಿಂತಳು. ಸ್ತ್ರೀವಧೆ ಮಾಡುವುದು ಹನುಮಂತನಿಗೆ ಸರಿಯೆನಿಸಲಿಲ್ಲ. ಎಂತೆಲೆ ಆಕೆಯನ್ನು ಮೆಲ್ಲನೆ ಎಡಗೈಯಿಂದ ಅದುಮಿಹಿಡಿದನು. ಪುರದೇವತೆಗೆ ಈ ಲಘುಪ್ರಹಾರದಿಂದ ಬೆನ್ನಮೂಳೆಯೇ ಮುರಿದಂತೆನಿಸಿತು. ಆಕೆ ಗದ್ಗದಿತಳಾಗಿ ವಿನಂತಿಸಿಕೊಂಡಳು: " ಮಹಾನುಭಾವನೆ, ನಿನಗೆ ಸ್ವಾಗತ. ನಿನ್ನನ್ನು ನಾನು ಬಲ್ಲೆ. ಬ್ರಹ್ಮನು ಹೇಳಿದ ಮಾತು ನನಗೆ ನೆನಪಿದೆ. ನಿನ್ನನ್ನು ಒಬ್ಬ ಕಪಿ ಸೋಲಿಸಿದಂದು ಲಂಕೆಗೆ ವಿಪತ್ತು ಪ್ರಾಪ್ತವಾಯಿತೆಂದು ತಿಳಿ " ಎಂದು ನುಡಿದಿದ್ದನಲ್ಲವೆ ಆತ ? ಹೆಣ್ಣು ಹೆಂಗಸು ಅರಿಯದೆಮಾಡಿದ ಅಪರಾಧವನ್ನು ಮನ್ನಿಸಿ ಬಿಡು. ನಿನ್ನ ಕಾರ್ಯದಲ್ಲಿ ನಿನಗೆ ಜಯವಾಗಲಿ ನಿನ್ನ ಉದ್ದೇಶ ಫಲಿಸಲಿ. " ಆಕೆಯನ್ನು ಸಂತೈಸಿ, ಕುದ್ವಾರವೊಂದರಿಂದ ಮಾರುತಿಯು ಪಟ್ಟಣವನ್ನು ಪ್ರವೇಶಿಸಿದನು. ಸೀತೆಗಾಗಿ ಮನೆಮನೆಗೆ ಅಲೆದನು. ಅಲ್ಲಿ ಎಚ್ಚರತಪ್ಪಿ ಬಿದ್ದಿರುವ ರಾಕ್ಷಸರಲ್ಲದೆ ಇನ್ನೇನೂ ಕಾಣಿಸಲಿಲ್ಲ ! ಕೆಲವರು ಕುಡಿಯುತ್ತಿದ್ದಾರೆ. ಕೆಲವರು ಕುಡಿದು ಅಮಲೇರಿ ಬಿದ್ದಿದ್ದಾರೆ. ಇನ್ನು ಕೆಲವರು ಮಡದಿಯರೊಡನೆ ಕಾಮಚೇಷ್ಟೆ ಮಾಡು ತ್ತಿದ್ದಾರೆ. ಒಂದೆಡೆ ವ್ಯಭಿಚಾರಕ್ರಿಯೆ, ಹೋಮ, ಜಪ ನಡೆಯುತ್ತಿದೆ. ಎಲ್ಲಿ ನೋಡಿದರಲ್ಲಿ ನಗರ ರಕ್ಷಕರು ಆಯುಧ ಧಾರಿಗಳಾಗಿ ತಿರುಗುತ್ತಿದ್ದಾರೆ. ಒಂದು ಮನೆಯಲ್ಲಿ ಮಾತ್ರ ಹರಿಸ್ಮರಣೆ-ಹರಿಪೂಜೆ ನಡೆಯುತ್ತಿತ್ತು. ಅದೇ ಮಹಾತ್ಮನಾದ ವಿಭೀಷಣನ ಮನೆ. ಅಂಧಕಾರದ ಸಾಮ್ರಾಜ್ಯದಲ್ಲಿ ಮಿನುಗುತಿರುವ ಸೊಡರು. ಎರಡನೆಯ ಮನೆ ಕುಂಭಕರ್ಣನದು. ಪರ್ವತದಂತೆ ಬೋರಲುಬಿದ್ದು ನಿದ್ರಿಸುತ್ತಿದ್ದಾನೆ. ಇನ್ನೊಂದು ಮನೆ ಯಲ್ಲಿ ಮೂಗುಕತ್ತರಿಸಿಕೊಂಡ ಶೂರ್ಪಣಖೆ ಬಿದ್ದು ಕೊಂಡಿದ್ದಾಳೆ. ಕುಡಿದ ಅಮಲು ಇನ್ನೂ ಇಳಿದಿರಲಿಲ್ಲ. ಏನನ್ನೊ ಅಪಸ್ವರದಿಂದ ಹಾಡುತ್ತಿದ್ದಳು. ತಲೆಕೂದಲು ಚೆದರಿದೆ. ಉಟ್ಟ ಬಟ್ಟೆ ಎಲ್ಲಿ ಯಾವಾಗ ಜಾರಿಬಿದ್ದಿತ್ತೋ ಯಾರಿಗೆ ಗೊತ್ತು. ಈ ಅವಲಕ್ಷಣದ ಮೂರ್ತಿಯನ್ನು ನೋಡುವುದೂ ಅಮಂಗಳ ! ನಾಚುಗೆಗೇಡಿ ರಕ್ಕಸರೊಡನೆ ಕುಣಿಯು- ತ್ತಿದ್ದಾಳೆ ಬೇರೆ ! ಎಂಥ ಸಂಗೀತ ! ಏನು ನಾಟ್ಯ ! ರಾವಣನ ಮಕ್ಕಳಾದ ಇಂದ್ರಜಿತ್ತು ಮೊದಲಾದವರ ಮನೆಯನ್ನು ಶೋಧಿಸಿಯಾಯಿತು. ಎಲ್ಲ ಸೀತೆಯ ಕುರುಹು ಕಾಣದು. ಕಣ್ಣುಹಾಯಿಸಿ ದಲ್ಲೆಲ್ಲ ರೂಪಗೇಡಿ ರಕ್ಕಸಿಯರ ಸಂಸಾರ, ರಾವಣನ ರಾಜಧಾನಿಯ ಸುಂದರಿಯರಿಂದ ಜುಗುಪ್ಸಿತನಾದ ಮಾರುತಿ ಬಾನಿನೆಡೆಗೆ ದಿಟ್ಟಿಸಿದಾಗ ಪೂರ್ಣಚಂದ್ರನು ನಡುನೆತ್ತಿಗೆ ಬಂದಿದ್ದನು. ಹಾಲಿನಂಥ ಬೆಳುದಿಂಗಳು ಲಂಕೆಯ ಸೌಂದರ್ಯವನ್ನು ಇಮ್ಮಡಿಸಿತ್ತು. ಅಶೋಕವೃಕ್ಷದ ನೆಳಲಲ್ಲಿ ನಗರದ ಮನೆಗಳನ್ನೆಲ್ಲ ಸೋಸಿ ಹುಡುಕಿಯಾಯಿತು. ಇನ್ನು ರಾವಣನ ಅಂತಃಪುರದ ಸರದಿ. ತ್ರಿಲೋಕ ವಿಜಯಿಯಾದ ರಾವಣನ ಅಂತಃಪುರ !. ಅದರ ಸೊಬಗನ್ನು ಕೇಳುವುದೇನು ! ಪ್ರಪಂಚದಲ್ಲಿನ ಬೆಲೆ ಬಾಳುವ ವಸ್ತುಗಳೆಲ್ಲ ರಾವಣನ ಅಂತಃಪುರದಲ್ಲಿವೆ. ಪ್ರಪಂಚದ ಸುಂದರಿಯರೆಲ್ಲ ರಾವಣನ ತೋಳ್ ಸೆರೆಯಲ್ಲಿದ್ದಾರೆ ! ಅವನ ಶಯ್ಯಾಗಾರವೇನು ಸಾಮಾನ್ಯವೆ ! ಮಣಿಗಳಿಂದಲೆ ಕೆತ್ತಿದ ಕಂಬಗಳು. ಬಂಗಾರ ಹಾಸಿದ ಕರುಮಾಡ. ಭವ್ಯ ಭವನದ ನಡುವೆ ರಾವಣ ಪವಡಿಸಿದ್ದಾನೆ. ಸುತ್ತಲೂ ಸಾವಿರಾರು ಸುಂದರಿಯರ ಪರಿವಾರ, ಸುರಾದೇವಿಯಿಂದ ಮೈಮರೆತ ಸುಂದರಿಯರನ್ನು ನಿದ್ರಾದೇವಿ ಗಾಢವಾಗಿಯೇ ಅಪ್ಪಿಕೊಂಡಿದ್ದಳು. ವಿಲಾಸಮತ್ತನಾಗಿ ಮಧ್ಯದಲ್ಲಿ ಮಲಗಿದ್ದ ರಾಕ್ಷಸೇಂದ್ರನನ್ನು ಕಂಡಾಗಲೇ ಹನುಮಂತನಿಗೆ ಅನ್ನಿಸಿತ್ತು: " ಇವನೇ ಜಗನ್ಮಾತೆಯನ್ನು ಕದ್ದ ಮೂರ್ಖ." ಹನುಮಂತನು ಬಳಿಸಾರಿ ಕಣ್ಣರಳಿಸಿ ಪರೀಕ್ಷಿಸಿದನು. ಮಹಾಶೇಷನಂತೆ ಅತ್ತಿತ್ತ ಹೊರಳಿದ ತೋಳುಗಳು. ಚಂದನ ಬಳಿದ ಉಬ್ಬಿದ ಎದೆ. ವಿಜಯೋನ್ಮಾದದ ಮುಖಮುದ್ರೆ, ಅವನ ಬಳಿಯಲ್ಲಿ ಸಾಧ್ವಿ ಮಂಡೋದರಿ ಪವಡಿಸಿದ್ದಳು. ಅವಳನ್ನು ಕಂಡು ಹನುಮಂತ ಒಂದು ಕ್ಷಣ ತಡೆದು ನಿಂತು ಯೋಚಿಸತೊಡಗಿದನು: "ಇವಳು ಯಾರಿರಬಹುದು ? ದೇವತೆಯೋ ? ದಾನವಿಯೋ ? ಕಾಮದೇವನ ಆಶಾಲತೆಯಂತೆ ಬಳುಕುವ ಈ ಸುಂದರಿ ಯಾರಿರಬಹುದು ! ಏನಿದ್ದರೂ ಈಕೆ ಸೀತೆಯಂತೂ ಖಂಡಿತ ಅಲ್ಲ. ಯಾರಾದರೆ ನನಗೇನು ?" ಎಂದುಕೊಂಡು ಮುಂದೆ ಸಾಗಿದನು. ಎಲ್ಲಿಗೆ ಹೋದರೂ ರಾಕ್ಷಸ ಸ್ತ್ರೀಯರ ಕಾಮೋನ್ಮಾದವೇ ಬತ್ತಲೆ ಮೈಯೇ ಕಾಣಿಸಿತು ಹೊರತು ಜಗನ್ಮಾತೆ ಕಣ್ಣಿಗೆ ಬೀಳಲಿಲ್ಲ. ಹನುಮಂತನು ಒಂದಂಗುಲವನ್ನೂ ಬಿಡದೆ ಶೋಧಿಸಿದ್ದರೂ ಸೀತೆಯ ಪತ್ತೆಯಾಗಲಿಲ್ಲ. ಇದರಿಂದ ಮಾರುತಿಯೂ ಚಿಂತಾಕುಲನಾಗಬೇಕಾಯಿತು : " ಸೀತೆಯನ್ನು ಹುಡುಕುವುದು ನನ್ನಿಂದಾಗಲಿಲ್ಲ. ಕೆಲಸವೆಲ್ಲ ಕೆಟ್ಟು ಹೋಯಿತು. ಮೂರುಲೋಕದ ಸುಂದರಿಯರ ಬತ್ತಲೆ ಮೈಯನ್ನು ನೋಡುವುದಕ್ಕಾಗಿ ನಾನು ಲಂಕೆಗೆ ಬಂದುದೆ ? ಕಾಮುಕತೆಯ ನಗ್ನ ನೃತ್ಯವನ್ನು ಕಾಣುವುದಕ್ಕಾಗಿ ನಾನು ಇಲ್ಲಿಗೆ ಬಂದದೆ? ನೈಷ್ಠಿಕ ಬ್ರಹ್ಮಚಾರಿಯಾದ ನಾನು ಮಾಡಬಾರದ ಕೆಲಸವನ್ನು ಮಾಡಿದೆ ! ಆದರೂ ನಾನು ಹೊತ್ತ ಕಾರ್ಯದ ನಿರ್ವಹಣೆಗಾಗಿ ಇದನ್ನು ಮಾಡುವುದು ಅಗತ್ಯವಿತ್ತು. ಆತ್ಮ ನಿಗ್ರಹಿಯಾದ ನನಗೆ ಇದರಿಂದ ಯಾವ ಲೇಪವೂ ಉಂಟಾಗದು. ಅದು ಬೇರೆ ಮಾತು. ಬೆಂಕಿ ಮತ್ತು ಗಾಳಿ ಎಲ್ಲಿದ್ದರೂ ಪರಿಶುದ್ದವೆ. ಸೂರ್ಯನ ಬೆಳಕು ಹೊಲಸನ್ನು ಮುಟ್ಟಿದರೂ ಪವಿತ್ರವೆ. ಆದರೆ ನಾನು ಬರಿಯ ಉಪ್ಪು ನೀರಿನ ಕಡಲನ್ನಷ್ಟೇ ದಾಟಿದಂತಾಯಿತು; ಕರ್ತವ್ಯದ ಕಡಲು ನನ್ನಿಂದ ದಾಟಲಾಗಿಲ್ಲ. ನೋಡಬಾರದ ಹೆಣ್ಣುಗಳನ್ನೆಲ್ಲ ನೋಡಿದೆ; ಆದರೆ ರಾಮಚಂದ್ರನ ರಮಣಿಯನ್ನು, ನನ್ನ ತಾಯಿಯನ್ನು, ನೋಡುವುದಾಗ- ಲಿಲ್ಲ. ನಾನು ಇಲ್ಲಿಗೆ ಬಂದು ಏನನ್ನು ಸಾಧಿಸಿದಂತಾಯಿತು ? ನನ್ನ ಮೇಲೆ ಆಸೆಯಿಟ್ಟು ಕಾದಿರುವ ಕಪಿಗಳಿಗೆ ಯಾವ ಮೋರೆಯನ್ನು ತೋರಿಸಲಿ ? ರಾಮಚಂದ್ರನ ಬಳಿಗೆ ಹೋಗಿ "ಸೀತೆಯನ್ನು ನೋಡಲಾಗ ಲಿಲ್ಲ" ಎಂದು ಯಾವ ಬಾಯಿಂದ ಹೇಳಲಿ ? ನನ್ನ ಎಲ್ಲ ಸಾಹಸಗಳೂ ನೀರಮೇಲಣ ಬುರುಗಿನಂತೆ ವ್ಯರ್ಥ- ವಾದವು. ಈಗೇನು ಮಾಡುವುದು ? ತಪ್ಪು ಹಾದಿ ತುಳಿದ ರಾವಣನನ್ನು ಇಲ್ಲೆ ಮುಗಿಸಿಬಿಡಲೆ ? ಇಲ್ಲ, ಪಶುವಿನಂತೆ ಕಟ್ಟಿಕೊಂಡೊಯ್ದು ರಾಮನ ಪಾದಗಳಲ್ಲಿ ಕೆಡವಲೆ ? ಆದರೆ ಅಶೋಕವನವೊಂದು ನೋಡುವುದು ಬಾಕಿಯಿದೆ. ಅಲ್ಲಿ ಸೀತೆ ಇರಲೂಬಹುದು. ನನ್ನ ಯತ್ನ ಸಫಲವಾಗಲೂಬಹುದು. ಅದನ್ನು ಶೋಧಿಸಿದ ಮೇಲೆ ಮುಂದಿನ ವಿಚಾರ. ಜಗನ್ಮಾತಾಪಿತೃಗಳಾದ ಸೀತಾದೇವಿಗೂ-ರಾಮಚಂದ್ರನಿಗೂ ಶರಣು, ಸರ್ವಾಂತರ್ಯಾಮಿ- ಯಾದ ಮಹಾಪ್ರಭುವಿಗೆ ಶರಣು. ಲೀಲಾನಾಟಕದ ಪಾತ್ರಧಾರಿಗೆ ಶರಣು." ಹನಮಂತನು ಅಶೋಕವನವನ್ನು ಹೊಕ್ಕನು. ಹನ್ನೆರಡು ತಿಂಗಳೂ ಹೂ-ಹಣ್ಣುಗಳಿಂದ ತೊನೆವ ಉದ್ಯಾನ ಕಣ್ಣಿಗೆ ಹಬ್ಬವಾಗಿತ್ತು. ಅರಳಿದ ಅಸುಗೆಗಳಿಂದ ಕಾಡಿಗೆ ಕೆಂಪು ಬಳಿದಂತಿತ್ತು. ತ್ರಿಕೂಟದಿಂದ ಇಳಿದು ಬಂದ ನದಿಯೊಂದು ಉದ್ಯಾನವನ್ನು ಬಳಸಿ ಹರಿದಿತ್ತು. ನಡುವೆ ಕಾಡಿಗೇ ಕಳಸವಿಟ್ಟಂತೆ ಬಂಗಾರದ ಹೂಗಳನ್ನು ಹೊತ್ತ ಶಿಂಶುಪಾವೃಕ್ಷ (ಒಂದು ಜಾತಿಯ ಅಶೋಕ) ನಿಂತಿತ್ತು. ಅದರ ಬುಡದಲ್ಲಿ ಒಂದು ಮುತ್ತಿನಂಥ ವಿಹಾರಮಂದಿರ. ವಾತಾವರಣ ನಿಜವಾಗಿಯೂ ಚೆತೋಹಾರಿಯಾಗಿತ್ತು. ಮೈ-ಮನ ಗಳಿಗೆ ತಂಪನ್ನೀವ ತಣ್ಣೆಳಲಿನ ಶಿಂಶುಪಾವೃಕ್ಷ ; ಬಳಿಯಲ್ಲೆ ಕಲಕಲ ನಾದಿನಿಯಾದ ನದಿ; ಅಮೃತದಂಥ ನೀರು. ಸೀತೆ ಇದ್ದರೆ ಇಲ್ಲಿ ಇರಬೇಕು ಎನ್ನಿಸಿತು ಮಾರುತಿಗೆ. ಮೆಲ್ಲನೆ ಶಿಂಶುಪೆಯನ್ನೇರಿ ಎಲೆಗಳೆಡೆಯಲ್ಲಿ ಮರೆಯಾಗಿ ಸುತ್ತಲೂ ದಿಟ್ಟಿಸಿದನು. ವೃಕ್ಷಮೂಲದಲ್ಲಿ ಮಾಯಾ ಸೀತೆ ಕುಳಿತಿದ್ದಳು. ನಿತ್ಯ ನಿರ್ದುಃಖೆಯಾದವಳು ದುಃಖಿತೆಯಂತೆ. ನಿತ್ಯನಿರ್ಮಲೆಯಾದವಳು ಮಲಿನಳಂತೆ ಕುಳಿತಿದ್ದಳು. ಕಮಲದ ಎಸಳಿನಂಥ ಕಣ್ಣು, ಹುಣ್ಣಿಮೆಯ ಚಂದ್ರನಂಥ ಮುಖ ಕಾಂತಿ; ಒಪ್ಪವಿಟ್ಟ ಬಂಗಾರದಂಥ ಮೈಬಣ್ಣ, ಇಳಿದು ಬಂದು ತೊಡೆಯ ಮೇಲೆ ಮಲಗಿರುವ ಕೇಶರಾಶಿ, ಸರ್ವಾಂಗಸುಂದರಿಯಾದ ಈಕೆ ಸೀತೆಯಲ್ಲದೆ ಇನ್ನಾರು ? ಜಗನ್ಮಾತೆ ಬರಿಯ ನೆಲದಲ್ಲಿ ಕುಳಿತು ಕಣ್ಣೀರು ಸುರಿಸುತ್ತಿದ್ದಾಳೆ ! ಮೈಗೆಲ್ಲ ಒಂದೇ ಬಟ್ಟೆ. ಕೆಲವೇ ಆಭರಣಗಳು. ರಾಕ್ಷಸಾರಿಯಾದ ರಾಮಚಂದ್ರನ ಪ್ರಿಯಪತ್ನಿ ರಾಕ್ಷಸಿಯರ ನಡುವೆ ಕುಳಿತಿದ್ದಾಳೆ ! ಕಣ್ಣೀರಿಡುತ್ತಿರುವ ಸೀತೆಯನ್ನು ಕಂಡು ಹನುಮಂತ ಚಿಂತಿಸತೊಡಗಿದನು : " ರಾಮಚಂದ್ರನು ಹೇಳಿದ ಲಕ್ಷಣವೆಲ್ಲ ಈಕೆಯಲ್ಲಿ ಕಾಣುತ್ತಿದೆ. ಈಕೆ ನಿಶ್ಚಯವಾಗಿಯೂ ನನ್ನ ಪ್ರಭು ರಾಮದೇವನ ಅರ್ಧಾಂಗಿ. ಕದ್ದೊಯ್ಯುತ್ತಿರುವಾಗ ಅಂತರಿಕ್ಷದಲ್ಲಿ ನಾನು ಕಂಡ ರೂಪು ಇದೇ . ಆಕೆ ನಮ್ಮೆಡೆಗೆ ಚೆಲ್ಲಿದ ಮೇಲುದ ಇವಳ ಈ ಮೇಲುದವನ್ನೆ ಹೋಲುತ್ತಿದೆ. ಲೋಕನಾಯಕನ ಪತ್ನಿ ಲೋಕಮಾತೆಯಾದ ಸೀತೆಗೆ ಈ ದುರ್ದೆಶೆ ಹೇಗೆ ಬಂತು ? ದೇವಿಗೆ ದುಃಖವೆಲ್ಲಿಯದು ! ಇದೆಲ್ಲ ಲೋಕ ವಿಡಂಬನೆ. ಜಗತ್ಪ್ರಭುವಿನ ಲೀಲಾನಾಟಕ. ಮಾಯಾ ಮಯವಾದ ಪ್ರತಿಕೃತಿಯನ್ನು ಇಲ್ಲಿರಿಸಿ ತಾನು ಅಂತರ್ಹಿತಳಾಗಿದ್ದಾಳೆ. ಅವರಾಡುವ ಲೀಲಾನಾಟಕ- ದಲ್ಲಿ ನನ್ನ ಪಾತ್ರವನ್ನು ನಾನು ನಿರ್ವಹಿಸಬೇಕು." ಹನುಮಂತನ ಕಣ್ಣು ಸೀತೆಯ ಪಾದಾರವಿಂದದಲ್ಲಿ ನೆಟ್ಟಿತ್ತು. ಮನಸ್ಸು ರಾಮಚಂದ್ರನ ಪಾದಾರವಿಂದವನ್ನು ನೆನೆಯುತ್ತಿತ್ತು. ತ್ರಿಜಟೆಯ ಕನಸು ಸೀತೆಯ ಸುತ್ತ ಕುಳಿತ ರಾಕ್ಷಸಿಯರು ಒಬ್ಬೊಬ್ಬರು ಒಂದೊಂದು ತೆರ. ವಿಚಿತ್ರವಾದ ಮುಖಗಳು, ಅಳತೆ ಮೀರಿದ ಅಂಗಾಂಗಗಳು, ಸರ್ವಾಂಗ ಸುಂದರಿಯ ಸುತ್ತ ಕುರೂಪದ ಸಾಮ್ರಾಜ್ಯ ತಾಂಡವವಾಡುತ್ತಿತ್ತು ! ಭಗವಂತನ ಸೃಷ್ಟಿ ಎಷ್ಟು ವಿಚಿತ್ರವಾಗಿದೆ ! ಇತ್ತ ನಿದ್ರಿಸಿದ್ದ ರಾವಣನಿಗೆ ಇರುಳಿನ ತಂಗಾಳಿಯ ತಣ್ಪಿನಿಂದ ಒಮ್ಮೆಲೆ ಎಚ್ಚರಾಯಿತು; ಒಳಗೆ ಹುದುಗಿದ್ದ ಕಾಮಪಿಪಾಸೆಯೂ ಎಚ್ಚೆತ್ತಿತ್ತು. ಎದ್ದವನೆ ಅಶೋಕವನದೆಡೆಗೆ ನಡೆದನು. ರಾವಣನ ಬರವನ್ನು ಕಂಡು ಸೀತೆಯ ಮೋರೆ ಕಪ್ಪಿಟ್ಟಿತು. ಜುಗುಪ್ಸೆಯಿಂದ ಮೈ ಜುಮ್ಮೆಂದಿತು. ನಿಟ್ಟುಸಿರೊಂದನ್ನೆಳೆದು ಇದ್ದ ಒಂದೇ ಬಟ್ಟೆಯಿಂದ ತನ್ನ ಮೈಯನ್ನು ಮುಚ್ಚಿಕೊಂಡಳು. ಕೈಗಳಿಂದ ಎದೆಯನ್ನೂ ಮುಚ್ಚಿ ಮುದುಡಿಕೊಂಡಳು. ಕಾಮಮುಗ್ಧನಾದ ರಾವಣನು ಆಕೆಯನ್ನು ಸಂತೈಸುವ ಧಾಟಿಯಲ್ಲಿ ನುಡಿದನು : "ನೀನು ನಾರಾಯಣನ ಎದೆಯಲ್ಲಿ ನೆಲಸಿದವಳು ಎಂದು ನನಗೆ ಗೊತ್ತಿದೆ. ಲಾವಣ್ಯದ ಬಳ್ಳಿಯಲ್ಲಿ ಅರಳಿದ ಹೂವು ನೀನು. ಕಾಮನು ತನ್ನ ಹೂಬಾಣಗಳಿಂದಲೇ ನಿನ್ನ ಅಂಗಗಳನ್ನು ರಚಿಸಿರಬೇಕು. ನನ್ನ ಯೌವನದ ವನದಲ್ಲಿ ನಿನ್ನ ಲಾವಣ್ಯಲತೆ ಚಿಗುರಬೇಕು ಎಂದು ನನ್ನ ಬಯಕೆ, ನನ್ನ ಲೋಕಾತಿಶಾಯಿ- ಯಾದ ಸಂಪತ್ತು-ವೈಭವ ನಿನಗೆ ಗೊತ್ತೇ ಇದೆ. ಇನ್ನೂ ರಾಮ- ನನ್ನೇ ನೆನೆಯುತ್ತ ಕುಳಿತಿರುವುದರಲ್ಲಿ ಅರ್ಥವಿಲ್ಲ. ಅವನು ಇಲ್ಲಿಗೆ ಬರುವುದೂ ಸಾಧ್ಯವಿಲ್ಲ. ನಿನ್ನನ್ನುಕೊಂಡೊಯ್ಯುವುದೂ ಸಾಧ್ಯವಿಲ್ಲ. ಆ ಕಾಡಾಡಿಯ ಚಿಂತೆಯನ್ನು ಬಿಟ್ಟುಬಿಡು. ಭುವನೇಶ್ವರನಾದ ರಾವಣನು ನಿನ್ನನ್ನು ಮೆಚ್ಚಿ ಬಂದಿದ್ದಾನೆ. ಅದಕ್ಕಿಂತ ಮಿಗಿಲೇನು ? ನಾನು ನಿನ್ನ ದಾಸ, ಈ ಸಂಪತ್ತೆಲ್ಲ ನಿನ್ನದೆ. ನೀನು ಬಯಸಿದರೆ ಜನಕನಿಗೂ ಅಪಾರ ಸಂಪತ್ತು ಕೊಟ್ಟು ಕರುಣಿಸಬಲ್ಲೆ." ಸೀತೆ ಈ ನೀತಿಗೆಟ್ಟ ಮಾತಿನಿಂದ ಸಿಡಿಮಿಡಿಗೊಂಡಿದ್ದಳು. ಅವನೊಡನೆ ಮಾತನಾಡುವುದು ಕೂಡ ಆಕೆಗೆ ಸರಿಯೆನಿಸಲಿಲ್ಲ. ಕಡೆಗೆ ಒಂದು ಹುಲ್ಲುಕಡ್ಡಿಯನ್ನು ಎದುರಿಟ್ಟು, ಅವನನ್ನು ಅಲಕ್ಷಿಸುವ ದನಿಯಲ್ಲಿ ಉತ್ತರಿಸಿದಳು : "ನಾನು ರಾಮಚಂದ್ರನ ಪ್ರಿಯಪತ್ನಿ ಎಂಬುದು ನೆನಪಿರಲಿ. ಈ ಸಾಧ್ವಿ ನಿನಗೆ ದೊರಕಲಾರಳು. ಬ್ರಹ್ಮವಿದ್ಯೆ ಅಯೋಗ್ಯನಿಗೆ ಒಲಿವುದುಂಟೆ ? ಋಷಿಪುಂಗವರಾದ ಪುಲಸ್ತ್ಯರ ಕುಲದಲ್ಲಿ ಹುಟ್ಟಿಯೂ ನಿನಗೆ ಧರ್ಮದ ಅರಿವುಬಾರದೆ ಹೋಯಿತೆ ? ಪರನಾರಿಯರ ಮೇಲೆ ಕೈ ಮಾಡುವುದು ಹುಡುಗಾಟವಲ್ಲ. ನೀನು ನಿನ್ನ ವೈಯಕ್ತಿಕ ಅಪರಾಧದಿಂದ ಜಗತ್ತಿಗೇ ಸಂಕಟವನ್ನು ತಂದೊಡ್ಡುತ್ತಿರುವೆ. ಇನ್ನಾದರೂ ಹಿತವಚನವನ್ನು ಕೇಳುವೆಯಾದರೆ, ನನಗೆ ನಿನ್ನ ಮೇಲೇನೂ ಅಸೂಯೆಯಿಲ್ಲ. ರಾಮಚಂದ್ರನು ಕರುಣಾಳು. ಇನ್ನಾದರೂ ನನ್ನನ್ನು ಆತನಿಗೊಪ್ಪಿಸಿ ಕ್ಷಮೆ ಬೇಡು. ಆತ ನಿನ್ನನ್ನು ಖಂಡಿತವಾಗಿಯೂ ಕ್ಷಮಿಸುತ್ತಾನೆ. ಈಗಲೇ ನೀನು ನನ್ನ ಮಾತನ್ನು ಅರಿತುಕೊಂಡರೆ ಚೆನ್ನು, ಇಲ್ಲದಿದ್ದರೆ ರಾಮ-ಲಕ್ಷ್ಮಣರ ಬಾಣಗಳಿಂದಲೇ ನೀನು ಪಾಠ ಕಲಿತುಕೊಳ್ಳಬೇಕಾಗುವುದು, ನಿನ್ನ ಮಾತಿಗೆ ಜನಕನ ಮಗಳು ಎಂದೂ ಮರುಳಾಗಲಾರಳು, ಕಾಗೆಯ ಹರಟೆಗೆ ರಾಜಹಂಸಿ ಚಿಂತಿಸುವುದಿಲ್ಲ. ಗರುಡನ ಕೈಗೆ ಸಿಕ್ಕಿದ ಹಾವಿನಂತೆ ಆನೆಯ ತುಳಿತಕ್ಕೆ ಸಿಕ್ಕಿದ ಆಡಿನ ಮರಿಯಂತೆ ರಾಮಚಂದ್ರನ ಬಾಣಗಳಿಂದ ನೀನು ದುಃಖಪಡಲಿರುವೆ; ಪಶ್ಚಾತ್ತಾಪ ಪಡಲಿ- ರುವೆ, ಒಬ್ಬ ಸಾಧ್ವಿ ಹೆಂಗಸು ಆಡಿದ ಮಾತು ಸುಳ್ಳಾಗುವದಿಲ್ಲ ವೆಂಬುದನ್ನು ನೆನಪಿಟ್ಟುಕೊ." ರಾವಣನಿಗೆ ಸಿಟ್ಟಿನಿಂದ ದಿಕ್ಕೇ ತೋಚದಂತಾಗಿ "ಬೆಳಗಿನ ಉಪಹಾರ ನಿನ್ನ ಮಾಂಸದಿಂದಲೇ ನಡೆದೀತು. ಎಚ್ಚರಿಕೆ" ಎಂದು ಹೆದರಿಸತೊಡಗಿದನು. ಆಗ ಮಾನಿನಿಯಾದ ಮಂಡೋದರಿ "ಕೆಟ್ಟ ಮಾತನ್ನಾಡದಿರು" ಎಂದು ಗಂಡನನ್ನು ಸಂತೈಸಿದಳು. ಸೀತೆಯ ಮನಸ್ಸನ್ನು ಹೇಗಾದರೂ ಮಾಡಿ ಒಲಿಸಿಕೊಳ್ಳುವಂತೆ ರಾಕ್ಷಸಿಯರಿಗೆ ಆಣತಿ ಮಾಡಿ ರಾವಣನು ಅಂತಃಪುರಕ್ಕೆ ತೆರಳಿದನು. ಜಟೆ, ಭೂರಿಜಟೆ ಮೊದಲಾದ ರಾಕ್ಷಸಿಯರು ಸೀತೆಯನ್ನು ಒಲಿಸತೊಡಗಿದರು : "ಸೀತೆ ! ಮೂರುಲೋಕದ ಐಸಿರಿಗೂ ರಾವಣನೇ ಒಡೆಯನು. ಆತನು ಎರಡನೆಯ ಪ್ರಜಾಪತಿ ಎಂದರೂ ಸಲ್ಲುವುದು, ಪುಲಸ್ತ್ಯ ವಂಶದಲ್ಲಿ ಜನಿಸಿದವನು. ಶಾಸ್ತ್ರಗಳಲ್ಲಿ ಪಾರಂಗತ. ಯಾವುದಕ್ಕೆ ಕಡಿಮೆ ಆತನಲ್ಲಿ ? ನಿರ್ಗುಣನಾದ ರಾಮನ ಗೋಜು ತೊರೆದು, ನಿನ್ನನ್ನು ಬಯಸಿಬಂದ ರಾವಣನನ್ನು ಸೇರು." " ರಾಮನು ಎಂಥವನೇ ಆಗಿರಲಿ. ಆತ ನನ್ನ ಸ್ವಾಮಿ. ಆತನ ಸುದ್ದಿ ನಿಮಗೆ ಬೇಕಿಲ್ಲ. ನೀವೀಗ ಸಂತೈಸುವುದೂ ಅವಶ್ಯವಿಲ್ಲ. ಬಯಕೆಯಿದ್ದರೆ ನಿಮ್ಮ ಬೆಳಗಿನ ಉಪಹಾರಕ್ಕೆ ನನ್ನನ್ನು ಬಳಸಿ- ಕೊಳ್ಳಬಹುದು." ಆಗ ವಿನತೆ, ವಿಕಟೆ, ಅಶ್ವಮುಖಿ, ಚಂಡೋದರಿ, ವಿಘಸೆ, ಅಯೋಮುಖಿ, ಶೂರ್ಪಣಖಿ ಮೊದಲಾದ ರಕ್ಕಸಿಯರು ಸೀತೆಯ ಮೇಲೆ ಬೆದರಿಕೆಯ ಸುರಿಮಳೆಗರೆದರು : " ನೀನು ರಾವಣನನ್ನು ವರಿಸದಿದ್ದರೆ ನಿನ್ನ ಮೈಯನ್ನು ಸಿಗಿದು ತಿಂದೇವು. ಕಳ್ಳಿನ ಜತೆಗೆ ಮನುಷ್ಯ ಮಾಂಸ ಬೆರೆತಾಗ ರುಚಿಯಾಗಿರುತ್ತದೆ, ಎಚ್ಚರಿಕೆ." ಕರುಣರಸವೆ ಮೈವೆತ್ತು ಬಂದಂತೆ ಸೀತೆ ರೋದಿಸತೊಡಗಿದಳು : " ರಾಮಚಂದ್ರ ! ನನ್ನ ಸ್ವಾಮಿಯೆ, ನೀನೆಲ್ಲಿರುವೆ ? ನನ್ನ ಮೇಲೆ ದಯೆಬಾರದೆ ? " ರಕ್ಕಸಿಯರು ಕೆಲವರು ರಾವಣನ ಬಳಿ ದೂರು ಹೇಳಿದರು. ಕೆಲವರು ತಿಂದುಬಿಡುವೆನೆಂದು ಮೇಲೆ ಎರಗತೊಡಗಿದರು. ಬಳಿಯಲ್ಲೆ ತ್ರಿಜಟೆಯೆಂಬ ಸಾಧುಸ್ವಭಾವದ ರಾಕ್ಷಸಿಯೊಬ್ಬಳು ಇದನ್ನೆಲ್ಲ ನೋಡುತ್ತಿದ್ದಳು. ಆಕೆಗೆ ಇವರ ವರ್ತನೆಯಿಂದ ಕೆಡುಕೆನಿಸಿತು. ಹಣ್ಣು ಮುದುಕಿಯಾದ ಆಕೆ ಮಲಗಿಕೊಂಡೇ ರಕ್ಕಸಿಯರಿಗೆ ಎಚ್ಚರಿಕೆಯ ಮಾತನ್ನಾಡಿದಳು : " ರಾಕ್ಷಸಿಯರೆ ! ಮರ್ಯಾದೆಗೆಟ್ಟವರಂತೆ ಆಕೆಯಮೇಲೆ ಎರಗಬೇಡಿ. ಈ ಸಾಧ್ವಿ ಸಾಮಾನ್ಯಳೆಂದು ತಿಳಿದೀದ್ದೀರಾ ? ನನಗೊಂದು ಕನಸು ಬಿತ್ತು. ಅದು ಈಕೆಯ ಭವಿಷ್ಯವನ್ನು ಹೇಳುತ್ತಿದೆ. ಲಂಕೆಯ ದುರಂತವನ್ನು ಸೂಚಿಸುತ್ತದೆ." ರಕ್ಕಸಿಯರೆಲ್ಲ ಸೀತೆಯನ್ನು ಬಿಟ್ಟು ತ್ರಿಜಟೆಯನ್ನು ಮುತ್ತಿದರು. ಸ್ವಪ್ನದ ಕಥೆಯನ್ನಾಲಿಸುವ ಲವಲವಿಕೆಯಿಂದ ಎಲ್ಲರಿಗೂ ಏನೋ ಕುತೂಹಲ, ಏನೋ ಭಯ. ತ್ರಿಜಟೆ ರಾಮಚಂದ್ರನಿಗೆ ಕೈ ಮುಗಿದು ಹೇಳತೊಡಗಿದಳು : " ಆನೆಯ ದಂತದಿಂದ ಕೆತ್ತಿದ ಬೆಳ್ಳನೆಯ ಪಲ್ಲಕ್ಕಿಯಲ್ಲಿ ರಾಮ-ಲಕ್ಷಣರೂ ಸೀತೆಯೂ ಬರುತ್ತಿರುವುದನ್ನು ಕಂಡೆ. ಬಿಳಿ ಹೂಗಳನ್ನು ಮುಡಿದು ಬೆಳ್ಳಿ ಬೆಟ್ಟದಲ್ಲಿ ಸೀತೆ ನಿಂತಿರುವಂತೆ ಕಂಡೆ. ನಾಲ್ಕು ದಾಡೆಯುಳ್ಳ ಬಿಳಿಯಾನೆಯಲ್ಲಿ ರಾಮ-ಲಕ್ಷ್ಮಣರು ಕುಳಿತಿದ್ದರು. ಕತ್ತಿನಲ್ಲಿ ಬಿಳಿ ಹೂಗಳಮಾಲೆ, ತೊಟ್ಟದ್ದು ಬಿಳಿಯ ಪಟ್ಟೆ. ಆಕಾಶದಲ್ಲಿ ಗಜೇಂದ್ರನಮೇಲೆ ಕುಳಿತಿದ್ದ ರಾಮನ ಬಳಿಗೆ ಸೀತೆ ನಡೆದು ಬಂದಳು. ರಾಜಹಂಸದ ಬಳಿ ರಾಜಹಂಸಿ ಬರುವಂತೆ, ಅನಂತರ ಆಕೆ ರಾಮಚಂದ್ರನ ತೊಡೆಯಮೇಲೆ ಕುಳಿತುಕೊಂಡಳು. ಆಕೆಯ ಕೈಗಳು ಸೂರ್ಯ-ಚಂದ್ರನನ್ನು ನೇವರಿಸುತ್ತಿದ್ದವು. ಹೀಗೆ ನಾನು ಕನಸಿನಲ್ಲಿಕಂಡೆ. ಇನ್ನೊಂದೆಡೆ ರಾವಣನು ಪುಷ್ಪಕದಿಂದ ಕೆಳಗೆ ಬೀಳು- ತ್ತಿರುವುದನ್ನು ಕಂಡೆ, ತಲೆಯಲ್ಲಿ ಕೂದಲುಗಳೇ ಇರಲಿಲ್ಲ. ಮೈಯಲ್ಲಿ ಕಪ್ಪು ಬಟ್ಟೆಗಳೇ ಕಾಣಿಸುತ್ತಿದ್ದವು. ನಮ್ಮ ಲಂಕೇಶ್ವರ ಕತ್ತೆಗಳೆಳೆವ ರಥದಲ್ಲಿ ಕುಳಿತಿದ್ದನು. ಕೆಂಪು ಮಾಲೆಗಳನ್ನು ಧರಿಸಿದ್ದನು. ತೆಂಕು ಬದಿಗೆ ಸಾಗಿದ ಆತ ಕೆಸರಿನ ಕೊಳದಲ್ಲಿ ಮುಳುಗಿದಂತೆ ಕಂಡೆ. ರಾವಣನು ಹಂದಿಯಮೇಲೆ, ಕುಂಭಕರ್ಣನು ಒಂಟೆಯಮೇಲೆ, ಇಂದ್ರಜಿತ್ತು ನೆಗಳಿನಮೇಲೆ ಕುಳಿತಿರುವುದನ್ನು ಕಂಡೆ. ರಾಕ್ಷಸರು-ರಾಕ್ಷಸಿಯರು ಎಲ್ಲರೂ ಕೆಂಪು ಬಟ್ಟೆಯನ್ನುಟ್ಟು ಕೊಂಡಿದ್ದರು. ಎಣ್ಣೆ ಕುಡಿದು, ಮತ್ತರಂತೆ ಹಾಡಿ ಕುಣಿಯು- ತ್ತಿದ್ದರು. ಮತ್ತೆ ಕೆಲವರು ಗೋಮಯದ ಕೊಳದಲ್ಲಿ ಬಿದ್ದು ಕೊಂಡಿದ್ದರು. ಲಂಕೆಯು ಬೆಂಕಿಗೆ ಆಹುತಿಯಾಗಿತ್ತು. ವಿಭೀಷಣ ನೊಬ್ಬನೇ ಬೆಳ್ಳಿ ಬೆಟ್ಟದಲ್ಲಿ ಬೆಳ್ಕೊಡೆಯನ್ನು ಹಿಡಿದು ನಿಂತಿ- ದ್ದನು. ಹೀಗೆ ನನಗೆ ಕನಸು ಬಿತ್ತು. ರಾಕ್ಷಸರಿಗೆ ವಿಪತ್ತು ಕಾದಿದೆ, ಸೀತೆಗೆ ಮಂಗಳವಾಗಲಿದೆ. ಇದು ಕನಸು ಹೇಳುವ ಕಣಿ. ಸೀತೆ ಭಾಗ್ಯಶಾಲಿನಿ. ನೀವು ಆಕೆಯನ್ನು ಗದರಿಸಬಾರದು. ಈ ಸಾಧ್ವಿಯ ಎದುರು ಕೆಟ್ಟ ಮಾತುಗಳನ್ನಾಡಿ ನಿಮ್ಮ ಸಣ್ಣತನವನ್ನು ನೀವು ತೋರಿಸಬಾರದು. " ಸೀತೆಯಂತೂ ರಾಮನನ್ನೆ ನೆನೆದುಕೊಂಡು ರೋದಿಸುತ್ತಿದ್ದಳು. ಇಷ್ಟೆಲ್ಲ ನಡೆವಾಗಲೂ ಹನುಮಂತ ಮರದ ಮೇಲೆಯೇ ಕುಳಿತಿದ್ದ. ರಾಕ್ಷಸಿಯರು ಎಚ್ಚತ್ತಿದ್ದಾಗ ಸೀತೆಯ ಬಳಿ ಮಾತ- ನಾಡುವುದು ಸಾಧ್ಯವಿರಲಿಲ್ಲ. ಅದಕ್ಕಾಗಿ, ಹನುಮಂತ ಅವರು ನಿದ್ರಿಸುವುದನ್ನೇ ಕಾದು ಕುಳಿತಿದ್ದನು. ಈಗ ಎಲ್ಲರೂ ಮಾತು ಮುಗಿಸಿ ನಿದ್ರೆಯ ಜೊಂಪಿನಲ್ಲಿದ್ದರು. ಇದೇ ಸಮಯವೆಂದು ತಿಳಿದು ಮಾರುತಿ ಮರದ ಮರೆಯಲ್ಲಿ ನಿಂತು ಸ್ಪಷ್ಟವಾಣಿಯಿಂದ ನುಡಿಯತೊಡಗಿದನು: " ದಶರಥ ತನಯ, ಸರ್ವಗುಣನಿಧಿಯಾದ ರಾಮಚಂದ್ರನು ಹರನ ಬಿಲ್ಲನ್ನು ಮುರಿದು ಜಾನಕಿಯನ್ನು ವರಿಸಿದನು. ತಂದೆಯ ಆದೇಶದಂತೆ ರಾಜ್ಯವನ್ನು ತೊರೆದು ಕಾಡಿಗೆ ನಡೆದನು. ಅವನ ಪ್ರಿಯ ಪತ್ನಿ ಸೀತೆ ಕೂಡ ಅವನ ಸಂಗಾತಿಯಾಗಿ ಬಂದಳು. ಅಲ್ಲಿ ದುರುಳ ರಾವಣನು ಆಕೆಯನ್ನು ವಂಚನೆಯಿಂದ ಕದ್ದೊಯ್ದನು. ರಾಮಚಂದ್ರನ ಸೀತಾನ್ವೇಷಣೆಯಲ್ಲಿ ಸಹಾಯಕನಾಗಿ-ದೂತ ನಾಗಿ ನಾನಿಲ್ಲಿಗೆ ಬಂದಿದ್ದೇನೆ. ದೇವಿ ಜಾನಕಿ ! ಮಹಾಪ್ರಭು ರಾಮಚಂದ್ರನೂ ಮೈದುನ ಲಕ್ಷ್ಮಣನೂ ದೂತನಾದ ನನ್ನ ಮುಖದಿಂದ ನಿನ್ನ ಕುಶಲವನ್ನು ಕೇಳಿದ್ದಾರೆ." ಇದನ್ನು ಕೇಳಿ ಸೀತೆಗೆ ಅಚ್ಚರಿಯ ಮೇಲೆ ಅಚ್ಚರಿ. ಈ ರಾಕ್ಷಸರ ಕೊಂಪೆಯಲ್ಲೂ ರಾಮಗುಣಗಾನ ಮಾಡುವ ಪುಣ್ಯ ಪುರುಷನು ಯಾರು ? ಕೂದಲನ್ನು ಸಾವರಿಸಿ ಮುಖವನ್ನೆತ್ತಿ ಕಾತರ ದೃಷ್ಟಿ- ಯಿಂದ ಸೀತೆ ಮರದೆಡೆಗೆ ದಿಟ್ಟಿಸಿದಳು. ಅಂಗುಲೀಯಕ್ಕೆ ಬದಲಾಗಿ ಚೂಡಾಮಣಿ ಹನುಮಂತನು ಮರದಿಂದ ಕೆಳಗಿಳಿದು ವಿನಯಪೂರ್ವಕ ವಾಗಿ ವಿಜ್ಞಾಪಿಸಿಕೊಂಡನು: "ರಾಮಚಂದ್ರನ ಪತ್ನಿ ಸೀತೆಯಲ್ಲವೆ ನೀನು ? ನನ್ನ ಸಾಹಸದ ಸಾಫಲ್ಯದ ಸಂಕೇತವಲ್ಲವೆ ನೀನು ?" "ರಾಮನ ಮಡದಿ, ದಶರಥನ ಸೊಸೆ, ಜನಕನ ಮಗಳು, ಆ ನಿರ್ಭಾಗ್ಯ ಸೀತೆ ನಾನೆ ! ಆದರೆ ನೀನು ಯಾರು ? ಎಲ್ಲಿಂದ ಬಂದಿರುವೆ ?" "ನನ್ನ ತಾಯಿ, ರಾಮಚಂದ್ರನು ನಿನ್ನ ಕುಶಲವನ್ನು ಕೇಳಿದ್ದಾನೆ. ನಾನು ರಾಮಚಂದ್ರನ ಬಳಿಯಿಂದ ಬಂದ ಅವನ ನಮ್ರ ಸೇವಕ." ಹನುಮಂತನು ಸೀತೆಯ ಬಳಿಸಾರಿ ಕೆಂದಾವರೆಯಂಥ ಕಾಲು ಗಳಿಗೆರಗಿ 'ಧನ್ಯನಾದೆನು' ಎಂದುಕೊಂಡನು. ಸೀತೆ, ಸಂಶಯದಿಂದ ಕಾಲುಕೊಡವಿಕೊಂಡು ದೂರ ಸರಿದಳು. "ನೀನು ಮಾಯಾವಿ ರಾವಣನೇ ಇರಬೇಕು. 'ಮಂಗನ ರೂಪ- ದಿಂದ ಬಂದು ಮರುಳು ಮಾಡಬೇಕೆಂದಿರುವೆಯಾ ? ನೀನು ರಾಮದೂತನೇ ನಿಜವಾದರೆ ಆತನ ಲಕ್ಷಣವನ್ನರುಹು. ದುಃಖ- ನಾಶಕವಾದ ಆತನ ಚರಿತೆಯನ್ನರಹು." " ದೇವದೇವನ ಲಕ್ಷಣವನ್ನು ಹೇಳುವುದು ಸಾಧ್ಯವೆ ? ಭೂಮಿಯ ಶಾಂತಿ, ಸೂರ್ಯನ ತೇಜಸ್ಸು, ಮಾರನ ರೂಪಶ್ರೀ, ಇಂದ್ರನ ಯಶಸ್ಸು ಇವೆಲ್ಲ ಪ್ರಭು ರಾಮಚಂದ್ರನ ಕೊಡುಗೆಗಳು, ಅವನ ಸದ್ಗುಣಗಳ ಕಡಲಿನಿಂದ ಚಿಮ್ಮಿದ ಕಣಗಳು. ಇಂದ್ರನೀಲ ದಂತೆ ಕಪ್ಪಾದ ಮೈಬಣ್ಣ. ಕಮಲದಂಥ ಕಣ್ಣು. ಸಿಂಹದಂತೆ ಪರಾಕ್ರಮ. ಇದು ಲೋಕದ ಜನ ಕೊಡುವ ಉಪಮಾನಗಳು, ನಿಜಕ್ಕೂ ರಾಮಚಂದ್ರನಿಗೆ ಎಣೆಯೆಂಬುದಿದೆಯೆ ? ದ್ವಾತ್ರಿಂಶ ಲಕ್ಷಣಗಳಿಂದ ಪರಿಪೂರ್ಣ ಸುಂದರವಾದ ಆ ಮೂರ್ತಿಯನ್ನು ಬಣ್ಣಿಸುವುದು ಯಾರಿಗೆ ಸಾಧ್ಯ ? "ಅವನಿಗೆ ಅನುರೂಪನಾದ ತಮ್ಮನೊಬ್ಬನಿದ್ದಾನೆ. ಲಕ್ಷ್ಮಣ. ನಿನ್ನ ಮೈದುನ ಕಾಡೆಲ್ಲ ನಿನಗಾಗಿ ಹುಡುಕುತ್ತಿದ್ದಾನೆ.. ತನ್ನಿಂದಾಗಿ ಅತ್ತಿಗೆಯನ್ನು ರಾಕ್ಷಸನು ಕದ್ದೊಯ್ಯುವಂತಾಯಿತು ಎಂದು ಪರಿತಪಿಸುತ್ತಿದ್ದಾನೆ. ಋಷ್ಯಮೂಕದಲ್ಲಿ ನಾವು ಅವರನ್ನು ಕೂಡಿಕೊಂಡೆವು. ಅದು ನಮ್ಮ ಭಾಗ್ಯ. ಅಲ್ಲಿ ರಾಮಚಂದ್ರನಿಗೂ ಕಪಿರಾಜ ಸುಗ್ರೀವನಿಗೂ ಗೆಳೆತನವನ್ನು ನಾನೇ ಮಾಡಿಸಿದೆ. ಗೆಳೆತನದ ಸಾಕ್ಷಿಯಾಗಿ ರಾಮಚಂದ್ರನು ವಾಲಿಯನ್ನು ಕೊಂದು ಸುಗ್ರೀವನಿಗೆ ಕಪಿ ಸಾಮ್ರಾಜ್ಯವನ್ನು ದಯಪಾಲಿಸಿದ್ದಾನೆ. ಸುಗ್ರೀವನ ಆಜ್ಞೆಯಂತೆ ಕಪಿವೀರರೆಲ್ಲ ದಿಕ್ಕುದಿಕ್ಕುಗಳಲ್ಲಿ ನಿನ್ನನ್ನು ಹುಡುಕಿಕೊಂಡು ಅಲೆಯುತ್ತಿದ್ದಾರೆ. ನಾನೂ ಆ ಗುಂಪಿನಲ್ಲಿಯ ಒಬ್ಬನು. ಅಂಜನಾದೇವಿಯಲ್ಲಿ ಪವಮಾನನಿಂದ ನನ್ನ ಜನ್ಮವಾಯಿತು. ನನ್ನನ್ನು ಹನುಮಂತ ನೆಂದು ಕರೆಯುತ್ತಾರೆ. ನಾನು ರಾಮದೂತ್ಯವನ್ನು ನಿರ್ವಹಿಸು- ವುದಕ್ಕಾಗಿ ಸಾಗರವನ್ನು ದಾಟಿ ಇಲ್ಲಿಗೆ ಬಂದಿದ್ದೇನೆ. ನನ್ನ ಮಾತನ್ನು ನೀನು ನಂಬಬಹುದು. ಈ ಹನುಮಂತನಿಗೆ ಸುಳ್ಳು ನುಡಿದು ಗೊತ್ತಿಲ್ಲ." ಹೀಗೆ ನುಡಿದು ರಾಮನಾಮವನ್ನು ಕೆತ್ತಿದ ಉಂಗುರವನ್ನು ಅಭಿಜ್ಞಾನವಾಗಿ ಕೊಟ್ಟನು. ಸೀತೆ ಆದರದಿಂದ ಭಕ್ತಿಯಿಂದ ಅದನ್ನು ತೆಗೆದುಕೊಂಡು ಕಣ್ಣಿಗೊತ್ತಿಕೊಂಡಳು. ರಾಮದೂತ- ನನ್ನು ಕಂಡು ಸೀತೆಗೆ ಎಲ್ಲಿಲ್ಲದ ಆನಂದವಾಗಿತ್ತು. ಲಂಕೆಗೆ ಬಂದ ಮೇಲೆ ಮೊದಲಬಾರಿ ಮುಗುಳು ನಗುತ್ತ ಆಕೆ ಮಾತನಾಡಿದಳು : "ಮಹಾವೀರನಾದ ರಾಮದೂತನೆ ! ನಿನ್ನ ಬುದ್ಧಿ ಬಲ ಅಪಾರವಾಗಿದೆ. ನಿನ್ನ ಶಕ್ತಿ ಸಾಮರ್ಥ್ಯಗಳು ಅದ್ಭುತವಾಗಿವೆ. ಎಂತಲೇ ನೀನು ಇಲ್ಲಿಗೆ ಬರುವುದು ಸಾಧ್ಯವಾಯಿತು. ನನ್ನ ಸ್ವಾಮಿ ರಾಮಚಂದ್ರ, ಮೈದುನ ಲಕ್ಷ್ಮಣ ಎಲ್ಲರೂ ಸೌಖ್ಯವಾಗಿ ದ್ದಾರೆಯೆ ? ನನ್ನ ಪ್ರಭು ಇಲ್ಲಿಗೆ ಬಂದು ನನ್ನನ್ನು ಕರೆದೊಯ್ಯು ವನೆ ? ನಾನು ಇಲ್ಲಿಗೆ ಬಂದು ಹತ್ತು ಮಾಸಗಳು ಕಳೆದುಹೋದವು. ಇನ್ನೆರಡು ತಿಂಗಳು ಉಳಿದಿವೆ. ಹನ್ನೆರಡನೆಯ ಮಾಸ ಕಳೆದರೆ ಮತ್ತೆ ನನ್ನನ್ನು ಕೊಂದು ತಿನ್ನುವ ಯೋಜನೆ ನಡೆದಿದೆ. ಪುಣ್ಯಾತ್ಮ ನಾದ ವಿಭೀಷಣನ ಮಗಳು ಕಲೆಯೆಂಬವಳಿಂದ ನನಗೆ ಈ ರಹಸ್ಯ ತಿಳಿಯಿತು." "ದೇವಿ, ನಿನ್ನ ಪಾದದಾಣೆಯಾಗಿ ನನ್ನ ಮಾತುಗಳನ್ನು ನಂಬು, ಸದ್ಯದಲ್ಲಿ ರಾಮಚಂದ್ರನು ಲಕ್ಷ್ಮಣನೊಡನೆ ಕಪಿಸೇನೆಯೊಡನೆ ಇಲ್ಲಿಗೆ ಬರುವನು. ರಾವಣನ ತಲೆಗಳುರುಳುವವು. ಕುಂಭಕರ್ಣನ ನಿದ್ರೆ ಶಾಶ್ವತವಾಗುವುದು. ನಿನ್ನ ಪತಿ ಶತ್ರುಗಳನ್ನು ಸಂಹರಿಸಿ ನಿನ್ನನ್ನು ಕೊಂಡೊಯ್ಯು- ವನು. ನೀನು ಬಯಸುವುದಾದರೆ ಈ ಕ್ಷಣದಲ್ಲಿ ಬೇಕಾದರೂ ನಿನ್ನನ್ನು ರಾಮಸನ್ನಿಧಿಗೆ ಕೊಂಡೊಯ್ಯುವೆನು. "ನೀನು ನನ್ನನ್ನು ಕೊಂಡೊಯ್ಯುವುದು ! ಅದು ಹೇಗೆ ಸಾಧ್ಯ? ದೇವತೆಗಳಿಗೂ ಬಗ್ಗದ ಈ ದುಷ್ಟ ರಾಕ್ಷಸರು ಗೇಣುದ್ದದ ನಿನ್ನನ್ನು ಸುಮ್ಮನೆ ಬಿಡುವರೆ ?" ಸೀತೆಯ ಮಾತನ್ನಾಲಿಸಿದ ಹನುಮಂತ ಮೇರುಪರ್ವತದಂತೆ ಮಹೋನ್ನತವಾಗಿ ಬೆಳೆದು ನಿಂತು ನುಡಿದನು: "ಇಡಿಯ ಭೂಮಂಡಲವನ್ನೆ ಬೇಕಾದರೂ ಕ್ಷಣಾರ್ಧದಲ್ಲಿ ಎತ್ತಿ ಎಸೆಯ ಬಲ್ಲೆ. ಈ ಚಿಕ್ಕ ಲಂಕೆ ಯಾವ ಲೆಕ್ಕಕ್ಕೆ ? ರಾಮಭಕ್ತ ರಲ್ಲಿ ಶ್ರೇಷ್ಠನಾದ ನನ್ನ ಬಲ ಅಂಥದು. ಮಂದರದ ಶಿಖರದಂತಿ- ರುವ ನನ್ನ ಬೆನ್ನ ಮೇಲೆ ಕುಳಿತುಕೊ ತಾಯಿ, ಕ್ಷಣಾರ್ಧದಲ್ಲಿ ರಾಮನನ್ನು ಕಾಣುವೆಯಂತೆ." "ಮಾರುತಿ ! ಬಲದಲ್ಲೂ ಜ್ಞಾನದಲ್ಲೂ ನೀನು ಅಸದೃಶ- ನೆಂದು ಗೊತ್ತು. ಲಂಕೆಯನ್ನೂ ಲಂಕೇಶ್ವರನನ್ನೂ ಸದೆಬಡಿದು ನೀನು ನನ್ನನ್ನು ಕೊಂಡೊಯ್ಯಬಲ್ಲೆ. ಆದರೆ ರಾಮಚಂದ್ರನೇ ಇಲ್ಲಿಗೆ ಬಂದು, ರಾವಣನನ್ನು ಕೊಂದು ನನ್ನನ್ನು ಸ್ವೀಕರಿಸಬೇಕು. ಅದು ನ್ಯಾಯವಾದ ಮಾರ್ಗ- ರಾಜಮಾರ್ಗ, ಇದು ನಿನಗೂ ಸಮ್ಮತವಲ್ಲವೇ ? ನಾನೂ ರಾಮಚಂದ್ರನೂ ಏಕಾಂತದಲ್ಲಿದ್ದಾಗ ನನ್ನನ್ನು ಪೀಡಿಸಬಂದ ಕಾಗೆಯ ಕಣ್ಣನ್ನು ಹುಲ್ಲುಕಡ್ಡಿಯಿಂದ ಕುಕ್ಕಿದ ಕಥೆಯನ್ನು, ನನ್ನನ್ನು ನೋಡಿದ ಸಂಕೇತಕ್ಕಾಗಿ ಪ್ರಭುವಿನ ಬಳಿ ಅರುಹು. ನನ್ನ ಪ್ರೀತಿಯ ಪ್ರಣಾಮಗಳನ್ನೂ ಸಲ್ಲಿಸು. ಇನ್ನೊಂದು ತಿಂಗಳ ಅವಧಿಯಿದೆ. ಅದರ ಮೊದಲು ರಾಮ- ಚಂದ್ರ ಚಿತ್ತೈಸದಿದ್ದರೆ ರಾವಣನನ್ನು ಸಂಹರಿಸದಿದ್ದರೆ ನಾನು ಜೀವದಿಂದಿರಲಾರೆ. ನನ್ನ ಮೈದುನ ಲಕ್ಷ್ಮಣನಿಗೂ ನನ್ನ ಹರಕೆ- ಗಳನ್ನು ತಿಳಿಸು, ಬಂಧು ಸುಗ್ರೀವನಿಗೂ ಅವನ ಪರಿವಾರ- ದವರಿಗೂ ನನ್ನ ಶುಭಾಶಯಗಳನ್ನರುಹು. ನಿನ್ನ ಕಾರ್ಯ ಯಶಸ್ವಿಯಾಗಲಿ. ಮಾರ್ಗವು ಮಂಗಳಕರವಾಗಿರಲಿ. ಈ ಚೂಡಾಮಣಿಯನ್ನು ಅಂಗುಲೀಯದ ಬದಲು ಪ್ರತ್ಯಭಿಜ್ಞಾನ- ವಾಗಿ ನನ್ನ ಪ್ರಭುವಿಗೆ ಅರ್ಪಿಸು . ಶುಭಾಸ್ತೇ ಪಂಥಾನಃ ಸಂತು." ಎಂದು ಹನುಮಂತನ ಕೈಯಲ್ಲಿ ಚೂಡಾಮಣಿಯನ್ನಿತ್ತಳು. ಹನು ಮಂತನು " ರಾಮಚಂದ್ರನನ್ನು ಸದ್ಯದಲ್ಲೆ ಕಾಣುವೆಯಂತೆ." ಎಂದು ಹೇಳಿ ಸುತ್ತುವರಿದು ನಮಸ್ಕರಿಸಿ ಸೀತೆಯನ್ನು ಬೀಳ್ಕೊಂಡನು. ಅಲ್ಲಿಂದ ಹೊರಟ ಹನುಮಂತನಿಗೆ ಒಂದು ಯೋಚನೆ ಬಂತು. ರಾಮದೂತನಾದ ತಾನು ಹೀಗೆ ಕಳ್ಳರಂತೆ ಗುಟ್ಟಾಗಿ ಬಂದುಹೋಗುವುದು ಚೆನ್ನಲ್ಲ. ತನ್ನ ಪರಾಕ್ರಮದ ರುಚಿಯನ್ನು ರಾವಣನಿಗೆ ತೋರಿಸಿಯೇ ಹೋಗಬೇಕು. ರಾಮದೂತನೆಂದರೆ ಸಾಮಾನ್ಯನಲ್ಲ ಎಂದು ಅವನು ತಿಳಿಯುವಂತಾಗಬೇಕು. ಹೀಗೆ ಯೋಚಿಸಿದವನೇ ಅಶೋಕ ವನವನ್ನು ಪುಡಿ ಮಾಡತೊಡಗಿ- ದನು. ಸೀತೆಗೆ ಆಶ್ರಯವಿತ್ತ ಶಿಂಶಪೆಯನ್ನೊಂದು ಮುಟ್ಟಲಿಲ್ಲ. ಮಾರುತಿಯು ಬಿರುಗಾಳಿಯಂತೆ ಮರಗಳನ್ನು ಕೆಡವತೊಡಗಿ- ದನು. ಆನೆಯ ತುಳಿತಕ್ಕೆ ಸಿಕ್ಕಿದ ಕಮಲದಂತೆ, ಬೆಂಕಿ ಬಿದ್ದ ಹತ್ತಿಯ ರಾಶಿಯಂತೆ ರಾವಣನ ಉದ್ಯಾನ ಹೇಳ ಹೆಸರಿಲ್ಲ- ದಂತಾಯಿತು. ಇನ್ನೂ ಬೆಳಕು ಹರಿದಿರಲಿಲ್ಲ. ರಾಕ್ಷಸರು ಯಾರೂ ಎದ್ದಿರಲಿಲ್ಲ. ಎಂತಲೇ ಹನುಮಂತನು ಯುದ್ಧಾಹ್ವಾನವೆಂಬಂತೆ ಸಿಂಹನಾದವನ್ನು ಮಾಡಿ ನಗರದ ಹೆಬ್ಬಾಗಿಲನ್ನೇರಿ ಕುಳಿತನು. ಈ ಕೂಗಿಗೆ ಸೀತೆಯ ಬಳಿಯಿದ್ದ ಕಾವಲುಗಾರೆಯರಿಗೆ ಎಚ್ಚರಾಯಿತು. ಅವರಲ್ಲಿ ಕೆಲವರು ಇದೇ ಕಪಿ, ಸೀತೆಯ ಬಳಿ ಮಾತನಾಡುತ್ತಿರುವುದನ್ನೂ ಕಂಡಿದ್ದರು. ಎಲ್ಲರೂ ಸೀತೆಯನ್ನು ವಿಚಾರಿಸತೊಡಗಿದರು : "ನಿನ್ನೊಡನೆ ಮಾತನಾಡುತ್ತಿದ್ದನಲ್ಲ. ಕಪಿರೂಪನಾದ ಆತನು ಯಾರು ?" ಮಾಯಾಸೀತೆ ಮಾಯಾ ನಾಟಕವನ್ನೆ ಆಡಿದಳು : "ಯಾರೋ, ರಕ್ಕಸರ ಮಾಯೆಯಿರಬೇಕು. ಯಾರೆಂದು ನನಗೇನು ಗೊತ್ತು ? ನಿಮ್ಮ ಕಪಟ ನಿಮಗೇ ಗೊತ್ತು. ಹಾವಿನ ಕಾಲು ಹಾವಿಗೆ ಮಾತ್ರವೇ ಗೊತ್ತು." ರಕ್ಕಸಿಯರಿಗೆ ಸಂಶಯ ಬರದಿರಲಿಲ್ಲ. ಯಾರೋ ರಾಮನ ಕಡೆಯವರಿರಬೇಕು ಎಂದು ಕೂಡಲೆ ಲಂಕೇಶ್ವರನಿಗೆ ವಾರ್ತೆ ಮುಟ್ಟಿಸಲಾಯಿತು. ಚೇಷ್ಟೆಯನ್ನಾಲಿಸಿದ ರಾವಣ ಕಿಡಿಕಿಡಿ- ಯಾದ. ಶಂಕರನ ವರದಿಂದ ಅವಧ್ಯರಾದ ಕಿಂಕರರೆಂಬ ರಾಕ್ಷಸರನ್ನು ಯುದ್ಧಕ್ಕೆಂದು ಕಳುಹಿಸಲಾಯಿತು. ಆ ಸೈನ್ಯದಲ್ಲಿ ಎಂಭತ್ತು ಕೋಟಿ ಸೈನಿಕರಿದ್ದರು; ಎಂಭತ್ತು ಸಾವಿರ ಸೇನಾಪತಿಗಳಿದ್ದರು. ರಾಕ್ಷಸರು ಆಯುಧಗಳ ಮಳೆಗರೆದರೂ ಹನುಮಂತನು ಉಗುರಿನಷ್ಟೂ ಅಲುಗಲಿಲ್ಲ ! ಬದಲಾಗಿ ರಾಕ್ಷಸರೆಡೆಗೆ ತಿರಸ್ಕಾರ ದೃಷ್ಟಿಯನ್ನು ಬೀರಿ ಹೀಗೆ ಘೋಷಿಸಿದನು : "ರಾಮಚಂದ್ರನಿಗೆ ಜಯವಾಗಲಿ, ಅವನ ಅನುಯಾಯಿಗಳಾದ ಲಕ್ಷ್ಮಣನಿಗೂ-ಸುಗ್ರೀವನಿಗೂ ಜಯವಾಗಲಿ. ಕಪಿಸೇನೆಗೆ ಮಂಗಳ- ವಾಗಲಿ, ಸೀತಾಮಾತೆಯ ಪಾದಾರವಿಂದಕ್ಕೆ ಶರಣು. ನನ್ನೊಡನೆ ಯುದ್ಧ ಮಾಡುವವರು ಬನ್ನಿ; ಜೀವ ಭಾರವಾದವರೆಲ್ಲ ಬನ್ನಿ, ಸಾವಿರ ರಾವಣರು ಒಮ್ಮೆಲೆ ಬಂದರೂ ನಾನೇನೂ ಹೆದರುವವ- ನಲ್ಲ. ಬನ್ನಿ, ಯುದ್ಧಕ್ಕೆ ಬರುವವರು ಬನ್ನಿ, ಯಮ ಸದನಕ್ಕೆ ಹೊರಟವರು ಬನ್ನಿ." ಲಂಕೆಯ ಸೊಬಗು ಬೆಂಕಿಯಪಾಲಾಯಿತು ಹನುಮಂತನ ಯುದ್ಧ ಕೌಶಲ್ಯವನ್ನು ಕಾಣುವುದಕ್ಕಾಗಿ ದೇವತೆಗಳು ಮುಗಿಲಿನಲ್ಲಿ ಮುತ್ತಿದರು. ಹನುಮಂತನ ಮುಷ್ಟಿಪ್ರಹಾರ ಅನೇಕರ ಜೀವವನ್ನು ಬಲಿ ತೆಗೆದುಕೊಂಡಿತು. ಹೆಬ್ಬಾಗಿಲಿನ ಕೀಲನ್ನೇ ಕಿತ್ತು ಹಿಡಿದುಕೊಂಡು ಅನೇಕರನ್ನು ಸಂಹರಿಸಿದನು. ನಗರ ಪ್ರಾಸಾದದ ಮೇಲೇರಿ ಅಲ್ಲಿನ ಕಂಬವನ್ನು ಕಿತ್ತೆಸೆದು ವನಪಾಲಕರನ್ನೂ ಕೊನೆಗೊಳಿಸಿದನು. ಕಂಬಗಳ ಸಮ್ಮರ್ದನದಿಂದ ಎದ್ದ ಕಿಡಿ ಪ್ರಾಸಾದವನ್ನು ಸುಟ್ಟೊಗೆಯಿತು. ಆಕಾಶಕ್ಕೆ ನೆಗೆದ ಹನುಮಂತನು ಯುದ್ಧ ಗರ್ಜನೆಯನ್ನು ಮಾಡಿದನು : " ರಾಮಚಂದ್ರನು ನನ್ನ ಸ್ವಾಮಿ, ನನ್ನಂಥ ಸಾವಿರ ಜನ ಅವನ ಸೇವಕರಾಗಿದ್ದಾರೆ. ನನ್ನ ತೋಳಿನ ತೀಟೆ ಶತ್ರುಗಳಿಗೆ ಆಹ್ವಾನ-ವನ್ನೀಯುತ್ತಿದೆ. ಧೈರ್ಯವಿದ್ದವರು ಮುಂದೆ ಬನ್ನಿ. " ಹನುಮಂತನು ಕಿಂಕರರನ್ನು ತೀರಿಸಿ ಮಾಡಿದ ಗರ್ಜನೆ ರಾವಣನಿಗೆ ತಿಳಿದುಬಂದಿತು. ಅವನು ಪ್ರಹಸ್ತಪುತ್ರನಾದ ಜಂಬುಮಾಲಿ ಮೊದಲಾದ ಪ್ರಚಂಡರನ್ನು ಯುದ್ಧಕ್ಕಾಗಿ ಕಳಿಸಿದನು. ಜಂಬುಮಾಲಿಯ ಬಾಣಗಳಿಗೆ ಉತ್ತರವಾಗಿ ಹನುಮಂತನು ಒಂದು ದೊಡ್ಡ ಶಿಲೆಯನ್ನು ಅವನೆಡೆಗೆ ಎಸೆದನು. ಜಂಬುಮಾಲಿ ಯ ಬಾಣ ಅದನ್ನು ಭೇದಿಸಿತು. ಹನುಮಂತನು ಮರವೊಂದನ್ನು ಕಿತ್ತೆಸೆದನು. ಶತ್ರುವಿನ ಬಾಣ ಅದನ್ನೂ ಕಬಳಿಸಿತು. ಹೆಬ್ಬಾಗಿಲಿನ ಕೀಲೇ ಕೊನೆಗೂ ಆಯುಧವಾಯಿತು. ಮಾರುತಿಯ ಈ ಆಯುಧ ಶತ್ರುವನ್ನು ಆತನ ವಾಹನಸಮೇತವಾಗಿ ಪುಡಿಗುಟ್ಟಿತು. ಉಳಿದ ಮಂತ್ರಿಪುತ್ರರ ಗತಿಯೂ ಹೀಗೆಯೇ ಆಯಿತು. ಕೆಲವರು ಕೈ ಹೊಡೆತಕ್ಕೆ ಸುಣ್ಣಾದರು. ಇನ್ನು ಕೆಲರು ಕಾಲಡಿಗೆ ಬಿದ್ದು ನುಗ್ಗಾದರು. ಕೆಲವರು ಕೂರುಗುರಿನ ಆಘಾತವನ್ನು ತಡೆದುಕೊಳ್ಳದಾದರು. ಮತ್ತೆ ಕೆಲವರಿಗೆ ಹನುಮಂತನ ಸಿಂಹ- ನಾದವೇ ಮರಣ ಸಂಗೀತವಾಯಿತು ! ರಾಕ್ಷಸರಿಗೆ ಹನುಮಂತನು ಕಾಲಪುರುಷನಂತೆ ಕಾಣಿಸಿಕೊಂಡನು. ಈಗ ರಾವಣನು ಸ್ವಲ್ಪ ಯೋಚಿಸುವಂತಾಯಿತು. ಕೊನೆಗೆ ದುರ್ಧರ್ಷ, ಯೂಪಾಕ್ಷ, ವಿರೂಪಾಕ್ಷ, ಭಾಸಕರ್ಣ, ಪ್ರಘಸ ಎಂಬ ಐದು ಜನ ಮಹಾವೀರರಾದ ಸೇನಾಪತಿಗಳನ್ನು ಯುದ್ಧಕ್ಕೆ ಹೋಗುವಂತೆ ರಾವಣನು ಆಜ್ಞಾಪಿಸಿದನು: " ನಾನು ಅನೇಕ ಪರಾಕ್ರಮಿಗಳನ್ನು ನೋಡಿದ್ದೇನೆ. ವಾಲಿ-ಸುಗ್ರೀವರಂಥ ಕಪಿವೀರರನ್ನೂ ನೋಡಿದ್ದೇನೆ. ಆದರೆ ಈ ಕಪಿಗೆ ಅವರಾರೂ ಎಣೆಯಲ್ಲ. ಈ ಕಪಿ ಬಂದುದು ಲಂಕೆಗೆ ದೆವ್ವ ಬಡಿದಂತಾಗಿದೆ. ಇದರ ಶಕ್ತಿ ಸಾಮರ್ಥ್ಯ ಕಲ್ಪನಾತೀತವಾಗಿದೆ. ಬಹಳ ಜಾಗರೂಕತೆಯಿಂದ ಈ ಕಪಿಯನ್ನು ಹಿಡಿದು ತನ್ನಿರಿ. ದೇಹದ ರಕ್ಷಣೆಯ ಮೇಲೆ ಜಾಗ್ರತೆಯಿರಲಿ, ಅಸಾಮಾನ್ಯವಾದ ಈ ಕಪಿಯೊಡನೆ ಚಿನ್ನಾಟವಾಡುವುದು ತರವಲ್ಲ. ಪಂಚ ಮಹಾಸೇನಾನಿಗಳು ಚತುರಂಗ ಸೈನ್ಯದೊಡನೆ ಹನುಮಂತನ ಮೇಲೆ ದಾಳಿಯಿಟ್ಟರು; ಬಾಣದ ಮಳೆಗರೆದರು. ರಾಕ್ಷಸರು ಗಾಳಿಯೊಡನೆ ಗುದ್ದಾಡುತ್ತಿದ್ದರು. ಪವನತನಯನಿಗೆ ಅವುಗಳು ನಾಟುವುದುಂಟೆ ? ಯೂಪಾಕ್ಷನೆಸೆದ ಕಬ್ಬಿಣದ ಸಲಾಕೆ ವ್ಯರ್ಥವಾಯಿತು. ವಿರೂಪಾಕ್ಷ-ಯೂಪಾಕ್ಷ ಇಬ್ಬರೂ ಹನುಮಂತನೆಸೆದ ಒಂದು ಮರದ ಪೆಟ್ಟಿಗೆ ನುಚ್ಚು ನೂರಾಗಿಬಿದ್ದರು. ಆಗ ಭಾಸಕರ್ಣ ಶೂಲವನ್ನೆಸೆದ. ಪ್ರಘಸ ಕತ್ತಿಯಂತೆ ಹರಿತವಾದ ಲೋಹದಂಡವನ್ನೆಸೆದ. ಅವರಿಬ್ಬರ ಕತೆಯನ್ನೂ ಮುಗಿಸುವುದಕ್ಕೆ ಮಾರುತಿ ಹೆಚ್ಚು ಹೊತ್ತನ್ನು ತೆಗೆದುಕೊಳ್ಳಲಿಲ್ಲ. ದುರ್ಧರ್ಷನೂ ಈ ನಾಲ್ವರ ಹಾದಿಯನ್ನೆ ಹಿಡಿದನು. ಶತ್ರುಸೈನ್ಯವೇ ಹನಮಂತನಿಗೆ ಆಯುಧ. ಆನೆ-ಕುದುರೆ ಗಳನ್ನೊ- ರಥಗಳೆನ್ನೊ ಎಸೆದು ಬಿಟ್ಟರೆ, ತಮ್ಮ ಜತೆಗೆ ಇನ್ನೂ ಅನೇಕ ಸೈನ್ಯ ಭಾಗವನ್ನು ಅವು ಪುಡಿಮಾಡುತ್ತಿದ್ದುವು. ಒಬ್ಬ ಸೈನಿಕನನ್ನು ಕೊಲ್ಲಲಿಕ್ಕೆ ಇನ್ನೊಬ್ಬ ಸೈನಿಕನೇ ಆಯುಧ ! ಈ ಯುದ್ಧದಿಂದ ಪಾರಾಗುವುದುಂಟೆ ! ರಾವಣನ ಸೈನ್ಯದ ಮೂರರಲ್ಲಿ ಒಂದಂಶ ಹನುಮಂತನಿಗೆ ಆಹುತಿಯಾಗಿತ್ತು. ರಾವಣನ ಸೇನೆ ಮೊದಲ ಬಾರಿ ಸೋಲಿನ ರುಚಿಯನ್ನು ಕಂಡಿತು. ಸೇನಾಪತಿಗಳು ಸತ್ತ ಸುದ್ದಿ ರಾವಣನಿಗೆ ತಲುಪಿತು. ಅವನ ಇಪ್ಪತ್ತು ಕಣ್ಣುಗಳೂ ಒಮ್ಮೆಲೆ ತನ್ನ ಪ್ರೀತಿಯ ಪುತ್ರನಾದ ಅಕ್ಷಕುಮಾರನ ಕಡೆಗೆ ಹೊರಳಿದವು. ಮಗನಿಗೆ ತಂದೆಯ ಭಾವದ ಅರಿವಾಯಿತು. ಅಸಂಖ್ಯ ಸೇನೆಯೊಡನೆ ಅವನು ಯುದ್ಧಕ್ಕೆ ಹೊರಟನು. ಅಕ್ಷಕುಮಾರನು ಕಣ್ಣಿನಿಂದ ಕಿಡಿ ಕಾರುತ್ತಲೆ ನಗರದ ಬಾಗಿಲಿಗೆ ಬಂದನು. ಹನುಮಂತನು ಮುಗಿಲಿಗೆ ಹಾರಿದನು. ಅಕ್ಷನ ಬಾಣಗಳಿಂದ ಮುಗಿಲು ಮುಚ್ಚಿ ಹೋಯಿತು. ಅವುಗಳಲ್ಲಿ ಒಂದೂ ಹನುಮಂತನಿಗೆ ತಾಗಿರಲಿಲ್ಲ. ಅವನು ಗಾಳಿಯಂತೆ ಆಕಾಶದಲ್ಲಿ ಅಲೆಯುತ್ತಿದ್ದ. ಯುದ್ಧ ಸಾಗುತ್ತಲೇ ಇತ್ತು. ಒಮ್ಮೆಲೆ ಹನುಮಂತನು ಅಕ್ಷನ ಎದುರು ಕಾಣಿಸಿಕೊಂಡನು. ರಾವಣನಷ್ಟೇ ಬಲಿಷ್ಟನಾದ ಈತನನ್ನು ತೀರಿಸಿ ಬಿಡಬೇಕು ಎನ್ನಿಸಿತ್ತು ಹನುಮಂತನಿಗೆ. ಆತನ ಒಂದು ಪೆಟ್ಟಿಗೆ ರಥ ಮುರಿದು ಬಿತ್ತು; ಕುದುರೆಗಳು ಸತ್ತು ಬಿದ್ದವು. ಅಕ್ಷನು ವಿರಥನಾದರೂ ಧೃತಿಗೆಡದೆ ಖಡ್ಗವನ್ನೆತ್ತಿ ಹಿಡಿದು ಆಕಾಶಕ್ಕೆ ನೆಗೆದನು. ಹನುಮಂತನು ಅವನನ್ನು ಕಾಲುಗಳಲ್ಲಿ ಬಿಗಿಯಾಗಿ ಹಿಡಿದು ಆಕಾಶದಲ್ಲಿ ಗರಗರನೆ ತಿರುಗಿಸಿ ನೆಲಕ್ಕೆಸೆದು ಬಿಟ್ಟನು. ಬರಿದಾದ ದೇಹ ಮಾತ್ರ ನೆಲಕ್ಕೆ ಕುಸಿದುಬಿತ್ತು. ದೇವತೆಗಳು ಹನುಮಂತನ ಮೇಲೆ ಹೂಮಳೆಗರೆದರು. ರಾವಣನಿಗೆ ದಿಕ್ಕೇ ತೋಚದಂತಾ- ಯಿತು. ಲಂಕೆಯ ಮನೆಗಳಲ್ಲಿ ಜನ ಕಣ್ಣೀರು ಸುರಿಸಿದರು. ಅಕ್ಷಕುಮಾರ ಇನ್ನಿಲ್ಲ. ದುಃಖ-ಕೋಪಗಳಿಂದ ವಿಕ್ಷಿಪ್ತನಾದ ರಾವಣ ಇಂದ್ರಜಿತ್ತನ್ನು ಕರೆದು ಆಜ್ಞಾಪಿಸಿದನು : " ಮಗು ! ಆ ಮಹಾಕಪಿಯನ್ನು ನಿಗ್ರಹಿಸುವ ಭಾರ ನಿನ್ನ ಮೇಲಿದೆ. ಲಂಕೆಯ ಸೇನೆ ನಿನ್ನ ಬರವನ್ನು ಕಾಯುತ್ತಿದೆ." ಇಂದ್ರನನ್ನೂ ಸೋಲಿಸಿದ ಹಮ್ಮಿನಿಂದ ಮೇಘನಾದ ಆನೆಯ ಮೇಲೇರಿ ನಡೆದನು. ಅವನನ್ನು ನೋಡಿ ಹನುಮಂತನು ಪರ್ವತದಂತೆ ಬೆಳೆದುನಿಂತನು. ಮೇಘನಾದ ಗುರಿಯಿಟ್ಟು ಬಾಣ ಹೊಡೆವುದರೊಳಗೆ ಹನುಮಂತ ಆಕಾಶಕ್ಕೆ ಹಾರಿಯಾಗಿತ್ತು. ಯಾರ ಬಾಣಗಳಿಗೆ ಗುರಿ ತಪ್ಪುವುದೆಂದರೆನೆಂದೇ ತಿಳಿದಿರಲಿಲ್ಲವೋ ಅಂಥ ಮೇಘನಾದನ ಬಾಣಗಳು ಹನುಮಂತನನ್ನು ಮುಟ್ಟಲಾರದೆ ಮೊದಲಬಾರಿ ಗುರಿತಪ್ಪಿ ನಡೆದವು ! ಮೇಘನಾದನಿಗೆ ಚಿಂತೆಗಿಟ್ಟುಕೊಂಡಿತು. ಯಾವ ಬಾಣಕ್ಕೂ ಬಗ್ಗದ ಇವನನ್ನು ಸೆರೆಹಿಡಿವುದಾದರೂ ಹೇಗೆ ? ಕೊನೆಯದಾಗಿ ಒಂದು ಪ್ರಯೋಗ ಮಾಡಿ ಬಿಡುವುದಾಗಿ ನಿಶ್ಚಯಿಸಿ ಬ್ರಹ್ಮಾಸ್ತ್ರ- ವನ್ನು ಪ್ರಯೋಗಿಸಿದನು. ಭಗವಂತನ ಅನುಗ್ರಹದಿಂದ ಯಾವ ಅಸ್ತ್ರಗಳೂ ಹನುಮಂತ ನಿಗೆ ತಾಕಲಾರವು. ಆದರೂ ರಾವಣನನ್ನು ಕಂಡು ಮಾತನಾಡ- ಬೇಕು. ಅದಕ್ಕೆ ಇದೇ ಉಪಾಯ ಎಂದು ಯೋಚಿಸಿದ ಹನುಮಂತ ಅಸ್ತ್ರಕ್ಕೆ ಕಟ್ಟು ಬಿದ್ದವರಂತೆ ಕಾಣಿಸಿಕೊಂಡನು. ರಾಕ್ಷಸರು ಇನ್ನಷ್ಟು ಹಗ್ಗಗಳಿಂದ ಬಿಗಿದು ರಾಜಸಭೆಗೆ ಕರೆದೊಯ್ದರು. ಹನುಮಂತನು ತನ್ನ ಕಾರ್ಯಸಿದ್ಧಿಗಾಗಿ ಈ ಅವಮಾನವನ್ನು ನುಂಗಿಕೊಂಡನು. ರಾವಣನೇ ಸ್ವಯಂ ಹನುಮಂತನನ್ನು ವಿಚಾರಣೆಗೆ ತೆಗೆದುಕೊಂಡನು: " ಕಪಿಯಂತೆ ಕಾಣುವ ನೀನು ಯಾರು ? ಎಲ್ಲಿಂದ ಬಂದೆ ? ಬಂದ ಉದ್ದೇಶವೇನು ? ಯಾರದಾದರೂ ದೂತನಾಗಿ ಬಂದಿರುವೆಯಾ? ನಮ್ಮ ಉದ್ಯಾನವನ್ನು ಹಾಳುಗೆಡವಲು ಕಾರಣವೇನು ? ಸೈನ್ಯ- ವನ್ನೇಕೆ ನಾಶಪಡಿಸಿದೆ !" ರಾಮಚರಣಗಳಿಗೆ ವಂದಿಸಿ ಹನುಮಂತನು ಉತ್ತರಿಸಿದನು: " ಲಂಕಾಧೀಶ್ವರ ! ನಾವು ಕಾಡಿನಲ್ಲಿರುವವರು, ಹಣ್ಣು ಹಂಪಲು ತಿನ್ನುವವರು. ನಮ್ಮ ಸ್ವಭಾವಕ್ಕನುಗುಣವಾಗಿ ನಿನ್ನ ಕಾಡನ್ನೂ ಸೂರೆಗೊಳಿಸಿದೆ. ಇಷ್ಟಕ್ಕೆಯೆ ನೀನು ಕೋಪಿಸಿ- ಕೊಳ್ಳುವುದು ತರವಲ್ಲ. ಇನ್ನು ನಿನ್ನ ಸೈನ್ಯ ನಾಶದ ವಿಚಾರ. ನನ್ನನ್ನು ಕೊಲ್ಲ- ಬಂದವರನ್ನು ಸುಮ್ಮನೆ ನೋಡುತ್ತಿರುವುದಕ್ಕಾಗುತ್ತದೆಯೆ ? ನಾನೂ ಹೋರಾಡಿದೆ. ಪಾಪ ! ಅವರೆಲ್ಲ ಜೀವ ತೊರೆದುಬಿಟ್ಟರು! ನಾನೇನು ಮಾಡಲಿ ! ನಿನ್ನ ಬ್ರಹ್ಮಾಸ್ತ್ರ ಕೂಡ ನನ್ನನ್ನು ಬಂಧಿಸ ಲಾರದು. ನಿನ್ನ ಮಗನ ಪರಾಕ್ರಮಕ್ಕಾಗಿ ಹೆಮ್ಮೆ ಪಟ್ಟುಕೊಳ್ಳ- ಬೇಡ. ನಾನು ರಾಮಚಂದ್ರನ ದೂತ. ವಾಯುದೇವರ ಮಗ, ನಿನ್ನನ್ನು ನೋಡಬೇಕೆಂದು ಬಯಸಿ ನಾನಾಗಿಯೆ ಬಂದೆ. ಬ್ರಹ್ಮಾಸ್ತ್ರ ಒಂದು ನೆವ ಅಷ್ಟೆ. ನೀನು ಸೀತೆಯನ್ನು ರಾಮಚಂದ್ರ ನಿಗೆ ಒಪ್ಪಿಸಿ ಕ್ಷಮೆ ಕೇಳಿದೆಯಾದರೆ ನನ್ನ ಪ್ರಭು ಇನ್ನಾದರೂ ನಿನ್ನ ಕಳ್ಳತನವನ್ನು ಕ್ಷಮಿಸುವನು. ಇದಕ್ಕೆ ಒಪ್ಪದೆ ಹೋದರೆ ರಾಮ-ಲಕ್ಷ್ಮಣರನ್ನೂ ಕಪಿರಾಜ-ನಾದ ಸುಗ್ರೀವನನ್ನೂ ನೀನು ಸದ್ಯದಲ್ಲಿ ರಣರಂಗಣದಲ್ಲಿ ಕಾಣುವೆ. ಬ್ರಹ್ಮ ರುದ್ರಾದಿಗಳೂ ರಾಮಬಾಣವನ್ನು ತಡೆದು- ಕೊಳ್ಳಲಾರರು. ನೀನು ಯಾವ ಲೆಕ್ಕ ! ಅವಿವೇಕಿಯಂತೆ ಯುದ್ಧಕ್ಕಿಳಿಯಬೇಡ. ಲಂಕೆಯಲ್ಲಿ ರಕ್ತದ ಹೊಳೆ ಹರಿಯದಿರ ಲೆಂದು ರಾಮನಿಗೆ ಶರಣಾಗು, ನಾನೇ ನಿನ್ನನ್ನು ತೀರಿಸಿಬಿಡ- ಬಹುದಿತ್ತು. ಆದರೆ ನನ್ನ ಪ್ರಭುವಿನ ಶತ್ರುವನ್ನು ನಾನು ಸಂಹರಿಸಬಾರದು. ಅದು ಅವನಿಗೇ ಮೀಸಲು." ರಾವಣನು ಕನಲಿ ಕೆಂಡವಾಗಿ " ಈ ಕಪಿಯನ್ನು ಕೊಂದು- ಬಿಡಿ" ಎಂದು ಆಜ್ಞಾಪಿಸಿದನು. ಒಡನೆ ಧರ್ಮಾತ್ಮನಾದ ವಿಭೀಷಣನು " ದೂತರನ್ನು ಕೊಲ್ಲುವುದು ನೀತಿಯಲ್ಲ" ಎಂದು ತಡೆದನು. ಕೊನೆಗೆ ಬಾಲವನ್ನು ಸುಟ್ಟು ವಿರೂಪಗೊಳಿಸಬೇಕು ಎಂದು ತೀರ್ಮಾನವಾಯಿತು. ರಾಜಾಜ್ಞೆಯಂತೆ ರಾಕ್ಷಸರು ಈ ಹನುಮಂತನ ಬಾಲಕ್ಕೆ ಬಟ್ಟೆ ಸುತ್ತತೊಡಗಿದರು. ಆ ಬಾಲ ಸುತ್ತಿದಷ್ಟು ಉದ್ದ ಬೆಳೆಯುತ್ತಿತ್ತು. ಹೇಗೋ ಕಷ್ಟದಿಂದ ಬಾಲವನ್ನೆಲ್ಲ ಬಟ್ಟೆಯಿಂದ ಸುತ್ತಿ ಬೆಂಕಿ ಹೊತ್ತಿಸಿದರು. ಗಾಳಿಗೂ ಬೆಂಕಿಗೂ ಗೆಳೆತನವಲ್ಲವೆ ? ಗಾಳಿಯ ಮಗನನ್ನು ಅದು ಸುಡಲೇ ಇಲ್ಲ. ಬಾಲದ ಬಟ್ಟೆಗೆಲ್ಲ ಬೆಂಕಿ ಹತ್ತಿ ಮುಗಿಲೆ- ತ್ತರಕ್ಕೆ ಜ್ವಾಲೆ ಹರಡಿತ್ತು. ಕೂಡಲೆ ಹನುಮಂತನು ರಕ್ಕಸರ ಹಿಡಿತದಿಂದ ತಪ್ಪಿಸಿಕೊಂಡು ಬಾಲದ ಬೆಂಕಿಯಿಂದ ಲಂಕೆ- ಯನ್ನೆ ಸುಡತೊಡಗಿದನು. ಜನ ಭಯದಿಂದ ಓಡತೊಡಗಿದರು. ಎಲ್ಲಿ ನೋಡಿದರೂ ಬೊಬ್ಬೆ-ಹಾರಾಟ-ಚೀರಾಟ. ಲಂಕೆಯೆಲ್ಲ ಬೆಂಕಿಯಲ್ಲಿ ಮುಳುಗಿಹೋಗಿತ್ತು. ಕೆಲವೆಡೆ ಸುಟ್ಟ ಮನೆಗಳು, ಕೆಲವಡೆ ಕರಕಿಹೋದ ಕೈ-ಕಾಲಗಳು, ಕೆಲವೆಡೆ ಮುಗಿಲೆತ್ತರಕ್ಕೆ ಜಿಗಿದು ಉರಿವ ಬೆಂಕಿಯ ಕೋಲಾಹಲ. ಕ್ಷಣಾರ್ಧದಲ್ಲಿ ಲಂಕೆ ಮಸಣವಾಯಿತು. ಸಿರಿಯನಾಡು ನರಕವಾಯಿತು. ಲಂಕೆಯನ್ನು ಬೆಂಕಿಯಲ್ಲಿ ಅದ್ದಿ, ಹನುಮಂತ ಸಮುದ್ರಕ್ಕೆ ಹಾರಿದನು. ರಾಕ್ಷಸರ ಮಾರಣಹೋಮ ಮಾಡಿದ ಮೇಲೆ ಅವಭೃಥಸ್ನಾನ ಮಾಡಬೇಕಲ್ಲವೆ ? ಹನುಮಂತ ಲಂಕೆಯನ್ನೆಲ್ಲ ಸುಟ್ಟಿದ್ದರೂ ಸೀತೆಗೆ ನೆಲೆಯಾದ ಶಿಂಶಪೆಯನ್ನು ಸುಟ್ಟಿರಲಿಲ್ಲ. ವಿಭೀಷಣನ ಮನೆಯನ್ನೂ ಸುಟ್ಟಿ ರಲಿಲ್ಲ. ಧರ್ಮಾತ್ಮರೆಂದರೆ ಅಷ್ಟು ಗೌರವ ಆತನಿಗೆ. ಇತ್ತ ಸೀತೆ , ' ಬೆಂಕಿಯಿಂದ ಹನುಮಂತನಿಗೆ ಏನೂ ಆಪತ್ತು ಬಾರದಿರಲಿ ' ಎಂದು ಅಗ್ನಿದೇವನನ್ನು ಪ್ರಾರ್ಥಿಸುತ್ತಿದ್ದಳು. ವಿಭೀಷಣನ ಪತ್ನಿ ಸಾಧ್ವಿ ಸುರಮೆ ಬಳಿಯಲ್ಲಿ ಕುಳಿತು ಸಂತೈಕೆಯ ಮಾತನಾಡು- ತ್ತಿದ್ದಳು. ಹನುಮಂತನು ಹೊರಡುವ ಮುನ್ನ ಸೀತೆಯ ಬಳಿಗೆ ಬಂದು ಹೋಗುವದಕ್ಕೆ ಅಪ್ಪಣೆ ಬೇಡಿದನು. "ರಾಮಚಂದ್ರನನ್ನು ಬೇಗ ಬರುವಂತೆ ಹೇಳು" ಎಂದು ಹೇಳಿ ಸೀತೆ ಆತನನ್ನು ಹರಸಿ ಕಳಸಿದಳು. ಸಮುದ್ರವನ್ನು ದಾಟುವದಕ್ಕಾಗಿ ಲಂಬ ಪರ್ವತವನ್ನೇರಿ ನಿಂತ ಹನುಮಂತ ಮೊದಲಿನಂತೆಯೇ ಮಹಾಕಾಯನಾಗಿ ಬೆಳೆದನು. ಹಾರುವ ಭರದಲ್ಲಿ ಕಾಲಿನ ತುಳಿತಕ್ಕೆ ಸಿಕ್ಕಿದ ಪರ್ವತ ಶಿಖರ, ನೆಲ ಸಮವಾಗುವಂತೆ ಕುಸಿಯಿತು. ಹನುಮಂತನ ಮಹಾಕಾಯ ಬಾನಂಗಳವನ್ನು ಮುಟ್ಟಿತು. ಅವನ ಚಾಚಿದ ತೋಳುಗಳು ಎಣ್ದೆಸೆಗಳನ್ನೂ ತನ್ನಡೆಗೆ ಸೆಳೆದುಕೊಳ್ಳುವಂತೆ ಕಾಣಿಸುತ್ತಿತ್ತು. ಬ್ರಹ್ಮಾಂಡವನ್ನೇ ಭೇದಿಸುವಂತೆ ಅವನ ತಲೆ ಉನ್ನತವಾಗಿ ಎತ್ತಿ ನಿಂತಿತ್ತು. ಹನುಮಂತನ ಸಿಂಹನಾದವನ್ನು ಕೇಳಿ ಜಾಂಬವಂತ, ಅಂಗದ ಮೊದಲಾದವರಿಗೆ ಜೀವ ಬಂದಂತಾಯಿತು. ಕವಿದಿದ್ದ ನಿರಾಶೆ, ದೈನ್ಯ ಎತ್ತಲೋ ಮಾಯವಾದಂತಾಯಿತು. ಹನುಮಂತನು ಖಂಡಿತವಾಗಿ ಸೀತೆಯನ್ನು ನೋಡಿ ಬಂದಿರಬೇಕು. ಕೆಲಸವನ್ನು ಪೂರೈಸದೆ ಬಂದಿದ್ದರೆ ಅವನು ಹೀಗೆ ಆನಂದದ ಸಿಂಹನಾದವನ್ನು ಮಾಡು ತ್ತಿರಲಿಲ್ಲ ಎಂಬ ಜಾಂಬವಂತನ ವಾದ ಕಪಿಗಳೆಲ್ಲರಿಗೂ ಯುಕ್ತವೆನಿಸಿತು. ಸಂತಸದಿಂದ ಕಪಿಗಳು ಹಾರಿದರು-ಕುಣಿದರು. ಮಾಹೇಂದ್ರ ಪರ್ವತದಲ್ಲಿ ಇಳಿದ ಹನುಮಂತನಿಗೆ ಕಪಿಗಳು ಹೂ-ಹಣ್ಣುಗಳಿಂದ ಉಪಚರಿಸಿದರು. ಹನುಮಂತನು ಉಲ್ಲಸಿತನಾಗಿ ನುಡಿದನು : " ರಾಮನ ಪತ್ನಿಯನ್ನು ಕಂಡು ಬಂದೆ." ಕಪಿಗಳೆಲ್ಲರೂ ಏಕಕಂಠದಿಂದ ಹರ್ಷಧ್ವನಿಗೈದರು. ಹನುಮಂತನಿಂದ ಒಂದೊಂದು ಮಾತನ್ನೂ ಬಾರಿ ಬಾರಿ ಕೇಳಿ ವಿವರವನ್ನೆಲ್ಲ ತಿಳಿದುಕೊಂಡರು; ಹನುಮಂತನನ್ನು ಮನಸಾರೆ ಕೊಂಡಾಡಿದರು. ಉತ್ತರಮುಖವಾಗಿ ಕಪಿಗಳ ತಂಡವು ಹೊರಟಿತು. ದಾರಿಯ- ಲ್ಲಿ ಮಧುವನ ಕಾಣಿಸಿತು. ಹನುಮಂತನ ಮತ್ತು ಅಂಗದನ ಒಪ್ಪಿಗೆಯನ್ನು ಪಡೆದ ಕಪಿಗಳು ಸಂತಸದಿಂದ ಯಥೇಷ್ಟವಾಗಿ ಮಧುಪಾನ ಮಾಡಿದರು. ಆ ಕಾಡನ್ನು ದಧಿಮುಖನು ಕಾಯುತ್ತಿದ್ದನು. ಅವನು ಸುಗ್ರೀವನ ಸೋದರಮಾವ ಬೇರೆ. ಆದರೆ ಉಲ್ಲಸಿತರಾದ ಕಪಿಗಳು ಅವನನ್ನು ಅವನ ಕೆಲಸದಾಳುಗಳನ್ನು ಅಲಕ್ಷಿಸಿ ಅವಮಾನಿಸಿ ಬಿಟ್ಟರು. ಅವನು ಸಿಟ್ಟುಕೊಂಡು ಸುಗ್ರೀವನೆಡೆಗೆ ದೂರು- ಕೊಂಡೊಯ್ದನು. ಈ ವಾರ್ತೆಯನ್ನು ಕೇಳಿದ ಸುಗ್ರೀವನು ರಾಮನ ಬಳಿ ನುಡಿದನು: " ರಾಮಚಂದ್ರ, ಹನುಮಂತನು ಸೀತೆಯನ್ನು ಕಂಡು- ಬಂದಿರಬೇಕು. ಅದರಿಂದಲೇ ಅವರು ಮಧುವನದಲ್ಲಿ ಸಂತಸದ ಮಧುಪಾನವನ್ನು ಮಾಡುತ್ತಿದ್ದಾರೆ. ಕಪಿಗಳನ್ನು ಕೂಡಲೇ ಕರೆದು ತರುವಂತೆ ಸುಗ್ರೀವನು ದಧಿಮುಖನನ್ನೆ ಹಿಂದಕಟ್ಟಿದನು. ದಿಗಿಲುಗೊಂಡ ದಧಿಮುಖನು ಬಂದು ವಿಜ್ಞಾಪಿಸಿಕೊಂಡನು: " ಮಹಾರಾಜ ಸುಗ್ರೀವನು ನಿಮ್ಮನ್ನು ಕೂಡಲೇ ಬರಹೇಳಿದ್ದಾನೆ." ಕಪಿಗಳೆಲ್ಲ ತ್ವರಿತವಾಗಿ ಬಂದು ಹನುಮಂತನೊಡನೆ ರಾಮಚರಣಗಳಿಗೆರಗಿದರು. ಹನುಮಂತನು " ಜನಕ ತನಯೆಯನ್ನು ಕಂಡು ಬಂದೆ " ಎಂದ ಮಾತ್ರಕ್ಕೆ ರಾಮಚಂದ್ರನ ಮುಖದಲ್ಲಿ ನಗೆಮಲ್ಲಿಗೆ- ಯರಳಿತು. ಲಕ್ಷ್ಮಣನು ಹಿಗ್ಗಿ ಹಿರಿಯಾದನು. ಸುಗ್ರೀವನು ಸಂತಸ ದಲ್ಲಿ ಉಬ್ಬಿಹೋದನು. ಮಾರುತಿ ಎಲ್ಲ ವಿಷಯವನ್ನೂ ವಿವರ ವಾಗಿ ತಿಳಿಸಿದನು; ಸೀತೆಯ ಸಂದೇಶವನ್ನೂ ಅರುಹಿದನು. ಚಿತ್ರಕೂಟದಲ್ಲಿ ಕಾಗೆಯ ಕಣ್ಣು ಕುಕ್ಕಿದ ಕಥೆಯನ್ನೂ ಹೇಳಿ-ದನು. ಅಭಿಜ್ಞಾನವೆಂದು ಕೊಟ್ಟ ಚೂಡಾಮಣಿಯನ್ನೂ ಒಪ್ಪಿಸಿದನು. ರಾಮ-ಸೀತೆಯರು ಆಡುತ್ತಿರುವ ಲೀಲಾನಾಟಕದಲ್ಲಿ ಹನುಮಂತನು ತನ್ನ ಪಾತ್ರದ ವಿಡಂಬನೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದನು. ರಾಮಚಂದ್ರನು ಸಂತುಷ್ಟನಾಗಿ ಭಕ್ತಾಗ್ರಣಿಯಾದ ಹನುಮಂತನನ್ನು ಬಿಗಿದಪ್ಪಿಕೊಂಡನು. ಯುದ್ಧ ಕಾಂಡ ಅಣ್ಣನಿಗೆ ಬೇಡಾದ ತಮ್ಮ ರಾಮಚಂದ್ರನ ಅನುಗ್ರಹ ದೃಷ್ಟಿ ಹನುಮಂತನ ಕಡೆಗೆ ಹರಿಯಿತು. ಮುಕ್ತಕಂಠದಿಂದ ಹನುಮಂತನನ್ನು ಹೊಗಳಿದನು : "ಪೌರುಷದಲ್ಲಿ ಹನುಮಂತನಿಗೆ ಎಣೆಯಾದವರಿಲ್ಲ. ಅವನಿಗೆ ಕಡಲನ್ನು ದಾಟುವುದು ಒಂದು ಆಟ; ರಾವಣನು ಹುಲ್ಲುಕಡ್ಡಿ- ಗಿಂತ ಕಡೆ !" ಮುಂದಿನ ಕಾರ್ಯಕ್ರಮವೆಂದರೆ ಲಂಕೆಗೆ ಪಯಣ. ರಾಮನೂ ಹನುಮಂತನೂ ಮಂತ್ರಾಲೋಚನೆ ನಡೆಸಿದರು. ಕಡಲಿಗೆ ಸೇತುವೆಯನ್ನು ಕಟ್ಟುವುದೇ ಸರಿ ಎಂದು ನಿರ್ಣಯವಾಯಿತು. ಹನುಮಂತನ ವಿವರಣೆಯಂತೆ ಲಂಕಾಪುರ ದುರ್ಗಮವಾಗಿದೆ. ರಾಕ್ಷಸ ಸೈನ್ಯ ಅಪಾರವಾಗಿದೆ. ಆದರೆ ಇದನ್ನಾಲಿಸುವಾಗ ರಾಮಚಂದ್ರನ ಮುಖದಲ್ಲಿ ಮುಗುಳುನಗೆ ಮಾಯವಾಗಲಿಲ್ಲ; ಮಿನುಗುತ್ತಲೇ ಇತ್ತು. ಅವನ ಉತ್ತರವೂ ಮುಗುಳುನಗೆಯಲ್ಲಿಯೇ ಅರಳಿತ್ತು ! "ಬೆಂಕಿಗೊಡ್ಡಿದ ಹತ್ತಿಯಂತೆ ರಾವಣನ ಲಂಕೆಯ ಪಾಡಾಗ- ಲಿದೆ. ಇವತ್ತು ಉತ್ತರಾ ಫಲ್ಗುನಿ; ಶುಭದಿನ. ಇಂದು ಮಧ್ಯಾಹ್ನವೇ ಪಯಣ ಹೊರಡುವುದು ಇಷ್ಟವಾಗಿದೆ. ಶುಭಸ್ಯ ಶೀಘ್ರಮ್." ಪಯಣದ ಸಿದ್ಧತೆ ನಡೆಯಿತು. ರಾಮಚಂದ್ರ ಹನುಮಂತನ ಹೆಗಲನ್ನೇರಿದನು. ಲಕ್ಷ್ಮಣ ಅಂಗದನ ಹೆಗಲಮೇಲೆ ಕುಳಿತನು. ರಾಮನ ಮತ್ತು ಸುಗ್ರೀವನ ಆಜ್ಞೆಯಂತೆ ಸೇನೆ ಹೊರಟಿತು. ಸೇನಾಪತಿಯಾದ ನೀಲ ಮುಂದೆ ನಡೆದನು. ಎಡ-ಬಲಗಳಲ್ಲಿ ಋಷಭ ಮತ್ತು ಗಂಧಮಾದನ. ಸುಷೇಣ, ಜಾಂಬವಂತ ಮೊದಲಾದವರು ಮಧ್ಯಭಾಗದಲ್ಲಿದ್ದರು. ಸುಗ್ರೀವ ಲಕ್ಷ್ಮಣರೊಡನೆ ರಾಮಚಂದ್ರನೂ ಸೇನಾಮಧ್ಯದಲ್ಲಿ ವಿರಾಜಿಸಿದನು. ಪನಸಾದಿಗಳು ಸೇನಾ ಚಕ್ರದ ರಕ್ಷಣೆಯ ಹೊರೆ ಹೊತ್ತು ಸುತ್ತ ನಡೆದರು. ಗುಡುಗುವ ಮೋಡಗಳಂತೆ ಗರಿಮೂಡಿದ ಬೆಟ್ಟಗಳಂತೆ ನಡೆಯಿತು ಕಪಿಸೇನೆ. ಕೆಲವರು ಮರಗಳಿಂದ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದಾರೆ. ಕೆಲವರು ಮಧುಪಾನ ಮತ್ತರಾಗಿದ್ದಾರೆ. ಹೀಗೆ ಸಂತಸದಿಂದ ರಾಮನ ಗುಣಗಾನ ಮಾಡುತ್ತ ಕಪಿಸೇನೆ ಸಾಗಿತು. ಕಪಿಗಳೊಡನೆ ರಾಮಚಂದ್ರನು ತೆಂಕಣ ದಿಸೆಗೆ ಮುಂದುವರಿ- ದನು. ವಿಂಧ್ಯ-ಸಹ್ಯ-ಮಲಯಗಳನ್ನು ದಾಟಿ ಮಹೇಂದ್ರಪರ್ವತ- ದ ಬಳಿಗೆ ಬಂದೂ ಆಯಿತು. ರಾಮಚಂದ್ರನು ಒಮ್ಮೆ ಮಾಹೇಂದ್ರದ ಮೇಲೇರಿ ಉದ್ವೇಗವಾಗಿ ಬೊಬ್ಬಿರಿವ ಕಡಲನ್ನು ದಿಟ್ಟಿಸಿದನು. ಕಪಿಗಳ ಸೈನ್ಯಸಾಗರಕ್ಕೆ ಎದುರಾಳಿಯಂತಿತ್ತು ಈ ಜಲಸಾಗರ ! ಮಾಹೇಂದ್ರದ ಕೆಳಗೆ ವಿಶಾಲವಾದ ದಂಡೆಯಲ್ಲಿ ಕಪಿವೃಂದ ಬೀಡುಬಿಟ್ಟಿತು. ರಾಮಚಂದ್ರನು ಸಮುದ್ರರಾಜನನ್ನು ದಾರಿ ಬಿಟ್ಟುಕೊಡುವಂತೆ ಪ್ರಾರ್ಥಿಸಿ ಕಡಲ ತಡಿಯಲ್ಲೆ ಪವಡಿಸಿದನು. ದರ್ಭವೇ ತಲ್ಪ. ಬಲಗೈಯೇ ದಿಂಬು ! ಶೇಷಶಯನನು ದರ್ಭಶಯನನಾದನು. ವಿಶ್ವೇಶ್ವರನೂ ವಿನಯದ ಮೂರ್ತಿಯಾಗಿ ಸಮುದ್ರವನ್ನು ಯಾಚಿಸಿದನು. ಇತ್ತ ರಾವಣನು ಮಯನನ್ನು ಕರೆಯಿಸಿ ಹೊಸ ಲಂಕೆಯನ್ನೆ ಕಟ್ಟಿಸಿದನು. ಸುಟ್ಟು ಹೋದ ಚಿಹ್ನೆಯೂ ಕಾಣಿಸದಂತೆ ಹೊಸ ನಗರದ ನಿರ್ಮಾಣವಾಯಿತು. ಕೂಡಲೇ ಮಂತ್ರಿಗಳನ್ನು ಕರೆದು ಸಭೆಸೇರಿಸಿ ಮಂತ್ರಾಲೋಚನೆಗೆ ತೊಡಗಿದನು : " ವೀರನಾದ ಹನುಮಂತನ ಪೌರುಷವನ್ನು ನಾವೆಲ್ಲ ಕಂಡಿ- ದ್ದೇವೆ. ರಾಮನ ಕಿಂಕರನೇ ಇಂಥವನಾದರೆ ರಾಮನ ಬಲ- ವೆಂಥದೋ ! ಅವನು ಕಡಲನ್ನು ಬತ್ತಿಸಿಯಾದರೂ ಸ್ತಂಭನ- ಗೊಳಿಸಿಯಾದರೂ ದಾಟಿ ಬಂದಾನು. ಲಂಕೆಗೆ ಸಂಕಟ ಪ್ರಾಪ್ತ- ವಾದಂತೆ ಕಾಣುತ್ತದೆ. ನಿಮ್ಮೆಲ್ಲರ ನೀತಿ ಶಾಸ್ತ್ರದ ಕೌಶಲ್ಯವನ್ನು ತೋರಿಸುವ ಕಾಲ ಈಗ ಸನ್ನಿಹಿತವಾಗಿದೆ." ಆಗ ವಿಭೀಷಣನು ರಾಜಾಸನಕ್ಕೆ ಕೈ ಮುಗಿದು ವಿಜ್ಞಾಪಿಸಿ- ಕೊಂಡನು : " ಲಂಕೆಯು ನಾಶವಾಗದಿರುವುದಕ್ಕಾಗಿ ಸೀತೆಯನ್ನು ರಾಮನಿಗೆ ಒಪ್ಪಿಸಬೇಕು. ಬ್ರಹ್ಮ-ರುದ್ರಾದಿಗಳೂ ಯಾರ ಕಿಂಕರರೋ ಅಂಥ ರಾಮಚಂದ್ರನಿಗೆ ಅವನ ಧರ್ಮಪತ್ನಿಯನ್ನು ಒಪ್ಪಿಸಬೇಕು. ಇದೇ ನನ್ನ ನಮ್ರ ವಿಜ್ಞಾಪನೆ. " ಆಗ ರಾವಣನ ಮಾತು ಗುಡಿಗಿನಂತೆ ಮೊಳಗಿತು : " ಜಗದ ಒಡೆಯನೆಂದರೆ ನಾನು, ವಿಜಯವೆಂದರೆ ನನ್ನದು. ಕಾಡಾಡಿಗಳಿಗೆ ಏನು ಸಾಮರ್ಥ್ಯ? ಎಂಥ ವಿಜಯ ? ಇದು ರಾಜ ಸಭೆ, ಇಲ್ಲಿ ಮಕ್ಕಳಾಟಿಕೆಯ ಮಾತನ್ನಾಡಬಾರದು." ಪ್ರಹಸ್ತ-ಸುಪಾರ್ಶ್ವ ಮೊದಲಾದ ಮಂತ್ರಿಗಳೂ ತಮ್ಮ ಪ್ರಜ್ಞಾ ಬಲಕ್ಕೆ ತೋರಿದಂತೆ ಹೀಗೆ ನಿವೇದಿಸಿಕೊಂಡರು : " ಎಲ್ಲ ಲೋಕಗಳೂ ನಿನ್ನ ಹಿಡಿತದಲ್ಲಿವೆ. ಮಹಾಪ್ರಭು, ಲೋಕಪಾಲಕರೆಲ್ಲಿ ಕರೆಲ್ಲ ನಿನಗೆ ಶರಣಾಗಿದ್ದಾರೆ. ಕಾಡಿನಲ್ಲಿ ಅಲೆವ ಮನುಷ್ಯಮಾತ್ರನಾದ ರಾಮನಿಂದ ನಿನಗೆ ಭಯವೆ ? ಇನ್ನು ಕಪಿಗಳ ಸೇನೆ ಮಾಂಸ ಪ್ರಿಯರಾದ ರಾಕ್ಷಸರಿಗೆ ಒಂದೊಂದು ಕಪಿಯೂ ಆಹಾರ. ಅವು ಗಳಿಂದ ನಮಗೆ ಭಯವಿಲ್ಲ. ಹನುಮಂತ ಜೀವ ಸಹಿತನಾಗಿ ಇಲ್ಲಿಂದ ಮರಳಿದ್ದು ಅವನ ಪುಣ್ಯದ ಫಲ. ನಿನ್ನ ಹುಬ್ಬಿನ ಕುಣಿತಕ್ಕೆ ಮೂರು ಲೋಕವೂ ದಿಗಿಲುಗೊಳ್ಳುತ್ತಿದೆ. ನಿನಗೆ ಯಾರ ಭಯ ? ಸೀತೆಯನ್ನು ಬಲಾತ್ಕರಿಸಿ ಭೋಗಿಸಬಹುದಲ್ಲ ! " ರಾವಣನು ಮುಗುಳುನಗುತ್ತ ಉತ್ತರಿಸಿದನು: "ನೀವನ್ನುವ ಮಾತು ನಿಜ. ಆದರೆ ಇಲ್ಲಿ ಒಂದು ರಹಸ್ಯವಿದೆ. ಹಿಂದೆ ನಾನು ಪುಂಜಕಸ್ಥಲೆಯೆಂಬಾಕೆಯ ಸೌಂದರ್ಯಕ್ಕೆ ಮೋಹಿತನಾಗಿ ಬಲಾತ್ಕರಿಸಿದೆ. ಆಗ ಬ್ರಹ್ಮನು 'ಯಾವಳನ್ನಾದರೂ ಬಲಾತ್ಕರಿಸಿದೆಯಾದರೆ ನಿನ್ನ ತಲೆ ಸಿಡಿದುಹೋಗಲಿ' ಎಂದು ಶಪಿಸಿದನು. ಈ ಶಾಪವೇ ಸೀತೆಯ ಪಾತಿವ್ರತ್ಯವನ್ನು ಕಾಪಾಡು ತ್ತಿದೆ. ಸೀತೆಯನ್ನು ನಾನು ಬಲಾತ್ಕರಿಸಲಾರೆ ! ನನಗೆ ಶಾಪ-ವಾದದ್ದು ಸೀತೆಗೆ ವರವಾಗಿ ನಿಂತಿದೆ ! ನನ್ನ ಬಾಣಗಳ ರುಚಿ ರಾಮನಿಗಿನ್ನೂ ತಿಳಿದಿಲ್ಲ. ಎಂತಲೇ ಅವನ ಆಟೋಪ ನಡೆದಿದೆ. ಕುಂಭಕರ್ಣ-ಇಂದ್ರಜಿತ್ತು ಮೊದ- ಲಾದವರಲ್ಲಿ ಒಬ್ಬೊಬ್ಬನೇ ಸಾಕು. ಶತ್ರುಗಳ ಸಂತಾನವನ್ನು ನಿರ್ಮೂಲ ಮಾಡಲಿಕ್ಕೆ. ನನ್ನ ತೋಳಿನ ತೀಟೆಯನ್ನು ಪರಿ- ಹರಿಸುವ ಶತ್ರುವನ್ನು ವಿಧಿ ಸೃಷ್ಟಿಸಲಾರ. " ರಾವಣನ ಹೊಗಳು ಮಾತುಗಳನ್ನು ಕೇಳಿ ವಿಭೀಷಣನಿಗೆ ನಗು ಬಂತು. ಅಣ್ಣನನ್ನು ಸರಿ ದಾರಿಗೆ ತರಬೇಕು ಎಂದು ಅವನು ಪುನಃ ವಿನಂತಿಸಿಕೊಂಡನು. "ಯುಕ್ತಿ, ಬಲವಿಲ್ಲದೆ ಶಾಸ್ತ್ರದ ಪರಿಜ್ಞಾನವಿಲ್ಲದೆ, ಅನುಭವಿ ಗಳ ಒಡನಾಟವಿಲ್ಲದೆ ಮನಬಂದಂತೆ ಗಳಹುವ ಮೂರ್ಖರಿಗೆ ಮಂತ್ರ ಸಭೆಯಲ್ಲಿ ತಾಣವಿಲ್ಲ. ಮಂತ್ರಿಯಾದವನು ವಿನಯ ಸಂಪನ್ನನಾಗಿರಬೇಕು. ನೈತಿಕ ಬಲವುಳ್ಳವನಾಗಿರಬೇಕು. ಧರ್ಮಾಧರ್ಮಗಳನ್ನು ಬಲ್ಲವನಾಗಿರಬೇಕು. ಪೂರ್ವಾಪರ- ಗಳನ್ನು ತಿಳಿದು ನಿರೂಪಿಸುವ ವಿವೇಕಿಯಾಗಿರಬೇಕು. ರಾಜತಂತ್ರ ಗಳನ್ನರಿಯದ ಗಾಂಪರೊಡನೆ ಮಾಡುವ ಮಂತ್ರಾಲೋಚನ ನಪುಂಸಕನ ರತಿಯಂತೆ ನಿರ್ವೀರ್ಯವಾಗಿದೆ ! ನಿನ್ನ ಮಂತ್ರಿಗಳು ಈ ದೋಷಗಳಿಗೆ ನೆಲೆವನೆ. ಒಂದು ಗುಣವೂ ಅವರಲ್ಲಿ ಕಾಣ- ದಾಗಿದೆ. ಇವರ ಮಂತ್ರಾಲೋಚನೆ ನಿನ್ನನ್ನು ಅನರ್ಥಕ್ಕೆ ಸೆಳೆಯುತ್ತಿದೆ ಎಂದು ನನಗನಿಸುತ್ತಿದೆ. ಸಾಕು ಈ ಷಂಡಪ್ರಣಯ. ಮಹರ್ಷಿ ಪುಲಸ್ತ್ಯರ ವಂಶದಲ್ಲಿ ಹುಟ್ಟಿದವನು ನೀನು. ಶಾಸ್ತ್ರ ತಂತ್ರಗಳನ್ನು ಬಲ್ಲವನು. ಲೋಕನಿಂದಿತವಾದ ವರ್ತನೆ ನಿನಗೆ ತರವಲ್ಲ. ಈ ಹೆಣ್ಣಿನ ಹುಚ್ಚನ್ನು ಬಿಟ್ಟು ಬಿಡು. ನೀನು ಮೂರು ಲೋಕಗಳನ್ನೂ ಗೆದ್ದ ಮಹಾವೀರ ಎಂದುಕೊಳ್ಳುತ್ತಿರುವೆಯಲ್ಲ. ನಿನ್ನನ್ನು ಪೀಡಿಸುತ್ತಿರುವ ಕಾಮದೇವನನ್ನು ನೀನು ನಿಗ್ರಹಿಸ ದಾದೆ. ಎಲ್ಲಿ ತ್ರಿಲೋಕ ವಿಜಯ ! ನಿನ್ನ ವಿಕತ್ಥನಗಳಿಗೆ ಏನು ಬೆಲೆ ಬಂತು ? ಈ ಸ್ತ್ರೀ ಮೋಹವನ್ನು ತೊರೆದುಬಿಡು. ಆಗ ನೀನು ನಿಜಕ್ಕೂ ತ್ರಿಲೋಕ ವಿಜಯಿಯಾಗುವೆ. ಪತಿವ್ರತೆಯಾದ ಹೆಣ್ಣನ್ನು ಕೆಣಕುವುದು ಹುಡುಗಾಟವಲ್ಲ. ಹೂವಿನ ಮಾಲೆಯೆಂದು ಬಗೆದು ಮಲಗಿದ ಹಾವನ್ನು ಕೆಣಕು ತ್ತಿರುವೆ. ಮಹಾರಾಜ, ಕೈಮುಗಿದು ವಿನಂತಿಮಾಡಿಕೊಳ್ಳುತ್ತಿದ್ದೇನೆ. ರಾಮನೊಡನೆ ಜಗಳ ಬೇಡ, ಆ ಕರುಣಾಳುವಿನೊಡನೆ ಕಲಹ ಬೇಡ, ಸೀತೆಯನ್ನು ಅವನಿಗೆ ಒಪ್ಪಿಸಿ ಬಿಡು. ನೀನು ಅಧರ್ಮದ ಹಾದಿಯನ್ನೇ ತುಳಿದೆಯಾದರೆ ಧರ್ಮ ಪ್ರಿಯರಾದ ಬಂಧುಗಳು ನಿನ್ನೊಡನೆ ಬಾಳಲಾರರು. ಕೆಟ್ಟ ಯೋಚನೆ ಮನದಲ್ಲಿ ಸುಳಿಯದಿರಲಿ, ಲಂಕೆಯಲ್ಲಿ ಅಧರ್ಮ ತಾಂಡವವಾಡದಿರಲಿ, ಸೀತೆಯನ್ನು ರಾಮನಿಗೆ ಒಪ್ಪಿಸಿಬಿಡು. ರಾಮನ ಅನುಗ್ರಹದ ಮುಂದೆ ಎಲ್ಲ ಸಂಪತ್ತೂ ಸಣ್ಣದು. ಅವನು ಸಂತುಷ್ಟನಾದರೆ ಎಲ್ಲವೂ ಇದೆ. ಅವನು ಮುನಿದರೆ ಸರ್ವನಾಶ, ಲೋಕನಾಥನಾದ ರಾಮನಿಗೆ ಸೀತೆಯನ್ನು ಒಪ್ಪಿಸಿಬಿಡು. ರಾಮನ ಬಾಣಗಳಿಗೆ ರಕ್ಕಸರು ಬಲಿಯಾಗುವ ಮುನ್ನ, ಲಂಕೆಯ ವೈಭವ ಅಳಿದು ಹೋಗುವ ಮುನ್ನ, ಲಂಕೇಶ್ವರನ ವೈಭವದ ಅಸ್ಥಿಪಂಜರದ ಅಚ್ಚು ಭವಿಷ್ಯದಲ್ಲಿ ಮೂಡುವ ಮುನ್ನ ಸೀತೆಯನ್ನು ರಾಮನಿಗೆ ಒಪ್ಪಿಸಿಬಿಡು. ನಾನು ಹೆದರಿ ಈ ಮಾತನ್ನಾಡುತ್ತಿಲ್ಲ. ಕೃಪಣತೆಗೊ, ಮೋಹಕ್ಕೊ, ಡಾಂಬಿಕತೆಗೊ ಬಲಿಯಾಗಿ ಹೀಗೆ ನುಡಿಯುತ್ತಿಲ್ಲ. ಹಿತವನ್ನು ಯಥಾರ್ಥವನ್ನು ಕೇಳುವ ಇಚ್ಛೆಯಿದ್ದರೆ ನನ್ನ ಮಾತನ್ನು ಆಲಿಸಬೇಕು." ಮೇಘನಾದನಿಗೆ ಈ ಮಾತು ಹಿಡಿಸಲಿಲ್ಲ. ಅವನು ಸಿಡುಕಿ ನಿಂದಲೆ ಎದುರಾಡಿದನು : " ಮಹೇಂದ್ರನನ್ನು ಗೆದ್ದ ನಮಗೆ ಮಾನವನಿಂದ ಭಯ- ವೇನು?" ವಿಭೀಷಣನು ಮತ್ತೆ ಸಮಾಧಾನದ ಮಾತುಗಳನ್ನಾಡಿದನು: " ಇವನಿನ್ನೂ ಹುಡುಗ, ರಾಜತಂತ್ರದ ಅರಿವಿಲ್ಲ. ಲೋಕದ ಪರಿಜ್ಞಾನವಿಲ್ಲ. ರಾಜಕಾರಣದಲ್ಲಿ ಬಾಯಿಹಾಕಿ ಅಧಿಕಪ್ರಸಂಗ- ಕ್ಕೆಳಸುತ್ತಿದ್ದಾನೆ. ಪ್ರಭು ಅವನ ಮಾತನ್ನು ಲಕ್ಷಿಸಬಾರದು. ನಾವೀಗ ರಾಮನಿಗೆ ಶರಣಾಗಬೇಕು. " ರಾವಣನು ಹಿತದ ನುಡಿಗಳನ್ನೊಪ್ಪುವ ಸ್ಥಿತಿಯಲ್ಲಿರಲಿಲ್ಲ. ಅವನ ಅಭಿಪ್ರಾಯವೂ ವಿಭೀಷಣನಿಗೆ ವಿರುದ್ಧವಾಗಿಯೇ ಇತ್ತು : " ನೀನು ಮಿತ್ರರ ಸೋಗಿನಿಂದ ನನಗೆ ಕೇಡನ್ನು ಬಯಸುವ ಶತ್ರು. ಇನ್ನೊಬ್ಬರಾದರೆ ಕೊಂದುಬಿಡುತ್ತಿದ್ದೆ. ನೀನು ನನ್ನ ರಾಜ್ಯದಲ್ಲಿರುವುದು ನನಗೆ ಬೇಕಿಲ್ಲ." " ಏನಿದ್ದರೂ ನೀನು ನನಗೆ ಹಿರಿಯ. ಅದರಿಂದ ನೀನಾಡಿದ ಬಿರುನುಡಿಗಳನ್ನು ಸಹಿಸಿದ್ದೇನೆ. ಕೆಟ್ಟ ಮಾತುಗಳನ್ನು ನುಂಗಿ- ಕೊಂಡಿದ್ದೇನೆ. ನಿನಗೆ ಮಂಗಳವಾಗಲಿ. ನಾನು ಹೊರಟೆ. " ವಿಭೀಷಣ ಸಭೆಯಿಂದ ಹೊರನಡೆದ. ಧಾರ್ಮಿಕರಾದ ನಾಲ್ವರು ಸಚಿವರೂ ಅವನ ಜತೆ ಬಂದರು. ಅವರೊಡನೆ ವಿಭೀಷಣನು ಆಕಾಶ ಮಾರ್ಗದಿಂದ ರಾಮನಿದ್ದೆಡೆಗೆ ಬಂದು ಹೀಗೆ ವಿನಂತಿಸಿಕೊಂಡನು : "ಕಪೀಶ್ವರರೆ ! ನಾನು ರಾವಣನ ತಮ್ಮ ವಿಭೀಷಣ, ರಾಮಭಕ್ತ ಎನ್ನುವ ಕಾರಣದಿಂದ ರಾವಣನಿಂದ ಅವಮಾನಿತನಾಗಿ ಬಂದಿದ್ದೇನೆ. ಕರುಣಾಳುವಾದ ರಾಮಚಂದ್ರನ ಪದತಲದಲ್ಲಿ ಆಸರೆಯನ್ನು ಪಡೆಯಲು ಬಂದಿದ್ದೇನೆ." ಕಲ್ಲು ಕಡಲಲ್ಲಿ ತೇಲಿತು ! ಸುಗ್ರೀವನಿಗೆ ಇನ್ನೂ ಸಂದೇಹ. ವಿಭೀಷಣನೂ ತಮ್ಮನ್ನು ವಂಚಿಸಲು ಬಂದಿರಬೇಕು. ಅವನನ್ನು ಹಾಗೆಯೇ ಹೋಗಗೊಡ ಬಾರದು ಎಂದು ರಾಮನ ಬಳಿ ವಿಜ್ಞಾಪಿಸಿಕೊಂಡನು : "ರಾಮಚಂದ್ರ, ಒಬ್ಬ ರಾಕ್ಷಸ ನಿನಗೆ ಶರಣು ಬಂದಿದ್ದಾನೆ. ಆತ ರಾವಣನ ತಮ್ಮನಂತೆ. ಇದೂ ಮಾಯಾವಿಗಳಾದ ರಾಕ್ಷಸರ ಮಾಯೆಯ ಒಂದು ತೆರ, ಇವನನ್ನು ಕೊಂದುಬಿಡಬೇಕು." ರಾಮಚಂದ್ರನು ಎಲ್ಲ ಕಪಿಗಳನ್ನೂ ಕರೆದು ತಮ್ಮ ಅಭಿಪ್ರಾಯವನ್ನರುಹುವಂತೆ ಹೇಳಿದನು. ಕಪಿಗಳು ವಿನಂತಿಸಿಕೊಂಡರು : "ನಿನಗೆ ನಾವು ಹೇಳುವಂಥದೇನಿದೆ ? ನಿನಗೆ ಅರಿಯದುದೆಂದಿ ದೆಯೆ ? ಆದರೂ ನಾವು ನಮ್ಮ ಅಭಿಪ್ರಾಯಗಳನ್ನರುಹಬೇಕು. ಅದು ನಿನ್ನ ಆಜ್ಞೆ. ಅದನ್ನು ಪಾಲಿಸುವುದು ನಮ್ಮ ಕರ್ತವ್ಯ." ಮೊದಲು ಅಂಗದನು ತನ್ನ ಸಮ್ಮತಿಯನ್ನು ನಿವೇದಿಸಿದನು: "ಸ್ನೇಹದ ಮುಖವಾಡ ಹೊತ್ತು ಬಂದರೂ ಶತ್ರುವಿನ ಕಡೆ ಯಿಂದ ಬಂದವರು ನಂಬಲು ಯೋಗ್ಯರಲ್ಲ. ಅವರು ಸ್ನೇಹ- ದಿಂದಲೇ ಕರುಳು ಕತ್ತರಿಸಿಯಾರು." ಶರಭನದೂ ಇದಕ್ಕೆ ಸಮ್ಮತಿಯಿತ್ತು : "ಅಪರಿಚಿತನ ಗೆಳೆತನ ಅಪಾಯಕಾರಿ, ಪರೀಕ್ಷಿಸದೆ ಅಂಥವ ರಿಗೆ ಸಲುಗೆ ಕೊಡಬಾರದು. ವಿಷದ ಹಣ್ಣಿನಂತೆ ಅಂಥವರ ಸಹವಾಸ ಭಯಾನಕವಾಗಿದೆ." ಜಾಂಬವಂತನೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದನು: "ರಾಕ್ಷಸರನ್ನು ಎಂದಿಗೂ ನಂಬಬಾರದು. ಅವರು ಕಪಟದ ಆಕರವಾಗಿದ್ದಾರೆ. ಪರೀಕ್ಷಿಸದೆ ಯಾರೊಡನೆಯೂ ನಾವು ಸ್ನೇಹ ಯಾಚನೆಯನ್ನು ಮಾಡಬಾರದು." ಮೈಂದನೂ ಕೂಡ ತನ್ನ ಸಂಶಯವನ್ನು ವ್ಯಕ್ತಪಡಿಸಿದನು : " ಅವನ ಮಾತು ರೀತಿ, ಆಕಾರ, ನಡತೆ ಎಲ್ಲವೂ ಸಂಶಯಾ- ಸ್ಪದವಾಗಿದೆ. ಅವನ ಪರೀಕ್ಷೆ ನಡೆದು ತಕ್ಕ ಚಿಕಿತ್ಸೆ ಮಾಡಬೇಕು. ರೋಗದಂತೆ ಶತ್ರುಗಳು ಒಡನಾಡಿಗಳಾಗಿ ಬೆಳೆದು ಕೊರಳು ಹಿಚುಕುವಂತಾಗಬಾರದು. " ನೀಲ-ತಾರ ಮೊದಲಾದವರೆಲ್ಲರೂ ವಿಭೀಷಣನನ್ನು ನಿಂದಿಸುವವರೆ. ಆಗ ನೀತಿ ಮತ್ತು ಪ್ರತಿಭೆಯಿಂದ ಸಮಯೋಚಿತ ವಾದ ಮಾತನ್ನಾಡಿದವನು ಹನುಮಂತನೊಬ್ಬನೆ : " ರಾಕ್ಷಸರ ಕಡೆಯಿಂದ ಬಂದವನು ಎನ್ನುವುದರಿಂದ ವಿಭೀಷಣನನ್ನು ತೊರೆವುದಕ್ಕೆ ಅರ್ಥವಿಲ್ಲ. ಹಾವಿನ ಹೆಡೆಯಲ್ಲಿ ದ್ದರೂ ಮಣಿ ನಮಗೆ ಗ್ರಾಹ್ಯವಾಗಿದೆ. ವಿಭೀಷಣನ ಪ್ರೀತಿಗೆ ನಾವು ದ್ರೋಹಮಾಡಬಾರದು. ಸಾರವತ್ತಾದ ವಸ್ತುವನ್ನು ನಾವು ಆಯ್ದುಕೊಳ್ಳುವಾಗ ಅಲ್ಲಿ ಪರಿಚಯ, ಪರೀಕ್ಷೆಗಳ ಆವಶ್ಯಕತೆಯಿಲ್ಲ. ಜೇನನ್ನು ಹೀರುವ ಪರಮೆಗೆ ಹೂವು ಯಾವುದಾದರೇನು ? ಸ್ವಾಭಾವಿಕ ಒಲವಿನಿಂದ ಬಂದವರನ್ನು ಪರೀಕ್ಷೆಗೆ ಒಳಪಡಿಸುವುದೂ ತರವಲ್ಲ. ಹೆಚ್ಚು ಶೋಧಿಸ ಹೊರಟರೆ ತಿಳಿನೀರಿನ ಕೊಳಕೂಡ ಕದಡುವುದಿಲ್ಲವೆ ? ರಾಮಭದ್ರ ! ನೀತಿಯ ಮರ್ಮವನ್ನರಿಯದ ಈ ಸಚಿವರ ಮಾತನ್ನು ನಾನು ಮೆಚ್ಚಲಾರೆ. ವಿಭೀಷಣ ಸರಳಸ್ವಭಾವದನು. ಅಣ್ಣನಿಂದ ನಿರ್ವಾಸಿತನಾಗಿ ನಿನಗೆ ಶರಣು ಬಂದಿದ್ದಾನೆ. ಧಾರ್ಮಿಕನಾದ ವಿಭೀಷಣನಿಗೆ ನಿನ್ನ ಪದತಲದ ಶರಣ ದೊರೆಯಬೇಕು. ನಿನ್ನ ಕರುಣಾದೃಷ್ಟಿಯ ಕಾಪು ದೊರೆಯಬೇಕು. ರಾಕ್ಷಸರ ಅವಸಾನವನ್ನು ಊಹಿಸಿಯೇ ಅವನು ನಿನ್ನ ಬಳಿ ಬಂದಿದ್ದಾನೆ. ಅವನ ಅಣ್ಣನೇ ಅವನ ಶತ್ರುವಾಗಿದ್ದಾನೆ. ವಾಲಿ-ಸುಗ್ರೀವರ ಇತಿಹಾಸದ ಪುನರಾವೃತ್ತಿಯಾಗಿದೆ. ವಾಲಿಯನ್ನು ಸಂಹರಿಸಿ ಸುಗ್ರೀವನಿಗೆ ರಾಜ್ಯವನ್ನು ಕರುಣಿಸಿ ಉದ್ಧರಿಸಿದ ಪ್ರಭುವಲ್ಲವೆ ನೀನು ? ಹಾಗೆಯೇ ಪ್ರಕೃತದಲ್ಲಿಯೂ ರಾವಣನನ್ನು ಸಂಹರಿಸಿ ವಿಭೀಷಣನಿಗೆ ಲಂಕಾಸಾಮ್ರಾಜ್ಯವನ್ನು ಕರುಣಿಸ- ಬೇಕು. ಇದು ನನ್ನ ಅಭಿಪ್ರಾಯ. ರಾಮನು ಸಂತಸದಿಂದ ಮಾರುತಿಯನ್ನು ಕೊಂಡಾಡಿದನು: "ನನ್ನ ಮನಸ್ಸಿನಲ್ಲಿದ್ದುದನ್ನೆ ಹನುಮಂತ ನುಡಿದಿದ್ದಾನೆ. ಹನುಮನ ಮತವೆ ನನ್ನ ಮತ. ಶತ್ರುವಾಗಲಿ, ಮಿತ್ರನಾಗಲಿ, ಶರಣು ಬಂದವರನ್ನು ಪಾಲಿಸುವುದು ನನ್ನ ಕರ್ತವ್ಯ. ಇದು ರಾಕ್ಷಸರ ಕಪಟವೇ ಇದ್ದರೂ ಭಯಪಡುವುದೇಕೆ ? ಇವನಿರಲಿ, ಪ್ರಪಂಚದ ರಾಕ್ಷಸ ಸಂತಾನವೇ ಒಟ್ಟಾದರೂ ನನ್ನ ಒಂದು ಬೆರಳನ್ನು ನಲುಗಿಸಲಾರದು. ವಿಭೀಷಣನ ಮಟ್ಟಿಗೆ ಈ ಶಂಕೆಯೂ ತರವಲ್ಲ, ಅವನ ಹೃದಯ ನಿರ್ಮಲವಾಗಿದೆ; ಅವನು ನನ್ನನ್ನು ಭಕ್ತಿಯಿಂದ ಕಾಣುತ್ತಿದ್ದಾನೆ ಎಂದು ನಾನು ಬಲ್ಲೆ." ಹೀಗೆ ಕಪಿಗಳನ್ನು ಸಂತೈಸಿ, ವಿಭೀಷಣನನ್ನು ಬಳಿಗೆ ಬರ ಮಾಡಿಸಿದನು. ಆಯುಧಗಳನ್ನೆಲ್ಲ ದೂರದಲ್ಲಿಟ್ಟು ವಿಭೀಷಣನು ಶಾಂತರೂಪನಾಗಿ ಬಂದು ರಾಮಪಾದಗಳಿಗೆ ಎರಗಿದನು. ರಾಮಚಂದ್ರನ ಆಶೀರ್ವಾದದಲ್ಲಿ ಭವಿಷ್ಯದ ಭರವಸೆ ತುಂಬಿತ್ತು : "ದೇವದ್ರೋಹಿಯಾದ ರಾವಣನ ಇತಿಹಾಸ ಸದ್ಯದಲ್ಲಿ ಕೊನೆಗೊಳ್ಳಲಿದೆ. ಆಗ ರಾಕ್ಷಸರ ಸಮೃದ್ಧವಾದ ಸಾಮ್ರಾಜ್ಯ ನಿನ್ನದಾಗುವುದು." ವಿಭೀಷಣನೂ ನಮ್ರನಾಗಿ ವಿನಂತಿಸಿಕೊಂಡನು : "ರಾಮಭದ್ರ, ದೇವದುರ್ಲಭವಾದ ನಿನ್ನ ದಾಸ್ಯವೇ ದೊರಕಿದ ಮೇಲೆ ಇನ್ನೇನು ಬೇಕು ನನಗೆ ? ಕೈವಲ್ಯದ ದಾರಿಯನ್ನು ನಾನು ಕಂಡಿದ್ದೇನೆ. ನಾನು ಭಾಗ್ಯಶಾಲಿ, ನಿನ್ನ ಪಾದಸೇವಕನಾಗಿ ನಿನ್ನ ಸೈನ್ಯದ ಒಬ್ಬ ನಮ್ರ ಸೈನಿಕನಾಗಿ ನಾನೂ ರಾಕ್ಷಸರೊಡನೆ ಹೋರಾಡಬಯಸುತ್ತೇನೆ." ಜಾಂಬವಂತನು ಪುಣ್ಯ ಸಲಿಲಗಳನ್ನು ತಂದನು. ರಾಮ- ಚಂದ್ರನ ಕೈಯಿಂದಲೆ ವಿಭೀಷಣನಿಗೆ ಅಭಿಷೇಕ ನಡೆಯಿತು; 'ಲಂಕಾಧಿಪತಿ ವಿಭೀಷಣನಿಗೆ ಜಯವಾಗಲಿ' ಎಂದರು ಕಪಿಗಳು. ಸುಗ್ರೀವನೂ ವಿಭೀಷಣನೂ ಜತೆಯಾಗಿ ಯೋಚಿಸಿ ಸಮುದ್ರಕ್ಕೆ ಸೇತುವನ್ನು ಬಂಧಿಸುವುದೇ ಸರಿ ಎಂದು ತೀರ್ಮಾನಿಸಿದರು. ಇತ್ತ ಶಾರ್ದೂಲನೆಂಬ ರಾವಣನ ದೂತ ಈ ಕಪಿ ಸೇನೆಯನ್ನು ಕಂಡು ರಾವಣನಿಗೆ ವರದಿಯೊಪ್ಪಿಸಿದನು. ರಾಕ್ಷಸೇಂದ್ರನು ಕ್ಷಣಕಾಲ ಚಿಂತಿಸಿ ನಿಟ್ಟುಸಿರೊಂದನ್ನೆಳೆದು ಶುಕನೆಂಬ ರಾಕ್ಷಸ ನನ್ನು ಕರೆದು ಸುಗ್ರೀವನೆಡೆಗೆ ದೌತ್ಯಕ್ಕಾಗಿ ಕಳಿಸಿಕೊಟ್ಟನು. ಶುಕನು ಹೆಸರಿಗೆ ತಕ್ಕಂತೆ ಗಿಳಿಯ ರೂಪವನ್ನು ಧರಿಸಿ ಸಾಗರ ವನ್ನು ದಾಟಿ ಆಕಾಶದಲ್ಲಿ ಸುಗ್ರೀವನನ್ನು ಕರೆದು ನುಡಿದನು : " ಕಪಿರಾಜ, ನಾನು ರಾವಣನ ದೂತನಾಗಿ ಬಂದಿದ್ದೇನೆ. ನಮ್ಮ ಮಹಾರಾಜ ರಾಮನ ಪತ್ನಿಯನ್ನು ಅಪಹರಿಸಿದ್ದಾನೆ. ಅದು ಅವನ ಅಪಾರ ಬಂಧುಗಳನ್ನು ಸಂಹಾರಮಾಡಿದ್ದರ ಪ್ರತೀಕಾರಕ್ಕಾಗಿ, ಶೂರ್ಪಣಖೆಯ ಮೂಗನ್ನು ಕತ್ತರಿಸಿದವರ ದರ್ಪವನ್ನು ದಮಿಸು ವುದಕ್ಕಾಗಿ. ನೀನು ನಮ್ಮ ಮಹಾರಾಜನಿಗೆ ಸೋದರನಂತಿರುವೆ. ನಿನಗೂ ನಮಗೂ ವಿರೋಧವೇನೂ ಇಲ್ಲ. ಅಲ್ಲದೆ, ದೇವದಾನವ ರಿಗೆಲ್ಲ ಅಗಮ್ಯವಾದ ಲಂಕೆಗೆ ಕಪಿಗಳು ನುಸುಳುವುದುಂಟೆ ? ಅದರಿಂದ ನೀನು ಈ ಯುದ್ಧದಲ್ಲಿ ಕೈ ಹಾಕಬಾರದು. ಇದು ರಾಮನಿಗೂ ರಾವಣನಿಗೂ ಸಂಬಂಧಪಟ್ಟದ್ದು. ನೀನು ಹಾಯಾಗಿ ಕಿಷ್ಕಿಂಧೆಗೆ ಮರಳಬೇಕು. " ಅಂಗದಾದಿಗಳಿಗೆ ಈ ಮಾತು ಸಹಿಸದಾಯಿತು. ಅವರು ಬಾನಿಗೆ ನೆಗೆದು ಅವನ ಗರಿಗಳನ್ನು ಮುರಿದು ಕೆಳಗೆ ಕೆಡವಿದರು. ಭೂಮಿ ಯಲ್ಲಿ ಬಿದ್ದು ಹೊರಳುವುದು ಬೇರೆ, ಬಲವಂತರಾದ ಕಪಿಗಳ ಮುಷ್ಟಿ ಪ್ರಹಾರ ಬೇರೆ. ಶುಕನಿಂದ ಇದು ತಡೆಯಲಾಗಲಿಲ್ಲ. ಅವನು ರಾಮಚಂದ್ರನನ್ನು ಕೂಗಿ ಬೇಡಿಕೊಂಡನು : "ರಾಜಧರ್ಮವನ್ನು ಬಲ್ಲ ರಾಮಚಂದ್ರನೆ ! ನಿನ್ನ ಕಪಿಗಳು ನನ್ನನ್ನು ಕೊಲ್ಲುತ್ತಿದ್ದಾರೆ. ರಾವಣ ದೂತನಾದ ನನ್ನನ್ನು ಕಾಪಾಡು." "ಇವನು ಚಾರನಲ್ಲ- ಚೋರ" ಎಂದು ಅಂಗದನು ಗದರಿಸಿದನು. " ಛೇ, ಛೇ, ರಾವಣನ ದೂತನನ್ನು ಕೊಲ್ಲಬೇಡಿ " ಎಂದು ರಾಮನು ಮುಗುಳುನಕ್ಕನು. ಸುಗ್ರೀವನ ಪ್ರತಿಸಂದೇಶ ಮಾರ್ಮಿಕವಾಗಿತ್ತು: "ರಾಮನ ಶತ್ರು ನನಗೂ ಶತ್ರು, ರಾವಣನನ್ನು ಯಮಪುರಿಗೆ ಕಳಿಸುವುದು ಸುಗ್ರೀವನಿಗೂ ಪ್ರಿಯವಾಗಿದೆ ಎಂದು ನಿನ್ನ ರಾವಣನ ಬಳಿ ಹೇಳು." ಹುಲ್ಲುಗರಿಯ ಮೇಲೆ ಮಲಗಿ ಮೂರು ದಿನ ಕಾದದ್ದಾಯಿತು. ಸಾಗರ ದಾರಿ ಕೊಡುವ ಯೋಚನೆ ಕಂಡುಬರಲಿಲ್ಲ ! ಜನ ಶಾಂತಿಯನ್ನು ದೌರ್ಬಲ್ಯದ ಕುರುಹು ಎಂದು ತಿಳಿದು ಬಿಡುತ್ತಾರೆ.ಅದು ದೊಡ್ಡ ತಪ್ಪು. ನೀಚರಿಗೆ ಸಹನೆಗಿಂತಲೂ ದಂಡನೆಯೇ ರುಚಿಯಾಗಿರುತ್ತದೆ. ಶಾಂತಿಯ ಸಂದೇಶಕ್ಕಿಂತಲೂ ಯುದ್ಧದ ಕರೆಯೇ ಪ್ರಿಯವಾಗಿರುತ್ತದೆ. ಪ್ರಪಂಚದ ಈ ಮಹಾ ಪ್ರಮಾದದಿಂದ ಯುದ್ಧದ ಕಿಡಿ ಸಿಡಿಯುವುದುಂಟು. ಸಮುದ್ರರಾಜನೂ ರಾಮಚಂದ್ರನ ಸಲಹೆಯನ್ನು ತಪ್ಪು ತಿಳಿದುಕೊಂಡಿರಬೇಕು. ಭಕ್ತನ ಪ್ರಮಾದ ಭಗವಂತನಿಗೆ ಸಹನೆ ಯಾಗಲಿಲ್ಲ. ರಾಮಚಂದ್ರನ ಕೈ ಬಿಲ್ಲಿನೆಡೆಗೆ ಹರಿಯಿತು. ಭಗವಂತನ ಕೋಪಜ್ವಾಲೆ ಕಡಲಿನ ಒಡಲನ್ನು ಬೇಯಿಸಿತು ! 'ಕಡಲು ಬತ್ತಿದರೆ ಬಾಳು ಬರಡಾಗುತ್ತದೆ. ಲೋಕ ಬರಡಾ- ಗುತ್ತದೆ. ತಾಳ್ಮೆಯಿರಲಿ' ಎಂದು ದೇವತೆಗಳೂ ಮುನಿಗಳೂ ಪ್ರಾರ್ಥಿಸಿಕೊಂಡರು. " ನೀನು ಕೋಪಿಸಿದರೆ ಜಗತ್ತಿಗೆ ವಿಪತ್ತು. ಪ್ರಸನ್ನನಾದರೆ ಪರಮ ಸಂಪತ್ತು, ಶಾಂತನಾಗು" ಎಂದು ಲಕ್ಷ್ಮಣನು ರಾಮನ ಬಿಲ್ಲಿಗೇ ಜೋತುಬಿದ್ದು ಬೇಡಿಕೊಂಡನು. ಕಡಲು ತಳಮಳಿಸಿತು. ನೀರಿನ ಜಂತುಗಳು ಕುದಿವ ನೀರಿಗೆ ಬಿದ್ದಂತೆ ವಿಲಿವಿಲಿ ಒದ್ದಾಡಿದವು. ಸಮುದ್ರರಾಜ ಉಡುಗರೆ ಯನ್ನು ಹೊತ್ತು ಮೈವೆತ್ತು ನಡೆದು ಬಂದನು. ಮಡದಿಯರಾದ ಗಂಗಾದಿ ನದಿಗಳೂ ಜತೆಗಿದ್ದರು. ಎಲ್ಲರೂ ರಾಮನ ಚರಣಗಳಿಗೆ ಎರಗಿದರು. ಭೀತನಾದ ವರುಣ ಅಪರಾಧಿಗಳಂತೆ ವಿಜ್ಞಾಪಿಸಿ ಕೊಂಡನು: "ನನ್ನ ಬರಡು ಬುದ್ಧಿಗೆ ನಿನ್ನ ಮಹಿಮೆಯ ಅರಿವಾಗಲಿಲ್ಲ. ಜಗತ್ತಿನ ಹುಟ್ಟು ಸಾವುಗಳು ನಿನ್ನ ಹುಬ್ಬಿನ ಕುಣಿತದಿಂದ ನಡೆ- ಯುತ್ತಿವೆ ಎಂದು ತಿಳಿಯದೆ ದಾರಿತಪ್ಪಿ ನಡೆದೆ. ಕ್ಷಮೆಯಿರಲಿ. ಈ ಜಲರಾಶಿಯ ಮೇಲೆ ಸೇತುವೆಯನ್ನು ರಚಿಸು. ರಾವಣ- ನನ್ನುಸಂಹರಿಸಿ ಸೀತೆಯನ್ನು ಪಡೆ, ನನ್ನನ್ನು ಕುಡಿದು ತೇಗಿದ ಅಗಸ್ಯರು ಹಿಂದೆ ಹೇಳಿದ್ದರು. ನಲನೆಂಬ ಕಪಿ ಹಾಕಿದ ಕಲ್ಲು- ಗಳನ್ನು ನೀನು ಕಬಳಿಸಬೇಡ' ಎಂದು. ಅದರಿಂದ ನಲನು ಈ ಸೇತು ಕಾರ್ಯವನ್ನು ಮಾಡಲಿ. ಅವನಿಗೆ ಅಗಸ್ತರ ವರದ ಕಾಪು ಇದೆ. ಅವನು ಎಸೆದ ಕಲ್ಲುಗಳು ನೀರಿನಲ್ಲಿ ತೇಲಬಲ್ಲವು. ನಾನು ಮೂರುದಿನಗಳವರೆಗೆ ನನ್ನ ಪ್ರಭುವನ್ನು ಕಾಯಿಸಿ ಅಪರಾಧ ಮಾಡಿದ್ದೇನೆ, ಕ್ಷಮಿಸಬೇಕು. ನಿನ್ನ ಅಮೋಘವಾದ ಬಾಣವನ್ನು ಎಸೆಯುವ ತಾಣವನ್ನು ನಾನು ನಿವೇದಿಸ ಬಯಸು ತ್ತೇನೆ. ನನ್ನ ಮಧ್ಯಭಾಗದಲ್ಲಿ ದುಕೂಲವೆಂಬ ಮರುಭೂಮಿ ಯಿದೆ. ಅಲ್ಲಿ ಕೆಲವು ಅಸುರರು ವಾಸಿಸುತ್ತಿದ್ದಾರೆ. ಅವರು ನಿನ್ನ ಬಾಣಕ್ಕೆ ಆಹಾರವಾಗಬೇಕು. ಆಗ ಸಜ್ಜನರು ಸಂತಸಗೊಳ್ಳುತ್ತಾರೆ" ಸಮುದ್ರರಾಜನ ವಚನದಂತೆ ದುಕೂಲಕ್ಕೆಸೆದ ರಾಮನ ಬಾಣ ಅಸುರ ಸಂತಾನವನ್ನು ನಿರ್ಮೂಲಿಸಿತು. ಭಗವಂತನ ಬಾಣ ಮರುಭೂಮಿಯನ್ನು ಚಿಗುರಿಸಿತು. ಆ ತಾಣ ಹೂ-ಹಣ್ಣುಗಳಿಂದ ತುಂಬಿ ನಿಂತಿತು. ಅಂದಿನಿಂದ ಜನ ಅದನ್ನು ಮರುಕಾಂತಾರ ಎಂದು ಕರೆದರು. ಅನಂತರ ವಿಶ್ವಕರ್ಮನ ಮಗನಾದ ನಲ ಸೇತುನಿರ್ಮಾಣಕ್ಕೆ ತೊಡಗಿದನು. ಕಪಿಗಳು ದಿಸೆ ದಿಸೆಗಳಿಂದ ಪರ್ವತಗಳನ್ನೂ ಬಂಡೆಕಲ್ಲುಗಳನ್ನೂ ಮರಗಳನ್ನೂ ಹೊತ್ತು ತಂದರು. ಕೆಲವರು ಹಗ್ಗ ಹಿಡಿದು ಅಳೆದರು. ಕೆಲವರು ಕಲ್ಲು-ಮರಗಳಿಂದ ಸಾಗರ ವನ್ನು ತುಂಬಿದರು. ಅಂತೂ ನಲನ ಮೇಲ್ವಿಚಾರಣೆಯಲ್ಲಿ ಸೇತುಕಾರ್ಯ ಮುಂದುವರೆಯಿತು. ಅಂಗದನು ಕೈಲಾಸದ ಒಂದು ಭಾಗವನ್ನೇ ಕಿತ್ತು ತಂದನು. ಮೈಂದ ಹಿಮವಂತನ ಒಂದು ಶಿಖರವನ್ನೆ ತಂದನು. ಹನುಮಂತ ನು ಮೇರುವಿನ ಒಂದು ಉಪ ಪರ್ವತವನ್ನು ಹೊತ್ತು ತಂದನು. ಜಾಂಬವಂತನು ಮಾಹೇಂದ್ರದ ಶಿಖರವೊಂದನ್ನು ತಂದನು. ಕಪಿಗಳು ಹೋದಲ್ಲೆಲ್ಲ ಪರ್ವತ ದೇವತೆಗಳು ಸಂತಸದಿಂದ ಪರ್ವತ ಭಾಗವನ್ನು ಅವರಿಗೆ ಒಪ್ಪಿಸುತ್ತಿದ್ದರು. ಭಗವತೇವೆಯಲ್ಲಿ ಪಾಲುಗಾರರಾಗಲು ಎಲ್ಲರಿಗೂ ಆತುರ. ರಾಮದಾಸರಾದ ಕಪಿಗಳ ಈ ಅದ್ಭುತವನ್ನು ನೋಡಲು ಮುಗಿಲಲ್ಲಿ ದೇವತೆಗಳು ಮುತ್ತಿದರು. ಎಲ್ಲಿ ನೋಡಿದರೂ ಕಪಿಗಳದೇ ಕೋಲಾಹಲ, ಕೆಲವರು ಪರ್ವತಗಳನ್ನು ತರಲು ಹಾರುತ್ತಿದ್ದಾರೆ. ಇನ್ನು ಕೆಲವರು ಹೊತ್ತು ತರುತ್ತಿದ್ದಾರೆ. ಮತ್ತೆ ಕೆಲವರು ಸಾಗರದಲ್ಲಿ ಸೇತುವನ್ನು ರಚಿಸುತ್ತಿದ್ದಾರೆ. ನೆಲ- ಮುಗಿಲುಗಳಲ್ಲಿ- ನೀರಿನಲ್ಲಿ ಎಲ್ಲಿ ನೋಡಿದರಲ್ಲಿ ಕಪಿಗಳು, ಅವರ ವೇಗಹುಮ್ಮಸ್ಸು ಹೇಳತೀರದು. ಹೀಗೆ ನಿರಂತರ ಕೆಲಸ ನಡೆಯಿತು. ಐದೇ ದಿನಗಳಲ್ಲಿ ಹತ್ತು ಯೋಜನ ಅಗಲದ, ನೂರು ಯೋಜನ ದೂರದ ಸೇತುವೆ ನಿರ್ಮಾಣವಾಗಿ ಹೋಯಿತು ! ಈ ತೇಲುವ ಕಲ್ಲಿನಮೇಲೆ ಕಪಿಗಳು ನಡೆಯತೊಡಗಿದರು. ಸೇನೆಯಮುಂದೆ ಗದಾಪಾಣಿಯಾದ ವಿಭೀಷಣ ಮತ್ತು ಅವನ ಸಚಿವರು ನಡೆದರು. ಹನುಮಂತನು ರಾಮಚಂದ್ರನನ್ನು ಹೊತ್ತು ಕೊಂಡನು. ಲಕ್ಷ್ಮಣನು ಅಂಗದನ ಹೆಗಲೇರಿದನು. ಸುಗ್ರೀವನೂ ಅವರ ಜತೆಯಾದನು. ಹಿಂದೆ ಕಪಿಗಳ ಅಪಾರ ಸೇನೆ, ಕಪಿಗಳಿಗೆ ಉತ್ಸಾಹದ ಭರದಲ್ಲಿ ನೂರುಯೋಜನ ನಡೆದು ಬಂದುದೇ ತಿಳಿಯಲಿಲ್ಲ. ಎದುರುಗಡೆ ಲಂಕೆಯ ಸುವೇಲಾದ್ರಿ ಕಾಣಿಸಿಕೊಂಡಿತು. ಕಪಿಗಳನ್ನೆಲ್ಲ ಅಲ್ಲಿ ವಿಶ್ರಮಿಸುವಂತೆ ಹೇಳಿ ರಾಮಚಂದ್ರನು ಲಕ್ಷ್ಮಣನೊಡನೆ ಬೆಟ್ಟವನ್ನೇರಿ ಲಂಕೆಯನ್ನು ದಿಟ್ಟಿಸಿದನು. ಪ್ರಭುವಿನ ಕಣ್ಣು ಲಂಕೆಯ ವೈಭವವನ್ನು ಪರಿಕಿಸುತ್ತಿತ್ತು. ಕೈ ಬಾಣವನ್ನು ಹುಡುಕುತ್ತಿತ್ತು. ತೋಳು ಹನುಮಂತನ ಹೆಗಲ ಮೇಲೆ ಪವಡಿಸಿತ್ತು. ರಾಮನಿಂದ ಪಾರಾಗುವಂತಿಲ್ಲ ಸೇನಾವ್ಯೂಹದ ರಚನೆಯನ್ನು ಮುಗಿಸಿದ ಮೇಲೆ ಕಪಿಗಳ ಕೈಯಲ್ಲಿ ಸಿಕ್ಕುಬಿದ್ದಿದ್ದ ಶುಕನನ್ನೆ ರಾವಣನೆಡೆಗೆ ದೂತನಾಗಿ ಕಳಿಸಲಾಯಿತು. ಶುಕನು ಕಪಿಗಳ ಕೈಯಿಂದ ಹೇಗೊ ಪಾರಾಗಿ ರಾವಣನ ಬಳಿ ವರದಿಯನ್ನೊಪ್ಪಿಸಿದನು. ರಾವಣನು ಪುನಃ ಶುಕ-ಸಾರಣರನ್ನು ರಾಮ ಸೈನ್ಯದ ಸಂಖ್ಯೆಯನ್ನು ತಿಳಿದು ಬರುವುದಕ್ಕಾಗಿ ಕಳಿಸಿದನು. ಅವರು ಕಪಿಗಳಂತೆಯ ರೂಪವನ್ನು ಧರಿಸಿ ಕಪಿಸೇನೆಯೊಡನೆ ಸೇರಿ ಕೊಂಡು ಕಪಿಗಳನ್ನು ಲೆಕ್ಕಿಸತೊಡಗಿದರು. ಕೆಲವರು ಲಂಕೆಯ ತಡಿಗೆ ಬಂದಿದ್ದರೆ, ಇನ್ನು ಕೆಲವರು ಸೇತುಮಾರ್ಗವಾಗಿ ಬರುತ್ತಿದ್ದಾರಷ್ಟೇ ? ಮತ್ತೆ ಕೆಲವರು ಸಮುದ್ರದ ಆಚೆಯ ತಡಿಯಲ್ಲಿ ಇದ್ದಾರೆ. ಅಷ್ಟು ಅಪಾರವಾಗಿದೆ ಕಪಿಗಳ ಸೈನ್ಯ. ಶುಕ-ಸಾರಣರು ಬಹು ಜಾಗರೂಕತೆಯಿಂದ ಎಣಿಸಲಾರಂಭಿಸಿದರು. ಹೇಗೋ ವಿಭೀಷಣನಿಗೆ ಈ ಕಪಟ ತಿಳಿದುಹೋಯಿತು. ಅವನು ' ' ಇದು ರಾಕ್ಷಸರ ಮಾಯೆ ' ಎಂದು ತಿಳಿಸಿಬಿಟ್ಟನು. ಕೂಡಲೆ ಕಪಿಗಳೆಲ್ಲ ಸೇರಿ ಶುಕ-ಸಾರಣರನ್ನು ಅರ್ಧಜೀವಮಾಡಿಬಿಟ್ಟರು. ಶುಕ-ಸಾರಣರು ರಾಮನಿಗೆ ಮೊರೆಹೊಕ್ಕರು : " ಧಾರ್ಮಿಕನಾದ ರಾಮಚಂದ್ರನೆ, ನಾವು ರಾವಣನ ದೂತರು ನಿಜ. ನಿನ್ನ ಸೇನಾಬಲವನ್ನು ಪರೀಕ್ಷಿಸಲು ಬಂದದ್ದೂ ನಿಜ. ಇದೋ ಕೈಮುಗಿದು ಬೇಡಿಕೊಳ್ಳುತ್ತಿದ್ದೇವೆ ನಮಗೆ ಪ್ರಾಣಭಿಕ್ಷೆ- ಯನ್ನು ನೀಡು." ರಾಮಚಂದ್ರನು ಮುಗುಳುನಗುತ್ತ ಪರಿಹಾಸಮಾಡಿದನು : " ನಿರಾಯುಧರಾದ ನಿಮ್ಮನ್ನು ರಾಮನ ಸೇನೆ ಏನೂ ಮಾಡ- ಲಾರದು. ಭಯಪಡಬೇಡಿ. ನೀವು ಬಂದ ಕೆಲಸ ತೀರಿತೆ ! ಸೇನಾ ಬಲವನ್ನು ಪರಿಕಿಸಿಯಾಯಿತೆ ! ಹಾಗಿದ್ದರೆ ನಿರ್ಭಯವಾಗಿ ನಿಮ್ಮ ರಾಜನ ಬಳಿಗೆ ಹೋಗಬಹುದು. ಇನ್ನೂ ಎಣಿಸುವುದು ಬಾಕಿಯಿದ್ದರೆ ನಿಮ್ಮ ಕೆಲಸವನ್ನು ನೀವು ಪೂರೈಸಿಕೊಳ್ಳಬಹುದು. ಬೇಕಾದರೆ ವಿಭೀಷಣನೂ ನಿಮ್ಮ ಸಹಾಯಕ್ಕೆ ಬರುತ್ತಾನೆ. ಧಾರಾಳವಾಗಿ ರಾಮನ ಸೇನೆಯನ್ನು ಪರಿಕಿಸಿ ರಾವಣನಿಗೆ ವರದಿ ಮುಟ್ಟಿಸಿರಿ. ಸಂತೋಷ . " ನಿಮ್ಮ ರಾಜನ ಹೃದಯ ಅನಂಗ ಬಾಣ ಪೀಡಿತವಾಗಿದೆ- ಯಲ್ಲ. ನಮ್ಮ ಬಾಣ ಕೂಡ ಸದ್ಯದಲ್ಲಿ ಅದನ್ನು ಪೀಡಿಸಲಿದೆ. ಈ ಮಾತನ್ನೂ ನಿಮ್ಮ ರಾಜನಿಗೆ ತಿಳಿಸಿಬಿಡಿ. " ಸುಗ್ರೀವನೂ ಸಿಟ್ಟಿನಿಂದ ಗದರಿದನು: " ನೀವಿಬ್ಬರೂ ಈ ಮಾತನ್ನು ಕೂಡ ರಾವಣನ ಬಳಿ ಹೇಳಬೇಕು. ರಾಮನೆಂಬ ಬೆಂಕಿಯಲ್ಲಿ ರಾವಣನೆಂಬ ಪಶುವಿನ ಹೋಮ ನಡೆಯಲಿದೆ. ರಣರಂಗದಲ್ಲಿ ನಡೆವ ಈ ಮಹಾಯಾಗದ ಋತ್ವಿಕ್ಕುಗಳು ಕಿಷ್ಕಿಂಧೆಯ ಕಪಿಗಳು ಎಂದು ತಿಳಿಸಿಬಿಡಿ." ಅಲ್ಲಿಂದ ಒಂದೇ ಉಸಿರಿಗೆ ಓಡಿಬಂದ ಶುಕ-ಸಾರಣರು ಅರಮನೆಯ ಅಟ್ಟದಲ್ಲಿ ಠೀವಿಯಿಂದ ಕುಳಿತಿರುವ ರಾವಣನಿಗೆ ಈ ವಾರ್ತೆಯನ್ನು ಮುಟ್ಟಿಸಿದರು : " ಮಹಾರಾಜ, ಸುವೇಲಾದ್ರಿಯಿಂದ ಲಂಕೆಯ ಕಡೆಗೆ ಸರಿಯುತ್ತಿರುವ ರಾಮನಸೇನೆ ಅಪಾರವಾಗಿದೆ. ನೀಲ, ಅಂಗದ, ನಲ, ಶ್ವೇತ, ಕುಮುದ, ಪನಸ, ಶರಭ, ರಂಭ ಈ ಒಬ್ಬೊಬ್ಬರೂ ಭಾರಿ ಬಲವುಳ್ಳವರು. ಇಂಥವರು ಒಬ್ಬಿಬ್ಬರಲ್ಲ, ನೂರಾರು, ಸಾವಿರಾರು, ಲಕ್ಷ, ಕೋಟಿಗಟ್ಟಲೆ ಕಪಿಗಳಿದ್ದಾರೆ. ತಾರ, ಧೂಮ್ರ, ಜಾಂಬವಂತ, ವಿನತ, ಕತ್ಥನ, ಕೇಸರಿ, ಶತಬಲಿ, ಪ್ರಮಾಥಿ, ಗಜ ಮೊದಲಾದವರ ಶಕ್ತಿಯನ್ನಳೆವ ಮಾನದಂಡವಾದರೂ ಎಲ್ಲಿದೆ ? ಕಪಿಗಳ ಸಂಖ್ಯೆಯನ್ನು ಅರುಹಲು ಗಣಿತಶಾಸ್ತ್ರ ಅಸಮರ್ಥ- ವಾಗಿದೆ. ಗಣಿತಶಾಸ್ತ್ರದಲ್ಲಿ ಹೇಳಿರುವ ಯಾವ ಸಂಖ್ಯೆಯ ಹೆಸರೂ ಈ ಕಪಿ ಸೇನೆಯನ್ನು ಅಳವಡಿಸಿಕೊಳ್ಳಲಾರದು. ಈ ಅಪಾರ ಸೇನೆಗೆ ಮುಂದಾಳುಗಳಾಗಿ ರಾಮ-ಲಕ್ಷ್ಮಣರಿದ್ದಾರೆ, ಸುಗ್ರೀವ- ನಿದ್ದಾನೆ, ವಿಭೀಷಣನಿದ್ದಾನೆ. ಕಪಿಗಳ ಸಂಖ್ಯಾತೀತ ಸೇನೆ ಒತ್ತಟ್ಟಿಗಿರಲಿ, ಕೋಟಿಕೋಟಿ ಕಪಿಗಳಿಗಿಂತಲೂ ಮಿಗಿಲಾದ ಮಹಾ ಪರಾಕ್ರಮಿಯಾದ ಹನುಮಂತನೊಬ್ಬನೆ ಸಾಕು ನಮ್ಮ ಲಂಕೆಯ ಹೆಸರನ್ನಡಗಿಸಲು! ಲಕ್ಷ್ಮಣನು ರಾಮಚಂದ್ರನ ಸೋದರ, ಸುಗ್ರೀವ ವಾಲಿಯ ಒಡ ಹುಟ್ಟಿದವನು. ಅಷ್ಟರಿಂದಲೆ ಅವರ ಬಲವನ್ನು ಊಹಿಸಿಕೊಳ್ಳ- ಬಹುದು. ನಾವು ಅವರೊಡನೆ ವಿರೋಧ ಕಟ್ಟಿಕೊಳ್ಳುವುದಕ್ಕಿಂತ ಲಂಕೆಯ ಹಿತದ ಕಡೆಗೆ ಗಮನ ಕೊಡುವುದು ಚೆನ್ನು ಎಂದು ನಮಗನಿಸುತ್ತಿದೆ. ರಾಮನೊಬ್ಬನೇ ಮೂರು ಲೋಕವನ್ನೂ ಸಂಹರಿಸಬಲ್ಲ. ಮಹಾಪ್ರಭು, ವಿರೋಧದ ಮಾತು ಸಾಕು. ಸೀತೆ ಯನ್ನು ರಾಮನಿಗೆ ಒಪ್ಪಿಸಿಬಿಡು. ನಾವು ಹಾಯಾಗಿ ಬಾಳೋಣ." ಇವರ ಮಾತನ್ನು ಕೇಳಿದ ಮೇಲೆ ರಾಮಚಂದ್ರನ ಅಪಾರ ಸೇನೆಯನ್ನು ನೋಡಿದ ಮೇಲೆ ರಾವಣನ ಮನಸೂ ತಲ್ಲಣಿಸ- ದಿರಲಿಲ್ಲ. ಆದರೂ ತೋರಿಕೆಗೆ ಅವರನ್ನು ಗದರಿಸಿ ಮತ್ತೆ ಪುನಃ ಶಾರ್ದೂಲ ಮೊದಲಾದ ದೂತರನ್ನು ಕಳಿಸಿದನು. ಅವರೂ ಕಪಿಗಳ ಕೈಯಿಂದ ಪೆಟ್ಟುತಿಂದು ಬಂದು ಹಿಂದಿ- ನದೇ ರಾಗವನೆಳೆದರು. ಯಾವ ದೂತನಿಂದಲೂ ರಾವಣನಿಗೆ ಆಶ್ವಾಸನೆಯ ಮಾತು ದೊರೆಯಲಿಲ್ಲ. ಮತ್ತೆ ಮಂತ್ರಿಗಳಿಗೆ ಕರೆಬಂತು. ಗುಪ್ತಸಭೆ ನಡೆಯಿತು. ಕಡೆಗೆ ಒಂದು ನಿರ್ಧಾರಕ್ಕೆ ಬಂದ ರಾವಣ ಅಶೋಕ ವನಕ್ಕೆ ತೆರಳಿದನು. ಸೀತೆ ಭೀತಳಂತೆ ಕುಳಿತಿದ್ದಳು. ರಾವಣ ಅವಳೆದುರು ಒಂದು ಕುಹಕವನ್ನು ಪ್ರಯೋಗಿಸಿದ : "ಸೀತೆ, ರಾಮನ ಜೀವನ ಇಂದು ಕೊನೆಗೊಂಡಿತು. ಅಗೋ ಅಲ್ಲಿ ವಿದ್ಯುಜ್ಜಿವ್ವನ ಕೈಯಲ್ಲಿದೆ ನಿನ್ನ ಪ್ರೀತಿಯ ರಾಮನ ತುಂಡಾದ ರುಂಡ." ವಿದ್ಯುಜ್ಜಿಹ್ವನು ಪೂರ್ವ ಸಿದ್ಧತೆಯಂತೆ ರಾಮನ ಆಕೃತಿಯನ್ನು ಹೋಲುವ ಒಂದು ತಲೆಯನ್ನು ತಂದು ಸೀತೆಗೆ ತೋರಿಸಿ ದನು. ಸೀತೆ ಅದನ್ನು ಕಂಡು ವಿಲಾಪಿಸಿದಳೇ ಹೊರತು ರಾವಣ- ನಿಗೆ ಮರುಳಾಗಲಿಲ್ಲ. ರಾವಣ ನಿಷ್ಪಲವಾಗಿ ಅಕೃತಾರ್ಥನಾಗಿ ಅಲ್ಲಿಂದ ಮರಳಿದ. ವಿಭೀಷಣನ ಧರ್ಮಪತ್ನಿ ಸರಮೆ ಸೀತೆಯನ್ನು ಸಂತೈಸಿದಳು : " ಪರಮ ಸಾಧ್ವಿಯಾದ ಹೆಣ್ಣೆ ! ರಾಕ್ಷಸರ ಮಾಯೆಯಿಂದ ಮೋಸ ಹೋಗಿ ದುಃಖಿಸಬೇಡ. ನಿನ್ನ ಪತಿಯ ಕೂದಲನ್ನೂ ಈ ರಾಕ್ಷಸರು ನಲುಗಿಸಲಾರರು. ರಾಮನೂ ಅವನ ಅನಂತವಾದ ಕಪಿ ಸೈನ್ಯವೂ ಸುವೇಲಾದ್ರಿಯಲ್ಲಿ ಕ್ಷೇಮದಿಂದ್ದಾರೆ. ಇದು ಕೇವಲ ಮಾಯಾ ಶಿರಸ್ಸು, ರಾವಣನ ದೂತರು ರಾಮನೆಡೆಗೆ ತೆರಳಿದವರು ಕಪಿಗಳಿಂದ ತಪ್ಪಿಸಿಕೊಂಡು ಉಸಿರು ಏದುತ್ತ ಬಂದು ರಾಮನ ಅಪಾರ ಶಕ್ತಿಯನ್ನು ಬಣ್ಣಿಸಿದ್ದನ್ನು ನಾನು ಕೇಳಿದ್ದೇನೆ. ವೃದ್ಧರಾದ ಮಂತ್ರಿಗಳು-ಹಿತೈಷಿಗಳು ಯಾರ ಮಾತನ್ನೂ ಲಕ್ಷಿಸದೆ ನಮ್ಮ ರಾವಣ ಅನ್ಯಾಯದ ಪಥವನ್ನು ತುಳಿಯುತ್ತಿದ್ದಾನೆ. ನಿನ್ನನ್ನು ರಾಮಚಂದ್ರನಿಗೆ ಒಪ್ಪಿಸುವುದು ಆತನಿಗೆ ಹಿತವಾಗಿಲ್ಲ. ರಾಮನ ಬಾಣಗಳಿಗೆ ಬಲಿಯಾಗುವುದೇ ಆತನ ಹಣೆಯಲ್ಲಿ ಬರೆದಿದ್ದರೆ ಅದನ್ನು ತಪ್ಪಿಸುವುದು ಯಾರಿಗೆ ಸಾಧ್ಯ? " ಸರಮೆಯ ಮಾತು ಸೀತೆಯ ಚಿತ್ತಕ್ಕೆ ನೆಮ್ಮದಿಯನ್ನಿತ್ತಿತು. ದೂರದಲ್ಲಿ ಕೇಳಿಬರುವ ಕಪಿ ಸೈನ್ಯದ ಮಹಾನಾದ ಸರಮೆಯ ಮಾತಿಗೆ ಪುರಾವೆಯನ್ನೀಯುತ್ತಿತ್ತು. ರಾವಣನ ಅಜ್ಜ ಮಾಲ್ಯವಂತನಿಗೂ ಈ ಪ್ರಸಂಗ ಕೆಡುಕೆ- ನಿಸಿತು. ಅವನೂ ರಾವಣನನ್ನು ತಿದ್ದಲೆಳಿಸಿದನು : " ಮಗು ರಾವಣ ! ನನ್ನ ಹಿತವಚನವನ್ನು ನೀನು ಕೇಳಬೇಕು. ನನ್ನ ಮುಪ್ಪಿನ ಅನುಭವದ ಅಧಿಕಾರದಿಂದ ನಾನು ಈ ಮಾತ- ನ್ನಾಡುತ್ತಿದ್ದೇನೆ. ಅದನ್ನು ನೀನು ಅಲ್ಲಗಳೆಯಬಾರದು. ದೇವತೆ ಗಳು ಧರ್ಮಪಥದಲ್ಲಿ ನಡೆದರೆ ನಾವು ಅಧರ್ಮದ ಹಾದಿಯನ್ನು ತುಳಿವವರು. ಈಗ ಧರ್ಮದ ಗೇಲು ಗೆಲುವು ಅಧರ್ಮ ಸೋಲನ್ನನುಭವಿಸತೊಡಗಿದೆ. ನಾರಾಯಣನು ಧರ್ಮ ಪಕ್ಷದ ಸಂರಕ್ಷಕನಲ್ಲವೆ ? ದೇವತೆಗಳ ಪಕ್ಷಪಾತಿಯಲ್ಲವೆ ? ಆ ನಾರಾಯಣನೇ ರಾಮನಾಗಿ ಜನಿಸಿದ್ದಾನೆ ಎಂದು ನನ್ನ ತಿಳುವಳಿಕೆ. ಅವನ ಲೋಕೋತ್ತರ ಸಾಮರ್ಥ್ಯವೇ ಅದಕ್ಕೆ ಸಾಕ್ಷಿ ಅವನೊಡನೆ ಯುದ್ಧ ಸಲ್ಲದು. ಸಧ್ಯ ಸಂಧಾನವೇ ಸರಿಯಾದ ಮಾರ್ಗ. ವತ್ಸ, ಬೇಗನೆ ಸೀತೆಯನ್ನು ಕಳಿಸಿಕೊಡು. ಅವನ ಗೋಜು ನಮಗೆ ಬೇಡ. " ರಾವಣನು ಇನ್ನಷ್ಟು ಸಿಡಿಮಿಡಿಗೊಂಡು ನುಡಿದನು : " ಕುಲಕ್ಕೆ ಅನುರೂಪನಲ್ಲವೆಂದು ತಂದೆಯಿಂದ ನಿರ್ವಾಸಿತನಾದವನು ನನ್ನನ್ನು ಗೆಲ್ಲುವನೆ ? ರಾಜ್ಯಭ್ರಷ್ಟನಾಗಿ ಕಾಡಿನಲ್ಲಲೆವ ದುಃಖಿತ ಮಾನವ ರಾಮ ನನ್ನನ್ನು ಸೋಲಿಸುವನೆ ? ಅದೂ ಈ ಕಾಡು ಮೃಗಗಳ ಸಹಾಯದಿಂದ ? ರಾಮನಿಗೆ ಬುದ್ಧಿಕಲಿಸಲಿಕ್ಕೆ ನನ್ನ ಒಂದು ತೋಳು ಸಾಕು. ಹತ್ತೊಂಬತ್ತು ತೋಳುಗಳಿಗೆ ಯುದ್ಧಕಾಲ- ದಲ್ಲಿಯೂ ವಿಶ್ರಾಂತಿಯೆ ಸರಿ. ಈಗ ನಿಮ್ಮ ಮಂತ್ರಾಲೋಚನೆಯ ಆವಶ್ಯಕತೆಯಿಲ್ಲ. ರಾವಣನ ತೋಳುಗಳಲ್ಲಿಇನ್ನೂ ಬಲವಡು- ಗಿಲ್ಲ." ಹೀಗೆ ಮಾಲ್ಯವಂತನನ್ನು ಗದರಿಸಿದವನೆ ಪ್ರಹಸ್ತವನ್ನು ಕರೆದು ಯುದ್ಧ ಸಿದ್ಧತೆಯನ್ನು ಮಾಡುವಂತೆ ಆಜ್ಞಾಪಿಸಿದನು. ಪಕ್ಷಿರೂಪದಿಂದಿದ್ದ ವಿಭೀಷಣನ ಚಾರರು ಇದನ್ನೆಲ್ಲ ತಿಳಿದು ವಿಭೀಷಣನಿಗೆ ವರದಿಮಾಡಿದರು. ಅನಲ, ಅನಿಲ, ಸಂಪಾತಿ, ಹರಿ ಎಂಬ ನಾಲ್ವರು ಚಾರರು ನಿವೇದಿಸಿದ ವೃತ್ತಾಂತವನ್ನು ವಿಭೀಷಣನು ರಾಮನ ಬಳಿ ನಿವೇದಿಸಿಕೊಂಡನು. ರಾಮಚಂದ್ರನೂ ನಾಳೆ ಬೆಳಿಗ್ಗೆ ಯುದ್ಧ ಪ್ರಾರಂಭವಾಗುವುದು, ಎಲ್ಲರೂ ಸಿದ್ಧ- ರಾಗುವುದು' ಎಂದು ಆಜ್ಞಾಪಿಸಿ ಸುವೇಲಪರ್ವತವನ್ನೇರಿದನು. ಸುವೇಲದ ಶಿಖರದಲ್ಲಿ ರಾಮ-ಲಕ್ಷ್ಮಣರೂ, ಸುಗ್ರೀವ ವಿಭೀಷಣಾದಿಗಳೂ ಬಂದು ತಂಗುವಾಗ ಬಾನು ಪಡುಕಡಲನ್ನು ಸೇರಿಯಾಗಿತ್ತು. ಎಲ್ಲರೂ ಸಾಯಂಸಂಧ್ಯೆಯನ್ನು ಅಲ್ಲೇ ಮುಗಿಸಿ ಮಲಗಿದರು. ರಾತ್ರಿ ಕಳೆಯಿತು. ಬೆಳ್ಳಿ ಮೂಡಿತು. ಕತ್ತಲು ಹರಿಯಿತು. ಸೂರ್ಯ ಮೂಡಣ ದಿಕ್ಕಿನಲ್ಲಿ ಕಾಣಿಸಿಕೊಂಡನು. ರಾಮಚಂದ್ರನು ಪ್ರಭಾತದ ಹೊಂಬೆಳಕಿನಿಂದ ಮಿಂದ ಲಂಕೆಯನ್ನು ಕಂಡನು. ಎಲ್ಲಿ ನೋಡಿದರಲ್ಲಿ ಮಹಡಿಯ ಮನೆ- ಗಳು, ಸಂಪತ್ತು ಚೆಲ್ಲಿದಂತೆ ವೈಭವ, ಭೂಮಿಯಲ್ಲಿ ಮೂಡಿಬಂದ ಅಮರಾವತಿಯಂತಿತ್ತು ಆ ನಗರಿ. ಇದರ ಸಿರಿಯನ್ನು ಕಂಡು ರಾಮಚಂದ್ರನಿಗೂ ಅಚ್ಚರಿಯೆನಿಸಿತು ! ಮಧ್ಯದಲ್ಲಿ ಅರಮನೆಯ ಪ್ರಾಸಾದದಲ್ಲಿ ರಾವಣನು ಕುಳಿತಿದ್ದ. ಸುಗ್ರೀವನ ಚುರುಕಾದ ಕಣ್ಣು ಅವನನ್ನು ಗುರುತಿಸ- ದಿರಲಿಲ್ಲ. "ನನ್ನ ಪ್ರಭುವಿನ ಪತ್ನಿಯನ್ನು ಕದ್ದ ಕಳ್ಳನಿವನು" ಎಂದಿತು ಅವನ ಮನಸ್ಸು, ರಾವಣನ ದರ್ಪವನ್ನು ಕಂಡು ಅವನ ಮನಸ್ಸು ಕ್ಷೋಭಗೊಂಡಿತ್ತು. ಕೂಡಲೇ ರಾಮಪಾದಗಳಿಗೆರಗಿ ಸೇನೆಯನ್ನು ಯುದ್ಧಕ್ಕೆ ಅಣಿಗೊಳಿಸಿದನು. ಅಂಗದನ ಸಂಧಾನ ರಾಮನ ಅಪ್ಪಣೆಯಂತೆ ಲಕ್ಷ್ಮಣನು ಕಪಿಗಳಿಗೆ ಯಥೇಚ್ಛವಾಗಿ ಹಣ್ಣುಗಡ್ಡೆಗಳನ್ನು ತಿನಬಡಿಸಿದನು. ಅನಂತರ ಸಜ್ಜಾದ ಸೇನೆ ಯನ್ನು ನಡೆಸಿಕೊಂಡು ರಾಮ-ಲಕ್ಷ್ಮಣರು ಲಂಕೆಯ ನಗರದೆಡೆಗೆ ತೆರಳಿದರು. ಜತೆಗೆ ಸುಗ್ರೀವ-ವಿಭೀಷಣರೂ ಇದ್ದರು. ಹನುಮಂತನೇ ಮೊದಲಾದ ಕಪಿಗಳು ದೊಡ್ಡ ದೊಡ್ಡ ಬಂಡೆಗಳನ್ನೇ ಹೊತ್ತುಕೊಂಡು ಮುನ್ನುಗ್ಗುತ್ತಿದ್ದರು ಗರಿ- ಮೂಡಿದ ಬೆಟ್ಟಗಳಂತೆ ! ಯುದ್ಧಕ್ಕೆ ತೊಡಗುವ ಮುನ್ನ ರಾಜಧರ್ಮಕ್ಕೆ ಅನುಸಾರವಾಗಿ ರಾಮಚಂದ್ರನು ವಿಭೀಷಣನ ಸಮ್ಮತಿಯಂತೆ ಅಂಗದನನ್ನು ರಾವಣನೆಡೆಗೆ ದೌತ್ಯಕಾಗಿ ಕಳಿಸಿದನು. ಅಂಗದನು ಒಂದೇ ನೆಗೆತಕ್ಕೆ ಕೋಟೆಯನ್ನು ಹಾರಿ ನಗರದೊಳಗೆ ಪ್ರವೇಶಿಸಿದನು. ಅಲ್ಲಿಂದ ನೇರ ರಾವಣನ ಮಂತ್ರಾಲೋಚನೆಯ ಕೋಣೆಗೇ ನಡೆದನು. ರಾವಣನು ಅಲ್ಲಿ ಎತ್ತರದ ಸಿಂಹಾಸನದ ಮೇಲೆ ಕುಳಿತಿದ್ದನು. ಅಂಗದನು ಅದಕ್ಕಿಂತಲೂ ಎತ್ತರವಾಗಿ ತನ್ನ ಬಾಲದ ಸುರಳಿಯನ್ನು ಸುತ್ತಿ ಕುಳಿತುಕೊಂಡನು. ರಾವಣನಿಗೆ ಇದು ಸಹನೆಯಾಗಲಿಲ್ಲ. ಅವನು ಆಕ್ಷೇಪಿಸುವ ದನಿಯಲ್ಲಿ ಕೇಳಿದನು: "ಯಾರು ನೀನು ? ಎಲ್ಲಿಂದ ಬಂದೆ ? ಇಲ್ಲಿಗೆ ಬರುವ ಉದ್ದೇಶ ವೇನು ?" ಅಂಗದನು ಹಂಗಿಸುವ ದನಿಯಲ್ಲಿ ಉತ್ತರಿಸಿದನು : "ರಾಜನ್, ನಾನು ವಾಲಿಯ ಮಗ ಅಂಗದ, ವಾಲಿಯ ಗುರುತು ನಿನಗೆ ಮರೆತಿರಲಿಕ್ಕಿಲ್ಲ. ತನ್ನ ಕಡೆಗಣ್ ನೋಟದಿಂದ ಸಮುದ್ರ- ವನ್ನು ಸ್ತಂಭನಗೊಳಿಸಿ ಸೇತುವನ್ನು ರಚಿಸಿದ ರಾಮಚಂದ್ರನ ದೂತನಾಗಿ ಇಲ್ಲಿಗೆ ಬಂದಿದ್ದೇನೆ. ನೀನು ಗುರುದ್ರೋಹಿ, ಬ್ರಾಹ್ಮಣದ್ರೋಹಿ. ಕುಲಸ್ತ್ರೀಯರ ಮಾನವನ್ನು ಕೆಡಿಸುವುದಕ್ಕೂ ನೀನು ಹೇಸುವುದಿಲ್ಲ. ದೇವ- ದ್ರೋಹಿಯಾದ ನಿನ್ನ ಪಾತಕದ ರಾಶಿ ಹೆಮ್ಮರವಾಗಿ ಬೆಳೆದು ನಿಂತಿದೆ. ನೀನು ರಾಮಚಂದ್ರನ ರಾಣಿಯನ್ನು ಕದ್ದು ತಂದಿರುವೆ. ಅದು ಅಕ್ಷಮ್ಯವಾದ ಅಪರಾಧ. ಆದರೂ ನೀನು ಸೀತೆಯನ್ನು ಒಪ್ಪಿಸಿ ಶರಣಾಗುವುದಾದರೆ ಇನ್ನೂ ಕೂಡ ನಮ್ಮ ಪ್ರಭು ನಿನ್ನನ್ನು ಕ್ಷಮಿಸುವನು. ಇಲ್ಲವಾದರೆ ನಿನ್ನ ಜೀವಿತದ ಬಯಕೆ- ಯನ್ನು ಬೇಗನೇ ತೀರಿಸಿ ಬಿಡು. ಏಕೆಂದರೆ ರಾಮಚಂದ್ರನ ಬಾಣ ಬತ್ತಳಿಕೆಯಿಂದ ಹೊರಬರುವವರೆಗೆ ಮಾತ್ರವೇ ನೀನು ಬದುಕಿರುವುದು ಸಾಧ್ಯ." ಕಾಡುಕಪಿಯೊಂದು ಬಂದು ಹೀಗೆ ಒದರುವುದೆಂದರೇನು ? ರಾವಣನಿಗೆ ಕೋಪ ತಡೆಯಲಾಗಲಿಲ್ಲ. ಅವನು 'ಈ ಕಪಿಯನ್ನು ಹಿಡಿದು ನಿಗ್ರಹಿಸಿಬಿಡಿ' ಎಂದು ಆಜ್ಞಾಪಿಸಿದನು. ಕೂಡಲೆ ಅನೇಕ ರಾಕ್ಷಸರು ಅಂಗದನ ಮೇಲೇರಿ ಬಂದರು. ಅಂಗದನು ಅವರ- ನ್ನೆಲ್ಲ ಕೈಯಲ್ಲಿ ಅದುಮಿ ಹಿಡಿದುಕೊಂಡೇ ಆಕಾಶಕ್ಕೆ ಹಾರಿ ಕೈಬಿಟ್ಟನು. ಕೆಳಗೆ ಬಿದ್ದ ರಕ್ಕಸರು ವಿಲಿವಿಲಿ ಒದ್ದಾಡಿದರು. ಕೆಲವು ಮಹಡಿಗಳನ್ನೂ ಅಂಗದನು ಪುಡಿಮಾಡಿಬಿಟ್ಟನು. ಅಂಗದನ ಕೃತ್ಯವನ್ನು ಕಂಡು ರಾವಣನು ಸಿಟ್ಟಿನಿಂದ ಕೆಂಡವಾದನು. ಆದರೆ ರಾಮಚಂದ್ರನು ತೃಪ್ತಿಯ ಮಂದಹಾಸ ವನ್ನು ಬೀರಿದನು. ಸಂಧಾನದ ಎಲ್ಲ ಬಾಗಿಲುಗಳೂ ಮುಚ್ಚಿ- ದಂತಾದ ಮೇಲೆ ಕಪಿಸೇನೆ ಶತ್ರು ರಾಜ್ಯದ ಎಲ್ಲ ಬಾಗಿಲಿನಲ್ಲಿ ಮುತ್ತಿಗೆ ಹಾಕಿತು. ಬೆಟ್ಟಗುಡ್ಡಗಳನ್ನೆ ಹೊತ್ತು ತರುತ್ತಿರುವ ಕಪಿಗಳ ಆಕ್ರಮಣೆಗೆ ಸಿಕ್ಕಿದ ಲಂಕೆ, ಪ್ರವಾಹಕ್ಕೆ ಸಿಕ್ಕಿದ ದೋಣಿ ಯಂತೆ ಅಸಹಾಯವಾಗಿ ಕಾಣಿಸಿತು. ಕೂಡಲೆ ರಾವಣನು ಪೂರ್ವದಿಕ್ಕಿಗೆ ಪ್ರಹಸ್ತನನ್ನೂ, ಪಶ್ಚಿಮಕ್ಕೆ ಇಂದ್ರಜಿತ್ತನನ್ನೂ, ದಕ್ಷಿಣದ ಕಡೆಗೆ ವಜ್ರದಂಷ್ಟ್ರನನ್ನೂ ಕಳುಹಿಸಿ ಉತ್ತರ ದಿಕ್ಕಿಗೆ ತಾನೇ ಹೊರಟನು. ಅದಕ್ಕೆ ಸರಿಯಾಗಿ ರಾಮಸೇನೆಯಲ್ಲೂ ವ್ಯವಸ್ಥೆಗೊಳಿಸಲಾಯಿತು. ಪೂರ್ವದಿಕ್ಕಿಗೆ ನೀಲ ತೆರಳಿದನು. ದಕ್ಷಿಣಕ್ಕೆ ಅಂಗದ ನಡೆದನು. ಹನುಮಂತ ಪಶ್ಚಿಮಕ್ಕೆ ತೆರಳಿದನು. ಸ್ವಯಂ ರಾಮಚಂದ್ರನೇ ಉತ್ತರದಲ್ಲಿ ಸೇನಾರಕ್ಷಕನಾಗಿ ನಿಂತನು. ಮೈಂದ-ವಿವಿದರು ನೀಲನನ್ನುಅನುಸರಿಸಿದರು. ಗಜ ಮೊದ- ಲಾದವರು ಅಂಗದನ ಜತೆಯಾದರು. ಪ್ರಮಾಥಿ ಎಂಬವನು ಹನುಮಂತನ ಅಂಗರಕ್ಷಕನಾಗಿ ಪಶ್ಚಿಮಕ್ಕೆ ನಡೆದನು. ಉಳಿದವರೆಲ್ಲ ಸುಗ್ರೀವನ ಜತೆಗೆ ಒತ್ತಟ್ಟಿಗೆ ನಿಂತರು. ಕಪಿಸೇನೆ ಸಿಕ್ಕಿದಲ್ಲೆಲ್ಲ ರಾಕ್ಷಸರನ್ನು ಸದೆಬಡಿಯತೊಡಗಿತು. ಪ್ರಾಕಾರಗಳಲ್ಲಿ, ಪ್ರಾಸಾದಗಳಲ್ಲಿ, ನೆಲದಲ್ಲಿ, ಮುಗಿಲಲ್ಲಿ ಎಲ್ಲಿ ನೋಡಿದರಲ್ಲಿ ಕಪಿಗಳದೇ ಸಾಮ್ರಾಜ್ಯ. ಇದನ್ನು ಕಂಡು ರಾಕ್ಷಸರು ಕಂಗೆಟ್ಟು ಹೋದರು. ರಾಮಚಂದ್ರನ ಒಂದು ಬದಿಯಲ್ಲಿ ಸುಗ್ರೀವನಿದ್ದನು. ಇನ್ನೊಂದೆಡೆ ಗದಾಧಾರಿಯಾದ ವಿಭೀಷಣನಿದ್ದನು. ಶತ್ರುಗಳನ್ನು ಸದೆಬಡಿಯುತ್ತ ಮುನ್ನುಗ್ಗುತ್ತಿರುವ ಕಪಿಗಳು ಸಂತಸದಿಂದ ಮಾಡಿದ ಜಯಕಾರ ಮುಗಿಲನ್ನು ಮುತ್ತಿತು : " ರಾವಣನೆಂಬ ನರಿಯ ಹುಟ್ಟಡಗಿಸಲು ಬಂದಿರುವ ಸಿಂಹ- ದಂತಿರುವ ರಾಮಚಂದ್ರನಿಗೆ ಜಯವಾಗಲಿ. ರಾಮನ ಪಾದ ಕಮಲಗಳಲ್ಲಿ ಶೃಂಗದಂತಿರುವ ಹನುಮಂತನಿಗೆ ಜಯವಾಗಲಿ, ಜಗದೀಶ್ವರನ ಸೋದರನಾದ ಲಕ್ಷ್ಮಣನಿಗೆ ಜಯವಾಗಲಿ. ಅಸಂಖ್ಯ ಸೇನೆಯಿಂದ ಸುತ್ತುವರಿದ ಕಪಿರಾಜ ಸುಗ್ರೀವವನಿಗೆ ಜಯವಾಗಲಿ." ಪುಣ್ಯ-ಪಾಪಗಳ ಕದನ ರಾಮಚಂದ್ರನ ಅತುಲಬಲ, ಕಪಿಗಳ ಕೋಪಾಟೋಪ ರಾವಣನನ್ನು ಚಿಂತೆಗೀಡುಮಾಡಿತು. ಆದರೆ ಚಿಂತಿಸಿ ಫಲವಿಲ್ಲ. ಯುದ್ಧ ಸಾಗಲೇಬೇಕು. ಒಂದು ನಿರ್ಧಾರಕ್ಕೆ ಬಂದ ರಾವಣ, ಕೂಡಲೆ ಬಂಗಾರದ ಪೀಠದಿಂದೆದ್ದು ಬಂದು ಪ್ರಬಲರಾದ ರಾಕ್ಷಸರ ಗುಂಪೊಂದನ್ನೆ ಯುದ್ದಕ್ಕಾಗಿ ಕಳಿಸಿದನು. ಒಬ್ಬೊಬ್ಬ ರಾಕ್ಷಸನೂ ಒಬ್ಬೊಬ್ಬ ಕಪಿಯೊಡನೆ ಹೋರಾಡ ತೊಡಗಿದನು. ರಾಮನ ಭೃತ್ಯರೂ ರಾವಣನ ಭೃತ್ಯರೂ ಪರಸ್ಪರವಾಗಿ ಹೊಡೆದಾಡಿಕೊಂಡರು. ಸಚ್ಛಕ್ತಿ ದುಷ್ಟ ಶಕ್ತಿಗಳು ಹೋರಾಡುವಂತೆ; ಪುಣ್ಯ-ಪಾಪಗಳು ಅನ್ಯೋನ್ಯವಾಗಿ ಕದನ ಹೂಡುವಂತೆ ! ಹನುಮಂತ ಇಂದ್ರಜಿತ್ತನೊಡನೆ ಕಾದಾಡಿದನು. ಇಂದ್ರನನ್ನು ಗೆದ್ದಕೀರ್ತಿ ತಲೆತಗ್ಗಿಸಿತು. ಇಂದ್ರಜಿತ್ತು ಸೋತು ಯುದ್ಧರಂಗ- ದಿಂದ ಮರಳಿದ. ಸಂಪಾತಿಯೆಂಬ ಕಪಿಯ ಕೈಯಲ್ಲಿ ಸಿಕ್ಕಿದ ಪ್ರಜಂಘ ಜರ್ಜರನಾದನು. ಮತ್ತೆ ಜಂಬುಮಾಲಿ ಬಂದು ಹನಮಂತನ ಮೇಲೆ ಶಕ್ತ್ಯಾಯುಧವನ್ನು ಎಸೆದನು. ಮಾರುತಿಯ ಒಂದು ಪ್ರಹಾರಕ್ಕೆ ಆತ ಜೀವತೆತ್ತ. ಆತನ ಆಯುಧ ಏನು ಮಾಡ ಬಲ್ಲದು? ನಲನು ಪ್ರತಪನನ ಕಣ್ಣು ಕಿತ್ತಿದರೆ, ಗಜನು ತಾಪನನ ಜೀವವನ್ನೇ ಕಿತ್ತನು ! ಮಿತ್ರಘ್ನನನ್ನು ವಿಭೀಷಣನೂ, ವಿರೂಪಾಕ್ಷ ನನ್ನು ಲಕ್ಷ್ಮಣನೂ ಹೊಡೆದರು.ಸುಗ್ರೀವನ ಕೈಯಲ್ಲಿದ್ದ ಮರಕ್ಕೆ ಪ್ರಹಸ್ತನ ಜೀವ ತತ್ತರಿಸಿತು. ವಜ್ರಮುಷ್ಟಿ ಎಂಬವನು ಮೈಂದನ ಮುಷ್ಟಿಯಲ್ಲಿ ಸಿಕ್ಕು ನುಗ್ಗಾದನು. ತನ್ನ ಮೇಲೆ ಬಾಣದ ಮಳೆ- ಗರೆದ ನಿಕುಂಭನನ್ನು ನೀಲ ಅವನ ರಥದ ಗಾಲಿಯಿಂದಲೆ ಹೊಡೆದು ಕೊಂದನು. ವಿವಿದ ಮಹಾವೃಕ್ಷವೊಂದರಿಂದ ಅಶನಿಪ್ರಭನನ್ನು ಹೊಡೆದನು. ಸುಷೇಣ ಬಂಡೆಯನ್ನೆಸೆದು ವಿದ್ಯುನ್ಮಾಲಿಯ ಕತೆ- ಯನ್ನು ತೀರಿಸಿದನು. ಹೀಗೆ ಕಪಿಗಳ ಕೈಯಲ್ಲಿ ಸಿಕ್ಕಿದ ರಾಕ್ಷಸರ ಗೋಳು ಕೇಳುವವರಿಲ್ಲವಾಯಿತು. ಪ್ರಹಸ್ತನ ಸೇನಾಪತಿತ್ವದಲ್ಲಿ ಮತ್ತೊಂದು ಸೇನೆ ಯುದ್ಧಕ್ಕೆ ಸಿದ್ಧವಾಯಿತು. ಸಂಧಾನ ಮಾಡಿಕೊಂಡರೆ ರಾಕ್ಷಸರ ಸಂತಾನ ಬದುಕುತ್ತಿತ್ತು ಎಂದು ಪ್ರಹಸ್ತನ ಮನಸ್ಸು ನುಡಿಯುತ್ತಿತ್ತು. ಆದರೆ ರಾವಣನ ಆಜ್ಞೆಗೆ ಎದುರಾಡುವುದುಂಟೆ ? ಪೂರ್ವದ ಮಹಾ- ದ್ವಾರದಿಂದ ಪ್ರಹಸ್ತನ ಸೇನೆ ಯುದ್ಧ ರಂಗಕ್ಕಿಳಿಯಿತು. ರಾಕ್ಷಸ ಸೇನೆ ಕಪಿಗಳ ಬೆನ್ನಟ್ಟಿತು. ಕಪಿಗಳು ಮರವನ್ನು ಕಿತ್ತು ಕಾದಾಡತೊಡಗಿದರು. ಕಪಿಗಳ ಒಂದೊಂದು ಪ್ರಹಾರಕ್ಕೂ ಒಬ್ಬೊಬ್ಬ ರಾಕ್ಷಸ ಬಲಿಯಾದನು. ಪ್ರಹಸ್ತನ ಬಾಣಗಳಿಂದ ಕುಪಿತನಾದ ನೀಲ ದೊಡ್ಡ ಮರವೊಂದನ್ನು ಅವನ ಮೇಲೆ ಕೆಡವಿ, ಅವನ ರಥ ಕುದುರೆಗಳನ್ನು ನಾಶಗೊಳಿಸಿದನು. ಆದರೂ ಪ್ರಹಸ್ತ ಕಂಗೆಡದೆ ಮುಸಲವನ್ನೆತ್ತಿ ನೀಲನೆಡೆಗೆ ಬೀಸಿದನು. ನೀಲನಿಂದ ಪ್ರಹಸ್ತನನ್ನು ಕೊಲ್ಲುವುದು ಅಸಾಧ್ಯವೆಂದು ವಿಭೀಷಣನಿಗೆ ಅರಿವಾಯಿತು. ಕೂಡಲೆ ಅವನು ತನ್ನ ಬಳಿಯಿದ್ದ ಶಕ್ತಿಯನ್ನು ಅವನೆಡೆಗೆ ಎಸೆದನು. ಜತೆಗೆ ನೀಲನೆಸೆದ ಬಂಡೆಯೂ ಸೇರಿ ಪ್ರಹಸ್ತನನ್ನು ತೀರಿಸಿದವು. ಮತ್ತೆ ದಕ್ಷಿಣ ದ್ವಾರದಿಂದ ವಜ್ರದಂಷ್ಟ್ರನ ಸೇನೆ ಹೊರಟಿತು. ರಾಕ್ಷಸ ಕುಲನಾಶದಿಂದ ಕುಪಿತನಾದ ವಜ್ರದಂಷ್ಟ್ರನ ಬಾಣದ ಪೆಟ್ಟನ್ನು ಸಹಿಸಲಾರದ ಕಪಿಗಳು ದಿಕ್ಕುಗೆಟ್ಟು ಓಡತೊಡಗಿದವು. ಆಗ ಅಂಗದನು ಮರವೊಂದನ್ನು ವಜ್ರದಂಷ್ಟ್ರನ ಮೇಲೆಸೆದನು. ವಜ್ರದಂಷ್ಟ್ರನ ಬಾಣ ಅದನ್ನು ಭೇದಿಸಿತು. ಅಂಗದ ಬಂಡೆ- ಯೊಂದನ್ನು ಗುರಿಯಿಟ್ಟು ಎಸೆದನು. ವಜ್ರದಂಷ್ಟ್ರ ಬದುಕಿಕೊಂಡರೂ ಅವನ ರಥ ಬಂಡೆಯೆಡೆಗೆ ಸಿಕ್ಕಿ ನುಗ್ಗಾಯಿತು. ಇಬ್ಬರೂ ಚತುರತೆಯಿಂದ ಕಾದಾಡಿದವು. ಬಹುಕಾಲ ಹೋರಾಡಿದ ನಂತರ ನೆಲಕ್ಕೆ ಕುಸಿದ ವಜ್ರದಂಷ್ಟ್ರನ ತಲೆಯನ್ನು ಮೆಟ್ಟಿ ನಿಂತ ಅಂಗದನನ್ನು ಕಂಡು ಕಪಿಗಳು ' ಉಘೇ ' ಎಂದರು. ದಕ್ಷಿಣದ್ವಾರದಿಂದ ಹೊರಟ ಸೇನೆ ದಕ್ಷಿಣ ದಿಕ್ಪತಿಯನ್ನೆ ಸೇರಿತು ! ಆಗ ಧೂಮ್ರಾಕ್ಷನಿಗೆ ರಾವಣನ ಆಜ್ಞೆಯಾಯಿತು. ಆತನು ಸಿಂಹ ದಂತೆ ಕ್ರೂರ ಮುಖವುಳ್ಳ ಕತ್ತೆಗಳನ್ನು ಕಟ್ಟಿದ ರಥದಲ್ಲಿ ಕುಳಿತು ಪಶ್ಚಿಮದ್ವಾರದಿಂದ ರಣಕಣಕ್ಕಿಳಿದನು. ಧೂಮ್ರಾಕ್ಷನ ಬಾಣಗಳ ಸುರಿಮಳೆಯನ್ನು ಎದುರಿಸಲು ಯಾವ ಕಪಿಯೂ ಬಯಸಲಿಲ್ಲ. ಧೂಮ್ರಾಕ್ಷನ ಯುದ್ಧ ಕೌಶಲದಿಂದ ಕಪಿವೃಂದ ಕಾತರವಾಯಿತು. ಇದು ಮಾರುತಿಯ ಗಮನಕ್ಕೆ ಬಂತು. ಒಡನೆಯೆ ಅವನು ಧೂಮ್ರಾಕ್ಷ- ನನ್ನು ಅಡ್ಡಗಟ್ಟಿ ಅವನ ವಾಹನವನ್ನು ಪುಡಿಗುಟ್ಟಿದನು. ಧೂಮ್ರಾಕ್ಷನು ತನ್ನ ಗದೆಯಿಂದ ಹನುಮಂತನ ನೆತ್ತಿಗೆ ಹೊಡೆ- ದನು. ಜಗತ್ಪ್ರಾಣನಾದ ಮಾರುತಿಗೆ ಅದೊಂದು ಲೆಕ್ಕವೆ ? ಕೂಡಲೆ ಅವನು ಬಂಡೆಯೊಂದರಿಂದ ಧೂಮ್ರಾಕ್ಷನನ್ನು ಹೊಡೆದು ಕೊಂದನು. ಆಗ ಅಕಂಪನನ ಸೇನೆ ಯುದ್ಧಕ್ಕೆ ಸಿದ್ಧವಾಯಿತು. ರುದ್ರನ ವರದಿಂದ ಗರ್ವಿತನಾದ ಅವನಿಗೆ ಶತ್ರುಭಯವೆಂಬುದೇ ತಿಳಿ- ದಿರಲಿಲ್ಲ. ಹನುಮಂತನೆಸೆದ ಪರ್ವತಗಳನ್ನೂ ವೃಕ್ಷಗಳನ್ನೂ ಅವನು ಬಾಣಗಳಿಂದ ಭೇದಿಸಿದನು. ಹನುಮಂತನು ಇಷ್ಟ- ರಿಂದಲೆ ಕಂಗೆಡಲಿಲ್ಲ. ಅವನು ಮತ್ತೊಂದು ಮಹಾವೃಕ್ಷವನ್ನು ಶತ್ರುವಿನೆಡೆಗೆ ವೇಗವಾಗಿ ಎಸೆದನು. ಅಕಂಪನನು ಅದನ್ನು ತುಂಡರಿಸುವ ಮುನ್ನ ಆ ವೃಕ್ಷವೇ ಅವನ ಕತೆಯನ್ನು ಮುಗಿಸಿತ್ತು ! ಅಂದು ರಾತ್ರಿ ರಾಮನ ಆಜ್ಞೆಯಂತೆ ಕಪಿಗಳು ಲಂಕೆಗೆ ಮತ್ತೊಮ್ಮೆ ಕೊಳ್ಳಿಯ ಪೂಜೆಯನ್ನೆಸಗಿದವು. ರಾತ್ರಿಯ ಕಗ್ಗತ್ತಲಿ ನಲ್ಲಿ ಇಡಿಯ ಲಂಕೆ ಧಗಧಗನೆ ಉರಿಯತೊಡಗಿತು. ಎಲ್ಲಿ ನೋಡಿದರಲ್ಲಿ ಬೆಂಕಿ. ಎಲ್ಲಿ ನೋಡಿದರಲ್ಲಿ ಬೊಬ್ಬೆಹಾಹಾಕಾರ ! ಒಬ್ಬ ರಾವಣನ ವಿದ್ರೋಹದ ಫಲವನ್ನು ಸಮಗ್ರ ರಾಕ್ಷಸರು ಅನುಭವಿಸುವಂತಾಯಿತು. ಬಡಪಾಯಿ ಹೆಂಗಸರು, ಮಕ್ಕಳು ಕೂಡ ಈ ವಿನಾಶದಿಂದ ಪಾರಾಗಲಿಲ್ಲ. ಬೆಂಕಿಗೆ ಬಲಿಯಾಗು- ತ್ತಿರುವ ರಾಕ್ಷಸಕುಲದ ಕರುಣಕ್ರಂದನವನ್ನು ಕೇಳುವವರಿಲ್ಲ- ವಾಯಿತು ! ಎಲ್ಲರಿ ಬಾಯಿಯೂ ಅಳತೊಡಗಿದಾಗ ಕೇಳುವ ಕಿವಿ ಎಲ್ಲಿಂದ ಬರಬೇಕು ? ಮುಗಿಲನ್ನು ಮುತ್ತಿದ ಅಗ್ನಿದೇವ ಲಂಕೆಯ ಸಿರಿಯನ್ನೆಲ್ಲ ಕಬಳಿಸದೆ ಶಾಂತನಾಗಲಿಲ್ಲ. ಪಾಪ ಸೋತಿತು; ಪುಣ್ಯ ಗೆದ್ದಿತು. ರಾವಣನ ಸಂತತಿ ಕ್ಷೀಣಿಸಿತು ಕುಂಭಕರ್ಣನ ಮಕ್ಕಳಾದ ಕುಂಭ-ನಿಕುಂಭರು ಯುದ್ಧಕ್ಕೆ ಹೊರಟರು. ಕಪಿಸೇನೆ ಮತ್ತೆ ಜಾಗೃತವಾಯಿತು. ಈ ಇಬ್ಬರು ವೀರರೊಡನೆ ಯೂಪಾಕ್ಷ-ಶೋಣಿತಾಕ್ಷ-ಪ್ರಜಂಘ-ಕಂಪನರೆಂಬ ನಾಲ್ವರು ರಾಕ್ಷಸರೂ ಜತೆಗೂಡಿದ್ದರು. ಮತ್ತೆ ಕಪಿಸೇನೆ-ರಾಕ್ಷಸ ಸೇನೆಗಳು ಹೊಡೆದಾಡಿಕೊಂಡವು. ಅದ್ಭುತವಾದ ಯುದ್ಧ ನಡೆಯಿತು. ಅಕಂಪನನನ್ನು ಅಂಗದ ಎದುರಿಸಿದನು. ಒಬ್ಬನಿಗೆ ಗದೆ ಆಯುಧ, ಇನ್ನೊಬ್ಬನಿಗೆ ಗಿರಿ ಶೃಂಗಗಳು ! ಆದರೆ ಅಕಂಪನನ ಗದೆಗಿಂತಲೂ ಅಂಗದನ ಗಿರಿಶಿಖರವೇ ಬಲಿಷ್ಠವಾಗಿತ್ತು. ಅದು ಅಕಂಪನನನ್ನು ಜೀವಂತ ವಾಗಿ ಉಳಿಯಗೊಡಲಿಲ್ಲ. ಆಗ ಶೋಣಿತಾಕ್ಷನು ಅಂಗದನ ಮೇಲೆರಗಿ ಬಂದನು. ಅವನ ಬಾಣಗಳ ಪೆಟ್ಟನ್ನು ಲಕ್ಷಿಸದೆ ಅಂಗದನು ಅವನ ಧನುರ್ಬಾಣ ಗಳನ್ನೂ, ವಾಹನವನ್ನೂ ನಾಶಗೊಳಿಸಿದನು. ಶೋಣಿತಾಕ್ಷನು ಖಡ್ಗಧಾರಿಯಾಗಿ ಮುಗಿಲಿಗೆ ಹಾರಿದನು. ಆಗ ಅಂಗದನು ಅವನ ಕೈಯಿಂದ ಖಡ್ಗವನ್ನುಕಸಿದುಕೊಂಡು ಅವನ ಆಯುಧದಿಂದಲೇ ಅವನ ತೋಳನ್ನು ಕತ್ತರಿಸಿ ಉಳಿದ ರಕ್ಕಸರನ್ನೂ ಕಡಿದು ಚೆಲ್ಲ- ತೊಡಗಿದನು. ಪ್ರಜಂಘ, ಯೂಪಾಕ್ಷರ ಜತೆಗೆ ಮತ್ತೊಮ್ಮೆ ಶೋಣಿತಾಕ್ಷನು ಗದಾಧಾರಿಯಾಗಿ ಯುದ್ಧಕ್ಕೆ ಸಿದ್ಧನಾದನು. ಆಗ ಅಂಗದನು ಮೈಂದ, ವಿವಿದರೊಡನೆ ಅವನನ್ನು ಎದುರಿಸಿದನು. ಕಪಿಗಳೆಸೆದ ಎಲ್ಲ ವೃಕ್ಷಗಳನ್ನೂ ಈ ಮೂವರು ರಾಕ್ಷಸರು ಬಾಣಗಳಿಂದ ಕತ್ತರಿಸಿಬಿಡುತ್ತಿದ್ದರು. ಅಂಗದನಿಗೆ ಇದು ಸಹನೆಯಾಗಲಿಲ್ಲ. ಅವನು ಪ್ರಜಂಘನಿಗೆ ಒಂದು ಬಲವಾದ ಪ್ರಹಾರವನ್ನಿತ್ತು ಅವನ ಕೈಯಿಂದ ಕತ್ತಿಯನ್ನು ಕಿತ್ತುಕೊಂಡು ಅವನಿಗೆ ಹೊಡೆ ದನು. ತಿರುಗಿ ಪ್ರಜಂಘನು ಹೊಡೆದ ಏಟಿನಿಂದ ಅಂಗದನಿಗೆ ತಲೆ ತಿರುಗಿದಂತಾದರೂ ಕ್ಷಣದಲ್ಲಿ ಚೇತರಿಸಿಕೊಂಡು ಅವನು ಪ್ರಜಂಘನ ತಲೆಯನ್ನು ಹಾರಿಸಿಬಿಟ್ಟನು. ಓಡಿಬರುತ್ತಿರುವ ಯೂಪಾಕ್ಷನನ್ನು ನಡುವೆಯೆ ವಿವಿದನು ತಡೆಗಟ್ಟಿ ಅವನ ಎದೆಗೆ ಬಲವಾದ ಏಟೊಂದನ್ನು ಬಿಗಿದು ತೋಳುಗಳಿಂದ ಅದುಮಿ ನಿಲ್ಲಿಸಿದನು. ಸೋದರನ ಸಹಾಯಕ್ಕೆ ಬಂದ ಶೋಣಿತಾಕ್ಷನು ವಿವಿದನಿಗೆ ಗದೆಯಿಂದ ಹೊಡೆದನು. ವಿವಿದನು ಅವನ ಗದೆಯನ್ನು ಕಿತ್ತೆಸೆದು ಅವನನ್ನು ನೆಲಕ್ಕುರು- ಳಿಸಿ ಅದುಮಿಕೊಂದನು . ಇತ್ತ ಮೈಂದನು ಯೂಪಾಕ್ಷನನ್ನು ಮುಗಿಸಿದನು. ತನ್ನ ಸೇನೆಯೆಲ್ಲ ಕ್ಷೀಣವಾಗುತ್ತಿರುವುದನ್ನು ಕಂಡು ಕುಂಭನು ಮುಂದೆ ಬಂದನು. ಅವನನ್ನು ಎದುರಿಸಹೋದ ಮೈಂದ, ವಿವಿದರು ಅವನ ಕೂರ್ಗಣೆಯ ಪೆಟ್ಟಿಗೆ ಕುಸಿದುಬಿದ್ದರು. ಮಾಂವಂದಿರಿಬ್ಬರೂ ಮೂರ್ಛಿತರಾಗಿ ಬಿದ್ದುದನ್ನು ಕಂಡು ಅಂಗದನು ಮುಂದೆ ಬಂದನು. ಅವನು ಕುಂಭನ ಬಾಣಗಳ ಪೆಟ್ಟನ್ನು ಲಕ್ಷಿಸದೆ ಪರ್ವತ-ವೃಕ್ಷಗಳನ್ನು ಕುಂಭನ ಮೇಲೆಸೆದ. ಕುಂಭ ಬಾಣಗಳಿಂದಲೆ ಅವುಗಳನ್ನು ಭೇದಿಸಿದನು. ಮೈಯೆಲ್ಲ ನೆತ್ತರು ಹರಿದರೂ ಲಕ್ಷಿಸದೆ ಅಂಗದನು ಮರವೊಂದನ್ನು ಕಿತ್ತು ಶತ್ರುವಿನೆಡೆಗೆ ಎಸೆದನು. ಕುಂಭನು ಅದನ್ನೂಕತ್ತರಿಸಿ ಅಂಗದನನ್ನು ಬಾಣಗಳಿಂದ ಮೋಹಗೊಳಿಸಿ ದನು. ರಣಾಂಗಣದಲ್ಲಿ ಮೂರ್ಛಿತನಾಗಿ ಬಿದ್ದಿರುವುದನ್ನು ಕಂಡು ಕಪಿಕುಲ ಕಂಗಾಲಾಗಿಕೂಗಿತು ! ಸುಷೇಣ-ಜಾಂಬುವಂತ-ನೀಲ-ನಲ-ತಾರ ಮೊದಲಾದವರೆಲ್ಲ ಕುಂಭನೊಡನೆ ಹೋರಾಡ ಹೋಗಿ ಸೋತು ಮರಳಿದರು ! ಕಪಿಸೇನೆ ವ್ಯಾಕುಲವಾದುದನ್ನು ಕಂಡು ಸುಗ್ರೀವನು ತಾನೇ ಯುದ್ಧಕ್ಕೆ ಆಣಿಯಾದನು. ಸುಗ್ರೀವನೆಸೆದ ವೃಕ್ಷಗಳನ್ನೂ ಕುಂಭನು ಕತ್ತರಿಸದೆ ಬಿಡಲಿಲ್ಲ. ಕುಪಿತನಾದ ಸುಗ್ರೀವ ಅವನ ಕೈಯಿಂದ ಕತ್ತಿಯನ್ನು ಕಸಿದುಕೊಂಡು ಅದನ್ನು ತುಂಡರಿಸಿ ದನು. ಈ ವೀರರಿಬ್ಬರ ಹೋರಾಟ ಪ್ರೇಕ್ಷಣೀಯವಾಗಿತ್ತು. ಕೊನೆಗೆ ಸುಗ್ರೀವನು ಕುಂಭನನ್ನು ಎತ್ತಿ ಕಡಲಿಗೆಸೆದನು. ಕಡಲಿನ ನೀರು ಉಕ್ಕಿ ದಡಮೀರಿ ಹರಿಯಿತು ! ಕುಂಭನು ಕಡಲಿನಿಂದ ಎದ್ದು ಬಂದು ಮತ್ತೆ ಹೋರಾಡ ಬಂದನು. ಆದರೆ ಸೋತು ಸುಣ್ಣ ವಾಗಿದ್ದ ಅವನಿಗೆ ಸುಗ್ರೀವನ ಒಂದು ಪೆಟ್ಟೇ ಸಾಕಾಯಿತು. ನೆಲಕ್ಕೆ ಉರುಳಿದ ಅವನು ಮತ್ತೆ ಏಳಲಿಲ್ಲ. ಸೋದರನ ಸಾವಿನಿಂದ ಕುಪಿತನಾದ ನಿಕುಂಭ ಬೆಂಕಿಯಂತೆ ಉರಿಯುತ್ತಲೆ ರಣಾಂಗಣಕ್ಕೆ ಬಂದನು. ಅವನ ಸಂರಂಭವನ್ನು ಕಂಡ ಸುಗ್ರೀವನೂ ಸಹ ನೂರು ಮಾರು ದೂರ ನೆಗೆದನಂತೆ ! ಉಳಿದ ಕಪಿಗಳ ಪಾಡೇನು ? ರುದ್ರನ ವರದಿಂದ ಸಾವಿಲ್ಲದ ನಿಕುಂಭನನ್ನು ಕಂಡು ದೇವತೆಗಳೂ ದಿಗಿಲಾದರು. ವಿಶ್ವವೇ ವಿತ್ರಸ್ತವಾಯಿತು. ಕಪಿಸೇನೆಗೆ ಒದಗಿದ ವಿಷಾದವನ್ನರಿತ ಹನುಮಂತ ನಿಕುಂಭನ ಎದುರು ನೆಗೆದು ತನ್ನ ವಿಶಾಲವಾದ ಎದೆಯನ್ನು ತೋರಿಸಿ ನುಡಿದನು: "ವೀರನಾದ ನಿಕುಂಭನೆ! ನಿನ್ನನ್ನು ಕಂಡೇ ಬೆದರುವ ಈ ಕಪಿ- ಗಳ ಗೋಜು ಬಿಡು. ಇದೊ, ಇಲ್ಲಿದೆ ನಿನ್ನ ಪ್ರಹಾರಕ್ಕೆ ಸರಿಯಾದ ತಾಣ. ಈ ಉಬ್ಬಿದ ಎದೆಯ ಮೇಲೆ ನಿನ್ನ ಆಯುಧದ ಬಲ- ಪರೀಕ್ಷೆಯಾಗಲಿ." ನಿಕುಂಭನು ತನ್ನ ಕೈಯಲ್ಲಿದ್ದ ಭಾರಿ ಪ್ರಮಾಣದ ಕಬ್ಬಿಣದ ಸಲಾಕೆಯನ್ನು ತಿರುಗಿಸಿ ಮಾರುತಿಯ ಎದೆಗೆ ಹೊಡೆದನು. ವಜ್ರ ಸಾರನಾದ ಪವಮಾನ ತನಯನ ಎದೆಗೆ ಕಬ್ಬಿಣದ ಪೆಟ್ಟು ನಾಟು ವುದೆ ? ಸಲಾಕೆಯೆ ಮುರಿದು ಕೆಳಗೆ ಬಿತ್ತು. ಮಾರುತಿಯ ಬಲ ವಾದ ಮುಷ್ಟಿ ಪ್ರಹಾರದಿಂದ ನಿಕುಂಭ ಮೂರ್ಛಿತನಾಗಿ ಬಿದ್ದ. ಕ್ಷಣದಲ್ಲಿ ಅವನು ಚೇತರಿಸಿಕೊಂಡು ಹನುಮಂತನನ್ನು ಹೆಗಲಿಗೇರಿಸಿ ಓಡತೊಡಗಿದನು. ಇದನ್ನು ಕಂಡು ಗಾವಿಲರಾದ ಕಪಿಗಳ ಕೂಗು, ಮಾರುತಿ ನಿಕುಂಭನನ್ನು ಹೊಡೆದು ಬೀಳಿಸಿದಾಗ ಪರಿಹಾಸದಲ್ಲಿ ಕೊನೆಗೊಂಡಿತು. ರಣಯಜ್ಞದಲ್ಲಿ ನಿಕುಂಭನೆಂಬ ಪಶುವನ್ನು ಹೋಮಿಸಿ ಹನುಮಂತನು ಯಜ್ಞೇಶ್ವರನನ್ನು ಸಂತಸಗೊಳಿಸಿದನು. ಕುಂಭಕರ್ಣನಿಗೆ ಸಮಬಲನೆನಿಸಿದ ನಿಕುಂಭನ ಮರಣದಿಂದ ರಾಕ್ಷಸಕುಲ ಗೋಳಿಟ್ಟಿತು. ದೇವಕುಲ ಸಂತಸದಲ್ಲಿ ನಲಿದಾಡಿತು. ಹನುಮಂತನನ್ನು ಲೋಕವೇ ಕೊಂಡಾಡಿತು. ಸುಪ್ತಘ್ನ, ಯಜ್ಞಕೋಪ, ಮಹಾಪಾರ್ಶ್ವ, ಮಹೋದರ, ಮಹಾಕಾಯ, ಶುಕ, ಸಾರಣ ಮೊದಲಾದ ಮುಖ್ಯ ಸೇನಾನಾಯಕರೆಲ್ಲ ರಾಮನ ಬಾಣಕ್ಕೆ ಅಸು ನೀಗಿದರು. ಸಿಂಹದ ಬಾಯಿಗೆ ಸಿಕ್ಕ ಮೃಗಗಳಂತಾಯಿತು ರಾಕ್ಷಸರ ಪಾಡು ! ತನ್ನ ಸೇನೆ ಬಡವಾಗುತ್ತಿರುವದನ್ನು ಕಂಡು ರಾವಣ ಚಿಂತಾತುರನಾದನು. ಆಗ ಅವನ ಮಕ್ಕಳಾದ ತ್ರಿಶಿರ, ಅತಿಕಾಯ, ದೇವಾಂತಕ, ನರಾಂತಕರು ತಂದೆಯನ್ನು ಸಂತೈಸಿ ಯುದ್ಧಕ್ಕೆ ತೆರಳಿದರು. ರಾವಣನ ಸೋದರರಾದ ಮತ್ತ-ಯುದ್ಧೋನ್ಮತ್ತ ಎಂಬಿಬ್ಬರು ಅವರ ಜತೆಗಾರರಾದರು. ಈ ವೀರರ ನೇತೃತ್ವದಲ್ಲಿ ದೈತ್ಯಸೇನೆ ಕಪಿಗಳನ್ನು ಪೀಡಿಸತೊಡಗಿತು. ಕಪಿಗಳಿಗೆ ಕೈಗೆ ಸಿಕ್ಕಿದ್ದೇ ಆಯುಧ ! ಆನೆಗಳ ಗುಂಪಿನಮೇಲೆ ಆನೆಗಳನ್ನೇ ಎತ್ತಿ ನೆಗೆದರು. ಕುದುರೆಗಳಮೇಲೆ ಕುದುರೆಗಳನ್ನು, ರಥಗಳಮೇಲೆ ರಥಗಳನ್ನು ಬಡಿದು ಅಪ್ಪಳಿಸಿದರು. ಒಬ್ಬ ರಾಕ್ಷಸ- ನನ್ನು ಕೊಲ್ಲಲಿಕ್ಕೆ ಇನ್ನೊಬ್ಬ ರಾಕ್ಷಸನೇ ಆಯುಧವಾದನು ! ಹೀಗೆ ಶತ್ರುಗಳನ್ನೆ ಆಯುಧವಾಗಿಯೂ ಬಳಸಿಕೊಂಡು ಶತ್ರುಗಳ ವಂಶವನ್ನು ನಿರ್ವಂಶ ಮಾಡಿದ ಕಪಿಗಳ ಯುದ್ಧ ಕೌಶಲ ಅಪೂರ್ವವಾಗಿತ್ತು ! ಆದರೆ ಕಾಲಪುರುಷನಂತೆ ಎದುರು ಬಂದು ನಿಂತ ನರಾಂತಕನನ್ನು ಕಂಡು ಕಪಿಗಳೂ ಕಂಗಾಲಾದರು. ಅವನೆಸೆದ ಒಂದು ಈಟಿ ನೂರಾರು ಮಂಗಗಳನ್ನು ಕಂಗೆಡಿಸಿತು. ಒಡನೆ ಸುಗ್ರೀವನು ನರಾಂತಕನೊಡನೆ ಹೋರಾಡಲು ಅಂಗದನನ್ನು ಕಳಿಸಿದನು. ಅಂಗದ ಮುಂದೆ ಬಂದು ಗರ್ಜಿಸಿದನು : " ದುರ್ಬಲರ ಮೇಲೇಕೆ ಪೌರುಷವನ್ನು ತೋರಿಸುವೆ ? ನಿನ್ನ ಈಟಿ ನನ್ನ ಎದೆಯ ಮೇಲೆರಗಲಿ. " ನರಾಂತಕನು ಬಲವಾಗಿ ಬೀಸಿದ ಈಟಿ ಅಂಗದನ ಎದೆಗೆ ನಾಟಿ ಮುರಿದು ಬಿತ್ತು. ಜತೆಗೆ ಅಂಗದನ ಪ್ರಹಾರವನ್ನು ಸಹಿಸಲಾರದ ನರಾಂತಕನ ಕುದುರೆಯೂ ಕುಸಿದುಬಿತ್ತು. ನರಾಂತಕನು ಬಿಗಿದ ಏಟು ಅಂಗದನಿಗೆ ಮೂರ್ಛೆ ಬರಿಸಿದರೂ ಕೂಡಲೆ ಅವನು ಎಚ್ಚೆತ್ತು, ಶತ್ರುವಿಗೆ ಪ್ರತಿಪ್ರಹಾರವನ್ನಿತ್ತನು. ನರಾಂತಕನು ಸಿಡಿದೆದ್ದು ಖಡ್ಗವನ್ನು ಝಳಪಿಸಿದನು. ಅಂಗದನು ಅದನ್ನು ಕಸಿದುಕೊಂಡು ಆ ಕತ್ತಿಯಿಂದಲೇ ನರಾಂತಕನನ್ನು ಅಂತಕನೆಡೆಗೆ ಕಳಿಸಿದನು. ನರಾಂತಕನ ಸಾವಿನಿಂದ ಕೆರಳಿದ ದೇವಾಂತಕನನ್ನು ಕಂಡು ಜಾಂಬವಂತನೇ ಮೊದಲಾದ ಮಹಾವೀರ ಕಾತರರಾದರು ! ಅಂಗದನೆಸೆದ ಎಲ್ಲ ಮರಗಳನ್ನೂ ದೇವಾಂತಕನು ಬಾಣಗಳಿಂದ ಭೇದಿಸಿ ಅಂಗದನನ್ನೂ ಗಾಸಿಗೊಳಿಸಿದನು. ಆಗ ಸುಗ್ರೀವನು ಮರಗಳಿಂದ ತುಂಬಿದ ದೊಡ್ಡ ಬೆಟ್ಟವೊಂದನ್ನೆ ಕಿತ್ತು ತಂದನು. ದೇವಾಂತಕನ ಒಂದು ಬಾಣದಿಂದ ಬೆಟ್ಟ ಮಣ್ಣು ಪಾಲಾಯಿತು. ಇನ್ನೊಂದು ಬಾಣ ಸುಗ್ರೀವನ ಎದೆಗೆ ನಾಟಿ ಅವನನ್ನು ಎಚ್ಚರ ತಪ್ಪಿಸಿತು ! ದೇವಾಂತಕನ ಅಸಾಧಾರಣವಾದ ಪರಾಕ್ರಮವನ್ನು ಕಂಡು ಮಾರುತಿಯೆ ಅವನಿಗೆ ಯುದ್ಧಾಹ್ವಾನವನ್ನಿತ್ತನು. ದೇವಾಂತಕನು ಮುನ್ನುಗ್ಗುತ್ತಿರುವಂತೆ ಅವನ ರಥ, ಕುದುರೆ, ಸಾರಥಿ, ಧನಸ್ಸು ಎಲ್ಲವನ್ನೂ ಮಾರುತಿ ಪುಡಿಮಾಡಿದನು. ಆಗ ದೇವಾಂತಕನು ಖಡ್ಗವನ್ನೆತ್ತಿಕೊಂಡನು. ಅವನನ್ನು ತೀರಿಸಲು ಮಾರುತಿಗೆ ಎಷ್ಟು ಹೊತ್ತು ? ಕ್ಷಣಾರ್ಧದಲ್ಲಿ ಅವನನ್ನು ನೆಲಕ್ಕುರುಳಿಸಿ ಅವನ ನೆತ್ತಿಯನ್ನು ತುಳಿದು ನಿಂತನು. ದೇವತೆಗಳು, ಕಪಿಗಳು ಅವನನ್ನು ಕಣ್ತುಂಬ ಕಂಡು ಮನಸಾರೆ ಹರಸಿದರು. ಕಪಿಗಳನ್ನು ಪೀಡಿಸುತ್ತ ಮುನ್ನುಗ್ಗುತ್ತಿರುವ ಯುದ್ದೋನ್ಮತ್ತನೂ, ಮತ್ತನೂ ಮಾರುತಿಯ ಒಂದೇ ಏಟಿಗೆ ಜೀವಕಳೆದುಕೊಂಡರು! ಈಗ ತ್ರಿಶಿರನ ಸರದಿ. ಮೊದಲು ಮಾರುತಿ ಅವನ ವಾಹನವನ್ನು ಪುಡಿಮಾಡಿದನು. ಅವನ ಕೈಯಲ್ಲಿದ್ದ ಚಾಪವನ್ನೂ ಖಡ್ಗವನ್ನೂ ಕಸಿದುಕೊಂಡು ಮೊದಲ ಸೋದರ ರೆಡೆಗೆ ಅವನನ್ನೂ ಕಳಿಸಿಕೊಟ್ಟನು. ತ್ರಿಶಿರನ ಮೂರು ಶಿರಸ್ಸು- ಗಳೂ ನೆಲಕ್ಕುರುಳಿದವು ! ರಾಮಭದ್ರನ ಪರಮ ಪ್ರಿಯನಾದ ಮಾರುತಿಯಿಂದ ಕಪಿಗಳು ಜಯದ ಪಥವನ್ನು ಕಂಡರು; ಅವನ ಸಿಂಹನಾದದಲ್ಲಿ ಭಗವಂತನ ಗುಣಗಾನವನ್ನು ಕಂಡರು. ಅತಿಕಾಯ-ಮಕರಾಕ್ಷರೂ ಮಡಿದರು ಸೋದರರ ಸಾವು ಅತಿಕಾಯನಿಗೆ ಸಂತಾಪವನ್ನುಂಟು ಮಾಡಿತು. ಅವನು ಬ್ರಹ್ಮನು ಕರುಣಿಸಿದ ರಥವನ್ನೇರಿ ಬಂದನು. ಬ್ರಹ್ಮನ ವರದಿಂದ ಮತ್ತೇರಿದ ಅತಿಕಾಯನ ಆಟೋಪವೇ ಭಯಾನಕವಾಗಿತ್ತು. ಕುಮುದ-ವಿವಿದ ಮೈಂದ ಮೊದಲಾದ ಎಲ್ಲ ಕಪಿ ಪ್ರಧಾನರನ್ನೂ ಸೋಲಿಸಿ, ಅವನು ನೇರಾಗಿ ರಾಮ- ನಿದ್ದೆಡೆಗೆ ನಡೆದನು. ನಡುದಾರಿಯಲ್ಲಿ ಲಕ್ಷ್ಮಣನ ಶರವರ್ಷ ಅವನನ್ನು ತಡೆಯಿತು. ಸಿಟ್ಟುಗೊಂಡ ಅತಿಕಾಯ ಲಕ್ಷ್ಮಣನನ್ನು ಗದರಿಸಿದನು: "ಸುಮಿತ್ರೆಯ ಮಗನೆ ! ನೀನಿನ್ನೂ ಹಸುಳೆ, ನಿನ್ನಲ್ಲಿ ತ್ರಾಣವೂ ಇಲ್ಲ. ಅಸ್ತ್ರವಿದ್ಯೆಯ ಪರಿಜ್ಞಾನವೂ ಇಲ್ಲ. ಹೊರಟುಹೋಗು ನನ್ನೆದುರಿನಿಂದ. ಹರೆಯದಲ್ಲಿ ಸಾಯಬೇಕೆಂದು ಹರಕೆ ಹೊತ್ತಿ- ರುವೆಯೇನು ?" "ನಾನು ಸಣ್ಣವನಿರಬಹುದು. ಆದರೆ ನನ್ನ ಪರಾಕ್ರಮ ಸಣ್ಣದಲ್ಲ. ಓ ಅತಿಕಾಯನೆ, ದೇಹದ ಉದ್ದಗಲಗಳಿಂದ ವ್ಯಕ್ತಿಯ ಶಕ್ತಿಯನ್ನಳೆವುದಲ್ಲ. ಬಾಲಕ ವಟುವಾದ ವಾಮನನೆ ಬಲಿ- ಯೆದುರು ತ್ರಿವಿಕ್ರಮನಾಗಲಿಲ್ಲವೆ ? ನನ್ನ ಕೈಯಲ್ಲಿ ಜೀವ ಬಿಡುವ ಮುನ್ನ ನಿನ್ನ ಪರಾಕ್ರಮದ ಪ್ರದರ್ಶನ ನಡೆಯಲಿ." ಅತಿಕಾಯನೆಸೆದ ಆರು ಬಾಣಗಳನ್ನೂ ಅರ್ಧ ಮಾರ್ಗದಲ್ಲಿ ಲಕ್ಷ್ಮಣನು ತುಂಡರಿಸಿ ಅವನೆಡೆಗೆ ಒಂದು ನಿಶ್ಚಿತವಾದ ಬಾಣವ- ನ್ನೆಸೆದನು. ಅದು ಅತಿಕಾಯನ ಹಣೆಯಲ್ಲಿ ನಾಟಿತು. ಆದರೂ ಅವನು ಹೇಗೋ ಚೇತರಿಸಿಕೊಂಡು ಮತ್ತೆ ಒಂಬತ್ತು ಬಾಣಗಳನ್ನು ಎಸೆದನು. ಲಕ್ಷ್ಮಣನು ಅವುಗಳ- ನ್ನೂ ತುಂಡರಿಸಿದನು. ಮತ್ತೆ ಮಹಾಶರವೊಂದನ್ನು ಅತಿಕಾಯ ಪ್ರಯೋಗಿಸಿದನು. ಅದು ಲಕ್ಷ್ಮಣನ ಎದೆಯನ್ನು ಗಾಯಗೊಳಿ- ಸಿತು. ಆದರೂ ಅವನು ಕಂಗೆಡದೆ ಶತ್ರುವಿನ ಮೇಲೆ ಬಾಣಗಳ ಮಳೆಯನ್ನೆ ಸುರಿಸಿದನು. ಪ್ರತಿಯಾಗಿ ಅತಿಕಾಯನೂ ಅಸಂಖ್ಯ ಬಾಣಗಳನ್ನು ಪ್ರಯೋಗಿಸಿದನು. ಮುಗಿಲು ಬಾಣಗಳಿಂದ ಮುಚ್ಚಿ ಕತ್ತಲೆ ಕವಿಯಿತು. ಲಕ್ಷ್ಮಣನು ಆಗ್ನೇಯ ಮಂತ್ರವನ್ನು ಜಪಿಸಿ ಬಾಣವನ್ನು ಹೂಡಿದನು. ಮಂತ್ರ ಪ್ರಭಾವದಿಂದಲೇ ಅತಿಕಾಯನು ಅದನ್ನು ಶಾಂತಗೊಳಿಸಿ ಯಾಮ್ಯಾಸ್ತ್ರವನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸಿ ದನು. ಲಕ್ಷ್ಮಣನ ವಾಯವ್ಯಾಸ್ತ್ರ ಅದನ್ನೂ ಪರಾಭವಗೊಳಿಸಿತು. ಹೀಗೆ ಹೊತ್ತು ಕಳೆವುದು ಸೌಮಿತ್ರಿಗೆ ಸರಿಬರಲಿಲ್ಲ. ಅವನು ಹರಿತವಾದ ಬಾಣಗಳಿಂದ ಅತಿಕಾಯನ ತಲೆ-ತೋಳುಗಳನ್ನು ಕತ್ತರಿಸಿಬಿಟ್ಟನು. ಆದರೆ ಅಚ್ಚರಿ ! ಅತಿಕಾಯನು ಸಾಯಲಿಲ್ಲ. ಒಂದು ತಲೆಯ ಬದಲು ಎರಡು ತಲೆಗಳು. ಎರಡು ತೋಳುಗಳ ಬದಲು, ನಾಲ್ಕು ತೋಳುಗಳೂ ಮೂಡಿವೆ. ಅವುಗಳನ್ನೂ ಕತ್ತರಿಸಿದರೆ ಮತ್ತೆ ಇಮ್ಮಡಿಯಾಗಿ ಬೆಳೆಯುತ್ತಿದ್ದವು. ಬಿಟ್ಟ ಬಾಣ- ಗಳು ಅವನ ಮೈಯಲ್ಲಿ ಮರಿಯಿಡುತ್ತಿದ್ದುವೇನೊ ! ಸೌಮಿತ್ರಿಗೆ ಬಗೆಹರಿಯದ ಸಮಸ್ಯೆಯಾಯಿತು. ಈ ಪಾಪಿ- ಯನ್ನುಕೊಲ್ಲುವ ಬಗೆ ಹೇಗೆ ? ಶತ್ರುವನ್ನು ಸೋಲಿಸಲಾರದೆ ಕೈ ಚೆಲ್ಲಿ ಕುಳಿತುಕೊಳ್ಳುವುದೆ ? ವಾಯುದೇವನು ಅಶರೀರನಾಗಿ ಆಕಾಶದಲ್ಲಿ ನುಡಿದ ಮಾತು ಈ ಸಮಸ್ಯೆಯನ್ನು ಪರಿಹರಿಸಿತು: "ಲಕ್ಷ್ಮಣ ! ಬ್ರಹ್ಮಾಸ್ತ್ರದಿಂದಲ್ಲದೆ ಬೇರೆ ಅಸ್ತ್ರಗಳಿಂದ ಇವನಿಗೆ ಸಾವಿಲ್ಲ. ಬ್ರಹ್ಮಾಸ್ತ್ರವನ್ನು ಹೂಡು." ಪ್ರಾಣದೇವನು ನಡೆಸಿದ ಈ ಚಮತ್ಕಾರ ಅತಿಕಾಯನಿಗೆ ತಿಳಿಯಲೇ ಇಲ್ಲ. ಲಕ್ಷ್ಮಣನ ಬ್ರಹ್ಮಾಸ್ತ್ರ ಪರಿವಾರ ಸಮೇತನಾದ ಅತಿಕಾಯನನ್ನು ಸುಟ್ಟು ಬಿಟ್ಟಿತು. ಶತ್ರುವಿಜಯದಿಂದ ಸಂತಸ ಗೊಂಡ ಲಕ್ಷ್ಮಣನು ರಾಮನೆಡೆಗೆ ಬಂದು ಕಾಲಿಗೆರಗಿದನು. ಲಕ್ಷ್ಮಣನು ರಾಮಚಂದ್ರನ ಪ್ರೇಮಾಲಿಂಗನವನ್ನು ಪಡೆವ ಭಾಗ್ಯವಂತನಾದನು. ಪುತ್ರಶೋಕದಿಂದ ದುಃಖಿತನಾದ ರಾವಣ ತಾನೇ ಯುದ್ಧಕ್ಕೆ ಹೊರಟು ನಿಂತನು. ಆಗ ಖರಾಸುರನ ಮಗನಾದ ಮಕರಾಕ್ಷನು ಮುಂದೆ ಬಂದು ವಿಜ್ಞಾಪಿಸಿಕೊಂಡನು: "ಮಹಾರಾಜ ರಣಪಂಡಿತನಾದ ನನಗೆ ಅಪ್ಪಣೆಯಾಗಬೇಕು. ನನ್ನ ತಂದೆಯ ವೈರಿಯಾದ ರಾಮಚಂದ್ರನಿಗೆ ಬುದ್ಧಿಗಲಿಸುವ ಸುಯೋಗವನ್ನು ನನಗೆ ದಯಪಾಲಿಸಬೇಕು." ರಾವಣನ ಒಪ್ಪಿಗೆಯನ್ನು ಪಡೆದು ಮಕರಾಕ್ಷನು ಕೊಳುಗುಳ- ಕ್ಕಿಳಿದನು. ಅವನ ಅನುಯಾಯಿಗಳಾದ ರಾಕ್ಷಸರೂ ಕಪಿಗಳ ಹೊಡೆತವನ್ನು ತಿನ್ನಲು ಸಿದ್ಧರಾದರು. ಮಕರಾಕ್ಷನ ಬಾಣವನ್ನು ಎದುರಿಸುವುದು ಕಪಿಗಳಿಗೆ ಅಸಾಧ್ಯವಾಯಿತು. ಲಕ್ಷ್ಮಣನ ಬಾಣ- ಗಳನ್ನು ಕೂಡ ಲೆಕ್ಕಿಸದೆ ಅವನು ರಾಮನೆಡೆಗೆಸಾಗಿ ಗರ್ಜಿಸಿದನು: "ರಾಮಭದ್ರ ! ನನ್ನ ತಂದೆಯನ್ನು ಕೊಂದವನು ನೀನೇ ಅಲ್ಲವೆ ? ಅದಕ್ಕೆ ತಕ್ಕ ಪ್ರತೀಕಾರವನ್ನು ಮಾಡಲು ನಾನು ಬಂದಿದ್ದೇನೆ. ನೀನು ಮಾಡಿದ ಉಪಕಾರದ ಋಣ ತೀರಿಸಲು ಬಂದಿದ್ದೇನೆ." ರಾಮಚಂದ್ರನೂ ನಗುತ್ತಲೆ ಉತ್ತರಿಸಿದನು: "ನನ್ನ ಬಾಣಗಳಿಗೆ ಬಲಿಯಾದ ಮೇಲೆ ನೀನು ನಿನ್ನ ಮಾಂಸ ಗಳಿಂದ ರಣಹದ್ದುಗಳ ಋಣವನ್ನು ಮಾತ್ರ ತೀರಿಸುವುದು ಸಾಧ್ಯ." ಇಬ್ಬರೂ ಅನ್ಯೋನ್ಯವಾಗಿ ಬಾಣಗಳನ್ನು ಸುರಿಸತೊಡಗಿ ದರು. ಮಕರಾಕ್ಷನ ಬಾಣಗಳನ್ನೆಲ್ಲ ನಡುದಾರಿಯಲ್ಲಿ ರಾಮನ ಬಾಣಗಳು ಮುಗಿಸಿಬಿಡುತಿದ್ದವು. ರಾಮಚಂದ್ರನ ಇನ್ನೊಂದು ಬಾಣವಂತೂ ಶತ್ರುವಿನ ರಥ, ಸಾರಥಿಗಳನ್ನೂ ನಾಶಗೊಳಿಸಿತು. ಆಗ ಮಕರಾಕ್ಷನು ಶೂಲಧಾರಿಯಾಗಿ ಆಕಾಶಕ್ಕೆ ನೆಗೆದನು. ರಾಮನ ಬಾಣ ಅವನ ಶೂಲವನ್ನು ಮಾತ್ರವಲ್ಲದೆ ತಲೆಯನ್ನೂ ಕತ್ತರಿಸಿತು ! ಇತ್ತ ಮಕರಾಕ್ಷನ ಸೈನಿಕರೂ ಕಪಿಗಳ ಪೆಟ್ಟನ್ನು ತಾಳಲಾರದೆ ಜೀವ ತೊರೆಯುತ್ತಿದ್ದರು. ಬದುಕಿ ಉಳಿದವರು ಕಾಲಿಗೆ ಬುದ್ಧಿ ಹೇಳಿದರು. ಭಗವಂತನ ಲೀಲೆಯನ್ನು ಕಾಣಲು ಮುಗಿಲಲ್ಲಿ ಮುತ್ತಿದ ದೇವತೆ ಗಳೂ ಮುನಿಗಳೂ ಭಕ್ತಿಪುಲಕಿತರಾಗಿ ಕೈಮುಗಿದರು. ಲಂಕೇಶ್ವರನೂ ತಲೆ ತಗ್ಗಿಸಿದನು ! ಮಕರಾಕ್ಷನ ಮರಣದಿಂದ ದಶಕಂಠನು ದುಃಖಿತನೂ ಆದ; ಕುಪಿತನೂ ಆದ. ಸೇನಾಸನ್ನಾಹವೆಲ್ಲ ನಡೆಯಿತು. ಸ್ವಯಂ ರಾವಣನೇ ಕದನ ಕಣಕ್ಕಿಳಿದನು. ರಾಜಾಲಂಕಾರಗಳಿಂದ ಅಲಂಕೃತನಾದ ಲಂಕಾನಾಥನನ್ನು ಹೊತ್ತ ಭಾಸುರವಾದ ರಥ ಯುದ್ಧದ ಬೀದಿಯಲ್ಲಿ ಸಾಗಿತು. ರಾವಣನ ಕರ್ರಗಿನ ಮೈಗೆ ಬೆಳ್ಗೊಡೆಯು ಒಪ್ಪವಿಟ್ಟಿತ್ತು. ಕಪಿಗಳು ರಾವಣನನ್ನು ಕಂಡೇ ಹೆದರಿ ಓಡಿದರು ! ಹತ್ತು ತಲೆಗಳು; ಕೋಪದಿಂದ ಕಿಡಿ ಕಾರುವ ಇಪ್ಪತ್ತು ಕಣ್ಣುಗಳು; ಮಹಾಸರ್ಪಗಳಂತೆ ತೊನೆಯುತ್ತಿರುವ ಇಪ್ಪತ್ತು ತೋಳುಗಳು ! ಈ ಅಪೂರ್ವಾಕೃತಿಯ 'ಪ್ರಾಣಿ'ಯನ್ನು ಕಂಡು ಕಪಿಗಳಿಗೆ ಅಚ್ಚರಿಯೂ ಭಯವೂ ಜತೆಗೇ ಉಂಟಾಯಿತು. ಗಜ, ಗವಯ, ಗವಾಕ್ಷ, ಗಂಧಮಾದನ, ವೃಷ, ಕತ್ಥನ ಈ ಆರು ಮಂದಿ ಕಪಿಪ್ರವೀರರು ರಾವಣ ಸೇನೆಯನ್ನು ಸಂಹರಿಸತೊಡಗಿ ದರು. ಆದರೆ ರಾವಣನ ಆರು ಬಾಣಗಳು ಅವರನ್ನು ಸಂಕಟ- ಕ್ಕೀಡುಮಾಡಿದವು. ಮೈಂದ, ವಿವಿದ, ಜಾಂಬವಂತರು ಬಂಡೆಗಳನ್ನು ಅವನ ಮೇಲೆಸೆದರು. ರಾವಣನು ಅವುಗಳನ್ನು ಭೇದಿಸಿ ಈ ಕಪಿವೀರ- ರನ್ನೂ ರಣಾಂಗಣಕ್ಕೆ ಕೆಡವಿದನು. ಮುಂದೆಬಂದ ಅಂಗದನಿಗೂ ಇದೇ ಗತಿಯಾಯಿತು. ಹೆಚ್ಚೇನು ? ಕಪಿರಾಜ ಸುಗ್ರೀವನಿಗೂ ರಾವಣನ ಪೆಟ್ಟಿನಿಂದ ಚೇತರಿಸಿಕೊಳ್ಳುವುದಾಗಲಿಲ್ಲ. ಅನಂತರ ಹನುಮಂತನು ತೋಳನ್ನೆತ್ತಿ ರಾವಣನಿಗೆ ಒಂದು ಮೃದುವಾದ ಪ್ರಹಾರವನ್ನಿತ್ತನು. ಅವನಿಗೆ ಆ ಪ್ರಹಾರವೇ ಅಸಹ್ಯವಾಯಿತು. ಅವನ ಹತ್ತು ಬಾಯಿಗಳೂ ರಕ್ತವನ್ನು ಕಾರ- ತೊಡಗಿದವು. ಅದನ್ನು ಕಂಡವರು ಲಾವಾರಸವನ್ನು ಸುರಿಯು- ತ್ತಿರುವ ಪರ್ವತದ ಗುಹೆಗಳನ್ನು ನೆನೆದುಕೊಂಡರು ! ಕಣ್ಣು ಕತ್ತಲೆ ಕವಿದಂತಾಗಿ ಕ್ಷಣಕಾಲ ಕುಕ್ಕರಿಸಿದ ರಾವಣ ತಟ್ಟನೆ ಎದ್ದು ನಿಂತು ಅಚ್ಚರಿಯಿಂದ ನುಡಿದನು : "ಹನುಮನ್ ! ನಿನ್ನ ಪೌರುಷ ಅದ್ಭುತವಾಗಿದೆ; ಅಪಾರ ವಾಗಿದೆ. ನನಗೆ ಮೂರ್ಛೆ ಬರಿಸುವಂಥ ಪ್ರಹಾರವನ್ನು ಕೊಡು- ವುದು ಇನ್ನಾರಿಗೆ ಸಾಧ್ಯ ! ನಿನ್ನಂಥ ವೀರನು ಇನ್ನೊಬ್ಬನಿರ- ಲಾರನು !" " ರಾವಣ ! ಇದು ಮಿದುವಾದ ಪೆಟ್ಟು. ಅದರಿಂದ ನೀನು ಬದುಕಿದೆ. ನಾನು ಬಲವಾಗಿ ಪ್ರಹರಿಸುತ್ತಿದ್ದರೆ ನನ್ನನ್ನು ಪ್ರಶಂಸಿ- ಸಲಿಕ್ಕೆ ನೀನೆಲ್ಲಿರುತ್ತಿದ್ದೆ ? ನನ್ನ ದೃಢವಾದ ಮುಷ್ಟಿ ಪ್ರಹಾರಕ್ಕೆ ನಿನ್ನ ಎಲುವು ಹಿಟ್ಟಾದೀತು. ತಿಳಿದಿರಲಿ." "ನೀನು ಮತ್ತನಿರುವೆ. ನನ್ನ ಪ್ರಹಾರದ ರುಚಿಯನ್ನೂ ನೀನು ನೋಡಬೇಕು." ಎಂದವನೆ ರಾವಣನೂ ಸರ್ವ ಪ್ರಯತ್ನದಿಂದ ಹನುಮಂತನಿಗೆ ಬಲವಾಗಿ ಗುದ್ದಿದನು. ಹನುಮಂತನು ಅದರಿಂದ ವಿಹ್ವಲನಾದಂತೆ ಕುಳಿತುಕೊಂಡನು. ರಾವಣನು ಇದೇ ಸಮಯವೆಂದು ಬಗೆದು ಅಲ್ಲಿಂದ ತಪ್ಪಿಸಿಕೊಂಡು ನಡೆ ದನು. "ಕದ್ದು ಓಡಿ ಹೋಗಬೇಡ ನಿಲ್ಲು" ಎಂದು ಹನುಮಂತನು ಗದರಿಸುತ್ತಿದ್ದಂತೆಯೇ ರಾವಣ ನೀಲನ ಮೇಲೆ ಬಾಣಗಳನ್ನು ಸುರಿಸುತ್ತ ಮುಂದೆ ಸಾಗಿದನು. ನೀಲನಿಗೆ ರಾವಣನೊಡನೆ ಹೋರಾಡುವುದಕ್ಕಿಂತ ಅವನಿಗೆ ಕೀಟಲೆ ಮಾಡುವುದು ಉಚಿತ ವೆನಿಸಿತು. ಕೂಡಲೆ ರಾವಣನ ಮುಂದಿದ್ದ ನೀಲ ಅವನ ರಥದ ಧ್ವಜದ ಮೇಲೇರಿ ಕುಳಿತುಕೊಂಡನು. ಒಮ್ಮೆ ಕುದುರೆಗಳ ಮೇಲೆ, ಒಮ್ಮೆ ರಥದ ಮೇಲೆ, ಒಮ್ಮೆ ಧನುಸ್ಸಿನ ತುದಿಯಲ್ಲಿ ಹಾರಾಡಿ ಮರುಳುಗೊಳಿಸಿದನು. ನನ್ನೊಡನೆ ಹೋರಾಡುತ್ತಿದ್ದ ಆ ಕಪಿ- ಯೆಲ್ಲಿ ? ಎಂದು ರಾವಣನು ಅತ್ತಿತ್ತ ಕಣ್ಣು ಹಾಯಿಸುತ್ತಿದ್ದಾಗ ನೀಲನು ರಾವಣನ ತಲೆಗಳ ಮೇಲೇರಿ ಕುಳಿತಿದ್ದನು. ರಾಕ್ಷಸ- ರಾಜನು ಕುಪಿತನಾದುದನ್ನು ಕಂಡು ನೀಲ ಇನ್ನಷ್ಟು ಗರ್ಜಿಸಿ- ದನು. ರಾವಣ ದಿಙ್ಮೂಢನಾದನು. ಕಪಿಗಳೆಲ್ಲ ಕೈ ತಟ್ಟಿ ನಕ್ಕು- ಬಿಟ್ಟರು. ಇದು ರಾವಣನಿಗೆ ಸಹಿಸಲಾಗಲಿಲ್ಲ. ಅವನು ನೀಲ- ನನ್ನು ಗದರಿಸಿ ನುಡಿದನು : "ಮಂಗಗಳ ಬುದ್ಧಿಯನ್ನು ನನ್ನೆದುರು ತೋರಬೇಡ. ನಿನ್ನಲ್ಲಿ ಕಸುವಿರುವುದಾದರೆ ನನ್ನ ಬಾಣದಿಂದ ನಿನ್ನನ್ನು ಕಾಪಾಡಿಕೋ." ಎಂದು ಆಗೇಯಾಸ್ತ್ರವನ್ನು ನೀಲನ ಮೇಲೆ ಪ್ರಯೋಗಿಸಿದನು. ನೀಲ ಅಗ್ನಿಯ ಮಗನಲ್ಲವೆ ! ಅಗ್ನಿ ಸ್ವರೂಪನಲ್ಲವೆ? ಅವನಿಗೆ ಆಗೇಯಾಸ್ತ್ರ ಏನು ಮಾಡಬಲ್ಲದು ? ರಾವಣನ ಶಿರಸ್ಸಿನಿಂದ ಕೆಳಗೆ ಬಿದ್ದರೂ ಅವನ ಮೈ ಅಗ್ನಿ ದಗ್ಧವಾಗಿರಲಿಲ್ಲ. ರಾವಣ ರಾಮನೆಡೆಗೆ ನಡೆದನು. ನಡುದಾರಿಯಲ್ಲಿ ಲಕ್ಷ್ಮಣ ತಡೆದು ನಿಲ್ಲಿಸಿದನು. "ನನ್ನ ಕಣ್ಣಿಗೆ ಬಿದ್ದೆಯಾ, ಇಲ್ಲಿಗೆ ನಿನ್ನ ಆಯುಸ್ಸು ಮುಗಿಯಿತು." ಎಂದ ರಾವಣ. ಲಕ್ಷ್ಮಣ ಅದಕ್ಕೆ ಸಮರ್ಪಕವಾಗಿಯೇ ಉತ್ತರಿಸಿದನು : " ಶೂರರಿಗೆ ಬಾಯಿಬಡಕತನ ಸಲ್ಲದು. ನಿನ್ನ ಪರಾಕ್ರಮಕ್ಕೆ ಧನುಸ್ಸಿನ ಪುರಾವೆ ದೊರಕಲಿ. " ರಾವಣನೆಸೆದ ಏಳು ಬಾಣಗಳನ್ನೂ ಕತ್ತರಿಸಿದ ಲಕ್ಷ್ಮಣ ರಾವಣನ ಮೇಲೆ ಬಾಣಗಳನ್ನು ಸುರಿದನು. ರಾವಣ ಅವುಗಳನ್ನು ಭೇದಿಸಿದನು. ಇಬ್ಬರಲ್ಲೂ ಅಸಂಖ್ಯ ಬಾಣಗಳ ವಿನಿಮಯ ನಡೆಯಿತು. ಯಾವೊಬ್ಬನೂ ಕಳೆಗುಂದಲಿಲ್ಲ. ಕೊನೆಗೆ ರಾವಣನು ಬ್ರಹ್ಮದತ್ತವಾದ ಅಮೋಘಾಸ್ತ್ರವೊಂದನ್ನು ಪ್ರಯೋಗಿಸಿದನು. ಅದು ಲಕ್ಷ್ಮಣನ ಹಣೆಯನ್ನು ಭೇದಿಸಿತು. ಮೂರ್ಛಿತನಾದ ಸೌಮಿತ್ರಿ ನೆಲದಮೇಲೆ ಕುಸಿದು ಬಿದ್ದನು. ರಾವಣನು ಸರ್ರನೆ ರಥದಿಂದಿಳಿದು ಲಕ್ಷ್ಮಣನನ್ನು ಎತ್ತಿ- ಕೊಂಡು ಹೋಗಲು ಪ್ರಯತ್ನಿಸಿದನು. ಆಗ ಲಕ್ಷ್ಮಣನು ತನ್ನ ನಿಜ ರೂಪವಾದ ಶೇಷನನ್ನು ಸ್ಮರಿಸಿಕೊಂಡನು. ರಾವಣನ ಇಪ್ಪತ್ತು ತೋಳುಗಳೂ ಕೂಡಿ ಲಕ್ಷ್ಮಣನನ್ನು ಒಂದಂಗುಲ ಕದಲಿಸಲೂ ಅಸಮರ್ಥವಾದವು ! ಪ್ರತಿಯಾಗಿ ರಾವಣನ ದೈತ್ಯ ವೇಗದ ಸೆಳೆತಕ್ಕೆ ಗಿರಿ, ಸಮುದ್ರಗಳಿಂದ ಕೂಡಿದ ಭೂಮಂಡಲವೇ ಹೆದರಿದ ಹೆಣ್ಣಿನಂತೆ ಕಂಪಿಸಿತು ! ಸಾವಿರ ತಲೆಯ ಶೇಷನಲ್ಲವೆ ಅವನು ? ಅವನ ಒಂದು ತಲೆ- ಯಲ್ಲಿ ಇಡಿಯ ಭೂಮಂಡಲವು ಸಾಸಿವೆಕಾಳಿನಂತೆ ಕಂಗೊಳಿಸು ವುದಲ್ಲವೆ? ಅಂಥ ಆದಿಶೇಷನನ್ನು ನಲುಗಿಸುವುದು ಯಾರಿಗೆ ಸಾಧ್ಯ? ಅವನನ್ನು ಬಲಪ್ರಯೋಗದಿಂದ ಕೊಂಡೊಯ್ಯುವ ಅದಟು ಯಾರಿಗಿದೆ ? ಲಕ್ಷ್ಮಣನು ಮೂರ್ಛಿತನಾದುದನ್ನು ಕಂಡು ಕುಪಿತನಾದ ಮಾರುತಿ ವೇಗವಾಗಿ ಬಂದು ರಾವಣನಿಗೆ ಬಲವಾದ ಏಟೊಂ- ದನ್ನು ಬಿಗಿದನು. ರಾವಣನಿಗೆ ಬವಳಿ ಬಂದಂತಾಯಿತು. ಅವನು ಎಲ್ಲ ಮೋರೆಗಳಿಂದ ನೆತ್ತರು ಕಾರುತ್ತ ಸತ್ತವರಂತೆ ಬಿದ್ದು- ಕೊಂಡನು. ಅಷ್ಟರಲ್ಲಿ ಮಾರುತಿ ಲಕ್ಷ್ಮಣನ ಮೇಲಣ ಪ್ರೀತಿಯಿಂದ ಅವನನ್ನೆತ್ತಿಕೊಂಡು ರಾಮಚಂದ್ರನ ಬಳಿ ತಂದಿರಿ- ಸಿದನು, ಮಗುವನ್ನು ತಂದೆಯಬಳಿ ಇರಿಸುವಂತೆ. ಕರುಣೆ ತುಂಬಿದ ರಾಮಚಂದ್ರ ತನ್ನ ಪ್ರೀತಿಯ ತಮ್ಮನ ಮೈಯಮೇಲೆ ಕೈಯಾಡಿಸಿ ಹಣೆಗೆ ನಾಟಿದ ಬಾಣವನ್ನು ಕಿತ್ತೆಳೆದನು. ರಾಮ- ಚಂದ್ರನ ಅಮೃತಸ್ಪರ್ಶದಿಂದ ಲಕ್ಷ್ಮಣನ ವೇದನೆ ಪರಿಹಾರ- ವಾಯಿತು. ಚಂದ್ರನಿಗೆ ಹಿಡಿದಿದ್ದ ರಾಹು ತೊಲಗಿತು. ಮತ್ತೆ ಚಂದ್ರ ಮುಗಿಲಲ್ಲಿ ಬೆಳಗಿದನು. ಇತ್ತ ರಾವಣನಿಗೂ ತಿಳಿವುಬಂತು. ಅವನು ಎದ್ದು ನಿಂತು ರಾಮನಿದ್ದೆಡೆಗೆ ಸಾಗಿದನು; ಸಿಂಹದೊಡನೆ ಹೋರಾಡುವ ಚಪಲದಿಂದ ಧಾವಿಸುವ ಆನೆಯಂತೆ ರಾವಣನು ಮುನ್ನುಗ್ಗಿ ಬರುತ್ತಿರುವುದನ್ನು ಕಂಡ ರಾಮಭದ್ರನು ಧನುರ್ಧಾರಿಯಾಗಿ ನಿಂತು ಮುಗುಳು ನಗುತ್ತ ನುಡಿದನು : "ರಾವಣ, ಬ್ರಹ್ಮಾದಿಗಳನ್ನು ಮೊರೆ ಹೊಕ್ಕರೂ ಇನ್ನು ನಿನಗೆ ಬಿಡುಗಡೆಯಿಲ್ಲ. ನಿನ್ನ ಪಾಪ ಪರಿಪೂರ್ಣವಾಗಿದೆ. ಇನ್ನು ಹೆಚ್ಚು ಕಾಲ ನೀನು ಭೂಮಿಯಲ್ಲಿರುವುದು ಸರಿಯಲ್ಲ." ಯುದ್ಧ ಆರಂಭವಾಯಿತು. ರಾವಣನು ರಥದ ಮೇಲೆ ಕುಳಿತಿ- ದ್ದರೆ ರಾಮಚಂದ್ರ ಬರಿ ನೆಲದಮೇಲೆ ಬರಿಗಾಲಿನಲ್ಲಿ ನಿಂತು ಯುದ್ಧ ಮಾಡುತ್ತಿದ್ದಾನೆ. ಇದು ಪ್ರಭುವಿನ ಪರಮಭಕ್ತನಾದ ಮಾರುತಿಗೆ ಸಹನೆಯಾಗಲಿಲ್ಲ. ಅವನು ರಾಮಚಂದ್ರನನ್ನು ತನ್ನ ಹೆಗಲಮೇಲಿರಿಸಿಕೊಂಡ. ರಾವಣನ ಬಾಣಗಳು ಮುಗಿಲನ್ನು ಮುಚ್ಚಿದವು. ನಡು ಹಗಲಿ ಲ್ಲಿ ಕತ್ತಲು ಕವಿಯಿತು. ಅನಂತರ ರಾವಣನು ಹನುಮಂತನ ಮೇಲೆ ಭಯಾನಕಗಳಾದ ಬಾಣಗಳನ್ನೆಸೆದನು. ಬೆಂಕಿಗೆ ತುಪ್ಪ ಸುರಿದಂತೆ ಹನುಮಂತನ ತೇಜಸ್ಸು ಅದರಿಂದ ಮತ್ತಷ್ಟು ಉಜ್ವಲವಾಯಿತು. ರಾಮಚಂದ್ರನು ಮಂದಹಾಸವನ್ನು ಬೀರುತ್ತಲೆ ಬಾಣಗಳ- ನ್ನೆಸೆಯುತ್ತಿದ್ದನು. ರಾಮಚಂದ್ರನ ಒಂದೊಂದು ಬಾಣಕ್ಕೆ ರಾವಣನ ಒಂದೊಂದು ವೈಭವ ಬಲಿಯಾಗುತ್ತಿತ್ತು ! ಕುದುರೆಗಳು ಸತ್ತವು. ಸೂತ ನೆಲಕ್ಕುರುಳಿದ. ಪತಾಕೆ ಹರಿದುಬಿತ್ತು. ರಥ ಮುರಿದು ಬಿತ್ತು. ರಾಕ್ಷಸನ ರಾಜ್ಯಶ್ರೀಯ ಸಂಕೇತವಾದ ಬೆಳ್ಕೊಡೆ ವಿಜಯದ ಆಸೆಯೊಡನೆ ಪುಡಿಯಾಯಿತು. ಇಪ್ಪತ್ತು ಕೈಗಳು ಹೊತ್ತಿರುವ ಆಯುಧಗಳೂ ತ್ರಿಲೋಕ ವಿಜಯದ ಹೆಮ್ಮೆಯೊಡನೆ ಮಣ್ಣು ಮುಕ್ಕಿದವು. ತಲೆ ಭಾರವಾಯಿತು. ಕಣ್ಣುಗುಡ್ಡೆ ತಿರುಗಿ ದಂತಾಯಿತು. ಮೈ ಬವಳಿ ಬಂದು ಕುಸಿಯಿತು ರತ್ನಖಚಿತವಾದ ಬಂಗಾರದ ಕಿರೀಟ ತಲೆಯಿಂದ ಸರಿದು ಕೆಳಗೆಬಿತ್ತು ! ಹಲ್ಲುಕಿತ್ತ ಹಾವಿನಂತೆ ಬೆಪ್ಪಾಗಿ ಕುಳಿತಿರುವ ರಾವಣನನ್ನು ರಾಮಚಂದ್ರನೇ ಎಚ್ಚರಿಸಿದನು : " ಅವಿವೇಕಿಯಾದ ರಾಜನೆ ! ರಾಮಚಂದ್ರ ಅನುಜ್ಞೆ ಕೊಡು ತ್ತಿದ್ದಾನೆ. ನೀನು ಯುದ್ಧರಂಗದಿಂದ ನಗರಕ್ಕೆ ಹಿಂತೆರಳಬಹುದು. ನನ್ನ ಬಾಣಗಳ ಪೆಟ್ಟಿನ ವೇದನೆಯಿಂದ ಸಾವರಿಸಿಕೊಳ್ಳಬಹುದು. ಮನೆಗೆ ತೆರಳಿ ನಿನ್ನ ಕೊನೆಯ ಬಯಕೆಗಳನ್ನು ತೀರಿಸಿಕೋ, ಬಂಧುಗಳನ್ನು ಕಂಡು ಮಾಡಬೇಕಾದುದನ್ನೆಲ್ಲ ಪೂರಯಿಸಿ ಮರಳಿ ಬಾ, ಮತ್ತೆ ಹಿಂತೆರಳದಿರುವುದಕ್ಕಾಗಿ ಮರಳಿ ರಣಕ್ಕೆ ಬಾ. ಮರಣದ ಕಣಕ್ಕೆ ಬಾ." ರಾಮಚಂದ್ರನ ಮಾತನ್ನಾಲಿಸಿದ ರಾವಣ ತಗ್ಗಿಸಿದ ತಲೆ- ಯನ್ನೆತ್ತದೆ, ಮುಚ್ಚಿದ ತುಟಿಯನ್ನು ಬಿಚ್ಚದೆ ರಾಜಧಾನಿಗೆ ಹಿಂತೆರಳಿದನು! ರಾಮಚಂದ್ರನ ಬಾಣ ಪ್ರಹಾರಗಳನ್ನು ನೆನೆದರೆ ಆತನಿಗೆ ನಡುಕವುಂಟಾಗುತ್ತಿತ್ತು ! ರಾವಣನ ಬಾಣಗಳಿಂದ ಗಾಯಗೊಂಡ ಕಪಿಗಳಿಗೆ ರಾಮ- ಭದ್ರನ ಅಮೃತ ಮಧುರವಾದ ನೋಟವೇ ಮದ್ದಾಯಿತು. ಜಗತ್ಪ್ರಭುವಿನ ಕರುಣಾದೃಷ್ಟಿಗೆ ಪಾತ್ರರಾದ ಕಪಿಗಳಲ್ಲಿ ಮತ್ತೆ ವೀರತ್ವದ ಚೈತನ್ಯ ಸಂಚಾರವಾಯಿತು. ನಿದ್ರೆಯಿಂದ ಎಚ್ಚೆತ್ತರೆ ದೀರ್ಘನಿದ್ರೆ ಕಾದಿದೆ ಅರಮನೆಗೆ ಮರಳಿದ ರಾವಣನು ಕುಂಭಕರ್ಣನನ್ನು ಎಬ್ಬಿಸುವಂತೆ ರಾಕ್ಷಸರಿಗೆ ಆಜ್ಞಾಪಿಸಿದ. ಕುಂಭಕರ್ಣನ ನಿದ್ರೆ- ಯೆಂದರೇನು ಸಾಮಾನ್ಯವೆ ? ರಾಕ್ಷಸರ ಒಂದು ಪಡೆಯೇ ಅವ- ನನ್ನು ಎಬ್ಬಿಸುವುದಕ್ಕಾಗಿ ತೆರಳಿತು. ಬಂದ ರಕ್ಕಸರು ಕೂಗಿದರೂ, ಹೊಡೆದರೂ, ಬಡಿದರೂ ಕುಂಭಕರ್ಣ ನಿದ್ರಿಸಿಯೇ ಇದ್ದ! ಕಿವಿ- ಯ ಬಳಿ ಜಾಗಟೆ ಬಾರಿಸಿದರೂ ಅವನಿಗೆ ಎಚ್ಚರವಾಗಲಿಲ್ಲ. ಸಿಟ್ಟಿ ನಿಂದ ಅವನ ಮೇಲೆ ಓಡಾಡಿದರು. ಕುಂಭಕರ್ಣ ಮಲಗಿಯೇ ಇದ್ದ ! ವಿವಿಧ ಆಯುಧಗಳಿಂದ ಗಾಸಿಗೊಳಿಸಿದರು, ಕಬ್ಬಿಣದ ಸಲಾಕೆಯಿಂದ ಕುಕ್ಕಿದರು. ಕುಂಭಕರ್ಣ ಏಳಲಿಲ್ಲ ! ಹೀಗೆ ಅನವರತವಾದ ಪ್ರಯತ್ನದಿಂದ ಕೊನೆಗೆ ಹೇಗೋ ಕುಂಭಕರ್ಣನಿಗೆ ಎಚ್ಚರವಾಯಿತು. ಅವನಿಗಾಗಿ ಮೊದಲೇ ಸಿದ್ಧ ಗೊಳಿಸಿದ್ದ ಮಾಂಸದ ರಾಶಿಯನ್ನೂ ಕಳ್ಳಿನ ಕೊಡಗಳನ್ನೂ ಹೊಟ್ಟೆಬಾಕನಾದ ಕುಂಭಕರ್ಣ ಕ್ಷಣಾರ್ಧದಲ್ಲಿ ಕಬಳಿಸಿ ಮುಗಿಸಿದ. ರಾವಣನಿಂದ ಕರೆ ಬಂತು. ಕುಂಭಕರ್ಣ ರಾಜಸಭೆಗೆ ಬಂದು ರಾವಣನಿಗೆ ವಂದಿಸಿ ವಿಜ್ಞಾಪಿಸಿಕೊಂಡನು: "ಮಹಾರಾಜ, ಯಾವ ಆಪತ್ತಿಗಾಗಿ ನನ್ನನ್ನು ಎಚ್ಚರಿಸ- ಬೇಕಾಯಿತು ? ಯಾವ ಲೋಕಪಾಲನನ್ನು ನಿನ್ನ ಕಾಲಬುಡ- ದಲ್ಲಿ ತಂದು ಕೆಡವಬೇಕು ? ಅಪ್ಪಣೆಯಾಗಬೇಕು." "ಕುಂಭಕರ್ಣ ! ಲೋಕಪಾಲರಿಂದ ನಮಗೆ ಭಯವಿಲ್ಲ. ಸದ್ಯ ನಾವು ಹೆದರಬೇಕಾಗಿ ಬಂದದ್ದು ಮನುಷ್ಯರಿಂದ, ಮಂಗಗಳಿಂದ ! ರಾಮ-ಲಕ್ಷ್ಮಣರನ್ನು ತೀರಿಸುವ ಭಾರ ನಿನ್ನ ಮೇಲಿದೆ. ಅದಕ್ಕಾಗಿ ನಿನ್ನನ್ನು ಎಚ್ಚರಿಸಬೇಕಾಯಿತು." ನೀತಿಮಂತನಾದ ಕುಂಭಕರ್ಣ ಅಣ್ಣನನ್ನು ವಿರೋಧಿಸಿ ನುಡಿದನು : "ಮಹಾವೀರನಾದ ರಾಮನೊಡನೆ ಕದನಕ್ಕೆ ತೊಡಗಿದೆಯಾ ? ಮಾಡಬಾರದ ಕೆಲಸ ಮಾಡಿದಂತಾಯಿತು. ರಾಮನೊಡನೆ ಕಾದು ಬದುಕುವವರಿಲ್ಲ. ಬಲಿಷ್ಠರೊಡನೆ ಸಂಧಿ, ದುರ್ಬಲ- ರೊಡನೆ ಕದನ, ಸಮಬಲರೊಡನೆ ಔದಾಸೀನ್ಯ, ಇದು ರಾಜನೀತಿ, ಬಲಿಷ್ಠನಾದ ರಾಮಚಂದ್ರನೊಡನೆ ನೀನು ಹೂಡಿದ ಯುದ್ಧ ರಾಜನೀತಿಗೆ ಮಸಿ ಬಳೆದಿದೆ. ರಾಮನ ಒಂದು ಬಾಣ ಮೂರು ಲೋಕಗಳನ್ನು ದಹಿಸೀತು ! ಎಚ್ಚರಿಕೆ." ರಾವಣನು ನಿಷ್ಠುರನಾಗಿಯೆ ಉತ್ತರಿಸಿದನು : "ನಿನ್ನಂಥ ಬಂಧುಗಳನ್ನು ಪಡೆದ ರಾಜನ ಬಾಳು ಹಾಳು, ನಿಮ್ಮೆಲ್ಲರ ರಾಜನಾದ ನನ್ನ ರಕ್ಷಣೆಗೆ ಉಪಯೋಗವಾಗದ ನಿನ್ನ ಬಲ ಇದ್ದರೇನು ? ಇರದಿದ್ದರೇನು ? ಗುರುವಿನಂತಿರುವ ನಿನ್ನ ಒಡಹುಟ್ಟಿದ ಅಣ್ಣನನ್ನು ನಿಂದಿಸುವುದರಿಂದ ನಿನ್ನ ಮೂರ್ಖ- ತನವನ್ನು ಹೊರಗೆಡವುತ್ತಿರುವೆ." ಈ ಮಾತು ಕುಂಭಕರ್ಣನಿಗೆ ನಾಟಿತು. ಕೂಡಲೆ ಅವನು ತನ್ನ ಶೂಲವನ್ನು ಕೊಡಹಿ ಎದ್ದುನಿಂತು ಗರ್ಜಿಸಿದನು : "ಮಹಾರಾಜ, ನನ್ನ ಬಂಧುಗಳ ನಿಧನಕ್ಕೆ ಸರಿಯಾದ ಪ್ರತೀ- ಕಾರವನ್ನು ನಾನು ಮಾಡುವೆ. ಶತ್ರುವನ್ನು ಸೋಲಿಸಿ ನಿನ್ನನ್ನು ಸಂತೋಷಗೊಳಿಸಲು ನನ್ನ ಸರ್ವಶಕ್ತಿಯಿಂದ ಪ್ರಯತ್ನಿಸುತ್ತೇನೆ. ನೀನು ನಿಶ್ಚಿಂತನಾಗಬೇಕು. ನಾನು ಕೋಪಗೊಂಡೆನೆಂದರೆ ನನಗೆ ಮೂರು ಲೋಕಗಳು ಮೂರು ತುತ್ತು; ಸಪ್ತಸಾಗರಗಳು ಒಂದು ಗುಟುಕು." ಮಹೋದರ ಮಧ್ಯದಲ್ಲಿ ತಡೆದು ವಿನಂತಿಸಿಕೊಂಡನು : "ಕುಂಭಕರ್ಣ ! ನೀನು ಏಕಾಕಿಯಾಗಿ ಯುದ್ಧಕ್ಕೆ ಹೋಗ- ಬಾರದು. ನಾವೆಲ್ಲರೂ ನಿನ್ನ ಜತೆಗೆ ಬರುತ್ತೇವೆ. ಅದರ ಮೊದಲು ನಮ್ಮ ಮಾಯಾವಿಧಾನಗಳಿಂದ ಸೀತೆಯನ್ನು ಮೋಸಗೊಳಿಸ- ಬೇಕು." ಆಗ ಕುಂಭಕರ್ಣನು "ನಿನ್ನಂಥವರ ದುರ್ಮಂತ್ರದಿಂದಲೆ ಲಂಕೆ ಹಾಳಾಯಿತು" ಎಂದು ಅವನನ್ನು ಗದರಿಸಿ, ರಾವಣನನ್ನು ಅಭಿವಂದಿಸಿ ಯುದ್ಧಕ್ಕೆ ತೆರಳಿದನು. ಅವನ ಜತೆಗೆ ರಾಕ್ಷಸಸೇನೆ- ಯೂ ಭಾರಿ ಪ್ರಮಾಣದಲ್ಲಿ ಕಪಿಗಳನ್ನಾಕ್ರಮಿಸಿತು. ಮುಗಿಲೆತ್ತರಕ್ಕೆ ಬೆಳೆದು ನಿಂತ ಕುಂಭಕರ್ಣನ ಮಹಾಕಾಯ ವನ್ನು ಕಂಡು ಕಪಿಗಳು ದಿಕ್ಕುಗೆಟ್ಟು ಓಡತೊಡಗಿದರು. ಕೆಲವರು ಸೇತು ದಾಟಿ ಈಚೆಯ ದಡಕ್ಕೆ ಬಂದರು. ಕೆಲವರು ಮರ-ಬಂಡೆ ಗಳೆಡೆಯಲ್ಲಿ ಅವಿತು ಕುಳಿತರು, ಯುವರಾಜ ಅಂಗದನ ಧೀರ- ವಾಣಿ, ಓಡುತ್ತಿರುವ ಕಪಿಗಳಲ್ಲಿ ಯುದ್ಧೋತ್ಸಾಹವನ್ನು ಚಿಗುರಿಸಿತು: "ಜಗತ್ಪ್ರಭುವಾದ ರಾಮಚಂದ್ರನು ನಮ್ಮ ರಕ್ಷಕನಾಗಿರು- ವಾಗ, ಓ ನನ್ನ ಪ್ರೀತಿಯ ಕಪಿಗಳೆ ! ಏಕೆ ಹೇಡಿಗಳಂತೆ, ಷಂಡರಂತೆ ಓಡುತ್ತಿರುವಿರಿ, ಬನ್ನಿ, ರಾಮಚಂದ್ರನ ಸೇವೆಯಲ್ಲಿ ನಿಮ್ಮ ಪಾಲು ತನ್ನಿ, ಯುದ್ಧಕ್ಕೆ ಅಣಿಯಾಗಿ." ಕಪಿಗಳಲ್ಲಿ ಮತ್ತೆ ಹುಮ್ಮಸು ಚಿಮ್ಮಿತು. ಕೈಗೆ ಸಿಕ್ಕಿದ್ದನ್ನು ಹಿಡಿದುಕೊಂಡು ಯುದ್ಧಕ್ಕೆ ಸಿದ್ಧರಾದರು. ಕಪಿಗಳೆಸೆದ ದೊಡ್ಡ ದೊಡ್ಡ ಬಂಡೆಗಳು ಕೂಡ ಕುಂಭಕರ್ಣನ ಮೈಗೆ ತಾಗಿ ಮಣ್ಣು ಮುದ್ದೆಯಂತೆ ಪುಡಿಯಾದವು. ಎದುರು ಬಂದ ಕಪಿಗಳ ಗುಂಪನ್ನೆ ಕುಂಭಕರ್ಣನು ಮುಷ್ಟಿಯಿಂದ ಅದುಮಿ ಚೆಲ್ಲಿಬಿಡುತ್ತಿದ್ದನು. ಅನೇಕ ಕಪಿಗಳನ್ನು ಕಬಳಿಸಿದನು. ಕೆಲವರನ್ನು ಮುಷ್ಟಿಯಿಂದ- ಲೆ ಚೂರ್ಣಗೊಳಿಸಿದನು. ಹೀಗೆ ಕಪಿಗಳ ಸಮೂಹದ ನಾಶವನ್ನು ಕಂಡು ಸುಗ್ರೀವ, ಅಂಗದ, ಜಾಂಬವಂತ ಈ ಮೂವರು ಯುದ್ಧಕ್ಕೆ ಮುಂದಾದರು. ಈ ಕಪಿತ್ರಯರ ಶಿಲಾವರ್ಷದಿಂದ ಕುಂಭಕರ್ಣನು ಲವಮಾತ್ರ- ವೂ ಕಂಪಿತನಾಗಲಿಲ್ಲ. ಪ್ರತಿಯಾಗಿ ಶಿಲಾಖಂಡಗಳೇ ಭಗ್ನವಾ- ದವು ! ಆಗ ಸುಗ್ರೀವನು ದೊಡ್ಡ ಬೆಟ್ಟವೊಂದನ್ನು ಶತ್ರುವಿನ ಮೇಲೆಸೆದನು. ಕುಂಭಕರ್ಣನು ನಗುತ್ತ ಅದನ್ನೆ ತಿರುಗಿಸಿ ಸುಗ್ರೀವನ ಮೇಲೆಸೆದನು. ಪರ್ವತಾಹತನಾದ ಕಪಿರಾಜ ಕುಸಿದು ಬಿದ್ದನು ! ಅಂಗದ, ಜಾಂಬವಂತರಿಗೆ ಅವನ ಒಂದು ಪ್ರಹಾರವೇ ಸಾಕಾಯಿತು. ಬಿದ್ದಿರುವ ಸುಗ್ರೀವನನ್ನು ಎತ್ತಿಕೊಂಡು ಕುಂಭಕರ್ಣನು ರಾಜಧಾನಿಗೆ ತೆರಳಿದನು. ರಾಕ್ಷಸರು ವಿಜಯಿಯಾದ ಕುಂಭಕರ್ಣ ನನ್ನು ಗಂಧ, ಪನ್ನೀರುಗಳಿಂದ ಉಪಚರಿಸಿದರು. ಪನ್ನೀರಿನ ಕಣಗಳು ಸುಗ್ರೀವನ ಮೈಮೇಲೂ ಚಿಮ್ಮಿ ಅವನಿಗೆ ತಿಳಿವು ಬಂತು. ಕಣ್ತೆರೆದು ನೋಡಿದಾಗ ತಾನು ಕುಂಭಕರ್ಣನ ಕೈಯಲ್ಲಿ ಬಂಧಿತ- ನಾಗಿರುವುದು ಅವನಿಗೆ ಅರಿವಾಯಿತು. ಕೂಡಲೆ ಅವನು ಕುಂಭ- ಕರ್ಣನ ಮೂಗನ್ನು ಕಚ್ಚಿ, ಕಿವಿಗಳನ್ನು ಹರಿದು ಆಕಾಶಕ್ಕೆ ಹಾರಿ ದನು. ಸಂಭ್ರಾಂತನಾದ ಕುಂಭಕರ್ಣ ಅವನನ್ನು ಅಂಗೈಯಲ್ಲಿ ಹಿಡಿದು ಕೆಳಕ್ಕೆ ತಳ್ಳಿದನು. ಆದರೆ ಸುಗ್ರೀವ ಅಷ್ಟರಲ್ಲಿ ಅವನ ಬೆರಳುಗಳೆಡೆಯಲ್ಲಿ ನುಸುಳಿ ತಪ್ಪಿಸಿಕೊಂಡಿದ್ದನು ! ಕುಂಭಕರ್ಣನು ಸುಗ್ರೀವನನ್ನು ಕೊಲ್ಲುವುದಕ್ಕೆಂದು ಯಮ ದಂಡದಂತಿರುವ ತನ್ನ ಶೂಲವನ್ನೆತ್ತಿದನು. ಆಗ ಪಕ್ಕನೆ ಹನುಮಂತ ಕಾಣಿಸಿಕೊಂಡು ಶತ್ರುವಿನ ಕೈಯಿಂದ ಶೂಲವನ್ನು ಕಿತ್ತು ತುಂಡರಿಸಿದನು. ಅರಮನೆಯಲ್ಲ ಹನುಮಂತನ ಅಟ್ಟ- ಹಾಸ, ಸಿಂಹನಾದಗಳಿಂದ ತುಂಬಿತು. ಕುಪಿತನಾದ ಕುಂಭಕರ್ಣ ಮಾರುತಿಯ ವಿಶಾಲವಾದ ಎದೆಯಮೇಲೆ ಬಲವಾಗಿ ಮುಷ್ಟಿ ಯಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ಹನುಮಂತನೂ ಅವನೆದೆಯಮೇಲೆ ಗುದ್ದಿದನು. ವಜ್ರಾಹತವಾದ ಪರ್ವತದಂತೆ ಕುಂಭಕರ್ಣ ಕುಸಿದುಬಿದ್ದ ! ಸ್ವಲ್ಪ ಸಮಯದಲ್ಲಿ ಚೇತರಿಸಿಕೊಂಡ ಕುಂಭಕರ್ಣ ದೊಡ್ಡ ಗಿರಿಶೃಂಗವೊಂದನ್ನು ಹಿಡಿದುಕೊಂಡು ಮುನ್ನುಗ್ಗಿದನು. ತನ್ನ ಕಾಲತುಳಿತದಿಂದಲೆ ಕಪಿ ಕುಲವನ್ನು ಹಿಂಸಿಸುತ್ತ ರಾಮನ ಅಭಿ- ಮುಖವಾಗಿ ಸಾಗಿದನು. ಆಗ ಲಕ್ಷ್ಮಣನು ಬಾಣಗಳನ್ನು ಸುರಿದು ತಡೆಗಟ್ಟಿದನು. ಅವನು ಅದನ್ನು ಲಕ್ಷಿಸದೆಯೆ ರಾಮನ ಬಳಿ ಸಾರಿ ತನ್ನ ಕೈಯಲ್ಲಿದ್ದ ಗಿರಿಶೃಂಗವನ್ನು ಎಸೆದನು. ರಾಮನ ಬಾಣಗಳು ಅದನ್ನು ಭೇದಿಸಿದವು. ರಾಮನ ಯುದ್ಧಾಹ್ವಾನವನ್ನು ಕೇಳಿದ ಕುಂಭಕರ್ಣ ಅಸಹನೆಯಿಂದ ಉತ್ತರಿಸಿದನು : "ರಾಮಚಂದ್ರ! ನಾನು ವಿರಾಧನಲ್ಲ ಖರನೂ ಅಲ್ಲ. ನಿನ್ನಕೈ ಯಲ್ಲಿ ಕಣ್ಣು ಕಳೆದುಕೊಂಡ ಕಾಗೆಯೂ ಅಲ್ಲ: ಯುದ್ಧಾಹ್ವಾನ ಕೊಡುವ ಮುನ್ನ ಜಾಗ್ರತೆಯಿರಲಿ. ನಾನು ಕುಂಭಕರ್ಣ, ಇಂದ್ರಾದಿಗಳೂ ಕಂಡು ಕಾತರರಾಗುವ ನನ್ನ ತೋಳುಗಳ- ನ್ನೊಮ್ಮೆ ನೋಡು." ರಾಮನ ಬಾಣ ರಾಕ್ಷಸ ತೋರಿಸಿದ ತೋಳಿನೆಡೆಗೆ ಸಾಗಿತು. ಇಂದ್ರಾದಿಗಳೂ ಕಂಡು ಬೆದರುವಂಥ ತೋಳು- ಪರ್ವತ ಶಿಖರ ದಂತೆ ಕಡಿದು ನೆಲಕ್ಕೆಬಿತ್ತು. ಆಗ ಕುಂಭಕರ್ಣ ಎಡಗೈಯಿಂದ ಮರವೊಂದನ್ನು ಕಿತ್ತಿ ತಂದು ಹೋರಾಡುವುದಕ್ಕೆ ಸಿದ್ಧನಾದನು. ರಾಮನ ಇನ್ನೊಂದು ಬಾಣ ಅದರ ಕತೆಯನ್ನೂ ತೀರಿಸಿತು ! ಕಾಲಿನ ಒದೆತದಿಂದಲೇ ರಾಮನ ಸೈನ್ಯವನ್ನು ನಿರ್ನಾಮಮಾಡು ವೆನೆಂದ ಕುಂಭಕರ್ಣ. ಆದರೆ ಅಷ್ಟರಲ್ಲಿ ರಾಮಚಂದ್ರನು ಪ್ರಯೋಗಿಸಿದ ಅರ್ಧಚಂದ್ರವು ಕಾಲುಗಳನ್ನು ಕತ್ತರಿಸಿತ್ತು. ನೆಲ- ದಲ್ಲಿ ಬಿದ್ದು ವೇದನೆಯಿಂದ ಹೊರಳುವ ರಾಕ್ಷಸನ ತೋಳುಕಾಲು ಗಳಿಂದ ಅನೇಕ ಕಪಿಸೇನೆ ನುಗ್ಗಾಯಿತು. ಕುಂಭಕರ್ಣನ ಕೈ ಕಾಲುಗಳು ಇನ್ನಿಲ್ಲವಾದರೂ ಶತ್ರುವನ್ನು ಗೆಲ್ಲಬೇಕೆಂಬ ಛಲವಿದೆ. ಅವನು ಗುಹೆಯಂಥ ತನ್ನ ಬಾಯನ್ನು ತೆರೆದು ರಾಮನನ್ನು ನುಂಗಲು ಬಂದನು. ತೆರೆದ ಬಾಯಿತುಂಬ ರಾಮನ ಬಾಣಗಳು ತುಂಬಿಕೊಂಡವು. ಇನ್ನೊಂದು ಬಾಣ ಅವನ ತಲೆಯನ್ನೂ ಕತ್ತರಿಸಿತು. ತಲೆಯ ಭಾರಕ್ಕೆ ನೆಲ ಬಿರಿಯಿತು ! ಯುದ್ಧಕ್ಕಾಗಿ ನಿದ್ರೆಯಿಂದೆಚ್ಚತ್ತ ಕುಂಭಕರ್ಣ ದೀರ್ಘ ನಿದ್ರೆ- ಯನ್ನನುಭವಿಸಿದ. ಎಂದೆಂದಿಗೂ ಎಚ್ಚರಾಗದ ನಿದ್ದೆ ! ಯಾವ ರಾವಣನೂ ಎಬ್ಬಿಸಲಾಗದ ನಿದ್ದೆ ! ಮಹಾಪ್ರಮಾಣದ ರಾಕ್ಷಸನ ದೇಹವನ್ನು ರಾಮಚಂದ್ರ ಸಮುದ್ರಕ್ಕೆಸೆದನು. ಕುಂಭಕರ್ಣನ ಮೈಯನ್ನು ಹೊತ್ತ ಕಡಲು ದಡಮೀರಿ ಹರಿಯಿತು ! ದೇವತೆಗಳು ಪ್ರಭು ರಾಮಚಂದ್ರನ ಮೇಲೆ ಹೂಮಳೆಗರೆದರು. ಅಂಜನೆಯ ಮಗ ಸಂಜೀವನ ತಂದನು ಕುಂಭಕರ್ಣನ ಮರಣದ ವಾರ್ತೆ ಅರಮನೆಗೆ ತಲುಪಿತು. ರಾವಣನ ದುಃಖದ ಹೊನಲು ಕಟ್ಟೆಯೊಡೆದು ಹರಿಯಿತು: "ಓ ನನ್ನ ಪ್ರೀತಿಯ ತಮ್ಮನೆ ! ಓ ಮಹಾವೀರ ಕುಂಭಕರ್ಣನೆ, ನನ್ನನ್ನು ಬಿಟ್ಟು ಎಲ್ಲಿ ಹೋದೆ ? ನನ್ನನ್ನೂ ಕರೆದುಕೊ. ನಾನೂ ನಿನ್ನ ಜತೆ ಬರುವೆ ನನ್ನ ಅವಿವೇಕದ ಫಲವನ್ನು ನಾನೀಗ ಕಾಣು- ತ್ತಿದ್ದೇನೆ. ಸತ್ಯವಾದಿಯಾದ ವಿಭೀಷಣ ನಮ್ಮ ಕುಲದ ಭೂಷಣ, ಕಾಮಿಯಾದ ನನಗೆ ಅವನ ಉಪದೇಶವೂ ಅಪಥ್ಯವಾಯಿತು. ಅದರ ಪರಿಣಾಮ ಈ ಹತ್ಯಾಕಾಂಡ. ನಾನು ತಪ್ಪು ಮಾಡಿದೆ. ನಾನು ದಾರಿ ತಪ್ಪಿದೆ." ಆಗ ಮೇಘನಾದನ ಸಾಂತ್ವನೆಯೇ ಅವನಿಗೆ ತಾರಕವಾಯಿತು : " ಮಹಾರಾಜ, ದೇವೇಂದ್ರನಿಗೂ ಹೆದರದ ನನ್ನ ತಂದೆ ಮನುಷ್ಯ ಮಾತ್ರನಿಂದ ಕಂಗಾಲಾಗಿದ್ದಾನೆ ಎನ್ನುವ ಅಪವಾದಕ್ಕೆ ಎಡೆಬರಬಾರದು. ಯುದ್ಧರಂಗಕ್ಕೆ ತೆರಳಿ ಶತ್ರುವನ್ನುಸೋಲಿಸಲು ನನಗೆ ಅಪ್ಪಣೆಯಾಗಬೇಕು." ರಾವಣನ ಅನುಜ್ಞೆ ದೊರೆಯಿತು. ಮೇಘನಾದ ಮನೆಗೆ ಮರ- ಳಿದವನೆ ರುದ್ರನನ್ನು ಆರಾಧಿಸಿ ಮಾರಣ ಹೋಮಕ್ಕೆ ತೊಡಗಿ- ದನು. ಕೆಂಪು ಬಟ್ಟೆಯನ್ನು ಧರಿಸಿ ಕುಳಿತಿರುವ ಯಜಮಾನನ ಇದಿರು ವಿಭೀತಕ(ತಾರೆ)ದ ಕಟ್ಟಿಗೆಗಳಿಂದ ಜ್ವಲಿಸುತ್ತಿರುವ ಬೆಂಕಿ ಕಬ್ಬಿಣದ ಸಟ್ಟುಗದಿಂದ ಸುರಿದ ಆಹುತಿಗಳನ್ನು ಕುಡಿದು ಜ್ವಾಲೆ- ಗಳನ್ನುಗುಳಿತು. ಸರ್ವಾಂಗ ಕಪ್ಪು ಬಣ್ಣದ ಆಡಿನ ಬಲಿಯೊಡನೆ ಯಾಗವಿಧಾನ ಕೊನೆಗೊಂಡಿತು. ಯಾಗಶಾಲೆಯಿಂದ ರಣಾಂಗಣಕ್ಕೆ ಬಂದ ಮೇಘನಾದ ಅದೃಶ್ಯನಾಗಿ ಆಕಾಶದಲ್ಲಿ ನಿಂತು ರಾಮ-ಲಕ್ಷ್ಮಣರಮೇಲೆ, ಕಪಿ ಗಳಮೇಲೆ ಬಾಣಗಳ ಮಳೆಯನ್ನು ಸುರಿಸಿದನು. ಮುಗಿಲಿನಿಂದ ಧಾರಾಕಾರವಾಗಿ ಬಾಣಗಳು ಬರುತ್ತಿವೆ. ಆದರೆ ಎತ್ತ ನೋಡಿದರೂ ಶತ್ರುವಿನ ಸುಳುವಿಲ್ಲ. ಕಪಿಸೇನೆ ಕಂಗಾಲಾಯಿತು. ಅಷ್ಟರಲ್ಲಿ ಇಂದ್ರಜಿತ್ತು ಸಮಸ್ತ ಕಪಿಸೇನೆಯನ್ನೂ ರಾಮ-ಲಕ್ಷ್ಮಣರನ್ನೂ ನಾಗಪಾಶದಿಂದ ಬಂಧಿಸಿ, ಶತ್ರುವಿಜಯದ ಉಬ್ಬಿನಿಂದ ಪುರಕ್ಕೆ ಮರಳಿದನು. ರಾಮ-ಲಕ್ಷ್ಮಣರಿಗೆ, ಮಾರುತಿಗೆ ಈ ನಾಗಪಾಶ ಏನುಮಾಡ- ಬಲ್ಲದು ? ಆದರೂ ಅಸಾಮರ್ಥ್ಯದ ನಟನೆಯನ್ನಾಡಿದರು. ಅದು ದೇವಗುಹ್ಯವೊಂದರ ಪೀಠಿಕೆಯಲ್ಲವೆ ? ಇತ್ತ ರಾಕ್ಷಸಿಯರು ರಾವಣನ ಆಜ್ಞೆಯಂತೆ ಸೀತೆಗೆ ನಾಗಪಾಶ ಬದ್ಧನಾಗಿ ಬಿದ್ದಿರುವ ರಾಮನನ್ನು ತೋರಿಸಿದರು. ಆದರೆ ಸಾತ್ವಿಕ ಸ್ವಭಾವದ ತ್ರಿಜಟೆ ಅವಳನ್ನು ಸಮಾಧಾನಗೊಳಿಸಿದಳು. ಕಪಿಗಳೆಲ್ಲ ಅಸಹಾಯರಾಗಿ ಬಿದ್ದಿದ್ದಾರೆ. ರಣಾಂಗಣ ನೀರವ, ನಿಷ್ಕಂಪವಾಗಿದೆ. ಇಡಿಯ ವಾತಾವರಣವೆ ಸ್ತಬ್ಧವಾಗಿದೆ. ಅಷ್ಟರಲ್ಲಿ ಎಲ್ಲಿಂದಲೋ ಬೀಸಿದ ಗಾಳಿ ಲಂಕೆಯನ್ನೇ ಏನು, ಭೂಮಂಡಲವನ್ನೇ ನಲುಗಿ ಸಿತು. ಎತ್ತಣಿಂದ ಬಂತು ಈ ಗಾಳಿ ? ಇದು ಯಾರ ಬರವಿನ ಮುನ್ಸೂಚನೆ ? ಓ! ನಾಗವೈರಿಯಾದ ಗರುಡ ಗರಿಗೆದರಿದ್ದಾನೆ ! ಅದರಿಂದಲೇ ಕೋಲಾಹಲ . ಕಪಿಗಳ ಮೈಯನ್ನು ಸುತ್ತಿರುವ ನಾಗಗಳು ಗರುಡ- ನನ್ನು ಕಂಡು ವಿಲಿವಿಲಿ ಒದ್ದಾಡಿದವು. ಏನಾದರೇನು ? ಪಕ್ಷಿರಾಜನ ಕಣ್ಣು ತಪ್ಪಿಸಿ ಅವುಗಳು ಬದುಕುವುದುಂಟಿ ! ಕಪಿಸೇನೆ ಪಾಶಮುಕ್ತವಾಗಿ ಎದ್ದು ನಿಂತಿತು. ರಾಮಚಂದ್ರನ ಪಾದಕ್ಕೆರಗಿದ ಗರುಡ ಭಕ್ತಿ ವಾಣಿಯಿಂದ ಘೋಷಿಸಿದನು : "ರಾಮಚಂದ್ರನಿಗೆ ಜಯವಾಗಲಿ" ತನ್ನ ಪಾಲಿನ ಸೇವೆಯನ್ನು ಮಾಡಿ ಗರುಡ ತೆರಳಿದನು. ಕಪಿ ಗಳ ಜಯಗರ್ಜನೆ ಶತ್ರುಗಳ ಕರ್ಣಭೇದಕವಾಗಿ ಮೊಳಗಿತು. ಮತ್ತೆ ಪುನಃ ಮೇಘನಾದನ ಮನೆಯಲ್ಲಿ ಅಥರ್ವಣ ಮಂತ್ರ- ಗಳಿಂದ ಮಾರಣ ಹೋಮ ನಡೆಯಿತು. ಹಿಂದಿನಂತೆಯೇ ಅದೃಶ್ಯನಾದ ಮೇಘನಾದ ಮತ್ತೊಮ್ಮೆ ನಾಗಪಾಶದಿಂದ ಕಪಿ ಸೇನೆಯನ್ನು ಬಂಧಿಸಿ ಮರಳಿದನು. ರಾವಣನು ಮಗನ ಪರಾ- ಕ್ರಮವನ್ನು ಮೆಚ್ಚಿ ಕೊಂಡಾಡಿದನು. ನಗರದಲ್ಲಿ ಏನು ಕಾರಸ್ಥಾನ ನಡೆಯುತ್ತಿದೆ ಎಂದು ತಿಳಿಯಲು ಹೋಗಿದ್ದ ವಿಭೀಷಣ ಮರಳಿ ರಣಾಂಗಣಕ್ಕೆ ಬಂದು ನೋಡಿದಾಗ ಕಪಿಗಳ ಈ ವಿಪನ್ನಾವಸ್ಥೆ ಅವನಿಗೆ ಗೋಚರವಾಯಿತು. ಸುತ್ತಲೂ ಕತ್ತಲು, ಕಪಿಗಳೆಲ್ಲ ಬಿದ್ದಿದ್ದಾರೆ. ಎಲ್ಲೂ ಯಾರೂ ಚೇತರಿಸಿಕೊಂಡಿರುವ ಸುಳಿವಿಲ್ಲ. ವಿಷಣ್ಣನಾದ ವಿಭೀಷಣ "ಈ ಕುತ್ತಿನಿಂದ ಪಾರಾಗಿ ಉಳಿದವರು ಯಾರಾದರೂ ಇದ್ದೀರಾ ?" ಎಂದು ಕೂಗಿಕೊಂಡು ನಡೆದನು. ಮೆಲ್ಲನೆ ಹನುಮಂತ ಮುಂದೆ ಬಂದು "ನಾನಿದ್ದೇನೆ" ಎಂದ. ಇಬ್ಬರು ಎರಡು ಕೊಳ್ಳಿಯನ್ನು ಹೊತ್ತಿಸಿಕೊಂಡು ಆ ಕತ್ತಲಿ ನಲ್ಲಿ ಕಪಿಸೇನೆಯನ್ನು ಪರೀಕ್ಷಿಸುತ್ತ ನಡೆದರು. ಸುಗ್ರೀವ-ಅಂಗದ-ನೀಲ-ಒಬ್ಬರೇ-ಇಬ್ಬರೇ ಸಮಗ್ರ ಕಪಿಸೇನೆ ಬಿದ್ದುಕೊಂಡಿದೆ. ಎಲ್ಲಿ ನೋಡಿದರೂ ಮೈ ಕೈ ಮುರಿದುಕೊಂಡು ನೆತ್ತರು ತೊಯ್ದು ತೊಳಲಾಡುವ ಕಪಿಗಳ ರಾಶಿ. ಹೀಗೆಯೇ ಮುಂದೆ ಸಾಗಿದಾಗ ಜಾಂಬವಂತ ಕಾಣಿಸಿಕೊಂಡನು. ಬವಳಿ ಕೊಂಡು ಬಿದ್ದಿರುವ ಆ ಮುದುಕನ ಮೇಲೆ ನೀರು ಚಿಮ್ಮಿ ವಿಭೀಷಣ ಮೆಲ್ಲನೆ ವಿಚಾರಿಸಿದನು. "ಬದುಕಿರುವೆಯಾ ಜಾಂಬವಂತ." ಜಾಂಬವಂತ ಮೆಲ್ಲನೆ ಚೇತರಿಸಿಕೊಂಡು ನುಡಿದನು : "ಯಾರಿಂದ ಅಂಜನೆ ಸುಪುತ್ರವತಿಯಾದಳೋ ಅಂಥ ಪವಮಾನತನಯ ಬದುಕಿದ್ದಾನೆಯೆ ವಿಭೀಷಣ ? ಅ೦ಜನೆಯ ಮಗ ಬದುಕಿದ್ದರೆ ನಾವೆಲ್ಲರೂ ಬದುಕಿದಂತೆ. ಅವನೊಬ್ಬ ಸತ್ತರೆ ನಾವೆಲ್ಲ ಬದುಕಿದ್ದರೂ ಸತ್ತಂತೆ." ಅಚ್ಚರಿಗೊಂಡ ವಿಭೀಷಣ ಕೇಳಿದನು: "ಮಹಾತ್ಮನಾದ ಜಾಂಬವಂತನೆ, ನೀನು ಲಕ್ಷ್ಮಣನನ್ನೂ ಸುಗ್ರೀವನನ್ನೂ ಅಂಗದನನ್ನೂ ವಿಚಾರಿಸದೆ ಹನುಮಂತನನ್ನೆ ವಿಚಾರಿಸುತ್ತಿರುವುದರ ಕಾರಣವೇನು ?" "ಕಾರಣವಿಷ್ಟೆ, ಹನುಮಂತನೊಬ್ಬನೆ ತನ್ನ ಸಾಮರ್ಥ್ಯದಿಂದ ನಮ್ಮನ್ನು ಬದುಕಿಸಬಲ್ಲವನು. ಇನ್ನಾರಿಂದಲೂ ಈ ಕಾರ್ಯ ಸಾಧ್ಯವಿಲ್ಲ. ಮಾರುತಿ ನಮ್ಮ ಕಪಿಸೇನೆಯ ಉಸಿರು; ಜಗತ್ತಿನ ಉಸಿರು." "ಪೂಜ್ಯನೆ, ನಿನ್ನ ವಿಶ್ವಾಸಕ್ಕೆ ಪಾತ್ರನಾದ ಹನುಮಂತ ಬದುಕಿದ್ದಾನೆ." ಎಂದು ಮಾರುತಿ ಮೆಲ್ಲನೆ ಜಾಂಬವಂತನ ಪಾದ ಗಳನ್ನು ಹಿಡಿದು ಅದಮಿದನು. ಸಂತಸಗೊಂಡ ಜಾಂಬವಂತ ನುಡಿದನು: "ಬಂಧುವತ್ಸಲನಾದ ಹನಮಂತನೆ, ಸಾಯಹೊರಟ ಕಪಿಗಳನ್ನು ಬದುಕಿಸು. ನಮ್ಮನ್ನು ಉದ್ಧರಿಸು. ರಾಮಚಂದ್ರನ ಪರಮ ಭಕ್ತನಲ್ಲವೆ ನೀನು ? ಮೇರುಪರ್ವತದ ಬಳಿ ಗಂಧ- ಮಾದನ ಪರ್ವತವಿದೆ. ಅಲ್ಲಿಂದ ನೀನು ಶೀಘ್ರವಾಗಿ ಮೃತಸಂಜೀ- ವನಿ, ಸಂಧಾನಕರಣಿ, ಸವರ್ಣಕರಣಿ, ವಿಶಲ್ಯಕರಣಿ ಎಂಬ ನಾಲ್ಕು ಗಿಡಮದ್ದುಗಳನ್ನು ತರಬೇಕು. ಆಗ ನಿನ್ನ ಸಾಹಸದಿಂದ ಕಪಿಗಳು ಉಳಿದಂತಾಗುವುದು." ಒಡನೆ ಹನಮಂತನು ರಾಮಚರಣಗಳಿಗೆ ಮನದಲ್ಲಿ ಅಭಿವಂದಿಸಿ ಪರ್ವತಾಕಾರವಾಗಿ ಬೆಳೆದು ನಿಂತನು. ಆಗ ಲಂಕೆಯ ಬೆಟ್ಟದ ಮೇಲೆ ಇನ್ನೊಂದು ಬೆಟ್ಟ ಮೂಡಿ ಬಂದಂತೆ ಕಾಣಿಸುತ್ತಿತ್ತು. ಹನುಮಂತನು ಹಾರುವ ರಭಸಕ್ಕೆ ಭೂಮಿ ನಡುಗಿತು. ಲಂಕೆಯ ಮನೆಗಳು ಕುಸಿದು ಬಿದ್ದವು. ತ್ರಿಕೂಟ ಪರ್ವತ ತಲೆಯಾಡಿಸಿತು. ಕೆಲವರು ಬಿದ್ದರು, ಕೆಲವರು ಸತ್ತರು, ಕೆಲವರು ದಿಙ್ಮೂಢರಾಗಿ ಮೂಗಿಗೆ ಬೆರಳೇರಿಸಿದರು ! ಎಲ್ಲಿ ಲಂಕೆ ! ಎಲ್ಲಿ ಗಂಧಮಾದನ ! ಒಂದು ದಕ್ಷಿಣದ ಮೂಲೆ ಯಲ್ಲಿದ್ದರೆ ಮತ್ತೊಂದು ಉತ್ತರದ ತುದಿಯಲ್ಲಿ. ಆದರೆ ಹನುಮಂತನಿಗೆ ಅದು ದೊಡ್ಡದಲ್ಲ. ಅವನು ಒಂದೇ ನೆಗೆತಕ್ಕೆ ಅನಾಯಾಸದಿಂದ ಗಂಧಮಾದನವನ್ನು ತಲುಪಿದನು. ಅಲ್ಲಿ ಔಷಧಗಳೆಲ್ಲ ಅಡಗಿ ಕುಳಿತುಬಿಟ್ಟವು. ಕುಪಿತನಾದ ಹನುಮಂತ- ನು ಬಹುಯೋಜನ ವಿಸ್ತೃತವಾದ ಪರ್ವತವನ್ನೆ ಕಿತ್ತು ತೆಗೆದನು. ಒಂದು ಕೈಯಲ್ಲಿ ಲೀಲೆಯಿಂದ ಕಂದುಕದಂತೆ ಪರ್ವತವನ್ನು ಹೊತ್ತು ತರುವ ಹನುಮಂತನನ್ನು ಕಂಡು ಜಗತ್ತು ಬೆರಗಾಯಿತು! ಬೆಟ್ಟದಿಂದ ಬೀಸಿದ ಗಿಡ ಮದ್ದುಗಳ ಗಾಳಿಗೇ ಕಪಿಗಳು ಎದ್ದು ನಿಂತರು. ಸತ್ತವರು ಬದುಕಿದರು. ಗಾಯಗೊಂಡವರ ಗಾಯ ಮಾಸಿತು. ಅಂಗಹೀನರ ಅಂಗಾಂಗಗಳು ಕೂಡಿಕೊಂಡವು ! ದೈತ್ಯ ಭಯಂಕರನೂ ದೇವತೆಗಳಿಗೆ ಅಭಯಪ್ರದನೂ ಆದ ಮಾರುತಿ ಗಂಧಮಾದನವನ್ನು ಹೊತ್ತು ಲಂಕೆಯಲ್ಲಿ ನಿಂತಿರುವುದನ್ನು ಕಂಡವರು ಭಗವಂತನ ತ್ರಿವಿಕ್ರಮಾವತಾರವನ್ನು ಸ್ಮರಿಸಿ- ಕೊಂಡರು. ಸುಗ್ರೀವಾದಿಗಳು ಹನುಮಂತನನ್ನು 'ಉಘೇ' ಎಂದು ಕೊಂಡಾಡಿದರು. ರಾಮಚಂದ್ರನು ಆನಂದದಿಂದ ಗಾಢಾಲಿಂಗನ ವನ್ನಿತ್ತು ಕರುಣಿಸಿದನು. ದೇವತೆಗಳು ಮುಗಿಲಿನಲ್ಲಿ ನೆರೆದು ಮಾರುತಿಯನ್ನು ಹಾಡಿ ಕೊಂಡಾಡಿ ಹೂಮಳೆಯನ್ನು ಸುರಿಸಿದರು. ಪರ್ವತ ತರುವ ಕೆಲಸ ಮುಗಿಯಿತು. ಅದು ಇನ್ನು ತನ್ನ ತಾಣವನ್ನು ಸೇರಬೇಕು. ಹನುಮಂತನಿಗೆ ಅದೇನು ದೊಡ್ಡ ಪ್ರಮೇಯವೆ ? ಅವನು ನಿಂತಲ್ಲಿಂದಲೆ ಅದನ್ನು ಉತ್ತರಕ್ಕೆ ಎಸೆ- ದನು. ಹನುಮಂತನ ಅಳತೆಯೆಂದರೆ ಅಳತೆ. ಒಂದಂಗುಲ ಆಚೆ ಯಿಲ್ಲ, ಒಂದಂಗುಲ ಈಚೆಯಿಲ್ಲ. ಮೊದಲು ಇದ್ದ ತಾಣದಲ್ಲೆ ಮೊದಲು ಇದ್ದಂತೆಯೆ ಪರ್ವತ ನೆಲವನ್ನು ಕೂಡಿಕೊಂಡಿತು ! ಕಪಿಕೋಟ ಏಕಕಂಠದಿಂದ ಕೂಗಿತು : "ರಾಮಚಂದ್ರನಿಗೆ ಜಯವಾಗಲಿ." "ರಾಮಭಕ್ತಾಗ್ರಣಿಯಾದ ಹನುಮಂತನಿಗೆ ಜಯವಾಗಲಿ, " ಇಂದ್ರನನ್ನು ಗೆದ್ದವನು ಇನ್ನಿಲ್ಲ ಕಪಿವೀರರ ಸಿಂಹನಾದ ಲಂಕೆಯನ್ನು ಕಂಪಿಸಿತು. ಮತ್ತೆ ಮಾರಣ ಹೋಮವಾಯಿತು. ಮತ್ತೊಮ್ಮೆ ಯುದ್ಧಕ್ಕೆ ಮೊದ- ಲಾಯಿತು. ಮೇಘನಾದನಿಗೆ ರುದ್ರನ ವರದ ಹಮ್ಮು, ಅವನು ಮೂರನೆಯ ಬಾರಿ ಕಪಿಗಳನ್ನೆಲ್ಲ ನಾಗಪಾಶದಿಂದ ಬಂಧಿಸಿದನು. ಇದು ಲಕ್ಷ್ಮಣನಿಗೆ ಸಹನೆಯಾಗಲಿಲ್ಲ. ಅವನು ರಾಮನೊಡನೆ ವಿಜ್ಞಾಪಿಸಿಕೊಂಡನು: " ಅಣ್ಣ, ನಿನ್ನ ಅನುಗ್ರಹ ನನ್ನ ಮೇಲಿರುವ ತನಕ ನನಗೆ ಭಯವಿಲ್ಲ. ಈ ಕಪಟಿಯನ್ನು ಬ್ರಹ್ಮಾಸ್ತ್ರದಿಂದ ಬಂಧಿಸಿಬಿಡು- ತ್ತೇನೆ. ಅನುಜ್ಞೆಯೀಯಬೇಕು. " " ಲಕ್ಷಣ, ಹೆದರಿ ತಲೆಮರೆಸಿಕೊಂಡವರ ಮೇಲೆ ಬ್ರಹ್ಮಾಸ್ತ್ರ ವನ್ನು ಪ್ರಯೋಗಿಸಬಾರದು. ಹೇಡಿ ಮೇಘನಾದನಿಗೆ ಬುದ್ಧಿ ಕಲಿಸುವ ಬಗ್ಗೆ ನನಗೆ ಗೊತ್ತಿದೆ " ಎಂದವನೆ ರಾಮಚಂದ್ರ ಉಗ್ರ- ವಾದ ಬಾಣವೊಂದನ್ನು ಕೈಗೆತ್ತಿಕೊಂಡನು. ಗರುಡ ಮತ್ತು ಹನುಮಂತರ ಸೇವೆಯನ್ನು ಸ್ವೀಕರಿಸುವುದ- ಕ್ಕಾಗಿ, ಅವರ ಪ್ರಭಾವವನ್ನು ಜಗತ್ತಿಗೆ ತಿಳಿಯಪಡಿಸುವುದಕ್ಕಾಗಿ ಮೊದಲೆರಡು ಬಾರಿ ರಾಮಚಂದ್ರ ನಾಗಪಾಶಬದ್ಧನಂತೆ ಕಾಣಿಸಿ ಕೊಂಡ. ಲೀಲಾನಾಟಕದ ಅಭಿನಯದ ಆವಶ್ಯಕತೆಯಿಲ್ಲ. ವರ ಬಲವನ್ನು ಹುಸಿಗೊಳಿಸಲು ಭಗವಂತನ ಬಾಣ ಸಿದ್ಧವಾಯಿತು. ರಾಮಚಂದ್ರನು ಬಾಣವನ್ನು ಕೈಗೆತ್ತಿಕೊಂಡುದೇ ತಡ, ಭೀತ ನಾದ ಮೇಘನಾದ ರಣರಂಗಕ್ಕೆ ಬೆನ್ನು ತೋರಿಸಿದ. ಮುಗಿಲಿನಲ್ಲಿ ಇದನ್ನು ಕಂಡು ದೇವತೆಗಳು ರಾಮನನ್ನು ಕೊಂಡಾಡಿದರು: " ಮೂರುಲೋಕದ ಸಿಂಗಾರವೆ, ಭಕ್ತರ ಬಂಗಾರವೆ, ಓ ರಾಮಚಂದ್ರನೆ, ನಿನಗೆ ಜಯವಾಗಲಿ, ಅರಿಭಯಂಕರನೆ, ನಿನಗೆ ಶರಣು. " ನಾಗಪಾಶ ಬದ್ಧವಾದ ಕಪಿಕುಲವೂ ರಾಮಚಂದ್ರನ ಜ್ಞಾನಾಸ್ತ್ರದಿಂದ ಎಚ್ಚೆತ್ತು ಕುಳಿತಿತ್ತು. ಕಪಿಸೇನೆಯ ಕೂಗು ಮತ್ತೊಮ್ಮೆ ಲಂಕೆಯನ್ನು ಮುಟ್ಟಿತು. ಜತೆಗೆ ಕಪಿಸೇನೆಯೂ ಲಂಕೆಯನ್ನು ಮುತ್ತಿತ್ತು. ಮೇಘನಾದ ನಾಲ್ಕನೆಯ ಬಾರಿ ಪಶ್ಚಿಮ ದ್ವಾರದಿಂದ ಯುದ್ಧಕ್ಕೆ ಸಿದ್ಧನಾದ. ಈ ಬಾರಿ ಮೇಘನಾದನ ತಂತ್ರ ಬೇರೆ ತೆರನಾಗಿತ್ತು. ಅವನು ಮಾಯೆಯಿಂದ ಸೀತೆಯಂಥ ಆಕೃತಿಯನ್ನು ನಿರ್ಮಿಸಿ ಅದನ್ನು ರಾಮನೆದುರು ತಂದು ಕತ್ತರಿಸಿ ಚೆಲ್ಲಿದನು. ರಕ್ಕಸರ ಕಪಟ ರಾಮಚಂದ್ರನಿಗೆ ತಿಳಿಯದೆ ? ಆದರೂ ಅಭಿನಯಪಟುವಾದ ಭಗವಂತನಲ್ಲಿ ನಟನೆಗೇನು ಕೊರತೆ ? ರಾಕ್ಷಸನು ಮರುಳಾಗು- ವಂತೆ ರಾಮನು ಗೊಳೋ ಎಂದು ಅತ್ತು ಬಿಟ್ಟನು ! ಇತ್ತ ಹನುಮಂತನು ಮೇಘನಾದನ ಕಡೆಯವರನ್ನೆಲ್ಲ ಯಮನ ಕಡೆಗೆ ಕಳುಹಿಸಿ ಮೇಘನಾದನನ್ನು ದೊಡ್ಡ ಬಂಡೆ- ಯೊಂದರಿಂದ ಜಜ್ಜಿದನು. ಮೇಘನಾದನ ಪೌರುಷ ಕುಸಿಯಿತು. ರಥ ರಣರಂಗದಿಂದ ಮರಳಿ ಪುರದೆಡೆಗೆ ತೆರಳಿತು. ನಿಕುಂಭಿಲೆಯಲ್ಲಿ ಮಹಾಮಾರಣ ಹೋಮವೊಂದರ ಸಿದ್ಧತೆ ನಡೆಯಿತು. ಈ ರಹಸ್ಯ ವಿಭೀಷಣನಿಗೆ ತಿಳಿದಿತ್ತು. ಅವನು ರಾಮ- ನನ್ನು ಎಚ್ಚರಿಸಿದನು : "ಭಗವನ್, ಮೇಘನಾದನ ಕೊನೆ ಎಷ್ಟು ಬೇಗ ಆದರೆ ಅಷ್ಟು ಚೆನ್ನು, ಈ ಬಾರಿ ಅವನ ಹೋಮ ಸಾಂಗವಾಯಿತೆಂದರೆ ಮತ್ತೆ ಅವನನ್ನು ಕೊಲ್ಲುವುದು ಅಳಿವಿಗೆ ಮೀರಿದ ಮಾತು. ಹಾಗೆಂದು ಅವನಿಗೆ ಬ್ರಹ್ಮನ ವರವಿದೆ." ರಾಮಚಂದ್ರನ ಆದೇಶದಂತೆ ಲಕ್ಷ್ಮಣನು ಮೇಘನಾದನ ವಧೆಗೆ ತೆರಳಿದನು. ಹನುಮಂತನೂ-ವಿಭೀಷಣನೂ ಅನೇಕ ಕಪಿಸೇನೆ- ಗಳೊಡನೆ ಅವನ ಜತೆಗಾರರಾದರು. ನಿಕುಂಭಿಲೆಯ ರಕ್ಷಕರಾದ ರಾಕ್ಷಸರು ಕಪಿಗಳ ಕೈಯಲ್ಲಿ ಸಿಕ್ಕು ನುಗ್ಗಾದರು. ಕೆಲ ಕಪಿಗಳು ಯಾಗಶಾಲೆಗೂ ತೆರಳಿ ಕುಚೇಷ್ಟೆಗಳಿಂದ ಯಾಗಕ್ಕೆ ಅಡ್ಡಿಯ- ನ್ನುಂಟು ಮಾಡಿದರು. ಮೇಘನಾದನು ಕನಲಿ ಕೊಳುಗುಳಕ್ಕಿಳಿದನು. ಕಪಿಗಳ ಕೂಟ ಕಂಗೆಟ್ಟಿತು. ಮಾರುತಿ ಮೇಘನಾದನ ಮುಂದೆ ಬಂದು ನಿಂತನು. ಕ್ಷಣಾರ್ಧದಲ್ಲಿ ಇಂದ್ರಾರಿಯಾದ ಮೇಘನಾದನು ಮಾರುತಿಯ ಮೇಲೆ ಆಯುಧಗಳ ರಾಶಿಯನ್ನೇ ಸುರಿದನು. ಬಂದ ಆಯುಧ- ವನ್ನೆಲ್ಲ ಕೈಯಲ್ಲಿ ಹಿಡಿದು ಕಡ್ಡಿಯಂತೆ ತುಂಡರಿಸಿ ಚೆಲ್ಲಿದ ಹನುಮಂತ ನಗುತ್ತ ನುಡಿದನು : "ಮೇಘನಾದ, ನೀನು ಇಂದ್ರನನ್ನು ಗೆದ್ದುದು ನಿಜವಾದರೆ, ನಿನ್ನಲ್ಲಿ ಗಂಡಸುತನ ಇರುವುದು ನಿಜವಾದರೆ, ನನ್ನನ್ನು ಎದುರಿಸಲು ಹೆದರುವ ನಪುಂಸಕ ನೀನಲ್ಲವಾದರೆ ಮುಂದೆ ಬಾ. ಹನುಮಂತನ ಕೈಗೆ ಸಿಕ್ಕಿದ ಮೇಲೂ ನೀನು ಉಸಿರಾಡುವುದು ಸಾಧ್ಯವಿಲ್ಲ. ನಿನ್ನ ತೋಳ್ಬಲವೋ ,ಅಸ್ತ್ರಬಲವೋ, ಮಾಯಾಬಲವೊ ಏನಿದ್ದರೂ ಬರಲಿ. ಯಾವ ತೆರನಾದರೂ ನನ್ನ ವೇಗವನ್ನು ಸಹಿಸಿದೆಯಾದರೆ ಮಾತ್ರವೆ ನೀನು ನಿಜವಾದ ಗಂಡಸು. ನಿನ್ನಲ್ಲಿ ಅದಟಿದ್ದರೆ ನನ್ನೊಡನೆ ಹೋರಾಟಕ್ಕೆ ಅಣಿಯಾಗು, ಮುಂದಕ್ಕೆ ಬಾ." ಮೇಘನಾದನಿಗೆ ಮಾರುತಿಯ ಬಲ ಗೊತ್ತಿದ್ದುದರಿಂದಲೇ ಅವನು ಅತ್ತ ಸುಳಿಯದೆಯೆ ಬೇರೆ ಕಪಿಗಳನ್ನು ಪೀಡಿಸತೊಡಗಿ- ದನು. ಆಗ ಲಕ್ಷ್ಮಣನು ಮೇಘನಾದನನ್ನು ಅಡ್ಡಗಟ್ಟನು. ಜತೆಗೆ ವಿಭೀಷಣನೂ ಇದ್ದನು. ಮೇಘನಾದನು ವಿಭೀಷಣನನ್ನು ಹಂಗಿಸಿದನು : "ಚಿಕ್ಕಪ್ಪ, ಬಂಧುಗಳನ್ನು ತೊರೆದು ನೀಚ ಮಾನವರಿಗೆ ಶರ- ಣುಹೋದೆ. ನಿನ್ನ ನೀತಿಯನ್ನು ಲೋಕವೇ ಕೊಂಡಾಡಲಿದೆ ! " ವಿಭೀಷಣನ ಉತ್ತರವೂ ಸ್ಫುಟವಾಗಿತ್ತು : " ಕುಮಾರ, ನೀಚರ ಆಶ್ರಯ ನಾನು ಮಾಡಿಲ್ಲ. ಅದು ಮಾಡು- ತ್ತಿರುವುದು ನೀನು, ನಿನ್ನ ತಂದೆ. ನಾನು ಜಗನ್ನಾಥನನ್ನು ಶರಣಾ- ಗಿದ್ದೇನೆ. ನಾನು ಭಗವಂತನ ದಾಸ," ಮೇಘನಾದನು ಲಕ್ಷ್ಮಣನತ್ತ ತಿರುಗಿ ನುಡಿದನು : " ಲಕ್ಷಣ, ನಿನಗೆ ಸಾಯಲು ಬಯಕೆ ಇದೆಯೆ ? ಯುದ್ಧಕ್ಕೆ ಅಣಿ ಯಾಗು, ಬದುಕಬೇಕೆಂಬಾಶೆಯಿದ್ದರೆ ಕಾಲುತೆಗೆ ಇಲ್ಲಿಂದ." ಲಕ್ಷ್ಮಣನು ಕನಲಿ ಗುಡುಗಿದನು: " ಬಾಯಿಬಲದಿಂದ ಶತ್ರುಗಳನ್ನು ಸೋಲಿಸಲು ಬರುವುದಿಲ್ಲ. ಬಡಾಯಿಸಾಕು, ತೋಳುಬಲದ ಪರೀಕ್ಷೆ ನಡೆಯಲಿ." ಮೇಘನಾದನು ಲಕ್ಷ್ಮಣನಮೇಲೂ ವಿಭೀಷಣನಮೇಲೂ ನೂರಾರು ಬಾಣಗಳನ್ನೆಸೆದನು. ಲಕ್ಷ್ಮಣನೂ ಅಷ್ಟೇ ಚತುರತೆ- ಯಿಂದ ಪ್ರತಿಬಾಣಗಳನೆಸೆದನು. ಇಬ್ಬರೂ ಧನುರ್ವಿದ್ಯೆಯಲ್ಲಿ ಪರಿಣತರು; ಅಸ್ತ್ರವಿದ್ಯೆಯಲ್ಲಿ ಪಾರಂಗತರು. ಎಂದಮೇಲೆ ಯುದ್ಧ ಕಳೆಕಟ್ಟದಿರುತ್ತದೆಯೆ ? ಒಬ್ಬರನ್ನೊಬ್ಬರು ಮೀರಿಸು- ವಂತೆ ಕಾದಾಡಿಕೊಂಡರು. ಒಮ್ಮೆಯಂತೂ ಲಕ್ಷ್ಮಣನ ನೂರು ಬಾಣಗಳನ್ನೂ ಒಂದೇ ಬಾರಿ ಎದುರಿಸುವ ಪ್ರಸಂಗ ಬಂದು ಮೇಘನಾದನು ಗಾವಿಲನಾಗಬೇಕಾಯಿತು ! ಅಗ್ನಿಜ್ವಾಲೆಯಂತಿ- ರುವ ಸೌಮಿತ್ರಿಯ ಬಾಣಗಳಿಂದ ಆಹತನಾದ ಮೇಘನಾದ ಮೂರ್ಛಿತನಾಗಿ ಕುಸಿದುಬಿದ್ದ ಸ್ವಲ್ಪ ಸಮಯದಲ್ಲಿ ಮೇಘನಾದನಿಗೆ ಅರಿವು ಮೂಡಿತು. ಮತ್ತೆ ಬಾಣಗಳ ಸುರಿಮಳೆ ಆರಂಭವಾಯಿತು. ಲಕ್ಷ್ಮಣನ ಮೇಲೆ ವಿಭೀಷಣನ ಮೇಲೆ ಕಪಿಗಳ ಮೇಲೆ ಕೂಡ ಏಕಕಾಲದಲ್ಲಿ ಬಾಣ- ಗಳು ಬೀಳತೊಡಗಿದವು ! ಲಕ್ಷ್ಮಣನ ಮೋರೆಯಲ್ಲಿ ಅಲಕ್ಷ್ಯಭಾವದ ಮಂದಹಾಸ ಮಿನುಗುತ್ತಲೇ ಇತ್ತು. ಕೈ ಬಾಣಗಳನ್ನು ಸುರಿಸುತ್ತಲೇ ಇತ್ತು. ಲಕ್ಷ್ಮಣನ ಒಂದು ಬಾಣಕ್ಕೆ ಮೇಘನಾದನ ಕವಚ ಮುರಿದು ಬಿತ್ತು. ಮೇಘನಾದನೂ ಪ್ರತಿಯಾಗಿ ಬಾಣಗಳನ್ನೆಸೆದನು. ಲಕ್ಷ್ಮಣನ ಕವಚವೂ ಮುರಿದು ಬಿತ್ತು. ನೆತ್ತರಿಂದ ತೊಯ್ದ ಮೈಯನ್ನು ಹೊತ್ತು ಇಬ್ಬರೂ ಹೋರಾಡಿದರು. ಇತ್ತ ವಿಭೀಷಣನು ಕಪಿಗಳನ್ನು ಹುರಿದುಂಬಿಸಿದನು : "ಮೇಘನಾದನು ರಾವಣನ ಸರ್ವಸ್ವ. ಇವನು ಇಲ್ಲವಾದರೆ ಲಂಕೆಯ ಮೇಲಣ ರಾವಣನ ಅಂಕೆಯೂ ಇಲ್ಲ. ಓ, ಕಪಿವೀರರೆ, ಲಕ್ಷ್ಮಣನ ಈ ಹೋರಾಟದಲ್ಲಿ ನಿಮ್ಮದೂ ಬೆಂಬಲವಿರಲಿ, ಶತ್ರು ದಮನದಲ್ಲಿ ನಿಮ್ಮ ಹುಮ್ಮಸು ಇಮ್ಮಡಿಯಾಗಲಿ." ವಿಭೀಷಣನ ವಚನದಂತೆ ಜಾಂಬವಂತ ಮೊದಲಾದ ಕಪಿ ಪ್ರಧಾನರು ಮೇಘನಾದನ ಪರಿವಾರವನ್ನು ಸಂಹರಿಸತೊಡಗಿ ದರು. ಕಪಿಗಳ ಜೊತೆಗೆ ವಿಭೀಷಣನೂ ಅವನ ಅನುಚರರೂ ಸೇರಿಕೊಂಡರು. ಲಕ್ಷ್ಮಣನು ನಾಲ್ಕು ಬಾಣಗಳಿಂದ ಎದುರಾಳಿಯ ರಥದ ನಾಲ್ಕು ಕುದುರೆಗಳನ್ನೂ ಇನ್ನೊಂದು ಬಾಣದಿಂದ ಸೂತನನ್ನೂ ಸಂಹರಿಸಿದನು. ಮೇಘನಾದನು ಪುರಕ್ಕೆ ತೆರಳಿ ಮತ್ತೊಂದು ವಾಹನವನ್ನೇರಿ ಬಂದು ಕಪಿಗಳ ಮೇಲೆ ಬಾಣಗಳನ್ನು ಸುರಿಸ- ತೊಡಗಿದನು. ಲಕ್ಷ್ಮಣನು ಬಾಣವೊಂದರಿಂದ ಅವನ ಬಿಲ್ಲನ್ನೆ ಮುರಿದನು. ಮೇಘನಾದನು ಮತ್ತೊಂದು ಬಿಲ್ಲನ್ನು ಕೈಗೆತ್ತಿ ಕೊಂಡನು. ಸೌಮಿತ್ರಿಯ ಬಾಣ ಅದನ್ನೂ ಭೇದಿಸಿತು. ಜತೆಗೆ ಸೌಮಿತ್ರಿಯ ಪಂಚಬಾಣಗಳು ಅವನ ಹೃದಯವನ್ನೂ ಗಾಸಿಗೊಳಿಸಿದವು. ಸಾಲದುದಕ್ಕೆ ಸೂತನೂ ಬಾಣಾಹತನಾಗಿ ನೆಲಕ್ಕುರುಳಿದನು ! ಮೇಘನಾದನು ಇಷ್ಟರಿಂದಲೆ ಕಳವಳಪಡಲಿಲ್ಲ. ರಥವನ್ನು ತಾನೇ ನಡೆಸಿಕೊಂಡು ಕಾದಾಡತೊಡಗಿದನು. ಮತ್ತೆ ಬಾಣಗಳ ಮಾಲೆ ಮೇಘನಾದನನ್ನು ಮುತ್ತಿತು. ಹಣೆಯೊಡೆದು ನೆತ್ತರು ಬಸಿಯಿತು. ಪ್ರತಿಯಾಗಿ ಮೇಘನಾದನ ಬಾಣಗಳಿಂದ ಲಕ್ಷ್ಮಣನ ಹಣೆಗೂ ಬಾಣಗಳ ಆಘಾತವಾಯಿತು. ನೆತ್ತರು ಹರಿದು ಮೈ ಬಟ್ಟೆ ಕೆಂಪಾಯಿತು. ಇಬ್ಬರೂ ಹೂಬಿಟ್ಟ ಕಿಂಶುಕದಂತೆ ಸೊಗಯಿಸಿದರು. ವಿಭೀಷಣನಮೇಲೂ ಮೇಘನಾದನ ಬಾಣಗಳು ಬರತೊಡ ಗಿದವು. ಒಡನೆ ವಿಭೀಷಣನು ಮೇಘನಾದನ ಕುದುರೆಗಳನ್ನು ಕೆಡವಿದನು. ಆಗ ಮೇಘನಾದನು ಪ್ರತಿಯಾಗಿ ಶಕ್ತ್ಯಾಯುಧವನ್ನು ಪ್ರಯೋಗಿಸಿದನು. ಲಕ್ಷ್ಮಣನು ಅದನ್ನು ಅರ್ಧಮಾರ್ಗದಲ್ಲಿಯೆ ಕತ್ತರಿಸಿದನು. ಮೇಘನಾದನು ಯಮಪ್ರದತ್ತವಾದ ಬಾಣವೊಂದನ್ನು ವಿಭೀಷಣನ ಮೇಲೆಸೆದನು. ಲಕ್ಷ್ಮಣನು ಕುಬೇರದತ್ತವಾದ ಬಾಣ ವನ್ನು ಅದಕ್ಕೆ ಎದುರಾಗಿ ಎಸೆದನು. ಎರಡು ಬಾಣಗಳಿಗೂ ಕೆಲ- ಕಾಲ ಮುಗಿಲಿನಲ್ಲಿ ತಿಕ್ಕಾಟ ನಡೆಯಿತು. ಕೊನೆಗೆ ಎರಡೂ ನಿರ್ಬಲಗಳಾಗಿ ನೆಲಕ್ಕೆ ಬಿದ್ದವು. ಮತ್ತೆ ಇಬ್ಬರೂ ಅಸ್ತ್ರಯುದ್ಧಕ್ಕೆ ತೊಡಗಿದರು. ವಾರುಣಾಸ್ತ್ರಕ್ಕೆ ಪ್ರತಿಯಾಗಿ ರೌದ್ರಾಸ್ತ್ರ, ಅಗ್ನ್ಯಸ್ತ್ರಕ್ಕೆ ಬದಲಾಗಿ ಸೌರಾಸ್ತ್ರ, ಅಸುರಾಸ್ತ್ರಕ್ಕೆ ಎದುರಾಗಿ ಮಹೇಶ್ವರಾಸ್ತ್ರ ಹೀಗೆ ನಡೆಯಿತು ಸಂಗ್ರಾಮ. ದೇವತೆಗಳು ಮುಗಿಲಿನಲ್ಲಿ ನಿಂತು "ರಾಮಾನುಜನಿಗೆ ಮಂಗಳ ವಾಗಲಿ. ಸತ್ವಕ್ಕೆ, ಸತ್ಯಕ್ಕೆ ಜಯವಾಗಲಿ" ಎಂದು ಹರಸುತ್ತಿದ್ದರು. ಲಕ್ಷ್ಮಣನು ಮಹತ್ತರವಾದ ಬಾಣವೊಂದನ್ನು ಬಿಲ್ಲಿಗೇರಿಸಿ "ರಾಮಚಂದ್ರನಿಗೆ ಜಯವಾಗಲಿ" ಎಂದು ಮನದಲ್ಲಿ ನೆನೆದು ಶತ್ರುವಿನಮೇಲೆ ಪ್ರಯೋಗಿಸಿದನು. ಇಂದ್ರವೈರಿಯ ತಲೆ ಕಡಿದು ನೆಲಕ್ಕೆ ಬಿತ್ತು. ಇಂದ್ರನನ್ನು ಸೋಲಿಸಿದ ಹಮ್ಮು ಮಣ್ಣು ಮುಕ್ಕಿತು ! ಉಳಿದ ರಾಕ್ಷಸರು ಇದನ್ನು ಕಂಡು ಹೆದರಿ ಓಡಿದರು. ಕಪಿಗಳು ಲಕ್ಷ್ಮಣನನ್ನು ಸುತ್ತುವರಿದು ಕೊಂಡಾಡಿದರು. ಮೂರುದಿನ ರಾತ್ರಿ-ಹಗಲು ಅಖಂಡವಾಗಿ ನಡೆದ ಯುದ್ಧ ಕೊನೆಗೆ ಸುಖಾಂತವಾಗಿ ಕೊನೆಗೊಂಡಿತು ! ದೇವತೆಗಳ ಹರಕೆ ಸಫಲವಾಯಿತು. ಸತ್ಯ ಗೆದ್ದಿತು; ಅನೃತ ಸೋತಿತು. ಇಂದ್ರಾರಿಯ ಮರಣದಿಂದ ಸಂತಸಗೊಂಡ ದೇವತೆಗಳು ಹೂಮಳೆ ಸುರಿಸಿ ಲಕ್ಷ್ಮಣನನ್ನು ಉಪಚರಿಸಿದರು. ಲಕ್ಷ್ಮಣನು ಹನುಮಂತನೊಡನೆ ಬಂದು ರಾಮನ ಕಾಲಿಗೆ- ರಗಿದನು. ರಾಮಚಂದ್ರನ ಮಂದಹಾಸ ಸೌಮಿತ್ರಿಯನ್ನು ಹರಸಿತು. ಕಣ್ಣು ಕಾರುಣ್ಯವನ್ನು ಹರಿಸಿತು. ತೋಳುಗಳು ತಮ್ಮನನ್ನು ತಬ್ಬಿಕೊಂಡವು. " ರಾಮೋ ಧರಣ್ಯಾಂ ಗಗನೇ ಚ ರಾಮಃ....! " ರಾಮಸೇನೆಯ ಹರ್ಷಧ್ವನಿಯೊಡನೆ ರಾಕ್ಷಸಸೇನೆಯ ಶೋಕ ಧ್ವನಿ ಮೇಳವಿಸಿತು. ರಾವಣನ ದುಃಖದ ಹೊನಲು ಕಟ್ಟೆಯೊಡೆದು ಹರಿಯಿತು: "ಇಂದ್ರನನ್ನು ಗೆಲಿದ ಓ ನನ್ನ ಕಂದನೇ, ತಾಯಿತಂದೆಗಳನ್ನು ತೊರೆದು ಎತ್ತ ಹೋದೆ ? ನನ್ನನ್ನೂ ನಿನ್ನೆಡೆಗೆ ಕರೆದುಕೊ. ನಾನೂ ನಿನ್ನ ಜತೆಗೆ ಬಂದುಬಿಡುವೆ." ಸಿಟ್ಟಿನ ಭರದಲ್ಲಿ ರಾವಣನಿಗೆ ಸೀತೆಯನ್ನು ಕಡಿದು ಬಿಡಬೇಕು ಎನ್ನಿಸಿತು. ಬೇರನ್ನೆ ಕಿತ್ತೆಸೆದರೆ ಮತ್ತೆ ಯಾರಿಗಾಗಿ ಈ ಯುದ್ಧ ? ರಾವಣನ ಕೈಯಲ್ಲಿ ಕತ್ತಿ ಝಳಪಿಸಿತು. ಕಾಲು ಅಶೋಕವನದೆಡೆಗೆ ತೆರಳಿತು. ನಡುವೆ ಸುಪಾರ್ಶ್ವ ಬಂದು ' ಅಂಥ ಕೆಲಸ ಮಾಡ ಬಾರದು' ಎಂದು ವಿನಂತಿಸಿಕೊಂಡನು. ಮಾತು ನಾಟಿತು. ಮನಸ್ಸು ಒಪ್ಪಿತು. ಕತ್ತಿ ಒರೆಯನ್ನು ಸೇರಿತು. ರಾವಣ ಅಶೋಕ ವನದಿಂದ ಸಭಾಭವನಕ್ಕೆ ನಡೆದ. ಸಭೆಯಲ್ಲಿ ನಿರ್ಣಯವಾದಂತೆ ಅಸಂಖ್ಯವಾದ ಮೂಲ ಬಲವನ್ನು ಯುದ್ಧಕ್ಕೆ ಕಳಿಸಲಾಯಿತು. ಅದು ಎಂಥ ಸೇನೆ ! ಕಂಡವರ ಎದೆ ನಡುಗಿಸುವ ಸೇನೆ ! ನೂರಾರು ಅಕ್ಷೋಹಿಣಿ ಸೇನೆಗಳ ಸಾಗರ ! ಹೆದ್ದೆರೆಗಳಂತೆ ಒಂದರ ಮೇಲೊಂದು ನುಗ್ಗಿ ಬರುವ ಮದ್ದಾನೆಗಳು ! ತಿಮಿಂಗಿಲ ಗಳಂತೆ ಅತ್ತಿತ್ತ ಚಲಿಸುವ ಬೃಹದ್ರಥಗಳು ! ದಕ್ಷಿಣ ಸಾಗರವ- ನ್ನೇನೋ ಕಪಿಗಳು ದಾಟಿದರು. ಆದರೆ ಈ ಸೇನಾಸಾಗರವನ್ನು ದಾಟುವ ಬಗೆ ಹೇಗೆ ? ಇದನ್ನು ದಮಿಸಲು ಎಂಥ ಸೇತುವೆ ಕಟ್ಟ- ಬೇಕು ? ಯಾರು ಕಟ್ಟಬೇಕು ? ಕೈಯಲ್ಲಿ ಜ್ವಾಲೆಯಂತೆ ಹೊಳೆಯುವ ಆಯುಧಗಳು ! ಹೊಗೆಯಂತೆ ಮುಗಿಲು ಮುತ್ತಿ ಕಣ್ಕಟ್ಟಿಸುತ್ತಿರುವ ಧೂಳು ! ಇದೇನು ರಾವಣನ ಸೇನೆಯೋ ಪ್ರಳಯಾಂತಕರವಾದ ಬೆಂಕಿಯ ಬೇನೆಯೋ ! ಕಾಲ ತುಳಿತಕ್ಕೆ ಮರಗಳುರುಳುತ್ತಿವೆ. ಭಯದಿಂದ ಲೋಕದ ಕಣ್ಣು ಕುರುಡಾಗಿದೆ. ರಾಕ್ಷಸ ಸೇನೆಯ ಆವೇಶಕ್ಕೆ ಬಲಿಯಾದ ಕಪಿಗಳು ಬಿರುಗಾಳಿಗೆ ಸಿಕ್ಕಿದ ತರಗೆಲೆಯಂತೆ ಒದ್ದಾಡಿದರು ! ಇದು ಎಂಥ ಸೇನೆ ! ಕಪಿಗಳನ್ನೆಲ್ಲ ಸೋಲಿಸಿದ ರಾವಣಸೇನೆ ರಾಮನಿದ್ದೆಡೆಗೆ ಸರಿಯಿತು; ಬೆಂಕಿಯಮೇಲೆ ಮುತ್ತುವ ಪತಂಗಗಳಂತೆ ! ಏಕಕಾಲ ದಲ್ಲಿ ನೂರು ಸೈನಿಕರ ನೂರು ಆಯುಧಗಳು ರಾಮನಮೇಲೆ ಬಿದ್ದವು. ಒಬ್ಬ ರಾಮನು ಕೋಟಿ ರಾಕ್ಷಸರನ್ನು ಕೊಲ್ಲಬಲ್ಲನೆ ಎಂದು ಕೆಲವರು ಶಂಕಿಸಿದರು. ಮಹಾವೀರನಾದ ರಾಮನಿಗೆ ಇವರನ್ನು ಸಂಹರಿಸುವುದು ದೊಡ್ಡದಲ್ಲ ಎಂದು ಕೆಲವರು ವಾದಿಸಿದರು. ಜ್ಞಾನಿಗಳು ಮಾತ್ರ ಭಗವಂತನು ಆಟಿಕೆಗಳೊಡನೆ ಆಡುತ್ತಿದ್ದಾನೆ ಎಂದು ಹರ್ಷಪುಲಕಿತರಾದರು. ಅವರವರ ಬುದ್ಧಿ ಹರಿದಂತೆ ಅವರವರು ಕಲ್ಪಿಸಿಕೊಂಡರು. ರಾಮಚಂದ್ರನು ಬಿಲ್ಲಿಗೆ ಹೆದೆಯೇರಿಸಿದನು. ಆ ಬಿಲ್ಲಿನ ಟಂಕಾರದಲ್ಲಿ ರಾಕ್ಷಸರ ಸಾವಿನ ಸಂಕೇತವಿತ್ತು; ದೇವತೆಗಳ ವಿಜಯದ ಸಂದೇಶವಿತ್ತು. ಒಬ್ಬ ರಾಮನು ಆನೆಗಳನ್ನು ಕಡಿದು ಚೆಲ್ಲುತ್ತಿದ್ದನು. ಇನ್ನೊಬ್ಬ ರಾಮನ ಕೈಯಲ್ಲಿ ಕುದುರೆಗಳು ಜೀವ ಬಿಡುತ್ತಿದ್ದವು. ಒಬ್ಬ ರಾಮನ ಕೈಯಲ್ಲಿ ಈಟಿ, ಇನ್ನೊಬ್ಬ ರಾಮನ ಕೈಯಲ್ಲಿ ಕತ್ತಿ, ಮತ್ತೊಬ್ಬ ರಾಮ ಬಿಲ್ಲಿನಿಂದ ಕೋಟಿ ಕೋಟಿ ಬಾಣಗಳನ್ನು ದೈತ್ಯರ ಮೇಲೆ ಚೆಲ್ಲುತ್ತಿದ್ದಾನೆ ! ರಾಕ್ಷಸರು ನೋಡಿದಲ್ಲೆಲ್ಲ ರಾಮ ನ ರೂಪವನ್ನೆ ಕಂಡರು ! ಹುಬ್ಬಿನ ಕುಣಿತದಿಂದಲೆ ಜಗತ್ತನ್ನು ನಿರ್ಮಿಸಬಲ್ಲ, ಸಂಹರಿಸಬಲ್ಲ ಭಗವಂತನು ವಿಶ್ವರೂಪದ ಲೀಲೆಯನ್ನಾಡಿದನು. ನೆಲದಲ್ಲಿ ರಾಮ, ಮುಗಿಲಲ್ಲಿ ರಾಮ, ಸನಿಯದಲ್ಲಿ ರಾಮ, ದೂರಸರಿದರೆ ಅಲ್ಲೂ ರಾಮ, ಸ್ವಪಕ್ಷದಲ್ಲೂ, ಶತ್ರುಪಕ್ಷದಲ್ಲೂ ರಾಮನೇ ರಾಮ. ಎತ್ತಲೂ ರಾಮ ! ರಾಮನಿರದ ತಾಣವೆಲ್ಲಿ ? ವಿಶ್ವಮೂರ್ತಿಯಾದ ರಾಮನಿಗೆ ಶತ್ರುಗಳನ್ನು ಸಂಹರಿಸಲು ಕಪಿಗಳ ಆಶ್ರಯ ಬೇಕೆ ? ಎಲ್ಲ ಪರಮಚೇತನನ ಲೀಲೆ ಎಂದು ದೇವತೆಗಳು ಪುಲಕಿತರಾಗಿ ಕೈ ಮುಗಿದರು. ಅನಂತ ರಾಮರು, ಅನಂತ ಆಯುಧಗಳಿಂದ ರಾವಣನ ಸೇನೆ- ಯನ್ನು ಸಂಹರಿಸಿದರು ! ರಾಕ್ಷಸರ ಹೆಮ್ಮೆಯ ಮೂಲಬಲ ನಿರ್ಮೂಲವಾಯಿತು ! ಏಕ ಅನೇಕವಾದುದರ ಕೃತ್ಯ ಮುಗಿ- ಯಿತು. ಮತ್ತೆ ಅನೇಕ ಏಕವಾಯಿತು. "ಪೂರ್ಣಮದಃ ಪೂರ್ಣಮಿದಮ್." ಅಚ್ಚರಿಯಿಂದ ಕಣ್ಣರಳಿಸಿ ನಿಂತ ಕಪಿಗಳು ಈ ಅದ್ಭುತವನ್ನು ಕಂಡು ಕೃತಾರ್ಥರಾದರು. ಪುಣ್ಯಚೇತನರು "ಪೂರ್ಣತತ್ವಕ್ಕೆ ನಮೋ" ಎಂದರು. ಇತಿಹಾಸದ ಮಹಾಯುದ್ಧ ಒಬ್ಬ ರಾಮನಿಂದ ಮೂಲ ಬಲವೆಲ್ಲ ನಾಶವಾಯಿತು ಎಂಬ ವಾರ್ತೆ ಕೇಳಿದಮೇಲೆ ರಾವಣನಿಗೆ ಬದುಕುವ ಆಸೆ ಉಳಿದಿರಲಿಲ್ಲ. ಆದರೆ ಹೇಡಿಯಂತೆ ಶರಣಾಗತನಾಗುವುದು ಅವನಿಗೆ ಬೇಕಿಲ್ಲ. ಕೊನೆಯುಸಿರು ಇರುವ ತನಕವೂ ಹೋರಾಡಿ ಸಾಯುವುದೇ ಸರಿ ಎಂದು ಅವನ ಮತ. ಕೋಪದಿಂದ ಮೈ ಕೆಂಪೇರಿತು. ಕಣ್ಣು ಕಿಡಿಕಾರಿತು. "ಮಂಗಗಳೂ ಮನುಷ್ಯರೂ ಈ ನೆಲದಲ್ಲಿ ಹುಟ್ಟಿಯೇ ಇಲ್ಲ ಎಂದು ಮಾಡಿಬಿಡುವೆನು" ಎನ್ನುತ್ತ ಯುದ್ಧ ಸನ್ನದ್ಧನಾಗಿ ಪುಷ್ಪಕವನ್ನೇರಿದನು. ವಿರೂಪಾಕ್ಷ, ಯೂಪಾಕ್ಷ, ಮಹಾಪಾರ್ಶ್ವ, ಮಹೋದರರೆಂಬ ನಾಲ್ವರು ಮಂತ್ರಿಗಳು ಅವನ ಜತೆಗೆ ಬಂದರು. ಸತ್ತು ಉಳಿದ ಕೆಲ ರಕ್ಕಸರೂ ರಾವಣನ ಹಿಂದೆ ಸೇರಿಕೊಂಡರು. ದಾರಿಯಲ್ಲಿ ರಾವಣನ ಕಣ್ಣಿಗೆ ಮೊದಲು ಬಿದ್ದುದು ಶತ್ರು- ಗಳಲ್ಲ-ಅಪಶಕುನಗಳು ! ಮುಗಿಲಿನಿಂದ ಕೆನ್ನೀರಿನ ಮಳೆ ಸುರಿ- ಯುತ್ತಿತ್ತು. ನಗರದ ಸುತ್ತ ನರಿಗಳು ಊಳಿಡುತ್ತಿದ್ದವು. ಸಾಲದ್ದಕ್ಕೆ ರಾವಣನ ಎಡಮೈ ಅದುರಿತು. ಇದು ಮೃತ್ಯುವಿನ ಬರವಿಗೆ ಸೂಚನೆಯಲ್ಲವೆ? ಆದರೆ ರಾಕ್ಷಸೇಶ್ವರನು ಇದನ್ನು ಲಕ್ಷಿಸಲೇ ಇಲ್ಲ. ಅವನಿಗಿರುವುದು ಒಂದೇ ದಾರಿ, ಯುದ್ಧ ! ರಾಮನೊಡನೆ ಯುದ್ಧ ! ಮುನ್ನುಗ್ಗುತ್ತಿರುವ ರಾಕ್ಷಸ ಸೇನೆಯನ್ನು ಕಪಿಗಳು ಅಡ್ಡ- ಗಟ್ಟಿದರು. ರಾವಣನು ಕಪಿಗಳ ಮೇಲೆ ಬಾಣಗಳನ್ನು ಸುರಿಸಿದನು. ಕೆಲಕಪಿಗಳು ಹೆದರಿ ಓಡಿದರು. ಕೆಲವರು ಮುನ್ನುಗ್ಗಿ ರಾಕ್ಷಸರನ್ನು ಸದೆಬಡಿಯುತ್ತಲೇ ಇದ್ದರು. ರಾವಣನ ಅಪಾರ ಶರವರ್ಷದ ಮಧ್ಯದಲ್ಲಿ ಕಪಿಗಳು ರಾಕ್ಷಸ ಸೇನೆಯ ಬಹುಭಾಗವನ್ನು ನಾಶಗೊಳಿಸಿಬಿಟ್ಟರು! ಆಗ ಕಪಿಗಳ ಕೈಯಿಂದ ರಾಕ್ಷಸರನ್ನು ಉಳಿಸುವುದಕ್ಕಾಗಿ ಭಾರೀ ದೇಹದ ಮಹೋದರ ಮುಂದೆ ಬಂದನು. ಅವನ ಪರ್ವತ ದಂಥ ಮೈಯನ್ನುಕಂಡು, ಅವನ ಬಾಣಗಳ ಪ್ರವಾಹವನ್ನು ಕಂಡು " ಇವನು ಸಾಮಾನ್ಯನಲ್ಲ; ಕುಂಭಕರ್ಣನೇ ತಿರುಗಿ ಬದುಕಿ ಬಂದಿರಬೇಕು" ಎಂದು ಕಪಿಗಳು ಭೀತರಾಗಿ ಓಡತೊಡಗಿದರು. ಆಗ ಅಂಗದನು ಅವರನ್ನು ಸಂತೈಸಿದ : "ಇದು ಬರಿಯ ಬೆದರಿಕೆ ಮಾತ್ರ. ಈ ಬೊಜ್ಜು ಮೈಯ ರಕ್ಕಸ- ನಿಂದ ಏನೂ ಸಾಗುವಂತಿಲ್ಲ. ಇವನಿಗೆ ಹೆದರಿ ನೀವಾರೂ ಓಡಬಾರದು. " ಕಪಿಗಳನ್ನು ಹುರಿದುಂಬಿಸಿ ಸ್ವಯಂ ಅಂಗದನೇ ಮಹೋದರ ನ ಜತೆ ಕಾದಾಡಲು ಹೋದನು. ಇಬ್ಬರೂ ಅದ್ಭುತವಾದ ಯುದ್ಧ ಕೌಶಲವನ್ನು ತೋರಿದರು. ಮಹೋದರ ಬಾಣಗಳನ್ನು ಸುರಿಸು ತ್ತಿದ್ದಂತೆಯೇ ಅಂಗದನು ಮುಂದುವರಿದು ಅವನ ಜುಟ್ಟಕ್ಕೇ ಕೈ ಕೊಟ್ಟನು. ಅಲ್ಲಿಗೆ ಮಹೋದರನ ಪೌರುಷ ಮುಗಿಯಿತು. ಅಂಗದ ಅವನನ್ನು ನೆಲಕ್ಕೆ ಕೆಡವಿ ತುಳಿದುಕೊಂದನು. ಮಹೋದರ ಸತ್ತುದನ್ನು ಕಂಡು ಮಹಾಪಾರ್ಶ್ವ ಅಂಗದನ ಮೇಲೇರಿ ಬಂದನು. ಅಂಗದ ಹಾರಿ ಅವನ ಧನುಸ್ಸನ್ನೆ ಕಸಿದು ಕೊಂಡನು. ಮಹಾಪಾರ್ಶ್ವ ಖಡ್ಗವನ್ನು ಝಳಪಿಸಿದನು. ಖಡ್ಗಕ್ಕೂ ಹಿಂದಿನದೇ ಗತಿಯಾಯಿತು. ಅಂಗದ ಆ ಖಡ್ಗವನ್ನೂ ಅವನಿಂದ ಕಸಿದುಕೊಂಡು ಶತ್ರುವಿನ ಆಯುಧದಿಂದಲೆ ಶತ್ರು ವನ್ನು ತುಂಡರಿಸಿದನು. ಈಗ ಯೂಪಾಕ್ಷ, ವಿರೂಪಾಕ್ಷರ ಸರದಿ. ಅವರಿಬ್ಬರೂ ಜತೆ ಯಾಗಿ ಸುರಿಸಿದ ಬಾಣಗಳಿಂದ ತಪ್ಪಿಸಿಕೊಳ್ಳುವುದು ಅಂಗದ ನಿಗೂ ಅಶಕ್ಯವಾಯಿತು. ಪಂಜರದಲ್ಲಿ ಸಿಕ್ಕಿಬಿದ್ದ ಹುಲಿಯಂತಾ- ಯಿತು ಅಂಗದನ ಪಾಡು. ಅಂಗದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾನೆ. ಸೇನೆ ಎದ್ದು ಹೋರಾಡುವ ಸ್ಥಿತಿಯಲ್ಲಿಲ್ಲ. ಇದನ್ನು ಕಂಡು ಸುಮ್ಮನಿರುವುದು ಸಾಧ್ಯವೆ ? ಕೂಡಲೆ ಸುಗ್ರೀವನು ಸುಷೇಣನನ್ನು ಸೇನಾರಕ್ಷಣೆಗೆ ನಿಯಮಿಸಿ ತಾನು ಶತ್ರುಗಳನ್ನು ಎದುರಿಸಿದನು. ಸುಗ್ರೀವನು ತಂದೊಗೆದ ಮಹಾಪರ್ವತವೊಂದರ ಪೆಟ್ಟಿಗೆ ಇಬ್ಬರೂ ರಾಕ್ಷಸರು ಒಟ್ಟಿಗೇ ನುಗ್ಗಾದರು. ಬಂಡೆಯಡಿಗೆ ಸಿಕ್ಕಿದ ಮಣ್ಣು ಮುದ್ದೆಯಂತೆ ! ನಾಲ್ವರೂ ಮಂತ್ರಿಗಳು ಮೃತರಾದಾಗ ರಾವಣನಿಗೆ ಸಹನೆ- ಯಾಗಲಿಲ್ಲ. ಅವನು ಉಲ್ಬಣವಾದ ಬಾಣವೊಂದರಿಂದ ಸುಗ್ರೀವನ ಎದೆಯನ್ನು ಗಾಯಗೊಳಿಸಿದನು. ಕಪಿರಾಜ ಮೂರ್ಛಿತನಾಗಿ ನೆಲಕ್ಕುರುಳಿದ ! ಉಳಿದ ಕಪಿಗಳು ಬೆಂಕಿಯಂತೆ ಮುನ್ನುಗ್ಗುತ್ತಿರುವ ರಾವಣ- ನನ್ನು ಕಂಡೇ ಹಿಮ್ಮೆಟ್ಟಿದರು. ರಾವಣನು ರಾಮನನ್ನರಸಿ- ಕೊಂಡು ನಡೆದನು. ನಡುವೆ ಲಕ್ಷ್ಮಣನು ಅವನನ್ನು ತಡೆದನು. ಹತ್ತು ತಲೆಯ ರಾವಣನಿಗೂ ಹರೆಯದ ಸೌಮಿತ್ರಿಗೂ ವಿಚಿತ್ರ ವಾದ ಕದನ ನಡೆಯಿತು. ಇತ್ತ ವಿಭೀಷಣನ ಗದೆ ರಾವಣನ ಸೈನ್ಯಕ್ಕೆ ಬುದ್ಧಿ ಕಲಿಸುತ್ತಿತ್ತು. ಅದನ್ನು ಕಂಡು ರಾವಣನು ಭಯಾನಕವಾದ ಶಕ್ತ್ಯಾಯುಧ- ವನ್ನು ತಮ್ಮನ ಮೇಲೆಸೆದನು. ಅದನ್ನು ಅರ್ಧಮಾರ್ಗದಲ್ಲಿ ಲಕ್ಷ್ಮಣನ ಮೂರು ಬಾಣಗಳು ಕತ್ತರಿಸಿದವು. ಕಪಿಗಳು ಸಂತಸ ದಿಂದ 'ಹೋ' ಎಂದು ಕೂಗಿಬಿಟ್ಟರು. ರಾಮನ ತಮ್ಮನ ಜತೆಗೆ ತನ್ನ ತಮ್ಮನೂ ತನಗೆ ಎದುರುನಿಂತುದನ್ನು ಕಂಡು ರಾವಣನು ಕನಲಿ ಕೆಂಡವಾದನು. ಅವನ ವೀರವಾಣಿ ಲಕ್ಷ್ಮಣನನ್ನು ಮೂದಲಿಸಿತು : " ಲಕ್ಷಣ, ನಿನ್ನಿಂದ ವಿಭೀಷಣ ಬದುಕಿಕೊಂಡ. ಅದು ದೊಡ್ಡ ಮಾತಲ್ಲ. ನೀನು ಬಲಿಷ್ಠನಾದುದು ನಿಜವಾದರೆ ನನ್ನ ಈ ಕಾಲದಂಡದಿಂದ ನಿನ್ನನ್ನು ಬದುಕಿಸಿಕೊ " ರಾವಣನು ಲಕ್ಷ್ಮಣನ ಮೇಲೆಸೆದ ಶಕ್ತಿ ಬ್ರಹ್ಮನಿಂದ ಮಯ- ನಿಗೂ' ಮಯನಿಂದ ರಾವಣನಿಗೂ ಅನುಕ್ರಮವಾಗಿ ಬಂದಿತ್ತು. ಕಾಲದಂಡದಂಥ ಶಕ್ತ್ಯಾಯುಧ ಕ್ಷಣಾರ್ಧದಲ್ಲಿ ಲಕ್ಷ್ಮಣನ ಎದೆಯನ್ನು ಸೀಳಿತು. ಲಕ್ಷ್ಮಣನು ಮೂರ್ಛಿತನಾದನು. ಲಕ್ಷ್ಮಣನು ಬಿದ್ದುದೇ ತಡ; ಹನುಮಂತ ದೊಡ್ಡ ಬೆಟ್ಟ- ವೊಂದನ್ನು ತಂದು ರಾವಣನ ಮೇಲೆ ಹೊಡೆದನು. ಬೆಟ್ಟದ ಪೆಟ್ಟಿಗೆ ರಾವಣನ ಮೈಯ ಜತೆಗೆ ಗರ್ವವೂ ಭಗ್ನವಾಯಿತು. ಹತ್ತು ಬಾಯಿಗಳೂ ನೆತ್ತರನ್ನು ಕಾರಿದವು ! ಹತ್ತು ಕಾರಂಜಿಗಳು ಕೆನ್ನೀರನ್ನು ಚಿಮ್ಮಿದವು ! ಅಷ್ಟರಲ್ಲಿ ಪ್ರಾಣದೇವರ ಪುತ್ರನಾದ ಹನುಮಂತನು ಲಕ್ಷ್ಮಣನನ್ನು ಎತ್ತಿಕೊಂಡು ರಾಮಚಂದ್ರನ ಬಳಿಗೆ ತಂದನು. ಸರ್ವಶಕ್ತನಾದ ರಾಮದೇವನು ಶಕ್ತಿಯನ್ನು ಲಕ್ಷ್ಮಣನ ಮೈ ಯಿಂದ ಎಳೆದು ತೆಗೆದು ಗಾಯ ಮಾಸುವುದಕ್ಕಾಗಿ ಮತ್ತೊಮ್ಮೆ ಔಷಧಗಳನ್ನು ತರುವಂತೆ ಮಾರುತಿಗೆ ಆಜ್ಞಾಪಿಸಿದನು. ಹನುಮಂತನು ವಾಯುವೇಗದಿಂದ ಹಾರಿ ಹಿಂದಿನಂತೆಯೇ ಗಂಧಮಾದನವನ್ನು ಹೊತ್ತು ತಂದನು. ಅದರ ಗಾಳಿ ಸೋಂಕಿ- ದುದೇ ತಡ ಲಕ್ಷ್ಮಣನು ಉಲ್ಲಸಿತನಾಗಿ ಎದ್ದು ಕುಳಿತನು. ರಾಮ ಚಂದ್ರನು ಸಂತಸದಿಂದ ಹನುಮಂತನನ್ನು ಅಪ್ಪಿಕೊಂಡನು. ಗಾಯಗೊಂಡು ಕೈ ಮುರಿದುಕೊಂಡು ಬಿದ್ದಿದ್ದ ಕಪಿಗಳೆಲ್ಲ ಎದ್ದು ಕುಳಿತರು. ರಾಕ್ಷಸರ ದೇಹವನ್ನು ಮಾತ್ರ ಕಪಿಗಳು ಕೊಂದಕೂಡಲೆ ಸಮುದ್ರಕ್ಕೆ ಚೆಲ್ಲಿಬಿಡುತ್ತಿದ್ದರು. ರಾಮಚಂದ್ರನ ಆಜ್ಞೆ ಆ ತೆರ ನಾಗಿತ್ತು. ಅದರಿಂದ ಯಾವ ರಾಕ್ಷಸನಿಗೂ ಈ ಮದ್ದಿನ ಬಲದಿಂದ ಮತ್ತೆ ಬದುಕುವುದು ಸಾಧ್ಯವಾಗಲಿಲ್ಲ. ಕೆಲಸ ತೀರಿದ ಕೂಡಲೆ ಮಾರುತಿ ಮೊದಲಿನಂತೆಯೇ ಪರ್ವತವನ್ನು ನಿಂತಲ್ಲಿಂದಲೆ ಅದರ ಜಾಗಕ್ಕೆ ಎಸೆದನು. ಅದು ಮೊದಲಿದ್ದಂತೆಯೇ ಗಕ್ಕನೆ ಕುಳಿತುಕೊಂಡಿತು. ರಾಮನ ಧನುಸ್ಸಿನ ಟಂಕಾರ ಯುದ್ಧಾರಂಭದ ಓಂಕಾರವನ್ನು ಜಗತ್ತಿಗೇ ಸಾರಿತು. ರಾವಣನೂ ಬಿಲ್ಲಿಗೆ ಹೆದೆಯೇರಿಸಿ ಸಿದ್ಧನಾಗಿ ವಿಮಾನದ ಮೇಲೇರಿ ಬಂದನು. ಬ್ರಹ್ಮ-ರುದ್ರಾದಿ ಸಕಲ ದೇವತೆಗಳೂ ಸಕಲ ಮುನಿಗಳೂ ಭಗವಂತನ ಲೀಲಾವತಾರದ ಉದ್ದೇಶವಾದ ಈ ಲೀಲಾನಾಟಕ ವನ್ನು ನೋಡಲು ಮುಗಿಲಿನಲ್ಲಿ ನೆರೆದರು. ರಾವಣನು ವಿಮಾನದಲ್ಲಿದ್ದರೆ ರಾಮಚಂದ್ರನು ಬರಿ ನೆಲ ದಲ್ಲಿದ್ದಾನೆ. ಇಂದ್ರನಿಗೆ ಇದು ಸರಿದೋರಲಿಲ್ಲ. ನಮ್ಮ ಪ್ರಭು ನೆಲದಲ್ಲಿ ನಿಂತಿರಬಾರದು" ಎಂದಿತು ಅವನ ಮನಸ್ಸು. ಒಡನೆ ಅವನು ತನ್ನ ರಥವನ್ನೇ ಕಳಿಸಿಕೊಟ್ಟನು. ಇಂದ್ರನ ಸಾರಥಿಯಾದ ಮಾತಲಿ ರಥವನ್ನು ರಾಮಚಂದ್ರನ ಮುಂದೆ ತಂದು ನಿಲ್ಲಿಸಿ ವಿಜ್ಞಾಪಿಸಿಕೊಂಡನು: "ಜಗನ್ನಾಥನಾದ ನಿನಗೆ ವಿಜಯವಾಗಲಿ. ಇಂದ್ರನು ನಿನಗಾಗಿ ಕಳಿಸಿದ ಈ ರಥವನ್ನೇರುವ ಕೃಪೆ ಮಾಡಬೇಕು." ಮಾತಲಿಯ ಮಾತನ್ನು ಮನ್ನಿಸಿ ರಾಮಚಂದ್ರ ರಥವೇರಿದನು ಭಾನುದೇವ ಉದಯಾದ್ರಿಯನ್ನೇರುವಂತೆ. ರಾವಣನ ಬಗೆಬಗೆಯ ಬಾಣಗಳು ರಾಮಚಂದ್ರನ ಮೇಲೆ ಧಾಳಿಯಿಡತೊಡಗಿದವು. ಆದರೆ ರಣರಂಗದಲ್ಲೂ ತ್ರಿಲೋಕ ಜೀವನವಾದ ಮಂದಹಾಸ ವನ್ನು ಬೀರುತ್ತಿರುವ ರಾಮಚಂದ್ರ ಅವುಗಳನ್ನು ನಡುದಾರಿ ಯಲ್ಲೆ ಕತ್ತರಿಸಿ ರಾವಣನ ಮೇಲೆಯೆ ಒಂದಿಷ್ಟು ಬಾಣಗಳನ್ನು ಸುರಿಸಿದನು. ಜಗತ್ತೆ ಅಚ್ಚರಿ ಪಡುವಂತೆ ರಾಮ ರಾವಣರ ಯುದ್ಧ ನಡೆಯಿತು ! ಇಬ್ಬರ ಬಾಣಗಳಿಂದಲೂ ಮುಗಿಲು ಮುತ್ತಿ- ಹೋಗಿತ್ತು. ಕತ್ತಲೆ ಕವಿದು ನೆಲ ಕುರುಡಾಯಿತು; ರಾಕ್ಷಸರ ಬಾಳು ಬರಡಾಯಿತು ! ಕಪಿಗಳೂ ರಾಕ್ಷಸರೂ ಈ ಅದ್ಭುತವನ್ನು ಕಂಡು ಬೆರಗಾಗಿ ಮೂಗಿನ ಮೇಲೆ ಬೆರಳೇರಿಸಿದರು ! ರಾವಣನು ಪುಂಖಾನುಪುಂಖವಾಗಿ ಬಿಟ್ಟ ಸಾವಿರಾರು ಬಾಣಗಳು ಸಜ್ಜನರ ಹೃದಯದಂತೆ- ಹೂವಿನಂತೆ ರಾಮನೆಡೆಗೆ ಬಂದಾಗ ಮಿದುವಾಗಿ ಬಿಡುತ್ತಿದ್ದವು. . ಆದರೆ ರಾಮಚಂದ್ರನ ಒಂದೊಂದು ಬಾಣವೂ ರಾವಣನಿಗೆ ಪ್ರಾಣಾಂತಿಕ ವೇದನೆ- ಯನ್ನುಂಟು ಮಾಡುತ್ತಿತ್ತು. ಬ್ರಹ್ಮೇಂದ್ರಾದಿಗಳು ರಾಮಚಂದ್ರನ ದಾಸರಲ್ಲವೆ ? ಭಗವಂತನ ಭಕ್ತರಲ್ಲವೆ ? ಅವರ ಶಕ್ತಿ ಇವನ ಅನುಗ್ರಹದ ಫಲ- ವಲ್ಲವೆ ? ಅಂಥ ರಾಮಚಂದ್ರನಿಗೆ ಎಂಥ ದಿವ್ಯಾಸ್ತ್ರಗಳು ಏನು ಮಾಡಬಲ್ಲವು ? ರಾವಣನ ಎಲ್ಲ ಅಸ್ತ್ರಗಳೂ ರಾಮಚಂದ್ರನ ಪ್ರತ್ಯಸ್ತ್ರಗಳ ಮುಂದೆ ಸೋಲನ್ನೊಪ್ಪಿದವು. ಯಾವುದನ್ನು ಇನ್ನೊಬ್ಬರು ಮಾಡಲಾರರೊ ಯಾವುದನ್ನು ಜಗತ್ತು ಅಸಂಭವವೆಂದು ತಿಳಿಯುವದೋ ಅಂಥ ಸಾಹಸವನ್ನು ರಾವಣ ಯುದ್ಧದಲ್ಲಿ ತೋರಿಸಿದನು. ಆದರೆ ರಾಮಚಂದ್ರನ ಮುಂದೆ ಅದು ನಿಷ್ಫಲವಾಯಿತು. ಬೆಂಕಿಯ ಮುಂದೆ ಪತಂಗದ ಸಾಹಸ ಏತರದು ? ಸೂರ್ಯನ ಮುಂದೆ ತಾರೆಗಳ ಮಿಣುಕು ಯಾವ ಲೆಕ್ಕ? ಆದರೂ ರಾವಣನು ತೋರಿದ ಸಾಹಸ ಅಪೂರ್ವವಾಗಿತ್ತು. ಅವನು ಮಾಡಿದ ಯುದ್ಧ ಅದ್ಭುತವಾಗಿತ್ತು. ಇನ್ನೊಬ್ಬ ವ್ಯಕ್ತಿ ಅದನ್ನು ಕಲ್ಪಿಸಲಾರ. ಕಡಲು ಕಡಲಿನಂತಿದೆ. ಮುಗಿಲು ಮುಗಿಲಿನಂತಿದೆ. ರಾಮ-ರಾವಣರ ಯುದ್ಧ ರಾಮ-ರಾವಣರ ಯುದ್ಧದಂತೆಯೆ ಇದೆ. ಇದಕ್ಕೆ ಇನ್ನೊಂದು ಉಪಮಾನ ಸಿಗಲಾರದು. ಕವಿಗಳ ಕಲ್ಪನಾ- ವಿಲಾಸ ಇಲ್ಲಿ ಸೋತಿದೆ. ಕವಿಗಳ ಉಪಮಾ ಶಕ್ತಿ ಇಲ್ಲಿ ಬರಡಾ- ಗಿದೆ. ನಿರುಪಮಾನನಾದ ಭಗವಂತನ ಯುದ್ಧಕ್ಕೆ ಉಪಮಾನ ವೆಲ್ಲಿಯದು ? ಪ್ರಪಂಚದ ಇತಿಹಾಸದಲ್ಲಿ ಅಂಥ ಮಹಾಯುದ್ಧ ಇನ್ನೊಂದು ನಡೆದಿಲ್ಲ. ಅದಕ್ಕೆ ಸರಿಸಾಟಿಯಾದ ಯುದ್ಧ ಇನ್ನೊಂದಿಲ್ಲ ಎನ್ನುವುದೇ ಅದಕ್ಕೆ ಭೂಷಣ. ರಾವಣನು ಸರ್ವ ಪ್ರಯತ್ನದಿಂದ ರಾಮಚಂದ್ರನ ರಥದ ಮೇಲೆ, ಸಾರಥಿಯ ಮೇಲೆ, ಕುದುರೆಗಳ ಮೇಲೆ ಬಾಣವನ್ನೆಸೆದನು. ಇದನ್ನು ಕಂಡು ರಾಮಚಂದ್ರನು ಕುಪಿತನಾದನು. ಕರುಣಾ- ಮೂರ್ತಿಯಾದ ರಾಮಚಂದ್ರನಿಗೆ ಕೋಪವೆಲ್ಲಿಯದು ? ಭಗವಂತನು ಭಕ್ತರನ್ನು ಕರುಣಿಸುವ ರೀತಿಗಳಲ್ಲಿ ಇದೂ ಒಂದಿರಬೇಕು. ನಿತ್ಯವೂ ಮಂದಹಾಸವನ್ನೆ ಬೀರುತ್ತಿದ್ದ ರಾಮನ ಮೋರೆ- ಯಲ್ಲಿ ಹುಬ್ಬು ಗಂಟಿಕ್ಕಿದ್ದನ್ನು ಕಂಡು ಲೋಕವೇ ಬೆದರಿತು. ರಾವಣನ ಎದೆಯೂ ನಡುಗದಿರಲಿಲ್ಲ. ಅವನು ಆಪದ್ಧನದಂತಿರ ತಕ್ಕ ಶೂಲವನ್ನು ಕೈಗೆತ್ತಿಕೊಂಡನು; ಪ್ರಳಯಕಾಲದ ಬೆಂಕಿ- ಯಂತೆ ಭೀಷಣವಾದ ಆ ಶೂಲ ತನ್ನ ಮೈಯನ್ನು ಮುಟ್ಟುವ ಮುನ್ನವೇ ರಾಮಚಂದ್ರನು ಶಕ್ತ್ಯಾಯುಧದಿಂದ ಅದನ್ನು ಕತ್ತರಿ ಸಿದನು. ಜತೆಗೆ ರಾಮನ ಬಾಣಗಳು ರಾವಣನ ಕೈ-ಮೈಗಳನ್ನೂ ಗಾಯಗೊಳಿಸಿದವು. ಬಾಣಗಳಿಗೆ ಪ್ರತಿಯಾಗಿ ಬಾಣಗಳನ್ನು ಎಸೆಯುತ್ತಲೆ ರಾಮಚಂದ್ರನು ರಾವಣನಿಗೆ ಕೊನೆಯ ಎಚ್ಚರಿಕೆಯನ್ನಿತ್ತನು : "ನೀನು ಮಹರ್ಷಿ ವಿಶ್ರವಸನ ಮಗ, ಕುಬೇರನ ಸೋದರ. ಜಗತ್ತಿನ ಮಹಾವೀರ, ನಿನ್ನ ತೋಳ್ ಬಲದಿಂದ ದಿಕ್‌ಚಕ್ರವನ್ನೆ ಗೆದ್ದ ಧೀರ. ಎಲ್ಲ ನಿಜ, ಆದರೆ ಎಲ್ಲ ಗುಣಗಳನ್ನೂ ನುಂಗುವ ಒಂದು ತಪ್ಪನ್ನು ನೀನು ಮಾಡಿದೆ. ಜನ್ಮ ಸಿದ್ಧವಾದ ನೀಚಬುದ್ಧಿ ಯನ್ನು ನೀನು ತೋರಿದೆ. ಸ್ತ್ರೀ ಚೌರ್ಯದಿಂದ ನಿನ್ನ ಸರ್ವಸ್ವವೂ ಹಾಳಾಯಿತು. ಕೀರ್ತಿ ತಲೆ ಬಗ್ಗಿಸಿತು. ಶೌರ್ಯ ಕಳೆಗುಂದಿತು. ನೀನು ಮಾಡಿದ ಎಲ್ಲ ಪಾತಕಗಳೂ ಸ್ತ್ರೀಚೌರ್ಯ ದಿಂದ ಹೊಸತನವನ್ನು ಪಡೆದಿವೆ. ನೀನು ಅಂಥ ತಪ್ಪನ್ನು ಮಾಡಿದ ದಿನವೆ ನಿನ್ನ ಬಾಳಿನ ಕಾಳರಾತ್ರಿ ಮೊದಲಾಯಿತು. ಆದರೆ ಹೆಚ್ಚು ಕಾಲ ನಿನಗೆ ಇಲ್ಲಿರುವ ಋಣವಿಲ್ಲ. ಸಾಧು ದ್ರೋಹಿಯಾದ ನಿನ್ನ ಹೃದಯವನ್ನು ನನ್ನ ಬಾಣಗಳು ಭೇದಿಸ ಲಿವೆ. ನಿನ್ನ ಮಾಂಸದ ರುಚಿಯನ್ನು ಹದ್ದುಗಳು ಕಾಣಲಿವೆ. ರಾಮಚಂದ್ರನ , ಸೀತೆಯ ಗಂಡನ ಬಲ ಎಂಥದು ಎಂದು ಕಾಣುವಿಯಂತೆ." ರಾಮಚಂದ್ರನ ಮಾತಿನ ಜತೆಗೆಯೇ ಬಾಣವೂ ರಾವಣನಿಗೆ ತಾಕಿತು. ಲೋಕರಾವಣನಾದ ರಾಕ್ಷಸೇಶ್ವರ ತಲೆತಿರುಗಿ, ಕಣ್ಣು ಕತ್ತಲೆಕವಿದಂತಾಗಿ, ನೆಲದಮೇಲೆ ಕುಸಿದುಬಿದ್ದನು. ರಾಮಚಂದ್ರನ ಲೀಲಾನಾಟಕವನ್ನು ಕಂಡು ದೇವತೆಗಳೂ, ಮಹರ್ಷಿಗಳೂ ಹರ್ಷಪುಲಕಿತರಾದರು. ಜಗನ್ಮಾತೆಯ ಅಗ್ನಿ ದಿವ್ಯ ದೇವತೆಗಳಿಂದಲೂ ಋಷಿಗಳಿಂದಲೂ ಪ್ರಾರ್ಥಿತನಾದ ಅಗಸ್ತ್ಯ ಮುನಿಯು ಆಕಾಶದಿಂದ ಇಳಿದು ರಾಮನ ಬಳಿಬಂದು ವಿಜ್ಞಾಪಿಸಿಕೊಂಡನು : "ಪ್ರಭುವೆ, ನಿನ್ನ ಲೀಲೆಯನ್ನು ವಿರಮಿಸು. ಲೋಕವೈರಿಯಾದ ರಾವಣನನ್ನು ಬೇಗನೆ ಸಂಹರಿಸು. ರಾವಣನು ಬದುಕಿರುವವರೆಗೆ ಜಗತ್ತಿಗೆ ಭಯ ತಪ್ಪಿದ್ದಲ್ಲ. ಸಮಗ್ರ ಲೋಕವೂ ಅವನ ಕೊನೆ- ಯುಸಿರನ್ನು ಕಾಯುತ್ತಿದೆ. ಆ ಕಾರ್ಯವನ್ನು ನೀನು ತ್ವರಿತವಾಗಿ ನಿರ್ವಹಿಸು. ಭಕ್ತಪರಾಯಣನಾದ ನಿನ್ನನ್ನು ಜಗತ್ತು ಕೊಂಡಾಡಿ ಕೃತಾರ್ಥವಾಗಲಿ." ರಾಮಚಂದ್ರನು "ಹಾಗೆಯೇ ಆಗಲಿ" ಎಂದು ಮುಗುಳು ನಗುತ್ತ ಬಿಲ್ಲಿಗೆ ಹೆದೆಯೇರಿಸಿದನು. ರಾವಣನೂ ಅಷ್ಟರಲ್ಲಿ ಮೂರ್ಛೆಯಿಂದೆಚ್ಚತ್ತು ಕದನಕ್ಕೆ ಸಿದ್ಧನಾದನು. ರಾಮಚಂದ್ರನ ಬಲದ ಅರಿವು ರಾವಣನಿಗಿದೆ. ಸೂಚಕಗಳಾದ ಅಪಶಕುನಗಳು ಇದಿರಾದುದನ್ನೂ ಅವನು ಬಲ್ಲ. ಆದರೆ ಅಷ್ಟರಿಂದಲೇ ರಾವಣನು ಕಂಗೆಟ್ಟು ಯುದ್ಧದಿಂದ ಹಿಮ್ಮೆಟ್ಟಲಿಲ್ಲ. ಮಹಾವೀರರು ಆಪತ್ತಿನಲ್ಲಿ ಕಂಗೆಡುವುದುಂಟೆ ? ಒಂದೊಂದು ಪರಾ- ಭವವೂ, ಒಂದೊಂದು ದುಃಶಕುನವೂ ಅವನಲ್ಲಿ ಯುದ್ಧೋ- ತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದವು ! ರಾವಣನು ನಿಜಕ್ಕೂ ಭಗವಂತನ ಭಕ್ತನಲ್ಲವೆ ? ಭಗವಂತನ ಲೋಕದ ದ್ವಾರಪಾಲಕನಲ್ಲವೆ ? ಸನಕಾದಿಗಳ ಶಾಪದಿಂದ ರಾಕ್ಷಸಜನ್ಮವನ್ನು ತಾಳಿದ್ದಾನೆ. ಅದರಿಂದ ಈ ದ್ವೇಷ ಔಪಾಧಿಕ. ಇದಕ್ಕೆ ಸರಿಯಾಗಿ ರಾಮಚಂದ್ರನೂ ತನ್ನ ನಿಜ ಭಕ್ತನೊಡನೆ ಅದ್ಭುತವಾದ ಯುದ್ಧದ ನಾಟಕವನ್ನಾಡಿದನು. ಮಹಾವೀರರಿಬ್ಬರ ಕದನದ ಸಂರಂಭದಲ್ಲಿ ಭೂಮಿ, ಭಯ ದಿಂದ ನಡುಗಿತು ಬಿರುಗಾಳಿಗೆ ಸಿಕ್ಕ ಕಿರುದೋಣಿಯಂತೆ . ಸೂರ್ಯನ ತಾಪ ಉಡುಗಿತು. ಗಾಳಿ ಸ್ತಬ್ಧವಾಯಿತು. ದೇವತೆಗಳು ಭಗವಂತನನ್ನು ಪ್ರಾರ್ಥಿಸಿಕೊಂಡರು : " ಭಗವಾನ್, ಪ್ರಸನ್ನನಾಗು. ಶತ್ರುವನ್ನು ಸಂಹರಿಸಿ ನಮ್ಮನ್ನು ಕಾಪಾಡು." ದೇವತೆಗಳ ಪ್ರಾರ್ಥನೆಯನ್ನು ಭಗವಂತ ಮನ್ನಿಸದಿರು- ತ್ತಾನೆಯೆ ? ಕೂಡಲೇ ರಾಮಚಂದ್ರ ಒಂದು ಬಾಣದಿಂದ ಒಮ್ಮೆಲೆ ರಾವಣನ ಹತ್ತು ತಲೆಗಳನ್ನೂ ಕತ್ತರಿಸಿದನು. ಆದರೆ ರಾವಣ ಸಾಯಲಿಲ್ಲ. ಮತ್ತೆ ಹತ್ತು ತಲೆಗಳು ಮೊದಲಿದ್ದಂತೆಯೇ ಮೂಡಿ- ಕೊಂಡವು. ಬ್ರಹ್ಮನ ವರಬಲದಿಂದ ರಾವಣನ ತಲೆಗಳು ಕಡಿದಂತೆ ಚಿಗುರುತ್ತಿದ್ದವು ! ರಾಮಚಂದ್ರನು ಮುಗುಳುನಗೆ ಬೀರುತ್ತಲೆ ಇನ್ನೊಂದು ಬಾಣವನ್ನು ಕೈಗೆತ್ತಿಕೊಂಡೆಸೆದನು. ಸರ್ವಲೋಕ ಭಯಂಕರ- ವಾದ ಬಾಣ- ರಾಮನಾಮಾಂಕಿತವಾದ ಆ ಬಾಣ– ರಾವಣನ ಎದೆಗೆ ನಾಟಿತು. ಕೂಡಲೆ ಅವನ ದೇಹ, ಪುಷ್ಪಕದಿಂದ ಕೆಳ- ಗುರುಳಿತು. ಜೀವ ಮೇಲೇರಿತು. ಬಾಣವು ಮರಳಿ ರಾಮನ ಬತ್ತಳಿ ಕೆಯನ್ನು ಬಂದು ಸೇರಿತು. ಜಗತ್ತು ಸಂತೋಷಾತಿರೇಕದಿಂದ 'ಉಘೇ' 'ಉಘೇ' ಎಂದಿತು. ಸತ್ತುಳಿದ ರಾವಣನ ಭೃತ್ಯರು ಈ ಭಯಂಕರ ದೃಶ್ಯವನ್ನು ಕಂಡು ಹೆದರಿ ಓಡಿದರು. ಮರ ಉರುಳಿ ಬಿದ್ದರೆ ಅದರಲ್ಲಿ ಬೀಡು ಬಿಟ್ಟಿದ್ದ ಹಕ್ಕಿಗಳು ಹಾರದೆ ಇರುತ್ತವೆಯೆ ? ವಿಭೀಷಣನಿಗೂ ತನ್ನ ಅಣ್ಣ ಸತ್ತು ಬಿದ್ದುದನ್ನು ಕಂಡು ದುಃಖವಾಯಿತು. " ರಾಮಚಂದ್ರನಿಗೆ ದ್ರೋಹ ಬಗೆದು ಜೀವ ತೆತ್ತೆಯಾ" ಎಂದು ಅವನೂ ಹಲುಬಿದನು. ರಾಕ್ಷಸರಾಜ್ಯದ ಸಿಂಹಾಸನದ ಮೇಲೆ ರಾಜಿಸುತ್ತಿದ್ದ ರಾವಣನ ದೇಹ ನೆಲದಮೇಲೆ ಬಿದ್ದಿತ್ತು. ಮೈಯೆಲ್ಲ ಧೂಳು ಕವಿದಿತ್ತು. ಸುತ್ತಲೂ ರಕ್ತದ ಹೊನಲೇ ಹರಿದಿತ್ತು. ಮಹಾವೀರನ ಈ ವೀರಶಯ್ಯೆಯನ್ನು ಕಂಡು ರಾಜಪತ್ನಿಯರು ಅತ್ತು ಗೋಗರೆದರು. ಮಹಾರಾಣಿ ಮಂಡೋದರಿ ತನ್ನ ಪತಿಯ ದೇಹವನ್ನು ಅಪ್ಪಿಕೊಂಡು ಮರುಗಿದಳು: "ಓ ನನ್ನ ಅರಸನೆ, ರಾಮನ ಬಳಿಯಿಂದ ಸೀತೆಯನ್ನು ಕದ್ದು ತಂದು ಈಗ ಅವಳನ್ನು ತೊರೆದು ಎಲ್ಲಿಗೆ ಹೋದೆ ? ವಿಭೀಷಣ- ನಂಥ ಧಾರ್ಮಿಕನನ್ನು ತೊರೆದು ಹೊರಟು ಹೋದೆಯಾ ? ಇಂಥ ದುರ್ದೆಶೆಯಲ್ಲಿ ನಿನಗೆ ಸಾವು ಬರುವಂತಾಯಿತೆ ! ಓ ನನ್ನ ದೈವವೆ, ನನ್ನನ್ನು ಕರೆದುಕೊಳ್ಳು. ನಿನ್ನ ಚರಣದಾಸಿಯಾಗಿ ನಾನೂ ಬರುವೆನು." ದುಃಖದ ಕಾರ್ಮೋಡ ಕವಿದು ಪರಿಸ್ಥಿತಿ ವಿಷಮವಾಗಿತ್ತು. ಆಗ ರಾಮಚಂದ್ರ ವಿಭೀಷಣನನ್ನು ಕರೆದು ಆಜ್ಞಾಪಿಸಿದನು; "ವಿಭೀಷಣ, ಮೃತನಾದ ನಿನ್ನ ಅಣ್ಣನ ಅಂತ್ಯಸಂಸ್ಕಾರ ಸಾಂಗವಾಗಿ ನಡೆಯಲಿ. ಅಳುತ್ತಿರುವ ಈ ಹೆಂಗಸರನ್ನು ಸಮಾ- ಧಾನಗೊಳಿಸಿ ಪುರಕ್ಕೆ ಕಳುಹಿಸು." "ರಾಮಚಂದ್ರ, ನಿನ್ನ ಪತ್ನಿಯನ್ನು ಅಪಹರಿಸಿದ ಪಾತಕಿಗೆ ನಾನು ಹೇಗೆ ಅಂತ್ಯ ಸಂಸ್ಕಾರ ಮಾಡಲಿ ?" ರಾಮಚಂದ್ರನು ಮುಗುಳು ನಗುತ್ತಲೆ ಉತ್ತರಿಸಿದನು : "ರಾವಣನಿಗೆ ಅಂತ್ಯಸಂಸ್ಕಾರ ಜರುಗಬೇಕು. ಅದು ನನ್ನ ಆಜ್ಞೆ." ಪುರೋಹಿತರ ಸಹಕಾರದಿಂದ ಎಲ್ಲ ಅಪರ ಸಂಸ್ಕಾರ- ಗಳನ್ನೂ ವಿಭೀಷಣನು ಸಾಂಗವಾಗಿ ನೆರವೇರಿಸಿದನು. ಸಂತುಷ್ಟರಾದ ಬ್ರಹ್ಮೇಂದ್ರಾದಿಗಳು ರಾಮಚಂದ್ರನ ಬಳಿ ಬಂದು ನಮಸ್ಕರಿಸಿದರು. ಭಗವಂತನ ಹೊಕ್ಕಳಿನ ಮಗನಾದ ಬ್ರಹ್ಮನಂತೂ ವೇದ ಗರ್ಭಿತವಾದ ವಚನಗಳಿಂದ ರಾಮಚಂದ್ರ ನನ್ನು ಸ್ತುತಿಸಿದನು: "ಭಗವನ್, ನಿನಗೆ ಪರಾಜಯವೆಂಬುದಿಲ್ಲ. ನೀನು ಸರ್ವ ವಿಜಯಿ; ಸದಾ ವಿಜಯಿ, ನೀನು ನಮ್ಮೆಲ್ಲರ ಪ್ರಭು. ನಾವು ನಿನ್ನ ಚರಣ ದಾಸರು. ನನ್ನ ಈ ಮಾತು ಶಾಶ್ವತ ಸತ್ಯವಾಗಿದೆ. ಎಲ್ಲೂ ಎಂದೂ ಇದು ಅನ್ಯಥಾ ಆಗಲಾರದು. ನಿನ್ನ ಸದ್ಗುಣಗಳಿಗೆ ಆದಿಯೂ ಇಲ್ಲ; ಅಂತವೂ ಇಲ್ಲ. ನೀನು ಅನಂತ ಗುಣಗಳ ಖನಿಯಾಗಿರುವೆ. ಓ ಸದ್ಗುಣಗಳ ಮೂರ್ತಿಯೆ, ನನ್ನ ಈ ಮಾತು ಎಲ್ಲೂ ಎಂದೂ ಅನ್ಯಥಾ ಆಗಲಾರದು. ಇದು ಮೂರು ಕಾಲಕ್ಕೂ ಸತ್ಯವಾಗಿದೆ. ಅಂತ ಪಾರವಿರದಂಥ ಓ ಅನಂತನೆ, ಸ್ವತಂತ್ರನಾದ ನೀನೊಬ್ಬನೆ ಸರ್ವೋತ್ತಮನು. ನಾವು ನಿನ್ನ ಗುಲಾಮರು. ನಿನ್ನ ಆಜ್ಞೆಯರಿತು ಕೆಲಸ ಮಾಡುವವರು, ನಾನು, ರುದ್ರ, ಇಂದ್ರ, ಚಂದ್ರ, ಸೂರ್ಯ, ಒಬ್ಬರೇನು ಇಬ್ಬರೇನು-ಎಲ್ಲರೂ ಎಲ್ಲವೂ ನಿನ್ನ ಅಧೀನವಾಗಿದೆ; ನಿನಗಾಗಿ ಇದೆ. ಬೆಂಕಿಯಿಂದ ಜ್ವಾಲೆ ಹೊಮ್ಮುವಂತೆ, ಭಾನುದೇವನಿಂದ ಕಿರಣಗಳು ಹೊರಬರುವಂತೆ, ಗಾಳಿಯಿಂದ ವೇಗ ಹುಟ್ಟುವಂತೆ, ನದಿಯಿಂದ ನೀರು ಹರಿದು ಬರುವಂತೆ, ನಾವೆಲ್ಲ ನಿನ್ನ ವಿಭೂತಿಯ ಆವಿಷ್ಕಾರಗಳು. ನಿನ್ನ ಹುಬ್ಬಿನ ಕುಣಿತದಿಂದ ಜಗತ್ತು ಹುಟ್ಟಿದೆ, ಸತ್ತಿದೆ. ಬದುಕಿದೆ. ಇಡಿಯ ಜಗತ್ತಿನ ಒಂದು ಬಿಂದು ರಾವಣ. ಅವನನ್ನು ಸಂಹರಿಸುವುದು ನಿನಗೊಂದು ಲೀಲೆ. ಪ್ರಳಯಕಾಲದ ಬೆಂಕಿಗೆ ಒಂದು ಹತ್ತಿಯ ರಾಶಿ ಯಾವ ಲೆಕ್ಕ. ಆದರೆ ರಾವಣನ ವಧೆ ಇನ್ನೊಬ್ಬರಿಂದ ಸಾಧ್ಯವಿಲ್ಲ. ಅದಕ್ಕೆ ನೀನೊಬ್ಬನೆ ಸರಿ. ಅಂಥ ಕಾರ್ಯವನ್ನು ಮಾಡಿ ನಮ್ಮನ್ನು ಸಲಹಿದೆ, ಓ ಭಗವನ್, ನಿನಗೆ ನನ್ನ ಕೋಟಿ ಕೋಟಿ ಪ್ರಣಾಮ- ಗಳು; ಅನಂತ ಪ್ರಣಾಮಗಳು." ರುದ್ರನಿಗೆ ಮಾತ್ರ ರಾಮಚಂದ್ರನ ಮೇಲೆ ಸ್ವಲ್ಪ ಕೋಪ ಬಂದಿತ್ತು. ತನ್ನ ವರದಿಂದ ರಕ್ಷಿತನಾದ ರಾಕ್ಷಸನನ್ನು ಇವನು ಕೊಲ್ಲುವುದೆ ? ರುದ್ರದೇವ ತಮೋಗುಣದ ಅಭಿಮಾನಿಯಲ್ಲವೆ ? ಅದಕ್ಕೆ ಸರಿಯಾಗಿ ಒಮ್ಮೊಮ್ಮೆ ಅವನು ತಮೋಗುಣವನ್ನು ಪ್ರಕಟಿಸುವುದಿದೆ. ಎಂತಲೇ ಅವನು ರಾಮದೇವನನ್ನು ಯುದ್ಧಕ್ಕೆ ಕರೆದನು. ರಾಮಚಂದ್ರನು ಬಿಲ್ಲಿಗೆ ಬಾಣವನ್ನು ಹೂಡಿದಾಗ ಇಡಿಯ ಭೂಮಿ ನಡುಗಿತು. ಭೂಮಿಯ ಜತೆಗೆ ಶಿವನ ದೇಹವೂ ಚಲಿತ ವಾಯಿತು. ತಮೋಭಾವ ತಿರೋಹಿತವಾಯಿತು. ಭಕ್ತಿಭರಿತನಾದ ಶಿವ ರಾಮನ ಪಾದಗಳ ಮೇಲೆರಗಿದನು. ದೇವತೆಗಳೂ ಭಗವಂತನ ಆಟಕ್ಕೆ ಅನುಸಾರವಾಗಿ ನಾಟಕವಾಡುತ್ತಾರೆ. ದೇವತೆಗಳ ಗಡಣವೇ ರಾಮಚಂದ್ರನನ್ನು ವಂದಿಸಿತು; ಅಭಿ ವಂದಿಸಿತು. ರಾಮಚಂದ್ರನೂ ಪ್ರತಿಯಾಗಿ ದೇವತೆಗಳನ್ನು ಅಭಿನಂದಿಸಿದನು. ರಾಮನ ಆಜ್ಞೆಯಂತೆ ಲಕ್ಷ್ಮಣನು ವಿಭೀಷಣನಿಗೆ ರಾಕ್ಷಸ- ರಾಜ್ಯದ ಸಿಂಹಾಸನದಲ್ಲಿ ಅಭಿಷೇಕಗೈದನು. ಎಲ್ಲ ಕಪಿಗಳೂ ಏಕಕಂಠದಿಂದ ಕೂಗಿದರು: * ಲಂಕಾಧಿಪತಿಯಾದ ವಿಭೀಷಣನಿಗೆ ಜಯವಾಗಲಿ." ಇತ್ತ ಹನುಮಂತನು ರಾಮಚಂದ್ರನ ನಿರ್ದೇಶದಂತೆ ಸೀತೆಯಬಳಿಗೆ ಬಂದು ವಿಜ್ಞಾಪಿಸಿಕೊಂಡನು : " ಪರಮಸಾಧ್ವಿಯಾದ ಓ ನನ್ನ ತಾಯಿ, ನಿನ್ನ ಪತಿಯು ರಾವಣನನ್ನು ಕೊಂದಿದ್ದಾನೆ; ವಿಜಯಶ್ರೀಯಿಂದ ಶೋಭಿಸು ತ್ತಿದ್ದಾನೆ. " ಸೀತೆಗೆ ಇದಕ್ಕಿಂತಲೂ ಸಂತಸದ ವಾರ್ತೆ ಇನ್ನೊಂದಿದೆಯೆ ? ವರ್ಷದ ವೇದನೆಯೆಲ್ಲ ಮಾಯವಾಯಿತು. ಆಕೆ ಸಂತಸದಿಂದ ಉಬ್ಬಿ ನುಡಿದಳು : "ವತ್ಸ, ಮಾರುತಿ ! ಸಂತಸದ ವಾರ್ತೆಯನ್ನು ತಂದ ನಿನಗೆ ಮಂಗಳವಾಗಲಿ. ನನ್ನ ಬಾಳು ಧನ್ಯವಾಯಿತು. ನಾನು ಪಟ್ಟ ಕಷ್ಟದ ಫಲ ದೊರಕಿತು. ಇಂದು ಪ್ರಪಂಚದಲ್ಲೆಲ್ಲ ಹೆಚ್ಚು ಭಾಗ್ಯಶಾಲಿನಿ, ಹೆಚ್ಚು ಸಂತುಷ್ಟಳು ನಾನು. ಹನುಮನ್, ದೇವದೇವನಾದ ನನ್ನ ಪ್ರಿಯನನ್ನು ನಾನು ಕಾಣಲು ಕಾತರ- ಳಾಗಿದ್ದೇನೆ ಎಂದು ಆತನಿಗೆ ತಿಳಿಸುವೆಯಾ ? " ಹನುಮಂತ ಮರಳಿ ಬಂದು ರಾಮನ ಬಳಿ ಸೀತೆಯ ಬಿನ್ನಹವನ್ನರುಹಿದನು. ರಾಮನ ಒಪ್ಪಿಗೆ ದೊರೆಯಿತು. ವಿಭೀಷಣನು ಆಕೆಯನ್ನು ಕರೆತಂದನು. ಜನಸಮೂಹದ ನಡುವೆ ನಡೆದು ಬರುವ ಬೆಡಗಿ ಸೀತೆ ನಾಚುಗೆಯಿಂದ ತನ್ನೊಳಗೇ ತಾನು ಅಡಗಿಕೊಂಡಳು ! ಆದರೂ ದುರ್ಲಭದರ್ಶನನಾದ ರಾಮಚಂದ್ರನನ್ನು ಕದ್ದು ನೋಡದಿರಲಿಲ್ಲ. ಒಂದು ವರ್ಷದ ರಾಕ್ಷಸ ದಿವ್ಯದ ನಂತರ ಮೊದಲಬಾರಿ ಪತಿಯ ಮುಖವನ್ನು ನೋಡುತ್ತಿದ್ದಾಳೆ ಈ ಸಾಧ್ವಿ. ಎಂಥ ಸಂತಸದ ನೋಟ ! ಎಂಥ ಸಂತಸದ ಕ್ಷಣ ! ದಾಂಪತ್ಯದ ಸೊಗಸು ಕಾಣುವುದು ಇಂಥ ಗಳಿಗೆಯಲ್ಲಿ. ಜೀವನ ರಸಮಯ ವಾಗುವದು ಇಂಥ ಸಮಯದಲ್ಲಿ. ಆದರೆ ರಾಮಚಂದ್ರನ ಮುಖಭಂಗಿಯೇಕೋ ಬೇರೆ ತೆರ- ನಾಗಿತ್ತು. ಅವನ ಮುಖದಿಂದ ಮಾತುಗಳು ಕಿಡಿಯಂತೆ ಸಿಡಿದವು: "ಭದ್ರೆ, ನನ್ನ ಬಾಹುಬಲದಿಂದ ಶತ್ರುವನ್ನು ಕೊಂದು ನಿನ್ನನ್ನು ಪಡೆದಿದ್ದೇನೆ. ' ಹೆಂಡತಿಯನ್ನು ಕದ್ದರೂ ಸುಮ್ಮನಿದ್ದ ಕಳಪೆ' ಎಂಬ ಅಪಮಾನದಿಂದ ನಾನು ದೂರಾಗಿದ್ದೇನೆ. ನನ್ನ ಕೆಲಸ ತೀರಿತು. ಪರಪುರುಷರ ಮನೆಯಲ್ಲಿ ಬಾಳಿದ ಹೆಣ್ಣನ್ನು ಕುಲೀನ- ರು ಸ್ವೀಕರಿಸುವುದು ವಾಡಿಕೆಯಿಲ್ಲ. ನಾವಂತೂ ಎಲ್ಲದರ ಸಂಗ ವನ್ನೂ ತೊರೆದವರು. ಯಾವುದರ ಹಂಗೂ ಇಲ್ಲದವರು. ಸುಂದರಿ, ನಾನು ನಿನ್ನನ್ನು ಮತ್ತೆ ಸ್ವೀಕರಿಸಲಾರೆ. ಬಯಸಿದಲ್ಲಿಗೆ ಹೋಗಲು ನೀನು ಸ್ವತಂತ್ರಳಿರುವೆ." ಸಿಡಿಲಿನಂತೆ ಬಂದೆರಗಿದ ಮಾತುಗಳಿಂದ ಸೀತೆ ಕಂಗೆಡಲಿಲ್ಲ. "ರಾಮಚಂದ್ರನನ್ನು ಹೊರತು ಇನ್ನೊಬ್ಬನನ್ನು ಈ ಮನಸ್ಸು ನೆನಸಲಾರದು" ಎಂದು ಆಕೆ ದೃಢವಾಗಿ ನುಡಿದಳು. ಭಗವಂತನ ಭಾವ ಅವಳಿಗೂ ಗೊತ್ತು. ಅಗ್ನಿದಿವ್ಯದಿಂದ ನನ್ನ ಪಾವಿತ್ರ್ಯವನ್ನು ಜಗತ್ತಿಗೆ ಸಾರಬೇಕಾಗಿದೆ ಅಲ್ಲವೆ ? ಆಕೆ ಲಕ್ಷ್ಮಣನನ್ನು ಕರೆದು ನುಡಿದಳು: "ಸೌಮಿತ್ರಿ, ನಿನ್ನ ಅತ್ತಿಗೆಗಾಗಿ ಒಂದು ಚಿತೆಯನ್ನು ಸಿದ್ಧ- ಗೊಳಿಸು." ಕಪಿಕೋಟಿ ಕಣ್ಣೀರು ಸುರಿಸುತ್ತ ಬೆರಗಾಗಿ ನಿಂತಿತ್ತು. ವಿಭೀ- ಷಣನೂ ಕಣ್ಣೊರಿಸಿಕೊಂಡು ಮೂಕನಾಗಿ ನಿಂತನು. ಲಕ್ಷ್ಮಣನ ಕಣ್ಣ ತೇವಗೊಳ್ಳದಿರಲಿಲ್ಲ. ಆದರೆ ಅಣ್ಣನ ಭಾವವನ್ನರಿತ ಆತ ತುಟಿ ಬಿಚ್ಚದೆ ತನ್ನ ಅತ್ತಿಗೆಗೆ ಚಿತೆಯನ್ನು ನಿರ್ಮಿಸಿದನು. ಸೀತೆ ಚಿತೆಯೇರುವ ಮುನ್ನ ಹೀಗೆ ನುಡಿದಳು : " ನಾನು ರಾಮಚಂದ್ರನನ್ನ ನೆನೆಯುವುದು ನಿಜವಾದರೆ, ಅಬಲೆ ಹೆಂಗಸಿನ ಪಾತಿವ್ರತ್ಯಕ್ಕೆ ಬೆಲೆಯಿರುವುದು ದಿಟವಾದರೆ ಅಗ್ನಿದೇವ ನನ್ನನ್ನು ಕಾಪಾಡಲಿ. " ಸೀತೆ ರಾಮಚಂದ್ರನಿಗೆ ವಂದಿಸಿ ಉರಿಯುವ ಬೆಂಕಿಯನ್ನು ಪ್ರವೇಶಿಸಿದಳು. ಕರುಳು ಕಿತ್ತು ಬರುವಂಥ ಈ ಕರುಣದೃಶ್ಯವನ್ನು ಕಂಡು ಕಪಿಗಳೂ ರಾಕ್ಷಸರೂ ಕೂಗಿಬಿಟ್ಟರು. ಕಪಿ, ರಾಕ್ಷಸರ ಹಾಹಾಕಾರದ ನಡುವೆ ಬ್ರಹ್ಮಾದಿಗಳು ಬಂದು ರಾಮನ ಬಳಿ ವಿಜ್ಞಾಪಿಸಿಕೊಂಡರು : ರಾಮಚಂದ್ರ, ನಿನ್ನ ಸೀತೆ ಪರಮಸಾಧ್ವಿ, ನಿತ್ಯ ಪವಿತ್ರಳು. " ಅಗ್ನಿದಿವ್ಯದ ನೆವದಿಂದ ಮಾಯಾ ಸೀತೆ ಬೆಂಕಿಯನ್ನು ಸೇರಿ- ದಳು. ಕೈಲಾಸದಿಂದ ಮರಳಿ ಬಂದ ದೇವಿ ಸೀತೆಯನ್ನು ಅಗ್ನಿ- ದೇವ ರಾಮಚಂದ್ರನಿಗೆ ಅರ್ಪಿಸಿದ. ಪುರಾವೆಯಿಂದ ಪಾವಿತ್ರ್ಯ- ವನ್ನು ಪ್ರಕಟಗೊಳಿಸಿದ ಸೀತೆಯನ್ನು ರಾಮಚಂದ್ರ ಸ್ವೀಕರಿಸಿದ. ಸೀತೆಯನ್ನು ಮರಳಿ ಪಡೆದಾಗ ರಾಮಚಂದ್ರನಿಗೂ ಸಂತಸ ವಾಯಿತು. ರಾಮಚಂದ್ರನನ್ನು ಸೇರಿ ಸೀತೆಯೂ ಸಂತಸ ಗೊಂಡಳು. ಜಗನ್ಮಾತಾ ಪಿತೃಗಳಾದ ಇವರಿಬ್ಬರು ಮತ್ತೆ ಜತೆ- ಯಾದುದನ್ನು ಕಂಡು ಲೋಕಕ್ಕೆ ಲೋಕವೆ ಸಂತಸಗೊಂಡಿತು ! ಕಪಿಗಳೂ ರಾಕ್ಷಸರೂ ಸಂತಸದ ಕಡಲಲ್ಲಿ ಓಲಾಡಿದರು. ಸೀತೆ ಬೆಂಕಿಗೆ ಬಿದ್ದಾಗ ಬಂದಿದ್ದ ದುಃಖಾಶ್ರು ಈಗ ಆನಂದಾಶ್ರು ವಾಗಿ ಪರಿಣಮಿಸಿತು. ರಾಮನಿಗೆ ಪಟ್ಟಾಭಿಷೇಕವಂತೆ ಗಂಧಮಾದನ ಪರ್ವತ ತಂದ ನಂತರ ಗಾಯಗೊಂಡ ಕಪಿ ಗಳನ್ನು ಕಪಿವೈದ್ಯನಾದ ಸುಷೇಣನು ಗುಣಪಡಿಸಿದನು. ಈ ಮಹಾಯುದ್ಧದಲ್ಲಿ ಒಬ್ಬ ಕಪಿಯೂ ಸತ್ತಿಲ್ಲ. ಸತ್ತವರೆಲ್ಲ ಬದುಕಿ ದರು. ರಾಮನ ಕರುಣೆಯಿಂದ ಇಲ್ಲಿಗೆ ಬಂದಷ್ಟೆ ಮಂದಿ ಹಿಂತೆರಳಿದರು. ರಾಮಚಂದ್ರನ ಕೀರ್ತಿಯನ್ನು ಕೇಳಿ ಸ್ವರ್ಗದಿಂದ ದಶರಥನು ಮಹೇಂದ್ರನೊಡನೆ ಇಳಿದು ಬಂದು ತನ್ನ ಪ್ರೀತಿಯ ಮಗನನ್ನು ಅಪ್ಪಿಕೊಂಡನು; ಆನಂದಾಶ್ರುಗಳಿಂದ ಅವನನ್ನು ತೋಯಿಸಿ- ದನು. ಅನಂತರ ಲಕ್ಷ್ಮಣನನ್ನೂ ಪ್ರೀತಿಯಿಂದ ಆಲಿಂಗಿಸಿ . ರಾಮನನ್ನು ಕರೆದು ನುಡಿದನು : "ಕುಮಾರ, ನಿನ್ನಿಂದ ನಾನು ಬಾಳ ಕಡಲನ್ನು ದಾಟಿದೆ. ನನಗೆ ಸ್ವರ್ಗಬೇಡ; ಮೋಕ್ಷವೂ ಬೇಡ; ಇನ್ನಾವುದೂ ಬೇಡ, ನನಗೆ ನೀನು ಬೇಕು, ನಿನ್ನ ನೆನಪು ಬೇಕು. ನಿನ್ನನ್ನು ನೋಡಬೇಕು. ನಿನ್ನ ಗುಣಗಳನ್ನು ಕೇಳುತ್ತಿರಬೇಕು. ಕೌಸಲ್ಯ-ಸುಮಿತ್ರೆಯರು ಭಾಗ್ಯಶಾಲಿನಿಯರು. ಅಯೋಧ್ಯೆಯ ನಾಗರಿಕರು ಪುಣ್ಯವಂತರು. ಅವರೆಲ್ಲ ನಿನ್ನ ಪಟ್ಟಾಭಿಷೇಕವನ್ನು ಕಣ್ಣಾರೆ ಕಂಡು ನಲಿಯಲಿದ್ದಾರೆ. ಸೊಸೆ ಜಾನಕಿ, ಸ್ತ್ರೀಯರಲ್ಲೆಲ್ಲ ನಿನ್ನಷ್ಟು ಪುಣ್ಯವಂತೆಯರು ಧನ್ಯೆಯರು ಇನ್ನೊಬ್ಬರಿಲ್ಲ. ನನ್ನ ಮಗನನ್ನು ,ನಾರಾಯಣನ ಲೀಲಾಮೂರ್ತಿಯನ್ನು ಪತಿಯಾಗಿ ಪಡೆದ ಪಾವನಚರಿತೆ ನೀನು. ವತ್ಸ ಲಕ್ಷ್ಮಣ, ರಾಮಚಂದ್ರನ ಶುಶ್ರೂಷೆಯಿಂದ ನಿನ್ನ ಬಾಳು ಧನ್ಯವಾಯಿತು. ವೇದಾಂತವನ್ನು ಬಲ್ಲವರು ರಾಮಚಂದ್ರನನ್ನು ಭಗವಂತನ ಲೀಲಾ ವಿಭೂತಿ ಎಂದು ಕೊಂಡಾಡುತ್ತಾರೆ." ರಾಮಚಂದ್ರನು ದಶರಥನನ್ನೂ ದೇವತೆಗಳನ್ನೂ ಅಭಿ- ವಂದಿಸಿ ಕಳಿಸಿಕೊಟ್ಟನು. ಆಗ ವಿಭೀಷಣನು ವಿಜ್ಞಾಪಿಸಿಕೊಂಡನು: "ಸ್ವಾಮಿನ್, ನೀನು ಸೀತೆಯೊಡನೆ ನಮ್ಮ ಅರಮನೆಯಲ್ಲಿ ವಾಸಿಸಬೇಕು. ಎಲ್ಲ ರಾಜಭೋಗಗಳೂ ನಿನ್ನವೇ ಆಗಿವೆ." ವಿಭೀಷಣ, ವ್ರತೋಪವಾಸಗಳಿಂದ ಕೃಶನಾಗಿ ನನಗಾಗಿ ಕಾಯುತ್ತಿರುವ ಭರತನನ್ನು ಕಾಣುವವರೆಗೆ ನನಗೆ ಯಾವ ರಾಜ್ಯ ವೂ ಬೇಡ; ಯಾವ ಭೋಗವೂ ಬೇಡ." ರಾಮನ ಆಜ್ಞೆಯಂತೆ ವಿಭೀಷಣನು ಎಲ್ಲ ಕಪಿಗಳಿಗೂ ಮುತ್ತುಬಂಗಾರಗಳನ್ನಿತ್ತು ಸತ್ಕರಿಸಿದನು.ರಾಮಚಂದ್ರನಿಗಂತೂ ಲಂಕೆಯ ಹೆಮ್ಮೆಯೆನಿಸಿದ ಪುಷ್ಪಕವನ್ನೇ ಅರ್ಪಿಸಿದನು. ಪುಷ್ಪಕವನ್ನೇರಿ ಕುಳಿತ ಸೀತಾ-ರಾಮರ ಜೋಡಿ ಮಿಂಚು-ಮೋಡಗಳ ಜೋಡಿಯಂತಿತ್ತು. ಲಕ್ಷ್ಮಣ, ಹನುಮಂತ, ಸುಗ್ರೀವ ಸಮಸ್ತ ಕಪಿಗಳು, ವಿಭೀಷಣ ಎಲ್ಲರೂ ಅನುಕ್ರಮವಾಗಿ ವಿಮಾನ ವನ್ನೇರಿದರು. ಮುಗಿಲಿನಲ್ಲಿ ಮೂಡಿದ ಎರಡನೆಯ ಸೂರ್ಯನೆನ್ನುವಂತೆ ಹೊಳೆಯುತ್ತ ವಿಮಾನ ಸಾಗಿತು. ನಡುದಾರಿಯಲ್ಲಿ ಕಾಣಬರುವ ನದಿ-ಬೆಟ್ಟಗಳ ಕುರಿತು ರಾಮಚಂದ್ರ ಸೀತೆಗೆ ಪರಿಚಯವನ್ನೀಯುತ್ತಿದ್ದನು. ಅಂಥ ತಾಣ ಗಳಲ್ಲಿ ತಾನು ವಿರಹಿತನಾಗಿ ಕಳೆದ ದಿನಗಳನ್ನು ಬಣ್ಣಿಸುತ್ತಿದ್ದನು. ಹನುಮಂತನನ್ನು ಕಂಡುದು, ಸುಗ್ರೀವನ ಗೆಳೆತನ, ಶಬರಿಯ ಸದ್ಗತಿ, ಜಟಾಯುವಿನ ಪಾಡು ಎಲ್ಲವನ್ನೂ ವಿವರಿಸಿದನು : ಕಿಷ್ಕಂಧೆ ಬಂತು. ಕೆಳಗಡೆ ಕಪಿಪತ್ನಿಯರು ಉತ್ಸುಕತೆಯಿಂದ ನಿರೀಕ್ಷಿಸುತಿದ್ದರು. ರಾಮಚಂದ್ರ ಅವರನ್ನೂ ವಿಮಾನದಮೇಲೆ ಕರೆಸಿಕೊಂಡನು. ಅಂದು ಪಂಚಮಿ ತಿಥಿ, ಹದಿನಾಲ್ಕು ವರ್ಷಗಳ ಅವಧಿಯ ಕೊನೆಯ ದಿನ, ರಾಮಚಂದ್ರ ಮುನಿಗಳ ಆತಿಥ್ಯವನ್ನು ಸ್ವೀಕರಿಸು ವುದಕ್ಕಾಗಿ ಭರದ್ವಾಜಾಶ್ರಮದಲ್ಲಿ ಪರಿವಾರಸಹಿತನಾಗಿ ಉಳಿದು ಕೊಂಡನು. ಆದರೆ ಭರತನಿಗೆ ವಾರ್ತೆ ಮುಟ್ಟಿಸುವುದು ಅವಶ್ಯ ವಾಗಿತ್ತು. ಆ ಕೆಲಸವನ್ನು ಪೂರಯಿಸಲು ರಾಮಚಂದ್ರ ಹನುಮಂತನನ್ನು ಭರತನೆಡೆಗೆ ಕಳಿಸಿದನು. ಹನುಮಂತ ಮನುಷ್ಯ ರೂಪದಿಂದ ಅಯೋಧ್ಯೆಗೆ ತೆರಳಿದನು. ನಂದಿಗ್ರಾಮದಲ್ಲಿ ಭರತ ರಾಮನನ್ನೇ ನಿರೀಕ್ಷಿಸುತ್ತಿದ್ದಾನೆ. ಜಡೆಗಟ್ಟಿದ ತಲೆ, ನಾರುಡೆಯನ್ನು ಹೊದ್ದ ಮೈ, ಉಪವಾಸದಿಂದ ಬಡವಾದ ದೇಹ ಇವು ಭರತನಲ್ಲಿ ತಾಪಸಕಳೆಯನ್ನು ತಂದಿ- ದ್ದವು. ಬಾಯಿ ರಾಮನಾಮವನ್ನು ಜಪಿಸುತ್ತಿದ್ದರೆ ಶಿರಸ್ಸು ಪಾದುಕೆಗಳಿಗೆ ವಂದಿಸುತಿತ್ತು. ಮನಸ್ಸು 'ರಾಮನೇಕೆ ಇನ್ನೂ ಬರಲಿಲ್ಲ' ಎಂದು ಕಾತುರವಾಗಿತ್ತು. ಇನ್ನೇನು, ಉರಿಯುವ ಬೆಂಕಿಗೆ ಹಾರಬೇಕು. ಅಷ್ಟರಲ್ಲಿ ಮಾರುತಿ ಕಾಣಿಸಿಕೊಂಡು ತಡೆದನು : "ವೀರನಾದ ರಾಮಾನುಜನೆ, ಸಾಹಸವನ್ನು ಮಾಡದಿರು. ನೀನು ಅಣ್ಣನಮೇಲೆ ತೋರಿದ ಗೌರವ ನಿಜವಾಗಿಯೂ ಅಪೂರ್ವ- ವಾದುದು. ತ್ವರೆ ಮಾಡಬೇಡ, ರಾಮಚಂದ್ರನು ಸೀತಾ-ಲಕ್ಷ್ಮಣ- ರೊಡನೆ ಬರುತ್ತಿದ್ದಾನೆ. ನಿನ್ನ ಕುಶಲವನ್ನು ವಿಚಾರಿಸಿದ್ದಾನೆ. ಮನಸ್ಸು ಸಂತಸದಿಂದ ಅರಳಿತು. ಮೈ ನಿಮಿರೆದ್ದಿತು. ಕಣ್ಣು ಆನಂದಾಶ್ರುವನ್ನು ಸುರಿಸಿತು. ಸಂತಸದ ಸುದ್ದಿಯನ್ನು ತಂದ ಈ ವಿಪ್ರನಿಗೆ ಏನನ್ನು ಕೊಡುವುದೆಂದೇ ಭರತನಿಗೆ ತೋಚಲಿಲ್ಲ. ಆತ ಭಕ್ತಿಭರದಿಂದ ಮಾರುತಿಗೆ ನಮಸ್ಕರಿಸಿ ಬೇಡಿಕೊಂಡನು : " ಮಹಾತ್ಮನ್, ನೀನಾರು ? ರಾಮನ ಸುದ್ದಿಯನ್ನು ತಂದ ಪುಣ್ಯಪುರುಷ ನೀನಾರು ? ರಾಮನನ್ನು ಬಲ್ಲ ನೀನೇ ಧನ್ಯನು. ರಾಮಚಂದ್ರನ ಕಥೆಯನ್ನು ನನಗೂ ಕೇಳಿಸಲಾರೆಯಾ? " ಮಾರುತಿ ರಾಮನ ಹದಿನಾಲ್ಕು ವರುಷಗಳ ಎಲ್ಲ ಅದ್ಭುತ ಗಳನ್ನೂ ಬಣ್ಣಿಸಿದನು; ತನ್ನ ಪರಿಚಯವನ್ನೂ ಮಾಡಿಕೊಟ್ಟನು. ಭರತನ ಸಂತಸಕ್ಕೆ ಮೇರೆಯಿಲ್ಲವಾಯಿತು. ಆತ ಆನಂದ ಗದ್ಗದಿತನಾಗಿ ಶತ್ರುಘ್ನನನ್ನು ಕರೆದು ನುಡಿದನು : "ತಮ್ಮ, ನಮ್ಮಣ್ಣ ರಾಮಚಂದ್ರ ಬರುತ್ತಿದ್ದಾನಂತೆ. ಅವನ ಸ್ವಾಗತಕ್ಕೆ ರಾಷ್ಟ್ರದ ಜನ ಅಣಿಯಾಗಲಿ. ರಾಜಧಾನಿ ತಳಿರು ತೋರಣಗಳಿಂದ ಅಲಂಕೃತವಾಗಲಿ." ಅಯೋಧ್ಯೆಯಲ್ಲಿ ಅಲಂಕಾರದ ಸಿದ್ಧತೆ ನಡೆಯಿತು. ಸುದ್ದಿ ಊರೆಲ್ಲ ಹಬ್ಬಿತು. " ನಮ್ಮರಸು ರಾಮಚಂದ್ರ ಬರುತ್ತಿದ್ದಾನಂತೆ " ಎಂದು ಊರಿನ ಜನರೆಲ್ಲ ಒಟ್ಟಾದರು. ಎಲ್ಲರಿಗೂ ರಾಮಚಂದ್ರನ ಮುಖವನ್ನು ಕಾಣುವ ಆತುರ, ಎಲ್ಲೆಲ್ಲೂ ಸಂತಸದ ಸಡಗರ. ಭರತನು ಪಾದುಕೆಗಳನ್ನು ಹೊತ್ತುಕೊಂಡು ಪರಿವಾರ ಪರಿವೃತನಾಗಿ ರಾಮನನ್ನು ಎದುರ್ಗೊಳ್ಳಲು ನಡೆದನು. ಅವನಿಗೆ ಇನ್ನೂ ಸಂದೇಹ, ತಾನು ಇಂದು ರಾಮನ ಮುಖವನ್ನು ಕಾಣು ವೆನೆ ? - ಆ ಭಾಗ್ಯವನ್ನು ತಾನು ಪಡೆದು ಬಂದಿರುವೆನೆ ? ಅವನು ತನ್ನ ಸಂಶಯವನ್ನು ಹನುಮಂತನಲ್ಲಿ ನಿವೇದಿಸಿಕೊಂಡನು : " ಕಪೀಂದ್ರ, ನೀನು ಹಾಸ್ಯಕ್ಕಾಗಿ ಹೀಗೆ ಆಡುತ್ತಿಲ್ಲ ತಾನೆ ? ರಾಮಚಂದ್ರ ಖಂಡಿತವಾಗಿಯೂ ಬರುವನೆ ? ಅವನ ಪಾದಸೇವೆ- ಯ ಯೋಗ ನನಗೆ ದೊರಕುವುದು ನಿಜವೆ ? ಅನಾಥೆಯಾದ ಭೂಮಿ ತನ್ನ ಗಂಡನನ್ನು ಮರಳಿ ಪಡೆಯುವಳೆ ? ಇದು ನಿಜವೆ ? ಇಂದು ನನ್ನ ಜನ್ಮ ಸಫಲವಾಗುವದು ದಿಟವೆ ? ಹೇಳು ಹನುಮಾನ್." "ಸೌಮ್ಯ ಭರತ, ಪ್ರಕೃತಿಯ ಬದಲಾವಣೆಯನ್ನಾದರೂ ಗಮ- ನಿಸು. ಅಕಾಲದಲ್ಲಿ ಮರಗಳೆಲ್ಲ ಹೂ ಬಿಟ್ಟಿವೆ ನೋಡು. ಮಧು ಮಾಸದಲ್ಲಿಯಂತೆ ಪ್ರಕೃತಿ ಸಂತಸದಿಂದಿದೆ ನೋಡು. ಅದು ರಾಮಚಂದ್ರನ ಬರವಿಗೆ ಸಾಕ್ಷಿ. ಅದು ನನ್ನ ಮಾತಿನ ಸತ್ಯತೆಗೆ ಪುರಾವೆ. ಓ ಅಲ್ಲಿ ದೂರದ ಆಕಾಶದಲ್ಲಿ ಪುಷ್ಪಕ ಕಾಣಿಸುತ್ತಿಲ್ಲವೆ ? ರಾಮ ದೂತರಾದ ಕಪಿಗಳ ಕೋಲಾಹಲ ಕೇಳಿಸುತ್ತಲಿಲ್ಲವೆ ? ನೋಡಲ್ಲಿ ವಿಮಾನದ ನಡುವೆ ರಾಮಚಂದ್ರ ಕುಳಿತಿದ್ದಾನೆ. ಅವನ ತೊಡೆಯ ಮೇಲೆ ಮುಗುಳುನಗೆಯ ಸುಂದರಿ ಸೀತೆ ಕುಳಿತಿದ್ದಾಳೆ. ಬಳಿಯಲ್ಲಿ ಲಕ್ಷ್ಮಣ ನಿಂತಿದ್ದಾನೆ. ಸುಗ್ರೀವ-ವಿಭೀಷಣರಿದ್ದಾರೆ. ನೋಡು ಭರತ." ಗುರೂಪದೇಶದಿಂದ ಶಿಷ್ಯನಿಗೆ ಭಗವದ್ದರ್ಶನವಾಗುವಂತೆ ಭರತನಿಗೆ ಮಾರುತಿಯ ವಾಣಿಯಿಂದ ರಾಮನ ದರ್ಶನ- ವಾಯಿತು. ಮುಗುಳುನಗೆಯ ಬೆಳುದಿಂಗಳನ್ನು ಬೀರುವ ಪೂರ್ಣ ಚಂದ್ರನನ್ನು ಕಂಡು ನಿಂತಲ್ಲಿ ತಲೆಬಗ್ಗಿಸಿ ನಮಸ್ಕರಿಸಿದನು. ಊರೆಲ್ಲ ಗುಲ್ಲು, ಎಲ್ಲರ ಬಾಯಲ್ಲು ಒಂದೇ ಸೊಲ್ಲು: " ರಾಮಚಂದ್ರ ಬಂದಿದ್ದಾನೆ. ಸೀತೆಯ ನಾಥ ಬಂದಿದ್ದಾನೆ. ರಾವಣನನ್ನು ಕೊಂದ ನಮ್ಮರಸು ಬಂದಿದ್ದಾನೆ. ಬನ್ನಿ, ನಮ್ಮ ರಾಜನನ್ನು ನೋಡಬನ್ನಿ." ಮುಪ್ಪಿನ ಜನವೂ ಹರೆಯದ ಹುಮ್ಮಸಿನಿಂದ ರಾಮನನ್ನು ನೋಡ ಹೊರಟಿತು. ವಿಮಾನವನ್ನು ಕಂಡ ಜನ ಭಕ್ತಿಯಿಂದ ನಮ್ರವಾಗಿ ಕೈಮುಗಿಯಿತು. ವಿಮಾನ ಮೆಲ್ಲನೆ ನಗರದ ಬಳಿ ನೆಲಕ್ಕಿಳಿಯಿತು. ಆ ಗಳಿಗೆ ಅಯೋಧ್ಯೆಯ ಜನದ ಕಣ್ಮನಗಳಿಗೆ ಹಬ್ಬ. ಭರತನು ವಿಮಾನದಿಂದ ಇಳಿಯುತ್ತಿರುವ ರಾಮಚಂದ್ರನ ಚರಣಗಳಿಗೆ ಅಭಿವಂದಿಸಿ 'ಧನ್ಯನಾದೆ' ಎಂದುಕೊಂಡನು. ರಾಮ ನು ಪ್ರೀತಿಯ ತಮ್ಮ ಭರತನನ್ನು ಎತ್ತಿ ಆಲಿಂಗಿಸಿಕೊಂಡನು. ಭರತನಿಗೆ ಆಗ ಒಂದೆಡೆ ಸಂಕೋಚ, ಒಂದೆಡೆ ಸಂತೋಷ, ಒಂದೆಡೆ ಭಕ್ತಿ; ಹೀಗೆ ಅವನ ಚಿತ್ತ ಭಾವತುಮುಲಗಳಿಗೊಳ- ಗಾಗಿತ್ತು. ಭರತನು ಅಲ್ಲಿಂದ ಸೀತೆಗೂ ಲಕ್ಷ್ಮಣನಿಗೂ ವಂದಿಸಿದನು; ಸುಗ್ರೀವ-ವಿಭೀಷಣಾದಿಗಳನ್ನು ಆಲಿಂಗಿಸಿ ಉಪಚರಿಸಿದನು. ಶತ್ರುಘ್ನನೂ ಕ್ರಮವಾಗಿ ಪೂಜ್ಯರನ್ನು ಅಭಿವಂದಿಸಿ ಗೌರವಿಸಿದನು. ಪಟ್ಟಣದ ಜನವೆಲ್ಲ ಕೈಮುಗಿದು ರಾಮದೇವನಿಗೆ ಸ್ವಾಗತವನ್ನು ಬಯಸಿತು. ರಾಮಚಂದ್ರನು ಮುಗುಳು ನಗೆಯಿಂದ ಅವರನ್ನು ಹರಸಿ, ಸೀತೆ ಲಕ್ಷ್ಮಣರೊಡನೆ ತಾಯಂದಿರಿಗೆ ನಮಸ್ಕರಿಸಿದನು. ಭರತನು ಪಾದುಕೆಗಳನ್ನು ರಾಮನ ಪಾದಗಳಿಗರ್ಪಿಸಿ ವಿನಂತಿಸಿಕೊಂಡನು : " ರಾಮಭದ್ರ, ಈ ವರೆಗೆ ನಾನು ಪಾಲಿಸುತ್ತಿದ್ದ ನಿನ್ನ ರಾಜ್ಯ- ವನ್ನು ನಿನಗೇ ಒಪ್ಪಿಸಿದ್ದೇನೆ. ಈ ಕೋಶ, ಈ ಸೇನೆ, ನಮ್ಮಸಂಪತ್ತು ಮತ್ತು ನಾವೆಲ್ಲರೂ ನಿನ್ನ ಆಜ್ಞಾನುವರ್ತಿಗಳು. ನಿನ್ನ ಅನುಗ್ರಹ ದಿಂದ ರಾಷ್ಟ್ರದ ಸಿರಿಯನ್ನು ಹತ್ತು ಪಟ್ಟು ಬೆಳೆಸಿದ್ದೇನೆ." ಭರತನ ಭಕ್ತಿ-ಸರಳತೆ-ನಿರ್ವ್ಯಾಜಪ್ರೇಮ ಇವನ್ನು ಕಂಡು ಕಪಿಗಳೂ ರಾಕ್ಷಸರೂ ಅಚ್ಚರಿಯಿಂದ ಆನಂದಾಶ್ರುವನ್ನು ಸುರಿಸಿದರು. ರಾಮನು ಭರತನನ್ನು ಹರಸಿ ಕುಲಗುರುಗಳಾದ ವಸಿಷ್ಠರನ್ನು ಪೂಜಿಸಿದನು. ರಾಮನ ಆಜ್ಞೆಯಂತೆ ಪುಷ್ಪಕ ಕುಬೇರನಿದ್ದೆಡೆಗೆ ತೆರಳಿತು. ರಾಮಚಂದ್ರನು ಎಲ್ಲ ಪರಿವಾರದೊಡನೆ ಅರಮನೆಯ ಹೊರ ಮೈಯಲ್ಲಿರುವ ಉಪವನಕ್ಕೆ ಬಂದನು. ಅನಂತರ ಭರತನು ಮತ್ತು ಸಕಲ ಪ್ರಜಾವರ್ಗದ ಬಯಕೆಯಂತೆ ಸಾಮ್ರಾಜ್ಯ ಸಂಕೇತ ವಾದ ಸಿಂಹಾಸನವನ್ನು ಮಂಡಿಸಿದನು. ಆಗ ಕಪಿಗಳೆಲ್ಲ ಮನುಷ್ಯರಂತೆ ಸರ್ವಾಂಗ ಸುಂದರವಾದ ರೂಪವನ್ನು ಧರಿಸಿ- ದರು. ಈ ಕಪಿಗಳೆಂದರೆ ಯೋಗ ಬಲವುಳ್ಳ ದೇವತೆಗಳಲ್ಲವೆ ? ರಾಮ-ಲಕ್ಷ್ಮಣರನ್ನೂ ,ಕಪಿ-ರಾಕ್ಷಸರನ್ನೂ ಸ್ವಯಂ ಭರತ-ಶತ್ರುಘ್ನರೇ ನಾನಾಭರಣಗಳನ್ನು ತೊಡಿಸಿ ಅಲಂಕರಿಸಿದರು. ಸೀತೆಯನ್ನು ಅಲಂಕರಿಸುವ ಕೆಲಸವನ್ನು ದಶರಥ ಪತ್ನಿಯರೇ ವಹಿಸಿಕೊಂಡರು. ಕಪಿ ಸ್ತ್ರೀಯರನ್ನೆಲ್ಲ ಕೌಸಲ್ಯಯೊಬ್ಬಳೆ ವಿವಿಧಾಭಾರಣಗಳಿಂದ ಅಲಂಕರಿಸಿದಳು. ಅಲಂಕೃತರಾದ ಕಪಿಗಳೂ ಕಪಿ ಸ್ತ್ರೀಯರೂ ದೇವತೆಗಳಂತೆ ಸೊಗಯಿಸಿದರು. ಪಟ್ಟಣದ ಹೆಂಗಳೆಯರೆಲ್ಲ ತಮ್ಮ ಅರಸಿ ಸೀತೆಗೂ ಕಪಿರಾಜನ ಮಡದಿಗೂ ಉಪಾಯನವನ್ನು ತಂದರು. ಸಾಧ್ವಿಸೀತೆಯನ್ನು ಕಂಡವರ ಕಣ್ಣು ಆನಂದದಿಂದ ಅರಳಿತು. ಪಟ್ಟಾಭಿಷೇಕದ ಕುರಿತು ಮಂತ್ರಾಲೋಚನೆ ನಡೆಯಿತು. ಸುಮಂತ್ರ ರಥವನ್ನು ಸಜ್ಜುಗೊಳಿಸಿದನು. ರಾಮಚಂದ್ರ ಸೀತೆ ಯೊಡನೆ ರಥವನ್ನೇರಿದನು. ಹನುಮಂತನೂ ಸುಗ್ರೀವನೂ ಆನೆಯ ಮೇಲೇರಿ ರಾಮನ ಬೆಂಬಳಿಯ ನಡೆದರು. ಉಳಿದ ಕಪಿಗಳೂ ರಾಕ್ಷಸರೂ ಆನೆಗಳನ್ನೋ ಕುದುರೆಗಳನ್ನೋ ಏರಿಬಂದರು. ಶಂಖ ದುಂದುಭಿಗಳ ಮೊಳಗಿನಿಂದಲೂ ಜಯಜಯಕಾರದ ಕೋಲಾಹಲದಿಂದಲೂ ದಿಕ್ಕು ಕಿವುಡಾಯಿತು. ಪೌರರು ಮಂಗಲದ್ರವ್ಯವನ್ನು ಹಿಡಿದುಕೊಂಡು ರಾಮನನ್ನು ಎದುರುಗೊಂಡರು. ಈ ಮೆರವಣಿಗೆಯನ್ನು ನೋಡಲು ನಗರದ ಮಹಡಿಗಳ ಮೇಲೆಲ್ಲ ಹೆಂಗಳೆಯರ ಸಂತೆ ನೆರೆದಿತ್ತು. ಸೀತೆ- ಯೊಡನೆ ರಥವೇರಿಬರುತ್ತಿರುವ ರಾಮಚಂದ್ರನ ಮೇಲೆ ಮುತ್ತೈದೆಯರು ಅರಳು-ಹೂ ಚೆಲ್ಲಿದರು. ರಾಮಚಂದ್ರನು-ಇಂದ್ರಪುರದಂತಿರುವ ಅಂತಃಪುರವನ್ನು ಪ್ರವೇಶಿಸಿದನು. ಕಪಿರಾಜನಾದ ಸುಗ್ರೀವನಿಗೆ ಅರಮನೆಯ ಉದ್ಯಾನದ ನಡುವೆಯಿರುವ ಭವನದಲ್ಲಿ ವಾಸಕಲ್ಪಿಸಲಾಯಿತು. ವಸಿಷ್ಠರ ಆದೇಶದಂತೆ ಸೇವಕರು ಅಭಿಷೇಕದ ಸಾಮಗ್ರಿಗಳನ್ನು ಸಜ್ಜುಗೊಳಿಸಿದರು. ಸುಗ್ರೀವನ ಸಂದೇಶದಂತೆ ಸಮುದ್ರದ ಜಲ ವನ್ನು ತರಲು ಕಪಿಗಳೇ ಹೊರಟರು. ಸುಷೇಣ ಮೂಡಣ ಕಡಲ ನೀರನ್ನು ತಂದನು. ಗವಯ ಪಡುಕಡಲ ನೀರನ್ನು ತಂದನು. ದಕ್ಷಿಣೋತ್ತರ ಸಾಗರಗಳ ನೀರನ್ನು ಕ್ರಮವಾಗಿ ಋಷಭನೂ ನಲನೂ ಬಂಗಾರದ ಕೊಡಗಳಲ್ಲಿ ಹೊತ್ತು ತಂದರು. ಅಭೀಷೇಕಕ್ಕೆಂದು ಪುರೋಹಿತರಿಗೆ ಋತ್ವಿಕ್ಕುಗಳಿಗೆ ಕರೆ ಹೋಯಿತು. ವಾಮದೇವ, ಜಾಬಾಲಿ, ಕಶ್ಯಪ, ಕಾತ್ಯಾಯನ, ಸುಯಜ್ಞ ಮೊದಲಾದ ಮಹರ್ಷಿಗಳೂ ವಸಿಷ್ಠರೊಡನೆ ಕೂಡಿ ಕೊಂಡರು. ರಾಮಚಂದ್ರನ ಅಭಿಷೇಕದ ವಾರ್ತೆಯನ್ನು ಕೇಳಿದ ಊರಿನ ಜನಕ್ಕೆ ಎಲ್ಲಿಲ್ಲದ ಸಂತಸ-ಸಡಗರ. ಎಲ್ಲರ ಬಾಯಲ್ಲೂ ಒಂದೇ ಮಾತು: " ರಾಮನಿಗೆ ಪಟ್ಟಾಭಿಷೇಕವಂತೆ." " ಹದಿನಾಲ್ಕು ವರ್ಷಗಳ ನಂತರ ಮತ್ತೆ ರಾಮಚಂದ್ರನಿಗೆ ಪಟ್ಟಾಭಿಷೇಕವಂತೆ." " ನಮ್ಮ ಪ್ರೀತಿಯ ರಾಮ ಮತ್ತೆ ನಮ್ಮನ್ನಾಳುವನಂತೆ." "ನಮ್ಮ ರಾಮನಿಗೆ ಪಟ್ಟಾಭಿಷೇಕವಂತೆ !" ಉರಿಯಿಂದ ಬಳಲುವ ಜನಕ್ಕೆ ಮಳೆ ಸುರಿದಂತೆ ಬಾಳಿನ ಬಂಧನದಿಂದ ಬವಣೆಪಡುವ ಜನಕ್ಕೆ ಕೈವಲ್ಯವೇ ದೊರಕಿದಂತೆ ಈ ವಾರ್ತೆಯಿಂದ ಜನ ಸಂತಸಗೊಂಡರು. ಜಗತ್ಪತಿ ಅಯೋಧ್ಯಾಪತಿಯಾದನು ಮೂಡುದಿಸೆಯಲ್ಲಿ ಭಾನುದೇವ ಕಾಣಿಸಿಕೊಂಡನು. ಬ್ರಾಹ್ಮಣರು ಸ್ವಸ್ತಿವಾಚನವನ್ನುಗೈದರು. ರಾಮಚಂದ್ರನು ಅಭಿಷೇಕ ಮಂಟಪಕ್ಕೆ ತೆರಳಿದನು. ಮಂತ್ರತಂತ್ರಗಳಲ್ಲಿ ಕೋವಿದರಾದ ವಸಿಷ್ಠಾದಿಗಳು ಮಣಿಖಚಿತವಾದ ಸಿಂಹಾಸನ ದಲ್ಲಿ ರಾಮಭದ್ರನನ್ನು ಕುಳ್ಳಿರಿಸಿದರು. ಬೆಡಗಿ ಸೀತೆ ಮೆಲುನಡೆಯಿಂದ ರಾಜಾಸನದ ಬಳಿ ಸಾರಿ ನಸು ನಾಚುಗೆಯಿಂದ ತಲೆಬಾಗಿ ನಿಂತಳು. ರಾಮಚಂದ್ರ ಅವಳನ್ನು ಕೈ ಹಿಡಿದು ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡನು. ಭಗವಂತನ ಅರ್ಧಾಸನವನ್ನು ಪಡೆವ ಭಾಗ್ಯ ಸೀತೆಗಲ್ಲದೆ ಇನ್ನಾರಿಗಿದೆ ? ಭಾನು ಬೆಳಕುಗಳಂತೆ, ಚಂದ್ರ-ಚಂದ್ರಿಕೆಗಳಂತೆ ಸೀತಾ-ರಾಮರ ಮಿಲನ ಸೊಗಯಿಸಿತು ಎಂದು ಕವಿಗಳು ಬಣ್ಣಿಸಿದರು. ಕವಿಗಳಿಗೆ ಬಣ್ಣಿಸುವ ಚಪಲ ಅವರು ಎಲ್ಲ ಬಣ್ಣನೆಯಲ್ಲೂ ಉಪಮಾನದ ಮೆರುಗನ್ನು ಬೆರೆಸಿ ತಮ್ಮ ನಾಲಿಗೆಯ ತೀಟೆಯನ್ನು ಪರಿಹರಿಸಿ ಕೊಳ್ಳುತ್ತಾರೆ ! ನಿಜ ಹೇಳುವುದಾದರೆ ಅಸದೃಶನಾದ ಭಗವಂತನ ದಾಂಪತ್ಯಕ್ಕೆ ಉಪಮಾನವೆಂಥದು ? ಮಾತಿಗೆ ನಿಲುಕದ ಭಗವತ್ತತ್ವದ ದಾಂಪತ್ಯವನ್ನು ಯಾವ ಮಾತಿನಿಂದ ಬಣ್ಣಿಸ ಬೇಕು ? "ಯತೋವಾಚೋ ನಿವರ್ತಂತೇ." ಗುಗ್ಗಳ-ಗಂಧಗಳ ಲೋಬಾನದ ನಸುಗಂಪು ಸುತ್ತ ಹರಡಿತ್ತು. ಮೃದಂಗ ಭೇರಿ, ಪಟಹ, ಶಂಖ ಮೊದಲಾದ ವಾದ್ಯಗಳ ಮೊಳಗು, ವೀಣೆ, ಕೊಳಲುಗಳ ಇಂಚರ. ಇವುಗಳ ತುಮುಲದಲ್ಲಿ ಉಳಿದ ಸದ್ದುಗಳು ತಲೆ ಮರಸಿಕೊಂಡವು. ಗಂಧರ್ವರು ಹಾಡಿದರು. ಅಪ್ಸರೆಯರು ಕುಣಿದರು. ವಸಿಷ್ಠನನ್ನು ಮುಂದಿರಿಸಿಕೊಂಡು ಎಲ್ಲ ಮಹರ್ಷಿಗಳೂ ರತ್ನಖಚಿತವಾದ ಬಂಗಾರದ ಕೊಡದಲ್ಲಿ ತುಂಬಿದ ತೀರ್ಥ ಸಲಿಲ ಗಳನ್ನು ರಾಮನ ಮೇಲೆ ಸುರಿದರು. ಭಗವದಭಿಷೇಕದ ಭಾಗ್ಯ- ದಲ್ಲಿ ಎಲ್ಲ ಋಷಿಗಳೂ ಪಾಲುಗೊಂಡರು. ಶತ್ರುಘ್ನನು ಬಂಗಾರದ ಹಿಡಿಯ ಬೆಳ್ಕೊಡೆಯನ್ನು ಹಿಡಿದನು. ಸುಗ್ರೀವನೂ-ವಿಭೀಷಣನೂ ಪಾರ್ಶ್ವದಲ್ಲಿ ಚಾಮರಗ್ರಾಹಿ- ಗಳಾದರು. " ಇವನು ಕೋಸಲದ ಅರಸುಮಾತ್ರವೇ ಅಲ್ಲ; ಭೂಮಂಡಲಕ್ಕೆ ಇವನು ನಾಥ " ಎಂದು ಜನ ಕೊಂಡಾಡಿದರು. ರಾಮಚಂದ್ರನ ಮಂದಹಾಸವೇ ಅದಕ್ಕೆ ಉತ್ತರವಾಯಿತು. ಸಾವಿರಾರು ಗೋವುಗಳನ್ನೂ ಅಪಾರವಾದ ಬೆಳ್ಳಿ-ಬಂಗಾರ ವನ್ನೂ ವಿಪ್ರರಿಗೆ ದಾನವಾಗಿ ರಾಮಚಂದ್ರನು ಕೊಟ್ಟನು. ಅಮೂಲ್ಯಗಳಾದ ಒಡವೆ ತೊಡವೆಗಳನ್ನು ರಾಮಚಂದ್ರನು ಸಂತಸದ ಕೊಡುಗೆಯಾಗಿ ಸೀತೆಗೆ ಒಪ್ಪಿಸಿದನು. ಹಾಗೆಯೇ ಕಪಿಗಳಿಗೂ ರಾಕ್ಷಸರಿಗೂ ಸಮೃದ್ಧವಾದ ಸಂಭಾವನೆ ದೊರಕಿತು. ಸೀತೆಯ ಮೈತುಂಬ ಬಂಗಾರ, ನಿಸರ್ಗಸುಂದರಿಯಾದ ಆಕೆಗೆ ಬಂಗಾರಗಳಿಂದೇನು ? ಚಿನ್ನದಿಂದ ಆಕೆಗೆ ಚೆಲುವಲ್ಲ. ಅವಳಿಂದ ಚಿನ್ನಕ್ಕೆ ಚೆಲುವು. ಸೀತೆ ತಾನು ತೊಟ್ಟಿರುವ ಆಭರಣಗಳಲ್ಲಿ ಅತ್ಯುತ್ತಮವಾದ ಹಾರವೊಂದನ್ನು ಕೈಯಲ್ಲಿ ಹಿಡಿದುಕೊಂಡು ರಾಮಚಂದ್ರನೆಡೆಗೆ ದಿಟ್ಟಿಸಿದಳು. ಒಮ್ಮೆ ತನ್ನೆಡೆಗೆ ಒಮ್ಮೆ ಸರದೆಡೆಗೆ ದೃಷ್ಟಿ ಬೀರಿ ನಸುನಗು- ತ್ತಿರುವ ಸೀತೆಯ ಇಂಗಿತ ರಾಮನಿಗೆ ತಿಳಿಯಿತು. ಅವನೂ ಜಾನಕಿ ಯೆಡೆಗೆ ಕುಡಿನೋಟವನ್ನು ಬೀರಿ ನುಡಿದನು: " ಸಾಧ್ವಿ, ಬ್ರಹ್ಮಚರ್ಯಾದಿ ಸದ್ಗುಣಗಳಲ್ಲಿ , ಶಾಸ್ತ್ರ ಪಾಂಡಿತ್ಯ ದಲ್ಲಿ ಯಾರನ್ನು ಮೀರಿಸುವವ ಇನ್ನಿಲ್ಲವೋ ಅಂಥವನಿಗೆ ಈ ಸರವನ್ನು ಉಡುಗರೆಯಾಗಿ ಕೊಡು. ಸುಂದರಿ, ಯಾರ ಪರಾಕ್ರಮ ನಿನಗೆ ಮೆಚ್ಚಿಗೆಯಾಗಿದೆಯೋ, ಯಾರ ಪರಾಕ್ರಮ ತ್ರಿಭುವನದಲ್ಲಿ ಅಪೂರ್ವವಾಗಿದೆಯೋ ಅಂಥವನು ಈ ಸರವನ್ನು ಪಡೆಯುವ ಭಾಗ್ಯಶಾಲಿಯಾಗಲಿ. ಯಾರು ನನಗೆ ಹೆಚ್ಚು ಮೆಚ್ಚಿನವರು ಎಂದು ನೀನು ಬಲ್ಲೆ ಯೋ , ಯಾರ ಸಾಹಸ ಸೇವೆಗಳು ನಿನ್ನನ್ನು ಮೆಚ್ಚಿಸಿವೆಯೋ ಅಂಥ ಮಹಾನುಭಾವನಿಗೆ ಈ ಪ್ರೀತಿಯ ಉಪಹಾರ ದೊರೆಯಲಿ. " ಸೀತೆ ಹನುಮಂತನೆಡೆಗೆ ನೋಡಿ ಮುಗುಳುನಕ್ಕಳು. ಇತರರಿಗೆ ದುರ್ಲಭವಾದ ತಾಯಿಯ ಅನುಗ್ರಹದ ಹಾರ ಹನುಮಂತನ ಕತ್ತಿನಲ್ಲಿ ವಿರಾಜಿಸಿತು ! ಮಾರುತಿಯ ಎದೆಯಲ್ಲಿ ಇಳಿದುಬಂದ ಹಾರ ಹಿಮಶಿಖರದಿಂದ ಧುಮ್ಮಿಕ್ಕುವ ಭಾಗೀರಥಿಯಂತೆ ಕಾಣಿಸಿತು ! "ಸೀತಾರಾಮರ ನಿರ್ವ್ಯಾಜಪ್ರೇಮಕ್ಕೆ ಪಾತ್ರನಾದ ಈ ಮಹಾತ್ಮನು ಬ್ರಹ್ಮದೇವನಲ್ಲದೆ ಇನ್ನೊಬ್ಬನಲ್ಲ" ಎಂದು ಪಂಡಿತರು ಆಡಿಕೊಂಡರು. ರಾಷ್ಟ್ರದ ಜನಕ್ಕೆಲ್ಲ ರಾಮನದೇ ಚಿಂತೆ. ಆಡುವುದು ರಾಮನ ಗುಣಗಳನ್ನು, ಕೇಳುವುದು ರಾಮನ ಕಥೆಗಳನ್ನು, ಮಾಡುವುದು ರಾಮನ ಸೇವೆಯನ್ನು, ರಾಮನನ್ನು ಕಂಡ ಕಣ್ಣಿಗೆ, ರಾಮನನ್ನು ನೆನೆದ ಮನಕ್ಕೆ ಮಹೋತ್ಸವವಾಯಿತು. ಒಟ್ಟಿನಲ್ಲಿ ರಾಷ್ಟ್ರ ರಾಮಮಯವಾಯಿತು. ರಾಮ-ಸೀತೆಯರು ರಾಷ್ಟ್ರದ ಆರಾಧ್ಯದೈವವಾಗಿ ಕೋಸಲದ ರಾಜಾಸನವನ್ನು ಅಲಂಕರಿಸಿದರು. ಉತ್ತರಕಾಂಡ ಬಂದ ಅತಿಥಿಗಳು ಮರಳಿದರು ಸೀತಾ-ರಾಮರು ಸಿಂಹಾಸನದಲ್ಲಿ ಕುಳಿತಿದ್ದಾಗ ಸಂತುಷ್ಟರಾದ ಋಷಿಗಳು ಗುಣಗಾನ ಮಾಡಿದರು. ದಂಡಹಸ್ತನಾದ ಕಂಚುಕಿಯು " ಋಷಿಗಳು ಮಾತನಾಡುತ್ತಿದ್ದಾರೆ. ಜನ ಮೌನದಿಂದ ಆಲಿಸ- ಬೇಕು " ಎಂದು ನಿವೇದಿಸಿದನು. ಅಗಸ್ಯರು ಎದ್ದು ನಿಂತು ನುಡಿಯತೊಡಗಿದರು: " ರಾಮಚಂದ್ರ, ನಿನ್ನ ಅನುಗ್ರಹದಿಂದ ಸಜ್ಜನರಿಗೆ ಮಂಗಳ ವಾಗಲಿ । ಓ ಪ್ರಭುವೆ, ಓ ರಘುವಂಶದ ನಂದಾದೀಪವೆ, ನಿನ್ನ ಕೀರ್ತಿಯನ್ನು ಕೊಂಡಾಡಲು ಹನುಮಂತ ಬಲ್ಲ; ಚತುರಾನನ ಬಲ್ಲ. ನಮಗೆಲ್ಲಿ ಆ ಶಕ್ತಿ? ಸುಮಾಲಿ-ಮಾಲಿ ಮೊದಲಾದ ರಕ್ಕಸರನ್ನು ಮೂಲರೂಪ- ದಿಂದಲೆ ಸಂಹರಿಸಿದೆ. ರಾಮನಾಗಿ ಅವತರಿಸಿ ರಾವಣನನ್ನು ಕೊಂದೆ. ನಿನ್ನಿಂದ ಜಗತ್ತು ನೆಮ್ಮದಿಯ ಉಸಿರೆಳೆವಂತಾಗಿದೆ. ಜಗನ್ನಾಥನಾದ ನೀನು ನಮ್ಮ ಮೇಲೆ ದಯೆ ತೋರದಿದ್ದರೆ ಇನ್ನಾರಿಗೆ ರಾಕ್ಷಸರನ್ನು ಕೊಲ್ಲಲು ಸಾಧ್ಯ ? ಕಗ್ಗತ್ತಲೆ ಅಳಿಯ- ಬೇಕಾದರೆ ಸೂರ್ಯನೇ ಉದಿಸಬೇಕು." ಎಲ್ಲ ಮಹರ್ಷಿಗಳೂ ಮನದಣಿಯೆ ಭಗವಂತನನ್ನು ಕೊಂಡಾಡಿದರು. ರಾಮಚಂದ್ರನು ಎಲ್ಲರನ್ನೂ ಗೌರವಿಸಿ ಯಜ್ಞ ಕಾರ್ಯಗಳಿಗಾಗಿ ಬೀಳ್ಕೊಟ್ಟನು. ಹೊತ್ತು ಮುಳುಗುವುದರಲ್ಲಿತ್ತು. ರಾಮಚಂದ್ರನು ಸಂಧ್ಯಾವಂದನೆಗೆಂದು ಅಂತಃಪುರವನ್ನು ಪ್ರವೇಶಿಸಿದನು. ಸಂಧ್ಯಾವಂದನೆಯ ನಂತರ ಅಮೃತತುಲ್ಯವಾದ ರಾಜ- ಭೋಜನವಾಯಿತು. ಹಾಲ್ನೊರೆಯಂತೆ ಬಿಳುಪಾದ ನವುರಾದ ಹಾಸುಗೆ ಸಜ್ಜೆಮನೆಯಲ್ಲಿ ಸಿದ್ಧವಾಗಿತ್ತು. ಹಾವಿನ ಮೇಲೆ ಮಲಗುವ ಹರಿ ಹಾಸುಗೆಯಲ್ಲೊರಗಿದನು ! ನಿತ್ಯ ಮುಕ್ತನಾದ ರಾಮಚಂದ್ರನನ್ನು ಸೀತೆ ತೋಳುಗಳಿಂದ ಬಂಧಿಸಿದಳು; ರಜೋವಿದೂರನನ್ನು ರಂಜಿಸಿದಳು; ಆತ್ಮಾರಾಮ- ನನ್ನು ತನ್ನ ನಲುಮೆಯ ಬಗೆಗಳಿಂದ ರಮಿಸಿದಳು. ಪ್ರಜೆಗಳಿಗಂತೂ ರಾಮಚಂದ್ರನ ಅಭಿಷೇಕದ ಸಂತಸದಲ್ಲಿ ಆ ಮಹೋತ್ಸವವನ್ನು ಬಣ್ಣಿಸುವ ಭರದಲ್ಲಿ ಕತ್ತಲಾದುದೂ ಗೊತ್ತಿಲ್ಲ; ಬೆಳಗಾದುದೂ ಗೊತ್ತಿಲ್ಲ ! ರಾತ್ರಿಯೇ ಮುಗಿಯಿತಾಗಲಿ ಅವರ ಮಾತು ಮುಗಿಯಲಿಲ್ಲ ! ಮೂಡಣ ಬಾನಿನ ಮೇಲೆ ಉಷೆ ಕೆಂಪು ಚೆಲ್ಲಿದಳು. ಬಂದಿಗಳು ಅಂತಃಪುರದಲ್ಲಿ ಭಗವಂತನನ್ನು ಎಚ್ಚರಿಸಲು ಹಾಡತೊಡಗಿದರು : "ಮಹಾರಾಜ, ಹಕ್ಕಿಗಳು ಎದ್ದು ಹಾಡತೊಡಗಿವೆ. ಮುತ್ತೈದೆ ಯರು ಪತಿಯ ಹಿತವಾದ ತೋಳಸೆರೆಯನ್ನು ಬಿಡಿಸಿಕೊಂಡು ಏಳುತ್ತಿದ್ದಾರೆ. ಕತ್ತಲು ಬೆಳಕಿನಲ್ಲಿ ಲಯವಾಗುತ್ತಿದೆ. ಕುಮುದಗಳ ಸಂತಸವನ್ನು ಕದ್ದು ಚಂದ್ರನು ಮುಳುಗುತ್ತಿದ್ದಾನೆ. ಈಗ ತಾವರೆಗಳ ಜತೆಗೆ ನಿನ್ನ ಕಣ್ದಾವರೆಗಳು ಅರಳುವ ಕಾಲ, ನಿನಗೆ ಸುಪ್ರಭಾತವಾಗಲಿ. ಎಚ್ಚರು ದೇವ, ಎಚ್ಚರು." ರಾಮಚಂದ್ರನು ಎದ್ದು ಕುಳಿತೊಡನೆ ಸೇವಕರು ಬಂಗಾರದ ಕೊಡಗಳಲ್ಲಿ ನೀರನ್ನು ಸಿದ್ಧಗೊಳಿಸಿದರು. ನಿತ್ಯನಿರ್ಮಲನಾದ ಭಗವಂತನು ಪ್ರಾತಃಶೌಚಗಳನ್ನು ತೀರಿಸಿದನು. ಸ್ನಾನ, ಸಂಧ್ಯಾವಂದನೆ, ಅಗ್ನಿ ಕಾರ್ಯಗಳನ್ನೂ ಮುಗಿಸಿಯಾಯಿತು. ದೂತರು ಬಂದು ರಾಜಭೂಷಣಗಳನ್ನು ತೊಡಿಸಿದರು. ಹಣೆಗೆ ತಿಲಕವಿಟ್ಟರು. ಮೈಗೆ ಚಂದನ ಬಳಿದರು. ರಾಮಚಂದ್ರನು ಪೂಜಾಮಂದಿರದಿಂದ ಸಭಾಭವನಕ್ಕೆ ತೆರಳಿದನು. ಸೂರ್ಯನೂ ಅಷ್ಟರಲ್ಲಿ ಉದಯಾದ್ರಿಯಿಂದ ಮುಗಿಲಿಗೇರಿದ್ದನು. ಬಂಗಾರದ ಪೀಠದಲ್ಲಿ ರಾಮಚಂದ್ರನು ಕುಳಿತುಕೊಂಡನು. ಲಕ್ಷ್ಮಣಾದಿಗಳು-ಕಪಿಗಳು-ರಾಕ್ಷಸರು ಪಕ್ಕದಲ್ಲಿ ಕುಳಿತುಕೊಂಡರು. ಸುತ್ತ ಸಾಮಂತರಾಜರೂ ಆಸನಾಸೀನರಾದರು. ವಸಿಷ್ಠಾದಿಗಳು ಸಭೆಗೆ ಚಿತ್ತೈಸಿದಾಗ ರಾಮಚಂದ್ರನೇ ಎದ್ದು ಬಂದು ಅವರನ್ನು ಉಚಿತಾಸನದಲ್ಲಿ ಕುಳ್ಳಿರಿಸಿದನು. ಅನಂತರ ರಾಮಚಂದ್ರನು ತಾನು ರಾಜ್ಯಸೂತ್ರವನ್ನು ಕೈಗೆ ತೆಗೆದುಕೊಂಡ ಮೇಲೆ ಮೊದಲ ಭಾಷಣವನ್ನು ಮಾಡಿದನು : "ನನ್ನ ಪ್ರೀತಿಯ ಪ್ರಜೆಗಳೆ, ನಾನು ನಿಮಗೆ ಹೇಳಬೇಕಾದುದಿಷ್ಟೆ. ಶಾಸ್ತ್ರದ ಮೇಲೆ ನಂಬುಗೆಯಿರಲಿ, ಧರ್ಮದ ಮೇಲೆ ಒಲವಿರಲಿ, 'ನಾನು' 'ನನ್ನದು' ಎನ್ನುವ ಹಮ್ಮು ನಿಮ್ಮ ಬಳಿ ಸುಳಿಯದಿರಲಿ, ವಿಷಯ- ದ ಬಲೆಗೆ ಬೀಳುವ ಜನರು ಗಾಳದ ಮಾಂಸಕ್ಕಾಗಿ ಹಾರುವ ಮೀನಿನಂತೆ ಅಪಾಯವನ್ನೆ ಸ್ವಾಗತಿಸುತ್ತಿರುತ್ತಾರೆ ಎನ್ನುವ ವಿಷಯ ತಿಳಿದಿರಲಿ. ಸಂಗರಹಿತರಾಗಿ ಬಾಳಬೇಕು. ಭಗವಂತನ ಪದವನ್ನು ನೆನೆವುದಕ್ಕಾಗಿ ಬಾಳಬೇಕು. ದೊರಕಿದುದಷ್ಟೆ ನಮ್ಮದು ಎಂದು ಸಂತಸ ತಾಳಬೇಕು. ಇಂಥವರ ಬಾಳು ಸೂರ್ಯನಂತೆ ಉಜ್ವಲ ವಾಗಿರುತ್ತದೆ. ಅಂಥವರಿಂದ ಮಳೆಬೆಳೆಗಳು; ಅಂಥವರಿಂದ ಇಹ-ಪರಗಳು, ಅಂಥವರ ಬಾಳು ಧನ್ಯ! ಅಂಥವರನ್ನು ಪಡೆದ ನಾಡು ಧನ್ಯ !" ಕೆಲ ದಿನಗಳುರುಳಿದವು. ಅಭಿಷೇಕಕ್ಕೆಂದು ಬಂದಿದ್ದ ವಿದೇಹ-ಕೇಕಯ ಮೊದಲಾದ ದೇಶಗಳ ಅರಸರನ್ನು ರಾಮಚಂದ್ರನು ಗೌರವಿಸಿ ಕಳಿಸಿಕೊಟ್ಟನು. ಒಮ್ಮೆ ರಾಮಚಂದ್ರನು ಬಳಿಯಲ್ಲಿದ್ದ ಹನುಮಂತನನ್ನೂ-ಸುಗ್ರೀವ ವಿಭೀಷಣಾದಿಗಳನ್ನೂ ಕರೆದು ಪ್ರಸ್ತಾವಿಸಿದನು: " ನೀವು ನನಗೆ ಮಾತು-ಮೈ-ಮನಗಳಿಂದ ಸಹಕರಿಸಿದ್ದೀರಿ. ಅದರಿಂದ ನನ್ನ ದಾಸ್ಯದ ಭಾಗ್ಯ ನಿಮಗೆ ದೊರಕಿದೆ. ಪರಮ ಪದವಿಯನ್ನು ಪಡೆಯುವ ಪುಣ್ಯವೂ ನಿಮ್ಮದಾಗಿದೆ. ಭಕ್ತಾಗ್ರಣಿಯಾದ ಹನುಮಂತನಿಗೆ ನಾನು ಏನು ಕೊಟ್ಟರೂ ಕಡಿಮೆಯೆ. ಅವನು ಮಾಡಿದ ಸೇವೆಯ ಮುಂದೆ ಮೋಕ್ಷವೂ ಸಣ್ಣದು: ಅವನು ನನ್ನ ಸಹಭೋಗವನ್ನು ಪಡೆವ ಭಾಗ್ಯಶಾಲಿ ಯಾಗುವನು. ಇಷ್ಟೇ ಅಲ್ಲ ಹನುಮನ್, ಇನ್ನೂ ಏನನ್ನಾದರೂ ನೀನು ಬಯಸುವೆಯಾದರೆ ಅದನ್ನೂ ಪಡೆಯುವೆ" ಎಂದು ತನ್ನ ಕಂಠದಿಂದ ಅಮೂಲ್ಯಹಾರವೊಂದನ್ನು ತೆಗೆದು ಹನುಮಂತನ ಕೊರಳಿಗೆ ತೊಡಿಸಿದನು. ಹನುಮಂತನು ನಮ್ರವಾಗಿ ನಿವೇದಿಸಿ ಕೊಂಡನು: " ನನಗೆ ನಿನ್ನ ಮೇಲೆ ಭಕ್ತಿ-ನಿನಗೆ ನನ್ನ ಮೇಲೆ ಪ್ರೀತಿ ಇವೆರಡೂ ಅನ್ಯೋನ್ಯವಾಗಿ ಬೆಳೆಯುತ್ತಿರಲಿ. ನಾನು ನಿನ್ನ ಚರಣ ಕಮಲಗಳಲ್ಲಿ ಬೇಡಿಕೊಳ್ಳುವುದು ಇಷ್ಟೆ. ' ರಾಮಚಂದ್ರನು ಸಂತಸದಿಂದ ಹನುಮಂತನನ್ನು ಆಲಂಗಿಸಿದನು. ಸುಗ್ರೀವ-ವಿಭೀಷಣಾದಿಗಳಿಗೂ ಅಮೂಲ್ಯ ವಸ್ತ್ರಾಭರಣಗಳನ್ನಿತ್ತು ಸತ್ಕರಿಸಿ ತಮ್ಮ ದೇಶಕ್ಕೆ ಮರಳುವಂತೆ ಆಜ್ಞಾಪಿಸಿದನು. ಭಗವಂತನ ಬಳಿಯಿಂದ ಮರಳುವುದಕ್ಕೆ ಯಾರಿಗೆ ಮನಸ್ಸು ಬಂದೀತು ? ಅವರು ಒಮ್ಮೆಲೆ ಇದನ್ನು ಒಪ್ಪಲಿಲ್ಲ: " ಭಗವನ್, ನಿನ್ನ ಪಾದಮೂಲವನ್ನು ತೊರೆದು ನಮ್ಮನ್ನು ಸಂಕಟಗಳ ಆಗರವಾದ ರಾಜ್ಯಕ್ಕೆ ಹೋಗುವಂತೆ ಏಕೆ ಆಜ್ಞಾಪಿಸು ತ್ತಿರುವೆ ? ಕಲ್ಪವೃಕ್ಷವನ್ನು ತೊರೆದು ಮುಳ್ಳಿನ ಗಿಡವನ್ನು ಯಾರು ಆಶ್ರಯಿಸುತ್ತಾರೆ ? " " ನೀವು ನನ್ನ ಸೇವೆ ಮಾಡಬಯಸುವುದು ಸಹಜ. ಆದರೆ ಅದು ಇಲ್ಲಿ ಅಲ್ಲ. ನಿಮ್ಮ ರಾಜ್ಯಕ್ಕೆ ಮರಳಿ ನಿಮ್ಮ ಪ್ರಜೆಗಳನ್ನು ಧರ್ಮ ದಿಂದ ಪಾಲಿಸಬೇಕು. ಅದೇ ನೀವು ನನಗೆ ಮಾಡುವ ಸೇವೆ." ಹೀಗೆಂದು ರಾಮಚಂದ್ರನು ತಮ್ಮ ಕುಲಕ್ರಮಾಗತವಾದ ವಿಮಾನವನ್ನು ವಿಭೀಷಣನಿಗೆ ಉಡುಗರೆಯಾಗಿತ್ತನು. ಅನಂತರ ಸುಗ್ರೀವನೆಡೆಗೆ ತಿರುಗಿ " ಸುಗ್ರೀವ, ನೀನು ಬಹುಕಾಲರಾಜ್ಯ- ವಾಳಿದ ನಂತರ ನನಗೆ ಪ್ರಿಯರಾದ ಸುಷೇಣ, ತಾರಾದಿಗಳ ಜತೆಗೆ ಮತ್ತೆ ನನ್ನ ಬಳಿ ಬರುವೆಯಂತೆ" ಎಂದು ಸಂತೈಸಿದನು. ಕೆಲವರು ರಾಮನ ಗುಣಗಾನ ಮಾಡುತ್ತಿದ್ದರು. ಕೆಲವರು ನಮಸ್ಕರಿಸುತ್ತಿದ್ದರು. ಮತ್ತೆ ಕೆಲವರು ಭಗವಂತನನ್ನು ಸುತ್ತುವರಿ- ಯುತ್ತಿದ್ದರು. ಎಲ್ಲರಿಗೂ ರಾಮನ ಸನ್ನಿಧಾನದಿಂದ ವಂಚಿತ- ರಾಗುವೆವಲ್ಲ ಎನ್ನುವ ಚಿಂತೆ, ಅಯೋಧೈಯನ್ನು ಬಿಟ್ಟು ತೆರಳು- ವಾಗ ಎಲ್ಲರ ಕಣ್ಣ ತೇವಗೊಂಡಿತ್ತು. ರಾಮಚಂದ್ರನನ್ನೂ ಅಯೋಧ್ಯೆಯನ್ನೂ ಅವರು ಬಿಟ್ಟು ತೆರಳಿದರೇನಂತೆ? ರಾಮಚಂದ್ರ ಅವರನ್ನು ತೊರೆಯಲಿಲ್ಲ. ಪ್ರತಿ- ಯೊಬ್ಬನ ಅಂತರಂಗದಲ್ಲಿ ಅಭಿರಾಮನಾದ ರಾಮ ನೆಲಸಿಯೇ ಇದ್ದ. ರಾಮರಾಜ್ಯದ ಸೊಬಗು ಒಮ್ಮೆ ರಾಮಚಂದ್ರನು ಲಕ್ಷ್ಮಣನನ್ನು ಕರೆದು ನುಡಿದನು : "ವತ್ಸ ಲಕ್ಷ್ಮಣ, ನಿನ್ನ ಸೇವೆಯಿಂದ ನನಗೆ ಸಂತಸವಾಗಿದೆ. ನಿನ್ನ ನಡತೆ ನನಗೆ ಮೆಚ್ಚಿಗೆಯಾಗಿದೆ. ಸಂಪ್ರದಾಯದಂತೆ ನೀನು ಯುವರಾಜ ಪದವಿಯ ಹೊಣೆಯನ್ನು ಹೊರಬೇಕು." "ರಾಮಭದ್ರ, ನನಗೆ ನಿನ್ನ ಪಾದಸೇವೆ ದೊರಕಿದೆ. ಅದು ಸ್ವರ್ಗಭೋಗಕ್ಕಿಂತಲೂ ಮಿಗಿಲು. ಸಾಮ್ರಾಜ್ಯ ಭೋಗಕ್ಕಿಂತಲೂ ಹೆಚ್ಚು. ಅದರ ಮುಂದೆ ಮೋಕ್ಷವೂ ಕ್ಷುಲ್ಲಕ ಪದಾರ್ಥ, ನನಗೆ ನಿನ್ನ ಪಾದಸೇವೆಯೊಂದೇ ಸದಾಬೇಕು. ಯುವರಾಜತ್ವದ ಹೊರೆಯನ್ನು ನನ್ನ ಮೇಲೆ ಹೊರಿಸದಿರುವ ಕೃಪೆಮಾಡಬೇಕು." ಲಕ್ಷ್ಮಣನ ಅಕೃತ್ರಿಮ ಪ್ರೇಮಕ್ಕೆ ಮೆಚ್ಚಿ ರಾಮಚಂದ್ರನು ಅವನಿಗೆ ಸ್ನೇಹಾಲಿಂಗನವನ್ನು ಕರುಣಿಸಿದನು. ಭರತನು ಯುವರಾಜನಾದನು. ಅಷ್ಟರಲ್ಲಿ ಕುಬೇರನು ಪುಷ್ಪಕವನ್ನು ರಾಮಚಂದ್ರನಿಗೆ ಮರಳಿ ಕಳಿಸಿಕೊಟ್ಟಿದ್ದನು. ರಾಮಚಂದ್ರನು ನೆನಸಿದಾಗ ತನ್ನೆಡೆಗೆ ಬರುವಂತೆ ಆಜ್ಞಾಪಿಸಿ ಅದನ್ನು ಕುಬೇರನಿಗೇ ಹಿಂದಕ್ಕೆ ಕಳಿಸಿ ಕೊಟ್ಟನು. ಪ್ರಜೆಗಳು ರಾಮನ ರಾಜ್ಯದಲ್ಲಿ ಇಂದ್ರಲೋಕದಲ್ಲೆಂಬಂತೆ ಸುಖಮಯವಾದ ಬಾಳನ್ನು ಬಾಳಿದರು. ಚಿರವಿರಹಿಗಳಾದ ವಿದ್ಯೆ -ಸಂಪತ್ತುಗಳು ರಾಮರಾಜ್ಯದಲ್ಲಿ ಜತೆ ಯಾಗಿ ಬಾಳಿದವು. ಪ್ರತಿಯೊಬ್ಬರೂ ಬಲ್ಲವರು. ಪ್ರತಿಯೊಬ್ಬರೂ ಬಲ್ಲಿದರು. ಪ್ರತಿಯೊಬ್ಬನ ಮನೆಯಲ್ಲೂ ವೈಭವದ ಬಾಳು, ಸಂಪದದ ಹೊನಲು, ಪ್ರತಿಯೊಂದೆಡೆಯಲ್ಲೂ ವಿಜ್ಞಾನ-ವೈಭವಗಳು ಜತೆಯಾಗಿ ಹರಿದವು. ಚಕ್ರಪಾಣಿಯಾದ ಭಗವಂತ- ನೇ ಚಕ್ರವರ್ತಿಯಾಗಿ ಅವರನ್ನು ಪಾಲಿಸುತ್ತಿರುವನಲ್ಲವೆ ? ರಾಮನ ರಾಜ್ಯದಲ್ಲಿ ಸರ್ವೇಂದ್ರಿಯಗಳಿಗೂ ಸುಖದ ಅವುತಣ. ಅನಿಷಿದ್ಧವಾದ ವಿಷಯ ಸುಖದಲ್ಲಿ ನಿರತರಾದ ಜನ ಬಾಳಿ- ನಲ್ಲಿದ್ದೂ ನಿರ್ಲಿಪ್ತರಾಗಿದ್ದರು. ರೋಗ-ರುಜಿನಗಳ ಪೀಡೆಯಿಲ್ಲದ ಜೀವನ, ಹೃಷ್ಟ-ಪುಷ್ಟವಾದ ಮೈ ಕಟ್ಟು, ಆಕರ್ಷಕವಾದ ನಿಲುವು, ಪರಿಪೂರ್ಣವಾದ ಆಯುಸ್ಸು, ಇನ್ನೇನು ಬೇಕು ಜೀವನದ ಸೊಬಗಿಗೆ ? ಅಕಾಲ ಮರಣವೆಂದರೇನೆಂದೇ ಅವರಿಗೆ ತಿಳಿಯದು. ದುರ್ಮರಣದ ವಾರ್ತೆಯೇ ಅತ್ತ ಸುಳಿಯದು. ರಾಮರಾಜ್ಯದ ಹೆಂಗಳೆಯರೆಲ್ಲ ಗಂಡನಿಗೆ ಒಪ್ಪಾಗಿ-ಹದಿಬದೆಯರಾಗಿ ಬಾಳಿದರು; ಮುತ್ತೈದೆಯರಾಗಿಯೆ ತೆರಳಿದರು. ಐದೆತನದ ಸಾಕ್ಷಿಯಾದ ಕೊರಳ ಸೂತ್ರವನ್ನು ಕಳಚುವ, ಹಣೆಯ ಬೊಟ್ಟನ್ನು ಒರಸುವ ವಿಪತ್ತು ಯಾವ ಹೆಂಗಸಿಗೂ ಬರಲಿಲ್ಲ. ಒಟ್ಟಿನಲ್ಲಿ ಪರಮಮಂಗಲನಾದ ರಾಮಚಂದ್ರನ ರಾಜ್ಯದಲ್ಲಿ ಯಾವ ಅಮಂಗಲವೂ ಕಾಲಿಡಲಿಲ್ಲ. ಎಲ್ಲರೂ ಪೂರ್ಣರು. ಎಲ್ಲರೂ ಸುಖಿಗಳು. ಎಲ್ಲರೂ ತೃಪ್ತರು. ಅಲ್ಲಿ ಯಾವುದೂ ದುರ್ಲಭವಾದುದಿಲ್ಲ. ಯಾರು ಏನು ಬಯಸಿ ದರೆ ಅದು ಅಲ್ಲಿ ದೊರೆಯುತ್ತಿತ್ತು. ವೈಕುಂಠವೇನು ಹೆಚ್ಚು, ರಾಮರಾಜ್ಯವೇನು ಕಡಿಮೆ ಎಂದು ಜನರು ಆಡಿಕೊಂಡರು. ರಾಮಚಂದ್ರನೂ ಸೀತೆಯೊಡನೆ ಅರಳುಗಳಿಂದ ತುಂಬಿದ ಅರಮನೆಯ ಉದ್ಯಾನದಲ್ಲಿ ವಿಹರಿಸಿದನು. ಮಿಂಚಿನಂತೆ ಮಿನುಗುವ ಸಂಪಿಗೆಗಳಿಂದ, ಮೆಲುಗಾಳಿಗೆ ನಲುಗುವ ಮೊಲ್ಲೆ ಇರುವಂತಿಕೆಗಳಿಂದ, ಝೇಂಕಾರದ ಓಂಕಾರವನ್ನು ಹಾಡುವ ಪರಮೆಗಳಿಂದ ವಸಂತನು ರಾಮನನ್ನು ಸಂತಸಗೊಳಿಸಿದನು. ಎಲ್ಲ ಋತುಗಳೂ ತಮ್ಮ ಪಾಲಿನ ಸೇವೆಯನ್ನು ನಿರ್ವಹಿಸಿದವು. ರಾಮಚಂದ್ರನ ಆರವೆಯಲ್ಲಿ ಆರು ಋತುಗಳೂ ಏಕಕಾಲದಲ್ಲಿ ಹೂವುಗಳನ್ನರಳಿಸುತ್ತಿದ್ದವು. ಗಂಧರ್ವ ಚಾರಣರು ಅಪ್ಸರೆಯರೊಡನೆ ಬಂದು ಗುಣಗಾನ ಮಾಡುತಿದ್ದರು. ದೇವತೆಗಳು, ಋಷಿಗಳು ಬಂದು ವೇದವೇದಾಂಗ ಗಳಿಂದ ನುತಿಸುತಿದ್ದರು. ಹೀಗೆ ರಾಮಚಂದ್ರನ ರಾಜ್ಯಭಾರ ಹದಿಮೂರು ಸಾವಿರ ವರುಷಗಳ ತನಕ ನಡೆಯಿತು. ರಾಮಚಂದ್ರನ ಕುಲದ ಕೀರ್ತಿಯನ್ನು ಬೆಳಸುವ ಕುಲಾಂಕುರ ವನ್ನು ನೀಡುವುದಕ್ಕಾಗಿ ಸೀತೆ ಬಸುರಿಯಾದಳು. ಇಂದ್ರ-ಅಗ್ನಿ ಗಳು ಕುಶ-ಲವ ನಾಮಧೇಯರಾಗಿ ಸೀತಾಮಾತೆಯ ಗರ್ಭದಿಂದ ಜನಿಸಿದರು. ರಾಮಚಂದ್ರನ ಚರಿತೆಯನ್ನು ಮುನಿಗಳ ಮುಂದೆ ಮೊಟ್ಟಮೊದಲು ಹಾಡಿದ ಕವಿಗಾಯಕರು ಈ ಮಕ್ಕಳು. ಇದು ಯಾರ ಸರದಿ ? ಒಂದು ದಿನ ರಾಮ-ಲಕ್ಷ್ಮಣರು ಮಾತುಕತೆ ನಡೆಸುತ್ತಿದ್ದರು. ಪ್ರಸಂಗವಶಾತ್ ರಾಮಚಂದ್ರನು ರಾಜನೀತಿಯನ್ನು ಲಕ್ಷ್ಮಣನಿಗೆ ಉಪದೇಶಿಸಿದನು: "ಲಕ್ಷಣ, ನಮ್ಮ ರಾಷ್ಟ್ರದ ಪ್ರಜೆಗಳ ಬಯಕೆ ಏನು? ಎಂಥದು? ಎನ್ನುವುದನ್ನು ಜಾಗ್ರತೆಯಿಂದ ವಿಚಾರಿಸುತ್ತಿರು. ಪ್ರಜೆಗಳ ಹಿತದಕಡೆಗೆ ಗಮನವಿರದ ರಾಜನು ಧರ್ಮ-ಕಾಮಗಳಿಂದ ವಿರಹಿತನಾಗುತ್ತಾನೆ. ಅಜಾಗರೂಕತೆಯಿಂದ ನಡೆದುಕೊಂಡ ಅನೇಕ ರಾಜರು ವಿಪ್ರ- ಶಾಪಕ್ಕೆ ಬಲಿಯಾದುದನ್ನು ಇತಿಹಾಸದಲ್ಲಿ ಕಾಣುತ್ತೇವೆ. ನಮ್ಮ ಮೇಲಂತೂ ಈ ಹೊಣೆಗಾರಿಕೆ ವಿಶೇಷವಾಗಿದೆ. ನಾವು ಏನನ್ನು ಹೇಗೆ ಮಾಡಿದರೆ ಜನ ಅದನ್ನು ಹಾಗೆ ಅನುಸರಿಸುತ್ತದೆ. ನಾವು ರಾಜಧರ್ಮದಲ್ಲಿ ಅಸಡ್ಡೆ ತೋರಿದರೆ ಪರಂಪರೆಯೇ ಅದರಿಂದ ಕೆಟ್ಟು ಹೋಗುತ್ತದೆ. " ರಾಮನ ನಿರ್ದೇಶದಂತೆ ಲಕ್ಷ್ಮಣನು ಪ್ರಜಾರಕ್ಷಣೆಯಲ್ಲಿ ಬಹು ಜಾಗರೂಕನಾಗಿದ್ದನು. ಯಾವೊಬ್ಬ ಪ್ರಜೆಯ ಬೇಡಿಕೆಯೂ ವಿಫಲವಾಗಲಿಲ್ಲ. ಒಮ್ಮೆ ಚ್ಯವನ ಮುನಿಗಳ ಮುಂದಾಳುತನದಲ್ಲಿ ತಪಸ್ವಿಗಳ ಗುಂಪೊಂದು ರಾಮನನ್ನು ಕಾಣಬಂತು. ರಾಮಚಂದ್ರನು ಅವರೆಲ್ಲನ್ನು ಬಂಗಾರದ ಪೀಠದಲ್ಲಿ ಕುಳ್ಳಿರಿಸಿ ಸತ್ಕರಿಸಿ , " ಬಂದಕಾರ್ಯವೇನು ? " ಎಂದು ಕೇಳಿದನು. ಮುನಿಗಳು ತಮ್ಮ ಕೊರಗನ್ನು ತೋಡಿಕೊಂಡರು: " ಸ್ವಾಮಿನ್, ನಿನಗೆ ತಿಳಿಯದೆಂಥದು ? ಆದರೂ ನಿನ್ನ ಆಣತಿ- ಯಂತೆ ನಮ್ಮದೊಂದು ವಿಜ್ಞಾಪನೆ. ಮಧುವನ ಎಂಬಲ್ಲಿ ಮಧು ಎಂಬ ಅಸುರನ ಮಗ ಲವಣ ನೆಲಸಿದ್ದಾನೆ. ನಿರುಪದ್ರವಿಯಾದ ಮುನಿಸಂತತಿಯೇ ಅವನಿಗೆ ಆಹಾರ ! ತಪಸ್ಸಿನಿಂದ ರುದ್ರನನ್ನು ಒಲಿಸಿ ಶೂಲವನ್ನು ಬೇರೆ ಪಡೆದಿದ್ದಾನೆ. ಅದರಿಂದ ದೇವತೆಗಳೂ ಅವನಿಗೆ ಹೆದರುವಂತಾಗಿದೆ. ಕಾಡಿನಲ್ಲಿರುವ ತಪಸಿಗಳನ್ನು ಅವನ ಬಾಯಿಂದ ತಪ್ಪಿಸಿ ಕಾಪಾಡುವವರಿಲ್ಲವಾಗಿದೆ. ಅದರಿಂದ ರಾವಣನನ್ನು ಕೊಂದ ಮಹಾವೀರನಾದ ನಿನ್ನ ಬಳಿ ಶರಣು ಬಂದಿದ್ದೇವೆ. ಕಾಪಾಡಬೇಕು ಭಗವನ್." ರಾಮಚಂದ್ರನು ಮುಗುಳುನಗುತ್ತ ತಮ್ಮಂದಿರೆಡೆಗೆ ನೋಡಿ ನುಡಿದನು: " ಇದು ಯಾರ ಸರದಿ ? ಯಾರು ಈ ಕಾರ್ಯವನ್ನು ವಹಿಸಿ-ಕೊಳ್ಳುವಿರಿ?" ಲಕ್ಷ್ಮಣನು ಕೈ ಜೋಡಿಸಿ " ನನಗೆ ಅಪ್ಪಣೆಯಾಗಬೇಕು. "ಎಂದನು. ಭರತನು ಇದು ತನ್ನ ಸರದಿ ಎಂದನು. ಆಗ ಶತ್ರುಘ್ನನು ಎದ್ದು ನಿಂತು ವಿನಂತಿಸಿಕೊಂಡನು: "ಮಹಾರಾಜ, ಲಕ್ಷ್ಮಣನು ಕಾಡಿನಲ್ಲಿ ನಿನ್ನ ಜತೆಗಿದ್ದು ಸೇವೆ ಸಲ್ಲಿಸಿದ್ದಾನೆ. ಭರತನು ಹದಿನಾಲ್ಕು ವರ್ಷ ನಿನಗಾಗಿ ತಾಪಸ ಜೀವನವನ್ನು ಬಾಳಿದ್ದಾನೆ. ಅವರ ಪಾಲಿನ ಸೇವೆಯನ್ನು ಅವರು ಮಾಡಿ ಮುಗಿಸಿದ್ದಾರೆ. ಇದು ನನ್ನ ಸರದಿ. ದ್ರೋಹಿಯಾದ ಲವಣನನ್ನು ನಿನ್ನ ಅನುಗ್ರಹಬಲದಿಂದ ನಾನು ಸಂಹರಿಸುವೆನು. ಶತ್ರುಘ್ನನೆಂಬ ನನ್ನ ಹೆಸರು ಸಾರ್ಥಕವಾಗಲಿ. " ರಾಮಚಂದ್ರನಿಗೆ ತಮ್ಮನ ಜಾಣ್ಮೆಯನ್ನು ಕಂಡು ಸಂತಸ- ವಾಯಿತು. ಕೂಡಲೆ ಅವನನ್ನು ವಸಿಷ್ಠಾದಿಗಳಿಂದ ಅಭಿಷೇಕಿಸಿ ಮಧುವನದ ರಾಜನನ್ನಾಗಿ ಮಾಡಿದನು. ರಾಜ್ಯಾಭಿಷೇಕದಿಂದ ಲಜ್ಜಿತನಾಗಿ ನಿಂತಿರುವ ಶತ್ರುಘ್ನನನ್ನು ಆಲಿಂಗಿಸಿ, ತನ್ನ ಬಾಣ- ವೊಂದನ್ನು ಅವನಿಗಿತ್ತು ರಾಮಚಂದ್ರನು ಸಮಾಧಾನ ಗೊಳಿಸಿದನು : "ಶತ್ರುಘ್ನ, ನಾನಿತ್ತ ಈ ಬಾಣ ಅದ್ಭುತವಾಗಿದೆ ; ಅಮೋಘ- ವಾಗಿದೆ. ಹಿಂದೆ ಕಡಲುದಾರಿ ಬಿಟ್ಟು ಕೊಡದಿದ್ದಾಗ ಇದೇ ಬಾಣ- ವನ್ನು ಹೂಡಿದ್ದೆ. ನಾನು ಮಧುಕೈಟಭರನ್ನು ಕೊಂದುದೂ ಈ ಬಾಣದಿಂದಲೇ. ಇದರಿಂದ ನೀನು ಲವಣವನ್ನು ಅನಾಯಾಸ- ವಾಗಿ ಸಂಹರಿಸಬಹುದು." ಶತ್ರುಘ್ನನು ರಾಮಚಂದ್ರನಿಗೆ, ಗುರುಹಿರಿಯರಿಗೆ ವಂದಿಸಿದನು. ನಾಲ್ಕು ಸಾವಿರ ಕುದುರೆಗಳು, ಎರಡು ಸಾವಿರ ರಥಗಳು, ಒಂದು ನೂರು ಆನೆಗಳು, ಸಾವಿರಾರು ಪದಾತಿಗಳು ಪಯಣಕ್ಕೆ ಸಿದ್ಧರಾಗಿ ನಿಂತರು. ಸೇನೆಯನ್ನು ಮುಂದಿರಿಸಿಕೊಂಡು ವಿಪ್ರಪರಿವೃತನಾದ ಶತ್ರುಘ್ನನು ದೈತ್ಯ ಸಂಹಾರಕ್ಕಾಗಿ ತೆರಳಿದನು. ಕತ್ತಲಾಗುವಾಗ ಸೇನೆ ವಾಲ್ಮೀಕಿ ಮುನಿಗಳ ಆಶ್ರಮದ ಬಳಿ ಬಂದಿತ್ತು. ರಾತ್ರಿ ಅಲ್ಲಿ ತಂಗುವುದೆಂದು ನಿರ್ಣಯವಾಯಿತು. ವಾಲ್ಮೀಕಿ ಮುನಿಗಳು ಕಾಲಿಗೆರಗಿದ ರಾಮಸೋದರನನ್ನು, ಆತನ ಪರಿವಾರವನ್ನು ಆದರದಿಂದ ಸತ್ಕರಿಸಿದರು. ಶಂಬೂಕನಿಂದ ಮಗು ಸತ್ತಿತು ಬೆಳಕು ಹರಿಯಿತು. ಶತ್ರುಘ್ನನು ಮುನಿಗಳಿಂದ ಬೀಳ್ಕೊಂಡು ಉತ್ತರಾಮುಖವಾಗಿ ಹೊರಟನು. ಅಂದೂ ಸಂಜೆಯವರೆಗೆ ಪಯಣ ನಡೆಯಿತು. ಸಂಜೆಯ ಹೊತ್ತು ಸೇನೆ ಯಮುನೆಯ ದಡಕ್ಕೆ ಬಂದಿತ್ತು. ಅಂದು ರಾತ್ರಿ ಎಲ್ಲರೂ ಯಮುನೆಯ ದಡದಲ್ಲಿ ಉಳಿದುಕೊಂಡರು. ಆಗ ಲವಣನ ಪರಾಕ್ರಮದ ಪ್ರಸ್ತಾವವೂ ಬಂತು. ಚ್ಯವನರು ಅವನ ಅಜೇಯ ಬಲವನ್ನು ಶತ್ರುಘ್ನನಿಗೆ ತಿಳಿಯಪಡಿಸಿದರು. ಮರುದಿವಸ ಬೆಳಿಗ್ಗೆ ಎಲ್ಲರೂ ಯಮುನೆಯನ್ನು ದಾಟಿದರು. ಶತ್ರುಘ್ನನು ಧನುರ್ಬಾಣಗಳನ್ನು ಸಜ್ಜುಗೊಳಿಸಿ ಮಧುವನದ ಮಹಾದ್ವಾರದಲ್ಲಿ ನಿಂತುಕೊಂಡನು. ಮಧ್ಯಾಹ್ನದ ಹೊತ್ತು ಲವಣನು ಕಾಣಿಸಿಕೊಂಡನು. ಆಹಾರಕ್ಕಾಗಿ ಕಾಡು ಪ್ರಾಣಿಗಳನ್ನು ಕೊಂದು ಹೊತ್ತುತರುತ್ತಿದ್ದನು. ಬಿಲ್ಲು ಹಿಡಿದು ನಿಂತ ಶತ್ರುಘ್ನನನ್ನು ಕಂಡು ಲವಣನು ಗುಡುಗಿದನು: "ಓ ಮನುಷ್ಯ ಪ್ರಾಣಿಯೆ, ನಿನ್ನಂಥ ಸಾವಿರ ಜನರನ್ನು ತಿಂದು ತೇಗಿದವನು ನಾನು. ನೀನೇಕೆ ನನ್ನ ಬಾಯಿಗೆ ಬೀಳಲು ಬಂದೆ ?" ಬೆದರಿಕೆಯ ಮಾತುಗಳಿಗೆ ಶತ್ರುಘ್ನನು ಸೊಪ್ಪು ಹಾಕುವವನಲ್ಲ. ಅವನೂ ಅಷ್ಟೇ ಸ್ಫುಟವಾಗಿ ಉತ್ತರಿಸಿದನು : "ಈ ಬಡಬಡಿಕೆಗಳೆಲ್ಲ ಏಕೆ ? ನಾನು ರಾಮಚಂದ್ರನ ತಮ್ಮ ಎಂಬುದು ನಿನಗೆ ತಿಳಿದಿರಲಿ. ನಿನ್ನೊಡನೆ ದ್ವಂದ್ವಯುದ್ಧಕ್ಕಾಗಿ ಬಂದಿದ್ದೇನೆ. ಸಿದ್ಧನಾಗು." "ಸಂಬಂಧದಲ್ಲಿ ರಾವಣನೂ ನಾನೂ ಬಂಧುಗಳು, ಅವನನ್ನು ರಾಮ ಕೊಂದಿದ್ದಾನೆ. ಅದರಿಂದ ರಾಮನ ತಮ್ಮನಾದ ನಿನ್ನನ್ನು ಕೊಲ್ಲುವುದು ನನಗೆ ಸಂತಸದ ಮಾತು. ಆದರೆ ಆಯುಧವನ್ನು ತರುವವರೆಗೆ ಸ್ವಲ್ಪ ತಡೆ." "ನೀನು ಬ್ರಹ್ಮದ್ವೇಷಿ, ವಂಚಕ, ನಿನ್ನಂಥ ಮಾಯಾವಿಗಳು ನನ್ನ ಕಣ್ಣಿಗೆ ಬಿದ್ದ ಮೇಲೆ ಜೀವಂತವಾಗಿ ತೆರಳಲಾರರು. ನಾನು ನಿನ್ನನ್ನು ಹೋಗಗೊಡಲಾರೆ." ಶತ್ರುಘ್ನನ ಬಿರುನುಡಿಗಳಿಂದ ಲವಣನ ಕೋಪ ಮಿತಿಮೀರಿತು. ಅವನು ದೊಡ್ಡ ಮರವೊಂದನ್ನು ಕಿತ್ತು ಕದನಕ್ಕೆ ಅಣಿಯಾದನು. ಶತ್ರುಘ್ನನು ಕತ್ತರಿಸಿದಷ್ಟು ಬಾರಿ ಹೊಸ ಮರಗಳು ಅವನ ಕೈ- ಯಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಲವಣನ ಕೈಚಳಕ ಅಚ್ಚರಿ- ಯನ್ನುಂಟು ಮಾಡುವಂತಿತ್ತು ! ಶತ್ರುಘ್ನನು ನೂರಾರು ಬಾಣಗಳನ್ನು ಲವಣನ ಎದೆಗೆ ಗುರಿ ಯಿಟ್ಟನು. ಲವಣನು ಅದನ್ನು ಲೆಕ್ಕಿಸದೆ ಮಹಾವೃಕ್ಷವೊಂದ- ರಿಂದ ಶತ್ರುಘ್ನನನ್ನು ಹೊಡೆ ದನು. ಶತ್ರುಘ್ನ ಮೂರ್ಛಿತನಾಗಿ ಕುಸಿದು ಬಿದ್ದನು. ಮುನಿಗಳ ಹಾಹಾಕಾರವನ್ನು ಲವಣನ ವಿಜಯಾಟ್ಟಹಾಸ ಮೀರಿಸಿತು ! ಕ್ಷಣದಲ್ಲಿ ಶತ್ರುಘ್ನನಿಗೆ ತಿಳಿವು ಬಂತು. ಲವಣನ ಅಟ್ಟಹಾಸ ಮುಗಿವ ಮುನ್ನ ರಾಮಾನುಜನು ರಾಮದತ್ತವಾದ ಬಾಣವನ್ನು ಧನುಸ್ಸಿಗೆ ಹೂಡಿದನು. ಬಾಣದ ಝಳಪಿಗೆ ಜಗತ್ತೆ ತಳಮಳ- ಗೊಂಡಿತು. ಬಿಲ್ಲಿನಿಂದ ಚಿಮ್ಮಿದ ಬಾಣ ಲವಣನನ್ನು ಕೊಂದು ರಸಾತಳವನ್ನು ಸೀಳಿ, ರಾಮನನ್ನು ಬಂದು ಸೇರಿತು. ಲವಣನ ಕತೆ ಕೊನೆಗೊಂಡಿತು. ಶತ್ರುಘ್ನನೇ ಮಧುವನದ ರಾಜನಾದನು. ಸಂಪದ್ಭರಿತವಾದ ಆ ನಾಡನ್ನು ಜನ ಮಧುರೆ ಎಂದು ಕರೆದರು. ಈ ಪ್ರಸಂಗ ನಡೆದು ಹನ್ನೆರಡು ವರ್ಷಗಳು ಕಳೆದವು. ಶತ್ರುಘ್ನ ನಿಗೆ ರಾಮಚಂದ್ರನನ್ನು ಕಾಣುವ ಬಯಕೆಯಾಯಿತು. ಅವನು ಸೇನೆಯನ್ನು ಮಧುರೆಯಲ್ಲಿ ನಿಲ್ಲಿಸಿ ಕೋಸಲಕ್ಕೆ ತೆರಳಿದನು. ದಾರಿಯಲ್ಲಿ ಸಿಕ್ಕಿದ ವಾಲ್ಮೀಕಿಗಳ ಆಶ್ರಮದಲ್ಲಿ ಒಂದು ರಾತ್ರಿ- ಯನ್ನು ಕಳೆದನು. ಲವಣನ ಸಂಹಾರದಿಂದ ವಾಲ್ಮೀಕಿಗಳಿಗೂ ಸಂತಸವಾಗಿತ್ತು. ಅವರು ಶತ್ರುಘ್ನನನ್ನು ವಿಶೇಷವಾಗಿ ಸತ್ಕರಿಸಿದರು. ರಾತ್ರಿಯ ಹೊತ್ತು. ಎಲ್ಲರೂ ಮಲಗಿದ್ದರು. ವಾತಾವರಣ ನೀರವವಾಗಿತ್ತು. ಆಶ್ರಮದ ಗುಡಿಸಲೊಂದರಲ್ಲಿ ಯಾರೋ ರಾಮಾಯಣವನ್ನು ಹಾಡುತಿದ್ದರು. ಇಂಪಾದ ಸಂಗೀತ ರಾತ್ರಿಯ ಮೌನವನ್ನು ಭೇದಿಸಿ ಅಲೆಯಲೆಯಾಗಿ ಹರಿದಿತ್ತು. ಶತ್ರುಘ್ನನ ಸೇನೆಯ ಜನಕ್ಕೆ ಎಲ್ಲಿಲ್ಲದ ಅಚ್ಚರಿ. ರಾಮಚಂದ್ರನ ಚರಿತೆಯನ್ನು ಕಣ್ಣಿಗೆ ಕಟ್ಟುವಂತೆ, ಮನಕ್ಕೆ ಮುಟ್ಟುವಂತೆ ಹಾಡುತ್ತಿರುವ ಈ ಗಾನಗಂಧರ್ವರು ಯಾರು ? ಆದರೆ ಯಾರಿಗೂ ಕೇಳುವ ಧೈರ್ಯವಿಲ್ಲ. ಮಹರ್ಷಿಗಳ ಆಶ್ರಮದಲ್ಲಿ ಎಲ್ಲಿ ಏನು ತಪ್ಪಾದೀತೋ ಎನ್ನುವ ಭಯ. ಕಿವಿಗೆ ಅಮೃತ ಸುರಿದಂತೆ ಸುಳಿಯುವ ಗಾನ ಲಹರಿಯಲ್ಲಿ ಮೈಮರೆತ ಶತ್ರುಘ್ನನಿಗಂತೂ ಬೆಳಗಿನವರೆಗೂ ಜಾಗರವೇ. ಕೊನೆಗೂ ಇದು ಕುಶಲವರ ಕಂಠಶ್ರೀ ಎಂದು ಯಾರಿಗೂ ತಿಳಿಯಲಿಲ್ಲ ! ಬೆಳ್ಳಿ ಮೂಡಿತು. ಮುನಿಗಳ ಅಪ್ಪಣೆ ಪಡೆದು ಶತ್ರುಘ್ನನು ಪರಿವಾರದೊಡನೆ ಅಯೋಧ್ಯೆಗೆ ತೆರಳಿದನು. ರಾಮಚಂದ್ರನನ್ನು ಕಾಣುವಲ್ಲಿ ಎಲ್ಲರಿಗೂ ತ್ವರೆ. ರಾಮಪಾದಗಳಿಗೆ ಎರಗುವವರೆಗೆ ಅವಸರ. ಸೇನೆ ಅಯೋಧ್ಯೆಗೆ ತಲಪಿತು. ಶತ್ರುಘ್ನನು ತಾಯಿಯೆಡೆಗೆ ಹಾರುವ ಕರುವಿನಂತೆ ತವಕದಿಂದ ಬಂದು ರಾಮನ ಚರಣಗಳಿಗೆ ವಂದಿಸಿ ವಿನಂತಿಸಿಕೊಂಡನು : "ರಾಮಚಂದ್ರ, ನಿನ್ನ ಸನ್ನಿಧಾನವನ್ನು ದೂರಗೊಳಿಸುವ ಸಾಮ್ರಾಜ್ಯ ಭೋಗ ನನಗೆ ಬೇಡ. ಮಧುರೆಯನ್ನು ಯಾರಾದರೂ ಆಳಲಿ, ರಾಜತ್ವದ ಕಿರೀಟ ಯಾರ ತಲೆಯಲ್ಲಾದರೂ ಬೀಳಲಿ. ನನ್ನನ್ನು ನಿನ್ನ ಬಳಿ ಇರಗೊಡು." "ಶತ್ರುಘ್ನ, ನೀನು ಕ್ಷತ್ರಿಯ ವಂಶದವನು. ಪ್ರಜೆಗಳ ಸೇವೆ ಮಾಡು ವುದು ಕ್ಷತ್ರಿಯರ ಧರ್ಮ. ಅದನ್ನು ನೀನು ಮಾಡುತ್ತಿರಬೇಕು. ಅದರಿಂದ ನೀನು ನನ್ನ ಸೇವೆಯನ್ನೂ ಮಾಡಿದಂತಾಗುವುದು. ಜನತೆಯ ಸೇವೆಯೇ ನನ್ನ ಸೇವೆ." ಐದು ದಿನಗಳ ಕಾಲ ಶತ್ರುಘ್ನನು ರಾಮಚಂದ್ರನೊಡನೆ ಅಯೋಧ್ಯೆಯಲ್ಲಿಉಳಿದನು. ಅನಂತರ ರಾಮಚಂದ್ರನ ಆಜ್ಞೆ- ಯಂತೆ ಮತ್ತೆ ಮಧುರೆಗೆ ಮರಳಿದನು. ಒಮ್ಮೆ ಒಬ್ಬ ವೃದ್ಧ ಬ್ರಾಹ್ಮಣನು ಅರಮನೆಯ ಬಾಗಿಲಲ್ಲಿ ತನ್ನ ಮಗನ ಮೃತ ಕಳೇಬರವನ್ನಿರಿಸಿ ರೋದಿಸತೊಡಗಿದನು : "ರಾಮರಾಜ್ಯದಲ್ಲಿ ಎಂದೂ ಅಪಮೃತ್ಯು ಸಂಭವಿಸಿದುದಿಲ್ಲ. ಓ ನನ್ನ ಒಲವಿನ ಕಂದನೆ, ಓ ನನ್ನ ಕಣ್ಮಣಿಯೆ, ನಿನಗೆಲ್ಲಿಂದ ಬಂತು ಈ ಕುತ್ತು ? ಹೊಸ ಹರೆಯದ ನಿನ್ನನ್ನು ಕಳೆದುಕೊಳ್ಳಲು ನಾನೇನು ಪಾಪ ಮಾಡಿರುವೆ ? ಏಳು ಮಗುವೆ ಎದ್ದು ನಿಲ್ಲು. ನಿನ್ನ ಮುದ್ದು ಮಾತುಗಳಿಂದ ನಮ್ಮನ್ನು ಸಂತಸಗೊಳಿಸು. ಇಲ್ಲದಿದ್ದರೆ ನಾನೂ ನಿನ್ನ ತಾಯಿಯೂ ನಿನ್ನ ಜತೆಯೇ ಬಂದು ಬಿಡುವೆವು. ಲೋಕೈಕನಾಥನಾದ ರಾಮಚಂದ್ರನೇ ನನಗೆ ಶರಣು. ಆ ಕರುಣಾಳುವೇ ನನ್ನ ಕಂದನನ್ನು ಬದುಕಿಸಬೇಕು." ಈ ಮಾತು ರಾಜಸಭೆಯವರೆಗೆ ಮುಟ್ಟಿತು. ಸಭೆಯಲ್ಲಿದ್ದ ನಾರದ ಮಹರ್ಷಿಗಳು ರಾಮಚಂದ್ರನ ಬಳಿ ನಿವೇದಿಸಿಕೊಂಡರು : "ಪ್ರಭುವೆ, ಯಾರದೋ ತಪ್ಪಿಗೆ ಈ ವಿಪ್ರನು ಶಿಕ್ಷೆಯನ್ನನುಭವಿ- ಸುತ್ತಿದ್ದಾನೆ. ಯಾರೋ ತಮ್ಮ ಅಳವಿಗೆ ಮೀರಿದ ಕೆಲಸಕ್ಕೆ ಕೈ ಹಾಕಿದ್ದಾರೆ; ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರಿ ನಡೆದಿದ್ದಾರೆ. ಎಲ್ಲೋ ಒಂದೆಡೆ ಸ್ವಧರ್ಮಕ್ಕೆ ಚ್ಯುತಿ ಬಂದಿದೆ. ಅಂಥ ಜನಕ್ಕೆ ತಕ್ಕ ಶಿಕ್ಷೆ ಮಾಡೋಣವಾಗಲಿ. ಆಗ ಎಲ್ಲ ಸರಿ ಹೋಗುವುದು." ರಾಮಚಂದ್ರನು ನಾರದರ ಸಲಹೆಯನ್ನು ಒಪ್ಪಿದನು. ಲಕ್ಷ್ಮಣ ನು ವಿಪ್ರನನ್ನು ಸಂತೈಸಿದನು. ನೆನಸಿದ ಮಾತ್ರಕ್ಕೆ ಬಳಿಗೆ ಬಂದ ಪುಷ್ಪಕವನ್ನೇರಿ ರಾಮಚಂದ್ರನು ಹೊರಟನು. ವಿಮಾನ ದಕ್ಷಿಣಾ- ಭಿಮುಖವಾಗಿ ಹೊರಟಿತು. ಶೈವಲ ಪರ್ವತದ ಉತ್ತರಭಾಗದಲ್ಲಿ ಒಂದು ಸರೋವರದ ಬಳಿ ತಲೆಕೆಳಗಾಗಿ ಜೋತು ಬಿದ್ದು ತಪಸ್ಸು- ಗೈಯುತ್ತಿರುವ ಒಬ್ಬ ತಪಸ್ವಿ ಕಾಣಿಸಿಕೊಂಡನು. ರಾಮಚಂದ್ರನು ಅವನನ್ನು ಯಾರು ? ಏತಕ್ಕಾಗಿ ಈ ತಪದ ಸಾಹಸ?" ಎಂದು ವಿಚಾರಿಸಿದನು. ಶೂದ್ರ ತಪಸ್ವಿ ತನ್ನ ಕಥೆಯನ್ನರುಹಿದನು : "ನಾನು ಶಂಬೂಕನೆಂಬ ಶೂದ್ರ ತಾಪಸನು. ರುದ್ರಪದವನ್ನು ಪಡೆವ ಹಂಬಲಿನಿಂದ ಈ ತಪಸ್ಸಿಗೆ ತೊಡಗಿದ್ದೇನೆ." . ಒರೆಯಿಂದ ಹೊರಚಿಮ್ಮಿದ ರಾಮಚಂದ್ರನ ಕತ್ತಿ ತಪಸ್ವಿಯ ತಲೆಯನ್ನು ಕತ್ತರಿಸಿತು. ಶಂಬೂಕನು ಮೂಲತಃ ಒಬ್ಬ ಅಸುರ. ರುದ್ರನಾಗುವ ಬಯಕೆ ಬೇರೆ ಅವನಿಗೆ. ಇಂಥವರಿಂದಲೆ ಲೋಕ ದಲ್ಲಿ ಧರ್ಮಗ್ಲಾನಿಯಾಗುತ್ತಿರುವುದು. ತಮ್ಮ ಸ್ಥಾನಮಾನಗಳ ಅರಿವಿಲ್ಲದೆ ದೊಡ್ಡ ಹುದ್ದೆಯನ್ನು ಬಯಸುವುದು ತಪ್ಪಲ್ಲವೆ ? ತಮಗೆ ನಿಲುಕದ ಹುದ್ದೆಯನ್ನೇರಿದ ಜನ ಲೋಕವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಾರೆ. ಎಂತಲೇ ರಾಮಚಂದ್ರನು ಈ ಅಯೋಗ್ಯ ಕಾಮನೆಗೆ ಸರಿಯಾದ ಶಿಕ್ಷೆಯನ್ನು ವಿಧಿಸಿದನು. ಅಧರ್ಮದ ತಲೆ ಕತ್ತರಿಸಿದಾಗ ಧರ್ಮ ಬದುಕಿಕೊಂಡಿತು. ಒಬ್ಬನ ಸಾವು ಇನ್ನೊಬ್ಬನ ಬದುಕಾಯಿತು. ಬ್ರಾಹ್ಮಣನ ಪುತ್ರ ವೃದ್ಧ ದಂಪತಿಗಳಲ್ಲಿ ಸಂತಸವನ್ನು ತುಂಬುತ್ತ ಎದ್ದು ಕುಳಿತನು. ಶಂಬೂಕನನ್ನು ಕೊಂದ ಮೇಲೆ ರಾಮಚಂದ್ರನು ಪಕ್ಕದಲ್ಲಿ ಇದ್ದ ಅಗಸ್ತ್ಯಾಶ್ರಮಕ್ಕೆ ತೆರಳಿದನು. ಅಗಸ್ತ್ಯರು ಬಾಡದ ಹೂ ಮಾಲೆಯೊಂದನ್ನು ರಾಮಚಂದ್ರನಿಗೆ ಅರ್ಪಿಸಿ ಬಿನ್ನವಿಸಿ ಕೊಂಡರು : "ರಾಮಭದ್ರ, ಹಿಂದೆ ಶ್ವೇತನೆಂಬ ರಾಜನು ಅನ್ನದಾನವಿಲ್ಲದ ಯಾಗವನ್ನು ಮಾಡಿದನು. ಅದರ ಫಲವಾಗಿ ಕೊನೆಗೆ ಅವನು ಹಸಿವಿನ ಬಾಧೆಗಾಗಿ ತನ್ನ ಮಾಂಸವನ್ನೇ ಕಿತ್ತು ತಿನ್ನಬೇಕಾಯಿತು. ಆ ಪಾಪದ ಪರಿಹಾರಕ್ಕಾಗಿ ಅವನು ಬ್ರಹ್ಮದೇವರ ನಿಯೋಗದಂತೆ ಈ ಮಾಲೆಯನ್ನು ನನಗೆ ಅರ್ಪಿಸಿದನು. ಅದನ್ನು ನಾನೀಗ ನಿನಗೆ ಅರ್ಪಿಸುತ್ತಿದ್ದೇನೆ. ಸ್ವೀಕರಿಸಬೇಕು." ಮುನಿಗಳೊಡನೆ ಮಾತು-ಕತೆ ಮುಂದುವರಿಯುತ್ತಿದ್ದಂತೆಯೇ ಕತ್ತಲಾಯಿತು. ಅ ರಾತ್ರಿ ರಾಮಚಂದ್ರನು ಅಲ್ಲೇ ಉಳಿದು- ಕೊಂಡನು. ಮರುದಿನ ಮುಂಜಾನೆ ಹೊರಟು ನಿಂತ ರಾಮಚಂದ್ರನು ಮುನಿಗಳನ್ನು ಪ್ರಶಂಸಿಸಿದನು: "ಮಹರ್ಷಿ ಅಗಸ್ತ್ಯರೆ, ನೀವು ಜ್ಞಾನಿಗಳು. ಪರಮ ಪಾವನರು. ನಿಮ್ಮನ್ನು ಮತ್ತೊಮ್ಮೆ ನೋಡುವ ಯೋಗ ದೊರಕಲಿ." ಮುನಿಗಳಿಗೆ ಆನಂದದಿಂದ ಕಣ್ಣು ಒದ್ದೆಯಾಯಿತು. ಅವರು ಗದ್ಗದಿತರಾಗಿ ನುಡಿದರು : "ಭಗವನ್, ನಾನು ಪಾವನನು ನಿಜ, ಅದು ನಿನ್ನ ಪಾದಪದ್ಮಗಳ ಸ್ಮರಣೆಯ ಫಲ. ನಿನ್ನ ಭಜನೆಯಿಂದ ಮಹಾಪಾತಕಿಗಳೂ ಪರಮ ಪಾವನರಾಗುವರು. ಓ ಮಂಗಲ ಚರಿತನೆ, ನಿನಗೆ ಅನಂತ ವಂದನೆ ಗಳು, ಈ ಭಕ್ತನ ಮೇಲೆ ಕರುಣೆಯಿರಲಿ." ಭಗವಂತನ ಮಂದಹಾಸವೇ ಮುನಿಗಳನ್ನು ಅಭಿನಂದಿಸಿತು. ಅನಂತರ ರಾಮಚಂದ್ರನು ವಿಮಾನವನ್ನೇರಿ ಅಯೋಧ್ಯೆಗೆ ಬಂದನು. ವಿಮಾನ ಕುಬೇರಪುರಿಗೆ ತೆರಳಿತು. ಒಮ್ಮೆ ರಾಮಚಂದ್ರನು ಲಕ್ಷ್ಮಣನನ್ನೂ ಭರತನನ್ನೂ ಕರೆಸಿ ಯಾಗದ ಪ್ರಸ್ತಾವವನ್ನೆತ್ತಿದನು. ಅಶ್ವಮೇಧವನ್ನಾಚರಿಸುವ ರಾಮಚಂದ್ರನ ಬಯಕೆ ತಮ್ಮಂದಿರಿಗೂ ಇಷ್ಟವಾಯಿತು. ವಸಿಷ್ಠಾದಿಗಳನ್ನು ಕರೆಸಿ ಈ ವಿಷಯವನ್ನು ಅರುಹಿಯೂ ಆಯಿತು. ಯಾಗದ ಸನ್ನಾಹಕ್ಕಾಗಿ ರಾಮಚಂದ್ರನು ಲಕ್ಷ್ಮಣನನ್ನು ಆಜ್ಞಾಪಿಸಿದನು: "ಲಕ್ಷಣ, ಸುಗ್ರೀವನು ಎಲ್ಲ ಕಪಿ ಪರಿವಾರದೊಡನೆ ಬರುವಂತೆ ಕರೆ ಕಳುಹಿಸು, ವಿಭೀಷಣನೂ ರಾಕ್ಷಸರೊಡನೆ ಬರಲಿ. ಎಲ್ಲ ಋಷಿಗಳೂ ಸಮಸ್ತ ಪ್ರಜೆಗಳೂ ಯಾಗದಲ್ಲಿ ಭಾಗವಹಿಸುವಂತೆ ಆಹ್ವಾನ ಕಳುಹಿಸು. ಪ್ರಪಂಚದ ಎಲ್ಲ ಅರಸರೂ ಎಲ್ಲ ವಿಪ್ರರೂ ಸಪತ್ನೀಕರಾಗಿ ಅಶ್ವಮೇಧಕ್ಕೆ ಚಿತ್ತೈಸಲಿ. ನೈಮಿಷಾರಣ್ಯದಲ್ಲಿ ಗೋಮತಿಯ ತಡಿಯಲ್ಲಿ ಯಜ್ಞಭೂಮಿ ಯನ್ನು ಸಜ್ಜುಗೊಳಿಸು. ವಸಿಷ್ಠರ ನಿರ್ದೇಶದಂತೆ ಎಲ್ಲ ಸಾಮಗ್ರಿ ಗಳ ಸಿದ್ಧತೆ ನಡೆಯಲಿ, ಬೇಕಾದಷ್ಟು ಬೆಳ್ಳಿ-ಬಂಗಾರಗಳನ್ನೂ ಆಹಾರಧಾನ್ಯಗಳನ್ನೂ ಮುಂದಾಗಿ ಭರತನು ವಾಹನಗಳಲ್ಲಿ ಸಾಗಿಸಲಿ. ಸೀತೆಯ ಬಂಗಾರದ ಪ್ರತಿಮೆ ಯಾಗದಲ್ಲಿ ನನ್ನ ಸಹಧರ್ಮಚಾರಿಣಿಯಾಗಲಿ." ಲಕ್ಷ್ಮಣನೂ ಭರತನೂ ತಮ್ಮ ಪಾಲಿನ ಕರ್ತವ್ಯವನ್ನು ದಕ್ಷತೆ- ಯಿಂದ ನಿರ್ವಹಿಸಿದರು. ಲಕ್ಷಣವಾದ ಕುದುರೆಯೊಂದನ್ನು ಪೂಜಿಸಿ ವಿಜಯಯಾತ್ರೆಗೆಂದು ಬಿಡಲಾಯಿತು. ಶತ್ರುಘ್ನನು ಅದರ ಬೆಂಗಾವಲಾಗಿ ನಡೆದನು. ವಿಜಯಪತಾಕೆಯೊಡನೆ ಕುದುರೆ ಮರಳಿಯೂ ಆಯಿತು. ವಿಪ್ರಪರಿವೃತನಾದ ರಾಮಚಂದ್ರನು ನೈಮಿಶಾರಣ್ಯದಲ್ಲಿ ಯಾಗ ಭೂಮಿಗೆ ತೆರಳಿದನು. ಸಕಲ ರಾಷ್ಟ್ರಗಳಿಂದಲೂ ಸಾಮಂತ ರಾಜರು ಕಪ್ಪ ಕಾಣಿಕೆಗಳನ್ನು ತಂದು ಒಪ್ಪಿಸಿದರು. ಭರತ-ಶತ್ರುಘ್ನರು ಅತಿಥಿಗಳನ್ನು ಯಥಾವತ್ತಾಗಿ ಸತ್ಕರಿಸಿದರು. ಭೋಜನದ ವ್ಯವಸ್ಥೆಗೆ ಸುಗ್ರೀವಾದಿಗಳು ನೆರವಾದರು. ವಿಭೀಷಣನೂ ಅವನ ಪರಿವಾರದವರೂ ಋಷಿಗಳ ಸೇವೆಯನ್ನು ಮಾಡಿದರು. ರಾಕ್ಷಸರಿಂದ ಋಷಿಗಳು ಸೇವೆಯನ್ನು ಪಡೆದರು ! ಪರಮಪುರುಷನ ಯಾಗಕ್ಕೆ ಬ್ರಹ್ಮಾದಿ ದೇವತೆಗಳೂ ಚಿತ್ತೈಸಿ- ದ್ದರು. ಹನುಮಂತನು ಅವರನ್ನೆಲ್ಲ ಸತ್ಕರಿಸಿದನು. ಎಲ್ಲರಿಗೂ ಎಲ್ಲರೂ ಎಲ್ಲವನ್ನೂ ಕೊಟ್ಟರು. ತೆಗೆದುಕೊಂಡ ಕೈ ಸೋತಿತಾ- ಗಲಿ, ಕೊಟ್ಟ ಕೈ ಸೋಲಲಿಲ್ಲ. ಒಂದು ವರ್ಷದವರೆಗೆ ಅಖಂಡವಾಗಿ ನಡೆದ ಈ ಯಾಗದ ವೈಭವವನ್ನು ಕಂಡು ಪುಲಕಿತರಾದ ಮುನಿಗಳು ಕೊಂಡಾಡಿ- ದರು. "ಇಂಥ ಯಾಗ ಈ ವರೆಗೆ ನಡೆದುದಿಲ್ಲ; ಇನ್ನು ನಡೆಯಲಾರದು. ಇದಕ್ಕೆ ಸಾಟಿಯಾದ ಯಾಗ ಇದೊಂದೇ ಸರಿ. ಯಜ್ಞೇಶ್ವರನ ಯಜ್ಞಕ್ಕೆ ಸಮನಾದ ಯಜ್ಞವನ್ನು ಮಾಡುವ ಅದಟಾದರೂ ಯಾರಿಗಿದೆ ?" ಮೂರು ಕೋಟಿ ಮೂರ್ಖರು ಅಶ್ವಮೇಧವೊಂದೇ ಏನು ? ಅಗ್ನಿಷ್ಟೋಮ-ವಾಜಪೇಯ ಮುಂತಾದ ಅನೇಕ ಯಾಗಗಳನ್ನು ರಾಮಚಂದ್ರನು ನೆರವೇರಿಸಿ ದನು. ಹೀಗೆ ರಾಷ್ಟ್ರ ಧರ್ಮಮಯವಾಗಿತ್ತು. ಸಂಪದದ ನೆಲೆ- ಯಾಗಿತ್ತು. ವಿಪತ್ತು ಅಲ್ಲಿಗೆ ಸುಳಿಯಲೇ ಇಲ್ಲ. ಕೆಲಕಾಲದಲ್ಲಿ ಕೌಸಲ್ಯ ಮುಂತಾದ ರಾಜಮಾತೆಯರು ಮೃತ ರಾದರು. ರಾಮಚಂದ್ರನು ಅವರ ಅಂತ್ಯಕ್ರಿಯೆಯನ್ನು ವಿಜೃಂಭಣೆಯಿಂದ ನೆರವೇರಿಸಿ ಬ್ರಾಹ್ಮಣರ ಕೈತುಂಬ ದುಡ್ಡು ಸುರಿದನು. ಕೇಕಯ ರಾಜನಾದ ಯುಧಾಜಿತ್ತು ಒಮ್ಮೆ ಗಾರ್ಗ್ಯಮುನಿ- ಗಳನ್ನು ರಾಮಚಂದ್ರನೆಡೆಗೆ ಕಳಿಸಿಕೊಟ್ಟನು. ಗಾರ್ಗ್ಯರು ಯುಧಾಜಿತ್ತು ಕೊಟ್ಟಿರುವ ಅಮೌಲ್ಯ ವಸ್ತುಗಳ ಕಾಣಿಕೆಯನ್ನು ಪ್ರಭುವಿಗೆ ಒಪ್ಪಿಸಿದರು. ರಾಮಚಂದ್ರನೂ ಮುನಿಗಳನ್ನು ವಿಧಿ- ವತ್ತಾಗಿ ಪೂಜಿಸಿದನು. ಅನಂತರ ಮುನಿಗಳು ತಾವು ಬಂದ ಕಾರ್ಯವನ್ನು ಅರುಹಿದರು: "ರಾಮಚಂದ್ರ, ಶೈವಾಕ್ಷನೆಂಬ ಗಂಧರ್ವನ ಮಕ್ಕಳು ಮೂರ್ಖ- ತನದಿಂದ ವರ್ತಿಸುತ್ತಿದ್ದಾರೆ. ಅವರ ಸಂಖ್ಯೆ ಒಂದಲ್ಲ, ಎರಡಲ್ಲ ಮೂರು ಕೋಟಿ ! ಅವರ ಪೀಡೆಯಿಂದ ಜನ ಕಂಗಾಲಾಗಿದೆ. ಆ ಮೂರ್ಖರ ಸಂಹಾರವಾಗದಿದ್ದರೆ ಲೋಕಕ್ಕೆ ಕ್ಷೇಮವಿಲ್ಲ. ಇದನ್ನು ಸನ್ನಿಧಾನದಲ್ಲಿ ಅರುಹಲು ನಾನು ಕೇಕಯರಾಜನಿಂದ ನಿಯುಕ್ತನಾಗಿ ಬಂದಿದ್ದೇನೆ." ರಾಮಚಂದ್ರನು ಗಂಧರ್ವಪುತ್ರರ ವಿನಾಶಕ್ಕಾಗಿ ಭರತನನ್ನು ಕಳಿಸಿಕೊಟ್ಟನು. ಸೇನಾಸಮೇತನಾದ ಭರತನು ಹದಿನೈದು ದಿನ- ಗಳ ಪ್ರಯಾಣದ ನಂತರ ಕೇಕಯವನ್ನು ತಲುಪಿದನು. ಅಲ್ಲಿ ಕೇಕಯರಾಜನೂ ಸೇನಾಸಹಿತನಾಗಿ ಇವನೊಡನೆ ಸೇರಿ- ಕೊಂಡನು. ಗಂಧರ್ವ ನಗರವನ್ನು ಮುತ್ತಿದ ಭರತನ ಸೇನೆ ಯುದ್ಧಾಹ್ವಾನ ಕ್ಕಾಗಿ ಶಂಖನಾದವನ್ನು ಮಾಡಿತು. ಸಿಂಹದಂತೆ ಬಲಶಾಲಿಗಳಾದ ಮೂರು ಕೋಟಿ ಗಂಧರ್ವರೂ ಭರತನ ಸೇನೆಯನ್ನು ಎದುರಿಸಿ ದರು. ಏಳು ದಿನಗಳ ತನಕ ಭಯಾನಕವಾದ ಯುದ್ಧ ನಡೆಯಿತು. ಇನ್ನು ಶತ್ರುಗಳನ್ನು ಜೀವಂತವಾಗಿ ಬಿಡುವುದು ಸರಿಯಲ್ಲ ಎನ್ನಿಸಿತು ಭರತನಿಗೆ. ಕೂಡಲೆ ಅವನು ಸಂವರ್ತನಾಮಕವಾಗದ ಕಾಲಾಸ್ತ್ರವನ್ನು ಪಯೋಗಿಸಿದನು. ಮೂರು ಕೋಟಿಯೇನು ? ಮುನ್ನೂರು ಕೋಟಿ ಯೇನು ? ಕಾಲಾಸ್ತ್ರಕ್ಕೊಂದು ಎಣೆಯೆ ? ಕ್ಷಣಮಾತ್ರದಲ್ಲಿ ಎಲ್ಲ ಗಂಧರ್ವರೂ ಕಾಲಾಸ್ತ್ರಕ್ಕೆ ಬಲಿಯಾದರು. ರಣರಂಗದಲ್ಲಿ ಮೂರು ಕೋಟಿ ಹೆಣಗಳುರುಳಿದವು. ನರಿಹದ್ದುಗಳಿಗೆ ಅವುತಣ ದೊರಕಿದಂತಾಯಿತು. ಲೋಕದ ಜನ ಸಂತಸದ ಉಸಿರನ್ನೆಳೆ- ಯಿತು. ಭರತನು ತನ್ನ ಇಬ್ಬರು ಮಕ್ಕಳಲ್ಲಿ ಪುಷ್ಕರನನ್ನು ಪುಷ್ಕರಾ- ವತಿಯಲ್ಲಿ ,ತಕ್ಷನನ್ನು ತಕ್ಷಶಿಲೆಯಲ್ಲಿ ನೆಲೆಗೊಳಿಸಿದನು. ಐದು ವರ್ಷಗಳತನಕ ಅವರ ಜತೆಯಿದ್ದು ಕೊನೆಗೆ ರಾಜ್ಯದ ಸಂಪೂರ್ಣ ಭಾರವನ್ನು ಅವರಿಗೆ ಒಪ್ಪಿಸಿ ರಾಮಚಂದ್ರನ ಬಳಿಗೆ ತೆರಳಿದನು. ಭರತನ ಕಾರ್ಯವನ್ನು ರಾಮಚಂದ್ರನು ಮೆಚ್ಚಿ ಪ್ರಶಂಸಿಸಿ ದನು. ಹಾಗೆಯೇ ಲಕ್ಷ್ಮಣನ ಮಕ್ಕಳಿಗೂ ರಾಜ್ಯ ನಿರ್ಮಾಣ- ವಾಯಿತು. ಕಾರುಪಥದಲ್ಲಿ ನಿರ್ಮಿತವಾದ 'ಅಂಗದೀಯ' ಎಂಬ ನಗರದಲ್ಲಿ ಲಕ್ಷ್ಮಣನ ಹಿರಿಯ ಮಗ ಅಂಗದನು ರಾಜನಾದನು. ಮಲ್ಲಭೂಮಿ ಎಂಬಲ್ಲಿರುವ ಚಂದ್ರಕಾಂತಪುರಿಯಲ್ಲಿ ಎರಡ ನೆಯ ಕುಮಾರ ಚಂದ್ರಕೇತು ಅರಸನಾದನು. ಅಂಗದನ ಜತೆಗೆ ಲಕ್ಷ್ಮಣನೂ ಚಂದ್ರಕೇತುವಿನ ಜತೆಗೆ ಭರತನೂ ಒಂದು ವರ್ಷ ನಿಂತರು. ಅನಂತರ ಅವರು ಮತ್ತೆ ರಾಮನ ಬಳಿಗೆ ತೆರಳಿದರು. ರಾಮಚಂದ್ರನ ಬಿಟ್ಟಿರುವುದು ಈ ರಾಜಹಂಸಗಳಿಗೆ ಸಾಧ್ಯವೇ ಇಲ್ಲ ! ಬಂದಕಾರ್ಯ ಮುಗಿಯಿತು ಭೂಲೋಕವು ಸೊಗಸಿನಲ್ಲಿ ದೇವಲೋಕವನ್ನು ಮೀರಿಸಿತು. ದೇವತೆಗಳು ಚಿಂತೆಗೀಡಾದರು. ಬ್ರಹ್ಮದೇವರು ರುದ್ರನನ್ನು ರಾಮ ಚಂದ್ರನೆಡೆಗೆ ಕಳಿಸಿದರು. ಬ್ರಾಹ್ಮಣ ವೇಷಧಾರಿಯಾದ ರುದ್ರನು ರಾಜದ್ವಾರದ ಬಳಿ ಬಂದು ಲಕ್ಷ್ಮಣನನ್ನು ಕರೆದು ಹೇಳಿದನು: "ಮಹರ್ಷಿಗಳೊಬ್ಬರ ದೂತ ಬಂದಿದ್ದಾನೆ ಎಂದು ರಾಮಚಂದ್ರನಿಗೆ ಅರುಹು." ಲಕ್ಷ್ಮಣನು ರಾಮನಿಗೆ ಅರುಹಿದನು. ರಾಮಚಂದ್ರ ತಾಪಸನನ್ನು ಬರ ಹೇಳಿದನು. ಒಳಗೆ ಬಂದು ನಿಂತ ತಾಪಸ ರಾಮಚಂದ್ರನೊಡನೆ "ಏಕಾಂತವಾಗಿ ಮಾತನಾಡಬೇಕಾಗಿದೆ' ಎಂದನು. ರಾಮಚಂದ್ರನು ಪರಿವಾರವನ್ನೆಲ್ಲ ದೂರ ಕಳುಹಿಸಿ ಲಕ್ಷ್ಮಣನಿಗೆ ಆಜ್ಞಾಪಿಸಿದನು : "ಲಕ್ಷ್ಮಣ, ನೀನು ಬಾಗಿಲ ಬಳಿ ನಿಂದಿರು. ಯಾರನ್ನೂ ಒಳ ಬರಗೊಡಬೇಡ, ನಮ್ಮ ಏಕಾಂತವನ್ನು ಭಂಗಮಾಡುವವನು ವಧಕ್ಕೆ ಅರ್ಹನಾಗುತ್ತಾನೆ." "ಹಾಗೆಯೇ ಆಗಲಿ" ಎಂದು ಲಕ್ಷ್ಮಣನು ಬಾಗಿಲಲ್ಲಿ ನಿಂತನು. ಏಕಾಂತದಲ್ಲಿ ತಾಪಸವೇಷಧಾರಿಯಾದ ಶಂಕರನು ರಾಮ ದೇವನ ಬಳಿ ಬಂದ ಕಾರ್ಯವನ್ನು ವಿನಂತಿಸಿಕೊಂಡನು : "ದೇವ, ದುಷ್ಟ ಸಂಹಾರಕ್ಕಾಗಿ ಮಾನವನಾಗಿ ಅವತರಿಸಿದೆ. ಆ ಕಾರ್ಯವನ್ನು ಪೂರೈಸಿಯೂ ಪೂರೈಸಿದೆ. ನೀನು ಇಳೆಗೆ ಬಂದ ಕಾರ್ಯ ಮುಗಿಯಿತು. ಇನ್ನು ನಿನ್ನ ಲೋಕಕ್ಕೆ ಮರಳಬೇಕು. ಇದು ನಮ್ಮೆಲ್ಲರ ಬಯಕೆ ಮತ್ತು ಪ್ರಾರ್ಥನೆ. ಭೂಲೋಕವೇ ತಮ್ಮ ಲೋಕವನ್ನು ಮೀರಿಸುವುದನ್ನು ದೇವತೆಗಳು ಸಹಿಸ- ಲಾರರು. ನೀನು ಬ್ರಹ್ಮರೂಪನಾಗಿ ಜಗತ್ತನ್ನು ನಿರ್ಮಿಸುವೆ. ನನ್ನಲ್ಲಿ- ದ್ದುಕೊಂಡು ಸಂಹರಿಸುವೆ. ವಿಷ್ಣು ರೂಪದಿಂದ ಪಾಲಿಸುವೆ. ನಿನ್ನ ಹೊಕ್ಕಳಿನ ತಾವರೆಯಲ್ಲಿ ನಾಲ್ಮೊಗದ ಮಗ ಹುಟ್ಟಿದನು. ಅವನ ಕ್ರೋಧದಿಂದ ಜನಿಸಿದವನು ನಾನು. ಸಂಬಂಧದಲ್ಲಿ ನಾನು ನಿನ್ನ ಮೊಮ್ಮಗ, ಜಗಕ್ಕೆಲ್ಲ ಚತುರ್ಮುಖನು ಪಿತಾಮಹ ನಾದರೆ ನನಗೆ ನೀನು ಪ್ರಪಿತಾಮಹ, ಮೊಮ್ಮಗನೆಂಬ ಮಮತೆಯಿಂದಲಾದರೂ ನನ್ನ ಮಾತನ್ನು ನಡೆಸಿಕೊಡಬೇಕು. " ರಾಮಚಂದ್ರನು ರುದ್ರನನ್ನು ಸಂತೈಸಿದನು: "ನೀನಾಡಿದ ಮಾತು ನ್ಯಾಯವೇ ಆಗಿದೆ. ನಿಮ್ಮೆಲ್ಲರ ಬಯಕೆ ಯಂತೆ ಆದಷ್ಟು ಬೇಗನೆ ನಾನು ನಿಮ್ಮ ಬಳಿಗೆ ಬಂದು ಬಿಡುವೆ. " ಒಳಗಡೆ ಹೀಗೆ ಇವರ ಮಂತ್ರಾಲೋಚನೆ ನಡೆಯುತ್ತಿತ್ತು. ಅಷ್ಟರಲ್ಲಿ ರುದ್ರನೇ ದುರ್ವಾಸಮುನಿಗಳ ರೂಪಿನಿಂದ ಅಂತಃ- ಪುರದ ಬಳಿಗೆ ಬಂದು " ಈ ಕ್ಷಣವೇ ನನಗೆ ರಾಮನನ್ನು ನೋಡ- ಬೇಕಾಗಿದೆ " ಎಂದು ಸೌಮಿತ್ರಿಯೊಡನೆ ನುಡಿದನು. ಲಕ್ಷ್ಮಣನಿಗೆ ಇದು ಉಭಯಸಂಕಟ. ಮುನಿಯನ್ನು ಒಳಬಿಟ್ಟರೆ ಅಣ್ಣನ ಕೋಪಕ್ಕೆ ಬಲಿಯಾಗಬೇಕು. ತಡೆದರೆ ಮುನಿಗಳ ಮುನಿಸಿ ಗೆ ಗುರಿಯಾಗಬೇಕಾಗುವದು. ಅದೂ ದೂರ್ವಾಸರ ಮುನಿಸು ಕೇಳಬೇಕೆ ? ಆದರೆ ಮುನಿಗಳನ್ನು ತಡೆದರೆ ಅತಿಥಿಗಳನ್ನು ಸತ್ಕರಿಸಲಿಲ್ಲ ಎಂದು ರಾಮಚಂದ್ರನಿಗೆ ಅಪಯಶಸ್ಸು ಬಂದೀತು. ದುರ್ವಾಸರನ್ನು ಒಳಬಿಡುವುದೇ ಲೇಸು. ರಾಮಚಂದ್ರನ ಕೋಪವೂ ದಯೆಯ ಹೊನಲಾಗಿ ಹರಿವುದುಂಟು. ಅದನ್ನು ತಡೆದುಕೊಳ್ಳಬಹುದು. ಹೀಗೆ ನಿರ್ಣಯಕ್ಕೆ ಬಂದ ಲಕ್ಷ್ಮಣ ಮುನಿ- ಗಳನ್ನು ಒಳಬಿಟ್ಟನು. ರಾಮಚಂದ್ರನು ಶಂಕರನೊಡನೆ ಮಾತು ಮುಗಿಸಿ ಎದ್ದು ನಿಂತಾಗ ದುರ್ವಾಸರು ಕಾಣಿಸಿಕೊಂಡರು. ರಾಮಚಂದ್ರನ ಪ್ರಶ್ನಾರ್ಥಕದೃಷ್ಟಿಗೆ ಅತ್ರಿಪುತ್ರರಾದ ದುರ್ವಾಸರ ಉತ್ತರ ಸಿದ್ಧವಾಗಿತ್ತು: "ರಾಮಚಂದ್ರ, ಒಂದುಸಾವಿರ ವರ್ಷಗಳತನಕ ನಿರಾಹಾರ ನಾಗಿ ಆಚರಿಸುತ್ತಿದ್ದ ತಪಸ್ಸನ್ನು ಈಗ ತಾನೇ ಮುಗಿಸಿ ನಿನ್ನ ಬಳಿಗೆ ಬಂದಿದ್ದೇನೆ. ನಾನು ತುಂಬ ಹಸಿದಿದ್ದೇನೆ. ಈ ಮೊದಲೇ ಅಟ್ಟ ಅನ್ನವನ್ನು ನಾನು ಉಣಲಾರೆ. ಇನ್ನು ಅಡಿಗೆ ಸಿದ್ಧವಾಗುವತನಕ ಕಾಯುವ ಸಹನೆಯೂ ನನಗಿಲ್ಲ. ಈ ಕ್ಷಣದಲ್ಲಿ ನನಗೆ ಆಹಾರ ಬೇಕು. ನಾನು ಹಸಿದಿದ್ದೇನೆ. " ಮುನಿಯ ಮಾತು ಮುಗಿವ ಮುನ್ನ ರಾಮಚಂದ್ರನು ತನ್ನ ಕರಪಲ್ಲವಗಳಿಂದ ಷಡ್ರಸಾನ್ನವನ್ನು ಬರಿಸಿ ಕಡುಕೋಪಿ ದುರ್ವಾಸರಿಗೆ ಉಣಿಸಿದನು. ತೃಪ್ತರಾದ ದುರ್ವಾಸರು ಭಗವಂತ ನನ್ನು ಕೊಂಡಾಡಿದರು : "ನೀನಲ್ಲದೆ ಇನ್ನಾರಿಗೆ ಸಾಧ್ಯ ನನ್ನ ಹಸಿವನ್ನು ಇಂಗಿಸಲು ?" ರಾಮಚಂದ್ರನು ಸಭೆಗೆ ಮರಳಿದನು. ಲಕ್ಷ್ಮಣನು ಅಪರಾಧಿ ಗಳಂತೆ ತಲೆ ತಗ್ಗಿಸಿ ನಿಂತಿದ್ದನು. ಒಬ್ಬನನ್ನು ತ್ಯಜಿಸುವುದು ಕೊಲ್ಲುವುದಕ್ಕೆ ಸಮಾನ ಎಂದು ಬಲ್ಲವರ ಮತ. ಎಂತಲೇ ರಾಮ ಚಂದ್ರನು ಲಕ್ಷ್ಮಣನನ್ನು ಕರೆದು ನುಡಿದನು : "ಲಕ್ಷ್ಮಣ, ನೀನು ಇಲ್ಲಿಂದ ತೆರಳಬೇಕು. ನಿನ್ನ ಲೋಕವನ್ನು ಹೋಗಿ ಸೇರಬೇಕು." ಸೌಮಿತ್ರಿ ಮರುಮಾತನಾಡದೆ ಅಣ್ಣನಿಗೆ ಸುತ್ತುವರಿದು ಕಾಲಿಗೆರಗಿ, ಅರಮನೆಯಿಂದ ದೂರ ನಡೆದನು. ಅಲ್ಲಿಂದ ಸರಯೂ ತೀರಕ್ಕೆ ಬಂದ ಭಗವಂತನನ್ನು ನೆನೆದು ಯೋಗಬಲದಿಂದ ತನ್ನ ಮೂಲ ರೂಪವನ್ನು ಪಡೆದನು. ಲಕ್ಷ್ಮಣನು ಹರಿಯ ಹಾಸುಗೆಯಾಗಿ ಹರಿದುಕೊಂಡು ಹೋದನು. ಇತ್ತ ರಾಮಚಂದ್ರನು ಊರೆಲ್ಲ ಘೋಷಿಸಿದನು : "ಯಾರಿಗಾದರೂ ಪರಮ ಪದವಿಯಾದ ಮೋಕ್ಷವನ್ನು ಪಡೆವ ಬಯಕೆಯಿದ್ದರೆ ಅವರು ನಮ್ಮಜತೆ ಬರಬಹುದು." ಕೈವಲ್ಯನಾಥನಾದ ಶ್ರೀ ಹರಿಯೇ 'ಕೈವಲ್ಯಕ್ಕೆ ಬನ್ನಿ' ಎಂದು ಕರೆದಾಗ ಯಾರು ಬೇಡವೆಂದಾರು ? ಸಂಸಾರದಲ್ಲಿ ತೊಳಲುವು- ದನ್ನೆ ಹಣೆಯಲ್ಲಿ ಬರೆದುಕೊಂಡು ಬಂದವರ ಹೊರತು ಉಳಿದ- ವರೆಲ್ಲ ಭಗವಂತನೊಡನೆ ಮಹಾಯಾನಕ್ಕೆ ಅನುವಾದರು. ರಾಮಚಂದ್ರನು ಕುಶನನ್ನು ಕೋಸಲೆಯ ಸಿಂಹಾಸನದಲ್ಲಿ ಕುಳ್ಳಿರಿಸಿದನು. ಲವ ಯುವರಾಜನಾದನು. ಕುಶಾವತಿಯಲ್ಲಿ ಕುಶನಿಗೂ, ಶ್ರಾವಸ್ತಿಯಲ್ಲಿ ಲವನಿಗೂ ಪ್ರತ್ಯೇಕ ಸೇನಾಬಲ, ಕೋಶಬಲಗಳು ರಚಿತವಾದವು. ಬಿಲ್ಲು ವಿದ್ಯೆಯನ್ನು ಬಲ್ಲವರೂ ಶಾಸ್ತ್ರಜ್ಞರೂ ಧಾರ್ಮಿಕರೂ ಆದ ಕುಶ-ಲವರು ರಾಮರಾಜ್ಯದ ಉತ್ತರಾಧಿಕಾರಿಗಳಾದರು. ರಾಮಚಂದ್ರನ ಮಹಾಪ್ರಸ್ಥಾನದ ವಾರ್ತೆ ಶತ್ರುಘ್ನನಿಗೂ ತಲುಪಿತು. ಅವನು ಕೂಡಲೆ ತನ್ನ ಇಬ್ಬರು ಮಕ್ಕಳಲ್ಲಿ ಸುಬಾಹು- ವನ್ನು ಮಧುರೆಯಲ್ಲೂ ಶತ್ರುಘಾತಿಯನ್ನು ವೈದಿಶ ಎಂಬಲ್ಲೂ ಪಟ್ಟಗಟ್ಟಿ ತಾನೂ ಅಯೋಧ್ಯೆಗೆ ತೆರಳಿದನು. ಸುಗ್ರೀವನೂ ಅಂಗದನಿಗೆ ಪಟ್ಟಗಟ್ಟಿ ಸಪರಿವಾರನಾಗಿ ರಾಮನ ಬಳಿಗೆ ಬಂದುಬಿಟ್ಟನು. ಈ ವಾರ್ತೆಯನ್ನು ಕೇಳಿ ವಿಭೀಷಣನೂ ಲಂಕೆಯನ್ನು ಬಿಟ್ಟೋಡಿ ಬಂದಿದ್ದನು. ಆದರೆ ವಿಭೀಷಣನು ರಾಮಚಂದ್ರನ ಜತೆಗೆ ಬರುವಂತಿಲ್ಲ. ಅವನು ಭೂಮಿಯಲ್ಲಿ ಇದ್ದು ಸೇವೆ ಮಾಡುವುದು ಉಳಿದಿದೆ. ಈ ಮಾತನ್ನು ರಾಮಚಂದ್ರನೇ ಆಡಿ ತೋರಿಸಿದನು: "ವಿಭೀಷಣ, ನೀನು ಕಲ್ಪಾಂತದವರೆಗೆ ನನ್ನ ಸೇವೆ ಮಾಡಿ- ಕೊಂಡು ಭೂಮಿಯಲ್ಲಿ ಇರಬೇಕು. ಲಂಕೆಯನ್ನು ಪಾಲಿಸುತ್ತಿರ- ಬೇಕು. ನನ್ನ ಭಕ್ತಿಗೆ ಸಾಕ್ಷಿಪುರುಷನಾಗಿ ನೀನು ಚಿರಜೀವಿಯಾಗಿರ- ಬೇಕು." ರಾಮನ ಆಜ್ಞೆಯನ್ನು ಮೀರುವುದು ಯಾರಿಗೆ ಸಾಧ್ಯ? ವಿಭೀಷಣ ಲಂಕೆಗೆ ಮರಳಿದನು; ಜತೆಗೆ ಅಂತರಂಗದಲ್ಲಿ ರಾಮ- ಚಂದ್ರನನ್ನೂ ಹೊತ್ತುತಂದನು. ಎಲ್ಲ ಭಗವದ್ಭಕ್ತರೂ ಮಹಾಯಾನಕ್ಕೆ ಸಿದ್ಧರಾಗಿ ರಾಮಚಂದ್ರ ನನ್ನುಸುತ್ತುವರಿದರು. ಭಗವಂತನ ಸನ್ನಿಧಾನದಿಂದ ಭಕ್ತರು ನಿರ್ಲಿಪ್ತರಾದರು. ಮಹಾಪ್ರಸ್ಥಾನ ಪವನತನಯ ಹನುಮಂತನು ಸಭೆಯಲ್ಲಿ ತೆಪ್ಪಗೆ ಕುಳಿತಿ- ದ್ದುದು ರಾಮಚಂದ್ರನ ಕಣ್ಣಿಗೆ ಬಿತ್ತು. ಅವನು ತತ್ ಕ್ಷಣ ಹನುಮಂತನ ಬಳಿಸಾರಿ ಅವನನ್ನು ಬಿಗಿದಪ್ಪಿ ಸಂತೈಸಿದನು: " ಚಿರಜೀವಿಯಾದ ಹನುಮಂತನೆ, ನೀನು ನನಗೆ ಪರಮ ಪ್ರಿಯನು, ನಿನ್ನ ಯಶಸ್ಸನ್ನು ದೇವ ಗಂಧರ್ವರು ಹಾಡಿಕೊಂಡಾ- ಡುತ್ತಾರೆ. ನನ್ನ ಲೀಲಾವಿಗ್ರಹ ನಿನ್ನ ಕಣ್ಣಿನಿಂದ ಎಂದೂ ಮರೆ- ಯಾಗುವುದಿಲ್ಲ. ನೀನು ಬಯಸಿದ್ದು ನಿನಗೆ ದೊರಕುವುದು." ಹನುಮಂತನು ಕೈ ಮುಗಿದು ಗಂಭೀರವಾಣಿಯಿಂದ ವಿನಂತಿಸಿಕೊಂಡನು. "ರಾಮಚಂದ್ರ, ನಿನ್ನ ಮೇಲಣ ನನ್ನ ಭಕ್ತಿ ಅನವರತವೂ ಬೆಳೆಯುತ್ತಿರಲಿ, ಅದೊಂದೇ ನನಗೆ ಸಂತಸದ ವಿಷಯ. ನಾನು ಬಯಸುವುದು ಅದೊಂದನ್ನೆ. ಮಾತು-ಮೈಮನಗಳಿಂದ ನಿನಗೆ ಎಂದೆಂದೂ ನನ್ನ ಪ್ರಣಾಮಗಳು." ರಾಮಚಂದ್ರನು 'ತಥಾಸ್ತು' ಎಂದು ಹನುಮಂತನನ್ನು ಹರಸಿದನು. ಮೂಡಣಬಾನಿನಲ್ಲಿ ಭಾನುದೇವನ ಹೊಂಬೆಳಕು ಹರಿಯಿತು. ರಾಮಚಂದ್ರನು ಸಮಸ್ತ ಪೌರಜಾನಪದರೊಡನೆ ಅಯೋಧ್ಯೆಯನ್ನು ಬಿಟ್ಟು ತೆರಳಿದನು. ಭಗವನ್ಮಾಯೆಯನ್ನು ತೊಡೆದುಹಾಕಲು ಅಸಮರ್ಥರಾದ ಕೆಲ ಭವಿಗಳು ಮಾತ್ರ ಭೂಮಿಯಲ್ಲಿ ಉಳಿದುಕೊಂಡರು. ಪರಮಸುಂದರನಾದ ರಾಮಚಂದ್ರ ಮುಂದಿನಿಂದ ನಡೆದನು. ಸೀತಾಮಾತೆ, ಶ್ರೀ-ಹ್ರೀ ಎಂಬ ಎರಡು ರೂಪಗಳಿಂದ ಪಕ್ಕದಲ್ಲಿ ಚಾಮರ ಬೀಸುತ್ತ ನಡೆವುದನ್ನು ಜನರು ಕಣ್ಣಾರೆ ಕಂಡರು ! ಚಂದ್ರಮಂಡಲವನ್ನು ನಾಚಿಸುವ ಬೆಳ್ಕೊಡೆಯನ್ನು ಹನುಮಂತ ನು ಹಿಡಿದನು. ಶಂಖ-ಚಕ್ರಾತ್ಮಕರಾದ ಶತ್ರುಘ್ನ-ಭರತರು ಎಡಬಲಗಳಲ್ಲಿ ಶಂಖ-ಚಕ್ರಧಾರಿಗಳಾಗಿ ಸಾಗಿದರು. ಮುಂದೆ ಬ್ರಹ್ಮಾದಿ ದೇವತೆಗಳು; ಹಿಂದೆ ಸಮಸ್ತ ಪುಣ್ಯ ಜೀವಿಗಳು. ಸುಗ್ರೀವ ಮೊದಲಾದ ಕಪಿಗಳೂ ರಾಮಚಂದ್ರನ ಗುಣ ವನ್ನು ಹಾಡುತ್ತ ಪಕ್ಕದಲ್ಲಿ ನಡೆದುಬಂದರು. ಭಗವಂತನ ವೈಭವದ ಈ ಮಹಾಪ್ರಸ್ಥಾನವನ್ನು ಕಂಡು ಮೂರು ಲೋಕವೂ ಆನಂದದಿಂದ ರೋಮಾಂಚಿತವಾಯಿತು. ಅಯೋಧ್ಯೆಯಿಂದ ಒಂದೂವರೆ ಯೋಜನ ದೂರ ಸಾಗಿದಾಗ ಸರಯೂ ನದಿ ಕಾಣಿಸಿಕೊಂಡಿತು. ರಾಮಾಜ್ಞೆಯಂತೆ ಆ ಪುಣ್ಯ ಸಲಿಲದಲ್ಲಿ ಎಲ್ಲರೂ ಸ್ನಾನಮಾಡಿದರು. ಅಷ್ಟರಲ್ಲಿ ದೇವತೆಗಳು ಕಳಿಸಿಕೊಟ್ಟ ವಿಮಾನಗಳು ಮುಗಿಲಿನಿಂದ ಇಳಿದು ಬಂದವು. ರಾಮಚಂದ್ರನು ಒಂದು ದಿವ್ಯ ವಿಮಾನವನ್ನೇರಿದನು. ಎಲ್ಲ ಪುಣ್ಯ ಜೀವಿಗಳೂ ದಿವ್ಯ ದೇಹಧಾರಿಗಳಾಗಿ ವಿಮಾನವನ್ನೇರಿದರು. ಮುಗಿಲಿಗೇರುತ್ತಿರುವ ಭಗವಂತನನ್ನು ಕಂಡು ಬ್ರಹ್ಮಾದಿ ದೇವತೆ- ಗಳು ಶಿರಬಾಗಿ ವಂದಿಸಿದರು; ವೇದ-ಮಂತ್ರಗಳಿಂದ ಸ್ತುತಿಸಿದರು. ಕಪಿರೂಪದಲ್ಲಿ ಅವತರಿಸಿದ ದೇವತೆಗಳು ಮೂಲ ರೂಪ- ವನ್ನು ಸೇರಿಕೊಂಡರು. ಪುಣ್ಯ ಜೀವಿಗಳು ಪರಮಪದವನ್ನು ಪಡೆ ದರು. ಭಗವಂತನ ಲೀಲಾಮಾನುಷರೂಪ, ಶೇಷಶಾಯಿಯಾದ ಮೂಲರೂಪದೊಡನೆ ಸೇರಿಕೊಂಡಿತು. ಮುನಿಗಳು ಮನದಲ್ಲಿ ಅಂದುಕೊಂಡರು. "ಪೂರ್ಣಮದಃ ಪೂರ್ಣಮಿದಮ್." ಭಗವಂತನು ನಮ್ಮನ್ನು ಹರಸಲಿ ಒಂದು ದೃಷ್ಟಿಯಿಂದ ರಾಮಚಂದ್ರನ ಚರಿತೆ ಇಲ್ಲಿಗೆ ಮುಗಿಯಿತು. ಆದರೆ ಪೂರ್ತ ಹಾಗನ್ನಲೂ ಬರುವುದಿಲ್ಲ. ರಾಮ ಚರಿತೆಯ ಜೀವನಾಡಿಯಾದ, ರಾಮಾಯಣದ ಮಹಾವೀರನಾದ ಹನುಮಂತನೊಡನೆ ಅದು ಇನ್ನೂ ಮುಂದುವರಿಯುತ್ತಿದೆ ಎಂದು ಬಲ್ಲವರು ಹೇಳುತ್ತಾರೆ. ಹನುಮಂತನು ಕಿಂಪುರುಷ ಖಂಡದಲ್ಲಿ ರಾಮಚರಿತವನ್ನು ಶತಕೋಟಿ ವಿಸ್ತಾರವಾಗಿ ಹಾಡು- ತ್ತಿದ್ದಾನೆ. ಚಿರಂಜೀವಿಯಾದ ಮಾರುತಿಯೊಡನೆ ರಾಮಚರಿತೆ- ಯೂ ಚಿರಂಜೀವಿಯಾಗಿದೆ. ರಾಮಾಯಣದಲ್ಲಿ ಮಾರುತಿಯ ಪಾತ್ರ ಅಪೂರ್ವವಾದುದು; ಅವನು ತೋರಿದ ಸಾಹಸ ಅಸದೃಶವಾದುದು. ಮಾರುತಿಯ ಚರಿತೆಯನ್ನೆ ಬಿತ್ತರಿಸುವ ಕಾಂಡವನ್ನು ವಾಲ್ಮೀಕಿ ಸುಂದರ- ಕಾಂಡವೆಂದು ಕರೆದನು. ಮಾರುತಿಯ ವೀರ ಗಾಥೆ ರಾಮಾಯಣಕ್ಕೊಂದು ಸೌಂದರ್ಯ, ಭಕ್ತನಿಂದ ಭಗವಂತ ಬೆಳಗಿದ್ದಾನೆ. ಭಗವಂತನು ಭಕ್ತಿಗೆ ಮನಸೋತಿದ್ದಾನೆ. ಎಂತಲೇ ರಾಮಚಂದ್ರನು ಇನ್ನೂ ಮಾರುತಿಯ ಅಂತರಂಗದಲ್ಲಿ ನೆಲಸಿ ದ್ದಾನೆ. ಮಾರುತಿಯ ವಾಣಿಯಿಂದ ಅವನ ಗುಣಗಳು ಒಡ- ಮೂಡುತ್ತಿವೆ ಎಂದ ಮೇಲೆ ಭಗವಂತನು ವೈಕುಂಠಕ್ಕೇರಿದನು ಎಂದು ಹೇಗನ್ನುವುದು ? ಭಕ್ತಿಯ ಮಹಿಮೆಯನ್ನರಿಯದ ಜನ, ಸಂಸಾರದ ಬರಡು ಭೋಗದಿಂದ ಕುರುಡಾದ ಜನ ಮಾತ್ರವೆ ಅಂಥ ಮಾತನ್ನಾಡುತ್ತಾರೆ. ಭಗವಂತನ ಗುಣಗಾನ ಎಲ್ಲಿ ನಡೆವುದೋ- ಭಗವಂತನ ಭಕ್ತಿ ಎಲ್ಲಿ ಪಡಿಮೂಡುವುದೋ ಅಲ್ಲಿ ವೈಕುಂಠವಿದೆ; ಅಲ್ಲಿ ಭಗವಂತ ನಿದ್ದಾನೆ. ಅವನು ನಮ್ಮೊಳಗಿದ್ದಾನೆ; ಹೊರಗಿದ್ದಾನೆ. ಎಲ್ಲೂ ಇದ್ದಾನೆ; ಎಂದೆಂದಿಗೂ ಇದ್ದಾನೆ. "ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ" ರಾಮಚಂದ್ರನ ಸರ್ವೋಚ್ಚ ಭಕ್ತನಾದ ಮಾರುತಿ ಜಗನ್ಮಾತೆಯ ಕೊರಳಹಾರವನ್ನು ಪಡೆವ ಭಾಗ್ಯಶಾಲಿಯಾದ ಮಾರುತಿ- ಜಗತ್ಪ್ರಾಣನಾದ ಪವಮಾನನ ಪುತ್ರನಾದ ಮಾರುತಿ ನಮ್ಮನ್ನು ಹರಸಲಿ, ಭಕ್ತಿಪರವಶನಾದ ಭಗವಂತನ ಕೃಪಾದೃಷ್ಟಿ ನಮ್ಮೆಡೆಗೆ ಹರಿವಂತೆ ಕರುಣಿಸಲಿ. ಆಗ ಬಾಳು ಕೃತಾರ್ಥವಾಗುತ್ತದೆ. ರಾಮಚಂದ್ರನ ಚರಿತೆಯನ್ನು ಓದಿದ ಜನ, ಮಾನವೀತೆಯ ಪಕ್ವ ನಿದರ್ಶನಗಳನ್ನು ಅದರಲ್ಲಿ ಕಂಡ ಜನ, ಭಗವಂತನ ಲೀಲಾವಿಭೂತಿಯನ್ನು ಓದಿ ಅನುಭವಿಸಿದ ಜನ ಆನಂದ- ಗದ್ಗದಿತವಾಗಿ ಮೈಮರೆತು ನುಡಿಯುತ್ತದೆ: "ಭಗವಂತ ನಮ್ಮನ್ನು ಹರಸಲಿ." ಭಗವಂತ ನಮ್ಮನ್ನು ಹರಸಲಿ. ಆಗ ಲೋಕ ಭವ್ಯವಾಗುತ್ತದೆ; ಬಾಳು ಬಂಗಾರವಾಗುತ್ತದೆ; ಶಾಂತಿಸಮೃದ್ಧವಾಗುತ್ತದೆ. ಮನುಷ್ಯ ಮನುಷ್ಯನಾಗಿ ಉಳಿಯುತ್ತಾನೆ. ನಮ್ಮ ಪೂರ್ವಿಕರು ಆಡಿದ ಮುತ್ತಿನಂಥ ಮಾತು ಸಾರ್ಥಕವಾಗುತ್ತದೆ. " ಓಂ ಶಾಂತಿಃ ಶಾಂತಿಃ ಶಾಂತಿಃ " ! . ಆಸ್ಥಾನ ವಿದ್ವಾನ್ ಬನ್ನಂಜೆ ಗೋವಿಂದಾಚಾರ್ಯರು ರಾಮಾಯಣದ ಅನುವಾದಕರಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಉಡುಪಿಯ ಪ್ರಸಿದ್ಧ ವಿದ್ವಾಂಸರಾದ ಪಂ. ಬನ್ನಂಜೆ ನಾರಾಯಣಾಚಾರ್ಯರ ಮಕ್ಕಳು. ದೊಡ್ಡ ವಿದ್ವಾಂಸರು, ಶ್ರೀ ಶ್ರೀ ಭಂಡಾರಕೇರಿ ಶ್ರೀಪಾದಂಗಳವರಲ್ಲಿ ತತ್ವಜ್ಞಾನವನ್ನು ಅಭ್ಯಸಿಸಿದವರು. ಮತತ್ರಯಾಚಾರ್ಯರ ಉದ್ಗ್ರಂಥಗಳನ್ನು ತುಲನಾತ್ಮಕ ದೃಷ್ಟಿಯಿಂದ ಅಧಯ್ಯನ ಮಾಡಿದವರು. ತೀಕ್ಷ್ಣ ವಿಮರ್ಶಕರು, ಚುರುಕು ಬುದ್ಧಿಯವರು, ಕವಿಗಳು, ಪತ್ರಿಕಾ ಲೇಖಕರು, ಪುರಾಣಗಳ ವಿಶೇಷ ಅಭ್ಯಾಸಿಗಳು, ಋಗ್ಭಾಷ್ಯವನ್ನು ಕನ್ನಡಿಸಲುಪಕ್ರಮಿಸಿದವರು. ತಂತ್ರಸಾರವನ್ನು ಕನ್ನಡಿಸಿದವರು. ಈಗಾಗಲೇ ತಮ್ಮ ವಿಮರ್ಶಾತ್ಮಕ ಲೇಖನ, ಕವಿತೆಗಳಿಂದ ಕನ್ನಡಿಗರಿಗೆ ಪರಿಚಿತರಾದವರು. ಒಟ್ಟಿನಲ್ಲಿ ಇವರೊಬ್ಬರು ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಡುತ್ತಿರುವ ಉಜ್ವಲ ವ್ಯಕ್ತಿಗಳೆಂದು ಹೇಳ ಬಹುದು. ಸಂಪಾದಕ .